ಯೇಸು ಕ್ರಿಸ್ತನು ನಮಗೆ ಹೇಗೆ ಸಹಾಯ ಮಾಡಬಲ್ಲನು?
ಯೇಸು ಕ್ರಿಸ್ತನು ನಮಗೆ ಹೇಗೆ ಸಹಾಯ ಮಾಡಬಲ್ಲನು?
ಯೇಸು ಕ್ರಿಸ್ತನು ಭೂಮಿಯಲ್ಲಿದ್ದಾಗ ಜನರಿಗೆ ನೆರವು ನೀಡಲು ಮಾಡಿದ್ದೆಲ್ಲವೂ ಅದ್ಭುತವಾಗಿತ್ತು. ಈ ವಿಷಯವು ಎಷ್ಟು ನಿಜವಾಗಿತ್ತೆಂದರೆ, ಪ್ರತ್ಯಕ್ಷ ಸಾಕ್ಷಿಯೊಬ್ಬನು ಯೇಸುವಿನ ಜೀವಿತದ ಅನೇಕ ಘಟನೆಗಳನ್ನು ಪಟ್ಟಿಮಾಡಿದ ಬಳಿಕ ಹೇಳಿದ್ದು: “ಇದಲ್ಲದೆ ಯೇಸು ಮಾಡಿದ್ದು ಇನ್ನೂ ಬಹಳವಿದೆ; ಅದನ್ನೆಲ್ಲಾ ಒಂದೊಂದಾಗಿ ಬರೆಯುವದಾದರೆ ಬರೆಯಬೇಕಾದ ಪುಸ್ತಕಗಳನ್ನು ಲೋಕವೇ ಹಿಡಿಸದೆ ಹೋದೀತೆಂದು ನಾನು ನೆನಸುತ್ತೇನೆ.” (ಯೋಹಾನ 21:25) ಯೇಸು ಭೂಮಿಯಲ್ಲಿದ್ದಾಗ ಇಷ್ಟೊಂದು ಸಹಾಯವನ್ನು ಮಾಡಿರುವುದರಿಂದ, ‘ಈಗ ಸ್ವರ್ಗದಲ್ಲಿ ಅವನು ಹೇಗೆ ನಮ್ಮ ಸಹಾಯಕನಾಗಿರಸಾಧ್ಯವಿದೆ? ನಾವು ಯೇಸುವಿನ ಕೋಮಲ ಸಹಾನುಭೂತಿಯಿಂದ ಈಗಲೂ ಪ್ರಯೋಜನ ಪಡೆದುಕೊಳ್ಳಸಾಧ್ಯವಿದೆಯೊ?’ ಎಂದು ನಾವು ಪ್ರಶ್ನಿಸಬಹುದು.
ಉತ್ತರವು ಹುರಿದುಂಬಿಸುವಂತಹದ್ದೂ ಆಶ್ವಾಸನೆ ನೀಡುವಂತಹದ್ದೂ ಆಗಿದೆ. ಕ್ರಿಸ್ತನು “ದೇವರ ಸಮ್ಮುಖದಲ್ಲಿ ನಮಗೋಸ್ಕರ ಈಗ ಕಾಣಿಸಿಕೊಳ್ಳುವದಕ್ಕೆ ಪರಲೋಕದಲ್ಲಿಯೇ ಪ್ರವೇಶಿಸಿದನು” ಎಂಬುದಾಗಿ ಬೈಬಲು ಹೇಳುತ್ತದೆ. (ಇಬ್ರಿಯ 9:24) ಅವನು ನಮಗೋಸ್ಕರ ಏನು ಮಾಡಿದನು? “[ಕ್ರಿಸ್ತನು] ಹೋತಗಳ ಮತ್ತು ಹೋರಿಕರಗಳ ರಕ್ತವನ್ನು ತೆಗೆದುಕೊಳ್ಳದೆ ಸ್ವಂತ ರಕ್ತವನ್ನೇ ತೆಗೆದುಕೊಂಡು ನಮಗೋಸ್ಕರ ನಿತ್ಯವಿಮೋಚನೆಯನ್ನು ಸಂಪಾದಿಸಿಕೊಂಡವನಾಗಿ ಒಂದೇ ಸಾರಿ ದೇವರ ಸನ್ನಿಧಾನಕ್ಕೆ [“ಪರಲೋಕದಲ್ಲಿಯೇ”] ಪ್ರವೇಶಿಸಿದನು” ಎಂಬುದಾಗಿ ಅಪೊಸ್ತಲ ಪೌಲನು ವಿವರಿಸುತ್ತಾನೆ.—ಇಬ್ರಿಯ 9:12; 1 ಯೋಹಾನ 2:2.
ಇದೆಂತಹ ಶುಭ ಸಂದೇಶವಾಗಿದೆ! ಯೇಸುವಿನ ಸ್ವರ್ಗಾರೋಹಣವು, ಜನರ ಪರವಾಗಿ ಅವನು ಮಾಡುತ್ತಿದ್ದ ಅದ್ಭುತಕರ ಕೆಲಸವನ್ನು ಕೊನೆಗೊಳಿಸುವ ಬದಲು, ಮಾನವಕುಲಕ್ಕಾಗಿ ಇನ್ನೂ ಹೆಚ್ಚಿನ ಸಹಾಯವನ್ನು ಮಾಡುವಂತೆ ಅವನನ್ನು ಶಕ್ತಗೊಳಿಸಿದೆ. ದೇವರು ತನ್ನ ಅಪಾತ್ರ ದಯೆಯನ್ನು ತೋರಿಸುತ್ತಾ, ಯೇಸುವನ್ನು “ಒಬ್ಬ ಸಾರ್ವಜನಿಕ ಸೇವಕ”ನನ್ನಾಗಿ (NW), ಅಂದರೆ ಮಹಾಯಾಜಕನನ್ನಾಗಿ ನೇಮಿಸಿ, ‘ಪರಲೋಕದೊಳಗೆ ಮಹತ್ವವುಳ್ಳ ದೇವರ ಸಿಂಹಾಸನದ ಬಲಗಡೆಯಲ್ಲಿ ಆಸನಾರೂಢನಾಗುವಂತೆ’ ಮಾಡಿರುವುದರಿಂದಲೇ ಇದು ಸಾಧ್ಯವಾಗಿದೆ.—ಇಬ್ರಿಯ 8:1, 2.
