ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಹಸುಗೂಸುಗಳ ಅಗತ್ಯಗಳು ಮತ್ತು ಅಪೇಕ್ಷೆಗಳು

ಹಸುಗೂಸುಗಳ ಅಗತ್ಯಗಳು ಮತ್ತು ಅಪೇಕ್ಷೆಗಳು

ಹಸುಗೂಸುಗಳ ಅಗತ್ಯಗಳು ಮತ್ತು ಅಪೇಕ್ಷೆಗಳು

ನವಜಾತ ಶಿಶುವಿಗೆ ಹುಟ್ಟಿದ ಕ್ಷಣದಿಂದಲೇ ಕೋಮಲ ಆರೈಕೆಯ ಅಗತ್ಯವಿದೆ. ಇದರಲ್ಲಿ, ಮೃದುವಾಗಿ ನೇವರಿಸುವುದು ಮತ್ತು ಚರ್ಮ ಸಂಪರ್ಕವು ಸೇರಿದೆ. ಜನನದ ನಂತರ ಮೊದಲ 12 ತಾಸುಗಳು ಅತಿ ಪ್ರಾಮುಖ್ಯವಾಗಿವೆಯೆಂಬುದು ವೈದ್ಯರ ಅಭಿಪ್ರಾಯ. ಹೆರಿಗೆಯಾದ ಕೂಡಲೇ ತಾಯಿಗೂ ಮಗುವಿಗೂ ಆವಶ್ಯಕವಾಗಿರುವಂಥದ್ದೂ ಮತ್ತು ಅವರು ಬಯಸುವಂಥದ್ದೂ “ನಿದ್ದೆ ಅಥವಾ ಆಹಾರವಲ್ಲ ಬದಲಾಗಿ ಕೋಮಲವಾದ ನೇವರಿಸುವಿಕೆ ಮತ್ತು ದೇಹಕ್ಕೆ ಹತ್ತಿರವಾಗಿ ಹಿಡಿದಿಟ್ಟುಕೊಳ್ಳುವಿಕೆ, ಹಾಗೂ ಪರಸ್ಪರ ನೋಡುವಿಕೆ ಮತ್ತು ಕಿವಿಗೊಡುವಿಕೆ ಆಗಿದೆ.” *

ಸಹಜಪ್ರವೃತ್ತಿಯಿಂದಲೇ, ಹೆತ್ತವರು ತಮ್ಮ ಕಂದನನ್ನು ಸ್ಪರ್ಶಿಸುತ್ತಾರೆ, ಎತ್ತಿಕೊಳ್ಳುತ್ತಾರೆ, ಎದೆಗವಚಿಕೊಳ್ಳುತ್ತಾರೆ, ಸವರುತ್ತಾರೆ, ಮತ್ತು ಮುದ್ದುಮಾಡುತ್ತಾರೆ. ಆಗ ಆ ಮಗು ತನ್ನ ಹೆತ್ತವರೊಂದಿಗೆ ಭದ್ರವಾದ ಅಂಟಿಕೆಯನ್ನು ಬೆಳೆಸಿಕೊಳ್ಳುತ್ತದೆ ಮತ್ತು ಅವರು ಕೊಡುವ ಗಮನಕ್ಕೆ ಪ್ರತಿಸ್ಪಂದಿಸುತ್ತದೆ. ಈ ಬಂಧವು ಎಷ್ಟು ಬಲವಾದದ್ದಾಗಿರುತ್ತದೆಂದರೆ, ತಮ್ಮ ಕಂದನ ಆರೈಕೆಮಾಡಲಿಕ್ಕಾಗಿ ಹೆತ್ತವರು ಬೇಸರಿಸದೇ ತ್ಯಾಗಗಳನ್ನು ಮಾಡುತ್ತಾರೆ.

ಆದರೆ ಇನ್ನೊಂದು ಕಡೆ, ಹೆತ್ತವರೊಂದಿಗಿನ ಪ್ರೀತಿಯ ಬಂಧವಿಲ್ಲದೆ, ಒಂದು ಶಿಶು ನಿಜವಾಗಿಯೂ ದುರ್ಬಲಗೊಂಡು ಸಾಯಬಲ್ಲದು. ಆದುದರಿಂದಲೇ, ಹೆರಿಗೆಯಾದ ಕೂಡಲೇ ಮಗುವನ್ನು ಅದರ ತಾಯಿಗೆ ಕೊಡುವುದು ಪ್ರಾಮುಖ್ಯವೆಂದು ಕೆಲವು ವೈದ್ಯರು ನಂಬುತ್ತಾರೆ. ತಾಯಿ ಮತ್ತು ಮಗುವಿನ ನಡುವೆ ಕಡಿಮೆಪಕ್ಷ 30ರಿಂದ 60 ನಿಮಿಷಗಳ ಆರಂಭದ ಸಂಪರ್ಕಕ್ಕಾಗಿ ಅವಕಾಶವನ್ನು ಕಲ್ಪಿಸಿಕೊಡಬೇಕೆಂದು ಅವರು ಸಲಹೆಕೊಡುತ್ತಾರೆ.

ಈ ರೀತಿಯ ಅಂಟಿಕೆಯನ್ನು ಬೆಸೆಯುವುದರ ಮೇಲೆ ಬಹಳಷ್ಟು ಒತ್ತು ಕೊಡಲ್ಪಡುವುದಾದರೂ, ಹೆರಿಗೆಯಾದ ಕೂಡಲೇ ಈ ಆರಂಭದ ಸಂಪರ್ಕಮಾಡುವುದು ಕಷ್ಟಕರವಾಗಿರಬಹುದು ಇಲ್ಲವೇ ಕೆಲವೊಂದು ಆಸ್ಪತ್ರೆಗಳಲ್ಲಿ ಅಸಾಧ್ಯವೂ ಆಗಿರಬಹುದು. ಅನೇಕವೇಳೆ ನವಜಾತ ಶಿಶುಗಳನ್ನು ತಾಯಿಯಿಂದ ಪ್ರತ್ಯೇಕಿಸಲು ಕಾರಣ, ಅದಕ್ಕೆ ಸೋಂಕು ತಗಲುವ ಅಪಾಯವನ್ನು ತಡೆಗಟ್ಟಲಿಕ್ಕಾಗಿಯೇ. ಆದರೆ ನವಜಾತ ಶಿಶುಗಳು ತಾಯಂದಿರೊಂದಿಗೇ ಉಳಿಯುವಾಗ, ಮರಣಾಂತಿಕ ಸೋಂಕುಗಳ ಪ್ರಮಾಣವು ವಾಸ್ತವದಲ್ಲಿ ಕಡಿಮೆಯಾಗಿರಬಹುದೆಂದು ಕೆಲವೊಂದು ಸಾಕ್ಷ್ಯಗಳು ಸೂಚಿಸುತ್ತವೆ. ಆದುದರಿಂದ, ತಾಯಿ ಮತ್ತು ನವಜಾತ ಶಿಶುವಿನ ನಡುವೆ ಆರಂಭದಲ್ಲೇ ಸಂಪರ್ಕವನ್ನು ಹೆಚ್ಚಿಸುವ ಅವಕಾಶವನ್ನು ಕೊಡಲು ಹೆಚ್ಚೆಚ್ಚು ಆಸ್ಪತ್ರೆಗಳು ಅನುಮತಿಸುತ್ತಿವೆ.

