ಪರದೈಸ್ ಭೂಮಿ—ನಿಜನಾ ಸುಳ್ಳಾ?
ಪರದೈಸ್! ಅಥವಾ ಪ್ಯಾರಡೈಸ್! ಅಂದಾಕ್ಷಣ ನಿಮಗೆ ಪ್ರವಾಸಿ ತಾಣಗಳ ಪುಸ್ತಕಗಳು ನೆನಪಿಗೆ ಬರಬಹುದು. ದೂರದ “ಪ್ಯಾರಡೈಸ್”ಗೆ ಹೋಗಿ ವಿಶ್ರಾಂತಿ ಪಡೆಯುತ್ತಾ ಜೀವನದ ಕಷ್ಟಗಳನ್ನೆಲ್ಲಾ ಮರೆಯುವಂತೆ ಅವು ಉತ್ತೇಜಿಸುತ್ತವೆ. ಆದರೆ, ಅಲ್ಲಿ ಹೋಗಿ ಬಂದ ಮೇಲೆ ನಮ್ಮ ಜೀವನದ ಜಂಜಾಟ, ಕಷ್ಟಗಳು ಮತ್ತೆ ನಮ್ಮನ್ನು ಮುತ್ತಿಕೊಳ್ಳುತ್ತವೆ.
ಅದೇನೇ ಆದರೂ, ಪರದೈಸ್ ಅಂದರೆ ಎಲ್ಲರಿಗೂ ತುಂಬ ಆಸಕ್ತಿ. ಪರದೈಸ್ ಅನ್ನೋದು ಬರೀ ಕಲ್ಪನೆನಾ? ಬರೀ ಕಲ್ಪನೆನೇ ಆದರೆ ಯಾಕೆ ಎಲ್ಲರಿಗೂ ಇದರಲ್ಲಿ ಆಸಕ್ತಿ? ಮುಂದೆ ಯಾವತ್ತಾದರೂ ಇಡೀ ಭೂಮಿ ಪರದೈಸಾಗುತ್ತಾ?
ಪರದೈಸಿನ ಹಿನ್ನೆಲೆ
ಹಿಂದಿನ ಕಾಲದಿಂದಲೂ ಜನರು ಪರದೈಸಿನ ಬಗ್ಗೆ ತುಂಬ ಆಸಕ್ತಿ ತೋರಿಸಿದ್ದಾರೆ. ಅನೇಕರು ಈ ರೀತಿ ಆಸಕ್ತಿ ತೋರಿಸಲು ಕಾರಣ ಬೈಬಲ್ ಆಗಿದೆ. ಅದರಲ್ಲಿ, ‘ಪೂರ್ವ ದಿಕ್ಕಿನಲ್ಲಿರುವ ಏದೆನ್ ಸೀಮೆಯಲ್ಲಿ ಒಂದು ಉದ್ಯಾನವನ’ ಇತ್ತು ಎಂದು ತಿಳಿಸಲಾಗಿದೆ. ಅದು ಯಾಕೆ ವಿಶೇಷವಾಗಿತ್ತು? “ಯೆಹೋವ ದೇವರು ನೋಟಕ್ಕೆ ರಮ್ಯವಾಗಿಯೂ ಊಟಕ್ಕೆ ಅನುಕೂಲವಾಗಿಯೂ ಇರುವ ಎಲ್ಲಾ ತರದ ಮರಗಳನ್ನು ಆ ಭೂಮಿಯಲ್ಲಿ ಬೆಳೆಯಮಾಡಿದನು” ಎನ್ನುತ್ತದೆ ಬೈಬಲ್. ಅದು ಎಷ್ಟು ಚೆನ್ನಾಗಿತ್ತೆಂದರೆ ಅದನ್ನು ನೋಡಲು ಎರಡು ಕಣ್ಣು ಸಾಕಾಗುತ್ತಿರಲಿಲ್ಲ. ಆದರೆ, ಎಲ್ಲದಕ್ಕಿಂತ ಮುಖ್ಯ ಆಕರ್ಷಣೆ ‘ಆ ವನದ ಮಧ್ಯದಲ್ಲಿದ್ದ ಜೀವದಾಯಕ ವೃಕ್ಷವಾಗಿತ್ತು.’—ಆದಿಕಾಂಡ 2:8, 9.
