ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸುವರ್ಣ ನಿಯಮ ನಿಶ್ಚಯವಾಗಿಯೂ ವ್ಯಾವಹಾರಿಕವಾಗಿದೆ

ಸುವರ್ಣ ನಿಯಮ ನಿಶ್ಚಯವಾಗಿಯೂ ವ್ಯಾವಹಾರಿಕವಾಗಿದೆ

ಸುವರ್ಣ ನಿಯಮ ನಿಶ್ಚಯವಾಗಿಯೂ ವ್ಯಾವಹಾರಿಕವಾಗಿದೆ

ಸುವರ್ಣ ನಿಯಮವು ಯೇಸು ಉಚ್ಚರಿಸಿದ ಒಂದು ನೈತಿಕ ಬೋಧನೆಯಾಗಿದೆ ಎಂಬುದು ಹೆಚ್ಚಿನ ಜನರ ಅಭಿಪ್ರಾಯವಾಗಿದೆ. ಆದರೆ ಯೇಸು ತಾನೇ ಹೀಗೆ ಹೇಳಿದನು: “ನಾನು ಹೇಳುವ ಬೋಧನೆಯು ನನ್ನದಲ್ಲ, ನನ್ನನ್ನು ಕಳುಹಿಸಿದಾತನದು.”​—ಯೋಹಾನ 7:16.

ಹೌದು, ಸುವರ್ಣ ನಿಯಮವೆಂದು ಅನಂತರ ಪ್ರಸಿದ್ಧವಾದ ವಾಕ್ಯವನ್ನೂ ಸೇರಿಸಿ ಯೇಸು ಕಲಿಸಿದಂಥದ್ದೆಲ್ಲದ್ದರ ಉಗಮನು, ಯೇಸುವನ್ನು ಕಳುಹಿಸಿದಾತನು ಅಂದರೆ ಸೃಷ್ಟಿಕರ್ತನಾದ ಯೆಹೋವ ದೇವರೇ ಆಗಿದ್ದಾನೆ.

ಮಾನವಕುಲದಲ್ಲಿ ಎಲ್ಲರೂ ತಾವು ಹೇಗೆ ಉಪಚರಿಸಲ್ಪಡಲು ಇಷ್ಟಪಡುವರೊ ಹಾಗೆಯೇ ಪರಸ್ಪರರನ್ನು ಉಪಚರಿಸುವಂತೆ ದೇವರು ಮೂಲತಃ ಉದ್ದೇಶಿಸಿದನು. ಆತನು ಮನುಷ್ಯರನ್ನು ಸೃಷ್ಟಿಸಿದ ರೀತಿಯ ಮೂಲಕ, ಇತರರ ಹಿತಕ್ಷೇಮಕ್ಕಾಗಿ ಚಿಂತೆಯನ್ನು ವ್ಯಕ್ತಪಡಿಸುವುದರಲ್ಲಿ ಆತನೇ ಅತ್ಯುತ್ತಮವಾದ ಮಾದರಿಯನ್ನಿಟ್ಟನು. “ಹೀಗೆ ದೇವರು ಮನುಷ್ಯನನ್ನು ತನ್ನ ಸ್ವರೂಪದಲ್ಲಿ ಉಂಟುಮಾಡಿದನು; ದೇವಸ್ವರೂಪದಲ್ಲಿ ಅವನನ್ನು ಉಂಟುಮಾಡಿದನು; ಅವರನ್ನು ಗಂಡುಹೆಣ್ಣಾಗಿ ನಿರ್ಮಿಸಿದನು.” (ಆದಿಕಾಂಡ 1:27) ಇದರರ್ಥ, ದೇವರು ಮನುಷ್ಯರಿಗೆ ಒಂದಿಷ್ಟರ ಮಟ್ಟಿಗೆ ತನ್ನ ಸ್ವಂತ ಗಮನಾರ್ಹವಾದ ಗುಣಗಳನ್ನು ಕೊಟ್ಟನು. ಹೀಗೆ ಮನುಷ್ಯರು, ಬಹುಶಃ ಸದಾಕಾಲ, ಶಾಂತಿ, ಸಂತೋಷ ಮತ್ತು ಸಾಮರಸ್ಯದಿಂದ ಬದುಕನ್ನು ಆನಂದಿಸಸಾಧ್ಯವಿತ್ತು. ಅವರ ದೇವದತ್ತ ಮನಸ್ಸಾಕ್ಷಿಯು ಸರಿಯಾಗಿ ತರಬೇತುಗೊಳಿಸಲ್ಪಟ್ಟಾಗ, ಸ್ವತಃ ತಾವು ಹೇಗೆ ಉಪಚರಿಸಲ್ಪಡುವಂತೆ ಬಯಸುವರೊ ಅದೇ ರೀತಿಯಲ್ಲಿ ಇತರರನ್ನು ಉಪಚರಿಸುವಂತೆ ಅದು ಅವರನ್ನು ಮಾರ್ಗದರ್ಶಿಸಲಿತ್ತು.

