ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನಂತೆ ಎಲ್ಲರೊಂದಿಗೆ ದಯೆಯಿಂದ ನಡಕೊಳ್ಳಿ

ಯೆಹೋವನಂತೆ ಎಲ್ಲರೊಂದಿಗೆ ದಯೆಯಿಂದ ನಡಕೊಳ್ಳಿ

“ದಿಕ್ಕಿಲ್ಲದವನನ್ನು ಪರಾಂಬರಿಸುವವನು ಧನ್ಯನು.”—ಕೀರ್ತ. 41:1.

ಗೀತೆಗಳು: 77, 50

1. ಯೆಹೋವನ ಆರಾಧಕರು ಒಬ್ಬರನ್ನೊಬ್ಬರು ಪ್ರೀತಿಸುತ್ತಾರೆ ಎಂದು ಹೇಗೆ ಗೊತ್ತಾಗುತ್ತದೆ?

 ಲೋಕವ್ಯಾಪಕವಾಗಿರುವ ಯೆಹೋವನ ಆರಾಧಕರೆಲ್ಲರೂ ಒಂದು ಕುಟುಂಬದಂತೆ ಇದ್ದಾರೆ. ಅವರು ಒಂದೇ ತಾಯಿಯ ಮಕ್ಕಳಂತೆ ಒಬ್ಬರನ್ನೊಬ್ಬರು ಪ್ರೀತಿಸುತ್ತಾರೆ. (1 ಯೋಹಾ. 4:16, 21) ತಮ್ಮ ಸಹೋದರರಿಗೋಸ್ಕರ ದೊಡ್ಡ ತ್ಯಾಗಗಳನ್ನು ಮಾಡುತ್ತಾರೆ. ಆದರೆ ಹೆಚ್ಚಾಗಿ ಚಿಕ್ಕಚಿಕ್ಕ ವಿಷಯಗಳನ್ನು ಮಾಡುವ ಮೂಲಕ ಅವರು ಪ್ರೀತಿ ತೋರಿಸುತ್ತಾರೆ. ಅಂದರೆ ತಮ್ಮ ಸಹೋದರರ ಹತ್ತಿರ ಮಾತಾಡುವಾಗ ಅವರ ಬಗ್ಗೆ ಏನಾದರೂ ಒಳ್ಳೇದು ಹೇಳುತ್ತಾರೆ ಅಥವಾ ಅವರೊಂದಿಗೆ ದಯೆಯಿಂದ ನಡಕೊಳ್ಳುತ್ತಾರೆ. ದಯೆ ತೋರಿಸುವಾಗ ನಾವು ನಮ್ಮ ಸ್ವರ್ಗೀಯ ತಂದೆಯ ಮಕ್ಕಳು ಎಂದು ತೋರಿಸಿಕೊಳ್ಳುತ್ತೇವೆ.—ಎಫೆ. 5:1.

2. ಯೇಸು ಹೇಗೆ ತನ್ನ ತಂದೆಯಂತೆ ಪ್ರೀತಿ ತೋರಿಸಿದನು?

2 ಯೇಸು ತನ್ನ ತಂದೆ ತರಾನೇ ಇದ್ದನು. ಬೇರೆಯವರ ಜೊತೆ ಯಾವಾಗಲೂ ದಯೆಯಿಂದ ನಡಕೊಂಡನು. “ಕಷ್ಟಪಡುತ್ತಿರುವವರೇ, ಹೊರೆಹೊತ್ತಿರುವವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ಚೈತನ್ಯ ನೀಡುವೆನು” ಎಂದನು. (ಮತ್ತಾ. 11:28, 29) ನಾವೂ ಯೇಸು ತರ ಇರಲು ಪ್ರಯತ್ನಿಸುತ್ತಾ ದಿಕ್ಕಿಲ್ಲದವರನ್ನು ಅಥವಾ ಪಾಪದವರನ್ನು ಪರಾಂಬರಿಸುವಾಗ ಯೆಹೋವನಿಗೆ ಸಂತೋಷವಾಗುತ್ತದೆ, ನಮಗೂ ಸಂತೋಷವಾಗುತ್ತದೆ. (ಕೀರ್ತ. 41:1) ಈ ಲೇಖನದಲ್ಲಿ, ನಾವು ನಮ್ಮ ಕುಟುಂಬ ಸದಸ್ಯರಿಗೆ, ಸಹೋದರ-ಸಹೋದರಿಯರಿಗೆ ಮತ್ತು ಸೇವೆಯಲ್ಲಿ ಸಿಗುವವರಿಗೆ ಹೇಗೆ ದಯೆ ತೋರಿಸಬಹುದು ಎಂದು ನೋಡೋಣ.

