ನಮ್ಮ ವಾಚಕರಿಂದ
ನಮ್ಮ ವಾಚಕರಿಂದ
ಅಮೆರಿಕದ ಮೂಲನಿವಾಸಿಗಳ ಬೈಬಲು “ಅಮೆರಿಕದ ಮೂಲನಿವಾಸಿಗಳು ಮತ್ತು ಬೈಬಲು” (ಜೂನ್ 8, 1999) ಎಂಬ ಶೀರ್ಷಿಕೆಯುಳ್ಳ ಲೇಖನವನ್ನು ಓದಿದಾಗ, ಮ್ಯಾಸಚೂಸೆಟ್ಸ್ ನಾಡಿಗರಿಗಾಗಿ ಮುದ್ರಿಸಲ್ಪಟ್ಟ ಜಾನ್ ಎಲಿಯಟ್ಸ್ ಅವರ ಬೈಬಲಿನ ನಿಮ್ಮ ಉಲ್ಲೇಖವು ನನ್ನ ಆಸಕ್ತಿಯನ್ನು ವಿಶೇಷವಾಗಿ ಕೆರಳಿಸಿತು. ನನ್ನ ಗಂಡ ಮತ್ತು ನಾನು ಸ್ಯಾನ್ ಮೇರಿನೋ, ಕ್ಯಾಲಿಫೋರ್ನಿಯಾದಲ್ಲಿರುವ ಹನ್ಟಿಂಗ್ಟನ್ ಗ್ರಂಥಾಲಯಕ್ಕೆ ಭೇಟಿನೀಡಿದಾಗ ಆ ಬೈಬಲಿನ ಒಂದು ಪ್ರತಿಯನ್ನು ನೋಡಿದೆವು. ಅದು ಕೀರ್ತನೆಯ ಪುಸ್ತಕಕ್ಕೆ ತೆರೆದಿಡಲ್ಪಟ್ಟಿತ್ತು ಮತ್ತು ಅದರಲ್ಲಿ ಯೆಹೋವನ ಹೆಸರನ್ನು ಪುನಃ ಪುನಃ ನೋಡಿದೆವು. ಈ 17ನೇ ಶತಮಾನದ ಬೈಬಲಿನಲ್ಲಿ ದೇವರ ಹೆಸರನ್ನು ನೋಡುವುದು ಅದೆಷ್ಟು ರೋಮಾಂಚಕವಾಗಿತ್ತು!
ಬಿ. ಜೆ., ಅಮೆರಿಕ
ಬಾಲ ದುಡಿಮೆ “ಬಾಲ ದುಡಿಮೆ—ಶೀಘ್ರದಲ್ಲೇ ಕೊನೆಗೊಳ್ಳಲಿದೆ!” (ಜೂನ್ 8, 1999) ಎಂಬ ಲೇಖನಮಾಲೆಗಾಗಿ ನಿಮಗೆ ಉಪಕಾರ. ಮುಖಪುಟವನ್ನು ಮೊದಲ ಬಾರಿ ನೋಡಿದಾಗ, ಈ ಲೇಖನಗಳು ನನ್ನ ದೇಶಕ್ಕೆ ಸಂಬಂಧಪಟ್ಟದ್ದಲ್ಲವೆಂಬ ನಿಜವಾದ ಅನಿಸಿಕೆ ನನ್ನಲ್ಲಿ ಹುಟ್ಟಿಕೊಂಡಿತು. ಆದರೆ ಅದನ್ನು ಓದಲು ಆರಂಭಿಸಿದಾಗ, ನನಗೆ ನಿಲ್ಲಿಸಲು ಸಾಧ್ಯವಾಗಲಿಲ್ಲ. ಸಂಕ್ಷಿಪ್ತವಾಗಿ ಹೇಳುವುದಾದರೆ, ನಾನು ಕಳವಳಗೊಂಡಿದ್ದೆನು. ಇತ್ತೀಚೆಗೆ ನಾನು ಕೈಯಿಂದ ಹೊಲಿದಿದ್ದ ಒಂದು ಟೆಡ್ಡಿ ಬೇರನ್ನು ತುಂಬ ಕಡಿಮೆ ಬೆಲೆಗೆ ಖರೀದಿಸಿದೆ, ಒಂದುವೇಳೆ ಇದೇ ಟೆಡ್ಡಿ ಬೇರ್ ಜಪಾನಿನಲ್ಲಿ ತಯಾರಿಸಲ್ಪಡುತ್ತಿದ್ದಲ್ಲಿ ಇದಕ್ಕೆ ತುಂಬ ಬೆಲೆಯಿರುತ್ತಿತ್ತು. ಈ ಅಗ್ಗದ ಬೆಲೆಗೆ ಕಾರಣವು, ಚಿಕ್ಕ ಮಕ್ಕಳ ನಿರ್ದಯಿ ಉಪಚಾರವಾಗಿರಬಹುದೆಂದು ಯೋಚಿಸುವುದು ನಿಜಕ್ಕೂ ಹೃದಯವಿದ್ರಾವಕವಾಗಿರುತ್ತದೆ.
