ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮುಖಪುಟ ಲೇಖನ

ಪಾತಕಗಳಿಂದ ನಿಮ್ಮನ್ನು ಕಾಪಾಡಿಕೊಳ್ಳಿ!

ಪಾತಕಗಳಿಂದ ನಿಮ್ಮನ್ನು ಕಾಪಾಡಿಕೊಳ್ಳಿ!

“ಕೆಲಸ ಮುಗಿದ ಮೇಲೆ ತುಂಬ ಕತ್ತಲೆ ಇರುತ್ತಿದ್ದರಿಂದ ನನ್ನ ಸ್ನೇಹಿತರು ನನ್ನನ್ನ ಮನೆ ವರೆಗೂ ಬಿಡುತ್ತಿದ್ದರು. ಆದರೆ ಆವತ್ತು ಸಂಜೆ ತುಂಬ ಸುಸ್ತಾಗಿತ್ತು ಅದಕ್ಕೆ ಟ್ಯಾಕ್ಸಿಯಲ್ಲಿ ಹೋಗೋಣ ಅಂತ ಟ್ಯಾಕ್ಸಿ ನಿಲ್ಲಿಸಿದೆ.

“ಆ ಡ್ರೈವರ್‌ ಮನೆ ಕಡೆ ಕಾರ್‌ ತಿರುಗಿಸುವ ಬದಲು ನಿರ್ಜನ ಪ್ರದೇಶಕ್ಕೆ ಕರಕೊಂಡು ಹೋದ. ಮಾನಭಂಗ ಮಾಡಲು ಪ್ರಯತ್ನಿಸಿದ. ನಾನು ಶಕ್ತಿ ಮೀರಿ ಕಿರಿಚಿದೆ. ಅವನು ನನ್ನಿಂದ ದೂರ ಹೋದ. ಮತ್ತೆ ಅವನು ನನ್ನ ಹತ್ತಿರ ಬರೋದನ್ನು ನೋಡಿ ಮತ್ತೆ ಜೋರಾಗಿ ಕಿರಿಚಿ ಅಲ್ಲಿಂದ ಓಡಿ ಹೋದೆ.

“ನಾನು ಯಾವಾಗಲೂ ಯೋಚಿಸುತ್ತಿದ್ದೆ, ‘ಕಿರಿಚೋದರಿಂದ ಏನು ಪ್ರಯೋಜನ? ಅಂತ.’ ಆದರೆ ನನ್ನ ಬದುಕಲ್ಲಾದ ಆ ಘಟನೆಯೇ ಅದರ ಮಹತ್ವ ಏನಂತ ತೋರಿಸಿತು.”—ಕಾರೆನ್‌. a

ಅನೇಕ ದೇಶಗಳಲ್ಲಿ ಪಾತಕಗಳು ನಡೆಯದ ದಿನಗಳಿಲ್ಲ. ಉದಾಹರಣೆಗೆ, ನ್ಯಾಯಾಧೀಶರೊಬ್ಬರು ಹೇಳಿದ್ದು: “ನಾವೆಲ್ಲ ಒಪ್ಪಿಕೊಳ್ಳಬೇಕಾದ ಕಹಿ ಸತ್ಯ ಏನೆಂದರೆ ಇವತ್ತಿಲ್ಲ ನಾಳೆ ಪಾತಕದ ಕರಿನೆರಳಿಗೆ ನಾವೆಲ್ಲರೂ ಗುರಿ ಆಗೇ ಆಗುತ್ತೇವೆ.” ಕೆಲವು ದೇಶಗಳಲ್ಲಿ ಅಪರಾಧಗಳು ಅಷ್ಟಾಗಿ ನಡೆಯದೇ ಇರಬಹುದು. ಹಾಗಂತ ಚಿಂತೆ ಇಲ್ಲದೇ ಇರುವುದು ಹಾನಿಯನ್ನು ಆಮಂತ್ರಿಸಿದ ಹಾಗೆ.

ನಾವು ವಾಸಿಸುವ ಜಾಗದಲ್ಲಿ ಅಪರಾಧಗಳು ಹೆಚ್ಚೇ ಇರಲಿ ಅಥವಾ ಕಡಿಮೆ ಇರಲಿ ನಾವು ಮತ್ತು ನಮ್ಮ ಆತ್ಮೀಯರು ಹೇಗೆ ಸುರಕ್ಷಿತವಾಗಿರೋದು? ಅದಕ್ಕಾಗಿ ಒಂದು ಹೆಜ್ಜೆಯನ್ನು ಬೈಬಲ್‌ನ ಈ ತತ್ವದಿಂದ ಕಲಿಯಬಹುದು: “ಜಾಣನು ಕೇಡನ್ನು ಕಂಡು ಅಡಗಿಕೊಳ್ಳುವನು; ಬುದ್ಧಿಹೀನನು ಮುಂದೆ ಹೋಗಿ ನಷ್ಟಪಡುವನು.” (ಜ್ಞಾನೋಕ್ತಿ 22:3) ಮುನ್ನೆಚ್ಚರಿಕೆ ವಹಿಸಿದರೆ ಅನೇಕ ಪಾತಕಗಳನ್ನು ತಡೆಯಬಹುದು ಅಂತ ಪೊಲೀಸ್‌ ಅಧಿಕಾರಿಗಳು ಸಹ ಹೇಳುತ್ತಾರೆ ಅಲ್ಲವೇ.