ಅಂಟಿಕೆಯನ್ನು ಬೆಸೆಯುವುದರ ಕುರಿತಾದ ಚಿಂತೆ

ಕೆಲವು ಮಂದಿ ತಾಯಂದಿರು ತಮ್ಮ ಮಗುವನ್ನು ಮೊದಲ ಬಾರಿ ನೋಡಿದಾಕ್ಷಣ ಅದರೊಂದಿಗೆ ಭಾವನಾತ್ಮಕವಾಗಿ ಅಂಟಿಕೊಳ್ಳುವುದಿಲ್ಲ. ಆದುದರಿಂದ, ‘ಅಂಟಿಕೆಯನ್ನು ಬೆಸೆಯುವುದರಲ್ಲಿ ನನಗೆ ಸಮಸ್ಯೆಯಿದ್ದೀತೆ?’ ಎಂದು ಅವರು ಕುತೂಹಲಪಡುತ್ತಾರೆ. ಎಲ್ಲಾ ತಾಯಂದಿರಿಗೆ ಪ್ರಥಮ ನೋಟದಲ್ಲೇ ತಮ್ಮ ಮಗುವಿನ ಮೇಲೆ ಪ್ರೀತಿ ಅಂಕುರಿಸುವುದಿಲ್ಲ ಎಂಬುದು ಒಪ್ಪತಕ್ಕ ಮಾತು. ಆದರೂ, ಇದರ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ.

ಹಸುಗೂಸಿಗಾಗಿ ಮಾತೃವಾತ್ಸಲ್ಯವು ತಡವಾಗಿ ಹುಟ್ಟಿದರೂ, ಮುಂದೆ ಅದು ಪೂರ್ಣವಾಗಿ ಬೆಳೆಯುವ ಸಾಧ್ಯತೆ ಇದೆ. “ಜನನದ ನಂತರ, ನಿಮ್ಮ ಮಗುವಿನೊಂದಿಗೆ ಸಂಬಂಧವನ್ನು ರಚಿಸುವ ಇಲ್ಲವೆ ಕಡಿದುಹಾಕುವ ಒಂದೇ ಒಂದು ಸಂದರ್ಭವಿದೆ ಎಂದೇನಿಲ್ಲ” ಎಂದು ಅನುಭವಸ್ಥ ತಾಯಿಯೊಬ್ಬಳು ಹೇಳುತ್ತಾಳೆ. ಹಾಗಿದ್ದರೂ, ನೀವು ಗರ್ಭಿಣಿಯಾಗಿರುವಲ್ಲಿ ಮತ್ತು ಈ ವಿಷಯದಲ್ಲಿ ನಿಮಗೆ ಆತಂಕಗಳಿರುವಲ್ಲಿ, ಮುಂಚಿತವಾಗಿಯೇ ನಿಮ್ಮ ಹೆರಿಗೆ ವೈದ್ಯರೊಂದಿಗೆ ಇದರ ಬಗ್ಗೆ ಚರ್ಚಿಸುವುದು ವಿವೇಕಯುತ. ನಿಮ್ಮ ನವಜಾತ ಶಿಶುವಿನೊಂದಿಗೆ ನೀವು ಯಾವಾಗ ಮತ್ತು ಎಷ್ಟು ಸಮಯ ಕಳೆಯಲು ಬಯಸುತ್ತೀರೆಂಬುದರ ಕುರಿತಾದ ನಿಮ್ಮ ಇಚ್ಛೆಗಳನ್ನು ಅವರಿಗೆ ಸ್ಪಷ್ಟವಾಗಿ ತಿಳಿಸಿರಿ.

“ನನ್ನೊಂದಿಗೆ ಮಾತಾಡಿ!”

ಶಿಶುಗಳು ನಿರ್ದಿಷ್ಟ ಉತ್ತೇಜಕಗಳಿಗೆ ವಿಶೇಷವಾಗಿ ಸೂಕ್ಷ್ಮಗ್ರಾಹಿಯಾಗಿರುವಂಥ ಕೆಲವೊಂದು ಸೀಮಿತ ಸಮಯಾವಧಿಗಳಿರುವಂತೆ ತೋರುತ್ತದೆ. ಈ ಸಮಯಾವಧಿಗಳು ಸ್ವಲ್ಪ ಸಮಯದ ನಂತರ ಕೊನೆಗೊಳ್ಳುತ್ತವೆ. ಉದಾಹರಣೆಗೆ, ಆ ಎಳೆಯ ಮಿದುಳು, ಒಂದು ಭಾಷೆಯನ್ನು, ಅಥವಾ ಒಂದಕ್ಕಿಂತಲೂ ಹೆಚ್ಚು ಭಾಷೆಗಳನ್ನು ಸಲೀಸಾಗಿ ಕರಗತಗೊಳಿಸುತ್ತದೆ. ಆದರೆ ಭಾಷೆಯನ್ನು ಕಲಿಯಲಿಕ್ಕಾಗಿರುವ ಅತ್ಯಂತ ಉತ್ತಮ ಅವಧಿಯು, ಸುಮಾರು ಐದು ವರ್ಷ ಪ್ರಾಯದಲ್ಲಿ ಕೊನೆಗೊಳ್ಳಲಾರಂಭಿಸುತ್ತದೆಂದು ತೋರುತ್ತದೆ.

