ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರ ದೃಷ್ಟಿಕೋನ | ಲೋಕದ ಅಂತ್ಯ

ಲೋಕದ ಅಂತ್ಯ

ಲೋಕದ ಅಂತ್ಯ

“ಲೋಕವೂ ಅದರ ಆಶೆಯೂ ಗತಿಸಿಹೋಗುತ್ತಿದೆ” ಎಂದು ಬೈಬಲಿನ 1 ಯೋಹಾನ 2:17 ರಲ್ಲಿ ತಿಳಿಸಲಾಗಿದೆ. ಈ “ಲೋಕ” ಯಾವುದನ್ನು ಸೂಚಿಸುತ್ತದೆ? ಇದು ಹೇಗೆ ಮತ್ತು ಯಾವಾಗ ಅಂತ್ಯವಾಗುತ್ತದೆ?

“ಲೋಕ” ಯಾವುದನ್ನು ಸೂಚಿಸುತ್ತದೆ?

ದೇವರು ಏನು ಹೇಳುತ್ತಾನೆ?

ಲೋಕಕ್ಕೆ “ಆಶೆ” ಇದೆ ಎಂದು ಮೇಲೆ ಹೇಳಲಾಗಿದೆ. ಹಾಗಾಗಿ ಅಂತ್ಯವಾಗುವಂಥ ಲೋಕ ಈ ಭೂಮಿಯನ್ನು ಸೂಚಿಸುವುದಿಲ್ಲ. ಬದಲಿಗೆ ದೇವರು ಇಷ್ಟಪಡದೆ ಇರುವ ವಿಷಯಗಳನ್ನು ಬೆನ್ನಟ್ಟಿ ಆತನ ವೈರಿಗಳಾಗುತ್ತಿರುವ ಜನರೆಲ್ಲೆರನ್ನು ಸೂಚಿಸುತ್ತದೆ. (ಯಾಕೋಬ 4:4) ಅಂಥವರು “ನಿತ್ಯನಾಶನವೆಂಬ ದಂಡನೆಯ ನ್ಯಾಯತೀರ್ಪನ್ನು” ಹೊಂದಲಿದ್ದಾರೆ. (2 ಥೆಸಲೊನೀಕ 1:7-9) ಆದರೆ, ಯಾರು ಯೇಸು ಕ್ರಿಸ್ತನಿಗೆ ವಿಧೇಯರಾಗಿದ್ದು ಈ ‘ಲೋಕದ ಭಾಗವಾಗಿರದೆ’ ಉಳಿಯುತ್ತಾರೋ ಅವರು ಭವಿಷ್ಯತ್ತಿನಲ್ಲಿ ನಿತ್ಯಜೀವವನ್ನು ಪಡೆಯಲಿದ್ದಾರೆ.—ಯೋಹಾನ 15:19.

“ದೇವರ ಚಿತ್ತವನ್ನು ಮಾಡುವವನು ಎಂದೆಂದಿಗೂ ಇರುವನು” ಎಂದು 1 ಯೋಹಾನ 2:17 ಹೇಳುತ್ತದೆ. “ನೀತಿವಂತರೋ ದೇಶವನ್ನು ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸುವರು” ಎಂದು ಕೀರ್ತನೆ 37:29 ತಿಳಿಸುತ್ತದೆ. ಈ ವಚನಗಳಲ್ಲಿ ಹೇಳುವಂತೆ ಯಾರು ದೇವರ ಚಿತ್ತವನ್ನು ಮಾಡುತ್ತಾರೋ ಅವರು ಮಾತ್ರ ಇದೇ ಭೂಮಿಯಲ್ಲಿ ಎಂದೆಂದಿಗೂ ಬಾಳಿ ಬದುಕಲಿದ್ದಾರೆ.

“ಲೋಕವನ್ನಾಗಲಿ ಲೋಕದಲ್ಲಿರುವವುಗಳನ್ನಾಗಲಿ ಪ್ರೀತಿಸಬೇಡಿರಿ. ಯಾವನಾದರೂ ಲೋಕವನ್ನು ಪ್ರೀತಿಸುವುದಾದರೆ ತಂದೆಯ ಪ್ರೀತಿಯು ಅವನಲ್ಲಿ ಇಲ್ಲ.”1 ಯೋಹಾನ 2:15.

ಲೋಕ ಹೇಗೆ ಅಂತ್ಯವಾಗುತ್ತದೆ?

ದೇವರು ಏನು ಹೇಳುತ್ತಾನೆ?

