ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸಲಹೆ 4 ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ

ಸಲಹೆ 4 ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ

ಸಲಹೆ 4 ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ

“ಜಾಣನು ಕೇಡನ್ನು ಕಂಡು ಅಡಗಿಕೊಳ್ಳುವನು.”—ಜ್ಞಾನೋಕ್ತಿ 22:3. ಆರೋಗ್ಯ ಕಾಪಾಡುವ ಸರಳ ಹೆಜ್ಜೆಗಳನ್ನು ತೆಗೆದುಕೊಳ್ಳುವುದರಿಂದ ಕಾಯಿಲೆ-ಕ್ಲೇಶ ಕಡಿಮೆಗೊಳಿಸಿ, ಸಮಯ-ಹಣ ಉಳಿಸಬಲ್ಲಿರಿ.

ಶುಚಿಯಾಗಿರ್ರಿ. “ಸೋಂಕು ಹರಡುವುದನ್ನು ತಡೆಗಟ್ಟುವ ಮತ್ತು ಆರೋಗ್ಯ ಹಾಗೂ ಕ್ಷೇಮದಿಂದಿರಲು ನೆರವಾಗುವ ಒಂದು ಮುಖ್ಯ ವಿಧಾನ ನಿಮ್ಮ ಕೈಗಳನ್ನು ತೊಳೆಯುವುದೇ” ಎನ್ನುತ್ತದೆ ರೋಗ ನಿಯಂತ್ರಣ ಹಾಗೂ ತಡೆಗಟ್ಟುವಿಕೆಯ ಯು.ಎಸ್‌. ಕೇಂದ್ರಗಳ ವರದಿ. ಕೊಳಕು ಕೈಗಳ ಮೂಲಕವೇ ಶೇ. 80ರಷ್ಟು ಸೋಂಕುಗಳು ಹರಡುತ್ತವೆ ಎಂದು ಅದು ಹೇಳುತ್ತದೆ. ಆದ್ದರಿಂದ ಕೈಗಳನ್ನು ಆಗಾಗ್ಗೆ ತೊಳೆಯಿರಿ. ತಿನ್ನುವ, ಅಡುಗೆಮಾಡುವ, ಇಲ್ಲವೆ ಗಾಯಕ್ಕೆ ಬ್ಯಾಂಡೇಜು ಕಟ್ಟುವ ಮುಂಚೆ, ಗಾಯವನ್ನು ಸ್ಪರ್ಶಿಸುವ ಮೊದಲೂ ಕೈತೊಳೆಯಿರಿ. ಮಾತ್ರವಲ್ಲ ಪ್ರಾಣಿಗಳನ್ನು ಮುಟ್ಟಿದ ನಂತರ, ಶೌಚಾಲಯದಿಂದ ಬಂದ ಮೇಲೆ, ಮಲಮೂತ್ರ ಮಾಡಿದ ಮಗುವನ್ನು ಶುಚಿಗೊಳಿಸಿದ ಬಳಿಕ ಇದನ್ನು ಖಂಡಿತ ಮಾಡಿ.

ಸಾಬೂನು ಮತ್ತು ನೀರಿನಿಂದ ಕೈತೊಳೆಯುವುದು ಮದ್ಯಸಾರ ಮೂಲದ ‘ಹ್ಯಾಂಡ್‌ ಸ್ಯಾನಿಟೈಸರ್ಸ್‌’ ಬಳಸುವುದಕ್ಕಿಂತ ಹೆಚ್ಚು ಪರಿಣಾಮಕಾರಿ. ಹೆತ್ತವರು ಮಕ್ಕಳಿಗೆ ಕೈತೊಳೆಯಲು ಮತ್ತು ಕಣ್ಣಿಗೆ, ಬಾಯಿಗೆ ಕೈಹಾಕದಂತೆ ತರಬೇತಿ ನೀಡಿದರೆ ಮಕ್ಕಳು ಹೆಚ್ಚು ಆರೋಗ್ಯವಂತರಾಗಿರುತ್ತಾರೆ. ಪ್ರತಿದಿನ ಸ್ನಾನಮಾಡುವುದು, ನಿಮ್ಮ ಬಟ್ಟೆಬರೆಗಳನ್ನೂ ಹಾಸಿಗೆಹೊದಿಕೆಗಳನ್ನು ಶುಚಿಯಾಗಿಡುವುದು ಸಹ ಉತ್ತಮ ಆರೋಗ್ಯಕ್ಕೆ ಸಹಾಯಕರ.