ಆ ಉದ್ಯಾನವನದಲ್ಲಿ ನಾಲ್ಕು ನದಿಗಳು ಹುಟ್ಟಿ ಹರಿಯುತ್ತಿದ್ದವು ಎಂದು ಬೈಬಲಿನ ಆದಿಕಾಂಡ ಪುಸ್ತಕದಲ್ಲಿ ತಿಳಿಸಲಾಗಿದೆ. ಅವುಗಳಲ್ಲಿ ಎರಡು ನದಿಗಳಾದ ಟೈಗ್ರಿಸ್ (ಹಿದ್ದೆಕೆಲ್) ಮತ್ತು ಯೂಫ್ರೇಟೀಸ್ ಇವತ್ತಿಗೂ ಇವೆ. (ಆದಿಕಾಂಡ 2:10-14; ಪಾದಟಿಪ್ಪಣಿ) ಈ ಎರಡು ನದಿಗಳು ಈಗಿನ ಇರಾಕ್ (ಇದು ಮುಂಚೆ ಪ್ರಾಚೀನ ಪರ್ಷಿಯದ ಭಾಗವಾಗಿತ್ತು) ಮೂಲಕ ಪರ್ಷಿಯನ್ ಕೊಲ್ಲಿಯನ್ನು ಸೇರುತ್ತವೆ.
ಹಾಗಾಗಿ, ಆರಂಭದಲ್ಲಿ ಭೂಮಿಯಲ್ಲಿದ್ದ ಪರದೈಸ್ ಪರ್ಷಿಯದ ಸಾಂಸ್ಕೃತಿಕ ಪರಂಪರೆಯ ಭಾಗವಾಗಿತ್ತು. ಅಮೆರಿಕದ ಪೆನ್ಸಿಲ್‌ವೇನಿಯಾದಲ್ಲಿರುವ ಫಿಲೆಡೆಲ್ಫಿಯಾ ಮ್ಯೂಸಿಯಮ್ ಆಫ್ ಆರ್ಟ್‌ನಲ್ಲಿ 16ನೇ ಶತಮಾನದ ಪರ್ಷಿಯನ್ ಕಾರ್ಪೆಟ್ ಇದೆ. ಅದರಲ್ಲಿ, ಸುತ್ತಲೂ ಗೋಡೆ ಇದ್ದು ಮರಗಳು ಮತ್ತು ಹೂವುಗಳಿಂದ ಕೂಡಿದ ತೋಟದ ಚಿತ್ರವಿದೆ. ‘ಗೋಡೆಗಳಿರುವ ತೋಟ’ ಎಂಬುದಕ್ಕಿರುವ ಪರ್ಷಿಯನ್ ಪದಕ್ಕೆ “ಪ್ಯಾರಡೈಸ್” ಎಂಬ ಅರ್ಥ ಇದೆ. ಆ ಕಾರ್ಪೆಟ್‌ನಲ್ಲಿರುವ ದೃಶ್ಯ ಬೈಬಲಿನಲ್ಲಿ ವರ್ಣಿಸಲಾದ ಸುಂದರ, ಅದ್ಭುತವಾದ ಏದೆನ್ ತೋಟದಂತೆಯೇ ಇದೆ.
