ಅಧ್ಯಯನ ಲೇಖನ 39
‘ಇಗೋ, ಮಹಾ ಸಮೂಹ!’
‘ಇಗೋ, ಯಾವ ಮನುಷ್ಯನಿಂದಲೂ ಎಣಿಸಲಾಗದಂಥ ಒಂದು ಮಹಾ ಸಮೂಹವು ಸಿಂಹಾಸನದ ಮುಂದೆಯೂ ಕುರಿಮರಿಯ ಮುಂದೆಯೂ ನಿಂತಿದೆ.’—ಪ್ರಕ. 7:9.
ಗೀತೆ 144 ಜೀವದ ಹೊಣೆ
ಕಿರುನೋಟ a
1. ಕ್ರಿಸ್ತ ಶಕ ಒಂದನೇ ಶತಮಾನದ ಕೊನೆಯಲ್ಲಿ ಅಪೊಸ್ತಲ ಯೋಹಾನ ಎಂಥ ಪರಿಸ್ಥಿತಿಯಲ್ಲಿದ್ದನು?
ಕ್ರಿಸ್ತ ಶಕ ಒಂದನೇ ಶತಮಾನದ ಕೊನೆಯಲ್ಲಿ ಅಪೊಸ್ತಲ ಯೋಹಾನ ತುಂಬ ಕಷ್ಟದ ಪರಿಸ್ಥಿತಿಯಲ್ಲಿದ್ದ. ಆತನಿಗೆ ವಯಸ್ಸಾಗಿತ್ತು, ಪತ್ಮೋಸ್ ದ್ವೀಪದಲ್ಲಿ ಸೆರೆಯಾಳಾಗಿದ್ದ ಮತ್ತು ಆ ಸಮಯದಲ್ಲಿ ಬಹುಶಃ ಅಪೊಸ್ತಲರಲ್ಲಿ ಆತನೊಬ್ಬನೇ ಬದುಕಿದ್ದ. (ಪ್ರಕ. 1:9) ಧರ್ಮಭ್ರಷ್ಟರು ಸುಳ್ಳು ಬೋಧನೆಗಳನ್ನು ಕಲಿಸುತ್ತಾ ಕ್ರೈಸ್ತರ ಮಧ್ಯೆ ಒಡಕನ್ನು ತರುತ್ತಿದ್ದಾರೆ ಎಂದು ಆತನಿಗೆ ಗೊತ್ತಿತ್ತು. ಕ್ರೈಸ್ತತ್ವವು ಆಗಲೋ ಈಗಲೋ ನಂದಿಹೋಗುವ ಸ್ಥಿತಿಯಲ್ಲಿತ್ತು.—ಯೂದ 4; ಪ್ರಕ. 2:15, 20; 3:1, 17.
2. ಪ್ರಕಟನೆ 7:9-14ರ ಪ್ರಕಾರ ಯೋಹಾನ ಯಾವ ರೋಮಾಂಚಕ ದರ್ಶನವನ್ನು ನೋಡಿದನು? (ಮುಖಪುಟ ಚಿತ್ರ ನೋಡಿ.)
2 ಇಂಥ ಕಷ್ಟದ ಪರಿಸ್ಥಿತಿಯಲ್ಲಿದ್ದ ಯೋಹಾನನಿಗೆ ದೇವರು ಭವಿಷ್ಯದ ಬಗ್ಗೆ ಒಂದು ರೋಮಾಂಚಕ ದರ್ಶನವನ್ನು ತೋರಿಸಿದನು. ಆ ದರ್ಶನದಲ್ಲಿ, ದೇವರ ದಾಸರ ಒಂದು ಗುಂಪಿಗೆ ಕೊನೆಯ ಮುದ್ರೆ ಒತ್ತುವ ತನಕ ಮಹಾ ಸಂಕಟದ ನಾಶಕರ ಗಾಳಿಯನ್ನು ಬಿಗಿಯಾಗಿ ಹಿಡಿದುಕೊಳ್ಳಿರಿ ಎಂದು ದೇವದೂತರಿಗೆ ಹೇಳಲಾಯಿತು. (ಪ್ರಕ. 7:1-3) ದಾಸರ ಗುಂಪು ಅಂದರೆ ಯೇಸುವಿನ ಜೊತೆ ಸ್ವರ್ಗದಲ್ಲಿ ಆಳಲಿರುವ 1,44,000 ಮಂದಿಯೇ ಆಗಿದ್ದಾರೆ. (ಲೂಕ 12:32; ಪ್ರಕ. 7:4) ನಂತರ ಯೋಹಾನ ಆ ದರ್ಶನದಲ್ಲಿ ಇನ್ನೊಂದು ಗುಂಪನ್ನು ನೋಡಿದನು. ಆ ಗುಂಪನ್ನು ನೋಡಿದಾಗ ಆಶ್ಚರ್ಯಪಟ್ಟನು. ಯಾಕೆಂದರೆ ಆ ಗುಂಪು ತುಂಬ ದೊಡ್ಡದಾಗಿತ್ತು. ಆತನು ಹೀಗೆ ಹೇಳಿದನು: ‘ಯಾವ ಮನುಷ್ಯನಿಂದಲೂ ಎಣಿಸಲಾಗದಂಥ ಒಂದು ಮಹಾ ಸಮೂಹವು ಸಿಂಹಾಸನದ ಮುಂದೆಯೂ ಕುರಿಮರಿಯ ಮುಂದೆಯೂ ನಿಂತಿರುವುದನ್ನು ನೋಡಿದೆನು; ಅವರು ಎಲ್ಲ ಜನಾಂಗಗಳಿಂದಲೂ ಕುಲಗಳಿಂದಲೂ ಪ್ರಜೆಗಳಿಂದಲೂ ಭಾಷೆಗಳಿಂದಲೂ ಬಂದವರಾಗಿದ್ದಾರೆ.’ (ಪ್ರಕಟನೆ 7:9-14 ಓದಿ.) ಭವಿಷ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಜನರು ಯೆಹೋವನನ್ನು ಆರಾಧಿಸುತ್ತಾರೆ ಎಂದು ತಿಳಿದು ಯೋಹಾನನಿಗೆ ಎಷ್ಟು ಖುಷಿಯಾಗಿರಬಹುದು!
3. (ಎ) ಯೋಹಾನ ನೋಡಿದ ದರ್ಶನದಿಂದ ನಮ್ಮ ನಂಬಿಕೆ ಬಲವಾಗುತ್ತೆ ಯಾಕೆ? (ಬಿ) ಈ ಲೇಖನದಲ್ಲಿ ನಾವು ಏನನ್ನು ನೋಡಲಿದ್ದೇವೆ?
