ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 38

ಮಕ್ಕಳೇ, ಮುಂದೆ ನಿಮ್ಮ ಜೀವನ ಚೆನ್ನಾಗಿರುತ್ತೆ!

ಮಕ್ಕಳೇ, ಮುಂದೆ ನಿಮ್ಮ ಜೀವನ ಚೆನ್ನಾಗಿರುತ್ತೆ!

“ವಿವೇಚನಾ ಶಕ್ತಿ ನಿನ್ನನ್ನ ಕಾದುಕಾಪಾಡುತ್ತೆ.”—ಜ್ಞಾನೋ. 2:11.

ಗೀತೆ 89 ಯೆಹೋವನ ಸೌಹಾರ್ದಯುತ ಮನವಿ: “ನನ್ನ ಮಗನೇ, ವಿವೇಕಿಯಾಗಿರು”

ಈ ಲೇಖನದಲ್ಲಿ ಏನಿದೆ? a

1. ಯೆಹೋವಾಷ, ಉಜ್ಜೀಯ ಮತ್ತು ಯೋಷೀಯನಿಗೆ ಯಾವ ಕಷ್ಟದ ಸನ್ನಿವೇಶ ಬಂತು?

 ತುಂಬ ಚಿಕ್ಕ ವಯಸ್ಸಲ್ಲೇ ನೀವು ಇಸ್ರಾಯೇಲ್ಯರ ರಾಜ ಆಗಿದ್ದೀರ ಅಂತ ಅಂದ್ಕೊಳ್ಳಿ. ನಿಮಗೆ ಸಿಕ್ಕಿದ ಅಧಿಕಾರನ ನೀವು ಹೇಗೆ ಉಪಯೋಗಿಸ್ತೀರಾ? ‘ಅಬ್ಬಾ ಇದು ತುಂಬ ಕಷ್ಟದ ಕೆಲ್ಸ’ ಅಂತ ಅನಿಸುತ್ತಾ? ತುಂಬ ಚಿಕ್ಕ ವಯಸ್ಸಲ್ಲೇ ರಾಜರಾದವರ ಬಗ್ಗೆ ಬೈಬಲ್‌ ಹೇಳುತ್ತೆ. ಯೆಹೋವಾಷನಿಗೆ ಬರೀ 7 ವಯಸ್ಸಿದ್ದಾಗ ರಾಜ ಆದ. ಉಜ್ಜೀಯ 16 ವರ್ಷದಲ್ಲಿ ರಾಜ ಆದ. ಯೋಷೀಯ 8 ವರ್ಷ ಇದ್ದಾಗ ರಾಜ ಆದ. ಇವ್ರಿಗೆ ಎಷ್ಟು ಕಷ್ಟ ಆಗಿರುತ್ತೆ ಅಂತ ಸ್ವಲ್ಪ ಯೋಚ್ನೆ ಮಾಡಿ ನೋಡಿ. ಕಷ್ಟ ಇದ್ರೂ ಜನ್ರಿಗೆ ಒಳ್ಳೇದು ಮಾಡೋಕೆ ಅವ್ರಿಗೆ ಯೆಹೋವ ದೇವರು ಮತ್ತು ಬೇರೆಯವರು ಸಹಾಯ ಮಾಡಿದ್ರು.

2. ಯೆಹೋವಾಷ, ಉಜ್ಜೀಯ ಮತ್ತು ಯೋಷೀಯನ ಬಗ್ಗೆ ನಾವ್ಯಾಕೆ ಕಲಿಬೇಕು?

2 ಈ ಮೂರು ರಾಜರ ಬಗ್ಗೆ ನಾವು ಈ ಲೇಖನದಲ್ಲಿ ಕಲಿತೀವಿ. ನಾವ್ಯಾರೂ ಮುಂದೆ ರಾಜ ಅಥವಾ ರಾಣಿ ಆಗಲ್ಲ. ಆದ್ರೆ ಇವರು ಮಾಡಿದ ಒಳ್ಳೇ ತೀರ್ಮಾನ ಮತ್ತು ಕೆಟ್ಟ ತೀರ್ಮಾನಗಳಿಂದ ನಾವೇನು ಕಲಿಬಹುದು ಅಂತ ನೋಡೋಣ. ಅಷ್ಟೇ ಅಲ್ಲ ನಾವ್ಯಾಕೆ ಒಳ್ಳೆಯವ್ರ ಸಹವಾಸನೇ ಮಾಡಬೇಕು, ಯಾಕೆ ಯಾವಾಗ್ಲೂ ದೀನರಾಗಿ ಇರಬೇಕು ಮತ್ತು ಯಾಕೆ ಯೆಹೋವನಿಂದ ಯಾವತ್ತೂ ದೂರ ಆಗಬಾರದು ಅಂತನೂ ಇವ್ರಿಂದ ಕಲಿಯೋಣ.

ಒಳ್ಳೇ ಸ್ನೇಹಿತರನ್ನ ಮಾಡ್ಕೊಳ್ಳಿ

3. ಮಹಾ ಪುರೋಹಿತ ಯೆಹೋಯಾದ ಯೆಹೋವಾಷನಿಗೆ ಹೇಗೆ ಸಹಾಯ ಮಾಡಿದ? ಇದ್ರಿಂದ ಏನಾಯ್ತು?

3 ಯೆಹೋವಾಷನ ತರ ನೀವೂ ಒಳ್ಳೇ ತೀರ್ಮಾನಗಳನ್ನ ಮಾಡಿ. ಯೆಹೋವಾಷನಿಗೆ ಅಪ್ಪ ಇರ್ಲಿಲ್ಲ. ಮಹಾ ಪುರೋಹಿತನಾದ ಯೆಹೋಯಾದ ಅವನನ್ನ ಸ್ವಂತ ಮಗನ ತರ ಬೆಳೆಸಿದ. ಯೆಹೋಯಾದನಿಗೆ ಯೆಹೋವ ದೇವರ ಮೇಲೆ ತುಂಬ ನಂಬಿಕೆ ಇತ್ತು. ಯೆಹೋವಾಷನಿಗೆ ಚೆನ್ನಾಗಿ ತರಬೇತಿ ಕೊಟ್ಟು ಸಹಾಯ ಮಾಡಿದ. ಆಗ ಯೆಹೋವಾಷ ಏನು ಮಾಡಿದ? ಆ ಸಹಾಯನ ಪಡ್ಕೊಂಡು ತುಂಬ ಚಿಕ್ಕ ವಯಸ್ಸಲ್ಲೇ ಒಳ್ಳೇ ತೀರ್ಮಾನಗಳನ್ನ ಮಾಡಿದ. ತಾನು ಯೆಹೋವನನ್ನ ಆರಾಧಿಸೋದಷ್ಟೇ ಅಲ್ಲ, ತನ್ನ ಪ್ರಜೆಗಳಿಗೂ ಯೆಹೋವನನ್ನ ಆರಾಧಿಸೋಕೆ ಸಹಾಯ ಮಾಡಿದ. ಅಷ್ಟೇ ಅಲ್ಲ, ಯೆಹೋವನ ಆಲಯದ ದುರಸ್ತಿ ಕೆಲಸನೂ ಕೈಗೆತ್ಕೊಂಡ.—2 ಪೂರ್ವ. 24:1, 2, 4, 13, 14.

