ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರು ಕಷ್ಟಸಂಕಟವನ್ನು ಅನುಮತಿಸುವುದೇಕೆ?

ದೇವರು ಕಷ್ಟಸಂಕಟವನ್ನು ಅನುಮತಿಸುವುದೇಕೆ?

ದೇವರು ಕಷ್ಟಸಂಕಟವನ್ನು ಅನುಮತಿಸುವುದೇಕೆ?

ಕೆಲವೊಮ್ಮೆ, “ಯಾಕೆ?” ಎಂದು ಕೇಳುತ್ತಿರುವ ವ್ಯಕ್ತಿಯು ಆ ಪ್ರಶ್ನೆಗೆ ಉತ್ತರವನ್ನು ಮಾತ್ರವಲ್ಲದೆ, ಸಾಂತ್ವನಕ್ಕಾಗಿಯೂ ಹಂಬಲಿಸುತ್ತಿರುತ್ತಾನೆ. ವಿಶೇಷವಾಗಿ ಅವರಿಗಾಗಿರುವ ಒಂದು ದೊಡ್ಡ ನಷ್ಟದಿಂದಾಗಿ ಆ ಪ್ರಶ್ನೆಯು ಕೇಳಲ್ಪಡುವಲ್ಲಿ, ಸಾಂತ್ವನವು ಬಹಳಷ್ಟು ಅಗತ್ಯವಾಗಿರುತ್ತದೆ. ಬೈಬಲ್‌ ಅಂಥ ಸಾಂತ್ವನವನ್ನು ಕೊಡುತ್ತದೊ? ಈ ವಿಷಯಕ್ಕೆ ಸಂಬಂಧಪಟ್ಟಿರುವ ಮೂರು ಪ್ರಮುಖ ಬೈಬಲ್‌ ಸತ್ಯಗಳನ್ನು ಪರಿಗಣಿಸಿರಿ.

ಪ್ರಥಮವಾಗಿ, ದೇವರು ಕಷ್ಟಸಂಕಟವನ್ನು ಏಕೆ ಅನುಮತಿಸುತ್ತಾನೆಂದು ಕೇಳುವುದು ತಪ್ಪಲ್ಲ. ಇಂಥ ಪ್ರಶ್ನೆಯನ್ನು ಕೇಳುವುದು, ತಮಗೆ ದೇವರಲ್ಲಿ ನಂಬಿಕೆಯಿಲ್ಲ ಇಲ್ಲವೆ ಗೌರವವಿಲ್ಲ ಎಂಬಂತೆ ತೋರುವುದೆಂದು ಕೆಲವರ ಚಿಂತೆ. ಆದರೆ ವಿಷಯವು ಹೀಗಿರುವುದಿಲ್ಲ. ವಾಸ್ತವದಲ್ಲಿ ನೀವು ಯಥಾರ್ಥ ಮನಸ್ಸಿನಿಂದ ಈ ಪ್ರಶ್ನೆ ಕೇಳುತ್ತಿರುವುದಾದರೆ, ನಿಮ್ಮಂತೆಯೇ ಬೇರೆಯವರೂ ಹೀಗೆ ಕೇಳಿದ್ದಾರೆಂದು ನಿಮಗೆ ತಿಳಿದಿರಲಿ. ನಂಬಿಗಸ್ತ ಪ್ರವಾದಿಯಾಗಿದ್ದ ಹಬಕ್ಕೂಕ ಎಂಬವನು ದೇವರಿಗೆ ಹೀಗೆ ಕೇಳಿದನು: “ಅನ್ಯಾಯವನ್ನು ನಾನು ನೋಡುವಂತೆ ಏಕೆ ಮಾಡುತ್ತೀ? ತಪ್ಪನ್ನು ಏಕೆ ಸಹಿಸುತ್ತೀ? ನಾಶವೂ ಹಿಂಸೆಯೂ ನನ್ನ ಮುಂದೆ ಇದೆ. ಹೋರಾಟವೂ ಒಡುಕೂ ಹೆಚ್ಚುತ್ತಲಿದೆ.” (ಹಬಕ್ಕೂಕ 1:⁠3, NIBV) ಹೀಗೆ ಕೇಳಿದ್ದಕ್ಕೆ ಯೆಹೋವ ದೇವರು ಹಬಕ್ಕೂಕನನ್ನು ಗದರಿಸಲಿಲ್ಲ. ಅದರ ಬದಲಿಗೆ, ಆ ನಂಬಿಗಸ್ತನು ಕೇಳಿದಂಥ ಪ್ರಶ್ನೆಗಳನ್ನು ನಾವೆಲ್ಲರೂ ಓದುವಂತೆ ಅವುಗಳನ್ನು ದಾಖಲಿಸಿಟ್ಟಿದ್ದಾನೆ.​—⁠ರೋಮಾಪುರ 15:⁠4.

ಎರಡನೆಯದಾಗಿ, ದುರ್ದೆಶೆಯಲ್ಲಿರುವ ನಿಮ್ಮ ಬಗ್ಗೆ ದೇವರಿಗೆ ಕಳಕಳಿಯಿದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಪ್ರಾಮುಖ್ಯ. ದೇವರು ತನ್ನನ್ನೇ ಮನುಷ್ಯರಿಂದ ದೂರವಿರಿಸಿಕೊಳ್ಳುವ ಒಬ್ಬ ನಿಗೂಢ ವ್ಯಕ್ತಿಯಲ್ಲ. ಆತನು “ನ್ಯಾಯವನ್ನು ಪ್ರೀತಿಸುತ್ತಾನೆ” ಮತ್ತು ದುಷ್ಟತನ ಹಾಗೂ ಅದರಿಂದುಂಟಾಗುವ ಕಷ್ಟಸಂಕಟವು ಆತನಿಗೆ ಅಸಹ್ಯವಾಗಿದೆ. (ಕೀರ್ತನೆ 37:​28, NIBV; ಜ್ಞಾನೋಕ್ತಿ 6:​16-19) ಹಿಂದೆ ನೋಹನ ದಿನಗಳಲ್ಲಿ, ಭೂಮಿಯ ಮೇಲೆ ಹಬ್ಬುತ್ತಿದ್ದ ಹಿಂಸಾಚಾರವನ್ನು ನೋಡಿ ದೇವರು “ತನ್ನ ಹೃದಯದಲ್ಲಿ ನೊಂದುಕೊಂಡನು.” (ಆದಿಕಾಂಡ 6:​5, 6) ದೇವರು ಬದಲಾಗಿಲ್ಲ. ಇಂದು ಲೋಕದಲ್ಲಿ ಏನು ನಡೆಯುತ್ತಿದೆಯೊ ಅದರ ಬಗ್ಗೆಯೂ ಆತನಿಗೆ ಹಾಗೆಯೇ ಅನಿಸುತ್ತದೆ.​—⁠ಮಲಾಕಿಯ 3:⁠6.

