ಬೈಬಲ್ ಬೋಧನೆಗಳು—ಎಂದೂ ಹಳೇದಾಗದ ವಿವೇಕದ ನುಡಿಗಳು
ಮನಸ್ಸಲ್ಲೇ ಚಿತ್ರಿಸಿಕೊಳ್ಳಿ: ನೀವು ಒಂದು ವಸ್ತುಸಂಗ್ರಹಾಲಯಕ್ಕೆ ಹೋಗಿದ್ದೀರಿ. ಅಲ್ಲಿ ಪುರಾತನಕಾಲದ ಸ್ಮಾರಕ ಶಿಲೆಗಳಿವೆ. ಅವುಗಳಲ್ಲಿ ಹೆಚ್ಚಿನವುಗಳಿಗೆ ಗುಳಿಬಿದ್ದಿವೆ, ಗಾಳಿಬಿಸಿಲಿಗೆ ಒಡ್ಡಲ್ಪಟ್ಟು ಬಣ್ಣಮಾಸಿವೆ, ಸವೆದುಹೋಗಿವೆ. ಕೆಲವೊಂದರ ದೊಡ್ಡ ಭಾಗಗಳೇ ಕಾಣೆಯಾಗಿವೆ. ಇವೆಲ್ಲದರ ಮಧ್ಯೆ ಒಂದು ಶಿಲೆ ನಿಮ್ಮ ಗಮನಸೆಳೆಯುತ್ತದೆ. ಅದಕ್ಕೆ ಏನೂ ಹಾನಿಯಾಗಿಲ್ಲ. ಅದರ ಮೇಲಿನ ಸೂಕ್ಷ್ಮ ಕೆತ್ತನೆ ಸಹ ತುಂಬ ಸ್ಪಷ್ಟವಾಗಿದೆ. ‘ಈ ಶಿಲೆ ಬೇರೆಲ್ಲದ್ದಕ್ಕಿಂತ ತೀರ ಇತ್ತೀಚಿನದ್ದಾ?’ ಅಂತ ನಿಮ್ಮ ಗೈಡ್ ಅನ್ನು ಕೇಳುತ್ತೀರಿ. ಅದಕ್ಕವನು, ‘ಅಲ್ಲ, ಇದು ಇಲ್ಲಿನ ಹೆಚ್ಚಿನ ಶಿಲೆಗಳಿಗಿಂತ ಹಳೇದು, ಇದನ್ನು ಯಾವತ್ತೂ ದುರಸ್ತಿಯೂ ಮಾಡಿಲ್ಲ’ ಅನ್ನುತ್ತಾನೆ. ‘ಗಾಳಿಮಳೆಬಿಸಿಲು ತಟ್ಟದಂತೆ ಇದನ್ನು ರಕ್ಷಿಸಲಾಗಿತ್ತಾ?’ ಅಂತ ಕೇಳುತ್ತೀರಿ. ‘ಇಲ್ಲ. ನಿಜವೇನೆಂದರೆ ಇದು ಎಲ್ಲಕ್ಕಿಂತಲೂ ಹೆಚ್ಚು ಬಿರುಸಾದ ಗಾಳಿಮಳೆಯನ್ನು ಎದುರಿಸಿದೆ. ಅನೇಕ ಕಿಡಿಗೇಡಿಗಳು ಇದನ್ನು ಕೆಡಿಸಲೂ ಪ್ರಯತ್ನಿಸಿದ್ದಾರೆ’ ಅನ್ನುತ್ತಾನೆ ಆ ಗೈಡ್. ನಿಮಗಂತೂ ಆಶ್ಚರ್ಯವೋ ಆಶ್ಚರ್ಯ. ‘ಹಾಗಾದರೆ ಇದನ್ನು ಯಾವುದರಿಂದ ರಚಿಸಲಾಗಿದೆ?’ ಅಂತ ಯೋಚಿಸುತ್ತೀರಿ.