“ಒಬ್ಬ ಸಾರ್ವಜನಿಕ ಸೇವಕ”
ಹಾಗಾದರೆ, ಯೇಸು ಸ್ವರ್ಗದಲ್ಲಿ ಮಾನವಕುಲದ ಸಾರ್ವಜನಿಕ ಸೇವಕನಾಗಿ ಕಾರ್ಯನಡಿಸುವನು. ಪುರಾತನ ಕಾಲದಲ್ಲಿ ಇಸ್ರಾಯೇಲಿನ ಮಹಾಯಾಜಕನು ದೇವರ ಆರಾಧಕರ ಪರವಾಗಿ ಮಾಡುತ್ತಿದ್ದ ಕೆಲಸಕ್ಕೆ ಸಮಾನವಾದ ಕೆಲಸವನ್ನು ಇವನು ಮಾಡಲಿದ್ದನು. ಆ ಕೆಲಸವು ಏನಾಗಿತ್ತು? “ಪ್ರತಿಯೊಬ್ಬ ಮಹಾಯಾಜಕನು ಕಾಣಿಕೆಗಳನ್ನೂ ಯಜ್ಞಗಳನ್ನೂ ಸಮರ್ಪಿಸುವದಕ್ಕೆ ನೇಮಕವಾಗಿರುತ್ತಾನಷ್ಟೆ; ಆದದರಿಂದ ಸಮರ್ಪಿಸುವದಕ್ಕೆ ಈ ಮಹಾಯಾಜಕ [ಸ್ವರ್ಗಕ್ಕೇರಿದ ಯೇಸು ಕ್ರಿಸ್ತ]ನಿಗೂ ಏನಾದರೂ ಇರಬೇಕು” ಎಂದು ಪೌಲನು ವಿವರಿಸುತ್ತಾನೆ.—ಇಬ್ರಿಯ 8:3.
ಪುರಾತನ ಕಾಲದ ಮಹಾಯಾಜಕನು ಅರ್ಪಿಸುತ್ತಿದ್ದುದಕ್ಕಿಂತಲೂ ಬಹಳ ಶ್ರೇಷ್ಠವಾಗಿದ್ದದ್ದನ್ನು ಯೇಸು ಅರ್ಪಿಸಲಿದ್ದನು. “ಹೋತ ಹೋರಿಗಳ ರಕ್ತ”ದಿಂದ ಪುರಾತನ ಇಸ್ರಾಯೇಲು ಒಂದಿಷ್ಟು ಮಟ್ಟಿಗೆ ಆತ್ಮಿಕ ಶುದ್ಧತೆಯನ್ನು ಪಡೆಯಸಾಧ್ಯವಿದ್ದಲ್ಲಿ, “ಕ್ರಿಸ್ತನ ರಕ್ತವು ಎಷ್ಟೋ ಹೆಚ್ಚಾಗಿ ನಮ್ಮನ್ನು ನಿರ್ಜೀವಕರ್ಮಗಳಿಂದ ಬಿಡಿಸಿ ನಾವು ಜೀವವುಳ್ಳ ದೇವರನ್ನು ಆರಾಧಿಸುವವರಾಗುವಂತೆ ನಮ್ಮ ಮನಸ್ಸನ್ನು ಶುದ್ಧೀಕರಿಸ”ಲಾರದೊ?—ಇಬ್ರಿಯ 9:13, 14.
ಯೇಸು ಎದ್ದುಕಾಣುವಂತಹ ಸಾರ್ವಜನಿಕ ಸೇವಕನಾಗಿದ್ದಾನೆ, ಏಕೆಂದರೆ ಅವನಿಗೆ ಅಮರತ್ವವನ್ನು ದಯಪಾಲಿಸಲಾಗಿದೆ. ಪುರಾತನ ಇಸ್ರಾಯೇಲಿನಲ್ಲಿ “ಲೇವಿಯರು ಶಾಶ್ವತವಾಗಿ ಉದ್ಯೋಗನಡಿಸುವದಕ್ಕೆ ಮರಣವು ಅಡ್ಡಿಯಾದದರಿಂದ ಅವರಲ್ಲಿ ಯಾಜಕರಾದವರು ಅನೇಕರು.” ಆದರೆ ಯೇಸುವಿನ ಕುರಿತೇನು? ಪೌಲನು ಬರೆಯುವುದು: “ಸದಾಕಾಲವಿರುವದರಿಂದ ಆತನ ಯಾಜಕತ್ವವು ಇಬ್ರಿಯ 7:23-25; ರೋಮಾಪುರ 6:9) ಹೌದು, ಪರಲೋಕದಲ್ಲಿ ದೇವರ ಬಲಗಡೆಯಲ್ಲಿ ನಮಗಾಗಿ ‘ವಿಜ್ಞಾಪನೆಮಾಡಲು ಯಾವಾಗಲೂ ಬದುಕಿರುವ’ ಒಬ್ಬ ಸಾರ್ವಜನಿಕ ಸೇವಕನು ಇದ್ದಾನೆ. ಇದು ನಮಗಾಗಿ ಈಗ ಏನನ್ನು ಅರ್ಥೈಸುತ್ತದೆಂಬುದನ್ನು ತುಸು ಯೋಚಿಸಿ ನೋಡಿರಿ!
ಮತ್ತೊಬ್ಬರಿಗೆ ಹೋಗುವಂಥದಲ್ಲ. ಆದಕಾರಣ ಆತನು ತನ್ನ ಮೂಲಕ ದೇವರ ಬಳಿಗೆ ಬರುವವರನ್ನು ಸಂಪೂರ್ಣವಾಗಿ ರಕ್ಷಿಸುವದಕ್ಕೆ ಶಕ್ತನಾಗಿದ್ದಾನೆ; ಅವರಿಗೋಸ್ಕರ ವಿಜ್ಞಾಪನೆಮಾಡುವದಕ್ಕೆ ಯಾವಾಗಲೂ ಬದುಕುವವನಾಗಿದ್ದಾನೆ.” (ಯೇಸು ಭೂಮಿಯಲ್ಲಿದ್ದಾಗ, ಜನರು ಸಹಾಯವನ್ನು ಪಡೆದುಕೊಳ್ಳಲಿಕ್ಕಾಗಿ ಅವನ ಬಳಿಗೆ ಗುಂಪುಗೂಡುತ್ತಿದ್ದರು. ಮತ್ತು ಕೆಲವೊಮ್ಮೆ ಅವನ ಸಹಾಯವನ್ನು ಗಿಟ್ಟಿಸಿಕೊಳ್ಳಲು ಅವರು ಬಹಳ ದೂರದಿಂದ ಬರುತ್ತಿದ್ದರು. (ಮತ್ತಾಯ 4:24, 25) ಸ್ವರ್ಗದಲ್ಲಾದರೊ ಯೇಸುವನ್ನು ಎಲ್ಲ ಜನಾಂಗಗಳವರು ಸುಲಭವಾಗಿ ಸಮೀಪಿಸಬಹುದು. ತನ್ನ ಸ್ವರ್ಗೀಯ ಸ್ಥಾನದಲ್ಲಿ ಅವನು ಒಬ್ಬ ಸಾರ್ವಜನಿಕ ಸೇವಕನಾಗಿ ಯಾವಾಗಲೂ ಲಭ್ಯವಿರುತ್ತಾನೆ.
ಯೇಸು ಯಾವ ರೀತಿಯ ಮಹಾಯಾಜಕನಾಗಿದ್ದಾನೆ?