ಮೂರನೆಯದಾಗಿ, ದೇವರು ಎಂದಿಗೂ ದುಷ್ಟತನಕ್ಕೆ ಕಾರಣನಲ್ಲ. ಇದನ್ನು ಬೈಬಲ್‌ ಸ್ಪಷ್ಟವಾಗಿ ತಿಳಿಸುತ್ತದೆ. ಆದುದರಿಂದ, ಕೊಲೆ, ಭಯೋತ್ಪಾದನೆಗಳಂಥ ವಿಷಯಗಳಿಗೆ ದೇವರು ಕಾರಣನೆಂದು ಹೇಳುತ್ತಿರುವವರು, ಆತನ ಹೆಸರನ್ನು ಕೆಡಿಸುತ್ತಿದ್ದಾರೆ. ಯೋಬ 34:10 ಏನು ಹೇಳುತ್ತದೆಂಬುದನ್ನು ಗಮನಿಸಿರಿ: “ದೇವರು ಕೆಟ್ಟದ್ದನ್ನು ಮಾಡಾನೆಂಬ ಯೋಚನೆಯೂ ಸರ್ವಶಕ್ತನು ಅನ್ಯಾಯವನ್ನು ನಡಿಸಾನೆಂಬ ಭಾವನೆಯೂ ದೂರವಾಗಿರಲಿ!” ಆದುದರಿಂದ ನೀವು ಯಾವುದೇ ರೀತಿಯಲ್ಲಿ ಕೇಡನ್ನು ಅನುಭವಿಸಿರುವಲ್ಲಿ, ದೇವರು ಅದಕ್ಕೆ ಕಾರಣನಲ್ಲವೆಂದು ನೀವು ಖಾತ್ರಿಯಿಂದಿರಬಲ್ಲಿರಿ.

ಲೋಕವನ್ನು ಯಾರು ಆಳುತ್ತಿದ್ದಾನೆ?

ನಮಗೆ ಇಷ್ಟು ಮಾಹಿತಿ ಇದ್ದರೂ, ಇನ್ನೂ ಈ ಪ್ರಶ್ನೆ ಉಳಿದಿರುತ್ತದೆ: ಒಂದುವೇಳೆ ದೇವರು ಪ್ರೀತಿಪರನು, ನ್ಯಾಯವಂತನು, ಸರ್ವಶಕ್ತನು ಆಗಿರುವುದಾದರೆ ನಮ್ಮ ಸುತ್ತಲೂ ದುಷ್ಟತನ ಏಕೆ ಇದೆ? ಇದನ್ನು ಉತ್ತರಿಸುವ ಮೊದಲು, ಒಂದು ಸರ್ವಸಾಮಾನ್ಯ ತಪ್ಪಾಭಿಪ್ರಾಯವನ್ನು ತಿದ್ದಬೇಕಾಗಿದೆ. ಅದೇನೆಂದರೆ, ಈ ಲೋಕವನ್ನು ಸರ್ವಶಕ್ತ ದೇವರು ಆಳುತ್ತಿದ್ದಾನೆ, ಎಲ್ಲವನ್ನೂ ದೇವರೇ ನೇರವಾಗಿ ನಿಯಂತ್ರಿಸುತ್ತಿದ್ದಾನೆಂದು ಅನೇಕ ಜನರು ನೆನಸುತ್ತಾರೆ. “ವಿಶ್ವದಲ್ಲಿರುವ ಎಲ್ಲವನ್ನೂ, ಒಂದು ಚಿಕ್ಕ ಅಣುವನ್ನು ಸಹ ದೇವರು ನಿಯಂತ್ರಿಸುತ್ತಾನೆ” ಎಂದು ದೇವತಾಶಾಸ್ತ್ರ ಸೆಮಿನರಿಯೊಂದರ ಅಧ್ಯಕ್ಷನು ಹೇಳಿದನು. ಆದರೆ ಇದನ್ನು ಬೈಬಲ್‌ ನಿಜವಾಗಿ ಕಲಿಸುತ್ತದೊ?

ಖಂಡಿತವಾಗಿಯೂ ಇಲ್ಲ. ಈ ಲೋಕವನ್ನು ಯಾರು ಆಳುತ್ತಿದ್ದಾರೆಂಬುದರ ಕುರಿತು ಬೈಬಲ್‌ ನಿಜವಾಗಿ ಏನನ್ನು ತಿಳಿಸುತ್ತದೊ ಅದನ್ನು ತಿಳಿದು ಅನೇಕರು ಆಶ್ಚರ್ಯಪಟ್ಟಿದ್ದಾರೆ. ಉದಾಹರಣೆಗಾಗಿ, ಬೈಬಲ್‌ 1 ಯೋಹಾನ 5:19ರಲ್ಲಿ ಹೇಳುವುದು: “ಲೋಕವೆಲ್ಲವು ಕೆಡುಕನ ವಶದಲ್ಲಿ ಬಿದ್ದಿದೆ.” ಈ ಕೆಡುಕನು ಯಾರು? ಅವನು ಪಿಶಾಚನಾದ ಸೈತಾನನೆಂದು ಯೇಸು ಕ್ರಿಸ್ತನು ಗುರುತಿಸಿದನು. ಯೇಸು ಅವನನ್ನು “ಇಹಲೋಕಾಧಿಪತಿ” ಎಂದು ಕರೆದನು. (ಯೋಹಾನ 14:30) ಲೋಕದಲ್ಲಿ ಇಷ್ಟೊಂದು ದುಷ್ಟತನ ಮತ್ತು ಕಷ್ಟಸಂಕಟ ಏಕಿದೆಯೆಂದು ಇದು ಸೂಚಿಸುತ್ತದಲ್ಲವೊ? ಸೈತಾನನು ಕ್ರೂರತನ, ವಂಚನೆ ಮತ್ತು ದ್ವೇಷತುಂಬಿದವನಾಗಿದ್ದಾನೆ. ಈ ಗುಣಗಳೇ, ಇಂದು ಜನರು ಅನುಭವಿಸುತ್ತಿರುವ ಹೆಚ್ಚಿನ ಕಷ್ಟಸಂಕಟಕ್ಕೆ ಕಾರಣವಾಗಿವೆ. ಆದರೆ ದೇವರು ಸೈತಾನನಿಗೆ ಆಳುವಂತೆ ಅವಕಾಶಕೊಡುತ್ತಿರುವುದಾದರೂ ಏತಕ್ಕೆ?

