ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅದ್ಭುತಕಾರ್ಯಗಳನ್ನು ನಡೆಸುವಾತನನ್ನು ನೋಡಿರಿ!

ಅದ್ಭುತಕಾರ್ಯಗಳನ್ನು ನಡೆಸುವಾತನನ್ನು ನೋಡಿರಿ!

ಅದ್ಭುತಕಾರ್ಯಗಳನ್ನು ನಡೆಸುವಾತನನ್ನು ನೋಡಿರಿ!

“ಸುಮ್ಮನೆ ನಿಂತು ದೇವರ ಅದ್ಭುತಕಾರ್ಯಗಳನ್ನು ಧ್ಯಾನಿಸು.”​—ಯೋಬ 37:14.

1, 2. ಇಸವಿ 1922ರಲ್ಲಿ ಯಾವ ಬೆರಗುಗೊಳಿಸುವ ಕಂಡುಹಿಡಿತವನ್ನು ಮಾಡಲಾಯಿತು, ಮತ್ತು ಪ್ರತಿಕ್ರಿಯೆ ಏನಾಗಿತ್ತು?

ಒಬ್ಬ ಅಗೆತಶಾಸ್ತ್ರಜ್ಞರೂ, ಒಬ್ಬ ಆಂಗ್ಲ ಕುಲೀನ ವ್ಯಕ್ತಿಯೂ ಸೇರಿಕೊಂಡು, ಒಂದು ನಿಧಿಗಾಗಿ ಹುಡುಕುತ್ತಾ ಅನೇಕ ವರ್ಷಗಳ ವರೆಗೆ ಜೊತೆಯಾಗಿ ಕೆಲಸಮಾಡಿದರು. ಕೊನೆಗೆ 1922ರ ನವೆಂಬರ್‌ 26ರಂದು, ಪ್ರಸಿದ್ಧವಾದ ರಾಜರ ಕಣಿವೆಯಲ್ಲಿರುವ ಐಗುಪ್ತದ ಫರೋಹರ ರುದ್ರಭೂಮಿಯಲ್ಲಿ, ಆ ಅಗೆತಶಾಸ್ತ್ರಜ್ಞರಾದ ಹಾವರ್ಡ್‌ ಕಾರ್ಟರ್‌ ಮತ್ತು ಲಾರ್ಡ್‌ ಕಾರ್ನಾರ್‌ವನ್‌ ತಮ್ಮ ಅನ್ವೇಷಣೆಯ ಬಹುಮಾನವನ್ನು ಪತ್ತೆಹಚ್ಚಿದರು. ಅದು, ಫರೋಹ ಟುಟಂಕಮೇನನ ಸಮಾಧಿಯಾಗಿತ್ತು. ಅವರು ಮುದ್ರೆಯೊತ್ತಲ್ಪಟ್ಟ ಒಂದು ಬಾಗಿಲ ಬಳಿ ಬಂದು ತಲಪಿದಾಗ, ಅದರಲ್ಲಿ ಒಂದು ರಂಧ್ರವನ್ನು ಕೊರೆದರು. ಕಾರ್ಟರ್‌ ಆ ರಂಧ್ರದಲ್ಲಿ ಒಂದು ಮೋಂಬತ್ತಿಯನ್ನು ಒಳತೂರಿಸಿ, ಒಳಗೆ ಇಣಿಕಿನೋಡಿದರು.

2 ಅನಂತರ ಕಾರ್ಟರ್‌ ವರದಿಸಿದ್ದು: “ತನ್ನ ಕಳವಳವನ್ನು ಹತ್ತಿಕ್ಕಲಾಗದೆ, ಲಾರ್ಡ್‌ ಕಾರ್ನಾರ್‌ವನ್‌ ತುಂಬ ಕಾತುರರಾಗಿ ‘ನಿನಗೇನಾದರೂ ಕಾಣಿಸುತ್ತಿದೆಯೊ?’ ಎಂದು ಕೇಳಿದಾಗ, ‘ಹೌದು, ಅದ್ಭುತ ವಸ್ತುಗಳನ್ನು ನೋಡಬಲ್ಲೆ’ ಎಂಬ ಮಾತುಗಳನ್ನು ಮಾತ್ರ ನನ್ನ ಬಾಯಿಂದ ಹೊರಡಿಸಲು ಶಕ್ತನಾದೆ.” ಆ ಸಮಾಧಿಯಲ್ಲಿದ್ದ ನಿಧಿಯಲ್ಲಿ, ಪೂರ್ತಿಯಾಗಿ ಚಿನ್ನದಿಂದ ತಯಾರಿಸಲ್ಪಟ್ಟಿದ್ದ ಒಂದು ಶವಪೆಟ್ಟಿಗೆಯಿತ್ತು. ಆ ‘ಅದ್ಭುತ ವಸ್ತುಗಳಲ್ಲಿ’ ಕೆಲವನ್ನು ನೀವು ಫೋಟೋಗಳಲ್ಲಿ ಅಥವಾ ವಸ್ತುಸಂಗ್ರಹಾಲಯದ ಪ್ರದರ್ಶನವೊಂದರಲ್ಲಿ ನೋಡಿರಬಹುದು. ಆದರೆ, ಆ ವಸ್ತುಸಂಗ್ರಹಾಲಯದ ವಸ್ತುಗಳು ಎಷ್ಟೇ ಅದ್ಭುತವಾಗಿದ್ದರೂ, ಅವುಗಳಿಗೂ ನಿಮ್ಮ ಜೀವಿತಕ್ಕೂ ಯಾವುದೇ ಸಂಬಂಧವಿಲ್ಲ. ಆದುದರಿಂದ ನಾವೀಗ ಆ ವಿಷಯವನ್ನು ಬಿಟ್ಟು, ಖಂಡಿತವಾಗಿಯೂ ನಿಮಗೆ ಸಂಬಂಧಿಸುವ ಮತ್ತು ಪ್ರಾಮುಖ್ಯವಾಗಿರುವ ಅದ್ಭುತ ವಿಷಯಗಳ ಕುರಿತು ಚರ್ಚಿಸೋಣ.

3. ಅದ್ಭುತ ವಿಷಯಗಳ ಬಗ್ಗೆ ನಮಗೆ ಉಪಯುಕ್ತವಾಗಿರುವ ಮಾಹಿತಿಯು ಎಲ್ಲಿದೆ?

3 ಉದಾಹರಣೆಗೆ, ಅನೇಕ ಶತಮಾನಗಳ ಹಿಂದೆ ಜೀವಿಸಿದ್ದ ಒಬ್ಬ ಮನುಷ್ಯನ ಬಗ್ಗೆ ಯೋಚಿಸಿರಿ. ಈ ಮನುಷ್ಯನು ಆಧುನಿಕ ದಿನದ ಯಾವುದೇ ಚಲನಚಿತ್ರ ನಟ, ಕ್ರೀಡಾಪಟು, ಅಥವಾ ರಾಜವಂಶಸ್ಥನಿಗಿಂತಲೂ ಹೆಚ್ಚು ಪ್ರಖ್ಯಾತನಾಗಿದ್ದನು. ಇವನು ಮೂಡಣ ದೇಶದವರಲ್ಲೆಲ್ಲಾ ಅತ್ಯಂತ ಮಹಾನ್‌ ಎಂದು ಕರೆಯಲ್ಪಟ್ಟನು. ನೀವು ಅವನನ್ನು ಯೋಬ ಎಂಬ ಹೆಸರಿನಿಂದ ಗುರುತಿಸುವಿರಿ. ಅವನ ಕುರಿತಾಗಿ ಬೈಬಲಿನಲ್ಲಿ ಒಂದು ಇಡೀ ಪುಸ್ತಕವೇ ಬರೆಯಲ್ಪಟ್ಟಿದೆ. ಆದರೂ, ಯೋಬನ ಸಮಕಾಲೀನರಲ್ಲಿ ಒಬ್ಬನಾಗಿದ್ದ ಎಲೀಹು ಎಂಬ ಯೌವನಸ್ಥನು, ಅವನನ್ನು ಸರಿಪಡಿಸುವಂತೆ ನಿರ್ಬಂಧಿಸಲ್ಪಟ್ಟನು. ಸಾರಾಂಶವಾಗಿ ಹೇಳುವುದಾದರೆ, ಯೋಬನು ಸ್ವತಃ ತನ್ನ ಬಗ್ಗೆ ಮತ್ತು ತನ್ನ ಸುತ್ತಲಿದ್ದವರ ಬಗ್ಗೆ ವಿಪರೀತ ಗಮನ ಕೊಡುತ್ತಿದ್ದನೆಂದು ಎಲೀಹು ಹೇಳಿದನು. ಯೋಬ 37ನೆಯ ಅಧ್ಯಾಯದಲ್ಲಿ ನಮ್ಮಲ್ಲಿ ಪ್ರತಿಯೊಬ್ಬರಿಗೆ ನಿಜವಾಗಿಯೂ ಉಪಯುಕ್ತವಾಗಿರುವ ನಿರ್ದಿಷ್ಟ ಮತ್ತು ವಿವೇಕಯುತವಾದ ಬೇರೆ ಬುದ್ಧಿವಾದವೂ ಇದೆ.​—ಯೋಬ 1:​1-3; 32:​1–33:12.