ಸುವಾರ್ತಾ ವೃತ್ತಾಂತಗಳಿಂದ ನಮಗೆ ಸಿಗುವಂತಹ ಯೇಸು ಕ್ರಿಸ್ತನ ಚಿತ್ರಣದಿಂದ, ಅವನು ಸಹಾಯ ಮಾಡಲು ಸಿದ್ಧನೂ ಕೋಮಲ ಸಹಾನುಭೂತಿಯುಳ್ಳವನೂ ಆಗಿದ್ದಾನೆ ಎಂಬುದು ಸ್ಪಷ್ಟವಾಗಿ ತಿಳಿದುಬರುತ್ತದೆ. ಅವನೆಷ್ಟು ತ್ಯಾಗಮಯಿಯಾಗಿದ್ದನು! ಅನೇಕ ಬಾರಿ ಅವನೂ ಅವನ ಶಿಷ್ಯರೂ ವಿಶ್ರಮಿಸಬೇಕೆಂದಿದ್ದಾಗ, ಅವರ ಏಕಾಂತತೆಗೆ ಭಂಗ ಉಂಟಾಯಿತು. ಹಾಯಾಗಿ ಕಳೆಯಬಹುದಾಗಿದ್ದ ಸಮಯವನ್ನು ತಾನು ಕಳೆದುಕೊಳ್ಳುತ್ತಿದ್ದೇನಲ್ಲಾ ಎಂದು ಬೇಸರಪಟ್ಟುಕೊಳ್ಳದೆ, ತನ್ನ ಸಹಾಯಕ್ಕಾಗಿ ಹಾತೊರೆಯುತ್ತಿದ್ದ ಜನರನ್ನು ಕಂಡು ಅವನು ‘ಕನಿಕರಪಟ್ಟನು.’ ಯೇಸು ಹಸಿವು ಬಾಯಾರಿಕೆಗಳಿಂದ ದಣಿದುಹೋಗಿದ್ದಾಗಲೂ, ಪ್ರಾಮಾಣಿಕ ಮನಸ್ಸಿನ ಪಾಪಿಗಳನ್ನು “ಪ್ರೀತಿಯಿಂದ ಸ್ವೀಕರಿಸಿ”ದನು, ಮತ್ತು ಅವರಿಗೆ ಸಹಾಯ ಮಾಡುವುದಕ್ಕೋಸ್ಕರ ಊಟಮಾಡದೆ ಇರಲು ಸಹ ಸಿದ್ಧನಾಗಿದ್ದನು.—ಮಾರ್ಕ 6:31-34; ಲೂಕ 9:11-17; ಯೋಹಾನ 4:4-6, 31-34.
ಕನಿಕರದಿಂದ ಪ್ರಚೋದಿತನಾದ ಯೇಸು, ಜನರ ಶಾರೀರಿಕ, ಭಾವನಾತ್ಮಕ ಹಾಗೂ ಆತ್ಮಿಕ ಅಗತ್ಯಗಳನ್ನು ಪೂರೈಸಲು ಪ್ರಾಯೋಗಿಕವಾಗಿ ಕ್ರಿಯೆಗೈದನು. (ಮತ್ತಾಯ 9:35-38; ಮಾರ್ಕ 6:35-44) ಅವರು ಶಾಶ್ವತವಾದ ಉಪಶಮನ ಹಾಗೂ ನೆಮ್ಮದಿಯನ್ನು ಕಂಡುಕೊಳ್ಳುವಂತೆಯೂ ಅವರಿಗೆ ಕಲಿಸಿಕೊಟ್ಟನು. (ಯೋಹಾನ 4:7-30, 39-42) ಉದಾಹರಣೆಗೆ, ಅವನ ಈ ವೈಯಕ್ತಿಕ ಆಮಂತ್ರಣವು ಎಷ್ಟು ಆಕರ್ಷಕವಾಗಿದೆ: “ಎಲೈ ಕಷ್ಟಪಡುವವರೇ, ಹೊರೆಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ವಿಶ್ರಾಂತಿ ಕೊಡುವೆನು. ನಾನು ಸಾತ್ವಿಕನೂ ದೀನಮನಸ್ಸುಳ್ಳವನೂ ಆಗಿರುವದರಿಂದ ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಲ್ಲಿ ಕಲಿತುಕೊಳ್ಳಿರಿ; ಆಗ ನಿಮ್ಮ ಆತ್ಮಗಳಿಗೆ ವಿಶ್ರಾಂತಿಸಿಕ್ಕುವದು.”—ಮತ್ತಾಯ 11:28-30.
ಯೇಸು ಜನರನ್ನು ಎಷ್ಟರ ಮಟ್ಟಿಗೆ ಪ್ರೀತಿಸಿದನೆಂದರೆ, ಕೊನೆಗೆ ಅವನು ಪಾಪಪೂರ್ಣ ಮಾನವಕುಲಕ್ಕಾಗಿ ತನ್ನ ಜೀವವನ್ನೇ ಕೊಟ್ಟುಬಿಟ್ಟನು. (ರೋಮಾಪುರ 5:6-8) ಈ ವಿಷಯದಲ್ಲಿ ಅಪೊಸ್ತಲ ಪೌಲನು ತರ್ಕಿಸಿದ್ದು: “[ಯೆಹೋವ ದೇವರು] ಸ್ವಂತ ಮಗನನ್ನು ಉಳಿಸಿಕೊಳ್ಳದೆ ಆತನನ್ನು ನಮ್ಮೆಲ್ಲರಿಗೋಸ್ಕರ . . . ಕೊಟ್ಟ ಮೇಲೆ ಸಮಸ್ತವನ್ನೂ ನಮಗೆ ದಯಪಾಲಿಸದೆ ಇರುವನೇ? . . . ಕ್ರಿಸ್ತ ಯೇಸು ಮರಣವನ್ನು ಹೊಂದಿದ್ದಲ್ಲದೆ ಜೀವಿತನಾಗಿ ಎದ್ದು ದೇವರ ಬಲಗಡೆಯಲ್ಲಿದ್ದು ನಮಗೋಸ್ಕರ ಬೇಡುವವನಾಗಿದ್ದಾನೆ.”—ರೋಮಾಪುರ 8:32-34.