ಏದೆನಿನಲ್ಲಿ ಎಬ್ಬಿಸಲ್ಪಟ್ಟ ವಿವಾದಾಂಶ

ಪ್ರೀತಿಪರನು ಹಾಗೂ ಸಮರ್ಥನಾಗಿರುವ ಒಬ್ಬ ತಂದೆಯು, ತನ್ನ ಮಕ್ಕಳಿಗೆ ಸುಳ್ಳುಹೇಳುತ್ತಾನೆ, ಅವರ ಮೇಲೆ ಅಧಿಕಾರ ಚಲಾಯಿಸುತ್ತಾನೆ ಮತ್ತು ಅವರಿಂದ ಒಳ್ಳೇ ವಿಷಯಗಳನ್ನು ತಡೆಹಿಡಿದಿದ್ದಾನೆಂದು ಯಾರಾದರೂ ಎಲ್ಲರ ಮುಂದೆ ಬಹಿರಂಗವಾಗಿ ಆರೋಪಹೊರಿಸುವಲ್ಲಿ, ಆ ತಂದೆಗೆ ಹೇಗನಿಸಬಹುದು? ಅವನು ಆರೋಪಹೊರಿಸಿದವನ ಮೇಲೆ ಹಲ್ಲೆಮಾಡುವ ಮೂಲಕ ಆ ಆರೋಪಗಳನ್ನು ಸುಳ್ಳೆಂದು ರುಜುಪಡಿಸುವನೊ? ಖಂಡಿತವಾಗಿಯೂ ಇಲ್ಲ! ಏಕೆಂದರೆ ಅವನು ಹಾಗೆ ಮಾಡಿದರೆ, ಅವನ ಮೇಲೆ ಹೊರಿಸಲಾಗಿರುವ ಆರೋಪಗಳು ನಿಜವೆಂದು ತೋರಿಸಿಕೊಟ್ಟಂತೆ ಆಗುವುದು.

ಈ ದೃಷ್ಟಾಂತವು, ಯೆಹೋವ ದೇವರು ತನ್ನ ವಿರುದ್ಧ ಒಡ್ಡಲಾದ ಸವಾಲಿನ ವಿಷಯದಲ್ಲಿ ಏನು ಮಾಡಿದನೆಂಬುದನ್ನು ವಿವರಿಸಲು ಸಹಾಯಮಾಡುತ್ತದೆ. ಏದೆನ್‌ ಎಂಬ ಸ್ಥಳದಲ್ಲಿ ಮಾನವ ಇತಿಹಾಸವು ಆರಂಭವಾದಾಗ ಯೆಹೋವನ ವಿರುದ್ಧ ಒಂದು ಸವಾಲನ್ನೊಡ್ಡಲಾಯಿತು. ಆ ಏದೆನ್‌ ತೋಟದಲ್ಲೇ, ದೇವರು ಪ್ರಪ್ರಥಮ ಮಾನವರಾದ ಆದಾಮಹವ್ವರಿಗೆ, ತನ್ನ ಭೂಮಕ್ಕಳಿಗಾಗಿರುವ ತನ್ನ ಅದ್ಭುತ ಕಾರ್ಯಯೋಜನೆಯನ್ನು ಪ್ರಕಟಿಸಿದನು. ಅಂದರೆ, ಅವರು ಬಹುಸಂತಾನವುಳ್ಳವರಾಗಿ ಹೆಚ್ಚಿ, ಭೂಮಿಯಲ್ಲಿ ತುಂಬಿಕೊಂಡು ಅದನ್ನು ವಶಮಾಡಿಕೊಳ್ಳಬೇಕಾಗಿತ್ತು. (ಆದಿಕಾಂಡ 1:28) ಅಲ್ಲದೆ, ಈ ರೋಮಾಂಚಕ ಕಾರ್ಯಯೋಜನೆ ಕೈಗೂಡುವುದನ್ನು ನೋಡಲು ದೇವರ ಕೋಟ್ಯನುಕೋಟಿ ಆತ್ಮಜೀವಿ ಪುತ್ರರಿಗೆ ತೀವ್ರಾಸಕ್ತಿಯಿತ್ತು.​—⁠ಯೋಬ 38:​4, 6; ದಾನಿಯೇಲ 7:⁠10.

ಉದಾರಭಾವದ ದೇವರಾಗಿರುವ ಯೆಹೋವನು, ಆದಾಮಹವ್ವರಿಗೆ ಒಂದು ಸುಂದರವಾದ ತೋಟವನ್ನು ಮನೆಯಾಗಿ ಕೊಟ್ಟನು ಮತ್ತು ಅದರಲ್ಲಿದ್ದ ಎಲ್ಲ ಸ್ವಾದಿಷ್ಟ ಹಣ್ಣುಗಳನ್ನು ಅವರು ತಿನ್ನಬಹುದಿತ್ತು. ಕೇವಲ ಒಂದೇ ಒಂದು ಮರವನ್ನು ಅವರು ಮುಟ್ಟಬಾರದಿತ್ತು. ಅದು, ‘ಒಳ್ಳೇದರ ಕೆಟ್ಟದ್ದರ ಅರುಹನ್ನು ಹುಟ್ಟಿಸುವ ಮರ’ ಆಗಿತ್ತು. ಆದಾಮಹವ್ವರು ಈ ಮರದ ಹಣ್ಣನ್ನು ತಿನ್ನದಿರುವ ಮೂಲಕ, ತಮ್ಮ ತಂದೆಗೆ ತನ್ನ ಮಕ್ಕಳಿಗಾಗಿ ಯಾವುದು ಒಳ್ಳೇದು ಯಾವುದು ಕೆಟ್ಟದ್ದು ಎಂಬುದನ್ನು ನಿರ್ಣಯಿಸುವ ಹಕ್ಕು ಇದೆ ಎಂಬುದನ್ನು ಅಂಗೀಕರಿಸುತ್ತೇವೆಂದು ಮತ್ತು ತಮಗೆ ಆತನಲ್ಲಿ ಪೂರ್ಣ ಭರವಸೆಯಿದೆ ಎಂಬುದನ್ನು ತೋರಿಸಬಹುದಿತ್ತು.​—⁠ಆದಿಕಾಂಡ 2:​16, 17.

