ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸಿಳ್ಳು ಸಂಭಾಷಣೆಯ ಚಾತುರ್ಯ

ಸಿಳ್ಳು ಸಂಭಾಷಣೆಯ ಚಾತುರ್ಯ

ಸಿಳ್ಳು ಸಂಭಾಷಣೆಯ ಚಾತುರ್ಯ

ಮೆಕ್ಸಿಕೊದ ಎಚ್ಚರ! ವರದಿಗಾರರಿಂದ

◼ ಮೆಕ್ಸಿಕೊ ಶಹರದ ವಾಹಾಕಾ ಬೆಟ್ಟಪ್ರದೇಶಗಳ ಸ್ಥಳಿಕ ಮ್ಯಾಸಟೆಕ್‌ ಜನರಲ್ಲಿ ಟೆಲಿಫೋನ್‌, ಸೆಲ್‌ ಫೋನ್‌ ಅಥವಾ ಬೇರೆ ಯಾವುದೇ ರೀತಿಯ ಸಂಪರ್ಕ ಸಾಧನಗಳಿಲ್ಲ. ಆದರೂ ಎರಡು ಕಿಲೋಮೀಟರ್‌ ಅಥವಾ ಅದಕ್ಕಿಂತ ದೂರದಿಂದ ಅವರು ಒಬ್ಬರೊಂದಿಗೊಬ್ಬರು ಸಂಭಾಷಣೆ ಮಾಡಬಲ್ಲರು. ಉದಾಹರಣೆಗಾಗಿ, ಗುಡ್ಡದ ಬದಿಯ ಕಾಫಿತೋಟಗಳಲ್ಲಿ ಕೆಲಸಮಾಡುವಾಗ ಅವರು ದೂರದಲ್ಲಿ ಇರುವವರೊಂದಿಗೆ ಸಂಭಾಷಿಸುತ್ತಾರೆ. ಹೇಗೆ? ಬಹಳ ಕಾಲದ ಹಿಂದೆ ಮ್ಯಾಸಟೆಕ್‌ ನಿವಾಸಿಗಳು ಸಿಳ್ಳುಹೊಡೆದು ಸಂಭಾಷಿಸುವ ರೀತಿಯನ್ನು ಕಂಡುಹಿಡಿದರು. ಪೀಡ್ರೋ ಎಂಬ ಮ್ಯಾಸಟೆಕ್‌ ಯುವಕನೊಬ್ಬನು ಹೇಳುವುದು: “ಮ್ಯಾಸಟೆಕೊ ಒಂದು ನಾದ ಸಂಬಂಧಿತ ಭಾಷೆ. ಆದ್ದರಿಂದ ನಾವು ಸಿಳ್ಳುಹೊಡೆಯುವಾಗ, ಆಡುಭಾಷೆಯ ನಾದ ಮತ್ತು ತಾಳಗತಿಯ ಮಿಡಿತವನ್ನು ನಕಲು ಮಾಡುತ್ತೇವೆ. ಸಿಳ್ಳುಹೊಡೆಯಲು ನಮ್ಮ ಬೆರಳುಗಳನ್ನಲ್ಲ, ಕೇವಲ ತುಟಿಗಳನ್ನು ಬಳಸುತ್ತೇವೆ.” *

ಪೀಡ್ರೋನ ಸ್ನೇಹಿತನಾದ ಫೀಡೆನ್‌ಸ್ಯೋ ಸಿಳ್ಳೆ ಭಾಷೆಯ ಪ್ರಯೋಜನವನ್ನು ವಿವರಿಸುತ್ತಾನೆ: “ನಾವು ಈ ರೀತಿಯ ಸಂಪರ್ಕಸಾಧನವನ್ನು ದೂರದಲ್ಲಿರುವ ವ್ಯಕ್ತಿಗಳೊಂದಿಗೆ ಮಾತಾಡಲು ಮತ್ತು ಸಾಮಾನ್ಯವಾಗಿ ಚಿಕ್ಕ ಚಿಕ್ಕ ಸಂಭಾಷಣೆಗಳನ್ನು ಮಾಡಲು ಬಳಸುತ್ತೇವೆ. ಉದಾಹರಣೆಗೆ, ತಂದೆಯೊಬ್ಬನು ತನ್ನ ಮಗನನ್ನು ಬ್ರೆಡ್‌ ತರಲು ಅಂಗಡಿಗೆ ಕಳುಹಿಸುತ್ತಾನೆಂದು ನೆನಸಿ. ಆದರೆ ಟೊಮೇಟೊ ತರುವಂತೆ ಹೇಳಲು ಮರೆತುಬಿಡುತ್ತಾನೆ. ಮಗನು ತುಂಬ ದೂರ ಹೋಗಿದ್ದರೆ ಸಿಳ್ಳು ಮಾತಿನಿಂದಲೇ ಟೊಮೇಟೊ ತರುವಂತೆ ತಿಳಿಸುತ್ತಾನೆ.”

