ಸೂತ್ರ 7 ಭದ್ರ ಬುನಾದಿ ಹಾಕಿ
ಸೂತ್ರ 7 ಭದ್ರ ಬುನಾದಿ ಹಾಕಿ
ಅರ್ಥವೇನು? ಒಂದು ಮನೆಯ ಸುದೀರ್ಘ ಬಾಳಿಕೆಗೆ ಗಟ್ಟಿಮುಟ್ಟಾದ ಅಡಿಪಾಯ ಬೇಕಾಗಿರುವಂತೆಯೇ ಒಂದು ಕುಟುಂಬವು ಒಡೆದುಹೋಗದೇ ಸ್ಥಿರವಾಗಿರಲು ಭದ್ರವಾದ ಬುನಾದಿ ಅತ್ಯಗತ್ಯ. ಯಶಸ್ವೀ ಕುಟುಂಬಗಳು ಕಾರ್ಯಸಾಧಕ ಮಾರ್ಗದರ್ಶನವೆಂಬ ಬುನಾದಿಯ ಮೇಲೆ ಕಟ್ಟಲ್ಪಟ್ಟಿರುತ್ತವೆ.
ಪ್ರಾಮುಖ್ಯವೇಕೆ? ಪುಸ್ತಕಗಳು, ಪತ್ರಿಕೆಗಳು ಮತ್ತು ಟಿ.ವಿ. ಕಾರ್ಯಕ್ರಮಗಳಲ್ಲಿ ಕುಟುಂಬ ಜೀವನದ ಬಗ್ಗೆ ಬುದ್ಧಿಮಾತುಗಳಿಗೇನೂ ಕೊರತೆಯಿಲ್ಲ. ಕೆಲವು ಕೌಟುಂಬಿಕ ಆಪ್ತಸಲಹೆಗಾರರು, ತಾಪತ್ರಯಗಳಿರುವ ಪತಿಪತ್ನಿಯರಿಗೆ ಪ್ರತ್ಯೇಕಗೊಳ್ಳದಂತೆ ಸಲಹೆಕೊಟ್ಟರೆ ಇನ್ನಿತರ ಸಲಹೆಗಾರರು ಪ್ರತ್ಯೇಕಗೊಳ್ಳುವಂತೆ ಪ್ರೋತ್ಸಾಹಿಸಾರು. ಅಲ್ಲದೆ, ಇಂಥ ವಿಷಯಗಳ ಕುರಿತು ಸ್ವತಃ ಪರಿಣತರ ಅಭಿಪ್ರಾಯಗಳೇ ಬದಲಾಗುತ್ತವೆ. ದೃಷ್ಟಾಂತಕ್ಕೆ ಹದಿವಯಸ್ಕರ ಸಮಸ್ಯೆಗಳೊಂದಿಗೆ ವ್ಯವಹರಿಸುವ ಒಬ್ಬ ಪ್ರಸಿದ್ಧ ಚಿಕಿತ್ಸಕರು ತಮ್ಮ ವೃತ್ತಿಯ ಆರಂಭದಲ್ಲಿ ಅವರಿಗಿದ್ದ ಅಭಿಪ್ರಾಯವನ್ನು ತಿಳಿಸುತ್ತಾ 1994ರಲ್ಲಿ ಬರೆದದ್ದು: “ಅಸಂತೋಷದಿಂದ ಒಟ್ಟಿಗೆ ಜೀವಿಸುತ್ತಿರುವ ಅಪ್ಪಅಮ್ಮನೊಂದಿಗೆ ಇರುವ ಬದಲು ಪ್ರತ್ಯೇಕಗೊಂಡು ಸಂತೋಷದಿಂದಿರುವ ಒಂಟಿ ಅಪ್ಪ/ಅಮ್ಮನೊಂದಿಗೆ ಇರುವುದೇ ಮಕ್ಕಳಿಗೆ ಕ್ಷೇಮ; ಹಳಸಿಹೋಗಿರುವ ವಿವಾಹ ಜೀವನದಲ್ಲಿ ಹೆಣಗಾಡುವ ಬದಲು ವಿವಾಹ ವಿಚ್ಛೇದನವೇ ಉತ್ತಮವೆಂದು ನಾನಾಗ ಎಣಿಸುತ್ತಿದ್ದೆ.” ಆದರೆ ಇಪ್ಪತ್ತು ವರ್ಷಗಳ ಅನುಭವದ ನಂತರ ಈ ಚಿಕಿತ್ಸಕರ ಅಭಿಪ್ರಾಯ ಬದಲಾಯಿತು. ಅವರಂದದ್ದು: “ವಿಚ್ಛೇದವು ಅನೇಕ ಮಕ್ಕಳ ಮನಸ್ಸನ್ನು ಒಡೆದು ಚೂರುಚೂರಾಗಿಸುತ್ತದೆ.”
