ದೇವರ ಅದ್ಭುತಕಾರ್ಯಗಳಿಗೆ ಗಮನಕೊಡಿರಿ
ದೇವರ ಅದ್ಭುತಕಾರ್ಯಗಳಿಗೆ ಗಮನಕೊಡಿರಿ
“ಯೆಹೋವನೇ, ನನ್ನ ದೇವರೇ, ನಿನಗೆ ಸಮಾನನಾದ ದೇವರು ಯಾರು? ನಮ್ಮ ಹಿತಕ್ಕಾಗಿ ನೀನು ಮಾಡಿದ ಆಲೋಚನೆಗಳೂ ಅದ್ಭುತಕಾರ್ಯಗಳೂ ಎಷ್ಟೋ ವಿಶೇಷವಾಗಿವೆ.”—ಕೀರ್ತನೆ 40:5.
1, 2. ದೇವರ ಅದ್ಭುತಕಾರ್ಯಗಳ ಕುರಿತಾಗಿ ನಮ್ಮ ಬಳಿ ಯಾವ ಪುರಾವೆಯಿದೆ, ಮತ್ತು ಇದು ನಮಗೆ ಏನನ್ನು ಮಾಡುವಂತೆ ಪ್ರಚೋದಿಸುವುದು?
ನೀವು ಬೈಬಲನ್ನು ಓದುವಾಗ, ದೇವರು ತನ್ನ ಪ್ರಾಚೀನಕಾಲದ ಜನರಿಗೆ ಅಂದರೆ ಇಸ್ರಾಯೇಲಿಗಾಗಿ ಅದ್ಭುತ ಕಾರ್ಯಗಳನ್ನು ಮಾಡಿದನೆಂಬುದನ್ನು ನೀವು ಸುಲಭವಾಗಿ ಗ್ರಹಿಸಬಹುದು. (ಯೆಹೋಶುವ 3:5; ಕೀರ್ತನೆ 106:7, 21, 22) ಇಂದು ಯೆಹೋವನು ಅದೇ ರೀತಿಯಲ್ಲಿ ಮಾನವ ವ್ಯವಹಾರಗಳಲ್ಲಿ ಹಸ್ತಕ್ಷೇಪಮಾಡದಿದ್ದರೂ, ಆತನ ಅದ್ಭುತಕಾರ್ಯಗಳ ಕುರಿತಾಗಿ ನಮ್ಮ ಸುತ್ತಲೂ ಸಮೃದ್ಧವಾದ ರುಜುವಾತಿದೆ. ಆದುದರಿಂದ, “ಯೆಹೋವನೇ, ನಿನ್ನ ಕೈಕೆಲಸಗಳು ಎಷ್ಟೋ ವಿಧವಾಗಿವೆ. ಅವುಗಳನ್ನೆಲ್ಲಾ ಜ್ಞಾನದಿಂದಲೇ ಮಾಡಿದ್ದೀ; ಭೂಲೋಕವು ನಿನ್ನ ಆಸ್ತಿಯಿಂದ ತುಂಬಿರುತ್ತದೆ” ಎಂದು ಹೇಳುವುದರಲ್ಲಿ ಕೀರ್ತನೆಗಾರನೊಂದಿಗೆ ಜೊತೆಗೂಡಲು ನಮಗೆ ಸಕಾರಣವಿದೆ.—ಕೀರ್ತನೆ 104:24; 148:1-5.
2 ಸೃಷ್ಟಿಕರ್ತನ ಚಟುವಟಿಕೆಗಳ ವಿಷಯದಲ್ಲಿರುವ ಅಂಥ ಸ್ಪಷ್ಟವಾದ ರುಜುವಾತನ್ನು ಇಂದು ಅನೇಕರು ಅಲಕ್ಷಿಸುತ್ತಾರೆ ಇಲ್ಲವೇ ತಿರಸ್ಕರಿಸುತ್ತಾರೆ. (ರೋಮಾಪುರ 1:20) ನಾವಾದರೊ ಅವುಗಳ ಕುರಿತಾಗಿ ಆಲೋಚಿಸಿ, ನಮ್ಮ ನಿರ್ಮಾಣಿಕನ ಮುಂದೆ ನಮಗಿರುವ ಸ್ಥಾನ ಮತ್ತು ಕರ್ತವ್ಯಕ್ಕೆ ಸಂಬಂಧಿಸಿರುವ ತೀರ್ಮಾನಗಳನ್ನು ಮಾಡುವುದು ಉಪಯುಕ್ತವೂ ಸೂಕ್ತವೂ ಆಗಿದೆ. ಇದನ್ನು ಮಾಡಲಿಕ್ಕಾಗಿ ಯೋಬ ಅತ್ಯುತ್ಕೃಷ್ಟವಾದ ಸಹಾಯಕಗಳಾಗಿವೆ. ಏಕೆಂದರೆ ಆ ಅಧ್ಯಾಯಗಳಲ್ಲಿ, ಯೆಹೋವನು ಯೋಬನ ಗಮನವನ್ನು ತನ್ನ ಅದ್ಭುತಕಾರ್ಯಗಳ ನಿರ್ದಿಷ್ಟ ಅಂಶಗಳ ಕಡೆಗೆ ಸೆಳೆಯುತ್ತಾನೆ. ದೇವರು ಎಬ್ಬಿಸಿದಂಥ ಕೆಲವೊಂದು ಸಮಂಜಸವಾದ ವಿವಾದಾಂಶಗಳನ್ನು ಪರಿಗಣಿಸಿರಿ. 38ರಿಂದ 41ನೆಯ ಅಧ್ಯಾಯಗಳು
ಶಕ್ತಿಶಾಲಿಯೂ ಅದ್ಭುತಕರವೂ ಆದ ಕಾರ್ಯಗಳು
3. ಯೋಬ 38:22, 23, 25-29ರಲ್ಲಿ ದಾಖಲಿಸಲ್ಪಟ್ಟಿರುವಂತೆ, ದೇವರು ಯಾವ ವಿಷಯಗಳ ಕುರಿತಾಗಿ ಕೇಳಿದನು?
3 ಒಂದು ಹಂತದಲ್ಲಿ ದೇವರು ಯೋಬನನ್ನು ಕೇಳಿದ್ದು: “ನಾನು ಇಕ್ಕಟ್ಟಿನ ಕಾಲಕ್ಕಾಗಿಯೂ ಯುದ್ಧಕದನಗಳ ದಿನಕ್ಕಾಗಿಯೂ ಇಟ್ಟುಕೊಂಡಿರುವ ಹಿಮದ ಭಂಡಾರಗಳನ್ನು ಪ್ರವೇಶಿಸಿದ್ದೆಯೋ? ಕಲ್ಮಳೆಯ ಬೊಕ್ಕಸಗಳನ್ನು ನೋಡಿದ್ದೆಯಾ?” ನಮ್ಮ ಭೂಮಿಯ ಅನೇಕ ಪ್ರದೇಶಗಳಲ್ಲಿ ಹಿಮ ಮತ್ತು ಆಲಿಕಲ್ಲುಗಳು ದೈನಂದಿನ ಜೀವಿತದ ಭಾಗವಾಗಿವೆ. ದೇವರು ಮುಂದುವರಿಸುತ್ತಾ ಕೇಳಿದ್ದು: “ನಿರ್ಜನಪ್ರದೇಶದಲ್ಲಿಯೂ ಮನುಷ್ಯರೇ ಇಲ್ಲದ ಕಾಡಿನಲ್ಲಿಯೂ ಮಳೆಯನ್ನು ಸುರಿಸಿ ಹಾಳುಬೀಳಾದ ಭೂಮಿಯನ್ನು ತೃಪ್ತಿಪಡಿಸಿ ಹಸಿಯ ಹುಲ್ಲನ್ನು ಬೆಳೆಯಿಸಬೇಕೆಂದು ವೃಷ್ಟಿಯ ಪ್ರವಾಹಕ್ಕೆ ಕಾಲಿವೆಯನ್ನೂ ಗರ್ಜಿಸುವ ಸಿಡಿಲಿಗೆ ದಾರಿಯನ್ನೂ ಯಾರು ಕಡಿದರು? ಮಳೆಗೆ ತಂದೆಯುಂಟೋ? ಮಂಜಿನ ಹನಿಗಳನ್ನು ಪಡೆದವನು ಯಾರು? ಹಿಮದ ಗಡ್ಡೆಯು ಯಾರ ಗರ್ಭದಿಂದ ಹೊರಟಿತು? ಆಕಾಶದ ಇಬ್ಬನಿಯನ್ನು ಯಾರು ಹೆತ್ತರು?”—ಯೋಬ 38:22, 23, 25-29.
4-6. ಹಿಮದ ಕುರಿತಾದ ಮನುಷ್ಯನ ಜ್ಞಾನವು ಯಾವ ಅರ್ಥದಲ್ಲಿ ಅಪೂರ್ಣವಾಗಿದೆ?
