3 | ಬೈಬಲ್‌ನಲ್ಲಿರೋ ಉದಾಹರಣೆಗಳು
ಬೈಬಲ್ ಹೀಗೆ ಹೇಳುತ್ತೆ . . .“ನಮ್ಮ ತರದ ಭಾವನೆಗಳಿದ್ದ” ನಂಬಿಗಸ್ತ ಪುರುಷ ಮತ್ತು ಸ್ತ್ರೀಯರು. —ಯಾಕೋಬ 5:17.
ಇದರ ಅರ್ಥ ಏನು
ಬೈಬಲ್‌ನಲ್ಲಿ ನಮ್ಮ ತರದ ಭಾವನೆಗಳಿದ್ದ ಪುರುಷ ಮತ್ತು ಸ್ತ್ರೀಯರ ನಿಜವಾದ ಜೀವನ ಕಥೆಗಳಿವೆ. ಅವ್ರ ಬಗ್ಗೆ ನಾವು ಓದಿ ತಿಳ್ಕೊಂಡ್ರೆ ನಮಗೆ ಸಹಾಯ ಆಗುತ್ತೆ.
ಇದು ಹೇಗೆ ಸಹಾಯ ಮಾಡುತ್ತೆ
ಬೇರೆಯವರು ನಮ್ಮನ್ನ ಚೆನ್ನಾಗಿ ಅರ್ಥಮಾಡ್ಕೊಬೇಕು ಅಂತ ನಾವೆಲ್ರೂ ಇಷ್ಟಪಡ್ತೀವಿ. ಅದ್ರಲ್ಲೂ ಮಾನಸಿಕ ಆರೋಗ್ಯದ ಸಮಸ್ಯೆ ಇರೋರ ವಿಷ್ಯದಲ್ಲಂತೂ ಈ ಮಾತು ನೂರಕ್ಕೆ ನೂರು ಸತ್ಯ. ನಿಜವಾಗ್ಲೂ ನಡೆದಿರೋ ಜೀವನ ಕಥೆಗಳನ್ನ ನಾವು ಬೈಬಲ್‌ನಲ್ಲಿ ಓದಿದಾಗ, ನಮ್ಮ ತರದ ಭಾವನೆಗಳಿದ್ದ ಬೇರೆ ಜನ್ರ ಬಗ್ಗೆ ನಮಗೆ ಗೊತ್ತಾಗುತ್ತೆ. ಆಗ ನಮ್ಮಲ್ಲಾಗೋ ಕಳವಳ, ಆತಂಕ, ಕಹಿನೆನಪುಗಳು ನಮಗೆ ಮಾತ್ರ ಅಲ್ಲ, ಈ ಮುಂಚೆ ಬೇರೆಯವ್ರಿಗೂ ಬಂದಿತ್ತು ಅಂತ ನಾವು ತಿಳಿದುಕೊಳ್ತೀವಿ.
ನಿಸ್ಸಹಾಯಕ ಸ್ಥಿತಿಯಲ್ಲಿದ್ದ ಕೆಲವರ ಮಾತುಗಳನ್ನ ನಾವು ಬೈಬಲಲ್ಲಿ ಓದಬಹುದು. ನಿಮಗೆ ಯಾವತ್ತಾದ್ರೂ, ‘ಇನ್ನು ನನ್ನಿಂದ ಆಗಲ್ಲ, ನನಗೆ ಸಾಕಾಯ್ತು’ ಅಂತ ಅನಿಸಿದೆಯಾ? ಮೋಶೆ, ಎಲೀಯ ಮತ್ತು ದಾವೀದನಿಗೆ ಹೀಗೆ ಅನಿಸ್ತು.—ಅರಣ್ಯಕಾಂಡ 11:14; 1 ಅರಸು 19:4; ಕೀರ್ತನೆ 55:4.
ಬೈಬಲಲ್ಲಿ ಹನ್ನ ಅನ್ನೋ ಒಬ್ಬ ಸ್ತ್ರೀ ಬಗ್ಗೆ ಇದೆ. ಅವಳಿಗೆ ಮಕ್ಕಳಿರಲಿಲ್ಲ. ಹಾಗಾಗಿ ಅವಳ ಸವತಿ ಯಾವಾಗ್ಲೂ ಕೆಣಕಿ ಮಾತಾಡ್ತಾ ಇದ್ದಳು. ಇದ್ರಿಂದ ಹನ್ನ “ಬಿಕ್ಕಿಬಿಕ್ಕಿ ಅಳ್ತಾ ದುಃಖದಿಂದ” ಇರ್ತಾ ಇದ್ದಳು.—1 ಸಮುವೇಲ 1:6, 10.
ಬೈಬಲಲ್ಲಿ ಯೋಬ ಅನ್ನೋ ವ್ಯಕ್ತಿ ಬಗ್ಗೆ ಕೂಡ ಇದೆ. ಅವನಿಗೆ ದೇವರ ಮೇಲೆ ತುಂಬ ನಂಬಿಕೆ ಇದ್ರೂ ಒಂದು ಸಲ ಕುಗ್ಗಿ ಹೋದ. ಎಷ್ಟರ ಮಟ್ಟಿಗೆ ಅಂದ್ರೆ, “ನನಗೆ ಜೀವನದಲ್ಲಿ ಜಿಗುಪ್ಸೆ ಹುಟ್ಟಿದೆ, ಬದುಕೋ ಆಸೆ ನನಗಿಲ್ಲ” ಅಂತ ಅವನು ಹೇಳಿದ.—ಯೋಬ 7:16.
ಈ ವ್ಯಕ್ತಿಗಳೆಲ್ಲ ಇಂಥ ಯೋಚನೆಗಳಿಂದ ಹೇಗೆ ಹೊರಗೆ ಬಂದ್ರು ಅಂತ ನಾವು ಕಲಿತಾಗ ನಮ್ಮ ಮನಸ್ಸಲ್ಲಾಗೋ ತಳಮಳವನ್ನ ನಿಭಾಯಿಸೋಕೆ ಬಲ ಸಿಗುತ್ತೆ.