ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರಾಣಿಪ್ರಪಂಚದಲ್ಲಿ ಪಾಲನೆಪೋಷಣೆ

ಪ್ರಾಣಿಪ್ರಪಂಚದಲ್ಲಿ ಪಾಲನೆಪೋಷಣೆ

ಪ್ರಾಣಿಪ್ರಪಂಚದಲ್ಲಿ ಪಾಲನೆಪೋಷಣೆ

ಸ್ಪೆಯಿನ್‌ನಲ್ಲಿರುವ ಎಚ್ಚರ! ಲೇಖಕರಿಂದ

ಮಕ್ಕಳನ್ನು ಬೆಳೆಸುವುದರಲ್ಲಿ ಹೆತ್ತವರು ಅನೇಕವೇಳೆ ಸುಮಾರು ಎರಡು ದಶಕಗಳಷ್ಟು ಕಾಲವನ್ನು ವಿನಿಯೋಗಿಸುತ್ತಾರೆ. ಆದರೆ ಇನ್ನೊಂದು ಬದಿಯಲ್ಲಿ ಅನೇಕ ಪ್ರಾಣಿಗಳು, ಬೇಸಿಗೆ ಕಾಲದ ಕೇವಲ ಕೆಲವೇ ತಿಂಗಳುಗಳಲ್ಲಿ ತಮ್ಮ ಮರಿಗಳನ್ನು ಪೋಷಿಸಿ ತರಬೇತುಗೊಳಿಸುವ ಕಾರ್ಯಕ್ರಮವನ್ನು ಮುಗಿಸಬೇಕಾಗಿದೆ. ಪ್ರತಿ ವರುಷ ಮರಿಗಳುಳ್ಳ ಕೆಲವು ಪ್ರಾಣಿಗಳು ಪಡುವ ಕಠಿನ ಪ್ರಯಾಸವನ್ನು ದೃಷ್ಟಾಂತಿಸಲು ಕೆಲವು ಉದಾಹರಣೆಗಳನ್ನು ನೋಡೋಣ.

1. ಬಿಳಿ ಬಕಪಕ್ಷಿ ಬದಿಯಲ್ಲಿರುವ ಚಿತ್ರದಲ್ಲಿ ತೋರಿಸಲಾಗಿರುವ ಬಕಪಕ್ಷಿಗೆ ಬೇಸಿಗೆಯಲ್ಲಿ ವಿರಾಮವೇ ಇಲ್ಲ. ಹಸಿದ ಮರಿಗಳಿಗೆ ಕಪ್ಪೆಗಳು, ಚಿಕ್ಕ ಮೀನು, ಹಲ್ಲಿಗಳು ಅಥವಾ ಮಿಡತೆಗಳನ್ನು ಆಹಾರವಾಗಿ ಒದಗಿಸಲು ಅದು ಹತ್ತಿರದ ಸರೋವರಕ್ಕೆ ಪದೇ ಪದೇ ಹೋಗಿಬರುತ್ತಾ ಇರಬೇಕು. ಇದರೊಂದಿಗೆ, ಆಗಿಂದಾಗ್ಗೆ ತನ್ನ ಗೂಡನ್ನು ದುರಸ್ತುಪಡಿಸಬೇಕಾದ ಕೆಲಸವೂ ಅದಕ್ಕಿರುತ್ತದೆ. ತಾಯಿತಂದೆ ಪಕ್ಷಿಗಳೆರಡೂ ದಿನವಿಡೀ ಸರೋವರಕ್ಕೆ ಹೋಗಿಬರುತ್ತಾ ಇರುತ್ತವೆ. ಮರಿಗಳು ದೊಡ್ಡ ಪ್ರಮಾಣದಲ್ಲಿ ಆಹಾರವನ್ನು ಸೇವಿಸುತ್ತವೆ. ಮೊದಲ ಕೆಲವು ವಾರಗಳಲ್ಲೇ ಅವು ತಮ್ಮ ದೇಹತೂಕದ ಅರ್ಧದಷ್ಟು ಆಹಾರವನ್ನು ಸೇವಿಸಬಲ್ಲವು! ಮರಿಗಳು ಹಾರಲು ಕಲಿತ ನಂತರವೂ ಹಲವಾರು ವಾರಗಳ ವರೆಗೆ ತಮ್ಮ ತಾಯಿತಂದೆ ಪಕ್ಷಿಗಳನ್ನು ಅವಲಂಬಿಸಿರುತ್ತವೆ.