4. ಯೋಬ 37:14ರಲ್ಲಿ ಎಲೀಹು ಕೊಟ್ಟ ಬುದ್ಧಿವಾದಕ್ಕೆ ನಡೆಸಿದಂಥ ಘಟನೆಗಳು ಯಾವುವು?

4 ಯೋಬನ ಸ್ನೇಹಿತರೆಂದು ಹೇಳಿಕೊಳ್ಳುತ್ತಿದ್ದ ಮೂವರು, ಯೋಬನು ತನ್ನ ಯೋಚನೆಯಲ್ಲಿ ಅಥವಾ ಕ್ರಿಯೆಯಲ್ಲಿ ಯಾವ ಯಾವ ಕ್ಷೇತ್ರಗಳಲ್ಲಿ ತಪ್ಪು ಮಾಡಿದ್ದಾನೆಂದು ಅವರಿಗನಿಸುತ್ತಿತ್ತೋ ಅವುಗಳ ಕುರಿತಾಗಿ ಉದ್ದುದ್ದ ಭಾಷಣಗಳನ್ನು ಕೊಟ್ಟರು. (ಯೋಬ 15:​1-6, 16; 22:​5-10) ಅವರ ಮಾತುಕತೆಯು ಮುಗಿಯುವ ತನಕ ಎಲೀಹು ತಾಳ್ಮೆಯಿಂದ ಕಾದನು. ತದನಂತರ ಅವನು ಒಳನೋಟದಿಂದ ಹಾಗೂ ವಿವೇಕದಿಂದ ಮಾತಾಡಿದನು. ಅವನು ಅನೇಕ ಮಹತ್ವಪೂರ್ಣ ವಿಷಯಗಳನ್ನು ಹೇಳಿದರೂ, ಈ ಪ್ರಮುಖ ಅಂಶಕ್ಕೆ ಗಮನ ಕೊಡಿರಿ: “ಯೋಬನೇ, ಇದನ್ನು ಕೇಳು! ಸುಮ್ಮನೆ ನಿಂತು ದೇವರ ಅದ್ಭುತಕಾರ್ಯಗಳನ್ನು ಧ್ಯಾನಿಸು.”​—ಯೋಬ 37:14.

ಆ ಕಾರ್ಯಗಳನ್ನು ನಡೆಸಿದಾತನು

5. ಎಲೀಹು ಸೂಚಿಸಿದಂಥ ‘ದೇವರ ಅದ್ಭುತಕಾರ್ಯಗಳಲ್ಲಿ’ ಏನು ಒಳಗೂಡಿದೆ?

5 ಯೋಬನು ಸ್ವತಃ ತನ್ನ ಕಡೆಗೆ, ಎಲೀಹುವಿನ ಕಡೆಗೆ ಅಥವಾ ಇತರ ಮಾನವರ ಕಡೆಗೆ ಗಮನಹರಿಸುವಂತೆ ಎಲೀಹು ಸಲಹೆ ನೀಡಲಿಲ್ಲ ಎಂಬುದನ್ನು ಗಮನಿಸಿರಿ. ಬದಲಾಗಿ, ಯೆಹೋವ ದೇವರ ಅದ್ಭುತಕಾರ್ಯಗಳ ಬಗ್ಗೆ ಧ್ಯಾನಿಸುವಂತೆ ಎಲೀಹು ವಿವೇಕಯುತವಾಗಿ ಯೋಬನನ್ನು ಮತ್ತು ನಮ್ಮನ್ನು ಸಹ ಪ್ರಚೋದಿಸುತ್ತಾನೆ. “ದೇವರ ಅದ್ಭುತಕಾರ್ಯಗಳು” ಎಂಬ ವಾಕ್ಸರಣಿಯಲ್ಲಿ ಏನೆಲ್ಲಾ ಒಳಗೂಡಿದೆಯೆಂದು ನೀವು ನೆನಸುತ್ತೀರಿ? ಅಷ್ಟುಮಾತ್ರವಲ್ಲ, ನಿಮ್ಮ ಆರೋಗ್ಯ, ಆರ್ಥಿಕ ಪರಿಸ್ಥಿತಿ, ಭವಿಷ್ಯ, ನಿಮ್ಮ ಕುಟುಂಬ, ಜೊತೆ ಕೆಲಸಗಾರರು, ಮತ್ತು ನೆರೆಹೊರೆಯವರ ಕುರಿತಾಗಿ ನಿಮಗೆ ಚಿಂತಿಸಲಿಕ್ಕಾಗಿ ಎಷ್ಟೋ ವಿಷಯಗಳಿರುವಾಗ, ದೇವರ ಅದ್ಭುತಕಾರ್ಯಗಳ ಬಗ್ಗೆ ನೀವೇಕೆ ಧ್ಯಾನಿಸಬೇಕು? ಯೆಹೋವ ದೇವರ ಅದ್ಭುತಕಾರ್ಯಗಳಲ್ಲಿ, ಆತನ ವಿವೇಕ ಹಾಗೂ ನಮ್ಮ ಸುತ್ತಲೂ ಇರುವ ಭೌತಿಕ ಸೃಷ್ಟಿಯ ಮೇಲೆ ಆತನಿಗಿರುವ ಅಧಿಕಾರವು ಒಳಗೂಡಿದೆ ಎಂಬುದರಲ್ಲಿ ಸಂದೇಹವೇ ಇಲ್ಲ. (ನೆಹೆಮೀಯ 9:6; ಕೀರ್ತನೆ 24:1; 104:24; 136:​5, 6) ಇದನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲಿಕ್ಕಾಗಿ, ಯೆಹೋಶುವ ಪುಸ್ತಕದಲ್ಲಿರುವ ಒಂದು ಅಂಶಕ್ಕೆ ಗಮನ ಕೊಡಿರಿ.

6, 7. (ಎ) ಮೋಶೆ ಮತ್ತು ಯೆಹೋಶುವನ ದಿನಗಳಲ್ಲಿ ಯೆಹೋವನು ಯಾವ ಅದ್ಭುತಕಾರ್ಯಗಳನ್ನು ನಡಿಸಿದನು? (ಬಿ) ಮೋಶೆ ಹಾಗೂ ಯೆಹೋಶುವನ ಕಾಲದಲ್ಲಿ ನಡೆದಿದ್ದ ಈ ಅದ್ಭುತಕಾರ್ಯಗಳಲ್ಲಿ ಯಾವುದಾದರೊಂದನ್ನು ಒಂದುವೇಳೆ ನೀವು ಕಣ್ಣಾರೆ ನೋಡುತ್ತಿದ್ದಲ್ಲಿ, ಹೇಗೆ ಪ್ರತಿಕ್ರಿಯಿಸುತ್ತಿದ್ದಿರಿ?

6 ಪುರಾತನ ಐಗುಪ್ತದ ಮೇಲೆ ಯೆಹೋವನು ಹತ್ತು ಬಾಧೆಗಳನ್ನು ಬರಮಾಡಿದನು ಮತ್ತು ಅನಂತರ ಮೋಶೆಯು ಇಸ್ರಾಯೇಲ್ಯರನ್ನು ಸ್ವಾತಂತ್ರ್ಯದ ಕಡೆಗೆ ನಡೆಸಸಾಧ್ಯವಾಗುವಂತೆ ಕೆಂಪು ಸಮುದ್ರವನ್ನು ವಿಭಾಗಿಸಿದನು. (ವಿಮೋಚನಕಾಂಡ 7:​1–14:31; ಕೀರ್ತನೆ 106:​7, 21, 22) ಯೆಹೋಶುವ 3ನೆಯ ಅಧ್ಯಾಯದಲ್ಲಿ ಹೆಚ್ಚುಕಡಿಮೆ ಅದೇ ರೀತಿಯ ಘಟನೆಯನ್ನು ತಿಳಿಸಲಾಗಿದೆ. ಮೋಶೆಯ ಉತ್ತರಾಧಿಕಾರಿಯಾದ ಯೆಹೋಶುವನು, ದೇವಜನರು ಇನ್ನೊಂದು ಸಲ ಒಂದು ಹೊಳೆಯನ್ನು ದಾಟುವಂತೆ ಮಾಡಿ, ಅವರನ್ನು ವಾಗ್ದತ್ತ ದೇಶದೊಳಕ್ಕೆ ನಡಿಸಬೇಕಾಗಿತ್ತು. ಯೆಹೋಶುವನು ಹೇಳಿದ್ದು: “ನಿಮ್ಮನ್ನು ಶುದ್ಧಮಾಡಿಕೊಳ್ಳಿರಿ; ಯೆಹೋವನು ನಾಳೆ ನಿಮ್ಮ ಮಧ್ಯದಲ್ಲಿ ಅದ್ಭುತಗಳನ್ನು ನಡಿಸುವನು.” (ಯೆಹೋಶುವ 3:5) ಈ ಅದ್ಭುತಗಳು ಏನಾಗಿದ್ದವು?