ಅಪರಾಧಗಳಿಂದ ಆಗುವುದು ಕೇವಲ ದೈಹಿಕ ಮತ್ತು ಸ್ವತ್ತುಗಳ ಹಾನಿ ಮಾತ್ರ ಅಲ್ಲ. ಅದಕ್ಕೆ ಒಳಗಾಗುವವರು ಎಷ್ಟೋ ದಿನಗಳ ತನಕ ನಡೆದದ್ದರ ಬಗ್ಗೆ ಯೋಚಿಸಿ ಭಾವನಾತ್ಮಕವಾಗಿ ಹಾನಿಗೊಳಗಾಗುತ್ತಾರೆ. ಆದ್ದರಿಂದ ನಮ್ಮ ಸುರಕ್ಷತೆಗೆ ಗಮನ ಕೊಡುವುದು ಎಷ್ಟು ಮುಖ್ಯ ಅಲ್ಲವೇ! ಇದನ್ನು ಮನಸ್ಸಿನಲ್ಲಿಟ್ಟು ನಾವೀಗ ನಾಲ್ಕು ತರದ ಅಪರಾಧಗಳಿಂದ ನಮ್ಮನ್ನು ಹೇಗೆ ಕಾಪಾಡಿಕೊಳ್ಳುವುದೆಂದು ನೋಡೋಣ: ಕಳ್ಳತನ, ಲೈಂಗಿಕ ದೌರ್ಜನ್ಯ, ಸೈಬರ್‌ ಅಪರಾಧ, ಮತ್ತು ವೈಯಕ್ತಿಕ ಮಾಹಿತಿ ಕಳವು.

ಕಳ್ಳತ

ಅಂದರೆ? ಬಲವಂತವಾಗಿ ಅಥವಾ ಬೆದರಿಕೆ ಹಾಕಿ ಕಸಿದುಕೊಳ್ಳೋದು.

ಇದರ ಪರಿಣಾಮ ಎಷ್ಟು? ಬ್ರಿಟನ್‌ ದೇಶದಲ್ಲಿ ಕೆಲಸದ ಸ್ಥಳದಲ್ಲಿ ಸರಣಿ ಕಳ್ಳತನ ನಡೆದ ನಂತರ ಯಾರೆಲ್ಲ ಅದಕ್ಕೆ ಗುರಿಯಾಗಿದ್ದರೋ ಅವರ ಮೇಲೆ ದೈಹಿಕ ಹಲ್ಲೆ ನಡೆಯದಿದ್ದರೂ ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಇದನ್ನು ಗಮನಿಸಿದ ವಕೀಲೆಯೊಬ್ಬರು ಹೇಳಿದ್ದು: “ಅನೇಕರಿಗೆ ಆ ಘಟನೆ ಇನ್ನೂ ಕಾಡುತ್ತಿದೆ, ಸರಿಯಾಗಿ ನಿದ್ದೆ ಸಹ ಬರುತ್ತಿಲ್ಲ, ಕೆಲಸವನ್ನೂ ಮಾಡಕ್ಕಾಗ್ತಿಲ್ಲ ಅಂತ ವರದಿಸಿದ್ದಾರೆ.”

ನೀವೇನು ಮಾಡಬಹುದು?

  • ಹುಷಾರಾಗಿರಿ. ಕಳ್ಳರು ಸಮಯ ಸಿಗೋದನ್ನೇ ಕಾಯುತ್ತಿರುತ್ತಾರೆ. ಯಾರು ಇದರ ಬಗ್ಗೆ ತಲೆ ಕೆಡಿಸಿಕೊಳ್ಳದೆ ಇರುತ್ತಾರೋ ಅವರನ್ನೇ ಗುರಿ ಮಾಡ್ತಾರೆ ಈ ಕಳ್ಳರು. ಆದ್ದರಿಂದ ನಿಮ್ಮ ಸುತ್ತಮುತ್ತ ಗಮನ ಇರಲಿ. ನಿಮ್ಮನ್ನ ಯಾರೆಲ್ಲ ಗಮನಿಸುತ್ತಿದ್ದಾರೆ ಅಂತ ಒಂದು ಕಣ್ಣಿಡಿ. ಮಿತಿಮೀರಿ ಕುಡಿಯೋದಾಗಲಿ ಮಾದಕ ವಸ್ತುಗಳನ್ನು ಸೇವಿಸೋದಾಗಲಿ ಮಾಡಬೇಡಿ. ಅದರ ಅಮಲು ತಲೆಗೆ ಏರಿದರೆ ನಿಮಗೆ ಯೋಚಿಸುವುದಕ್ಕಾಗಲಿ ನಿರ್ಣಯ ಮಾಡಕ್ಕಾಗಲಿ ಆಗಲ್ಲ. ಆರೋಗ್ಯದ ಬಗ್ಗೆ ಮಾತಾಡುತ್ತಾ ಒಂದು ವಿಶ್ವಕೋಶ ಹೇಳುವುದು: “ಮಿತಿಮೀರಿ ಕುಡಿದ ಅಥವಾ ಮಾದಕ ವಸ್ತುಗಳನ್ನು ಸೇವಿಸಿರುವ ವ್ಯಕ್ತಿಗೆ ಸರಿಯಾಗಿ ಯೋಚಿಸಲು ಆಗಲ್ಲ ಮತ್ತು ತನ್ನ ಸುತ್ತ ನಡೆಯಬಹುದಾದ ಅಪಾಯದ ಬಗ್ಗೆ ಸಹ ಅರಿವಿರುವುದಿಲ್ಲ.”

