ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ರೋಮನ್‌ ಇತಿಹಾಸದಿಂದ ಒಂದು ಪಾಠ

ರೋಮನ್‌ ಇತಿಹಾಸದಿಂದ ಒಂದು ಪಾಠ

ರೋಮನ್‌ ಇತಿಹಾಸದಿಂದ ಒಂದು ಪಾಠ

“ನಾನು ಎಫೆಸದಲ್ಲಿ ಮೃಗಗಳೊಂದಿಗೆ ಯುದ್ಧಮಾಡಿದ್ದು ಕೇವಲ ಮಾನುಷಾಭಿಪ್ರಾಯದಿಂದಾದರೆ.” ಒಂದನೆಯ ಕೊರಿಂಥ 15:32ರಲ್ಲಿ ದಾಖಲೆಯಾಗಿರುವ ಈ ಮಾತುಗಳ ಅರ್ಥವು, ಅಪೊಸ್ತಲ ಪೌಲನಿಗೆ ಒಂದು ರೋಮನ್‌ ಅಖಾಡದಲ್ಲಿ ಹೋರಾಡುವ ಶಿಕ್ಷೆಯನ್ನು ವಿಧಿಸಲಾಗಿತ್ತು ಎಂದು ಕೆಲವರು ನೆನಸುತ್ತಾರೆ. ಅವನು ಹೋರಾಡಿದನೊ ಇಲ್ಲವೊ, ಆದರೆ ಆ ಸಮಯದಲ್ಲಂತೂ ಅಖಾಡಗಳಲ್ಲಿ ಮರಣದ ತನಕ ಹೋರಾಡುವ ಪದ್ಧತಿಯು ಸಾಮಾನ್ಯವಾಗಿತ್ತು. ಆ ಅಖಾಡದ ಕುರಿತು ಮತ್ತು ಅದರಲ್ಲಿ ನಡೆಯುತ್ತಿದ್ದ ಸ್ಪರ್ಧೆಗಳ ಕುರಿತು ಇತಿಹಾಸವು ನಮಗೆ ಏನನ್ನು ತಿಳಿಯಪಡಿಸುತ್ತದೆ?

ಕ್ರೈಸ್ತರಾಗಿರುವ ನಾವು ಯೆಹೋವನ ಆಲೋಚನೆಗಳಿಗನುಸಾರ ನಮ್ಮ ಮನಸ್ಸಾಕ್ಷಿಗಳನ್ನು ರೂಪಿಸಿಕೊಳ್ಳಲು ಬಯಸುತ್ತೇವೆ. ಇದು ಆಧುನಿಕ ಮನೋರಂಜನೆಯ ಸಂಬಂಧದಲ್ಲಿ ನಿರ್ಣಯಗಳನ್ನು ಮಾಡಲು ನಮಗೆ ಸಹಾಯಮಾಡಬಲ್ಲದು. ಉದಾಹರಣೆಗೆ, ಹಿಂಸಾಚಾರದ ವಿಷಯದಲ್ಲಿ ದೇವರ ಆಲೋಚನೆಯು ಪ್ರತಿಬಿಂಬಿತವಾಗಿರುವ ಈ ಮಾತುಗಳನ್ನು ಪರಿಗಣಿಸಿರಿ: “ಬಲಾತ್ಕಾರಿಯನ್ನು ನೋಡಿ ಹೊಟ್ಟೆಕಿಚ್ಚುಪಡದಿರು, ಅವನ ನಡತೆಯನ್ನು ಎಷ್ಟು ಮಾತ್ರಕ್ಕೂ ಅನುಸರಿಸಬೇಡ.” (ಜ್ಞಾನೋಕ್ತಿ 3:31) ತಮ್ಮ ಸುತ್ತಲೂ ಇದ್ದ ಅನೇಕರು ರೋಮನ್‌ ಖಡ್ಗಮಲ್ಲರ ಸ್ಪರ್ಧೆಗಳ ಕುರಿತು ಉದ್ರೇಕಗೊಳ್ಳುತ್ತಿದ್ದ ಆ ಕಾಲದಲ್ಲಿ, ಆದಿ ಕ್ರೈಸ್ತರನ್ನು ಮಾರ್ಗದರ್ಶಿಸಲು ಆ ಸಲಹೆಯು ಲಭ್ಯಗೊಳಿಸಲ್ಪಟ್ಟಿತ್ತು. ಆ ಕ್ರೀಡೆಗಳಲ್ಲಿ ನಡೆಯುತ್ತಿದ್ದ ವಿಷಯಗಳನ್ನು ಪರಿಗಣಿಸುವಾಗ, ಇಂದು ಕ್ರೈಸ್ತರಿಗೆ ಅನ್ವಯಿಸುವ ಸ್ಪಷ್ಟವಾದ ಪಾಠವು ಯಾವುದೆಂಬುದನ್ನು ನೋಡೋಣ.

ರೋಮನ್‌ ಅಖಾಡದಲ್ಲಿ ಇಬ್ಬರು ಶಸ್ತ್ರಧಾರಿ ಖಡ್ಗಮಲ್ಲರು ಎದುರೆದುರಾಗಿ ನಿಂತಿದ್ದಾರೆ. ಖಡ್ಗದ ಪೆಟ್ಟು ಗುರಾಣಿಗೆ ಮೊದಲನೆಯದಾಗಿ ಬಡಿಯುವಾಗ, ಉದ್ರೇಕಿತ ಜನರ ಗುಂಪು ತಮ್ಮ ಮೆಚ್ಚಿನ ಖಡ್ಗಮಲ್ಲನಿಗೆ ಪ್ರೋತ್ಸಾಹದ ಆರ್ಭಟವನ್ನು ಮಾಡುತ್ತದೆ. ಇದೊಂದು ಘೋರ ಹೋರಾಟ. ಬೇಗನೆ, ಅವರಲ್ಲೊಬ್ಬನು ಗಾಯಗೊಂಡು ಹೋರಾಟವನ್ನು ಮುಂದುವರಿಸಲಾಗದೆ ತನ್ನ ಶಸ್ತ್ರಗಳನ್ನು ಎಸೆದು, ಮೊಣಕಾಲೂರಿ, ತಾನು ಸೋತೆನೆಂದು ಒಪ್ಪಿಕೊಂಡು ಕರುಣೆಯನ್ನು ಯಾಚಿಸುತ್ತಾನೆ. ಆಗ ಕೂಗಾಟವು ಪರಮಾವಧಿಗೇರುತ್ತದೆ. ಜನರ ಗುಂಪಿನಲ್ಲಿ ಕೆಲವರು ಕರುಣೆ ತೋರಿಸುವಂತೆ ಕೇಳಿಕೊಳ್ಳುವಾಗ, ಇತರರು ಅವನು ಸಾಯಲೇ ಬೇಕು ಎನ್ನುತ್ತಾರೆ. ಆಗ ಎಲ್ಲರ ದೃಷ್ಟಿಯು ಚಕ್ರವರ್ತಿಯ ಮೇಲೆ ನೆಟ್ಟಿರುತ್ತದೆ. ಅವನು ಜನಸಮೂಹದ ಅಪೇಕ್ಷೆಯನ್ನು ಗಮನಿಸುತ್ತಾ, ಸೋತುಹೋದ ಆ ಯೋಧನನ್ನು ಒಂದೇ ಬಿಡುಗಡೆ ಮಾಡಬಹುದು ಇಲ್ಲವೆ ಹೆಬ್ಬೆಟ್ಟನ್ನು ಕೆಳಮುಖ ಮಾಡಿ ತೋರಿಸಿ ಮರಣಾಜ್ಞೆಯನ್ನು ಕೊಡಬಹುದು.

ರೋಮನ್‌ ಜನತೆಗೆ ಅಖಾಡದ ಪ್ರದರ್ಶನಗಳ ವಿಷಯದಲ್ಲಿ ಅತಿಯಾದ ಉತ್ಸಾಹವಿತ್ತು. ಇಂತಹ ಹೋರಾಟಗಳು ಆರಂಭದಲ್ಲಿ ಪ್ರಮುಖರ ಶವಸಂಸ್ಕಾರಗಳ ಸಮಯದಲ್ಲಿ ನಡೆಯುತ್ತಿದ್ದವೆಂದು ತಿಳಿದು ನಿಮಗೆ ಆಶ್ಚರ್ಯವಾಗಬಹುದು. ಈ ಹೋರಾಟಗಳ ಮೂಲವು, ಈಗ ಯಾವುದು ಮಧ್ಯ ಇಟಲಿಯಾಗಿದೆಯೊ ಆ ಸ್ಥಳದಲ್ಲಿ ಆಗ ಇದ್ದ ಆಸ್ಕನ್‌ ಅಥವಾ ಸ್ಯಾಮ್ನೈಟ್‌ ಜನರ ಮಧ್ಯೆ ನಡೆಯುತ್ತಿದ್ದ ನರಬಲಿಯಾಗಿದೆ ಎಂದು ನಂಬಲಾಗುತ್ತದೆ. ಈ ಬಲಿಗಳು ನಡೆಯುತ್ತಿದ್ದದ್ದು ಮೃತರ ಆತ್ಮಗಳನ್ನು ಶಾಂತಗೊಳಿಸಲಿಕ್ಕಾಗಿಯೇ. ಇಂತಹ ಕದನವನ್ನು ಮೂನುಸ್‌, ಅಥವಾ “ದಾನ” (ಬಹುವಚನ, ಮೂನೀರಾ) ಎಂದು ಕರೆಯಲಾಗುತ್ತಿತ್ತು. ದಾಖಲಾಗಿರುವ ಪ್ರಥಮ ಆಟಗಳು ರೋಮ್‌ನಲ್ಲಿ ಸಾ.ಶ.ಪೂ. 264ರಲ್ಲಿ ನಡೆದವು. ಆಗ ಮೂರು ಜೊತೆ ಖಡ್ಗಮಲ್ಲರು ಹಸುವಿನ ಮಾರುಕಟ್ಟೆಯಲ್ಲಿ ಹೋರಾಡಿದರು. ಮಾರ್ಕಸ್‌ ಇಮಿಲ್ಯಸ್‌ ಲೆಪಡಸ್‌ ಎಂಬವನ ಶವಸಂಸ್ಕಾರದ ಸಮಯದಲ್ಲಿ, 22 ದ್ವಂದ್ವ ಯುದ್ಧಗಳು ನಡೆದವು. ಪೂಬ್ಲಿಯಸ್‌ ಲಸಿನೀಯಸ್‌ನ ಶವಸಂಸ್ಕಾರದ ಸಮಯದಲ್ಲಿ 60 ಜೋಡಿಗಳು ಒಬ್ಬರಿಗೊಬ್ಬರು ಎದುರಾಗಿ ನಿಂತರು. ಸಾ.ಶ.ಪೂ. 65ರಲ್ಲಿ ಜೂಲಿಯಸ್‌ ಸೀಸರ್‌ 320 ಜೋಡಿಗಳನ್ನು ಅಖಾಡಕ್ಕಿಳಿಸಿದನು.

