ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮಾನಸಿಕ ಒತ್ತಡ ನಿಯಂತ್ರಿಸುವುದು ಹೇಗೆ?

ಮಾನಸಿಕ ಒತ್ತಡ ನಿಯಂತ್ರಿಸುವುದು ಹೇಗೆ?

ಮಾನಸಿಕ ಒತ್ತಡ ನಿಯಂತ್ರಿಸುವುದು ಹೇಗೆ?

“ಭಾರೀ ಮಾನಸಿಕ ಒತ್ತಡ ಮತ್ತು ತೊಂದರೆಗಳು ತುಂಬಿದ ಅಪಾಯಕಾರಿ ಸಮಯಗಳ” ಬಗ್ಗೆ ಬೈಬಲ್‌ ಮುಂತಿಳಿಸಿತ್ತು. ನಾವಿಂದು ಭಾರೀ ಮಾನಸಿಕ ಒತ್ತಡದ ಸಮಯದಲ್ಲೇ ಜೀವಿಸುತ್ತಿದ್ದೇವೆಂದು ನೀವು ಕೂಡ ಒಪ್ಪಿಕೊಳ್ಳುವಿರಿ ಅಲ್ಲವೇ?—2 ತಿಮೊಥೆಯ 3:1, ದಿ ಆ್ಯಂಪ್ಲಿಫೈಡ್‌ ಬೈಬಲ್‌.

ನಿಮಗೆ ತಿಳಿದಿರುವಂತೆ ಒಂದು ಸಣ್ಣ ಬೆಂಕಿಯನ್ನು ಆರಿಸುವುದು ಕಾಡ್ಗಿಚ್ಚನ್ನು ಆರಿಸುವುದಕ್ಕಿಂತಲೂ ಸುಲಭ. ಹಾಗೆಯೇ ಸ್ವಲ್ಪ ಮಾನಸಿಕ ಒತ್ತಡವಿರುವಾಗಲೇ ನಿಯಂತ್ರಿಸುವುದು ಅದು ಜಾಸ್ತಿಯಾದ ಮೇಲೆ ನಿಯಂತ್ರಿಸುವುದಕ್ಕಿಂತಲೂ ಸುಲಭ. “ನಮ್ಮ ಜೀವನ ತುಂಬ ಬ್ಯುಸಿಯಾಗಿದ್ದರೂ ಪ್ರತಿದಿನ ಮಾನಸಿಕ ಒತ್ತಡವನ್ನು ನಿಯಂತ್ರಿಸುವ ರೂಢಿಯನ್ನು ಬೆಳೆಸಿಕೊಳ್ಳುವುದು ಬಹು ಮುಖ್ಯ” ಎಂದು ಒಬ್ಬ ವೈದ್ಯೆ ಹೇಳುತ್ತಾರೆ. *

ಪ್ರತಿದಿನ ಮಾನಸಿಕ ಒತ್ತಡವನ್ನು ನಿಯಂತ್ರಿಸುವ ರೂಢಿ ಬೆಳೆಸಿಕೊಳ್ಳುವುದರಿಂದ ಎರಡು ಪ್ರಯೋಜನಗಳಿವೆ. ಒಂದನೆಯದು, ಮಾನಸಿಕ ಒತ್ತಡದ ಕಾರಣಗಳನ್ನು ಕಡಿಮೆಗೊಳಿಸಲು ಸಹಾಯವಾಗುತ್ತದೆ. ಎರಡನೆಯದು, ಆ ಕಾರಣಗಳನ್ನು ತಡೆಯಲು ಸಾಧ್ಯವಿಲ್ಲದಿರುವಾಗ ನಾವು ಪ್ರತಿಕ್ರಿಯಿಸುವ ರೀತಿಯ ಮೇಲೆ ಹಿಡಿತ ಸಾಧಿಸಬಲ್ಲೆವು.

ಮಾನಸಿಕ ಒತ್ತಡ ನಿಯಂತ್ರಿಸಲು ಬೈಬಲ್‌ ಏನಾದರೂ ಮಾರ್ಗದರ್ಶನ ನೀಡುತ್ತದೋ?