  • ನಿಮ್ಮ ವಸ್ತುಗಳನ್ನು ಕಾಪಾಡಿ. ನಿಮ್ಮ ಗಾಡಿಯನ್ನು ಯಾವಾಗಲೂ ಲಾಕ್‌ ಮಾಡಿ. ಮನೆ ಬಾಗಿಲು ಮತ್ತು ಕಿಟಕಿಗಳನ್ನು ಸುಮ್ಮಸುಮ್ಮನೆ ತೆರೆದಿಡಬೇಡಿ. ಪರಿಚಯ ಇಲ್ಲದವರನ್ನಂತೂ ಮನೆಯೊಳಗೆ ಸೇರಿಸಬೇಡಿ. ಎಲ್ಲರು ನೋಡಲಿ ಅಂತ ಬೆಲೆಬಾಳುವ ವಸ್ತುಗಳನ್ನು ಪ್ರದರ್ಶನಕ್ಕೆ ಇಡುವ ಬದಲು ಜಾಗ್ರತೆಯಿಂದ ಎತ್ತಿಡಿ. ಜ್ಞಾನೋಕ್ತಿ 11:2 ರಲ್ಲಿ “ದೀನರಲ್ಲಿ ಜ್ಞಾನ” ಅಂತ ಹೇಳುತ್ತೆ. ಯಾರು ತಮ್ಮ ಆಭರಣಗಳನ್ನು ಅಥವಾ ದುಬಾರಿ ವಸ್ತುಗಳನ್ನು ಪ್ರದರ್ಶಿಸುತ್ತಾರೋ ಅಂಥವರನ್ನೇ ಕಳ್ಳರು ಗುರಿಮಾಡೋದು. ಕೈಗೆ ಸಿಕ್ಕಿದ್ದನ್ನು ಕದಿಯುವವರಲ್ಲಿ ಕೆಲವೊಮ್ಮೆ ಮಕ್ಕಳು ಕೂಡ ಇರುತ್ತಾರೆ.

  • ಸಲಹೆ ಕೇಳಿ. “ಅವಿವೇಕಿಯ ಮಾರ್ಗವು ತನ್ನ ಕಣ್ಣುಗಳಿಗೆ ಸರಿಯಾಗಿದೆ. ಆದರೆ ಆಲೋಚನೆಗೆ ಕಿವಿಗೊಡುವವನು ಜ್ಞಾನಿಯಾಗಿದ್ದಾನೆ.” (ಜ್ಞಾನೋಕ್ತಿ 12:15, ಪವಿತ್ರ ಗ್ರಂಥ ಬೈಬಲ್‌) ನೀವು ಯಾವುದಾದರೂ ಊರಿಗೆ ಹೋಗುತ್ತಿರುವುದಾದರೆ ಅಲ್ಲಿನ ಸ್ಥಳೀಯರಿಗೆ ಮತ್ತು ಅಧಿಕಾರಿಗಳಿಗೆ ತಿಳಿಸಿ. ಯಾವ ಜಾಗಕ್ಕೆ ಹೋಗುವುದು ಸುರಕ್ಷಿತವಲ್ಲ, ಹೇಗೆ ಜಾಗ್ರತೆ ವಹಿಸಬೇಕು, ವಸ್ತುಗಳನ್ನು ಕಾಪಾಡಿಕೊಳ್ಳೋದು ಹೇಗೆಂದು ಅವರು ಹೇಳಬಹುದು.

ಲೈಂಗಿಕ ದೌರ್ಜನ್ಯ

ಅಂದರೆ? ಲೈಂಗಿಕ ದೌರ್ಜನ್ಯ ಕೇವಲ ಮಾನಭಂಗಕ್ಕೆ ಸೀಮಿತವಲ್ಲ. ಲೈಂಗಿಕ ಸಂಬಂಧ ಇಟ್ಟುಕೊಳ್ಳುವಂತೆ ಬೆದರಿಕೆ ಹಾಕುವುದು ಅಥವಾ ಒತ್ತಾಯ ಮಾಡುವುದು ಸಹ ಸೇರಿದೆ.

ಇದರ ಪರಿಣಾಮ ಎಷ್ಟು? ಮಾನಭಂಗಕ್ಕೆ ಗುರಿಯಾದ ಒಬ್ಬ ಮಹಿಳೆ ಹೇಳುವುದು: “ಆ ಕ್ಷಣದಲ್ಲಿ ಮಾತ್ರ ಅದು ನಮ್ಮನ್ನು ಬಾಧಿಸಲ್ಲ. ಅದರ ಪರಿಣಾಮ ತುಂಬ ದಿನಗಳ ತನಕ ಇರುತ್ತೆ. ಜೀವನವನ್ನೇ ಬದಲಾಯಿಸಿಬಿಡುತ್ತೆ. ನಮ್ಮನ್ನು ಪ್ರೀತಿಸುವವರ ಮೇಲೂ ತುಂಬ ಪ್ರಭಾವ ಬೀರುತ್ತೆ.” ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರು ಈ ತಪ್ಪಿಗೆ ಕಾರಣರಲ್ಲ. ಯಾರು ಆಕ್ರಮಣ ಮಾಡುತ್ತಾರೊ ಅವರೇ ಕಾರಣ.