4. ಯೆಹೋವ ದೇವರ ಆಜ್ಞೆಗಳನ್ನ ಆಸ್ತಿ ತರ ನೋಡಿದ್ರೆ ಏನು ಪ್ರಯೋಜನ ಸಿಗುತ್ತೆ? (ಜ್ಞಾನೋಕ್ತಿ 2:1, 10-12)

4 ಅಪ್ಪಅಮ್ಮ ಅಥವಾ ಯಾರಾದ್ರು ನಿಮಗೆ ಯೆಹೋವನನ್ನ ಪ್ರೀತಿಸೋಕೆ, ಆತನ ನೀತಿ-ನಿಯಮಗಳ ಪ್ರಕಾರ ಜೀವಿಸೋಕೆ ಕಲಿಸ್ತಿದ್ದಾರಾ? ಹಾಗಿದ್ರೆ ನೀವು ತುಂಬ ಖುಷಿಪಡಬೇಕು. ಯಾಕಂದ್ರೆ ಆ ನಿಯಮಗಳು ನಿಮಗೆ ಸಿಕ್ಕಿರೋ ಒಂದು ದೊಡ್ಡ ಆಸ್ತಿ. (ಜ್ಞಾನೋಕ್ತಿ 2:1, 10-12 ಓದಿ.) ನಿಮ್ಮ ಅಪ್ಪಅಮ್ಮ ನಿಮಗೆ ಬೇರೆಬೇರೆ ವಿಧಾನಗಳನ್ನ ಬಳಸಿ ತರಬೇತಿ ಕೊಡ್ತಾರೆ. ಕಾಟ್ಯಾ ಅನ್ನೋ ಸಹೋದರಿಯ ಅಪ್ಪ ಏನು ಮಾಡಿದ್ರು ನೋಡಿ. ದಿನಾ ಅವಳನ್ನ ಸ್ಕೂಲಿಗೆ ಕರ್ಕೊಂಡು ಹೋಗುವಾಗ ಅವರು ಅವಳ ಜೊತೆ ದಿನವಚನ ಚರ್ಚೆ ಮಾಡ್ತಿದ್ರು. “ಆ ದಿನ ಏನಾದ್ರು ಕಷ್ಟ ಬಂದ್ರೆ ಅಪ್ಪ ಜೊತೆ ಮಾತಾಡಿದ್ದು ನನಗೆ ನೆನಪಾಗ್ತಿತ್ತು. ಇದ್ರಿಂದ ಒಳ್ಳೇ ತೀರ್ಮಾನಗಳನ್ನ ಮಾಡೋಕೆ ಆಗ್ತಿತ್ತು” ಅಂತ ಕಾಟ್ಯಾ ಹೇಳ್ತಾರೆ. ಅಪ್ಪಅಮ್ಮ ಬೈಬಲನ್ನ ಬಳಸ್ತಾ ‘ಇದನ್ನ ಮಾಡಬಾರ್ದು, ಅದನ್ನ ಮಾಡಬಾರ್ದು’ ಅಂತ ಹೇಳ್ತಿರೋದು ನಿಮ್ಮ ಸ್ವಾತಂತ್ರ್ಯನ ಕಿತ್ಕೊಂಡ ಹಾಗೆ ಅನ್ಸುತ್ತಾ? ಅವ್ರ ಮಾತನ್ನ ಕೇಳೋಕೆ ನಿಮಗೆ ಯಾವುದು ಸಹಾಯ ಮಾಡುತ್ತೆ? ಸಹೋದರಿ ಆನಸ್ತಾಸಿಯಾ ಅವ್ರ ಅನುಭವ ನೋಡಿ. ಅವ್ರ ಅಪ್ಪಅಮ್ಮ ಏನಾದ್ರು ರೂಲ್ಸ್‌ ಮಾಡಿದಾಗ ಅದನ್ನ ಯಾಕೆ ಮಾಡ್ತಿದ್ದಾರೆ ಅಂತನೂ ಹೇಳ್ತಿದ್ರು. “ಇದ್ರಿಂದ ನಂಗೆ ತುಂಬ ಸಹಾಯ ಆಯ್ತು. ಅಪ್ಪಅಮ್ಮ ರೂಲ್ಸ್‌ ಮಾಡ್ತಾ ಇರೋದು ನನ್ನ ಒಳ್ಳೇದಕ್ಕೆ, ನನ್ನನ್ನ ಕಾಪಾಡಕ್ಕೆ, ನನ್ನ ಮೇಲೆ ಪ್ರೀತಿ ಇರೋದಕ್ಕೆ ಅಂತ ಅರ್ಥ ಮಾಡ್ಕೊಂಡೆ” ಅಂತ ಆನಸ್ತಾಸಿಯಾ ಹೇಳ್ತಾರೆ.

5. ನೀವು ಬೈಬಲಲ್ಲಿರೋ ಬುದ್ಧಿವಾದನ ಕೇಳಿದ್ರೆ ಅಪ್ಪಅಮ್ಮಗೆ ಮತ್ತು ಯೆಹೋವ ದೇವರಿಗೆ ಹೇಗನಿಸುತ್ತೆ? (ಜ್ಞಾನೋಕ್ತಿ 22:6; 23:15, 24, 25)

5 ಬೈಬಲಲ್ಲಿ ಇರೋ ಬುದ್ಧಿವಾದಗಳನ್ನ ನೀವು ಪಾಲಿಸಿದ್ರೆ ಅಪ್ಪಅಮ್ಮಗೆ ಖುಷಿ ಆಗುತ್ತೆ. ಅವ್ರಿಗಿಂತ ಯೆಹೋವ ದೇವರಿಗೆ ಜಾಸ್ತಿ ಖುಷಿ ಆಗುತ್ತೆ. ಅಷ್ಟೇ ಅಲ್ಲ, ಆತನ ಜೊತೆಗಿರೋ ಸ್ನೇಹ ಕೂಡ ಜಾಸ್ತಿ ಆಗುತ್ತೆ. (ಜ್ಞಾನೋಕ್ತಿ 22:6; 23:15, 24, 25 ಓದಿ.) ಹಾಗಾಗಿ ಮಕ್ಕಳೇ, ಯೆಹೋವಾಷ ಹೇಗಿದ್ದನೋ ಅದೇ ತರ ನೀವೂ ಇರೋಕೆ ಇದಕ್ಕಿಂತ ಒಳ್ಳೇ ಕಾರಣ ಬೇಕಾ?