2. ಚೀತಾ ಚೀತಾಗಳ ಕುಟುಂಬಗಳು ಯಾವಾಗಲೂ ಒಂಟಿ-ಪಾಲಕ ಕುಟುಂಬಗಳಾಗಿವೆ. ಸಾಮಾನ್ಯವಾಗಿ ಕೇವಲ ತಾಯಿಚೀತಾ ಮರಿಗಳನ್ನು ಪಾಲಿಸುತ್ತದೆ. ಹೆಚ್ಚಾಗಿ ಇವಕ್ಕೆ ಮೂರರಿಂದ ಐದು ಮರಿಗಳಿರುತ್ತವೆ. ತನ್ನ ಮರಿಗಳಿಗೆ ಹಾಲುಣಿಸುವಷ್ಟು ಕಾಲ ತನಗೆ ಸಾಕಷ್ಟು ಪೋಷಣೆಯನ್ನು ಒದಗಿಸಿಕೊಳ್ಳಲು ತಾಯಿಚೀತಾ ಪ್ರತಿದಿನ ಬೇಟೆಯಾಡಬೇಕಾಗಿದೆ. ಇದೊಂದು ಸುಲಭದ ಕೆಲಸವಲ್ಲ, ಏಕೆಂದರೆ ಬೇಟೆಯಾಡಲು ಅದು ಮಾಡುವ ಹೆಚ್ಚಿನ ಪ್ರಯತ್ನಗಳು ವಿಫಲವಾಗುತ್ತವೆ. ಅಷ್ಟುಮಾತ್ರವಲ್ಲದೆ, ಸಿಂಹಗಳು ಯಾವಾಗಲೂ ಬಲಹೀನ ಮರಿಗಳನ್ನು ತಿಂದುಬಿಡಲು ಹೊಂಚುಹಾಕುವುದರಿಂದ ಪ್ರತಿ ಕೆಲವು ದಿನಗಳಿಗೊಮ್ಮೆ ಅದು ತನ್ನ ಮರಿಗಳನ್ನು ಬೇರೆ ಗುಹೆಗಳಿಗೆ ಸ್ಥಳಾಂತರಿಸುತ್ತಿರಬೇಕು. ಒಮ್ಮೆ ಮರಿಗಳು ಏಳು ತಿಂಗಳುಗಳಷ್ಟು ದೊಡ್ಡವುಗಳಾದ ನಂತರ ತಾಯಿಚೀತಾ ಅವುಗಳಿಗೆ ಬೇಟೆಯಾಡಲು ಕಲಿಸುತ್ತದೆ. ಇದು ಹೆಚ್ಚು ಸಮಯವನ್ನು ವ್ಯಯಮಾಡಬೇಕಾದ ಕೆಲಸವಾಗಿದೆ. ಇದಕ್ಕೆ, ಒಂದು ವರುಷ ಅಥವಾ ಅದಕ್ಕಿಂತಲೂ ಹೆಚ್ಚಿನ ಸಮಯ ತಗಲುತ್ತದೆ. ಮರಿಗಳು ಸಾಮಾನ್ಯವಾಗಿ ಒಂದರಿಂದ ಒಂದೂವರೆ ವರುಷಗಳ ವರೆಗೆ ತಮ್ಮ ತಾಯಿಯೊಂದಿಗೆ ಇರುತ್ತವೆ.