ಆದರೆ ದುಃಖದ ಸಂಗತಿಯೇನೆಂದರೆ, ದೇವರ ಆತ್ಮಜೀವಿ ಪುತ್ರರಲ್ಲೊಬ್ಬನಿಗೆ, ಎಲ್ಲರೂ ತನ್ನನ್ನು ಆರಾಧಿಸಬೇಕೆಂಬ ಆಸೆಯಿತ್ತು. ಇದರಿಂದ ಪ್ರಚೋದಿತನಾಗಿ ಅವನು, ಹವ್ವಳಿಗೆ ನಿಷೇಧಿತ ಹಣ್ಣನ್ನು ತಿನ್ನುವಲ್ಲಿ ಅವಳು ಸಾಯುವದಿಲ್ಲ ಎಂದು ಹೇಳಿದನು. (ಆದಿಕಾಂಡ 2:17; 3:1-5) ಹೀಗೆ ಆ ದುಷ್ಟ ದೇವದೂತನಾದ ಸೈತಾನನು ನೇರವಾಗಿ ದೇವರ ವಿರುದ್ಧಯೆದ್ದನು ಮತ್ತು ಮೂಲತಃ ದೇವರನ್ನು ಸುಳ್ಳುಗಾರನೆಂದು ಕರೆದನು! ದೇವರು ಆದಾಮಹವ್ವರಿಂದ ಅತ್ಯಾವಶ್ಯಕವಾದ ಮಾಹಿತಿಯನ್ನು ಬಚ್ಚಿಟ್ಟಿದ್ದಾನೆಂದು ಸಹ ಸೈತಾನನು ಆರೋಪಿಸಿದನು. ಮಾನವರು, ತಮಗೇನು ಒಳ್ಳೇದು ಮತ್ತು ಏನು ಕೆಟ್ಟದ್ದು ಎಂಬುದನ್ನು ಸ್ವತಃ ಅವರೇ ನಿರ್ಣಯಿಸುವಂತೆ ಬಿಡಬೇಕೆಂಬುದು ಸೈತಾನನ ಸೂಚ್ಯಾರ್ಥವಾಗಿತ್ತು. ಸರಳವಾಗಿ ಹೇಳುವುದಾದರೆ, ದೇವರು ಅಧಿಪತಿಯಾಗಿರಲು ಮತ್ತು ತಂದೆಯಾಗಿರಲು ಯೋಗ್ಯನಲ್ಲವೆಂದು ಸೈತಾನನು ಆರೋಪಹೊರಿಸಿದನು. ಇದರಿಂದಾಗಿ, ದೇವರಿಗಿಂತ ತಾನೇ ಹೆಚ್ಚು ಚೆನ್ನಾಗಿ ಆಳಬಲ್ಲೆನೆಂಬುದು ಸೈತಾನನ ಸೂಚ್ಯಾರ್ಥವಾಗಿತ್ತು.

ಆ ಕುಟಿಲ ಹಾಗೂ ದ್ವೇಷಭರಿತ ಸುಳ್ಳುಗಳ ಮೂಲಕ ಆ ದೂತನು ತನ್ನನ್ನು ಪಿಶಾಚನಾದ ಸೈತಾನನನ್ನಾಗಿ ಮಾಡಿಕೊಂಡನು. ಸೈತಾನನು ಎಂಬುದರ ಅರ್ಥ “ಪ್ರತಿಭಟಕ” ಮತ್ತು ಪಿಶಾಚನು ಅಂದರೆ “ಮಿಥ್ಯಾಪವಾದಿ” ಎಂದಾಗಿದೆ. ಆದರೆ ಆದಾಮಹವ್ವರು ಏನು ಮಾಡಿದರು? ಅವರು ಕೂಡ ದೇವರಿಗೆ ಬೆನ್ನುಹಾಕಿ ಸೈತಾನನ ಪಕ್ಷಸೇರಿದರು.​—⁠ಆದಿಕಾಂಡ 3:⁠6.

ಯೆಹೋವನು ಆ ಕ್ಷಣವೇ ಆ ದಂಗೆಕೋರರನ್ನು ನಾಶಮಾಡಬಹುದಿತ್ತು. ಆದರೆ ಈಗಾಗಲೇ ದೃಷ್ಟಾಂತದಲ್ಲಿ ತಿಳಿಸಲ್ಪಟ್ಟಿರುವಂತೆ, ಈ ರೀತಿಯ ವಿವಾದಗಳು ಹಿಂಸಾತ್ಮಕ ಪ್ರತೀಕಾರದಿಂದ ಇತ್ಯರ್ಥವಾಗುವುದಿಲ್ಲ. ಅಲ್ಲದೆ, ಸೈತಾನನು ದೇವರಿಗೆ ಸವಾಲೆಸೆದಾಗ, ಕೋಟ್ಯನುಕೋಟಿ ದೇವದೂತರು ಕಿವಿಗೊಡುತ್ತಿದ್ದರೆಂಬುದನ್ನೂ ನೆನಪಿನಲ್ಲಿಡಿರಿ. ತದನಂತರ, ಪ್ರಕಟವಾಗಿರದ ಒಂದು ದೊಡ್ಡ ಸಂಖ್ಯೆಯ ದೂತರು ಸೈತಾನನ ದಂಗೆಯಲ್ಲಿ ಅವನೊಂದಿಗೆ ಜೊತೆಗೂಡಿದರು ಮತ್ತು ಹೀಗೆ ದೆವ್ವಗಳಾದರು.​—⁠ಮಾರ್ಕ 1:34; 2 ಪೇತ್ರ 2:4; ಯೂದ 6.

ದೇವರು ಏಕೆ ಮಧ್ಯಪ್ರವೇಶಿಸಿಲ್ಲ?

