ವಿವಾಹ ವಿಚ್ಛೇದನದ ಬಗ್ಗೆ ತಿಳಿದಿರಬೇಕಾದ ನಾಲ್ಕು ಸಂಗತಿಗಳು
ವಿವಾಹ ವಿಚ್ಛೇದನದ ಬಗ್ಗೆ ತಿಳಿದಿರಬೇಕಾದ ನಾಲ್ಕು ಸಂಗತಿಗಳು
ಮನೆಗೆ ಎಷ್ಟು ಹಾನಿಯಾಗಿದೆ ಎಂದು ತಿಳಿದ ಮೇಲೆ ಮನೆ ಮಾಲೀಕರ ಮುಂದೆ ಒಂದು ಆಯ್ಕೆಯಿದೆ. ಅದನ್ನು ಕೆಡವಿಬಿಡುವುದು ಇಲ್ಲವೆ ದುರಸ್ತಿಗೊಳಿಸುವುದು.
ನಿಮ್ಮ ವಿವಾಹಬಂಧದ ವಿಷಯದಲ್ಲೂ ಒಂದೊ ಅದನ್ನು ಮುರಿಯುವ ಇಲ್ಲವೆ ಉಳಿಸುವ ಆಯ್ಕೆ ನಿಮ್ಮ ಮುಂದಿದೆ. ನೀವೇನು ಮಾಡಬೇಕೆಂದಿದ್ದೀರಿ? ಪ್ರಾಯಶಃ ನಿಮ್ಮ ಸಂಗಾತಿ ದಾಂಪತ್ಯದ್ರೋಹ ಎಸಗಿರಬಹುದು ಅಥವಾ ಆಗಾಗ್ಗೆ ನಿಮ್ಮ ಮಧ್ಯೆ ಏಳುವ ಜಗಳಗಳು ಸಂತೋಷವನ್ನು ಹೊಸಕಿಹಾಕಿರಬಹುದು. ‘ನಮ್ಮ ಮಧ್ಯೆ ಈಗ ಪ್ರೀತಿ ಇಲ್ಲ,’ ‘ನಮ್ಮ ಜೋಡಿಯೇ ಸರಿಯಿಲ್ಲ,’ ‘ಮದುವೆಯಾದಾಗ ನಮಗೆ ಅಷ್ಟು ತಿಳುವಳಿಕೆ ಇರಲಿಲ್ಲ’ ಎಂದು ನೀವು ನೆನಸುತ್ತಿರಬಹುದು. ‘ನಾವು ವಿಚ್ಛೇದನ ಪಡೆಯುವುದೇ ಒಳ್ಳೇದು’ ಎಂಬ ಆಲೋಚನೆಯೂ ನಿಮ್ಮ ಮನಸ್ಸಿಗೆ ಬಂದಿರಬಹುದು.
ನಿಮ್ಮ ವಿವಾಹಬಂಧವನ್ನು ಮುರಿಯುವ ನಿರ್ಣಯ ಮಾಡುವ ಮುನ್ನ ಸ್ವಲ್ಪ ಯೋಚಿಸಿರಿ. ವಿವಾಹ ವಿಚ್ಛೇದನದಿಂದ ಎಲ್ಲ ಕಷ್ಟಗಳು ಕೊನೆಗೊಳ್ಳುವುದಿಲ್ಲ. ಬದಲಾಗಿ ಅನೇಕವೇಳೆ ಅದು ಕೆಲವೊಂದು ಸಮಸ್ಯೆಗಳನ್ನು ಬೀಳ್ಕೊಟ್ಟು ಬೇರೆ ಸಮಸ್ಯೆಗಳಿಗೆ ಆಮಂತ್ರಣ ಕೊಡುತ್ತದಷ್ಟೇ. ಡಾಕ್ಟರ್ ಬ್ರಾಡ್ ಸಾಕ್ಸ್ ಎಂಬವರು ಹದಿವಯಸ್ಕರನ್ನು ಬೆಳೆಸುವ ಕುರಿತ ತಮ್ಮ ಪುಸ್ತಕದಲ್ಲಿ ಎಚ್ಚರಿಸಿದ್ದು: “ಪ್ರತ್ಯೇಕಗೊಳ್ಳಲಿರುವ ದಂಪತಿಗಳಿಗೆ ವಿಚ್ಛೇದನ ಪಡೆಯುವುದರಿಂದ ಎಲ್ಲವೂ ಸರಿಹೋಗುತ್ತದೆಂಬ ಭ್ರಮೆಯಿರುತ್ತದೆ. ಬಿರುಗಾಳಿಯಂಥ ಸಮಸ್ಯೆಗಳು ಥಟ್ಟನೆ ಖಾಯಂ ಆಗಿ ನಿಂತುಹೋಗಿ, ಪ್ರಶಾಂತತೆ ಮತ್ತು ನೆಮ್ಮದಿಯ ತಂಗಾಳಿ ಬೀಸುತ್ತದೆಂದು ಊಹಿಸುತ್ತಾರೆ. ಆದರೆ ಮದುವೆಯ ಬಳಿಕ ಎಲ್ಲವೂ ಚೆನ್ನಾಗಿರುತ್ತದೆಂದು ನೆನಸುವುದು ಹೇಗೋ ಹಾಗೆಯೇ ವಿಚ್ಛೇದನದ ಬಳಿಕ ಎಲ್ಲವೂ ಸುಸೂತ್ರವಾಗಿರುತ್ತದೆಂದು ನೆನಸುವುದು ಕನ್ನಡಿಯೊಳಗಿನ ಗಂಟಷ್ಟೆ.” ಆದ್ದರಿಂದ ವಿವಾಹ ವಿಚ್ಛೇದನದ ಕುರಿತು ಯಾವುದೇ ನಿರ್ಣಯಮಾಡುವ ಮುಂಚೆ ನೀವು ಅದರ ಬಗ್ಗೆ ಎಲ್ಲವನ್ನೂ ತಿಳಿದುಕೊಂಡಿರುವುದು ಪ್ರಾಮುಖ್ಯ.
ವಿಚ್ಛೇದನದ ಕುರಿತು ಬೈಬಲ್ ಏನನ್ನುತ್ತದೆ?
ಬೈಬಲಿಗನುಸಾರ ವಿವಾಹ ವಿಚ್ಛೇದನ ಒಂದು ಗಂಭೀರ ವಿಷಯ. ಮತ್ತೊಬ್ಬನ/ಳ ಕೈಹಿಡಿಯುವ ಉದ್ದೇಶದಿಂದ ಚಿಕ್ಕ ಚಿಕ್ಕ ಕಾರಣಗಳಿಗೆ ತನ್ನ ಸಂಗಾತಿಯ ಕೈಬಿಡುವುದು ಯೆಹೋವ ದೇವರ ದೃಷ್ಟಿಯಲ್ಲಿ ದ್ರೋಹವಾಗಿದೆ. ಆತನು ಅದನ್ನು ದ್ವೇಷಿಸುತ್ತಾನೆ. (ಮಲಾಕಿಯ 2:13-16) ವಿವಾಹವು ಜೀವನಪರ್ಯಂತದ ಬಂಧ. (ಮತ್ತಾಯ 19:6) ಎಷ್ಟೋ ದಂಪತಿಗಳು ಸಣ್ಣಪುಟ್ಟ ಕಾರಣಕ್ಕೆಲ್ಲ ಆ ಬಂಧವನ್ನು ಕಡಿದುಹಾಕಿದ್ದಾರೆ. ಅವರು ಹೆಚ್ಚು ಕ್ಷಮಾಶೀಲರಾಗಿರುತ್ತಿದ್ದರೆ ಅದನ್ನು ಉಳಿಸಬಹುದಿತ್ತು.—ಮತ್ತಾಯ 18:21, 22.
