ವಿಶ್ವ-ವೀಕ್ಷಣೆ
ಮಧ್ಯ-ಪೂರ್ವ ದೇಶಗಳ ಸುದ್ಧಿ
ಹಿಂದೆ ಎಷ್ಟೋ ಪ್ರಾಚೀನ ನಾಗರಿಕತೆಗಳ ತವರಾಗಿದ್ದ ಮಧ್ಯ-ಪೂರ್ವ ದೇಶಗಳು ಇಂದು ಪ್ರಾಕ್ತನ ಶಾಸ್ತ್ರದ ಭಂಡಾರವಾಗಿವೆ.
ಕಾನಾನ್ಯ ವೈನ್ ತಯಾರಕರು
ಕಾನಾನ್ಯರು ಸುಮಾರು 3,600 ವರ್ಷಗಳ ಹಿಂದೆ ವೈನ್ (ದ್ರಾಕ್ಷಾಮದ್ಯ) ಶೇಖರಿಸಿಟ್ಟಿದ್ದ ನೆಲಮಾಳಿಗೆಯನ್ನು 2013ರಲ್ಲಿ ಪ್ರಾಕ್ತನ ಶಾಸ್ತ್ರಜ್ಞರು ಕಂಡುಹಿಡಿದರು. ಈ ನೆಲಮಾಳಿಗೆಯಲ್ಲಿ ವೈನಿನ 40 ಜಾಡಿಗಳು ಸಿಕ್ಕಿದವು. ಅವುಗಳಲ್ಲಿ ಈಗಿನ 3,000 ಬಾಟಲಿಯಷ್ಟು ವೈನನ್ನು ಶೇಖರಿಸಿಡಬಹುದು. ಕಾನಾನ್ಯರು ವೈನನ್ನು ಬಹು ಜಾಗರೂಕತೆಯಿಂದ ತಯಾರಿಸುತ್ತಿದ್ದರು ಎಂದು ಆ ಜಾಡಿಗಳನ್ನು ಪರಿಶೀಲಿಸಿದ ಒಬ್ಬ ಶಾಸ್ತ್ರಜ್ಞನು ತಿಳಿಸುತ್ತಾನೆ. “ಆ ಎಲ್ಲ ಜಾಡಿಗಳಲ್ಲಿ ವೈನನ್ನು ತಯಾರಿಸಿದ ವಿಧಾನ ಒಂದೇ ಆಗಿತ್ತು” ಎಂದು ಅವನು ಹೇಳಿದನು.
ನಿಮಗಿದು ಗೊತ್ತೇ? “ಉತ್ತಮ ದ್ರಾಕ್ಷಾರಸ” ಪ್ರಾಚೀನ ಇಸ್ರೇಲಿನಲ್ಲಿ ತಯಾರಾಗುತ್ತಿದ್ದುದ್ದರ ಬಗ್ಗೆ ಮತ್ತು ಅವುಗಳನ್ನು ದೊಡ್ಡ ಜಾಡಿಗಳಲ್ಲಿ ಶೇಖರಿಸಿ ಇಟ್ಟಿದ್ದರ ಬಗ್ಗೆ ಬೈಬಲಿನಲ್ಲಿ ದಾಖಲಾಗಿದೆ.— ಪರಮ ಗೀತ 7:9; ಯೆರೆಮೀಯ 13:12.
ಜನಸಂಖ್ಯಾ ಸ್ಫೋಟ
ಈಜಿಪ್ಟ್‌ನಲ್ಲಿ 2010ರಲ್ಲಿ ಜನಿಸಿದ ಮಕ್ಕಳಿಗಿಂತ ಸುಮಾರು 5 ಲಕ್ಷ 60 ಸಾವಿರ ಹೆಚ್ಚು ಮಕ್ಕಳು 2012ರಲ್ಲಿ ಜನಿಸಿದ್ದಾರೆ ಎಂದು ಗಾರ್ಡಿಯನ್ ವಾರ್ತಾ ಪತ್ರಿಕೆ ವರದಿಸಿದೆ. “ಒಂದೇ ವರ್ಷದಲ್ಲಿ ಇಷ್ಟು ಮಕ್ಕಳು ಹಿಂದೆಂದೂ ಈಜಿಪ್ಟಿನಲ್ಲಿ ಜನಿಸಿರಲಿಲ್ಲ” ಎಂದು ಈಜಿಪ್ಟಿನ ಸಂಶೋಧನಾ ಕೇಂದ್ರವಾದ ಬಾಸೇರಾದಲ್ಲಿರುವ ಮಾಗೆಡ್ ಆಸ್ಮಾನ್ ಹೇಳಿದರು. ಒಂದುವೇಳೆ ಇಲ್ಲಿ ಜನಸಂಖ್ಯೆ ಇದೇ ರೀತಿ ಹೆಚ್ಚಾದರೆ, ಜೀವಿಸಲು ಅತ್ಯಾವಶ್ಯಕವಾದ ನೀರು, ಆಹಾರ ಮತ್ತು ಇನ್ನಿತರ ಸಂಪನ್ಮೂಲಗಳಿಲ್ಲದೆ ಪರದಾಡುವ ಪರಿಸ್ಥಿತಿ ಬರುತ್ತದೆ.