ಆದಾಮಹವ್ವರು ತಮ್ಮ ಸೃಷ್ಟಿಕರ್ತನನ್ನು ಬಿಟ್ಟು ಸ್ವತಂತ್ರರಾಗಲು ಆಯ್ಕೆಮಾಡುವಂತೆ ಸೈತಾನನು ಅವರನ್ನು ವಂಚಿಸುವ ಮೂಲಕ, ನಿಜವಾಗಿ ಸ್ವತಂತ್ರವಾಗಿರುವ ಒಂದು ಕುಟುಂಬವನ್ನಲ್ಲ ಬದಲಾಗಿ ತನ್ನ ಅಧಿಕಾರದ ಕೆಳಗಿರುವ ಕುಟುಂಬವನ್ನು ಸ್ಥಾಪಿಸಿದನು. ಈ ಕುಟುಂಬವು ತಿಳಿದೊ ತಿಳಿಯದೆಯೊ ತಮ್ಮ ‘ತಂದೆಯಾದ’ ಪಿಶಾಚನಿಂದ ಪ್ರಭಾವಿಸಲ್ಪಟ್ಟು, ತನ್ನದೇ ಆದ ಗುರಿಗಳನ್ನೂ ನಡತೆಯ ಮಟ್ಟಗಳನ್ನೂ ಆಯ್ಕೆಮಾಡಲಾರಂಭಿಸಿತು. (ಯೋಹಾನ 8:44) ಆದರೆ ಈ ರೀತಿಯ ಜೀವನ ಕ್ರಮವು ಅವರಿಗೆ ನಿಜ ಸ್ವಾತಂತ್ರ್ಯ ಮತ್ತು ಬಾಳುವ ಸಂತೋಷವನ್ನು ತರಲಿತ್ತೊ? ಇಲ್ಲವೆಂದು ಯೆಹೋವನಿಗೆ ಚೆನ್ನಾಗಿ ತಿಳಿದಿತ್ತು. ಹಾಗಿದ್ದರೂ, ಆ ದಂಗೆಕೋರರು ತಾವು ಆಯ್ಕೆಮಾಡಿದ್ದ ಸ್ವತಂತ್ರ ಜೀವನಕ್ರಮವನ್ನು ಬೆನ್ನಟ್ಟುವಂತೆ ಆತನು ಅವಕಾಶಕೊಟ್ಟನು. ಏಕೆಂದರೆ ಈ ರೀತಿಯಲ್ಲಿ ಮಾತ್ರವೇ, ಏದೆನಿನಲ್ಲಿ ಎಬ್ಬಿಸಲ್ಪಟ್ಟಿದ್ದ ವಿವಾದಾಂಶಗಳನ್ನು ಶಾಶ್ವತವಾಗಿಯೂ ಪೂರ್ಣವಾಗಿಯೂ ಇತ್ಯರ್ಥಗೊಳಿಸಸಾಧ್ಯವಿತ್ತು.

ಈಗ 6,000ಕ್ಕಿಂತಲೂ ಹೆಚ್ಚು ವರ್ಷಗಳಿಂದ ಮಾನವರು ಒಂದು ಜಾಗತಿಕ ವ್ಯವಸ್ಥೆಯನ್ನು ಕಟ್ಟಿ, ಎಲ್ಲ ವಿಧದ ಆಳ್ವಿಕೆ ಹಾಗೂ ನಡತೆಯ ನಿಯಮಾವಳಿಗಳನ್ನು ಪ್ರಯತ್ನಿಸಿದ್ದಾರೆ. ಇದರಿಂದ ದೊರೆತಿರುವ ಪ್ರತಿಫಲಗಳಿಂದ ನಿಮಗೆ ಹರ್ಷವಾಗುತ್ತದೊ? ಮಾನವ ಕುಟುಂಬವು ನಿಜವಾಗಿಯೂ ಸಂತೋಷ, ಶಾಂತಿ ಮತ್ತು ಐಕ್ಯದಿಂದಿದೆಯೊ? ಇಲ್ಲವೆಂಬುದು ಸುಸ್ಪಷ್ಟ! ಅದಕ್ಕೆ ಬದಲಾಗಿ, ಯುದ್ಧಗಳು, ಕ್ಷಾಮಗಳು, ನೈಸರ್ಗಿಕ ವಿಪತ್ತುಗಳು, ಕಾಯಿಲೆಗಳು ಮತ್ತು ಮರಣವು ಮಾನವಕುಲವನ್ನು ಪೀಡಿಸಿದೆ. ಮತ್ತು ಇದು, ಬೈಬಲ್‌ ತಿಳಿಸುವಂತೆಯೇ “ವ್ಯರ್ಥತ್ವ,” ‘ನರಳಾಟ,’ ಹಾಗೂ ‘ವೇದನೆಗೆ’ ನಡೆಸಿದೆ.​—⁠ರೋಮಾಪುರ 8:​19-22; ಪ್ರಸಂಗಿ 8:⁠9.

