ಈ ಲೋಕವನ್ನು ಹೆಚ್ಚು ಉತ್ತಮವಾದ ಸ್ಥಳವನ್ನಾಗಿ ಮಾಡಬಲ್ಲಿರೋ?
ಈ ಲೋಕವನ್ನು ಹೆಚ್ಚು ಉತ್ತಮವಾದ ಸ್ಥಳವನ್ನಾಗಿ ಮಾಡಬಲ್ಲಿರೋ?
“ರಾಜಕೀಯವು ಸಮಾಜದೊಳಗೆ ಆಧಾರಕಟ್ಟನ್ನು ಹಿಂತರಲು ಅಸಮರ್ಥವಾಗಿದೆ. ಅದು ಸಾಂಪ್ರದಾಯಿಕ ನೈತಿಕ ವಿಶ್ವಾಸಗಳನ್ನು ಪುನರ್ರಚಿಸಲು ಸಜ್ಜಿತವಾಗಿರುವುದಿಲ್ಲ. ಅತ್ಯುತ್ತಮ ಕಾರ್ಯನೀತಿಗಳು, ಪ್ರೇಮಯಾಚನೆ ಮತ್ತು ವಿವಾಹದ ಸಂಬಂಧದಲ್ಲಿ ಮೊದಲಿದ್ದ ಮೌಲ್ಯಗಳನ್ನು ಪುನಃಸ್ಥಾಪಿಸಲಾರವು. ಅವು ತಂದೆಗಳು ತಮ್ಮ ಮಕ್ಕಳ ಜವಾಬ್ದಾರಿಯನ್ನು ಹೊರುವಂತೆ ಮಾಡವು. ಹಿಂದೆ ಜನರಲ್ಲಿ ಯಾವುದೇ ಅನ್ಯಾಯದ ವಿರುದ್ಧ ಇರುತ್ತಿದ್ದ ಕ್ರೋಧ ಇಲ್ಲವೇ ಲಜ್ಜಾಭಾವನೆಯನ್ನು ಪುನಃಸ್ಥಾಪಿಸಲಾರವು . . . ನಮ್ಮನ್ನು ಕಾಡುವ ಹೆಚ್ಚಿನ ನೈತಿಕ ಸಮಸ್ಯೆಗಳನ್ನು ಕಾನೂನಿನ ಮೂಲಕ ತೆಗೆದುಹಾಕಸಾಧ್ಯವಿಲ್ಲ.”
ಅಮೆರಿಕದ ಒಬ್ಬ ಮಾಜಿ ಸರಕಾರೀ ಅಧಿಕಾರಿಯ ಆ ಮಾತುಗಳನ್ನು ನೀವು ಒಪ್ಪುವಿರೋ? ಹೌದಾದರೆ, ಇಂದು ದುರಾಶೆ, ಕುಟುಂಬಗಳಲ್ಲಿ ಸ್ವಾಭಾವಿಕ ಪ್ರೇಮದ ಕೊರತೆ, ಲಗಾಮಿಲ್ಲದ ನೈತಿಕ ಮೌಲ್ಯಗಳು, ಅಜ್ಞಾನ, ಮತ್ತು ನಮ್ಮ ಸಮಾಜದ ಆಧಾರಕಟ್ಟನ್ನು ತಿಂದುಹಾಕುತ್ತಿರುವ ಇನ್ನಿತರ ಅಂಶಗಳು ತಂದೊಡ್ಡಿರುವ ಅನೇಕ ಸಮಸ್ಯೆಗಳಿಗೆ ಪರಿಹಾರವಾದರೂ ಏನು? ಯಾವ ಪರಿಹಾರವೂ ಇಲ್ಲ ಎಂದು ಕೆಲವರಿಗೆ ಅನಿಸುತ್ತದಾದುದರಿಂದ, ಅವರು ತಮ್ಮ ಪ್ರತಿನಿತ್ಯದ ಕಾರ್ಯಕಲಾಪಗಳಲ್ಲೇ ನಿರತರಾಗಿ, ಸಾಧ್ಯವಾದಷ್ಟು ಉತ್ತಮವಾಗಿ ಜೀವನ ನಡೆಸುತ್ತಿರುತ್ತಾರೆ. ಆದರೆ ಇತರರು, ಒಂದಲ್ಲ ಒಂದು ದಿನ ಆಡಳಿತ ಕೌಶಲ ಶಕ್ತಿಯುಳ್ಳ ಮತ್ತು ಮೇಧಾವಿಯಾದ ಒಬ್ಬ ನಾಯಕನು ಬಂದು, ಸರಿಯಾದ ಮಾರ್ಗದೆಡೆಗೆ ತಮ್ಮನ್ನು ನಡೆಸುವನು ಎಂಬುದಾಗಿ ನಂಬುತ್ತಾರೆ. ಈ ನಾಯಕನು ಒಂದುವೇಳೆ ಧಾರ್ಮಿಕ ನಾಯಕನಾಗಿಯೂ ಇರಬಹುದು ಎಂದು ಅವರು ನಂಬುತ್ತಾರೆ.
ವಾಸ್ತವದಲ್ಲಿ, ಎರಡು ಸಾವಿರ ವರ್ಷಗಳ ಹಿಂದೆ, ಯೇಸು ಕ್ರಿಸ್ತನು ದೇವರಿಂದ ಕಳುಹಿಸಲ್ಪಟ್ಟವನು ಮತ್ತು ಅತ್ಯಂತ ಸಾಮರ್ಥ್ಯವುಳ್ಳ ಒಬ್ಬ ನಾಯಕನಾಗುವನು ಎಂಬುದನ್ನು ಗ್ರಹಿಸಿದ ಜನರು ಅವನನ್ನು ರಾಜನನ್ನಾಗಿ ಮಾಡಲು ಬಯಸಿದರು. ಹಾಗಿದ್ದರೂ, ಯೇಸು ಅವರ ಉದ್ದೇಶಗಳನ್ನು ಅರಿತುಕೊಂಡಾಗ, ಅವನು ಆ ಕೂಡಲೇ ಆ ಸ್ಥಳವನ್ನು ಬಿಟ್ಟುಹೋದನು. (ಯೋಹಾನ 6:14, 15) ತದನಂತರ ಒಬ್ಬ ರೋಮನ್ ಅಧಿಕಾರಿಗೆ ಅವನು, “ನನ್ನ ರಾಜ್ಯವು ಈ ಲೋಕದ್ದಲ್ಲ” ಎಂದು ವಿವರಿಸಿದನು. (ಯೋಹಾನ 18:36) ಆದರೆ, ಈಗಿನ ಕಾಲದಲ್ಲಿ, ತಾವು ಯೇಸುವಿನ ಶಿಷ್ಯರೆಂದು ಹೇಳಿಕೊಳ್ಳುವ ಧಾರ್ಮಿಕ ಮುಖಂಡರನ್ನೂ ಸೇರಿಸಿ ಕೆಲವರು ಮಾತ್ರ ಯೇಸು ತೆಗೆದುಕೊಂಡ ನಿಲುವನ್ನು ತೆಗೆದುಕೊಳ್ಳುತ್ತಾರೆ. ಇವರಲ್ಲಿ ಕೆಲವರು, ಲೌಕಿಕ ಅಧಿಕಾರಿಗಳನ್ನು ಪ್ರಭಾವಿಸಲು ಪ್ರಯತ್ನಿಸುವ ಮೂಲಕ ಇಲ್ಲವೆ ರಾಜಕೀಯ ಅಧಿಕಾರಕ್ಕೆ ತಾವೇ ಇಳಿಯುವ ಮೂಲಕ, ಈ ಲೋಕವನ್ನು ಒಂದು ಉತ್ತಮ ಸ್ಥಳವನ್ನಾಗಿ ಮಾಡಲು ಪ್ರಯತ್ನಿಸಿದ್ದಾರೆ. 1960 ಮತ್ತು 70ಗಳ ಘಟನೆಗಳನ್ನು ಪರಿಶೀಲಿಸುವ ಮೂಲಕ ನಾವು ಇದನ್ನು ನೋಡಬಹುದು.