ಇತಿಹಾಸಕಾರ ಕೀತ್‌ ಹಾಪ್ಕಿನ್ಸ್‌ ಹೇಳುವುದು: “ಕುಲೀನ ಜನರ ಶವಸಂಸ್ಕಾರಗಳು ರಾಜಕೀಯ ಉದ್ದೇಶದವುಗಳಾಗಿದ್ದವು. ಮತ್ತು ಶವಸಂಸ್ಕಾರದ ಆಟಗಳು ನಾಗರಿಕ ಮತದಾರರಿಗೆ ಜನಪ್ರಿಯವಾಗಿದ್ದುದರಿಂದ, ಅವು ರಾಜಕೀಯ ಸೂಚ್ಯಾರ್ಥವುಳ್ಳವುಗಳಾಗಿದ್ದವು. ಹೌದು, ಈ ಖಡ್ಗಮಲ್ಲ ಪ್ರದರ್ಶನಗಳ ವೈಭವದಲ್ಲಿನ ಬೆಳವಣಿಗೆಗೆ ಕಾರಣವು, ಹೆಬ್ಬಯಕೆಯ ಕುಲೀನರ ಮಧ್ಯೆ ನಡೆಯುತ್ತಿದ್ದ ರಾಜಕೀಯ ಪೈಪೋಟಿಯೇ ಆಗಿತ್ತು.” ಆಗಸ್ಟಸ್‌ನ ಆಳಿಕೆಯ (ಸಾ.ಶ.ಪೂ. 27ರಿಂದ ಸಾ.ಶ.14) ಸಮಯದೊಳಗೆ ಈ ಮೂನೀರಾ, ಸರಕಾರದ ಧನಿಕ ಅಧಿಕಾರಿಗಳು ತಮ್ಮ ರಾಜಕೀಯ ಜೀವನವೃತ್ತಿಯನ್ನು ವರ್ಧಿಸಲು ಜನಸ್ತೋಮಗಳ ಮನೋರಂಜನೆಗಾಗಿ ಕೊಟ್ಟ ವಿಪುಲವಾದ ಕೊಡುಗೆಯಾಗಿ ಪರಿಣಮಿಸಿತ್ತು.

ಭಾಗಿಗಳು ಮತ್ತು ತರಬೇತು

‘ಈ ಖಡ್ಗಮಲ್ಲರು ಯಾರಾಗಿದ್ದರು?’ ಎಂದು ನೀವು ಕೇಳಬಹುದು. ಅವರು ಗುಲಾಮರು, ಮರಣದಂಡನೆ ವಿಧಿಸಲ್ಪಟ್ಟಿದ್ದ ಪಾತಕಿಗಳು, ಯುದ್ಧ ಕೈದಿಗಳು ಅಥವಾ ಉದ್ರೇಕದಿಂದ ಇಲ್ಲವೆ ಖ್ಯಾತಿ ಮತ್ತು ಐಶ್ವರ್ಯದ ನಿರೀಕ್ಷೆಯಿಂದ ಆಕರ್ಷಿಸಲ್ಪಟ್ಟಿದ್ದ ಸಾಮಾನ್ಯ ಜನರಾಗಿದ್ದಿರಬಹುದು. ಇವರೆಲ್ಲರಿಗೂ ಸೆರೆಮನೆಸದೃಶ ಶಾಲೆಗಳಲ್ಲಿ ತರಬೇತನ್ನು ಕೊಡಲಾಗುತ್ತಿತ್ತು. ಜೋಕೀ ಎ ಸ್ಪೆಕ್ಟಾಕಾಲೀ (ಆಟಗಳು ಮತ್ತು ಸಾರ್ವಜನಿಕ ಪ್ರದರ್ಶನಗಳು) ಎಂಬ ಪುಸ್ತಕವು, ತರಬೇತಿ ಪಡೆಯುತ್ತಿದ್ದ ಈ ಖಡ್ಗಮಲ್ಲರನ್ನು, “ಕಾವಲುಗಾರರು ಸದಾ ಎಚ್ಚರಿಕೆಯಿಂದ ಕಾಯುತ್ತಿದ್ದರು ಮತ್ತು ಅವರು ಕಟ್ಟುನಿಟ್ಟಾದ ಶಿಸ್ತಿಗೂ, ವಿಪರೀತ ಕಠಿನವಾದ ನಿಯಮಗಳಿಗೂ ಮತ್ತು ವಿಶೇಷವಾಗಿ ನಿರ್ದಯೆಯ ಶಿಕ್ಷೆಗೂ ಒಳಗಾಗುತ್ತಿದ್ದರು. . . . ಈ ರೀತಿಯ ಉಪಚಾರವು ಅನೇಕವೇಳೆ ಆತ್ಮಹತ್ಯೆಗೂ, ದಂಗೆ ಮತ್ತು ಬಂಡಾಯಗಳಿಗೂ ನಡೆಸಿತು” ಎಂದು ಹೇಳುತ್ತದೆ. ರೋಮ್‌ನ ಅತಿ ದೊಡ್ಡ ಖಡ್ಗಮಲ್ಲರ ಶಾಲೆಯಲ್ಲಿ ಕಡಮೆಪಕ್ಷ ಒಂದು ಸಾವಿರ ನಿವಾಸಿಗಳಿಗೆ ಬೇಕಾಗುವಷ್ಟು ಚಿಕ್ಕ ಕೋಣೆಗಳಿದ್ದವು. ಪ್ರತಿಯೊಬ್ಬನಿಗೆ ಅವನವನ ವಿಶಿಷ್ಟ ಕವಾಯಿತು ಇತ್ತು. ಕೆಲವರು ಕವಚ, ಗುರಾಣಿ ಮತ್ತು ಖಡ್ಗವುಳ್ಳವರಾಗಿ ಹೋರಾಡಿದರು, ಇತರರು ಜಾಲಬಂಧ ಮತ್ತು ತ್ರಿಶೂಲಗಳುಳ್ಳವರಾಗಿ ಹೋರಾಡಿದರು. ‘ಬೇಟೆ’ ಎಂಬ ಇನ್ನೊಂದು ಜನಪ್ರಿಯ ಪ್ರದರ್ಶನದಲ್ಲಿ ಇತರರನ್ನು ಕಾಡುಮೃಗಗಳೊಂದಿಗೆ ಹೋರಾಡುವಂತೆ ತರಬೇತುಗೊಳಿಸಲಾಗುತ್ತಿತ್ತು. ಪೌಲನು ಇಂತಹದೇ ಪ್ರದರ್ಶನವನ್ನು ಸೂಚಿಸುತ್ತಿದ್ದಿರಬಹುದೊ?

