ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವರ್ಗಭೇದದ ಸಮಸ್ಯೆಗಳು

ವರ್ಗಭೇದದ ಸಮಸ್ಯೆಗಳು

ವರ್ಗಭೇದದ ಸಮಸ್ಯೆಗಳು

“ಸಮಾನತೆಯು ಒಂದು ಮಾನವ ಹಕ್ಕಾಗಿರಬಹುದು, ಆದರೆ ಭೂಮಿಯ ಮೇಲಿನ ಯಾವುದೇ ಶಕ್ತಿಯು ಅದನ್ನು ಕೈಗೂಡಿಸಲಾರದು.”

ಹಾಗೆಂದು, 19ನೆಯ ಶತಮಾನದ ಫ್ರೆಂಚ್‌ ಕಾದಂಬರಿಕಾರರಾಗಿದ್ದ ಒನಾರೆ ಡ ಬೆಲ್ಜೆಕ್‌ ಹೇಳಿದರು. ಅವರ ಈ ಮಾತುಗಳೊಂದಿಗೆ ನೀವು ಸಮ್ಮತಿಸುತ್ತೀರೊ? ವರ್ಗಭೇದಗಳನ್ನು ಮಾಡುವುದು ತಪ್ಪೆಂಬುದು ಅನೇಕರ ಸಹಜ ಅನಿಸಿಕೆಯಾಗಿದೆ. ಆದರೆ ಈ 21ನೆಯ ಶತಮಾನದಲ್ಲೂ, ಮಾನವ ಸಮಾಜವು ಅಸಂಖ್ಯಾತ ಸಾಮಾಜಿಕ ವರ್ಗಗಳಾಗಿ ವಿಭಜಿಸಲ್ಪಟ್ಟಿದೆ.

ಇಸವಿ 1923ರಿಂದ 1929ರ ವರೆಗೆ, ಅಮೆರಿಕದ ರಾಷ್ಟ್ರಾಧ್ಯಕ್ಷರಾಗಿದ್ದ ಕ್ಯಾಲ್ವಿನ್‌ ಕೂಲಿಡ್ಜ್‌, ಸಾಮಾಜಿಕ ವರ್ಗಭೇದಗಳ ಸಮಸ್ಯೆಯ ಬಗ್ಗೆ ಚಿಂತಿತರಾಗಿದ್ದರು ಮತ್ತು “ಎಲ್ಲ ಉಚ್ಚ ವರ್ಗಗಳ ಸಂಪೂರ್ಣ ನಿರ್ಮೂಲನದ” ಕುರಿತಾಗಿ ಮಾತಾಡಿದರು. ಆದರೆ ಕೂಲಿಡ್ಜ್‌ರ ಅಧ್ಯಕ್ಷ ಅವಧಿಯು ಮುಗಿದು ಸುಮಾರು 40 ವರ್ಷಗಳು ಕಳೆದ ನಂತರ, ಜಾತೀಯ ಸಂಬಂಧಗಳ ಸಮೀಕ್ಷೆ ನಡೆಸಲು ನೇಮಿಸಲ್ಪಟ್ಟಿದ್ದ ಕರ್ನರ್‌ ನಿಯೋಗವು ಈ ಭಯವನ್ನು ವ್ಯಕ್ತಪಡಿಸಿತು. ಅದೇನೆಂದರೆ, ಅಮೆರಿಕವು ಅನಿವಾರ್ಯವಾಗಿ, “ಒಂದು ಕಪ್ಪು ಜನರ, ಮತ್ತೊಂದು ಬಿಳಿ ಜನರ—ಪ್ರತ್ಯೇಕ ಮತ್ತು ಅಸಮಾನವಾದ” ಎರಡು ಸಮಾಜಗಳಾಗಿ ಪರಿಣಮಿಸುವುದೆಂದೇ. ಈ ಭವಿಷ್ಯವಾಣಿಯು ಈಗಾಗಲೇ ಸತ್ಯವಾಗಿಬಿಟ್ಟಿದೆ ಮತ್ತು ಆ ದೇಶದಲ್ಲಿ “ಆರ್ಥಿಕ ಹಾಗೂ ಜಾತೀಯ ವಿಭಜನೆಯು ಹೆಚ್ಚುತ್ತಾ ಇದೆ” ಎಂದು ಕೆಲವರು ಹೇಳುತ್ತಾರೆ.

