ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ದಾಂಪತ್ಯವನ್ನು ಉಳಿಸಲು ಸಾಧ್ಯವೇ?

ನಿಮ್ಮ ದಾಂಪತ್ಯವನ್ನು ಉಳಿಸಲು ಸಾಧ್ಯವೇ?

ನಿಮ್ಮ ದಾಂಪತ್ಯವನ್ನು ಉಳಿಸಲು ಸಾಧ್ಯವೇ?

ಮನೆ ಮಾಲೀಕರು ತಮ್ಮ ಮನೆ ಹಾಳುಬಿದ್ದಿದೆಯೆಂದು ಒಪ್ಪಿ ಅದನ್ನು ದುರಸ್ತಿಗೊಳಿಸಲು ನಿರ್ಣಯಿಸಿದ್ದಾರೆ.

ನಿಮ್ಮ ವಿವಾಹ ಜೀವನದ ಕುರಿತೂ ಅದನ್ನೇ ಮಾಡಲು ಬಯಸುತ್ತೀರೋ? ಹೌದಾದರೆ ಹೇಗೆ ಆರಂಭಿಸುವಿರಿ? ಕೆಳಗಿನ ಸಲಹೆಗಳನ್ನು ಅನ್ವಯಿಸಿ ನೋಡಿ.

1 ದೃಢಸಂಕಲ್ಪ ಮಾಡಿ.

ನಿಮ್ಮ ದಾಂಪತ್ಯದಲ್ಲಿ ಮತ್ತೆ ಶಾಂತಿ ನೆಲಸುವಂತೆ ಮಾಡಲು ಇಬ್ಬರೂ ಕೈಜೋಡಿಸಿರಿ. ನೀವೇನು ಮಾಡಲು ನಿರ್ಧರಿಸುತ್ತೀರೋ ಅದನ್ನು ಒಂದು ಪುಸ್ತಕದಲ್ಲಿ ಬರೆಯಿರಿ. ನೀವು ಮತ್ತು ನಿಮ್ಮ ಸಂಗಾತಿ ಜೊತೆಯಾಗಿ ಕೆಲಸಮಾಡುವಲ್ಲಿ ದಾಂಪತ್ಯವನ್ನು ಉಳಿಸುವುದು ಜಂಟಿ ಯೋಜನೆಯಾಗುತ್ತದೆ.—ಪ್ರಸಂಗಿ 4:9, 10.

2 ಸಮಸ್ಯೆ ಏನೆಂದು ಗುರುತಿಸಿ.

ನಿಮ್ಮ ವೈವಾಹಿಕ ಜೀವನಕ್ಕೆ ಹುಳಿಹಿಂಡಿದ್ದು ಯಾವುದು? ಏನು ಕೊರತೆಯಾಗಿದೆ, ಎಲ್ಲಿ ಸುಧಾರಣೆ ಮಾಡಬೇಕು ಎಂಬುದನ್ನು ಒಂದು ವಾಕ್ಯದಲ್ಲಿ ಬರೆಯಿರಿ. (ಎಫೆಸ 4:22-24) ನೀವು ಗುರುತಿಸುವ ಸಮಸ್ಯೆ, ನಿಮ್ಮ ಸಂಗಾತಿ ಗುರುತಿಸುವ ಸಮಸ್ಯೆ ಎರಡೂ ಬೇರೆ ಬೇರೆಯಾಗಿರುವುದು ಸಹಜ.

3 ಒಂದು ಗುರಿಯಿಡಿ.