7 ಯೆಹೋವನು, ಮಾರ್ಗದಲ್ಲಿ ತಡೆಯಂತಿದ್ದ ಯೊರ್ದನ್‌ ಹೊಳೆಯ ಮಧ್ಯದಿಂದ ಒಂದು ದಾರಿಯನ್ನು ತೆರೆಯುವ ಮೂಲಕ ಸಾವಿರಾರು ಸ್ತ್ರೀಪುರುಷರು ಮತ್ತು ಮಕ್ಕಳು ಒಣನೆಲದ ಮೇಲೆ ದಾಟಿಹೋಗುವುದನ್ನು ಸಾಧ್ಯಗೊಳಿಸಿದನೆಂದು ಆ ವೃತ್ತಾಂತವು ತೋರಿಸುತ್ತದೆ. (ಯೆಹೋಶುವ 3:​7-17) ಯೊರ್ದನ್‌ ಹೊಳೆಯು ಬೇರ್ಪಟ್ಟು, ಆ ಎಲ್ಲ ಜನರು ಸುರಕ್ಷಿತವಾಗಿ ಹೊಳೆಯನ್ನು ದಾಟುತ್ತಿರುವುದನ್ನು ಒಂದುವೇಳೆ ನಾವು ಅಲ್ಲಿದ್ದು ಕಣ್ಣಾರೆ ನೋಡುತ್ತಿದ್ದಲ್ಲಿ, ನಿಜವಾಗಿಯೂ ಇದು ಅದ್ಭುತವಾದ ಸಾಧನೆ ಎಂದು ಒಪ್ಪಿಕೊಳ್ಳುತ್ತಿದ್ದೆವು! ಸೃಷ್ಟಿಯ ಮೇಲೆ ದೇವರಿಗಿರುವ ಶಕ್ತಿಯನ್ನು ಇದು ಪ್ರದರ್ಶಿಸಿತು. ಆದರೂ ಈಗ, ಅಂದರೆ ನಮ್ಮ ಜೀವಮಾನದಲ್ಲಿ, ಅಷ್ಟೇ ಅದ್ಭುತಕರವಾದ ವಿಷಯಗಳು ಇವೆ. ಅವುಗಳಲ್ಲಿ ಕೆಲವು ಯಾವುವು ಮತ್ತು ನಾವು ಇವುಗಳಿಗೆ ಏಕೆ ಗಮನ ಕೊಡಬೇಕು ಎಂಬುದನ್ನು ತಿಳಿದುಕೊಳ್ಳಲಿಕ್ಕಾಗಿ, ಯೋಬ 37:​5-7ನ್ನು ಪರಿಗಣಿಸಿರಿ.

8, 9. ಯೋಬ 37:​5-7 ಯಾವ ಅದ್ಭುತಕಾರ್ಯಗಳ ಕುರಿತು ತಿಳಿಸುತ್ತದೆ, ಆದರೆ ನಾವು ಇವುಗಳ ಬಗ್ಗೆ ಏಕೆ ಯೋಚಿಸಬೇಕು?

8 ಎಲೀಹು ಘೋಷಿಸಿದ್ದು: “ದೇವರು ತನ್ನ ಧ್ವನಿಯಿಂದ ಅದ್ಭುತವಾಗಿ ಗುಡುಗುವನು; ನಾವು ಗ್ರಹಿಸಲಾಗದ ಮಹಾಕಾರ್ಯಗಳನ್ನು ನಡಿಸುವನು.” ದೇವರು “ಅದ್ಭುತವಾಗಿ” ನಡೆಸುವ ಕಾರ್ಯಗಳ ಬಗ್ಗೆ ಹೇಳುವಾಗ ಎಲೀಹುವಿನ ಮನಸ್ಸಿನಲ್ಲೇನಿತ್ತು? ಅವನು ಹಿಮ ಹಾಗೂ ಜಡಿಮಳೆಯ ಕುರಿತು ಮಾತಾಡುತ್ತಾನೆ. ಇವು ಹೊಲದಲ್ಲಿ ರೈತನೊಬ್ಬನ ಕೆಲಸವನ್ನು ನಿಲ್ಲಿಸಿಬಿಡುತ್ತವೆ, ಮತ್ತು ಅವನು ದೇವರ ಕಾರ್ಯಗಳ ಕುರಿತಾಗಿ ಯೋಚಿಸಲು ಸಮಯಾವಕಾಶವನ್ನು ಹಾಗೂ ಕಾರಣವನ್ನು ಕೊಡುತ್ತದೆ. ನಾವು ರೈತರಲ್ಲದಿರಬಹುದು. ಆದರೂ, ಹಿಮ ಮತ್ತು ಮಳೆ ನಮ್ಮೆಲ್ಲರ ಮೇಲೆ ಪರಿಣಾಮ ಬೀರಬಹುದು. ನಾವೆಲ್ಲಿ ವಾಸಿಸುತ್ತಿದ್ದೇವೊ ಅದಕ್ಕನುಸಾರ, ಹಿಮ ಹಾಗೂ ಮಳೆ ನಮ್ಮ ಚಟುವಟಿಕೆಗಳಿಗೆ ತಡೆಯನ್ನೂ ಉಂಟುಮಾಡಬಹುದು. ಇಂಥ ಅದ್ಭುತಗಳ ಹಿಂದೆ ಯಾರಿದ್ದಾರೆ ಮತ್ತು ಇದರ ಅರ್ಥವೇನು ಎಂಬುದರ ಬಗ್ಗೆ ಯೋಚಿಸಲು ನಾವು ಸ್ವಲ್ಪ ಸಮಯ ತೆಗೆದುಕೊಳ್ಳುತ್ತೇವೊ? ನೀವು ಎಂದಾದರೂ ಹಾಗೆ ಮಾಡಿದ್ದೀರೊ?

9 ಯೋಬ 38ನೆಯ ಅಧ್ಯಾಯದಲ್ಲಿ ನಾವು ಓದುವಂತೆ, ಯೆಹೋವ ದೇವರು ಅದೇ ವಿಚಾರಸರಣಿಯನ್ನು ಅನುಸರಿಸುತ್ತಾನೆ. ಆತನು ಯೋಬನಿಗೆ ಪರೀಕ್ಷಾತ್ಮಕವಾದ, ಅರ್ಥಭರಿತ ಪ್ರಶ್ನೆಗಳನ್ನು ಕೇಳುತ್ತಾನೆ. ಈ ಪ್ರಶ್ನೆಗಳನ್ನು ನಮ್ಮ ಸೃಷ್ಟಿಕರ್ತನು ಯೋಬನಿಗೆ ಕೇಳಿದನಾದರೂ, ಇವು ನಮ್ಮ ಮನೋಭಾವ, ನಮ್ಮ ಅಸ್ತಿತ್ವ ಹಾಗೂ ನಮ್ಮ ಭವಿಷ್ಯತ್ತಿನ ಮೇಲೆ ಸ್ಪಷ್ಟವಾಗಿ ಪ್ರಭಾವ ಬೀರುತ್ತವೆ. ಆದುದರಿಂದ, ದೇವರು ಯೋಬನಿಗೆ ಏನು ಕೇಳುತ್ತಾನೆಂಬುದನ್ನು ನೋಡೋಣ ಮತ್ತು ಅದರ ಸೂಚಿತಾರ್ಥಗಳ ಕುರಿತು ಆಲೋಚಿಸೋಣ. ಹೌದು, ಯೋಬ 37:14 ಏನನ್ನು ಮಾಡುವಂತೆ ಹುರಿದುಂಬಿಸುತ್ತದೋ ಅದನ್ನೇ ನಾವು ಮಾಡೋಣ.

10. ಯೋಬ ಅಧ್ಯಾಯ 38 ನಮ್ಮ ಮೇಲೆ ಯಾವ ಪ್ರಭಾವ ಬೀರಬೇಕು, ಮತ್ತು ಇದು ಯಾವ ಪ್ರಶ್ನೆಗಳನ್ನು ಎಬ್ಬಿಸುತ್ತದೆ?

10 ಅಧ್ಯಾಯ 38 ಹೀಗೆ ಆರಂಭವಾಗುತ್ತದೆ: “ಆಗ ಯೆಹೋವನು ಬಿರುಗಾಳಿಯೊಳಗಿಂದ ಯೋಬನಿಗೆ ಪ್ರತ್ಯುತ್ತರವಾಗಿ ಹೀಗೆಂದನು​—ಅಜ್ಞಾನದ ಮಾತುಗಳಿಂದ ಸತ್ಯಾಲೋಚನೆಯನ್ನು ಮಂಕುಮಾಡುವ ಇವನು ಯಾರು? ಶೂರನಂತೆ ನಡುಕಟ್ಟಿಕೋ; ನಾನು ಪ್ರಶ್ನೆಮಾಡುವೆನು, ನೀನೇ ನನಗೆ ಉಪದೇಶಿಸು.” (ಯೋಬ 38:​1-3) ಇದು ಮುಂದಿನ ವಿಷಯಕ್ಕೆ ತಳಪಾಯವನ್ನು ಹಾಕಿತು. ತಾನು ವಿಶ್ವದ ಸೃಷ್ಟಿಕರ್ತನ ಮುಂದೆ ನಿಂತುಕೊಂಡಿದ್ದೇನೆ ಮತ್ತು ಆತನಿಗೆ ಲೆಕ್ಕವೊಪ್ಪಿಸಬೇಕೆಂಬ ವಾಸ್ತವಿಕತೆಗೆ ತನ್ನ ಯೋಚನಾರೀತಿಯನ್ನು ಹೊಂದಿಸಿಕೊಳ್ಳುವಂತೆ ಇದು ಯೋಬನಿಗೆ ಸಹಾಯ ಮಾಡಿತು. ಇದು ನಾವು ಮತ್ತು ನಮ್ಮ ಸಮಕಾಲೀನರು ಸಹ ಮಾಡಬೇಕಾದ ಒಂದು ಒಳ್ಳೆಯ ಸಂಗತಿಯಾಗಿದೆ. ಅನಂತರ ದೇವರು, ಎಲೀಹು ತಿಳಿಸಿದಂಥ ವಿಷಯಗಳಿಗೆ ಸಂಬಂಧಿಸುವ ವಿಷಯಗಳನ್ನು ತಿಳಿಸುತ್ತಾನೆ. “ನಾನು ಲೋಕಕ್ಕೆ ಅಸ್ತಿವಾರಹಾಕಿದಾಗ ನೀನು ಎಲ್ಲಿದ್ದಿ? ನೀನು ಜ್ಞಾನಿಯಾಗಿದ್ದರೆ ಹೇಳು. ಅದರ ಅಳತೆಗಳನ್ನು ಯಾರು ಗೊತ್ತುಮಾಡಿದರು? ನೀನೇ ಬಲ್ಲೆ. ಅದರ ಮೇಲೆ ನೂಲುಹಿಡಿದವರು ಯಾರು? . . . ಭೂಲೋಕದ ಸುಣ್ಣಪಾದಗಳು ಯಾವದರಲ್ಲಿ ನೆಲೆಗೊಂಡವು? ಅದರ ಮೂಲೆಗಲ್ಲನ್ನು ಹಾಕಿದವರು ಯಾರು?”​—ಯೋಬ 38:​4, 5, 7.