ಸ್ವಾರ್ಥವು ಮೇಲುಗೈ ಪಡೆಯಿತು

ಮನುಷ್ಯರಿಗೆ ಇಷ್ಟೊಂದು ಅದ್ಭುತವಾದ ಆರಂಭವು ಕೊಡಲ್ಪಟ್ಟರೂ, ಅನಂತರ ಏನಾಯಿತು? ಸರಳ ಮಾತುಗಳಲ್ಲಿ ಹೇಳುವುದಾದರೆ, ಸ್ವಾರ್ಥಭಾವವು ತನ್ನ ಕುರೂಪ ಮುಖವನ್ನು ಎತ್ತಿತ್ತು. ಹೆಚ್ಚಿನ ಜನರು, ಆದಿಕಾಂಡ ಅಧ್ಯಾಯ 3ರಲ್ಲಿ ದಾಖಲಿಸಲ್ಪಟ್ಟಿರುವಂತೆ, ಪ್ರಥಮ ಮಾನವ ದಂಪತಿಯು ಏನನ್ನು ಮಾಡಿದರೆಂಬುದರ ಕುರಿತಾದ ಬೈಬಲ್‌ ವೃತ್ತಾಂತದೊಂದಿಗೆ ಚಿರಪರಿಚಿತರಾಗಿದ್ದಾರೆ. ದೇವರ ಎಲ್ಲ ನೀತಿಯ ಮಟ್ಟಗಳ ವಿರೋಧಿಯಾಗಿರುವ ಸೈತಾನನಿಂದ ಚಿತಾಯಿಸಲ್ಪಟ್ಟ ಆದಾಮಹವ್ವರು, ಸ್ವಾತಂತ್ರ್ಯಕ್ಕಾಗಿ ಮತ್ತು ಸ್ವನಿರ್ಧಾರ ಮಾಡುವುದಕ್ಕಾಗಿ ದೇವರ ಆಳ್ವಿಕೆಯನ್ನು ಸ್ವಾರ್ಥಭಾವದಿಂದ ತಿರಸ್ಕರಿಸಿದರು. ಅವರ ಸ್ವಾರ್ಥಪರ ಮತ್ತು ದಂಗೆಕೋರ ಕ್ರಿಯೆಯು, ಸ್ವತಃ ಅವರಿಗೇ ಭಾರೀ ನಷ್ಟವನ್ನು ಬರಮಾಡಿತಲ್ಲದೆ, ಅವರ ಭಾವೀ ಸಂತಾನಕ್ಕೂ ಭೀಕರವಾದ ಪರಿಣಾಮಗಳನ್ನು ಉಂಟುಮಾಡಿತು. ಸುವರ್ಣ ನಿಯಮವೆಂದು ಅನಂತರ ಪ್ರಸಿದ್ಧವಾದ ಬೋಧನೆಯನ್ನು ಅಲಕ್ಷಿಸುವುದರ ವಿಪತ್ಕಾರಕ ಪರಿಣಾಮವನ್ನು ಅದು ಸ್ಪಷ್ಟವಾಗಿ ಪ್ರದರ್ಶಿಸಿತು. ಫಲಿತಾಂಶವಾಗಿ, “ಒಬ್ಬ ಮನುಷ್ಯನಿಂದಲೇ ಪಾಪವೂ ಪಾಪದಿಂದ ಮರಣವೂ ಲೋಕದೊಳಗೆ ಸೇರಿದವು; ಎಲ್ಲರು ಪಾಪ ಮಾಡಿದ್ದರಿಂದ ಮರಣವು ಹೀಗೆ ಎಲ್ಲರಲ್ಲಿಯೂ ವ್ಯಾಪಿಸಿತು.”​—ರೋಮಾಪುರ 5:12.