ಆದರೆ ಕೆಲವರು ಹೀಗೆ ಕೇಳಬಹುದು: ‘ಈ ಎಲ್ಲ ದುರಂತಗಳು ನಡೆಯದಂತೆ ದೇವರು ಏಕೆ ತಡೆಯಲಿಲ್ಲ?’ ಸತ್ಯಾಂಶವೇನೆಂದರೆ, ಒಂದುವೇಳೆ ದೇವರು ಹಾಗೆ ತಡೆಯುತ್ತಿದ್ದಲ್ಲಿ ಅದು ಅನ್ಯಾಯವಾಗುತ್ತಿತ್ತು ಮತ್ತು ದೇವರ ವಿರುದ್ಧ ದಂಗೆಯೇಳುವುದರಿಂದ ಯಾವ ದುಷ್ಪರಿಣಾಮಗಳೂ ಇರುವುದಿಲ್ಲ ಎಂದು ತೋರುವಂತೆ ಮಾಡಿ, ಆ ವಿವಾದಾಂಶವು ಅಸ್ಪಷ್ಟವಾಗುತ್ತಿತ್ತು. ಹೀಗಿರುವುದರಿಂದಲೇ, ಜನರು ತನ್ನ ಕಡೆಗೆ ತೋರಿಸುವ ಅವಿಧೇಯತೆಯಿಂದ ನೇರವಾಗಿ ಇಲ್ಲವೆ ಪರೋಕ್ಷವಾಗಿ ಫಲಿಸುವಂಥ ಎಲ್ಲ ಪಾತಕ ಮತ್ತು ದುರಂತಗಳನ್ನು ಯೆಹೋವನು ತೆರೆಯ ಹಿಂದೆ ನಿಂತು ತಡೆದುಹಿಡಿಯುವುದಿಲ್ಲ. * ಅಲ್ಲದೆ, ಆತನು ಹೀಗೆ ಮಾಡಿದರೆ, ಸೈತಾನನ ವ್ಯವಸ್ಥೆಯು ಯಶಸ್ಸನ್ನು ಹೊಂದಿದೆ ಮತ್ತು ಅದಕ್ಕೆ ಸಂತೋಷದ ಕೀಲಿಕೈ ಸಿಕ್ಕಿದೆ ಎಂಬ ಸುಳ್ಳನ್ನು ಬೆಂಬಲಿಸಿದಂತಾಗುವುದು. ಇದನ್ನು ಯೆಹೋವನು ಎಂದಿಗೂ ಮಾಡಲಾರನು! ಹೀಗಿದ್ದರೂ, ಭೂಮಿ ಮೇಲೆ ಏನು ನಡೆಯುತ್ತಿದೆಯೊ ಅದನ್ನು ನೋಡಿ ಯೆಹೋವನು ಭಾವಶೂನ್ಯನಾಗಿರುವುದಿಲ್ಲ. ವಾಸ್ತವದಲ್ಲಿ ಆತನು ತುಂಬ ಕಾರ್ಯಪ್ರವೃತ್ತನಾಗಿದ್ದಾನೆ. ಇದನ್ನೇ ನಾವೀಗ ಪರಿಗಣಿಸಲಿದ್ದೇವೆ.

“ನನ್ನ ತಂದೆಯು ಇಂದಿನವರೆಗೂ ಕೆಲಸಮಾಡುತ್ತಾನೆ”

ಯೇಸುವಿನ ಈ ಮಾತುಗಳು ತೋರಿಸುವುದೇನೆಂದರೆ, ದೇವರು ನಡೆಯುತ್ತಿರುವ ಘಟನೆಗಳನ್ನು ನೋಡುತ್ತಾ, ಸುಮ್ಮನೆ ಕೈಕಟ್ಟಿಕೊಂಡು ಕುಳಿತುಕೊಂಡಿಲ್ಲ. (ಯೋಹಾನ 5:17) ಅದರ ಬದಲಿಗೆ, ಏದೆನಿನಲ್ಲಿ ನಡೆದ ದಂಗೆಯ ಸಮಯದಿಂದ ಹಿಡಿದು ಆತನು ತುಂಬ ಕಾರ್ಯಮಗ್ನನಾಗಿದ್ದಾನೆ. ದೃಷ್ಟಾಂತಕ್ಕಾಗಿ, ಭವಿಷ್ಯದಲ್ಲಿ ಒಂದು ‘ಸಂತಾನವು’ ಸೈತಾನನನ್ನು ಮತ್ತು ಅವನ ಎಲ್ಲ ಬಂಟರನ್ನು ಜಜ್ಜಿಹಾಕುವುದೆಂಬ ತನ್ನ ವಾಗ್ದಾನವನ್ನು ದಾಖಲಿಸಿಡುವಂತೆ ಆತನು ಬೈಬಲ್‌ ಲೇಖಕರನ್ನು ಪ್ರೇರಿಸಿದನು. (ಆದಿಕಾಂಡ 3:15) ಅಷ್ಟುಮಾತ್ರವಲ್ಲದೆ, ಆ ಸಂತಾನದ ಮೂಲಕ ದೇವರು ಒಂದು ಸರಕಾರವನ್ನು, ಹೌದು ಒಂದು ಸ್ವರ್ಗೀಯ ರಾಜ್ಯವನ್ನು ರಚಿಸುವನು. ಆ ರಾಜ್ಯವು ವಿಧೇಯ ಮಾನವರನ್ನು ಆಶೀರ್ವದಿಸಿ, ಎಲ್ಲ ಕಷ್ಟಗಳನ್ನು ಮಾತ್ರವಲ್ಲ ಮರಣವನ್ನು ಸಹ ಕೊನೆಗಾಣಿಸುವುದು.​—⁠ಆದಿಕಾಂಡ 22:18; ಕೀರ್ತನೆ 46:9; 72:16; ಯೆಶಾಯ 25:8; 33:24; ದಾನಿಯೇಲ 7:​13, 14.

ಆ ಅದ್ಭುತಕರ ವಾಗ್ದಾನಗಳ ನೆರವೇರಿಕೆಗಾಗಿ ಯೆಹೋವನು ತೆಗೆದುಕೊಂಡ ಒಂದು ಹೆಜ್ಜೆಯೇನೆಂದರೆ, ಆ ರಾಜ್ಯದ ಪ್ರಧಾನ ರಾಜನಾಗಲಿದ್ದವನನ್ನು ಆತನು ಈ ಭೂಮಿಗೆ ಕಳುಹಿಸಿದನು. ಈತನು, ದೇವರ ಕುಮಾರನಾದ ಯೇಸು ಕ್ರಿಸ್ತನೇ ಆಗಿದ್ದಾನೆ. (ಗಲಾತ್ಯ 3:16) ಯೇಸು ತನಗಾಗಿ ದೇವರ ಉದ್ದೇಶವೇನಾಗಿತ್ತೊ ಅದಕ್ಕೆ ಹೊಂದಿಕೆಯಲ್ಲಿ ದೇವರ ರಾಜ್ಯದ ಕುರಿತಾಗಿ ಬೋಧಿಸುವುದರ ಮೇಲೆ ತನ್ನ ಗಮನವನ್ನು ಕೇಂದ್ರೀಕರಿಸಿದನು. (ಲೂಕ 4:43) ಕ್ರಿಸ್ತನು ಭೂಮಿ ಮೇಲಿದ್ದಾಗ ತನ್ನ ಕೃತ್ಯಗಳ ಮೂಲಕ, ಮುಂದೆ ತಾನು ಆ ರಾಜ್ಯದ ರಾಜನಾಗುವಾಗ ಏನೇನು ಮಾಡಲಿದ್ದಾನೆಂಬುದನ್ನು ತೋರಿಸಿಕೊಟ್ಟನು. ಉದಾಹರಣೆಗೆ, ಅವನು ಹಸಿದಿದ್ದ ಸಾವಿರಾರು ಜನರನ್ನು ಉಣಿಸಿದನು, ಅಸ್ವಸ್ಥರನ್ನು ಗುಣಪಡಿಸಿದನು, ಸತ್ತವರನ್ನು ಎಬ್ಬಿಸಿದನು ಮತ್ತು ಒಂದು ಪ್ರಚಂಡ ಬಿರುಗಾಳಿಯನ್ನು ಶಾಂತಗೊಳಿಸುವ ಮೂಲಕ ನೈಸರ್ಗಿಕ ಶಕ್ತಿಗಳ ಮೇಲೂ ತನಗಿರುವ ಅಧಿಕಾರವನ್ನು ತೋರಿಸಿಕೊಟ್ಟನು. (ಮತ್ತಾಯ 14:​14-21; ಮಾರ್ಕ 4:​37-39; ಯೋಹಾನ 11:​43, 44) ಯೇಸುವಿನ ಕುರಿತಾಗಿ ಬೈಬಲ್‌ ಹೀಗನ್ನುತ್ತದೆ: “ನಿಶ್ಚಯವಾಗಿ ದೇವರ ವಾಗ್ದಾನಗಳು ಎಷ್ಟಿದ್ದರೂ ಕ್ರಿಸ್ತನಲ್ಲೇ ದೃಢವಾಗುತ್ತವೆ.”​—⁠2 ಕೊರಿಂಥ 1:⁠20.

