ನಿಮ್ಮ ಪ್ರಗತಿಯು ಎಲ್ಲರಿಗೆ ಪ್ರಸಿದ್ಧವಾಗಲಿ
ನಿಮ್ಮ ಪ್ರಗತಿಯು ಎಲ್ಲರಿಗೆ ಪ್ರಸಿದ್ಧವಾಗಲಿ
“ಈ ಕಾರ್ಯಗಳನ್ನು ಸಾಧಿಸಿಕೊಳ್ಳುವದರಲ್ಲಿ ಆಸಕ್ತನಾಗಿರು. ಇದರಿಂದ ನಿನ್ನ ಅಭಿವೃದ್ಧಿಯು ಎಲ್ಲರಿಗೂ ಪ್ರಸಿದ್ಧವಾಗುವದು.”—1 ತಿಮೊಥೆಯ 4:15.
1. ಒಂದು ಹಣ್ಣು ಮಾಗಿ, ತಿನ್ನಲು ಸಿದ್ಧವಾಗಿದೆಯೊ ಇಲ್ಲವೊ ಎಂಬುದನ್ನು ಹೇಗೆ ಹೇಳಬಲ್ಲಿರಿ?
ನಿಮ್ಮ ಮನಸ್ಸಿನಲ್ಲಿ ನಿಮ್ಮ ಅಚ್ಚುಮೆಚ್ಚಿನ ಹಣ್ಣನ್ನು, ಅಂದರೆ ಸೀಬೆಹಣ್ಣನ್ನೊ, ಸೇಬನ್ನೊ, ಮಾವಿನಹಣ್ಣನ್ನೊ ಅಥವಾ ಇನ್ಯಾವುದೇ ಹಣ್ಣನ್ನೊ ಚಿತ್ರಿಸಿಕೊಳ್ಳಿರಿ. ಅದು ಮಾಗಿ, ತಿನ್ನಲು ಸಿದ್ಧವಾಗಿದೆಯೊ ಇಲ್ಲವೊ ಎಂಬುದನ್ನು ನೀವು ಹೇಳಬಲ್ಲಿರೊ? ಖಂಡಿತವಾಗಿಯೂ. ಅದರ ಪರಿಮಳ, ಬಣ್ಣ ಮತ್ತು ಸ್ಪರ್ಶವೇ ನಿಮ್ಮ ಬಾಯಿಯಲ್ಲಿ ನೀರೂರಿಸಬಹುದು. ಅದರ ಒಂದು ತುಂಡು ನಿಮ್ಮ ಬಾಯೊಳಗೆ ಹೋದಾಕ್ಷಣವೇ, ನಿಮಗರಿವಿಲ್ಲದೆ ನಿಮ್ಮಿಂದ ಒಂದು ಉದ್ಗಾರ ಹೊರಡುತ್ತದೆ. ಆಹಾ, ಎಷ್ಟು ರಸಭರಿತ! ಎಷ್ಟು ಸಿಹಿ! ಅದನ್ನು ತಿನ್ನುವಾಗ ನಿಮಗೆ ತುಂಬ ಆನಂದ ಮತ್ತು ಸಂತೋಷವಾಗುತ್ತದೆ.
2. ಪ್ರೌಢತೆಯು ಹೇಗೆ ತೋರಿಬರುತ್ತದೆ, ಮತ್ತು ಅದು ವೈಯಕ್ತಿಕ ಸಂಬಂಧಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
2 ಸರಳವಾದರೂ, ಹರ್ಷದಾಯಕವಾದ ಈ ಅನುಭವಕ್ಕೆ, ಜೀವಿತದ ಬೇರೆ ಕ್ಷೇತ್ರಗಳಲ್ಲೂ ಸಮಾಂತರಗಳಿವೆ. ಉದಾಹರಣೆಗಾಗಿ, ಒಂದು ಹಣ್ಣು ಮಾಗಿರುವುದು ಹೇಗೆ ವಿಭಿನ್ನ ರೀತಿಗಳಲ್ಲಿ ತೋರಿಬರುತ್ತದೊ ಹಾಗೆಯೇ ಒಬ್ಬ ವ್ಯಕ್ತಿಯು ಆತ್ಮಿಕವಾಗಿ ಪ್ರೌಢನಾಗಿದ್ದಾನೆ ಎಂಬುದು ವಿಭಿನ್ನ ರೀತಿಗಳಲ್ಲಿ ತೋರಿಬರುತ್ತದೆ. ಒಬ್ಬ ವ್ಯಕ್ತಿಯಲ್ಲಿ ವಿವೇಚನಾಶಕ್ತಿ, ಒಳನೋಟ, ವಿವೇಕ ಮುಂತಾದ ಗುಣಗಳನ್ನು ನೋಡುವಾಗ, ಅವನಲ್ಲಿರುವ ಪ್ರೌಢತೆಯನ್ನು ನಾವು ಗ್ರಹಿಸಬಲ್ಲೆವು. (ಯೋಬ 32:7-9) ತಮ್ಮ ಮನೋಭಾವ ಮತ್ತು ಕಾರ್ಯಗಳಲ್ಲಿ ಅಂಥ ಗುಣಗಳನ್ನು ಪ್ರದರ್ಶಿಸುವ ಜನರೊಂದಿಗೆ ಸಹವಾಸ ಮಾಡುವುದು ಮತ್ತು ಕೆಲಸಮಾಡುವುದು ನಿಶ್ಚಯವಾಗಿಯೂ ಒಂದು ಹರ್ಷಾನಂದವೇ ಸರಿ.—ಜ್ಞಾನೋಕ್ತಿ 13:20.
3. ಯೇಸು ತನ್ನ ದಿನದ ಜನರ ಕುರಿತಾಗಿ ಕೊಟ್ಟ ವರ್ಣನೆಯು ಪ್ರೌಢತೆಯ ಕುರಿತಾಗಿ ಏನನ್ನು ಪ್ರಕಟಪಡಿಸುತ್ತದೆ?
3 ಇನ್ನೊಂದು ಕಡೆ, ಒಬ್ಬ ವ್ಯಕ್ತಿಯು ಶಾರೀರಿಕವಾಗಿ ಬೆಳೆದಿರಬಹುದಾದರೂ, ಅವನು ಮಾತಾಡುವ ಮತ್ತು ವರ್ತಿಸುವ ರೀತಿಯು, ಅವನು ಭಾವನಾತ್ಮಕವಾಗಿ ಮತ್ತು ಆತ್ಮಿಕವಾಗಿ ಪ್ರೌಢನಾಗಿಲ್ಲವೆಂಬುದನ್ನು ಪ್ರಕಟಪಡಿಸಬಹುದು. ತನ್ನ ದಿನದ ಮೊಂಡ ಸಂತತಿಯ ಕುರಿತಾಗಿ ಮಾತಾಡುತ್ತಾ ಯೇಸು ಕ್ರಿಸ್ತನು ಮತ್ತಾಯ 11:16-19, NW.
ಹೇಳಿದ್ದು: “ಯೋಹಾನನು ಬಂದನು, ಅವನು ಅನ್ನಪಾನಗಳನ್ನು ತೆಗೆದುಕೊಳ್ಳದವನಾಗಿದ್ದನು; ಅವರು ಅವನಿಗೆ—ದೆವ್ವಹಿಡಿದದೆ ಅನ್ನುತ್ತಾರೆ. ಮನುಷ್ಯಕುಮಾರನು ಬಂದನು. ಅವನು ಅನ್ನಪಾನಗಳನ್ನು ತೆಗೆದುಕೊಳ್ಳುವವನಾಗಿದ್ದಾನೆ; ಅವರು—ಇಗೋ, ಇವನು ಹೊಟ್ಟೆಬಾಕನು, ಕುಡುಕನು, ಭ್ರಷ್ಟರ ಮತ್ತು ಪಾಪಿಷ್ಠರ ಗೆಳೆಯನು ಅನ್ನುತ್ತಾರೆ.” ಆ ಜನರು ಶಾರೀರಿಕವಾಗಿ ಪ್ರೌಢರಾಗಿದ್ದರೂ, ಅವರು “ಎಳೆಯ ಮಕ್ಕಳಂತೆ” ಅಂದರೆ ಸ್ವಲ್ಪವೂ ಪ್ರೌಢತೆಯಿಲ್ಲದೆ ವರ್ತಿಸುತ್ತಾರೆಂದು ಯೇಸು ಹೇಳಿದನು. ಹೀಗಿರುವುದರಿಂದ ಅವನು ಕೂಡಿಸಿ ಹೇಳಿದ್ದು: “ವಿವೇಕವು ತನ್ನ ಕೆಲಸಗಳಿಂದ ನೀತಿಯೆಂದು ರುಜುವಾಗುವುದು.”—4. ಅಭಿವೃದ್ಧಿ ಮತ್ತು ಪ್ರೌಢತೆಯು ಯಾವ ವಿಧಗಳಲ್ಲಿ ಪ್ರದರ್ಶಿಸಲ್ಪಡುತ್ತದೆ?