ಒಂದರ್ಥದಲ್ಲಿ ಬೈಬಲ್ ಆ ಗಮನಸೆಳೆಯುವ ಸ್ಮಾರಕ ಶಿಲೆಯಂತಿದೆ. ಅದು ಪ್ರಾಚೀನ ಕಾಲದ ಪುಸ್ತಕ; ಹೆಚ್ಚಿನ ಪುಸ್ತಕಗಳಿಗಿಂತ ಹಳೆಯದು! ಹಳೇ ಕಾಲದ ಬೇರೆ ಬರಹಗಳು ಈಗ ಇಲ್ಲ ಅಂತೇನಿಲ್ಲ. ಇದ್ದರೂ ಅವು ಸಮಯ ದಾಟಿದಂತೆ ಸವೆದುಹೋಗಿರುವ ಸ್ಮಾರಕ ಶಿಲೆಗಳಂತಿವೆ. ಹೇಗೆ? ಈ ಹಳೇ ಬರಹಗಳಲ್ಲಿರುವ ವಿಜ್ಞಾನಕ್ಕೆ ಸಂಬಂಧಪಟ್ಟ ಹೇಳಿಕೆಗಳು ತಪ್ಪೆಂದು ಈಗ ಲಭ್ಯವಿರುವ ಜ್ಞಾನ ಮತ್ತು ರುಜುಪಡಿಸಲು ಸಾಧ್ಯವಿರುವ ನಿಜಾಂಶಗಳು ತೋರಿಸಿಕೊಟ್ಟಿವೆ. ಇವುಗಳಲ್ಲಿರುವ ವೈದ್ಯಕೀಯ ಸಲಹೆಗಳಿಂದ ಸಹಾಯಕ್ಕಿಂತ ಹೆಚ್ಚಾಗಿ ಅಪಾಯ ಆಗುತ್ತಿರುವಂತೆ ತೋರುತ್ತದೆ. ಮಾತ್ರವಲ್ಲ ಈ ಬರಹಗಳ ತುಣುಕುಗಳು ಮಾತ್ರ ಈಗ ಲಭ್ಯ ಇವೆ. ಅವುಗಳಿಗೆ ತುಂಬ ಹಾನಿ ಆಗಿದೆ ಅಥವಾ ಹೆಚ್ಚಿನ ಭಾಗಗಳು ಕಳೆದುಹೋಗಿವೆ.
ಆದರೆ ಬೈಬಲ್ ತುಂಬ ಭಿನ್ನವಾಗಿದೆ. 3,500 ವರ್ಷಗಳ ಹಿಂದೆ ಅದನ್ನು ಬರೆಯಲು ಆರಂಭಿಸಲಾಯಿತು. ಆದರೆ ಈಗಲೂ ಅದರಲ್ಲಿನ ಮಾಹಿತಿಗೆ ಯಾವುದೇ ಹಾನಿಯಾಗಿಲ್ಲ. ಶತಮಾನಗಳಾದ್ಯಂತ ಬೈಬಲಿನ ಮೇಲೆ ಒಂದರ ಮೇಲೊಂದರಂತೆ ದಾಳಿಗಳು ನಡೆದಿವೆ. ಅದನ್ನು ಸುಡಲಾಗಿದೆ, ನಿಷೇಧಿಸಲಾಗಿದೆ, ತುಚ್ಛೀಕರಿಸಲಾಗಿದೆ. ಹೀಗಿದ್ದರೂ ಅದರಲ್ಲಿರುವ ಮಾತುಗಳು ಎಲ್ಲ ವಿಧದ ದಾಳಿಯನ್ನು ಪಾರಾಗಿ ಉಳಿದಿವೆ. ಬೈಬಲಿನಲ್ಲಿ ಉಪಯೋಗಕ್ಕೆ ಬಾರದ ಮಾಹಿತಿ ಅಲ್ಲ ಬದಲಾಗಿ ವಿಸ್ಮಯಪಡಿಸುವ ದೂರದೃಷ್ಟಿಯುಳ್ಳ ಮಾಹಿತಿ ಇದೆ ಎಂದು ಹೊಸ ಜ್ಞಾನ, ನಿಜಾಂಶಗಳು ಬೆಳಕಿಗೆ ಓಬೀರಾಯನ ಕಾಲದ್ದಾ? ವಿಜ್ಞಾನಿಗಳಿಗಿಂತ ಒಂದು ಹೆಜ್ಜೆ ಮುಂದಿದೆಯಾ?” ಚೌಕ ನೋಡಿ.