ಒಂದು ಮಗುವು 12ರಿಂದ 14 ವರ್ಷ ಪ್ರಾಯವನ್ನು ತಲಪಿದ ನಂತರ ಒಂದು ಭಾಷೆಯನ್ನು ಕಲಿಯುವುದು ಅತಿ ಕಷ್ಟಕರವಾಗಿರಬಲ್ಲದು. ಶಿಶುವೈದ್ಯ ನರಶಾಸ್ತ್ರಜ್ಞ ಪೀಟರ್‌ ಹುಟನ್‌ಲಾಕರ್‌ ಇವರಿಗನುಸಾರ, ಆ ಪ್ರಾಯದಲ್ಲಿ “ಮಿದುಳಿನ ಭಾಷಾ ಕ್ಷೇತ್ರಗಳಲ್ಲಿರುವ ಸಿನಾಪ್ಸಿಸ್‌ಗಳ ಸಾಂದ್ರತೆ ಮತ್ತು ಸಂಖ್ಯೆಯು ಕಡಿಮೆಯಾಗುತ್ತದೆ.” ಆದುದರಿಂದ, ಭಾಷಾ ಸಾಮರ್ಥ್ಯವನ್ನು ಗಿಟ್ಟಿಸಿಕೊಳ್ಳುವ ಅತಿ ಪ್ರಾಮುಖ್ಯ ಸಮಯವು ಜೀವನದ ಮೊದಲ ಕೆಲವು ವರ್ಷಗಳೆಂಬುದು ಸ್ಪಷ್ಟ!

ಶಿಶುಗಳು ತಮ್ಮ ಜ್ಞಾನಗ್ರಹಣದ ಉಳಿದ ಬೆಳವಣಿಗೆಗಾಗಿ ಬಹಳಷ್ಟು ಪ್ರಾಮುಖ್ಯವಾಗಿರುವಂಥ ಮಾತಾಡುವ ಸಾಮರ್ಥ್ಯವನ್ನು ಹೇಗೆ ಸಿದ್ಧಿಸಿಕೊಳ್ಳುತ್ತವೆ? ಪ್ರಧಾನವಾಗಿ ಅವರ ಹೆತ್ತವರೊಂದಿಗಿನ ಮೌಖಿಕ ಪರಸ್ಪರಕ್ರಿಯೆಗಳ ಮೂಲಕವೇ. ಶಿಶುಗಳು ವಿಶೇಷವಾಗಿ ಇತರ ಮಾನವರಿಂದ ಬರುವಂಥ ಉತ್ತೇಜಕಗಳಿಗೆ ಪ್ರತಿಸ್ಪಂದಿಸುತ್ತವೆ. “ಹಸುಗೂಸು, . . . ಅದರ ತಾಯಿಯ ಸ್ವರವನ್ನು ಅನುಕರಿಸುತ್ತದೆ,” ಎಂದು ಮ್ಯಾಸಚೂಸೆಟ್ಸ್‌ ಇನ್ಸ್‌ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಬ್ಯಾರಿ ಆ್ಯರನ್ಸ್‌ ಹೇಳುತ್ತಾರೆ. ಆದರೆ ಸ್ವಾರಸ್ಯಕರ ಸಂಗತಿಯೇನೆಂದರೆ ಹಸುಗೂಸುಗಳು, ಎಲ್ಲಾ ಪ್ರಕಾರದ ಸದ್ದುಗಳನ್ನು ಅನುಕರಿಸುವುದಿಲ್ಲ. ಆ್ಯರನ್ಸ್‌ರವರು ಹೇಳುವಂತೆ ಎಳೆಯ ಕೂಸು, “ತಾಯಿ ಮಾತಾಡುತ್ತಿರುವ ಸಮಯದಲ್ಲಿಯೇ ತೊಟ್ಟಿಲಿನಿಂದ ಹೊರಡುವ ಕೀರಲು ಧ್ವನಿಗಳನ್ನು ಸೇರಿಸುವುದಿಲ್ಲ.”

ಭಿನ್ನಭಿನ್ನ ಸಾಂಸ್ಕೃತಿಕ ಹಿನ್ನೆಲೆಗಳ ಹೆತ್ತವರು ತಮ್ಮ ಹಸುಗೂಸುಗಳೊಂದಿಗೆ ಮಾತಾಡುವಾಗ ಬಳಸುವ ತಾಳಬದ್ಧ ಶೈಲಿಯು ಒಂದೇ ರೀತಿಯದ್ದಾಗಿರುತ್ತದೆ. ಹೆತ್ತವರು ಪ್ರೀತಿತುಂಬಿರುವ ಮಾತುಗಳನ್ನಾಡುವಾಗ ಮಗುವಿನ ಹೃದಯಬಡಿತದ ಪ್ರಮಾಣವು ಹೆಚ್ಚುತ್ತದೆ ಮತ್ತು ಇದು, ಪದಗಳು ಹಾಗೂ ಅವುಗಳು ಸೂಚಿಸುತ್ತಿರುವ ವಸ್ತುಗಳ ನಡುವೆ ಸಂಬಂಧವನ್ನು ಬೇಗನೆ ಜೋಡಿಸಲು ಸಹಾಯಮಾಡುತ್ತದೆಂದು ನಂಬಲಾಗುತ್ತದೆ. ಹೀಗೆ ಒಂದೇ ಒಂದು ಮಾತನ್ನು ಆಡದೆಯೇ ಶಿಶುವು ಹೆತ್ತವರಿಗೆ, “ನನ್ನೊಂದಿಗೆ ಮಾತಾಡಿ!” ಎಂದು ಕೂಗುತ್ತದೆ.

“ನನಗೆ ಗಮನಕೊಡಿ!”

ಮೊದಲ ವರ್ಷದಲ್ಲಿ ಅಥವಾ ಸುಮಾರು ಆ ಸಮಯದಷ್ಟಕ್ಕೆ, ಶಿಶುವು ತನ್ನ ಆರೈಕೆಮಾಡುವ ವಯಸ್ಕರೊಂದಿಗೆ, ಸಾಮಾನ್ಯವಾಗಿ ಅದರ ತಾಯಿಯೊಂದಿಗೆ ಒಂದು ಭಾವನಾತ್ಮಕ ಅಂಟಿಕೆಯನ್ನು ಬೆಳೆಸಿಕೊಂಡಿರುತ್ತದೆಂಬ ಸಂಗತಿಯು ಸತ್ಯವೆಂದು ರುಜುಪಡಿಸಲಾಗಿದೆ. ಈ ರೀತಿಯಲ್ಲಿ ಭಾವನಾತ್ಮಕ ಬಂಧದಲ್ಲಿ ಸುರಕ್ಷೆಯ ಅನಿಸಿಕೆಯನ್ನು ಹೊಂದುವ ಮಗುವು, ಹೆತ್ತವರ ಬಾಂಧವ್ಯದ ಸುರಕ್ಷೆಯಿಲ್ಲದಿರುವ ಕೂಸುಗಳಿಗಿಂತಲೂ ಹೆಚ್ಚು ಉತ್ತಮವಾಗಿ ಇತರರೊಂದಿಗೆ ಒಗ್ಗುವ ಗುಣವುಳ್ಳದ್ದಾಗಿರುತ್ತದೆ. ತಾಯಿಯೊಂದಿಗಿನ ಅಂಥ ಅಂಟಿಕೆಯು, ಮಗುವಿಗೆ ಮೂರು ವರ್ಷವಾಗುವುದಕ್ಕೆ ಮುಂಚೆ ಸ್ಥಾಪಿಸಲ್ಪಡಬೇಕೆಂದು ಹೇಳಲಾಗುತ್ತದೆ.

