ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ಒಳ್ಳೆಯವನಿಗೆ ದೇವರ ಸಮ್ಮತಿ ಸಿಗುತ್ತದೆ’

‘ಒಳ್ಳೆಯವನಿಗೆ ದೇವರ ಸಮ್ಮತಿ ಸಿಗುತ್ತದೆ’

‘ಒಳ್ಳೆಯವನಿಗೆ ದೇವರ ಸಮ್ಮತಿ ಸಿಗುತ್ತದೆ’

ಸರ್ವ ಜೀವಿಗಳ ಉಗಮನು ಯೆಹೋವ ದೇವರೇ ಆಗಿದ್ದಾನೆ. (ಕೀರ್ತನೆ 36:9) ಹೌದು, “ಆತನಲ್ಲಿಯೇ ನಾವು ಜೀವಿಸುತ್ತೇವೆ, ಚಲಿಸುತ್ತೇವೆ, ಇರುತ್ತೇವೆ.” (ಅ. ಕೃತ್ಯಗಳು 17:28) ಮತ್ತು ಯಾರು ದೇವರೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದಾರೋ ಅವರ ಮೇಲೆ ಆತನು ಸುರಿಸುವ ಸುವರಗಳನ್ನು ಪರಿಗಣಿಸುವಾಗ, ನಮ್ಮ ಹೃದಯವು ಕೃತಜ್ಞತೆಯಿಂದ ತುಂಬುವುದಿಲ್ಲವೋ? ಅಷ್ಟೇಕೆ, “ದೇವರ ಉಚಿತಾರ್ಥ ವರವು . . . ನಿತ್ಯಜೀವ”ವೇ ಆಗಿದೆ. (ರೋಮಾಪುರ 6:23) ಆದುದರಿಂದ, ನಾವು ಯೆಹೋವನ ಸಮ್ಮತಿಯನ್ನು ಪಡೆದುಕೊಳ್ಳಲು ಪ್ರಯತ್ನಿಸುವುದು ಎಷ್ಟು ಅತ್ಯಾವಶ್ಯಕವಾಗಿದೆ!

‘ದೇವರು ಕೃಪೆಯನ್ನು ಅನುಗ್ರಹಿಸುತ್ತಾನೆ’ ಎಂದು ಕೀರ್ತನೆಗಾರನು ನಮಗೆ ಆಶ್ವಾಸನೆ ನೀಡುತ್ತಾನೆ. (ಕೀರ್ತನೆ 84:11) ಆದರೆ ಅವನು ಅದನ್ನು ಯಾರಿಗೆ ಕೊಡುತ್ತಾನೆ? ಇಂದು ಜನರು ಅನೇಕವೇಳೆ, ವಿದ್ಯಾಭ್ಯಾಸ, ಧನಸಂಪತ್ತು, ಚರ್ಮದ ಬಣ್ಣ, ಜಾತಿಯ ಹಿನ್ನೆಲೆ ಇನ್ನು ಮುಂತಾದ ವಿಷಯಗಳ ಆಧಾರದ ಮೇಲೆ ಇತರರಿಗೆ ಕೃಪೆಯನ್ನು ತೋರಿಸುತ್ತಾರೆ. ಆದರೆ ದೇವರು ಯಾರಿಗೆ ಕೃಪೆಯನ್ನು ತೋರಿಸುತ್ತಾನೆ? ಪುರಾತನ ಇಸ್ರಾಯೇಲ್‌ನ ರಾಜನಾಗಿದ್ದ ಸೊಲೊಮೋನನು ಉತ್ತರಿಸುವುದು: “ಒಳ್ಳೆಯವನಿಗೆ ಯೆಹೋವನ ಸಮ್ಮತಿ ಸಿಗುತ್ತದೆ, ಆದರೆ ಕುಯುಕ್ತಿಯುಳ್ಳಂಥ ಒಬ್ಬ ಮನುಷ್ಯನು ದುಷ್ಟನೆಂದು ನಿರ್ಣಯಿಸಲ್ಪಡುವನು.”​—ಜ್ಞಾನೋಕ್ತಿ 12:2.

ಒಳ್ಳೆಯ ವ್ಯಕ್ತಿಯನ್ನು ಅಂದರೆ ಸದ್ಗುಣವುಳ್ಳವನನ್ನು ಯೆಹೋವನು ಇಷ್ಟಪಡುತ್ತಾನೆ ಎಂಬುದು ಸ್ಪಷ್ಟ. ಒಬ್ಬ ಒಳ್ಳೇ ವ್ಯಕ್ತಿಯ ಸದ್ಗುಣಗಳಲ್ಲಿ, ಸ್ವಶಿಸ್ತು, ನಿಷ್ಪಕ್ಷಪಾತ, ದೀನಭಾವ, ಸಹಾನುಭೂತಿ ಹಾಗೂ ವಿವೇಕಗಳಂಥ ಗುಣಗಳು ಸೇರಿರುತ್ತವೆ. ಅವನ ಆಲೋಚನೆಗಳು ನೀತಿಭರಿತ, ಅವನ ಮಾತುಗಳು ಉತ್ತೇಜನದಾಯಕ, ಮತ್ತು ಕೃತ್ಯಗಳು ನ್ಯಾಯಯುತ ಹಾಗೂ ಪ್ರಯೋಜನಕರವಾಗಿರುತ್ತವೆ. ಬೈಬಲಿನ ಜ್ಞಾನೋಕ್ತಿ ಪುಸ್ತಕದ 12ನೆಯ ಅಧ್ಯಾಯದ ಮೊದಲ ಭಾಗವು, ಒಳ್ಳೇತನವು ನಮ್ಮ ದೈನಂದಿನ ಜೀವಿತದ ಮೇಲೆ ಹೇಗೆ ಪ್ರಭಾವ ಬೀರಬೇಕು ಎಂಬುದನ್ನು ನಮಗೆ ತೋರಿಸುತ್ತದೆ ಮತ್ತು ಈ ಗುಣವನ್ನು ತೋರಿಸುವ ಮೂಲಕ ಫಲಿಸುವ ಪ್ರಯೋಜನಗಳನ್ನು ಸೂಚಿಸುತ್ತದೆ. ಅಲ್ಲಿ ಏನು ತಿಳಿಸಲ್ಪಟ್ಟಿದೆಯೋ ಅದನ್ನು ಪರಿಗಣಿಸುವುದು, “ಒಳ್ಳೇದನ್ನು ಮಾಡುವ ಒಳನೋಟವನ್ನು” ನಮಗೆ ಕೊಡುವುದು. (ಕೀರ್ತನೆ 36:​3, NW) ಅದರಲ್ಲಿರುವ ವಿವೇಕಯುತ ಸಲಹೆಯನ್ನು ಅನ್ವಯಿಸುವುದು, ದೇವರ ಸಮ್ಮತಿಯನ್ನು ಪಡೆಯಲು ನಮಗೆ ಸಹಾಯಮಾಡುವುದು.