ಎಸ್. ಓ., ಜಪಾನ್
ತೂಕ ನಾನು ಹತ್ತು ವರ್ಷ ಪ್ರಾಯದವಳಾಗಿದ್ದೇನೆ. “ಯುವ ಜನರು ಪ್ರಶ್ನಿಸುವುದು . . . ಕೃಶಕಾಯಳಾಗುವ ಹುಚ್ಚನ್ನು ನಾನು ಹೇಗೆ ಜಯಿಸಬಲ್ಲೆ?” (ಜೂನ್ 8, 1999) ಎಂಬ ಲೇಖನಕ್ಕಾಗಿ ನಿಮಗೆ ಉಪಕಾರ. ನಾನು ಬಹಳ ದಪ್ಪಗಿದ್ದೇನೆಂದು ಯಾವಾಗಲೂ ನೆನೆಸುತ್ತಿದ್ದೆ. ಈ ಲೇಖನವನ್ನು ಓದುವುದರಿಂದ, ಒಬ್ಬ ವ್ಯಕ್ತಿಯ ರೂಪವು ಮುಖ್ಯವಾದದ್ದಲ್ಲ, ಬದಲಾಗಿ ಒಬ್ಬ ವ್ಯಕ್ತಿಯ ಗುಣಗಳೇ ಅತಿ ಪ್ರಾಮುಖ್ಯವಾಗಿರುತ್ತವೆ ಎಂಬುದನ್ನು ತಿಳಿದುಕೊಂಡೆ.
ಎಮ್. ಎಸ್., ರಷ್ಯಾ
ತೂಕ “ಯುವ ಜನರು ಪ್ರಶ್ನಿಸುವುದು . . . ಕೃಶಕಾಯಳಾಗುವ ಹುಚ್ಚನ್ನು ನಾನು ಹೇಗೆ ಜಯಿಸಬಲ್ಲೆ?” (ಜೂನ್ 8, 1999) ಎಂಬ ಲೇಖನಕ್ಕಾಗಿ ನಾನು ಹೃದಯದಾಳದಿಂದ ಉಪಕಾರವನ್ನು ಸಲ್ಲಿಸಲು ಬಯಸುತ್ತೇನೆ. ಕಳೆದ ಕೆಲವು ಸಮಯದಿಂದ, ನಾನು ಕೇವಲ ನನ್ನ ಮೈಕಟ್ಟು ಮತ್ತು ನನ್ನ ತೂಕದ ಬಗ್ಗೆಯೇ ಯಾವಾಗಲೂ ಯೋಚಿಸುತ್ತಿದ್ದೆ. ನನ್ನನ್ನು ನಾನೇ ಕನ್ನಡಿಯಲ್ಲಿ ನೋಡಿಕೊಳ್ಳಲು ನಾಚಿಕೆಯಾಗುತ್ತಿತ್ತು ಮತ್ತು ನಾನು ತೂಕದ ತಕ್ಕಡಿಯಲ್ಲಿ ನಿಲ್ಲಲು ಸಹ ಬಯಸುತ್ತಿರಲಿಲ್ಲ. ಹೀಗಿದ್ದರೂ ನಿಮ್ಮ ಲೇಖನವನ್ನು ಓದಿದ ನಂತರ, ಆಂತರಿಕ ವ್ಯಕ್ತಿಗೆ ನಿಜವಾದ ಮೌಲ್ಯತೆಯಿದೆ ಎಂಬುದನ್ನು ನಾನು ಗ್ರಹಿಸಿದೆ.