ಬೈಬಲಿನಲ್ಲಿರುವ ಸತ್ಯಗಳು ಸಹಾಯಕಾರಿ

ನಮ್ಮನ್ನು ಚೈತನ್ಯಗೊಳಿಸುವ, ಪೋಷಿಸುವ ಅನೇಕ ವಿಚಾರಗಳನ್ನು ನಮ್ಮ ನಿರ್ಮಾಣಿಕನು ಬೈಬಲಿನಲ್ಲಿ ಕೊಟ್ಟಿದ್ದಾನೆ. ಈ ಸತ್ಯಗಳನ್ನು ಬೈಬಲ್‌ ಓದುವುದರಿಂದ ತಿಳಿದುಕೊಳ್ಳಬಲ್ಲೆವು. ಮಾನಸಿಕ ಒತ್ತಡದಿಂದ ನಮ್ಮನ್ನು ಹೊರಸೆಳೆಯುವ ಆಧ್ಯಾತ್ಮಿಕ ಸತ್ಯಗಳ ಭಂಡಾರವೇ ಅದರಲ್ಲಿದೆ. ಇದು ನಾವು ‘ಅಂಜದಂತೆ, ಕಳವಳಪಡದಂತೆ’ ಮತ್ತು ಮಾನಸಿಕ ಒತ್ತಡವನ್ನು ಪ್ರತಿದಿನ ನಿಭಾಯಿಸುವಂತೆ ಸಹಾಯ ಮಾಡುವುದು. ಹೀಗೆ ಅಮೂಲ್ಯ ಮಾರ್ಗದರ್ಶನ ನಮಗೆ ಬೈಬಲಿನಿಂದ ಸಿಗುತ್ತದೆ.—ಯೆಹೋಶುವ 1:7-9.

ನಮ್ಮ ಮಾನಸಿಕ ಒತ್ತಡವನ್ನು ತಗ್ಗಿಸಲು ಬೈಬಲ್‌ ಅದ್ಭುತ ವಿಧದಲ್ಲಿ ನೆರವಾಗುತ್ತದೆ. ಹೇಗೆ? ಸ್ವರ್ಗದಲ್ಲಿರುವ ನಮ್ಮ ತಂದೆಯಾದ ಯೆಹೋವ ದೇವರು “ಕೋಮಲವಾದ ಮಮತೆಯುಳ್ಳವನೂ ಕರುಣಾಳುವೂ ಆಗಿದ್ದಾನೆ” ಎಂಬ ಭರವಸದಾಯಕ ಸಂಗತಿಯನ್ನು ತಿಳಿಸುವ ಮೂಲಕವೇ. (ಯಾಕೋಬ 5:11) ಕ್ಯಾಲಿಫೋರ್ನಿಯಾದ ಯುನಿವರ್ಸಿಟಿಯೊಂದರ ಪ್ರೊಫೆಸರರಾಗಿದ್ದ ಪೆಟ್ರೀಶಿಯಾ, “ದೇವರ ಉದ್ದೇಶಗಳ ಮತ್ತು ಆತನು ಇಂದು ಪೂರೈಸುತ್ತಿರುವ ಅತ್ಯದ್ಭುತಕರ ವಿಷಯಗಳ ಬಗ್ಗೆ ಯೋಚಿಸುವುದೇ ನನಗೆ ತುಂಬ ಸಹಾಯಮಾಡಿತು” ಎಂದು ಹೇಳುತ್ತಾರೆ.

ದಬ್ಬಾಳಿಕೆ, ಮಾನಸಿಕ ಒತ್ತಡದ ಬೇಗೆಯಿಂದ ಬಳಲಿಬೆಂಡಾಗಿದ್ದ ತನ್ನ ಕೇಳುಗರ ಮನಸ್ಸಿಗೆ ತನ್ನ ಕೋಮಲಭರಿತ ನಡೆನುಡಿಯ ಮೂಲಕ ಯೇಸು ಕ್ರಿಸ್ತನು ತಂಪೆರಚಿದನು. “ಕಷ್ಟಪಡುತ್ತಿರುವವರೇ, ಹೊರೆಹೊತ್ತಿರುವವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ” ಎಂದಾತನು ಕೈದೆರೆದು ಆಮಂತ್ರಿಸಿದನು. “ನಾನು ನಿಮಗೆ ಚೈತನ್ಯ ನೀಡುವೆನು” ಎಂದನು ಯೇಸು.—ಮತ್ತಾಯ 11:28-30.

