ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಿಶ್ವ-ವೀಕ್ಷಣೆ

ವಿಶ್ವ-ವೀಕ್ಷಣೆ

ವಿಶ್ವ-ವೀಕ್ಷಣೆ

◼ “ಯುನೈಟೆಡ್‌ ಸ್ಟೇಟ್ಸ್‌ನಲ್ಲಿ ಹುಡುಗಿಯರ ಪೈಕಿ ಮೂವರಲ್ಲಿ ಒಬ್ಬರು 20ರ ಹರೆಯಕ್ಕೆ ಕಾಲಿಡುವ ಮೊದಲೇ ಬಸುರಾಗುತ್ತಾರೆ.”—ರೋಗ ನಿಯಂತ್ರಣ ಮತ್ತು ನಿರೋಧಕ ಕೇಂದ್ರಗಳು, ಯು.ಎಸ್‌.ಎ.

◼ “ಗೃಹಹಿಂಸಾಚಾರಕ್ಕೆ ಬಲಿಯಾದವರ” ಕುರಿತ ಯು.ಎಸ್‌. ಅಧ್ಯಯನದಲ್ಲಿ 420 ಪುರುಷರನ್ನು ಇಂಟರ್‌ವ್ಯೂ ಮಾಡಿದಾಗ ತಿಳಿದುಬಂದಂತೆ, ‘10ರಲ್ಲಿ 3 ಪುರುಷರು ತಮ್ಮ ಹೆಂಡತಿಯರಿಂದ ಹೊಡೆತಕ್ಕೋ ಇತರ ವಿಧಗಳ ದೌರ್ಜನ್ಯಕ್ಕೋ ಒಳಗಾಗುತ್ತಾರೆ.’—ಅಮೆರಿಕನ್‌ ಜರ್ನಲ್‌ ಆಫ್‌ ಪ್ರಿವೆಂಟಿವ್‌ ಮೆಡಿಸಿನ್‌.

ಮಕ್ಕಳು ಮತ್ತು ಬಹುಭಾಷೆ

ಚಿಕ್ಕ ಮಕ್ಕಳು ಇನ್ನೊಂದು ಭಾಷೆಯನ್ನು ಕಲಿಯತೊಡಗಿದರೆ ತಮ್ಮ ಮಾತೃಭಾಷೆ ಸರಿಯಾಗಿ ಕಲಿಯರು ಎಂಬ ಹೆದರಿಕೆ ಅನೇಕ ಹೆತ್ತವರಿಗಿದೆ. ಆದರೆ ಹಾಗಾಗುವುದಿಲ್ಲ ಎಂದು ಕೆನಡದ ಟೊರಾಂಟೊವಿನ ನರವಿಜ್ಞಾನಿ ಲಾರ-ಆ್ಯನ್‌ ಪೆಟಿಟೊ ಅವರು ನೇತೃತ್ವ ವಹಿಸಿರುವ ಒಂದು ಸಂಶೋಧನಾ ತಂಡ ಹೇಳುತ್ತದೆ. “ಹುಟ್ಟುವಾಗಲೇ ನಮ್ಮ ನರಕೋಶಗಳು . . . ಭಾಷೆ ಕಲಿಯಲು ಸಿದ್ಧವಾಗಿದ್ದು, ಬಹುಭಾಷೆಗಳನ್ನು ಕಲಿಯುವ ಸಾಮರ್ಥ್ಯವನ್ನೂ ಹೊಂದಿರುತ್ತವೆ” ಎನ್ನುತ್ತಾರೆ ಪೆಟಿಟೊ. ಶಾಲೆಗೆ ಹೋಗುವ ಮಕ್ಕಳಲ್ಲಿ ಯಾರು ಎರಡು ಭಾಷೆಗಳನ್ನಾಡುತ್ತಾರೋ ಅವರು ಒಂದೇ ಭಾಷೆಯನ್ನಾಡುವ ಮಕ್ಕಳಿಗಿಂತ ಹೆಚ್ಚು ಚುರುಕಾಗಿರುತ್ತಾರೆ. ಆದರೆ “ದ್ವಿಭಾಷಿಗಳಾಗಿರುವುದರಿಂದ ಬರುವ ಪ್ರಯೋಜನಗಳು ಮಕ್ಕಳಿಗೆ ಸಿಗಬೇಕಾದರೆ ಇನ್ನೊಂದು ಭಾಷೆಯನ್ನು ಕಲಿಸಲು ಹೆತ್ತವರು ಮುಂದಾಗಬೇಕು” ಎಂದು ಟೊರಾಂಟೊ ಸ್ಟಾರ್‌ ವಾರ್ತಾಪತ್ರಿಕೆ ತಿಳಿಸುತ್ತದೆ. (g09-E 10)