ಎಲ್ಲರಿಗೂ ಸಮಾನತೆ ಎಂಬ ವಿಚಾರಕ್ಕೆ ವಾಸ್ತವರೂಪವನ್ನು ಕೊಡುವುದು ಅಷ್ಟು ಕಷ್ಟಕರವಾಗಿರುವುದೇಕೆ? ಒಂದು ಪ್ರಧಾನ ಕಾರಣವು, ಮಾನವ ಸ್ವಭಾವವೇ ಆಗಿದೆ. ಅಮೆರಿಕದ ಮಾಜಿ ಕಾಂಗ್ರೆಸ್‌ ವ್ಯಕ್ತಿ ವಿಲ್ಯಮ್‌ ರಾಂಡಾಲ್ಫ್‌ ಹರ್ಸ್ಟ್‌ ಎಂಬವರು ಒಮ್ಮೆ ಹೀಗಂದರು: “ಎಲ್ಲ ಮನುಷ್ಯರು ಕಡಿಮೆಪಕ್ಷ ಒಂದು ವಿಷಯದಲ್ಲಂತೂ ಸರಿಸಮಾನರಾಗಿ ಸೃಷ್ಟಿಸಲ್ಪಟ್ಟಿದ್ದಾರೆ. ಅದು, ಬೇರೆಯವರೊಂದಿಗೆ ಅಸಮಾನರಾಗಿರಬೇಕೆಂಬ ಅವರ ಅಪೇಕ್ಷೆಯೇ ಆಗಿದೆ.” ಅವರ ಮಾತುಗಳ ಅರ್ಥವೇನಾಗಿತ್ತು? 19ನೆಯ ಶತಮಾನದ ಫ್ರೆಂಚ್‌ ನಾಟಕಕಾರ ಹೆನ್ರಿ ಬೆಕ್‌ ಅದನ್ನು ಹೆಚ್ಚು ಸ್ಪಷ್ಟವಾಗಿ ಹೇಳಿದ್ದಾರೆಂಬಂತೆ ತೋರುತ್ತದೆ: “ಸಮಾನತೆಯನ್ನು ಸಾಧಿಸುವ ಕೆಲಸವನ್ನು ಕಷ್ಟಕರವಾಗಿ ಮಾಡುವ ವಿಷಯವೇನೆಂದರೆ, ನಾವು ನಮಗಿಂತ ಉಚ್ಚ ಸ್ಥಾನದಲ್ಲಿರುವವರೊಂದಿಗೆ ಮಾತ್ರ ಸಮಾನರಾಗಿರಲು ಬಯಸುತ್ತೇವೆ.” ಬೇರೆ ಮಾತುಗಳಲ್ಲಿ ಹೇಳುವುದಾದರೆ, ಜನರು ಸಾಮಾಜಿಕ ಮಟ್ಟದಲ್ಲಿ ತಮಗಿಂತಲೂ ಮೇಲಿನ ಸ್ಥಾನದಲ್ಲಿರುವವರೊಂದಿಗೆ ಮಾತ್ರ ಸಮಾನರಾಗಿರಲು ಬಯಸುತ್ತಾರೆ. ಆದರೆ ತಮಗಿಂತಲೂ ಕೆಳಸ್ಥಾನದಲ್ಲಿದ್ದಾರೆಂದು ಅವರೆಣಿಸುವಂಥ ಜನರೊಂದಿಗೆ ಸಮಾನರಾಗಿರಲಿಕ್ಕಾಗಿ ಅವರು ತಮ್ಮ ಸುಯೋಗಗಳು ಮತ್ತು ಲಾಭಗಳನ್ನು ಬಿಟ್ಟುಕೊಡಲು ಹೆಚ್ಚಿನವರು ಸಿದ್ಧರಾಗಿರಲಿಕ್ಕಿಲ್ಲ.

ಹಿಂದಿನ ಕಾಲಗಳಲ್ಲಿ, ಜನರು ಸಾಮಾನ್ಯ ಪ್ರಜೆಗಳು, ಕುಲೀನ ಮನೆತನದವರು, ಅಥವಾ ರಾಜಮನೆತನದ ಸದಸ್ಯರೋಪಾದಿ ಹುಟ್ಟುತ್ತಿದ್ದರು. ಇದು ಕೆಲವೊಂದು ಸ್ಥಳಗಳಲ್ಲಿ ಈಗಲೂ ಸತ್ಯವಾಗಿದೆ. ಆದರೆ ಇಂದು ಹೆಚ್ಚಿನ ದೇಶಗಳಲ್ಲಿ, ಒಬ್ಬ ವ್ಯಕ್ತಿಯು ಕೆಳವರ್ಗ, ಮಧ್ಯಮವರ್ಗ, ಅಥವಾ ಉಚ್ಚವರ್ಗಕ್ಕೆ ಸೇರಿದ್ದಾನೊ ಇಲ್ಲವೊ ಎಂಬುದನ್ನು ಅವನ ಬಳಿ ಹಣವಿದೆಯೊ ಇಲ್ಲವೊ ಎಂಬ ಅಂಶವು ನಿರ್ಧರಿಸುತ್ತದೆ. ಜಾತಿ, ಶಿಕ್ಷಣದ ಮಟ್ಟ, ಮತ್ತು ಸಾಕ್ಷರತೆಯಂಥ ಇನ್ನೂ ಹೆಚ್ಚಿನ ವರ್ಗಸಂಕೇತಗಳಿವೆ. ಮತ್ತು ಕೆಲವೊಂದು ಸ್ಥಳಗಳಲ್ಲಿ, ಒಬ್ಬನು ಯಾವ ಲಿಂಗಜಾತಿಗೆ ಸೇರಿದ್ದಾನೊ ಅದು ಕೂಡ ಭೇದಭಾವಕ್ಕೆ ಒಂದು ದೊಡ್ಡ ಆಧಾರವಾಗಿರುತ್ತದೆ. ಉದಾಹರಣೆಗೆ ಸ್ತ್ರೀಯರನ್ನು ಕೆಳವರ್ಗದವರೆಂದು ಪರಿಗಣಿಸಲಾಗುತ್ತದೆ.