ನಿಮಗಿದು ಗೊತ್ತೇ? ಭೂಮಿಯಲ್ಲಿ ಎಷ್ಟು ಜನ ಇದ್ದರೆ ಬದುಕಲು ಬೇಕಾದ ಸಂಪನ್ಮೂಲಗಳು ಎಲ್ಲರಿಗೂ ಸಿಗುತ್ತವೋ ಅಷ್ಟು ಜನರು ಭೂಮಿಯನ್ನು ತುಂಬಿಕೊಂಡು ಸಂತೋಷವಾಗಿರಬೇಕು ಎನ್ನುವುದು ದೇವರ ಉದ್ದೇಶ ಎಂದು ಬೈಬಲ್ ಹೇಳುತ್ತದೆ.—ಆದಿಕಾಂಡ 1:28; ಕೀರ್ತನೆ 72:16.
ಪತ್ತೆಯಾದ ನಾಣ್ಯಗಳು
ಇಸ್ರೇಲಿನ ಹೆದ್ದಾರಿಯ ಹತ್ತಿರ ಸುಮಾರು 100 ಕಂಚಿನ ನಾಣ್ಯಗಳು ಪತ್ತೆಯಾಗಿವೆ. ಅವುಗಳ ಮೇಲೆ “ನಾಲ್ಕನೇ ವರ್ಷ” ಎಂಬ ಮುದ್ರೆಯಿದೆ. ಇದು ರೋಮ್‍ನ ವಿರುದ್ಧ ಯೆಹೂದಿಗಳು ದಂಗೆಯೆದ್ದ ನಾಲ್ಕನೇ ವರ್ಷವನ್ನು (69-70 ಕ್ರಿ.ಶ.) ಸೂಚಿಸುತ್ತದೆ. ಈ ದಂಗೆಯಿಂದ ಯೆರೂಸಲೇಮು ಪೂರ್ತಿಯಾಗಿ ನಾಶವಾಗಿತ್ತು. “ರೋಮನ್ ಸೈನ್ಯದ ಆಕ್ರಮಣವನ್ನು ನೋಡಿ ಭಯಪಟ್ಟ ಯಾವುದೋ ವ್ಯಕ್ತಿ, ‘ನಮ್ಮ ಕಥೆ ಇನ್ನು ಮುಗಿತು’ ಅಂತ ನೆನೆಸಿ, ‘ಈ ನಾಣ್ಯಗಳನ್ನು ಇಲ್ಲಿ ಬಚ್ಚಿಟ್ಟು ಆಮೇಲೆ ಬಂದು ತೆಗೆದುಕೊಳ್ಳೋಣ’ ಎಂದು ಭಾವಿಸಿದ್ದಿರಬೇಕು” ಎಂದು ಭೂಶೋಧನೆಯ ಮುಖ್ಯಸ್ಥ ಪಾಬ್ಲೋ ಬೆಟ್ಸೇರ್ ಹೇಳಿದರು.
ನಿಮಗಿದು ಗೊತ್ತೇ? ರೋಮನ್ ಸಾಮ್ರಾಜ್ಯ ಯೆರೂಸಲೇಮನ್ನು ವಶಪಡಿಸಿಕೊಳ್ಳುತ್ತದೆ ಎಂದು ಕ್ರಿ.ಶ. 33ರಲ್ಲೇ ಯೇಸು ಹೇಳಿದ್ದನು. ಆದ್ದರಿಂದ, ಬೆಟ್ಟಗಳಿಗೆ ಓಡಿಹೋಗಿ ಪ್ರಾಣ ಕಾಪಾಡಿಕೊಳ್ಳುವಂತೆ ಅಲ್ಲಿನ ಕ್ರೈಸ್ತರನ್ನು ಎಚ್ಚರಿಸಿದ್ದನು.—ಲೂಕ 21:20-24. (g15-E 09)