4 ಯೇಸುವಿನ ಮಾತುಗಳಿಂದ, ಒಬ್ಬ ವ್ಯಕ್ತಿಯ ಬಳಿ ಪ್ರೌಢತೆಯ ವಿಶಿಷ್ಟ ಸಂಕೇತವು, ಅಂದರೆ ನಿಜವಾದ ವಿವೇಕವು ಇದೆಯೊ ಇಲ್ಲವೊ ಎಂಬುದನ್ನು ಕಂಡುಹಿಡಿಯಬಹುದು. ಹೇಗೆ? ಅವನು ಮಾಡುವ ಕೆಲಸಗಳು ಮತ್ತು ಉತ್ಪಾದಿಸುವ ಫಲಗಳಿಂದಲೇ. ಈ ಸಂಬಂಧದಲ್ಲಿ, ಅಪೊಸ್ತಲ ಪೌಲನು ತಿಮೊಥೆಯನಿಗೆ ಕೊಟ್ಟ ಸಲಹೆಯನ್ನು ಗಮನಿಸಿರಿ. ತಿಮೊಥೆಯನು ಬೆನ್ನಟ್ಟಿಕೊಂಡು ಹೋಗಬೇಕಾದ ವಿಷಯಗಳ ಪಟ್ಟಿಮಾಡಿದ ನಂತರ ಪೌಲನು ಹೇಳಿದ್ದು: “ಈ ಕಾರ್ಯಗಳನ್ನು ಸಾಧಿಸಿಕೊಳ್ಳುವದರಲ್ಲಿ ಆಸಕ್ತನಾಗಿರು. ಇದರಿಂದ ನಿನ್ನ ಅಭಿವೃದ್ಧಿಯು ಎಲ್ಲರಿಗೂ ಪ್ರಸಿದ್ಧವಾಗುವದು.” (1 ತಿಮೊಥೆಯ 4:15) ಹೌದು, ಪ್ರೌಢತೆಯ ಕಡೆಗೆ ಒಬ್ಬ ವ್ಯಕ್ತಿಯು ಮಾಡುವ ಪ್ರಗತಿಯು, ‘ಪ್ರಸಿದ್ಧವಾಗುತ್ತದೆ’ ಅಥವಾ ಸ್ಪಷ್ಟವಾಗಿ ಗೋಚರವಾಗುತ್ತದೆ. ಕ್ರೈಸ್ತ ಪ್ರೌಢತೆಯು ಒಂದು ಆಂತರಿಕ ಅಥವಾ ಗೋಪ್ಯ ಗುಣವಾಗಿರುವುದಿಲ್ಲ, ಅದು ಪ್ರಕಾಶಿಸುತ್ತಿರುವ ಬೆಳಕಿನಂತಿದೆ. (ಮತ್ತಾಯ 5:14-16) ಹೀಗಿರುವುದರಿಂದ, ಅಭಿವೃದ್ಧಿ ಮತ್ತು ಪ್ರೌಢತೆಯನ್ನು ತೋರಿಸಬಹುದಾದ ಎರಡು ಪ್ರಮುಖ ವಿಧಗಳನ್ನು ನಾವು ಪರಿಗಣಿಸುವೆವು: (1) ಜ್ಞಾನ, ತಿಳಿವಳಿಕೆ ಮತ್ತು ವಿವೇಕದಲ್ಲಿ ಬೆಳೆಯುವುದು; (2) ಆತ್ಮದಿಂದ ಉಂಟಾಗುವ ಫಲವನ್ನು ಪ್ರದರ್ಶಿಸುವುದು.
ನಂಬಿಕೆ ಮತ್ತು ಜ್ಞಾನದಲ್ಲಿ ಐಕ್ಯರಾಗಿರುವುದು
5. ಪ್ರೌಢತೆಯ ಅರ್ಥವನ್ನು ಹೇಗೆ ನಿರೂಪಿಸಬಹುದು?
5 ಹೆಚ್ಚಿನ ಶಬ್ದಕೋಶಗಳು ಪ್ರೌಢತೆಯನ್ನು, ಪೂರ್ಣ ಬೆಳವಣಿಗೆಯ ಹಂತ, ಪೂರ್ತಿಯಾಗಿ ಬೆಳೆದಿರುವುದು ಮತ್ತು ಒಂದು ಕೊನೆಯ ಹಂತ ಅಥವಾ ಅಪೇಕ್ಷಿತ ಮಟ್ಟವನ್ನು ತಲಪಿರುವುದಾಗಿ ವರ್ಣಿಸುತ್ತವೆ. ಈ ಹಿಂದೆ ತಿಳಿಸಲ್ಪಟ್ಟಿರುವಂತೆ, ಒಂದು ಹಣ್ಣು ಅದರ ನೈಸರ್ಗಿಕ ಬೆಳವಣಿಗೆಯ ಚಕ್ರವನ್ನು ಪೂರ್ತಿಗೊಳಿಸಿ, ಅದರ ತೋರಿಕೆ, ಬಣ್ಣ ಮತ್ತು ಪರಿಮಳವು ಅಪೇಕ್ಷಿಸಲಾಗುವ ಹಂತವನ್ನು ತಲಪುವಾಗ ಪಕ್ವವಾಗಿರುತ್ತದೆ ಅಥವಾ ಮಾಗಿರುತ್ತದೆ. ಆದುದರಿಂದ ಪ್ರೌಢತೆಗೂ, ಉತ್ಕೃಷ್ಟತೆ, ಸಂಪೂರ್ಣತೆ ಮತ್ತು ಪರಿಪೂರ್ಣತೆಗೂ ನಿಕಟವಾದ ಸಂಬಂಧವಿದೆ.—ಯೆಶಾಯ 18:5, NW; ಮತ್ತಾಯ 5:45-48, NW; ಯಾಕೋಬ 1:4, NW.
6, 7. (ಎ) ತನ್ನ ಆರಾಧಕರೆಲ್ಲರೂ ಆತ್ಮಿಕ ಪ್ರೌಢತೆಯತ್ತ ಪ್ರಗತಿಮಾಡುವುದರ ಕುರಿತು ಯೆಹೋವನು ತೀವ್ರವಾಗಿ ಆಸಕ್ತನಾಗಿದ್ದಾನೆಂಬುದನ್ನು ಯಾವುದು ತೋರಿಸುತ್ತದೆ? (ಬಿ) ಆತ್ಮಿಕ ಪ್ರೌಢತೆಯು ಯಾವುದಕ್ಕೆ ನಿಕಟವಾಗಿ ಸಂಬಂಧಿತವಾಗಿದೆ?