ಆಶಾಕಿರಣಗಳೊ?

ಮಾನವ ಹಕ್ಕುಗಳ ನಿಯಮ ವ್ಯವಸ್ಥೆಯು, ಕೆಲವೊಂದು ವರ್ಗ ಪ್ರತಿಬಂಧಗಳನ್ನು ಕೆಡವಿಹಾಕಲು ಸಹಾಯಮಾಡಿದೆ. ಅಮೆರಿಕದಲ್ಲಿ ಪ್ರತ್ಯೇಕತಾವಿರೋಧಿ ನಿಯಮಗಳನ್ನು ಜಾರಿಗೆ ತರಲಾಯಿತು. ವರ್ಣಭೇದ ನೀತಿಯನ್ನು ದಕ್ಷಿಣ ಆಫ್ರಿಕದಲ್ಲಿ ಕಾನೂನುಬಾಹಿರಗೊಳಿಸಲಾಯಿತು. ಗುಲಾಮಗಿರಿಯು ಈಗಲೂ ಅಸ್ತಿತ್ವದಲ್ಲಿರುವುದಾದರೂ, ಜಗತ್ತಿನ ಹೆಚ್ಚಿನ ಸ್ಥಳಗಳಲ್ಲಿ ಅದು ನಿಷೇಧಿಸಲ್ಪಟ್ಟಿದೆ. ನ್ಯಾಯಾಲಯದ ತೀರ್ಪುಗಳು, ನಿರ್ದಿಷ್ಟ ಸ್ಥಳಿಕ ಜನರಿಗಿರುವ ಜಮೀನಿನ ಹಕ್ಕುಗಳನ್ನು ಬೇರೆಯವರು ಅಂಗೀಕರಿಸುವಂತೆ ಬಲವಂತಪಡಿಸಿವೆ, ಮತ್ತು ಭೇದಭಾವದ ವಿರುದ್ಧವಾದ ನಿಯಮಗಳು, ಪ್ರತಿಕೂಲ ಸ್ಥಿತಿಯಲ್ಲಿರುವ ಕೆಲವರಿಗೆ ಪರಿಹಾರವನ್ನು ಒದಗಿಸಿವೆ.

ಸಾಮಾಜಿಕ ವರ್ಗಭೇದಗಳು ಇಲ್ಲವಾಗುತ್ತಿವೆ ಎಂಬುದನ್ನು ಇದು ಸೂಚಿಸುತ್ತಿದೆಯೊ? ಇಲ್ಲವೆಂದು ತೋರುತ್ತದೆ. ಏಕೆಂದರೆ ಕೆಲವೊಂದು ಸಾಮಾಜಿಕ ವರ್ಗಭೇದಗಳು ತೆಗೆಯಲ್ಪಟ್ಟಿರುವುದಾದರೂ, ಹೊಸ ವಿಭಜನೆಗಳು ತಲೆದೋರಲಾರಂಭಿಸಿವೆ. ಮಾಹಿತಿ ಯುಗದಲ್ಲಿ ವರ್ಗಗಳ ನಡುವಿನ ಹೋರಾಟ (ಇಂಗ್ಲಿಷ್‌) ಎಂಬ ಪುಸ್ತಕವು ಹೇಳುವುದು: “ಇನ್ನು ಮುಂದೆ ಜನರನ್ನು ಬಂಡವಾಳಗಾರರು ಮತ್ತು ಕಾರ್ಮಿಕರು ಎಂಬ ವರ್ಗಗಳಾಗಿ ಭೇದ ಮಾಡುವುದು ಅಯೋಗ್ಯವೆಂದು ತೋರುತ್ತದೆ. ಯಾಕೆಂದರೆ ಈ ದೊಡ್ಡ ವರ್ಗಗಳು ಕುಪಿತ ಜನರ ಅನೇಕ ಚಿಕ್ಕ ಚಿಕ್ಕ ಗುಂಪುಗಳಾಗಿ ಛಿದ್ರಗೊಂಡಿವೆ.”

ಸಾಮಾಜಿಕ ವರ್ಗಗಳು ನಿತ್ಯಕ್ಕೂ ಜನರನ್ನು ವಿಭಜಿಸುವವೊ? ಪರಿಸ್ಥಿತಿಯು ಅಷ್ಟು ಆಶಾಹೀನವಾಗಿಲ್ಲವೆಂಬುದನ್ನು ಮುಂದಿನ ಲೇಖನವು ತೋರಿಸಲಿದೆ.