ಅನುಕಂಪವನ್ನು ತೋರಿಸಬಲ್ಲ ಒಬ್ಬ ಮಹಾಯಾಜಕನು
ಯೇಸು ಒಬ್ಬ ಮನುಷ್ಯನಾಗಿದ್ದಾಗ, ಹಸಿವು, ಬಾಯಾರಿಕೆ, ದಣಿವು, ಕಳವಳ, ವೇದನೆ ಹಾಗೂ ಮರಣವನ್ನು ಸಹ ಅನುಭವಿಸಿದನು. ಅವನು ಅನುಭವಿಸಿದಂತಹ ಒತ್ತಡಗಳು, ಕಷ್ಟಾನುಭವಿಸುತ್ತಿರುವ ಮಾನವಕುಲದ ಮಹಾಯಾಜಕನಾಗಿ ಸೇವೆಸಲ್ಲಿಸಲು ಅವನನ್ನು ಒಂದು ವಿಶಿಷ್ಟ ರೀತಿಯಲ್ಲಿ ಸಿದ್ಧಗೊಳಿಸಿದವು. ಪೌಲನು ಬರೆದುದು: “[ಯೇಸು] ಎಲ್ಲಾ ವಿಷಯಗಳಲ್ಲಿ ತನ್ನ ಸಹೋದರರಿಗೆ ಸಮಾನನಾಗಬೇಕಾಗಿ ಬಂತು. ಹೀಗೆ ಆತನು ಜನರ ಪಾಪಗಳನ್ನು ನಿವಾರಣಮಾಡುವದಕ್ಕಾಗಿ ದೇವರ ಕಾರ್ಯಗಳಲ್ಲಿ ಕರುಣೆಯೂ ನಂಬಿಕೆಯೂ ಉಳ್ಳ ಮಹಾ ಯಾಜಕನಾದನು. ತಾನೇ ಶೋಧಿಸಲ್ಪಟ್ಟು ಬಾಧೆಯನ್ನು ಅನುಭವಿಸಿರುವದರಿಂದ ಶೋಧಿಸಲ್ಪಡುವವರಿಗೆ ಸಹಾಯಮಾಡುವದಕ್ಕೆ ಶಕ್ತನಾಗಿದ್ದಾನೆ.”—ಇಬ್ರಿಯ 2:17, 18; 13:8.
ಜನರು ದೇವರ ಕಡೆಗೆ ಬರುವಂತೆ ಸಹಾಯ ಮಾಡಲು ತಾನು ಅರ್ಹನೂ ಸಿದ್ಧಮನಸ್ಸುಳ್ಳವನೂ ಆಗಿದ್ದೇನೆಂಬುದನ್ನು ಯೇಸು ತೋರಿಸಿಕೊಟ್ಟನು. ಇದರರ್ಥ, ಕ್ಷಮಿಸಲು ಸಿದ್ಧನಾಗಿರದ ಒಬ್ಬ ನಿರ್ದಯಿ ಹಾಗೂ ಕರುಣಾರಹಿತ ದೇವರ ಮನವೊಪ್ಪಿಸಲು ಅವನು ಹೆಣಗಾಡಬೇಕು ಎಂದಾಗಿದೆಯೊ? ಇಲ್ಲ, ಏಕೆಂದರೆ “ಯೆಹೋವನು ಒಳ್ಳೆಯವನೂ ಕ್ಷಮಿಸಲು ಸಿದ್ಧನೂ ಆಗಿದ್ದಾನೆ” ಎಂದು ಬೈಬಲು ಆಶ್ವಾಸನೆ ನೀಡುತ್ತದೆ. ಅದು ಹೀಗೂ ಹೇಳುತ್ತದೆ: “ನಮ್ಮ ಪಾಪಗಳನ್ನು ಒಪ್ಪಿಕೊಂಡು ಅರಿಕೆಮಾಡಿದರೆ ಆತನು ನಂಬಿಗಸ್ತನೂ ನೀತಿವಂತನೂ ಆಗಿರುವದರಿಂದ ನಮ್ಮ ಪಾಪಗಳನ್ನು ಕೀರ್ತನೆ 86:5, NW; 1 ಯೋಹಾನ 1:9) ವಾಸ್ತವದಲ್ಲಿ, ಯೇಸುವಿನ ಕೋಮಲ ನಡೆನುಡಿಗಳು ಅವನ ತಂದೆಯ ಸಹಾನುಭೂತಿ, ಕರುಣೆ, ಮತ್ತು ಪ್ರೀತಿಯನ್ನು ಪ್ರತಿಬಿಂಬಿಸುತ್ತವೆ.—ಯೋಹಾನ 5:19; 8:28; 14:9, 10.
ಕ್ಷಮಿಸಿಬಿಟ್ಟು ಸಕಲ ಅನೀತಿಯನ್ನು ಪರಿಹರಿಸಿ ನಮ್ಮನ್ನು ಶುದ್ಧಿಮಾಡುವನು.” (ಪಶ್ಚಾತ್ತಾಪಪಡುವ ಪಾಪಿಗಳಿಗೆ ಯೇಸು ಉಪಶಮನವನ್ನು ತರುವುದು ಹೇಗೆ? ದೇವರನ್ನು ಮೆಚ್ಚಿಸಲಿಕ್ಕಾಗಿ ಅವರು ಮಾಡುವ ಪ್ರಾಮಾಣಿಕ ಪ್ರಯತ್ನಗಳಿಂದ ಆನಂದ ಹಾಗೂ ತೃಪ್ತಿಯನ್ನು ಕಂಡುಕೊಳ್ಳಲು ಅವರಿಗೆ ಸಹಾಯ ಮಾಡುವ ಮೂಲಕವೇ. ಜೊತೆ ಅಭಿಷಿಕ್ತ ಕ್ರೈಸ್ತರಿಗೆ ಬರೆಯುತ್ತಾ ಪೌಲನು ಈ ವಿಷಯವನ್ನು ಸಾರಾಂಶಿಸಿ ಹೇಳಿದ್ದು: “ಆಕಾಶಮಂಡಲಗಳನ್ನು ದಾಟಿಹೋದ ದೇವಕುಮಾರನಾದ ಯೇಸುವೆಂಬ ಶ್ರೇಷ್ಠ ಮಹಾಯಾಜಕನು ನಮಗಿರುವದರಿಂದ ನಾವು ಮಾಡಿರುವ ಪ್ರತಿಜ್ಞೆಯನ್ನು ಬಿಡದೆ ಹಿಡಿಯೋಣ. ಯಾಕಂದರೆ ನಮಗಿರುವ ಮಹಾಯಾಜಕನು ನಮ್ಮ ನಿರ್ಬಲಾವಸ್ಥೆಯನ್ನು ಕುರಿತು ಅನುತಾಪವಿಲ್ಲದವನಲ್ಲ; ಆತನು ಸರ್ವ ವಿಷಯಗಳಲ್ಲಿ ನಮ್ಮ ಹಾಗೆ ಶೋಧನೆಗೆ ಗುರಿಯಾದನು, ಪಾಪ ಮಾತ್ರ ಮಾಡಲಿಲ್ಲ. ಆದದರಿಂದ ನಾವು ಕರುಣೆಯನ್ನು ಹೊಂದುವಂತೆಯೂ ಆತನ ದಯೆಯಿಂದ ಸಮಯೋಚಿತವಾದ ಸಹಾಯವು ನಮಗೆ ದೊರೆಯುವಂತೆಯೂ ಧೈರ್ಯದಿಂದ ಕೃಪಾಸನದ ಮುಂದೆ ಬರೋಣ.”—ಇಬ್ರಿಯ 4:14-16.