ಸೋಂಕುರೋಗ ತಗಲದಂತೆ ಎಚ್ಚರವಹಿಸಿ. ನೆಗಡಿ ಇಲ್ಲವೆ ಫ್ಲೂ ಇರುವವರೊಂದಿಗೆ ಶಾರೀರಿಕವಾಗಿ ಹತ್ತಿರದ ಸಂಪರ್ಕ ಇಡಬೇಡಿ. ಅವರು ತಿನ್ನಲು, ಕುಡಿಯಲು ಬಳಸುವ ಪಾತ್ರೆಗಳನ್ನು ಬಳಸಬೇಡಿ. ಅವರ ಉಗುಳು ಮತ್ತು ಮೂಗಿನ ಸ್ರಾವಗಳು ನಿಮಗೂ ಆ ಕಾಯಿಲೆಯನ್ನು ಹರಡಿಸಬಲ್ಲವು. ರಕ್ತದ ಮೂಲಕ ಹರಡುವ ಕಾಯಿಲೆಗಳಾದ ಹೆಪಟೈಟಿಸ್‌ ಬಿ ಮತ್ತು ಸಿ ಹಾಗೂ ಎಚ್‌ಐವಿ/ಏಡ್ಸ್‌ಗಳು ಮುಖ್ಯವಾಗಿ ಹರಡುವುದು ಲೈಂಗಿಕ ಸಂಪರ್ಕ, ರಕ್ತಪೂರಣಗಳು ಹಾಗೂ ಸಿರಿಂಜಿನ ಮೂಲಕ ಡ್ರಗ್ಸ್‌ ಸೇವನೆಯಿಂದ. ಲಸಿಕೆಗಳು ಕೆಲವೊಂದು ಸೋಂಕುಗಳನ್ನು ತಡೆಯ ಶಕ್ತವು. ಆದರೂ ಒಬ್ಬನು ಸೋಂಕಿತ ವ್ಯಕ್ತಿಯ ಬಳಿ ಇರುವಾಗ ಅಗತ್ಯವಾದ ಮುನ್ನೆಚ್ಚರಿಕೆಗಳನ್ನು ಅವಶ್ಯವಾಗಿ ತೆಗೆದುಕೊಳ್ಳುವುದು ಜಾಣತನ. ಕೀಟಗಳ ಕಡಿತಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಿ. ಸೊಳ್ಳೆಗಳೂ ಇತರ ರೋಗವಾಹಕ ಕೀಟಗಳ ಕಾಟವಿರುವ ಸಮಯದಲ್ಲಿ ಮನೆಯ ಹೊರಗೆ ಕುಳಿತಿರಬೇಡಿ ಇಲ್ಲವೆ ಮಲಗಬೇಡಿ. ಸೊಳ್ಳೆ ಪರದೆಗಳನ್ನು ಬಳಸಿರಿ; ವಿಶೇಷವಾಗಿ ಮಕ್ಕಳಿಗಾಗಿ. ಅಲ್ಲದೆ ಕೀಟ ನಿವಾರಕಗಳನ್ನೂ ಬಳಸಿ. *

ಮನೆಯನ್ನು ಸ್ವಚ್ಛವಾಗಿಡಿ. ನಿಮ್ಮ ಮನೆಯ ಒಳಗೂ ಹೊರಗೂ ಸ್ವಚ್ಛತೆ ಕಾಪಾಡಿಕೊಳ್ಳಲು ಹೆಚ್ಚಿನ ಪ್ರಯತ್ನ ಮಾಡಬೇಕಾಗಿರುವಲ್ಲಿ ಅದನ್ನು ಮಾಡಿ. ಸೊಳ್ಳೆಗಳು ವೃದ್ಧಿಯಾಗದಂತೆ ಮನೆಯ ಹೊರಗೆಲ್ಲೂ ನೀರು ಒಂದೇ ಕಡೆ ನಿಲ್ಲದಂತೆ ನೋಡಿಕೊಳ್ಳಿ. ಕಸಕಡ್ಡಿ, ಗಲೀಜು, ಮುಚ್ಚಿಡದೇ ಇಡಲಾಗಿರುವ ಆಹಾರ ಮತ್ತು ಕಚಡವಿರುವಲ್ಲೆಲ್ಲ ಕ್ರಿಮಿಕೀಟಗಳು, ಉಪದ್ರವಕಾರಿ ಜಂತುಗಳು ಬರುತ್ತವೆ, ಜೊತೆಗೆ ರೋಗಕಾರಕ ಸೂಕ್ಷ್ಮಾಣುಜೀವಿಗಳನ್ನೂ ತರುತ್ತವೆ. ಶೌಚಾಲಯವಿಲ್ಲದಂಥ ಸ್ಥಳಗಳಲ್ಲಿ ಬಯಲಿನಲ್ಲಿ ದೇಹಬಾಧೆ ತೀರಿಸಿಕೊಳ್ಳುವುದರ ಬದಲು ಚಿಕ್ಕ ಕಕ್ಕಸನ್ನು ಕಟ್ಟಿರಿ ಇಲ್ಲವೇ ನೆಲದಲ್ಲಿ ಗುಂಡಿ ತೋಡಿ, ನೊಣಗಳು ಕೂರದಂತೆ ಅದನ್ನು ಮುಚ್ಚಿಬಿಡಿ. ಏಕೆಂದರೆ ಇಂಥ ನೊಣಗಳು ಕಣ್ಣಿನ ಸೋಂಕು ಮತ್ತಿತರ ರೋಗಗಳನ್ನು ದಾಟಿಸಬಲ್ಲವು.