4 ತ್ವರಿತಗತಿಯಿಂದ ಮುಂದೆ ಸಾಗುತ್ತಿರುವ ಒಂದು ಸಮಾಜದಲ್ಲಿ ಜೀವಿಸುತ್ತಿದ್ದು, ಪ್ರಯಾಣಿಸಬೇಕಾಗಿರುವ ಕೆಲವರಿಗೆ, ಹಿಮವು ಒಂದು ತಡೆಯಂತೆ ತೋರಬಹುದು. ಆದರೆ ಇನ್ನಿತರರಿಗೆ ಹಿಮವು ಹರ್ಷವನ್ನು ತರುತ್ತದೆ. ಇದು ತರುವಂಥ ಚಳಿಗಾಲವು ಒಂದು ಅದ್ಭುತ ಲೋಕವನ್ನೇ ಸೃಷ್ಟಿಸುತ್ತದೆ ಮತ್ತು ಅನೇಕ ವಿಶೇಷ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡುತ್ತದೆ. ದೇವರ ಪ್ರಶ್ನೆಗನುಸಾರ, ಹಿಮದ ಕುರಿತಾಗಿ ನಮಗೆ ಪ್ರತಿಯೊಂದು ವಿಷಯವೂ ತಿಳಿದಿದೆಯೊ, ಅದು ಹೇಗೆ ತೋರುತ್ತದೆಂದು ತಿಳಿದಿದೆಯೊ? ಹಿಮದ ರಾಶಿ ಹೇಗೆ ತೋರುತ್ತದೆ ಎಂಬುದು ನಮಗೆ ಗೊತ್ತಿದೆ. ಅದನ್ನು ನಾವು ಫೋಟೋಗಳಲ್ಲಿ ನೋಡಿರಬಹುದು ಅಥವಾ ನೇರವಾಗಿ ನೋಡಿರಬಹುದು. ಆದರೆ ಹಿಮದ ಒಂದೊಂದು ಹರಳಿನ ಕುರಿತಾಗಿ ಏನು? ಅವು ಹೇಗೆ ಕಾಣುತ್ತವೆ ಎಂಬುದು ನಿಮಗೆ ಗೊತ್ತಿದೆಯೊ, ಅವು ಹೇಗೆ ಉಂಟಾಗುತ್ತವೆಂದು ಪರೀಕ್ಷಿಸಿದ್ದೀರೊ?
5 ಕೆಲವರು ಹಿಮದ ಹರಳುಗಳ ಬಗ್ಗೆ ಅನೇಕ ದಶಕಗಳಿಂದ ಅಧ್ಯಯನ ನಡೆಸಿದ್ದಾರೆ ಮತ್ತು ಅವುಗಳ ಛಾಯಾಚಿತ್ರಗಳನ್ನು ತೆಗೆದಿದ್ದಾರೆ. ಹಿಮದ ಒಂದೇ ಒಂದು ಹರಳು, ವಿವಿಧ ಸುಂದರ ವಿನ್ಯಾಸಗಳುಳ್ಳ ಮಂಜುಗಡ್ಡೆಯ ನೂರಕ್ಕಿಂತಲೂ ಹೆಚ್ಚು ನವಿರಾದ ಸ್ಫಟಿಕಗಳಿಂದ ರಚಿಸಲ್ಪಟ್ಟಿರುತ್ತದೆ. ವಾತಾವರಣ (ಇಂಗ್ಲಿಷ್) ಎಂಬ ಪುಸ್ತಕದಲ್ಲಿ ನಾವು ಹೀಗೆ ಓದುತ್ತೇವೆ: “ಹಿಮದ ಹರಳುಗಳ ವೈವಿಧ್ಯತೆಗೆ ಕೊನೆಯಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿಯಾಗಿದೆ. ಮತ್ತು ಅವುಗಳಲ್ಲಿ ಒಂದು ಹರಳು ಇನ್ನೊಂದರಂತೆ ಕಾಣುವುದನ್ನು ನಿಷೇಧಿಸುವಂತಹ ಯಾವುದೇ ನೈಸರ್ಗಿಕ ನಿಯಮವಿಲ್ಲ ಎಂದು ವಿಜ್ಞಾನಿಗಳು ಪಟ್ಟುಹಿಡಿದು ಹೇಳುವುದಾದರೂ, ಒಂದೇ ರೀತಿಯ ಎರಡು ಹರಳುಗಳು ಇದುವರೆಗೆ ಕಂಡುಕೊಳ್ಳಲ್ಪಟ್ಟಿಲ್ಲ. ವಿಲ್ಸನ್ ಎ. ಬೆಂಟ್ಲಿ ಎಂಬುವವರಿಂದ . . . ವ್ಯಾಪಕವಾದ ಒಂದು ಅಧ್ಯಯನವು ನಡೆಸಲ್ಪಟ್ಟಿತು. ಇವರು ಸೂಕ್ಷ್ಮದರ್ಶಕಯಂತ್ರದ ಮೂಲಕ ಹಿಮದ ಹರಳುಗಳನ್ನು ಪರೀಕ್ಷಿಸುವುದರಲ್ಲಿ ಹಾಗೂ ಅವುಗಳ ಛಾಯಾಚಿತ್ರವನ್ನು ತೆಗೆಯುವುದರಲ್ಲಿ 40ಕ್ಕಿಂತಲೂ ಹೆಚ್ಚು ವರ್ಷಗಳನ್ನು ಕಳೆದರೂ, ಅವರಿಗೆ ಒಂದೇ ರೀತಿಯ ಎರಡು ಹಿಮದ ಹರಳುಗಳು ಸಿಗಲೇ ಇಲ್ಲ.” ಮತ್ತು ಒಂದುವೇಳೆ ಅಪರೂಪದ ಸಂದರ್ಭವೊಂದರಲ್ಲಿ ಒಂದೇ ರೀತಿಯ ಎರಡು ಹಿಮದ ಹರಳುಗಳು ಸಿಕ್ಕಿದರೂ, ಅದು ಹಿಮದ ಹರಳುಗಳಲ್ಲಿರುವ ಅಪರಿಮಿತವಾದ ವೈವಿಧ್ಯತೆಯೆಂಬ ಅದ್ಭುತದಲ್ಲಿ ಏನಾದರೂ ವ್ಯತ್ಯಾಸವನ್ನು ಮಾಡುವುದೊ?
6 ದೇವರ ಪ್ರಶ್ನೆಯನ್ನು ಪುನಃ ಜ್ಞಾಪಿಸಿಕೊಳ್ಳಿರಿ: “ಹಿಮದ ಭಂಡಾರಗಳನ್ನು ಪ್ರವೇಶಿಸಿದ್ದೆಯೋ?” ಮೋಡಗಳು ಹಿಮದ ಮೂಲಗಳಾಗಿವೆ ಅಥವಾ ಭಂಡಾರಗಳಾಗಿವೆ ಎಂದು ಅನೇಕರು ನೆನಸುತ್ತಾರೆ. ಎಣಿಸಲಾಗದಂಥ ವೈವಿಧ್ಯತೆಯುಳ್ಳ ಹಿಮದ ಹರಳುಗಳ ಪಟ್ಟಿಮಾಡಲಿಕ್ಕಾಗಿ ಮತ್ತು ಅವು ಹೇಗೆ ಉಂಟಾದವೆಂಬುದನ್ನು ಅಭ್ಯಾಸಮಾಡಲಿಕ್ಕಾಗಿ, ಅಂತಹ ಒಂದು ಭಂಡಾರಕ್ಕೆ ನೀವು ಹೋಗುತ್ತಿರುವುದನ್ನು ಊಹಿಸಿಕೊಳ್ಳಬಲ್ಲಿರೊ? ವಿಜ್ಞಾನದ ಒಂದು ವಿಶ್ವಕೋಶವು ಹೇಳುವುದು: “ಮೋಡದ ತುಂತುರು ಹನಿಗಳನ್ನು, ಮೈನಸ್ -40°F (-40°C) ತಾಪಮಾನದಲ್ಲಿ ಘನೀಕರಿಸಲು ಅಗತ್ಯವಿರುವ ಹಿಮ ನ್ಯೂಕ್ಲಿಐಯ ಸ್ವರೂಪ ಮತ್ತು ಮೂಲವು ಇದುವರೆಗೆ ಸ್ಪಷ್ಟವಾಗಿ ತಿಳಿದುಬಂದಿಲ್ಲ.”—ಕೀರ್ತನೆ 147:16, 17; ಯೆಶಾಯ 55:9, 10.
7. ಮಳೆಯ ಕುರಿತಾದ ಮಾನವ ಜ್ಞಾನವು ಎಷ್ಟು ಸಮಗ್ರವಾಗಿದೆ?