ಮಕ್ಕಳ ನೆಮ್ಮದಿಗೆಡಿಸುವ ಅಶ್ಲೀಲ ಚಿತ್ರಗಳು

ಮಕ್ಕಳು ಎಳೆಪ್ರಾಯದಲ್ಲೇ ಹಾನಿಕಾರಕ ಅಶ್ಲೀಲ ಚಿತ್ರಗಳು ಮತ್ತು ಹಿಂಸಾಚಾರ ತುಂಬಿರುವ ಇಂಟರ್‌ನೆಟ್‌ ವಿಡಿಯೊಗಳನ್ನು ನೋಡುತ್ತಿರುವುದು ಹೆಚ್ಚಾಗುತ್ತಿದೆ. ‘ಜರ್ಮನ್‌ ಅಸೋಸಿಏಷನ್‌ ಆಫ್‌ ಫಿಲಾಲಜಿಸ್ಟ್ಸ್‌’ ಅಧ್ಯಕ್ಷರಾದ ಹಿಂಟ್ಸ್‌-ಪೀಟರ್‌ ಮೈಡಿಂಜ ಹೇಳುವಂತೆ, 12 ವರ್ಷ ಮತ್ತು ಅದಕ್ಕೆ ಮೇಲ್ಪಟ್ಟ ಹುಡುಗರಿಗೆ ತುಂಬ ಹಿಂಸಾತ್ಮಕ ಅಥವಾ ಕೀಳ್ಮಟ್ಟದ ಅಶ್ಲೀಲ ಚಿತ್ರಗಳು ಯಾವ ವೆಬ್‌ಸೈಟ್‌ಗಳಲ್ಲಿವೆ ಮತ್ತು ಅಲ್ಲಿಗೆ ಹೇಗೆ ಹೋಗುವುದು ಎಂದು ಚೆನ್ನಾಗಿ ಗೊತ್ತಿದೆ. ಮೇಲ್ನೋಟಕ್ಕೆ ಮಕ್ಕಳಿಗೆ ಏನೂ ಆಗದಿರುವಂತೆ ತೋರಬಹುದಾದರೂ ಇಂಥ ವಿಷಯಗಳು ಅವರಿಗೆ ಆಘಾತವನ್ನುಂಟುಮಾಡಿ ನೆಮ್ಮದಿಗೆಡಿಸಿರುತ್ತವೆ. ಆದ್ದರಿಂದ ಹೆತ್ತವರು ತಮ್ಮ ಮಕ್ಕಳ ಮನಸ್ಸಿನಲ್ಲಿ ಮತ್ತು ಅವರ ಕಂಪ್ಯೂಟರ್‌ನಲ್ಲಿ ಏನಿದೆ ಎಂದು ತಿಳಿದುಕೊಳ್ಳುವಂತೆ ಮೈಡಿಂಜ ಉತ್ತೇಜಿಸುತ್ತಾರೆ. (g09-E 10)

