ಕಲಿಕೆಯ ವಿಕಲತೆಯುಳ್ಳ ಮಕ್ಕಳಿಗೆ ಸಹಾಯ
ಕಲಿಕೆಯ ವಿಕಲತೆಯುಳ್ಳ ಮಕ್ಕಳಿಗೆ ಸಹಾಯ
ಮೆಕ್ಸಿಕೊದ ಎಚ್ಚರ! ಲೇಖಕರಿಂದ
ಸ್ಟೀವನ್‌ಗೆ ಓದಲು ಕಷ್ಟವಾಗುತ್ತದೆ. ಗಟ್ಟಿಯಾಗಿ ಓದಬೇಕೆಂದು ಕ್ಲಾಸ್‌ನಲ್ಲಿ ಹೇಳುವಾಗಲೆಲ್ಲಾ ಅವನಿಗೆ ಹೊಟ್ಟೆನೋವು ಶುರು.
ಮರೀಯಗೆ ಸರಿಯಾಗಿ ಬರೆಯಲು ಆಗುವುದಿಲ್ಲ. ಟೀಚರ್ ಎಷ್ಟು ಪ್ರಯತ್ನಿಸಿದರೂ ಸುಧಾರಣೆಯಿಲ್ಲ. ಹೋಮ್‌ವರ್ಕ್ ಮುಗಿಸಲು ಗಂಟೆಗಟ್ಟಲೆ ಕೂತಿರಬೇಕಾಗುತ್ತದೆ.
ನೋವ ಶಾಲೆಯ ಪಾಠಗಳನ್ನು ಪದೇ ಪದೇ ಓದುತ್ತಿರುತ್ತಾನೆ. ಆದರೂ ಅವನಿಗೆ ಮರೆತು ಹೋಗುತ್ತವೆ. ಗ್ರೇಡ್‌ಗಾಗಿ ಹೆಣಗಾಡುತ್ತಾನೆ.
ಸ್ಟೀವನ್, ಮರೀಯ ಮತ್ತು ನೋವ ಕಲಿಕೆಯ ವಿಕಲತೆಯಿಂದ ಬಳಲುತ್ತಿದ್ದಾರೆ. ಈ ವಿಕಲತೆಯಲ್ಲಿ ಓದುವುದರಲ್ಲಿ ಅಡಚಣೆ ಸರ್ವಸಾಮಾನ್ಯ. ಉದಾಹರಣೆಗೆ, ಡಿಸ್‌ಲೆಕ್ಸಿಯಾ ಅಥವಾ ಕಲಿಕೆಯ ವಿಕಲತೆಯಿಂದ ಬಳಲುವವರು ಒಂದೇ ತರ ತೋರುವ ಅಕ್ಷರಗಳಿಂದ ಗಲಿಬಿಲಿಗೊಳ್ಳುತ್ತಾರೆ. ಕಲಿಕೆಯ ಇತರ ವಿಕಲತೆಗಳು ಯಾವುವೆಂದರೆ ಬರವಣಿಗೆಯಲ್ಲಿ ಆಗುವ ಅಡಚಣೆ (ಡಿಸ್‌ಗ್ರಾಫಿಯಾ); ಗಣಿತದಲ್ಲಿ ಆಗುವ ಅಡಚಣೆ (ಡಿಸ್‌ಕ್ಯಾಲ್‌ಕ್ಯೂಲಿಯಾ). ಆದರೂ ಕಲಿಕೆಯ ವಿಕಲತೆಯಿರುವ ಹೆಚ್ಚಿನವರಿಗೆ ಸಾಧಾರಣ ಅಥವಾ ತುಸು ಹೆಚ್ಚಿನ ಬುದ್ಧಿಶಕ್ತಿ ಇರುತ್ತದೆ.