7 ಮಳೆಯ ಕುರಿತು ಏನು? ದೇವರು ಯೋಬನನ್ನು ಪ್ರಶ್ನಿಸಿದ್ದು: “ಮಳೆಗೆ ತಂದೆಯುಂಟೋ? ಮಂಜಿನ ಹನಿಗಳನ್ನು ಪಡೆದವನು ಯಾರು?” ಅದೇ ವಿಶ್ವಕೋಶವು ಹೇಳುವುದು: “ವಾಯುಮಂಡಲದ ಚಲನೆಯಲ್ಲಿನ ಜಟಿಲತೆ ಮತ್ತು ವಾಯುವಿನ ಆವಿ ಹಾಗೂ ಕಣಗಳಲ್ಲಿ ಆಗುವ ಅಪರಿಮಿತ ವ್ಯತ್ಯಾಸಗಳ ಕಾರಣದಿಂದ, ಮೋಡಗಳು ಹಾಗೂ ಮಳೆಯು ಹೇಗೆ ಉಂಟಾಗುತ್ತದೆ ಎಂಬುದರ ಕುರಿತು ವಿವರವಾದ, ಸಾಮಾನ್ಯ ವಾದವನ್ನು ರಚಿಸುವುದು ಅಸಾಧ್ಯವಾದದ್ದಾಗಿ ತೋರುತ್ತದೆ.” ವಿಜ್ಞಾನಿಗಳು ವಿವರವುಳ್ಳ ವಾದಗಳನ್ನು ಸರಳ ಪದಗಳಲ್ಲಿ ನೀಡಿರುವುದಾದರೂ, ಅವರು ಮಳೆಯ ಕುರಿತಾಗಿ ನಿಜವಾಗಿಯೂ
ಪೂರ್ಣವಾಗಿ ವಿವರಿಸಲಾರರು. ಹಾಗಿದ್ದರೂ, ಅತ್ಯಾವಶ್ಯಕವಾದ ಮಳೆಯು ಬಂದು, ನಮ್ಮ ಭೂಮಿಗೆ ನೀರನ್ನು ಒದಗಿಸುತ್ತದೆ, ಸಸ್ಯಗಳನ್ನು ಪೋಷಿಸುತ್ತದೆ ಮತ್ತು ಜೀವನವನ್ನು ಸಾಧ್ಯಗೊಳಿಸುತ್ತದೆ ಹಾಗೂ ಅದನ್ನು ಹಿತಕರವಾದದ್ದಾಗಿಯೂ ಮಾಡುತ್ತದೆ.8. ಅ. ಕೃತ್ಯಗಳು 14:17ರಲ್ಲಿ ದಾಖಲಿಸಲ್ಪಟ್ಟಿರುವ ಪೌಲನ ಮಾತುಗಳು ಏಕೆ ಸೂಕ್ತವಾಗಿವೆ?
8 ಅಪೊಸ್ತಲ ಪೌಲನು ಹೇಳಿರುವುದನ್ನು ನೀವು ಒಪ್ಪಿಕೊಳ್ಳುವುದಿಲ್ಲವೊ? ಯಾರು ಈ ಅದ್ಭುತಕಾರ್ಯಗಳನ್ನು ನಡಿಸುತ್ತಿದ್ದಾನೋ ಆತನ ಕುರಿತಾದ ಪುರಾವೆಯನ್ನು ಆತನ ಕೈಕೆಲಸಗಳಲ್ಲಿ ನೋಡುವಂತೆ ಪೌಲನು ಇತರರನ್ನು ಪ್ರೋತ್ಸಾಹಿಸಿದನು. ಯೆಹೋವ ದೇವರ ಕುರಿತು ಪೌಲನು ಹೇಳಿದ್ದು: “ಆತನು ತನ್ನ ವಿಷಯದಲ್ಲಿ ಸಾಕ್ಷಿಕೊಡದೆ ಇರಲಿಲ್ಲ; ನಿಮಗೆ ಆಕಾಶದಿಂದ ಮಳೆಯನ್ನೂ ಸುಗ್ಗೀಕಾಲಗಳನ್ನೂ ದಯಪಾಲಿಸಿ ಆಹಾರಕೊಟ್ಟು ನಿಮ್ಮ ಮನಸ್ಸುಗಳನ್ನು ಆನಂದದಿಂದ ತುಂಬಿಸಿ ಉಪಕಾರಮಾಡುತ್ತಾ ಬಂದವನು ಆತನೇ.”—ಅ. ಕೃತ್ಯಗಳು 14:17; ಕೀರ್ತನೆ 147:8.
9. ದೇವರ ಅದ್ಭುತಕಾರ್ಯಗಳು ಆತನ ಮಹಾ ಶಕ್ತಿಯನ್ನು ಹೇಗೆ ತೋರಿಸುತ್ತವೆ?
9 ಇಂತಹ ಅದ್ಭುತಕರವಾದ ಹಾಗೂ ಪ್ರಯೋಜನದಾಯಕ ಕೆಲಸಗಳನ್ನು ನಡೆಸುವಾತನಿಗೆ ಅಪರಿಮಿತ ವಿವೇಕ ಮತ್ತು ಪ್ರಚಂಡ ಶಕ್ತಿಯಿದೆ ಎಂಬುದರಲ್ಲಿ ಸಂದೇಹವೇ ಇಲ್ಲ. ಆತನ ಶಕ್ತಿಯ ಸಂಬಂಧದಲ್ಲಿ ಇದರ ಕುರಿತು ತುಸು ಯೋಚಿಸಿರಿ: ಪ್ರತಿದಿನ ಸುಮಾರು 45,000 ಸಿಡಿಲು ಮಳೆಗಳು ಉಂಟಾಗುತ್ತವೆ, ಮತ್ತು ಒಂದು ವರ್ಷಕ್ಕೆ 1 ಕೋಟಿ 60 ಲಕ್ಷಕ್ಕಿಂತಲೂ ಹೆಚ್ಚು ಸಿಡಿಲು ಮಳೆಗಳು ಬೀಳುತ್ತವೆ ಎಂದು ಹೇಳಲಾಗುತ್ತದೆ. ಇದರರ್ಥ ಈ ಕ್ಷಣದಲ್ಲೇ ಸುಮಾರು 2,000 ಸಿಡಿಲು ಮಳೆಗಳು ಬೀಳುತ್ತಿವೆ. ಒಂದು ಸಿಡಿಲು ಮಳೆಯ ಜಟಿಲ ಮೋಡಗಳು, IIನೆಯ ಲೋಕ ಯುದ್ಧದಲ್ಲಿ ಉಪಯೋಗಿಸಲ್ಪಟ್ಟಂಥ ರೀತಿಯ ನ್ಯೂಕ್ಲಿಯರ್ ಬಾಂಬ್‌ಗಳ ಹತ್ತು ಅಥವಾ ಹೆಚ್ಚಿನ ಬಾಂಬುಗಳ ಶಕ್ತಿಯನ್ನು ಉತ್ಪಾದಿಸುತ್ತವೆ. ಆ ಶಕ್ತಿಯ ಸ್ವಲ್ಪ ಅಂಶವನ್ನು ನೀವು ಮಿಂಚಿನ ರೂಪದಲ್ಲಿ ನೋಡುತ್ತೀರಿ. ಪ್ರಬಲವಾದ ಈ ಮಿಂಚಿನ ಪ್ರಕಾಶಗಳು ಭಯಚಕಿತಗೊಳಿಸುವುದಾದರೂ, ಇವು ಸಾರಜನಕದ ರೂಪಗಳನ್ನು ಉತ್ಪಾದಿಸಲು ಸಹಾಯ ಮಾಡುತ್ತವೆ. ಸಾರಜನಕದ ಈ ರೂಪಗಳು ಮಣ್ಣನ್ನು ಸೇರುತ್ತವೆ ಮತ್ತು ಅಲ್ಲಿಂದ ಸಸ್ಯಗಳು ಅದನ್ನು ನೈಸರ್ಗಿಕ ಗೊಬ್ಬರದೋಪಾದಿ ಹೀರಿಕೊಳ್ಳುತ್ತವೆ. ಹೀಗೆ ಮಿಂಚು, ಪ್ರದರ್ಶಿಸಲ್ಪಟ್ಟಿರುವ ಶಕ್ತಿಯಾಗಿದೆ, ಆದರೆ ಅದು ಅನೇಕ ಪ್ರಯೋಜನಗಳನ್ನು ಸಹ ತರುತ್ತದೆ.—ಕೀರ್ತನೆ 104:14, 15.
ನಿಮ್ಮ ಮೇಲೆ ಯಾವ ಪ್ರಭಾವ ಬೀರುತ್ತದೆ?
10. ಯೋಬ 38:33-38ರಲ್ಲಿರುವ ಪ್ರಶ್ನೆಗಳಿಗೆ ನೀವು ಹೇಗೆ ಉತ್ತರಿಸುವಿರಿ?