ಒಂದು ಸಮೂಹದೋಪಾದಿ ಮಾನವಜಾತಿಯು ಯೆಹೋವ ದೇವರ ಮಾರ್ಗಗಳಿಗೆ ಬೆನ್ನುತೋರಿಸಿದರೂ, ಆತನು ಮಾತ್ರ ಅವರ ಕೈಬಿಡಲಿಲ್ಲ. ಉದಾಹರಣೆಗೆ ಯೆಹೋವನು ಇಸ್ರಾಯೇಲ್‌ ಜನಾಂಗಕ್ಕೆ ಮಾರ್ಗದರ್ಶನವನ್ನು ನೀಡಲಿಕ್ಕಾಗಿ ತನ್ನ ಧರ್ಮಶಾಸ್ತ್ರವನ್ನು ಕೊಟ್ಟನು. ಇತರರು ತಮ್ಮನ್ನು ಹೇಗೆ ಉಪಚರಿಸಬೇಕೆಂದು ಅವರು ಬಯಸುತ್ತಾರೊ ಅದೇ ರೀತಿಯಲ್ಲಿ ಅವರು ಇತರರನ್ನು ಉಪಚರಿಸುವಂತೆ ಅದು ಅವರಿಗೆ ಕಲಿಸಿಕೊಟ್ಟಿತು. ಆ ಧರ್ಮಶಾಸ್ತ್ರವು, ಗುಲಾಮರನ್ನು, ತಂದೆಯಿಲ್ಲದ ಹುಡುಗರನ್ನು ಮತ್ತು ವಿಧವೆಯರನ್ನು ಹೇಗೆ ಉಪಚರಿಸಬೇಕೆಂಬುದರ ಕುರಿತಾಗಿ ನಿರ್ದೇಶನವನ್ನು ಕೊಟ್ಟಿತು. ಆಕ್ರಮಣ, ಅಪಹರಣ, ಮತ್ತು ಕದಿಯುವಿಕೆಯ ಸಮಸ್ಯೆಗಳನ್ನು ಹೇಗೆ ನಿರ್ವಹಿಸಬೇಕೆಂಬುದನ್ನು ಅದು ತಿಳಿಸಿತು. ನೈರ್ಮಲ್ಯಶಾಸ್ತ್ರದ ನಿಯಮಗಳು, ಇತರರ ಆರೋಗ್ಯಕ್ಕಾಗಿ ಹಿತಾಸಕ್ತಿಯನ್ನು ತೋರಿಸಿದವು. ಲೈಂಗಿಕ ವಿಷಯಗಳ ಕುರಿತಾಗಿಯೂ ನಿಯಮಗಳಿದ್ದವು. “ನಿಮ್ಮ ನೆರೆಯವರನ್ನು ನಿಮ್ಮಂತೆಯೇ ಪ್ರೀತಿಸಬೇಕು” ಎಂದು ಜನರಿಗೆ ಹೇಳುವ ಮೂಲಕ ಯೆಹೋವನು ತನ್ನ ಧರ್ಮಶಾಸ್ತ್ರವನ್ನು ಸಾರಾಂಶಿಸಿದನು. ಈ ವಾಕ್ಯವನ್ನೇ ಯೇಸು ತದನಂತರ ಉಲ್ಲೇಖಿಸಿದನು. (ಯಾಜಕಕಾಂಡ 19:18; ಮತ್ತಾಯ 22:​39, 40) ಇಸ್ರಾಯೇಲ್ಯರ ನಡುವೆ ಇದ್ದ ಪರದೇಶದವರೊಂದಿಗೆ ಹೇಗೆ ವ್ಯವಹರಿಸಬೇಕೆಂಬುದರ ಕುರಿತಾದ ನಿಯಮಗಳೂ ಆ ಧರ್ಮಶಾಸ್ತ್ರದಲ್ಲಿದ್ದವು. ಅದು ಹೀಗೆ ಆಜ್ಞಾಪಿಸಿತು: “ಪರದೇಶಸ್ಥರಿಗೆ ಉಪದ್ರವಕೊಡಬಾರದು. ನೀವೂ ಐಗುಪ್ತದೇಶದಲ್ಲಿ ಪರದೇಶಸ್ಥರಾಗಿದ್ದಿರಷ್ಟೆ; ಅಂಥವರ ಮನೋವ್ಯಥೆಯನ್ನು ತಿಳಿದೇ ಇರುತ್ತೀರಿ.” ಬೇರೆ ಮಾತುಗಳಲ್ಲಿ ಹೇಳುವುದಾದರೆ, ಇಸ್ರಾಯೇಲ್ಯರು ಕಷ್ಟಕರ ಪರಿಸ್ಥಿತಿಗಳಲ್ಲಿರುವವರಿಗೆ ಸಹಾನುಭೂತಿಯ ದಯೆಯನ್ನು ತೋರಿಸಬೇಕಿತ್ತು.​—ವಿಮೋಚನಕಾಂಡ 23:9; ಯಾಜಕಕಾಂಡ 19:34; ಧರ್ಮೋಪದೇಶಕಾಂಡ 10:19.

