ವಿದೇಶಿ ಭಾಷೆಯೊಂದನ್ನು ಕಲಿತುಕೊಳ್ಳಲು ನೀವು ಇಷ್ಟಪಡುತ್ತೀರೋ?
ವಿದೇಶಿ ಭಾಷೆಯೊಂದನ್ನು ಕಲಿತುಕೊಳ್ಳಲು ನೀವು ಇಷ್ಟಪಡುತ್ತೀರೋ?
ಬ್ರಿಟನಿನ ಎಚ್ಚರ! ಸುದ್ದಿಗಾರರಿಂದ
“ಮಾಡುವುದಕ್ಕಿಂತ ಹೇಳುವುದು ಸುಲಭ!” ಹೀಗೆಂದು, ಅನೇಕ ಜನರು ವಿದೇಶಿ ಭಾಷೆಯೊಂದನ್ನು ಕಲಿತುಕೊಳ್ಳಲು ವಿಶೇಷ ಪ್ರಯತ್ನವನ್ನು ಮಾಡಿದ ಬಳಿಕ ಹೇಳುತ್ತಾರೆ. ಬೇರೊಂದು ಭಾಷೆಯನ್ನು ಕಲಿತುಕೊಳ್ಳುವುದು ಸವಾಲನ್ನೊಡ್ಡುವಂತಹ ವಿಷಯವಾಗಿದೆ ಎಂಬುದಂತೂ ನಿಜ. ಆದರೆ ಪ್ರಯತ್ನವು ಸಾರ್ಥಕವಾದದ್ದು ಎಂಬುದು ಸಫಲತೆಯನ್ನು ಪಡೆದುಕೊಂಡಿರುವವರ ಹೇಳಿಕೆಯಾಗಿದೆ.
ಒಂದು ಹೊಸ ಭಾಷೆಯನ್ನು ಕಲಿತುಕೊಳ್ಳುವುದಕ್ಕೆ ಅನೇಕ ಕಾರಣಗಳಿವೆ. ಉದಾಹರಣೆಗೆ, ಆ್ಯಂಡ್ರೂ ಎಂಬುವವನು ಫ್ರಾನ್ಸ್‌ನಲ್ಲಿ ರಜೆಯನ್ನು ಕಳೆಯಲು ನೆನಸಿದ ಹಾಗೂ ಅಲ್ಲಿನ ಜನರೊಂದಿಗೆ ಅವರ ಮಾತೃಭಾಷೆಯಲ್ಲಿ ಮಾತಾಡಲು ಅವನು ಇಷ್ಟಪಟ್ಟ. ಗ್ವೀಡೋ ಎಂಬುವವನು ಇಂಗ್ಲೆಂಡಿನಲ್ಲಿ ಜನಿಸಿದನಾದರೂ ಅವನ ಕುಟುಂಬಕ್ಕೆ ಇಟ್ಯಾಲಿಯನ್ ಹಿನ್ನೆಲೆಯಿತ್ತು. “ನನಗೆ ಒಂದು ಉಪಭಾಷೆ ಮಾತ್ರ ಗೊತ್ತಿತ್ತು. ಆದುದರಿಂದ, ಇಟ್ಯಾಲಿಯನ್ ಭಾಷೆಯನ್ನು ಚೆನ್ನಾಗಿ ಮಾತಾಡುವುದನ್ನು ಕಲಿತುಕೊಳ್ಳಲು ನಾನು ಇಷ್ಟಪಟ್ಟೆ” ಎಂದು ಅವನು ಹೇಳುತ್ತಾನೆ. ಜಾನತನ್‌ನ ತಮ್ಮನು ಇತ್ತೀಚೆಗೆ ವಿದೇಶಕ್ಕೆ ಸ್ಥಳಾಂತರಿಸಿ, ಸ್ಪ್ಯಾನಿಷ್ ಹುಡುಗಿಯೊಬ್ಬಳನ್ನು ಮದುವೆಯಾದನು. “ನನ್ನ ತಮ್ಮನನ್ನು ನಾನು ಭೇಟಿಯಾದಾಗ, ನನ್ನ ಹೊಸ ಸಂಬಂಧಿಕರೊಂದಿಗೆ ಅವರ ಮಾತೃಭಾಷೆಯಲ್ಲಿ ಸಂಭಾಷಿಸಲು ನಾನು ಬಯಸಿದೆ” ಎಂದು ಜಾನಾತನ್ ಹೇಳುತ್ತಾನೆ.