10 ಈಗ ನೀವು, ಸರ್ವಶಕ್ತ ದೇವರಿಂದ ಪ್ರಶ್ನಿಸಲ್ಪಡುವ ಯೋಬನ ಸ್ಥಾನದಲ್ಲಿರುವುದನ್ನು ಊಹಿಸಿಕೊಳ್ಳಿ. ಆಗ, ಅಧಿಕಾಂಶ ಜನರು ದೇವರ ಅದ್ಭುತಕಾರ್ಯಗಳಿಗೆ ಕಡಿಮೆ ಗಮನವನ್ನು ಕೊಡುತ್ತಾರೆಂದು ನೀವು ಬಹುಶಃ ಒಪ್ಪಿಕೊಳ್ಳುವಿರಿ. ನಾವು ಯೋಬ 38:33-38ರಲ್ಲಿ ಓದುವಂಥ ಪ್ರಶ್ನೆಗಳನ್ನು ಯೆಹೋವನು ನಮಗೆ ಕೇಳುತ್ತಿದ್ದಾನೆ: “ಖಗೋಲದ ಕಟ್ಟಳೆಗಳನ್ನು ತಿಳಿದುಕೊಂಡಿದ್ದೀಯೋ? ಅದರ ಆಳಿಕೆಯನ್ನು ಭೂಮಿಯಲ್ಲಿ ಸ್ಥಾಪಿಸಿದ್ದೀಯಾ? ಮೋಡಗಳನ್ನು ಮುಟ್ಟುವಂತೆ ನೀನು ಧ್ವನಿಯೆತ್ತಿದ ಮಾತ್ರಕ್ಕೆ ಹೇರಳವಾದ ನೀರು ನಿನ್ನನ್ನು ಆವರಿಸುವದೋ? ಸಿಡಿಲುಗಳು ನಿನ್ನ ಅಪ್ಪಣೆಯಂತೆ ಹೋಗಿ ಬಂದು—ಇಗೋ, ಬಂದಿದ್ದೇವೆ ಎನ್ನುವವೋ? ಯಾರು ಕಾರ್ಮುಗಿಲಿಗೆ ಜ್ಞಾನವನ್ನು ದಯಪಾಲಿಸಿದರು? ಉತ್ಪಾತಗಳಿಗೆ ವಿವೇಕವನ್ನು ಅನುಗ್ರಹಿಸಿದವರು ಯಾರು? ಜ್ಞಾನದಿಂದ ಯಾರು ಮೇಘಗಳನ್ನು ಲೆಕ್ಕಿಸುವರು? ಆಕಾಶದಲ್ಲಿನ ಬುದ್ದಲಿಗಳನ್ನು ಮೊಗಚಿಹಾಕಿ ದೂಳು ಹರಿದು ಒತ್ತಟ್ಟಿಗೆ ಸೇರುವಂತೆಯೂ ಹೆಂಟೆಗಳು ಒಂದಕ್ಕೊಂದು ಅಂಟಿಕೊಳ್ಳುವಂತೆಯೂ ಯಾರು ಮಾಡುವರು?”
11, 12. ದೇವರು ಅದ್ಭುತಕಾರ್ಯಗಳನ್ನು ನಡೆಸುವಾತನಾಗಿದ್ದಾನೆಂದು ರುಜುಪಡಿಸುವ ಕೆಲವು ವಿಷಯಗಳಾವವು?
11 ಎಲೀಹು ಯೋಬನಿಗೆ ಹೇಳಿದ ಕೆಲವೊಂದು ಅಂಶಗಳನ್ನು ಹಾಗೂ ಯೆಹೋವನು ಯೋಬನಿಗೆ ಕೇಳಿದ ಪ್ರಶ್ನೆಗಳಲ್ಲಿ ಕೆಲವನ್ನು ಮತ್ತು ಯೋಬನು “ಶೂರನಂತೆ” ಉತ್ತರಿಸುವಂತೆ ಯೆಹೋವನು ಕೇಳಿದ ಕೆಲವು ಪ್ರಶ್ನೆಗಳನ್ನು ನಾವು ಪರಿಗಣಿಸಿದ್ದೇವೆ. (ಯೋಬ 38:3) ನಾವು ‘ಕೆಲವು’ ಎಂದು ಹೇಳುತ್ತೇವೆ, ಏಕೆಂದರೆ 38 ಮತ್ತು 39ನೆಯ ಅಧ್ಯಾಯಗಳಲ್ಲಿ, ದೇವರು ಸೃಷ್ಟಿಯ ಇತರ ಗಮನಾರ್ಹ ವಿಷಯಗಳ ಮೇಲೆ ಗಮನವನ್ನು ಕೇಂದ್ರೀಕರಿಸಿದನು. ಉದಾಹರಣೆಗೆ, ಯೆಹೋವನು ಆಕಾಶದ ನಕ್ಷತ್ರಪುಂಜಗಳ ಬಗ್ಗೆ ತಿಳಿಸುತ್ತಾನೆ. ಅವುಗಳ ಎಲ್ಲ ನಿಯಮಗಳು ಹಾಗೂ ಕಟ್ಟಳೆಗಳ ಬಗ್ಗೆ ಯಾರಿಗೆ ಗೊತ್ತಿದೆ? (ಯೋಬ 38:31-33) ಕೆಲವೊಂದು ಪ್ರಾಣಿಗಳ—ಸಿಂಹ ಮತ್ತು ಕಾಗೆ, ಬೆಟ್ಟದ ಮೇಕೆ ಹಾಗೂ ಕಾಡುಕತ್ತೆ, ಕಾಡುಕೋಣ ಮತ್ತು ಉಷ್ಟ್ರಪಕ್ಷಿ, ತದನಂತರ ಕುದುರೆ ಹಾಗೂ ಗಿಡಗಗಳ ಕಡೆಗೆ ಯೆಹೋವನು ಯೋಬನ ಗಮನವನ್ನು ಸೆಳೆಯುತ್ತಾನೆ. ಈ ಪ್ರಾಣಿಗಳಿಗೆ ಅವುಗಳ ಗುಣಲಕ್ಷಣಗಳನ್ನು ಕೊಟ್ಟು, ಅವು ಹೀಗೆ ಬದುಕಿ, ಸಂತಾನಾಭಿವೃದ್ಧಿಮಾಡುವಂತೆ ಮಾಡಿದವನು ಯೋಬನೋ ಎಂದು ದೇವರು ಕಾರ್ಯತಃ ಕೇಳುತ್ತಿದ್ದನು. ಒಂದುವೇಳೆ ನಿಮಗೆ ಕುದುರೆಗಳು ಅಥವಾ ಬೇರೆ ಪ್ರಾಣಿಗಳ ಬಗ್ಗೆ ಆಸಕ್ತಿಯಿರುವಲ್ಲಿ, ಈ ಅಧ್ಯಾಯಗಳನ್ನು ಓದುವುದರಲ್ಲಿ ನೀವು ತುಂಬ ಆನಂದಿಸುವಿರಿ.—ಕೀರ್ತನೆ 50:10, 11.
12 ನೀವು ಯೋಬ 40 ಹಾಗೂ 41ನೆಯ ಅಧ್ಯಾಯಗಳನ್ನು ಸಹ ಪರಿಶೀಲಿಸಿ ನೋಡಸಾಧ್ಯವಿದೆ. ಅಲ್ಲಿ ಯೆಹೋವನು ಯೋಬನಿಗೆ, ನಿರ್ದಿಷ್ಟವಾಗಿ ಎರಡು ಸೃಷ್ಟಿಜೀವಿಗಳ ಕುರಿತು ತಾನು ಕೇಳುವ ಪ್ರಶ್ನೆಗಳಿಗೆ ಉತ್ತರಿಸುವಂತೆ ಕೇಳಿಕೊಳ್ಳುತ್ತಾನೆ. ಇವುಗಳಲ್ಲಿ ಒಂದು ನೀರಾನೆಯಾಗಿದೆ (ಬೆಹೇಮೋತ್) ಎಂದು ನಮಗೆ ಅರ್ಥವಾಗುತ್ತದೆ. ಈ ನೀರಾನೆಯು ಬೃಹದಾಕಾರವಾಗಿರುತ್ತದೆ, ಮತ್ತು ಅದಕ್ಕೆ ಬಲಿಷ್ಠ ದೇಹವಿರುತ್ತದೆ. ಇನ್ನೊಂದು ಜೀವಿಯು, ಭಯಂಕರವಾದ ನೈಲ್ ಮೊಸಳೆಯಾಗಿದೆ (ಲಿವ್ಯಾತಾನ್). ಈ ಎರಡೂ ಪ್ರಾಣಿಗಳು ತಮ್ಮದೇ ಆದ ರೀತಿಯಲ್ಲಿ ಸೃಷ್ಟಿಯ ಚಮತ್ಕಾರಗಳಾಗಿದ್ದು, ನಮ್ಮ ಗಮನಕ್ಕೆ ಅರ್ಹವಾಗಿವೆ. ಇವುಗಳಿಂದ ನಾವು ಯಾವ ತೀರ್ಮಾನಕ್ಕೆ ಬರಬೇಕೆಂಬುದನ್ನು ಈಗ ನೋಡೋಣ.
13. ದೇವರು ಕೇಳಿದಂತಹ ಪ್ರಶ್ನೆಗಳು ಯೋಬನ ಮೇಲೆ ಯಾವ ಪರಿಣಾಮವನ್ನು ಬೀರಿದವು, ಮತ್ತು ಈ ವಿಷಯಗಳು ನಮ್ಮನ್ನು ಹೇಗೆ ಪ್ರಭಾವಿಸಬೇಕು?