6 ತನ್ನ ಆರಾಧಕರೆಲ್ಲರೂ ಆತ್ಮಿಕ ಪ್ರೌಢತೆಯತ್ತ ಪ್ರಗತಿಯನ್ನು ಮಾಡಬೇಕೆಂಬ ತೀವ್ರ ಆಸಕ್ತಿ ಯೆಹೋವ ದೇವರಿಗಿದೆ. ಅದಕ್ಕೋಸ್ಕರ, ಕ್ರೈಸ್ತ ಸಭೆಯೊಳಗೆ ಆತನು ಅದ್ಭುತಕರ ಏರ್ಪಾಡುಗಳನ್ನು ಮಾಡಿದ್ದಾನೆ. ಎಫೆಸದಲ್ಲಿದ್ದ ಕ್ರೈಸ್ತರಿಗೆ ಅಪೊಸ್ತಲ ಪೌಲನು ಬರೆದುದು: “ಆತನು ಕೆಲವರನ್ನು ಅಪೊಸ್ತಲರನ್ನಾಗಿಯೂ ಕೆಲವರನ್ನು ಪ್ರವಾದಿಗಳನ್ನಾಗಿಯೂ ಕೆಲವರನ್ನು ಸೌವಾರ್ತಿಕರನ್ನಾಗಿಯೂ ಕೆಲವರನ್ನು ಸಭಾಪಾಲಕರನ್ನಾಗಿಯೂ ಉಪದೇಶಿಗಳನ್ನಾಗಿಯೂ ಅನುಗ್ರಹಿಸಿದನು. ನಾವೆಲ್ಲರು ನಂಬಿಕೆಯಿಂದಲೂ ದೇವಕುಮಾರನ ವಿಷಯವಾದ ಜ್ಞಾನದಿಂದಲೂ ಉಂಟಾಗುವ ಐಕ್ಯವನ್ನು ಹೊಂದಿ ಪ್ರವೀಣತೆಗೆ ಬಂದವರಾಗಿ ಕ್ರಿಸ್ತನ ಪರಿಪೂರ್ಣತೆಯೆಂಬ ಪ್ರಮಾಣವನ್ನು ಮುಟ್ಟುವ ತನಕ ದೇವಜನರನ್ನು ಯೋಗ್ಯಸ್ಥಿತಿಗೆ ತರುವ ಕೆಲಸಕ್ಕೋಸ್ಕರವೂ ಸಭೆಯ ಸೇವೆಗೋಸ್ಕರವೂ ಕ್ರಿಸ್ತನ ದೇಹವು ಅಭಿವೃದ್ಧಿಯಾಗುವದಕ್ಕೋಸ್ಕರವೂ ಆತನು ಇವರನ್ನು ಅನುಗ್ರಹಿಸಿದನು. ನಾವು ಇನ್ನು ಮೇಲೆ ಕೂಸುಗಳಾಗಿರಬಾರದು; ದುರ್ಜನರ ವಂಚನೆಗೂ ದುರ್ಬೋಧಕರ ಕುಯುಕ್ತಿಗೂ ಒಳಬಿದ್ದು ನಾನಾ ಉಪದೇಶಗಳಿಂದ ಕಂಗೆಟ್ಟು ಗಾಳಿಯಿಂದ ಅತ್ತಿತ್ತ ನೂಕಿಸಿಕೊಂಡು ಹೋಗುವವರ ಹಾಗಿರಬಾರದು.”—ಎಫೆಸ 4:11-14.
7 ಈ ವಚನಗಳಲ್ಲಿ, ದೇವರು ಸಭೆಯಲ್ಲಿ ಇಷ್ಟೊಂದು ಹೇರಳವಾದ ಏರ್ಪಾಡುಗಳನ್ನು ಮಾಡಿರುವ ಕಾರಣಗಳನ್ನು ಪೌಲನು ವಿವರಿಸಿದನು. ಅದೇನೆಂದರೆ, ಎಲ್ಲರೂ ‘ನಂಬಿಕೆಯಲ್ಲಿ ಮತ್ತು ನಿಷ್ಕೃಷ್ಟ ಜ್ಞಾನದಲ್ಲಿ ಐಕ್ಯವನ್ನು ಹೊಂದಬೇಕು,’ ‘ಪ್ರಾಯಸ್ಥ ಮನುಷ್ಯರಾಗಬೇಕು’ ಮತ್ತು ‘ಕ್ರಿಸ್ತನ ಪರಿಪೂರ್ಣತೆಯೆಂಬ
ಪ್ರಮಾಣವನ್ನು ಮುಟ್ಟಬೇಕು.’ ಆಗ ಮಾತ್ರ, ನಾವು ಸುಳ್ಳು ವಿಚಾರಗಳು ಮತ್ತು ಬೋಧನೆಗಳಿಂದ ಆತ್ಮಿಕ ಕೂಸುಗಳಂತೆ ಅತ್ತಿತ್ತ ನೂಕಿಸಲ್ಪಡುವುದರಿಂದ ಸುರಕ್ಷಿತರಾಗಿರುವೆವು. ಹೀಗೆ ನಾವು ಕ್ರೈಸ್ತ ಪ್ರೌಢತೆಯತ್ತ ಪ್ರಗತಿಮಾಡುವುದು ಮತ್ತು ‘ನಂಬಿಕೆಯಿಂದಲೂ ದೇವಕುಮಾರನ ವಿಷಯವಾದ ಜ್ಞಾನದಿಂದಲೂ ಉಂಟಾಗುವ ಐಕ್ಯವನ್ನು ಹೊಂದುವುದರ’ ನಡುವೆ ಇರುವ ನಿಕಟ ಸಂಬಂಧವನ್ನು ನೋಡಬಲ್ಲೆವು. ನಾವು ಪಾಲಿಸಬೇಕಾದ ಅನೇಕ ಅಂಶಗಳು ಪೌಲನ ಸಲಹೆಯಲ್ಲಿವೆ.8. ನಂಬಿಕೆ ಮತ್ತು ಜ್ಞಾನದಲ್ಲಿ ‘ಐಕ್ಯವನ್ನು’ ಹೊಂದುವುದು ನಮ್ಮಿಂದ ಏನನ್ನು ಕೇಳಿಕೊಳ್ಳುತ್ತದೆ?
8 ಪ್ರಥಮವಾಗಿ, ‘ಐಕ್ಯವು’ ಕಾಪಾಡಲ್ಪಡಬೇಕಾದ ಕಾರಣದಿಂದ, ಒಬ್ಬ ಪ್ರೌಢ ಕ್ರೈಸ್ತನು ನಂಬಿಕೆ ಮತ್ತು ಜ್ಞಾನದ ವಿಷಯದಲ್ಲಿ ಜೊತೆ ವಿಶ್ವಾಸಿಗಳೊಂದಿಗೆ ಐಕ್ಯತೆ ಮತ್ತು ಪೂರ್ಣ ಹೊಂದಿಕೆಯಲ್ಲಿರಬೇಕು. ಅವನು ತನ್ನ ವೈಯಕ್ತಿಕ ಅಭಿಪ್ರಾಯಗಳನ್ನು ಸಮರ್ಥಿಸುವುದಿಲ್ಲ ಅಥವಾ ಸರಿಯೆಂದು ಪಟ್ಟುಹಿಡಿಯುವುದಿಲ್ಲ ಅಥವಾ ಬೈಬಲಿನ ತಿಳಿವಳಿಕೆಯ ವಿಷಯದಲ್ಲಿ ತನ್ನದೇ ಆದ ಖಾಸಗಿ ವಿಚಾರಗಳನ್ನು ಇಟ್ಟುಕೊಂಡಿರುವುದಿಲ್ಲ. ಅದಕ್ಕೆ ಬದಲು ಅವನಿಗೆ, ಯೆಹೋವ ದೇವರು ತನ್ನ ಮಗನಾದ ಯೇಸು ಕ್ರಿಸ್ತನು ಮತ್ತು ‘ನಂಬಿಸ್ತನೂ ವಿವೇಕಿಯೂ ಆದಂಥ ಆಳಿನ’ ಮೂಲಕ ಪ್ರಕಟಿಸುವ ಸತ್ಯದಲ್ಲಿ ಸಂಪೂರ್ಣವಾದ ಭರವಸೆಯಿರುತ್ತದೆ. ಕ್ರೈಸ್ತ ಪ್ರಕಾಶನಗಳು, ಕೂಟಗಳು, ಸಮ್ಮೇಳನಗಳು ಮತ್ತು ಅಧಿವೇಶನಗಳ ಮೂಲಕ ‘ಹೊತ್ತುಹೊತ್ತಿಗೆ’ ಒದಗಿಸಲ್ಪಡುವ ಆತ್ಮಿಕ ಆಹಾರವನ್ನು ಕ್ರಮವಾಗಿ ತೆಗೆದುಕೊಳ್ಳುವುದರಿಂದ, ನಂಬಿಕೆ ಮತ್ತು ಜ್ಞಾನದಲ್ಲಿ ನಮ್ಮ ಜೊತೆ ಕ್ರೈಸ್ತರೊಂದಿಗೆ ನಾವು ‘ಐಕ್ಯವನ್ನು’ ಕಾಪಾಡಿಕೊಳ್ಳುವ ಖಾತ್ರಿಯನ್ನು ಹೊಂದಿರಬಲ್ಲೆವು.—ಮತ್ತಾಯ 24:45.
9. ಎಫೆಸದವರಿಗೆ ಬರೆದ ಪತ್ರದಲ್ಲಿ ಪೌಲನು ಉಪಯೋಗಿಸಿದ “ನಂಬಿಕೆ” ಎಂಬ ಪದದ ಅರ್ಥವನ್ನು ವಿವರಿಸಿರಿ.