ಪ್ರದರ್ಶನವನ್ನು ಏರ್ಪಡಿಸುವವರು, 17 ಅಥವಾ 18 ವರ್ಷ ವಯಸ್ಸಿನವರನ್ನು ಈ ತರಬೇತಿಗೆ ಸೇರಿಸಿಕೊಳ್ಳಲಿಕ್ಕಾಗಿ ವಿನೋದ ವ್ಯವಸ್ಥಾಪಕರ ಸಹಾಯವನ್ನು ಪಡೆದುಕೊಳ್ಳುತ್ತಿದ್ದರು. ಮನುಷ್ಯರ ಮಾರಾಟವು ಒಂದು ದೊಡ್ಡ ವ್ಯಾಪಾರವಾಗಿತ್ತು. ತನ್ನ ಸೈನ್ಯದ ವಿಜಯವನ್ನು ಆಚರಿಸಲು ಟ್ರೇಜನ್‌ ಚಕ್ರವರ್ತಿ ಏರ್ಪಡಿಸಿದ ಒಂದು ಪ್ರಮುಖ ಪ್ರದರ್ಶನದಲ್ಲಿ 10,000 ಖಡ್ಗಮಲ್ಲರೂ 11,000 ಮೃಗಗಳೂ ಇದ್ದವು.

ಅಖಾಡದಲ್ಲಿ ಒಂದು ದಿನ

ಅಖಾಡದಲ್ಲಿ ಬೆಳಗ್ಗಿನ ಪ್ರದರ್ಶನವನ್ನು ‘ಬೇಟೆ’ಗಳಿಗೆ ಮೀಸಲಾಗಿಡಲಾಗುತ್ತಿತ್ತು. ಎಲ್ಲ ಜಾತಿಯ ಕಾಡುಮೃಗಗಳನ್ನು ರಂಗಸ್ಥಳದೊಳಕ್ಕೆ ಹೋಗುವಂತೆ ಒತ್ತಾಯಿಸಸಾಧ್ಯವಿತ್ತು. ಒಂದು ಗೂಳಿ ಮತ್ತು ಕರಡಿಯ ಹೋರಾಟವನ್ನು ನೋಡಿ ಜನರು ವಿಶೇಷವಾಗಿ ಆನಂದಿಸುತ್ತಿದ್ದರು. ಅನೇಕವೇಳೆ, ಇವೆರಡನ್ನು ಅವುಗಳಲ್ಲಿ ಒಂದು ಕೊಲ್ಲಲ್ಪಡುವ ತನಕ ಜೋಡಿಸಿ ಕಟ್ಟಲಾಗುತ್ತಿದ್ದು, ಆ ಬಳಿಕ ಅದರಲ್ಲಿ ಬದುಕಿ ಉಳಿದಿದ್ದ ಮೃಗವನ್ನು ಒಬ್ಬ ಬೇಟೆಗಾರನು ಕೊಲ್ಲುತ್ತಿದ್ದನು. ಇತರ ಜನಪ್ರಿಯ ಸ್ಪರ್ಧೆಗಳಲ್ಲಿ ಸಿಂಹಗಳನ್ನು ಹುಲಿಗಳಿಗೆ ಎದುರಾಗಿಯೂ ಆನೆಗಳನ್ನು ಕರಡಿಗಳಿಗೆ ಎದುರಾಗಿಯೂ ಬಿಡಲಾಗುತ್ತಿತ್ತು. ಸಾಮ್ರಾಜ್ಯದ ಪ್ರತಿಯೊಂದು ಮೂಲೆಯಿಂದ ತರಲ್ಪಟ್ಟಿದ್ದ ವಿದೇಶೀ ಮೃಗಗಳನ್ನು ಕೊಲ್ಲುವುದರಲ್ಲಿ ಬೇಟೆಗಾರರು ತಮ್ಮ ಕೌಶಲವನ್ನು ಪ್ರದರ್ಶಿಸುತ್ತಿದ್ದರು. ವೆಚ್ಚವು ಎಷ್ಟೇ ತಗಲುತ್ತಿರಲಿ, ಚಿರತೆ, ಖಡ್ಗಮೃಗ, ನೀರ್ಗುದುರೆ, ಜಿರಾಫೆ, ಕತ್ತೆ ಕಿರುಬ, ಒಂಟೆ, ತೋಳ ಮತ್ತು ಜಿಂಕೆಗಳನ್ನು ತರಲಾಗುತ್ತಿತ್ತು.

ದೃಶ್ಯ ಹಿನ್ನೆಲೆಗಳು ಇಂತಹ ಬೇಟೆಗಳನ್ನು ಅವಿಸ್ಮರಣೀಯವಾಗಿ ಮಾಡುತ್ತಿದ್ದವು. ಕಾಡುಗಳನ್ನು ಚಿತ್ರಿಸಲು ಬಂಡೆ, ಕೆರೆ ಮತ್ತು ಮರಗಳಿರುತ್ತಿದ್ದವು. ಕೆಲವು ಅಖಾಡಗಳಲ್ಲಿ ಮೃಗಗಳು ಮಾಯೆಯಿಂದಲೊ ಎಂಬಂತೆ ನೆಲದಡಿಯ ಮೇಲೆತ್ತಿಗೆಯ ಯಂತ್ರದ ಸಹಾಯದಿಂದ ಇಲ್ಲವೆ ನೆಲಬಾಗಿಲಿನಿಂದ ಹೊರಬರುತ್ತಿದ್ದವು. ಅನಿರೀಕ್ಷಿತ ಮೃಗೀಯ ಸ್ವಭಾವಗಳು ಆಸಕ್ತಿಯನ್ನು ಹೆಚ್ಚಿಸುತ್ತಿದ್ದರೂ, ಈ ಬೇಟೆಗಳನ್ನು ವಿಶೇಷವಾಗಿ ಆಕರ್ಷಕವಾಗಿ ಮಾಡುತ್ತಿದ್ದದ್ದು ಅವುಗಳಲ್ಲಿದ್ದ ಕ್ರೂರತೆಯೇ.