ಕಲಿಕೆಯ ವಿಕಲತೆಯ ಲಕ್ಷಣಗಳಲ್ಲಿ ಭಾಷಾ ಗ್ರಹಿಕೆಯ ತೊಡಕು, ಪ್ರಾಸ ಪದಗಳಲ್ಲಿ ಗಡಿಬಿಡಿ, ಶಬ್ದೋಚ್ಚಾರಣಾ ದೋಷ, ಸದಾ ತೊದಲುನುಡಿ, ಅಕ್ಷರ-ಅಂಕೆಗಳ ಕಲಿಕೆಯಲ್ಲಿ ಕಷ್ಟ, ಸರಳ ಪದಗಳಲ್ಲಿರುವ ಅಕ್ಷರಗಳ ಉಚ್ಚರಣಾ ದೋಷ, ಏಕರೀತಿ ಧ್ವನಿಸುವ ಶಬ್ದಗಳಲ್ಲಿ ಗಲಿಬಿಲಿ, ಅಪ್ಪಣೆಗಳನ್ನು ಪಾಲಿಸಲು ಅಸಮರ್ಥತೆ ಇತ್ಯಾದಿ ಸೇರಿವೆ. *
ನಿಮ್ಮ ಮಕ್ಕಳಿಗೆ ನೆರವಾಗಿ
ನಿಮ್ಮ ಮಗುವಿಗೆ ಕಲಿಕೆಯ ವಿಕಲತೆ ಇದೆಯೆಂದು ಕಂಡಲ್ಲಿ ನೀವೇನು ಮಾಡಬಹುದು? ಅದಕ್ಕೆ ಕಾರಣವನ್ನು ತಿಳುಕೊಳ್ಳಲಿಕ್ಕಾಗಿ ಮೊದಲು ನಿಮ್ಮ ಮಗುವಿಗೆ ಶ್ರವಣ ಮತ್ತು ದೃಷ್ಟಿದೋಷ ಇದೆಯೋ ಎಂದು ಪರೀಕ್ಷೆಮಾಡಿಸಿ. ಅನಂತರ ವೈದ್ಯಕೀಯ ಅಭಿಪ್ರಾಯವನ್ನು ಕೇಳಿನೋಡಿ. ನಿಮ್ಮ ಮಗುವಿಗೆ ಕಲಿಕೆಯ ವಿಕಲತೆಯಿದೆ ಎಂದು ತಿಳಿದಲ್ಲಿ ನಿಮ್ಮ ಭಾವನಾತ್ಮಕ ಬೆಂಬಲವು ಅವನಿಗೆ ಬೇಕು. * ಮಗುವಿನ ಕಲಿಕೆಯ ವಿಕಲತೆಯು ಬುದ್ಧಿಮಾಂದ್ಯಕ್ಕೆ ಸಂಬಂಧಿಸಿಲ್ಲವೆಂಬುದನ್ನು ಮಾತ್ರ ಮರೆಯದಿರಿ.
ನಿಮ್ಮ ಮಗುವಿನ ಶಾಲೆಯಲ್ಲಿ ಇರಬಹುದಾದ ಟ್ಯೂಷನೇ ಮುಂತಾದ ಯಾವುದೇ ವಿಶೇಷ ಸವಲತ್ತಿನ ಸದುಪಯೋಗ ಮಾಡಿ. ಅವನ ಅಧ್ಯಾಪಕರ ಸಹಕಾರವನ್ನು ಕೋರಿರಿ. ಕ್ಲಾಸ್‌ನ ಮುಂದಿನ ಬೆಂಚಿನಲ್ಲಿ ಅವನು ಕೂತಿರುವಂತೆ ಅವರು ಅನುಮತಿಸಬಹುದು. ತನ್ನ ಪಾಠ-ನೋಟ್ಸ್‌ಗಳನ್ನು ಮಾಡಿ ಮುಗಿಸುವಂತೆ ಹೆಚ್ಚು ಸಮಯ ಕೊಡಬಹುದು. ಅಧ್ಯಾಪಕರು ಅವನಿಗೆ ಲಿಖಿತ ಹಾಗೂ ಮೌಖಿಕ ಸಲಹೆಸೂಚನೆಗಳನ್ನು ಕೊಡಸಾಧ್ಯವಿದೆ. ಮೌಖಿಕ ಪರೀಕ್ಷೆಯನ್ನು ನೀಡಬಹುದು. ಕಲಿಕೆಯ ವಿಕಲತೆಯುಳ್ಳ ಮಕ್ಕಳಲ್ಲಿ ಅಸ್ತವ್ಯಸ್ಥತೆ ಮತ್ತು ಮರೆವು ಹೆಚ್ಚಾಗಿರುವುದರಿಂದ ಅವರಿಗೆ ಮನೆಯಲ್ಲಿ ಪಠ್ಯಪುಸ್ತಕಗಳ ಇನ್ನೊಂದು ಸೆಟ್ ಇಡುವುದು ಒಳ್ಳೆಯದು. ಕ್ಲಾಸಿನಲ್ಲಿ ಅಥವಾ ಮನೆಯಲ್ಲಿ ಉಪಯೋಗಿಸಲು ಸ್ಪೆಲ್-ಚೆಕ್ ಇರುವ ಕಂಪ್ಯೂಟರ್ ಲಭ್ಯವಿರುವಂತೆಯೂ ಮಾಡಬಹುದು.