9 ಎರಡನೆಯದಾಗಿ, “ನಂಬಿಕೆ” ಎಂಬ ಪದವು, ಪ್ರತಿಯೊಬ್ಬ ಕ್ರೈಸ್ತನಿಗೆ ವೈಯಕ್ತಿಕವಾಗಿ ಇರುವ ನಿಶ್ಚಿತಾಭಿಪ್ರಾಯಕ್ಕಲ್ಲ, ಬದಲಾಗಿ ನಾವೇನನ್ನು ನಂಬುತ್ತೇವೊ ಅದರ ಪೂರ್ಣತೆಯನ್ನು, ಅಂದರೆ ಅದರ “ಅಗಲ ಉದ್ದ ಎತ್ತರ ಆಳ”ವನ್ನು ಸೂಚಿಸುತ್ತದೆ. (ಎಫೆಸ 3:18; 4:5; ಕೊಲೊಸ್ಸೆ 1:23; 2:7) ವಾಸ್ತವದಲ್ಲಿ, ಒಬ್ಬ ಕ್ರೈಸ್ತನು ಆ ‘ನಂಬಿಕೆಯ’ ಕೇವಲ ಒಂದು ನಿರ್ದಿಷ್ಟ ಭಾಗವನ್ನು ನಂಬುವುದಾದರೆ ಅಥವಾ ಸ್ವೀಕರಿಸುವುದಾದರೆ, ಅವನು ತನ್ನ ಜೊತೆ ಆರಾಧಕರೊಂದಿಗೆ ಹೇಗೆ ಐಕ್ಯದಿಂದಿರಸಾಧ್ಯವಿದೆ? ಇದರರ್ಥವೇನೆಂದರೆ, ಬೈಬಲಿನ ಮೂಲ ಬೋಧನೆಗಳನ್ನು ತಿಳಿದುಕೊಳ್ಳುವುದು ಅಥವಾ ಸತ್ಯದ ಕುರಿತಾಗಿ ಅಸ್ಪಷ್ಟ ಇಲ್ಲವೇ ಅರೆಜ್ಞಾನವುಳ್ಳವರಾಗಿ ಇರುವುದರಲ್ಲೇ ನಾವು ಸಂತೃಪ್ತರಾಗಿರಬಾರದು. ಅದರ ಬದಲು, ತನ್ನ ವಾಕ್ಯದಲ್ಲಿ ತೀವ್ರ ಸಂಶೋಧನೆಯನ್ನು ಮಾಡಲಿಕ್ಕಾಗಿ ಯೆಹೋವನು ತನ್ನ ಸಂಸ್ಥೆಯ ಮೂಲಕ ಮಾಡಿರುವ ಎಲ್ಲ ಒದಗಿಸುವಿಕೆಗಳ ಪೂರ್ಣ ಲಾಭವನ್ನು ನಾವು ತೆಗೆದುಕೊಳ್ಳಬೇಕು. ನಮ್ಮಿಂದ ಸಾಧ್ಯವಿರುವಷ್ಟರ ಮಟ್ಟಿಗೆ ನಾವು ದೇವರ ಚಿತ್ತ ಮತ್ತು ಉದ್ದೇಶದ ಕುರಿತಾದ ತಿಳಿವಳಿಕೆಯನ್ನು ಪಡೆದುಕೊಳ್ಳಲು ಪ್ರಯತ್ನಿಸಬೇಕು. ಇದರಲ್ಲಿ, ಬೈಬಲ್ ಮತ್ತು ಬೈಬಲ್ ಪ್ರಕಾಶನಗಳನ್ನು ಓದಲು ಹಾಗೂ ಅಭ್ಯಾಸಮಾಡಲು, ದೇವರ ಸಹಾಯ ಮತ್ತು ಮಾರ್ಗದರ್ಶನಕ್ಕಾಗಿ ಆತನಿಗೆ ಪ್ರಾರ್ಥನೆ ಮಾಡಲು, ಕ್ರೈಸ್ತ ಕೂಟಗಳಿಗೆ ಕ್ರಮವಾಗಿ ಹಾಜರಾಗಲು, ಮತ್ತು ರಾಜ್ಯದ ಕುರಿತಾಗಿ ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ಪೂರ್ಣವಾಗಿ ಪಾಲ್ಗೊಳ್ಳಲು ಸಮಯವನ್ನು ತೆಗೆದುಕೊಳ್ಳುವುದು ಸಹ ಸೇರಿದೆ.—ಜ್ಞಾನೋಕ್ತಿ 2:1-5.
10. ಎಫೆಸ 4:13ರಲ್ಲಿ ಉಪಯೋಗಿಸಲ್ಪಟ್ಟಿರುವಂತೆ “ನಾವೆಲ್ಲರು . . . ಮುಟ್ಟುವ ತನಕ” ಎಂಬ ಪದಗಳ ಅರ್ಥವೇನು?
10 ಮೂರನೆಯದಾಗಿ, ಪೌಲನು ಮೂರು ಅಂಶಗಳುಳ್ಳ ಈ ಗುರಿಯ ವರ್ಣನೆಯನ್ನು ಮಾಡಿದ ನಂತರ, “ನಾವೆಲ್ಲರು . . . ಮುಟ್ಟುವ ತನಕ” ಎಂಬ ಪದಗಳನ್ನು ಉಪಯೋಗಿಸಿದನು. ಬೈಬಲಿನ ಒಂದು ಕೈಪಿಡಿಯು, “ನಾವೆಲ್ಲರು” ಎಂಬ ಪದಕ್ಕೆ “ಎಲ್ಲರೂ ಪ್ರತ್ಯೇಕವಾಗಿ ಒಬ್ಬೊಬ್ಬರೋಪಾದಿ ಅಲ್ಲ, ಬದಲಾಗಿ ಎಲ್ಲರೂ ಒಟ್ಟಾಗಿ” ಎಂಬ ಅರ್ಥವಿದೆಯೆಂದು ತಿಳಿಸುತ್ತದೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಸಹೋದರರ ಇಡೀ ಬಳಗದೊಂದಿಗೆ ಕ್ರೈಸ್ತ ಪ್ರೌಢತೆಯ ಗುರಿಯನ್ನು ಬೆನ್ನಟ್ಟಿಕೊಂಡು ಹೋಗಲು ನಮ್ಮಲ್ಲಿ ಪ್ರತಿಯೊಬ್ಬರೂ ಸಮಂಜಸವಾದ ಪ್ರಯತ್ನವನ್ನು ಮಾಡಬೇಕು. ದಿ ಇಂಟರ್ಪ್ರೆಟರ್ಸ್ ಬೈಬಲ್ ಈ ಹೇಳಿಕೆಯನ್ನು ಕೊಡುತ್ತದೆ: “ಇಡೀ ದೇಹವು ತನ್ನ ಆರೋಗ್ಯಪೂರ್ಣ ಬೆಳವಣಿಗೆಯನ್ನು ಮುಂದುವರಿಸಿದಾಗ ಮಾತ್ರ ದೇಹದ ಯಾವುದೇ ಒಂದು ಭಾಗವು ಪೂರ್ತಿಯಾಗಿ ಬೆಳೆದಿರುವ ಹಂತವನ್ನು ತಲಪಲು ಸಾಧ್ಯವಿರುವಂತೆಯೇ, ಆತ್ಮಿಕ ಸಾಧನೆಯ ಪೂರ್ಣತೆಯನ್ನು ಒಬ್ಬ ವ್ಯಕ್ತಿಯು ಪ್ರತ್ಯೇಕವಾಗಿ ತನ್ನಷ್ಟಕ್ಕೇ ಸಾಧಿಸುವುದಿಲ್ಲ.” ಎಫೆಸದ ಕ್ರೈಸ್ತರು “ಪವಿತ್ರ ಜನರೆಲ್ಲರೊಂದಿಗೆ” ನಂಬಿಕೆಯ ಪೂರ್ಣ ವ್ಯಾಪ್ತಿಯನ್ನು ಮಾನಸಿಕವಾಗಿ ಗ್ರಹಿಸಲು ಶ್ರಮಿಸಬೇಕೆಂದು ಪೌಲನು ಅವರಿಗೆ ನೆನಪುಹುಟ್ಟಿಸಿದ್ದನು.—ಎಫೆಸ 3:18ಎ, NW.