ಇದಾದ ಬಳಿಕ ವಧೆಗಳು ನಡೆಯುತ್ತಿದ್ದವು. ಇವುಗಳಲ್ಲಿ ಸ್ವಾಭಾವಿಕತೆಯನ್ನು ತೋರಿಸಲು ಪ್ರಯತ್ನಗಳು ಮಾಡಲ್ಪಡುತ್ತಿದ್ದವು. ಪೌರಾಣಿಕ ನಾಟಕಗಳನ್ನು ಅಭಿನಯಿಸಲಾಗುತ್ತಿತ್ತು. ಮತ್ತು ಇದರಲ್ಲಿ ನಟರು ನಿಜವಾಗಿಯೂ ಸಾಯುತ್ತಿದ್ದರು.

ಮಧ್ಯಾಹ್ನಗಳಲ್ಲಿ, ಖಡ್ಗಮಲ್ಲರ ವಿಭಿನ್ನ ವರ್ಗಗಳು, ವಿಶಿಷ್ಟ ರೀತಿಯ ಶಸ್ತ್ರಗಳನ್ನು ಧರಿಸಿ, ಬೇರೆ ಬೇರೆ ವಿಧಾನಗಳಲ್ಲಿ ಕಾದಾಡಿದವು. ಸತ್ತವರ ಹೆಣಗಳನ್ನು ಎಳೆದುಕೊಂಡು ಹೋಗುತ್ತಿದ್ದ ಕೆಲವರು ಅಧೋಲೋಕದ ದೇವನಂತೆ ಉಡುಪು ಧರಿಸುತ್ತಿದ್ದರು.

ಪ್ರೇಕ್ಷಕರ ಮೇಲೆ ಪರಿಣಾಮ

ಕಾದಾಟವನ್ನು ನೋಡಲು ಪ್ರೇಕ್ಷಕರಿಗಿದ್ದ ತಣಿಸಲಾಗದ ಅತ್ಯಾಶೆಯಿಂದಾಗಿ, ಹೋರಾಡಲು ಮನಸ್ಸಿರದ ಸ್ಪರ್ಧಿಗಳನ್ನು ಹೋರಾಡುವಂತೆ ಮಾಡಲಿಕ್ಕಾಗಿ ಅವರಿಗೆ ಚಾವಟಿಯಿಂದ ಮತ್ತು ಬರೆ ಹಾಕುವ ಲೋಹಗಳಿಂದ ಹೊಡೆಯಲಾಗುತ್ತಿತ್ತು. ಜನಸ್ತೋಮವು, “ಅವನೇಕೆ ಹೇಡಿಯಂತೆ ಖಡ್ಗವನ್ನೆದುರಿಸುತ್ತಾನೆ? ಅವನು ಅಷ್ಟು ದುರ್ಬಲವಾಗಿ ಹೊಡೆಯುವುದೇಕೆ? ಅವನು [ಸ್ವಂತ ಇಷ್ಟದಿಂದ] ಏಕೆ ಸಾಯುವುದಿಲ್ಲ? ಅವನು ಸರಿಯಾಗಿ ಹೋರಾಡುವಂತೆ ಅವನಿಗೆ ಚಾವಟಿಯಿಂದ ಹೊಡೆಯಿರಿ! ಅವರು ನಗ್ನ ಎದೆಯುಳ್ಳವರಾಗಿ ಖಡ್ಗದ ಪೆಟ್ಟಿಗೆ ತೆರೆದಿದ್ದು, ಏಟಿಗೆ ಪ್ರತಿಯಾಗಿ ಏಟು ಸಿಗಲಿ!” ಪ್ರದರ್ಶನ ವಿರಾಮದಲ್ಲಿ ಇಂತಹ ಒಂದು ಪ್ರಕಟನೆಯು ಮಾಡಲ್ಪಟ್ಟಿತ್ತೆಂದು ರೋಮನ್‌ ರಾಜ್ಯನೀತಿಜ್ಞ ಸೆನಿಕ ಬರೆಯುತ್ತಾನೆ: “ಪ್ರದರ್ಶನ ವಿರಾಮದಲ್ಲಿಯೂ ತುಸು ಮನೋರಂಜನೆಯಿರುವ ಸಲುವಾಗಿ ಕೆಲವರ ಕುತ್ತಿಗೆಗಳನ್ನು ಕೊಯ್ಯಲಾಗುವುದು!”

ಇದರ ಫಲವಾಗಿ, ತಾನು ಮನೆಗೆ ಹಿಂದಿರುಗಿದಾಗ, “ಹೆಚ್ಚು ನಿರ್ದಯನೂ ಅಮಾನುಷನೂ ಆದೆನು” ಎಂದು ಸೆನಿಕ ಒಪ್ಪಿಕೊಂಡದ್ದರಲ್ಲಿ ಆಶ್ಚರ್ಯವೇನಿಲ್ಲ. ಈ ಪ್ರೇಕ್ಷಕನ ಬಿಚ್ಚುಮನದ ಹೇಳಿಕೆಯು ನಮ್ಮ ಗಂಭೀರ ಯೋಚನೆಗೆ ಅರ್ಹವಾಗಿದೆ. ಇಂದಿನ ಕೆಲವು ಕ್ರೀಡೆಗಳಲ್ಲಿಯೂ ಪ್ರೇಕ್ಷಕರು ಇದೇ ರೀತಿ ಪ್ರಭಾವಿತರಾಗಿ ‘ಹೆಚ್ಚು ನಿರ್ದಯರೂ ಅಮಾನುಷರೂ’ ಆಗಬಲ್ಲರೊ?