“ಸಮಯೋಚಿತವಾದ ಸಹಾಯ”
ಆದರೆ ನಾವು ಗಂಭೀರವಾದ ಕಾಯಿಲೆ, ತಪ್ಪಿತಸ್ಥಭಾವನೆಯ ಜಜ್ಜಿಬಿಡುವ ಹೊರೆ, ಅತಿಯಾದ ನಿರಾಶೆ, ಮತ್ತು ಖಿನ್ನತೆಯಂತಹ ನಿಭಾಯಿಸಲು ಅಸಾಧ್ಯವಾದ ಸಮಸ್ಯೆಗಳನ್ನು ಎದುರಿಸುವಾಗ ಏನು ಮಾಡಬಲ್ಲೆವು? ಸ್ವತಃ ಯೇಸುವೇ ಯಾವ ಏರ್ಪಾಡಿನ ಮೇಲೆ ಕ್ರಮವಾಗಿ ಅವಲಂಬಿಸಿದನೊ ಆ ಪ್ರಾರ್ಥನೆಯೆಂಬ ಅಮೂಲ್ಯ ಸುಯೋಗದ ಸದುಪಯೋಗವನ್ನು ನಾವು ಮಾಡಿಕೊಳ್ಳಸಾಧ್ಯವಿದೆ. ಉದಾಹರಣೆಗೆ, ತನ್ನ ಜೀವವನ್ನು ನಮಗಾಗಿ ಕೊಡುವ ಹಿಂದಿನ ರಾತ್ರಿಯಂದು, “ಆತನು ಮನೋವ್ಯಥೆಯುಳ್ಳವನಾಗಿ ಇನ್ನೂ ಆಸಕ್ತಿಯಿಂದ ಪ್ರಾರ್ಥಿಸುತ್ತಿರಲಾಗಿ ಆತನ ಬೆವರು ಭೂಮಿಗೆ ಬೀಳುತ್ತಿರುವ ರಕ್ತದ ದೊಡ್ಡ ಹನಿಗಳೋಪಾದಿಯಲ್ಲಿತ್ತು.” (ಲೂಕ 22:44) ಹೌದು, ಕಟ್ಟಾಸಕ್ತಿಯಿಂದ ದೇವರಿಗೆ ಪ್ರಾರ್ಥಿಸುವ ಅನುಭವ ಯೇಸುವಿಗಿತ್ತು. ಅವನು, “ಮರಣಕ್ಕೆ ತಪ್ಪಿಸಿ ಕಾಪಾಡ ಶಕ್ತನಾಗಿರುವಾತನಿಗೆ ಬಲವಾಗಿ ಕೂಗುತ್ತಾ ಕಣ್ಣೀರನ್ನು ಸುರಿಸುತ್ತಾ ಪ್ರಾರ್ಥನೆ ವಿಜ್ಞಾಪನೆಗಳನ್ನು ಸಮರ್ಪಿಸಿ ದೇವರ ಮೇಲಣ ಭಯಭಕ್ತಿಯ ನಿಮಿತ್ತ ಕೇಳಲ್ಪಟ್ಟನು.”—ಇಬ್ರಿಯ 5:7.
‘ಕೇಳಲ್ಪಡುವುದು’ ಮತ್ತು ಬಲಗೊಳಿಸಲ್ಪಡುವುದು ಮನುಷ್ಯರಿಗೆ ಎಷ್ಟೊಂದು ಪ್ರೋತ್ಸಾಹದಾಯಕವಾಗಿ ಇರಸಾಧ್ಯವಿದೆ ಎಂಬುದು ಯೇಸುವಿಗೆ ತಿಳಿದಿದೆ. (ಲೂಕ 22:43) ಅದಲ್ಲದೆ, ಅವನು ವಾಗ್ದಾನಿಸಿದ್ದು: “ನೀವು ತಂದೆಯನ್ನು ಏನಾದರೂ ಬೇಡಿಕೊಂಡರೆ ಅದನ್ನು ಆತನು ನನ್ನ ಹೆಸರಿನ ಮೇಲೆ ನಿಮಗೆ ಕೊಡುವನು. . . . ಬೇಡಿಕೊಳ್ಳಿರಿ, ನಿಮಗೆ ಸಿಕ್ಕುವದು; ಆಗ ನಿಮ್ಮ ಆನಂದವು ಪರಿಪೂರ್ಣವಾಗುವದು.” (ಯೋಹಾನ 16:23, 24) ಆದಕಾರಣ, ತನ್ನ ಮಗನು ತನಗಿರುವ ಅಧಿಕಾರ ಮತ್ತು ಪ್ರಾಯಶ್ಚಿತ್ತ ಯಜ್ಞದ ಮೌಲ್ಯವನ್ನು ನಮ್ಮ ಪರವಾಗಿ ಉಪಯೋಗಿಸುವಂತೆ ದೇವರು ಅನುಮತಿಸುವನೆಂಬ ಭರವಸೆಯಿಂದ ನಾವು ಆತನಲ್ಲಿ ಬೇಡಿಕೊಳ್ಳಸಾಧ್ಯವಿದೆ.—ಮತ್ತಾಯ 28:18.
ಸ್ವರ್ಗದಲ್ಲಿ ತನಗಿರುವ ಸಾಮರ್ಥ್ಯಕ್ಕನುಸಾರ, ಯೇಸು ಸಮಯಕ್ಕೆ ಸರಿಯಾದ ಸಹಾಯವನ್ನು ಒದಗಿಸುವನೆಂಬ ವಿಷಯದಲ್ಲಿ ನಾವು ನಿಶ್ಚಿತರಾಗಿರಸಾಧ್ಯವಿದೆ. ಉದಾಹರಣೆಗೆ, ನಾವು ಒಂದು ಪಾಪವನ್ನು ಮಾಡಿ, ಅದರ ಬಗ್ಗೆ ತುಂಬ ವಿಷಾದಪಡುತ್ತಿದ್ದರೆ, “ತಂದೆಯ ಬಳಿಯಲ್ಲಿ ನೀತಿವಂತನಾದ ಯೇಸು ಕ್ರಿಸ್ತನೆಂಬ ಸಹಾಯಕನು ನಮಗಿದ್ದಾನೆ” ಎಂಬ ಆಶ್ವಾಸನೆಯಿಂದ ನಾವು ಸಾಂತ್ವನವನ್ನು ಕಂಡುಕೊಳ್ಳಬಹುದು. (1 ಯೋಹಾನ 2:1, 2) ಸ್ವರ್ಗದಲ್ಲಿರುವ ನಮ್ಮ ಸಹಾಯಕನು ಮತ್ತು ಸಂತೈಸುವವನ ಹೆಸರಿನಲ್ಲಿ ನಾವು ಮಾಡುವಂತಹ ಶಾಸ್ತ್ರಕ್ಕನುಗುಣವಾದ ಪ್ರಾರ್ಥನೆಗಳಿಗೆ ಉತ್ತರವು ಸಿಗುವಂತೆ ಅವನು ನಮ್ಮ ಪರವಾಗಿ ಬೇಡಿಕೊಳ್ಳುವನು.—ಯೋಹಾನ 14:13, 14; 1 ಯೋಹಾನ 5:14, 15.
