ಸಹಾಯಕ್ಕಾಗಿ ಮೊರೆಯಿಡುತ್ತಿರುವವರಿಗೆ ಸಾಂತ್ವನ
ಸಹಾಯಕ್ಕಾಗಿ ಮೊರೆಯಿಡುತ್ತಿರುವವರಿಗೆ ಸಾಂತ್ವನ
ಬೈಬಲು ಮಾನಸಿಕ ಆರೋಗ್ಯದ ಕೈಪಿಡಿಯಲ್ಲ. ಆದರೂ, ಅದು ನಮಗೆ ಸಾಂತ್ವನವನ್ನು ಕೊಡುತ್ತದೆ ಮತ್ತು ನಮಗೆ ಎದುರಾಗುವಂಥ ಕಷ್ಟತೊಂದರೆಗಳ ಮಧ್ಯೆಯೂ ಜೀವನದಲ್ಲಿ ಆನಂದಿಸುವಂತೆ ಸಹಾಯಮಾಡುತ್ತದೆ. ವಾಸ್ತವ ಸಂಗತಿಯನ್ನು ತಿಳಿಸುತ್ತಾ ಶಾಸ್ತ್ರವಚನಗಳು ಹೀಗನ್ನುತ್ತವೆ: “ಸ್ತ್ರೀಯಲ್ಲಿ ಹುಟ್ಟಿದ ಮನುಷ್ಯನು ಅಲ್ಪಾಯುಷ್ಯನಾಗಿಯೂ ಕಳವಳದಿಂದ ತುಂಬಿದವನಾಗಿಯೂ ಇರುವನು.” (ಯೋಬ 14:1) ನಮ್ಮ ಕೆಲವೊಂದು ಸಂಕಷ್ಟಗಳಿಗೆ ನಮ್ಮ ಸ್ವಂತ ಅಪರಿಪೂರ್ಣತೆಯೇ ಕಾರಣವಾಗಿರುತ್ತದೆ. ಆದರೆ ಮಾನವರ ಕಷ್ಟಸಂಕಟಗಳಿಗೆ ಮುಖ್ಯವಾಗಿ ಯಾರು ಹೊಣೆಗಾರನಾಗಿದ್ದಾನೆ?
ಅವನು ಪಿಶಾಚನೆಂದೂ ಸೈತಾನನೆಂದೂ ಕರೆಯಲ್ಪಡುವ ಒಬ್ಬ ದುಷ್ಟಾತ್ಮನಾಗಿದ್ದಾನೆಂದು ಬೈಬಲ್ ಗುರುತಿಸುತ್ತದೆ. ಅವನು ‘ಭೂಲೋಕದವರನ್ನೆಲ್ಲಾ ಮರುಳುಗೊಳಿಸುತ್ತಾ,’ ಮಾನವಕುಲವನ್ನು ಬಾಧಿಸುತ್ತಿರುವ ಅನೇಕ ತೊಂದರೆಗಳಿಗೆ ಕಾರಣನಾಗಿದ್ದಾನೆ. ಆದರೆ ಅವನ ಸಮಯವು ಮುಗಿಯುತ್ತಾ ಬಂದಿದೆಯೆಂದೂ ಬೈಬಲ್ ನಮಗನ್ನುತ್ತದೆ. (ಪ್ರಕಟನೆ 12:9, 12) ಸೈತಾನನು ಭೂನಿವಾಸಿಗಳ ಮೇಲೆ ತಂದಿರುವ ಎಲ್ಲಾ ಸಂಕಷ್ಟವು ದೇವರ ಹಸ್ತಕ್ಷೇಪದಿಂದಾಗಿ ಕೊನೆಗೊಳ್ಳಲಿದೆ. ಬೈಬಲಿಗನುಸಾರ, ದೇವರ ವಾಗ್ದತ್ತ ನೀತಿಯ ಹೊಸ ಲೋಕವು ನಿರಾಶೆ ಹಾಗೂ ಹತಾಶೆಯನ್ನು ಅಂತ್ಯಗೊಳಿಸಲಿದೆ.—2 ಪೇತ್ರ 3:13.
ಮಾನವ ಕಷ್ಟಸಂಕಟವು ತಾತ್ಕಾಲಿಕವೆಂಬುದನ್ನು ತಿಳಿದಿರುವುದು ಎಷ್ಟೊಂದು ಸಾಂತ್ವನವನ್ನು ಕೊಡುತ್ತದೆ! ಯೇಸು ಕ್ರಿಸ್ತನ ಕೈಕೆಳಗಿನ ದೇವರ ಸ್ವರ್ಗೀಯ ರಾಜ್ಯದಾಳಿಕೆಯ ಕೆಳಗೆ, ಅನ್ಯಾಯ ಹಾಗೂ ಕಷ್ಟಾನುಭವವು ಕೊನೆಗೊಳ್ಳುವುದು. ದೇವರ ನೇಮಿತ ರಾಜನ ಕುರಿತಾಗಿ ಶಾಸ್ತ್ರವಚನಗಳು ಹೇಳುವುದು: “ಅವನು ಮೊರೆಯಿಡುವ ಬಡವರನ್ನೂ ದಿಕ್ಕಿಲ್ಲದೆ ಕುಗ್ಗಿದವರನ್ನೂ ಉದ್ಧರಿಸುವನು. ದೀನದರಿದ್ರರ ಮೇಲೆ ಕರುಣೆಯುಳ್ಳವನಾಗಿ ಅವರ ಪ್ರಾಣಗಳನ್ನು ಸಂತೈಸುವನು. ಕುಯುಕ್ತಿಬಲಾತ್ಕಾರಗಳಿಗೆ ತಪ್ಪಿಸಿ ಅವರನ್ನು ಕಾಯುವನು; ಅವರ ಜೀವವು ಅವನ ದೃಷ್ಟಿಯಲ್ಲಿ ಅಮೂಲ್ಯವಾಗಿರುವದು.”—ಕೀರ್ತನೆ 72:12-14.
ಈ ಪ್ರವಾದನಾ ಮಾತುಗಳು ನೆರವೇರುವ ಸಮಯವು ತುಂಬ ಹತ್ತಿರವಿದೆ. ಬೆರಗುಗೊಳಿಸುವಂಥ ಪರಿಸ್ಥಿತಿಗಳುಳ್ಳ ಭೂಪರದೈಸಿನಲ್ಲಿ ನಾವು ನಿತ್ಯಜೀವದಲ್ಲಿ ಆನಂದಿಸಬಹುದು. (ಲೂಕ 23:43; ಯೋಹಾನ 17:3) ಸಾಂತ್ವನವನ್ನು ನೀಡುವಂಥ ಈ ಶಾಸ್ತ್ರೀಯ ವಾಗ್ದಾನಗಳ ಕುರಿತಾದ ಜ್ಞಾನವು, ಸಹಾಯಕ್ಕಾಗಿ ಮೊರೆಯಿಡುವವರಿಗೆ ನಿರೀಕ್ಷೆಯನ್ನೂ ಸಾಂತ್ವನವನ್ನೂ ಕೊಡುತ್ತದೆ.
[ಪುಟ 32ರಲ್ಲಿರುವ ಚಿತ್ರ ಕೃಪೆ]
ಖಿನ್ನತೆಗೊಳಗಾಗಿರುವ ಹುಡುಗಿ: Photo ILO/J. Maillard