ಅವರಲ್ಲಿ ಕೆಲವರು ತಾವು ಮನೆಗೆ ಹಿಂದೆ ಬಂದು ಮುಟ್ಟಿದ್ದೇ ತಮ್ಮ ಭಾಗ್ಯ ಎಂದೆಣಿಸುತ್ತಿದ್ದಿರಬಹುದು. ಒಬ್ಬ ಪ್ರೇಕ್ಷಕನು ಸಮ್ರಾಟ ಡೊಮಿಶನ್‌ನ ಬಗ್ಗೆ ಯಾವುದೊ ಚತುರೋಕ್ತಿಯನ್ನು ಆಡಿದ ಕಾರಣ, ಅವನು ತನ್ನ ಆಸನದಿಂದ ಎಳೆದೊಯ್ಯಲ್ಪಟ್ಟು ನಾಯಿಗಳಿಗೆ ಬಿಸಾಡಲ್ಪಡುವಂತೆ ಸಮ್ರಾಟನು ಮಾಡಿದನು. ಒಮ್ಮೆ, ವಧಿಸಲು ಪಾತಕಿಗಳ ಕೊರತೆಯಿದ್ದ ಕಾರಣ, ಕೈಸರ ಕಲಿಗ್ಯಲನು ಜನಸಮೂಹದ ಒಂದು ವಿಭಾಗವನ್ನೇ ಹಿಡಿದು ಮೃಗಗಳಿಗೆ ಬಿಸಾಡುವಂತೆ ಆಜ್ಞಾಪಿಸಿದನು. ಮತ್ತು ರಂಗಸ್ಥಳದ ಯಂತ್ರ ವ್ಯವಸ್ಥೆಯು ಅವನ ಮನಸ್ಸಿಗೆ ಹಿಡಿಸುವಂತೆ ನಡೆಯದಿದ್ದ ಕಾರಣ, ಅದಕ್ಕಾಗಿ ಜವಾಬ್ದಾರರಾಗಿದ್ದ ಯಂತ್ರಕರ್ಮಿಗಳೇ ಆ ಅಖಾಡದಲ್ಲಿ ಹೋರಾಡುವಂತೆ ಕ್ಲಾಡಿಯಸನು ಅಪ್ಪಣೆ ಕೊಟ್ಟನು.

ಪ್ರೇಕ್ಷಕರ ಉನ್ಮತ್ತಾಭಿಮಾನವು ವಿಪತ್ತುಗಳಿಗೆ ಮತ್ತು ದೊಂಬಿಗಳಿಗೆ ಸಹ ನಡೆಸಿತು. ರೋಮ್‌ನ ತುಸು ಉತ್ತರ ಭಾಗದಲ್ಲಿದ್ದ ಅರ್ಧಚಂದ್ರಾಕಾರದ ಒಂದು ಅಖಾಡವು ಕುಸಿದು ಬಿದ್ದಾಗ, ಸಾವಿರಾರು ಜನರು ಸತ್ತರೆಂದು ವರದಿಯಾಗಿತ್ತು. ಪಾಂಪೇಯಲ್ಲಿ ಸಾ.ಶ. 59ರಲ್ಲಿ ಒಂದು ಪ್ರದರ್ಶನದ ಸಮಯದಲ್ಲಿ ಒಂದು ದೊಂಬಿ ಎದ್ದಿತು. ಆ ಪಟ್ಟಣದ ಜನರು ಮತ್ತು ಹತ್ತಿರದ ಇನ್ನೊಂದು ಪಟ್ಟಣದ ಎದುರಾಳಿಗಳ ನಡುವೆ ನಡೆದ ತಿಕ್ಕಾಟವು, ಅವಮಾನದ ಮಾತುಗಳ ವಿನಿಮಯದಿಂದ ಆರಂಭಿಸಿ, ಕಲ್ಲುಗಳ ಸುರಿಮಳೆ ಮತ್ತು ಖಡ್ಗಗಳ ಉಪಯೋಗದೊಂದಿಗೆ ಅಂತ್ಯಗೊಂಡಿತೆಂದು ಟ್ಯಾಸಿಟಸ್‌ ವರದಿ ಮಾಡುತ್ತಾನೆ. ಹಲವರನ್ನು ಊನಗೊಳಿಸಲಾಯಿತು ಅಥವಾ ಅವರಿಗೆ ಹಾನಿಯಾಯಿತು ಮತ್ತು ಅನೇಕರು ಸತ್ತರು.