ನೀವೇನು ಮಾಡಬಹುದು?

  • ಸುಮ್ಮನೆ ಸಹಿಸಿಕೊಂಡಿರಬೇಡಿ. “ಒಬ್ಬ ವ್ಯಕ್ತಿ ಅಥವಾ ನೀವಿರುವ ಜಾಗ ನಿಮಗೆ ಮುಜುಗರ ಉಂಟುಮಾಡುತ್ತಿದ್ದರೆ ಅಲ್ಲಿಂದ ಹೊರಡಿ. ಬೇರೆಯವರ ಒತ್ತಾಯಕ್ಕೆ ಮಣಿದು ನಿಮ್ಮ ಭಾವನೆಗಳನ್ನು ನಿರ್ಲಕ್ಷಿಸಬೇಡಿ” ಎಂದು ಸಲಹೆ ನೀಡುತ್ತೆ ಅಮೆರಿಕಾದ ಪೊಲೀಸ್‌ ಇಲಾಖೆ.

  • ಕಂಗಾಲಾಗಬೇಡಿ; ಧೈರ್ಯವಾಗಿರಿ. ಸುತ್ತಮುತ್ತ ಏನು ನಡಿತಿದೆ ಅಂತ ಗಮನಿಸದೆ ತಮ್ಮ ಪಾಡಿಗೆ ಇರುವವರ ಮೇಲೆ, ನಿಸ್ಸಹಾಯಕರಂತೆ ತೋರಿಬರುವವರ ಮೇಲೆಯೇ ದುಷ್ಕರ್ಮಿಗಳು ಹಲ್ಲೆ ಮಾಡುವುದು. ಆದ್ದರಿಂದ ನಿಮ್ಮ ನಡೆಯಲ್ಲಿ ಸ್ಥಿರತೆ ಇರಲಿ. ಹುಷಾರಾಗಿರಿ.

  • ತಕ್ಷಣ ಪ್ರತಿಕ್ರಿಯಿಸಿ. ಜೋರಾಗಿ ಕಿರಿಚಿ. (ಧರ್ಮೋಪದೇಶಕಾಂಡ 22:25-27) ತಪ್ಪಿಸಿಕೊಳ್ಳಲು ಪ್ರಯತ್ನಿಸಿ. ಆಕ್ರಮಣ ಮಾಡುತ್ತಿರುವವ ಪೆಚ್ಚಾಗುವಂಥ ಯಾವುದನ್ನಾದರೂ ಬಳಸಿ ನೀವೂ ಹೋರಾಡಿ. ಸುರಕ್ಷಿತ ಎಂದೆನಿಸುವ ಜಾಗಕ್ಕೆ ಓಡಿ ಹೋಗಿ. ಪೊಲೀಸ್‌ಗೆ ಕರೆ ಮಾಡಿ. b

ಸೈಬರ್‌ ಅಪರಾಧ

ಅಂದರೆ? ಅಂತರ್ಜಾಲದ ಮೂಲಕ ನಡೆಯುವ ದುಷ್ಕೃತ್ಯವನ್ನು ಸೈಬರ್‌ ಅಪರಾಧ ಎನ್ನುತ್ತಾರೆ. ಇದರಲ್ಲಿ ತೆರಿಗೆ ವಂಚನೆ, ಜನಹಿತ ಆರ್ಥಿಕ ಸೌಲಭ್ಯದ ವಂಚನೆ, ಬೇರೆಯವರ ಕ್ರೆಡಿಟ್‌ ಕಾರ್ಡ್‌ ಬಳಕೆ, ಯಾವುದಾದರೊಂದು ವಸ್ತುವನ್ನು ತಲುಪಿಸುತ್ತೇವೆಂದು ಹೇಳಿ ಮುಂಗಡ ಹಣ ಪಡೆದು ಮೋಸಮಾಡುವುದು, ಆನ್‌ಲೈನ್‌ ಹರಾಜಿನಲ್ಲಿ ವಂಚನೆ ಸೇರಿದೆ.