3 ಆ ದರ್ಶನದಿಂದ ಯೋಹಾನನ ನಂಬಿಕೆ ಖಂಡಿತ ಬಲವಾಗಿರುತ್ತದೆ. ಆತನಿಗಿಂತ ಹೆಚ್ಚಾಗಿ ನಮ್ಮ ನಂಬಿಕೆ ಬಲವಾಗಬೇಕು, ಯಾಕೆಂದರೆ ಆ ದರ್ಶನ ನೆರವೇರುತ್ತಿರುವ ಸಮಯದಲ್ಲಿ ನಾವು ಜೀವಿಸುತ್ತಿದ್ದೇವೆ! ಲಕ್ಷಾಂತರ ಜನರು ಯೆಹೋವನನ್ನು ಆರಾಧಿಸಲು ಆರಂಭಿಸಿದ್ದಾರೆ. ಅವರು ಮಹಾ ಸಂಕಟವನ್ನು ಪಾರಾಗುವ ಮತ್ತು ಭೂಮಿಯಲ್ಲಿ ಶಾಶ್ವತವಾಗಿ ಜೀವಿಸುವ ನಿರೀಕ್ಷೆಯನ್ನು ಹೊಂದಿದ್ದಾರೆ. ಈ ಮಹಾ ಸಮೂಹ ಯಾರೆಂದು ಯೆಹೋವನು ತನ್ನ ಜನರಿಗೆ 80ಕ್ಕಿಂತ ಹೆಚ್ಚು ವರ್ಷಗಳ ಹಿಂದೆ ತೋರಿಸಿಕೊಟ್ಟಿದ್ದಾನೆ. ಅದನ್ನು ಹೇಗೆ ತೋರಿಸಿಕೊಟ್ಟಿದ್ದಾನೆ ಎಂದು ನಾವು ಈ ಲೇಖನದಲ್ಲಿ ನೋಡಲಿದ್ದೇವೆ. ನಂತರ ಮಹಾ ಸಮೂಹದ ಬಗ್ಗೆ ಎರಡು ಅಂಶಗಳನ್ನು ನೋಡಲಿದ್ದೇವೆ: (1) ಆ ಗುಂಪು ಎಷ್ಟು ದೊಡ್ಡದಿರುತ್ತದೆ ಮತ್ತು (2) ಆ ಗುಂಪಿನಲ್ಲಿ ಯಾರೆಲ್ಲಾ ಇರುತ್ತಾರೆ? ಈ ಅಂಶಗಳು ಆ ಗುಂಪಿನ ಭಾಗವಾಗಲಿರುವವರ ನಂಬಿಕೆಯನ್ನು ಬಲಪಡಿಸುತ್ತವೆ.
ಮಹಾ ಸಮೂಹ ಎಲ್ಲಿ ಜೀವಿಸುತ್ತದೆ?
4. ಸುಳ್ಳು ಕ್ರೈಸ್ತರು ಅರ್ಥಮಾಡಿಕೊಳ್ಳದ ಯಾವ ಸತ್ಯವನ್ನು ಬೈಬಲ್ ವಿದ್ಯಾರ್ಥಿಗಳು ಅರ್ಥಮಾಡಿಕೊಂಡಿದ್ದರು?
4 ಮುಂದೆ ಒಳ್ಳೇ ಜನರು ಈ ಭೂಮಿಯಲ್ಲಿ ಶಾಶ್ವತವಾಗಿ ಜೀವಿಸುತ್ತಾರೆ ಎಂದು ಬೈಬಲ್ ತಿಳಿಸುವ ಸತ್ಯವನ್ನು ಸುಳ್ಳು ಕ್ರೈಸ್ತರು ಸಾಮಾನ್ಯವಾಗಿ ಬೋಧಿಸುವುದಿಲ್ಲ. (2 ಕೊರಿಂ. 4:3, 4) ಬದಲಿಗೆ ಒಳ್ಳೆಯ ಜನರೆಲ್ಲರೂ ಸತ್ತ ಮೇಲೆ ಸ್ವರ್ಗಕ್ಕೆ ಹೋಗುತ್ತಾರೆ ಎಂದವರು ಬೋಧಿಸುತ್ತಾರೆ. ಆದರೆ 1879ರಿಂದ ಕಾವಲಿನ ಬುರುಜು ಪತ್ರಿಕೆಯನ್ನು ಪ್ರಕಟಿಸುತ್ತಿದ್ದ ಬೈಬಲ್ ವಿದ್ಯಾರ್ಥಿಗಳು b ಎಂಬ ಒಂದು ಚಿಕ್ಕ ಗುಂಪು ಈ ರೀತಿ ಬೋಧಿಸಲಿಲ್ಲ. ದೇವರು ಭೂಮಿಯನ್ನು ಮತ್ತೆ ಪರದೈಸಾಗಿ ಮಾಡುತ್ತಾನೆ ಮತ್ತು ಲಕ್ಷಾಂತರ ವಿಧೇಯ ಮನುಷ್ಯರು ಇದೇ ಭೂಮಿಯಲ್ಲಿ ಜೀವಿಸುತ್ತಾರೆ, ಸ್ವರ್ಗದಲ್ಲಲ್ಲ ಎಂದು ಅವರು ಅರ್ಥಮಾಡಿಕೊಂಡಿದ್ದರು. ಆದರೆ ಆ ವಿಧೇಯ ಮನುಷ್ಯರು ಯಾರಾಗಿದ್ದಾರೆ ಅನ್ನುವುದನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲು ಅವರಿಗೆ ಸಮಯ ಹಿಡಿಯಿತು.—ಮತ್ತಾ. 6:10.
5. ಬೈಬಲ್ ವಿದ್ಯಾರ್ಥಿಗಳು 1,44,000 ಮಂದಿಯ ಬಗ್ಗೆ ಏನು ಅರ್ಥಮಾಡಿಕೊಂಡಿದ್ದರು?
5 ಸ್ವರ್ಗದಲ್ಲಿ ಯೇಸುವಿನ ಜೊತೆಯಲ್ಲಿ ಆಳಲಿಕ್ಕಾಗಿ ಕೆಲವರನ್ನು ‘ಭೂಮಿಯಿಂದ ಕೊಂಡುಕೊಳ್ಳಲಾಗುತ್ತದೆ’ ಎಂದು ಸಹ ಬೈಬಲ್ ವಿದ್ಯಾರ್ಥಿಗಳು ಅರ್ಥಮಾಡಿಕೊಂಡಿದ್ದರು. (ಪ್ರಕ. 14:3) ಆ ಕೆಲವರು ಭೂಮಿಯಲ್ಲಿರುವಾಗ ನಂಬಿಗಸ್ತರಾಗಿ, ಹುರುಪಿನಿಂದ ದೇವರ ಸೇವೆ ಮಾಡಿದ 1,44,000 ಸಮರ್ಪಿತ ಕ್ರೈಸ್ತರೇ ಆಗಿದ್ದಾರೆ ಎಂದು ಅವರಿಗೆ ಅರ್ಥವಾಗಿತ್ತು. ಹಾಗಾದರೆ, ಮಹಾ ಸಮೂಹದವರ ಬಗ್ಗೆ ಏನನ್ನು ಅರ್ಥಮಾಡಿಕೊಂಡಿದ್ದರು?
6. ಬೈಬಲ್ ವಿದ್ಯಾರ್ಥಿಗಳು ಮಹಾ ಸಮೂಹದವರ ಬಗ್ಗೆ ಏನು ಅರ್ಥಮಾಡಿಕೊಂಡಿದ್ದರು?