ಶಿಸ್ತು ಅತ್ಯಾವಶ್ಯಕ

“ಜ್ಞಾನವನ್ನು ಪ್ರೀತಿಸುವವನು ಶಿಸ್ತನ್ನು ಪ್ರೀತಿಸುತ್ತಾನೆ. ತಿದ್ದುಪಡಿಯನ್ನು ದ್ವೇಷಿಸುವವನು ಬುದ್ಧಿಹೀನ.” (ಜ್ಞಾನೋಕ್ತಿ 12:​1, ಪರಿಶುದ್ಧ ಬೈಬಲ್‌*) ವೈಯಕ್ತಿಕ ಪ್ರಗತಿಯನ್ನು ಮಾಡಲು ಕಾತುರನಾಗಿರುವ ಒಬ್ಬ ಒಳ್ಳೇ ಮನುಷ್ಯನು, ಶಿಸ್ತನ್ನು ಬಹಳವಾಗಿ ಬಯಸುತ್ತಾನೆ. ಕ್ರೈಸ್ತ ಕೂಟಗಳಲ್ಲಿ ಅಥವಾ ವೈಯಕ್ತಿಕ ಸಂಭಾಷಣೆಗಳಲ್ಲಿ ತಾನು ಪಡೆದುಕೊಳ್ಳುವ ಸಲಹೆಯನ್ನು ಅವನು ಆ ಕೂಡಲೆ ಅನ್ವಯಿಸಿಕೊಳ್ಳುತ್ತಾನೆ. ಶಾಸ್ತ್ರವಚನಗಳಲ್ಲಿ ಮತ್ತು ಬೈಬಲ್‌ ಆಧಾರಿತ ಪ್ರಕಾಶನಗಳಲ್ಲಿ ಕಂಡುಬರುವ ಮಾತುಗಳು ಮುಳ್ಳುಗೋಲುಗಳಂತಿದ್ದು, ಯಥಾರ್ಥ ಮಾರ್ಗವನ್ನು ಅನುಸರಿಸುವಂತೆ ಅವನನ್ನು ತಿವಿಯುತ್ತಾ ಇರುತ್ತವೆ. ಅವನು ಜ್ಞಾನವನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಾನೆ ಹಾಗೂ ತನ್ನ ಮಾರ್ಗಗಳನ್ನು ಸರಿಪಡಿಸಿಕೊಳ್ಳಲು ಅದನ್ನು ಉಪಯೋಗಿಸುತ್ತಾನೆ. ಹೌದು, ಶಿಸ್ತನ್ನು ಪ್ರೀತಿಸುವವನು ಜ್ಞಾನವನ್ನೂ ಪ್ರೀತಿಸುತ್ತಾನೆ.

ಸತ್ಯಾರಾಧಕರಿಗೆ ಶಿಸ್ತು, ಅದರಲ್ಲೂ ವಿಶೇಷವಾಗಿ ಸ್ವಶಿಸ್ತು ಎಷ್ಟು ಅಗತ್ಯವಾಗಿದೆ! ದೇವರ ವಾಕ್ಯದ ಆಳವಾದ ಜ್ಞಾನವು ನಮಗಿರುತ್ತಿದ್ದಲ್ಲಿ ಎಷ್ಟು ಚೆನ್ನಾಗಿರುತ್ತಿತ್ತೆಂದು ನಾವು ಹಾರೈಸಸಾಧ್ಯವಿದೆ. ಕ್ರೈಸ್ತ ಶುಶ್ರೂಷೆಯಲ್ಲಿ ಹೆಚ್ಚು ಪರಿಣಾಮಕಾರಿಯಾಗಿರಲು ಹಾಗೂ ದೇವರ ವಾಕ್ಯದ ಉತ್ತಮ ಬೋಧಕರಾಗಿರಲು ನಾವು ಬಯಸಬಹುದು. (ಮತ್ತಾಯ 24:14; 28:​19, 20) ಆದರೆ ಇಂಥ ಹಾರೈಕೆಗಳಿಗೆ ವಾಸ್ತವರೂಪವನ್ನು ಕೊಡಲು ಸ್ವಶಿಸ್ತಿನ ಅಗತ್ಯವಿದೆ. ಜೀವನದ ಇನ್ನಿತರ ಕ್ಷೇತ್ರಗಳಲ್ಲಿಯೂ ಸ್ವಶಿಸ್ತಿನ ಆವಶ್ಯಕತೆಯಿದೆ. ಉದಾಹರಣೆಗೆ, ನಿಷಿದ್ಧ ಬಯಕೆಗಳನ್ನು ಉದ್ರೇಕಿಸಲಿಕ್ಕೆಂದೇ ವಿನ್ಯಾಸಿಸಲ್ಪಟ್ಟಿರುವ ಮಾಹಿತಿಯು ಇಂದು ಹೇರಳವಾಗಿ ಲಭ್ಯವಿದೆ. ಅಯೋಗ್ಯವಾದ ದೃಶ್ಯಗಳ ಮೇಲೆ ಕೇಂದ್ರೀಕರಿಸುವುದರಿಂದ ನಮ್ಮ ಕಣ್ಣುಗಳಿಗೆ ಕಡಿವಾಣಹಾಕುವುದು, ಸ್ವಶಿಸ್ತನ್ನು ಕೇಳಿಕೊಳ್ಳುವುದಿಲ್ಲವೋ? ಅಷ್ಟುಮಾತ್ರವಲ್ಲ, “ಮನುಷ್ಯರ ಮನಸ್ಸಂಕಲ್ಪವು ಚಿಕ್ಕಂದಿನಿಂದಲೇ ಕೆಟ್ಟ”ದ್ದಾಗಿರುವುದರಿಂದ, ಮನಸ್ಸಿನ ಗುಪ್ತ ಮೂಲೆಯಲ್ಲಿ ಅನೈತಿಕ ಆಲೋಚನೆಯು ಖಂಡಿತವಾಗಿಯೂ ಮೇಲೇಳಸಾಧ್ಯವಿದೆ. (ಆದಿಕಾಂಡ 8:21) ಅಂಥ ಆಲೋಚನೆಯ ಕುರಿತಾಗಿ ಯೋಚಿಸುತ್ತಾ ಇರದಿರಲು ಸಹ ಸ್ವಶಿಸ್ತು ಅತ್ಯಗತ್ಯ.