ಯೇಸುವಿಗೆ ಕಿವಿಗೊಟ್ಟು “ಲೋಕದೊಳಗಿಂದ” ಅಂದರೆ ಸೈತಾನನು ಆಳುವ ಆದರೆ ದೇವರಿಂದ ದೂರವಾಗಿರುವ ಈ ವಿಷಯಗಳ ವ್ಯವಸ್ಥೆಯಿಂದ ಹೊರಬರುವವರನ್ನು ಯೆಹೋವನ ಕುಟುಂಬಕ್ಕೆ ಸ್ವಾಗತಿಸಲಾಗುತ್ತದೆ. (ಯೋಹಾನ 15:19) ಸತ್ಯ ಕ್ರೈಸ್ತರ ಈ ಭೌಗೋಳಿಕ ಕುಟುಂಬವು ಪ್ರೀತಿಯಿಂದ ನಿಯಂತ್ರಿಸಲ್ಪಟ್ಟಿದೆ, ಶಾಂತಿಗೆ ಬದ್ಧವಾಗಿದೆ, ಮತ್ತು ಈ ಕುಟುಂಬದಲ್ಲಿರಬಹುದಾದ ಪೂರ್ವಾಗ್ರಹ ಹಾಗೂ ಜಾತಿಬೇಧದ ಎಲ್ಲ ಜಾಡುಗಳನ್ನು ಕಿತ್ತೆಸೆಯುವ ದೃಢನಿರ್ಧಾರದಿಂದ ಗುರುತಿಸಲ್ಪಟ್ಟಿದೆ.​—⁠ಮಲಾಕಿಯ 3:​17, 18; ಯೋಹಾನ 13:​34, 35.

ಸತ್ಯ ಕ್ರೈಸ್ತರು ಸದ್ಯದ ಲೋಕಕ್ಕೆ ತಮ್ಮ ಬೆಂಬಲವನ್ನು ಕೊಡುವ ಬದಲು ದೇವರ ರಾಜ್ಯವನ್ನು ಬೆಂಬಲಿಸುತ್ತಾರೆ ಮತ್ತು ಅದರ ಬಗ್ಗೆ ಘೋಷಿಸುತ್ತಾರೆ. ಇದನ್ನು ಅವರು, ಮತ್ತಾಯ 24:14ರಲ್ಲಿ ದಾಖಲಿಸಲಾಗಿರುವ ಯೇಸುವಿನ ಆಜ್ಞೆಗೆ ವಿಧೇಯತೆಯಲ್ಲಿ ಮಾಡುತ್ತಾರೆ. ಸ್ವಲ್ಪ ಯೋಚಿಸಿ: ಲೋಕವ್ಯಾಪಕವಾಗಿ ‘ದೇವರ ರಾಜ್ಯದ ಸುವಾರ್ತೆಯನ್ನು’ ಯಾರು ಸಾರುತ್ತಿದ್ದಾರೆ? ಒಂದು ಜಗದ್ವ್ಯಾಪಕ ಆಧ್ಯಾತ್ಮಿಕ ಕುಟುಂಬವಾಗಿದ್ದು, ಯುದ್ಧಗಳಲ್ಲಿ ಹಾಗೂ ಜನರ ಮಧ್ಯೆ ಒಡಕನ್ನುಂಟುಮಾಡುವ ರಾಷ್ಟ್ರೀಯ ಮತ್ತು ಜಾತೀಯ ಕಲಹಗಳಲ್ಲಿ ಒಳಗೂಡಲು ಯಾರು ನಿರಾಕರಿಸಿದ್ದಾರೆ? ದೇವರ ವಾಕ್ಯದ ಉನ್ನತ ಮಟ್ಟಗಳು ಜನಪ್ರಿಯವಾಗಿರಲಿ ಇಲ್ಲದಿರಲಿ, ಅವುಗಳಿಗನುಸಾರವೇ ನಡೆದುಕೊಳ್ಳುವವರು ಯಾರು? (1 ಯೋಹಾನ 5:⁠3) ಅನೇಕರು ಈ ಎಲ್ಲ ಗುಣಲಕ್ಷಣಗಳನ್ನು ಯೆಹೋವನ ಸಾಕ್ಷಿಗಳಲ್ಲಿ ಗಮನಿಸಿದ್ದಾರೆ. ಇದು ನಿಜವೊ ಎಂಬುದನ್ನು ದಯವಿಟ್ಟು ಸ್ವತಃ ನೀವೇ ಪರೀಕ್ಷಿಸಿ ನೋಡಿ.

ದೇವರ ಆಳ್ವಿಕೆಯ ಪಕ್ಷವಹಿಸುವ ನಿರ್ಣಯಮಾಡಿ!