ಇಸ್ರಾಯೇಲ್‌ ಜನಾಂಗವು ಎಷ್ಟರ ವರೆಗೆ ಧರ್ಮಶಾಸ್ತ್ರವನ್ನು ನಂಬಿಗಸ್ತಿಕೆಯಿಂದ ಪಾಲಿಸಿತೊ ಅಷ್ಟರ ವರೆಗೆ ಯೆಹೋವನು ಆ ಜನಾಂಗವನ್ನು ಆಶೀರ್ವದಿಸಿದನು. ದಾವೀದ ಮತ್ತು ಸೊಲೊಮೋನರ ಆಳ್ವಿಕೆಯ ಕೆಳಗೆ ಆ ಜನಾಂಗವು ಸಂಪದ್ಭರಿತವಾಯಿತು ಮತ್ತು ಜನರು ಸಂತೋಷಿತರೂ ಸಂತೃಪ್ತರೂ ಆಗಿದ್ದರು. ಒಂದು ಐತಿಹಾಸಿಕ ವೃತ್ತಾಂತವು ಹೀಗನ್ನುತ್ತದೆ: “ಇಸ್ರಾಯೇಲ್‌ಯೆಹೂದ್ಯರು ಸಮುದ್ರತೀರದ ಉಸುಬಿನಷ್ಟು ಅಸಂಖ್ಯರಾಗಿದ್ದರು; ಅವರು ಅನ್ನಪಾನಗಳಲ್ಲಿ ತೃಪ್ತರಾಗಿ ಸಂತೋಷದಿಂದಿದ್ದರು. ಸೊಲೊಮೋನನ ಆಳಿಕೆಯಲ್ಲೆಲ್ಲಾ ದಾನ್‌ಪಟ್ಟಣ ಮೊದಲುಗೊಂಡು ಬೇರ್ಷೆಬದ ವರೆಗಿರುವ ಸಮಸ್ತ ಇಸ್ರಾಯೇಲ್ಯರೂ ಯೆಹೂದ್ಯರೂ ತಮ್ಮ ತಮ್ಮ ದ್ರಾಕ್ಷಾಲತೆ, ಅಂಜೂರಗಿಡ ಇವುಗಳ ನೆರಳಿನಲ್ಲಿ ವಾಸಿಸುತ್ತಾ ಸುರಕ್ಷಿತರಾಗಿದ್ದರು.”​—1 ಅರಸುಗಳು 4:20, 25.

ದುಃಖಕರವಾಗಿ, ಆ ಜನಾಂಗದ ಶಾಂತಿ ಮತ್ತು ಭದ್ರತೆಯು ಬಹುಕಾಲ ಬಾಳಲಿಲ್ಲ. ಇಸ್ರಾಯೇಲ್ಯರ ಬಳಿ ದೇವರ ಧರ್ಮಶಾಸ್ತ್ರವಿದ್ದರೂ, ಅವರು ಅದನ್ನು ಪಾಲಿಸಲಿಲ್ಲ. ಅವರಲ್ಲಿದ್ದ ಸ್ವಾರ್ಥಭಾವವು, ಇತರರಿಗಾಗಿ ಅವರಲ್ಲಿದ್ದ ಚಿಂತೆಯನ್ನು ಅದುಮಿಹಾಕಿತು. ಇದರೊಂದಿಗೆ ಅಲ್ಲಿ ಎದ್ದಂಥ ಧರ್ಮಭ್ರಷ್ಟತೆಯು, ಅವರಲ್ಲಿ ಒಬ್ಬೊಬ್ಬರಿಗೂ ಒಂದು ಜನಾಂಗದೋಪಾದಿಯೂ ಕಷ್ಟವನ್ನು ತಂದೊಡ್ಡಿತು. ಕೊನೆಗೆ ಸಾ.ಶ.ಪೂ. 607ರಲ್ಲಿ, ಬಾಬೆಲಿನವರು ಯೆಹೂದ ರಾಜ್ಯವನ್ನೂ, ಅದರ ರಾಜಧಾನಿ ಯೆರೂಸಲೇಮನ್ನೂ ಮತ್ತು ಅಲ್ಲಿದ್ದ ಭವ್ಯವಾದ ದೇವಾಲಯವನ್ನೂ ನಾಶಮಾಡುವಂತೆ ಯೆಹೋವನು ಬಿಟ್ಟನು. ಯಾವ ಕಾರಣಕ್ಕಾಗಿ? “ಹೀಗಿರಲು ಸೇನಾಧೀಶ್ವರನಾದ ಯೆಹೋವನ ಈ ನುಡಿಯನ್ನು ಕೇಳಿರಿ​—ನೀವು ನನ್ನ ಮಾತುಗಳನ್ನು ಕೇಳದ ಕಾರಣ ಇಗೋ, ನಾನು ಬಡಗಣ ಜನಾಂಗಗಳನ್ನೆಲ್ಲಾ ಕರೆಯಿಸಿ ಬಾಬೆಲಿನ ಅರಸನೂ ನನ್ನ ಸೇವಕನೂ ಆದ ನೆಬೂಕದ್ನೆಚ್ಚರನನ್ನು ಬರಮಾಡಿ ಇವರೆಲ್ಲರನ್ನು ಈ ದೇಶದ ಮೇಲೂ ಇದರ ನಿವಾಸಿಗಳ ಮೇಲೂ ಸುತ್ತಲಿನ ಸಕಲ ಜನಾಂಗಗಳ ಮೇಲೂ ಬೀಳಿಸಿ ಅವುಗಳನ್ನು ತುಂಬಾ ಹಾಳುಗೈದು ಬೆರಗಿನ ಸಿಳ್ಳಿಗೆ ಗುರಿಪಡಿಸಿ ನಿತ್ಯನಾಶನಕ್ಕೆ ಈಡುಮಾಡುವೆನು.” (ಯೆರೆಮೀಯ 25:8, 9) ಯೆಹೋವನ ಶುದ್ಧಾರಾಧನೆಯನ್ನು ತೊರೆದದ್ದಕ್ಕಾಗಿ ಅವರು ಎಂಥ ಭಾರೀ ಬೆಲೆಯನ್ನು ತೆರಬೇಕಾಯಿತು!