ಇದರ ಪರಿಣಾಮ ಎಷ್ಟು? ಸೈಬರ್‌ ಅಪರಾಧದಿಂದ ಮುಗ್ಧ ಜನರಿಗೆ ಮತ್ತು ಸಮಾಜಕ್ಕೆ ಲಕ್ಷಾಂತರ ರೂಪಾಯಿ ನಷ್ಟವಾಗುತ್ತೆ. ಈ ಉದಾಹರಣೆ ಗಮನಿಸಿ. ಸ್ಯಾಂಡ್ರ ಎಂಬವರಿಗೆ ಒಂದು ಇ-ಮೇಲ್‌ ಬಂತು. ಅವರು ನೆನಸಿದ್ರು ಅದು ಹೆಚ್ಚಿನ ಮಾಹಿತಿಗಾಗಿ ಬ್ಯಾಂಕ್‌ನಿಂದ ಬಂದ ಇ-ಮೇಲ್‌ ಅಂತ. ಮಾಹಿತಿಯನ್ನೆಲ್ಲಾ ಕೊಟ್ಟ ಕೆಲವೇ ನಿಮಿಷದಲ್ಲಿ ಅವರ ಅಕೌಂಟ್‌ನಿಂದ ಸುಮಾರು ನಾಲ್ಕು ಸಾವಿರ ಡಾಲರ್‌ನಷ್ಟು ಹಣವನ್ನು ಅವರಿಗೆ ಸಂಬಂಧವೇ ಇಲ್ಲದ ವಿದೇಶಿ ಬ್ಯಾಂಕ್‌ಗೆ ವರ್ಗಾಯಿಸಲಾಗಿರುವುದು ಬೆಳಕಿಗೆ ಬಂತು. ತನ್ನನ್ನು ಮೋಸಮಾಡಿದ್ದಾರೆ ಅಂತ ಸ್ಯಾಂಡ್ರಗೆ ಆಗಲೇ ತಿಳಿದುಬಂದದ್ದು.

ನೀವೇನು ಮಾಡಬಹುದು?

  • ಎಚ್ಚರವಾಗಿರಿ! ವೃತ್ತಿಪರವಾಗಿ ಕಾಣಿಸಿಕೊಳ್ಳುವ ಅಂತರ್ಜಾಲ ತಾಣಗಳನ್ನು ನೋಡಿ ಮೋಸಹೋಗಬೇಡಿ. ಕಾನೂನು ಮನ್ನಣೆ ಇರುವ ಯಾವುದೇ ಹಣಕಾಸಿನ ಸಂಸ್ಥೆ ನಿಮ್ಮ ಗೋಪ್ಯ ವಿಚಾರಗಳ ಬಗ್ಗೆ ಮಾಹಿತಿ ಕೇಳುವುದಿಲ್ಲ ಅಂತ ನೆನಪಿಡಿ. ಅಂತರ್ಜಾಲದ ಮೂಲಕ ಯಾವುದೇ ವಸ್ತುವನ್ನು ಖರೀದಿಸುವ ಮುನ್ನ ಅಥವಾ ಹಣ ಹೂಡುವ ಮೊದಲು ಕಂಪೆನಿ ಹೆಸರುವಾಸಿ ಆಗಿದೆಯಾ ಅಂತ ನೋಡಿ. ಜ್ಞಾನೋಕ್ತಿ 14:15 ರಲ್ಲಿ ಹೀಗೆ ಹೇಳುತ್ತೆ: “ಮೂಢನು ಯಾವ ಮಾತನ್ನಾದರೂ ನಂಬುವನು; ಜಾಣನು ತನ್ನ ನಡತೆಯನ್ನು ಚೆನ್ನಾಗಿ ಗಮನಿಸುವನು.” ವಿದೇಶದಲ್ಲಿ ನೆಲೆಸಿರುವ ಕಂಪೆನಿಗಳೊಂದಿಗೆ ವ್ಯವಹರಿಸುವಾಗ ಇನ್ನೂ ಹೆಚ್ಚು ಜಾಗ್ರತೆಯಿಂದಿರಿ. ಎಲ್ಲಾದರೂ ತೊಂದರೆಯಾದ್ರೆ ಬಗೆಹರಿಸೋದು ತುಂಬ ಕಷ್ಟವಾಗುತ್ತೆ.

  • ಕಂಪೆನಿಯನ್ನು, ಅದರ ನಿಯಮಗಳನ್ನು ಚೆನ್ನಾಗಿ ಅರಿತಿರಿ. ಈ ಪ್ರಶ್ನೆಗಳು ನಿಮ್ಮ ಗಮನದಲ್ಲಿರಲಿ: ‘ಕಂಪೆನಿಯ ಆಫೀಸ್‌ ಎಲ್ಲಿದೆ? ಅದರ ಫೋನ್‌ ನಂಬರ್‌ ಸರಿಯಾಗಿದೆಯಾ? ನಾನು ಖರೀದಿಸಿರುವ ವಸ್ತುವಿಗೆ ನನಗೆ ಗೊತ್ತಿಲ್ಲದೆ ಹಣ ಕೊಂಡುವಂತೆ ಇದೆಯಾ? ನನಗೆ ಆ ವಸ್ತು ಯಾವಾಗ ಬಂದು ತಲಪುತ್ತೆ? ಅದನ್ನು ವಾಪಸ್‌ ಮಾಡಬಹುದಾ? ಹಾಗಿದ್ದರೆ, ಕೊಟ್ಟ ಹಣ ಮತ್ತೆ ಪಡೆಯಬಹುದಾ?’