ಪ್ರಪಂಚದ ಅನೇಕ ಸಂಸ್ಕೃತಿ ಮತ್ತು ಭಾಷೆಗಳಲ್ಲಿ ಪರದೈಸಿನ ಕಥೆಯನ್ನು ತಿಳಿಸಲಾಗಿದೆ. ಮನುಷ್ಯರು ಭೂಮಿಯ ಅನೇಕ ದಿಕ್ಕುಗಳಿಗೆ ಹೋದಂತೆ, ಪರದೈಸಿನ ಕುರಿತಾದ ನಿಜ ಕಥೆಯನ್ನೂ ತಮ್ಮ ಜೊತೆ ಕೊಂಡೊಯ್ದರು. ಆದರೆ ವರ್ಷಗಳು ಉರುಳಿದಂತೆ, ಆ ಕಥೆಯಲ್ಲಿ ಸ್ಥಳೀಯ ನಂಬಿಕೆಗಳು, ಪುರಾಣಗಳು ಸೇರಿದವು. ಆದ್ದರಿಂದಲೇ, ಈಗಲೂ ಸಹ ಸುಂದರವಾಗಿರುವ ಪ್ರಕೃತಿಯನ್ನು ನೋಡಿದಾಗ ಜನ ಅದನ್ನು ಪರದೈಸಿಗೆ ಹೋಲಿಸುತ್ತಾರೆ.
ಪರದೈಸಿಗಾಗಿ ಹುಡುಕಾಟ
ಮನುಷ್ಯರು ಆರಂಭದಲ್ಲಿ ಕಳೆದುಕೊಂಡ ಪರದೈಸನ್ನು ಕಂಡುಹಿಡಿದೆವೆಂದು ಕೆಲವು ಸಂಶೋಧಕರು ಹೇಳಿದ್ದಾರೆ. ಉದಾಹರಣೆಗೆ, ಬ್ರಿಟಿಷ್ ಸೈನ್ಯದ ಜನರಲ್ ಆಗಿದ್ದ ಚಾರ್ಲ್ಸ್ ಗೋರ್ಡನ್ 1881ರಲ್ಲಿ ಸೇಶೆಲ್ ಎಂಬ ಸ್ಥಳವನ್ನು ಭೇಟಿ ಮಾಡಿದಾಗ ಅಲ್ಲಿನ ವಾಲೀ ಡ ಮಾ ಎಂಬ ಪ್ರದೇಶದ ಅದ್ಭುತ ಸೌಂದರ್ಯವನ್ನು ನೋಡಿ ಇದೇ ಏದೆನಿನ ತೋಟ ಎಂದನು. ಈಗ ಇದೊಂದು ವಿಶ್ವ ಸಂರಕ್ಷಿತ (ವಲ್ಡ್ ಹೆರಿಟೇಜ್) ಪ್ರದೇಶವಾಗಿದೆ. 15ನೇ ಶತಮಾನದಲ್ಲಿ ಇಟಲಿಯ ನಾವಿಕನಾದ ಕ್ರಿಸ್ಟಫರ್ ಕೊಲಂಬಸ್, ಹಿಸ್ಪಾನಿಯೋಲ ಎಂಬ ದ್ವೀಪವನ್ನು ತಲುಪಿದಾಗ ತಾನು ಏದೆನ್ ತೋಟವನ್ನು ಕಂಡುಹಿಡಿದೆನೇನೋ ಎಂದು ಭಾವಿಸಿದನು. ಈಗಿನ ಡೊಮಿನಿಕನ್ ಗಣರಾಜ್ಯ ಮತ್ತು ಹೇಟಿಯೇ ಈ ದ್ವೀಪ.