6. ಯೆಹೋವಾಷ ಯಾರ ಸಲಹೆಗಳನ್ನ ಕೇಳೋಕೆ ಶುರುಮಾಡಿದ? ಇದ್ರಿಂದ ಏನಾಯ್ತು? (2 ಪೂರ್ವಕಾಲವೃತ್ತಾಂತ 24:17, 18)

6 ಯೆಹೋವಾಷ ಮಾಡಿದ ತಪ್ಪಾದ ತೀರ್ಮಾನಗಳಿಂದ ಪಾಠ ಕಲಿರಿ. ಯೆಹೋಯಾದ ತೀರಿಹೋದ ಮೇಲೆ ಯೆಹೋವಾಷ ಏನು ಮಾಡಿದ? ಅವನು ಯೆಹೂದದ ಅಧಿಕಾರಿಗಳ ಸಹವಾಸ ಮಾಡಿದ. (2 ಪೂರ್ವಕಾಲವೃತ್ತಾಂತ 24:17, 18 ಓದಿ.) ಅವ್ರಿಗೆ ಯೆಹೋವನ ಮೇಲೆ ಒಂಚೂರು ಪ್ರೀತಿ ಇರ್ಲಿಲ್ಲ. ಯೆಹೋವಾಷ ಇಂಥವರ ಸಹವಾಸ ಮಾಡದೆ ದೂರ ಇರಬೇಕಿತ್ತು. (ಜ್ಞಾನೋ. 1:10) ಆದ್ರೆ ಅವನು ಅವ್ರ ಮಾತನ್ನ, ಅವರು ಕೊಟ್ಟ ಕೆಟ್ಟ ಸಲಹೆಯನ್ನೇ ಕೇಳಿದ. ಆಗ ಅವನ ಚಿಕ್ಕಪ್ಪನ ಮಗನಾದ ಜೆಕರ್ಯ ಅವನನ್ನ ತಿದ್ದೋಕೆ ಬಂದ. ಆದ್ರೆ ಯೆಹೋವಾಷ ಅವನನ್ನೇ ಕೊಂದುಬಿಟ್ಟ. (2 ಪೂರ್ವ. 24:20, 21; ಮತ್ತಾ. 23:35) ಇದು ಎಂಥ ದಡ್ಡತನ ಅಲ್ವಾ! ಅವನು ಚಿಕ್ಕವನಿದ್ದಾಗ ಜೀವನ ತುಂಬ ಚೆನ್ನಾಗಿತ್ತು. ಆದ್ರೆ ಆಮೇಲೆ, ಅವನು ಕೊಲೆಗಾರನಾದ, ಧರ್ಮಭ್ರಷ್ಟನಾದ. ಕೊನೇಲಿ ಅವನ ಸ್ವಂತ ಸೇವಕರೇ ಅವನನ್ನ ಕೊಂದುಬಿಟ್ರು. (2 ಪೂರ್ವ. 24:22-25) ಒಂದುವೇಳೆ, ಯೆಹೋವಾಷ ಯೆಹೋವನ ಮಾತನ್ನ, ಯೆಹೋವನನ್ನ ಪ್ರೀತಿಸುವವ್ರ ಮಾತನ್ನ ಕೇಳಿದ್ದಿದ್ರೆ ಅವನ ಜೀವನ ಎಷ್ಟು ಚೆನ್ನಾಗಿ ಇರ್ತಿತ್ತು. ನೀವು ಯೆಹೋವಾಷನಿಂದ ಯಾವ ಪಾಠ ಕಲಿತ್ರಿ?

7. ನೀವು ಯಾರನ್ನ ಸ್ನೇಹಿತರಾಗಿ ಮಾಡ್ಕೊಬೇಕು? (ಚಿತ್ರನೂ ನೋಡಿ.)

7 ಯೆಹೋವಾಷ ಮಾಡಿದ ತಪ್ಪಾದ ತೀರ್ಮಾನದಿಂದ ನಾವೊಂದು ಪಾಠ ಕಲಿತೀವಿ. ಅದೇನಂದ್ರೆ, ನಮ್ಮ ಜೀವನ ಚೆನ್ನಾಗಿ ಇರಬೇಕಂದ್ರೆ ನಾವು ಎಂಥವರ ಸಹವಾಸ ಮಾಡ್ತೀವಿ ಅನ್ನೋದು ಮುಖ್ಯ. ಯೆಹೋವನನ್ನ ಪ್ರೀತಿಸುವವ್ರನ್ನ, ಆತನಿಗೆ ಇಷ್ಟ ಆಗೋದನ್ನೇ ಮಾಡುವವ್ರನ್ನ ನಾವು ಸ್ನೇಹಿತರಾಗಿ ಮಾಡ್ಕೊಬೇಕು. ಅವರು ನಮ್ಮ ವಯಸ್ಸಿನವರೇ ಆಗಿರಬೇಕು ಅಂತೇನಿಲ್ಲ. ಯೆಹೋಯಾದನಿಗೂ ಯೆಹೋವಾಷನಿಗೂ ವಯಸ್ಸಲ್ಲಿ ತುಂಬ ವ್ಯತ್ಯಾಸ ಇತ್ತು. ಹಾಗಿದ್ರೂ ಅವರಿಬ್ರು ಒಳ್ಳೇ ಸ್ನೇಹಿತರಾಗಿದ್ರು ಅನ್ನೋದನ್ನ ನೆನಪಿಡಿ. ಒಬ್ಬ ವ್ಯಕ್ತಿನ ಫ್ರೆಂಡ್‌ ಮಾಡ್ಕೊಬೇಕಾ ಬೇಡ್ವಾ ಅಂತ ಯೋಚ್ನೆ ಮಾಡುವಾಗ ಈ ಪ್ರಶ್ನೆಗಳನ್ನ ನೆನಪಲ್ಲಿಡಿ: ‘ಅವರು ಯೆಹೋವ ದೇವರ ಮೇಲಿರೋ ನಂಬಿಕೆನ ಜಾಸ್ತಿ ಮಾಡ್ಕೊಳ್ಳೋಕೆ ಸಹಾಯ ಮಾಡ್ತಾರಾ? ಯೆಹೋವ ಕೊಟ್ಟಿರೋ ನೀತಿ-ನಿಯಮಗಳನ್ನ ಪಾಲಿಸೋಕೆ ನಂಗೆ ಪ್ರೋತ್ಸಾಹಿಸ್ತಾರಾ? ಯೆಹೋವನ ಬಗ್ಗೆ, ಬೈಬಲಲ್ಲಿ ಕಲ್ತಿರೋ ವಿಷ್ಯಗಳ ಬಗ್ಗೆ ಮಾತಾಡ್ತಾರಾ? ಅವ್ರಿಗೆ ಯೆಹೋವನ ನೀತಿ-ನಿಯಮಗಳ ಮೇಲೆ ಗೌರವ ಇದ್ಯಾ? ನಾನು ಏನಾದ್ರು ತಪ್ಪು ಮಾಡಿದಾಗ ಸುಮ್ನೆ ಇರ್ತಾರಾ ಅಥವಾ ತಿದ್ದುತಾರಾ?’ (ಜ್ಞಾನೋ. 27:5, 6, 17) ನೇರವಾಗಿ ಹೇಳೋದಾದ್ರೆ, ನಿಮ್ಮ ಸ್ನೇಹಿತರಿಗೆ ಯೆಹೋವ ದೇವರ ಮೇಲೆ ಪ್ರೀತಿ ಇಲ್ವಾ? ಅಂಥವ್ರನ್ನ ಬಿಟ್ಟುಬಿಡಿ. ಯೆಹೋವನನ್ನ ಪ್ರೀತಿಸೋರ ಜೊತನೇ ಇರಿ. ನಿಮಗೆ ಬೇಕಾಗಿರೋದು ಇಂಥವ್ರೇ!—ಜ್ಞಾನೋ. 13:20.

8. ನಾವು ಸೋಶಿಯಲ್‌ ಮೀಡಿಯಾನ ಬಳಸ್ತಾ ಇರೋದಾದ್ರೆ ಯಾವ ವಿಷ್ಯನ ಮನಸ್ಸಲ್ಲಿಡಬೇಕು?

