“ನಾನು ಸ್ನೇಹ, ಪ್ರೀತಿ, ಮತ್ತು ಕಾಳಜಿಯನ್ನು ಕಂಡುಕೊಂಡೆ”
“ನಾನು ಸ್ನೇಹ, ಪ್ರೀತಿ, ಮತ್ತು ಕಾಳಜಿಯನ್ನು ಕಂಡುಕೊಂಡೆ”
“ನಿಮ್ಮೊಳಗೆ ಒಬ್ಬರ ಮೇಲೊಬ್ಬರಿಗೆ ಪ್ರೀತಿಯಿದ್ದರೆ ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳುಕೊಳ್ಳುವರು.” (ಯೋಹಾನ 13:35) ಯೇಸುವಿನ ಮಾತಿನಂತೆಯೇ ಆದಿ ಕ್ರೈಸ್ತರ ಸಹೋದರತ್ವದಲ್ಲಿ ಪ್ರೀತಿಯು ಎದ್ದುಕಾಣುವ ಗುಣವಾಗಿತ್ತು. ಕ್ರಿಸ್ತನು ಮರಣಹೊಂದಿ ನೂರು ವರುಷಕ್ಕಿಂತಲೂ ಹೆಚ್ಚು ಸಮಯದ ನಂತರ ಟೆರ್ಟುಲ್ಯನ್ ತನ್ನ ಬರಹದಲ್ಲಿ, ಪ್ರೇಕ್ಷಕರ ಈ ಹೇಳಿಕೆಯನ್ನು ಉದ್ಧರಿಸಿದನು: ‘ನೋಡಿರಿ ಅವರು ಪರಸ್ಪರ ಎಷ್ಟು ಪ್ರೀತಿಸುತ್ತಾರೆ ಮತ್ತು ಒಬ್ಬರಿಗಾಗಿ ಇನ್ನೊಬ್ಬರು ಸಾಯಲು ಸಹ ಸಿದ್ಧರಿದ್ದಾರೆ.’
ಈ ರೀತಿಯ ಪ್ರೀತಿಯನ್ನು ಈಗಲೂ ಲೋಕದಲ್ಲಿ ಕಾಣಸಾಧ್ಯವಿದೆಯೋ? ಹೌದು. ಉದಾಹರಣೆಗೆ, ಬ್ರಸಿಲ್ ದೇಶದ ಯೆಹೋವನ ಸಾಕ್ಷಿಗಳ ಬ್ರಾಂಚ್ ಆಫೀಸಿಗೆ ಬಂದ ಒಂದು ಪತ್ರವನ್ನು ಪರಿಗಣಿಸಿರಿ. ಈ ಪತ್ರವನ್ನು ಬರೆದ ಮರೀಲೀಯ ಎಂಬ ಮಹಿಳೆಯು ಹೀಗಂದಳು:
“ಯೆಹೋವನ ಸಾಕ್ಷಿಗಳಲ್ಲಿ ಒಬ್ಬರಾದ ನನ್ನ ತಾಯಿ ಆರ್ಜೆಂಟೀನದ ಬೀಯಾ ಮರ್ಸೇತಾಸ್‌ನಲ್ಲಿ ವಾಸಿಸುತ್ತಿದ್ದಾಗ, ಅಸ್ಥಿಸಂಧಿವಾತವು ಉಂಟಾಗಿ ಅವರಿಗೆ ಸೊಂಟದಿಂದ ಕೆಳಗೆ ಲಕ್ವಹೊಡೆಯಿತು. ಅವರ ಅಸ್ವಸ್ಥತೆಯ ಮೊದಲ ಎಂಟು ತಿಂಗಳಿನ ವರೆಗೆ, ಬೀಯಾ ಮರ್ಸೇತಾಸ್‌ನಲ್ಲಿದ್ದ ಸಾಕ್ಷಿಗಳು ಅವರನ್ನು ಅತಿ ಪ್ರೀತಿಯಿಂದಲೂ ಕಾಳಜಿಯಿಂದಲೂ ನೋಡಿಕೊಂಡರು. ಅವರ ಮನೆಯನ್ನು ಶುಚಿಗೊಳಿಸುವುದು, ಅವರಿಗಾಗಿ ಊಟಗಳನ್ನು ತಯಾರಿಸುವುದು, ಮುಂತಾದ ಎಲ್ಲಾ ಕೆಲಸವನ್ನೂ ಅಲ್ಲಿನ ಸಾಕ್ಷಿಗಳು ಮಾಡಿದರು. ತಾಯಿಯು ಆಸ್ಪತ್ರೆಯಲ್ಲಿದ್ದಾಗಲೂ, ಅವರೊಂದಿಗೆ ಯಾರಾದರೊಬ್ಬರು ಹಗಲೂರಾತ್ರಿ ಇರುತ್ತಿದ್ದರು.
“ನಾನು ಮತ್ತು ನನ್ನ ತಾಯಿ ಈಗ ಬ್ರಸಿಲ್‌ಗೆ ಹಿಂದಿರುಗಿದ್ದೇವೆ. ಈಗ ನನ್ನ ತಾಯಿ ಗುಣಮುಖವಾಗುತ್ತಾ ಇದ್ದಾರೆ. ತಾಯಿಯ ಗುಣವಾಗುವಿಕೆಗೆ ಸಹಾಯವಾಗುವಂತೆ ಈಗ ನಾವಿರುವ ಸ್ಥಳದಲ್ಲಿನ ಸಾಕ್ಷಿಗಳು ತಮ್ಮಿಂದಾದದ್ದೆಲ್ಲವನ್ನೂ ಮಾಡುತ್ತಿದ್ದಾರೆ.”
ಮರೀಲೀಯ ತನ್ನ ಪತ್ರವನ್ನು ಈ ಮಾತಿನಿಂದ ಮುಕ್ತಾಯಗೊಳಿಸಿದಳು: “ನಾನೊಬ್ಬ ಸಾಕ್ಷಿಯಲ್ಲ ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ, ಆದರೆ ನಾನು ಸ್ನೇಹ, ಪ್ರೀತಿ, ಮತ್ತು ಕಾಳಜಿಯನ್ನು ಸಾಕ್ಷಿಗಳ ಮಧ್ಯೆ ಕಂಡುಕೊಂಡೆ.”
ಹೌದು, ಈಗಲೂ ನಿಜ ಕ್ರೈಸ್ತ ಪ್ರೀತಿಯನ್ನು ಪ್ರದರ್ಶಿಸುವ ಜನರಿದ್ದಾರೆ. ಹೀಗೆ ಮಾಡುವ ಮೂಲಕ, ನಮ್ಮ ಜೀವಿತಗಳ ಮೇಲೆ ಯೇಸುವಿನ ಬೋಧನೆಗಳು ಬೀರಶಕ್ತವಾದ ಪ್ರಭಾವವನ್ನು ಅವರು ವ್ಯಕ್ತಪಡಿಸುತ್ತಾರೆ.