ಮ್ಯಾಪಿಂಗ್ ಪ್ಯಾರಡೈಸ್ ಎಂಬ ಇತಿಹಾಸ ಪುಸ್ತಕದಲ್ಲಿ 190ಕ್ಕೂ ಹೆಚ್ಚು ಪ್ರಾಚೀನ ಭೂಪಟಗಳ ಮಾಹಿತಿ ಇದೆ. ಅದರಲ್ಲಿನ ಹೆಚ್ಚಿನ ಭೂಪಟಗಳಲ್ಲಿ ಆದಾಮ ಮತ್ತು ಹವ್ವ ಏದೆನಿನಲ್ಲಿರುವ ಚಿತ್ರ ಇದೆ. ಅವುಗಳಲ್ಲಿ ಒಂದು ತುಂಬ ವಿಶೇಷವಾದದ್ದು. ಅದು 13ನೇ ಶತಮಾನದ ಹಸ್ತಪ್ರತಿಯಾಗಿದ್ದು ಅದನ್ನು ಲಿಯೆಬನ ಎಂಬ ಸ್ಥಳದ ಬೆಯಾಟಸ್‌ರು ಬರೆದರು. ಅದರ ಮೇಲ್ಗಡೆಯಲ್ಲಿ ಒಂದು ಚಿಕ್ಕ ಆಯತಾಕಾರವಿದ್ದು, ಅದರ ಮಧ್ಯದಲ್ಲಿ ಪರದೈಸಿನ ಚಿತ್ರವಿದೆ. ಅದರಲ್ಲಿ “ಟೈಗ್ರಿಸ್,” “ಯೂಫ್ರೇಟೀಸ್,” “ಇಂಡಸ್” ಮತ್ತು “ಜೋರ್ಡನ್” ಎಂಬ ಹೆಸರುಗಳ ನದಿಗಳು ಹುಟ್ಟಿ ಅದರ ನಾಲ್ಕು ಮೂಲೆಗಳಿಗೆ ಹರಿದು ಹೋಗುವ ಚಿತ್ರವಿದೆ. ಇದು ಕ್ರೈಸ್ತ ಧರ್ಮ ಭೂಮಿಯ ನಾಲ್ಕು ದಿಕ್ಕುಗಳಿಗೆ ಹಬ್ಬುವುದನ್ನು ಸೂಚಿಸಬಹುದು. ನಿಜವಾದ ಪರದೈಸ್ ಎಲ್ಲಿತ್ತು ಎಂದು ಗೊತ್ತಿಲ್ಲದಿದ್ದರೂ ಅದರ ನೆನಪು
ಮಾತ್ರ ಯಾವಾಗಲೂ ಆಕರ್ಷಣೀಯವಾಗಿತ್ತು ಎಂದು ಈ ಚಿತ್ರಗಳು ತೋರಿಸುತ್ತವೆ.17ನೇ ಶತಮಾನದ ಇಂಗ್ಲಿಷ್ ಕವಿಯಾದ ಜಾನ್ ಮಿಲ್ಟನ್ ಪ್ಯಾರಡೈಸ್ ಲಾಸ್ಟ್ ಎಂಬ ತಮ್ಮ ಗೀತೆಗೆ ಸುಪ್ರಸಿದ್ದರು. ಇದನ್ನವರು ಬೈಬಲಿನ ಆದಿಕಾಂಡದಲ್ಲಿ ವಿವರಿಸಲಾದ ಆದಾಮನ ಪಾಪ ಮತ್ತು ಏದೆನಿನಿಂದ ಹೊರ ಹಾಕಿದ ಘಟನೆಯ ಮೇಲೆ ಆಧರಿಸಿ ಬರೆದಿದ್ದಾರೆ. ಅದರಲ್ಲಿ “ಇಡೀ ಭೂಮಿಯು ಪರದೈಸಾಗುವುದು” ಎನ್ನುತ್ತಾ ಮಾನವರಿಗೆ ಸದಾಕಾಲ ಜೀವನ ಮತ್ತೆ ಸಿಗುವ ವಾಗ್ದಾನದ ಬಗ್ಗೆ ಬರೆದಿದ್ದಾರೆ. ತದನಂತರ ಅವರು ಪ್ಯಾರಡೈಸ್ ರಿಗೇಯ್ನ್‌ಡ್ ಎಂಬ ಮುಂದುವರಿದ ಭಾಗವನ್ನು ಬರೆದರು.