8 ಸೋಶಿಯಲ್‌ ಮೀಡಿಯಾದಿಂದ ಸ್ನೇಹಿತರ ಜೊತೆ, ಸಂಬಂಧಿಕರ ಜೊತೆ ಮಾತಾಡೋಕೆ ಆಗುತ್ತೆ. ಅವ್ರ ಜೀವನ ಹೇಗಿದೆ ಅಂತ ತಿಳ್ಕೊಳ್ಳೋಕೆ ಆಗುತ್ತೆ. ಆದ್ರೆ ಕೆಲವರು ಬೇರೆಯವ್ರನ್ನ ಮೆಚ್ಚಿಸೋಕೆ ಇದನ್ನ ಬಳಸ್ತಾರೆ. ಅದಕ್ಕಂತಾನೇ ತಾವೆಲ್ಲಿಗೆ ಹೋದ್ರು, ಏನು ಮಾಡಿದ್ರು, ಏನೆಲ್ಲ ತಗೊಂಡ್ರು ಅನ್ನೋದ್ರ ಬಗ್ಗೆ ಫೋಟೋಗಳನ್ನ ವಿಡಿಯೋಗಳನ್ನ ಹಾಕ್ತಾರೆ. ನೀವು ಸೋಶಿಯಲ್‌ ಮೀಡಿಯಾ ಬಳಸ್ತಾ ಇರೋದಾದ್ರೆ ‘ನಾನು ಇದನ್ನ ಬಳಸ್ತಾ ಇರೋದು ಜನ್ರು ನನ್ನನ್ನ ನೋಡಿ ಮೆಚ್ಚಲಿ, ಹೊಗಳಲಿ ಅಂತಾನಾ ಅಥವಾ ಬೇರೆಯವ್ರನ್ನ ಪ್ರೋತ್ಸಾಹಿಸಬೇಕು ಅಂತಾನಾ? ನಾನಿದನ್ನ ಬಳಸ್ತಾ ಇರೋದ್ರಿಂದ ನಾನು ಯೋಚ್ನೆ ಮಾಡೋದು, ನಡ್ಕೊಳ್ಳೋದು, ಮಾತಾಡೋದು ಲೋಕದ ಜನ್ರ ತರ ಆಗ್ತಾ ಇದ್ಯಾ?’ ಅಂತ ನಿಮ್ಮನ್ನೇ ಕೇಳ್ಕೊಳ್ಳಿ. ಆಡಳಿತ ಮಂಡಲಿಯ ಸದಸ್ಯರಾದ ಸಹೋದರ ನೇತನ್‌ ನಾರ್‌ರವರು ಈ ಸಲಹೆ ಕೊಟ್ರು: “ಮನುಷ್ಯರನ್ನ ಮೆಚ್ಚಿಸೋಕೆ ಹೋಗಬೇಡಿ, ಕೊನೆಗೆ ಯಾರನ್ನೂ ಮೆಚ್ಚಿಸೋಕೆ ಆಗಲ್ಲ. ಆದ್ರೆ ಯೆಹೋವ ದೇವರನ್ನ ಮೆಚ್ಚೋ ತರ ನಡ್ಕೊಳ್ಳಿ. ಆಗ ಆತನನ್ನ ಪ್ರೀತಿಸೋ ಜನ್ರನ್ನೆಲ್ಲ ಮೆಚ್ಚಿಸ್ತೀರ.”

ಯಾವಾಗ್ಲೂ ದೀನತೆ ತೋರಿಸಿ

9. ಉಜ್ಜೀಯನನ್ನ ಯೆಹೋವ ದೇವರು ಹೇಗೆ ಆಶೀರ್ವದಿಸಿದನು? (2 ಪೂರ್ವಕಾಲವೃತ್ತಾಂತ 26:1-5)

9 ಉಜ್ಜೀಯನ ತರ ಒಳ್ಳೇ ತೀರ್ಮಾನಗಳನ್ನ ಮಾಡಿ. ಇವನು ಚಿಕ್ಕ ವಯಸ್ಸಲ್ಲಿ ತುಂಬ ದೀನನಾಗಿದ್ದ. ‘ಸತ್ಯ ದೇವರ ಮೇಲೆ ಭಯ-ಭಕ್ತಿ ಬೆಳೆಸ್ಕೊಂಡಿದ್ದ.’ ಹೀಗೆ 68 ವರ್ಷಗಳ ತನಕ ಖುಷಿಯಾಗಿದ್ದ ಮತ್ತು ಯೆಹೋವನ ಆಶೀರ್ವಾದ ಅವನ ಮೇಲಿತ್ತು. (2 ಪೂರ್ವಕಾಲವೃತ್ತಾಂತ 26:1-5 ಓದಿ.) ಅದಿಕ್ಕೆ ಅವನು ಎಷ್ಟೋ ಶತ್ರುಗಳನ್ನ ಸೋಲಿಸಿ ಯೆರೂಸಲೇಮನ್ನ ಕಾಪಾಡ್ತಾ ಬಂದ. (2 ಪೂರ್ವ. 26:6-15) ಹಾಗಾಗಿ ಉಜ್ಜೀಯ ಜೀವನದಲ್ಲಿ ಸಂತೋಷವಾಗಿದ್ದ.—ಪ್ರಸಂ. 3:12, 13.

10. ಉಜ್ಜೀಯನ ಜೀವನ ಹೇಗೆ ಬದಲಾಯ್ತು?

10 ಉಜ್ಜೀಯ ತಗೊಂಡ ತಪ್ಪಾದ ತೀರ್ಮಾನಗಳಿಂದ ಪಾಠ ಕಲಿರಿ. ಇವನು ರಾಜನಾಗಿದ್ರಿಂದ ಎಲ್ರಿಗೂ ಆಜ್ಞೆ ಕೊಡ್ತಿದ್ದ. ಜನ್ರೂ ಅದನ್ನೇ ಮಾಡಬೇಕಿತ್ತು. ಇದು ಅವನಲ್ಲಿ ‘ನಾನು ಏನು ಮಾಡಿದ್ರೂ ನಡಿಯುತ್ತೆ’ ಅನ್ನೋ ಭಾವನೆ ಬರೋ ತರ ಮಾಡ್ತಾ? ಒಂದಿನ ಉಜ್ಜೀಯ ಆಲಯದಲ್ಲಿ ಧೂಪ ಹಾಕೋಕೆ ಆಲಯದ ಒಳಗೇ ಹೋಗಿಬಿಟ್ಟ. ರಾಜರು ಇದನ್ನ ಮಾಡೋ ಹಾಗಿರಲಿಲ್ಲ. (2 ಪೂರ್ವ. 26:16-18) ಹೀಗೆ ಮಾಡಬೇಡ ಅಂತ ಮಹಾ ಪುರೋಹಿತ ಅಜರ್ಯ ಹೇಳಿದ. ಆದ್ರೆ ಉಜ್ಜೀಯ ಅವನ ಮಾತು ಕೇಳಲಿಲ್ಲ, ತುಂಬ ಕೋಪ ಮಾಡ್ಕೊಂಡ. ಈ ತರ ಅಹಂಕಾರ ತೋರಿಸಿದ್ರಿಂದ ಇಷ್ಟು ವರ್ಷ ಮಾಡಿದ ಸೇವೆಯೆಲ್ಲಾ ಮಣ್ಣುಪಾಲು ಆಯ್ತು. ಯೆಹೋವ ಇವನಿಗೆ ಕುಷ್ಠರೋಗ ಬರೋ ತರ ಮಾಡಿದನು. (2 ಪೂರ್ವ. 26:19-21) ಒಂದುವೇಳೆ ಉಜ್ಜೀಯ ದೀನನಾಗಿ ಇದ್ದಿದ್ರೆ ಅವನ ಜೀವನ ಎಷ್ಟು ಚೆನ್ನಾಗಿ ಇರ್ತಿತ್ತು ಅಲ್ವಾ!