ವಿವಾಹ ವಿಚ್ಛೇದನ ಮತ್ತು ಮರುವಿವಾಹಕ್ಕೆ ಬೈಬಲ್ ಕೊಡುವ ಕಾರಣ ಕೇವಲ ಒಂದೇ. ಅದು ವಿವಾಹಬಾಹಿರ ಲೈಂಗಿಕ ಸಂಬಂಧವೇ. (ಮತ್ತಾಯ 19:9) ಆದ್ದರಿಂದ ಒಂದುವೇಳೆ ನಿಮ್ಮ ಸಂಗಾತಿ ದಾಂಪತ್ಯದ್ರೋಹ ಎಸಗಿರುವಲ್ಲಿ ವೈವಾಹಿಕ ಬಂಧವನ್ನು ಮುರಿಯುವ ಹಕ್ಕು ನಿಮಗಿದೆ. ಆದರೆ ಬೇರೆಯವರ ಒತ್ತಡಕ್ಕೆ ಮಣಿದು ನೀವು ನಿರ್ಣಯ ತೆಗೆದುಕೊಳ್ಳಬಾರದು. ನೀವೇನು ಮಾಡಬೇಕೆಂದು ತಿಳಿಸುವುದು ಈ ಲೇಖನದ ಉದ್ದೇಶವಲ್ಲ. ವಿಚ್ಛೇದನದ ಪರಿಣಾಮಗಳನ್ನು ಎದುರಿಸುವವರು ನೀವೇ, ಬೇರೆಯವರಲ್ಲ. ಆದ್ದರಿಂದ ನಿರ್ಣಯ ತೆಗೆದುಕೊಳ್ಳಬೇಕಾದವರು ನೀವೇ.—ಗಲಾತ್ಯ 6:5.
ಹೀಗಿದ್ದರೂ ಬೈಬಲ್ ಹೇಳುವುದು: “ಜಾಣನು ಪ್ರತಿಯೊಂದರ ಬಗ್ಗೆ ಎಚ್ಚರಿಕೆಯಿಂದ ಯೋಚಿಸುವನು.” (ಜ್ಞಾನೋಕ್ತಿ 14:15, ಪರಿಶುದ್ಧ ಬೈಬಲ್ *) ಆದ್ದರಿಂದ ವಿವಾಹ ವಿಚ್ಛೇದನಕ್ಕೆ ಬೈಬಲಾಧಾರಿತ ಕಾರಣವಿದ್ದರೂ ಅದರ ಪರಿಣಾಮಗಳ ಕುರಿತು ಗಂಭೀರವಾಗಿ ಆಲೋಚಿಸಿರಿ. (1 ಕೊರಿಂಥ 6:12) ಹೆಂಡತಿಗೆ ವಿಚ್ಛೇದನ ಕೊಟ್ಟ ಬ್ರಿಟನ್‌ನ ಡೇವಿಡ್ ಹೇಳುವುದು: “ಇಂಥ ವಿಷಯಗಳಲ್ಲಿ ಕೂಡಲೇ ನಿರ್ಣಯ ತೆಗೆದುಕೊಳ್ಳಬೇಕೆಂದು ಕೆಲವರು ನೆನಸುತ್ತಾರೆ. ಆದರೆ ಅನುಭವದಿಂದ ಹೇಳುತ್ತಿದ್ದೇನೆ, ಈ ರೀತಿಯ ನಿರ್ಣಯಗಳನ್ನು ಮಾಡುವ ಮುಂಚೆ ಸಮಯ ತಕ್ಕೊಂಡು ಚೆನ್ನಾಗಿ ಯೋಚಿಸಬೇಕು.” *
ನೀವು ಯೋಚಿಸಬೇಕಾದ ನಾಲ್ಕು ಮುಖ್ಯ ಪರಿಣಾಮಗಳ ಕುರಿತು ಈಗ ತಿಳಿಯೋಣ. ವಿಚ್ಛೇದಿತ ವ್ಯಕ್ತಿಗಳ ಹೇಳಿಕೆಗಳನ್ನು ಮುಂದೆ ಓದುವಾಗ ದಯವಿಟ್ಟು ಒಂದು ವಿಷಯವನ್ನು ಗಮನಿಸಿ, ಇವರು ತಾವು ತಕ್ಕೊಂಡ ನಿರ್ಣಯ ತಪ್ಪೆಂದು ಹೇಳುತ್ತಿಲ್ಲ. ಆದರೂ ಅವರ ಹೇಳಿಕೆಗಳು ವಿವಾಹಬಂಧ ಮುರಿದ ಬಳಿಕ ಕೆಲವು ತಿಂಗಳು ಅಥವಾ ವರ್ಷಗಳಾನಂತರವೂ ಹೆಚ್ಚಾಗಿ ಯಾವ ಸಮಸ್ಯೆಗಳು ತಲೆದೋರುತ್ತವೆಂದು ಎತ್ತಿತೋರಿಸುತ್ತವೆ.
1 ಹಣಕಾಸಿನ ಸಮಸ್ಯೆ
ಹನ್ನೆರಡು ವರ್ಷ ವೈವಾಹಿಕ ಜೀವನ ನಡೆಸಿದ ಇಟಲಿಯ ಡಾನ್ಯೆಲಾ ಎಂಬಾಕೆಗೆ, ತನ್ನ ಗಂಡ ಸಹೋದ್ಯೋಗಿಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾನೆಂದು ತಿಳಿದುಬಂತು. ಅವಳನ್ನುವುದು: “ನನಗೆ ಇದು ಗೊತ್ತಾಗುವಷ್ಟರಲ್ಲಿ ಆ ಹೆಂಗಸು ಆರು ತಿಂಗಳ ಬಸುರಿ.”