ಒಂದು ಶಿಶುವಿನ ಮನಸ್ಸು ಬಾಹ್ಯ ಪ್ರಭಾವಕ್ಕೆ ಸುಲಭವಾಗಿ ವಶವಾಗುವಂಥ ಈ ಮಹತ್ವಪೂರ್ಣ ಅವಧಿಯಲ್ಲಿಯೇ ಅದನ್ನು ಅಲಕ್ಷಿಸಲಾಗುವಲ್ಲಿ ಏನಾಗಬಹುದು? 20ಕ್ಕಿಂತಲೂ ಹೆಚ್ಚು ವರ್ಷಗಳ ವರೆಗೆ 267 ತಾಯಂದಿರನ್ನೂ ಅವರ ಮಕ್ಕಳ ಬೆಳವಣಿಗೆಯನ್ನೂ ಗಮನಿಸಿ ಅಧ್ಯಯನ ಮಾಡಿದ ಮಾರ್ಥ ಫ್ಯಾರೆಲ್‌ ಎರಿಕ್ಸನ್‌ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದರು: “ಮಗುವನ್ನು ಅಲಕ್ಷಿಸುವುದು, ನಿಧಾನವಾಗಿಯೂ ನಿರಂತರವಾಗಿಯೂ ಅದರ ಉತ್ಸಾಹವನ್ನು ಕಬಳಿಸಿಬಿಡುತ್ತದೆ. ಇದು ಎಷ್ಟರ ವರೆಗೆ ಮುಂದುವರಿಯುವುದೆಂದರೆ, ಇತರರೊಂದಿಗೆ ಸಂಬಂಧವನ್ನು ಬೆಸೆಯಲು ಇಲ್ಲವೆ ಜಗತ್ತನ್ನು ಪರಿಶೋಧಿಸಲು [ಮಗುವಿಗೆ] ಯಾವುದೇ ಆಸೆ ಇರುವುದಿಲ್ಲ.”

ಟೆಕ್ಸಸ್‌ ಮಕ್ಕಳ ಆಸ್ಪತ್ರೆಯ ಡಾಕ್ಟರ್‌ ಬ್ರೂಸ್‌ ಪೆರಿ ಎಂಬವರು, ಭಾವನಾತ್ಮಕ ಅಲಕ್ಷ್ಯದ ಗಂಭೀರ ಫಲಿತಾಂಶಗಳ ಕುರಿತು ತಮಗಿರುವ ಅಭಿಪ್ರಾಯವನ್ನು ದೃಷ್ಟಾಂತಿಸಲಿಕ್ಕಾಗಿ ಹೇಳಿದ್ದು: “ನೀವು ನನಗೊಂದು 6 ತಿಂಗಳ ಕೂಸನ್ನು ಕೊಟ್ಟು, ಅದರ ಶರೀರದಲ್ಲಿರುವ ಪ್ರತಿಯೊಂದು ಎಲುಬನ್ನು ಮುರಿಯುವ ಇಲ್ಲವೆ ಅದನ್ನು ಎರಡು ತಿಂಗಳುಗಳ ವರೆಗೆ ಭಾವನಾತ್ಮಕವಾಗಿ ಅಲಕ್ಷಿಸುವ ಆಯ್ಕೆಯನ್ನು ನನಗೆ ಕೊಡುವಲ್ಲಿ, ಅದರ ಶರೀರದಲ್ಲಿರುವ ಪ್ರತಿಯೊಂದು ಎಲುಬನ್ನು ಮುರಿದುಹಾಕುವುದು ಆ ಕೂಸಿಗೆ ಹೆಚ್ಚು ಉತ್ತಮವೆಂದು ನಾನು ಹೇಳುವೆ.” ಏಕೆ? ಡಾಕ್ಟರ್‌ ಪೆರಿ ಅವರ ಅಭಿಪ್ರಾಯಕ್ಕನುಸಾರ, “ಎಲುಬುಗಳು ಗುಣಹೊಂದಬಲ್ಲವು, ಆದರೆ ಒಂದು ಶಿಶು, ಎರಡು ತಿಂಗಳುಗಳ ವರೆಗೆ ಮಿದುಳಿನ ಉದ್ರೇಕಿಸುವಿಕೆಯನ್ನು ಕಳೆದುಕೊಳ್ಳುವಲ್ಲಿ, ನಿತ್ಯಕ್ಕೂ ಅದರ ಮಿದುಳು ಅಸ್ತವ್ಯಸ್ತವಾಗಿರುವುದು.” ಇಂಥ ಹಾನಿಯನ್ನು ಎಂದಿಗೂ ಸರಿಪಡಿಸಲಾಗುವುದಿಲ್ಲ ಎಂಬ ಮಾತನ್ನು ಎಲ್ಲರೂ ಸಮ್ಮತಿಸುವುದಿಲ್ಲ. ಹಾಗಿದ್ದರೂ, ಒಂದು ಶಿಶುವಿನ ಎಳೆಯ ಮನಸ್ಸಿಗೆ, ಭಾವನಾತ್ಮಕವಾಗಿ ಪುಷ್ಟಿದಾಯಕವಾದ ವಾತಾವರಣವು ಅತ್ಯಾವಶ್ಯಕವೆಂದು ವೈಜ್ಞಾನಿಕ ಸಂಶೋಧನೆಗಳು ಸೂಚಿಸುತ್ತವೆಂಬುದು ನಿಜ.