11. ನಮ್ಮಲ್ಲಿ ದೀನತೆ ಇದೆ ಅಂತ ನಾವು ಹೇಗೆ ತೋರಿಸ್ತೀವಿ? (ಚಿತ್ರನೂ ನೋಡಿ.)

11 ಉಜ್ಜೀಯ ಶತ್ರುಗಳನ್ನ ಸೋಲಿಸ್ತಾ, ಗೆಲ್ತಾ ಹೋದ ಹಾಗೆ ಅದಕ್ಕೆಲ್ಲಾ ಯೆಹೋವನೇ ಕಾರಣ ಅನ್ನೋದನ್ನ ಮರೆತುಬಿಟ್ಟ. ಇದ್ರಿಂದ ನಾವೇನು ಕಲಿಬಹುದು ಅಂದ್ರೆ ನಮಗೆ ಸಿಗೋ ಆಶೀರ್ವಾದಗಳಿಗೆ, ಸುಯೋಗಗಳಿಗೆ ಯೆಹೋವನೇ ಕಾರಣ ಅನ್ನೋದನ್ನ ನಾವು ಮರೀಬಾರದು. ‘ಎಲ್ಲಾ ನನ್ನಿಂದಾನೇ ಆಗಿದ್ದು’ ಅಂತ ಕೊಚ್ಕೊಬಾರದು. b (1 ಕೊರಿಂ. 4:7) ಅಷ್ಟೇ ಅಲ್ಲ ನಮ್ಮಿಂದಾನೂ ತಪ್ಪಾಗುತ್ತೆ, ನಮಗೂ ಶಿಸ್ತು ಬೇಕಾಗುತ್ತೆ ಅನ್ನೋದನ್ನ ಒಪ್ಕೊಬೇಕು. ಹತ್ತತ್ರ 60 ವರ್ಷ ಆಗಿರೋ ಒಬ್ಬ ಸಹೋದರ ಏನು ಹೇಳ್ತಾರೆ ಅಂದ್ರೆ, “ನನ್ನಿಂದ ಕೆಲವೊಮ್ಮೆ ಚಿಕ್ಕಪುಟ್ಟ ತಪ್ಪುಗಳಾದಾಗ, ಬೇರೆಯವರು ತಿದ್ತಾರೆ. ಆಗ ನಾನು ಬೇಜಾರ್‌ ಮಾಡ್ಕೊಳಲ್ಲ. ಅದ್ರ ಬದ್ಲು ಯೆಹೋವನ ಸೇವೆನ ಆದಷ್ಟು ಚೆನ್ನಾಗಿ ಮಾಡೋಕೆ ಪ್ರಯತ್ನಿಸ್ತೀನಿ.” ನಿಜ ಹೇಳಬೇಕಂದ್ರೆ, ಯೆಹೋವನ ಮಾತನ್ನ ಕೇಳಿ ದೀನತೆ ತೋರಿಸಿದ್ರೆ ನಮ್ಮ ಜೀವನ ಚೆನ್ನಾಗಿರುತ್ತೆ.—ಜ್ಞಾನೋ. 22:4.

ಯೆಹೋವ ದೇವರಿಂದ ಯಾವತ್ತೂ ದೂರ ಆಗಬೇಡಿ

12. ಯೋಷೀಯ ಚಿಕ್ಕ ವಯಸ್ಸಲ್ಲೇ ಏನು ಮಾಡಿದ? (2 ಪೂರ್ವಕಾಲವೃತ್ತಾಂತ 34:1-3)

12 ಯೋಷೀಯನ ತರ ಒಳ್ಳೇ ತೀರ್ಮಾನಗಳನ್ನ ಮಾಡಿ. ಇವನು ಚಿಕ್ಕ ವಯಸ್ಸಲ್ಲೇ ರಾಜನಾದ. ಯೆಹೋವ ದೇವರನ್ನ ಆರಾಧಿಸೋಕೆ ಶುರು ಮಾಡಿದ. ಯೆಹೋವ ದೇವರ ಬಗ್ಗೆ ಕಲಿಬೇಕು, ಆತನಿಗೆ ಏನಿಷ್ಟನೋ ಅದ್ರ ಬಗ್ಗೆ ತಿಳ್ಕೊಬೇಕು ಅಂತ ಅವನಿಗೆ ಆಸೆ ಇತ್ತು. ಆದ್ರೆ ಇದು ಅಂದ್ಕೊಂಡಷ್ಟು ಸುಲಭ ಆಗಿರ್ಲಿಲ್ಲ. ಯಾಕಂದ್ರೆ ಅವನ ಪ್ರಜೆಗಳಲ್ಲಿ ಹೆಚ್ಚಿನವರು ಸುಳ್ಳು ದೇವರುಗಳನ್ನ ಆರಾಧಿಸ್ತಿದ್ರು. ಇದನ್ನೆಲ್ಲ ಯೋಷೀಯ ಧೈರ್ಯದಿಂದ ನಿಲ್ಲಿಸಿದ. ಅಷ್ಟೇ ಅಲ್ಲ ದೇಶದಿಂದ ಸುಳ್ಳು ದೇವರುಗಳನ್ನ ತೆಗೆದು ಹಾಕಿದ. ಇದನ್ನೆಲ್ಲಾ ಮಾಡುವಾಗ ಅವನಿಗೆ 20 ವರ್ಷನೂ ಆಗಿರ್ಲಿಲ್ಲ.—2 ಪೂರ್ವಕಾಲವೃತ್ತಾಂತ 34:1-3 ಓದಿ.

13. ನಿಮ್ಮ ಜೀವನವನ್ನ ಯಾಕೆ ಯೆಹೋವನಿಗೆ ಸಮರ್ಪಿಸ್ಕೊಬೇಕು?