6 ಮಹಾ ಸಮೂಹವು “ಸಿಂಹಾಸನದ ಮುಂದೆಯೂ ಕುರಿಮರಿಯ ಮುಂದೆಯೂ ನಿಂತಿರುವುದನ್ನು” ಯೋಹಾನ ದರ್ಶನದಲ್ಲಿ ನೋಡಿದನು. (ಪ್ರಕ. 7:9) ಈ ವಚನವನ್ನು ಗಮನಿಸಿದ ಬೈಬಲ್ ವಿದ್ಯಾರ್ಥಿಗಳು 1,44,000 ಮಂದಿಯಂತೆಯೇ ಮಹಾ ಸಮೂಹದವರು ಕೂಡ ಸ್ವರ್ಗದಲ್ಲಿ ಜೀವಿಸುತ್ತಾರೆ ಎಂಬ ನಿರ್ಧಾರಕ್ಕೆ ಬಂದರು. ಒಂದುವೇಳೆ 1,44,000 ಮಂದಿ ಮತ್ತು ಮಹಾ ಸಮೂಹ ಇವೆರಡೂ ಗುಂಪುಗಳವರು ಸ್ವರ್ಗದಲ್ಲಿ ಜೀವಿಸುವುದಾದರೆ ಅವು ಭಿನ್ನ ಗುಂಪುಗಳಾಗಲು ಹೇಗೆ ಸಾಧ್ಯ? ಭೂಮಿಯಲ್ಲಿ ಜೀವಿಸುವಾಗ ದೇವರಿಗೆ ಪೂರ್ತಿ ವಿಧೇಯರಾಗದಂಥ ಕ್ರೈಸ್ತರೇ ಮಹಾ ಸಮೂಹ ಆಗಿರಬೇಕು ಎಂದು ಬೈಬಲ್ ವಿದ್ಯಾರ್ಥಿಗಳು ಯೋಚಿಸಿದರು. ಮಹಾ ಸಮೂಹದ ಭಾಗವಾಗಲಿರುವವರು ಬೈಬಲಿನ ನೈತಿಕ ಮಟ್ಟಗಳನ್ನು ಪಾಲಿಸಿರುತ್ತಾರೆ, ಆದರೆ ಅವರಲ್ಲಿ ಕೆಲವರು ಚರ್ಚಿನ ಸದಸ್ಯರಾಗಿಯೇ ಉಳಿದಿರಬಹುದು ಎಂದು ವಿದ್ಯಾರ್ಥಿಗಳು ಅಂದುಕೊಂಡಿದ್ದರು. ಅಂಥವರು ಸ್ವಲ್ಪ ಮಟ್ಟಿಗೆ ದೇವರನ್ನು ಪ್ರೀತಿಸಿರುತ್ತಾರೆ, ಆದರೆ ಯೇಸುವಿನ ಜೊತೆ ಆಳುವ ಅವಕಾಶ ಪಡೆಯುವಷ್ಟರ ಮಟ್ಟಿಗಲ್ಲ ಎಂದು ಯೋಚಿಸಿದರು. ಮಹಾ ಸಮೂಹದವರಿಗೆ ದೇವರ ಮೇಲೆ ಹೆಚ್ಚಿನ ಪ್ರೀತಿ ಇಲ್ಲದಿರುವುದರಿಂದ ಅವರು ಸ್ವರ್ಗದಲ್ಲಿ ಸಿಂಹಾಸನದ ಮುಂದೆ ನಿಲ್ಲಬಹುದೇ ಹೊರತು ಸಿಂಹಾಸನದ ಮೇಲೆ ಕುಳಿತುಕೊಳ್ಳಲು ಆಗಲ್ಲ ಎಂಬ ತೀರ್ಮಾನಕ್ಕೆ ಬೈಬಲ್ ವಿದ್ಯಾರ್ಥಿಗಳು ಬಂದರು.
7. (ಎ) ಬೈಬಲ್ ವಿದ್ಯಾರ್ಥಿಗಳ ಪ್ರಕಾರ ಕ್ರಿಸ್ತನ ಸಾವಿರ ವರ್ಷಗಳ ಆಳ್ವಿಕೆ ನಡೆಯುವಾಗ ಭೂಮಿಯಲ್ಲಿ ಯಾರು ಜೀವಿಸಲಿದ್ದರು? (ಬಿ) ಪುರಾತನ ಕಾಲದಲ್ಲಿದ್ದ ನಂಬಿಗಸ್ತ ಪುರುಷರ ಬಗ್ಗೆ ಬೈಬಲ್ ವಿದ್ಯಾರ್ಥಿಗಳು ಏನು ಅಂದುಕೊಂಡಿದ್ದರು?
7 ಹಾಗಾದರೆ ಭೂಮಿಯಲ್ಲಿ ಯಾರು ಜೀವಿಸುತ್ತಾರೆ ಅಂತ ಬೈಬಲ್ ವಿದ್ಯಾರ್ಥಿಗಳು ಅಂದುಕೊಂಡರು? 1,44,000 ಮಂದಿ ಮತ್ತು ಮಹಾ ಸಮೂಹದವರನ್ನು ಸ್ವರ್ಗದಲ್ಲಿ ಒಟ್ಟುಗೂಡಿಸಿದ ಮೇಲೆ ಕ್ರಿಸ್ತನ ಸಾವಿರ ವರ್ಷಗಳ ಆಳ್ವಿಕೆಯ ಪ್ರಯೋಜನ ಪಡಕೊಳ್ಳಲು ಭೂಮಿಯ ಮೇಲೆ ಲಕ್ಷಾಂತರ ಜನರು ಜೀವಿಸುತ್ತಾರೆ ಎಂದು ಅವರು ಅಂದುಕೊಂಡರು. ಆ ಲಕ್ಷಾಂತರ ಜನರು ಕ್ರಿಸ್ತನ ಆಳ್ವಿಕೆ ಆರಂಭವಾಗುವ ಮುಂಚೆ ಯೆಹೋವನ ಆರಾಧಕರಾಗಿರಲ್ಲ, ಆದರೆ ಕ್ರಿಸ್ತನ ಸಾವಿರ ವರ್ಷಗಳ ಆಳ್ವಿಕೆ ನಡೆಯುವಾಗ ಯೆಹೋವನ ಬಗ್ಗೆ ಕಲಿಯುತ್ತಾರೆ ಅಂತ ಬೈಬಲ್ ವಿದ್ಯಾರ್ಥಿಗಳು ಯೋಚಿಸಿದರು. ಅಲ್ಲಿ ಯಾರು ಯೆಹೋವನು ಹೇಳಿದಂತೆ ನಡಕೊಳ್ಳುತ್ತಾರೋ ಅಂಥವರಿಗೆ ಭೂಮಿಯಲ್ಲಿ ಸದಾಕಾಲ ಜೀವಿಸುವ ಆಶೀರ್ವಾದ ಸಿಗುತ್ತದೆ, ಆದರೆ ಯಾರು ದಂಗೆ ಏಳುತ್ತಾರೋ ಅಂಥವರು ನಾಶವಾಗುತ್ತಾರೆ ಅಂತ ಅಂದುಕೊಂಡರು. ಆ ಸಮಯದಲ್ಲಿ ಭೂಮಿಯಲ್ಲಿ ‘ಅಧಿಕಾರಿಗಳಾಗಿ’ ಕೆಲಸ ಮಾಡುವವರಲ್ಲಿ ಕೆಲವರು ಸಾವಿರ ವರ್ಷಗಳ ಅಂತ್ಯದಲ್ಲಿ ಸ್ವರ್ಗಕ್ಕೆ ಹೋಗುತ್ತಾರೆ ಅಂತನೂ ವಿದ್ಯಾರ್ಥಿಗಳು ಯೋಚಿಸಿದರು. ಆ ‘ಅಧಿಕಾರಿಗಳಲ್ಲಿ’ ಸಾವಿರ ವರ್ಷಗಳ ಆಳ್ವಿಕೆಯಲ್ಲಿ ಪುನರುತ್ಥಾನಗೊಳ್ಳುವ “ಪುರಾತನ ಕಾಲದ ಅರ್ಹ ವ್ಯಕ್ತಿಗಳು” (ಅಥವಾ ಕ್ರಿಸ್ತನು ಜೀವಿಸುವ ಮುಂಚೆ ತೀರಿಹೋದ ನಂಬಿಗಸ್ತ ಪುರುಷರು) ಇರುತ್ತಾರೆ ಎಂದು ಅಂದುಕೊಂಡಿದ್ದರು.—ಕೀರ್ತ. 45:16.