ಕ್ರಿಸ್ತನ ಸಹಾಯಕ್ಕಾಗಿ ಗಣ್ಯತೆಯನ್ನು ತೋರಿಸುವುದು
ದೇವರಿಗೆ ಆತನ ಮಗನ ಮೂಲಕ ಮೊರೆಯಿಡುವುದರಲ್ಲಿ ಅನೇಕ ವಿಷಯಗಳು ಒಳಗೂಡಿವೆ. ಕ್ರಿಸ್ತನು ತನ್ನ ಪ್ರಾಯಶ್ಚಿತ್ತ ಯಜ್ಞದ ಮೌಲ್ಯದಿಂದ “ನಮ್ಮನ್ನು ಖರೀದಿಸಿ,” ಮಾನವಕುಲವನ್ನು “ಕೊಂಡುಕೊಂಡ ಒಡೆಯ”ನಂತಾದನು. (ಗಲಾತ್ಯ 3:13, NW; 4:5; 2 ಪೇತ್ರ 2:1) ಯೇಸು ನಮ್ಮ ಒಡೆಯನೆಂಬುದನ್ನು ಅಂಗೀಕರಿಸಿ, “ಯಾವನಿಗಾದರೂ ನನ್ನ ಹಿಂದೆ ಬರುವದಕ್ಕೆ ಮನಸ್ಸಿದ್ದರೆ ಅವನು ತನ್ನನ್ನು ನಿರಾಕರಿಸಿ ತನ್ನ ಶಿಲುಬೆಯನ್ನು ದಿನಾಲೂ ಹೊತ್ತುಕೊಂಡು ನನ್ನ ಹಿಂದೆ ಬರಲಿ” ಎಂಬ ಅವನ ಆಮಂತ್ರಣಕ್ಕೆ ಸಂತೋಷದಿಂದ ಪ್ರತಿಕ್ರಿಯಿಸುವ ಮೂಲಕ, ನಮಗಾಗಿ ಅವನು ಮಾಡಿರುವ ಎಲ್ಲ ಕಾರ್ಯಗಳಿಗಾಗಿ ನಾವು ನಮ್ಮ ಕೃತಜ್ಞತೆಯನ್ನು ತೋರಿಸಸಾಧ್ಯವಿದೆ. (ಲೂಕ 9:23) “ತನ್ನನ್ನು ನಿರಾಕರಿಸಿ”ಕೊಳ್ಳುವುದರ ಅರ್ಥ, ಒಡೆತನದ ಬದಲಾವಣೆಯ ಕುರಿತು ಕೇವಲ ಬಾಯಿಮಾತಿನ ಹೇಳಿಕೆಯಾಗಿರುವುದಿಲ್ಲ. ಎಷ್ಟೆಂದರೂ, “ಜೀವಿಸುವವರು ಇನ್ನು ಮೇಲೆ ತಮಗಾಗಿ ಜೀವಿಸದೆ ತಮಗೋಸ್ಕರ ಸತ್ತು ಎದ್ದು ಬಂದಾತನಿಗಾಗಿ ಜೀವಿಸಬೇಕೆಂತಲೇ [ಕ್ರಿಸ್ತನು] ಎಲ್ಲರಿಗೋಸ್ಕರ ಸತ್ತನು.” (2 ಕೊರಿಂಥ 5:14, 15) ಆದುದರಿಂದ, ಪ್ರಾಯಶ್ಚಿತ್ತ ಯಜ್ಞಕ್ಕಾಗಿ ನಮಗಿರುವ ಗಣ್ಯತೆಯು, ನಮ್ಮ ಹೊರನೋಟ, ಗುರಿಗಳು, ಮತ್ತು ಜೀವನ ಶೈಲಿಯ ಮೇಲೆ ಭಾರಿ ಪ್ರಭಾವವನ್ನು ಬೀರುವಂತಹದ್ದಾಗಿರುವುದು. “ನಮಗೋಸ್ಕರ ತನ್ನನ್ನು ಒಪ್ಪಿಸಿಕೊಟ್ಟ” ಕ್ರಿಸ್ತ ಯೇಸುವಿಗೆ ನಾವು ಚಿರಋಣಿಗಳಾಗಿದ್ದು, ಅವನ ಬಗ್ಗೆ ಮತ್ತು ಅವನ ಪ್ರೀತಿಯ ತಂದೆಯಾದ ಯೆಹೋವ ದೇವರ ಬಗ್ಗೆ ಹೆಚ್ಚಿನ ವಿಷಯಗಳನ್ನು ಕಲಿತುಕೊಳ್ಳುವಂತೆ ಪ್ರಚೋದಿಸಲ್ಪಡಬೇಕು. ನಾವು ನಂಬಿಕೆಯಲ್ಲಿ ಬೆಳೆಯಲು, ದೇವರ ಪ್ರಯೋಜನಕರ ಮಟ್ಟಗಳಿಗನುಸಾರ ಜೀವಿಸಲು, ಮತ್ತು “ಸತ್ಕ್ರಿಯೆಗಳಲ್ಲಿ ಆಸಕ್ತ”ರಾಗಿರಲು ಸಹ ಬಯಸಬೇಕು.—ತೀತ 2:13, 14; ಯೋಹಾನ 17:3.
ನಮಗೆ ಸಮಯಕ್ಕೆ ತಕ್ಕ ಹಾಗೆ ಆತ್ಮಿಕ ಆಹಾರ, ಉತ್ತೇಜನ, ಮತ್ತು ಮಾರ್ಗದರ್ಶನ ಸಿಗುವ ಮಾಧ್ಯಮವು ಕ್ರೈಸ್ತ ಸಭೆಯಾಗಿದೆ. (ಮತ್ತಾಯ 24:45-47; ಇಬ್ರಿಯ 10:21-25) ದೃಷ್ಟಾಂತಕ್ಕೆ, ಯಾರಾದರೂ ಆತ್ಮಿಕವಾಗಿ ಅಸ್ವಸ್ಥರಾಗಿದ್ದರೆ, ಅವರು “ಸಭೆಯ [ನೇಮಿತ] ಹಿರಿಯರನ್ನು ಕರೇಕಳುಹಿಸ”ಸಾಧ್ಯವಿದೆ. “ನಂಬಿಕೆಯಿಂದ ಮಾಡಿದ ಪ್ರಾರ್ಥನೆಯು ರೋಗಿಯನ್ನು ರಕ್ಷಿಸುವದು; ಕರ್ತನು ಅವನನ್ನು ಎಬ್ಬಿಸುವನು; ಮತ್ತು ಪಾಪಮಾಡಿದವನಾಗಿದ್ದರೆ ಅದು ಪರಿಹಾರವಾಗುವದು” ಎಂಬ ಆಶ್ವಾಸನೆಯನ್ನು ಯಾಕೋಬನು ಕೂಡಿಸುತ್ತಾನೆ.—ಯಾಕೋಬ 5:13-15.