13 ಯೋಬ 42ನೆಯ ಅಧ್ಯಾಯವು, ದೇವರು ಕೇಳಿದ ಪ್ರಶ್ನೆಗಳು ಯೋಬನ ಮೇಲೆ ಯಾವ ಪರಿಣಾಮವನ್ನು ಉಂಟುಮಾಡಿದವು ಎಂಬುದನ್ನು ತೋರಿಸುತ್ತದೆ. ಈ ಮುಂಚೆ ಯೋಬನು ಸ್ವತಃ ತನ್ನ ಬಗ್ಗೆ ಹಾಗೂ ಇತರರ ಬಗ್ಗೆ ವಿಪರೀತ ಗಮನ ಕೊಡುತ್ತಿದ್ದನು ಎಂಬುದನ್ನು ನೆನಪಿಸಿಕೊಳ್ಳಿರಿ. ಆದರೆ ಈಗ, ಯೆಹೋವನಿಂದ ಕೊಡಲ್ಪಟ್ಟ ತಿದ್ದುಪಾಟನ್ನು ಸ್ವೀಕರಿಸಿದ ಬಳಿಕ, ಅವನು ತನ್ನ ಮನೋಭಾವವನ್ನು ಬದಲಾಯಿಸಿಕೊಂಡನು. ಅವನು ನಿವೇದಿಸಿಕೊಂಡದ್ದು: “ನೀನು [ಯೆಹೋವ] ಸಕಲ ಕಾರ್ಯಗಳನ್ನು ನಡಿಸಬಲ್ಲಿಯೆಂತಲೂ ಯಾವ ಸಂಕಲ್ಪವೂ ನಿನಗೆ ಅಸಾಧ್ಯವಲ್ಲವೆಂತಲೂ ತಿಳಿದುಕೊಂಡೇ ಇದ್ದೇನೆ. ಜ್ಞಾನವಿಲ್ಲದೆ ಸತ್ಯಾಲೋಚನೆಯನ್ನು ಮಂಕುಮಾಡುವ ಇವನು ಯಾರು ಎಂಬ ನಿನ್ನ ಮಾತಿನಂತೆ ನಾನು ತಿಳಿಯದ ಸಂಗತಿಗಳನ್ನೂ ನನಗೆ ಗೊತ್ತಿಲ್ಲದೆ ಬುದ್ಧಿಗೆ ಮೀರಿರುವ ಅದ್ಭುತಗಳನ್ನೂ ಕುರಿತು ಮಾತಾಡಿದ್ದೇನೆ.” (ಯೋಬ 42:2, 3) ದೇವರ ಅದ್ಭುತಕಾರ್ಯಗಳ ಕುರಿತು ಧ್ಯಾನಿಸಿದ ನಂತರ, ಇವೆಲ್ಲವೂ ತನ್ನ ಬುದ್ಧಿಗೆ ಮೀರಿರುವ ಅದ್ಭುತಗಳಾಗಿವೆ ಎಂದು ಯೋಬನು ಒಪ್ಪಿಕೊಂಡನು. ಸೃಷ್ಟಿಯ ಈ ಅದ್ಭುತಕಾರ್ಯಗಳನ್ನು ಪುನರ್ವಿಮರ್ಶಿಸಿದ ನಂತರ, ದೇವರ ಅಪಾರ ವಿವೇಕ ಹಾಗೂ ಶಕ್ತಿಯ ವಿಷಯದಲ್ಲಿ ನಾವು ಸಹ ಪ್ರಭಾವಿತರಾಗಬೇಕು. ಎಷ್ಟರ ಮಟ್ಟಿಗೆ? ಯೆಹೋವನ ಅಪಾರ ಶಕ್ತಿ ಹಾಗೂ ಸಾಮರ್ಥ್ಯಗಳಿಂದ ನಾವು ಕೇವಲ ಪ್ರಭಾವಿತರಾಗಬೇಕೊ? ಅಥವಾ ಅದಕ್ಕಿಂತಲೂ ಹೆಚ್ಚಿನದ್ದನ್ನು ಮಾಡುವಂತೆ ನಾವು ಪ್ರಚೋದಿಸಲ್ಪಡಬೇಕೊ?
14. ದೇವರ ಅದ್ಭುತಕಾರ್ಯಗಳಿಗೆ ದಾವೀದನು ಹೇಗೆ ಪ್ರತಿಕ್ರಿಯೆ ತೋರಿಸಿದನು?
14 ಕೀರ್ತನೆ 86ರಲ್ಲಿ ದಾವೀದನು ತದ್ರೀತಿಯ ಅಭಿವ್ಯಕ್ತಿಗಳನ್ನು ಮಾಡಿರುವುದನ್ನು ನಾವು ನೋಡುತ್ತೇವೆ. ಹಿಂದಿನ ಕೀರ್ತನೆಯೊಂದರಲ್ಲಿ ಅವನಂದದ್ದು: “ಆಕಾಶವು ದೇವರ ಪ್ರಭಾವವನ್ನು ಪ್ರಚುರಪಡಿಸುತ್ತದೆ; ಗಗನವು ಆತನ ಕೈಕೆಲಸವನ್ನು ತಿಳಿಸುತ್ತದೆ. ದಿನವು ದಿನಕ್ಕೆ ಪ್ರಕಟಿಸುತ್ತಿರುವದು; ರಾತ್ರಿಯು ರಾತ್ರಿಗೆ ಅರುಹುತ್ತಿರುವದು.” (ಕೀರ್ತನೆ 19:1, 2) ಆದರೆ ದಾವೀದನು ಅದಕ್ಕಿಂತಲೂ ಹೆಚ್ಚನ್ನು ಮಾಡಿದನು. ಕೀರ್ತನೆ 86:10, 11ರಲ್ಲಿ ನಾವು ಓದುವುದು: “ಮಹೋನ್ನತನೂ ಮಹತ್ಕಾರ್ಯಗಳನ್ನು ನಡಿಸುವವನೂ ನೀನು; ದೇವರು ನೀನೊಬ್ಬನೇ. ಯೆಹೋವನೇ, ನಿನ್ನ ಮಾರ್ಗವನ್ನು ನನಗೆ ಬೋಧಿಸು; ನಿನ್ನ ಸತ್ಯತೆಯನ್ನು ನನ್ನ ದೃಷ್ಟಿಯಲ್ಲೇ ಇಟ್ಟುಕೊಂಡು ನಡೆಯುವೆನು. ನಾನು ನಿನ್ನ ನಾಮದಲ್ಲಿ ಭಯಭಕ್ತಿಯಿಂದಿರುವಂತೆ ಏಕಮನಸ್ಸನ್ನು ಅನುಗ್ರಹಿಸು.” ದೇವರು ಮಾಡಿದಂತಹ ಎಲ್ಲ ಅದ್ಭುತಕಾರ್ಯಗಳಿಗಾಗಿ ಆತನ ಬಗ್ಗೆ ದಾವೀದನಿಗಿದ್ದ ಭಯಭಕ್ತಿಯಲ್ಲಿ, ಪೂಜ್ಯಭಾವನೆಯ ಭಯವು ಒಳಗೂಡಿತ್ತು. ಏಕೆಂದು ನೀವು ಗ್ರಹಿಸಬಹುದು. ಈ ಅದ್ಭುತಕಾರ್ಯಗಳನ್ನು ನಡೆಸಲು ಶಕ್ತನಾಗಿರುವ ದೇವರಿಗೆ ಅಸಂತೋಷವನ್ನು ಉಂಟುಮಾಡಲು ದಾವೀದನು ಬಯಸಲಿಲ್ಲ. ತದ್ರೀತಿಯಲ್ಲಿ ನಾವು ಸಹ ದೇವರನ್ನು ಅಸಂತೋಷಗೊಳಿಸಬಾರದು.
15. ದೇವರಿಗಾಗಿ ದಾವೀದನಿಗಿದ್ದ ಪೂಜ್ಯಭಾವನೆಯ ಭಯವು ಏಕೆ ತಕ್ಕದ್ದಾಗಿತ್ತು?
15 ದೇವರ ಬಳಿ ಮತ್ತು ಆತನ ನಿಯಂತ್ರಣದ ಕೆಳಗೆ ಅಪಾರ ಶಕ್ತಿಯಿರುವುದರಿಂದ, ಯಾರು ಆತನ ಅನುಗ್ರಹಕ್ಕೆ ಪಾತ್ರರಾಗುವುದಿಲ್ಲವೋ ಅವರ ವಿರುದ್ಧ ಆತನು ಆ ಶಕ್ತಿಯನ್ನು ಉಪಯೋಗಿಸಬಲ್ಲನೆಂದು ದಾವೀದನು ಅರ್ಥಮಾಡಿಕೊಂಡಿರಬೇಕು. ದೇವರ ವಿರೋಧಿಗಳಿಗೆ ಇದು ಕೇಡು ಸೂಚಕವಾಗಿದೆ. ದೇವರು ಯೋಬನನ್ನು ಕೇಳಿದ್ದು: ಯೋಬ 38:22, 23.