8. ಯಾವ ಮೂರು ಗುಂಪುಗಳಿವೆ ಎಂದು ಬೈಬಲ್ ವಿದ್ಯಾರ್ಥಿಗಳು ಅಂದುಕೊಂಡಿದ್ದರು?
8 ಹೀಗೆ ಒಟ್ಟು ಮೂರು ಗುಂಪುಗಳಿವೆ ಎಂದು ಬೈಬಲ್ ವಿದ್ಯಾರ್ಥಿಗಳು ಯೋಚಿಸಿದರು: (1) ಯೇಸು ಜೊತೆ ಸ್ವರ್ಗದಲ್ಲಿ ಆಳಲಿರುವ 1,44,000 ಮಂದಿ, (2) ಸ್ವರ್ಗದಲ್ಲಿ ಯೇಸುವಿನ ಸಿಂಹಾಸನದ ಮುಂದೆ ನಿಲ್ಲುವ ಕಡಿಮೆ ಹುರುಪಿನ ಕ್ರೈಸ್ತರ ಮಹಾ ಸಮೂಹ ಮತ್ತು (3) ಕ್ರಿಸ್ತನ ಸಾವಿರ ವರ್ಷಗಳ ಆಳ್ವಿಕೆಯಲ್ಲಿ ಭೂಮಿಯ ಮೇಲೆ ಯೆಹೋವನ ಮಾರ್ಗಗಳ ಬಗ್ಗೆ ಕಲಿಯುವ ಲಕ್ಷಾಂತರ ಜನರು. c ಆದರೆ ನಂತರ, ಈ ವಿಷಯವನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಯೆಹೋವನು ವಿದ್ಯಾರ್ಥಿಗಳಿಗೆ ಸಹಾಯ ಮಾಡಿದನು.—ಜ್ಞಾನೋ. 4:18.
ಸತ್ಯದ ಬೆಳಕು ಹೆಚ್ಚಾಗುತ್ತಾ ಹೋಯಿತು
9. (ಎ) ಮಹಾ ಸಮೂಹದವರು “ಸಿಂಹಾಸನದ ಮುಂದೆಯೂ ಕುರಿಮರಿಯ ಮುಂದೆಯೂ” ನಿಲ್ಲುವುದರ ಅರ್ಥವೇನು? (ಬಿ) ಪ್ರಕಟನೆ 7:9ರ ಬಗ್ಗೆ ಇರುವ ಈ ತಿಳುವಳಿಕೆ ಯಾಕೆ ತರ್ಕಬದ್ಧವಾಗಿದೆ?
9 ಯೋಹಾನನ ದರ್ಶನದಲ್ಲಿದ್ದ ಮಹಾ ಸಮೂಹದವರು ಯಾರೆಂದು 1935ರಲ್ಲಿ ಯೆಹೋವನ ಸಾಕ್ಷಿಗಳಿಗೆ ಸರಿಯಾಗಿ ಅರ್ಥವಾಯಿತು. ಮಹಾ ಸಮೂಹದವರು “ಸಿಂಹಾಸನದ ಮುಂದೆಯೂ ಕುರಿಮರಿಯ ಮುಂದೆಯೂ” ನಿಲ್ಲುತ್ತಾರೆ ಅಂದರೆ ಅದರರ್ಥ ಅವರು ಸ್ವರ್ಗಕ್ಕೆ ಹೋಗುತ್ತಾರೆ ಅಂತಲ್ಲ ಎಂದು ಅವರು ಅರ್ಥ ಮಾಡಿಕೊಂಡರು. ಮಹಾ ಸಮೂಹದವರು ಭೂಮಿಯ ಮೇಲೆ ಜೀವಿಸುವುದಾದರೂ ಅವರು ಯೆಹೋವನೇ ಇಡೀ ವಿಶ್ವದ ಪರಮಾಧಿಕಾರಿ ಎಂದು ಒಪ್ಪಿಕೊಂಡು ಆತನ ಪರಮಾಧಿಕಾರಕ್ಕೆ ವಿಧೇಯರಾಗುವ ಮೂಲಕ “ಸಿಂಹಾಸನದ ಮುಂದೆ” ನಿಲ್ಲುತ್ತಾರೆ. (ಯೆಶಾ. 66:1) ಹಾಗೆಯೇ, ಯೇಸುವಿನ ವಿಮೋಚನಾ ಯಜ್ಞದಲ್ಲಿ ನಂಬಿಕೆ ಇಡುವ ಮೂಲಕ “ಕುರಿಮರಿಯ ಮುಂದೆ” ನಿಲ್ಲುತ್ತಾರೆ. ಅವರು ಸ್ವರ್ಗಕ್ಕೆ ಹೋಗಲ್ಲ ಎನ್ನುವುದು ಮತ್ತಾಯ 25:31, 32ರಿಂದಲೂ ತಿಳಿದುಬರುತ್ತದೆ. ಅದರಲ್ಲಿ “ಎಲ್ಲ ಜನಾಂಗಗಳವರು” ಮಹಿಮಾನ್ವಿತ ಸಿಂಹಾಸನದಲ್ಲಿ ಕುಳಿತಿರುವ ಯೇಸುವಿನ “ಮುಂದೆ ಒಟ್ಟುಗೂಡಿಸಲ್ಪಡುವರು” ಎಂದು ತಿಳಿಸಲಾಗಿದೆ. ದುಷ್ಟ ಜನರೂ ಒಳಗೂಡಿರುವ ಈ ಎಲ್ಲ ಜನಾಂಗಗಳವರು ಸ್ವರ್ಗದಲ್ಲಲ್ಲ ಭೂಮಿಯಲ್ಲೇ ಇದ್ದಾರೆ. 1935ರಲ್ಲಿ ಮಹಾ ಸಮೂಹದವರ ಬಗ್ಗೆ ಬೆಳಕಿಗೆ ಬಂದ ತಿಳುವಳಿಕೆ ತರ್ಕಬದ್ಧವಾಗಿದೆ ಎಂದು ಇದರಿಂದ ಸ್ಪಷ್ಟವಾಗುತ್ತದೆ. ಈ ತಿಳುವಳಿಕೆಯಿಂದಾಗಿ, ಮಹಾ ಸಮೂಹದವರು ಸ್ವರ್ಗಕ್ಕೆ ಹೋಗುವುದರ ಬಗ್ಗೆ ಬೈಬಲಿನಲ್ಲಿ ಯಾಕೆ ಇಲ್ಲ ಎಂದು ಗೊತ್ತಾಗುತ್ತದೆ. ಯೇಸುವಿನೊಂದಿಗೆ ‘ಭೂಮಿಯ ಮೇಲೆ ರಾಜರಾಗಿ ಆಳಲಿರುವ’ 1,44,000 ಮಂದಿಗೆ ಮಾತ್ರ ಸ್ವರ್ಗದಲ್ಲಿ ಶಾಶ್ವತವಾಗಿ ಜೀವಿಸುವ ಅವಕಾಶ ಇದೆ.—ಪ್ರಕ. 5:10.