ಅನುಕರಿಸಲಿಕ್ಕಾಗಿ ಒಂದು ಮಾದರಿ

ಇನ್ನೊಂದು ಕಡೆಯಲ್ಲಿ, ಯೇಸುವಾದರೊ ಸುವರ್ಣ ನಿಯಮವನ್ನು ಕಲಿಸಿದನು ಮಾತ್ರವಲ್ಲ, ಅದನ್ನು ಪಾಲಿಸುವುದರಲ್ಲಿ ಅತ್ಯುತ್ತಮವಾದ ಮಾದರಿಯನ್ನೂ ಇಟ್ಟನು. ಅವನು ಇತರರ ಕ್ಷೇಮಾಭಿವೃದ್ಧಿಯ ಕುರಿತಾಗಿ ನಿಜವಾಗಿಯೂ ಚಿಂತೆಯನ್ನು ತೋರಿಸಿದನು. (ಮತ್ತಾಯ 9:36; 14:14; ಲೂಕ 5:​12, 13) ಒಮ್ಮೆ, ನಾಯಿನೆಂಬ ಊರಿನ ಹತ್ತಿರದಲ್ಲಿದ್ದಾಗ, ತನ್ನ ಒಬ್ಬನೇ ಮಗನ ಶವಸಂಸ್ಕಾರದ ಮೆರವಣಿಗೆಯಲ್ಲಿ ಎದೆಬಿರಿಯುವಂತೆ ಅಳುತ್ತಿದ್ದ ಒಬ್ಬ ವಿಧವೆಯನ್ನು ಯೇಸು ನೋಡಿದನು. ಬೈಬಲ್‌ ವೃತ್ತಾಂತವು ಹೀಗನ್ನುತ್ತದೆ: ‘ಸ್ವಾಮಿಯು ಆಕೆಯನ್ನು ಕಂಡು ಕನಿಕರಿಸಿದನು.’ (ಲೂಕ 7:​11-15) ವೈನ್ಸ್‌ ಎಕ್ಸ್‌ಪೊಸಿಟರಿ ಡಿಕ್ಷನೆರಿ ಆಫ್‌ ಓಲ್ಡ್‌ ಆ್ಯಂಡ್‌ ನ್ಯೂ ಟೆಸ್ಟಮೆಂಟ್‌ ವರ್ಡ್ಸ್‌ ಎಂಬ ಪುಸ್ತಕಕ್ಕನುಸಾರ, ‘ಕನಿಕರಿಸು’ ಎಂಬ ಅಭಿವ್ಯಕ್ತಿಯ ಅರ್ಥವು, “ಆಂತರ್ಯದ ಆಳದಿಂದ ಭಾವನಾತ್ಮಕವಾಗಿ ಪ್ರೇರಿಸಲ್ಪಡುವುದು” ಎಂದಾಗಿದೆ. ಅವನಿಗೆ ಅವಳ ನೋವಿನ ಅನುಭವವಾಯಿತು ಮತ್ತು ಇದು, ಅವಳ ನೋವನ್ನು ನಿವಾರಿಸಲಿಕ್ಕಾಗಿ ಸಕಾರಾತ್ಮಕ ಹೆಜ್ಜೆಗಳನ್ನು ತೆಗೆದುಕೊಳ್ಳುವಂತೆ ಅವನನ್ನು ಪ್ರೇರಿಸಿತು. ಯೇಸು ಆ ಹುಡುಗನನ್ನು ಉಜ್ಜೀವಿಸಿ, ‘ಅವನನ್ನು ಅವನ ತಾಯಿಗೆ ಕೊಟ್ಟಾಗ’ ಆ ವಿಧವೆಗೆ ಎಷ್ಟು ಆನಂದವಾಯಿತು!

ಕೊನೆಯಲ್ಲಿ, ದೇವರ ಉದ್ದೇಶಕ್ಕೆ ಹೊಂದಿಕೆಯಲ್ಲಿ ಯೇಸು ಮನಃಪೂರ್ವಕವಾಗಿ ಕಷ್ಟಾನುಭವಿಸಿ, ಮಾನವಕುಲವನ್ನು ಪಾಪ ಮತ್ತು ಮರಣದ ದಾಸತ್ವದಿಂದ ಬಿಡಿಸಲಿಕ್ಕಾಗಿ ತನ್ನ ಜೀವವನ್ನೇ ಅರ್ಪಿಸಿದನು. ಇದು ತಾನೇ, ಸುವರ್ಣ ನಿಮಯಕ್ಕನುಸಾರ ಜೀವಿಸುವ ಸರ್ವಶ್ರೇಷ್ಠ ಮಾದರಿಯಾಗಿದೆ.​—ಮತ್ತಾಯ 20:28; ಯೋಹಾನ 15:13; ಇಬ್ರಿಯ 4:15.