ಕುಟುಂಬ ಸದಸ್ಯರಿಗೆ ದಯೆ ತೋರಿಸಿ

3. ಒಬ್ಬ ಗಂಡ ತನ್ನ ಹೆಂಡತಿಯ ಜೊತೆ ಹೇಗೆ ದಯೆಯಿಂದ ನಡಕೊಳ್ಳಬಹುದು? (ಲೇಖನದ ಆರಂಭದ ಚಿತ್ರ ನೋಡಿ.)

3 ಈ ವಿಷಯದಲ್ಲಿ ಗಂಡನು ಉತ್ತಮ ಮಾದರಿ ಇಡಬೇಕು. ತನ್ನ ಕುಟುಂಬವನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳಬೇಕು. (ಎಫೆ. 5:25; 6:4) ಹೆಂಡತಿಯನ್ನು ಅರ್ಥಮಾಡಿಕೊಂಡು ನಡೆಯುವ ಗಂಡನಾಗಿರಬೇಕು ಎಂದು ಬೈಬಲ್‌ ಹೇಳುತ್ತದೆ. (1 ಪೇತ್ರ 3:7) ತಮ್ಮಿಬ್ಬರಲ್ಲಿ ತುಂಬ ವ್ಯತ್ಯಾಸ ಇರುವುದಾದರೂ, ತಾನು ತನ್ನ ಹೆಂಡತಿಗಿಂತ ಶ್ರೇಷ್ಠ ಎಂದು ನೆನಸಬಾರದು. (ಆದಿ. 2:18) ತನ್ನ ಹೆಂಡತಿಯ ಭಾವನೆಗಳನ್ನು ಕೇಳಿ ತಿಳುಕೊಳ್ಳುವವನಾಗಿರಬೇಕು. ಅವಳೊಂದಿಗೆ ಗೌರವದಿಂದ ನಡಕೊಳ್ಳಬೇಕು. ಕೆನಡದಲ್ಲಿರುವ ಒಬ್ಬ ಪತ್ನಿ ತನ್ನ ಗಂಡನ ಬಗ್ಗೆ ಹೇಳಿದ್ದು: “ಅವರು ನನ್ನ ಭಾವನೆಗಳಿಗೆ ಯಾವಾಗಲೂ ಬೆಲೆ ಕೊಡುತ್ತಾರೆ. ನನಗೇನಾದರೂ ಬೇಜಾರಾದರೆ ‘ಇದೆಲ್ಲ ದೊಡ್ಡ ವಿಷ್ಯನಾ’ ಅಂತ ಹೇಳಿ ಕಡೆಗಣಿಸಲ್ಲ. ನಾನೇನಾದರೂ ಹೇಳುವಾಗ ಕಿವಿಗೊಟ್ಟು ಕೇಳ್ತಾರೆ. ನನಗೇನಾದರೂ ಸಲಹೆ ಕೊಡುವಾಗ ದಯೆಯಿಂದ ಕೊಡುತ್ತಾರೆ.”

4. ಗಂಡನು ತನ್ನ ಹೆಂಡತಿಯ ಭಾವನೆಗಳಿಗೆ ಬೆಲೆ ಕೊಡುತ್ತಾನೆ ಎಂದು ಹೇಗೆ ತೋರಿಸಬಹುದು?