ಬಂದಾಗ ಸಾಬೀತಾಗಿದೆ!—“ನಮಗಿಂದು ಅಗತ್ಯವಿರುವ ಮೌಲ್ಯಗಳು
‘ನಮ್ಮ ಆಧುನಿಕ ಕಾಲದಲ್ಲಿ ಬೈಬಲ್ ಬೋಧನೆಗಳ ಪ್ರಕಾರ ನಿಜವಾಗಲೂ ನಡೆಯಲಿಕ್ಕಾಗುತ್ತದಾ?’ ಅಂತ ನೀವು ಯೋಚಿಸುತ್ತಿರಬಹುದು. ಇದಕ್ಕೆ ಉತ್ತರ ತಿಳಿಯಲು ನಿಮ್ಮನ್ನೇ ಹೀಗೆ ಕೇಳಿಕೊಳ್ಳಿ: ‘ಈಗಿನ ಕಾಲದಲ್ಲಿ ಮಾನವಕುಲ ಎದುರಿಸುತ್ತಿರುವ ತುಂಬ ದೊಡ್ಡದಾದ, ತುಂಬ ಭಯಪಡಿಸುವಂಥ ಸಮಸ್ಯೆಗಳೇನು?’ ಯುದ್ಧ, ಮಾಲಿನ್ಯ, ಅಪರಾಧಗಳು, ಭ್ರಷ್ಟಾಚಾರ ಇವೆಲ್ಲ ನಿಮ್ಮ ಮನಸ್ಸಿಗೆ ಬರಬಹುದು. ಈಗ, ಬೈಬಲ್ ಕಲಿಸುವಂಥ ಕೆಲವು ಮೌಲ್ಯಗಳಿಗೆ ಗಮನ ಕೊಡಿ. ‘ಜನರು ಈ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಜಗತ್ತಿನ ಪರಿಸ್ಥಿತಿ ಚೆನ್ನಾಗಿರಬಹುದಾ?’ ಎಂದು ಕೇಳಿಕೊಳ್ಳಿ.
ಶಾಂತಿ ಕಾಪಾಡಿಕೊಳ್ಳುವುದು
“ಶಾಂತಿಶೀಲರು ಸಂತೋಷಿತರು; ಅವರು ‘ದೇವರ ಪುತ್ರರು’ ಎಂದು ಕರೆಯಲ್ಪಡುವರು.” (ಮತ್ತಾಯ 5:9) “ಸಾಧ್ಯವಾದರೆ ನಿಮ್ಮಿಂದಾಗುವ ಮಟ್ಟಿಗೆ ಎಲ್ಲರೊಂದಿಗೆ ಶಾಂತಿಶೀಲರಾಗಿರಿ.”—ರೋಮನ್ನರಿಗೆ 12:18.
ಕರುಣೆ, ಕ್ಷಮೆ
“ಕರುಣೆಯುಳ್ಳವರು ಸಂತೋಷಿತರು; ಅವರಿಗೆ ಕರುಣೆಯು ತೋರಿಸಲ್ಪಡುವುದು.” (ಮತ್ತಾಯ 5:7) “ಯಾವನಿಗಾದರೂ ಮತ್ತೊಬ್ಬನ ವಿರುದ್ಧ ದೂರುಹೊರಿಸಲು ಕಾರಣವಿದ್ದರೂ ಒಬ್ಬರನ್ನೊಬ್ಬರು ಸಹಿಸಿಕೊಂಡು ಒಬ್ಬರನ್ನೊಬ್ಬರು ಉದಾರವಾಗಿ ಕ್ಷಮಿಸುವವರಾಗಿರಿ. ಯೆಹೋವನು a ನಿಮ್ಮನ್ನು ಉದಾರವಾಗಿ ಕ್ಷಮಿಸಿದಂತೆಯೇ ನೀವೂ ಕ್ಷಮಿಸಿರಿ.”—ಕೊಲೊಸ್ಸೆ 3:13.