ಗಂಡನಿಂದ ಸ್ವಲ್ಪ ಸಮಯ ಪ್ರತ್ಯೇಕವಾಗಿದ್ದ ಬಳಿಕ ಡಾನ್ಯೆಲಾ ಡೈವೋರ್ಸ್ ಪಡೆಯಲು ನಿರ್ಣಯಿಸಿದಳು. “ನನ್ನ ವಿವಾಹಬಂಧವನ್ನು ಉಳಿಸಲು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಆದರೆ ನನ್ನ ಗಂಡ ಆ ಹೆಂಗಸನ್ನು ಬಿಡಲಿಲ್ಲ” ಎನ್ನುತ್ತಾಳೆ ಆಕೆ. ಹೀಗಿರುವುದರಿಂದ ತಾನು ಸರಿಯಾದ ನಿರ್ಣಯ ಮಾಡಿದ್ದೇನೆಂದು ಆಕೆಗೆ ಅನಿಸುತ್ತದೆ. ಆದರೂ ಅವಳನ್ನುವುದು: “ನಾನು ಅವರಿಂದ ಬೇರೆಯಾದ ಬಳಿಕ ಒಂದೊಂದು ಕಾಸಿಗೂ ಪರದಾಡುವ ಸ್ಥಿತಿ ಬಂತು. ಕೆಲವೊಮ್ಮೆ ರಾತ್ರಿಯೂಟಕ್ಕೆ ಏನೂ ಇರುತ್ತಿರಲಿಲ್ಲ, ಬರೀ ಒಂದು ಲೋಟ ಹಾಲು ಕುಡಿದು ಮಲಗುತ್ತಿದ್ದೆ.”
ಸ್ಪೇನ್ ದೇಶದ ಮಾರಿಯಾಳದ್ದೂ ಇದೇ ಸ್ಥಿತಿ ಆಗಿತ್ತು. “ಎಲ್ಲ ಸೌಕರ್ಯ ಇದ್ದ ಮನೆ ಬಿಟ್ಟು ಸುರಕ್ಷಿತವಲ್ಲದ ಕೇರಿಯಲ್ಲಿ ಒಂದು ಚಿಕ್ಕ ಮನೆಗೆ ಹೋಗಬೇಕಾಯಿತು. ನನ್ನ ಮಾಜಿ ಗಂಡ ನಮಗೆ ಬಿಡಿಗಾಸೂ ಕೊಡುವುದಿಲ್ಲ. ಅವನು ಮಾಡಿದ ಎಲ್ಲ ಸಾಲಸೋಲಗಳನ್ನು ತೀರಿಸಲು ನಾನು ಗಾಣದ ಎತ್ತಿನಂತೆ ಕೆಲಸಮಾಡುತ್ತಿದ್ದೇನೆ” ಎನ್ನುತ್ತಾಳೆ ಆಕೆ.
ಈ ಅನುಭವಗಳು ತೋರಿಸುವಂತೆ ವಿವಾಹಬಂಧ ಮುರಿದಾಗ ಹೆಚ್ಚಾಗಿ ಮಹಿಳೆಯರ ಆರ್ಥಿಕ ಸ್ಥಿತಿಗೆ ಕೊಡಲಿಯೇಟು ಬೀಳುತ್ತದೆ. ಯುರೋಪ್‌ನಲ್ಲಿ ನಡೆಸಲಾದ ಏಳು ವರ್ಷದ ಒಂದು ಅಧ್ಯಯನದ ಪ್ರಕಾರ ವಿಚ್ಛೇದನದ ಬಳಿಕ ಗಂಡಸರ ಆರ್ಥಿಕ ಸ್ಥಿತಿ 11% ಸುಧಾರಿಸಿದರೆ ಹೆಂಗಸರ ಆರ್ಥಿಕ ಸ್ಥಿತಿ 17% ಹದಗೆಟ್ಟಿತು. ಆ ಅಧ್ಯಯನದ ನೇತೃತ್ವವಹಿಸಿದ ಮೀಕೆ ಜೆನ್ಸನ್ ಹೇಳುವುದು: “ಕೆಲವು ಮಹಿಳೆಯರು ತುಂಬ ಕಷ್ಟಪಡಬೇಕಾಗುತ್ತದೆ ಏಕೆಂದರೆ ಅವರು ಒಂದೆಡೆ ಮಕ್ಕಳನ್ನು ನೋಡಿಕೊಳ್ಳಬೇಕು, ಇನ್ನೊಂದೆಡೆ ಕೆಲಸ ಹುಡುಕಬೇಕು ಜೊತೆಗೆ ವಿಚ್ಛೇದನದಿಂದ ತಮಗಾದ ವೇದನೆಯನ್ನೂ ಸಹಿಸಿಕೊಳ್ಳಬೇಕು.” ಲಂಡನ್‌ನ ಡೇಲಿ ಟೆಲಿಗ್ರಾಫ್ ವಾರ್ತಾಪತ್ರಿಕೆಗನುಸಾರ, ಆ ಅಂಶಗಳು “ಗಂಡಹೆಂಡರು ಬೇರ್ಪಡುವ ಮುನ್ನ ಎರಡೆರಡು ಸಲ ಯೋಚಿಸುವಂತೆ ಒತ್ತಾಯಿಸುತ್ತಿವೆ” ಎಂಬುದು ಕೆಲವು ವಕೀಲರ ಅಭಿಪ್ರಾಯ.
ಏನಾಗಬಹುದು? ವಿಚ್ಛೇದನದ ಬಳಿಕ ನಿಮ್ಮ ವರಮಾನಕ್ಕೆ ಪೆಟ್ಟು ಬೀಳಬಹುದು. ಮನೆಯನ್ನೂ ಬದಲಾಯಿಸ ಬೇಕಾದೀತು. ಕೋರ್ಟು ಮಕ್ಕಳನ್ನು ನಿಮ್ಮ ವಶಕ್ಕೆ ಕೊಡುವಲ್ಲಿ ಅವರ ಮತ್ತು ನಿಮ್ಮ ಅಗತ್ಯಗಳನ್ನು ಸಾಕಷ್ಟು ಮಟ್ಟಿಗೆ ಪೂರೈಸುವುದು ಕೂಡ ನಿಮಗೆ ಕಷ್ಟವಾಗಬಹುದು.—1 ತಿಮೊಥೆಯ 5:8.
2 ಮಕ್ಕಳ ಪಾಲನೆ ಸಂಬಂಧದಲ್ಲಿ ಸಮಸ್ಯೆಗಳು
ಬ್ರಿಟನ್‌ನಲ್ಲಿರುವ ಜೇನ್ ಎಂಬಾಕೆ ಅಂದದ್ದು: “ನನ್ನ ಯಜಮಾನರು ಬೇರೆಯವಳೊಂದಿಗೆ ಸಂಬಂಧ ಇಟ್ಟುಕೊಂಡಿದ್ದಾರೆಂದು ತಿಳಿದಾಗ ನನಗೆ ಸಿಡಿಲು ಬಡಿದಂತಾಯಿತು. ಅವರು ಸ್ವಲ್ಪವೂ ಅಳುಕದೆ ನನ್ನನ್ನೂ ಮಕ್ಕಳನ್ನೂ ಬಿಟ್ಟು ಹೋದಾಗಲಂತೂ ಮನಸ್ಸೇ ಒಡೆದುಹೋಯಿತು.” ಜೇನ್ ಗಂಡನಿಗೆ ವಿಚ್ಛೇದನ ಕೊಟ್ಟಳು. ಸರಿಯಾದ ನಿರ್ಣಯ ಮಾಡಿದ್ದೇನೆಂದು ಅವಳು ಇವತ್ತಿಗೂ ನಂಬುತ್ತಾಳೆ. ಆದರೆ ಅವಳು ಒಪ್ಪಿಕೊಳ್ಳುವುದು: “ನಾನು ಎದುರಿಸಿದ ದೊಡ್ಡ ಸವಾಲೆಂದರೆ, ಮಕ್ಕಳಿಗೆ ಅಪ್ಪ-ಅಮ್ಮ ಎಲ್ಲ ನಾನೇ ಆಗಿರಬೇಕಿತ್ತು. ಎಲ್ಲ ನಿರ್ಣಯಗಳನ್ನೂ ನಾನೇ ಮಾಡಬೇಕಿತ್ತು.”