11. (ಎ) ಆತ್ಮಿಕ ಪ್ರಗತಿಯನ್ನು ಮಾಡುವುದು ಏನನ್ನು ಅರ್ಥೈಸುವುದಿಲ್ಲ? (ಬಿ) ಪ್ರಗತಿಯನ್ನು ಮಾಡಲಿಕ್ಕೋಸ್ಕರ ನಾವೇನನ್ನು ಮಾಡಬೇಕು?
11 ಆತ್ಮಿಕ ಪ್ರಗತಿಯನ್ನು ಮಾಡುವುದರ ಅರ್ಥ, ನಮ್ಮ ತಲೆಯಲ್ಲಿ ಬರೀ ಜ್ಞಾನ ಮತ್ತು ಬಹಳ ವಿದ್ಯೆಯನ್ನು ತುಂಬಿಸುವುದಲ್ಲವೆಂಬುದು ಪೌಲನ ಮಾತುಗಳಿಂದ ಸ್ಪಷ್ಟವಾಗುತ್ತದೆ. ಒಬ್ಬ ಪ್ರೌಢ ಕ್ರೈಸ್ತನು ತನ್ನ ಪ್ರತಿಭೆಯಿಂದ ಬೇರೆಯವರನ್ನು ಬೆರಗುಗೊಳಿಸುವ ವ್ಯಕ್ತಿಯಾಗಿರುವುದಿಲ್ಲ. ಅದರ ಬದಲಿಗೆ, ಬೈಬಲ್ ಹೇಳುವುದು: “ನೀತಿವಂತರ ಮಾರ್ಗವು ಮಧ್ಯಾಹ್ನದ ವರೆಗೂ ಹೆಚ್ಚುತ್ತಾ ಬರುವ ಬೆಳಗಿನ ಬೆಳಕಿನಂತಿದೆ.” (ಜ್ಞಾನೋಕ್ತಿ 4:18) ಹೌದು, ‘ಬೆಳಗಿನ ಬೆಳಕಿನಂತೆ’ ಆಗುವುದು ಆ “ಮಾರ್ಗ”ವಾಗಿದೆಯೇ ಹೊರತು ಆ ವ್ಯಕ್ತಿಯಲ್ಲ. ಯೆಹೋವನು ತನ್ನ ಜನರಿಗೆ ದಯಪಾಲಿಸುತ್ತಿರುವ ದೇವರ ವಾಕ್ಯದ ಸದಾ ಹೆಚ್ಚುತ್ತಿರುವ ತಿಳಿವಳಿಕೆಯೊಂದಿಗೆ ಸಮವಾಗಿ ಹೆಜ್ಜೆಯನ್ನಿಡಲು ನಾವು ಸದಾ ಪ್ರಯತ್ನ ಮಾಡುವುದಾದರೆ, ಆಗ ನಾವು ಆತ್ಮಿಕ ಪ್ರಗತಿಯನ್ನು ಮಾಡುವೆವು. ಈ ವಿಷಯದಲ್ಲಿ ಸಮವಾಗಿ ಹೆಜ್ಜೆಯಿಡುವುದರ ಅರ್ಥ ಮುಂದೆ ಸಾಗುವುದೇ ಆಗಿದೆ. ಮತ್ತು ಇದನ್ನು ನಾವೆಲ್ಲರೂ ಖಂಡಿತವಾಗಿಯೂ ಮಾಡಸಾಧ್ಯವಿದೆ.—ಕೀರ್ತನೆ 97:11; 119:105.
‘ಆತ್ಮದಿಂದ ಉಂಟಾಗುವ ಫಲವನ್ನು’ ಪ್ರದರ್ಶಿಸಿರಿ
12. ಆತ್ಮಿಕ ಪ್ರಗತಿಗಾಗಿ ನಾವು ಮಾಡುತ್ತಿರುವ ಪ್ರಯತ್ನದಲ್ಲಿ ಆತ್ಮದಿಂದ ಉಂಟಾಗುವ ಫಲವನ್ನು ಪ್ರದರ್ಶಿಸುವುದು ಏಕೆ ಪ್ರಾಮುಖ್ಯವಾಗಿದೆ?
12 ‘ನಂಬಿಕೆಯಿಂದಲೂ ಜ್ಞಾನದಿಂದಲೂ ಉಂಟಾಗುವ ಐಕ್ಯವನ್ನು ಹೊಂದುವುದು’ ಪ್ರಾಮುಖ್ಯವಾಗಿದೆ. ಆದರೆ ಅದೇ ಸಮಯದಲ್ಲಿ ದೇವರ ಆತ್ಮದ ಫಲವನ್ನು ನಮ್ಮ ಜೀವಿತದ ಪ್ರತಿಯೊಂದು ಭಾಗದಲ್ಲೂ ತೋರಿಸುವುದು ಸಹ ಅಷ್ಟೇ ಪ್ರಾಮುಖ್ಯವಾಗಿದೆ. ಏಕೆ? ಏಕೆಂದರೆ ನಾವು ಈಗಾಗಲೇ ನೋಡಿರುವಂತೆ, ಪ್ರೌಢತೆಯು ಆಂತರಿಕವಾದ ಅಥವಾ ಗುಪ್ತವಾದ ಸಂಗತಿಯಾಗಿರುವುದಿಲ್ಲ. ಅದರ ಬದಲು ಅದು ಇತರರಿಗೆ ಪ್ರಯೋಜನವನ್ನು ತರುವ ಹಾಗೂ ಬಲಪಡಿಸುವಂಥ, ಸ್ಪಷ್ಟವಾಗಿ ನೋಡಲು ಸಾಧ್ಯವಿರುವ ವಿಶಿಷ್ಟ ಗುಣಗಳಿಂದ ಗುರುತಿಸಲ್ಪಟ್ಟಿರುತ್ತದೆ. ಆತ್ಮಿಕ ಪ್ರಗತಿಯನ್ನು ಮಾಡುವ ನಮ್ಮ ಪ್ರಯಾಸವು, ಕೇವಲ ಸುಸಂಸ್ಕೃತರಾಗಿ ಕಂಡುಬರುವ ಅಥವಾ ಜಂಬವನ್ನು ತೋರಿಸಲಿಕ್ಕಾಗಿರುವ ಒಂದು ಪ್ರಯತ್ನವಾಗಿರುವುದಿಲ್ಲ. ಅದರ ಬದಲು, ನಾವು ದೇವರ ಆತ್ಮದ ಮಾರ್ಗದರ್ಶನವನ್ನು ಅನುಸರಿಸುತ್ತಾ, ಆತ್ಮಿಕವಾಗಿ ಬೆಳೆಯುತ್ತಿರುವಾಗ, ನಮ್ಮ ಮನೋಭಾವಗಳು ಮತ್ತು ಕೃತ್ಯಗಳಲ್ಲಿ ಒಂದು ಅದ್ಭುತ ರೂಪಾಂತರವಾಗುವುದು. “ಪವಿತ್ರಾತ್ಮನನ್ನು ಅನುಸರಿಸಿ ನಡೆದುಕೊಳ್ಳಿರಿ; ಆಗ ನೀವು ಶರೀರಭಾವದ ಅಭಿಲಾಷೆಗಳನ್ನು ಎಷ್ಟು ಮಾತ್ರಕ್ಕೂ ನೆರವೇರಿಸುವದಿಲ್ಲ” ಎಂದು ಅಪೊಸ್ತಲ ಪೌಲನು ಹೇಳಿದನು.—ಗಲಾತ್ಯ 5:16.
13. ಯಾವ ಬದಲಾವಣೆಯು, ಪ್ರಗತಿಯ ಒಂದು ಸ್ಪಷ್ಟ ಸೂಚನೆಯಾಗಿದೆ?