ಅಭಿಪ್ರಾಯಗಳೇನೋ ಬದಲಾಗುತ್ತಾ ಇರುವವು. ಆದರೆ ಅತ್ಯುತ್ತಮ ಬುದ್ಧಿವಾದವು ಯಾವಾಗಲೂ ಒಂದಲ್ಲ ಒಂದು ವಿಧದಲ್ಲಿ ದೇವರ ವಾಕ್ಯವಾದ ಬೈಬಲಿನ ತತ್ತ್ವಗಳ ಮೇಲೆ ಆಧಾರಿತವಾಗಿರುವುದು. ಈ ಲೇಖನಮಾಲೆಯನ್ನು ಓದುತ್ತಿರುವಾಗ, 3-8ನೇ ಪುಟಗಳ ಮೇಲ್ಭಾಗದಲ್ಲಿ ಒಂದು ಬೈಬಲ್ ಮೂಲತತ್ತ್ವ ಕೊಡಲಾಗಿರುವುದನ್ನು ನೀವು ಗಮನಿಸಿರಬಹುದು. ಇಂಥ ಮೂಲತತ್ತ್ವಗಳ ಸಹಾಯದಿಂದ ಅನೇಕ ಕುಟುಂಬಗಳು ನಿಜ ಯಶಸ್ಸನ್ನು ಪಡೆದಿವೆ. ಬೇರೆಲ್ಲರಂತೆ ಈ ಕುಟುಂಬಗಳಿಗೂ ಸಮಸ್ಯೆಗಳು ತಪ್ಪಿದ್ದಲ್ಲ. ಆದರೆ ವ್ಯತ್ಯಾಸವೇನೆಂದರೆ, ಬೈಬಲ್ ಅವರ ವೈವಾಹಿಕ ಮತ್ತು ಕೌಟುಂಬಿಕ ಜೀವನಕ್ಕೆ ಭದ್ರ ಬುನಾದಿಯನ್ನು ಹಾಕಿದೆ. ಇದರಲ್ಲಿ ಆಶ್ಚರ್ಯವೇನಿಲ್ಲ ಏಕೆಂದರೆ ಬೈಬಲಿನ ಗ್ರಂಥಕರ್ತನಾದ ಯೆಹೋವ ದೇವರೇ ಕುಟುಂಬದ ಮೂಲಕರ್ತನು.—2 ತಿಮೊಥೆಯ 3:16, 17.
ಹೀಗೆ ಮಾಡಿ. ಪುಟ 3-8ರ ಮೇಲ್ಭಾಗದಲ್ಲಿ ಉಲ್ಲೇಖಿಸಲಾಗಿರುವ ಬೈಬಲ್ ವಚನಗಳ ಒಂದು ಪಟ್ಟಿಮಾಡಿ. ನಿಮಗೆ ಸಹಾಯಮಾಡಿರುವ ಬೇರಾವುದೇ ಬೈಬಲ್ ವಚನಗಳನ್ನು ಅದಕ್ಕೆ ಸೇರಿಸಿ. ಈ ವಚನಗಳ ಪಟ್ಟಿಯನ್ನು ನಿಮ್ಮ ಕೈಗೆ ಸಿಗುವಂಥ ಜಾಗದಲ್ಲಿಟ್ಟು, ಆಗಾಗ್ಗೆ ಅದನ್ನು ತೆಗೆದು ಓದಿ.
ದೃಢನಿರ್ಣಯ ಮಾಡಿ. ನಿಮ್ಮ ಕುಟುಂಬ ಜೀವನದಲ್ಲಿ ಬೈಬಲನ್ನು ಅನ್ವಯಿಸಲು ನಿಶ್ಚಯಿಸಿರಿ. (g09-E 10)
[ಪುಟ 8, 9ರಲ್ಲಿರುವ ಚಿತ್ರ]
ಬೈಬಲ್ ಆಧಾರಿತ ಭದ್ರ ಬುನಾದಿಯಿರುವಲ್ಲಿ ನಿಮ್ಮ ಕುಟುಂಬವು ಬಿರುಗಾಳಿಯಂತಿರುವ ಸಮಸ್ಯೆಗಳ ಎದುರಲ್ಲೂ ಕುಸಿದುಬೀಳದು