13 ಮಕ್ಕಳೇ, ಯೆಹೋವನ ಬಗ್ಗೆ, ಆತನ ಗುಣಗಳ ಬಗ್ಗೆ ಕಲೀತಾ ಹೋದ ಹಾಗೆ ನೀವು ಯೋಷೀಯನ ತರ ಆಗ್ತೀರ. ಆಗ ನಿಮ್ಮ ಜೀವನವನ್ನ ಯೆಹೋವನಿಗೆ ಸಮರ್ಪಿಸ್ಕೊಂಡು ದೀಕ್ಷಾಸ್ನಾನ ಪಡಿಯೋಕೆ ಸುಲಭ ಆಗುತ್ತೆ. ಸಮರ್ಪಣೆ ಮಾಡ್ಕೊಳ್ಳೋದ್ರ ಅರ್ಥ ಏನು ಗೊತ್ತಾ? 14ನೇ ವಯಸ್ಸಲ್ಲಿ ದೀಕ್ಷಾಸ್ನಾನ ತಗೊಂಡ ಲೂಕ್‌ ಏನು ಹೇಳ್ತಾನೆ ನೋಡಿ: “ಇನ್ಮುಂದೆ ನಾನು ಬದುಕೋದು ಯೆಹೋವನಿಗೋಸ್ಕರ. ಆತನನ್ನ ಖುಷಿ ಪಡಿಸೋದೇ ನನ್ನ ಜೀವನದ ಗುರಿ ಆಗಿರುತ್ತೆ.” (ಮಾರ್ಕ 12:30) ಈ ಗುರಿ ನಿಮಗಿದ್ರೆ ನಿಮ್ಮ ಜೀವನನೂ ಚೆನ್ನಾಗಿರುತ್ತೆ.

14. ಯೋಷೀಯನ ತರ ಇರೋಕೆ ಕೆಲವು ಮಕ್ಕಳು ಏನು ಮಾಡಿದ್ದಾರೆ?

14 ಮಕ್ಕಳೇ, ನಿಮಗೆ ಯಾವ ಸಮಸ್ಯೆ ಬರಬಹುದು? ಜೊಹಾನ್‌ ಅನ್ನೋ ಹುಡುಗನ ಉದಾಹರಣೆ ನೋಡಿ. ಇವನು 12ನೇ ವಯಸ್ಸಲ್ಲಿ ದೀಕ್ಷಾಸ್ನಾನ ತಗೊಂಡ. ಇವನ ಜೊತೆ ಓದೋರು ಎಲೆಕ್ಟ್ರಾನಿಕ್‌ ಸಿಗರೇಟ್‌ ಸೇದೋಕೆ ಒತ್ತಾಯ ಮಾಡ್ತಾರೆ. ಆಗೆಲ್ಲಾ ಅವರು ಹೇಳಿದ ತರ ಮಾಡಿದ್ರೆ ಒಂದು, ನನ್ನ ಆರೋಗ್ಯ ಹಾಳಾಗುತ್ತೆ ಇನ್ನೊಂದು, ಯೆಹೋವನ ಜೊತೆಗಿರೋ ಸ್ನೇಹ ಹಾಳಾಗುತ್ತೆ ಅಂತ ನೆನಪಿಸ್ಕೊಳ್ತಾನೆ. ಇದು ಜೊಹಾನ್‌ಗೆ ಯಾವ ಒತ್ತಾಯ ಬಂದ್ರೂ ಮಣಿದೆ ಇರೋಕೆ ಸಹಾಯ ಮಾಡುತ್ತೆ. ಈಗ ರೇಚಲ್‌ ಅನ್ನೋ ಹುಡುಗಿಯ ಉದಾಹರಣೆ ನೋಡಿ. ಇವಳ ದೀಕ್ಷಾಸ್ನಾನ ಆಗಿದ್ದು 14ನೇ ವಯಸ್ಸಲ್ಲಿ. ರೇಚಲ್‌ ಏನು ಹೇಳ್ತಾಳಂದ್ರೆ “ನಾನು ಏನಾದ್ರು ಓದಿದಾಗ ಅಥವಾ ನೋಡಿದಾಗ ಬೈಬಲಲ್ಲಿ ಇರೋ ವಿಷ್ಯದ ಬಗ್ಗೆ ನೆನಪಿಸ್ಕೊಳ್ತೀನಿ. ಉದಾಹರಣೆಗೆ ಇತಿಹಾಸದ ಯಾವುದಾದ್ರು ಒಂದು ಪಾಠದಲ್ಲಿ ಒಂದು ವಿಷ್ಯದ ಬಗ್ಗೆ ಕಲ್ತಾಗ ಅದಕ್ಕೂ ಬೈಬಲಲ್ಲಿ ಇರೋ ಯಾವುದಾದ್ರು ಒಂದು ಘಟನೆಗೋ ಅಥವಾ ಭವಿಷ್ಯವಾಣಿಗೋ ಸಂಬಂಧ ಇದ್ಯಾ ಅಂತ ನೋಡ್ತೀನಿ. ಸ್ಕೂಲಲ್ಲಿ ಯಾರ ಜೊತೆನಾದ್ರು ನಾನು ಮಾತಾಡಿದಾಗ ಇವ್ರಿಗೆ ಯಾವ ವಚನದ ಬಗ್ಗೆ ಅಥವಾ ಯಾವ ವಿಷ್ಯದ ಬಗ್ಗೆ ಹೇಳಬಹುದು ಅಂತ ಯೋಚಿಸ್ತೀನಿ.” ಇದು ರೇಚಲ್‌ಗೆ ಸ್ಕೂಲಲ್ಲಿ ಬರೋ ಸಮಸ್ಯೆಗಳನ್ನ ನಿಭಾಯಿಸೋಕೆ ಸಹಾಯ ಮಾಡುತ್ತೆ. ಮಕ್ಕಳೇ, ನಿಮಗೆ ಬರೋ ಸಮಸ್ಯೆಗಳು ರಾಜ ಯೋಷೀಯನಿಗೆ ಬಂದ ಸಮಸ್ಯೆಗಳು ಬೇರೆಬೇರೆ ಇರಬಹುದು. ಆದ್ರೆ ನೀವು ಯೋಷೀಯನ ತರನೇ ಸರಿಯಾದ ತೀರ್ಮಾನಗಳನ್ನ ಮಾಡೋಕೆ ಆಗುತ್ತೆ. ಯೆಹೋವನಿಗೆ ನಿಯತ್ತಾಗಿ ಇರಕ್ಕಾಗುತ್ತೆ.

15. ಯೆಹೋವನ ಸೇವೆ ಮಾಡ್ತಾ ಇರೋಕೆ ಯೋಷೀಯನಿಗೆ ಯಾವುದು ಸಹಾಯ ಮಾಡ್ತು? (2 ಪೂರ್ವಕಾಲವೃತ್ತಾಂತ 34:14, 18-21)