13 ಪೌಲನು ಮುಂದುವರಿಸುತ್ತಾ, “ಶರೀರಭಾವದ ಕರ್ಮಗಳ” ಒಂದು ಪಟ್ಟಿಮಾಡಿದನು. ಮತ್ತು ಇವು ಬಹಳಷ್ಟಿವೆ ಹಾಗೂ “ಪ್ರಸಿದ್ಧ”ವಾಗಿವೆ. ಒಬ್ಬ ವ್ಯಕ್ತಿಯು ದೇವರ ಆವಶ್ಯಕತೆಗಳ ಮೌಲ್ಯವೇನೆಂಬುದನ್ನು ಅರ್ಥಮಾಡಿಕೊಳ್ಳುವ ಮುಂಚೆ, ಅವನ ಜೀವಿತವು ಲೋಕದ ರೀತಿಗಳಿಗನುಸಾರವಾಗಿರುತ್ತದೆ ಮತ್ತು ಪೌಲನು ತಿಳಿಸಿದಂಥ ಈ ವಿಷಯಗಳಲ್ಲಿ ಕೆಲವು ಅವನಲ್ಲಿ ಇರಬಹುದು: “ಜಾರತ್ವ ಬಂಡುತನ ನಾಚಿಕೆಗೇಡಿತನ ವಿಗ್ರಹಾರಾಧನೆ ಮಾಟ ಹಗೆತನ ಜಗಳ ಹೊಟ್ಟೇಕಿಚ್ಚು ಸಿಟ್ಟು ಕಕ್ಷಭೇದ ಭಿನ್ನಮತ ಮತ್ಸರ ಕುಡಿಕತನ ದುಂದೌತನ ಇಂಥವುಗಳೇ.” (ಗಲಾತ್ಯ 5:19-21) ಆದರೆ ಒಬ್ಬ ವ್ಯಕ್ತಿಯು ಆತ್ಮಿಕ ಪ್ರಗತಿಯನ್ನು ಮಾಡುತ್ತಾ ಹೋದಂತೆ, ಕ್ರಮೇಣವಾಗಿ ಅವನು ಈ ಅನಪೇಕ್ಷಣೀಯವಾದ “ಶರೀರಭಾವದ ಕರ್ಮಗಳ” ಮೇಲೆ ಜಯಸಾಧಿಸುತ್ತಾನೆ ಮತ್ತು ಅದರ ಸ್ಥಳದಲ್ಲಿ ‘ಆತ್ಮದಿಂದ ಉಂಟಾಗುವ ಫಲವನ್ನು’ ಬೆಳೆಸಿಕೊಳ್ಳುತ್ತಾನೆ. ಹೊರಗಿನಿಂದ ನೋಡಬಹುದಾದ ಈ ಬದಲಾವಣೆಯು, ಆ ವ್ಯಕ್ತಿಯು ಕ್ರೈಸ್ತ ಪ್ರೌಢತೆಯತ್ತ ಸಾಗುತ್ತಿದ್ದಾನೆಂಬುದರ ಸ್ಪಷ್ಟ ಸೂಚನೆಯಾಗಿದೆ.—ಗಲಾತ್ಯ 5:22.
14. “ಶರೀರಭಾವದ ಕರ್ಮಗಳು” ಮತ್ತು ‘ಆತ್ಮದಿಂದ ಉಂಟಾಗುವ ಫಲ’ ಎಂಬ ಎರಡು ಅಭಿವ್ಯಕ್ತಿಗಳನ್ನು ವಿವರಿಸಿರಿ.
14 “ಶರೀರಭಾವದ ಕರ್ಮಗಳು” ಮತ್ತು ‘ಆತ್ಮದಿಂದ ಉಂಟಾಗುವ ಫಲ’ ಎಂಬ ಎರಡೂ ಅಭಿವ್ಯಕ್ತಿಗಳನ್ನು ನಾವು ಗಮನಿಸಬೇಕು. “ಕರ್ಮಗಳು” ಒಬ್ಬ ವ್ಯಕ್ತಿಯ ಕೃತ್ಯಗಳ ಫಲಿತಾಂಶವಾಗಿವೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಪೌಲನು ಶರೀರದ ಕರ್ಮಗಳೆಂದು ಪಟ್ಟಿಮಾಡುವ ವಿಷಯಗಳು, ಒಬ್ಬ ವ್ಯಕ್ತಿಯು ಬೇಕುಬೇಕೆಂದೇ ಮಾಡುವ ಕೃತ್ಯಗಳ ಫಲಿತಾಂಶವಾಗಿರಬಹುದು, ಇಲ್ಲವೇ ಪಾಪಪೂರ್ಣ ಮಾನವ ಶರೀರದ ಪ್ರಭಾವವೂ ಆಗಿರಬಹುದು. (ರೋಮಾಪುರ 1:24, 28; 7:21-25) ಆದರೆ ಇನ್ನೊಂದು ಬದಿಯಲ್ಲಿ, ‘ಆತ್ಮದಿಂದ ಉಂಟಾಗುವ ಫಲ’ ಎಂಬ ಅಭಿವ್ಯಕ್ತಿಯು, ಅಲ್ಲಿ ಪಟ್ಟಿಮಾಡಲ್ಪಟ್ಟಿರುವ ಗುಣಗಳು, ವ್ಯಕ್ತಿತ್ವ ಬೆಳವಣಿಗೆ ಅಥವಾ ವ್ಯಕ್ತಿತ್ವವನ್ನು ಉತ್ತಮಗೊಳಿಸುವುದೆಂದು ಹೇಳಲಾಗುವ ಪ್ರಯತ್ನಗಳ ಫಲಿತಾಂಶಗಳಲ್ಲ. ಬದಲಾಗಿ ಒಬ್ಬ ವ್ಯಕ್ತಿಯ ಮೇಲೆ ದೇವರಾತ್ಮದ ಕಾರ್ಯಾಚರಣೆಯ ಫಲಿತಾಂಶಗಳೆಂಬುದನ್ನು ಅವು ಸೂಚಿಸುತ್ತವೆ. ಒಂದು ಮರವನ್ನು ಚೆನ್ನಾಗಿ ನೋಡಿಕೊಂಡರೆ ಅದು ಹೇಗೆ ಫಲವನ್ನು ಕೊಡುತ್ತದೊ, ಹಾಗೆಯೇ ಪವಿತ್ರಾತ್ಮವು ಒಬ್ಬ ವ್ಯಕ್ತಿಯ ಜೀವಿತದಲ್ಲಿ ತಡೆಯಿಲ್ಲದೆ ಕಾರ್ಯನಡೆಸುವಾಗ, ಆ ವ್ಯಕ್ತಿಯು ಆತ್ಮದಿಂದ ಉಂಟಾಗುವ ಫಲವನ್ನು ಪ್ರದರ್ಶಿಸುವನು.—ಕೀರ್ತನೆ 1:1-3.
15. ‘ಆತ್ಮದಿಂದ ಉಂಟಾಗುವ ಫಲ’ದಲ್ಲಿ ಎಲ್ಲ ಗುಣಗಳಿಗೆ ಗಮನಕೊಡುವುದು ಏಕೆ ಪ್ರಾಮುಖ್ಯವಾಗಿದೆ?
15 ಪೌಲನು ತಿಳಿಸಿದಂಥ ಆ ಎಲ್ಲ ಅಪೇಕ್ಷಣೀಯ ಗುಣಗಳನ್ನು ಒಳಗೂಡಿಸಲು ಅವನು ಉಪಯೋಗಿಸಿದ “ಫಲ” ಎಂಬ ಪದವು, ಪರಿಗಣಿಸಲ್ಪಡಬೇಕಾದ ಇನ್ನೊಂದು ಅಂಶವಾಗಿದೆ. ಆತ್ಮವು ವೈವಿಧ್ಯಮಯ ಗುಣಗಳನ್ನು ಉಂಟುಮಾಡುವುದು, ನಾವು ಅವುಗಳಿಂದ ನಮ್ಮ ಅಚ್ಚುಮೆಚ್ಚಿನ ಗುಣವನ್ನು ಆಯ್ಕೆಮಾಡಿ ತೆಗೆಯಲಿಕ್ಕಲ್ಲ. ಪೌಲನು ಪಟ್ಟಿಮಾಡಿರುವ ಪ್ರೀತಿ, ಸಂತೋಷ, ಸಮಾಧಾನ, ದೀರ್ಘಶಾಂತಿ, ದಯೆ, ಉಪಕಾರ, ನಂಬಿಕೆ, ಸಾಧುತ್ವ, ಶಮೆದಮೆ ಎಂಬ ಎಲ್ಲಾ ಗುಣಗಳು ಒಂದೇ ಸಮವಾಗಿ ಪ್ರಾಮುಖ್ಯವಾಗಿವೆ. ಇವೆಲ್ಲವೂ ಜೊತೆಯಾಗಿ, ಹೊಸ ಕ್ರೈಸ್ತ ವ್ಯಕ್ತಿತ್ವವನ್ನು ಸಾಧ್ಯಗೊಳಿಸುತ್ತವೆ. (ಎಫೆಸ 4:24; ಕೊಲೊಸ್ಸೆ 3:10) ಹೀಗಿರುವುದರಿಂದ, ಈ ಗುಣಗಳಲ್ಲಿ ಕೆಲವೊಂದು ಗುಣಗಳು ನಮ್ಮ ಸ್ವಂತ ವ್ಯಕ್ತಿತ್ವ ಮತ್ತು ಪ್ರವೃತ್ತಿಗಳ ಕಾರಣದಿಂದ ನಮ್ಮ ಜೀವಿತದಲ್ಲಿ ಹೆಚ್ಚು ಎದ್ದುಕಾಣುತ್ತಿರುವುದಾದರೂ, ಪೌಲನು ತಿಳಿಸಿರುವ ಎಲ್ಲ ಗುಣಗಳಿಗೆ ನಾವು ಗಮನಕೊಡುವುದು ಪ್ರಾಮುಖ್ಯವಾಗಿದೆ. ಹಾಗೆ ಮಾಡುವುದರಿಂದ, ನಾವು ನಮ್ಮ ಜೀವಿತದಲ್ಲಿ ಕ್ರಿಸ್ತಸದೃಶ ವ್ಯಕ್ತಿತ್ವವನ್ನು ಹೆಚ್ಚು ಪೂರ್ಣವಾಗಿ ಪ್ರತಿಬಿಂಬಿಸಲು ಸಾಧ್ಯವಾಗುವುದು.—1 ಪೇತ್ರ 2:12, 21.