ನಿಮ್ಮ ದಾಂಪತ್ಯದಲ್ಲಿ ಆರು ತಿಂಗಳೊಳಗೆ ನಿರ್ದಿಷ್ಟವಾಗಿ ಯಾವ ಸುಧಾರಣೆಗಳನ್ನು ಮಾಡಬೇಕೆಂದಿದ್ದೀರಿ? ನಿಮ್ಮ ಗುರಿಯನ್ನು ಬರೆದಿಡಿ. ಏನು ಮಾಡಬೇಕೆಂದು ನಿಮಗೆ ಸ್ಪಷ್ಟವಾಗಿ ಗೊತ್ತಿರುವಲ್ಲಿ ಗುರಿ ಮುಟ್ಟುವುದು ಸುಲಭವಾಗುತ್ತದೆ.—1 ಕೊರಿಂಥ 9:26.

4 ಬೈಬಲಿನ ಸಲಹೆಯನ್ನು ಅಳವಡಿಸಿಕೊಳ್ಳಿ.

ಸಮಸ್ಯೆಯನ್ನು ಗುರುತಿಸಿ ಯಾವ ಸುಧಾರಣೆಗಳನ್ನು ಮಾಡಬೇಕೆಂದು ನಿರ್ಣಯಿಸಿದ ಬಳಿಕ ಬೈಬಲಿನಲ್ಲಿ ಮಾರ್ಗದರ್ಶನಕ್ಕಾಗಿ ಹುಡುಕಿರಿ. ಅದರಲ್ಲಿರುವ ಮೂಲತತ್ತ್ವಗಳು ಹಿಂದೆಯೂ ಕಾರ್ಯಸಾಧಕವಾಗಿದ್ದವು, ಇಂದಿಗೂ ಕಾರ್ಯಸಾಧಕವಾಗಿವೆ. (ಯೆಶಾಯ 48:17; 2 ತಿಮೊಥೆಯ 3:17) ಉದಾಹರಣೆಗೆ ಕ್ಷಮಿಸುವವರಾಗಿರುವಂತೆ ಬೈಬಲ್‌ ನಿಮ್ಮನ್ನೂ ನಿಮ್ಮ ಸಂಗಾತಿಯನ್ನೂ ಪ್ರೋತ್ಸಾಹಿಸುತ್ತದೆ. ಅದು ಹೀಗನ್ನುತ್ತದೆ: “[ಪರರ] ದೋಷವನ್ನು ಲಕ್ಷಿಸದಿರುವದು . . . ಭೂಷಣ.”—ಜ್ಞಾನೋಕ್ತಿ 19:11; ಎಫೆಸ 4:32.

ಆರಂಭದಲ್ಲಿ ನಿಮ್ಮ ಪ್ರಯತ್ನ ಫಲಕಾರಿಯಾಗುತ್ತಿಲ್ಲವೆಂದು ಕಂಡರೂ ಸೋತುಹೋಗಬೇಡಿ, ಮತ್ತೆ ಮತ್ತೆ ಪ್ರಯತ್ನಿಸಿರಿ! ವಿವಾಹ ಸಮರ್ಥನೆ (ಇಂಗ್ಲಿಷ್‌) ಪುಸ್ತಕವು ಒಂದು ಅಧ್ಯಯನದ ಉತ್ತೇಜನದಾಯಕ ಫಲಿತಾಂಶವನ್ನು ವರದಿಸುತ್ತಾ ಹೇಳಿದ್ದು: “ಅತ್ಯಾಶ್ಚರ್ಯಗೊಳಿಸುವ ನಿಜಾಂಶವೇನೆಂದರೆ, ವಿರಸಗಳಿದ್ದರೂ ಪ್ರತ್ಯೇಕಗೊಳ್ಳದಿದ್ದ ದಂಪತಿಗಳಲ್ಲಿ 86% ಮಂದಿಯ ವೈವಾಹಿಕ ಬದುಕು ಐದು ವರ್ಷದ ಬಳಿಕ ಸಂತೋಷದಿಂದ ತುಂಬಿತ್ತು.” ತಮ್ಮ ವೈವಾಹಿಕ ಬದುಕು ದುಃಖದ ಕಡಲೆಂದು ಹೇಳಿದವರ ಬದುಕಲ್ಲೂ ಸಮಯಾನಂತರ ಸುಖದ ಅಲೆಗಳು ತೇಲಿಬಂದವು.