11. ಯೋಬ 38:​4-6 ನಮಗೆ ಯಾವ ವಿಷಯಗಳನ್ನು ಮನದಟ್ಟುಗೊಳಿಸಬೇಕು?

11 ಭೂಮಿಯು ಸೃಷ್ಟಿಸಲ್ಪಟ್ಟಾಗ, ಯೋಬನು ಅಷ್ಟೇಕೆ ನಮ್ಮಲ್ಲಿ ಯಾರೊಬ್ಬರೇ ಆಗಲಿ ಎಲ್ಲಿದ್ದೆವು? ನಮ್ಮ ಭೂಮಿಯ ವಿನ್ಯಾಸಮಾಡಿ, ಆ ವಿನ್ಯಾಸದ ಆಧಾರದ ಮೇಲೆ ಒಂದು ಸ್ಕೇಲಿನಿಂದಲೊ ಎಂಬಂತೆ ನಾವು ಅದರ ಪರಿಮಾಣಗಳನ್ನು ಗೊತ್ತುಪಡಿಸಿದೆವೊ? ಖಂಡಿತವಾಗಿಯೂ ಇಲ್ಲ! ಆ ಸಮಯದಲ್ಲಿ ಮಾನವರು ಇನ್ನೂ ಅಸ್ತಿತ್ವಕ್ಕೆ ಬಂದಿರಲಿಲ್ಲ. ನಮ್ಮ ಭೂಮಿಯು ಒಂದು ಕಟ್ಟಡವಾಗಿದೆಯೊ ಎಂಬಂತೆ ದೇವರು ಕೇಳುವುದು: “ಅದರ ಮೂಲೆಗಲ್ಲನ್ನು (“ಗದ್ದುಗೇ ಕಲ್ಲು,” ಪಾದಟಿಪ್ಪಣಿ) ಹಾಕಿದವರು ಯಾರು?” ನಮ್ಮ ಭೂಗ್ರಹವು ಸೂರ್ಯನಿಂದ ಸರಿಯಾದ ಅಂತರದಲ್ಲಿ ಇಡಲ್ಪಟ್ಟಿದೆ, ಆದುದರಿಂದಲೇ ನಾವು ಈ ಭೂಗ್ರಹದಲ್ಲಿ ಜೀವಿಸಸಾಧ್ಯವಿದೆ ಎಂಬುದು ನಮಗೆ ಗೊತ್ತಿದೆ. ಇದರ ಗಾತ್ರವೂ ನಿಖರವಾಗಿದೆ. ಒಂದುವೇಳೆ ಭೂಮಿಯು ಸ್ವಲ್ಪ ದೊಡ್ಡದಿರುತ್ತಿದ್ದಲ್ಲಿ, ಹೈಡ್ರೊಜನ್‌ ಅನಿಲವು ನಮ್ಮ ವಾತಾವರಣದಿಂದ ಹೊರಹೋಗುತ್ತಿರಲಿಲ್ಲ ಮತ್ತು ನಮ್ಮ ಈ ಗ್ರಹದಲ್ಲಿ ಯಾವುದೇ ಜೀವಿಗೆ ಬದುಕಲು ಅನುಕೂಲಕರವಾದ ಹವಾಮಾನವು ಇರುತ್ತಿರಲಿಲ್ಲ. “ಅದರ ಮೂಲೆಗಲ್ಲನ್ನು” ಯಾರೋ ಸರಿಯಾದ ಸ್ಥಳದಲ್ಲಿ ಹಾಕಿದ್ದಾರೆಂಬುದು ತೀರ ಸ್ಪಷ್ಟ. ಇದಕ್ಕಾಗಿ ಕೀರ್ತಿ ಯಾರಿಗೆ ಸಲ್ಲಬೇಕು? ಯೋಬನಿಗೊ? ನಮಗೊ? ಅಥವಾ ಯೆಹೋವ ದೇವರಿಗೊ?​—ಜ್ಞಾನೋಕ್ತಿ 3:19; ಯೆರೆಮೀಯ 10:12.

ಯಾವ ಮನುಷ್ಯನ ಬಳಿ ಉತ್ತರಗಳಿವೆ?

12. ಯೋಬ 38:6ರಲ್ಲಿರುವ ಪ್ರಶ್ನೆಯು ನಾವು ಯಾವುದರ ಬಗ್ಗೆ ಯೋಚಿಸುವಂತೆ ಮಾಡುತ್ತದೆ?

12 ದೇವರು ಹೀಗೂ ಪ್ರಶ್ನಿಸಿದನು: “ಭೂಲೋಕದ ಸುಣ್ಣಪಾದಗಳು ಯಾವದರಲ್ಲಿ ನೆಲೆಗೊಂಡವು?” ಅದೊಂದು ಒಳ್ಳೆಯ ಪ್ರಶ್ನೆಯಲ್ಲವೊ? ಯೋಬನಿಗೆ ಗೊತ್ತಿರದಂತಹ ಗುರುತ್ವಾಕರ್ಷಣೆಯ ವಿಷಯವು ಬಹುಶಃ ನಮಗೆ ಪರಿಚಿತವಾಗಿರಬಹುದು. ಸೂರ್ಯನ ಭಾರಿ ದ್ರವ್ಯರಾಶಿಯಿಂದ ಉಂಟಾಗುವ ಗುರುತ್ವಾಕರ್ಷಣ ಬಲವು, ನಮ್ಮ ಭೂಮಿಯನ್ನು ಸರಿಯಾದ ಸ್ಥಳದಲ್ಲಿ ಇರಿಸಲು, ಅಂದರೆ ಅದರ ಸುಣ್ಣಪಾದಗಳನ್ನು ನೆಲೆಗೊಳಿಸಲು ಸಹಾಯ ಮಾಡುತ್ತದೆಂದು ನಮ್ಮಲ್ಲಿ ಹೆಚ್ಚಿನವರಿಗೆ ತಿಳಿದಿದೆ. ಆದರೂ, ಗುರುತ್ವಾಕರ್ಷಣೆಯನ್ನು ಯಾರು ಪೂರ್ಣವಾಗಿ ಅರ್ಥಮಾಡಿಕೊಂಡಿದ್ದಾರೆ?

13, 14. (ಎ) ಗುರುತ್ವಾಕರ್ಷಣೆಯ ಕುರಿತಾಗಿ ಏನನ್ನು ಒಪ್ಪಿಕೊಳ್ಳಬೇಕಾಗುತ್ತದೆ? (ಬಿ) ಯೋಬ 38:6 ಎತ್ತಿತೋರಿಸುವ ಸನ್ನಿವೇಶಕ್ಕೆ ನಾವು ಹೇಗೆ ಪ್ರತಿಕ್ರಿಯೆ ತೋರಿಸಬೇಕು?

