ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ಆರೋಗ್ಯವನ್ನು ಉತ್ತಮಗೊಳಿಸಬಲ್ಲಿರಿ

ನಿಮ್ಮ ಆರೋಗ್ಯವನ್ನು ಉತ್ತಮಗೊಳಿಸಬಲ್ಲಿರಿ

ನಿಮ್ಮ ಆರೋಗ್ಯವನ್ನು ಉತ್ತಮಗೊಳಿಸಬಲ್ಲಿರಿ

ರಷ್ಯಾದ ನಿವಾಸಿ ರುಸ್ತಂನ ಜೀವನ ಕಾರ್ಯಮಗ್ನ. ಅವನಿಗೆ ಹಿಂದೆ ಧೂಮಪಾನ ಮತ್ತು ಕುಡಿತದಂಥ ಕೆಲವು ದುಶ್ಚಟಗಳಿದ್ದವು. ಅವುಗಳ ದುಷ್ಪರಿಣಾಮವನ್ನು ಅನುಭವಿಸಿದಾಗ ಅವನು ಆ ದುಶ್ಚಟಗಳನ್ನು ಬಿಟ್ಟುಬಿಟ್ಟನು. ಹಾಗಿದ್ದರೂ, ದಿನವಿಡೀ ಕಂಪ್ಯೂಟರ್‌ ಮುಂದೆ ಕುಳಿತು ಕೆಲಸಮಾಡಿ ಸಂಜೆಯಾಗುತ್ತಲೇ ತುಂಬ ಸುಸ್ತಾಗಿಬಿಡುತ್ತಿದ್ದ.

ಬೆಳಗ್ಗೆ 8 ಗಂಟೆಗೆ ರುಸ್ತಂ ಕೆಲಸ ಆರಂಭಿಸುತ್ತಿದ್ದನಾದರೂ ಪೂರ್ಣ ಎಚ್ಚರದಿಂದ ಕೆಲಸಮಾಡುತ್ತಿದ್ದದ್ದು 10 ಗಂಟೆಯ ಮೇಲೆಯೇ. ಅಲ್ಲದೆ ಆಗಾಗ್ಗೆ ಕಾಯಿಲೆ ಬೀಳುತ್ತಿದ್ದ. ಹಾಗಾಗಿ ತನ್ನ ದಿನಚರಿಯಲ್ಲಿ ಒಂದು ಬದಲಾವಣೆ ಮಾಡಿದ. ಏನಾದರೂ ಒಳಿತಾಯಿತೇ? “ಕಳೆದ ಏಳು ವರ್ಷಗಳಲ್ಲಿ ನಾನು ಕಾಯಿಲೆಗೆಂದು ರಜೆತೆಗೆದುಕೊಂಡದ್ದು ವರ್ಷಕ್ಕೆರಡು ದಿನ ಮಾತ್ರ. ಈಗ ಎಚ್ಚರದಿಂದ, ಚುರುಕಿನಿಂದ ಇದ್ದೇನೆ, ಬದುಕನ್ನು ಆನಂದಿಸುತ್ತಿದ್ದೇನೆ!” ಎನ್ನುತ್ತಾನೆ ರುಸ್ತಂ.

ರಾಮ್‌ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ನೇಪಾಳದಲ್ಲಿ ವಾಸಿಸುತ್ತಾನೆ. ಅವರ ನೆರೆಹೊರೆಯಲ್ಲಿ ಸರಿಯಾದ ನೈರ್ಮಲ್ಯ ವ್ಯವಸ್ಥೆ ಇಲ್ಲ. ಆದ್ದರಿಂದ ಸೊಳ್ಳೆ, ನೊಣಗಳ ಕಾಟ ತುಂಬ. ಹೀಗಾಗಿ ರಾಮ್‌ ಮತ್ತು ಅವನ ಕುಟುಂಬ ಉಸಿರಾಟದ ತೊಂದರೆಗಳು ಹಾಗೂ ಕಣ್ಣಿನ ಸೋಂಕಿನಿಂದ ಆಗಾಗ್ಗೆ ಬಳಲುತ್ತಿದ್ದರು. ಇವರೂ ಬದಲಾವಣೆಗಳನ್ನು ಮಾಡಿಕೊಂಡದ್ದರಿಂದ ಇವರ ಆರೋಗ್ಯ ತುಂಬ ಸುಧಾರಿಸಿತು.