ಈ ಮಾತು ಅಕ್ಷರಶಃ ನಿಜವಾಗಿತ್ತು. ಯೇಸು ಜನರೊಂದಿಗೆ ಒರಟಾಗಿ ವರ್ತಿಸುತ್ತಿರಲಿಲ್ಲ. ಆತನು ತನ್ನ ಶಿಷ್ಯರ ಭಾವಾತ್ಮಕ ಮತ್ತು ಶಾರೀರಿಕ ಅಗತ್ಯಗಳಿಗೂ ಗಮನಕೊಡುತ್ತಿದ್ದನು. ಅವರು ಸುವಾರ್ತೆ ಸಾರಿ ಆಯಾಸಗೊಂಡಾಗ ದಣಿವಾರಿಸಲು ಅನುವು ಮಾಡಿಕೊಟ್ಟನು. (ಮಾರ್ಕ 6:30-32) ಆದ್ದರಿಂದ ಹಿಂಡಿಹಿಪ್ಪೆಮಾಡುವ ಮಾನಸಿಕ ಒತ್ತಡಕ್ಕೆ ಒಳಗಾಗುವ ನಮ್ಮ ಬಗ್ಗೆಯೂ ಯೇಸುವಿಗೆ ಸಹಾನುಭೂತಿಯಿದೆ ಎಂಬ ಭರವಸೆಯಿಂದಿರಬಲ್ಲೆವು. ಈಗ ಸ್ವರ್ಗದಲ್ಲಿ ರಾಜನಾಗಿರುವ ಆತನು ಕರುಣೆಯಿಂದ “ಸಮಯೋಚಿತವಾದ ಸಹಾಯ” ನೀಡುತ್ತಾನೆ.—ಇಬ್ರಿಯ 2:17, 18; 4:16.

ಉತ್ತಮ ಸಂವಾದ ಸಹಾಯಕಾರಿ

ಮಾನಸಿಕ ಒತ್ತಡವನ್ನು ಯಶಸ್ವಿಯಾಗಿ ನಿಭಾಯಿಸಲು ಒಳ್ಳೇ ಸಂವಾದವೂ ಅಗತ್ಯ. “ಯೋಚನೆ ಹೇಳುವವರಿಲ್ಲದೆ ಉದ್ದೇಶಗಳು ನೆರವೇರವು, ಬಹು ಮಂದಿ ಆಲೋಚನಾಪರರಿರುವಲ್ಲಿ ಈಡೇರುವವು” ಎನ್ನುತ್ತದೆ ಬೈಬಲ್‌. (ಜ್ಞಾನೋಕ್ತಿ 15:22) ಅಂತೆಯೇ ಬಾಳ ಸಂಗಾತಿಯೊಂದಿಗೋ ಮಿತ್ರರೊಂದಿಗೋ ಸಹೋದ್ಯೋಗಿಯೊಂದಿಗೋ ಮಾತಾಡುವುದರಿಂದ ತಮ್ಮ ಮಾನಸಿಕ ಒತ್ತಡ ಬಹಳಷ್ಟು ಕಡಿಮೆಯಾದದ್ದನ್ನು ಅನೇಕರು ಕಂಡಿದ್ದಾರೆ.