ಲೋಕವನ್ನು ಸುಧಾರಿಸಲು ಧಾರ್ಮಿಕ ಪ್ರಯತ್ನಗಳು
ಲ್ಯಾಟಿನ್-ಅಮೆರಿಕ ದೇಶಗಳ ಕೆಲವು ದೇವತಾಶಾಸ್ತ್ರಜ್ಞರು, 1960ಗಳ ಕೊನೆಯ ವರ್ಷಗಳಲ್ಲಿ ಬಡವರಿಗಾಗಿ ಮತ್ತು ದೀನದಲಿತರಿಗಾಗಿ ಹೋರಾಟವನ್ನು ಆರಂಭಿಸಿದರು. ಇದನ್ನು ಸಾಧಿಸಲಿಕ್ಕಾಗಿ ಅವರು ವಿಮೋಚನಾ ದೇವತಾಶಾಸ್ತ್ರವನ್ನು ರಚಿಸಿದರು. ಇದರಲ್ಲಿ ಕ್ರಿಸ್ತನನ್ನು ಬೈಬಲಿನ ಅರ್ಥದಲ್ಲಿ ಮಾತ್ರ ರಕ್ಷಕನಾಗಿ ಪರಿಗಣಿಸುವುದಲ್ಲದೆ, ರಾಜಕೀಯ ಮತ್ತು ಆರ್ಥಿಕ ರೀತಿಯಲ್ಲೂ ರಕ್ಷಕನಾಗಿ ಚಿತ್ರಿಸಲಾಯಿತು. ಅಮೆರಿಕದಲ್ಲಿ, ನೈತಿಕ ಮೌಲ್ಯಗಳು ಅವನತಿಹೊಂದುತ್ತಿರುವುದನ್ನು ನೋಡಿ ಹೆಚ್ಚು ಚಿಂತಿತರಾದ ಅನೇಕ ಚರ್ಚ್ ನಾಯಕರು, ಮಾರಲ್ ಮಜಾರಿಟಿ (ಶಿಷ್ಟ ಮಹಾಜನ) ಎಂಬ ಸಂಘವನ್ನು ರಚಿಸಿದರು. ಇದರ ಗುರಿಯು, ಹಿತಕರವಾದ ಕೌಟುಂಬಿಕ ಮೌಲ್ಯಗಳನ್ನು ಒದಗಿಸಬಲ್ಲ ಜನರನ್ನು ರಾಜಕೀಯ ಅಧಿಕಾರಕ್ಕೆ ಏರಿಸುವುದೇ ಆಗಿತ್ತು. ತದ್ರೀತಿಯಲ್ಲಿ, ಅನೇಕ ಮುಸ್ಲಿಮ್ ದೇಶಗಳಲ್ಲಿ, ಅನೇಕ ಗುಂಪುಗಳು ಖುರಾನ್ಗೆ ನಿಕಟವಾದ ಅನುಸರಣೆಯನ್ನು ಉತ್ತೇಜಿಸುವ ಮೂಲಕ ಭ್ರಷ್ಟಾಚಾರ ಮತ್ತು ಅತ್ಯಾಚಾರವನ್ನು ತಡೆಗಟ್ಟಲು ಪ್ರಯತ್ನಿಸಿವೆ.