ವಿದೇಶಿ ಭಾಷೆಯೊಂದನ್ನು ಕಲಿತುಕೊಳ್ಳುವುದರಲ್ಲಿ ಇನ್ನಿತರ ಪ್ರಯೋಜನಗಳು ಸಹ ಇವೆ. “ಇದು ನನಗೆ ಸಹಾನುಭೂತಿಯನ್ನು ತೋರಿಸಲು ಸಹಾಯಮಾಡಿತು. ಏಕೆಂದರೆ ವಿದೇಶಿಗಳು ತಮ್ಮ ಭಾಷೆಯನ್ನು ಮಾತಾಡದ ದೇಶವೊಂದಕ್ಕೆ ಬರುವಾಗ ಅವರಿಗೆ ಹೇಗನಿಸುತ್ತದೆ ಎಂಬುದನ್ನು ನಾನು ಈಗ ಅರ್ಥಮಾಡಿಕೊಳ್ಳಬಲ್ಲೆ” ಎಂದು ಲ್ವೀಸ್ ಹೇಳುತ್ತಾಳೆ. ಪಮೆಲಳನ್ನು ಇದು ಇನ್ನೂ ವೈಯಕ್ತಿಕವಾಗಿ ಪ್ರಭಾವಿಸಿತು. ಅವಳು ಇಂಗ್ಲೆಂಡಿನಲ್ಲಿ ಬೆಳೆಸಲ್ಪಟ್ಟಿದ್ದರಿಂದ, ಅವಳಿಗೆ ಚೈನೀಸ್ ಭಾಷೆ ಅಷ್ಟೇನೂ ಗೊತ್ತಿರಲಿಲ್ಲ. ಆದರೆ, ಇದು ಅವಳ ಮಾತೃಭಾಷೆಯಾಗಿತ್ತು. ಆದುದರಿಂದ, ಪಮೆಲ ಮತ್ತು ಅವಳ ತಾಯಿ ದೂರದೂರವೇ ಉಳಿದರು. “ನಮ್ಮಿಬ್ಬರ ನಡುವೆ ಹೆಚ್ಚು ಮಾತುಕತೆಯೇ ಇರಲಿಲ್ಲ, ಆದರೆ ಈಗ ನಾನು ಚೈನೀಸ್ ಭಾಷೆಯನ್ನು ಮಾತಾಡಬಲ್ಲೆ, ಇದು ನಮ್ಮಿಬ್ಬರನ್ನೂ ಹತ್ತಿರಕ್ಕೆ ತಂದಿದ್ದು, ನಮ್ಮ ಸಂಬಂಧವನ್ನು ಉತ್ತಮಗೊಳಿಸಿದೆ” ಎಂದು ಪಮೆಲ ಒಪ್ಪಿಕೊಳ್ಳುತ್ತಾಳೆ.
ಸಫಲತೆಗೆ ಸಹಾಯಕಗಳು
ವಿದೇಶಿ ಭಾಷೆಯೊಂದನ್ನು ಕಲಿತುಕೊಳ್ಳುವುದರಲ್ಲಿ ಸಫಲರಾಗಲು ನಿಮಗೆ ಯಾವುದರ ಅಗತ್ಯವಿದೆ? ಸಫಲತೆಯನ್ನು ಪಡೆದುಕೊಂಡಿರುವ ಅನೇಕರು ಈ ಮುಂದಿನ ವಿಷಯಗಳ ಮೇಲೆ ಒತ್ತನ್ನು ಹಾಕುತ್ತಾರೆ.
● ಪ್ರಚೋದಕ ಶಕ್ತಿ. ನಿಮ್ಮ ಗುರಿಯನ್ನು ಬೆನ್ನಟ್ಟಲು ಒಂದು ಕಾರಣ, ಅಂದರೆ ಪ್ರೋತ್ಸಾಹಕ ಶಕ್ತಿ ನಿಮಗೆ ಅಗತ್ಯ. ಉಚ್ಚಮಟ್ಟದ ಪ್ರಚೋದಕ ಶಕ್ತಿಯುಳ್ಳ ವಿದ್ಯಾರ್ಥಿಗಳು ಸಾಮಾನ್ಯವಾಗಿ ಅತ್ಯುತ್ತಮವಾದ ಸಾಧನೆಯನ್ನು ಮಾಡುತ್ತಾರೆ.