ಇನ್ನೊಂದು ಕಡೆಯಲ್ಲಿ, ತಿದ್ದುಪಡಿಯನ್ನು ದ್ವೇಷಿಸುವವನು, ಶಿಸ್ತನ್ನಾಗಲಿ ಜ್ಞಾನವನ್ನಾಗಲಿ ಪ್ರೀತಿಸುವುದಿಲ್ಲ. ತಿದ್ದುಪಡಿಯ ಬಗ್ಗೆ ಅಸಮಾಧಾನ ತೋರಿಸುವ ಪಾಪಪೂರ್ಣ ಮಾನವ ಪ್ರವೃತ್ತಿಗೆ ಮಣಿಯುತ್ತಾ, ಅವನು ತನ್ನನ್ನೇ ಒಂದು ಬುದ್ಧಿಹೀನ ಪಶುವಿನ ಮಟ್ಟಕ್ಕಿಳಿಸಿಕೊಳ್ಳುತ್ತಾನೆ, ಅಂದರೆ ನೈತಿಕ ಮಟ್ಟಗಳ ಕೊರತೆಯುಳ್ಳವನಾಗಿರುತ್ತಾನೆ. ಈ ಪ್ರವೃತ್ತಿಯನ್ನು ನಾವು ದೃಢಮನಸ್ಸಿನಿಂದ ಪ್ರತಿರೋಧಿಸಬೇಕು.

“ಕದಲಿಸಲಾಗದಂಥ ಬೇರುಗಳು”

ಒಬ್ಬ ಒಳ್ಳೇ ಮನುಷ್ಯನು ಎಂದೂ ಅನೀತಿವಂತನಾಗಿರನು ಅಥವಾ ಅನ್ಯಾಯವಂತನಾಗಿರನು ಎಂಬುದಂತೂ ನಿಶ್ಚಯ. ಆದುದರಿಂದ, ಯೆಹೋವನ ಸಮ್ಮತಿಯನ್ನು ಪಡೆಯಲು ನೀತಿಯು ಸಹ ಅತ್ಯಗತ್ಯವಾಗಿದೆ. ರಾಜ ದಾವೀದನು ಹಾಡಿದ್ದು: “ಯೆಹೋವನೇ, ನೀತಿವಂತನನ್ನು ಆಶೀರ್ವದಿಸುವವನು ನೀನೇ; ನಿನ್ನ ದಯವು ದೊಡ್ಡ ಗುರಾಣಿಯಂತೆ ಅವನನ್ನು ಆವರಿಸಿಕೊಳ್ಳುವದು.” (ಕೀರ್ತನೆ 5:11) ನೀತಿವಂತರ ಸ್ಥಿತಿಯನ್ನು ದುಷ್ಟರ ಸ್ಥಿತಿಯೊಂದಿಗೆ ತುಲನೆಮಾಡುತ್ತಾ ಸೊಲೊಮೋನನು ಹೇಳುವುದು: “ಯಾವನೂ ದುಷ್ಟತನದಿಂದ ಸ್ಥಿರನಾಗನು; ಶಿಷ್ಟನು ಯಾವಾಗಲೂ ದೃಢಮೂಲನೇ.”​—ಜ್ಞಾನೋಕ್ತಿ 12:3.

ದುಷ್ಟರು ಸಮೃದ್ಧಿ ಹೊಂದುತ್ತಿರುವಂತೆ ತೋರಿಬರಬಹುದು. ಕೀರ್ತನೆಗಾರನಾದ ಆಸಾಫನ ಅನುಭವವನ್ನು ಪರಿಗಣಿಸಿರಿ. ಅವನು ಹೇಳುವುದು: “ನನ್ನ ಕಾಲುಗಳು ಜಾರಿದವು; ನನ್ನ ಹೆಜ್ಜೆಗಳು ತಪ್ಪಿದವು.” ಏಕೆ? ಆಸಾಫನು ಉತ್ತರಿಸುವುದು: “ದುಷ್ಟರ ಏಳಿಗೆಯನ್ನು ಕಂಡು ಗರ್ವಿಷ್ಠರ ಮೇಲೆ ಅಸೂಯೆಗೊಂಡೆನು.” (ಕೀರ್ತನೆ 73:​2, 3, ಪರಿಶುದ್ಧ ಬೈಬಲ್‌*) ಆದರೆ ಅವನು ದೇವರ ಆಲಯವನ್ನು ಪ್ರವೇಶಿಸಿದಾಗ, ಯೆಹೋವನು ಅವರನ್ನು ಜಾರುವಂಥ ಅಪಾಯಕರ ಸ್ಥಳದಲ್ಲಿ ಇಟ್ಟಿದ್ದಾನೆಂಬುದನ್ನು ಗ್ರಹಿಸಿದನು. (ಕೀರ್ತನೆ 73:​17, 18) ದುಷ್ಟರು ಸಾಧಿಸುತ್ತಿರುವಂತೆ ಕಂಡುಬರಬಹುದಾದ ಯಾವುದೇ ಯಶಸ್ಸು ತಾತ್ಕಾಲಿಕವಾದದ್ದಾಗಿದೆ. ಹೀಗಿರುವಾಗ, ನಾವೇಕೆ ಅವರ ಕುರಿತು ಅಸೂಯೆಪಡಬೇಕು?

ಇದಕ್ಕೆ ವ್ಯತಿರಿಕ್ತವಾಗಿ, ಯೆಹೋವನ ಸಮ್ಮತಿಯನ್ನು ಪಡೆದಿರುವಂಥ ಒಬ್ಬ ವ್ಯಕ್ತಿಯು ಸ್ಥಿರನಾಗಿರುತ್ತಾನೆ. ಒಂದು ಮರದ ಬಲವಾದ ಬೇರಿನ ವ್ಯೂಹದ ಕುರಿತಾದ ರೂಪಕಾಲಂಕಾರವನ್ನು ಉಪಯೋಗಿಸುತ್ತಾ ಸೊಲೊಮೋನನು ಹೇಳುವುದು: “ಒಳ್ಳೇ ಜನರು ಕದಲಿಸಲು ಅಸಾಧ್ಯವಾಗಿರುವಂಥ ಬೇರುಗಳನ್ನು ಹೊಂದಿದ್ದಾರೆ.” (ಜ್ಞಾನೋಕ್ತಿ 12:​3, ದ ನ್ಯೂ ಇಂಗ್ಲಿಷ್‌ ಬೈಬಲ್‌) ಕ್ಯಾಲಿಫೋರ್ನಿಯದ ಸಿಕೋಯದಂಥ ಬೃಹತ್‌ ಗಾತ್ರದ ಮರದ ಬುಡದಲ್ಲಿರುವ ಅಗೋಚರ ಬೇರುಗಳು, ಅನೇಕ ಎಕ್ರೆಗಳಷ್ಟು ವಿಸ್ತಾರವಾದ ಭೂಕ್ಷೇತ್ರವನ್ನು ಆವರಿಸಬಹುದು ಮತ್ತು ನೆರೆಹಾವಳಿ ಹಾಗೂ ಬಲವಾದ ಚಂಡಮಾರುತಗಳ ಎದುರಿನಲ್ಲೂ ಭದ್ರವಾದ ಆಧಾರವನ್ನು ಒದಗಿಸಬಲ್ಲವು. ಬೃಹತ್‌ ಗಾತ್ರದ ಸಿಕೋಯ ಮರವು, ಒಂದು ತೀಕ್ಷ್ಣವಾದ ಭೂಕಂಪವನ್ನು ಸಹ ಎದುರಿಸಿ ನಿಲ್ಲಬಲ್ಲದು.