ಎಲ್. ಆರ್., ಫ್ರಾನ್ಸ್
ದೇವರ ದೃಷ್ಟಿಯಲ್ಲಿ ಅಮೂಲ್ಯರು ನನ್ನ ಪ್ರಯತ್ನಗಳು ಸಾಕಷ್ಟು ಒಳ್ಳೆಯದಾಗಿಲ್ಲವೆಂಬ ಕಾರಣದಿಂದ ಪೂರ್ಣ ಸಮಯದ ಸೌವಾರ್ತಿಕಳಾಗುವುದು ತಕ್ಕದ್ದಲ್ಲವೆಂಬ ಯೋಚನೆಗಳು ಕೆಲವೊಮ್ಮೆ ನನಗೆ ಬರುತ್ತಿದ್ದವು. ಹೀಗಾಗಿ ನಾನು ಅನೇಕ ಸಲ ಖಿನ್ನಳಾಗುತ್ತಿದ್ದೆ ಮತ್ತು ನಾನು ನಿಷ್ಪ್ರಯೋಜಕಳು ಎಂಬ ಭಾವನೆಯು ನನ್ನಲ್ಲಿ ಮೂಡಿ ಬರುತ್ತಿತ್ತು. “ಬೈಬಲಿನ ದೃಷ್ಟಿಕೋನ: ದೇವರ ದೃಷ್ಟಿಯಲ್ಲಿ ನೀವು ಅಮೂಲ್ಯರು!” (ಜುಲೈ 8, 1999) ಎಂಬ ಶೀರ್ಷಿಕೆಯುಳ್ಳ ಲೇಖನವು ಬಹಳ ಒಳ್ಳೆಯ ಅನಿಸಿಕೆಯನ್ನು ನನ್ನಲ್ಲಿ ಉಂಟುಮಾಡಿತು. ನಿಷ್ಪ್ರಯೋಜಕ ಭಾವನೆಗಳನ್ನು ನಮ್ಮಲ್ಲಿ ಮೂಡಿಸಿ, ನಾವು ಯೆಹೋವನನ್ನು ಸೇವಿಸುವುದನ್ನು ನಿಲ್ಲಿಸುವಂತೆ ಮಾಡಲು ಸೈತಾನನು ಕಷ್ಟಪಟ್ಟು ಹೆಣಗಾಡುತ್ತಿದ್ದಾನೆಂಬುದನ್ನು ತಿಳಿದುಕೊಳ್ಳಲು ಅದು ನನಗೆ ಸಹಾಯಮಾಡಿತು.
ಎಲ್. ಡಬ್ಲ್ಯೂ., ಕೆನಡ
ಲೇಖನವು ಬಹಳ ಸಾಂತ್ವನಕಾರಿಯಾಗಿತ್ತು. ಈ ವರೆಗೆ, ಯೆಹೋವನು ನನ್ನ ಪ್ರಾರ್ಥನೆಗಳನ್ನು ಕೇಳುವುದಿಲ್ಲ ಎಂಬ ಅನಿಸಿಕೆ ನನ್ನಲ್ಲಿತ್ತು. ಆದರೆ ನಿಮ್ಮ ಲೇಖನವನ್ನು ಓದಿದಂದಿನಿಂದ, ನನಗೆ ಯೆಹೋವನಲ್ಲಿ ಮತ್ತು ಸ್ವತಃ ನನ್ನಲ್ಲಿ ಹೆಚ್ಚಿನ ವಿಶ್ವಾಸವು ಬೆಳೆದಿದೆ. ಇಂತಹ ಸಾಂತ್ವನದಾಯಕ ಲೇಖನವನ್ನು ಪ್ರಕಾಶಿಸುವುದನ್ನು ದಯವಿಟ್ಟು ಮುಂದುವರಿಸಿರಿ.