ಪರದೈಸ್ ಪ್ರಾಮುಖ್ಯತೆ ಕಳೆದುಕೊಳ್ಳಲು ಕಾರಣ
ಗಮನಿಸಬೇಕಾದ ವಿಷಯವೇನೆಂದರೆ, ಮಾನವ ಇತಿಹಾಸದಲ್ಲೇ ಜನ ತುಂಬ ಇಷ್ಟಪಟ್ಟ ವಿಷಯ ಪರದೈಸ್ ಭೂಮಿ. ಹಾಗಾದರೆ, ಈಗ ಯಾಕೆ ಯಾರೂ ಅದನ್ನು ಗಮನಕ್ಕೆ ತೆಗೆದುಕೊಳ್ಳುತ್ತಿಲ್ಲ? ಮ್ಯಾಪಿಂಗ್ ಪ್ಯಾರಡೈಸ್ ಪುಸ್ತಕದ ಪ್ರಕಾರ, “ದೇವತಾಶಾಸ್ತ್ರಜ್ಞರು . . . ಪರದೈಸ್ ಇದ್ದ ಸ್ಥಳವನ್ನು ಕಂಡುಹಿಡಿಯುವುದರಲ್ಲಿ ಬೇಕೆಂದೇ ನಿರ್ಲಕ್ಷ್ಯ ತೋರಿಸಿದ್ದಾರೆ.”
ಜನರು ಕೊನೆಗೆ ಪರದೈಸ್ ಭೂಮಿಯಲ್ಲಿ ಜೀವಿಸುತ್ತಾರೆ ಅಂತಲ್ಲ, ಸ್ವರ್ಗಕ್ಕೆ ಹೋಗುತ್ತಾರೆ ಅಂತ ಚರ್ಚಿಗೆ ಹೋಗುವ ಹೆಚ್ಚಿನವರಿಗೆ ಕಲಿಸಲಾಗುತ್ತಿದೆ. ಆದರೆ, ಬೈಬಲ್, ಕೀರ್ತನೆ 37:29ರಲ್ಲಿ “ನೀತಿವಂತರೋ ದೇಶವನ್ನು ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸುವರು” ಎನ್ನುತ್ತದೆ. ನಾವೀಗ ಜೀವಿಸುತ್ತಿರುವ ಈ ಭೂಮಿ ಪರದೈಸ್ ಆಗಿಲ್ಲದೇ ಇರುವುದರಿಂದ ಈ ಮಾತು ನಿಜವಾಗುತ್ತದೆ ಎಂದು ಹೇಗೆ ನಂಬಬಹುದು? *
ಪರದೈಸಿನ ಕನಸು ನನಸಾಗುವುದು
ಪರದೈಸನ್ನು ಮಾಡಿದ ಯೆಹೋವ ದೇವರು ನಾವು ಕಳೆದುಕೊಂಡ ಪರದೈಸನ್ನು ಮತ್ತೆ ಕೊಡುತ್ತೇನೆಂದು ಮಾತು ಕೊಟ್ಟಿದ್ದಾನೆ. ಆದರೆ ಇದನ್ನು ಹೇಗೆ ಮಾಡುತ್ತಾನೆ? ಯೇಸು ಕಲಿಸಿದ ಪ್ರಾರ್ಥನೆಯನ್ನು ನೆನಪಿಸಿಕೊಳ್ಳಿ: “ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ.” (ಮತ್ತಾಯ 6:10) ಆ ರಾಜ್ಯ ಇಡೀ ಭೂಮಿಯನ್ನು ಆಳಲಿರುವ ಸರಕಾರವಾಗಿದೆ. ಆ ಸರಕಾರವನ್ನು ಯೇಸು ಮುನ್ನಡೆಸುತ್ತಾನೆ ಮತ್ತು ಅವನು ಮಾನವ ಆಳ್ವಿಕೆಯನ್ನೆಲ್ಲಾ ತೆಗೆದುಹಾಕಲಿದ್ದಾನೆ. (ದಾನಿಯೇಲ 2:44) ಆ ರಾಜ್ಯ ಆಳ್ವಿಕೆ ಮಾಡುವಾಗ ಭೂಮಿ ಪರದೈಸಾಗಬೇಕೆಂಬ ದೇವರ ‘ಚಿತ್ತ ನೆರವೇರುವುದು.’