10. ಕ್ರಿಸ್ತನ ಸಾವಿರ ವರ್ಷಗಳ ಆಳ್ವಿಕೆ ಆರಂಭವಾಗುವ ಮೊದಲೇ ಮಹಾ ಸಮೂಹದವರು ಯೆಹೋವನ ಬಗ್ಗೆ ಯಾಕೆ ಕಲಿಯಬೇಕು?
10 ಯೋಹಾನನ ದರ್ಶನದಲ್ಲಿದ್ದ ಮಹಾ ಸಮೂಹವು ಭೂಮಿಯಲ್ಲಿ ಶಾಶ್ವತವಾಗಿ ಜೀವಿಸುವ ನಿರೀಕ್ಷೆ ಹೊಂದಿರುವ ನಂಬಿಗಸ್ತ ಕ್ರೈಸ್ತರ ಗುಂಪಾಗಿದೆ ಅನ್ನುವುದು ಯೆಹೋವನ ಸಾಕ್ಷಿಗಳಿಗೆ 1935ರಲ್ಲಿ ಅರ್ಥವಾಯಿತು. ಮಹಾ ಸಮೂಹದವರು ಮಹಾ ಸಂಕಟದಲ್ಲಿ ಪಾರಾಗಬೇಕೆಂದರೆ ಕ್ರಿಸ್ತನ ಸಾವಿರ ವರ್ಷಗಳ ಆಳ್ವಿಕೆ ಆರಂಭವಾಗುವ ಮೊದಲೇ ಯೆಹೋವನ ಬಗ್ಗೆ ಕಲಿಯಬೇಕು ಮತ್ತು ಆತನನ್ನು ಆರಾಧಿಸಬೇಕು. ಈ ಆಳ್ವಿಕೆ ಆರಂಭವಾಗುವ ಮುಂಚೆ ‘ಸಂಭವಿಸುವಂತೆ ವಿಧಿಸಲ್ಪಟ್ಟಿರುವ ಎಲ್ಲ ಸಂಗತಿಗಳಿಂದ ತಪ್ಪಿಸಿಕೊಳ್ಳಲು’ ಅವರು ಬಲವಾದ ನಂಬಿಕೆ ತೋರಿಸಬೇಕು.—ಲೂಕ 21:34-36.
11. ಸಾವಿರ ವರ್ಷದ ಆಳ್ವಿಕೆಯ ಕೊನೆಯಲ್ಲಿ ಕೆಲವರು ಸ್ವರ್ಗಕ್ಕೆ ಹೋಗುತ್ತಾರೆ ಎಂದು ಯಾಕೆ ಬೈಬಲ್ ವಿದ್ಯಾರ್ಥಿಗಳು ಅಂದುಕೊಂಡಿದ್ದರು?
11 ಭೂಮಿಯಲ್ಲಿ ಜೀವಿಸುವ ಕೆಲವು ಮಾದರಿ ವ್ಯಕ್ತಿಗಳು ಸಾವಿರ ವರ್ಷಗಳ ಆಳ್ವಿಕೆಯ ಕೊನೆಯಲ್ಲಿ ಸ್ವರ್ಗಕ್ಕೆ ಹೋಗುತ್ತಾರೆ ಅಂತ ಬೈಬಲ್ ವಿದ್ಯಾರ್ಥಿಗಳು ಅಂದುಕೊಂಡಿದ್ದರಲ್ಲ, ಅದರ ಬಗ್ಗೆ ಏನು? ಹಾಗೆ ಆಗುವ ಸಾಧ್ಯತೆ ಇದೆ ಎಂದು 1913 ಫೆಬ್ರವರಿ 15ರ ಕಾವಲಿನ ಬುರುಜುವಿನಲ್ಲಿ ಬಂದಿತ್ತು. ‘ದೇವರಿಗೆ ಅಷ್ಟೊಂದು ನಂಬಿಗಸ್ತಿಕೆ ತೋರಿಸದಂಥ ಕ್ರೈಸ್ತರಿಗೇ ಸ್ವರ್ಗದಲ್ಲಿ ಜೀವಿಸುವ ಅವಕಾಶ ಇದೆ ಅಂದ ಮೇಲೆ ನಂಬಿಕೆಯಲ್ಲಿ ಹೆಸರು ಮಾಡಿದಂಥ ಪುರಾತನ ಕಾಲದ ವ್ಯಕ್ತಿಗಳು ಭೂಮಿಯಲ್ಲೇ ಜೀವಿಸುತ್ತಾರಾ?’ ಅಂತ ಅವರು ಯೋಚಿಸಿದ್ದರು. ಅವರು ಆ ರೀತಿ ಯೋಚಿಸುವುದಕ್ಕೆ ಕಾರಣ ಈ ಎರಡು ತಪ್ಪಾದ ಊಹೆಗಳೇ: (1) ಮಹಾ ಸಮೂಹದವರು ಸ್ವರ್ಗದಲ್ಲಿ ಜೀವಿಸುತ್ತಾರೆ (2) ಮಹಾ ಸಮೂಹದಲ್ಲಿ ಇರುವವರು ಕಡಿಮೆ ಹುರುಪಿನ ಕ್ರೈಸ್ತರು.
12-13. ಅಭಿಷಿಕ್ತರು ಮತ್ತು ಮಹಾ ಸಮೂಹದವರು ಇಬ್ಬರೂ ತಮಗೆ ಸಿಗಲಿರುವ ಬಹುಮಾನದ ಬಗ್ಗೆ ಏನನ್ನು ಅರ್ಥಮಾಡಿಕೊಂಡಿದ್ದಾರೆ?