13 ಈ ವಿಶ್ವವು ವಿವರಿಸಲ್ಪಟ್ಟದ್ದು (ಇಂಗ್ಲಿಷ್‌) ಎಂಬ ಶೀರ್ಷಿಕೆಯುಳ್ಳ ಇತ್ತೀಚೆಗೆ ಪ್ರಕಾಶಿಸಲ್ಪಟ್ಟಿರುವ ಪುಸ್ತಕವು ಒಪ್ಪಿಕೊಳ್ಳುವುದೇನೆಂದರೆ, ‘ಗುರುತ್ವಾಕರ್ಷಣೆಯು ತುಂಬ ಚಿರಪರಿಚಿತವಾದ ವಿಷಯವಾಗಿರುವುದಾದರೂ, ನಿಸರ್ಗದ ಶಕ್ತಿಗಳಲ್ಲಿ ನಮಗೆ ತೀರ ಕಡಿಮೆ ಅರ್ಥವಾಗಿರುವ ವಿಷಯವು ಇದೇ ಆಗಿದೆ.’ ಅದು ಕೂಡಿಸಿದ್ದು: “ಗುರುತ್ವಾಕರ್ಷಣ ಶಕ್ತಿಯು ಶೂನ್ಯ ಬಾಹ್ಯಾಕಾಶದಲ್ಲಿ ತತ್‌ಕ್ಷಣವೇ ಹಾದುಹೋಗುತ್ತಿರುವಂತೆ, ಯಾವುದೇ ಮಾಧ್ಯಮವಿಲ್ಲದೆ ಈ ಕ್ರಿಯೆಯು ನಡೆಯುತ್ತಿರುವಂತೆ ತೋರುತ್ತದೆ. ಆದರೂ, ಗ್ರ್ಯಾವಿಟನ್‌ಗಳು ಎಂದು ಕರೆಯಲ್ಪಡುವ ಕಣಗಳಿಂದ ಮಾಡಲ್ಪಟ್ಟ ಅಲೆಗಳ ಮೂಲಕ ಗುರುತ್ವಾಕರ್ಷಣೆಯು ಹಾದುಹೋಗಬಹುದು ಎಂಬುದನ್ನು, ಇತ್ತೀಚಿನ ವರ್ಷಗಳಲ್ಲಿ ಭೌತವಿಜ್ಞಾನಿಗಳು ಊಹಿಸಲಾರಂಭಿಸಿದ್ದಾರೆ . . . ಆದರೆ ಈ ಗ್ರ್ಯಾವಿಟನ್‌ಗಳ ಅಸ್ತಿತ್ವದ ಬಗ್ಗೆ ಯಾರಿಗೂ ಖಾತರಿಯಿಲ್ಲ.” ಇದರ ಸೂಚಿತಾರ್ಥವೇನೆಂಬುದರ ಕುರಿತು ತುಸು ಆಲೋಚಿಸಿರಿ!

14 ಯೆಹೋವನು ಯೋಬನಿಗೆ ಆ ಪ್ರಶ್ನೆಗಳನ್ನು ಕೇಳಿದ 3,000 ವರ್ಷಗಳ ಹಿಂದಿನ ಸಮಯದಿಂದ ಇದುವರೆಗೆ ವಿಜ್ಞಾನವು ಬಹಳಷ್ಟು ಪ್ರಗತಿಯನ್ನು ಮಾಡಿದೆ. ಆದರೂ ನಾವಾಗಲಿ ನುರಿತ ಭೌತವಿಜ್ಞಾನಿಗಳಾಗಲಿ, ನಮ್ಮ ಭೂಮಿಯನ್ನು ಸರಿಯಾದ ಕಕ್ಷೆಯಲ್ಲಿಟ್ಟು ನಾವು ಇಲ್ಲಿ ಜೀವನವನ್ನು ಆನಂದಿಸುವಂತೆ ಅನುಮತಿಸುವ ಆ ಗುರುತ್ವಾಕರ್ಷಣೆಯನ್ನು ಸಂಪೂರ್ಣವಾಗಿ ವಿವರಿಸಲಾರೆವು. (ಯೋಬ 26:7; ಯೆಶಾಯ 45:18) ಗುರುತ್ವಾಕರ್ಷಣೆಯ ರಹಸ್ಯಗಳನ್ನೆಲ್ಲಾ ತಿಳಿದುಕೊಳ್ಳಲಿಕ್ಕಾಗಿ ನಾವೆಲ್ಲರೂ ಗಾಢವಾದ ಅಧ್ಯಯನವನ್ನು ಮಾಡಬೇಕು ಎಂಬುದನ್ನು ಸೂಚಿಸಲಿಕ್ಕಾಗಿ ನಾವಿದನ್ನು ಹೇಳುತ್ತಿಲ್ಲ. ಬದಲಾಗಿ, ದೇವರ ಅದ್ಭುತಕಾರ್ಯಗಳಲ್ಲಿ ಕೇವಲ ಈ ಒಂದು ವಿಷಯಕ್ಕೆ ಗಮನ ಕೊಡುವುದು ಸಹ, ಆತನ ಕುರಿತಾದ ನಮ್ಮ ದೃಷ್ಟಿಕೋನದ ಮೇಲೆ ಪ್ರಭಾವವನ್ನು ಬೀರಬೇಕು. ಆತನ ವಿವೇಕ ಹಾಗೂ ಜ್ಞಾನವು ನಿಮ್ಮಲ್ಲಿ ಭಯಭಕ್ತಿಯನ್ನು ಹುಟ್ಟಿಸಿ, ಆತನ ಚಿತ್ತದ ಕುರಿತು ನಾವು ಏಕೆ ಹೆಚ್ಚನ್ನು ಕಲಿತುಕೊಳ್ಳುವ ಅಗತ್ಯವಿದೆ ಎಂಬ ಅರಿವನ್ನು ನಿಮ್ಮಲ್ಲಿ ಮೂಡಿಸುತ್ತದೊ?

15-17. (ಎ) ಯೋಬ 38:​8-11 ಯಾವುದರ ಮೇಲೆ ಕೇಂದ್ರೀಕರಿಸುತ್ತದೆ, ಇದು ಯಾವ ಪ್ರಶ್ನೆಗಳಿಗೆ ನಡೆಸುತ್ತದೆ? (ಬಿ) ಸಾಗರಗಳು ಮತ್ತು ಅವು ಭೂಗೋಳದಲ್ಲಿ ವಿಭಾಗಿಸಲ್ಪಟ್ಟಿರುವ ಮಾಹಿತಿಯ ಕುರಿತಾಗಿ ಏನನ್ನು ಒಪ್ಪಿಕೊಳ್ಳಲೇಬೇಕು?

15 ಸೃಷ್ಟಿಕರ್ತನು ತನ್ನ ಪ್ರಶ್ನೆಗಳನ್ನು ಕೇಳುತ್ತಾ ಮುಂದುವರಿಯುತ್ತಾನೆ: “ಸಮುದ್ರವು ಗರ್ಭವನ್ನು ಭೇದಿಸಿಕೊಂಡು ಬರಲು ಅದರ ದ್ವಾರಗಳನ್ನು ಮುಚ್ಚಿದವರು ಯಾರು? ಆ ಕಾಲದಲ್ಲಿ ನಾನು ಮೋಡಗಳನ್ನು ಅದಕ್ಕೆ ವಸ್ತ್ರವನ್ನಾಗಿಯೂ ಕಾರ್ಗತ್ತಲನ್ನು ಸುತ್ತುಬಟ್ಟೆಯನ್ನಾಗಿಯೂ ಮಾಡಿದೆನಲ್ಲವೆ! ಇದಲ್ಲದೆ ಸಮುದ್ರಕ್ಕೆ ನನ್ನ ಇಷ್ಟದ ಎಲ್ಲೆಯನ್ನು ಕಟ್ಟಿ ಅಗುಳಿ ಕದಗಳನ್ನು ಹಾಕಿ ಇಲ್ಲಿಯ ತನಕ ಬರಬಹುದು; ಮೀರಿ ಬರಬೇಡ, ನಿನ್ನ ತೆರೆಗಳ ಹೆಮ್ಮೆಗೆ ಇಲ್ಲೇ ತಡೆಯಾಗುವದು ಎಂದು ಅಪ್ಪಣೆಕೊಟ್ಟೆನು.”​—ಯೋಬ 38:​8-11.

16 ಸಮುದ್ರದ ದ್ವಾರಗಳನ್ನು ಮುಚ್ಚುವುದರ ಕುರಿತಾಗಿ ಹೇಳುವಾಗ, ಇದರಲ್ಲಿ ಭೂಖಂಡಗಳು, ಸಾಗರಗಳು ಮತ್ತು ಭರತಗಳು ಸಹ ಸೇರಿವೆ. ಮನುಷ್ಯನು ಇದೆಲ್ಲವನ್ನೂ ಎಷ್ಟು ಸಮಯದಿಂದ ಗಮನಿಸಿದ್ದಾನೆ ಮತ್ತು ಇವುಗಳ ಬಗ್ಗೆ ಅಧ್ಯಯನ ನಡೆಸಿದ್ದಾನೆ? ಸಾವಿರಾರು ವರ್ಷಗಳಿಂದ ಮತ್ತು ಕಳೆದ ಶತಮಾನದಲ್ಲಂತೂ ಅವನು ಗಹನವಾದ ಅಧ್ಯಯನವನ್ನು ನಡೆಸಿದ್ದಾನೆ. ಆದುದರಿಂದ ಇವುಗಳ ಕುರಿತು ತಿಳಿದುಕೊಳ್ಳಬೇಕಾದ ವಿಷಯಗಳು ಇನ್ನೇನೂ ಇಲ್ಲವೆಂದು ನೀವು ಊಹಿಸಬಹುದು. ಆದರೆ ಈ ವರ್ಷ 2001ರಲ್ಲಿ, ನೀವು ತೀರ ಇತ್ತೀಚಿನ ಸಂಗತಿಗಳನ್ನು ಹುಡುಕಲಿಕ್ಕಾಗಿ ಲೋಕದ ಅತಿ ದೊಡ್ಡ ಗ್ರಂಥಾಲಯಗಳಲ್ಲಿ ಸಂಶೋಧನೆ ಮಾಡಿದರೆ ಅಥವಾ ಇಂಟರ್‌ನೆಟ್‌ನ ಅಪಾರ ಸಂಶೋಧನಾ ಸೌಕರ್ಯಗಳನ್ನು ಉಪಯೋಗಿಸಿದರೆ, ನಿಮಗೇನು ಸಿಗುವುದು?