16. ಕ್ರೈಸ್ತ ಪ್ರೌಢತೆಯನ್ನು ತಲಪುವ ನಮ್ಮ ಪ್ರಯತ್ನದ ಗುರಿಯೇನಾಗಿದೆ, ಮತ್ತು ಅದನ್ನು ನಾವು ಹೇಗೆ ತಲಪಬಹುದು?
16 ಪೌಲನ ಚರ್ಚೆಯಿಂದ ನಾವು ಕಲಿಯಬಹುದಾದ ಪ್ರಾಮುಖ್ಯ ಪಾಠವೇನೆಂದರೆ, ನಾವು ಕ್ರೈಸ್ತ ಪ್ರೌಢತೆಯನ್ನು ತಲಪಲು ಮಾಡುವ ಪ್ರಯತ್ನದಲ್ಲಿ, ತುಂಬ ಜ್ಞಾನ ಮತ್ತು ವಿದ್ಯೆಯನ್ನು ಪಡೆಯುವುದು ಅಥವಾ ಸುಸಂಸ್ಕೃತ ವ್ಯಕ್ತಿತ್ವ ಲಕ್ಷಣಗಳನ್ನು ಬೆಳೆಸಿಕೊಳ್ಳುವುದು ನಮ್ಮ ಉದ್ದೇಶವಾಗಿರುವುದಿಲ್ಲ. ಬದಲಾಗಿ, ನಮ್ಮ ಜೀವಿತದಲ್ಲಿ ದೇವರಾತ್ಮವು ಯಾವುದೇ ತಡೆಯಿಲ್ಲದೆ ಹರಿಯಬೇಕೆಂಬುದೇ ನಮ್ಮ ಉದ್ದೇಶವಾಗಿರುತ್ತದೆ. ಎಷ್ಟರ ಮಟ್ಟಿಗೆ ನಮ್ಮ ಯೋಚನೆ ಮತ್ತು ಕಾರ್ಯಗಳು ದೇವರ ಆತ್ಮದ ಮಾರ್ಗದರ್ಶನಕ್ಕೆ ಪ್ರತಿಸ್ಪಂದಿಸುತ್ತವೊ ಅಷ್ಟರ ವರೆಗೆ ನಾವು ಆತ್ಮಿಕವಾಗಿ ಪ್ರೌಢರಾಗಬಲ್ಲೆವು. ಈ ಗುರಿಯನ್ನು ನಾವು ಹೇಗೆ ತಲಪಬಲ್ಲೆವು? ದೇವರ ಆತ್ಮದ ಪ್ರಭಾವಕ್ಕೆ ನಾವು ನಮ್ಮ ಹೃದಮನಗಳನ್ನು ತೆರೆದಿಡಬೇಕು. ಇದರಲ್ಲಿ, ಕ್ರೈಸ್ತ ಕೂಟಗಳಿಗೆ ನಂಬಿಗಸ್ತಿಕೆಯಿಂದ ಹಾಜರಾಗುವುದು ಮತ್ತು ಅದರಲ್ಲಿ ಭಾಗವಹಿಸುವುದು ಸೇರಿರುತ್ತದೆ. ನಾವು ದೇವರ ವಾಕ್ಯವನ್ನು ಕ್ರಮವಾಗಿ ಅಭ್ಯಾಸಮಾಡಬೇಕು ಮತ್ತು ಮನನಮಾಡಬೇಕು. ಅದರ ಮೂಲತತ್ವಗಳು, ಇತರರೊಂದಿಗಿನ ನಮ್ಮ ವ್ಯವಹಾರಗಳನ್ನು ಮತ್ತು ನಾವು ಮಾಡುವ ಆಯ್ಕೆಗಳು ಹಾಗೂ ನಿರ್ಣಯಗಳನ್ನು ಮಾರ್ಗದರ್ಶಿಸುವಂತೆ ಬಿಡಬೇಕು. ಆಗ ಖಂಡಿತವಾಗಿಯೂ ನಮ್ಮ ಪ್ರಗತಿಯು ಸ್ಪಷ್ಟವಾಗಿ ಪ್ರಸಿದ್ಧವಾಗುವುದು.
ದೇವರ ಮಹಿಮೆಗಾಗಿ ಪ್ರಗತಿಯನ್ನು ಮಾಡಿರಿ
17. ಪ್ರಗತಿಯನ್ನು ಮಾಡುವುದು, ನಮ್ಮ ಸ್ವರ್ಗೀಯ ತಂದೆಗೆ ಮಹಿಮೆಯನ್ನು ತರುವುದರೊಂದಿಗೆ ಹೇಗೆ ಸಂಬಂಧಿಸಿದೆ?
17 ಕಟ್ಟಕಡೆಗೆ, ನಮ್ಮ ಪ್ರಗತಿಯನ್ನು ಪ್ರಸಿದ್ಧಪಡಿಸುವುದು ನಮಗಲ್ಲ, ಬದಲಾಗಿ ಆತ್ಮಿಕ ಪ್ರೌಢತೆಯನ್ನು ತಲಪಲು ಸಾಧ್ಯಗೊಳಿಸುವ ನಮ್ಮ ಸ್ವರ್ಗೀಯ ತಂದೆಯಾದ ಯೆಹೋವನಿಗೆ ಮಹಿಮೆ ಮತ್ತು ಸ್ತುತಿಯನ್ನು ತರುತ್ತದೆ. ಯೇಸು ಕೊಲ್ಲಲ್ಪಡುವ ಹಿಂದಿನ ರಾತ್ರಿ ತನ್ನ ಶಿಷ್ಯರಿಗೆ ಹೇಳಿದ್ದು: “ನೀವು ಬಹಳ ಫಲಕೊಡುವದರಿಂದಲೇ ನನ್ನ ತಂದೆಗೆ ಮಹಿಮೆ ಉಂಟಾಗುವದು; ಮತ್ತು ನನ್ನ ಶಿಷ್ಯರಾಗುವಿರಿ.” (ಯೋಹಾನ 15:8) ಆ ಶಿಷ್ಯರು ಪ್ರದರ್ಶಿಸಿದಂಥ ಆತ್ಮದ ಫಲ ಹಾಗೂ ತಮ್ಮ ಶುಶ್ರೂಷೆಯಲ್ಲಿ ಅವರು ತಂದಂಥ ರಾಜ್ಯ ಫಲದಿಂದಾಗಿ, ಅವರು ಯೆಹೋವನಿಗೆ ಮಹಿಮೆಯನ್ನು ತಂದರು.—ಅ. ಕೃತ್ಯಗಳು 11:4, 18; 13:48.
18. (ಎ) ಇಂದು ಯಾವ ಆನಂದಭರಿತ ಕೊಯ್ಲಿನ ಕೆಲಸವು ನಡೆಯುತ್ತಾ ಇದೆ? (ಬಿ) ಈ ಕೊಯ್ಲು ಯಾವ ಪಂಥಾಹ್ವಾನವನ್ನು ಮುಂದಿಡುತ್ತದೆ?