ಸಂಕ್ಷಿಪ್ತವಾಗಿ ಹೇಳುವುದಾದರೆ, “[ಹಸುಗೂಸುಗಳು] ಪ್ರೀತಿಸಲು ಮತ್ತು ಪ್ರೀತಿಸಲ್ಪಡಲು ಸಿದ್ಧವಾಗಿವೆ” ಎಂದು ಶಿಶುಗಳು (ಇಂಗ್ಲಿಷ್‌) ಎಂಬ ಪುಸ್ತಕವು ಹೇಳುತ್ತದೆ. ಒಂದು ಹಸುಳೆಯು ಅಳುತ್ತಿರುವಾಗ, ಅನೇಕವೇಳೆ ಅದು ತನ್ನ ಹೆತ್ತವರಿಗೆ “ನನಗೆ ಗಮನಕೊಡಿ!” ಎಂದು ಅಂಗಲಾಚುತ್ತಿದೆ. ಆದುದರಿಂದ ಹೆತ್ತವರು ತುಂಬ ಅಕ್ಕರೆಭರಿತ ರೀತಿಯಲ್ಲಿ ಸ್ಪಂದಿಸುವುದು ಪ್ರಾಮುಖ್ಯ. ಅಂಥ ಪರಸ್ಪರಕ್ರಿಯೆಗಳ ಮೂಲಕ ಆ ಕೂಸಿಗೆ, ತಾನು ತನ್ನ ಅಗತ್ಯಗಳನ್ನು ಇತರರಿಗೆ ತಿಳಿಯಪಡಿಸಬಲ್ಲೆ ಎಂಬ ಅರಿವು ಹುಟ್ಟುತ್ತದೆ. ಹೀಗೆ ಅದು ಇತರರೊಂದಿಗೆ ಸಾಮಾಜಿಕ ಸಂಬಂಧಗಳನ್ನು ಬೆಸೆಯಲು ಕಲಿಯುತ್ತಿರುತ್ತದೆ.

‘ನಾನು ಮಗುವನ್ನು ಕೆಡಿಸೆನೋ?’

‘ಮಗು ಪ್ರತಿಯೊಂದು ಬಾರಿ ಅತ್ತಾಗ ನಾನು ಸ್ಪಂದಿಸುವಲ್ಲಿ, ಅದನ್ನು ಕೆಡಿಸೆನೋ?’ ಎಂದು ನೀವು ಕೇಳೀರಿ. ಹಾಗೆ ಇರಲೂ ಬಹುದು. ಆದರೆ ಈ ಪ್ರಶ್ನೆಯ ಬಗ್ಗೆ ಅತಿ ಭಿನ್ನವಾದ ಅಭಿಪ್ರಾಯಗಳಿವೆ. ಪ್ರತಿಯೊಂದು ಮಗುವು ಇನ್ನೊಂದಕ್ಕಿಂತ ಭಿನ್ನವಾಗಿದ್ದು ಅಪೂರ್ವವಾಗಿರುವುದರಿಂದ, ಏನು ಮಾಡುವುದು ಅತ್ಯುತ್ತಮ ಎಂಬುದನ್ನು ಸಾಮಾನ್ಯವಾಗಿ ಹೆತ್ತವರೇ ನಿರ್ಧರಿಸಬೇಕು. ಆದರೆ ಇತ್ತೀಚಿನ ಸಂಶೋಧನೆಯೊಂದು ಸೂಚಿಸಿದ್ದೇನೆಂದರೆ, ಒಂದು ನವಜಾತ ಶಿಶು ಹಸಿದಿರುವಾಗ, ಹಾಯಾಗಿಲ್ಲದಿರುವಾಗ, ಇಲ್ಲವೆ ಸಿಡಿಮಿಡಿಗೊಂಡಿರುವಾಗ, ಅದರ ಮಾನಸಿಕ ಒತ್ತಡ-ಸ್ಪಂದಕ ವ್ಯವಸ್ಥೆಗಳು ಮಾನಸಿಕ ಒತ್ತಡದ ಹಾರ್ಮೋನುಗಳನ್ನು ಬಿಡುಗಡೆಮಾಡುತ್ತವೆ. ಆಗ ಮಗುವು ತನ್ನ ಸಂಕಟವನ್ನು ಅಳುವ ಮೂಲಕ ವ್ಯಕ್ತಪಡಿಸುತ್ತದೆ. ಹೆತ್ತವರು ಇದಕ್ಕೆ ಸ್ಪಂದಿಸಿ ಅದರ ಅಗತ್ಯಗಳನ್ನು ಪೂರೈಸುವಾಗ, ಅವರು ಆ ಕೂಸಿನ ಮಿದುಳಿನಲ್ಲಿ ತನ್ನನ್ನೇ ಶಮನಗೊಳಿಸಲು ಕಲಿಯುವಂತೆ ಸಹಾಯಮಾಡುವ ನರಕೋಶಗಳ ಅಂತರ್ಜಾಲವನ್ನು ಸೃಷ್ಟಿಸಲು ಆರಂಭಿಸುತ್ತಾರೆಂದು ಹೇಳಲಾಗುತ್ತದೆ. ಅಲ್ಲದೆ, ಡಾಕ್ಟರ್‌ ಮೇಗನ್‌ ಗುನ್ನರ್‌ರವರಿಗನುಸಾರ, ಈ ರೀತಿಯಲ್ಲಿ ತತ್‌ಕ್ಷಣ ಆರೈಕೆಯನ್ನು ಪಡೆಯುವ ಕೂಸು, ಕಾರ್ಟಿಸಾಲ್‌ ಎಂಬ ಒತ್ತಡದ ಹಾರ್ಮೋನನ್ನು ಕಡಿಮೆ ಪ್ರಮಾಣದಲ್ಲಿ ಉತ್ಪಾದಿಸುತ್ತದೆ. ಮತ್ತು ಒಂದುವೇಳೆ ಮಗು ಸಿಡಿಮಿಡಿಗೊಂಡರೂ, ಆ ಒತ್ತಡದ ಪ್ರತಿಕ್ರಿಯೆಯನ್ನು ಹೆಚ್ಚು ಬೇಗನೆ ನಿಲ್ಲಿಸಿಬಿಡುತ್ತದೆ.

