ಯಾವುದು ಸರಿ ಯಾವುದು ತಪ್ಪು? ಸರಿಯಾದ ದಾರಿನ ಆಯ್ಕೆ ಮಾಡಿ
ನಾವು ಒಳ್ಳೇ ದಾರಿಲಿ ಹೋದ್ರೆ ಖುಷಿಯಾಗಿ ಇರ್ತೀವಿ. ಕೆಟ್ಟ ದಾರಿ ಹಿಡಿದ್ರೆ ಕಷ್ಟ ಅನುಭವಿಸ್ತೀವಿ. ಇದು ಯೆಹೋವ ದೇವ್ರಿಗೆ ಚೆನ್ನಾಗಿ ಗೊತ್ತು. ಹಾಗಾಗಿ ಆತನು ಯಾವುದನ್ನ ಸರಿ ದಾರಿ ಅಂತ ಹೇಳ್ತಾನೋ ನಾವು ಅದ್ರಲ್ಲೇ ನಡಿಬೇಕು ಅಂತ ಇಷ್ಟಪಡ್ತಾನೆ.
ನಾವು ಜೀವನದಲ್ಲಿ ಖುಷಿಯಾಗಿ ಇರಬೇಕು, ನೆಮ್ಮದಿಯಾಗಿ ಇರಬೇಕು ಅಂತ ಯೆಹೋವ ಇಷ್ಟಪಡ್ತಾನೆ.
“ಯೆಹೋವನಾದ ನಾನೇ ನಿನ್ನ ದೇವರು. ನಿನ್ನ ಒಳಿತಿಗಾಗಿ ನಿನಗೆ ಬೋಧಿಸುವವನು ನಾನೇ, ನೀನು ಯಾವ ದಾರಿಯಲ್ಲಿ ನಡಿಬೇಕಂತ ನಿನಗೆ ಮಾರ್ಗದರ್ಶಿಸುವವನು ನಾನೇ. ನೀನು ನನ್ನ ಆಜ್ಞೆಗಳಿಗೆ ಗಮನಕೊಟ್ರೆ ಎಷ್ಟೋ ಚೆನ್ನಾಗಿರುತ್ತೆ! ನಿನ್ನ ಶಾಂತಿ ನದಿ ತರನೂ ನಿನ್ನ ನೀತಿ ಸಮುದ್ರದ ಅಲೆಗಳ ತರನೂ ಇರುತ್ತೆ.”—ಯೆಶಾಯ 48:17, 18.
ದೇವರು ನಮ್ಮನ್ನ ಸೃಷ್ಟಿ ಮಾಡಿರೋದ್ರಿಂದ ನಮಗೇನು ಒಳ್ಳೇದು ಅಂತ ಆತನಿಗೆ ಚೆನ್ನಾಗಿ ಗೊತ್ತು. ಅದಕ್ಕೇ ಆತನು ಹೇಳೋ ತರನೇ ನಾವು ಜೀವನ ಮಾಡಬೇಕು ಅಂತ ಆತನು ಆಸೆಪಡ್ತಾನೆ. ನೀವು ಆ ತರ ಜೀವನ ಮಾಡಿದ್ರೆ ಮುಂದೆ ನಿಮಗೆ ಒಳ್ಳೇದಾಗುತ್ತೋ ಇಲ್ವೋ ಅನ್ನೋ ಸಂಶಯನೇ ಇರಲ್ಲ. ಯಾಕಂದ್ರೆ ನೀವು ಸರಿಯಾದ ತೀರ್ಮಾನನೇ ತಗೊಂಡಿರ್ತೀರ. ಅದ್ರಿಂದ ನೀವು ಗ್ಯಾರಂಟಿ ಖುಷಿಯಾಗಿ, ನೆಮ್ಮದಿಯಾಗಿ ಇರ್ತೀರ.
ಯೆಹೋವ ದೇವರು ನಮ್ಮಿಂದ ಆಗ್ದೇ ಇರೋದನ್ನ ಕೇಳಲ್ಲ.
“ನಾನು ಇವತ್ತು ನಿಮಗೆ ಕೊಟ್ಟ ಈ ಆಜ್ಞೆಗಳು ನಿಮಗೆ ಪಾಲಿಸೋಕೆ ತುಂಬ ಕಷ್ಟ ಆಗಲ್ಲ. ಅವು ನಿಮಗೆ ಕೈಗೆಟುಕದಷ್ಟು ದೂರನೂ ಇಲ್ಲ.”—ಧರ್ಮೋಪದೇಶಕಾಂಡ 30:11.
ಯೆಹೋವ ತನ್ನ ನಿಯಮಗಳನ್ನ ಪಾಲಿಸೋಕೆ ನಿಮಗೆ ಸಹಾಯ ಮಾಡ್ತೀನಿ ಅಂತ ಮಾತುಕೊಟ್ಟಿದ್ದಾನೆ.