ವಿಚ್ಛೇದಕ್ಕೆ ತಯಾರಿ

ಭಾವೀ ಸಂಗಾತಿ ನಿರ್ದಿಷ್ಟ ಜೀವನಶೈಲಿಯನ್ನೇ ಅನುಕರಿಸಬೇಕೆಂದು ಕರಾರನ್ನು ಮಾಡಿಕೊಳ್ಳುವವರು ಆಸ್ಟ್ರೇಲಿಯದಲ್ಲಿ ಹೆಚ್ಚುತ್ತಿದ್ದಾರೆ ಎನ್ನುತ್ತದೆ ಸಿಡ್ನಿಯ ಸಂಡೆ ಟೆಲಿಗ್ರಾಫ್‌. ಭವಿಷ್ಯದಲ್ಲಿ ಒಂದುವೇಳೆ ವಿವಾಹ ವಿಚ್ಛೇದವಾದಲ್ಲಿ ಆಸ್ತಿಯನ್ನು ಹೇಗೆ ಪಾಲುಮಾಡುವೆವೆಂದು ಸಾಮಾನ್ಯವಾಗಿ ಮದುವೆ ಮುಂಚಿನ ಕರಾರಿನಲ್ಲಿ ನಮೂದಿಸಲಾಗುತ್ತದೆ. ಆದರೆ ಈಗ ಅನೇಕ ಕರಾರುಗಳಲ್ಲಿ ವಿವಾಹಬಂಧ ಬಾಳಬೇಕಾದರೆ ಪತಿಪತ್ನಿ ಅನುಸರಿಸಬೇಕಾದ ಜೀವನಶೈಲಿಯನ್ನು ನಿರ್ದಿಷ್ಟವಾಗಿ ಹೇಳಲಾಗಿರುತ್ತದೆ. ಅದಲ್ಲದೆ ಯಾರು ಅಡುಗೆಮಾಡುವರು, ಶುಚಿಮಾಡುವರು, ಕಾರು ಚಲಾಯಿಸುವರು, ಮುದ್ದಿನ ಪ್ರಾಣಿಗಳನ್ನು ಇಡಬಹುದೋ ಇಲ್ಲವೋ, ಸಂಗಾತಿಯ ತೂಕ ಎಷ್ಟಿರಬೇಕು, ಯಾರು ನಾಯಿಯನ್ನು ಅಡ್ಡಾಡಿಸುವರು, ಕಸದ ಬುಟ್ಟಿ ಹೊರಗಿಡುವರು ಇತ್ಯಾದಿ ವಿಷಯಗಳು ಕರಾರಿನಲ್ಲಿ ಸೇರಿರಬಹುದು. ಜನರಲ್ಲಿ “ತಮ್ಮ ವಿವಾಹ ಸಂಬಂಧ ಜೀವನಪೂರ್ತಿ ಬಾಳುವುದೆಂಬ ನಂಬಿಕೆ ಕಡಿಮೆಯಾಗುತ್ತಿದೆ” ಎಂದು ವಕೀಲರಾದ ಕ್ರಿಸ್ಟಿನ್‌ ಜೆಫ್ರೆಸ್‌ ಹೇಳುತ್ತಾರೆ. (g09-E 10)

ವಾತ್ಸಲ್ಯ ತೋರಿಸಲು ಹೆಣಗಾಡುತ್ತಿರುವ ಹೆತ್ತವರು

“ಇಂದು ಹೆತ್ತವರಿಗೆ ತಮ್ಮ ಪುಟಾಣಿಗಳೊಂದಿಗೆ ಹೇಗೆ ವರ್ತಿಸಬೇಕೆಂಬದರ ಬಗ್ಗೆಯೂ ಕೈಪಿಡಿ ಬೇಕಾಗಿದೆ. ವಾತ್ಸಲ್ಯವನ್ನು ಸಹಜವಾಗಿ ತೋರಿಸುವುದು ಹೇಗೆಂದು ಅವರಿಗೆ ತಿಳಿದಿಲ್ಲವೆಂಬಂತೆ ಕಾಣುತ್ತದೆ” ಎಂದು ನ್ಯೂಸ್‌ವೀಕ್‌ ಪೊಲ್‌ಸ್ಕ ಎಂಬ ಪೋಲಿಷ್‌ ಪತ್ರಿಕೆ ಹೇಳುತ್ತದೆ. ಮಕ್ಕಳನ್ನು ಅಪ್ಪಿಕೊಳ್ಳುವುದು, ಅವರೊಂದಿಗೆ ಆಟವಾಡುವುದು, ಹಾಡುವುದು ಇಂಥ ಸಣ್ಣಪುಟ್ಟ ವಿಷಯಗಳನ್ನೂ ಹೆತ್ತವರಿಗೆ ಕಲಿಸಬೇಕಾಗಿದೆ. ಈ ಎಲ್ಲ ಚಟುವಟಿಕೆಗಳು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಅತ್ಯಗತ್ಯ. ಆದರೆ ಸಂಶೋಧನೆಗನುಸಾರ “ಪೋಲಿಷ್‌ ಕುಟುಂಬಗಳಲ್ಲಿ, ಹೆತ್ತವರು ಮಕ್ಕಳೊಂದಿಗೆ ಸಮಯ ಕಳೆಯುವ ವಿಧಗಳಲ್ಲಿ ಟಿವಿ ನೋಡುವುದು ಮತ್ತು ಶಾಪಿಂಗ್‌ ಮಾಡುವುದು ಮೊದಲ ಸ್ಥಾನದಲ್ಲಿದ್ದರೆ” ಒಟ್ಟಾಗಿ ಆಡುವುದಾದರೋ ಆರನೇ ಸ್ಥಾನದಲ್ಲಿದೆ. (g09-E 10)