12 ಈಗಾಗಲೇ ನೋಡಿದಂತೆ, ಅರ್ಮಗೆದ್ದೋನ್‌ನಲ್ಲಿ ಪಾರಾಗುವವರೇ ಯೋಹಾನನ ದರ್ಶನದಲ್ಲಿದ್ದ ಮಹಾ ಸಮೂಹದವರು ಎಂದು ಯೆಹೋವನ ಸಾಕ್ಷಿಗಳು 1935ರಲ್ಲಿ ಸ್ಪಷ್ಟವಾಗಿ ಅರ್ಥಮಾಡಿಕೊಂಡರು. ಮಹಾ ಸಮೂಹದವರು ಇದೇ ಭೂಮಿಯಲ್ಲಿ ‘ಮಹಾ ಸಂಕಟವನ್ನು ಪಾರಾಗುತ್ತಾರೆ’ ಮತ್ತು “ಅವರು ಮಹಾ ಧ್ವನಿಯಿಂದ ಕೂಗುತ್ತಾ, ‘ಸಿಂಹಾಸನದ ಮೇಲೆ ಕುಳಿತುಕೊಂಡಿರುವ ನಮ್ಮ ದೇವರಿಗೂ ಕುರಿಮರಿಗೂ ನಮ್ಮ ರಕ್ಷಣೆಗಾಗಿ ನಾವು ಋಣಿಗಳು’ ಎಂದು” ಹೇಳುತ್ತಾರೆ. (ಪ್ರಕ. 7:10, 14) ಪುರಾತನ ಕಾಲದ ನಂಬಿಗಸ್ತ ಪುರುಷರು ಸಹ ಸ್ವರ್ಗಕ್ಕೆ ಹೋಗಲ್ಲ ಎಂದು ಸಾಕ್ಷಿಗಳಿಗೆ ಗೊತ್ತಾಯಿತು. ಯಾಕೆಂದರೆ ಆ ನಂಬಿಗಸ್ತ ಪುರುಷರಿಗಿಂತ ಸ್ವರ್ಗೀಯ ಜೀವನಕ್ಕೆ ಪುನರುತ್ಥಾನವಾಗಿ ಹೋಗಲಿರುವವರು “ಹೆಚ್ಚು ಉತ್ತಮವಾದುದನ್ನು” ಪಡೆಯುತ್ತಾರೆ ಅಂತ ಬೈಬಲ್ ಹೇಳುತ್ತದೆ. (ಇಬ್ರಿ. 11:40) ಇದನ್ನು ಗ್ರಹಿಸಿದ ನಮ್ಮ ಸಹೋದರರು ಜನರಿಗೆ, ಯೆಹೋವನನ್ನು ಆರಾಧಿಸುತ್ತಾ ಭೂಮಿಯ ಮೇಲೆ ಶಾಶ್ವತವಾಗಿ ಜೀವಿಸುವ ನಿರೀಕ್ಷೆಯನ್ನು ಪಡಕೊಳ್ಳಿ ಎಂದು ಕರೆ ನೀಡಲು ಆರಂಭಿಸಿದರು.
13 ಮಹಾ ಸಮೂಹದವರು ತಮಗಿರುವ ನಿರೀಕ್ಷೆ ಬಗ್ಗೆ ಖುಷಿ ಪಡುತ್ತಾರೆ. ನಂಬಿಗಸ್ತ ಆರಾಧಕರು ಸ್ವರ್ಗದಲ್ಲಿರಬೇಕಾ ಭೂಮಿಯಲ್ಲಿರಬೇಕಾ ಅನ್ನುವುದನ್ನು ಯೆಹೋವನೇ ತೀರ್ಮಾನ ಮಾಡುತ್ತಾನೆ ಎಂದು ಅವರು ಅರ್ಥಮಾಡಿಕೊಂಡಿದ್ದಾರೆ. ತಮಗೆ ಬಹುಮಾನ ಸಿಗುತ್ತಿರುವುದು ಯೇಸು ಕ್ರಿಸ್ತನ ವಿಮೋಚನಾ ಮೌಲ್ಯದ ಮೂಲಕ ಸಿಕ್ಕಿರುವ ಯೆಹೋವನ ಅಪಾತ್ರ ದಯೆಯಿಂದಲೇ ಹೊರತು ತಾವು ಮಾಡುವ ಸೇವೆಯಿಂದಲ್ಲ ಎಂದು ಅಭಿಷಿಕ್ತರು ಮತ್ತು ಮಹಾ ಸಮೂಹದವರು ಇಬ್ಬರೂ ಅರ್ಥಮಾಡಿಕೊಂಡಿದ್ದಾರೆ.—ರೋಮ. 3:24.
ತುಂಬ ದೊಡ್ಡ ಗುಂಪು
14. ಇಸವಿ 1935ರ ನಂತರವೂ ಅನೇಕರಿಗೆ ಮಹಾ ಸಮೂಹದ ಪ್ರವಾದನೆ ಹೇಗೆ ನೆರವೇರುತ್ತದೆ ಎಂಬ ಪ್ರಶ್ನೆ ಯಾಕೆ ಬಂದಿರಬಹುದು?
14 ಯೆಹೋವನ ಜನರು 1935ರಲ್ಲಿ ವಿಷಯಗಳನ್ನು ಸ್ಪಷ್ಟವಾಗಿ ಅರ್ಥಮಾಡಿಕೊಂಡ ಮೇಲೂ ಅನೇಕರಿಗೆ ಒಂದು ಪ್ರಶ್ನೆ ಬಂತು. ಭೂ ನಿರೀಕ್ಷೆ ಇರುವ ಮಹಾ ಸಮೂಹ ತುಂಬ ದೊಡ್ಡ ಗುಂಪಾಗಲು ಹೇಗೆ ಸಾಧ್ಯ ಅಂತ ಯೋಚಿಸಿದರು. ರಾನಲ್ಡ್ ಪಾರ್ಕನ್‌ರ ಉದಾಹರಣೆ ನೋಡಿ. ಮಹಾ ಸಮೂಹದವರು ಯಾರೆಂದು ಸ್ಪಷ್ಟವಾಗಿ ಅರ್ಥವಾದಾಗ ಅವರಿಗೆ 12 ವಯಸ್ಸು. ಅವರು ಹೇಳುವುದು: “ಆ ಸಮಯದಲ್ಲಿ ಇಡೀ ಭೂಮಿಯಲ್ಲಿ ಸುಮಾರು 56,000 ಪ್ರಚಾರಕರಿದ್ದರು, ಮತ್ತು ಅವರಲ್ಲಿ ಹೆಚ್ಚಿನವರು ಅಭಿಷಿಕ್ತರಾಗಿದ್ದರು. ಹಾಗಾಗಿ ಮಹಾ ಸಮೂಹದವರ ಸಂಖ್ಯೆ ಜಾಸ್ತಿ ಇಲ್ವಲ್ಲಾ ಅಂತ ಅನಿಸುತ್ತಿತ್ತು.”
15. ಮಹಾ ಸಮೂಹದವರ ಸಂಖ್ಯೆ ಹೇಗೆ ಹೆಚ್ಚಾಗುತ್ತಾ ಹೋಯಿತು?