ನಿಮ್ಮ ವಿಷಯದಲ್ಲೂ ಅದು ಸತ್ಯವಾಗಬಹುದು. ಗಂಡಹೆಂಡತಿಯರಿಗಾಗಿ ಬೈಬಲಿನಲ್ಲಿ ಪ್ರಾಯೋಗಿಕ ಮೂಲತತ್ತ್ವಗಳಿವೆ ಎಂದು ಈ ಪತ್ರಿಕೆಯ ಪ್ರಕಾಶಕರಾದ ಯೆಹೋವನ ಸಾಕ್ಷಿಗಳು ಕಂಡುಕೊಂಡಿದ್ದಾರೆ. ಉದಾಹರಣೆಗೆ ಬೈಬಲ್‌ ತಿಳಿಸುವಂತೆ ದಯೆ, ಕರುಣೆ, ಉದಾರವಾಗಿ ಕ್ಷಮಿಸುವ ಗುಣಗಳನ್ನು ಪರಸ್ಪರ ತೋರಿಸಿದ್ದರಿಂದ ಅನೇಕರ ದಾಂಪತ್ಯ ಜೀವನ ಸುಧಾರಣೆಯಾಗಿದೆ. ಹೆಂಡತಿಯರು ‘ಶಾಂತಭಾವ ಮತ್ತು ಸೌಮ್ಯಭಾವವನ್ನು’ ತೋರಿಸುವುದರ ಮಹತ್ತ್ವವನ್ನು ಅರಿತುಕೊಂಡಿದ್ದಾರೆ. ಗಂಡಂದಿರು ತಮ್ಮ ಹೆಂಡತಿಯರ ಮೇಲೆ ಕಡುಕೋಪ ತೋರಿಸದೇ ಇರುವುದರ ಪ್ರಯೋಜನಗಳನ್ನು ಸವಿದಿದ್ದಾರೆ.—1 ಪೇತ್ರ 3:4; ಕೊಲೊಸ್ಸೆ 3:19.

ಈ ಬೈಬಲ್‌ ಮೂಲತತ್ತ್ವಗಳು ತುಂಬ ಪರಿಣಾಮಕಾರಿ ಏಕೆಂದರೆ ಬೈಬಲಿನ ಗ್ರಂಥಕರ್ತನಾದ ಯೆಹೋವ ದೇವರೇ ವಿವಾಹ ಏರ್ಪಾಡಿನ ಮೂಲನು ಸಹ. ನಿಮ್ಮ ವೈವಾಹಿಕ ಬದುಕಿಗೆ ಬೈಬಲ್‌ ಹೇಗೆ ಸಹಾಯ ನೀಡಬಲ್ಲದೆಂಬುದರ ಕುರಿತ ಹೆಚ್ಚಿನ ಮಾಹಿತಿಗಾಗಿ ಯೆಹೋವನ ಸಾಕ್ಷಿಗಳನ್ನು ದಯವಿಟ್ಟು ಸಂಪರ್ಕಿಸಿರಿ. * (g10-E 02)

[ಪಾದಟಿಪ್ಪಣಿ]

^ ಕುಟುಂಬಗಳಿಗೆ ನೆರವು ನೀಡುವ ಸಲುವಾಗಿ ಯೆಹೋವನ ಸಾಕ್ಷಿಗಳು ಕುಟುಂಬ ಸಂತೋಷದ ರಹಸ್ಯ ಎಂಬ 192 ಪುಟಗಳ ಪುಸ್ತಕವನ್ನು ಪ್ರಕಾಶಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಈ ಪತ್ರಿಕೆಯ ಪುಟ 5ರಲ್ಲಿರುವ ಸೂಕ್ತ ವಿಳಾಸಕ್ಕೆ ಬರೆಯಿರಿ.