“ನಾನು ಇಕ್ಕಟ್ಟಿನ ಕಾಲಕ್ಕಾಗಿಯೂ ಯುದ್ಧಕದನಗಳ ದಿನಕ್ಕಾಗಿಯೂ ಇಟ್ಟುಕೊಂಡಿರುವ ಹಿಮದ ಭಂಡಾರಗಳನ್ನು ಪ್ರವೇಶಿಸಿದ್ದೆಯೋ? ಕಲ್ಮಳೆಯ ಬೊಕ್ಕಸಗಳನ್ನು ನೋಡಿದ್ದೆಯಾ?” ಹಿಮ, ಆಲಿಕಲ್ಲು, ಬಿರುಗಾಳಿ ಮಳೆ, ಚಂಡಮಾರುತ ಮತ್ತು ಮಿಂಚುಗಳೆಲ್ಲವೂ ದೇವರ ಶಸ್ತ್ರಾಗಾರದಲ್ಲಿವೆ. ಮತ್ತು ಇವೆಲ್ಲವೂ ಎಷ್ಟು ಬೆರಗುಗೊಳಿಸುವಷ್ಟು ಪ್ರಬಲವಾದ ನೈಸರ್ಗಿಕ ಶಕ್ತಿಗಳಾಗಿವೆ!—16, 17. ದೇವರಿಗಿರುವ ಪ್ರಚಂಡವಾದ ಶಕ್ತಿಯನ್ನು ಯಾವುದು ದೃಷ್ಟಾಂತಿಸುತ್ತದೆ, ಮತ್ತು ಅಂಥದ್ದೇ ಶಕ್ತಿಯನ್ನು ಆತನು ಗತಕಾಲದಲ್ಲಿ ಹೇಗೆ ಉಪಯೋಗಿಸಿದನು?
16 ಒಂದು ಚಂಡಮಾರುತದಿಂದಲೊ ಅಥವಾ ಸೈಕ್ಲೋನ್‌ನಿಂದಲೊ, ಆಲಿಕಲ್ಲಿನ ಮಳೆಯಿಂದಲೊ ಅಥವಾ ಹಠಾತ್ತಾಗಿ ಬಂದ ಪ್ರವಾಹದಿಂದಲೋ ಸ್ಥಳಿಕವಾಗಿ ಉಂಟಾದ ವಿನಾಶಕರ ಆಪತ್ತು ನಿಮಗೆ ನೆನಪಿರಬಹುದು. ದೃಷ್ಟಾಂತಕ್ಕಾಗಿ, 1999ರ ಕೊನೆ ಭಾಗದಲ್ಲಿ, ನೈರುತ್ಯ ಯೂರೋಪಿನ ಮೇಲೆ ವ್ಯಾಪಕವಾದ ಚಂಡಮಾರುತವು ಬಡಿಯಿತು. ಹವಾಮಾನದ ಪರಿಣತರಿಗೆ ಸಹ ಇದರ ಬಗ್ಗೆ ಗೊತ್ತಿರಲಿಲ್ಲ. ಚಂಡಮಾರುತವು, ತಾಸಿಗೆ ಸುಮಾರು 200 ಕಿಲೊಮೀಟರುಗಳಷ್ಟು ವೇಗದಲ್ಲಿ ಬೀಸತೊಡಗಿತು. ಸಾವಿರಾರು ಮನೆಗಳ ಛಾವಣಿಗಳು ಕಿತ್ತುಹೋದವು, ವಿದ್ಯುಚ್ಛಕ್ತಿ ಕಂಬಗಳು ಬೀಳಿಸಲ್ಪಟ್ಟವು ಮತ್ತು ಟ್ರಕ್‌ಗಳು ಉರುಳಿಸಲ್ಪಟ್ಟವು. ಇದನ್ನು ಮನಸ್ಸಿನಲ್ಲಿ ಚಿತ್ರಿಸಿಕೊಳ್ಳಲು ಪ್ರಯತ್ನಿಸಿರಿ: ಆ ಚಂಡಮಾರುತವು, ಸುಮಾರು 27 ಕೋಟಿ ಮರಗಳನ್ನು ಬುಡಸಮೇತ ಕಿತ್ತುಹಾಕಿತು ಅಥವಾ ಮುರಿದುಹಾಕಿತು. ಅದರಲ್ಲೂ ಪ್ಯಾರಿಸಿನ ಹೊರಗಿರುವ ವರ್ಸೆಲಿಸ್‌ನ ಉದ್ಯಾನವನವೊಂದರಲ್ಲೇ 10,000 ಮರಗಳಿಗೆ ಹೀಗಾಯಿತು. ಲಕ್ಷಾಂತರ ಮನೆಗಳಿಗೆ ವಿದ್ಯುಚ್ಛಕ್ತಿ ಸರಬರಾಯಿ ಕಡಿದುಹೋಯಿತು. ಮರಣಸಂಖ್ಯೆಯು 100ರ ಹತ್ತಿರವಿತ್ತು. ಇದೆಲ್ಲವೂ ಸ್ವಲ್ಪ ಸಮಯದೊಳಗೆ ಸಂಭವಿಸಿತು. ಎಂತಹ ಶಕ್ತಿ!
17 ಈ ಚಂಡಮಾರುತಗಳನ್ನು ಯಾರಾದರೂ, ಅಕಾಲಿಕ, ನಿರ್ದೇಶನವಿಲ್ಲದ, ಅನಿಯಂತ್ರಿತ ಸಂಭವಗಳೆಂದು ಕರೆಯಬಹುದು. ಆದರೆ ಸರ್ವಶಕ್ತನಾದ ದೇವರು, ಇಂತಹ ಶಕ್ತಿಗಳನ್ನು ನಿಯಂತ್ರಿತವಾದ ರೀತಿಯಲ್ಲಿ ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ಉಪಯೋಗಿಸುವುದಾದರೆ ಏನಾಗಸಾಧ್ಯವಿದೆ? ಹಿಂದೆ ಅಬ್ರಹಾಮನ ಕಾಲದಲ್ಲಿ ದೇವರು ಹಾಗೇ ಮಾಡಿದನು. ಇಡೀ ಭೂಮಿಯ ನ್ಯಾಯಾಧಿಪತಿಯು, ಸೊದೋಮ್ ಮತ್ತು ಗೊಮೋರ ಪಟ್ಟಣಗಳ ದುಷ್ಟತನವನ್ನು ಪರೀಕ್ಷಿಸಿದ್ದನು ಎಂಬುದು ಅಬ್ರಹಾಮನಿಗೆ ತಿಳಿಯಿತು. ಆ ಪಟ್ಟಣಗಳು ಎಷ್ಟು ಭ್ರಷ್ಟಗೊಂಡಿದ್ದವೆಂದರೆ, ಅಲ್ಲಿನ ನಿವಾಸಿಗಳ ಕುರಿತಾದ ಆಪಾದನೆಗಳು ದೇವರಿಗೆ ಮುಟ್ಟಿದವು. ನಾಶನಕ್ಕೆ ಒಳಗಾಗಲಿದ್ದ ಆ ಎರಡು ಪಟ್ಟಣಗಳಲ್ಲಿರುವ ಎಲ್ಲ ನೀತಿವಂತರು ತಪ್ಪಿಸಿಕೊಳ್ಳುವಂತೆ ದೇವರು ಸಹಾಯ ಮಾಡಿದನು. ಐತಿಹಾಸಿಕ ವರದಿಯು ಹೀಗನ್ನುತ್ತದೆ: ‘ಆಗ ಯೆಹೋವನು ಸೊದೋಮ್ ಗೊಮೋರಗಳ ಮೇಲೆ ಆಕಾಶದಿಂದ ಅಗ್ನಿಗಂಧಕಗಳನ್ನು ಸುರಿಸಿದನು.’ ನೀತಿವಂತರನ್ನು ಕಾಪಾಡಿ, ಪಶ್ಚಾತ್ತಾಪಪಡದ ದುಷ್ಟರನ್ನು ನಾಶಮಾಡುವುದು ಒಂದು ಅದ್ಭುತಕಾರ್ಯವಾಗಿತ್ತು.—ಆದಿಕಾಂಡ 19:24.
18. ಯೆಶಾಯ ಅಧ್ಯಾಯ 25, ಯಾವ ಅದ್ಭುತ ಸಂಗತಿಗಳ ಕುರಿತು ತಿಳಿಸುತ್ತದೆ?