ನಮ್ಮ ‘ಯೋಚನೆ ಹೇಳುವ’ ಅಂದರೆ ಅಂತರಂಗ ತೋಡಿಕೊಳ್ಳುವ ಅತ್ಯಂತ ಪ್ರಮುಖ, ಸಹಾಯಕಾರಿ, ಸುಲಭವೂ ಆದ ಮಾರ್ಗವೆಂದರೆ ಪ್ರಾರ್ಥನೆ. ನೀವು ಕ್ರಮವಾಗಿ ದೇವರಿಗೆ ಪ್ರಾರ್ಥಿಸುವ ಮೂಲಕ “ಯಾವ ವಿಷಯದ ಕುರಿತಾಗಿಯೂ ಚಿಂತೆ” ಮಾಡುವುದನ್ನು ತಪ್ಪಿಸಬಲ್ಲಿರಿ. ಪ್ರಾರ್ಥಿಸುವುದರಿಂದ “ಎಲ್ಲ ಗ್ರಹಿಕೆಯನ್ನು ಮೀರುವ ದೇವಶಾಂತಿ” ಸಿಗುತ್ತದೆಂದು ಅನೇಕರು ಕಂಡುಕೊಂಡಿದ್ದಾರೆ. ಬೈಬಲಿನ ಮಾತಿಗನುಸಾರ ದೇವಶಾಂತಿ ಅಂಥವರ ‘ಹೃದಯಗಳನ್ನೂ ಮಾನಸಿಕ ಶಕ್ತಿಗಳನ್ನೂ’ ಕಾಪಾಡಿದೆ.—ಫಿಲಿಪ್ಪಿ 4:6, 7; ಜ್ಞಾನೋಕ್ತಿ 14:30.

ಮಾನಸಿಕ ಒತ್ತಡದ ಕುರಿತ ಒಂದು ಪುಸ್ತಕಕ್ಕನುಸಾರ, “ಮಿತ್ರ ಬಳಗದ ಬೆಂಬಲವಿರುವವರು ಒಂಟಿಯಾಗಿ ಎಲ್ಲವನ್ನು ಸಂಭಾಳಿಸಲು ಪ್ರಯತ್ನಿಸುವವರಿಗಿಂತ ಹೆಚ್ಚು ಉತ್ತಮವಾಗಿ ಮಾನಸಿಕ ಒತ್ತಡವನ್ನು ನಿಭಾಯಿಸುತ್ತಾರೆ ಮಾತ್ರವಲ್ಲ ಅವರ ಮಾನಸಿಕ ಸ್ವಾಸ್ಥ್ಯವೂ ಉತ್ತಮವಾಗಿರುತ್ತದೆ.” ಸತ್ಯದೇವರಾದ ಯೆಹೋವನನ್ನು ಆರಾಧಿಸುವಂಥ ಜನರ ಬಳಗದಿಂದ ಸಿಗುವ ಬೆಂಬಲಕ್ಕಿಂತ ಮಿಗಿಲಾದ ಬೆಂಬಲ ಬೇರೆಲ್ಲೂ ಸಿಗಲಾರದು. ಬೈಬಲ್‌ ಹುರಿದುಂಬಿಸುವಂತೆ ಈ ಜನರು ತಪ್ಪದೆ ಸಭೆಯಾಗಿ ಕೂಡಿಬಂದು ಪರಸ್ಪರ ಪ್ರೋತ್ಸಾಹಿಸುತ್ತಾರೆ. (ಇಬ್ರಿಯ 10:24, 25) “ಕೆಲವೊಮ್ಮೆ ತಾಸುಗಟ್ಟಲೆ ಕೆಲಸಮಾಡಿ ದಣಿದು ಮನಸ್ಸು ಒತ್ತಡದಲ್ಲಿರುತ್ತದೆ. ಆದರೆ ಕೂಟಗಳಿಗೆ ಹಾಜರಾಗಿ ಕೊನೆಯ ಪ್ರಾರ್ಥನೆ ಆಗುವಷ್ಟರಲ್ಲಿ ನನ್ನ ಮಾನಸಿಕ ಒತ್ತಡವೆಲ್ಲ ಮಂಗಮಾಯವಾಗಿ ನನ್ನಲ್ಲಿ ನವಚೈತನ್ಯ ತುಂಬಿರುತ್ತದೆ” ಎನ್ನುತ್ತಾರೆ ಇಂಥ ಕೂಟಗಳಿಗೆ ಹಾಜರಾಗುವ ಒಬ್ಬರು.