17 ವ್ಯಾಪಕವಾಗಿ ಅಂಗೀಕರಿಸಲ್ಪಟ್ಟಿರುವ ಒಂದು ರೆಫರೆನ್ಸ್‌ ಪುಸ್ತಕದಲ್ಲಿ ಹೀಗೆ ಹೇಳಲ್ಪಟ್ಟಿರುವುದನ್ನು ನೀವು ಕಂಡುಕೊಳ್ಳುವಿರಿ: “ಭೂಗೋಳದ ಮೇಲ್ಮೈಯಲ್ಲಿ ಭೂಖಂಡಗಳು, ಮಹಾಸಾಗರಗಳು, ಪರ್ವತಗಳು, ಮತ್ತು ನದಿಗಳು ಹೇಗೆ ವಿಭಾಗಿಸಲ್ಪಟ್ಟಿವೆ ಎಂಬುದನ್ನು ತಿಳಿದುಕೊಳ್ಳಲಿಕ್ಕಾಗಿ ವಿಜ್ಞಾನಿಗಳು ಬಹಳ ಸಮಯದಿಂದಲೂ ಅಧ್ಯಯನ ನಡೆಸುತ್ತಿದ್ದಾರೆ. ವೈಜ್ಞಾನಿಕ ಅನ್ವೇಷಣೆ ಹಾಗೂ ಊಹೆಗೆ ಅತಿ ಕುತೂಹಲಕಾರಿ ಸಮಸ್ಯೆಗಳನ್ನು ಒಡ್ಡುತ್ತಿರುವ ಅನೇಕ ಸಂಗತಿಗಳಲ್ಲಿ ಇದು ಒಂದಾಗಿದೆ.” ಇದನ್ನು ಹೇಳಿದ ಬಳಿಕ, ಆ ವಿಶ್ವಕೋಶವು ನಾಲ್ಕು ಸಂಭವನೀಯ ವಿವರಣೆಗಳನ್ನು ನೀಡಿತು. ಆದರೂ, ಈ ಸಂಭವನೀಯ ವಿವರಣೆಗಳು “ಆಧಾರರಹಿತವಾಗಿರುವಂತಹ ಅನೇಕ ಸಿದ್ಧಾಂತಗಳಲ್ಲಿ” ಕೆಲವಾಗಿವೆ ಎಂದು ಅದು ಹೇಳಿತು. ಮತ್ತು ನಿಮಗೆ ತಿಳಿದಿರುವಂತೆ, ಒಂದು ಆಧಾರರಹಿತ ಸಿದ್ಧಾಂತದ ಅರ್ಥ, “ಒಂದು ಪರೀಕ್ಷಾರ್ಥಕ ವಿವರಣೆಗಿಂತ ಹೆಚ್ಚಿನ ಆಧಾರವನ್ನು ಒದಗಿಸಲು ಅದಕ್ಕೆ ಸಾಕಷ್ಟು ಪುರಾವೆಯಿರುವುದಿಲ್ಲ” ಎಂದಾಗಿದೆ.

18. ಯೋಬ 38:​8-11 ನೀವು ಯಾವ ತೀರ್ಮಾನಕ್ಕೆ ಬರುವಂತೆ ಮಾಡುತ್ತದೆ?

18 ಇದು ಯೋಬ 38:​8-11ರಲ್ಲಿ ನಾವು ಓದುವ ಪ್ರಶ್ನೆಗಳ ಸಮಯೋಚಿತತೆಯನ್ನು ಒತ್ತಿಹೇಳುವುದಿಲ್ಲವೊ? ನಮ್ಮ ಭೂಗ್ರಹದ ಈ ಎಲ್ಲ ವೈಶಿಷ್ಟ್ಯಗಳನ್ನು ಚೆನ್ನಾಗಿ ಏರ್ಪಡಿಸಿರುವುದಕ್ಕಾಗಿರುವ ಕೀರ್ತಿಯು ನಮಗೆ ಸಲ್ಲತಕ್ಕದ್ದಲ್ಲ ಎಂಬುದಂತೂ ಖಂಡಿತ. ಚಂದ್ರನ ಗುರುತ್ವಾಕರ್ಷಣಾ ಶಕ್ತಿಯು, ನಮ್ಮ ಕರಾವಳಿಗಳಿಗಾಗಲಿ ವೈಯಕ್ತಿಕವಾಗಿ ನಮಗಾಗಲಿ ಸಾಮಾನ್ಯವಾಗಿ ಹಾನಿಯನ್ನು ಉಂಟುಮಾಡದಿರುವಂತಹ ಸಮುದ್ರದ ಉಬ್ಬರವಿಳಿತವನ್ನು ಉತ್ಪಾದಿಸುತ್ತದೆ. ಹೀಗಾಗುವಂತೆ ಚಂದ್ರನನ್ನು ಸೂಕ್ತವಾದ ಸ್ಥಳದಲ್ಲಿ ಇಟ್ಟಿರುವುದು ನಾವಲ್ಲ. ಅದನ್ನು ಮಾಡಿದವನು ಯಾರೆಂದು ನೀವು ಬಲ್ಲಿರಿ. ಹೌದು, ಅದ್ಭುತಕಾರ್ಯಗಳನ್ನು ನಡೆಸುವಾತನೇ.​—ಕೀರ್ತನೆ 33:7; 89:9; ಜ್ಞಾನೋಕ್ತಿ 8:29; ಅ. ಕೃತ್ಯಗಳು 4:24; ಪ್ರಕಟನೆ 14:7.

ಯೆಹೋವನಿಗೆ ಕೀರ್ತಿಯನ್ನು ಸಲ್ಲಿಸಿರಿ

19. ಯೋಬ 38:​12-14ರಲ್ಲಿರುವ ಕಾವ್ಯಾತ್ಮಕ ಅಭಿವ್ಯಕ್ತಿಗಳು ಯಾವ ಭೌತಿಕ ವಾಸ್ತವಿಕತೆಗಳ ಕಡೆಗೆ ನಮ್ಮ ಗಮನವನ್ನು ಸೆಳೆಯುತ್ತವೆ?

19 ಅಷ್ಟುಮಾತ್ರವಲ್ಲ, ಯೋಬ 38:​12-14ರಲ್ಲಿ ಸೂಚಿಸಲ್ಪಟ್ಟ ಭೂಮಿಯ ಆವರ್ತನೆಯ ಕುರಿತಾದ ಕೀರ್ತಿ ಸಹ ಮಾನವರಿಗೆ ಸಲ್ಲತಕ್ಕದ್ದಲ್ಲ. ಈ ಆವರ್ತನೆಯು, ಅನೇಕವೇಳೆ ಉಸಿರುಕಟ್ಟಿಸುವಷ್ಟು ಮನೋಹರವಾದ ಅರುಣೋದಯವನ್ನು ಉಂಟುಮಾಡುತ್ತದೆ. ಮೆತ್ತಗಿರುವ ಜೇಡಿಮಣ್ಣಿನಲ್ಲಿ ಒಂದು ಮುದ್ರೆಯೊತ್ತಲ್ಪಡುವಲ್ಲಿ ಅದು ಜೇಡಿಮಣ್ಣಿನ ಮೇಲೆ ಸ್ಪಷ್ಟವಾದ ಗುರುತುಗಳನ್ನು ಮಾಡುವಂತೆಯೇ, ಸೂರ್ಯನು ಉದಯಿಸುತ್ತಿರುವಾಗ ನಮ್ಮ ಭೂಮಿಯ ಮೇಲಿನ ವೈಶಿಷ್ಟ್ಯಗಳು ಹೆಚ್ಚು ಸ್ಪಷ್ಟವಾಗಿ ಕಾಣತೊಡಗುತ್ತವೆ. ಭೂಮಿಯ ಚಲನೆಗೆ ನಾವು ಸ್ವಲ್ಪ ಗಮನವನ್ನು ಕೊಡುವಲ್ಲಿ, ಭೂಮಿಯು ತನ್ನ ಕಕ್ಷೆಯಲ್ಲಿ ತುಂಬ ವೇಗವಾಗಿ ತಿರುಗುವುದಿಲ್ಲ ಎಂಬ ಸಂಗತಿಯ ಕುರಿತು ನಾವು ಬೆರಗಾಗಬೇಕು. ಒಂದುವೇಳೆ ಅದು ವೇಗವಾಗಿ ತಿರುಗುತ್ತಿದ್ದರೆ, ಅದು ವಿಪತ್ಕಾರಕವಾಗಿರುತ್ತಿತ್ತೆಂಬುದನ್ನು ನಾವು ಸುಲಭವಾಗಿ ಗ್ರಹಿಸಬಹುದು. ಭೂಮಿಯು ತೀರ ನಿಧಾನವಾಗಿಯೂ ತಿರುಗುವುದಿಲ್ಲ. ಹಾಗಿರುತ್ತಿದ್ದರೆ, ಹಗಲುಗಳು ಮತ್ತು ರಾತ್ರಿಗಳು ತುಂಬ ದೀರ್ಘವಾಗಿರುತ್ತಿದ್ದವು, ವಿಪರೀತ ಉಷ್ಣತೆ ಹಾಗೂ ಶೀತವು ಭೂಮಿಯಲ್ಲಿರುತ್ತಿತ್ತು ಮತ್ತು ಮಾನವರು ಜೀವಿಸುವುದು ಅಸಾಧ್ಯವಾಗುತ್ತಿತ್ತು. ಪ್ರಾಮಾಣಿಕವಾಗಿ ಹೇಳುವುದಾದರೆ, ಮಾನವರ ಒಂದು ಗುಂಪು ಈ ಆವರ್ತನೆಯ ವೇಗವನ್ನು ನಿಗದಿಪಡಿಸುವುದಕ್ಕೆ ಬದಲಾಗಿ, ಸ್ವತಃ ದೇವರೇ ಇದನ್ನು ನಿಗದಿಪಡಿಸಿರುವುದಕ್ಕಾಗಿ ನಾವು ಸಂತೋಷಿತರಾಗಿರಬೇಕು.​—ಕೀರ್ತನೆ 148:​1-5.