3. ಲಿಟಲ್‌ ಗ್ರೀಬು ಪಕ್ಷಿ ಗ್ರೀಬು ಪಕ್ಷಿಗಳು ಮತ್ತು ಅವುಗಳ ಮರಿಗಳು ಹೆಚ್ಚುಕಡಿಮೆ ಅಂಟಿಕೊಂಡೇ ಇರುತ್ತವೆಂದು ಹೇಳಬಹುದು. ಮರಿಗಳು ಮೊಟ್ಟೆಯಿಂದ ಹೊರಬಂದೊಡನೆ ಅವು ತಮ್ಮ ತೇಲುವ ಗೂಡನ್ನು ಬಿಟ್ಟು ತಮ್ಮ ತಂದೆತಾಯಿಯ ಬೆನ್ನೇರಿ ಹಾಯಾಗಿರುತ್ತವೆ. ಮರಿಗಳು ವಯಸ್ಕ ಪಕ್ಷಿಗಳ ರೆಕ್ಕೆಗಳ ಮತ್ತು ಬೆನ್ನುದಿಬ್ಬದ ಗರಿಗಳ ನಡುವೆ ಹತ್ತಿ ಕುಳಿತುಕೊಳ್ಳುತ್ತವೆ. ತಾಯಿಪಕ್ಷಿ ಅಥವಾ ತಂದೆಪಕ್ಷಿ ಈಜಾಡುತ್ತಿರುವಾಗ, ಮರಿಗಳು ಅದರ ಬೆನ್ನ ಮೇಲೆ ಬೆಚ್ಚಗಾಗಿಯೂ ಸುರಕ್ಷಿತವಾಗಿಯೂ ಇರುತ್ತವೆ. ತಂದೆ ಮತ್ತು ತಾಯಿ ಪಕ್ಷಿಯು ಸರದಿಯಾಗಿ ಆಹಾರವನ್ನು ಸಂಗ್ರಹಿಸಲಿಕ್ಕಾಗಿ ನೀರಿನೊಳಕ್ಕೆ ಹೋಗುತ್ತವೆ ಮತ್ತು ಮರಿಗಳನ್ನು ನೋಡಿಕೊಳ್ಳುವ ಕೆಲಸದಲ್ಲಿ ಪಾಲ್ಗೊಳ್ಳುತ್ತವೆ. ಅತಿ ಬೇಗನೆ ಮರಿಗಳು ಸ್ವತಃ ಈಜಲು ಮತ್ತು ಆಹಾರವನ್ನು ಕಂಡುಕೊಳ್ಳಲು ಕಲಿತುಕೊಳ್ಳುತ್ತವಾದರೂ, ತಂದೆತಾಯಿ ಪಕ್ಷಿಗಳೊಂದಿಗಿನ ಅವುಗಳ ಬಂಧವು ಸ್ವಲ್ಪ ಸಮಯದ ವರೆಗೆ ಮುಂದುವರಿಯುತ್ತದೆ.

4. ಜಿರಾಫೆ ಜಿರಾಫೆಗಳು ಒಂದು ಬಾರಿಗೆ ಕೇವಲ ಒಂದೇ ಮರಿಯನ್ನು ಹಾಕುತ್ತವೆ. ಇದೇಕೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಿಮಗೆ ಕಷ್ಟವಾಗಲಿಕ್ಕಿಲ್ಲ. ಮುಂದಿನ ಪುಟದಲ್ಲಿರುವ ಚಿತ್ರದಲ್ಲಿ ತೋರಿಸಲ್ಪಟ್ಟಿರುವಂತೆ ನವಜನಿತ ಜಿರಾಫೆಯ ತೂಕ ಸುಮಾರು 60 ಕಿಲೋಗ್ರ್ಯಾಮ್ಸ್‌ ಮತ್ತು ಎತ್ತರ ಎರಡು ಮೀಟರ್‌! ಅದು ಹುಟ್ಟಿದ ಒಂದು ತಾಸಿನೊಳಗೆ ಎದ್ದುನಿಲ್ಲುತ್ತದೆ ಮತ್ತು ತಾಯಿಯ ಹಾಲನ್ನು ಕುಡಿಯಲು ಆರಂಭಿಸುತ್ತದೆ. ಮರಿಯು ಹುಟ್ಟಿ ಸ್ವಲ್ಪ ಸಮಯದಲ್ಲೇ ಮೇಯಲು ಆರಂಭಿಸುತ್ತದಾದರೂ, ತಾಯಿ ಜಿರಾಫೆಯು ಅದಕ್ಕೆ ಒಂಬತ್ತು ತಿಂಗಳುಗಳ ವರೆಗೆ ಹಾಲುಣಿಸುತ್ತದೆ. ಎಳೆಯ ಜಿರಾಫೆಗೆ ಏನಾದರೂ ಗಂಡಾಂತರ ಕಂಡುಬಂದಲ್ಲಿ, ಅದು ತನ್ನ ತಾಯಿಯ ಕಾಲುಗಳ ಮಧ್ಯದಲ್ಲಿ ಬಂದು ನಿಲ್ಲುತ್ತದೆ. ಏಕೆಂದರೆ ಅದರ ತಾಯಿಯು ಶತ್ರುಗಳಿಗೆ ಕೊಡುವ ಬಲವಾದ ಒದೆತಗಳು, ಹೆಚ್ಚಿನ ಶತ್ರುಗಳಿಂದ ಅದಕ್ಕೆ ಅತ್ಯುತ್ತಮವಾದ ರಕ್ಷಣೆಯನ್ನು ಒದಗಿಸುತ್ತವೆ.