ಭೂಮಿಯ ಪೋಷಕ ಮಣ್ಣಿನಲ್ಲಿರುವ ಆ ಬೇರುಗಳಂತೆ, ನಮ್ಮ ಹೃದಮನಗಳು ದೇವರ ವಾಕ್ಯದಲ್ಲಿ ವ್ಯಾಪಕವಾದ ಪರಿಶೋಧನೆಯನ್ನು ನಡೆಸಬೇಕು ಹಾಗೂ ಅದರ ಜೀವದಾಯಕ ನೀರುಗಳನ್ನು ಹೀರಿಕೊಳ್ಳಬೇಕು. ಹೀಗೆ ನಮ್ಮ ನಂಬಿಕೆಯು ದೃಢವಾಗಿ ಮತ್ತು ಬಲವಾಗಿ ಬೇರೂರಿದಂಥದ್ದಾಗುತ್ತದೆ, ಹಾಗೂ ನಮ್ಮ ನಿರೀಕ್ಷೆಯು ನಿಶ್ಚಿತವಾಗುತ್ತದೆ ಮತ್ತು ಇನ್ನಷ್ಟು ಸದೃಢವಾಗುತ್ತದೆ. (ಇಬ್ರಿಯ 6:19) ನಾವೆಂದಿಗೂ “[ಸುಳ್ಳು] ಉಪದೇಶಗಳಿಂದ ಕಂಗೆಟ್ಟು ಗಾಳಿಯಿಂದ ಅತ್ತಿತ್ತ ನೂಕಿಸಿಕೊಂಡು” ಹೋಗುವುದಿಲ್ಲ. (ಎಫೆಸ 4:14) ನಾವು ಬಿರುಗಾಳಿಯಂಥ ಪರೀಕ್ಷೆಗಳ ಪರಿಣಾಮಗಳನ್ನು ಅನುಭವಿಸುವೆವು ಮತ್ತು ವಿರೋಧದ ಎದುರಿನಲ್ಲಿ ಹೆದರಬಹುದು ನಿಜ. ಆದರೆ ನಮ್ಮ ‘ಮೂಲವು ದೃಢವಾಗಿರುವುದು.’

“ಗುಣವಂತಳಾದ ಹೆಂಡತಿಯು ಗಂಡನಿಗೆ ಕಿರೀಟದಂತಿರುವಳು”

“ಪ್ರತಿಯೊಬ್ಬ ಗಂಡಸಿನ ಯಶಸ್ಸಿನ ಹಿಂದೆ ಒಬ್ಬ ಸ್ತ್ರೀಯ ಕೈವಾಡವಿರುತ್ತದೆ” ಎಂಬ ಗಾದೆಯು ಅನೇಕರಿಗೆ ಗೊತ್ತಿದೆ. ಬೆಂಬಲ ನೀಡುವಂಥ ಸ್ತ್ರೀಯೊಬ್ಬಳ ಪ್ರಾಮುಖ್ಯತೆಯನ್ನು ಸೂಚಿಸುತ್ತಾ, ಸೊಲೊಮೋನನು ಹೇಳುವುದು: “ಗುಣವಂತಳಾದ ಹೆಂಡತಿಯು ಗಂಡನಿಗೆ ಕಿರೀಟದಂತಿರುವಳು; ಗಂಡನನ್ನು ನಾಚಿಕೆಗೆ ಗುರಿಮಾಡುವ ಹೆಂಡತಿಯು ಗಂಡನ ಎಲುಬಿಗೆ ಕ್ಷಯದಂತಿರುವಳು.” (ಜ್ಞಾನೋಕ್ತಿ 12:4, ಪರಿಶುದ್ಧ ಬೈಬಲ್‌*) “ಗುಣವಂತಳು” ಎಂಬ ಪದವು, ಒಳ್ಳೇತನದ ಅನೇಕ ಅಂಶಗಳನ್ನು ಸಾರಾಂಶಿಸುತ್ತದೆ. ಜ್ಞಾನೋಕ್ತಿ 31ನೆಯ ಅಧ್ಯಾಯದಲ್ಲಿ ವಿವರವಾಗಿ ವರ್ಣಿಸಲ್ಪಟ್ಟಿರುವ ಒಬ್ಬ ಒಳ್ಳೇ ಪತ್ನಿಯ ಸದ್ಗುಣಗಳಲ್ಲಿ, ಉದ್ಯೋಗಶೀಲತೆ, ನಂಬಿಗಸ್ತಿಕೆ ಹಾಗೂ ವಿವೇಕಗಳು ಒಳಗೂಡಿವೆ. ಈ ಗುಣಗಳಿರುವಂಥ ಒಬ್ಬ ಸ್ತ್ರೀಯು ಅವಳ ಗಂಡನಿಗೆ ಕಿರೀಟದಂತಿದ್ದಾಳೆ, ಏಕೆಂದರೆ ಅವಳ ಒಳ್ಳೇ ನಡತೆಯು ಅವನಿಗೆ ಘನತೆಯನ್ನು ತರುತ್ತದೆ ಮತ್ತು ಇತರರ ಮುಂದೆ ಅವನನ್ನು ಮೇಲೇರಿಸುತ್ತದೆ. ಅವಳೆಂದೂ ಮಹತ್ವಾಕಾಂಕ್ಷೆಯಿಂದ ಗಂಡನಿಗಿಂತ ಮುಂದೆ ಹೋಗುವುದಿಲ್ಲ ಮತ್ತು ಮಾನ್ಯತೆಗಾಗಿ ಅವನೊಂದಿಗೆ ಸ್ಪರ್ಧಿಸುವುದಿಲ್ಲ. ಇದಕ್ಕೆ ಬದಲಾಗಿ, ಅವಳು ತನ್ನ ಗಂಡನಿಗೆ ಸಹಚಾರಿಣಿಯಾಗಿರುವ ಸಹಾಯಕಿಯಾಗಿದ್ದಾಳೆ.