● ನಮ್ರತೆ. ನಿಮ್ಮಿಂದ ಅತಿಯಾದುದನ್ನು ನಿರೀಕ್ಷಿಸಬೇಡಿ. ಮೊದಮೊದಲು ತಪ್ಪುಗಳನ್ನು ಮಾಡುವುದು ಅನಿವಾರ್ಯವಾಗಿರುತ್ತದೆ. “ಜನರು ನಗುವುದಂತೂ ಖಂಡಿತ, ಆದುದರಿಂದ ನೀವು ಹಾಸ್ಯಪ್ರಜ್ಞೆಯುಳ್ಳವರಾಗಿರಿ!” ಎಂದು ಆ್ಯಲಿಸನ್ ಹೇಳುತ್ತಾಳೆ. “ಹೆಜ್ಜೆಯನ್ನು ಹಾಕಲು ಕಲಿತುಕೊಳ್ಳುತ್ತಿರುವ ಮಗುವಿನಂತೆ ನೀವಿದ್ದೀರಿ. ಅನೇಕ ಬಾರಿ ನೀವು ಎಡವಿಬೀಳಬಹುದು. ಆದರೆ ಪುನಃ ಎದ್ದು ಪ್ರಯತ್ನಿಸಬೇಕು ಅಷ್ಟೇ” ಎಂದು ವೆಲರೀ ಹೇಳುತ್ತಾಳೆ.
● ತಾಳ್ಮೆ. “ನನಗೆ ಮೊದಲ ಎರಡು ವರ್ಷಗಳು ತುಂಬ ಕಷ್ಟಕರವಾಗಿದ್ದವು. ಕಲಿಯುವುದನ್ನು ನಿಲ್ಲಿಸಿಬಿಡುವುದೇ ವಾಸಿ ಎಂದು ನನಗೆ ಕೆಲವೊಮ್ಮೆ ತೋರಿತು” ಎಂದು ಡೇವಿಡ್ ಒಪ್ಪಿಕೊಳ್ಳುತ್ತಾನೆ. ಆದರೂ ಅವನು ಹೇಳುವುದು, “ಕ್ರಮೇಣ ಅದು ಸುಲಭವಾಗುತ್ತಾ ಹೋಗುತ್ತದೆ!” ಜಿಲ್ ಎಂಬಾಕೆಯ ಅನಿಸಿಕೆಯೂ ಇದೇ ಆಗಿದೆ. “ನೀವು ಮಾಡಿರುವಂತಹ ಪ್ರಗತಿಯ ಬಗ್ಗೆ ಪರಿಶೀಲಿಸಿ ನೋಡಿದರೆ ಮಾತ್ರ, ಎಷ್ಟು ಪ್ರಗತಿಯನ್ನು ಮಾಡಿದ್ದೀರಿ
ಎಂಬುದು ನಿಮಗೆ ತಿಳಿದುಬರುತ್ತದೆ” ಎಂದು ಅವಳು ಹೇಳುತ್ತಾಳೆ.● ಅಭ್ಯಾಸ. ಹೊಸದಾದ ಭಾಷೆಯನ್ನು ನಿರರ್ಗಳವಾಗಿ ಮಾತಾಡುವುದರಲ್ಲಿ ಕ್ರಮವಾದ ದಿನಚರಿಯು ನಿಮಗೆ ಸಹಾಯಮಾಡುತ್ತದೆ. ಅಭ್ಯಾಸವನ್ನು ಕೇವಲ ಕೆಲವೇ ನಿಮಿಷಗಳ ವರೆಗೆ ಮಾಡಲು ಸಾಧ್ಯವಾಗಿದ್ದರೂ ಸರಿ, ಅದನ್ನು ಪ್ರತಿದಿನವೂ ಮಾಡಲು ಪ್ರಯತ್ನಿಸಿರಿ. ‘ಯಾವಾಗಲೋ ಒಮ್ಮೆ ಬಹಳ ಅಭ್ಯಾಸಿಸುವುದಕ್ಕಿಂತಲೂ’ ‘ಆಗಿಂದಾಗ್ಗೆ ಸ್ವಲ್ಪಸ್ವಲ್ಪ ಅಭ್ಯಾಸಿಸುವುದು’ ಉತ್ತಮ ಎಂಬುದಾಗಿ ಒಂದು ಪಠ್ಯಪುಸ್ತಕವು ಹೇಳುತ್ತದೆ.