ಜನಾಂಗೀಯ ಸಾಮರಸ್ಯ
ದೇವರು “ಒಬ್ಬ ಮನುಷ್ಯನಿಂದಲೇ ಪ್ರತಿಯೊಂದು ಮಾನವ ಜನಾಂಗವನ್ನು ನಿರ್ಮಿಸಿ ಅವರು ಭೂಮಿಯಾದ್ಯಂತ ವಾಸಿಸುವಂತೆ ಮಾಡಿದನು.” (ಅಪೊಸ್ತಲರ ಕಾರ್ಯಗಳು 17:26) “ದೇವರು ಪಕ್ಷಪಾತಿಯಲ್ಲ. . . . ಯಾವ ಜನಾಂಗದಲ್ಲೇ ಆಗಲಿ ದೇವರಿಗೆ ಭಯಪಟ್ಟು ನೀತಿಯನ್ನು ನಡಿಸುವವನು ಆತನಿಗೆ ಸ್ವೀಕಾರಾರ್ಹನಾಗಿದ್ದಾನೆ.”—ಅಪೊಸ್ತಲರ ಕಾರ್ಯಗಳು 10:34, 35.
ಭೂಮಿಯ ಕಾಳಜಿವಹಿಸುವುದು
“ಯೆಹೋವದೇವರು ಆ ಮನುಷ್ಯನನ್ನು ಕರಕೊಂಡು ಹೋಗಿ ಏದೆನ್ ತೋಟವನ್ನು ವ್ಯವಸಾಯ ಮಾಡುವದಕ್ಕೂ ಕಾಯುವದಕ್ಕೂ ಅದರಲ್ಲಿ ಇಟ್ಟನು.” (ಆದಿಕಾಂಡ 2:15) ದೇವರು “ಭೂಮಿಯನ್ನು ನಾಶಮಾಡುತ್ತಿರುವವರನ್ನು ನಾಶಗೊಳಿಸು”ವನು.—ಪ್ರಕಟನೆ 11:18.
ದುರಾಸೆ, ಅನೈತಿಕತೆಯನ್ನು ದ್ವೇಷಿಸುವುದು
“ಪ್ರತಿಯೊಂದು ರೀತಿಯ ದುರಾಶೆಯಿಂದ ನಿಮ್ಮನ್ನು ಕಾಪಾಡಿಕೊಳ್ಳಿ; ಏಕೆಂದರೆ ಒಬ್ಬನಿಗೆ ಹೇರಳವಾಗಿ ಆಸ್ತಿಯಿರುವುದಾದರೂ ಅವನು ಹೊಂದಿರುವ ಆಸ್ತಿಯಿಂದ ಅವನಿಗೆ ಜೀವವು ದೊರಕಲಾರದು.” (ಲೂಕ 12:15) “ಜಾರತ್ವ ಮತ್ತು ಪ್ರತಿಯೊಂದು ರೀತಿಯ ಅಶುದ್ಧತೆ ಅಥವಾ ಲೋಭ ಇವುಗಳ ಪ್ರಸ್ತಾಪವೂ ನಿಮ್ಮಲ್ಲಿರಬಾರದು. ಇವುಗಳಿಂದ ದೂರವಿರುವುದು ಪವಿತ್ರ ಜನರಿಗೆ ಯೋಗ್ಯವಾದದ್ದಾಗಿದೆ.”—ಎಫೆಸ 5:3.
ಪ್ರಾಮಾಣಿಕತೆ, ಶ್ರಮ
‘ನಾವು ಎಲ್ಲ ವಿಷಯಗಳಲ್ಲಿ ಪ್ರಾಮಾಣಿಕರಾಗಿ ನಡೆದುಕೊಳ್ಳಲು ಬಯಸುತ್ತೇವೆ.’ (ಇಬ್ರಿಯ 13:18) “ಕಳ್ಳತನ ಮಾಡುವವನು ಇನ್ನು ಮುಂದೆ ಕಳ್ಳತನ ಮಾಡದೆ ತನ್ನ ಕೈಯಿಂದ ಒಳ್ಳೇ ಕೆಲಸವನ್ನು ಮಾಡುವ ಮೂಲಕ ಕಷ್ಟಪಟ್ಟು ದುಡಿಯಲಿ.”—ಎಫೆಸ 4:28.