15 ರಾಜ ಯೋಷೀಯನಿಗೆ 26 ವರ್ಷ ಆದಾಗ ದೇವಾಲಯದ ದುರಸ್ತಿ ಕೆಲಸನ ಶುರು ಮಾಡಿದ. ಆ ಕೆಲಸ ನಡಿತಿದ್ದಾಗ “ಮೋಶೆ ಮೂಲಕ ಕೊಟ್ಟ ಯೆಹೋವನ ನಿಯಮ ಪುಸ್ತಕ ಸಿಕ್ತು.” ಆ ನಿಯಮಗಳನ್ನ ಯೋಷೀಯ ಕೇಳಿಸ್ಕೊಂಡ ತಕ್ಷಣ ಬದಲಾವಣೆಗಳನ್ನ ಮಾಡ್ಕೊಂಡ. (2 ಪೂರ್ವಕಾಲವೃತ್ತಾಂತ 34:14, 18-21 ಓದಿ.) ಮಕ್ಕಳೇ, ನೀವು ಬೈಬಲನ್ನ ದಿನಾ ಓದ್ತಾ ಇದ್ದೀರಾ? ಓದ್ತಾ ಇರೋ ವಿಷ್ಯಗಳು ನಿಮಗೆ ಇಷ್ಟ ಆಗ್ತಾ ಇದ್ಯಾ? ನಿಮಗೆ ಸಹಾಯ ಆಗೋ ವಚನಗಳನ್ನ ಗುರುತು ಹಾಕಿ ಇಟ್ಕೊಳ್ತಾ ಇದ್ದೀರಾ? ಎಲ್ಲಾದ್ರು ಬರೆದಿಟ್ಕೊಳ್ತಾ ಇದ್ದೀರಾ? ನಾವು ಆಗ್ಲೇ ನೋಡಿದ ಲೂಕ್‌ ಅನ್ನೋ ಹುಡುಗ ಅವನಿಗಿಷ್ಟ ಆದ ವಚನಗಳ ಬಗ್ಗೆ ಸಂಶೋಧನೆ ಮಾಡಿ ಪುಸ್ತಕದಲ್ಲಿ ಬರೆದಿಟ್ಕೊಳ್ತಾನೆ. ಈ ರೀತಿ ಬರೆದಿಟ್ಕೊಂಡ್ರೆ ಬೇಕಾದಾಗ ಆ ವಚನಗಳು ಬೇಗ ಸಿಗುತ್ತಲ್ವಾ? ನೀವು ಬೈಬಲನ್ನ ಓದಿ ಅರ್ಥ ಮಾಡ್ಕೊಳ್ತಾ ಹೋದ ಹಾಗೆ, ಯೆಹೋವನ ಸೇವೆನ ಚೆನ್ನಾಗಿ ಮಾಡಬೇಕು ಅನ್ನೋ ಆಸೆನೂ ಜಾಸ್ತಿ ಆಗುತ್ತೆ. ಅಷ್ಟೇ ಅಲ್ಲ ಸರಿಯಾಗಿದ್ದನ್ನ ಮಾಡೋಕೆ ಬೈಬಲ್‌ ನಿಮಗೂ ಸಹಾಯ ಮಾಡುತ್ತೆ.

16. (ಎ) ಯೋಷೀಯ ಯಾಕೆ ದೊಡ್ಡ ತಪ್ಪು ಮಾಡಿದ? (ಬಿ) ಇದ್ರಿಂದ ನಮಗೇನು ಪಾಠ?

16 ಯೋಷೀಯ ತಗೊಂಡ ತಪ್ಪಾದ ತೀರ್ಮಾನದಿಂದ ಪಾಠ ಕಲಿರಿ. ಯೋಷೀಯನಿಗೆ 39 ವರ್ಷ ಆದಾಗ ಒಂದು ದೊಡ್ಡ ತಪ್ಪು ಮಾಡಿದ. ಇದ್ರಿಂದ ತನ್ನ ಪ್ರಾಣನೇ ಕಳ್ಕೊಂಡ. ಏನು ಮಾಡಬೇಕು, ಏನು ಮಾಡಬಾರದು ಅಂತ ಯೆಹೋವನನ್ನ ಕೇಳೋ ಬದ್ಲು, ತನಗೆ ಸರಿ ಅನಿಸಿದ್ದನ್ನ ಮಾಡಿದ. (2 ಪೂರ್ವ. 35:20-25) ಅದಕ್ಕೇ ಹೀಗಾಯ್ತು. ಇದ್ರಿಂದ ನಮಗೇನು ಪಾಠ? ನಾವೆಷ್ಟೇ ದೊಡ್ಡವರಾಗಿರಲಿ, ತುಂಬ ವರ್ಷಗಳಿಂದ ಬೈಬಲ್‌ ಓದುತ್ತಾ ಇರಲಿ, ನಾವು ಯೆಹೋವನ ಮಾತನ್ನ ಕೇಳ್ತಾ ಇರಬೇಕು. ಅದು ಹೇಗಂದ್ರೆ, ನಾವು ಆತನಿಗೆ ಪ್ರಾರ್ಥನೆ ಮಾಡಬೇಕು, ಬೈಬಲನ್ನ ಓದಬೇಕು, ಅನುಭವ ಇರೋ ಸಹೋದರ ಸಹೋದರಿಯರಿಂದ ಸಲಹೆ ಪಡ್ಕೊಬೇಕು. ಆಗ ನಾವು ಜೀವನದಲ್ಲಿ ದೊಡ್ಡ ತಪ್ಪುಗಳನ್ನ ಮಾಡಲ್ಲ, ಖುಷಿಯಾಗಿ ಇರ್ತೀವಿ.—ಯಾಕೋ. 1:25.

ಮಕ್ಕಳೇ, ನಿಮ್ಮ ಜೀವನ ಚೆನ್ನಾಗಿರಲಿ

17. ಆ ಮೂರು ರಾಜರ ತರ ನಾವೇನು ಮಾಡಬೇಕು? ಏನು ಮಾಡಬಾರದು?

17 ಮಕ್ಕಳೇ, ಈ ವಯಸ್ಸಲ್ಲಿ ನಿಮಗೆ ಸಾಧನೆ ಮಾಡೋಕೆ ತುಂಬ ಅವಕಾಶಗಳು ಇರುತ್ತೆ. ಯೆಹೋವಾಷ, ಉಜ್ಜೀಯ ಮತ್ತು ಯೋಷೀಯನ ತರ ನೀವೂ ಒಳ್ಳೇ ತೀರ್ಮಾನ ತಗೊಂಡು ಈ ಅವಕಾಶಗಳನ್ನ ಚೆನ್ನಾಗಿ ಬಳಸ್ಕೊಳ್ಳಿ. ಅವರಿಂದಾನೂ ತಪ್ಪುಗಳಾಗಿತ್ತು ನಿಜ. ಆದ್ರೆ ಆ ತಪ್ಪುಗಳನ್ನ ನೀವು ಮಾಡೋಕೆ ಹೋಗಬೇಡಿ. ಅವರು ಏನು ಒಳ್ಳೇದು ಮಾಡಿದ್ರೋ ಅದನ್ನ ಮಾತ್ರ ಮಾಡಿ. ಆಗ ನಿಮ್ಮ ಜೀವನ ಚೆನ್ನಾಗಿರುತ್ತೆ.

18. ನಿಮ್ಮ ಜೀವನ ಚೆನ್ನಾಗಿರುತ್ತೆ ಅಂತ ತಿಳ್ಕೊಳ್ಳೋಕೆ ಬೈಬಲ್‌ನಲ್ಲಿರೋ ಇನ್ನೂ ಯಾರ ಉದಾಹರಣೆಗಳು ನಿಮಗೆ ಸಹಾಯ ಮಾಡುತ್ತೆ? (ಚಿತ್ರನೂ ನೋಡಿ.)