ಒಬ್ಬ ಸ್ತ್ರೀಯು ಹೇಗೆ ನಾಚಿಕೆಗೆ ಗುರಿಮಾಡುವಂಥ ರೀತಿಯಲ್ಲಿ ವರ್ತಿಸಬಹುದು, ಮತ್ತು ಯಾವ ಫಲಿತಾಂಶಗಳೊಂದಿಗೆ? ನಾಚಿಕೆಗೆ ಗುರಿಮಾಡುವಂಥ ಈ ನಡತೆಯು ಜಗಳದಿಂದ ಹಿಡಿದು ವ್ಯಭಿಚಾರದ ತನಕದ ಸಂಗತಿಯನ್ನು ಒಳಗೂಡಬಹುದು. (ಜ್ಞಾನೋಕ್ತಿ 7:​10-23; 19:13) ಒಬ್ಬ ಹೆಂಡತಿಯು ಮಾಡುವ ಇಂಥ ಕೃತ್ಯಗಳಿಂದಾಗಿ ಅವಳ ಗಂಡನ ಅಧಃಪತನವಾಗುವುದು, ಅಷ್ಟೇ. ಅವಳು “ಅವನ ಎಲುಬಿಗೆ ಕ್ಷಯದಂತಿರುವಳು,” ಅಂದರೆ ಒಂದು ಪರಾಮರ್ಶೆಯ ಕೃತಿಯು ಹೇಳುವಂತೆ, “ಅವಳು ದೇಹದ ಚೌಕಟ್ಟನ್ನೇ ದುರ್ಬಲಗೊಳಿಸುವಂಥ ಒಂದು ರೋಗದಂತೆ ಅವನನ್ನು ಅಧಃಪತನಕ್ಕೆ ನಡೆಸುವಳು.” “ಒಂದು ಆಧುನಿಕ ಸಮಾನಾರ್ಥ ಅಭಿವ್ಯಕ್ತಿಯು ‘ಕ್ಯಾನ್ಸರ್‌’ ಎಂದಾಗಿರಬಹುದು​—ಈ ರೋಗವು ಒಬ್ಬ ವ್ಯಕ್ತಿಯ ಜೀವಶಕ್ತಿಯನ್ನು ಹಂತಹಂತವಾಗಿ ದುರ್ಬಲಗೊಳಿಸಿಬಿಡುತ್ತದೆ” ಎಂದು ಇನ್ನೊಂದು ಕೃತಿಯು ತಿಳಿಸುತ್ತದೆ. ಕ್ರೈಸ್ತ ಹೆಂಡತಿಯರು ಒಬ್ಬ ಗುಣವಂತೆ ಹೆಂಡತಿಯ ಸದ್ಗುಣಗಳ ಕುರಿತು ಮನನಮಾಡುವ ಮೂಲಕ, ದೇವರ ಸಮ್ಮತಿಯನ್ನು ಪಡೆದುಕೊಳ್ಳಲು ಪ್ರಯತ್ನಿಸುವಂತಾಗಲಿ.

ಆಲೋಚನೆಗಳಿಂದ ಕ್ರಿಯೆಗಳಿಗೆ, ಕ್ರಿಯೆಗಳಿಂದ ಪರಿಣಾಮಗಳಿಗೆ

ಆಲೋಚನೆಗಳು ಕ್ರಿಯೆಗಳಿಗೆ ನಡಿಸುತ್ತವೆ, ಮತ್ತು ಕ್ರಿಯೆಗಳು ಪರಿಣಾಮಗಳಿಗೆ ನಡಿಸುತ್ತವೆ. ನೀತಿವಂತರನ್ನು ದುಷ್ಟರೊಂದಿಗೆ ಹೋಲಿಸುತ್ತಾ, ಆಲೋಚನೆಗಳಿಂದ ಕ್ರಿಯೆಗಳ ವರೆಗಿನ ಪ್ರಗತಿಪರ ಮುನ್ನಡೆಯನ್ನು ಈಗ ಸೊಲೊಮೋನನು ಸಾದರಪಡಿಸುತ್ತಾನೆ. ಅವನು ಹೇಳುವುದು: “ನೀತಿವಂತರ ಆಲೋಚನೆ ನ್ಯಾಯವಾಗಿದೆ. ದುಷ್ಟರ ಉಪದೇಶ ಮೋಸಕರ. ಕೆಡುಕರು ತಮ್ಮ ಮಾತುಗಳಿಂದ ಬೇರೆಯವರನ್ನು ನೋಯಿಸುತ್ತಾರೆ [“ಕೆಟ್ಟವರ ಮಾತು ರಕ್ತಕ್ಕೆ ಹೊಂಚು,” BSI]. ಒಳ್ಳೆಯವರ ಮಾತುಗಳಾದರೊ ಜನರನ್ನು ಅಪಾಯದಿಂದ ರಕ್ಷಿಸುತ್ತವೆ.”​—ಜ್ಞಾನೋಕ್ತಿ 12:​5, 6, ಪರಿಶುದ್ಧ ಬೈಬಲ್‌. *

ಒಳ್ಳೇ ಜನರಿಗಿರುವ ಆಲೋಚನೆಗಳು ಸಹ ನೈತಿಕವಾಗಿ ಸಮರ್ಪಕವಾಗಿರುತ್ತವೆ ಮತ್ತು ನಿಷ್ಪಕ್ಷಪಾತ ಹಾಗೂ ನೀತಿಯ ಕಡೆಗೆ ಮಾರ್ಗದರ್ಶಿಸುವವುಗಳಾಗಿರುತ್ತವೆ. ನೀತಿವಂತರು ದೇವರಿಗಾಗಿರುವ ಹಾಗೂ ಜೊತೆ ಮಾನವರಿಗಾಗಿರುವ ಪ್ರೀತಿಯಿಂದ ಪ್ರಚೋದಿತರಾಗಿರುವುದರಿಂದ, ಅವರ ಆಲೋಚನೆಗಳು ಒಳ್ಳೆಯವುಗಳಾಗಿರುತ್ತವೆ. ಇನ್ನೊಂದು ಕಡೆಯಲ್ಲಿ, ದುಷ್ಟರು ಸ್ವಾರ್ಥಭಾವದಿಂದ ಪ್ರಚೋದಿತರಾಗಿರುತ್ತಾರೆ. ಇದರ ಪರಿಣಾಮವಾಗಿ, ತಮ್ಮ ಹೇತುಗಳನ್ನು ಸಾಧಿಸಲಿಕ್ಕಾಗಿರುವ ಅವರ ವಿಧಾನಗಳು ಅಥವಾ ಸಂಚುಗಳು ಮೋಸಕರವಾಗಿರುತ್ತವೆ. ಅವರ ಕ್ರಿಯೆಗಳು ವಂಚನಾತ್ಮಕವಾಗಿರುತ್ತವೆ. ಅವರು ಮುಗ್ಧರನ್ನು ಬಲೆಯಲ್ಲಿ ಬೀಳಿಸಲು, ಅಂದರೆ ಸುಳ್ಳು ಆಪಾದನೆಗಳ ಮೂಲಕ ನ್ಯಾಯಸಭೆಯಲ್ಲಿ ಅವರನ್ನು ಸಿಕ್ಕಿಸಿಹಾಕಲು ಹಿಂಜರಿಯುವುದಿಲ್ಲ. ಅವರ ಮಾತುಗಳು “ರಕ್ತಕ್ಕೆ ಹೊಂಚಿ”ನಿಂತಿವೆ, ಏಕೆಂದರೆ ಅವರು ತಮ್ಮ ಮುಗ್ಧ ಬಲಿಪಶುಗಳಿಗೆ ಹಾನಿಯನ್ನುಂಟುಮಾಡಲು ಬಯಸುತ್ತಾರೆ. ದುಷ್ಟರ ಸಂಚುಗಳನ್ನು ಅರಿತವರಾಗಿರುವ ಹಾಗೂ ಎಚ್ಚರಿಕೆಯುಳ್ಳವರಾಗಿರಬೇಕು ಎಂಬ ವಿವೇಕವಿರುವ ಯಥಾರ್ಥವಂತರು, ಈ ಅಪಾಯದಿಂದ ತಪ್ಪಿಸಿಕೊಳ್ಳಲು ಶಕ್ತರಾಗಿದ್ದಾರೆ. ಅವರು ಎಚ್ಚರಿಕೆಯಿಂದಿಲ್ಲದವರನ್ನು ಎಚ್ಚರಿಸಲು ಮತ್ತು ದುಷ್ಟರ ವಂಚನಾತ್ಮಕ ಒಳಸಂಚುಗಳಿಂದ ಅವರನ್ನು ರಕ್ಷಿಸಲು ಸಹ ಶಕ್ತರಾಗಿರಬಹುದು.