ಮಾನಸಿಕ ಒತ್ತಡವನ್ನು ನಿಭಾಯಿಸಲು ಹಾಸ್ಯವೂ ಪ್ರಯೋಜನಕಾರಿ. “ಅಳುವ ಸಮಯ, ನಗುವ ಸಮಯ” ಇದೆಯೆಂದು ಬೈಬಲಿನ ಪ್ರಸಂಗಿ 3:4 ಹೇಳುತ್ತದೆ. ನಗು ಚೇತೋಹಾರಿಯೂ ಆರೋಗ್ಯಕರವೂ ಆಗಿದೆ. ಯಾಕೆಂದು ವಿವರಿಸುತ್ತಾ ವೈದ್ಯನೊಬ್ಬ ಹೇಳಿದ್ದು: “ನಗುವಾಗ ನಮ್ಮ ದೇಹವು ಎಂಡೋರ್ಫಿನ್ಸ್‌ ಎಂಬ ರಾಸಾಯನಿಕಗಳನ್ನು ಉತ್ಪಾದಿಸುತ್ತದೆ ಮತ್ತು ಅಡ್ರೀನಲ್‌ ರಸದೂತಗಳ ಉತ್ಪತ್ತಿಯನ್ನು ಕಡಿಮೆಮಾಡುತ್ತದೆ.” ಒಬ್ಬ ಸ್ತ್ರೀ ತನ್ನ ಪತಿಯ ಕುರಿತಂದದ್ದು: “ತುಂಬ ಮಾನಸಿಕ ಒತ್ತಡವಿರುವ ಸನ್ನಿವೇಶಗಳಲ್ಲಿ ನನ್ನ ಪತಿ ಏನಾದರೂ ಹಾಸ್ಯಮಾಡಿ ವಾತಾವರಣವನ್ನು ತಿಳಿಗೊಳಿಸುತ್ತಾರೆ.”

ಮಾನಸಿಕ ಒತ್ತಡ ತಗ್ಗಿಸುವ ಗುಣಗಳು

ನಾವು ಬೆಳೆಸಿಕೊಳ್ಳುವಂತೆ ಬೈಬಲ್‌ ಪ್ರೋತ್ಸಾಹಿಸುವ ಗುಣಗಳು ಮಾನಸಿಕ ಒತ್ತಡವನ್ನು ನಿಭಾಯಿಸಲು ನಮಗೆ ಸಹಾಯಕಾರಿ. ಇದರಲ್ಲಿ “ಪ್ರೀತಿ, ಆನಂದ, ಶಾಂತಿ, ದೀರ್ಘ ಸಹನೆ, ದಯೆ, ಒಳ್ಳೇತನ, ನಂಬಿಕೆ, ಸೌಮ್ಯಭಾವ, ಸ್ವನಿಯಂತ್ರಣ” ಎಂಬ “ಪವಿತ್ರಾತ್ಮದಿಂದ ಉಂಟಾಗುವ ಫಲ” ಕೆಲವಾಗಿವೆ. ಅಷ್ಟೇ ಅಲ್ಲದೆ “ದ್ವೇಷಭರಿತ ವೈಷಮ್ಯ, ಕೋಪ, ಕ್ರೋಧ, ಕಿರಿಚಾಟ ಮತ್ತು ನಿಂದಾತ್ಮಕ ಮಾತುಗಳನ್ನು” ತ್ಯಜಿಸುವಂತೆಯೂ ಬೈಬಲ್‌ ಪ್ರೋತ್ಸಾಹಿಸುತ್ತದೆ. “ಒಬ್ಬರಿಗೊಬ್ಬರು ದಯೆಯುಳ್ಳವರಾಗಿಯೂ ಕೋಮಲ ಸಹಾನುಭೂತಿಯುಳ್ಳವರಾಗಿಯೂ . . . ಉದಾರವಾಗಿ ಕ್ಷಮಿಸುವವರಾಗಿಯೂ ಇರಿ” ಎಂದೂ ಅದು ಹೇಳುತ್ತದೆ.—ಗಲಾತ್ಯ 5:22, 23; ಎಫೆಸ 4:31, 32.