ಸಹಾಯಕಾರಿ ಸಾಧನಗಳು
ವಿದೇಶಿ ಭಾಷೆಯೊಂದನ್ನು ಕಲಿತುಕೊಳ್ಳುವ ಪಂಥಾಹ್ವಾನವನ್ನು ನೀವು ಎದುರಿಸಲು ಸಿದ್ಧರಾಗಿದ್ದೀರೋ? ಹಾಗಿರುವುದಾದರೆ, ಮುಂದಿನ ಸಾಧನಗಳು ನಿಮ್ಮ ಪ್ರಗತಿಯನ್ನು ಹೆಚ್ಚಿಸಬಲ್ಲವು.
● ಕ್ಷಣಕಾರ್ಡುಗಳು (ಫ್ಲ್ಯಾಷ್ ಕಾರ್ಡ್ಸ್). ಪ್ರತಿಯೊಂದು ಕಾರ್ಡಿನ ಮುಂಭಾಗದಲ್ಲಿ ಒಂದು ಪದ ಅಥವಾ ವಾಕ್ಸರಣಿಯಿದ್ದು, ಅದರ ಹಿಂಭಾಗದಲ್ಲಿ ಅದರ ತರ್ಜುಮೆಯಿರುತ್ತದೆ. ನೀವಿರುವ ಸ್ಥಳದಲ್ಲಿ ಇವು ಲಭ್ಯವಾಗಿರದಿದ್ದಲ್ಲಿ, ನೀವೇ ಸ್ವಂತ ಈ ಕಾರ್ಡುಗಳನ್ನು ಮಾಡಿಕೊಂಡು, ಅವುಗಳನ್ನು ಒಂದು ಫೈಲ್‌ನಲ್ಲಿಡಸಾಧ್ಯವಿದೆ.
● ಭಾಷಾ ಸಂಬಂಧಿತ ಶೈಕ್ಷಣಿಕ ಆಡಿಯೋ ಮತ್ತು ವಿಡಿಯೋ ಕ್ಯಾಸೆಟ್ಟುಗಳು. ಇವುಗಳು ಭಾಷೆಯನ್ನು ಹೇಗೆ ಸರಿಯಾದ ರೀತಿಯಲ್ಲಿ ಮಾತಾಡಲಾಗುತ್ತದೆ ಎಂಬುದನ್ನು ಕೇಳಿಸಿಕೊಳ್ಳಲು ನಿಮಗೆ ಸಹಾಯಮಾಡಸಾಧ್ಯವಿದೆ. ಉದಾಹರಣೆಗೆ, ಡೇವಿಡ್ ತನ್ನ ಕಾರನ್ನು ಚಲಾಯಿಸುತ್ತಿರುವಾಗ ಪ್ರವಾಸಿಗರ ವಾಕ್ಸರಣಿ ಪುಸ್ತಕದ ಆಡಿಯೋ ಕ್ಯಾಸೆಟ್ ಅನ್ನು ಕೇಳಿಸಿಕೊಳ್ಳುವ ಮೂಲಕ ಜಪಾನೀಸ್ ಮೂಲಪಾಠಗಳನ್ನು ಕಲಿತುಕೊಂಡನು.
● ಅಂತರ್‌ಪ್ರಭಾವಕಾರಿ ಕಂಪ್ಯೂಟರ್ ಪ್ರೋಗ್ರ್ಯಾಮ್‌ಗಳು. ಇವುಗಳಲ್ಲಿ ಕೆಲವೊಂದು ನಿಮ್ಮ ಧ್ವನಿಯನ್ನು ರೆಕಾರ್ಡ್‌ಮಾಡಲು ಮತ್ತು ಆ ಭಾಷೆಯನ್ನು ಮಾತಾಡುವವರ ಉಚ್ಚಾರಣೆಯೊಂದಿಗೆ ನಿಮ್ಮದನ್ನು ಹೋಲಿಸಿ ನೋಡಲು ಅವಕಾಶವನ್ನು ನೀಡುತ್ತದೆ.