15 ನಂತರದ ವರ್ಷಗಳಲ್ಲಿ ಅನೇಕ ದೇಶಗಳಿಗೆ ಮಿಷನರಿಗಳನ್ನು ಕಳುಹಿಸಲಾಯಿತು. ಇದರಿಂದ ಯೆಹೋವನ ಸಾಕ್ಷಿಗಳ ಸಂಖ್ಯೆ ಹೆಚ್ಚಾಗುತ್ತಾ ಹೋಯಿತು. 1968ರಲ್ಲಿ ನಿತ್ಯಜೀವಕ್ಕೆ ನಡೆಸುವ ಸತ್ಯವು ಎಂಬ ಪುಸ್ತಕವನ್ನು ಉಪಯೋಗಿಸಿ ಬೈಬಲ್ ಕಲಿಸಲು ಆರಂಭಿಸಿದರು. ಇದರಲ್ಲಿ ಕೊಡಲಾದ ಬೈಬಲ್ ಸತ್ಯಗಳ ಸರಳ ವಿವರಣೆಯಿಂದಾಗಿ ಹಿಂದೆಂದಿಗಿಂತಲೂ ಹೆಚ್ಚು ದೀನ ಜನರು ಸತ್ಯಕ್ಕೆ ಆಕರ್ಷಿತರಾದರು. ಕೇವಲ ನಾಲ್ಕು ವರ್ಷಗಳಲ್ಲಿ 5 ಲಕ್ಷಕ್ಕೂ ಹೆಚ್ಚು ಜನರು ದೀಕ್ಷಾಸ್ನಾನ ಪಡೆದು ಶಿಷ್ಯರಾದರು. ನಂತರ ಲ್ಯಾಟಿನ್ ಅಮೆರಿಕ ಮತ್ತು ಇತರ ದೇಶಗಳ ಮೇಲೆ ಕ್ಯಾಥೊಲಿಕ್ ಚರ್ಚಿಗಿದ್ದ ಅಧಿಕಾರ ಕಡಿಮೆ ಆಯಿತು. ಪೂರ್ವ ಯೂರೋಪ್ ಹಾಗೂ ಆಫ್ರಿಕಾದ ಕೆಲವು ಕಡೆಗಳಲ್ಲಿ ನಮ್ಮ ಕೆಲಸದ ಮೇಲಿದ್ದ ನಿರ್ಬಂಧ ತೆಗೆಯಲಾಯಿತು. ಹಾಗಾಗಿ, ಲಕ್ಷಾಂತರ ಜನರು ದೀಕ್ಷಾಸ್ನಾನ ಪಡೆದರು. (ಯೆಶಾ. 60:22) ಇತ್ತೀಚಿಗಿನ ವರ್ಷಗಳಲ್ಲಿ ಯೆಹೋವನ ಸಂಘಟನೆಯು ಜನರಿಗೆ ಬೈಬಲಿನಲ್ಲಿರುವ ವಿಷಯಗಳನ್ನು ಕಲಿಸಲು ಸಹಾಯ ಮಾಡಲಿಕ್ಕಾಗಿ ಅನೇಕ ಬೋಧನಾ ಸಲಕರಣೆಗಳನ್ನು ತಯಾರಿಸಿದೆ. ಹೀಗೆ ಯೆಹೋವನು ಇಂದು 80 ಲಕ್ಷಕ್ಕಿಂತಲೂ ಹೆಚ್ಚು ಜನರನ್ನು ಒಟ್ಟುಗೂಡಿಸಿದ್ದಾನೆ. ಇದು ನಿಜಕ್ಕೂ ಮಹಾ ಸಮೂಹವೇ ಆಗಿದೆ.
ಲೋಕದ ಎಲ್ಲಾ ಕಡೆಯ ಜನರು
16. ಮಹಾ ಸಮೂಹದವರನ್ನು ಎಲ್ಲಿಂದ ಒಟ್ಟುಗೂಡಿಸಲಾಗುತ್ತದೆ?
16 ಯೋಹಾನ ತನ್ನ ದರ್ಶನವನ್ನು ಬರೆಯುವಾಗ ಮಹಾ ಸಮೂಹದವರು “ಎಲ್ಲ ಜನಾಂಗಗಳಿಂದಲೂ ಕುಲಗಳಿಂದಲೂ ಪ್ರಜೆಗಳಿಂದಲೂ ಭಾಷೆಗಳಿಂದಲೂ” ಬಂದವರಾಗಿದ್ದಾರೆ ಎಂದು ಹೇಳಿದನು. ಇದಕ್ಕಿಂತ ಮುಂಚೆ ಜೆಕರ್ಯ ಎಂಬ ಪ್ರವಾದಿ ಕೂಡ ಇದೇ ರೀತಿ ಹೇಳಿದ್ದನು. ಆತನು ಬರೆದದ್ದು: “ಆ ಕಾಲದಲ್ಲಿ ಜನಾಂಗಗಳ ವಿವಿಧಭಾಷೆಗಳವರಾದ ಹತ್ತು ಜನರು ಯೆಹೂದ್ಯನೊಬ್ಬನ ಸೆರಗನ್ನು ಹಿಡಿದುಕೊಂಡು ‘ನಾವು ನಿಮ್ಮೊಂದಿಗೆ ಬರುವೆವು, ದೇವರು ನಿಮ್ಮ ಸಂಗಡ ಇದ್ದಾನೆಂಬ ಸುದ್ದಿಯು ನಮ್ಮ ಕಿವಿಗೆ ಬಿದ್ದಿದೆ’ ಎಂದು ಹೇಳುವರು.”—ಜೆಕ. 8:23.
17. ಎಲ್ಲ ದೇಶ-ಭಾಷೆಯ ಜನರಿಗೆ ಸಹಾಯ ಮಾಡಲು ಯಾವ ಹೆಜ್ಜೆ ತಗೊಳ್ಳಲಾಗಿದೆ?
17 ಎಲ್ಲ ಭಾಷೆಯ ಜನರನ್ನು ಒಟ್ಟುಗೂಡಿಸಬೇಕಂದರೆ ಎಲ್ಲ ಭಾಷೆಗಳಲ್ಲಿ ಸುವಾರ್ತೆ ಸಾರಬೇಕು ಎಂದು ಯೆಹೋವನ ಸಾಕ್ಷಿಗಳು ಗ್ರಹಿಸಿದರು. ಕಳೆದ 130 ವರ್ಷಗಳಲ್ಲಿ ಬೈಬಲ್ ಕಲಿಯಲು ಸಹಾಯ ಮಾಡುವ ಮಾಹಿತಿಯನ್ನು ಯೆಹೋವನ ಸಾಕ್ಷಿಗಳಾದ ನಾವು ಭಾಷಾಂತರ ಮಾಡುತ್ತಾ ಬಂದಿದ್ದೇವೆ. ಆದರೆ ಹಿಂದೆಂದಿಗಿಂತಲೂ ಹೆಚ್ಚಾಗಿ ಈಗ ನೂರಾರು ಭಾಷೆಗಳಲ್ಲಿ ಅಂದರೆ 900ಕ್ಕಿಂತ ಹೆಚ್ಚಿನ ಭಾಷೆಗಳಲ್ಲಿ ಭಾಷಾಂತರ ಮಾಡುತ್ತಿದ್ದೇವೆ! ಯೆಹೋವನು ಎಲ್ಲ ಜನಾಂಗಗಳಿಂದ ಮಹಾ ಸಮೂಹದವರನ್ನು ಒಟ್ಟುಗೂಡಿಸುತ್ತಿದ್ದಾನೆ. ಇದು ಆತನು ಮಾಡುತ್ತಿರುವ ಅದ್ಭುತ ಅಂತನೇ ಹೇಳಬಹುದು. ಬೈಬಲ್ ಮತ್ತು ಬೈಬಲ್ ಆಧರಿತ ಸಾಹಿತ್ಯಗಳು ಅನೇಕ ಭಾಷೆಗಳಲ್ಲಿ ಸಿಗುತ್ತಿರುವುದರಿಂದ ಮಹಾ ಸಮೂಹದವರು ಭೂಮಿಯ ಬೇರೆ-ಬೇರೆ ಕಡೆ ಇದ್ದರೂ ಯೆಹೋವನನ್ನು ಆರಾಧಿಸುವ ವಿಷಯದಲ್ಲಿ ಐಕ್ಯತೆಯಿಂದ ಇದ್ದಾರೆ. ಅವರು ಹುರುಪಿನಿಂದ ಸುವಾರ್ತೆ ಸಾರುವುದಕ್ಕೆ ಮತ್ತು ಸಹೋದರ ಪ್ರೀತಿ ತೋರಿಸುವುದಕ್ಕೆ ಹೆಸರುವಾಸಿ ಆಗಿದ್ದಾರೆ. ನಮ್ಮ ನಂಬಿಕೆ ಬಲವಾಗಲು ಇದಕ್ಕಿಂತ ಹೆಚ್ಚಿನ ವಿಷಯ ಬೇಕಾ?—ಮತ್ತಾ. 24:14; ಯೋಹಾ. 13:35.