ಮಾರ್ಥ ಫ್ಯಾರೆಲ್‌ ಎರಿಕ್ಸನ್‌ ಹೇಳುವುದು: “ಯಾರಿಗೆ ವಿಶೇಷವಾಗಿ ತಮ್ಮ ಜೀವನದ ಮೊದಲ 6-8 ತಿಂಗಳುಗಳ ಸಮಯದಲ್ಲಿ, ಕೂಡಲೇ ಮತ್ತು ಸತತವಾಗಿ ಪ್ರತಿಕ್ರಿಯೆಯನ್ನು ತೋರಿಸಲಾಗುತ್ತದೊ ಆ ಕೂಸುಗಳು ವಾಸ್ತವದಲ್ಲಿ, ಅಳುತ್ತಾ ಇರುವಂತೆ ಬಿಡಲ್ಪಡುವ ಕೂಸುಗಳಿಗಿಂತ ಕಡಿಮೆ ಅಳುತ್ತವೆ.” ನೀವು ಹೇಗೆ ಸ್ಪಂದಿಸುತ್ತೀರೊ ಅದರಲ್ಲೂ ವೈವಿಧ್ಯವಿರುವುದು ಪ್ರಾಮುಖ್ಯವಾಗಿದೆ. ಪ್ರತಿ ಸಂದರ್ಭದಲ್ಲಿ ನೀವು ಒಂದೇ ರೀತಿಯಲ್ಲಿ ಸ್ಪಂದಿಸುವುದಾದರೆ, ಅಂದರೆ ಅದಕ್ಕೆ ಹಾಲುಣಿಸುವುದಾದರೆ ಅಥವಾ ಅದನ್ನು ಎತ್ತಿಕೊಳ್ಳುವುದಾದರೆ, ಅದು ಖಂಡಿತವಾಗಿ ಅತಿ ಮುದ್ದಿನಿಂದ ಕೆಡುವುದು. ಕೆಲವೊಮ್ಮೆ ಅದರ ಅಳುವಿಗೆ ಕೇವಲ ನಿಮ್ಮ ಧ್ವನಿಯೊಂದಿಗೆ ಪ್ರತಿಕ್ರಿಯೆ ತೋರಿಸಿದರೆ ಸಾಕು. ಅಥವಾ ಅದರ ಹತ್ತಿರ ಹೋಗಿ, ಅದರ ಕಿವಿಯಲ್ಲಿ ಕೋಮಲವಾಗಿ ಮಾತಾಡಿದರೂ ಅದು ಸುಮ್ಮನಾಗಬಹುದು. ಇಲ್ಲವೆ, ಅದರ ಬೆನ್ನು ಅಥವಾ ಹೊಟ್ಟೆಯನ್ನು ನೇವರಿಸಿದರೆ ಕೂಡ ಅದರ ಅಳು ನಿಂತೀತು.

ಪೌರಾತ್ಯ ದೇಶಗಳಲ್ಲಿ, “ಮಗುವಿನ ಕೆಲಸವೇ ಅಳುವುದು” ಎಂಬ ನಾಣ್ಣುಡಿಯಿದೆ. ಹಸುಗೂಸಿಗೆ, ತನಗೆ ಬೇಕಾದದ್ದನ್ನು ತಿಳಿಸುವ ಪ್ರಮುಖ ವಿಧಾನ ಅಳುವುದು ಆಗಿದೆ. ನೀವು ಏನಾದರೂ ಕೇಳುವಾಗ ಪ್ರತಿ ಬಾರಿ ನಿಮ್ಮನ್ನು ಅಲಕ್ಷಿಸಲಾಗುವಲ್ಲಿ ನಿಮಗೆ ಹೇಗನಿಸುವುದು? ಹೀಗಿರುವಾಗ, ಆರೈಕೆಮಾಡುವವರಿಲ್ಲದಿರುವಲ್ಲಿ ನಿಸ್ಸಹಾಯಕವಾಗಿರುವ ನಿಮ್ಮ ಕೂಸು, ಗಮನವನ್ನು ಹಾತೊರೆಯುವ ಪ್ರತಿ ಸಮಯ ಅಲಕ್ಷಿಸಲ್ಪಡುವಲ್ಲಿ ಅದಕ್ಕೆ ಹೇಗನಿಸೀತು? ಆದರೆ ಅದು ಅಳುವಾಗ ಯಾರು ಸ್ಪಂದಿಸಬೇಕು?

ಕೂಸಿನ ಆರೈಕೆಮಾಡುವುದು ಯಾರ ಕೆಲಸ?

ಯುನೈಟಡ್‌ ಸ್ಟೇಟ್ಸ್‌ನಲ್ಲಿ ನಡೆಸಲ್ಪಟ್ಟ ಇತ್ತೀಚಿನ ಜನಗಣನೆಯು, 54 ಪ್ರತಿಶತ ಮಕ್ಕಳು ಹುಟ್ಟಿನಿಂದ ಮೂರನೆಯ ತರಗತಿಯ ವರೆಗೆ, ಹೆತ್ತವರಿಂದಲ್ಲದೆ ಇತರ ವ್ಯಕ್ತಿಗಳಿಂದ ಯಾವುದಾದರೂಂದು ರೀತಿಯಲ್ಲಿ ಆರೈಕೆಯನ್ನು ಪಡೆಯುತ್ತವೆ ಎಂಬುದನ್ನು ತೋರಿಸಿತು. ಸಂಸಾರವನ್ನು ಸಾಗಿಸಲು ಅನೇಕ ಸಂದರ್ಭಗಳಲ್ಲಿ ತಂದೆ ತಾಯಿ ಇಬ್ಬರೂ ಉದ್ಯೋಗಕ್ಕೆ ಹೋಗಬೇಕಾದೀತು. ಅನೇಕ ತಾಯಂದಿರು, ತಮ್ಮ ನವಜಾತ ಶಿಶುವನ್ನು ಕೆಲವೊಂದು ವಾರಗಳು ಇಲ್ಲವೆ ತಿಂಗಳುಗಳ ವರೆಗೆ ನೋಡಿಕೊಳ್ಳಲು, ಸಾಧ್ಯವಿರುವಲ್ಲಿ ಹೆರಿಗೆ ರಜೆಯನ್ನು ತೆಗೆದುಕೊಳ್ಳುತ್ತಾರೆ. ಆದರೆ ನಂತರ ಮಗುವನ್ನು ಯಾರು ನೋಡಿಕೊಳ್ಳುವರು?