4 ತನ್ನ ಹೆಂಡತಿಯ ಭಾವನೆಗಳಿಗೆ ಬೆಲೆ ಕೊಡುವ ಗಂಡನು ಬೇರೆ ಸ್ತ್ರೀಯರೊಂದಿಗೆ ನೇರವಾಗಿ ಆಗಲಿ, ಸಾಮಾಜಿಕ ಜಾಲತಾಣದಲ್ಲಿ ಆಗಲಿ, ಇಂಟರ್‌ನೆಟ್‌ನಲ್ಲಿ ಆಗಲಿ ಚೆಲ್ಲಾಟ ಆಡಲ್ಲ ಅಥವಾ ಅವರಿಗೆ ಅತಿಯಾದ ಆಸಕ್ತಿ ತೋರಿಸಲ್ಲ. (ಯೋಬ 31:1) ಅವನು ತಪ್ಪಾದ ವೆಬ್‌ಸೈಟ್‌ಗಳನ್ನೂ ನೋಡಲ್ಲ. ತನ್ನ ಹೆಂಡತಿಯನ್ನು ಪ್ರೀತಿಸುವುದರಿಂದ ಅವನು ಅವಳಿಗೆ ಮೋಸ ಮಾಡಲ್ಲ. ಅವನು ಯೆಹೋವನನ್ನೂ ಪ್ರೀತಿಸುವುದರಿಂದ ಕೆಟ್ಟದ್ದನ್ನು ದ್ವೇಷಿಸುತ್ತಾನೆ.—ಕೀರ್ತನೆ 19:14; 97:10 ಓದಿ.

5. ಹೆಂಡತಿ ತನ್ನ ಗಂಡನ ಭಾವನೆಗಳಿಗೆ ಬೆಲೆ ಕೊಡುತ್ತಾಳೆ ಎಂದು ಹೇಗೆ ತೋರಿಸಬಹುದು?

5 ಗಂಡನು ತನ್ನ ಶಿರಸ್ಸಾದ ಯೇಸು ಕ್ರಿಸ್ತನಂತೆ ಪ್ರೀತಿಯಿಂದ ನಡಕೊಳ್ಳಲು ಪ್ರಯತ್ನಿಸುವಾಗ ಅವನಿಗೆ “ಆಳವಾದ ಗೌರವ” ತೋರಿಸಲು ಹೆಂಡತಿಗೆ ಸುಲಭವಾಗುತ್ತದೆ. (ಎಫೆ. 5:22-25, 33) ಗಂಡನ ಮೇಲೆ ಗೌರವ ಇದ್ದರೆ ಅವನ ಭಾವನೆಗಳಿಗೆ ಬೆಲೆ ಕೊಡಲು ಪ್ರಯತ್ನಿಸುತ್ತಾಳೆ. ಗಂಡ ಸಭೆಗೆ ಸಂಬಂಧಪಟ್ಟ ವಿಷಯವನ್ನು ಅಥವಾ ಏನಾದರೂ ಸಮಸ್ಯೆಯನ್ನು ನಿಭಾಯಿಸುತ್ತಿರುವಾಗ ತಾಳ್ಮೆ, ದಯೆ ತೋರಿಸುತ್ತಾಳೆ. ಬ್ರಿಟನ್‌ನಲ್ಲಿರುವ ಒಬ್ಬ ಗಂಡ ಹೇಳುವುದು: “ಕೆಲವೊಮ್ಮೆ ನಾನು ಏನಾದರೂ ಚಿಂತೆ ಮಾಡುತ್ತಾ ಇದ್ದರೆ ಅದನ್ನು ನನ್ನ ಹೆಂಡತಿ ಗ್ರಹಿಸುತ್ತಾಳೆ. ಆಮೇಲೆ ಜ್ಞಾನೋಕ್ತಿ 20:5 ಹೇಳುವ ಪ್ರಕಾರ, ನನ್ನ ಮನಸ್ಸಲ್ಲಿ ಏನು ಓಡುತ್ತಾ ಇದೆ ಎಂದು ತಿಳುಕೊಳ್ಳಲು ಸರಿಯಾದ ಸಮಯಕ್ಕಾಗಿ ಕಾಯುತ್ತಾಳೆ. ಅದು ಅವಳ ಹತ್ತಿರ ಹೇಳಿಕೊಳ್ಳುವ ವಿಷಯ ಆಗಿದ್ದರೆ ಹೇಳುತ್ತೇನೆ.”

6. (ಎ) ಬೇರೆಯವರ ಬಗ್ಗೆ ಯೋಚಿಸುವಂತೆ ಮತ್ತು ದಯೆಯಿಂದ ನಡಕೊಳ್ಳುವಂತೆ ನಾವೆಲ್ಲರೂ ಹೇಗೆ ಮಕ್ಕಳಿಗೆ ಕಲಿಸಬಹುದು? (ಬಿ) ಇದರಿಂದ ಮಕ್ಕಳಿಗೆ ಹೇಗೆ ಪ್ರಯೋಜನವಾಗುತ್ತದೆ?