“ನಾನು, ನಿನ್ನ ದೇವರಾದ ಯೆಹೋವ, ನಿನ್ನ ಬಲಗೈಯನ್ನ ಹಿಡ್ಕೊಂಡಿದ್ದೀನಿ, ‘ಹೆದರಬೇಡ, ನಾನು ನಿನಗೆ ಸಹಾಯ ಮಾಡ್ತೀನಿ’ ಅಂತ ನಾನೇ ನಿನಗೆ ಹೇಳ್ತಿದ್ದೀನಿ.”—ಯೆಶಾಯ 41:13.
ಯೆಹೋವ ದೇವರ ನಿಯಮನ ಪಾಲಿಸೋಕೆ ನಮ್ಮಿಂದ ಆಗುತ್ತೆ. ಯಾಕಂದ್ರೆ ಅದಕ್ಕೆ ಆತನೇ ನಮಗೆ ಸಹಾಯ ಮಾಡ್ತಾನೆ. ಆ ಸಹಾಯನ ಬೈಬಲಿಂದ ಕೊಡ್ತಾನೆ. ಬೈಬಲನ್ನ ಓದಿದಾಗ ನಮಗೆ ಸರಿಯಾಗಿರೋದನ್ನ ಮಾಡೋಕೆ ಧೈರ್ಯ ಸಿಗುತ್ತೆ ಮತ್ತು ಮುಂದೆ ನಮ್ಮ ಜೀವನ ಚೆನ್ನಾಗಿರುತ್ತೆ ಅನ್ನೋ ನಂಬಿಕೆನೂ ಜಾಸ್ತಿ ಆಗುತ್ತೆ.
ಬೈಬಲಲ್ಲಿರೋ ಬುದ್ಧಿಮಾತುಗಳನ್ನ ಪಾಲಿಸಿದ್ರಿಂದ ಇವತ್ತು ನಮ್ಮ ಜೀವನ ತುಂಬ ಚೆನ್ನಾಗಿದೆ ಅಂತ ಲಕ್ಷಾಂತರ ಜನ್ರು ಹೇಳ್ತಿದ್ದಾರೆ. ನೀವೂ ಬೈಬಲಲ್ಲಿರೋ ಬುದ್ಧಿಮಾತುಗಳನ್ನ ಪಾಲಿಸಿ ನೋಡಿ. ಅದಕ್ಕೆ ನಿಮಗೆ ಎಂದೆಂದೂ ಖುಷಿಯಾಗಿ ಬಾಳೋಣ! ಅನ್ನೋ ಕಿರುಹೊತ್ತಿಗೆ ಸಹಾಯ ಮಾಡುತ್ತೆ. ಅದನ್ನ ನೀವು jw.orgನಲ್ಲಿ ಫ್ರೀಯಾಗಿ ಡೌನ್‌ಲೋಡ್ ಮಾಡ್ಕೊಬಹುದು. ಅದ್ರಲ್ಲಿ ಈ ಪಾಠಗಳನ್ನ ಓದಿ ನೋಡಿ:
-
ದೇವರಿಂದ ಯಾಕೆ ಕಲಿಯಬೇಕು?
-
ಸುಂದರ ಭವಿಷ್ಯದ ಬಗ್ಗೆ ಪವಿತ್ರ ಗ್ರಂಥ ಕೊಡೋ ಮಾತು
-
ಪವಿತ್ರ ಗ್ರಂಥದಲ್ಲಿರೋ ಮಾತುಗಳನ್ನ ನಂಬಬಹುದಾ?
ನೀವು ಬೈಬಲನ್ನ ಜಾಸ್ತಿ ಕಲಿತಾ ಹೋದ ಹಾಗೆ ಅದ್ರಲ್ಲಿರೋ ವಿಷ್ಯಗಳು ಹಳೇ ಕಾಲದ್ದಲ್ಲ, ಅದ್ರಿಂದ ಇವತ್ತಿಗೂ ಪ್ರಯೋಜನ ಇದೆ ಅಂತ ನಿಮಗೆ ಗೊತ್ತಾಗುತ್ತೆ. ಅದನ್ನ “ಯಾವಾಗ್ಲೂ ನಂಬಬಹುದು, ಇಂದಿಗೂ ಎಂದೆಂದಿಗೂ ನಂಬಬಹುದು.” (ಕೀರ್ತನೆ 111:8) ಅದ್ರಲ್ಲಿರೋ ನಿಯಮಗಳನ್ನ ಪಾಲಿಸಿದ್ರೆ ನಿಮ್ಮ ಜೀವನ ತುಂಬ ಚೆನ್ನಾಗಿರುತ್ತೆ. ಆದ್ರೆ ನೀವು ಇದನ್ನ ಪಾಲಿಸಬೇಕು ಅಂತ ದೇವರು ನಿಮಗೆ ಒತ್ತಾಯ ಮಾಡಲ್ಲ. (ಧರ್ಮೋಪದೇಶಕಾಂಡ 30:19, 20; ಯೆಹೋಶುವ 24:15) ನೀವಾಗೇ ಪಾಲಿಸಬೇಕು ಅಂತ ಆತನು ಇಷ್ಟಪಡ್ತಾನೆ.