ಸುವರ್ಣ ನಿಯಮವನ್ನು ಅನ್ವಯಿಸುವ ಜನರು

ನಿಜವಾಗಿಯೂ ಸುವರ್ಣ ನಿಯಮಕ್ಕನುಸಾರ ಜೀವಿಸುವ ಜನರು ನಮ್ಮ ಕಾಲದಲ್ಲಿದ್ದಾರೊ? ಹೌದು ಇದ್ದಾರೆ. ಮತ್ತು ಅವರು ಇದನ್ನು ಅನುಕೂಲಕರವಾದ ಸಮಯದಲ್ಲಿ ಮಾತ್ರ ಮಾಡುವುದಿಲ್ಲ. ಉದಾಹರಣೆಗಾಗಿ, IIನೆಯ ವಿಶ್ವ ಯುದ್ಧದ ಸಮಯದಲ್ಲಿ ನಾಸಿ ಜರ್ಮನಿಯಲ್ಲಿದ್ದ ಯೆಹೋವನ ಸಾಕ್ಷಿಗಳು, ದೇವರಲ್ಲಿ ತಮ್ಮ ನಂಬಿಕೆಯನ್ನು ಮತ್ತು ನೆರೆಯವರಿಗಾಗಿ ಪ್ರೀತಿಯನ್ನು ಕಾಪಾಡಿಕೊಂಡರು ಹಾಗೂ ಸುವರ್ಣ ನಿಯಮದ ಸಂಬಂಧದಲ್ಲಿ ರಾಜಿಮಾಡಿಕೊಳ್ಳಲು ನಿರಾಕರಿಸಿದರು. ಸರಕಾರವು ಎಲ್ಲ ಯೆಹೂದ್ಯರ ವಿರುದ್ಧ ದ್ವೇಷ ಮತ್ತು ಭೇದಭಾವದ ಚಳುವಳಿಯನ್ನು ಜಾರಿಗೆ ತಂದಾಗಲೂ, ಸಾಕ್ಷಿಗಳು ಸುವರ್ಣ ನಿಯಮವನ್ನು ಪಾಲಿಸುತ್ತಾ ಮುಂದುವರಿದರು. ಸೆರೆಶಿಬಿರಗಳಲ್ಲೂ ಅವರು ಜೊತೆ ಮಾನವರ ಕಾಳಜಿವಹಿಸುತ್ತಾ ಇದ್ದರು, ಆಹಾರವು ಕೊಂಚವೇ ಇದ್ದರೂ ಯೆಹೂದ್ಯರು ಮತ್ತು ಯೆಹೂದ್ಯೇತರರಿಗೆ ಒಂದೇ ಸಮನಾಗಿ ಅದನ್ನು ಹಂಚಿಕೊಂಡರು. ಅಷ್ಟುಮಾತ್ರವಲ್ಲದೆ, ಇತರರನ್ನು ಕೊಲ್ಲಲಿಕ್ಕಾಗಿ ಶಸ್ತ್ರಗಳನ್ನು ಉಪಯೋಗಿಸುವಂತೆ ಸರಕಾರವು ಅವರಿಗೆ ಆಜ್ಞಾಪಿಸಿದರೂ, ಅವರು ಇತರರಿಂದ ಕೊಲ್ಲಲ್ಪಡಲು ಬಯಸದಿರುವಂತೆಯೇ, ಅವರೂ ಇತರರನ್ನು ಕೊಲ್ಲಲು ನಿರಾಕರಿಸಿದರು. ತಮ್ಮಂತೆಯೇ ಪ್ರೀತಿಸಬೇಕಾದವರನ್ನು ಅವರು ಹೇಗೆ ತಾನೇ ಕೊಲ್ಲಸಾಧ್ಯವಿತ್ತು? ಅವರು ಹಾಗೆ ನಿರಾಕರಿಸಿದ್ದಕ್ಕಾಗಿ, ಅವರಲ್ಲಿ ಹೆಚ್ಚಿನವರು ಸೆರೆಶಿಬಿರಗಳಿಗೆ ಮಾತ್ರವಲ್ಲ ಸಾವಿಗೂ ತುತ್ತಾದರು.​—ಮತ್ತಾಯ 5:​43-48.