6 ಹೆತ್ತವರು ಒಬ್ಬರಿಗೊಬ್ಬರು ದಯೆ ತೋರಿಸುವಾಗ ಮಕ್ಕಳಿಗೆ ಒಳ್ಳೇ ಮಾದರಿ ಇಡುತ್ತಾರೆ. ಮಕ್ಕಳು ಸಹ ಬೇರೆಯವರ ಬಗ್ಗೆ ಯೋಚಿಸಬೇಕು, ದಯೆಯಿಂದ ನಡಕೊಳ್ಳಬೇಕೆಂದು ಕಲಿಸುವ ಜವಾಬ್ದಾರಿಯೂ ಹೆತ್ತವರಿಗಿದೆ. ಉದಾಹರಣೆಗೆ, ರಾಜ್ಯ ಸಭಾಗೃಹದಲ್ಲಿ ಓಡಬಾರದು ಎಂದು ಅವರು ಮಕ್ಕಳಿಗೆ ಕಲಿಸಬೇಕು. ಎಲ್ಲಾದರೂ ಊಟಕ್ಕೆ ಹೋಗಿದ್ದರೆ ವಯಸ್ಸಾದವರು ಊಟ ತೆಗೆದುಕೊಳ್ಳುವ ವರೆಗೆ ಕಾಯಬೇಕೆಂದು ಕಲಿಸಬೇಕು. ಸಭೆಯಲ್ಲಿರುವ ಎಲ್ಲರೂ ಈ ರೀತಿ ಮಕ್ಕಳಿಗೆ ಸಹಾಯ ಮಾಡಬಹುದು. ಒಂದು ಮಗು ಏನಾದರು ಒಳ್ಳೇ ವಿಷಯ ಮಾಡಿದರೆ ನಾವು ಶಭಾಷ್‌ ಹೇಳಬೇಕು. ಒಂದುವೇಳೆ ಅವನು ಬಾಗಿಲನ್ನು ನಮಗೋಸ್ಕರ ತೆರೆದು ಹಿಡಿದರೆ ನಾವು ಮೆಚ್ಚಬೇಕು. ಆಗ ಮಗುವಿಗೆ ಖುಷಿಯಾಗುತ್ತದೆ. “ತೆಗೆದುಕೊಳ್ಳುವುದಕ್ಕಿಂತಲೂ ಕೊಡುವುದರಲ್ಲಿ ಹೆಚ್ಚಿನ ಸಂತೋಷವಿದೆ” ಎಂದು ಮಕ್ಕಳು ಅರ್ಥಮಾಡಿಕೊಳ್ಳುತ್ತಾರೆ.—ಅ. ಕಾ. 20:35.

ಸಹೋದರ-ಸಹೋದರಿಯರಿಗೆ ದಯೆ ತೋರಿಸಿ

7. (ಎ) ಒಬ್ಬ ಕಿವುಡನಿಗೆ ಯೇಸು ಹೇಗೆ ದಯೆ ತೋರಿಸಿದನು? (ಬಿ) ಯೇಸುವಿನ ಮಾದರಿಯಿಂದ ನಾವೇನು ಕಲಿಯಕ್ಕಾಗುತ್ತದೆ?