ಗಂಡನಿಗೆ ವಿಚ್ಛೇದನ ಕೊಟ್ಟ ಸ್ಪೇನ್‌ನ ಗ್ರಾಸ್ಯೇಲಾ ಎಂಬ ಮಹಿಳೆಯೂ ಇದೇ ಪರಿಸ್ಥಿತಿಯಲ್ಲಿದ್ದಳು. ಅವಳನ್ನುವುದು: “ನಮ್ಮ 16 ವರ್ಷದ ಮಗನನ್ನು ಕೋರ್ಟು ನನ್ನ ವಶಕ್ಕೆ ಕೊಟ್ಟಿತು. ಹದಿವಯಸ್ಸಿನ ಮಕ್ಕಳನ್ನು ಬೆಳೆಸುವುದು ತುಂಬ ಕಷ್ಟ. ನನ್ನ ಮಗನನ್ನು ನಾನೊಬ್ಬಳೇ ಬೆಳೆಸಬೇಕಾಗುತ್ತದೆಂದು ನಾನು ಕನಸುಮನಸ್ಸಲ್ಲೂ ನೆನಸಿರಲಿಲ್ಲ. ಹಗಲುರಾತ್ರಿ ನಾನು ಬಿಕ್ಕಿಬಿಕ್ಕಿ ಅತ್ತದ್ದುಂಟು. ತಾಯಿಯಾಗಿ ನನ್ನ ಕರ್ತವ್ಯವನ್ನು ಸರಿಯಾಗಿ ಮಾಡುತ್ತಿಲ್ಲವೇನೋ ಅಂತ ನನಗನಿಸುತ್ತಿತ್ತು.”
ಮಕ್ಕಳ ಪಾಲನೆಯನ್ನು ಕೋರ್ಟು ಗಂಡಹೆಂಡತಿ ಇಬ್ಬರಿಗೂ ಹಂಚಿಕೊಡುವಲ್ಲಿ, ಇನ್ನೊಂದು ಸಮಸ್ಯೆ ತಲೆದೋರಬಹುದು. ಅದೇನೆಂದರೆ ಮಕ್ಕಳನ್ನು ಭೇಟಿಮಾಡುವ, ಅವರ ಪೋಷಣೆಗೆ ನೀಡಬೇಕಾದ ಹಣ ಮತ್ತು ಕೊಡಬೇಕಾದ ಶಿಸ್ತಿನಂಥ ಸೂಕ್ಷ್ಮ ವಿಚಾರಗಳ ಕುರಿತು ಮಾಜಿ ಸಂಗಾತಿಯೊಂದಿಗೆ ನೀವು ಮಾತಾಡಲೇಬೇಕಾಗುತ್ತದೆ. ಯುನೈಟೆಡ್ ಸ್ಟೇಟ್ಸ್‌ನಲ್ಲಿರುವ ಕ್ರಿಸ್ಟಿನ್ ಎಂಬಾಕೆ ವಿಚ್ಛೇದನ ಪಡೆದಿರುವ ತಾಯಿ. ಆಕೆ ಅಂದದ್ದು: “ಮಾಜಿ ಸಂಗಾತಿಯೊಟ್ಟಿಗೆ ಒಳ್ಳೇ ರೀತಿಯಲ್ಲಿ ವ್ಯವಹರಿಸುವುದು ಅಷ್ಟು ಸುಲಭವಲ್ಲ. ಏಕೆಂದರೆ ಇಂಥ ವಿಷಯಗಳಲ್ಲಿ ಭಾವನೆಗಳು ಒಳಗೂಡಿರುತ್ತವೆ. ತಂದೆ/ತಾಯಿ ಜಾಗ್ರತೆ ವಹಿಸದಿದ್ದರೆ ತಮ್ಮ ಮಗುವನ್ನು ಬಳಸಿ ಈ ಏರ್ಪಾಡಿನಿಂದ ಸ್ವಾರ್ಥ ಲಾಭ ಪಡೆಯುವ ಸಾಧ್ಯತೆಯಿದೆ.”
ಏನಾಗಬಹುದು? ಮಕ್ಕಳ ಪಾಲನೆಯ ವಿಷಯದಲ್ಲಿ ಕೋರ್ಟು ನೀಡುವ ತೀರ್ಪು ನಿಮ್ಮ ಇಷ್ಟದ ಪ್ರಕಾರ ಇರಲಿಕ್ಕಿಲ್ಲ. ಒಂದುವೇಳೆ ಅವರ ಪಾಲನೆಯನ್ನು ಕೋರ್ಟು ನಿಮ್ಮಿಬ್ಬರಿಗೂ ಹಂಚಿಕೊಡುವಲ್ಲಿ ಅವರನ್ನು ಭೇಟಿಮಾಡುವ, ಹಣಸಹಾಯ ಕೊಡುವ ಇತ್ಯಾದಿ ವಿಷಯಗಳಲ್ಲಿ ನಿಮ್ಮ ಮಾಜಿ ಸಂಗಾತಿ ನೀವೆಣಿಸಿದಷ್ಟು ಸಹಕಾರ ನೀಡದಿರಬಹುದು.