ಇಂಥ ನಿರ್ಣಯಗಳನ್ನು ನಿಯಂತ್ರಿಸಲು ಯಾವುದೇ ಕಟ್ಟುನಿಟ್ಟಿನ ನಿಯಮಗಳಿಲ್ಲ. ಆದರೆ, ಮಗುವು ತನ್ನ ಜೀವನದ ಈ ಪ್ರಮುಖ ಅವಧಿಯಲ್ಲಿ ನಿಸ್ಸಹಾಯಕವಾಗಿದೆ ಎಂಬದನ್ನು ನೆನಪಿನಲ್ಲಿಡುವುದು ಒಳ್ಳೇದು. ತಂದೆ ತಾಯಿ ಇಬ್ಬರೂ ಇದರ ಬಗ್ಗೆ ಗಂಭೀರವಾಗಿ ಯೋಚಿಸಿನೋಡಬೇಕು. ಏನು ಮಾಡಬೇಕೆಂಬದನ್ನು ನಿರ್ಣಯಿಸುವಾಗ, ಇರುವಂಥ ಆಯ್ಕೆಗಳನ್ನು ಅವರು ಜಾಗರೂಕತೆಯಿಂದ ಪರ್ಯಾಲೋಚಿಸಲೇಬೇಕು.

“ನಮ್ಮ ಸಂತಾನವನ್ನು ಬೆಳಸಲಿಕ್ಕಾಗಿ ಇರುವುದರಲ್ಲೇ ಅತ್ಯುತ್ತಮವಾದ ಶಿಶು ಆರೈಕೆ ಕಾರ್ಯಕ್ರಮಗಳಿಗೆ ಬಿಡುವುದು, ಮಕ್ಕಳಿಗೆ ತಮ್ಮ ತಂದೆತಾಯಂದಿರಿಂದ ಅಗತ್ಯವಿರುವ ಸಮಯಕ್ಕೆ ಬದಲಿಯಾಗಿರಲಾರದು ಎಂಬುದು ಹೆಚ್ಚೆಚ್ಚು ಸ್ಪಷ್ಟವಾಗುತ್ತಾ ಇದೆ,” ಎಂದು ಶಿಶುವೈದ್ಯಶಾಸ್ತ್ರದ ಅಮೆರಿಕನ್‌ ಅಕಾಡೆಮಿಯ ಡಾಕ್ಟರ್‌ ಜೋಸೆಫ್‌ ಸಾಂಗಾ ಹೇಳುತ್ತಾರೆ. ಶಿಶುವಿಹಾರಗಳಲ್ಲಿರುವ ಕೂಸುಗಳಿಗೆ, ಅವರ ಆರೈಕೆಮಾಡುವವರೊಂದಿಗೆ ಅಗತ್ಯವಿರುವಷ್ಟು ಪರಸ್ಪರಕ್ರಿಯೆ ನಡೆಸಲು ಅವಕಾಶ ಸಿಗುವುದಿಲ್ಲವೆಂಬುದರ ಬಗ್ಗೆ ಕೆಲವು ತಜ್ಞರು ಚಿಂತೆಯನ್ನು ವ್ಯಕ್ತಪಡಿಸಿದ್ದಾರೆ.

ಕೆಲವು ಉದ್ಯೋಗಸ್ಥ ತಾಯಂದಿರು, ತಮ್ಮ ಮಗುವಿನ ಅತ್ಯಾವಶ್ಯಕ ಅಗತ್ಯಗಳ ಬಗ್ಗೆ ಅರಿವುಳ್ಳವರಾಗಿ, ತಮ್ಮ ಮಕ್ಕಳ ಭಾವನಾತ್ಮಕ ಪಾಲನೆಯನ್ನು ಬೇರೆ ಜನರಿಗೆ ವಹಿಸಿಕೊಡುವ ಬದಲಿಗೆ ಮನೆಯಲ್ಲಿರಲು ನಿರ್ಣಯಿಸಿದ್ದಾರೆ. ಒಬ್ಬ ಮಹಿಳೆಯು ಹೇಳಿದ್ದು: “ಸತ್ಯವಾಗಿಯೂ, ಬೇರಾವುದೇ ಉದ್ಯೋಗವು ನನಗೆ ಕೊಡಲಾಗದಂಥ ಸಂತೃಪ್ತಿಯು ನನಗೆ ದಕ್ಕಿದೆ.” ಆದರೆ, ಆರ್ಥಿಕ ಒತ್ತಡಗಳು ಎಲ್ಲಾ ತಾಯಂದಿರು ಇದೇ ರೀತಿಯ ಆಯ್ಕೆಯನ್ನು ಮಾಡುವಂತೆ ಎಡೆಮಾಡಿಕೊಡುವುದಿಲ್ಲವೆಂಬುದು ನಿಜ. ಅನೇಕ ಮಂದಿ ಹೆತ್ತವರಿಗೆ ಬೇರಾವುದೇ ಆಯ್ಕೆಯಿಲ್ಲದೆ, ಶಿಶುವಿಹಾರಗಳ ಮೊರೆಹೋಗಬೇಕಾಗುತ್ತದೆ. ಆದುದರಿಂದ ಅವರು ತಮ್ಮ ಮಗುವಿನ ಜೊತೆಯಲ್ಲಿರುವಾಗ ಗಮನ ಮತ್ತು ವಾತ್ಸಲ್ಯವನ್ನು ಕೊಡಲು ಹೆಚ್ಚಿನ ಪ್ರಯತ್ನವನ್ನು ಮಾಡುತ್ತಾರೆ. ತದ್ರೀತಿಯಲ್ಲಿ, ಉದ್ಯೋಗದಲ್ಲಿರುವ ಅನೇಕ ಮಂದಿ ಒಂಟಿ ಹೆತ್ತವರಿಗೂ ಈ ವಿಷಯದಲ್ಲಿ ಕಡಿಮೆ ಆಯ್ಕೆಗಳಿದ್ದು, ಅವರು ತಮ್ಮ ಮಕ್ಕಳನ್ನು ಬೆಳೆಸುವುದರಲ್ಲಿ ಗಮನಾರ್ಹ ಪ್ರಯತ್ನಗಳನ್ನು ಮಾಡುತ್ತಾರೆ ಮತ್ತು ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ.