● ರೇಡಿಯೋ ಮತ್ತು ಟೆಲಿವಿಷನ್. ನೀವಿರುವ ಸ್ಥಳದಲ್ಲಿ ನೀವು ಕಲಿತುಕೊಳ್ಳುತ್ತಿರುವ ಭಾಷೆಯಲ್ಲಿ ರೇಡಿಯೋ ಅಥವಾ ಟೆಲಿವಿಷನ್ ಪ್ರೋಗ್ರ್ಯಾಮ್‌ಗಳು ಪ್ರಸಾರವಾಗುವಲ್ಲಿ, ಅದನ್ನು ಕೇಳಿಸಿಕೊಂಡು, ನಿಮಗೆ ಎಷ್ಟು ಅರ್ಥವಾಗುತ್ತದೆ ಎಂಬುದನ್ನು ಏಕೆ ಪರೀಕ್ಷಿಸಬಾರದು?
● ಪತ್ರಿಕೆಗಳು ಮತ್ತು ಪುಸ್ತಕಗಳು. ಹೊಸ ಭಾಷೆಯಲ್ಲಿ ಮುದ್ರಿತ ವಿಷಯಗಳನ್ನು ಓದಲು ಪ್ರಯತ್ನಿಸಿರಿ. ಮುದ್ರಿತ ಭಾಷೆಯನ್ನು ಅರ್ಥಮಾಡಿಕೊಳ್ಳುವುದು ತೀರ ಕಷ್ಟ ಅಥವಾ ತೀರ ಸುಲಭವಾಗಿಲ್ಲವೆಂಬುದನ್ನು ಖಚಿತಪಡಿಸಿಕೊಳ್ಳಿರಿ. *
ಭಾಷೆಯಲ್ಲಿ ಪಾರಂಗತರಾಗುವುದು
ಇಂದಲ್ಲದಿದ್ದರೂ ನಾಳೆ ಆ ಭಾಷೆಯನ್ನು ಮಾತಾಡುವ ಜನರೊಂದಿಗೆ ನೀವು ಸಂಭಾಷಿಸಲೇಬೇಕಾಗುತ್ತದೆ. ಇದು ದೂರದೇಶಕ್ಕೆ ಪ್ರಯಾಣಿಸುವುದನ್ನು ನಿಮ್ಮಿಂದ ಕೇಳಿಕೊಳ್ಳುವುದಿಲ್ಲ. ಅದಕ್ಕೆ ಬದಲಾಗಿ, ನಿಮ್ಮ ಸ್ವಂತ ದೇಶದಲ್ಲಿರುವ ಯೆಹೋವನ ಸಾಕ್ಷಿಗಳ ವಿದೇಶಿ ಭಾಷೆಯನ್ನಾಡುವ ಸಭೆಗೆ ನೀವು ಭೇಟಿನೀಡಸಾಧ್ಯವಿದೆ.
ವಿಷಯವು ಏನೇ ಆಗಿರಲಿ, ಪದಗಳನ್ನು ಮತ್ತು ವಾಕ್ಸರಣಿಗಳನ್ನು ನಿಮ್ಮ ಮಾತೃಭಾಷೆಯಿಂದ ತರ್ಜುಮೆ ಮಾಡುವುದಕ್ಕೆ ಬದಲಾಗಿ ಹೊಸ ಭಾಷೆಯಲ್ಲಿ ಯೋಚಿಸುವುದಕ್ಕೆ ಕಲಿಯುವುದು ನಿಮ್ಮ ಗುರಿಯಾಗಿರತಕ್ಕದ್ದು. ನೀವು ಕಲಿಯುತ್ತಿರುವಂತಹ ಹೊಸ ಭಾಷೆಯನ್ನು ಮಾತನಾಡುವ ಜನರ ರೂಢಿಗಳು ಮತ್ತು ರೀತಿನೀತಿಗಳ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನವನ್ನು ಮಾಡುವುದಾದರೆ ಖಂಡಿತವಾಗಿಯೂ ಇದು ನಿಮಗೆ ಸಹಾಯವನ್ನು ಮಾಡಸಾಧ್ಯವಿದೆ. “ಒಂದು ಭಾಷೆಯ ಭಾಗವಾಗಿರುವ ಸಂಸ್ಕೃತಿಯ ಗುಣಲಕ್ಷಣಗಳು ಮತ್ತು ಮೌಲ್ಯಗಳನ್ನು ತಿಳಿದುಕೊಳ್ಳದೇ ಇರುವುದಾದರೆ ಒಂದು ಭಾಷೆಯನ್ನು ಸಂಪೂರ್ಣವಾಗಿ ಕಲಿತುಕೊಳ್ಳಲು ಸಾಧ್ಯವಿಲ್ಲ” ಎಂದು ಭಾಷಾ ಪರಿಣಿತನಾದ ರಾಬರ್ಟ್ ಲಾಡೋ ಹೇಳುತ್ತಾನೆ.