3 ನಿಮ್ಮ ಮೇಲಾಗುವ ಪರಿಣಾಮ
ಬ್ರಿಟನ್‌ನ ಮಾರ್ಕ್ ಎಂಬಾತನ ಪತ್ನಿ ಅಡ್ಡದಾರಿ ಹಿಡಿದಳು. ಅವನಂದದ್ದು: “ಅವಳು ಎರಡನೇ ಸಲ ಅದೇ ತಪ್ಪನ್ನು ಮಾಡಿದಾಗ ಅವಳು ಮುಂದೆ ಹಾಗೆ ಮಾಡಲಿಕ್ಕಿಲ್ಲವೆಂಬ ಭರವಸೆಯೇ ಹೊರಟುಹೋಯಿತು.” ಮಾರ್ಕ್ ತನ್ನ ಹೆಂಡತಿಗೆ ಡೈವೋರ್ಸ್ ಕೊಟ್ಟನು. ಆದರೂ ಅವಳ ಮೇಲೆ ಅವನಿಗಿನ್ನೂ ಪ್ರೀತಿ ಇತ್ತು. ಅವನು ಹೇಳುವುದು: “ಜನರು ಅವಳ ಬಗ್ಗೆ ಕೆಟ್ಟ ಕೆಟ್ಟದಾಗಿ ಮಾತಾಡುವಾಗ ನನಗೆ
ಸಮಾಧಾನ ಆಗುತ್ತಿದೆಯೆಂದು ನೆನಸುತ್ತಾರೆ. ಆದರೆ ನಿಜವಾಗಲೂ ಅದು ನನ್ನ ಮನಸ್ಸನ್ನು ನೋಯಿಸುತ್ತದೆ. ಏಕೆಂದರೆ ಪ್ರೀತಿ ಅಷ್ಟು ಬೇಗ ಮಾಸುವುದಿಲ್ಲ.”ಈ ಮುಂಚೆ ತಿಳಿಸಲಾದ ಡೇವಿಡ್‌ಗೆ ತನ್ನ ಹೆಂಡತಿ ಪರಪುರುಷನೊಂದಿಗೆ ಸಂಬಂಧ ಇಟ್ಟುಕೊಂಡಿದ್ದಾಳೆಂದು ತಿಳಿದಾಗ ಅವನ ಮನಸ್ಸು ಚೂರುಚೂರಾಯಿತು. ಅವನು ಹೇಳುವುದು: “ಅದನ್ನು ಕೇಳಿದಾಗ ನನ್ನಿಂದ ನಂಬಲಿಕ್ಕೇ ಆಗಲಿಲ್ಲ. ನನ್ನ ಬದುಕಿನ ಒಂದೊಂದು ದಿನವನ್ನೂ ಅವಳೊಂದಿಗೆ, ಮಕ್ಕಳೊಂದಿಗೆ ಕಳೆಯಬೇಕೆಂದು ಕನಸು ಕಂಡಿದ್ದೆ.” ಡೇವಿಡ್ ಹೆಂಡತಿಗೆ ಡೈವೋರ್ಸ್ ಕೊಟ್ಟನಾದರೂ ಅವನಿಗೆ ತನ್ನ ಮುಂದಿನ ಬಾಳಿನ ಬಗ್ಗೆ ಸಂಶಯವೆದ್ದಿತು. ಅವನಂದದ್ದು: “ಮುಂದೆ ಯಾರಾದರೂ ನನ್ನನ್ನು ನಿಜವಾಗಿಯೂ ಪ್ರೀತಿಸಬಹುದಾ? ನಾನು ಮತ್ತೆ ಮದುವೆಯಾದರೆ ಆಕೆಯೂ ನನಗೆ ಕೈಕೊಡಬಹುದಾ ಎಂದೆಲ್ಲಾ ಯೋಚಿಸುತ್ತೇನೆ. ನನಗೆ ಯಾರ ಮೇಲೂ ನಂಬಿಕೆ ಇಡಲು ಆಗುತ್ತಿಲ್ಲ.”
ನೀವು ವಿಚ್ಛೇದನಗೊಂಡಿರುವಲ್ಲಿ ನಾನಾ ರೀತಿಯ ಭಾವನೆಗಳು ನಿಮ್ಮನ್ನು ಮುತ್ತಿಕೊಳ್ಳಬಹುದು. ಒಂದೆಡೆ ಮಾಜಿ ಸಂಗಾತಿಯ ಮೇಲೆ ನಿಮಗಿನ್ನೂ ಪ್ರೀತಿ ಇರಬಹುದು ಏಕೆಂದರೆ ಈ ಹಿಂದೆ ನೀವು ಒಂದೇ ಶರೀರದಂತೆ ಆಪ್ತರಾಗಿದ್ದಿರಿ. (ಆದಿಕಾಂಡ 2:24) ಇನ್ನೊಂದೆಡೆ ನಡೆದದ್ದನ್ನು ಯೋಚಿಸಿ ಸಿಟ್ಟೂ ಬರುತ್ತಿರಬಹುದು. ಹಿಂದೆ ತಿಳಿಸಲಾದ ಗ್ರಾಸ್ಯೇಲಾ ಹೇಳುವುದು: “ಅನೇಕ ವರ್ಷಗಳ ಬಳಿಕವೂ, ಯಾಕೆ ಹೀಗಾಯಿತೆಂಬ ಗೊಂದಲ, ಅವಮಾನ, ನಿಸ್ಸಹಾಯಕ ಭಾವನೆ ನನ್ನಲ್ಲಿ ಮನೆಮಾಡಿತ್ತು. ನಾನು ಅವರೊಂದಿಗೆ ಕಳೆದ ಮಧುರ ಕ್ಷಣಗಳು ಮನಃಪಟಲದಲ್ಲಿ ಮತ್ತೆ ಮತ್ತೆ ಬರುತ್ತಿದ್ದವು. ‘ನಿನ್ನನ್ನು ಬಿಟ್ಟು ಬದುಕಲಾರೆ ಎಂದು ಅವರು ಹೇಳುತ್ತಿದ್ದರು. ಅದೆಲ್ಲಾ ಸುಳ್ಳಾ? ಯಾಕೆ ಹೀಗಾಯಿತು?’ ಎಂಬ ಯೋಚನೆಯೂ ಬರುತ್ತಿತ್ತು.”
ಏನಾಗಬಹುದು? ನಿಮ್ಮ ಸಂಗಾತಿ ನಿಮ್ಮೊಂದಿಗೆ ಕೆಟ್ಟದಾಗಿ ನಡೆದುಕೊಂಡದ್ದರ ಬಗ್ಗೆ ಕೋಪ, ಅಸಮಾಧಾನ ನಿಮ್ಮಲ್ಲಿ ಒಳಗೊಳಗೇ ಹೊಗೆಯಾಡುತ್ತಿರಬಹುದು. ಕೆಲವೊಮ್ಮೆ ಒಂಟಿ ಭಾವನೆ ಕಾಡಬಹುದು.—ಜ್ಞಾನೋಕ್ತಿ 14:29; 18:1.