ಹೆತ್ತವರಾಗಿರುವುದು ಉದ್ರೇಕದಿಂದ ತುಂಬಿರುವಂಥ ಒಂದು ಆನಂದಕರ ಕೆಲಸವಾಗಿರಬಲ್ಲದು. ಹಾಗಿದ್ದರೂ, ಅದೊಂದು ಕಷ್ಟಕರವಾದ, ಸಮಯ ಹಾಗೂ ಶಕ್ತಿಯನ್ನು ಕೇಳಿಕೊಳ್ಳುವಂಥ ಕೆಲಸವಾಗಿದೆ. ನೀವು ಅದರಲ್ಲಿ ಹೇಗೆ ಸಫಲರಾಗಬಲ್ಲಿರಿ? (g03 12/22)

[ಪಾದಟಿಪ್ಪಣಿ]

^ ಎಚ್ಚರ!ವು ಈ ಲೇಖನಮಾಲೆಯಲ್ಲಿ, ಶಿಶು ಆರೈಕೆಯ ಅನೇಕ ಮಾನ್ಯ ತಜ್ಞರ ಅಭಿಪ್ರಾಯಗಳನ್ನು ಸಾದರಪಡಿಸುತ್ತದೆ, ಏಕೆಂದರೆ ಇಂಥ ಸಂಶೋಧನೆಯ ಫಲಿತಾಂಶಗಳು ಹೆತ್ತವರಿಗೆ ಉಪಯುಕ್ತವೂ ಮಾಹಿತಿಭರಿತವೂ ಆಗಿರುವುದು. ಹೀಗಿದ್ದರೂ, ಇಂಥ ಅಭಿಪ್ರಾಯಗಳು ಅನೇಕವೇಳೆ ಸಮಯ ದಾಟಿದಂತೆ ಬದಲಾಗುತ್ತವೆ ಎಂಬದನ್ನು ಒಪ್ಪಿಕೊಳ್ಳಲೇಬೇಕಾಗುತ್ತದೆ, ಮತ್ತು ಇವು, ಎಚ್ಚರ!ವು ಯಾವುದೇ ಹಿಂಜರಿಕೆಯಿಲ್ಲದೆ ಎತ್ತಿಹಿಡಿಯುವಂಥ ಬೈಬಲ್‌ ಮಟ್ಟಗಳಂತಿರುವುದಿಲ್ಲ.

[ಪುಟ 6ರಲ್ಲಿರುವ ಚೌಕ/ಚಿತ್ರ]

ಮೌನ ಕೂಸುಗಳು

ಅಳದಿರುವ ಇಲ್ಲವೆ ನಗದಿರುವ ಕೂಸುಗಳ ಸಂಖ್ಯೆಯಲ್ಲಿ ಹೆಚ್ಚಳವಿದೆಯೆಂದು ಜಪಾನಿನಲ್ಲಿ ಕೆಲವು ವೈದ್ಯರು ಹೇಳುತ್ತಾರೆ. ಈ ಕೂಸುಗಳನ್ನು, ಶಿಶುವೈದ್ಯನಾದ ಸಾತೋಷಿ ಯಾನಾಗೀಸಾವಾರವರು ಮೌನ ಕೂಸುಗಳು ಎಂದು ಕರೆಯುತ್ತಾರೆ. ಕೂಸುಗಳು ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವುದನ್ನು ನಿಲ್ಲಿಸುವುದೇಕೆ? ಈ ಸ್ಥಿತಿಯು, ಕೂಸುಗಳು ಹೆತ್ತವರೊಂದಿಗಿನ ಸಂಪರ್ಕದಿಂದ ವಂಚಿತರಾಗುವಾಗ ಉದ್ಭವಿಸುತ್ತದೆಂದು ಕೆಲವು ವೈದ್ಯರು ನಂಬುತ್ತಾರೆ. ಈ ಸ್ಥಿತಿಯನ್ನು, ಬಲವಂತದ ನಿಸ್ಸಹಾಯಕತೆಯೆಂದು ಕರೆಯಲಾಗಿದೆ. ಸಂವಾದಮಾಡುವ ಅಗತ್ಯಗಳು ನಿರಂತರವಾಗಿ ಅಲಕ್ಷಿಸಲ್ಪಡುವಾಗ ಅಥವಾ ಅಪಾರ್ಥಮಾಡಲ್ಪಟ್ಟಾಗ ಕೂಸುಗಳು ಕಟ್ಟಕಡೆಗೆ ಪ್ರಯತ್ನಿಸುವುದನ್ನೇ ನಿಲ್ಲಿಸಿಬಿಡುತ್ತವೆಂದು ಒಂದು ವಾದ ಸೂಚಿಸುತ್ತದೆ.

ಮಗುವಿಗೆ ಸರಿಯಾದ ಸಮಯದಲ್ಲಿ ಸೂಕ್ತವಾದ ಉತ್ತೇಜಕವು ದೊರಕದಿರುವಾಗ, ಅದನ್ನು ಸಹಾನುಭೂತಿಯುಳ್ಳದ್ದಾಗಿ ಮಾಡುವಂಥ ಮಿದುಳಿನ ಭಾಗವು ಬೆಳೆಯದೇ ಇರಬಹುದೆಂದು, ಟೆಕ್ಸಸ್‌ ಮಕ್ಕಳ ಆಸ್ಪತ್ರೆಯಲ್ಲಿ ಮನಶ್ಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿರುವ ಡಾಕ್ಟರ್‌ ಬ್ರೂಸ್‌ ಪೆರಿ ಸೂಚಿಸುತ್ತಾರೆ. ವಿಪರೀತವಾದ ಭಾವನಾತ್ಮಕ ಅಲಕ್ಷ್ಯದ ವಿದ್ಯಮಾನಗಳಲ್ಲಿ, ಸಹಾನುಭೂತಿ ತೋರಿಸುವ ಸಾಮರ್ಥ್ಯವು ಮರಳಿಪಡೆಯಲಾಗದಂಥ ರೀತಿಯಲ್ಲಿ ಕಳೆದುಹೋಗಬಹುದು. ಕೆಲವೊಂದು ವಿದ್ಯಮಾನಗಳಲ್ಲಿ, ಮಾದಕ ಪದಾರ್ಥ ಸೇವನೆ ಮತ್ತು ವಯಸ್ಕರ ಹಿಂಸಾಚಾರಕ್ಕೆ ಕಾರಣವು, ಜೀವಿತದ ಆರಂಭದಲ್ಲಿನ ಅಂಥ ಅನುಭವಗಳಿಗೆ ಸಂಬಂಧಿಸಿರುತ್ತದೆಂದು ಡಾಕ್ಟರ್‌ ಪೆರಿ ನಂಬುತ್ತಾರೆ.

[ಪುಟ 7ರಲ್ಲಿರುವ ಚಿತ್ರ]

ಹೆತ್ತವರು ಮತ್ತು ಮಗುವು ಸಂವಾದಮಾಡುವಾಗ ಅವರ ನಡುವಿನ ಬಂಧವು ಹೆಚ್ಚೆಚ್ಚು ಬಲವಾಗುತ್ತಾ ಹೋಗುತ್ತದೆ