ನೀತಿವಂತರಿಗೆ ಹಾಗೂ ಅನೀತಿವಂತರಿಗೆ ಏನಾಗುವುದು? ಸೊಲೊಮೋನನು ಉತ್ತರಿಸುವುದು: “ದುರ್ಜನರು ಕೆಡವಲ್ಪಟ್ಟು ನಿರ್ಮೂಲರಾಗುವರು; ಸಜ್ಜನರ ಮನೆಯು ಸ್ಥಿರವಾಗಿ ನಿಲ್ಲುವದು.” (ಜ್ಞಾನೋಕ್ತಿ 12:7) ಒಂದು ಪರಾಮರ್ಶೆಯ ಕೃತಿಯು ಹೇಳುವಂತೆ, ಒಂದು ಮನೆಯು “ಮನೆವಾರ್ತೆಯನ್ನು ಮತ್ತು ಒಬ್ಬ ವ್ಯಕ್ತಿಗೆ ಅಮೂಲ್ಯವಾಗಿರುವಂಥದ್ದೆಲ್ಲವನ್ನೂ ಪ್ರತಿನಿಧಿಸುತ್ತಾ, ಅವನು ನಿಜವಾಗಿಯೂ ಬದುಕುವುದನ್ನು ಸಾಧ್ಯಗೊಳಿಸುತ್ತದೆ.” ಇದು ನೀತಿವಂತನ ಕುಟುಂಬಕ್ಕೆ ಹಾಗೂ ಸಂತತಿಯವರಿಗೆ ಸಹ ಸೂಚಿತವಾಗಿರಬಲ್ಲದು. ಏನೇ ಆದರೂ, ಈ ಜ್ಞಾನೋಕ್ತಿಯ ಒಂದು ಅಂಶವಂತೂ ಸ್ಪಷ್ಟ: ಕಷ್ಟಕಾಲದಲ್ಲೂ ನೀತಿವಂತರು ಸ್ಥಿರವಾಗಿ ನಿಲ್ಲುವರು.

ದೀನನು ಏಳಿಗೆಹೊಂದುವನು

ವಿವೇಚನಾಶಕ್ತಿಯ ಮೌಲ್ಯವನ್ನು ಒತ್ತಿಹೇಳುತ್ತಾ ಇಸ್ರಾಯೇಲ್ಯರ ಅರಸನು ತಿಳಿಸುವುದು: “ಬುದ್ಧಿವಂತನನ್ನು ಅವನ ಬುದ್ಧಿಗೆ ತಕ್ಕಂತೆ ಹೊಗಳುವರು; ವಕ್ರಬುದ್ಧಿಯುಳ್ಳವನನ್ನು ತಿರಸ್ಕರಿಸುವರು.” (ಜ್ಞಾನೋಕ್ತಿ 12:8) ಒಬ್ಬ ಬುದ್ಧಿವಂತ ವ್ಯಕ್ತಿಯು, ತನ್ನ ಬಾಯಿಂದ ಮಾತುಗಳು ತ್ವರಿತಗತಿಯಿಂದ ಹೊರಬರುವಂತೆ ಅನುಮತಿಸುವುದಿಲ್ಲ. ಮಾತಾಡುವುದಕ್ಕೆ ಮೊದಲು ಅವನು ಆಲೋಚಿಸುತ್ತಾನೆ ಮತ್ತು ಇತರರೊಂದಿಗೆ ಶಾಂತಿಭರಿತ ಸಂಬಂಧಗಳಲ್ಲಿ ಆನಂದಿಸುತ್ತಾನೆ, ಏಕೆಂದರೆ “ಬುದ್ಧಿವಂತನ” ಬಾಯಿ ಅವನು ತನ್ನ ಮಾತುಗಳನ್ನು ಜಾಗರೂಕತೆಯಿಂದ ಆಯ್ಕೆಮಾಡುವಂತೆ ಮುನ್ನಡಿಸುತ್ತದೆ. ಮೂರ್ಖ ಅಥವಾ ಸಂದೇಹಾಸ್ಪದ ಪ್ರಶ್ನೆಗಳನ್ನು ಎದುರಿಸುವಾಗ, ವಿವೇಚನಾಶಕ್ತಿಯುಳ್ಳ ಒಬ್ಬ ವ್ಯಕ್ತಿಯು ‘ಹಿಡಿದು ಮಾತಾಡಲು’ ಶಕ್ತನಾಗಿರುತ್ತಾನೆ. (ಜ್ಞಾನೋಕ್ತಿ 17:27) ಅಂಥ ಒಬ್ಬ ವ್ಯಕ್ತಿಯು ಹೊಗಳಲ್ಪಡುತ್ತಾನೆ ಮತ್ತು ಯೆಹೋವನಿಗೆ ಪ್ರಿಯನಾಗಿದ್ದಾನೆ. ‘ವಕ್ರ ಮನಸ್ಸಿನಿಂದ’ ಬರುವ ವಕ್ರ ಅಭಿಪ್ರಾಯಗಳಿರುವಂಥ ಒಬ್ಬ ವ್ಯಕ್ತಿಗಿಂತ ಇವನೆಷ್ಟು ಭಿನ್ನನಾಗಿರುತ್ತಾನೆ!