4 ಮಕ್ಕಳ ಮೇಲಾಗುವ ಪರಿಣಾಮ
ಸ್ಪೇನ್‌ನ ಹೋಸೇ ಎಂಬಾತನು ತನ್ನ ಹೆಂಡತಿಗೆ ವಿಚ್ಛೇದನ ನೀಡಿದ್ದನು. ಅವನು ಹೇಳುವುದು: “ನನ್ನ ಹೆಂಡತಿಯ ಅಕ್ರಮ ಸಂಬಂಧದ ಬಗ್ಗೆ ಗೊತ್ತಾದಾಗ ನಿಂತ ನೆಲವೇ ಕುಸಿದಂತಾಯಿತು. ಆ ಗಂಡಸು ಬೇರಾರೂ ಅಲ್ಲ ನನ್ನ ತಂಗಿಯ ಗಂಡನೇ ಎಂದು ತಿಳಿದಾಗಲಂತೂ ಎದೆಯೊಡೆದು ಹೋಯಿತು. ಸಾಯಬೇಕೆಂದೂ ಅನಿಸಿತು.” ಅವಳ ಕೃತ್ಯದಿಂದ 2 ಮತ್ತು 4 ವರ್ಷದ ತಮ್ಮ ಗಂಡುಮಕ್ಕಳು ಬಾಧಿತರಾಗಿದ್ದರೆಂದು ಹೋಸೇಗೆ ತಿಳಿಯಿತು. “ಏನು ನಡೆಯುತ್ತಿದೆ ಅನ್ನೋದೇ ಮಕ್ಕಳಿಗೆ ಅರ್ಥ ಆಗಲಿಲ್ಲ. ಅವರ ಅಮ್ಮ ಮತ್ತು ಮಾಮ ಯಾಕೆ ಒಂದೇ ಮನೆಯಲ್ಲಿದ್ದಾರೆ ಎಂದಾಗಲಿ ನನ್ನ ತಾಯಿ, ತಂಗಿಯಿದ್ದ ಮನೆಗೆ ನಾವೇಕೆ ಬಂದಿದ್ದೇವೆ ಎಂದಾಗಲಿ
ಮಕ್ಕಳಿಗೆ ಗೊತ್ತಾಗಲಿಲ್ಲ. ನಾನು ಮನೆಯಿಂದ ಹೊರಡುವಾಗೆಲ್ಲಾ ಅವರು ‘ಡ್ಯಾಡಿ ಯಾವಾಗ ಬರ್ತಿರಿ?’ ‘ಡ್ಯಾಡಿ ನಮ್ಮನ್ನು ಬಿಟ್ಟು ಹೋಗಬೇಡಿ!’ ಎಂದು ಹೇಳುತ್ತಿದ್ದರು.”ವಿವಾಹ ವಿಚ್ಛೇದನವೆಂಬ ರಣರಂಗದಲ್ಲಿ ಮಕ್ಕಳು ಕೂಡ ಗಾಯಗೊಳ್ಳುತ್ತಾರೆಂದು ಅನೇಕರು ಮರೆತುಬಿಡುತ್ತಾರೆ. ಆದರೆ ಹೆತ್ತವರ ಮಧ್ಯೆ ಹೊಂದಾಣಿಕೆಯೇ ಇಲ್ಲದಿರುವಾಗ ವಿಚ್ಛೇದನ ಪಡೆದರೆ ಮಕ್ಕಳಿಗೆ ಒಳಿತಾಗುತ್ತದೆ ಎಂದು ಹೇಳಲಾಗುವ ಮಾತು ನಿಜವೋ? ಇತ್ತೀಚಿನ ವರ್ಷಗಳಲ್ಲಿ ಆ ಅಭಿಪ್ರಾಯ ಬದಲಾಗಿದೆ. ಸಣ್ಣಪುಟ್ಟ ಕಾರಣಕ್ಕೆಲ್ಲಾ ಹೆತ್ತವರು ವಿಚ್ಛೇದನ ಪಡೆಯುವುದು ಮಕ್ಕಳಿಗೆ ಒಳ್ಳೇದಲ್ಲವೆಂದು ಹೇಳಲಾಗುತ್ತಿದೆ. ವಿವಾಹ ವಿಚ್ಛೇದನದ ಅನಿರೀಕ್ಷಿತ ಪರಿಣಾಮ (ಇಂಗ್ಲಿಷ್) ಎಂಬ ಪುಸ್ತಕ ಹೀಗೆ ತಿಳಿಸುತ್ತದೆ: “ಹೆತ್ತವರಿಗೆ ಈ ವಿಷಯ ತಿಳಿದು ಆಶ್ಚರ್ಯವಾಗಬಹುದು ಏನೆಂದರೆ ತಮ್ಮ ದಾಂಪತ್ಯದಲ್ಲಿ ತುಂಬ ಸಮಸ್ಯೆಗಳಿದ್ದರೂ ತಮ್ಮ ಮಕ್ಕಳಾದರೊ ನೆಮ್ಮದಿಯಿಂದಿರುತ್ತಾರೆ. ಮಮ್ಮಿ, ಡ್ಯಾಡಿ ಬೇರೆ ಬೇರೆ ಮಲಗಿದರೂ ಅವರೇನೂ ತಲೆಕೆಡಿಸಿಕೊಳ್ಳುವುದಿಲ್ಲ, ಒಟ್ಟಿನಲ್ಲಿ ಇಬ್ಬರೂ ಜೊತೆಗಿದ್ದರೆ ಅವರಿಗೆ ಅಷ್ಟೇ ಸಾಕು.”
ಅಪ್ಪಅಮ್ಮ ಮಧ್ಯೆ ನಡೆಯುವ ಜಗಳಗಳ ಬಗ್ಗೆ ಮಕ್ಕಳಿಗೆ ಹೆಚ್ಚಾಗಿ ಗೊತ್ತಾಗುತ್ತದೆ. ಅದು ಅವರ ಎಳೆ ಹೃದಮನಗಳ ಮೇಲೆ ದುಷ್ಪರಿಣಾಮ ಬೀರಬಲ್ಲದು. ಹಾಗಿದ್ದರೂ ವಿಚ್ಛೇದನ ಪಡೆದ ಮಾತ್ರಕ್ಕೆ ಮಕ್ಕಳಿಗೆ ಒಳಿತಾಗುತ್ತದೆಂದು ನೆನಸುವುದು ತಪ್ಪು. “ತಮ್ಮ ವೈವಾಹಿಕ ಜೀವನ ಅಷ್ಟೇನೂ ಆದರ್ಶಮಯ ಆಗಿರದಿದ್ದರೂ ವಿವಾಹದ ಚೌಕಟ್ಟಿನೊಳಗೇ ಉಳಿಯುವಲ್ಲಿ ದಂಪತಿಗಳು ಮಕ್ಕಳಿಗೆ ಅಗತ್ಯವಿರುವ ಯೋಗ್ಯ ಶಿಸ್ತನ್ನು ಕೊಡಬಹುದು. ಇಂಥ ಶಿಸ್ತಿಗೆ ಮಕ್ಕಳು ಸ್ಪಂದಿಸುತ್ತಾರೆ” ಎಂದು ಲಿಂಡ ಜೆ. ವೇಟ್ ಮತ್ತು ಮ್ಯಾಗಿ ಗ್ಯಾಲಗೇರ್ ಎಂಬವರು ಬರೆದ ವಿವಾಹ ಸಮರ್ಥನೆ (ಇಂಗ್ಲಿಷ್) ಪುಸ್ತಕದಲ್ಲಿ ತಿಳಿಸಿದರು.