  • ಆಫರ್‌ ತುಂಬ ಚೆನ್ನಾಗಿದೆ ಅಂತ ಗುಂಡಿಗೆ ಬೀಳಬೇಡಿ. ಕಂಡಿದ್ದನ್ನೆಲ್ಲಾ ಕೊಂಡುಕೊಳ್ಳುವವರ ಮೇಲೆ ಸೈಬರ್‌ ಕಳ್ಳರು ಒಂದು ಕಣ್ಣು ಇಟ್ಟಿರುತ್ತಾರೆ. ಜನರನ್ನು ಬಲೆಗೆ ಬೀಳಿಸುವ ಸಲುವಾಗಿ ಕೆಲವು ಆಫರ್‌ಗಳನ್ನು ಕೊಟ್ಟು ಆಕರ್ಷಿಸಲು ಪ್ರಯತ್ನಿಸುತ್ತಾರೆ. ಸಾಲ ತೀರಿಸೋ ಸಾಮರ್ಥ್ಯ ಇಲ್ಲದಿದ್ದರೂ ಸಾಲ ಅಥವಾ ಕ್ರೆಡಿಟ್‌ ಕಾರ್ಡ್‌ ಕೊಡುವ ಆಫರ್‌, ಸ್ವಲ್ಪ ಹಣ ಹೂಡಿ ತುಂಬ ಹಣ ಗಳಿಸುವ ಆಫರ್‌, ‘ಮನೆಯಲ್ಲಿದ್ದೇ ಕೆಲಸ ಮಾಡಿ ಸಾವಿರಾರು ರೂಪಾಯಿ ದುಡಿಯಿರಿ’ ಎನ್ನುವ ಆಫರ್‌ ಇತ್ಯಾದಿ. ಇಂಥ ಆಫರ್‌ಗಳ ಬಗ್ಗೆ ಎಚ್ಚರವಿರಲಿ! ಅಮೆರಿಕಾದ ಸರ್ಕಾರಿ ಸಂಸ್ಥೆ ಹೇಳಿದ್ದು: “ಬಂಡವಾಳ ಹೂಡಿಕೆಯ ಆಫರ್‌ ನೀಡುವ ಯಾವುದೇ ಸಂಸ್ಥೆಯ ಕಾನೂನು ಮನ್ನಣೆಯ ಬಗ್ಗೆ ಸರಿಯಾಗಿ ತಿಳಿದುಕೊಳ್ಳಿ. ತುಂಬ ಲಾಭ ಇದೆ ಅಂತ ಯಾವ ಸಂಸ್ಥೆ ಹೇಳುತ್ತೋ ಅಲ್ಲಿ ಸಮಸ್ಯೆನೂ ಅಷ್ಟೇ ಹೆಚ್ಚಿರುತ್ತೆ. ಆ ಸಂಸ್ಥೆ ಕಾನೂನು ಬದ್ಧವಾಗಿದೆ ಅಂತ ನಿಮಗೆ ಸಂಪೂರ್ಣ ನಂಬಿಕೆ ಬರೋವರೆಗೂ ಯಾವುದೇ ಮಧ್ಯವರ್ತಿಯ ಒತ್ತಾಯಕ್ಕೆ ಮಣಿಯಬೇಡಿ.”

ವೈಯಕ್ತಿಕ ಮಾಹಿತಿ ಕಳವು

ಅಂದರೆ? ಮೋಸ ಮಾಡುವ ಅಥವಾ ಕೇಡು ಬಗೆಯುವ ಉದ್ದೇಶದಿಂದ ಒಬ್ಬ ವ್ಯಕ್ತಿಯ ಖಾಸಗಿ ಮಾಹಿತಿಯನ್ನು ಕಾನೂನುಬಾಹಿರವಾಗಿ ಸಂಗ್ರಹಿಸುವುದು.

ಇದರ ಪರಿಣಾಮ ಎಷ್ಟು? ಸಾಲ ಪಡೆಯಲು/ಕ್ರೆಡಿಟ್‌ ಕಾರ್ಡ್‌ ಪಡೆಯಲು/ಹೊಸ ಖಾತೆ ತೆರೆಯಲು ನಮ್ಮ ವೈಯಕ್ತಿಕ ಮಾಹಿತಿಯನ್ನು ಕದೀಮರು ಕದಿಯುತ್ತಾರೆ. ನಮ್ಮ ಹೆಸರಲ್ಲಿ ಬೇಕಾದ ಹಾಗೆ ಸಾಲ ಪಡೆಯುತ್ತಾರೆ. ಅದನ್ನು ತೀರಿಸುವ ಸಮಯ ಬಂದಾಗ ಸಿಕ್ಕಿಹಾಕಿಕೊಳ್ಳುವುದು ನಾವೇ! ಸಾಲ ಒಂದುವೇಳೆ ರದ್ದಾದರೂ ಹೆಸರು ಹಾಳಾಗೋದು ಖಂಡಿತ. ಅದು ಸರಿಯಾಗಲು ವರ್ಷಗಳೇ ಹಿಡಿಯಬಹುದು. ಇಂಥ ನಷ್ಟಕ್ಕೆ ಗುರಿಯಾದವರೊಬ್ಬರು ಹೇಳುವುದು: “ಹೆಸರು ಹಾಳಾಗೋ ಬದಲು ದುಡ್ಡನ್ನೆಲ್ಲ ಕಳಕೊಂಡು ದಿವಾಳಿಯಾಗೋದು ಎಷ್ಟೋ ಮೇಲು.”

ನೀವೇನು ಮಾಡಬಹುದು?