20. ಯೋಬ 38:​16, 18ರಲ್ಲಿ ಎಬ್ಬಿಸಲ್ಪಟ್ಟಿರುವ ಪ್ರಶ್ನೆಗಳಿಗೆ ನೀವು ಹೇಗೆ ಪ್ರತಿಕ್ರಿಯಿಸುವಿರಿ?

20 ಈಗ ದೇವರು ಇನ್ನೂ ಅನೇಕ ಪ್ರಶ್ನೆಗಳನ್ನು ನಿಮಗೆ ಕೇಳುತ್ತಿದ್ದಾನೆಂದು ಊಹಿಸಿಕೊಳ್ಳಿರಿ: “ಎಂದಾದರೂ ಸಮುದ್ರದ ಬುಗ್ಗೆಗಳೊಳಗೆ ಸೇರಿದ್ದೆಯೋ? ಭೂಮಿಯ ಕೆಳಗಣ ಸಾಗರದ ಗುಪ್ತಪ್ರದೇಶಗಳಲ್ಲಿ ತಿರುಗಾಡಿದ್ದೀಯೋ?” ಒಬ್ಬ ಸಮುದ್ರಶಾಸ್ತ್ರಜ್ಞನು ಸಹ ಈ ಪ್ರಶ್ನೆಗೆ ಸಂಪೂರ್ಣವಾದ ಉತ್ತರವನ್ನು ಕೊಡಲಾರನು! “ಭೂವಿಸ್ತಾರವನ್ನು ಗ್ರಹಿಸಿದ್ದೀಯೋ? ಇದೆಲ್ಲಾ ನಿನಗೆ ತಿಳಿದಿದ್ದರೆ ತಿಳಿಸು.” (ಯೋಬ 38:​16, 18) ನೀವು ಭೂಮಿಯಲ್ಲಿರುವ ಎಲ್ಲ ಸ್ಥಳಗಳಿಗೆ ಅಥವಾ ಕಡಿಮೆಪಕ್ಷ ಹೆಚ್ಚಿನ ಸ್ಥಳಗಳಿಗಾದರೂ ಭೇಟಿನೀಡಿ, ಸುತ್ತಿನೋಡಿದ್ದೀರೊ? ನಮ್ಮ ಭೂಮಿಯ ಸುಂದರ ಸ್ಥಳಗಳು ಹಾಗೂ ಅದ್ಭುತಗಳಿಗೆ ಗಮನ ಕೊಡಲು ಎಷ್ಟೊಂದು ಜೀವಮಾನಕಾಲಗಳು ಬೇಕಾಗುವವೊ ಏನೋ? ಆದರೆ ಆ ಜೀವಮಾನಕಾಲಗಳು ಖಂಡಿತವಾಗಿಯೂ ಅದ್ಭುತಕರವಾಗಿರುವವು!

21. (ಎ) ಯೋಬ 38:19ರಲ್ಲಿರುವ ಪ್ರಶ್ನೆಗಳು ಯಾವ ವೈಜ್ಞಾನಿಕ ಅಭಿಪ್ರಾಯಗಳನ್ನು ಮುಂದೆ ತರುತ್ತವೆ? (ಬಿ) ಬೆಳಕಿನ ಕುರಿತಾದ ವಾಸ್ತವಿಕತೆಗಳು ನಮಗೆ ಏನನ್ನು ಮಾಡುವಂತೆ ಪ್ರಚೋದಿಸಬೇಕು?

21 ಯೋಬ 38:19ರಲ್ಲಿರುವ ಅಗಾಧವಾದ ಪ್ರಶ್ನೆಗಳನ್ನೂ ನೋಡಿರಿ: “ಬೆಳಕಿನ ನಿವಾಸಕ್ಕೆ ಹೋಗುವ ದಾರಿ ಎಲ್ಲಿ? ಕತ್ತಲಿನ ಸ್ವಸ್ಥಳವು ಎಲ್ಲಿ?” ಬಹಳ ಸಮಯದ ವರೆಗೆ, ಬೆಳಕು ಒಂದು ಅಲೆಯಂತೆ, ಒಂದು ಕೊಳದಲ್ಲಿ ನಾವು ನೋಡಸಾಧ್ಯವಿರುವ ಸಣ್ಣ ಅಲೆಗಳಂತೆ ಹಾದುಹೋಗುತ್ತದೆ ಎಂದು ನೆನಸಲಾಗುತ್ತಿತ್ತೆಂಬುದು ನಿಮಗೆ ಗೊತ್ತಿರಬಹುದು. ತದನಂತರ 1905ರಲ್ಲಿ ಆಲ್ಬರ್ಟ್‌ ಐನ್‌ಸ್ಟಿನನು, ಬೆಳಕು ಶಕ್ತಿಯ ಕಣಗಳೋಪಾದಿ ಕಾರ್ಯನಡಿಸುತ್ತದೆ ಎಂಬ ಸಿದ್ಧಾಂತವನ್ನು ಕಂಡುಹಿಡಿದನು. ಇದು ಆ ವಿಷಯವನ್ನು ಬಗೆಹರಿಸಿತೊ? ಇತ್ತೀಚಿನ ಒಂದು ವಿಶ್ವಕೋಶವು ಪ್ರಶ್ನಿಸಿದ್ದು: “ಬೆಳಕು ಒಂದು ಅಲೆಯಾಗಿದೆಯೊ ಅಥವಾ ಒಂದು ಕಣವಾಗಿದೆಯೊ?” ಅದು ಉತ್ತರಿಸುವುದು: “ಬಹುಶಃ [ಬೆಳಕು] ಅಲೆಯೂ ಆಗಿರಸಾಧ್ಯವಿಲ್ಲ ಮತ್ತು ಕಣವೂ ಆಗಿರಸಾಧ್ಯವಿಲ್ಲ. ಏಕೆಂದರೆ ಎರಡರ [ಅಲೆಗಳು ಮತ್ತು ಕಣಗಳು] ವಿನ್ಯಾಸವು ತುಂಬ ಭಿನ್ನವಾದದ್ದಾಗಿದೆ. ಹೀಗೆ, ಈ ಪ್ರಶ್ನೆಗೆ ಅತ್ಯುತ್ತಮ ಉತ್ತರವೇನೆಂದರೆ, ಬೆಳಕು ಅಲೆಯೂ ಅಲ್ಲ ಕಣವೂ ಅಲ್ಲ.” ಆದರೂ, ನಾವೆಲ್ಲರೂ ಸೂರ್ಯನ ಬೆಳಕಿನಿಂದ (ನೇರವಾಗಿ ಅಥವಾ ಪರೋಕ್ಷವಾಗಿ) ಶಾಖವನ್ನು ಪಡೆದುಕೊಳ್ಳುತ್ತೇವೆ. ಸಸ್ಯಗಳು ಬೆಳಕಿಗೆ ಸ್ಪಂದಿಸುವ ಮೂಲಕ ಉತ್ಪಾದಿಸುವ ಆಹಾರ ಮತ್ತು ಆಮ್ಲಜನಕವನ್ನು ನಾವು ಸೇವಿಸುತ್ತೇವೆ. ಬೆಳಕಿನ ಕಾರಣದಿಂದಲೇ ನಾವು ಓದಬಲ್ಲೆವು, ನಮ್ಮ ಪ್ರಿಯ ಜನರ ಮುಖಗಳನ್ನು ನೋಡಬಲ್ಲೆವು, ಸೂರ್ಯಾಸ್ತಮಾನಗಳನ್ನು ಎವೆಯಿಕ್ಕದೆ ದೃಷ್ಟಿಸಬಲ್ಲೆವು ಮತ್ತು ಹೀಗೆ ಎಷ್ಟೋ ವಿಷಯಗಳನ್ನು ಮಾಡಬಲ್ಲೆವು. ನಾವಿದನ್ನು ಮಾಡುತ್ತಿರುವಾಗ, ದೇವರ ಕಾರ್ಯಗಳು ಅದ್ಭುತವಾದವುಗಳೆಂದು ಒಪ್ಪಿಕೊಳ್ಳಬೇಕಲ್ಲವೊ?​—ಕೀರ್ತನೆ 104:​1, 2; 145:5; ಯೆಶಾಯ 45:7; ಯೆರೆಮೀಯ 31:35.