18 ಇಂದು ಯೆಹೋವನ ಜನರು ಭೌಗೋಲಿಕವಾದ ಆತ್ಮಿಕ ಕೊಯ್ಲಿನ ಕೆಲಸಮಾಡುತ್ತಿರುವಾಗ, ಆತನ ಆಶೀರ್ವಾದವು ಅವರ ಮೇಲಿದೆ. ಈಗ ಅನೇಕ ವರ್ಷಗಳಿಂದ, ಪ್ರತಿ ವರ್ಷ ಸುಮಾರು 3,00,000 ಹೊಸ ವ್ಯಕ್ತಿಗಳು ಯೆಹೋವನಿಗೆ ತಮ್ಮನ್ನು ಸಮರ್ಪಿಸಿಕೊಂಡು, ನೀರಿನ ದೀಕ್ಷಾಸ್ನಾನದ ಮೂಲಕ ತಮ್ಮ ಸಮರ್ಪಣೆಯನ್ನು ಸಂಕೇತಿಸಿಕೊಂಡಿದ್ದಾರೆ. ಇದು ನಮ್ಮನ್ನು ಸಂತೋಷಪಡಿಸುತ್ತದೆ ಮತ್ತು ನಿಸ್ಸಂದೇಹವಾಗಿಯೂ ಯೆಹೋವನ ಮನಸ್ಸನ್ನೂ ಸಂತೋಷಪಡಿಸುತ್ತದೆ. (ಜ್ಞಾನೋಕ್ತಿ 27:11) ಆದರೆ, ಇದು ನಿರಂತರವಾಗಿಯೂ ಯೆಹೋವನಿಗೆ ಆನಂದ ಮತ್ತು ಸ್ತುತಿಯ ಮೂಲವಾಗಿರಲಿಕ್ಕಾಗಿ, ಆ ಎಲ್ಲ ಹೊಸ ವ್ಯಕ್ತಿಗಳು ‘[ಕ್ರಿಸ್ತನಲ್ಲಿ] ಬೇರೂರಿಕೊಂಡು ಭಕ್ತಿವೃದ್ಧಿಯನ್ನು ಹೊಂದಿ, ಕ್ರಿಸ್ತನಂಬಿಕೆಯಲ್ಲಿ ನೆಲೆಗೊಳ್ಳಬೇಕು.’ (ಕೊಲೊಸ್ಸೆ 2:6, 7) ಇದು ದೇವಜನರ ಮುಂದೆ ಎರಡು ಅಂಶಗಳುಳ್ಳ ಪಂಥಾಹ್ವಾನವನ್ನು ಇಡುತ್ತದೆ. ಒಂದು ಕಡೆ, ನೀವು ಹೊಸದಾಗಿ ದೀಕ್ಷಾಸ್ನಾನ ಪಡೆದುಕೊಂಡಿರುವ ಒಬ್ಬ ವ್ಯಕ್ತಿಯಾಗಿರುವಲ್ಲಿ, ‘ನಿಮ್ಮ ಅಭಿವೃದ್ಧಿಯು ಎಲ್ಲರಿಗೆ ಪ್ರಸಿದ್ಧವಾಗುವುದರ’ ಮೇಲೆ ನಿಮ್ಮ ಇಡೀ ಗಮನವನ್ನು ಕೇಂದ್ರೀಕರಿಸುವ ಪಂಥಾಹ್ವಾನವನ್ನು ನೀವು ಸ್ವೀಕರಿಸುವಿರೊ? ಇನ್ನೊಂದು ಕಡೆಯಲ್ಲಿ, ಒಂದುವೇಳೆ ನೀವು ಈಗಾಗಲೇ ಸುಮಾರು ಸಮಯದಿಂದ ಸತ್ಯದಲ್ಲಿರುವಲ್ಲಿ, ಹೊಸಬರ ಆತ್ಮಿಕ ಕ್ಷೇಮವನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ತೆಗೆದುಕೊಳ್ಳುವ ಪಂಥಾಹ್ವಾನವನ್ನು ಸ್ವೀಕರಿಸುವಿರೊ? ಈ ಎರಡೂ ಸಂದರ್ಭಗಳಲ್ಲಿ, ಪ್ರೌಢತೆಯತ್ತ ಸಾಗುತ್ತಾ ಹೋಗುವ ಅಗತ್ಯವಿದೆಯೆಂಬುದು ಸ್ಪಷ್ಟ.—ಫಿಲಿಪ್ಪಿ 3:16; ಇಬ್ರಿಯ 6:1.
19. ನಿಮ್ಮ ಅಭಿವೃದ್ಧಿಯು ಎಲ್ಲರಿಗೂ ಪ್ರಸಿದ್ಧವಾಗುವಂತೆ ಮಾಡುವಲ್ಲಿ, ನಿಮಗೆ ಯಾವ ಸುಯೋಗ ಮತ್ತು ಆಶೀರ್ವಾದಗಳು ಸಿಗುವವು?
19 ತಮ್ಮ ಅಭಿವೃದ್ಧಿಯು ಎಲ್ಲರಿಗೂ ಪ್ರಸಿದ್ಧವಾಗುವಂತೆ ಕಠಿನವಾಗಿ ಶ್ರಮಿಸುವವರೆಲ್ಲರ ಮುಂದೆ ಅದ್ಭುತವಾದ ಆಶೀರ್ವಾದಗಳು ಕಾದಿರಿಸಲ್ಪಟ್ಟಿವೆ. ಅಭಿವೃದ್ಧಿಯನ್ನು ಮಾಡುವಂತೆ ತಿಮೊಥೆಯನನ್ನು ಪ್ರೇರೇಪಿಸಿದ ನಂತರ ಪೌಲನು ಹೇಳಿದ ಉತ್ತೇಜನದಾಯಕ ಮಾತುಗಳನ್ನು ನೆನಪಿಗೆ ತಂದುಕೊಳ್ಳಿರಿ: “ನಿನ್ನ ವಿಷಯದಲ್ಲಿಯೂ ನಿನ್ನ ಉಪದೇಶದ ವಿಷಯದಲ್ಲಿಯೂ ಎಚ್ಚರಿಕೆಯಾಗಿರು. ನೀನು ಈ ಕಾರ್ಯಗಳಲ್ಲಿ ನಿರತನಾಗಿರು; ಹೀಗಿರುವದರಿಂದ ನಿನ್ನನ್ನೂ ನಿನ್ನ ಉಪದೇಶ ಕೇಳುವವರನ್ನೂ ರಕ್ಷಿಸುವಿ.” (1 ತಿಮೊಥೆಯ 4:16) ಶ್ರದ್ಧೆಯಿಂದ ನಿಮ್ಮ ಅಭಿವೃದ್ಧಿಯನ್ನು ಪ್ರಸಿದ್ಧಪಡಿಸುವ ಮೂಲಕ, ದೇವರ ನಾಮವನ್ನು ಮಹಿಮೆಪಡಿಸುವ ಮತ್ತು ಆತನ ಆಶೀರ್ವಾದಗಳಲ್ಲಿ ಆನಂದಿಸುವ ಸುಯೋಗದಲ್ಲಿ ನೀವು ಕೂಡ ಪಾಲಿಗರಾಗಬಹುದು.
[ಅಧ್ಯಯನ ಪ್ರಶ್ನೆಗಳು]
[ಪುಟ 13ರಲ್ಲಿರುವ ಚಿತ್ರ]
ಒಂದು ಹಣ್ಣು ಮಾಗಿರುವುದನ್ನು ಅಥವಾ ಪಕ್ವವಾಗಿರುವುದನ್ನು ನಾವು ಸ್ಪಷ್ಟವಾಗಿ ನೋಡಸಾಧ್ಯವಿದೆ
[ಪುಟ 15ರಲ್ಲಿರುವ ಚಿತ್ರ]
ಪ್ರಕಟಿಸಲ್ಪಟ್ಟಿರುವ ಸತ್ಯದೊಂದಿಗೆ ಸಮವಾಗಿ ಹೆಜ್ಜೆಯಿಡುವ ಮೂಲಕ ನಾವು ಆತ್ಮಿಕ ಅಭಿವೃದ್ಧಿಯನ್ನು ಮಾಡುತ್ತೇವೆ
[ಪುಟ 17ರಲ್ಲಿರುವ ಚಿತ್ರ]
ನಾವು ‘ಆತ್ಮದ ಫಲವನ್ನು’ ತೋರ್ಪಡಿಸುವಂತೆ ಪ್ರಾರ್ಥನೆಯು ನಮಗೆ ಸಹಾಯಮಾಡುತ್ತದೆ