ಅಗತ್ಯವಿದ್ದವರಿಗೆ ನೆರವು ನೀಡುವುದು
“ಮನಗುಂದಿದವರಿಗೆ ಸಾಂತ್ವನಗೊಳಿಸುವಂಥ ರೀತಿಯಲ್ಲಿ ಮಾತಾಡಿರಿ, ಬಲಹೀನರಿಗೆ ಆಧಾರವಾಗಿರಿ, ಎಲ್ಲರ ಕಡೆಗೆ ದೀರ್ಘ ಸಹನೆಯನ್ನು ತೋರಿಸಿರಿ.” (1 ಥೆಸಲೊನೀಕ 5:14) ‘ಸಂಕಟದಲ್ಲಿರುವ ಅನಾಥರನ್ನೂ ವಿಧವೆಯರನ್ನೂ ಪರಾಮರಿಸಿ.’—ಯಾಕೋಬ 1:27.
ಬೈಬಲ್ ಈ ಮೌಲ್ಯಗಳನ್ನು ಬರೀ ಪಟ್ಟಿ ಮಾಡುವುದಿಲ್ಲ. ಅವುಗಳನ್ನು ದೈನಂದಿನ ಜೀವನದಲ್ಲಿ ಅನ್ವಯಿಸಿಕೊಳ್ಳುವುದು ಹೇಗೆಂದು ಸಹ ಕಲಿಸುತ್ತದೆ. ಇಂಥ ಮೌಲ್ಯಗಳು ಎಷ್ಟು ಮಹತ್ವದ್ದೆಂದೂ ತಿಳಿಸುತ್ತದೆ. ಇಲ್ಲಿ ಕೊಡಲಾದ ಬೋಧನೆಗಳನ್ನು ಜನರು ಅನ್ವಯಿಸಿರುತ್ತಿದ್ದರೆ ಲೋಕದಲ್ಲಿ ಸಮಸ್ಯೆಗಳು ಕಡಿಮೆ ಇರುತ್ತಿದ್ದವು ಅಲ್ಲವೇ? ಹಾಗಾಗಿ, ಬೈಬಲ್
ತತ್ವಗಳು ಹಿಂದೆಂದಿಗಿಂತಲೂ ಈಗ ಹೆಚ್ಚು ಸೂಕ್ತ ಮತ್ತು ಸಮಯೋಚಿತ ಆಗಿವೆ. ಆದರೆ ಬೈಬಲ್ ಬೋಧನೆಗಳಿಂದ ನಿಮಗೆ ಈಗಿಂದೀಗ ಯಾವ ಪ್ರಯೋಜನ ಆಗುತ್ತದೆ?ಬೈಬಲ್ ಬೋಧನೆಗಳಿಂದ ಈಗ ನಿಮಗಾಗುವ ಪ್ರಯೋಜನ
ಜೀವಿಸಿರುವವರಲ್ಲೇ ಅತ್ಯಂತ ವಿವೇಕಿಯಾದ ವ್ಯಕ್ತಿ ಹೇಳಿದ್ದು: “ವಿವೇಕವು ತನ್ನ ಕ್ರಿಯೆಗಳ” ಅಥವಾ ಫಲಿತಾಂಶಗಳ “ಮೂಲಕ ನೀತಿಯುತವೆಂದು ಸಾಬೀತಾಗುತ್ತದೆ.” (ಮತ್ತಾಯ 11:19) ನೀವಿದನ್ನು ಒಪ್ಪುತ್ತೀರಿ ತಾನೇ? ವಿವೇಕದ ನಿಜವಾದ ಪರೀಕ್ಷೆ ಆಗುವುದು ಅದನ್ನು ಅನ್ವಯಿಸುವಾಗ ಸಿಗುವ ಫಲಿತಾಂಶಗಳಿಂದಲೇ. ಆದ್ದರಿಂದ ನೀವು ಹೀಗೆ ಯೋಚಿಸುತ್ತಿರಬಹುದು: ‘ಬೈಬಲ್ ತತ್ವಗಳ ಪ್ರಕಾರ ಈಗಿನ ಕಾಲದಲ್ಲೂ ನಡೆಯಲಿಕ್ಕಾಗುತ್ತದೆ, ಅವು ಪರಿಣಾಮಕಾರಿ ಆಗಿವೆ ಎಂದಾದರೆ ಅದು ನನ್ನ ಜೀವನದಲ್ಲೂ ನಿಜ ಆಗಬೇಕಲ್ವಾ? ನನಗೆ ಈಗ ಇರುವ ಸಮಸ್ಯೆಗಳ ವಿಷಯದಲ್ಲಿ ಅದರಿಂದ ಹೇಗೆ ಸಹಾಯ ಆಗುತ್ತದೆ?’ ಇದಕ್ಕೊಂದು ಉದಾಹರಣೆ ನೋಡೋಣ.