18 ಮುಂದೆ, ಪುರಾತನ ಬಾಬೆಲ್ ಪಟ್ಟಣದ ವಿರುದ್ಧ ಯೆಹೋವನು ನ್ಯಾಯಸಮ್ಮತವಾದ ಒಂದು ತೀರ್ಮಾನವನ್ನು ಕೈಗೊಂಡನು. ಯೆಶಾಯ ಪುಸ್ತಕದ 25ನೆಯ ಅಧ್ಯಾಯದಲ್ಲಿ ತಿಳಿಸಲ್ಪಟ್ಟಿರುವ ನಗರವು ಇದೇ ಆಗಿರಬಹುದು. ಬಾಬೆಲ್ ನಿರ್ಜನವಾದ ಹಾಳುದಿಬ್ಬವಾಗುವುದು ಎಂದು ದೇವರು ಮುಂತಿಳಿಸಿದನು: “ನೀನು ದುರ್ಗವನ್ನು ನಾಶಪಡಿಸಿ ಪಟ್ಟಣವನ್ನು ಹಾಳು ದಿಬ್ಬವನ್ನಾಗಿಯೂ ಅನ್ಯರ ಕೋಟೆಯನ್ನು ಯಾರೂ ಎಂದಿಗೂ ಕಟ್ಟಬಾರದ ಹಾಳೂರನ್ನಾಗಿಯೂ ಮಾಡಿದ್ದೀ.” (ಯೆಶಾಯ 25:2) ಪುರಾತನ ಬಾಬೆಲ್ ಇದ್ದಂತಹ ಸ್ಥಳಕ್ಕೆ ಆಧುನಿಕ ದಿನದ ಸಂದರ್ಶಕರು ಭೇಟಿ ನೀಡುವಲ್ಲಿ ಇದು ನಿಜವಾಯಿತೆಂಬುದನ್ನು ದೃಢೀಕರಿಸಸಾಧ್ಯವಿದೆ. ಬಾಬೆಲಿನ ನಾಶನವು ಒಂದು ಕಾಕತಾಳೀಯ ಘಟನೆಯೋ? ಇಲ್ಲ. ಬದಲಾಗಿ ನಾವು ಯೆಶಾಯನ ಈ ಅಭಿಪ್ರಾಯವನ್ನು ಅಂಗೀಕರಿಸಬಹುದು: “ಯೆಹೋವನೇ, ನೀನೇ ನನ್ನ ದೇವರು; ನೀನು ಸತ್ಯಪ್ರಾಮಾಣಿಕತೆಗಳನ್ನು ಅನುಸರಿಸಿ ಆದಿಸಂಕಲ್ಪಗಳನ್ನು ನೆರವೇರಿಸುತ್ತಾ ಅದ್ಭುತಗಳನ್ನು ನಡಿಸಿದ ಕಾರಣ ನಿನ್ನನ್ನು ಕೊಂಡಾಡುವೆನು, ನಿನ್ನ ನಾಮವನ್ನು ಮಹಿಮೆಗೊಳಿಸುವೆನು.”—ಯೆಶಾಯ 25:1.
ಭವಿಷ್ಯತ್ತಿನಲ್ಲಿ ಅದ್ಭುತಕಾರ್ಯಗಳು
19, 20. ಯೆಶಾಯ 25:6-8ರ ಯಾವ ನೆರವೇರಿಕೆಯನ್ನು ನಾವು ನಿರೀಕ್ಷಿಸಬಹುದು?
19 ಯೆಹೋವನು ಗತಕಾಲದಲ್ಲಿ ಈ ಮೇಲಿನ ಪ್ರವಾದನೆಯನ್ನು ನೆರವೇರಿಸಿದ್ದಾನೆ ಮತ್ತು ಆತನು ಭವಿಷ್ಯತ್ತಿನಲ್ಲೂ ಅದ್ಭುತವಾಗಿ ಕ್ರಿಯೆಗೈಯುವನು. ಯೆಶಾಯನು ದೇವರ “ಅದ್ಭುತಗಳ” ಕುರಿತಾಗಿ ತಿಳಿಸುವ ಈ ಪೂರ್ವಾಪರ ವಚನಗಳಲ್ಲಿ, ಇನ್ನೂ ನೆರವೇರಲಿಕ್ಕಿರುವ ಒಂದು ವಿಶ್ವಾಸಾರ್ಹ ಪ್ರವಾದನೆಯನ್ನು ನಾವು ಕಂಡುಕೊಳ್ಳುತ್ತೇವೆ. ಬಾಬೆಲಿನ ನ್ಯಾಯತೀರ್ಪಿನ ಪ್ರವಾದನೆಯು ನೆರವೇರಿದಂತೆಯೇ, ಈ ಪ್ರವಾದನೆಯು ಖಂಡಿತವಾಗಿಯೂ ನೆರವೇರುವುದು. ಯಾವ ‘ಅದ್ಭುತವನ್ನು’ ವಾಗ್ದಾನಿಸಲಾಗಿದೆ? ಯೆಶಾಯ 25:6 ಹೇಳುವುದು: “ಸೇನಾಧೀಶ್ವರನಾದ ಯೆಹೋವನು ಈ ಪರ್ವತದಲ್ಲಿ ಸಕಲಜನಾಂಗಗಳಿಗೂ ಸಾರವತ್ತಾದ ಮೃಷ್ಟಾನ್ನದಿಂದಲೂ ಮಡ್ಡಿಗಟ್ಟಿದ ಮೇಲೆ ಶೋಧಿಸಿದ ದ್ರಾಕ್ಷಾರಸದಿಂದಲೂ ಕೂಡಿದ ಔತಣವನ್ನು ಅಣಿಮಾಡುವನು.”
20 ನಮ್ಮ ಮುಂದೆಯೇ ಇರುವ, ದೇವರ ವಾಗ್ದತ್ತ ಹೊಸ ಲೋಕದಲ್ಲಿ ಈ ಪ್ರವಾದನೆಯು ಖಂಡಿತವಾಗಿಯೂ ನೆರವೇರಿಸಲ್ಪಡುವುದು. ಆ ಸಮಯದಲ್ಲಿ, ಮಾನವಕುಲವು ಈಗ ಅನುಭವಿಸುತ್ತಿರುವ ಅನೇಕ ಯೆಶಾಯ 25:7, 8ರಲ್ಲಿರುವ ಪ್ರವಾದನೆಯು, ತನ್ನ ಅದ್ಭುತಕಾರ್ಯಗಳಲ್ಲಿ ಒಂದನ್ನು ನೆರವೇರಿಸಲಿಕ್ಕಾಗಿ ದೇವರು ತನ್ನ ರಚನಾತ್ಮಕ ಶಕ್ತಿಯನ್ನು ಉಪಯೋಗಿಸುವನೆಂಬ ಖಾತರಿಯನ್ನು ನೀಡುತ್ತದೆ: “ಮರಣವನ್ನು ಶಾಶ್ವತವಾಗಿ ನಿರ್ನಾಮಮಾಡುವನು; ಕರ್ತನಾದ ಯೆಹೋವನು ಎಲ್ಲರ ಮುಖದಲ್ಲಿನ ಕಣ್ಣೀರನ್ನು ಒರಸಿಬಿಡುವನು; ತನ್ನ ಪ್ರಜೆಯ ಅವಮಾನವನ್ನು ಭೂಮಂಡಲದಿಂದಲೇ ತೊಲಗಿಸುವನು; ಯೆಹೋವನೇ ಇದನ್ನು ನುಡಿದಿದ್ದಾನೆ.” ಅನಂತರ ಅಪೊಸ್ತಲ ಪೌಲನು ಆ ವಚನದಿಂದಲೇ ಉಲ್ಲೇಖಿಸಿ, ದೇವರು ಸತ್ತವರನ್ನು ಉಜ್ಜೀವಿಸುತ್ತಾ, ಪುನರುತ್ಥಾನಗೊಳಿಸುವುದಕ್ಕೆ ಅನ್ವಯಿಸಿದ್ದಾನೆ. ಅದೆಷ್ಟು ಅದ್ಭುತಕಾರ್ಯವಾಗಿರುವುದು!
ಸಮಸ್ಯೆಗಳು ತೆಗೆದುಹಾಕಲ್ಪಡುವವು. ವಾಸ್ತವದಲ್ಲಿ,21. ಮೃತರಿಗಾಗಿ ದೇವರು ಯಾವ ಅದ್ಭುತಕಾರ್ಯಗಳನ್ನು ನಡೆಸುವನು?
21 ದುಃಖದ ಕಣ್ಣೀರು ಇಲ್ಲವಾಗಲು ಇನ್ನೊಂದು ಕಾರಣವಿರುವುದು. ಅದೇನೆಂದರೆ, ಈಗ ಮಾನವರು ಅನುಭವಿಸುವ ವ್ಯಾಧಿಗಳೆಲ್ಲವೂ ತೆಗೆದುಹಾಕಲ್ಪಡುವವು. ಯೇಸು ಭೂಮಿಯಲ್ಲಿದ್ದಾಗ, ಕುರುಡರಿಗೆ ದೃಷ್ಟಿ ಬರಿಸುವ ಮೂಲಕ, ಕಿವುಡರಿಗೆ ಕೇಳಿಸುವಂತೆ ಮಾಡುವ ಮೂಲಕ, ದುರ್ಬಲರಿಗೆ ಬಲವನ್ನು ಕೊಡುವ ಮೂಲಕ ಅನೇಕರನ್ನು ವಾಸಿಮಾಡಿದನು. 38 ವರ್ಷಗಳಿಂದ ಕುಂಟನಾಗಿದ್ದ ಒಬ್ಬ ವ್ಯಕ್ತಿಯನ್ನು ಆತನು ವಾಸಿಮಾಡಿದ್ದರ ಕುರಿತು ಯೋಹಾನ 5:5-9 ತಿಳಿಸುತ್ತದೆ. ಇದನ್ನು ನೋಡುತ್ತಿದ್ದ ಪ್ರೇಕ್ಷಕರು, ಇದೊಂದು ಅದ್ಭುತಕಾರ್ಯವೆಂದು ಭಾವಿಸಿದರು. ಹೌದು, ಖಂಡಿತವಾಗಿಯೂ ಅದೊಂದು ಅದ್ಭುತಕಾರ್ಯವಾಗಿತ್ತು! ಆದರೆ ತಾನು ಮೃತರನ್ನು ಪುನರುತ್ಥಾನಗೊಳಿಸುವುದು, ಇದಕ್ಕಿಂತಲೂ ಹೆಚ್ಚು ಆಶ್ಚರ್ಯಕರವಾಗಿರುವುದೆಂದು ಯೇಸು ಹೇಳಿದನು: “ಅದಕ್ಕೆ ಆಶ್ಚರ್ಯಪಡಬೇಡಿರಿ; ಸಮಾಧಿಗಳಲ್ಲಿರುವವರೆಲ್ಲರು ಆತನ ಧ್ವನಿಯನ್ನು ಕೇಳಿ ಎದ್ದು ಹೊರಗೆ ಬರುವ ಕಾಲ ಬರುತ್ತದೆ. ಒಳ್ಳೇದನ್ನು ಮಾಡಿದವರಿಗೆ ಜೀವಕ್ಕಾಗಿ ಪುನರುತ್ಥಾನವಾಗುವದು.”—ಯೋಹಾನ 5:28, 29.