ಆರ್.ವಿ.ಟಿ., ಬೆಲ್ಜಿಯಮ್
ನನ್ನ ಸ್ವ-ಗೌರವವನ್ನು ಕಸಿದುಕೊಂಡಿರುವ ತಪ್ಪುಗಳು ಅಂದರೆ, ನೋವುಭರಿತ ಅನುಭವಗಳ ಗಾಯದ ಗುರುತುಗಳು ನನ್ನಲ್ಲಿ ಇನ್ನೂ ಇವೆ. ಯೆಹೋವನೊಂದಿಗೆ ಇಂದು ನನಗಿರುವ ಸಂಬಂಧವು ಮತ್ತು ಮಾನವ ಗ್ರಹಿಕೆಗೆ ಮೀರಿದ ಆತನ ಪ್ರೀತಿಯ ಕುರಿತು ನನಗಿರುವ ಜ್ಞಾನವು ಆನಂದದ ಮತ್ತು ಸುರಕ್ಷೆಯ ಅನಿಸಿಕೆಗಳನ್ನು ನನಗೆ ಕೊಡುತ್ತದೆ.
ವಿ.ಎಸ್.ಸಿ., ಬ್ರೆಸಿಲ್
ಈ ಲೇಖನವನ್ನು ನಾನು ಈಗಷ್ಟೇ ಆಡಿಯೋಕ್ಯಾಸೆಟ್ಟಿನಲ್ಲಿ ಆಲಿಸಿದೆ. ನಾನು 44 ವರ್ಷಗಳಿಂದ ಕುರುಡನಾಗಿದ್ದೇನೆ ಮತ್ತು ಕ್ರೈಸ್ತನಾಗಿ ನಾನು ದೀಕ್ಷಾಸ್ನಾನವನ್ನು ಪಡೆದುಕೊಂಡ ನಂತರವೂ, ನಾನು ಇಷ್ಟು ಅಮೂಲ್ಯನಾಗಿದ್ದೇನೆಂಬ ಅನಿಸಿಕೆ ನನಗೆ ಬರಲೇ ಇಲ್ಲ. ಈ ಲೇಖನವು ನನ್ನನ್ನು ಬಹಳವಾಗಿ ಹುರಿದುಂಬಿಸಿತು. ನಮ್ಮ ಬಗ್ಗೆ ನಮಗೆ ಯಾವ ಅನಿಸಿಕೆಯಿದೆಯೋ ಆ ಅನಿಸಿಕೆ ದೇವರಿಗೆ ಇಲ್ಲ ಎಂಬುದಕ್ಕಾಗಿ ನಾನು ಆತನಿಗೆ ಉಪಕಾರ ಸಲ್ಲಿಸುತ್ತೇನೆ.
ಎ. ಕೆ., ಇಟಲಿ
ನಾನು ಹತಾಶೆಗೊಳಿಸುವ ಭಾವೋದ್ರೇಕಗಳೊಂದಿಗೆ ಬಾಧಿತನಾಗಿದ್ದೇನೆ. ಆದರೆ ನಾನು ಆ ಲೇಖನವನ್ನು ಓದುತ್ತಾ ಹೋದಂತೆ, ಯೆಹೋವನು ನನ್ನೊಂದಿಗೆ ಬಹಳ ಮೃದುವಾಗಿ ಮಾತಾಡುತ್ತಿರುವಂತೆ ಅನಿಸಿತು. ಯೋಚಿಸುವ ನಮೂನೆಗಳನ್ನು ಬದಲಾಯಿಸುವುದು ಬಹಳ ಕಷ್ಟ, ಆದರೆ ಆ ಲೇಖನದ ಈ ಮಾತುಗಳನ್ನು ನಾನು ಮರೆಯದಿರಲು ಪ್ರಯತ್ನಿಸುವೆನು: “ಯೆಹೋವನು ಒಬ್ಬ ಪ್ರೀತಿಪರ ತಂದೆಯೋಪಾದಿ ‘ನೆರವಾಗುತ್ತಾನೆ.’ ಅಷ್ಟುಮಾತ್ರವಲ್ಲದೆ, ಆತನು ಗಮನಕೊಡುವವನು, ಆಸಕ್ತಿಯುಳ್ಳವನು ಮತ್ತು ಸಹಾಯಮಾಡಲು ಯಾವಾಗಲೂ ಸಿದ್ಧನಾಗಿರುವವನೂ ಆಗಿರುತ್ತಾನೆ.—ಕೀರ್ತನೆ 147:1, 3.”
ಕೆ. ಎಫ್., ಜಪಾನ್