ಪ್ರತಿದಿನ ಸ್ವಲ್ಪ ಸಮಯ ನಿಮ್ಮ ಮಗುವನ್ನು ಓದಿಸಿ. ಕಲಿಕೆಯ ವಿಕಲತೆಯುಳ್ಳ ಮಗು ಗಟ್ಟಿಯಾಗಿ ಓದುವಂತೆ ಮಾಡುವುದು ಒಳ್ಳೆಯದು. ಏಕೆಂದರೆ ಹೆತ್ತವರಾದ ನಿಮಗೆ ಅವರು ಓದುವುದನ್ನು ತಿದ್ದಲು ಹಾಗೂ ಸಲಹೆ ನೀಡಲು ಅವಕಾಶ ಸಿಗುತ್ತದೆ. ಮೊದಲು ನೀವೇ ಅದನ್ನು ಗಟ್ಟಿಯಾಗಿ ಓದಿ. ಮಗು ನಿಮ್ಮೊಂದಿಗೆ ಹಿಂಬಾಲಿಸುತ್ತಾ ಓದಲಿ. ಆಮೇಲೆ ಒಟ್ಟಾಗಿ ಅದೇ ವಾಕ್ಯವನ್ನು ಗಟ್ಟಿಯಾಗಿ ಓದಿರಿ. ಅನಂತರ ಮಗು ತಾನಾಗಿಯೇ ಅದನ್ನು ಓದಲಿ. ಅವನು ಪ್ರತಿ ಸಾಲಿನ ಕೆಳಗೆ ರೂಲರ್ ಇಟ್ಟು ಓದುವಂತೆ ಹೇಳಿ ಮತ್ತು ಕಷ್ಟ ಶಬ್ದಗಳಿಗೆ ಗುರುತು ಹಾಕಿಸಿ. ಈ ಪಾಠಕ್ಕೆ ದಿನದಲ್ಲಿ ಕೇವಲ 15 ನಿಮಿಷ ಬೇಕಾದೀತು.
ಗಣಿತ ಪಾಠಗಳನ್ನು ವ್ಯಾವಹಾರಿಕ ರೀತಿಯಲ್ಲಿ ಕಲಿಸಸಾಧ್ಯವಿದೆ. ಪಾಕ ವಿಧಾನಗಳಲ್ಲಿ ಬಳಸುವ ವಸ್ತುಗಳನ್ನು ಅಳೆಯುವಾಗ, ಮರದ ಕೆಲಸದಲ್ಲಿ ರೂಲರ್ ಉಪಯೋಗಿಸುವಾಗ ಅಥವಾ ಶಾಪಿಂಗ್ ಮಾಡುವಾಗ ಲೆಕ್ಕಿಸುವುದನ್ನು ಕಲಿಸಸಾಧ್ಯವಿದೆ. ಗಣಿತ ಸಮಸ್ಯೆಗಳನ್ನು ಬಿಡಿಸುವಾಗ ಗ್ರ್ಯಾಫ್ ಪೇಪರ್ ಮತ್ತು ರೇಖಾಚಿತ್ರಗಳು ಸಹಾಯಕರವಾಗಬಹುದು. ಬರವಣಿಗಾ ದೋಷವಿರುವಲ್ಲಿ ಅಗಲಗೆರೆಯುಳ್ಳ ಕಾಗದ ಅಥವಾ ದಪ್ಪಮೊನೆಯ ಪೆನ್ಸಿಲ್ ಬಳಸಿ. ಲೋಹದ ತಗಡಿನ ಮೇಲೆ ಅಯಸ್ಕಾಂತ ಅಕ್ಷರಗಳನ್ನು ಏರ್ಪಡಿಸುವ ಮೂಲಕ ಮಗುವಿಗೆ ಕಾಗುಣಿತವನ್ನು ಕಲಿಸಲು ನೆರವಾಗಬಹುದು.