ಹೌದು, ಬುದ್ಧಿವಂತ ವ್ಯಕ್ತಿಯನ್ನು ಹೊಗಳಲಾಗುತ್ತದೆ, ಅದರೆ ಮುಂದಿನ ಜ್ಞಾನೋಕ್ತಿಯು ದೀನಭಾವದ ಮೌಲ್ಯವನ್ನು ನಮಗೆ ಕಲಿಸುತ್ತದೆ. ಅದು ಹೇಳುವುದು: “ಹೊಟ್ಟೆಗಿಲ್ಲದ ಡಾಂಭಿಕನಿಗಿಂತಲೂ ಸೇವಕನುಳ್ಳ ಸಾಧಾರಣ ಮನುಷ್ಯನ ಸ್ಥಿತಿಯು ಲೇಸು.” (ಜ್ಞಾನೋಕ್ತಿ 12:9) ಒಂದು ಉಚ್ಚ ಸಾಮಾಜಿಕ ಅಂತಸ್ತನ್ನು ಕಾಪಾಡಿಕೊಳ್ಳುವ ಪ್ರಯತ್ನದಲ್ಲಿ ಜೀವನದ ಆವಶ್ಯಕತೆಗಳಿಗೆ ಬೇಕಾಗಿರುವುದನ್ನು ಖರ್ಚುಮಾಡುವುದಕ್ಕಿಂತಲೂ, ಕೇವಲ ಒಬ್ಬನೇ ಸೇವಕನನ್ನಿಟ್ಟುಕೊಂಡು ಸ್ವಲ್ಪವೇ ಸಂಪತ್ತು ಇರುವ ದೀನ ವ್ಯಕ್ತಿಯಾಗಿರುವುದು ಲೇಸು ಎಂದು ಸೊಲೊಮೋನನು ಹೇಳುತ್ತಿರುವಂತೆ ತೋರುತ್ತದೆ. ನಮ್ಮ ಬಳಿ ಏನಿದೆಯೋ ಅಷ್ಟರಲ್ಲೇ ಜೀವನ ಸಾಗಿಸಲು, ಇದು ನಮಗೆ ಎಷ್ಟು ಪ್ರಬಲವಾದ ಬುದ್ಧಿವಾದವಾಗಿದೆ!

ವ್ಯವಸಾಯದ ಜೀವನವು ಒಳ್ಳೇತನದಲ್ಲಿ ಪಾಠಗಳನ್ನು ಒದಗಿಸುತ್ತದೆ

ವ್ಯವಸಾಯದ ಜೀವನ ರೀತಿಯನ್ನು ದೃಷ್ಟಾಂತವಾಗಿ ಉಪಯೋಗಿಸುತ್ತಾ, ಸೊಲೊಮೋನನು ಒಳ್ಳೇತನದ ವಿಷಯದಲ್ಲಿ ಎರಡು ಪಾಠಗಳನ್ನು ಕಲಿಸುತ್ತಾನೆ. ಅವನು ಹೇಳುವುದು: “ನೀತಿವಂತನು ತನ್ನ ಸಾಕುಪ್ರಾಣಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ, ಆದರೆ ದುಷ್ಟನ ಕರುಣೆಗಳೋ ಕ್ರೂರತನವೇ.” (ಜ್ಞಾನೋಕ್ತಿ 12:​10, NW) ನೀತಿವಂತನು ತನ್ನ ಪ್ರಾಣಿಗಳನ್ನು ದಯೆಯಿಂದ ನೋಡಿಕೊಳ್ಳುತ್ತಾನೆ. ಅವುಗಳ ಆವಶ್ಯಕತೆ ಅವನಿಗೆ ತಿಳಿದಿರುತ್ತದೆ ಮತ್ತು ಅವುಗಳ ಕ್ಷೇಮದ ವಿಷಯದಲ್ಲಿ ಅವನಿಗೆ ಚಿಂತೆಯಿರುತ್ತದೆ. ಪ್ರಾಣಿಗಳ ವಿಷಯದಲ್ಲಿ ತನಗೆ ಚಿಂತೆಯಿದೆ ಎಂದು ಒಬ್ಬ ದುಷ್ಟನು ಹೇಳಿಕೊಳ್ಳಬಹುದಾದರೂ, ಅವುಗಳ ಆವಶ್ಯಕತೆಯ ವಿಷಯದಲ್ಲಿ ಅವನಿಗೆ ನಿಜವಾಗಿಯೂ ಕಾಳಜಿಯಿಲ್ಲ. ಅವನ ಹೇತುಗಳು ಸ್ವಾರ್ಥಭರಿತವಾಗಿವೆ, ಮತ್ತು ಅವನು ಪ್ರಾಣಿಗಳನ್ನು ಉಪಚರಿಸುವ ರೀತಿಯು, ಅವುಗಳಿಂದ ಅವನು ಮಾಡಿಕೊಳ್ಳಬಹುದಾದ ಲಾಭಗಳ ಮೇಲೆ ಆಧಾರಿತವಾಗಿರುತ್ತದೆ. ಅಂಥ ವ್ಯಕ್ತಿಯು ಪ್ರಾಣಿಗಳಿಗೆ ತಕ್ಕ ಆರೈಕೆ ಎಂದು ಯಾವುದನ್ನು ಪರಿಗಣಿಸುತ್ತಾನೋ ಅದು, ವಾಸ್ತವದಲ್ಲಿ ಕ್ರೂರ ಉಪಚಾರವೇ ಆಗಿರಬಹುದು.

ಪ್ರಾಣಿಗಳನ್ನು ನೋಡಿಕೊಳ್ಳುವ ಪ್ರಮುಖ ವಿಧವು, ಸಾಕುಪ್ರಾಣಿಗಳ ಆರೈಕೆಗೂ ಅನ್ವಯವಾಗುತ್ತದೆ. ಕೆಲವು ಪ್ರಾಣಿಗಳನ್ನು ಸಾಕುಪ್ರಾಣಿಗಳಾಗಿ ಮಾಡಿಕೊಂಡು, ನಂತರ ಅವುಗಳನ್ನು ಅಲಕ್ಷಿಸುವ ಮೂಲಕವೋ ಅಥವಾ ಅವುಗಳನ್ನು ದುರುಪಚರಿಸುವ ಮೂಲಕವೋ ಅವುಗಳಿಗೆ ಅನಗತ್ಯವಾದ ಕಷ್ಟಾನುಭವವನ್ನು ನೀಡುವುದು ಎಂಥ ಕ್ರೂರತನ! ಗುರುತರವಾದ ರೋಗದಿಂದ ಅಥವಾ ಗಾಯದಿಂದ ಬಹಳವಾಗಿ ನರಳುತ್ತಿರುವ ಒಂದು ಪ್ರಾಣಿಯ ವಿಷಯದಲ್ಲಿ, ದಯಾಭಾವವು ಅದರ ಜೀವನವನ್ನು ಕೊನೆಗಾಣಿಸುವುದನ್ನು ಸಹ ಅಗತ್ಯಪಡಿಸಬಹುದು.