ಬೈಬಲ್‌ ತಿಳಿಸುವಂಥ ಗುಣಗಳನ್ನು ವಿಶೇಷವಾಗಿ ಇಂದಿನ ಲೋಕದಲ್ಲಿ ಬೆಳೆಸಿಕೊಳ್ಳುವುದರ ಮಹತ್ತ್ವದ ಬಗ್ಗೆ ಒಬ್ಬ ವೈದ್ಯರು ಹೀಗನ್ನುತ್ತಾರೆ: “ಜನರೊಂದಿಗೆ ಗೌರವದಿಂದ ನಡೆದುಕೊಳ್ಳುವುದು ತಾನೇ ಮಾನಸಿಕ ಒತ್ತಡವನ್ನು ನಿಭಾಯಿಸಲು ದೊಡ್ಡ ಸಹಾಯ.” ನಮ್ಮ ಇತಿಮಿತಿಗಳನ್ನು ಮನಸ್ಸಿನಲ್ಲಿಟ್ಟುಕೊಂಡು ನಮ್ರವಾಗಿ ನಡೆದುಕೊಳ್ಳುವುದನ್ನೂ ಬೈಬಲ್‌ ಪ್ರೋತ್ಸಾಹಿಸುತ್ತದೆ.—ಮೀಕ 6:8.

ನಮಗೆ ಶಾರೀರಿಕ, ಮಾನಸಿಕ, ಭಾವಾತ್ಮಕ ಇತಿಮಿತಿಗಳಿವೆಯೆಂದೂ, ನೆನಸಿದ್ದೆಲ್ಲವನ್ನು ಮಾಡಲಸಾಧ್ಯವೆಂದೂ ನಾವು ದೀನತೆಯಿಂದ ಒಪ್ಪಿಕೊಳ್ಳುವುದನ್ನು ದೇವರು ಅಪೇಕ್ಷಿಸುತ್ತಾನೆ. ನಮ್ಮ ಸಾಮರ್ಥ್ಯಕ್ಕೆ ಮೀರಿದ್ದನ್ನು ಬೇರೆಯವರು ನಮ್ಮಿಂದ ನಿರೀಕ್ಷಿಸುವಾಗ ಅದನ್ನು ಮಾಡಲಾರೆವೆಂದು ಹೇಳುವುದು ತುಂಬ ಕಷ್ಟವಾದೀತು. ಆದರೂ ಅದನ್ನು ಯಾವಾಗ, ಹೇಗೆ ಹೇಳಬೇಕೆಂಬದನ್ನು ನಾವು ಕಲಿಯಲೇಬೇಕು.

ಇಲ್ಲಿವರೆಗೆ ಕೊಡಲಾದ ಬೈಬಲ್‌ ಆಧಾರಿತವಾದ ಎಲ್ಲ ಸಲಹೆಗಳನ್ನು ಪಾಲಿಸಿದರೆ ನಿಮಗೆ ಮಾನಸಿಕ ಒತ್ತಡ ಇರುವುದೇ ಇಲ್ಲ ಎಂದರ್ಥವಲ್ಲ. ನಿಜಾಂಶವೇನೆಂದರೆ ಯೆಹೋವನ ಉಪಾಸಕರನ್ನು ಒತ್ತಡಕ್ಕೆ ಸಿಲುಕಿಸಿ ಅವರು ಸತ್ಯಾರಾಧನೆಯನ್ನು ಬಿಟ್ಟುಬಿಡುವಂತೆ ಮಾಡುವ ಉದ್ದೇಶದಿಂದ ಸೈತಾನನು ಅವರ ಮೇಲೆ ಕಣ್ಣಿಟ್ಟಿದ್ದಾನೆ. (ಪ್ರಕಟನೆ 12:17) ಆದರೆ ನಾವು ಈಗಾಗಲೇ ನೋಡಿದಂತೆ ದೇವರು ಸಮಯೋಚಿತ ಸಹಾಯವನ್ನು ಬೇರೆ ಬೇರೆ ಮೂಲಗಳಿಂದ ನೀಡುತ್ತಾ ಮಾನಸಿಕ ಒತ್ತಡವನ್ನು ತಗ್ಗಿಸಲು ಮತ್ತು ಯಶಸ್ವಿಯಾಗಿ ನಿಭಾಯಿಸಲು ನಮ್ಮನ್ನು ಶಕ್ತಗೊಳಿಸುತ್ತಾನೆ. * (g10-E 06)

[ಪಾದಟಿಪ್ಪಣಿಗಳು]

^ ಮಾನಸಿಕ ಒತ್ತಡ ಬಹಳ ಸಮಯದಿಂದ ಇದ್ದರೆ ಅಥವಾ ತೀವ್ರವಾಗಿದ್ದರೆ ಶಾರೀರಿಕ ಸಮಸ್ಯೆಗಳು ಉಂಟಾಗಬಲ್ಲವು. ಆದ್ದರಿಂದ ಒಬ್ಬ ತಜ್ಞ ವೈದ್ಯರನ್ನು ಕಂಡು ಚಿಕಿತ್ಸೆ ಪಡೆಯುವುದು ಒಳ್ಳೇದು.