ADHDಯೊಂದಿಗೆ ವ್ಯವಹರಿಸಲು ಬೇರೆ ಅನೇಕ ಉಪಯುಕ್ತ ಕಾರ್ಯವಿಧಾನಗಳೂ ಇವೆ. ಗಮನ-ದೋಷವಿರುವ ಮಗುವಿನೊಂದಿಗೆ ಮಾತಾಡುವ ಮೊದಲು ದೃಷ್ಟಿಸಂಪರ್ಕ ಮಾಡಿರಿ. ಹೋಮ್-ವರ್ಕ್ ಮಾಡಲು ಸದ್ದುಗದ್ದಲವಿಲ್ಲದ ಸ್ಥಳವನ್ನು ಒದಗಿಸಿ. ಮಧ್ಯೆ ಮಧ್ಯೆ ಮಗು ವಿರಾಮ ತಕ್ಕೊಳ್ಳುವಂತೆ ಬಿಡಿ. ನಾಯಿಮರಿಯನ್ನು ಹೊರಗೆ ಒಯ್ಯುವುದೇ ಮುಂತಾದ ಚಟುವಟಿಕೆಯಲ್ಲಿ ಒಳಗೂಡಿಸುವ ಮೂಲಕ ಅವರ ಅತಿರೇಕ ಚುರುಕುತನವನ್ನು ಸರಿಯಾಗಿ ಮಾರ್ಗದರ್ಶಿಸಬಹುದು.
ಯಶಸ್ಸು ಶಕ್ಯ
ನಿಮ್ಮ ಮಗುವಿನ ಶಕ್ತ್ಯಾನುಸಾರ, ಅವನಿಗಿರುವ ಯಾವುದೇ ಸಾಮರ್ಥ್ಯ ಅಥವಾ ಪ್ರತಿಭೆಯನ್ನು ಬೆನ್ನುತಟ್ಟಿ ಪ್ರೋತ್ಸಾಹಿಸಿ. ಅವನ ಯಾವುದೇ ಸಾಧನೆಗಳನ್ನು ಅವೆಷ್ಟೇ ಚಿಕ್ಕದಿರಲಿ ಅವನ್ನು ಹೊಗಳಿ ಬಹುಮಾನಿಸಿ. ದೊಡ್ಡ ಕೆಲಸಗಳನ್ನು ಚಿಕ್ಕಚಿಕ್ಕದಾಗಿಯೂ ಅವನಿಗೆ ಮಾಡಲು ಹೆಚ್ಚು ಸುಲಭವಾಗುವಂತೆಯೂ ಇಡುವ ಮೂಲಕ ಅವನು ತನ್ನ ಸಾಧನೆಯಲ್ಲಿ ಹಿಗ್ಗುವಂತೆ ಮಾಡಸಾಧ್ಯವಿದೆ. ಒಂದು ಕೆಲಸವನ್ನು ಮುಗಿಸಲು ಅವನು ತಕ್ಕೊಳ್ಳಬೇಕಾದ ಹೆಜ್ಜೆಗಳನ್ನು ಚಿತ್ರಗಳಿಂದ ಅಥವಾ ರೇಖಾಚಿತ್ರಗಳಿಂದ ತೋರಿಸಿರಿ.