7 ಒಂದಿನ ಯೇಸು ದೆಕಪೊಲಿ ಪ್ರಾಂತದಲ್ಲಿದ್ದಾಗ ಜನರು “ಕಿವುಡನೂ ತೊದಲು ಮಾತಾಡುವವನೂ ಆಗಿದ್ದ ಒಬ್ಬ ಮನುಷ್ಯನನ್ನು ಅವನ ಬಳಿಗೆ” ಕರಕೊಂಡು ಬಂದರು. (ಮಾರ್ಕ 7:31-35) ಯೇಸು ಆ ವ್ಯಕ್ತಿಯನ್ನು ವಾಸಿಮಾಡಿದನು, ಆದರೆ ಎಲ್ಲರ ಮುಂದೆ ವಾಸಿಮಾಡಲಿಲ್ಲ. ಯಾಕೆ? ಆ ವ್ಯಕ್ತಿ ಕಿವುಡನಾಗಿದ್ದ ಕಾರಣ ಜನರ ಮುಂದೆ ಅವನಿಗೆ ಕಸಿವಿಸಿ ಆಗಬಹುದು ಎಂದು ಯೇಸು ಅರ್ಥಮಾಡಿಕೊಂಡನು. ಯೇಸು ಅವನನ್ನು “ಗುಂಪಿನಿಂದ ಪ್ರತ್ಯೇಕವಾಗಿ ಕರೆದುಕೊಂಡು ಹೋಗಿ” ವಾಸಿಮಾಡಿದನು. ನಮ್ಮಿಂದ ಅದ್ಭುತಗಳನ್ನು ಮಾಡಕ್ಕಾಗಲ್ಲ ನಿಜ. ಆದರೆ ನಾವು ನಮ್ಮ ಸಹೋದರ-ಸಹೋದರಿಯರ ಅವಶ್ಯಕತೆಗಳು ಮತ್ತು ಭಾವನೆಗಳ ಬಗ್ಗೆ ಯೋಚಿಸಬೇಕು. ಅವರಿಗೆ ದಯೆ ತೋರಿಸಬೇಕು. “ನಾವು ಪರಸ್ಪರ ಹಿತಚಿಂತಕರಾಗಿದ್ದು ಪ್ರೀತಿಸುವಂತೆಯೂ ಸತ್ಕಾರ್ಯಗಳನ್ನು ಮಾಡುವಂತೆಯೂ” ಪೌಲನು ಹೇಳಿದ್ದಾನೆ. (ಇಬ್ರಿ. 10:24) ಯೇಸು ಆ ಕಿವುಡನಿಗಾಗುವ ಕಷ್ಟದ ಬಗ್ಗೆ ಯೋಚಿಸಿದನು ಮತ್ತು ದಯೆ ತೋರಿಸಿದನು. ನಾವೂ ಅದನ್ನೇ ಮಾಡಬೇಕು.

8, 9. ವಯಸ್ಸಾದವರಿಗೆ ಮತ್ತು ವಿಕಲಚೇತನರಿಗೆ ನಾವು ಹೇಗೆ ದಯೆ ತೋರಿಸಬಹುದು? (ಉದಾಹರಣೆಗಳನ್ನು ಕೊಡಿ.)

8 ವಯಸ್ಸಾದವರಿಗೆ, ವಿಕಲಚೇತನರಿಗೆ ದಯೆ ತೋರಿಸಿ. ಒಂದು ಸಭೆ ಏನೇನು ಸಾಧಿಸಿದೆ ಅನ್ನುವುದು ಮುಖ್ಯ ಅಲ್ಲ, ಅದರಲ್ಲಿ ಪ್ರೀತಿ ಇದೆಯಾ ಅನ್ನುವುದು ಮುಖ್ಯ. (ಯೋಹಾ. 13:34, 35) ವಯಸ್ಸಾಗಿರುವ ಅಥವಾ ಅಂಗವೈಕಲ್ಯ ಇರುವ ನಮ್ಮ ಸಹೋದರ-ಸಹೋದರಿಯರು ಕೂಟಗಳಿಗೆ ಮತ್ತು ಸೇವೆಗೆ ಹೋಗಲು ಅವರಿಗೆ ಬೇಕಾದ ಎಲ್ಲವನ್ನೂ ಮಾಡಲು ಪ್ರೀತಿ ನಮ್ಮನ್ನು ಪ್ರಚೋದಿಸುತ್ತದೆ. ನಮಗೆ ಅನುಕೂಲ ಇಲ್ಲದಿದ್ದರೂ ನಾವು ಸಹಾಯ ಮಾಡುತ್ತೇವೆ. ಅವರಿಂದ ಹೆಚ್ಚು ಸೇವೆ ಮಾಡಲು ಆಗದಿದ್ದಾಗಲೂ ಸಹಾಯ ಮಾಡುತ್ತೇವೆ. (ಮತ್ತಾ. 13:23) ಗಾಲಿಕುರ್ಚಿಯಲ್ಲೇ ಓಡಾಡಬೇಕಾದ ಮೈಕಲ್‌ಗೆ ಅವರ ಕುಟುಂಬ ಸದಸ್ಯರು ಮತ್ತು ಸಭೆಯಲ್ಲಿರುವ ಸಹೋದರರು ಕೊಡುವ ಸಹಾಯಕ್ಕಾಗಿ ಅವರು ತುಂಬ ಕೃತಜ್ಞರಾಗಿದ್ದಾರೆ. “ಅವರೆಲ್ಲರೂ ನನಗೆ ಕೊಡುವ ಸಹಾಯದಿಂದ ನಾನು ಹೆಚ್ಚಿನ ಕೂಟಗಳಿಗೆ ಹೋಗಲು ಸಾಧ್ಯವಾಗುತ್ತದೆ, ಸೇವೆಯಲ್ಲಿ ಕ್ರಮವಾಗಿ ಭಾಗವಹಿಸಲು ಆಗುತ್ತದೆ. ಸಾರ್ವಜನಿಕ ಸಾಕ್ಷಿಕಾರ್ಯ ಅಂದರೆ ನನಗೆ ತುಂಬ ಇಷ್ಟ” ಎಂದು ಮೈಕಲ್‌ ಹೇಳುತ್ತಾರೆ.