ಈ ಪ್ರಯತ್ನಗಳ ಕಾರಣದಿಂದಾಗಿ ಈ ಲೋಕವು ಅತ್ಯುತ್ತಮ ಸ್ಥಳವಾಗಿ ಪರಿಣಮಿಸಿದೆ ಎಂದು ನೀವು ನಂಬುತ್ತೀರೋ? ವಿಮೋಚನಾ ದೇವತಾಶಾಸ್ತ್ರವು ಎಲ್ಲಿ ಪ್ರಖ್ಯಾತವಾಗಿತ್ತೋ ಆ ದೇಶಗಳನ್ನೂ ಸೇರಿಸಿ, ಎಲ್ಲೆಡೆಯೂ ನೈತಿಕ ಮೌಲ್ಯಗಳು ಅವನತಿಹೊಂದುತ್ತಿರುವುದನ್ನು ಹಾಗೂ ಶ್ರೀಮಂತರ ಮತ್ತು ಬಡವರ ಮಧ್ಯೆಯಿರುವ ಅಂತರವು ಕ್ರಮವಾಗಿ ದೊಡ್ಡದಾಗುತ್ತಿರುವುದನ್ನು ವಾಸ್ತವಾಂಶಗಳು ತೋರಿಸುತ್ತವೆ.
ಮಾರಲ್ ಮಜಾರಿಟಿ ಸಂಘವು ಅಮೆರಿಕದಲ್ಲಿ ತನ್ನ ಮೂಲ
ಗುರಿಗಳನ್ನು ಸಾಧಿಸಲು ಸೋತುಹೋದುದರಿಂದ, ಅದರ ಸ್ಥಾಪಕನಾದ ಜೆರೀ ಫಾಲ್ವೆಲ್ 1989ರಲ್ಲಿ ಆ ಸಂಘವನ್ನು ಮುಚ್ಚಿದನು. ಇದರ ಸ್ಥಾನವನ್ನು ಬೇರೆ ಸಂಘಗಳು ತೆಗೆದುಕೊಂಡಿವೆ. ಆದರೂ, “ಮಾರಲ್ ಮಜಾರಿಟಿ” ಎಂಬ ಪದಜೋಡಣೆಯನ್ನು ಮಾಡಿದ ಪಾಲ್ ವೇರಿಚ್, ಕ್ರಿಸ್ಟಿಯಾನಿಟಿ ಟುಡೇ ಎಂಬ ಪತ್ರಿಕೆಯಲ್ಲಿ ಬರೆದದ್ದು: “ನಾವು ರಾಜಕೀಯದಲ್ಲಿ ವಿಜಯಹೊಂದುವುದಾದರೂ, ನಾವು ಪ್ರಾಮುಖ್ಯವೆಂದು ನಂಬುವ ತತ್ತ್ವಗಳನ್ನು ಕಾರ್ಯರೂಪಕ್ಕೆ ತರಲು ನಮ್ಮ ಜಯವು ನಮಗೆ ಸಾಧ್ಯಗೊಳಿಸುವುದಿಲ್ಲ.” ಅವನು ಕೂಡಿಸಿ ಬರೆದದ್ದು: “ಸಂಸ್ಕೃತಿಯು ಎಂದಿಗಿಂತಲೂ ಹೆಚ್ಚು ಅಗಲವಾದ ಮೋರಿಯಾಗಿ ಪರಿಣಮಿಸುತ್ತಾ ಇದೆ. ಐತಿಹಾಸಿಕ ಪ್ರಮಾಣಗಳ ಸಾಮಾಜಿಕ ಕುಸಿತದಲ್ಲಿ ನಾವು ಸಿಕ್ಕಿಕೊಂಡಿದ್ದೇವೆ. ಈ ಕುಸಿತವು ರಾಜಕೀಯವನ್ನು ನೆಲಸಮಮಾಡುವಷ್ಟು ಬೃಹತ್ತಾಗಿದೆ.”ಪತ್ರಿಕಾ ಲೇಖಕ ಮತ್ತು ಸಂಪಾದಕರಾದ ಕ್ಯಾಲ್ ಥಾಮಸ್, ರಾಜಕೀಯದ ಮೂಲಕವಾಗಿ ಸಮಾಜವನ್ನು ಮೇಲೆತ್ತಲು ಪ್ರಯತ್ನಿಸುವುದರಲ್ಲಿ ಒಂದು ಮೂಲಭೂತ ನ್ಯೂನತೆಯಿದೆ ಎಂಬ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ: “ನಿಜವಾದ ಪರಿವರ್ತನೆ ವ್ಯಕ್ತಿಯಿಂದ ವ್ಯಕ್ತಿಗೆ ಬರುತ್ತದೆ, ಚುನಾವಣೆಯಿಂದ ಚುನಾವಣೆಗಲ್ಲ. ಏಕೆಂದರೆ ನಮ್ಮ ಪ್ರಾಥಮಿಕ ಸಮಸ್ಯೆಗಳು ಆರ್ಥಿಕವಾದವುಗಳೋ ರಾಜಕೀಯವಾದವುಗಳೋ ಅಲ್ಲ, ಬದಲಿಗೆ ನೈತಿಕವೂ ಆತ್ಮಿಕವೂ ಆಗಿವೆ.”