ಅಂತ್ಯವು ಎರಡು ಹಂತದಲ್ಲಿ ಆಗಲಿದೆ. ಮೊದಲನೇ ಹಂತದಲ್ಲಿ ದೇವರು ಈ ಲೋಕದಲ್ಲಿರುವ ಸುಳ್ಳು ಧರ್ಮಗಳನ್ನೆಲ್ಲಾ ನಾಶಮಾಡಲಿದ್ದಾನೆ. ಬೈಬಲ್‌ನಲ್ಲಿ ಅವುಗಳನ್ನು ವೇಶ್ಯೆಗೆ ಹೋಲಿಸಲಾಗಿದೆ. ಆ ವೇಶ್ಯೆಯನ್ನು “ಮಹಾ ಬಾಬೆಲ್‌” ಎಂದು ಕರೆಯಲಾಗಿದೆ. (ಪ್ರಕಟಣೆ 17: 1-5; 18:8) ತಾನು ದೇವರಿಗೆ ನಿಷ್ಠಳು ಎಂದು ತೋರಿಸಿಕೊಳ್ಳುವ ಆ ವೇಶ್ಯೆ ಈ ಲೋಕದ ರಾಜಕೀಯದವರ ಜೊತೆ ಆಪ್ತ ಒಡನಾಟ ಇಟ್ಟುಕೊಂಡಿದ್ದಾಳೆ. ಆದರೆ ಅದೇ ರಾಜಕೀಯದವರು ಮುಂದೊಂದು ದಿನ ಅವಳ ವಿರುದ್ಧ ತಿರುಗಿ ಬೀಳಲಿದ್ದಾರೆ. ಅವರು ‘ಆ ವೇಶ್ಯೆಯನ್ನು ದ್ವೇಷಿಸಿ ಅವಳನ್ನು ಗತಿಗೆಡಿಸಿ ನಗ್ನಳನ್ನಾಗಿ ಮಾಡಿ ಅವಳ ಮಾಂಸಲ ಭಾಗಗಳನ್ನು ತಿಂದು ಅವಳನ್ನು ಬೆಂಕಿಯಿಂದ ಪೂರ್ಣವಾಗಿ ಸುಟ್ಟುಬಿಡುವರು.’—ಪ್ರಕಟಣೆ 17:16.

ಎರಡನೇ ಹಂತದಲ್ಲಿ ದೇವರು ತನ್ನ ದೃಷ್ಟಿಯನ್ನು “ಇಡೀ ನಿವಾಸಿತ ಭೂಮಿಯ ರಾಜರ” ಕಡೆಗೆ ಅಂದರೆ ರಾಜಕೀಯ ಅಧಿಕಾರಿಗಳ ಕಡೆಗೆ ತಿರುಗಿಸಲಿದ್ದಾನೆ. ‘ಸರ್ವಶಕ್ತನಾದ ದೇವರ ಮಹಾದಿನದಲ್ಲಾಗುವ ಯುದ್ಧದಲ್ಲಿ’ ಆ ರಾಜಕೀಯ ಅಧಿಕಾರಿಗಳು ಮತ್ತು ದುಷ್ಟ ಜನರು ನಾಶವಾಗಲಿದ್ದಾರೆ. ಆ ಯುದ್ಧವನ್ನು “ಹರ್ಮಗೆದೋನ್‌” ಎಂದು ಕರೆಯಲಾಗುತ್ತದೆ.—ಪ್ರಕಟಣೆ 16:14, 16.

“ಯೆಹೋವನ ನಿಯಮವನ್ನು ಕೈಕೊಂಡ ಲೋಕದ ದೀನರೇ, ನೀವೆಲ್ಲರೂ ಯೆಹೋವನನ್ನು ಆಶ್ರಯಿಸಿರಿ, ಸದ್ಧರ್ಮವನ್ನು ಅಭ್ಯಾಸಿಸಿರಿ, ದೈನ್ಯವನ್ನು ಹೊಂದಿಕೊಳ್ಳಿರಿ; ಯೆಹೋವನ ಸಿಟ್ಟಿನ ದಿನದಲ್ಲಿ ಒಂದುವೇಳೆ ಮರೆಯಾಗುವಿರಿ.”ಚೆಫನ್ಯ 2:3.

ಲೋಕ ಯಾವಾಗ ಅಂತ್ಯವಾಗಲಿದೆ?

ದೇವರು ಏನು ಹೇಳುತ್ತಾನೆ?