ದೇವರಿಂದ ದೂರಸರಿದಿರುವ ಮತ್ತು ಸೈತಾನನಿಂದ ತಪ್ಪುದಾರಿಗೆಳೆಯಲ್ಪಟ್ಟಿರುವ ಮಾನವಕುಲವು ನಿರ್ಮಿಸಿರುವ ಜಾಗತಿಕ ವ್ಯವಸ್ಥೆಯು ಹೆಚ್ಚೆಚ್ಚು ದಾರಿದ್ರ್ಯ ಮತ್ತು ನಿರೀಕ್ಷಾಹೀನತೆಯನ್ನು ಹುಟ್ಟಿಸುತ್ತಿದೆ. ಈ ಭೂಮಿ ಸಹ ಹಾಳುಗೆಡವಲ್ಪಟ್ಟಿದೆ! ಇನ್ನೊಂದು ಬದಿಯಲ್ಲಿ, ಯೆಹೋವನು ಸ್ಥಾಪಿಸಿರುವ ಸ್ವರ್ಗೀಯ ಸರಕಾರವು ಮಿಲ್ಯಾಂತರ ಜನರ ಜೀವನಗಳನ್ನು ಬದಲಾಯಿಸಿ ಉತ್ತಮಗೊಳಿಸಿದೆ, ಮತ್ತು ಇದು ಪ್ರತಿಯೊಬ್ಬರಿಗೆ ಒಂದು ಖಚಿತವಾದ ನಿರೀಕ್ಷೆಯನ್ನು ಕೊಟ್ಟಿದೆ. (1 ತಿಮೊಥೆಯ 4:10) ಇವೆರಡರಲ್ಲಿ ನೀವು ಯಾವುದನ್ನು ಆಯ್ಕೆಮಾಡುವಿರಿ?

ನಿರ್ಣಯಮಾಡುವ ಸಮಯವು ಇದೇ ಆಗಿದೆ. ಏಕೆಂದರೆ ಸೈತಾನನು ಮತ್ತು ಅವನ ದುಷ್ಟ ಲೋಕವು ನಿತ್ಯನಿರಂತರಕ್ಕೂ ಮುಂದುವರಿಯುವಂತೆ ದೇವರು ಅನುಮತಿಸುವುದಿಲ್ಲ ಮತ್ತು ಈ ಭೂಮಿಯನ್ನು ಒಂದು ಪರದೈಸವಾಗಿ ಮಾಡಬೇಕೆಂಬ ದೇವರ ಮೂಲ ಉದ್ದೇಶವು ಬದಲಾಗಿಲ್ಲ. ಆದುದರಿಂದ, ಆತನ ರಾಜ್ಯ ಹಾಗೂ ಆ ರಾಜ್ಯದ ಬೆಂಬಲಿಗರು ಹೆಚ್ಚೆಚ್ಚು ಬಲಹೊಂದುತ್ತಾ ಹೋಗುವರು, ಆದರೆ ಅದೇ ಸಮಯದಲ್ಲಿ ಸೈತಾನನ ಹಿಡಿತದಲ್ಲಿರುವ ಲೋಕವು ಹೆಚ್ಚೆಚ್ಚು ‘ಪ್ರಸವವೇದನೆಪಡುತ್ತಾ,’ ಕೊನೆಗೆ ದೇವರಿಂದ ಅಂತ್ಯಗೊಳಿಸಲ್ಪಡುವುದು. (ಮತ್ತಾಯ 24:​3, 7, 8) ಆದುದರಿಂದ ನೀವು ಮನದಾಳದಿಂದ ದೇವರಿಗೆ, “ಯಾಕೆ?” ಎಂದು ಯಾಚಿಸಿರುವಲ್ಲಿ, ಬೈಬಲು ಕೊಡುವಂಥ ಸಾಂತ್ವನ ಹಾಗೂ ನಿರೀಕ್ಷೆಯ ಸಂದೇಶದಲ್ಲಿ ಭರವಸೆಯಿಡುವ ಮೂಲಕ ಆತನಿಗೆ ಕಿವಿಗೊಡಿರಿ. ಹೀಗೆ ಈಗಲೂ, ನಿಮ್ಮ ದುಃಖದ ಕಣ್ಣೀರು ಆನಂದ ಬಾಷ್ಪವಾಗಿ ಬದಲಾಗಬಲ್ಲವು.​—⁠ಮತ್ತಾಯ 5:⁠4; ಪ್ರಕಟನೆ 21:​3, 4. (g 11/06)

[ಪಾದಟಿಪ್ಪಣಿ]

^ ಆಗಿಂದಾಗ್ಗೆ ದೇವರು ಮಾನವ ವ್ಯವಹಾರಗಳಲ್ಲಿ ಮಧ್ಯಪ್ರವೇಶಿಸಿದ್ದಾನಾದರೂ, ಆತನ ಕೃತ್ಯಗಳು ಈ ಸದ್ಯದ ವ್ಯವಸ್ಥೆಯನ್ನು ಬೆಂಬಲಿಸುವವುಗಳಾಗಿರುವುದಿಲ್ಲ. ಬದಲಿಗೆ, ಅವು ಆತನ ಉದ್ದೇಶದ ನೆರವೇರಿಕೆಗೆ ಸಂಬಂಧಪಟ್ಟವುಗಳಾಗಿರುತ್ತವೆ.​—⁠ಲೂಕ 17:​26-30; ರೋಮಾಪುರ 9:​17-24.

[ಪುಟ 7ರಲ್ಲಿರುವ ಚಿತ್ರಗಳು]

ಮಾನವನ ಆಳ್ವಿಕೆಯ ಪರಿಣಾಮಗಳಿಂದ ನೀವು ತೃಪ್ತರಾಗಿದ್ದೀರೊ?

[ಕೃಪೆ]

ಮಗು: © J. B. Russell/Panos Pictures; ಅಳುತ್ತಿರುವ ಹೆಂಗಸು: © Paul Lowe/Panos Pictures

[ಪುಟ 8, 9ರಲ್ಲಿರುವ ಚಿತ್ರ]

ಯೇಸು ಪರದೈಸನ್ನು ಪುನಃಸ್ಥಾಪಿಸುವನು ಮತ್ತು ಮೃತರನ್ನು ಪುನಃ ಜೀವಕ್ಕೆ ತರುವನು