18 ಈ ತರ ಚಿಕ್ಕ ವಯಸ್ಸಲ್ಲೇ ದೇವರಿಗೆ ಇಷ್ಟ ಆಗೋ ಹಾಗೆ ತುಂಬ ಜನ ನಡ್ಕೊಂಡಿದ್ದಾರೆ. ಇದ್ರಿಂದ ಅವ್ರ ಜೀವನನೂ ಚೆನ್ನಾಗಿತ್ತು. ಅವ್ರ ಬಗ್ಗೆನೂ ಬೈಬಲಲ್ಲಿದೆ. ಅದರಲ್ಲೊಬ್ಬ ದಾವೀದ. ಚಿಕ್ಕ ವಯಸ್ಸಲ್ಲೇ ಅವನು ದೇವರ ಪಕ್ಷ ನಿಂತ. ಆಮೇಲೆ ಒಬ್ಬ ಒಳ್ಳೇ ರಾಜನಾದ. ಅವನು ಜೀವನದಲ್ಲಿ ತಪ್ಪುಗಳನ್ನ ಮಾಡಿದ್ರೂ ಕೊನೇ ತನಕ ದೇವರಿಗೆ ನಿಯತ್ತಾಗಿದ್ದ. (1 ಅರ. 3:6; 9:4, 5; 14:8) ದಾವೀದನ ಬಗ್ಗೆ ಓದಿ ಅಧ್ಯಯನ ಮಾಡೋದು ಕೊನೇ ವರೆಗೂ ಯೆಹೋವನಿಗೆ ನಿಯತ್ತಾಗಿ ಇರೋಕೆ ನಿಮಗೆ ಸಹಾಯ ಮಾಡುತ್ತೆ. ಮಾರ್ಕ ಅಥವಾ ತಿಮೊತಿ ಬಗ್ಗೆನೂ ನೀವು ಅಧ್ಯಯನ ಮಾಡಬಹುದು. ಇವರು ಚಿಕ್ಕ ವಯಸ್ಸಿಂದಾನೇ ಯೆಹೋವ ದೇವರ ಸೇವೆ ಮಾಡಿದ್ರು. ಯೆಹೋವನೂ ಅವ್ರನ್ನ ಮೆಚ್ಕೊಂಡನು. ಹೀಗೆ ದೇವರ ಹತ್ರ ಕೊನೆವರೆಗೂ ಒಳ್ಳೇ ಹೆಸರು ಕಾಪಾಡ್ಕೊಂಡಿದ್ರಿಂದ ಅವ್ರ ಜೀವನನೂ ಚೆನ್ನಾಗಿತ್ತು.

19. ನಿಮ್ಮ ಜೀವನ ಚೆನ್ನಾಗಿರಬೇಕು ಅಂದ್ರೆ ಏನು ಮಾಡಬೇಕು?

19 ನೀವು ಈಗ ಏನು ಮಾಡ್ತಿರೋ ಅದು ನೀವು ದೊಡ್ಡವರಾದ ಮೇಲೆ ಖುಷಿ ತರುತ್ತೆ. ಹಾಗಾಗಿ ನಿಮಗೆ ಸರಿ ಅನಿಸಿದ್ದನ್ನ ಮಾಡೋಕೆ ಹೋಗಬೇಡಿ. ಯೆಹೋವನನ್ನ ನಂಬಿ. (ಜ್ಞಾನೋ. 20:24) ಆಗ ಒಳ್ಳೇ ತೀರ್ಮಾನಗಳನ್ನ ಮಾಡೋಕೆ ಆತನು ನಿಮಗೆ ಸಹಾಯ ಮಾಡ್ತಾನೆ. ನಿಮ್ಮ ಜೀವನನೂ ಚೆನ್ನಾಗಿರುತ್ತೆ. ಆತನಿಗೋಸ್ಕರ ನೀವೇನು ಮಾಡ್ತಿರೋ ಅದನ್ನ ಆತನು ಯಾವತ್ತೂ ಮರಿಯಲ್ಲ. ಮಕ್ಕಳೇ, ನಮ್ಮ ಪ್ರೀತಿಯ ಅಪ್ಪ ಯೆಹೋವನ ಸೇವೆನ ನೀವು ಮಾಡಿದ್ರೆ ನಿಮ್ಮ ಜೀವನ ಚೆನ್ನಾಗಿರುತ್ತೆ ಅಂತ ಒಪ್ಕೊಳ್ತೀರ ಅಲ್ವಾ?

ಗೀತೆ 24 ನಿನ್ನ ದೃಷ್ಟಿಯನ್ನು ಇನಾಮಿನ ಮೇಲಿಡು!

a ಮಕ್ಕಳೇ, ಮುಂದೆ ತುಂಬ ಕಷ್ಟಗಳು ಬರುತ್ತೆ. ಆಗ ಸರಿಯಾದ ತೀರ್ಮಾನಗಳನ್ನ ಮಾಡೋಕೆ ಯೆಹೋವ ದೇವರ ಜೊತೆಗಿರೋ ಸ್ನೇಹ ಕಾಪಾಡ್ಕೊಳ್ಳೋಕೆ ಸುಲಭ ಅಲ್ಲ ಅಂತ ಯೆಹೋವನಿಗೆ ಚೆನ್ನಾಗಿ ಗೊತ್ತು. ಹಾಗಾದ್ರೆ ಒಳ್ಳೇ ತೀರ್ಮಾನಗಳನ್ನ ಮಾಡ್ತಾ ಯೆಹೋವನನ್ನ ಖುಷಿ ಪಡಿಸೋದು ಹೇಗೆ? ಅದಕ್ಕೆ ಈ ಲೇಖನದಲ್ಲಿ ಮೂರು ಹುಡುಗರ ಉದಾಹರಣೆ ನೋಡೋಣ. ಇವರು ಯೆಹೂದದ ರಾಜರಾದ್ರು. ಇವರು ತಗೊಂಡ ತೀರ್ಮಾನಗಳಿಂದ ನಾವೇನು ಪಾಠ ಕಲಿಬಹುದು ಅಂತನೂ ನೋಡೋಣ.

b jw.orgನಲ್ಲಿ “ಸೋಶಿಯಲ್‌ ಮೀಡಿಯಾದಲ್ಲಿ ಫೇಮಸ್‌ ಆಗೋದು ಮುಖ್ಯನಾ?” ಅನ್ನೋ ಲೇಖನದಲ್ಲಿರೋ “ಕೊಚ್ಚಿಕೊಳ್ಳೋದ್ರಿಂದ ದೂರ ಇರಿ” ಅನ್ನೋ ಚೌಕ ನೋಡಿ.

c ಚಿತ್ರ ವಿವರಣೆ: ಒಬ್ಬ ಯುವ ಸಹೋದರಿಗೆ ಇನ್ನೊಬ್ಬ ಸಹೋದರಿ ಒಳ್ಳೇ ತೀರ್ಮಾನ ತಗೊಳ್ಳೋಕೆ ಸಹಾಯ ಮಾಡ್ತಿದ್ದಾರೆ.

d ಚಿತ್ರ ವಿವರಣೆ: ಒಬ್ಬ ಸಹೋದರಿ ಸಮ್ಮೇಳನದಲ್ಲಿ ಅನುಭವ ಹೇಳೋ ಮುಂಚೆ ಸಹಾಯಕ್ಕಾಗಿ ಯೆಹೋವನ ಹತ್ರ ಪ್ರಾರ್ಥನೆ ಮಾಡ್ತಿದ್ದಾರೆ. ಅನುಭವ ಹೇಳಿದ ಮೇಲೆ ಹೊಗಳಿಕೆಯನ್ನ ಯೆಹೋವನಿಗೆ ಕೊಡ್ತಿದ್ದಾರೆ.