ಸ್ಪಷ್ಟವಾದ ಪಾಠ

ರೋಮ್‌ನ ಕಾಲಸೀಯಮ್‌ನಲ್ಲಿ ಇತ್ತೀಚೆಗೆ ನಡೆದ ಒಂದು ವಸ್ತುಪ್ರದರ್ಶನವು (ಸಾಂಗ್‌ ಈ ಅರೇನಾ, “ರಕ್ತ ಮತ್ತು ಉಸುಬು”), ಆಗಿನ ಕಾಲದ ಮೂನೀರಾ ಪ್ರದರ್ಶನದ ಆಧುನಿಕ ಹೋಲಿಕೆಗಳನ್ನು ನೆನಪಿಗೆ ತಂದಿತು. ಅದು ಗಮನಾರ್ಹವಾಗಿ ಗೂಳಿಕಾಳಗ, ಬಾಕ್ಸಿಂಗ್‌, ಕಾರ್‌ ಮತ್ತು ಮೋಟರ್‌ಸೈಕಲ್‌ಗಳ ರೇಸಿನಲ್ಲಿ ನಡೆಯುವ ಭಯಂಕರ ಢಿಕ್ಕಿ, ಆಟಗಳಲ್ಲಿ ಸ್ಪರ್ಧಿಗಳ ಅನಿಯಂತ್ರಿತ ಹೊಡೆದಾಟ, ಮತ್ತು ಪ್ರೇಕ್ಷಕರ ದೊಂಬಿಗಳ ವಿಡಿಯೊ ಚಿತ್ರಗಳನ್ನು ತೋರಿಸಿತು. ಈ ಚಿತ್ರಪ್ರದರ್ಶನದ ಅಂತ್ಯದಲ್ಲಿ ವಿಮಾನದಿಂದ ಕಾಲಸೀಯಮ್‌ನ ನೋಟವು ತೋರಿಸಲ್ಪಟ್ಟಿತು. ಭೇಟಿಕಾರರು ಯಾವ ತೀರ್ಮಾನಕ್ಕೆ ಬರಬೇಕಿತ್ತೆಂದು ನೀವು ನೆನಸುತ್ತೀರಿ? ಎಷ್ಟು ಜನರು ಇದರಿಂದ ಪಾಠವನ್ನು ಕಲಿಯುವರು?

ಕೆಲವು ದೇಶಗಳಲ್ಲಿ ಇಂದು ನಾಯಿಕಾಳಗ, ಹುಂಜಕಾಳಗ, ಗೂಳಿಕಾಳಗ ಮತ್ತು ಹಿಂಸಾತ್ಮಕ ಕ್ರೀಡೆಗಳು ಸಾಮಾನ್ಯವಾಗಿವೆ. ಮೋಟರ್‌ ಸ್ಪರ್ಧೆಗಳಲ್ಲಿ ಭಾರಿ ಜನಸಮೂಹಗಳನ್ನು ಉದ್ರೇಕಿಸಲು ಜೀವಗಳನ್ನು ಅಪಾಯಕ್ಕೊಡ್ಡಲಾಗುತ್ತದೆ. ಮತ್ತು ಪ್ರತಿದಿನದ ಟೆಲಿವಿಷನ್‌ ಪ್ರದರ್ಶನಗಳ ಕುರಿತು ಯೋಚಿಸಿರಿ. ಒಂದು ಪಾಶ್ಚಾತ್ಯ ದೇಶದಲ್ಲಿ ನಡೆಸಲ್ಪಟ್ಟ ಅಧ್ಯಯನಗಳು ತೋರಿಸಿದ್ದೇನೆಂದರೆ, ಸರಾಸರಿಯಾಗಿ ಟಿವಿ ನೋಡುವ ಒಂದು ಮಗು ಹತ್ತು ವರ್ಷದವನಾಗುವಷ್ಟರಲ್ಲಿ, 10,000 ಕೊಲೆಗಳನ್ನೂ 1,00,000 ಆಕ್ರಮಣಕಾರಿ ಕೃತ್ಯಗಳನ್ನು ನೋಡಿರುವುದು.

ಆ ಪ್ರದರ್ಶನಗಳಲ್ಲಿ ದೊರೆಯುತ್ತಿದ್ದ ಸುಖಾನುಭವವು, “ಸತ್ಯಧರ್ಮಕ್ಕೆ ಮತ್ತು ಸತ್ಯ ದೇವರಿಗೆ ತೋರಿಸುವ ನಿಜ ವಿಧೇಯತೆಗೆ ಹೊಂದಿಕೆಯಲ್ಲಿರಲಿಲ್ಲ,” ಎಂದು ಮೂರನೆಯ ಶತಮಾನದ ಲೇಖಕ ಟೆರ್ಟಲಿಯನ್‌ ಬರೆದನು. ಅವುಗಳಿಗೆ ಹಾಜರಾಗುವವರನ್ನು ಅಲ್ಲಿ ಕೊಲ್ಲುವವರ ಸಹಾಪರಾಧಿಗಳು ಎಂದು ಅವನು ಎಣಿಸಿದನು. ಹಾಗಾದರೆ ಇಂದಿನ ಕುರಿತಾಗಿ ಏನು? ಒಬ್ಬನು ಹೀಗೆ ಕೇಳಿಕೊಳ್ಳಬಹುದು: ‘ಟೆಲಿವಿಷನ್‌ನಲ್ಲಿಯೊ ಇಂಟರ್‌ನೆಟ್‌ನಲ್ಲಿಯೊ ತೋರಿಸಲ್ಪಡುವ ರಕ್ತ, ಮರಣ, ಮತ್ತು ಹಿಂಸಾಚಾರಗಳಿಂದ ನನಗೆ ಮನೋರಂಜನೆಯಾಗುತ್ತದೊ?’ ಕೀರ್ತನೆ 11:5ರಲ್ಲಿ ಹೇಳಲ್ಪಟ್ಟಿರುವ ವಿಷಯವನ್ನು ನೆನಪಿನಲ್ಲಿಡುವುದು ಯೋಗ್ಯ: “ಯೆಹೋವನು ನೀತಿವಂತರನ್ನೂ ಅನೀತಿವಂತರನ್ನೂ ಪರೀಕ್ಷಿಸುತ್ತಾನೆ; ಬಲಾತ್ಕಾರಿಗಳನ್ನು ದ್ವೇಷಿಸುತ್ತಾನೆ.”