5. ಸಾಮಾನ್ಯ ಜಾತಿಯ ಮೀನ್ಚುಳ್ಳಿ ಮೀನ್ಚುಳ್ಳಿಗಳು ತಮ್ಮ ಮರಿಗಳಿಗಾಗಿ ಮೀನನ್ನು ಹಿಡಿಯುವಾಗ ದಕ್ಷತೆಯಿಂದ ಆಯ್ಕೆಮಾಡಿದಂಥದ್ದಾಗಿ ಇರಬೇಕು. ಒಂದರಿಂದ ಎರಡು ಸೆಂಟಿಮೀಟರ್‌ ಉದ್ದದ ಚಿಕ್ಕ ಮೀನುಗಳನ್ನು ತಂದೆತಾಯಿ ಪಕ್ಷಿಗಳೆರಡೂ ತಮ್ಮ ನವಜನಿತ ಮರಿಗಳಿಗಾಗಿ ಹಿಡಿದು ತರುತ್ತವೆ ಎಂದು ಪಕ್ಷಿ ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಅವು ಬಲು ಜಾಗರೂಕತೆಯಿಂದ, ಮೀನಿನ ತಲೆಯು ತಮ್ಮ ಕೊಕ್ಕಿನಿಂದ ಹೊರಬರುವಂಥ ರೀತಿಯಲ್ಲಿ ಹಿಡಿದು ತರುತ್ತವೆ. ಇದು, ಹಸಿವಿನಿಂದಿರುವ ಮರಿಗಳು ಮೊದಲು ಆ ಮೀನಿನ ತಲೆಯನ್ನು ಸುಲಭವಾಗಿ ನುಂಗುವಂತೆ ಸಹಾಯಮಾಡುತ್ತದೆ. ಮರಿಗಳು ಬೆಳೆದಂತೆ, ತಂದೆತಾಯಿ ಪಕ್ಷಿಗಳು ಅವುಗಳಿಗೆ ಸ್ವಲ್ಪ ದೊಡ್ಡ ಗಾತ್ರದ ಮೀನುಗಳನ್ನು ತರುತ್ತವೆ. ಅಷ್ಟುಮಾತ್ರವಲ್ಲದೆ, ಉಣಿಸುವ ಪ್ರಮಾಣವನ್ನು ಸಹ ಕ್ರಮೇಣ ಹೆಚ್ಚಿಸುತ್ತವೆ. ಮೊದಲಿಗೆ, ಪ್ರತಿಯೊಂದು ಮರಿಗೆ ಪ್ರತಿ 45 ನಿಮಿಷಗಳಿಗೆ ಒಮ್ಮೆ ಉಣಿಸಲಾಗುತ್ತದೆ. ಆದರೆ ಮರಿಗಳು ಸುಮಾರು 18 ದಿವಸದವುಗಳಾಗುವಾಗ, ಅವುಗಳಿಗೆ ಬಹಳಷ್ಟು ಹಸಿವೆ ಇರುತ್ತದೆ. ಆದುದರಿಂದ, ಪ್ರತಿ 15 ನಿಮಿಷಗಳಿಗೊಮ್ಮೆ ಅವುಗಳಿಗೆ ಮೀನಿನ ಬೋಜನ ದೊರಕುತ್ತದೆ! ಈ ಚಿತ್ರದಲ್ಲಿ ತೋರಿಸಲ್ಪಟ್ಟಿರುವ ಹಕ್ಕಿಯು ಈಗಾಗಲೇ ತನ್ನ ಗೂಡನ್ನು ಬಿಟ್ಟಿದೆ ಮತ್ತು ಬೇಗನೆ ಸ್ವತಃ ಮೀನುಹಿಡಿಯಲು ಆರಂಭಿಸಲಿದೆ. ಈ ಸಮಯದಲ್ಲಿ ತಂದೆತಾಯಿ ಪಕ್ಷಿಗಳು, ಮರಿಗಳನ್ನು ಬೆಳೆಸುವ ಕೆಲಸದಿಂದ ಕೊಂಚ ವಿರಾಮವನ್ನು ತೆಗೆದುಕೊಳ್ಳುತ್ತವೆ ಎಂದು ನೀವು ಎಣಿಸಬಹುದು. ಆದರೆ ಮೀನ್ಚುಳ್ಳಿಗಳ ವಿಷಯದಲ್ಲಿ ಇದು ನಿಜವಲ್ಲ. ಅವುಗಳು ಅದೇ ಬೇಸಿಗೆಯಲ್ಲಿ ಇನ್ನೊಮ್ಮೆ ಮರಿಗಳನ್ನು ಮಾಡಿ ತಮ್ಮ ಇಡೀ ಕಾರ್ಯಗತಿಯನ್ನು ಪುನಃ ಒಮ್ಮೆ ಆರಂಭಿಸುತ್ತವೆ.