9 ಅನೇಕ ಬೆತೆಲ್‌ ಕುಟುಂಬಗಳಲ್ಲಿ ವಯಸ್ಸಾದ ಅಥವಾ ಅಂಗವೈಕಲ್ಯ ಇರುವ ಸಹೋದರ-ಸಹೋದರಿಯರು ಇದ್ದಾರೆ. ಇವರು ಪತ್ರ ಮತ್ತು ಟೆಲಿಫೋನ್‌ ಮೂಲಕ ಸಾಕ್ಷಿಕೊಡಲು ಬೇಕಾದ ಏರ್ಪಾಡುಗಳನ್ನು ದಯಾಪರರಾದ ಮೇಲ್ವಿಚಾರಕರು ಮಾಡುತ್ತಾರೆ. ಹೀಗೆ ಅವರ ಪ್ರೀತಿಯನ್ನು ತೋರಿಸುತ್ತಾರೆ. 86 ವರ್ಷ ಆಗಿರುವ ಬಿಲ್‌ ದೂರದೂರದ ಪ್ರದೇಶಗಳಲ್ಲಿರುವ ಜನರಿಗೆ ಪತ್ರದ ಮೂಲಕ ಸಾಕ್ಷಿಕೊಡುತ್ತಾರೆ. “ಪತ್ರದ ಮೂಲಕ ಸಾಕ್ಷಿಕೊಡುವುದು ನಮಗೆ ಸಿಕ್ಕಿರುವ ಸುಯೋಗ” ಎಂದವರು ಹೇಳುತ್ತಾರೆ. ಹತ್ತಿರತ್ತಿರ 90 ವರ್ಷ ಆಗಿರುವ ನ್ಯಾನ್ಸಿ ಹೇಳುವುದೇನೆಂದರೆ, “ಪತ್ರದ ಮೂಲಕ ಸಾಕ್ಷಿ ಕೊಡುವುದು ಅಂದರೆ ಬರೀ ಪೇಪರನ್ನು ಲಕೋಟೆಗಳಲ್ಲಿ ಹಾಕಿ ಕಳುಹಿಸುವ ಕೆಲಸ ಅಲ್ಲ ಎಂದು ನಾನು ನೆನಸುತ್ತೇನೆ. ಇದೂ ಕ್ಷೇತ್ರ ಸೇವೆನೇ. ಇದರ ಮೂಲಕನೂ ಜನರಿಗೆ ಸತ್ಯ ತಿಳಿಸಬಹುದು.” 1921​ರಲ್ಲಿ ಹುಟ್ಟಿದ ಎತಲ್‌ ಹೇಳುವುದು: “ನೋವು ತಿನ್ನುವುದೇ ನನ್ನ ಜೀವನ ಆಗಿಬಿಟ್ಟಿದೆ. ಒಂದೊಂದು ದಿನ ನಾನು ಬಟ್ಟೆ ಹಾಕಿಕೊಂಡು ರೆಡಿಯಾಗಲು ಸಹ ದೊಡ್ಡ ಸಾಹಸ ಮಾಡಬೇಕಾಗುತ್ತದೆ.” ಆದರೂ ಟೆಲಿಫೋನ್‌ ಮೂಲಕ ಸಾಕ್ಷಿ ಕೊಡುವುದು ಅವರಿಗೆ ತುಂಬ ಇಷ್ಟ ಮತ್ತು ಅವರಿಗೆ ಕೆಲವು ಒಳ್ಳೇ ಪುನರ್ಭೇಟಿಗಳು ಸಿಕ್ಕಿವೆ. 85 ವರ್ಷ ಆಗಿರುವ ಬಾರ್ಬರಾ ಹೀಗೆ ವಿವರಿಸುತ್ತಾರೆ: “ನನ್ನ ಆರೋಗ್ಯ ಕೆಟ್ಟಿರುವುದರಿಂದ ಕ್ರಮವಾಗಿ ಕ್ಷೇತ್ರ ಸೇವೆಗೆ ಹೋಗಲು ತುಂಬ ಕಷ್ಟವಾಗುತ್ತದೆ. ಆದರೆ ಟೆಲಿಫೋನ್‌ ಮೂಲಕ ಸಾಕ್ಷಿ ಕೊಡಲು ನನಗಾಗುತ್ತದೆ. ಯೆಹೋವನಿಗೆ ಧನ್ಯವಾದ!” ವಯೋವೃದ್ಧರಾಗಿದ್ದ ಒಂದು ಗುಂಪಿನವರು ಒಂದು ವರ್ಷದೊಳಗೆ 1,228 ತಾಸು ಸೇವೆ ಮಾಡಿದರು, 6,265 ಪತ್ರ ಬರೆದರು, 2,000ಕ್ಕಿಂತ ಹೆಚ್ಚು ಟೆಲಿಫೋನ್‌ ಕರೆಗಳನ್ನು ಮಾಡಿದರು ಮತ್ತು 6,315 ಪ್ರಕಾಶನಗಳನ್ನು ನೀಡಿದರು. ಅವರ ಪ್ರಯತ್ನವನ್ನು ನೋಡಿ ಯೆಹೋವನಿಗೆ ತುಂಬ ಸಂತೋಷವಾಗಿದೆ ಅನ್ನುವುದಂತೂ ಖಂಡಿತ.—ಜ್ಞಾನೋ. 27:11.