ಆದರೆ, ಮಟ್ಟಮೌಲ್ಯಗಳಿಲ್ಲದ ಒಂದು ಲೋಕದಲ್ಲಿ, ಯಾವುದು ಸರಿ ಮತ್ತು ಯಾವುದು ತಪ್ಪು ಎಂಬುದನ್ನು ತಾವೇ ತೀರ್ಮಾನಿಸಿಕೊಳ್ಳುವ ಒಂದು ಲೋಕದಲ್ಲಿ ನೀವು ಹೇಗೆ ನೈತಿಕ ಮತ್ತು ಆತ್ಮಿಕ ಸಮಸ್ಯೆಗಳನ್ನು ಬಗೆಹರಿಸುವಿರಿ? ಪ್ರಭಾವವಿರುವ ಮತ್ತು ಸದುದ್ದೇಶಗಳುಳ್ಳ ಜನರಿಗೆ—ಧಾರ್ಮಿಕರಾಗಿರಲಿ ಇಲ್ಲದಿರಲಿ—ಈ ಲೋಕವನ್ನು ನಿಜವಾಗಿಯೂ ಒಂದು ಉತ್ತಮವಾದ ಸ್ಥಳವನ್ನಾಗಿ ಮಾಡಲು ಸಾಧ್ಯವಾಗಲಿಲ್ಲವಾದರೆ, ಅದನ್ನು ಯಾರು ತಾನೇ ಮಾಡುವರು? ನಾವು ಮುಂದಿನ ಲೇಖನದಲ್ಲಿ ನೋಡಲಿರುವ ಪ್ರಕಾರ, ಇದಕ್ಕೆ ಒಂದು ಉತ್ತರವಿದೆ. ವಾಸ್ತವದಲ್ಲಿ, ತನ್ನ ರಾಜ್ಯವು ಈ ಲೋಕದ್ದಲ್ಲ ಎಂದು ಯೇಸು ಏಕೆ ಹೇಳಿದನು ಎಂಬುದರಲ್ಲೇ ಉತ್ತರವು ಅಡಕವಾಗಿದೆ.
[ಪುಟ 2ರಲ್ಲಿರುವ ಚಿತ್ರ ಕೃಪೆ]
ಮುಖಪುಟ: ಮಲಿನಗೊಂಡ ನೀರು: WHO/UNICEF photo; ಭೂಗೋಲ: Mountain High Maps® Copyright © 1997 Digital Wisdom, Inc.
[ಪುಟ 3ರಲ್ಲಿರುವ ಚಿತ್ರ ಕೃಪೆ]
ಮಕ್ಕಳು: UN photo; ಭೂಗೋಲ: Mountain High Maps® Copyright © 1997 Digital Wisdom, Inc.