ವಿವಿಧ ಪ್ರಾಣಿಗಳು ತಮ್ಮ ಮರಿಗಳನ್ನು ಯಾವ ರೀತಿಯಲ್ಲಿ ಪಾಲನೆಮಾಡುತ್ತವೆ ಎಂಬುದರ ಬಗ್ಗೆ ಅನೇಕ ವಿವರಗಳು ಇನ್ನೂ ತಿಳಿದಿಲ್ಲ ಎಂಬುದು ನಿಜ. ಆದರೆ ನಿಸರ್ಗ ವಿಜ್ಞಾನಿಗಳು ಎಷ್ಟು ಹೆಚ್ಚು ಕಂಡುಹಿಡಿಯುತ್ತಾರೊ ಅಷ್ಟು ಸ್ಪಷ್ಟವಾಗಿ ಒಂದು ವಿಷಯವು ತಿಳಿದು ಬರುತ್ತದೆ. ಅದೇನೆಂದರೆ, ಪ್ರಾಣಿಪ್ರಪಂಚದಲ್ಲಿ ಪ್ರಾಣಿಗಳಿಗಿರುವ ಮಾತೃಪಿತೃಗಳಿಗೆ ಸಂಬಂಧಿಸಿದ ಹುಟ್ಟರಿವು ಒಂದು ಪ್ರಬಲವಾದ ಶಕ್ತಿಯಾಗಿದೆ. ದೇವರು ಈ ರೀತಿಯ ಶಕ್ತಿಯನ್ನು ತನ್ನ ಪ್ರಾಣಿ ಸೃಷ್ಟಿಗೆ ನೀಡಿರುವಲ್ಲಿ, ಮಾನವ ಹೆತ್ತವರು ತಮ್ಮ ಮಕ್ಕಳಿಗೆ ಬೇಕಾಗಿರುವ ಪಾಲನೆಪೋಷಣೆಯನ್ನು ಕೊಡಬೇಕೆಂದು ಆತನು ಬಯಸುತ್ತಾನೆಂಬುದು ಖಂಡಿತ. (g05 3/22)