ಯುವಕರಿಗೆ ಮೂಲಭೂತ ವಾಚನ, ಬರವಣಿಗೆ ಮತ್ತು ಗಣಿತದಲ್ಲಿ ಪ್ರಾವೀಣ್ಯವು ಅತ್ಯಾವಶ್ಯಕ. ಸೂಕ್ತ ಪ್ರಚೋದನೆ ಮತ್ತು ಸಹಾಯ ಕೊಡಲ್ಪಟ್ಟಲ್ಲಿ ನಿಮ್ಮ ಮಗುವು ಕಲಿಯಬಲ್ಲದು. ಅದನ್ನು ಒಂದುವೇಳೆ ಅವನು ಬೇರೆ ರೀತಿಯಲ್ಲಿ ಮಾಡಾನು ಮತ್ತು ಇತರರಿಗಿಂತ ಹೆಚ್ಚು ಸಮಯ ತಕ್ಕೊಂಡಾನು. ಆದರೆ ಕಲಿಯಬಲ್ಲನು ನಿಶ್ಚಯ. (g 1/09)
[ಪಾದಟಿಪ್ಪಣಿಗಳು]
^ ಕಲಿಕೆಯ ವಿಕಲತೆಗಳು ಹೆಚ್ಚಾಗಿ ಗಮನರಹಿತ ಅತಿಚೇಷ್ಟೆ ದೋಷ (ADHD)ದಿಂದ ಕೂಡಿರುತ್ತವೆ. ಅತಿರೇಕ ಚೇಷ್ಟೆ, ಆವೇಗಪರ ಪ್ರವೃತ್ತಿ ಮತ್ತು ಏಕಾಗ್ರತೆಯ ಕೊರತೆಯೇ ಅದರ ಗುಣಲಕ್ಷಣಗಳು. 1997, ಮಾರ್ಚ್ 8ರ ಎಚ್ಚರ! ಪುಟ 5-10 ನೋಡಿ.
^ ಈ ಲೇಖನದಲ್ಲಿ ಪುಲ್ಲಿಂಗ ಪ್ರಯೋಗಿಸಿರುವುದು ಏಕೆಂದರೆ ಡಿಸ್‌ಲೆಕ್ಸಿಯಾ ಮತ್ತು ಅತಿಚೇಷ್ಟೆಯ ರೋಗಲಕ್ಷಣವು ಹುಡುಗಿಯರಿಗಿಂತ ಹುಡುಗರಲ್ಲಿ ಮೂರುಪಾಲು ಹೆಚ್ಚು ಎಂದು ಗೊತ್ತುಮಾಡಲಾಗಿದೆ.
[ಪುಟ 26ರಲ್ಲಿರುವ ಚೌಕ]
ಕಲಿಕಾ ವಿಕಲತೆಯೇ ದೊಡ್ಡ ಆಸ್ತಿ
“ಪುಸ್ತಕದಲ್ಲಿರುವ ಪದಗಳನ್ನು ನೋಡಿದಾಗ, ಅವು ಬರೇ ಅಕ್ರಮವಾಗಿ ಸುತ್ತಾಡುತ್ತಿರುವ ಅರ್ಥರಹಿತ ವಾಕ್ಯಗಳಂತೆ ಕಾಣುತ್ತಿದ್ದವು. ಅವು ಬೇರೆ ಯಾವುದೊ ವಿದೇಶಿ ಭಾಷೆಯೋ ಎಂಬಂತಿದ್ದವು. ಬೇರೆಯವರು ಅದನ್ನು ಗಟ್ಟಿಯಾಗಿ ಓದಿಹೇಳುವ ವರೆಗೂ ನನಗೆ ಸ್ವಲ್ಪವೂ ಅರ್ಥವಾಗಲಿಲ್ಲ. ಶಿಕ್ಷಕರು ನನ್ನನ್ನು ಸೋಮಾರಿ, ಅವಿಧೇಯ, ಪಾಠಕ್ಕೆ ಗಮನಕೊಡಲು ಪ್ರಯತ್ನಿಸದ ಹೆಡ್ಡ ಎಂದೆಣಿಸಿದರು. ಆದರೆ ಇದು