22. ಬಡವರೂ ದಿಕ್ಕಿಲ್ಲದೆ ಕುಗ್ಗಿದವರೂ ನಿರೀಕ್ಷೆಯಿಂದ ಏಕೆ ಮುನ್ನೋಡಬಲ್ಲರು?
22 ಅದು ಖಂಡಿತವಾಗಿಯೂ ನೆರವೇರುವುದು, ಏಕೆಂದರೆ ಆ ವಾಗ್ದಾನವನ್ನು ಮಾಡುವಾತನು ಯೆಹೋವನೇ ಆಗಿದ್ದಾನೆ. ಆತನು ತನ್ನ ಮಹಾ ಪುನಶ್ಚೈತನ್ಯಕಾರಿ ಶಕ್ತಿಯನ್ನು ಉಪಯೋಗಿಸಿ, ಜಾಗರೂಕತೆಯಿಂದ ನಿರ್ದೇಶಿಸುವಾಗ, ಫಲಿತಾಂಶವು ಅದ್ಭುತಕರವಾಗಿರುವುದು ಎಂಬ ಖಾತ್ರಿ ನಿಮಗಿರಲಿ. ಅರಸನೂ ತನ್ನ ಮಗನೂ ಆಗಿರುವ ಯೇಸು ಕ್ರಿಸ್ತನ ಮೂಲಕ ಆತನು ಏನು ಮಾಡುವನು ಎಂಬುದನ್ನು ಕೀರ್ತನೆ 72 ತಿಳಿಸುತ್ತದೆ. ಆಗ ನೀತಿವಂತರು ವೃದ್ಧಿಯಾಗುವರು. ಶಾಂತಿಯು ವ್ಯಾಪಕವಾಗಿರುವುದು. ಬಡವರನ್ನೂ ದಿಕ್ಕಿಲ್ಲದೆ ಕುಗ್ಗಿದವರನ್ನೂ ದೇವರು ಉದ್ಧರಿಸುವನು. ಆತನು ವಾಗ್ದಾನಿಸುವುದು: “ದೇಶದಲ್ಲಿ ಬೆಟ್ಟಗಳ ಮೇಲೆಲ್ಲಾ ಬೆಳೆಯು ಸಮೃದ್ಧಿಯಾಗಲಿ; ಪೈರುಗಳ ಶಬ್ದವು ಲೆಬನೋನಿನ ಮರಗಳ ಸಪ್ಪಳದಂತಿರಲಿ. ಹೊಲದಲ್ಲಿ ಕಾಯಿಪಲ್ಯದಂತೆ ಪಟ್ಟಣಗಳಲ್ಲಿ ಜನರು ಹೆಚ್ಚಲಿ.”—ಕೀರ್ತನೆ 72:16.
23. ದೇವರ ಅದ್ಭುತಕಾರ್ಯಗಳು ನಾವೇನನ್ನು ಮಾಡುವಂತೆ ಪ್ರಚೋದಿಸಬೇಕು?
23 ಹೀಗೆ, ಯೆಹೋವನ ಅದ್ಭುತಕಾರ್ಯಗಳ ಕಡೆಗೆ ಗಮನ ಕೊಡಲು ನಮಗೆ ಸಾಕಷ್ಟು ಕಾರಣಗಳಿವೆ ಎಂಬುದು ಸ್ಪಷ್ಟವಾಗುತ್ತದೆ. ಗತಕಾಲದಲ್ಲಿ ಆತನು ಏನು ಮಾಡಿದ್ದಾನೆ, ಇಂದು ಆತನು ಏನು ಮಾಡುತ್ತಿದ್ದಾನೆ ಮತ್ತು ಸಮೀಪ ಭವಿಷ್ಯತ್ತಿನಲ್ಲಿ ಏನನ್ನು ಮಾಡುವನು ಎಂಬ ವಿಷಯಗಳಿಗೆ ನಾವು ಗಮನ ಕೊಡಬೇಕು. “ಮಹತ್ಕಾರ್ಯಗಳನ್ನು ನಡಿಸುವದರಲ್ಲಿ ಅದ್ವಿತೀಯನೂ ಇಸ್ರಾಯೇಲ್ಯರ ದೇವರೂ ಆದ ಯೆಹೋವನಿಗೆ ಸ್ತೋತ್ರವು. ಆತನ ಪ್ರಭಾವವುಳ್ಳ ನಾಮಕ್ಕೆ ಸದಾಕಾಲವೂ ಪ್ರಣಾಮವಿರಲಿ. ಭೂಮಂಡಲವೆಲ್ಲಾ ಆತನ ಪ್ರಭಾವದಿಂದ ತುಂಬಿರಲಿ. ಆಮೆನ್. ಆಮೆನ್.” (ಕೀರ್ತನೆ 72:18, 19) ಅದು ಕ್ರಮವಾಗಿ ನಮ್ಮ ಸಂಬಂಧಿಕರು ಮತ್ತು ಇತರರೊಂದಿಗಿನ ನಮ್ಮ ಹುರುಪಿನ ಸಂಭಾಷಣೆಯ ವಿಷಯವಾಗಿರಬೇಕು. ಹೌದು, ನಾವು “ಯೆಹೋವನ ಘನತೆಯನ್ನೂ ಆತನ ಪರಾಕ್ರಮವನ್ನೂ ಅದ್ಭುತಕೃತ್ಯಗಳನ್ನೂ ಮುಂದಣ ಸಂತತಿಯವರಿಗೆ ವಿವರಿ”ಸೋಣ.—ಕೀರ್ತನೆ 78:3, 4; 96:3, 4.
ನೀವು ಹೇಗೆ ಉತ್ತರಿಸುವಿರಿ?
• ಯೋಬನಿಗೆ ಕೇಳಲ್ಪಟ್ಟ ಪ್ರಶ್ನೆಗಳು, ಮಾನವ ಜ್ಞಾನಕ್ಕಿರುವ ಇತಿಮಿತಿಗಳನ್ನು ಹೇಗೆ ಎತ್ತಿತೋರಿಸುತ್ತವೆ?
• ಯೋಬ 37-41ನೆಯ ಅಧ್ಯಾಯಗಳಲ್ಲಿ ದೇವರ ಅದ್ಭುತಕಾರ್ಯಗಳಲ್ಲಿ ಎತ್ತಿಹೇಳಲ್ಪಟ್ಟಿರುವ ಯಾವ ಉದಾಹರಣೆಗಳು ನಿಮ್ಮನ್ನು ಪ್ರಭಾವಿಸಿದವು?
• ದೇವರ ಅದ್ಭುತಕಾರ್ಯಗಳಲ್ಲಿ ಕೆಲವೊಂದನ್ನು ಪರಿಗಣಿಸಿದ ನಂತರ ನಾವು ಹೇಗೆ ಪ್ರತಿಕ್ರಿಯಿಸಬೇಕು?
[ಅಧ್ಯಯನ ಪ್ರಶ್ನೆಗಳು]
[ಪುಟ 10ರಲ್ಲಿರುವ ಚಿತ್ರಗಳು]
ವಿಸ್ಮಯಕರವಾದ ಬೇರೆ ಬೇರೆ ರೀತಿಯ ಹಿಮದ ಹರಳುಗಳು ಹಾಗೂ ಮಿಂಚಿನ ಭಯಭಕ್ತಿಪ್ರೇರಕ ಶಕ್ತಿಯ ಕುರಿತು ನೀವು ಯಾವ ತೀರ್ಮಾನಕ್ಕೆ ಬರುತ್ತೀರಿ?
[ಕೃಪೆ]
snowcrystals.net
[ಪುಟ 13ರಲ್ಲಿರುವ ಚಿತ್ರಗಳು]
ದೇವರ ಅದ್ಭುತಕಾರ್ಯಗಳು ಕ್ರಮವಾಗಿ ನಿಮ್ಮ ಸಂಭಾಷಣೆಯ ವಿಷಯವಾಗಿರಲಿ