  • ಖಾಸಗಿ ಮಾಹಿತಿಯನ್ನು ಗೌಪ್ಯವಾಗಿಡಿ. ನೀವು ಅಂತರ್ಜಾಲದಲ್ಲಿ ಬ್ಯಾಂಕ್‌ ವಹಿವಾಟು, ಖರೀದಿ ಮಾಡುತ್ತಿರುವುದಾದರೆ ನಿಮ್ಮ ಗುಪ್ತಪದವನ್ನು (ಪಾಸ್‌ವರ್ಡ್‌) ಆಗಿಂದಾಗ್ಗೆ ಬದಲಾಯಿಸಿ. ವಿಶೇಷವಾಗಿ ನೀವೆಲ್ಲಾದರೂ ಸಾರ್ವಜನಿಕ ಸ್ಥಳದಲ್ಲಿ ಕಂಪ್ಯೂಟರ್‌ ಬಳಸುತ್ತಿದ್ದರೆ ಅದನ್ನು ಖಂಡಿತ ಮಾಡಿ. ಆಗಲೇ ತಿಳಿಸಿದಂತೆ ತೀರ ಖಾಸಗಿ ಮಾಹಿತಿ ಕೊಡುವಂತೆ ನಿಮಗೆ ಯಾವುದಾದರೂ ಇ-ಮೇಲ್‌ ಬರುವಲ್ಲಿ ಅಂತಹ ಸಂದರ್ಭಗಳಲ್ಲಿ ಹೆಚ್ಚು ಜಾಗ್ರತೆಯಿಂದಿರಿ.

    ಮಾಹಿತಿ ಕದಿಯುವವರು ಕಂಪ್ಯೂಟರ್‌ ಅನ್ನು ಮಾತ್ರ ಬಳಸುವುದಿಲ್ಲ. ತಮ್ಮಿಂದಾದ ಎಲ್ಲಾ ಮೂಲಗಳಿಂದ ಮಾಹಿತಿ ಪಡೆಯಲು ಯತ್ನಿಸುತ್ತಾರೆ. ಅದು ಬ್ಯಾಂಕ್‌ ವರದಿಗಳಿರಬಹುದು, ಚೆಕ್‌ಬುಕ್‌, ಕ್ರೆಡಿಟ್‌ ಕಾರ್ಡ್‌ ಅಥವಾ ಸೋಶಿಯಲ್‌ ಸೆಕ್ಯುರಿಟಿ ಸಂಖ್ಯೆಗಳಿರಬಹುದು. ಇವನ್ನೆಲ್ಲಾ ಜೋಪಾನವಾಗಿಡಿ. ಬಿಸಾಡಬೇಕಾದ ಕಾಗದಪತ್ರಗಳನ್ನು ಚೂರು ಚೂರು ಮಾಡಿ ಬಿಸಾಡಿ. ಯಾವುದಾದರೂ ಕಾಗದ ಪತ್ರ ಕಾಣೆಯಾಗಿದೆ ಅಂತ ಅನಿಸಿದರೆ ತಕ್ಷಣ ವರದಿಸಿ.

  • ನಿಮ್ಮ ಅಕೌಂಟ್‌ ಅನ್ನು ಯಾವಾಗಲೂ ಪರೀಕ್ಷಿಸುತ್ತಾ ಇರಿ. ಮಾಹಿತಿ ಕಳವಿನ ಬಗ್ಗೆ ಅಮೆರಿಕಾದ ಸರ್ಕಾರಿ ಸಂಸ್ಥೆ ಹೇಳುವುದು: “ಜಾಗ್ರತೆಯಿಂದ ಇದ್ದರೆ ಮಾಹಿತಿ ಕಳವನ್ನು ತಡೆಯಬಹುದು. ತೊಂದರೆ ಎದುರಾಗುವ ಮುಂಚೆನೇ ಅದನ್ನು ಗುರುತಿಸಿದರೆ ಆಪತ್ತನ್ನು ತಡೆಯಬಹುದು.” ಆದ್ದರಿಂದ ನಿಮ್ಮ ಅಕೌಂಟ್‌ ಅನ್ನು ಆವಾಗವಾಗ ಪರೀಕ್ಷಿಸುತ್ತಾ ಇರಿ. ಯಾವುದಾದರೂ ವಹಿವಾಟು ನಿಮಗೆ ತಿಳಿಯದೇ ನಡೆದಿದೆಯಾ ಎಂದು ಗಮನಿಸಿ. ಸಾಧ್ಯವಾದಲ್ಲಿ ನಿಮ್ಮ ವಹಿವಾಟಿನ ವರದಿಯನ್ನು ಯಾವುದಾದರೂ ಒಳ್ಳೇ ಹೆಸರಿರೋ ಸಂಸ್ಥೆಯಿಂದ ಪಡೆಯಿರಿ. ಖಾತೆ ಮತ್ತು ಕ್ರೆಡಿಟ್‌ ಕಾರ್ಡ್‌ ನಿಮ್ಮ ಹೆಸರಿನದ್ದೇನಾ ಎಂದು ಖಚಿತಪಡಿಸಿಕೊಳ್ಳಿ.