ಒಂದು ಕಿವಿಮಾತು: ನಿಮ್ಮ ಪ್ರಗತಿಯು ಸ್ವಲ್ಪ ನಿಧಾನವಾಗಿದೆ ಎಂದು ತೋರಿದರೂ ನಿರುತ್ತೇಜನಗೊಳ್ಳದಿರಿ. ಹೊಸದಾದ ಭಾಷೆಯೊಂದನ್ನು ಕಲಿತುಕೊಳ್ಳುವುದು ಒಂದು ನಿರಂತರವಾದ ಪ್ರಕ್ರಿಯೆಯಾಗಿದೆ. “ಕಲಿಯುವುದನ್ನು ನಾನೆಂದೂ ನಿಲ್ಲಿಸುವುದಿಲ್ಲ, ಏಕೆಂದರೆ ಭಾಷೆಯು ಯಾವಾಗಲೂ ಅಭಿವೃದ್ಧಿಯಾಗುತ್ತಿರುತ್ತದೆ” ಎಂದು 20 ವರ್ಷಗಳ ಹಿಂದೆ ಸನ್ನೆ ಭಾಷೆಯನ್ನು ಕಲಿತುಕೊಂಡ ಜಿಲ್ ಹೇಳುತ್ತಾಳೆ.
ನೀವು ವಿದೇಶಿ ಭಾಷೆಯೊಂದನ್ನು ಕಲಿತುಕೊಳ್ಳಲು ಇಷ್ಟಪಡುತ್ತೀರೋ? ನೀವು ಇಷ್ಟಪಡುತ್ತೀರಾದರೆ, ಒಂದು ದೊಡ್ಡ ಪಂಥಾಹ್ವಾನವಾಗಿರುವ, ಆದರೆ ನಿಜವಾಗಿಯೂ ಸಾರ್ಥಕವಾಗಿರುವ ಪ್ರಯತ್ನಕ್ಕೆ ಕೈಹಾಕಲು ಸಿದ್ಧರಾಗಿರಿ.
[ಪಾದಟಿಪ್ಪಣಿಗಳು]
^ ಎಚ್ಚರ! ಪತ್ರಿಕೆಯು ಈಗ 82 ಭಾಷೆಗಳಲ್ಲಿ ಲಭ್ಯವಿದೆ ಮತ್ತು ಅದರ ಜೊತೆಪತ್ರಿಕೆಯಾದ ಕಾವಲಿನಬುರುಜು 132 ಭಾಷೆಗಳಲ್ಲಿ ಈಗ ಮುದ್ರಣವಾಗುತ್ತಿದೆ. ಹೊಸ ಭಾಷೆಯೊಂದನ್ನು ಕಲಿತುಕೊಳ್ಳುತ್ತಿರುವಾಗ, ಈ ಪತ್ರಿಕೆಗಳಲ್ಲಿರುವ ಸ್ಪಷ್ಟವಾದ ಬರವಣಿಗೆಯು ಸಹಾಯವನ್ನು ನೀಡಿದೆ ಎಂಬುದನ್ನು ಅನೇಕರು ಕಂಡುಕೊಂಡಿದ್ದಾರೆ.
[ಪುಟ 12, 13ರಲ್ಲಿರುವ ಚಿತ್ರಗಳು]
ನಿಮ್ಮ ಶಬ್ದಭಂಡಾರಕ್ಕೆ ಇನ್ನೂ ಹೆಚ್ಚಿನದ್ದನ್ನು ಕೂಡಿಸಲಿಕ್ಕಾಗಿ. . .
. . .ನೀವು ಕಲಿಯುತ್ತಿರುವ ಭಾಷೆಗೆ ನಿಮ್ಮ ಮಾತೃಭಾಷೆಯನ್ನು ಹೋಲಿಸಿ ನೋಡಸಾಧ್ಯವಿದೆ