ಪ್ರವಾದಿ ಯೆಶಾಯನು ದೇವಪ್ರೇರಣೆಯಿಂದ ಪರದೈಸಿನಲ್ಲಿ ಈಗ ಇರುವಂತೆ ಯಾವುದೇ ವಿಷಯಗಳ ಬಗ್ಗೆ ಚಿಂತೆಯಾಗಲಿ, ಜಗಳವಾಗಲಿ ಇರುವುದಿಲ್ಲ ಎಂದು ತಿಳಿಸಿದ್ದಾನೆ. (ಯೆಶಾಯ 11:6-9; 35:5-7; 65:21-23) ಆದ್ದರಿಂದ ಸ್ವಲ್ಪ ಸಮಯ ತೆಗೆದುಕೊಂಡು ಈ ವಚನಗಳನ್ನು ನಿಮ್ಮ ಸ್ವಂತ ಬೈಬಲಿನಿಂದ ಓದಿ. ಹೀಗೆ ಓದುವುದರಿಂದ ವಿಧೇಯರಾಗಿರುವ ಜನರಿಗೆ ದೇವರು ಮುಂದೆ ಏನು ಕೊಡುತ್ತಾನೆ ಅಂತ ಗೊತ್ತಾಗುತ್ತದೆ. ಆದಾಮ ಕಳೆದುಕೊಂಡ ಪರದೈಸ್ ಜೀವನವನ್ನು ಮತ್ತು ದೇವರ ಮೆಚ್ಚುಗೆಯನ್ನು ವಿಧೇಯ ಜನರು ಪಡೆದುಕೊಳ್ಳುತ್ತಾರೆ.—ಪ್ರಕಟನೆ 21:3.
ಪರದೈಸ್ ಭೂಮಿಯಲ್ಲಿ ಜೀವನ ಸುಳ್ಳಲ್ಲ ನಿಜ ಅಂತ ನಾವು ಯಾಕೆ ನಂಬಬಹುದು? ಯಾಕೆಂದರೆ ಸ್ವತಃ ಬೈಬಲೇ, “ಪರಲೋಕವು ಯೆಹೋವನದು; ಭೂಲೋಕವನ್ನು ನರಸಂತಾನಕ್ಕೆ ಕೊಟ್ಟಿದ್ದಾನೆ” ಎಂದು ಹೇಳುತ್ತದೆ. “ಸುಳ್ಳಾಡಲು ಸಾಧ್ಯವಿಲ್ಲದ ದೇವರು ಅನಾದಿಕಾಲಕ್ಕೆ ಮುಂಚೆಯೇ ವಾಗ್ದಾನಮಾಡಿದ” ನಿರೀಕ್ಷೆಯೇ ಪರದೈಸ್ ಭೂಮಿಯಾಗಿದೆ. (ಕೀರ್ತನೆ 115:16; ತೀತ 1:2) ದೇವರು ಕೊಡುವ ಆ ಸುಂದರ ಪರದೈಸ್ ಬಲುಬೇಗನೆ ನಮ್ಮದಾಗುವುದು!
^ ಪ್ಯಾರ. 15 ಕುರಾನಿನ ಸುರ 21, ವಚನ 105ರಲ್ಲಿ ಅಲ್-ಅನ್ಬಿಯ’ (ಪ್ರವಾದಿಗಳು) ಹೀಗೆ ಹೇಳಿದ್ದಾರೆ: “ನನ್ನ ಸೇವಕರಲ್ಲಿ ನೀತಿವಂತರು ಭೂಮಿಗೆ ಬಾಧ್ಯರಾಗುವರು.”