ದೃಷ್ಟಾಂತಕ್ಕೆ: ದಕ್ಷಿಣ ಆಫ್ರಿಕದ ಸೆರೆಮನೆಯೊಂದರಲ್ಲಿದ್ದ ಮನುಷ್ಯನೊಬ್ಬನು ಸಭೆಯ ಹಿರಿಯನೊಬ್ಬನಿಗೆ ಪತ್ರ ಬರೆದು, “ದೇವರ ರಾಜ್ಯವನ್ನು ಸೇರುವಂತೆ ಜನರಿಗೆ ಸಹಾಯ ಮಾಡಲು
ಯೇಸು ಕ್ರಿಸ್ತನು ಆರಂಭಿಸಿದ ಒಳ್ಳೆಯ ಕೆಲಸವನ್ನು ಮುಂದುವರಿಸುತ್ತಿರುವ ಎಲ್ಲ ಯೆಹೋವನ ಸಾಕ್ಷಿಗಳಿಗಾಗಿ” ಗಣ್ಯತೆಯನ್ನು ವ್ಯಕ್ತಪಡಿಸಿದನು. ನಂತರ ಅವನು ಬರೆದುದು: “ನಿಮ್ಮ ಪತ್ರ ಪಡೆದುಕೊಂಡ ನನಗೆ ಬಹಳ ಆನಂದವಾಯಿತು. ನನ್ನ ಆತ್ಮಿಕ ಬಿಡುಗಡೆಯ ಕುರಿತು ನೀವು ವ್ಯಕ್ತಪಡಿಸಿರುವ ಚಿಂತೆಯಿಂದ ನಾನು ಬಹಳ ಪ್ರಭಾವಿತನಾಗಿದ್ದೇನೆ. ಪಶ್ಚಾತ್ತಾಪಪಡುವಂತೆ ಯೆಹೋವ ದೇವರು ನೀಡುತ್ತಿರುವ ಕರೆಗೆ ಓಗೊಡಲಾರಂಭಿಸಲು ಇದು ಮತ್ತೊಂದು ಮುಖ್ಯ ಕಾರಣವಾಗಿದೆ. 27 ವರ್ಷಗಳಿಂದಲೂ ನಾನು ಪಾಪ, ಮೋಸ, ನಿಷಿದ್ಧ ವ್ಯವಹಾರಗಳು, ಅನೈತಿಕತೆ, ಮತ್ತು ಸಂದೇಹಾಸ್ಪದ ಧರ್ಮಗಳ ಅಂಧಕಾರದಲ್ಲಿ ಕಣ್ಣು ಕಾಣದೆ ತಡವರಿಸುತ್ತಿದ್ದೆ. ಯೆಹೋವನ ಸಾಕ್ಷಿಗಳ ಪರಿಚಯವಾದ ನಂತರ, ಕಟ್ಟಕಡೆಗೂ ನಾನು ಸರಿಯಾದ ಮಾರ್ಗವನ್ನು ಕಂಡುಹಿಡಿದಿದ್ದೇನೆಂದು ನನಗೆ ಅನಿಸುತ್ತದೆ! ಈಗ ನಾನು ಆ ಮಾರ್ಗವನ್ನು ಅನುಸರಿಸಿ ನಡೆಯಬೇಕಷ್ಟೇ.”ನಿಕಟ ಭವಿಷ್ಯತ್ತಿನಲ್ಲಿ ಹೆಚ್ಚಿನ ಸಹಾಯ
“ಮಹಾ ಸಂಕಟ”ವು ಆರಂಭವಾಗುವ ಮುಂಚಿನ ನಿರ್ಣಾಯಕವಾದ ಸಮಯಾವಧಿಯಲ್ಲಿ ನಾವು ಜೀವಿಸುತ್ತಿದ್ದೇವೆಂಬುದು ಹದಗೆಡುತ್ತಿರುವ ಲೋಕ ಪರಿಸ್ಥಿತಿಗಳಿಂದ ಸ್ಪಷ್ಟವಾಗಿ ತೋರಿಬರುತ್ತದೆ. ಸಕಲ ರಾಷ್ಟ್ರ, ಕುಲ, ಜನಾಂಗ ಮತ್ತು ಭಾಷೆಗಳಿಂದ ಬಂದಿರುವ ಮಹಾಸಮೂಹದವರು, ಈಗಾಗಲೇ ‘ಯಜ್ಞದ ಕುರಿಯಾದಾತನ ರಕ್ತದಲ್ಲಿ ತಮ್ಮ ನಿಲುವಂಗಿಗಳನ್ನು ತೊಳೆದು ಶುಭ್ರಮಾಡಿಕೊಳ್ಳುತ್ತಿದ್ದಾರೆ.’ (ಪ್ರಕಟನೆ 7:9, 13, 14; 2 ತಿಮೊಥೆಯ 3:1-5) ಯೇಸುವಿನ ಪ್ರಾಯಶ್ಚಿತ್ತ ಯಜ್ಞದಲ್ಲಿ ನಂಬಿಕೆಯಿಡುವ ಮೂಲಕ, ಅವರ ಪಾಪಗಳಿಗೆ ಕ್ಷಮಾಪಣೆಯು ಸಿಗುತ್ತಿದೆ ಮತ್ತು ದೇವರೊಂದಿಗೆ ನಿಕಟ ಸಂಬಂಧವನ್ನು ಬೆಳೆಸಿಕೊಳ್ಳಲು, ವಾಸ್ತವದಲ್ಲಿ ಆತನ ಸ್ನೇಹಿತರಾಗಲು ಅವರಿಗೆ ಸಹಾಯವು ಸಿಗುತ್ತಿದೆ.—ಯಾಕೋಬ 2:23.