ಡೆಲ್ಫಿನ್ b ಎಂಬವಳ ಜೀವನ ತುಂಬ ಬಿಝಿ, ಅರ್ಥಗರ್ಭಿತ, ತೃಪ್ತಿಕರ ಆಗಿತ್ತು. ಆದರೆ ತಟ್ಟನೆ ಅವಳ ಜೀವನದಲ್ಲಿ ದುರಂತಗಳ ಸರಮಾಲೆ ಶುರುವಾದವು. ಹದಿಪ್ರಾಯದ ಮಗಳು ತೀರಿಹೋದಳು. ಅವಳ ವಿವಾಹ ಜೀವನ ನುಚ್ಚುನೂರಾಯಿತು. ಹಣಕಾಸಿನ ಸಮಸ್ಯೆಗಳು ಶುರುವಾದವು. ಅದೆಲ್ಲವನ್ನು ನೆನಪಿಸಿಕೊಳ್ಳುತ್ತಾ ಆಕೆ ಹೇಳುವುದು: “ಮಗಳಿಲ್ಲದೆ, ಗಂಡನಿಲ್ಲದೆ, ಮನೆಯಿಲ್ಲದೆ ಈಗ ನಾನ್ಯಾರು ಅಂತ ನನಗೇ ಗೊತ್ತಾಗುತ್ತಿರಲಿಲ್ಲ. ನನ್ನದೇ ಆದ ಗುರುತು ಇಲ್ಲ, ಬಲ ಇಲ್ಲ, ಭವಿಷ್ಯ ಏನು ಅನ್ನೋದು ತಿಳಿದಿಲ್ಲ, ಹೀಗೆ ನನ್ನ ಹತ್ತಿರ ಏನೂ ಇಲ್ಲ ಅಂತ ಅನಿಸುತ್ತಿತ್ತು.”
ಡೆಲ್ಫಿನಳಿಗೆ ಈ ಮುಂದಿನ ಮಾತುಗಳು ಎಷ್ಟು ಸತ್ಯವೆಂದು ಹಿಂದೆಂದಿಗಿಂತಲೂ ಹೆಚ್ಚಾಗಿ ಈ ಸಮಯದಲ್ಲಿ ಅರಿವಾಯಿತು: “ನಮ್ಮ ಆಯುಷ್ಕಾಲವು ಕೀರ್ತನೆ 90:10.