^ ಮಾನಸಿಕ ಒತ್ತಡವನ್ನು ನಿಭಾಯಿಸುವ ಹೆಚ್ಚಿನ ವಿಧಾನಗಳಿಗಾಗಿ ಎಚ್ಚರ! ಪತ್ರಿಕೆಯ 1998 ಏಪ್ರಿಲ್‌ 8ರ ಸಂಚಿಕೆಯಲ್ಲಿ “ನೀವು ಒತ್ತಡವನ್ನು ನಿರ್ವಹಿಸಲು ಸಾಧ್ಯವಿದೆ!” ಎಂಬ ಲೇಖನಮಾಲೆಯನ್ನೂ ಕಾವಲಿನಬುರುಜು ಪತ್ರಿಕೆಯ 2001 ಡಿಸೆಂಬರ್‌ 15ರ ಸಂಚಿಕೆಯಲ್ಲಿ “ಒತ್ತಡದಿಂದ ಉಪಶಮನ—ಒಂದು ಪ್ರಾಯೋಗಿಕ ಪರಿಹಾರ” ಎಂಬ ಲೇಖನವನ್ನೂ ನೋಡಿ.

[ಪುಟ 27ರಲ್ಲಿರುವ ಚೌಕ]

ಮಾನಸಿಕ ಒತ್ತಡವನ್ನು ತಗ್ಗಿಸುವ ಕೆಲವು ವಿಧಗಳು

● ನಿಮ್ಮಿಂದಾಗಲಿ ಇತರರಿಂದಾಗಲಿ ಪರಿಪೂರ್ಣತೆಯನ್ನು ನಿರೀಕ್ಷಿಸಬೇಡಿ. —ಪ್ರಸಂಗಿ 7:16.

● ಸರಿಯಾದ ಆದ್ಯತೆಗಳನ್ನಿಡಿ. —ಫಿಲಿಪ್ಪಿ 1:10, 11.

● ಕ್ರಮವಾಗಿ ವ್ಯಾಯಾಮ ಮಾಡಿ.—1 ತಿಮೊಥೆಯ 4:8.

● ಯೆಹೋವನ ಸೃಷ್ಟಿಕಾರ್ಯಗಳನ್ನು ನೋಡಿ ಆನಂದಿಸಿ.—ಕೀರ್ತನೆ 92:4, 5.

● ಬರೀ ನಿಮಗೆಂದೇ ಆಗಾಗ್ಗೆ ಸಮಯ ಮಾಡಿಕೊಳ್ಳಿ.—ಮತ್ತಾಯ 14:23.

● ತಕ್ಕಮಟ್ಟಿಗಿನ ಮನೋರಂಜನೆ ಮತ್ತು ಸಾಕಷ್ಟು ನಿದ್ದೆ ಪಡೆಯಿರಿ.—ಪ್ರಸಂಗಿ 4:6.

[ಪುಟ 25ರಲ್ಲಿರುವ ಚಿತ್ರ]

ಮಾನಸಿಕ ಒತ್ತಡವನ್ನು ತಗ್ಗಿಸಲು ಸಂವಾದ ಅಗತ್ಯ. ಅದಕ್ಕಾಗಿ ಸಮಯ ಮಾಡಿಕೊಳ್ಳಿ

[ಪುಟ 25ರಲ್ಲಿರುವ ಚಿತ್ರ]

ಮಾನಸಿಕ ಒತ್ತಡವನ್ನು ತಗ್ಗಿಸಲು ದೈವಿಕ ಗುಣಗಳು ಸಹಾಯ ಮಾಡಬಲ್ಲವು