10. ನಮ್ಮ ಸಹೋದರರು ಕೂಟಗಳಿಂದ ಹೆಚ್ಚು ಪ್ರಯೋಜನ ಪಡೆಯಲು ನಾವು ಹೇಗೆ ಸಹಾಯ ಮಾಡಬಹುದು?

10 ಕ್ರೈಸ್ತ ಕೂಟಗಳಲ್ಲಿ ದಯೆ ತೋರಿಸಿ. ನಾವು ದಯೆ ತೋರಿಸುವಾಗ ನಮ್ಮ ಸಹೋದರರು ಕೂಟಗಳಿಂದ ಹೆಚ್ಚು ಪ್ರಯೋಜನ ಪಡೆಯಲು ಸಾಧ್ಯವಾಗುತ್ತದೆ. ಹೇಗೆ? ಸಮಯಕ್ಕೆ ಸರಿಯಾಗಿ ಕೂಟಗಳಿಗೆ ಬಂದರೆ ಅವರಿಗೆ ಅಪಕರ್ಷಣೆ ಆಗಲ್ಲ. ಅಪರೂಪಕ್ಕೊಮ್ಮೆ ಅನಿವಾರ್ಯ ಕಾರಣದಿಂದ ತಡ ಆಗಬಹುದು. ಆದರೆ ನಾವು ಆಗಾಗ ತಡವಾಗಿ ಬರುವುದಾದರೆ ಇದರಿಂದ ನಮ್ಮ ಸಹೋದರರಿಗೆ ಏನು ಕಷ್ಟ ಆಗುತ್ತದೆ ಎಂದು ಯೋಚನೆ ಮಾಡಬೇಕು. ಅವರಿಗೆ ತೊಂದರೆ ಆಗದಿರಲು ಏನು ಮಾಡಬೇಕೆಂದು ಯೋಚಿಸಬೇಕು. ನಮ್ಮನ್ನು ಕೂಟಕ್ಕೆ ಕರೆದಿರುವವರು ಯೆಹೋವ ಮತ್ತು ಯೇಸು ಎಂದು ಸಹ ಮರೆಯಬಾರದು. (ಮತ್ತಾ. 18:20) ಕೂಟಗಳಿಗೆ ಸರಿಯಾದ ಸಮಯಕ್ಕೆ ಬರುವ ಮೂಲಕ ನಾವು ದಯೆ ತೋರಿಸುವುದು ಪ್ರಾಮುಖ್ಯ.

11. ಕೂಟಗಳಲ್ಲಿ ನೇಮಕಗಳಿರುವ ಸಹೋದರರು 1 ಕೊರಿಂಥ 14:40​ರಲ್ಲಿರುವ ಬುದ್ಧಿಮಾತನ್ನು ಯಾಕೆ ಪಾಲಿಸಬೇಕು?