ಈ ದರ್ಶನ ನಮ್ಮ ಮೇಲೆ ಯಾವ ಪ್ರಭಾವ ಬೀರಬೇಕು?
18. (ಎ) ಮಹಾ ಸಮೂಹದ ಬಗ್ಗೆ ಇರುವ ಪ್ರವಾದನೆ ನೆರವೇರಿರುವುದನ್ನು ನೋಡಿ ನಾವು ಆಶ್ಚರ್ಯಪಡದಿರಲು ಯೆಶಾಯ 46:10, 11 ಯಾವ ಕಾರಣ ಕೊಡುತ್ತದೆ? (ಬಿ) ಭೂ ನಿರೀಕ್ಷೆ ಇರುವವರು ತಮ್ಮನ್ನು ಕಡೆಗಣಿಸಲಾಗಿದೆ ಎಂದು ಯಾಕೆ ಯೋಚಿಸಲ್ಲ?
18 ಮಹಾ ಸಮೂಹದ ಬಗ್ಗೆ ಇರುವ ಪ್ರವಾದನೆಯ ವಿಷಯದಲ್ಲಿ ಸಂತೋಷಪಡಲು ನಮಗೆ ಎಲ್ಲ ಕಾರಣಗಳಿವೆ. ಯೆಹೋವನು ಈ ಪ್ರವಾದನೆಯನ್ನು ಇಷ್ಟು ಅದ್ಭುತವಾಗಿ ನೆರವೇರಿಸಿರುವುದನ್ನು ನೋಡುವಾಗ ನಮಗೆ ಆಶ್ಚರ್ಯ ಆಗಲ್ಲ. (ಯೆಶಾಯ 46:10, 11 ಓದಿ.) ಯೆಹೋವನು ತಮಗೆ ಕೊಟ್ಟಿರುವ ನಿರೀಕ್ಷೆಗಾಗಿ ಮಹಾ ಸಮೂಹದವರು ಆತನಿಗೆ ಆಭಾರಿಗಳಾಗಿದ್ದಾರೆ. ಯೇಸುವಿನೊಟ್ಟಿಗೆ ಸ್ವರ್ಗದಲ್ಲಿ ಆಳಲು ತಾವು ದೇವರ ಆತ್ಮದಿಂದ ಅಭಿಷಿಕ್ತರಾಗಿಲ್ಲ, ತಮ್ಮನ್ನು ಕಡೆಗಣಿಸಲಾಗಿದೆ ಎಂದು ಅವರು ಯೋಚಿಸಲ್ಲ. ಇಡೀ ಬೈಬಲಲ್ಲಿ ನಾವು ಪವಿತ್ರಾತ್ಮದಿಂದ ಮಾರ್ಗದರ್ಶನ ಪಡೆದ ನಂಬಿಗಸ್ತ ಸ್ತ್ರೀಪುರುಷರ ಬಗ್ಗೆ ಓದುತ್ತೇವೆ. ಅವರು ಯಾರೂ 1,44,000 ಮಂದಿಯಲ್ಲಿ ಒಬ್ಬರಾಗಿಲ್ಲ. ಅದಕ್ಕೊಂದು ಉದಾಹರಣೆ ಸ್ನಾನಿಕನಾದ ಯೋಹಾನ. (ಮತ್ತಾ. 11:11) ಇನ್ನೊಂದು ಉದಾಹರಣೆ ದಾವೀದ. (ಅ. ಕಾ. 2:34) ಅವರಿಬ್ಬರಿಗೆ ಮತ್ತು ಲೆಕ್ಕವಿಲ್ಲದಷ್ಟು ಜನರಿಗೆ ಪರದೈಸ್ ಭೂಮಿಯ ಮೇಲೆ ಪುನರುತ್ಥಾನವಾಗುತ್ತದೆ. ಮಹಾ ಸಮೂಹದವರ ಜೊತೆ ಸೇರಿ ಅವರೆಲ್ಲರೂ ಯೆಹೋವನಿಗೆ ನಿಷ್ಠರಾಗಿದ್ದು ಆತನ ಪರಮಾಧಿಕಾರಕ್ಕೆ ಸಂಪೂರ್ಣ ಬೆಂಬಲ ಕೊಡುತ್ತಾರೆ.
19. ಯೋಹಾನ ನೋಡಿದ ಮಹಾ ಸಮೂಹದ ದರ್ಶನದ ಅರ್ಥ ಏನೆಂದು ಗೊತ್ತಾದರೆ ನಾವೇನು ಮಾಡುತ್ತೇವೆ?
19 ದೇವರು ಎಲ್ಲ ಜನಾಂಗದ ಲಕ್ಷಾಂತರ ಜನರನ್ನು ಒಟ್ಟು ಸೇರಿಸಿ ತನ್ನನ್ನು ಆರಾಧಿಸುವಂತೆ ಮಾಡಿದ್ದು ಇದೇ ಮೊದಲ ಬಾರಿ! ನಮ್ಮ ನಿರೀಕ್ಷೆ ಸ್ವರ್ಗದಲ್ಲಿ ಜೀವಿಸುವುದಾಗಲಿ ಅಥವಾ ಭೂಮಿಯಲ್ಲಿ ಜೀವಿಸುವುದಾಗಲಿ ನಾವಂತೂ ನಮ್ಮಿಂದಾದಷ್ಟು ಹೆಚ್ಚು ಜನರಿಗೆ ‘ಬೇರೆ ಕುರಿಗಳಾದ’ ಮಹಾ ಸಮೂಹದ ಭಾಗವಾಗಲು ಸಹಾಯ ಮಾಡುತ್ತೇವೆ. (ಯೋಹಾ. 10:16) ಇಡೀ ಮಾನವಕುಲಕ್ಕೆ ತುಂಬ ನೋವನ್ನು ಕೊಟ್ಟಿರುವ ಸರ್ಕಾರಗಳನ್ನು ಮತ್ತು ಧರ್ಮಗಳನ್ನು ಯೆಹೋವನು ಮಹಾ ಸಂಕಟದ ಮೂಲಕ ಇನ್ನು ಸ್ವಲ್ಪದರಲ್ಲೇ ನಾಶಮಾಡುತ್ತಾನೆ. ಆಗ ಮಹಾ ಸಮೂಹದ ಭಾಗವಾಗಿರುವವರಿಗೆ ಒಂದು ಅದ್ಭುತ ಅವಕಾಶ ಸಿಗಲಿದೆ. ಅವರೆಲ್ಲರೂ ಭೂಮಿಯಲ್ಲಿ ಸದಾಕಾಲ ಜೀವಿಸುತ್ತಾ ಯೆಹೋವನನ್ನು ಆರಾಧಿಸುತ್ತಾರೆ!—ಪ್ರಕ. 7:14.
ಗೀತೆ 134 ಸರ್ವವೂ ನೂತನವಾಗುವಾಗ ನಿನ್ನನ್ನು ನೋಡು