ಗಾಯವಾಗದಂತೆ ನೋಡಿಕೊಳ್ಳಿ. ಕೆಲಸಮಾಡುವಾಗ, ಸೈಕಲ್‌ ತುಳಿಯುವಾಗ, ಬೈಕ್‌ ಅಥವಾ ಕಾರ್‌ ಚಲಾಯಿಸುವಾಗ ಸುರಕ್ಷತಾ ನಿಯಮಗಳನ್ನು ಪಾಲಿಸಿ. ನಿಮ್ಮ ವಾಹನ ಸುಸ್ಥಿತಿಯಲ್ಲಿದೆಯೆಂದು ಖಚಿತಪಡಿಸಿಕೊಳ್ಳಿ. ಸೂಕ್ತ ಉಡುಗೆಯನ್ನೂ ಸುರಕ್ಷಾ ಸಾಧನಗಳನ್ನೂ ಅಂದರೆ ಕನ್ನಡಕಗಳು, ಹೆಲ್ಮೆಟ್‌, ಪಾದರಕ್ಷೆ, ಸೀಟ್‌ ಬೆಲ್ಟ್‌ ಹಾಗೂ ಕಿವಿಗಳನ್ನು ಕಾಪಾಡುವ ಸಾಧನಗಳನ್ನು ಬಳಸಿ. ನಿಮ್ಮನ್ನು ಬಿಸಿಲಿಗೆ ವಿಪರೀತ ಒಡ್ಡಿಕೊಳ್ಳಬೇಡಿ. ವಿಪರೀತ ಬಿಸಿಲು ಕ್ಯಾನ್ಸರ್‌ಗೆ ಮತ್ತು ಚರ್ಮದ ಅಕಾಲಿಕ ಸುಕ್ಕಿಗೆ ಕಾರಣವಾಗುತ್ತದೆ. ನೀವು ಧೂಮಪಾನ ಮಾಡುತ್ತಿರುವಲ್ಲಿ ಈಗಲೇ ನಿಲ್ಲಿಸಿ. ಹಾಗೆ ಮಾಡಿದಲ್ಲಿ ಹೃದ್ರೋಗ, ಶ್ವಾಸಕೋಶದ ಕ್ಯಾನ್ಸರ್‌, ಲಕ್ವದ ಅಪಾಯವನ್ನು ನೀವು ಬಹಳಷ್ಟು ತಗ್ಗಿಸಬಲ್ಲಿರಿ. * (g11-E 03)

[ಪಾದಟಿಪ್ಪಣಿಗಳು]

^ ಜುಲೈ 8, 2003ರ ಎಚ್ಚರ! ಪತ್ರಿಕೆಯಲ್ಲಿ, “ಕೀಟಗಳು ರೋಗವನ್ನು ಹರಡಿಸುವಾಗ” ಲೇಖನ ನೋಡಿ.

^ ಧೂಮಪಾನ ನಿಲ್ಲಿಸುವುದಕ್ಕೆ ಸಂಬಂಧಪಟ್ಟ ಲೇಖನಗಳನ್ನು ಎಚ್ಚರ! ಪತ್ರಿಕೆಯ 2010ರ ಅಕ್ಟೋಬರ್‌-ಡಿಸೆಂಬರ್‌ ಸಂಚಿಕೆಯಲ್ಲಿ ನೋಡಿ.