ಏನಾಗಬಹುದು? ವಿಚ್ಛೇದನವು ಮಕ್ಕಳ ಮೇಲೆ ವಿಧ್ವಂಸಕ ಪರಿಣಾಮ ಬೀರಬಲ್ಲದು. ಅದರಲ್ಲೂ ನಿಮ್ಮ ಮಾಜಿ ಸಂಗಾತಿಯೊಂದಿಗೆ ಒಳ್ಳೇ ಸಂಬಂಧವಿಡುವಂತೆ ನೀವು ಮಕ್ಕಳನ್ನು ಪ್ರೋತ್ಸಾಹಿಸದಿದ್ದಾಗ ಅದು ಸತ್ಯ.—“ಅಡಕತ್ತರಿಯಲ್ಲಿ ಸಿಕ್ಕಿ ಬಿದ್ದಂತೆ” ಚೌಕ ನೋಡಿ.
ನೀವು ಒಂದುವೇಳೆ ವಿಚ್ಛೇದನ ಪಡೆಯಲು ಯೋಚಿಸುತ್ತಿರುವಲ್ಲಿ ಈ ಲೇಖನದಲ್ಲಿ ಕೊಡಲಾಗಿರುವ ವಿಚ್ಛೇದನದ ನಾಲ್ಕು ಪರಿಣಾಮಗಳನ್ನು ಚೆನ್ನಾಗಿ ಪರಿಗಣಿಸಿರಿ. ಈ ಮುಂಚೆ ತಿಳಿಸಿದಂತೆ, ಕೈಹಿಡಿದ ಸಂಗಾತಿ ನಿಮಗೆ ದಾಂಪತ್ಯದ್ರೋಹ ಎಸಗಿರುವಲ್ಲಿ ಏನು ಮಾಡಬೇಕೆಂದು ನೀವೇ ನಿರ್ಣಯಿಸಬೇಕು. ನಿಮ್ಮ ನಿರ್ಣಯ ಏನೇ ಆಗಿರಲಿ ಅದರಿಂದಾಗುವ ಪರಿಣಾಮಗಳನ್ನು ಮುಂಚೆಯೇ ತಿಳಿದುಕೊಳ್ಳಿ. ಯಾವೆಲ್ಲಾ ಸವಾಲುಗಳು ನಿಮಗೆ ಎದುರಾಗಲಿವೆ ಎಂದು ಅರಿತುಕೊಳ್ಳಿ. ಅವುಗಳನ್ನು ಎದುರಿಸಲು ಸಿದ್ಧರಾಗಿರ್ರಿ.
ಎಲ್ಲವನ್ನೂ ಪರಿಗಣಿಸಿದ ಬಳಿಕ ನಿಮ್ಮ ವೈವಾಹಿಕ ಜೀವನವನ್ನು ಸರಿಪಡಿಸಲು ಪ್ರಯತ್ನಿಸುವುದೇ ಒಳ್ಳೇದೆಂದು ನಿಮಗೆ ಅನಿಸಬಹುದು. ಆದರೆ ಅದು ಸಾಧ್ಯವೇ? (g10-E 02)
[ಪಾದಟಿಪ್ಪಣಿಗಳು]
^ Taken from the HOLY BIBLE: Kannada EASY-TO-READ VERSION © 1997 by World Bible Translation Center, Inc. and used by permission.
^ ಈ ಲೇಖನದಲ್ಲಿ ಹೆಸರುಗಳನ್ನು ಬದಲಾಯಿಸಲಾಗಿದೆ.
[ಪುಟ 6ರಲ್ಲಿರುವ ಚೌಕ]
“ಪ್ರತಿಯೊಂದು ಮಗುವಿನ ಜನ್ಮಸಿದ್ಧ ಹಕ್ಕು”
“ಅಪ್ಪ ತಮ್ಮ ಸೆಕ್ರಿಟರಿಯೊಂದಿಗೆ ಸ್ವಲ್ಪ ಕಾಲ ಸಂಬಂಧ ಇಟ್ಟುಕೊಂಡಿದ್ದರು. ಆದ್ದರಿಂದ ಅಪ್ಪಅಮ್ಮಗೆ ಡೈವೋರ್ಸ್ ಆಯಿತು. ನನಗಾಗ ಇನ್ನೂ ಐದು ವರ್ಷ. ಆ ಕಾಲದ ತಿಳುವಳಿಕೆಗನುಸಾರ, ನನ್ನನ್ನು ನೋಡಿಕೊಳ್ಳುವ ವಿಷಯದಲ್ಲಿ ಅವರು ಎಲ್ಲವನ್ನು ಸರಿಯಾಗಿಯೇ ಮಾಡಿದರು. ಅವರು ಪರಸ್ಪರ ಪ್ರೀತಿಸದಿದ್ದರೂ ನನ್ನನ್ನು ಖಂಡಿತ ಪ್ರೀತಿಸುತ್ತಾರೆಂದು ಇಬ್ಬರೂ ಭರವಸೆ ಕೊಟ್ಟರು. ನಗರದ ಇನ್ನೊಂದು ಮೂಲೆಯಲ್ಲಿ ಅಪ್ಪ ಒಬ್ಬರೇ ವಾಸಿಸುತ್ತಿದ್ದಾಗಲೂ ನನಗೆ ಬೇಕಾಗಿದ್ದ ಎಲ್ಲವನ್ನು ಪೂರೈಸಿದರು. ಅಮ್ಮ ಕೂಡ ನನಗೇನೂ ಕಡಿಮೆ ಮಾಡಲಿಲ್ಲ.
“ಎರಡು ವರ್ಷಗಳ ನಂತರ ಅಮ್ಮ ಇನ್ನೊಂದು ಮದುವೆಯಾದರು. ಆಗ ನಾವು ಆ ದೇಶವನ್ನೇ ಬಿಟ್ಟು ಹೋದೆವು. ಬಳಿಕ ನಾನು ಅಪ್ಪನನ್ನು ಎಷ್ಟೋ ವರ್ಷಕ್ಕೊಮ್ಮೆ ನೋಡುತ್ತಿದ್ದೆ. ಕಳೆದ ಒಂಬತ್ತು ವರ್ಷಗಳಲ್ಲಿ ನಾನವರನ್ನು ನೋಡಿದ್ದು ಒಂದೇ ಒಂದು ಸಲ. ನಾನು ಬೆಳೆಯುವುದನ್ನು ನೋಡಿ ಆನಂದಿಸುವ ಅವಕಾಶ ಅವರಿಗೆ ತಪ್ಪಿಹೋಯಿತು. ನನ್ನ ಮೂವರು ಮಕ್ಕಳನ್ನು ಅಂದರೆ ಅವರ ಮೊಮ್ಮಕ್ಕಳನ್ನು ಅವರಿನ್ನೂ ನೋಡಿಲ್ಲ. ನಾನು ಕೇವಲ ಪತ್ರದಲ್ಲಿ ಅವರಿಗೆ ತಿಳಿಸಿ ಫೋಟೋ ಕಳುಹಿಸಿದ್ದೇನಷ್ಟೆ. ನನ್ನ ಮಕ್ಕಳಿಗೆ ಕೂಡ ಅವರ ಅಜ್ಜನನ್ನು ತಿಳುಕೊಳ್ಳುವ ಅವಕಾಶ ತಪ್ಪಿಹೋಯಿತು.