ಇಡೀ ಮಾನವ ಕುಲಕ್ಕೆ ದೇವರ ರಾಜ್ಯದ ಕುರಿತು ಸಾರಿದ ಮೇಲೆ ಅಂತ್ಯ ಬರಲಿದೆ. ಎಲ್ಲಾ ಮಾನವ ಸರ್ಕಾರಗಳನ್ನು ತೆಗೆದು ಹಾಕಿ ಇಡೀ ಭೂಮಿಯನ್ನು ಆಳುವ ಒಂದೇ ಸರ್ಕಾರ ದೇವರ ರಾಜ್ಯವಾಗಿದೆ. (ದಾನಿಯೇಲ 7:13, 14) “ರಾಜ್ಯದ ಈ ಸುವಾರ್ತೆಯು ನಿವಾಸಿತ ಭೂಮಿಯಾದ್ಯಂತ ಎಲ್ಲ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲ್ಪಡುವುದು; ಮತ್ತು ಆಗ ಅಂತ್ಯವು ಬರುವುದು” ಎಂದು ಯೇಸು ಕ್ರಿಸ್ತನು ಹೇಳಿದನು. (ಮತ್ತಾಯ 24:14) ದೇವರ ನ್ಯಾಯ ಮತ್ತು ಕರುಣೆಯ ಪ್ರತೀಕವಾಗಿರುವ ಸಾರುವ ಕೆಲಸ ಅಂತ್ಯ ಹತ್ತಿರವಿದೆ ಎನ್ನುವುದಕ್ಕೆ ಒಂದು ಮುಖ್ಯ “ಸೂಚನೆ” ಆಗಿದೆ. ಅಂತಾರಾಷ್ಟ್ರೀಯ ಯುದ್ಧಗಳು, ಭೂಕಂಪಗಳು, ಬರಗಾಲ ಮತ್ತು ರೋಗಗಳು ಇನ್ನಿತರ ಸೂಚನೆಗಳಾಗಿವೆ.—ಮತ್ತಾಯ 24:3; ಲೂಕ 21:10, 11.

ಬೈಬಲ್‌ ಮುಂದೆ ನಡೆಯಲಿರುವ ಲೋಕ ಘಟನೆಗಳ ಕುರಿತು ಹೇಳುವುದರ ಜೊತೆಗೆ “ಕಡೇ ದಿವಸಗಳಲ್ಲಿ” ಜನರ ಸ್ವಭಾವ ಹೇಗಿರುತ್ತದೆಂದು ಸಹ ತಿಳಿಸುತ್ತದೆ. “ಕಡೇ ದಿವಸಗಳಲ್ಲಿ ನಿಭಾಯಿಸಲು ಕಷ್ಟಕರವಾದ ಕಠಿನಕಾಲಗಳು ಬರುವವು ಎಂಬುದನ್ನು ತಿಳಿದುಕೊ. ಜನರು ಸ್ವಪ್ರೇಮಿಗಳೂ ಹಣಪ್ರೇಮಿಗಳೂ . . . ಹೆತ್ತವರಿಗೆ ಅವಿಧೇಯರೂ . . . ಸ್ವನಿಯಂತ್ರಣವಿಲ್ಲದವರೂ ಉಗ್ರರೂ ಒಳ್ಳೇತನವನ್ನು ಪ್ರೀತಿಸದವರೂ . . . ದೇವರನ್ನು ಪ್ರೀತಿಸುವ ಬದಲು ಭೋಗವನ್ನು ಪ್ರೀತಿಸುವವರೂ . . . ಆಗಿರುವರು.” a2 ತಿಮೊಥೆಯ 3:1-5.

ಈಗಿನ ದುಷ್ಟ ಲೋಕ ಬಲು ಬೇಗನೆ ‘ಗತಿಸಿ ಹೋಗಲಿದೆ.’—1 ಯೋಹಾನ 2:17

ಈ ವಿಷಯಗಳೆಲ್ಲಾ ಮೊದಲನೇ ಮಹಾಯುದ್ಧ ನಡೆದ 1914ರ ಕಡೆಗೆ ಬೊಟ್ಟು ಮಾಡುತ್ತವೆ. ಆ ವರ್ಷದಿಂದ ದೇವರ ರಾಜ್ಯದ ಕುರಿತು ಸಾರುವ ಕೆಲಸ ಲೋಕದ ಮೂಲೆ ಮೂಲೆಯಲ್ಲಿ ಆರಂಭವಾಯಿತು. ತಮ್ಮ ಸಾರುವ ಕೆಲಸಕ್ಕೆ ಪ್ರಸಿದ್ಧರಾದದ್ದು ಯೆಹೋವನ ಸಾಕ್ಷಿಗಳಿಗೆ ಒಂದು ಹೆಮ್ಮೆಯ ವಿಷಯವಾಗಿತ್ತು. ಅಲ್ಲದೆ ಅವರ ಮುಖ್ಯ ಪತ್ರಿಕೆಯ ಹೆಸರು ಸಹ ಕಾವಲಿನಬರುಜು ಯೆಹೋವನ ರಾಜ್ಯವನ್ನು ಪ್ರಟಿಸುವುದು ಎಂದಾಗಿದೆ. ◼ (g15-E 11)

“ಆ ದಿನವಾಗಲಿ ಗಳಿಗೆಯಾಗಲಿ ನಿಮಗೆ ತಿಳಿಯದ ಕಾರಣ ಸದಾ ಎಚ್ಚರವಾಗಿರಿ.”ಮತ್ತಾಯ 25:13.

a ಹೆಚ್ಚಿನ ಮಾಹಿತಿಗಾಗಿ, ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದ ಅಧ್ಯಾಯ 9ನ್ನು ನೋಡಿ. ಇದು ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ. ಇದು www.jw.orgನಲ್ಲೂ ಲಭ್ಯ.