ನಿಜಸಂಗತಿಯಲ್ಲ. ನಾನು ಚೆನ್ನಾಗಿ ಪಾಠ ಕೇಳುತ್ತಿದ್ದೆ. ಕಷ್ಟಪಟ್ಟು ಓದುತ್ತಿದ್ದೆ. ಆದರೆ ಓದುತ್ತಿದ್ದ ಮತ್ತು ಬರೆಯುತ್ತಿದ್ದ ವಿಷಯವನ್ನು ಗ್ರಹಿಸಿಕೊಳ್ಳಲು ಮಾತ್ರ ನನಗೆ ಕಷ್ಟವಾಗುತ್ತಿತ್ತು. ಗಣಿತದಂಥ ಇತರ ವಿಷಯಗಳು ನನಗೆ ಕಷ್ಟವಾಗುತ್ತಿರಲಿಲ್ಲ. ಮಗುವಾಗಿದ್ದಾಗ ಆಟೋಟಗಳು, ವೃತ್ತಿ ಕೌಶಲಗಳು, ಚಿತ್ರಕಲೆ ಮತ್ತು ಕೈಕೆಲಸಗಳನ್ನು ನಾನು ಬೇಗನೇ ಕಲಿತುಕೊಳ್ಳುತ್ತಿದ್ದೆ. ಎಷ್ಟರತನಕ ಓದುಬರಹವು ಅದರಲ್ಲಿ ಒಳಗೂಡಿರಲಿಲ್ಲವೋ ಅವುಗಳನ್ನು ನಾನು ಚೆನ್ನಾಗಿ ಮಾಡುತ್ತಿದ್ದೆ.
“ತದನಂತರ ನಾನು ಕೈಕಸುಬುಗಳನ್ನು ಮಾಡತೊಡಗಿದೆ. ಅದರಲ್ಲೇ ಕುಶಲಕರ್ಮಿಯಾದೆ. ಇದು ನನ್ನನ್ನು ಯೆಹೋವನ ಸಾಕ್ಷಿಗಳ ಐದು ಅಂತಾರಾಷ್ಟ್ರೀಯ ಕಟ್ಟಡ ನಿರ್ಮಾಣ ಯೋಜನೆಗಳಲ್ಲಿ ಕೆಲಸಮಾಡುವ ಸದವಕಾಶಕ್ಕೆ ನಡಿಸಿತು. ನನಗೆ ವಾಚನದಲ್ಲಿ ಹೆಚ್ಚು ಶ್ರಮಿಸಬೇಕಾಗಿದ್ದರಿಂದ, ನಾನು ಈ ಮೊದಲೇ ಏನನ್ನು ಓದಿದ್ದೆನೋ ಅದನ್ನು ನೆನಪಿಸ ಶಕ್ತನಾದೆ. ಬೈಬಲ್ ವಿದ್ಯಾರ್ಥಿಯಾದ ನನಗೆ ಕ್ರೈಸ್ತ ಶುಶ್ರೂಷೆಯಲ್ಲಿ ಇದು ತುಂಬ ಸಹಾಯಮಾಡಿದೆ. ಆದಕಾರಣ ಈ ವಿಕಲತೆಯನ್ನು ಬಲಹೀನತೆಯಾಗಿ ವೀಕ್ಷಿಸುವ ಬದಲು ದೊಡ್ಡ ಆಸ್ತಿಯಾಗಿ ವೀಕ್ಷಿಸುತ್ತೇನೆ.”—ಪೀಟರ್, ಡಿಸ್‌ಲೆಕ್ಸಿಯಾ ಪೀಡಿತ, ಯೆಹೋವನ ಸಾಕ್ಷಿಗಳ ಪೂರ್ಣಸಮಯದ ಸೇವಕ.
[ಪುಟ 25ರಲ್ಲಿರುವ ಚಿತ್ರ]
ಕಿವಿಗೊಟ್ಟು ಕೇಳುವಾಗ ಮಕ್ಕಳು ‘ಚಿತ್ರ ಟಿಪ್ಪಣಿ’ ಬರೆದು ಕಲಿಯುವುದರಲ್ಲಿ ಪ್ರವೀಣರಾಗಿರಬಲ್ಲರು