“ನನ್ನ ಹೆತ್ತವರ ವಿಚ್ಛೇದನದಿಂದಾಗಿ ನನ್ನಲ್ಲಿ ಭಾವನಾತ್ಮಕ ಗಾಯಗಳಾದವು. ಕಡುಕೋಪ, ಖಿನ್ನತೆ, ಅಭದ್ರತೆಯ ಭಾವನೆಗಳು ನನ್ನನ್ನು ಕಾಡುತ್ತಿದ್ದವು, ಕಾರಣವೇನೆಂದು ಗೊತ್ತಿರಲಿಲ್ಲ. ಗಂಡಸರ ಮೇಲೆ ನಂಬಿಕೆಯೇ ಇರಲಿಲ್ಲ. ನಾನು 30 ವರ್ಷ ದಾಟಿದ ಬಳಿಕ ನನ್ನ ಪ್ರೌಢ ಸ್ನೇಹಿತೆ ನನಗಿರುವ ದ್ವೇಷ-ಕೋಪಕ್ಕೆ ಕಾರಣವೇನೆಂದು ಮನವರಿಕೆ ಮಾಡಿಸಿದಳು. ಬಳಿಕ ಸ್ವಲ್ಪ ಸ್ವಲ್ಪವಾಗಿ ನಾನು ಕೋಪಕ್ಕೆ ಕಡಿವಾಣ ಹಾಕಲು ಕಲಿತೆ.
“ಸುಭದ್ರ, ಸುರಕ್ಷಿತ ಭಾವನೆ ಇರಬೇಕಾದದ್ದು ಪ್ರತಿಯೊಂದು ಮಗುವಿನ ಜನ್ಮಸಿದ್ಧ ಹಕ್ಕು. ಆದರೆ ನನ್ನ ಹೆತ್ತವರ ವಿಚ್ಛೇದನವು ಆ ಹಕ್ಕನ್ನು ನನ್ನಿಂದ ಕಸಿದುಕೊಂಡಿತು. ಭಾವರಹಿತವೂ ಭಯಾನಕವೂ ಆದ ಈ ಜಗತ್ತಿನಲ್ಲಿ ಕುಟುಂಬ ಎಂಬುದು ಸಂರಕ್ಷಣೆ ಕೊಡುವ ಬೆಚ್ಚಗಿನ ಗೂಡಾಗಿದೆ. ಮಗುವಿಗೆ ಪೋಷಣೆ, ಸಾಂತ್ವನ ಸಿಗುವುದು ಅಲ್ಲಿಯೇ. ಕುಟುಂಬ ಒಡೆದುಹೋದಾಗ ಆ ಸಂರಕ್ಷಣೆಯೂ ಇಲ್ಲವಾಗುತ್ತದೆ.”—ಡೈಯಾನ್.
[ಪುಟ 7ರಲ್ಲಿರುವ ಚೌಕ]
‘ಅಡಕತ್ತರಿಯಲ್ಲಿ ಸಿಕ್ಕಿ ಬಿದ್ದಂತೆ’
“ನಾನು 12 ವರ್ಷದವಳಾಗಿದ್ದಾಗ ನನ್ನ ಹೆತ್ತವರು ವಿಚ್ಛೇದನ ಪಡೆದರು. ಇದರಿಂದ ಒಂದು ರೀತಿಯಲ್ಲಿ ನನಗೆ ನೆಮ್ಮದಿ ಸಿಕ್ಕಿತು. ಏಕೆಂದರೆ ಮನೆ ವಾತಾವರಣ ಶಾಂತವಾಯಿತು. ದಿನಾಲೂ ನಡೆಯುತ್ತಿದ್ದ ಜಗಳಗಳನ್ನು ಕೇಳುವುದು ತಪ್ಪಿತು. ಆದರೂ ನನ್ನಲ್ಲಿ ಒಂದು ರೀತಿಯ ಮಿಶ್ರಭಾವನೆಯಿತ್ತು.
“ಅಪ್ಪಅಮ್ಮ ವಿಚ್ಛೇದನ ಪಡೆದ ಬಳಿಕ ನಾನು ಇಬ್ಬರೊಂದಿಗೂ ಹೊಂದಿಕೊಂಡು ಹೋಗಲು ಬಯಸಿದೆ. ಯಾರ ಪಕ್ಷವೂ ವಹಿಸದೆ ಇಬ್ಬರೊಂದಿಗೂ ಒಳ್ಳೇದಾಗಿರಲು ತುಂಬ ಪ್ರಯತ್ನಿಸಿದೆ. ಆದರೆ ಎಷ್ಟೇ ಕಷ್ಟಪಟ್ಟರೂ ನನ್ನ ಪರಿಸ್ಥಿತಿ ಅಡಕತ್ತರಿಯಲ್ಲಿ ಸಿಕ್ಕಿ ಬಿದ್ದಂತಿತ್ತು. ಒಂದು ಕಡೆ, ಅಮ್ಮ ನನ್ನ ಮನಸ್ಸು ಕೆಡಿಸಿಬಿಡುವರೆಂದು ಅಪ್ಪ ಹೇಳುತ್ತಿದ್ದರು. ಅಮ್ಮ ಹಾಗೆಲ್ಲ ಹೇಳುವುದಿಲ್ಲ ಎಂದು ಯಾವಾಗಲೂ ನಾನು ಭರವಸೆಕೊಡಬೇಕಿತ್ತು. ಇನ್ನೊಂದು ಕಡೆ ಅಮ್ಮನಿಗೆ ಒಂಥರಾ ಅಸುರಕ್ಷಿತ ಭಾವನೆ. ಅವರ ಬಗ್ಗೆ ಅಪ್ಪ ಹೇಳುತ್ತಿದ್ದ ಇಲ್ಲಸಲ್ಲದ ಮಾತುಗಳನ್ನು ನಾನು ನಂಬಿಬಿಡುತ್ತೇನೋ ಎಂಬ ಭಯ ತನಗಿದೆಯೆಂದು ಅಮ್ಮ ಹೇಳುತ್ತಿದ್ದರು. ಇದೆಲ್ಲಾ ಎಷ್ಟು ವಿಪರೀತಕ್ಕೆ ಹೋಯಿತೆಂದರೆ, ನನಗೆ ಹೇಗನಿಸುತ್ತಿದೆಯೆಂದು ಅವರಿಬ್ಬರಿಗೂ ಹೇಳಲು ಮನಸ್ಸಾಗಲಿಲ್ಲ. ಏಕೆಂದರೆ ಯಾರನ್ನೂ ನೋಯಿಸಲು ನನಗೆ ಇಷ್ಟ ಇರಲಿಲ್ಲ. ಆದ್ದರಿಂದ ಅಪ್ಪಅಮ್ಮನ ವಿಚ್ಛೇದನ ನನಗೆ ತಂದ ನೋವನ್ನು ನನ್ನ 12ನೇ ವಯಸ್ಸಿನಿಂದ ಮನಸ್ಸಲ್ಲೇ ಹೂತಿಟ್ಟೆ.”—ಸ್ಯಾಂಡ್ರ.