[ಪುಟ 28ರಲ್ಲಿರುವ ಚೌಕ]

“ಮೃತರನ್ನು ಶಾಂತಗೊಳಿಸಲು” ಕಾದಾಟಗಳು

ಖಡ್ಗಮಲ್ಲರ ಹೋರಾಟಗಳ ಮೂಲದ ವಿಷಯದಲ್ಲಿ, ಮೂರನೆಯ ಶತಮಾನದ ಲೇಖಕ ಟೆರ್ಟಲಿಯನನು ಹೇಳುವುದು: “ಈ ರೀತಿಯ ಪ್ರದರ್ಶನದ ಮೂಲಕ, ಈ ಪ್ರದರ್ಶನವನ್ನು ಕ್ರೌರ್ಯದ ಹೆಚ್ಚು ನಾಗರಿಕ ರೂಪದೊಂದಿಗೆ ಮಿತಗೊಳಿಸುವ ಮೂಲಕ, ಪುರಾತನ ಕಾಲದ ಜನರು ತಾವು ಸತ್ತವರಿಗೆ ಸೇವೆ ಸಲ್ಲಿಸಿದೆವೆಂದು ನೆನಸಿದರು. ಪುರಾತನಕಾಲದಲ್ಲಿ, ಸತ್ತವರ ಆತ್ಮಗಳು ಮಾನವ ರಕ್ತದ ಮೂಲಕ ತೃಪ್ತಿಗೊಳ್ಳುತ್ತವೆಂಬ ನಂಬಿಕೆಯಿಂದ, ಜನರು ತಾವು ಕೊಂಡುಕೊಂಡಿದ್ದ ಕಡಮೆ ಗುಣಮಟ್ಟದ ಬಂದಿಗಳನ್ನು ಇಲ್ಲವೆ ಗುಲಾಮರನ್ನು ಶವಸಂಸ್ಕಾರಗಳಲ್ಲಿ ಬಲಿಕೊಡುತ್ತಿದ್ದರು. ತರುವಾಯ, ತಮ್ಮ ಈ ಶ್ರದ್ಧಾರಾಹಿತ್ಯವನ್ನು ಮರೆಮಾಡಲು ಈ ಪದ್ಧತಿಯನ್ನು ಸುಖದಾಯಕವನ್ನಾಗಿ ಮಾಡುವುದು ಅಪೇಕ್ಷಣೀಯವೆಂದು ಅವರಿಗೆ ತೋರಿತು. ಹೀಗೆ ಕೊಂಡುಕೊಳ್ಳಲ್ಪಟ್ಟಿದ್ದ ಆ ವ್ಯಕ್ತಿಗಳು, ಆಗ ಲಭ್ಯವಿದ್ದ ಶಸ್ತ್ರಗಳಲ್ಲಿ ಅವರ ಕೈಲಾಗುವಷ್ಟು ಉತ್ತಮ ತರಬೇತಿಯನ್ನು​—ತಾವು ಕೊಲ್ಲಲ್ಪಡುವಂತೆ ಕಲಿಯುವುದೇ ಅವರ ತರಬೇತಿಯಾಗಿತ್ತು!​—ಪಡೆದ ನಂತರ, ಅವರನ್ನು ನಿಯಮಿತ ಶವಸಂಸ್ಕಾರದ ದಿನದಂದು ಗೋರಿಗಳ ಬಳಿಯಲ್ಲಿ ಕೊಲ್ಲಿಸಲಾಗುತ್ತಿತ್ತು. ಹೀಗೆ ಆ ಜನರು ಮರಣಕ್ಕೆ ಕೊಲೆಯ ಮೂಲಕ ದುಃಖೋಪಶಮನವನ್ನು ಪಡೆದರು. ಇದು ಮೂನುಸ್‌ ಪದ್ಧತಿಯ ಮೂಲವಾಗಿತ್ತು. ಆದರೆ ಸಮಯಾನಂತರ ಆ ಪ್ರದರ್ಶನಗಳ ಸಾಂಸ್ಕೃತಿಕ ಪರಿಷ್ಕರಿಸುವಿಕೆಯೂ ಕ್ರೌರ್ಯವೂ ಒಂದೇ ಹಂತವನ್ನು ತಲಪಿತು; ಏಕೆಂದರೆ, ಕ್ರೂರ ಮೃಗಗಳಿಗೂ ಮನುಷ್ಯರ ದೇಹಗಳನ್ನು ಚಿಂದಿಚಿಂದಿಯಾಗಿ ಮಾಡುವ ಸಂದರ್ಭವಿಲ್ಲದಿದ್ದರೆ, ಆ ರಜಾದಿನದ ಸುಖಾನುಭವವು ಪೂರ್ಣವಾಗುತ್ತಿರಲ್ಲಿಲ್ಲ. ಮೃತರನ್ನು ಶಾಂತಗೊಳಿಸಲು ಏನನ್ನು ಅರ್ಪಿಸಲಾಯಿತೊ ಅದು ಶವಸಂಸ್ಕಾರದ ಒಂದು ವಿಧಿಯಾಗಿ ಎಣಿಸಲ್ಪಡುತ್ತಿತ್ತು.”

[ಪುಟ 27ರಲ್ಲಿರುವ ಚಿತ್ರ]

ಪುರಾತನಕಾಲದ ಖಡ್ಗಮಲ್ಲರ ಶಿರಸ್ತ್ರಾಣ ಮತ್ತು ಕಣಕಾಲಿನ ರಕ್ಷಕ

[ಪುಟ 29ರಲ್ಲಿರುವ ಚಿತ್ರಗಳು]

ಪುರಾತನ ಕಾಲದ ಕ್ರೈಸ್ತರಿಗೆ ಹಿಂಸಾತ್ಮಕ ಮನೋರಂಜನೆ ಸ್ವೀಕಾರಯೋಗ್ಯವಾಗಿರಲಿಲ್ಲ. ನಿಮಗೂ ಹಾಗನಿಸುತ್ತದೊ?

[ಕೃಪೆ]

ಮುಷ್ಟಿಕಾಳಗ: Dave Kingdon/Index Stock Photography; ಕಾರು ಢಿಕ್ಕಿ: AP Photo/Martin Seppala

[ಪುಟ 26ರಲ್ಲಿರುವ ಚಿತ್ರ ಕೃಪೆ]

Phoenix Art Museum, Arizona/Bridgeman Art Library