ಅಲ್ಲಿನ ಯೆಹೋವನ ಸಾಕ್ಷಿಗಳು ಸಹ ಕೆಲವೊಮ್ಮೆ ಪರಸ್ಪರ ಸಂಭಾಷಿಸುವಾಗ ಸಿಳ್ಳನ್ನು ಬಳಸುತ್ತಾರೆ. ಪೀಡ್ರೋ ವಿವರಿಸುವುದು: “ದೂರದೂರದ ಟೆರಿಟೊರಿಗಳಿಗೆ ನಾನು ಹೋಗುವಾಗ ಸಹೋದರನೊಬ್ಬನನ್ನು ಬರಹೇಳಲು ದೂರದಲ್ಲಿರುವ ಅವರ ಮನೆಗೆ ಹೋಗಿ ಕರೆಯಬೇಕೆಂದಿಲ್ಲ. ನಾನು ಸಿಳ್ಳೆಹೊಡೆದರೆ ಅವರಿಗೆ ಅರ್ಥವಾಗುತ್ತದೆ.”

ಅವನು ಮತ್ತೂ ಹೇಳುವುದು: “ಯಾರು ‘ಮಾತಾಡುತ್ತಿದ್ದಾರೆ’ ಎಂಬುದನ್ನು ಗುರುತುಹಿಡಿಯುವುದು ಕೂಡ ಕಷ್ಟವಲ್ಲ. ಏಕೆಂದರೆ ಪ್ರತಿಯೊಬ್ಬರಿಗೆ ಸಿಳ್ಳು ಹಾಕುವ ತಮ್ಮದೇ ಆದ ಶೈಲಿಯಿದೆ. ಸಿಳ್ಳು ಸಂಭಾಷಣೆಯನ್ನು ಸಾಮಾನ್ಯವಾಗಿ ಮ್ಯಾಸಟೆಕ್‌ ಪುರುಷರೇ ಬಳಸುತ್ತಾರೆ. ಸ್ತ್ರೀಯರಿಗೂ ಅದು ತಿಳಿದಿರಬಹುದು ಹಾಗೂ ಅವರು ಅದನ್ನು ತಮ್ಮ ಕುಟುಂಬದಲ್ಲಿ ಬಳಸಲೂಬಹುದು. ಆದರೆ ಅವರು ಗುರುತು ಪರಿಚಯವಿಲ್ಲದ ಯಾವನೇ ಪುರುಷನೊಂದಿಗೆ ಸಿಳ್ಳುಹೊಡೆದು ಮಾತಾಡುವುದಿಲ್ಲ. ಏಕೆಂದರೆ ಅದು ಅಸಭ್ಯ ಎಂದೆಣಿಸಲಾಗುತ್ತದೆ.”

ಸಿಳ್ಳು ಭಾಷೆ ಕೇವಲ ಮ್ಯಾಸಟೆಕ್‌ ನಿವಾಸಿಗಳಿಗೆ ಮೀಸಲಾದದ್ದಲ್ಲ. ಕ್ಯಾನರಿ ದ್ವೀಪಗಳು, ಚೀನ, ಮತ್ತು ಪಾಪುವ ನ್ಯೂಗಿನಿಯಲ್ಲೂ ಸಿಳ್ಳು ಭಾಷೆಯನ್ನಾಡುವವರಿದ್ದಾರೆ. ಈ ಜನರು ಮೂಲತಃ ಬೆಟ್ಟಪ್ರದೇಶ ಮತ್ತು ದಟ್ಟಾರಣ್ಯಗಳಲ್ಲಿ ವಾಸಿಸುವವರು. ವಾಸ್ತವದಲ್ಲಿ 70ಕ್ಕಿಂತಲೂ ಹೆಚ್ಚು ಸಿಳ್ಳು ಭಾಷೆಗಳಿವೆ ಎಂದು ಹೇಳುತ್ತಾರೆ. ಅವುಗಳಲ್ಲಿ ಕಡಿಮೆಪಕ್ಷ 12 ಭಾಷೆಗಳನ್ನು ಅಧ್ಯಯನಿಸಲಾಗಿದೆ.

ಮನುಷ್ಯನ ಈ ಸೃಜನಾತ್ಮಕ ಶಕ್ತಿಯ ಕುರಿತು ನಾವು ಬೆರಗಾಗದಿರಸಾಧ್ಯವಿಲ್ಲ. ನಿಶ್ಚಯವಾಗಿ ಸಿಳ್ಳು ಭಾಷಾ ಚಾತುರ್ಯವನ್ನು, ಸಂಭಾಷಣೆ ಮಾಡುವ ತೀವ್ರಾಸಕ್ತಿಯೊಂದಿಗೆ ಜೊತೆಗೂಡಿಸುವಲ್ಲಿ ಅದಕ್ಕಿರುವ ಏಕಮಾತ್ರ ಸೀಮಿತ ನಮ್ಮ ಊಹನೆಗಳೇ. ಆದರೆ ಆ ಊಹನೆಗಳು ತುದಿಮೊದಲಿಲ್ಲದವುಗಳು! (g 2/09)

[ಪಾದಟಿಪ್ಪಣಿ]

^ ಒಂದು ರೆಫರೆನ್ಸ್‌ ಕೃತಿಯು ಹೇಳುವುದು: “ಸಿಳ್ಳಿನ ವೇಗ, ಸ್ವರಭಾರ, ತೀವ್ರತೆಯ ಏರಿಳಿತಗಳ ಮೂಲಕ ಮ್ಯಾಸಟೆಕ್‌ ನಿವಾಸಿಗಳು ಪರಸ್ಪರ ಅನೇಕಾನೇಕ ವಿಚಾರಧಾರೆಗಳನ್ನು ಸಂಭಾಷಣಾ ರೂಪದಲ್ಲಿ ವಿನಿಮಯ ಮಾಡಶಕ್ತರು.”