ನೀವು ಈ ಲೇಖನವನ್ನು ಓದುತ್ತಿರುವಾಗ, ಸುವರ್ಣ ನಿಯಮವು ಕಾರ್ಯನಡಿಸುತ್ತಿದೆಯೆಂಬ ಇನ್ನೊಂದು ಉದಾಹರಣೆಯಿಂದ ಪ್ರಯೋಜನ ಹೊಂದುತ್ತಿದ್ದೀರಿ. ಅನೇಕ ಜನರು ನಿರೀಕ್ಷಾಹೀನರಾಗಿ ಮತ್ತು ನಿಸ್ಸಹಾಯಕರಾಗಿ ನರಳುತ್ತಿದ್ದಾರೆಂದು ಯೆಹೋವನ ಸಾಕ್ಷಿಗಳು ಗ್ರಹಿಸುತ್ತಾರೆ. ಇದರಿಂದಾಗಿ, ಬೈಬಲಿನಲ್ಲಿರುವ ನಿರೀಕ್ಷೆ ಮತ್ತು ವ್ಯಾವಹಾರಿಕ ನಿರ್ದೇಶನದ ಕುರಿತಾಗಿ ಇತರರು ಕಲಿಯುವಂತೆ ಸಾಕ್ಷಿಗಳು ಸ್ವಯಂ ಆಗಿ ಸಕಾರಾತ್ಮಕ ಕ್ರಿಯೆಯನ್ನು ಕೈಗೊಳ್ಳುತ್ತಿದ್ದಾರೆ. ಇದೆಲ್ಲವೂ ಒಂದು ಅಭೂತಪೂರ್ವ ಪ್ರಮಾಣದಲ್ಲಿ ಇಂದು ನಡೆಸಲಾಗುತ್ತಿರುವ ಒಂದು ಭೌಗೋಲಿಕ ಶೈಕ್ಷಣಿಕ ಕೆಲಸದ ಭಾಗವಾಗಿದೆ. ಫಲಿತಾಂಶವೇನು? ಯೆಶಾಯ 2:​2-4ರಲ್ಲಿ ಪ್ರವಾದಿಸಲ್ಪಟ್ಟಂತೆ, ‘ಬಹುಜನಾಂಗದವರು’ ವಾಸ್ತವದಲ್ಲಿ ಈಗ ಲೋಕದಾದ್ಯಂತ ಇರುವ 60 ಲಕ್ಷಕ್ಕಿಂತಲೂ ಹೆಚ್ಚು ಜನರು ‘ಯೆಹೋವನ ಮಾರ್ಗಗಳ ವಿಷಯವಾಗಿ ಬೋಧಿಸಲ್ಪಟ್ಟಿದ್ದಾರೆ ಮತ್ತು ಆತನ ದಾರಿಗಳಲ್ಲಿ ನಡೆಯುತ್ತಿದ್ದಾರೆ.’ ಸಾಂಕೇತಿಕವಾಗಿ, ಅವರು ತಮ್ಮ “[ಆಯುಧಗಳನ್ನು] ಕುಲುಮೆಗೆ ಹಾಕಿ ಕತ್ತಿಗಳನ್ನು ಗುಳಗಳನ್ನಾಗಿಯೂ ಬರ್ಜಿಗಳನ್ನು ಕುಡುಗೋಲುಗಳನ್ನಾಗಿಯೂ” ಮಾಡಲು ಕಲಿತಿದ್ದಾರೆ. ಈ ಗೊಂದಲಭರಿತ ಸಮಯಗಳಲ್ಲೂ ಅವರು ಶಾಂತಿಯನ್ನು ಕಂಡುಕೊಂಡಿದ್ದಾರೆ.

ನಿಮ್ಮ ಕುರಿತಾಗಿ ಏನು?

ಪಿಶಾಚನಾದ ಸೈತಾನನು ಏದೆನಿನಲ್ಲಿ ಚಿತಾಯಿಸಿದ ದಂಗೆಯಂದಿನಿಂದ ಸುವರ್ಣ ನಿಯಮದ ಬಗ್ಗೆ ತೋರಿಸಲ್ಪಟ್ಟ ನಿರ್ಲಕ್ಷ್ಯವು, ಮಾನವಕುಲಕ್ಕೆ ಎಷ್ಟು ಕಷ್ಟಸಂಕಟವನ್ನು ತಂದಿದೆ ಎಂಬುದನ್ನು ಒಂದು ಕ್ಷಣ ಯೋಚಿಸಿ ನೋಡಿ. ಯೆಹೋವನು ಈ ಸ್ಥಿತಿಯನ್ನು ಬೇಗನೆ ಸಂಪೂರ್ಣವಾಗಿ ಬದಲಾಯಿಸಲು ಉದ್ದೇಶಿಸುತ್ತಾನೆ. ಹೇಗೆ? “ಸೈತಾನನ ಕೆಲಸಗಳನ್ನು ಲಯಮಾಡುವದಕ್ಕೋಸ್ಕರವೇ ದೇವಕುಮಾರನು ಪ್ರತ್ಯಕ್ಷನಾದನು.” (1 ಯೋಹಾನ 3:8) ಇದು ದೇವರ ರಾಜ್ಯದ ಆಳ್ವಿಕೆಯ ಕೆಳಗೆ ನಡೆಯುವುದು. ಮತ್ತು ಆ ರಾಜ್ಯವು, ಸುವರ್ಣ ನಿಯಮವನ್ನು ಕಲಿಸಿ ಅದರಂತೆ ನಡೆದುಕೊಂಡ ಯೇಸು ಕ್ರಿಸ್ತನ ವಿವೇಕಯುತ ಮತ್ತು ಸಮರ್ಥವಾದ ಹಸ್ತಗಳಲ್ಲಿರುವುದು.​—ಕೀರ್ತನೆ 37:​9-11; ದಾನಿಯೇಲ 2:44.