22. ದೇವರ ಅದ್ಭುತಕಾರ್ಯಗಳಿಗೆ ಪ್ರಾಚೀನಕಾಲದ ದಾವೀದನು ಹೇಗೆ ಪ್ರತಿಕ್ರಿಯಿಸಿದನು?

22 ಯೆಹೋವನ ಅದ್ಭುತಕಾರ್ಯಗಳ ಕುರಿತಾಗಿ ನಾವು ಮನನ ಮಾಡುವುದರ ಉದ್ದೇಶವೇನು? ನಾವು ಭಯಚಕಿತರು ಅಥವಾ ಮೂಕವಿಸ್ಮಿತರಾಗಿ, ಭಾವನಾತ್ಮಕವಾಗಿ ಪ್ರಭಾವಿತರಾಗುವುದಕ್ಕಾಗಿ ಮಾತ್ರವೊ? ನಿಶ್ಚಯವಾಗಿಯೂ ಇಲ್ಲ. ಏಕೆಂದರೆ ದೇವರ ಎಲ್ಲ ಕಾರ್ಯಗಳನ್ನು ಗ್ರಹಿಸಿ, ಅವುಗಳ ಕುರಿತು ಟಿಪ್ಪಣಿಮಾಡುವುದು ಅಸಾಧ್ಯವಾದ ಕೆಲಸವೆಂದು ಪುರಾತನ ಕಾಲದ ಕೀರ್ತನೆಗಾರ ದಾವೀದನು ಒಪ್ಪಿಕೊಂಡನು. ಅವನು ಬರೆದುದು: “ಯೆಹೋವನೇ, ನನ್ನ ದೇವರೇ, . . . ನಮ್ಮ ಹಿತಕ್ಕಾಗಿ ನೀನು ಮಾಡಿದ ಆಲೋಚನೆಗಳೂ ಅದ್ಭುತಕಾರ್ಯಗಳೂ ಎಷ್ಟೋ ವಿಶೇಷವಾಗಿವೆ; ಅವುಗಳನ್ನು ವಿವರಿಸಿ ಹೇಳೋಣವೆಂದರೆ ಅಸಾಧ್ಯವು; ಅವು ಅಸಂಖ್ಯಾತವಾಗಿವೆ.” (ಕೀರ್ತನೆ 40:5) ಆದರೆ, ಆ ಭವ್ಯ ಕೆಲಸಗಳ ಕುರಿತು ತಾನು ಮೌನವಾಗಿರುವೆನೆಂಬುದು ದಾವೀದನು ಹೇಳಿದ್ದರ ಅರ್ಥವಾಗಿರಲಿಲ್ಲ ಎಂಬುದಂತೂ ಖಂಡಿತ. ಕೀರ್ತನೆ 9:1ರಲ್ಲಿ ವ್ಯಕ್ತಪಡಿಸಲ್ಪಟ್ಟಿರುವ ಅವನ ದೃಢಸಂಕಲ್ಪದಿಂದ ಅವನು ಇದನ್ನು ರುಜುಪಡಿಸಿದನು: “ಯೆಹೋವನೇ, ಮನಃಪೂರ್ವಕವಾಗಿ ನಿನ್ನನ್ನು ಕೊಂಡಾಡುವೆನು; ನೀನು ಮಾಡಿದ ಅದ್ಭುತಕಾರ್ಯಗಳನ್ನೆಲ್ಲಾ ವರ್ಣಿಸುವೆನು.”

23. ದೇವರ ಅದ್ಭುತಕಾರ್ಯಗಳ ಕುರಿತು ನಿಮ್ಮ ಪ್ರತಿಕ್ರಿಯೆ ಏನು, ಮತ್ತು ನೀವು ಇತರರಿಗೆ ಹೇಗೆ ಸಹಾಯ ಮಾಡಬಲ್ಲಿರಿ?

23 ನಾವು ಸಹ ಹಾಗೆಯೇ ಮಾಡುವಂತೆ ಪ್ರಚೋದಿಸಲ್ಪಡಬಾರದೊ? ದೇವರ ಭವ್ಯವಾದ ಕಾರ್ಯಗಳ ವಿಷಯದಲ್ಲಿ ನಮಗಾಗಿರುವ ವಿಸ್ಮಯವು, ನಾವು ಆತನ ಕುರಿತಾಗಿ, ಆತನು ಈಗಾಗಲೇ ಮಾಡಿರುವ ಮತ್ತು ಮುಂದೆ ಮಾಡಲಿರುವ ವಿಷಯಗಳ ಕುರಿತಾಗಿ ಮಾತಾಡುವಂತೆ ನಮ್ಮನ್ನು ಪ್ರಚೋದಿಸಬೇಕಲ್ಲವೊ? ಉತ್ತರವು ತುಂಬ ಸ್ಪಷ್ಟವಾಗಿದೆ. “ನಾವು ಜನಾಂಗಗಳಲ್ಲಿ ಆತನ ಘನತೆಯನ್ನೂ ಎಲ್ಲಾ ಜನರಲ್ಲಿ ಆತನ ಅದ್ಭುತಕೃತ್ಯಗಳನ್ನೂ ಪ್ರಸಿದ್ಧಪಡಿ”ಸಲೇಬೇಕು. (ಕೀರ್ತನೆ 96:​3-5) ಹೌದು, ದೇವರ ಅದ್ಭುತಕಾರ್ಯಗಳಿಗಾಗಿ ನಮಗಿರುವ ನಮ್ರ ಗಣ್ಯತೆಯನ್ನು, ಆತನ ಬಗ್ಗೆ ನಾವು ಕಲಿತಿರುವ ವಿಷಯಗಳನ್ನು ಇತರರೊಂದಿಗೆ ಹಂಚಿಕೊಳ್ಳುವ ಮೂಲಕ ತೋರಿಸಬಲ್ಲೆವು. ಇತರರು, ಸೃಷ್ಟಿಕರ್ತನನ್ನು ತಳ್ಳಿಹಾಕಿರುವ ಒಂದು ಸಂಸ್ಕೃತಿಯಲ್ಲಿ ಬೆಳೆದರೂ, ನಮ್ಮ ಸಕಾರಾತ್ಮಕ, ಮಾಹಿತಿಭರಿತ ಅಭಿವ್ಯಕ್ತಿಗಳು ಅವರು ದೇವರನ್ನು ಅಂಗೀಕರಿಸುವಂತೆ ಮಾಡಬಹುದು. ಅದಕ್ಕಿಂತಲೂ ಹೆಚ್ಚಾಗಿ ಅವರು ‘ಸಮಸ್ತವನ್ನು ಸೃಷ್ಟಿಸಿದಾತನು’ ಹಾಗೂ ಅದ್ಭುತಕಾರ್ಯಗಳನ್ನು ನಡೆಸುವಾತನಾದ ಯೆಹೋವನ ಕುರಿತಾಗಿ ಕಲಿಯುವ ಮತ್ತು ಆತನ ಸೇವೆಮಾಡುವ ಬಯಕೆಯನ್ನು ಅವರಲ್ಲಿ ಹುಟ್ಟಿಸಬಹುದು.​—ಪ್ರಕಟನೆ 4:11.

ನೀವು ಹೇಗೆ ಉತ್ತರಿಸುವಿರಿ?

ಯೋಬ 37:14ರಲ್ಲಿ ದಾಖಲಿಸಲ್ಪಟ್ಟಿರುವ ಬುದ್ಧಿವಾದವು, ನೀವು ದೇವರ ಕಾರ್ಯಗಳ ಕುರಿತಾಗಿ ಏನನ್ನು ಯೋಚಿಸುವಂತೆ ಮಾಡುತ್ತದೆ?

ಯೋಬ 37 ಮತ್ತು 38ನೆಯ ಅಧ್ಯಾಯಗಳಲ್ಲಿ ಎತ್ತಿಹೇಳಲ್ಪಟ್ಟಿರುವ, ಆದರೆ ವಿಜ್ಞಾನವು ಪೂರ್ಣವಾಗಿ ವಿವರಿಸಲಾಗದ ವಿಷಯಗಳಲ್ಲಿ ಕೆಲವು ಯಾವವು?

• ದೇವರ ಅದ್ಭುತಕಾರ್ಯಗಳ ಕುರಿತಾಗಿ ನಿಮಗೆ ಹೇಗನಿಸುತ್ತದೆ, ಮತ್ತು ನೀವು ಏನನ್ನು ಮಾಡುವಂತೆ ಅದು ಪ್ರಚೋದಿಸುತ್ತದೆ?

[ಅಧ್ಯಯನ ಪ್ರಶ್ನೆಗಳು]

[ಪುಟ 7ರಲ್ಲಿರುವ ಚಿತ್ರ]

ಸಮುದ್ರವನ್ನು ಅದರ ಸ್ವಸ್ಥಾನದಲ್ಲಿಡುತ್ತಾ ಅದರ ದ್ವಾರಗಳನ್ನು ಮುಚ್ಚಿದವರು ಯಾರು?

[ಪುಟ 7ರಲ್ಲಿರುವ ಚಿತ್ರ]

ದೇವರು ಸೃಷ್ಟಿಸಿರುವ ಭೂಮಿಯ ಮೇಲಿನ ಎಲ್ಲ ಸುಂದರ ಸ್ಥಳಗಳನ್ನು ಯಾರು ಸಂದರ್ಶಿಸಿದ್ದಾರೆ?