ಎಪ್ಪತ್ತು ವರುಷ; ಬಲ ಹೆಚ್ಚಿದ್ದರೆ ಎಂಭತ್ತು. ಕಷ್ಟಸಂಕಟಗಳೇ ಅದರ ಆಡಂಬರ. ಅದು ಬೇಗನೆ ಗತಿಸಿಹೋಗುತ್ತದೆ; ನಾವು ಹಾರಿ ಹೋಗುತ್ತೇವೆ.”—ಈ ಸಂಕಷ್ಟದ ಸಮಯದಲ್ಲಿ ಡೆಲ್ಫಿನ್ ಬೈಬಲಿನ ಮೊರೆಹೋದಳು. ಅದರಿಂದ ಆಕೆಗೆ ಸಿಕ್ಕಿದ ಸಹಾಯ ಗಮನಾರ್ಹವಾಗಿತ್ತು. ಸಮಸ್ಯೆಗಳನ್ನು ಎದುರಿಸುತ್ತಿರುವಾಗ ಬೈಬಲಿನ ಸಲಹೆಯನ್ನು ಅನ್ವಯಿಸಿದ್ದರಿಂದ ಇನ್ನೂ ಅನೇಕರಿಗೆ ತುಂಬ ಸಹಾಯ ಆಗಿದೆ. ಇದನ್ನೇ ಮುಂದಿನ ಮೂರು ಲೇಖನಗಳು ತೋರಿಸಲಿವೆ. ಬೈಬಲ್ ಈಗ ಅನ್ವಯಿಸಲು ಆಗದಂಥ ಅಸಂಖ್ಯಾತ ಹಳೇ ಪುಸ್ತಕಗಳಂತಿರದೆ ಲೇಖನದ ಆರಂಭದಲ್ಲಿ ವರ್ಣಿಸಲಾದಂಥ ಗಮನಸೆಳೆಯುವ ಶಿಲೆಯಂತಿದೆ ಎಂದು ಈ ಜನರಿಗೆ ಅನಿಸುತ್ತದೆ. ಬೈಬಲ್ ಹೀಗಿರಲು ಕಾರಣ ಅದರಲ್ಲಿರುವ ವಿಷಯ ಬೇರೆಲ್ಲ ಪುಸ್ತಕಗಳಿಗಿಂತ ಬೇರೆ ಆಗಿರುವುದರಿಂದನಾ? ಅಂದರೆ ಅದರಲ್ಲಿರುವ ವಿಷಯಗಳು ಮನುಷ್ಯನದ್ದಲ್ವಾ? ನಿಜವಾಗಿಯೂ ದೇವರದ್ದಾ?—1 ಥೆಸಲೊನೀಕ 2:13.
ಕೆಲವೇ ವರ್ಷಗಳುದ್ದದ ನಮ್ಮ ಬದುಕಿನಲ್ಲಿ ಸಮಸ್ಯೆಗಳೇ ತುಂಬಿರುತ್ತವೆ ಅಂತ ನಿಮಗೂ ಅನಿಸಿರಬಹುದು. ಸಮಸ್ಯೆಗಳಲ್ಲಿ ಕೊಚ್ಚಿಕೊಂಡು ಹೋಗುತ್ತೀರೆಂದು ನಿಮಗೆ ಅನಿಸುವಾಗ, ಸಾಂತ್ವನ, ಬೆಂಬಲ, ಭರವಸಾರ್ಹ ಬುದ್ಧಿವಾದವನ್ನು ಎಲ್ಲಿಂದ ಪಡೆದುಕೊಳ್ಳುತ್ತೀರಾ?
ನಿಮ್ಮ ಜೀವನದಲ್ಲಿ ಬೈಬಲ್ ಸಹಾಯ ಮಾಡಬಲ್ಲ ಮೂರು ಮುಖ್ಯ ವಿಧಗಳನ್ನು ನೋಡೋಣ. ಅದು ನಿಮಗೆ
-
ಸಾಧ್ಯವಿರುವಾಗೆಲ್ಲ ಸಮಸ್ಯೆಗಳಿಂದ ದೂರವಿರಲು
-
ಸಮಸ್ಯೆಗಳು ಬಂದಾಗ ಬಗೆಹರಿಸಲು
-
ಬದಲಿಸಲಿಕ್ಕಾಗದ ಸನ್ನಿವೇಶಗಳನ್ನು ತಾಳಿಕೊಳ್ಳಲು ಸಹಾಯಮಾಡಬಲ್ಲದು.
ಈ ಅಂಶಗಳನ್ನೇ ಮುಂದಿನ ಲೇಖನಗಳಲ್ಲಿ ಚರ್ಚಿಸಲಿದ್ದೇವೆ.
a ಯೆಹೋವ ಎನ್ನುವುದು ದೇವರ ಹೆಸರು ಎಂದು ಬೈಬಲ್ ತಿಳಿಸುತ್ತದೆ. —ಕೀರ್ತನೆ 83:18.
b ಮೊದಲ ನಾಲ್ಕು ಲೇಖನಗಳಲ್ಲಿ ಕೆಲವು ಹೆಸರುಗಳನ್ನು ಬದಲಿಸಲಾಗಿದೆ.