ಏನೇ ಆಗಲಿ ಇಂದಿನ ಲೋಕದಲ್ಲಿ ಯಾವುದೂ ಗ್ಯಾರಂಟಿ ಇಲ್ಲ. ತುಂಬ ಜಾಗ್ರತೆ ವಹಿಸುವವರು ಕೂಡ ಅಪರಾಧದ ಜಾಲಕ್ಕೆ ಬಿದ್ದಿದ್ದಾರೆ. ಆದರೂ ನಾವು ಯಾವಾಗಲೂ ಬೈಬಲ್‌ನಲ್ಲಿರುವ ವಿವೇಕದ ಮಾತುಗಳಿಗೆ ಕಿವಿಗೊಡಬೇಕು. ಅವು ‘ನಮ್ಮನ್ನು ಕಾಪಾಡುವವು ಮತ್ತು ಕಾಯುವವು.’ (ಜ್ಞಾನೋಕ್ತಿ 4:6) ಅಪರಾಧಗಳೇ ನಡೆಯದ ಸಮಯ ಬರಲಿದೆ ಎಂದು ಬೈಬಲ್‌ ವಾಗ್ದಾನ ಮಾಡಿದೆ.

ಅತೀ ಬೇಗನೆ ಅಪರಾಧಗಳಿಗೆ ಕೊನೆ

ದೇವರು ಅಪರಾಧಗಳನ್ನೆಲ್ಲಾ ತೆಗೆದು ಹಾಕುತ್ತಾನೆಂದು ನಾವು ಹೇಗೆ ಹೇಳಬಲ್ಲೆವು? ಇವನ್ನು ಪರಿಗಣಿಸಿ:

  • ದೇವರು ಅನ್ಯಾಯಗಳನ್ನು ಕೊನೆಗಾಣಿಸಲು ಬಯಸುತ್ತಾನೆ. “ಯೆಹೋವನೆಂಬ ನಾನು ನ್ಯಾಯವನ್ನು ಪ್ರೀತಿಸುತ್ತೇನೆ, ಕೊಳ್ಳೆಯನ್ನೂ ಅನ್ಯಾಯವನ್ನೂ ದ್ವೇಷಿಸುತ್ತೇನೆ.”—ಯೆಶಾಯ 61:8.

  • ಅವನ್ನೆಲ್ಲ ತೆಗೆದುಹಾಕುವ ಶಕ್ತಿ ದೇವರಿಗಿದೆ. “ಆತನ ಪರಾಕ್ರಮವು ಬಹಳ; ಆತನು ನ್ಯಾಯವನ್ನಾಗಲಿ ಪರಿಪೂರ್ಣ ಧರ್ಮವನ್ನಾಗಲಿ ಕುಂದಿಸುವದಿಲ್ಲ.”—ಯೋಬ 37:23.

  • ಕೆಟ್ಟವರನ್ನು ನಾಶಮಾಡಿ ಒಳ್ಳೆಯವರನ್ನು ಉಳಿಸುವೆನೆಂದು ಆತನು ಮಾತು ಕೊಟ್ಟಿದ್ದಾನೆ. “ಕೆಡುಕರು ತೆಗೆದುಹಾಕಲ್ಪಡುವರು.” “ನೀತಿವಂತರೋ ದೇಶವನ್ನು ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸುವರು.”—ಕೀರ್ತನೆ 37:9, 29.

  • ಶಾಂತಿಯಿಂದ ಕೂಡಿದ ಹೊಸ ಲೋಕದಲ್ಲಿ ಒಳ್ಳೇ ಜನರು ವಾಸಿಸುತ್ತಾರೆ ಎಂದು ದೇವರು ಮಾತು ಕೊಟ್ಟಿದ್ದಾನೆ. “ಆದರೆ ದೀನರು ದೇಶವನ್ನು ಅನುಭವಿಸುವರು; ಅವರು ಮಹಾಸೌಖ್ಯದಿಂದ ಆನಂದಿಸುವರು.”—ಕೀರ್ತನೆ 37:11.

ಈ ಮಾತುಗಳು ನಿಮ್ಮ ಮನ ಮುಟ್ಟುತ್ತದೆ ಅಲ್ವಾ? ಹಾಗಿದ್ದರೆ ಮನುಷ್ಯರಿಗಾಗಿ ದೇವರ ಉದ್ದೇಶ ಏನು ಅನ್ನೋದರ ಬಗ್ಗೆ ಬೈಬಲ್‌ ಏನು ಹೇಳುತ್ತೆ ಎಂದು ಕಲಿಯಲು ದಯವಿಟ್ಟು ಸಮಯ ಮಾಡಿಕೊಳ್ಳಿ. ಬೈಬಲ್‌ನಲ್ಲಿರುವಷ್ಟು ಸಲಹೆ ಬೇರೆ ಯಾವ ಪುಸ್ತಕದಲ್ಲೂ ಇಲ್ಲ. ಯಾವ ಪುಸ್ತಕ ಸಹ ಅಪರಾಧ ಅನ್ಯಾಯಗಳಿಂದ ಬಿಡುಗಡೆ ಸಿಗುವ ಬಗ್ಗೆ ಮಾತಾಡುವುದಿಲ್ಲ. c ◼ (g13-E 05)

a ಹೆಸರನ್ನು ಬದಲಿಸಲಾಗಿದೆ.

c ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದಲ್ಲಿ ಹೆಚ್ಚಿನ ಮಾಹಿತಿ ಇದೆ. ಅದರ ಒಂದು ಪ್ರತಿಯನ್ನು ಉಚಿತವಾಗಿ ಯೆಹೋವನ ಸಾಕ್ಷಿಗಳಿಂದ ಪಡೆಯಿರಿ ಅಥವಾ www.jw.orgನಲ್ಲಿ ಓದಿ.