ನಿಮ್ಮ ಆರೋಗ್ಯ ನಿಮ್ಮ ಹೊಣೆ

ಶ್ರೀಮಂತರಾಗಿರಲಿ ಬಡವರಾಗಿರಲಿ ಅನೇಕರು ತಮ್ಮ ಆರೋಗ್ಯಕ್ಕೂ ತಮ್ಮ ಅಭ್ಯಾಸಗಳಿಗೂ ಸಂಬಂಧವಿದೆ ಎಂದು ಗ್ರಹಿಸುವುದಿಲ್ಲ. ಅದೃಷ್ಟವಿದ್ದರೆ ಉತ್ತಮ ಆರೋಗ್ಯವಿರುತ್ತದೆ ಅಥವಾ ಆರೋಗ್ಯವೆಂಬುದು ನಮ್ಮ ಕೈಯಲ್ಲಿರುವ ವಿಷಯವಲ್ಲ ಎಂದವರು ಹೇಳಬಹುದು. ಇಂಥ ನೋಟವಿರುವ ಅನೇಕರು ತಮ್ಮ ಆರೋಗ್ಯವನ್ನು ಉತ್ತಮಗೊಳಿಸಿ ಹೆಚ್ಚು ಫಲದಾಯಕ ಜೀವನ ನಡೆಸಲು ಪ್ರಯತ್ನವನ್ನೇ ಮಾಡುವುದಿಲ್ಲ.

ನಿಮ್ಮ ಆರ್ಥಿಕ ಸ್ಥಿತಿಗತಿಗಳೇನೇ ಇರಲಿ ನಿಮ್ಮ ಮತ್ತು ನಿಮ್ಮ ಕುಟುಂಬದ ಆರೋಗ್ಯ ಕಾಪಾಡಲು, ಅದನ್ನು ಬಹಳವಾಗಿ ಉತ್ತಮಗೊಳಿಸಲು ಕೆಲವು ಮೂಲಭೂತ ಹೆಜ್ಜೆಗಳನ್ನು ತೆಗೆದುಕೊಳ್ಳಸಾಧ್ಯವಿದೆ. ಅದರಿಂದ ಏನಾದರೂ ಪ್ರಯೋಜನವಿದೆಯೋ? ಖಂಡಿತ ಇದೆ! ನಿಮ್ಮ ಜೀವನದ ಗುಣಮಟ್ಟವನ್ನು ಹೆಚ್ಚಿಸಬಲ್ಲಿರಿ ಮತ್ತು ಅನಾವಶ್ಯಕವಾಗಿ ಆಯುಷ್ಯವನ್ನು ಮೊಟಕುಗೊಳಿಸುವುದನ್ನು ತಪ್ಪಿಸುವಿರಿ.

ಉತ್ತಮ ಆರೋಗ್ಯಕ್ಕೆ ದಾರಿಮಾಡುವ ಒಳ್ಳೇ ಅಭ್ಯಾಸಗಳನ್ನು ಹೆತ್ತವರು ತಮ್ಮ ಮಾತು ಮತ್ತು ಮಾದರಿಯ ಮೂಲಕ ಮಕ್ಕಳಿಗೆ ಕಲಿಸಬಹುದು. ಈ ಅಭ್ಯಾಸಗಳಿಗಾಗಿ ಹೆಚ್ಚಿನ ಸಮಯ, ಹಣ ತೆರಬೇಕಾದರೂ ಅದರಿಂದ ನೋವು-ನರಳಾಟ, ಕಾಯಿಲೆ ಬೀಳುವುದು, ಆಸ್ಪತ್ರೆಗೆ ಹಣ ಸುರಿಯುವುದೂ ಕಡಿಮೆಯಾಗುವುದು. ಕಾಯಿಲೆ ತಡೆಗಟ್ಟುವುದು ಚಿಕಿತ್ಸೆಗಿಂತ ಉತ್ತಮ ಎನ್ನುವ ಮಾತು ಎಷ್ಟು ಸತ್ಯ ಅಲ್ಲವೆ?

ರುಸ್ತಂ, ರಾಮ್‌ ಹಾಗೂ ಇನ್ನಿತರರಿಗೂ ನೆರವಾದ ಐದು ಮೂಲಭೂತ ಸಲಹೆಗಳನ್ನು ಮುಂದಿನ ಲೇಖನಗಳಲ್ಲಿ ನೋಡಲಿದ್ದೇವೆ. ಆ ಸಲಹೆಗಳು ನಿಮಗೂ ನೆರವಾಗುವುದರಲ್ಲಿ ಸಂಶಯವಿಲ್ಲ! (g11-E 03)

[ಪುಟ 3ರಲ್ಲಿರುವ ಚಿತ್ರ]

ರುಸ್ತಂ

[ಪುಟ 3ರಲ್ಲಿರುವ ಚಿತ್ರ]

ಕುಟುಂಬಕ್ಕಾಗಿ ಕುಡಿಯಲು ಶುದ್ಧ ನೀರನ್ನು ಪಡೆಯುತ್ತಿರುವ ರಾಮ್‌