ಕುರಿಯಾದಾತನಾದ ಯೇಸು ಕ್ರಿಸ್ತನು, “ಕುರುಬನಂತಿದ್ದು [ಮಹಾ ಸಂಕಟದಿಂದ ಪಾರಾದವರನ್ನು] ಜೀವಜಲದ ಒರತೆಗಳ ಬಳಿಗೆ ನಡಿಸುತ್ತಾನೆ. ದೇವರು ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು.” (ಪ್ರಕಟನೆ 7:17) ಆಗ ಕ್ರಿಸ್ತನು ಮಹಾಯಾಜಕನೋಪಾದಿ ತನ್ನ ಕರ್ತವ್ಯಗಳನ್ನು ಪೂರ್ಣಗೊಳಿಸುವನು. ದೇವರ ಸ್ನೇಹಿತರೆಲ್ಲರೂ “ಜೀವಜಲದ ಒರತೆ”ಗಳಿಂದ, ಅಂದರೆ ಆತ್ಮಿಕವಾಗಿ, ಶಾರೀರಿಕವಾಗಿ, ಮಾನಸಿಕವಾಗಿ, ಮತ್ತು ಭಾವನಾತ್ಮಕವಾಗಿ ಸಂಪೂರ್ಣವಾದ ರೀತಿಯಲ್ಲಿ ಪ್ರಯೋಜನ ಪಡೆದುಕೊಳ್ಳುವಂತೆ ಅವನು ಸಹಾಯ ಮಾಡುವನು. ಯೇಸು ಸಾ.ಶ. 33ರಲ್ಲಿ ಆರಂಭಿಸಿ, ಅಂದಿನಿಂದ ಸ್ವರ್ಗದಲ್ಲಿ ಮುಂದುವರಿಸಿಕೊಂಡು ಹೋಗಿರುವ ಕೆಲಸವು ಆಗ ಪೂರ್ಣಗೊಳಿಸಲ್ಪಡುವುದು.
ಆದುದರಿಂದಲೇ ದೇವರು ಮತ್ತು ಕ್ರಿಸ್ತನು ನಮಗಾಗಿ ಮಾಡಿರುವ ಮತ್ತು ಮಾಡುತ್ತಾ ಇರುವ ಎಲ್ಲ ವಿಷಯಗಳಿಗಾಗಿ ಅತ್ಯಧಿಕ ಗಣ್ಯತೆಯನ್ನು ತೋರಿಸಲು ಹಿಂಜರಿಯಬೇಡಿರಿ. ಅಪೊಸ್ತಲ ಪೌಲನು ಉತ್ತೇಜಿಸಿದ್ದು: “ಯಾವಾಗಲೂ ಕರ್ತನಲ್ಲಿ ಸಂತೋಷಿಸಿರಿ; . . . ಯಾವ ಸಂಬಂಧವಾಗಿಯೂ ಚಿಂತೆಮಾಡದೆ ಸರ್ವವಿಷಯದಲ್ಲಿ ದೇವರ ಮುಂದೆ ಕೃತಜ್ಞತಾಸ್ತುತಿಯನ್ನೂ ಪ್ರಾರ್ಥನೆವಿಜ್ಞಾಪನೆಗಳನ್ನೂ ಮಾಡುತ್ತಾ ನಿಮಗೆ ಬೇಕಾದದ್ದನ್ನು ತಿಳಿಯಪಡಿಸಿರಿ. ಆಗ ಎಲ್ಲಾ ಗ್ರಹಿಕೆಯನ್ನು ಮೀರುವ ದೇವಶಾಂತಿಯು ನಿಮ್ಮ ಹೃದಯಗಳನ್ನೂ ಯೋಚನೆಗಳನ್ನೂ ಕ್ರಿಸ್ತ ಯೇಸುವಿನಲ್ಲಿ ಕಾಯುವದು.”—ಫಿಲಿಪ್ಪಿ 4:4, 6, 7.
ಸ್ವರ್ಗದಲ್ಲಿರುವ ನಮ್ಮ ಸಹಾಯಕನಾದ ಯೇಸು ಕ್ರಿಸ್ತನಿಗೆ ನಿಮಗಿರುವ ಗಣ್ಯತೆಯನ್ನು ತೋರಿಸಲಿಕ್ಕಾಗಿ ಒಂದು ಅತ್ಯುತ್ತಮ ಮಾರ್ಗವಿದೆ. ಇಸವಿ 2000, ಏಪ್ರಿಲ್ 19ರ ಬುಧವಾರದಂದು, ಸೂರ್ಯಾಸ್ತಮಾನದ ನಂತರ, ಲೋಕದ ಎಲ್ಲೆಡೆಯೂ ಇರುವ ಯೆಹೋವನ ಸಾಕ್ಷಿಗಳು ಕ್ರಿಸ್ತನ ಮರಣದ ಜ್ಞಾಪಕಾಚರಣೆಗಾಗಿ ಕೂಡಿಬರಲಿದ್ದಾರೆ. (ಲೂಕ 22:19) ಕ್ರಿಸ್ತನ ಪ್ರಾಯಶ್ಚಿತ್ತ ಯಜ್ಞಕ್ಕಾಗಿ ನಿಮಗಿರುವ ಗಣ್ಯತೆಯನ್ನು ಹೆಚ್ಚಿಸಲು ಇದೊಂದು ಸುವರ್ಣಾವಕಾಶವಾಗಿರುವುದು. ಇದಕ್ಕೆ ಹಾಜರಾಗಿ, ರಕ್ಷಣೆಗಾಗಿ ಕ್ರಿಸ್ತನ ಮೂಲಕ ದೇವರು ಮಾಡಿರುವ ಅದ್ಭುತಕರ ಏರ್ಪಾಡಿನಿಂದ ನೀವು ಹೇಗೆ ಅನಂತಾನಂತ ಪ್ರಯೋಜನಗಳನ್ನು ಪಡೆದುಕೊಳ್ಳಸಾಧ್ಯವಿದೆ ಎಂಬುದನ್ನು ತಿಳಿದುಕೊಳ್ಳುವಂತೆ ನಿಮಗೆ ಆದರದ ಆಮಂತ್ರಣವನ್ನು ನೀಡುತ್ತೇವೆ. ಈ ವಿಶೇಷ ಕೂಟದ ಸರಿಯಾದ ಸಮಯ ಮತ್ತು ಸ್ಥಳಕ್ಕಾಗಿ ಸ್ಥಳಿಕ ಯೆಹೋವನ ಸಾಕ್ಷಿಗಳಲ್ಲಿ ವಿಚಾರಿಸಿರಿ.
[ಪುಟ 7ರಲ್ಲಿರುವ ಚಿತ್ರ]
ಕಟ್ಟಾಸಕ್ತಿಯಿಂದ ದೇವರಿಗೆ ಪ್ರಾರ್ಥನೆ ಮಾಡುವುದರ ಅನುಭವ ಯೇಸುವಿಗಿದೆ
[ಪುಟ 8ರಲ್ಲಿರುವ ಚಿತ್ರಗಳು]
ನಾವು ಒಬ್ಬೊಂಟಿಗರಾಗಿ ನಿಭಾಯಿಸಲು ಅಸಾಧ್ಯವಾದ ದೊಡ್ಡ ಸಮಸ್ಯೆಗಳನ್ನು ಎದುರಿಸಲು ಕ್ರಿಸ್ತನು ನಮಗೆ ಸಹಾಯವನ್ನು ಒದಗಿಸುವನು
[ಪುಟ 9ರಲ್ಲಿರುವ ಚಿತ್ರ]
ಪ್ರೀತಿಪರ ಹಿರಿಯರ ಮೂಲಕ ಕ್ರಿಸ್ತನು ನಮಗೆ ಸಹಾಯ ಮಾಡುತ್ತಾನೆ