ವ್ಯವಸಾಯದ ಜೀವನದ ಇನ್ನೊಂದು ಅಂಶವನ್ನು, ಅಂದರೆ ನೆಲವನ್ನು ಹದಗೊಳಿಸುವ ವಿಷಯವನ್ನು ಉಪಯೋಗಿಸುತ್ತಾ ಸೊಲೊಮೋನನು ಹೇಳುವುದು: “ದುಡಿದು ಹೊಲಗೇಯುವವನು ಹೊಟ್ಟೆತುಂಬಾ ಉಣ್ಣುವನು.” ವಾಸ್ತವದಲ್ಲಿ ಅರ್ಥಭರಿತವಾದ ಶ್ರಮದ ದುಡಿಮೆಯು ಪ್ರಯೋಜನಗಳನ್ನು ತರುತ್ತದೆ. ಆದರೆ “ವ್ಯರ್ಥಕಾರ್ಯಾಸಕ್ತನು ಬುದ್ಧಿಹೀನನೇ.” (ಜ್ಞಾನೋಕ್ತಿ 12:11) ಒಳ್ಳೇ ತೀರ್ಮಾನಶಕ್ತಿ ಅಥವಾ ತಿಳಿವಳಿಕೆಯ ಕೊರತೆಯುಳ್ಳವನು ಅಂದರೆ “ಬುದ್ಧಿಹೀನನು,” ವ್ಯರ್ಥವಾದ, ಊಹಾತ್ಮಕವಾದ, ಮತ್ತು ಪ್ರಯೋಜನಕ್ಕೆ ಬಾರದಂಥ ವ್ಯಾಪಾರ ವ್ಯವಹಾರಗಳನ್ನು ಬೆನ್ನಟ್ಟುತ್ತಾನೆ. ಈ ಎರಡು ವಚನಗಳಲ್ಲಿರುವ ಜ್ಞಾನೋಕ್ತಿ 12:10, 11 ಪಾಠಗಳು ಸುಸ್ಪಷ್ಟವಾಗಿವೆ: ದಯಾಭಾವದವರಾಗಿರ್ರಿ ಮತ್ತು ಉದ್ಯೋಗಶೀಲರಾಗಿರ್ರಿ.

ನೀತಿವಂತನು ಸಂಪದ್ಭರಿತನಾಗುತ್ತಾನೆ

ಜ್ಞಾನಿ ಅರಸನು ಹೇಳುವುದು: “ಕೆಡುಕರ ಕೊಳ್ಳೆ ದುಷ್ಟರಿಗೆ ಇಷ್ಟ.” (ಜ್ಞಾನೋಕ್ತಿ 12:12ಎ) ದುಷ್ಟನು ಇದನ್ನು ಹೇಗೆ ಮಾಡುತ್ತಾನೆ? ಕೆಟ್ಟ ಸಾಧನೋಪಾಯಗಳಿಂದ ಸಂಪಾದಿಸಲ್ಪಡುವ ಕೊಳ್ಳೆಯನ್ನು ಅಪೇಕ್ಷಿಸುವ ಮೂಲಕ ಅವನು ಹಾಗೆ ಮಾಡುತ್ತಾನೆ.

ಒಬ್ಬ ಒಳ್ಳೇ ವ್ಯಕ್ತಿಯ ವಿಷಯದಲ್ಲಿ ಏನು ಹೇಳಸಾಧ್ಯವಿದೆ? ಅಂಥ ಒಬ್ಬ ವ್ಯಕ್ತಿಯು ಶಿಸ್ತನ್ನು ಪ್ರೀತಿಸುತ್ತಾನೆ ಮತ್ತು ನಂಬಿಕೆಯಲ್ಲಿ ಬಲವಾಗಿ ಬೇರೂರಿದವನಾಗಿರುತ್ತಾನೆ. ಅವನು ನೀತಿವಂತನೂ, ನ್ಯಾಯವಂತನೂ, ವಿವೇಕಿಯೂ, ದೀನನೂ, ಸಹಾನುಭೂತಿಯುಳ್ಳವನೂ, ಶ್ರದ್ಧಾಳುವೂ ಆಗಿರುತ್ತಾನೆ. ಅಷ್ಟುಮಾತ್ರವಲ್ಲ, “ಶಿಷ್ಟರ ಬುಡ ಫಲದಾಯಕ” ಅಥವಾ “ಸಂಪದ್ಭರಿತ” ಎಂದು ಸೊಲೊಮೋನನು ಹೇಳುತ್ತಾನೆ. (ಜ್ಞಾನೋಕ್ತಿ 12:12ಬಿ; ನ್ಯೂ ಇಂಟರ್‌ನ್ಯಾಷನಲ್‌ ವರ್ಷನ್‌) “ನೀತಿವಂತನ ಬೇರು ಶಾಶ್ವತವಾಗಿ ಉಳಿಯುತ್ತದೆ” ಎಂದು ಆ್ಯನ್‌ ಅಮೆರಿಕನ್‌ ಟ್ರಾನ್ಸ್‌ಲೇಶನ್‌ ಹೇಳುತ್ತದೆ. ಅಂಥ ಒಬ್ಬ ವ್ಯಕ್ತಿಯು ಸ್ಥಿರವಾಗಿ ಬೇರೂರಿದವನೂ ಸುಭದ್ರನೂ ಆಗಿರುತ್ತಾನೆ. ವಾಸ್ತವದಲ್ಲಿ, ‘ಒಳ್ಳೇ ವ್ಯಕ್ತಿಯು ದೇವರ ಸಮ್ಮತಿಯನ್ನು ಪಡೆಯುತ್ತಾನೆ.’ ಆದುದರಿಂದ, ನಾವು “ಯೆಹೋವನಲ್ಲಿ ಭರವಸವಿಟ್ಟು ಒಳ್ಳೆಯದನ್ನು” ಮಾಡೋಣ.​—ಕೀರ್ತನೆ 37:3.

[ಪಾದಟಿಪ್ಪಣಿ]

^ ಪ್ಯಾರ. 18 Taken from the HOLY BIBLE: Kannada EASY-TO-READ VERSION © 1997 by World Bible Translation Center, Inc. and used by permission.

[ಪುಟ 31ರಲ್ಲಿರುವ ಚಿತ್ರಗಳು]

ಒಂದು ಸದೃಢ ಮರದಂತೆ, ನೀತಿವಂತನ ನಂಬಿಕೆಯು ಸ್ಥಿರವಾಗಿ ಬೇರೂರಿರುತ್ತದೆ