ಪ್ರಾಚೀನ ಇಸ್ರಾಯೇಲಿನ ರಾಜ ದಾವೀದನು ಹೀಗಂದನು: “ನಾನು ಬಾಲಕನಾಗಿದ್ದೆನು, ಈಗ ವೃದ್ಧನಾಗಿದ್ದೇನೆ; ಈ ವರೆಗೂ ನೀತಿವಂತನು ದಿಕ್ಕಿಲ್ಲದೆ ಬಿದ್ದಿರುವದನ್ನಾಗಲಿ ಅವನ ಸಂತತಿಯವರು ಭಿಕ್ಷೆಬೇಡಿ ತಿನ್ನುವದನ್ನಾಗಲಿ ನೋಡಲಿಲ್ಲ. ಅವನು ಯಾವಾಗಲೂ ಧರ್ಮಿಷ್ಠನಾಗಿ ಹಣ ಸಹಾಯವನ್ನು ಮಾಡುತ್ತಾನೆ; ಅವನ ಸಂತತಿಯವರು ಆಶೀರ್ವಾದಹೊಂದುವರು.” (ಕೀರ್ತನೆ 37:25, 26) ಇಂದು ಹೆಚ್ಚಿನ ಜನರು ‘ಧರ್ಮಿಷ್ಠರಾಗಿ ಹಣ ಸಹಾಯ’ ಮಾಡುವ ಬದಲಿಗೆ, ಯಾವಾಗಲೂ ಇತರರಿಂದ ತೆಗೆದುಕೊಳ್ಳುವುದು ಮತ್ತು ಕಸಿದುಕೊಳ್ಳುವುದರಲ್ಲೇ ಮುಳುಗಿದ್ದಾರೆಂಬ ಮಾತನ್ನು ಒಪ್ಪಿಕೊಳ್ಳುವಿರಲ್ಲವೇ? ಸ್ಪಷ್ಟವಾಗಿ, ಸುವರ್ಣ ನಿಯಮವನ್ನು ಪಾಲಿಸುವುದು ನಿಜ ಶಾಂತಿ ಮತ್ತು ಭದ್ರತೆಗೆ ನಡೆಸಬಲ್ಲದು. ಹೇಗೆಂದರೆ ನಾವು ಈಗಲೂ ಮತ್ತು ಭವಿಷ್ಯದಲ್ಲಿ ದೇವರ ರಾಜ್ಯದ ಕೆಳಗೂ ಆಶೀರ್ವಾದಗಳನ್ನು ಅನುಭವಿಸುವಂತೆ ಅದು ಶಕ್ತರನ್ನಾಗಿಮಾಡುತ್ತದೆ. ದೇವರ ರಾಜ್ಯವು ಭೂಮಿಯ ಮೇಲಿರುವ ಸ್ವಾರ್ಥ ಮತ್ತು ದುಷ್ಟತನದ ಪ್ರತಿಯೊಂದು ಕುರುಹನ್ನು ತೆಗೆದುಹಾಕಿ, ಈ ಸದ್ಯದ ಭ್ರಷ್ಟ ಮಾನವನಿರ್ಮಿತ ವ್ಯವಸ್ಥೆಯ ಬದಲಿಗೆ ದೇವರ ನಿರ್ಮಾಣವಾಗಿರುವ ಒಂದು ಹೊಸ ವ್ಯವಸ್ಥೆಯನ್ನು ತರುವುದು. ಆಗ ಎಲ್ಲ ಜನರು ಸುವರ್ಣ ನಿಯಮಕ್ಕನುಸಾರ ಜೀವಿಸುವುದರಲ್ಲಿ ಆನಂದಿಸುವರು.​—ಕೀರ್ತನೆ 29:11; 2 ಪೇತ್ರ 3:13.

[ಪುಟ 4, 5ರಲ್ಲಿರುವ ಚಿತ್ರಗಳು]

ಯೇಸು ಸುವರ್ಣ ನಿಯಮವನ್ನು ಕಲಿಸಿದನು ಮಾತ್ರವಲ್ಲ, ಅದನ್ನು ಪಾಲಿಸುವುದರಲ್ಲಿ ಅತ್ಯುತ್ತಮ ಮಾದರಿಯನ್ನೂ ಇಟ್ಟನು

[ಪುಟ 7ರಲ್ಲಿರುವ ಚಿತ್ರಗಳು]

ಸುವರ್ಣ ನಿಯಮವನ್ನು ಪಾಲಿಸುವುದು ನಿಜ ಶಾಂತಿ ಮತ್ತು ಭದ್ರತೆಗೆ ನಡೆಸಬಲ್ಲದು