11 ನಾವು ನಮ್ಮ ಸಹೋದರರಿಗೆ ದಯೆ ತೋರಿಸುವವರಾದರೆ “ಎಲ್ಲವುಗಳು ಸಭ್ಯವಾಗಿಯೂ ಕ್ರಮವಾಗಿಯೂ ನಡೆಯಲಿ” ಎಂಬ ಬೈಬಲಿನ ಬುದ್ಧಿಮಾತನ್ನು ಪಾಲಿಸುತ್ತೇವೆ. (1 ಕೊರಿಂ. 14:40) ಕೂಟಗಳಲ್ಲಿ ಭಾಗಗಳಿರುವ ಸಹೋದರರು ತಮ್ಮ ನೇಮಕವನ್ನು ಸರಿಯಾದ ಸಮಯಕ್ಕೆ ಮುಗಿಸುವಾಗ ಈ ಬುದ್ಧಿಮಾತನ್ನು ಪಾಲಿಸಿದಂತೆ ಆಗುತ್ತದೆ. ಹೀಗೆ ಅವರು ಮುಂದಿನ ಭಾಗವನ್ನು ನಿರ್ವಹಿಸುವ ಸಹೋದರನಿಗೆ ಮಾತ್ರ ಅಲ್ಲ ಇಡೀ ಸಭೆಗೆ ದಯೆ ತೋರಿಸಿದಂತೆ ಆಗುತ್ತದೆ. ಒಂದುವೇಳೆ ಕೂಟ ತಡವಾಗಿ ಮುಗಿದರೆ ಏನು ತೊಂದರೆ ಆಗಬಹುದು ಎಂದು ಯೋಚಿಸಿ. ಕೆಲವು ಸಹೋದರರು ಕೂಟದ ನಂತರ ತುಂಬ ದೂರ ಪ್ರಯಾಣ ಮಾಡಬೇಕಾಗಿ ಇರಬಹುದು. ಬಸ್ಸನ್ನೋ ರೈಲನ್ನೋ ಹತ್ತಿ ಹೋಗಬೇಕಾಗಿರಬಹುದು, ತುಂಬ ದೂರ ನಡೆಯಬೇಕಾಗಿರಬಹುದು. ಕೆಲವೊಬ್ಬರ ಸಂಗಾತಿ ಸತ್ಯದಲ್ಲಿಲ್ಲದ ಕಾರಣ ಇಂತಿಷ್ಟು ಸಮಯಕ್ಕೆ ಮನೆಗೆ ಬಂದು ಮುಟ್ಟಬೇಕೆಂದು ಹೇಳಿರಬಹುದು.

12. ನಾವು ಹಿರಿಯರಿಗೆ ಯಾಕೆ ಗೌರವ, ಪ್ರೀತಿ ತೋರಿಸಬೇಕು? ( “ಮುಂದಾಳುತ್ವ ವಹಿಸುವವರಿಗೆ ದಯೆ ತೋರಿಸಿ” ಚೌಕ ನೋಡಿ.)

12 ಹಿರಿಯರು ಸಭೆಯಲ್ಲಿ ಮತ್ತು ಸೇವೆಯಲ್ಲಿ ತುಂಬ ಕೆಲಸ ಮಾಡುತ್ತಾರೆ. ಆದ್ದರಿಂದ ಅವರಿಗೆ ನಾವು ಗೌರವ, ಪ್ರೀತಿ ತೋರಿಸಬೇಕು. (1 ಥೆಸಲೊನೀಕ 5:12, 13 ಓದಿ.) ನಿಮಗೋಸ್ಕರ ಅವರು ಪಡುವ ಪ್ರಯಾಸವನ್ನು ನೀವು ಮೆಚ್ಚುತ್ತೀರಲ್ಲವೇ? ಹೌದಾದರೆ ಅವರು ಹೇಳುವ ಪ್ರಕಾರ ನಡೆಯಿರಿ ಮತ್ತು ಬೆಂಬಲ ಕೊಡಿ. ಯಾಕೆಂದರೆ “ಅವರು ಲೆಕ್ಕ ಒಪ್ಪಿಸಬೇಕಾದವರಾಗಿ ನಿಮ್ಮ ಪ್ರಾಣಗಳನ್ನು ಕಾಯುವವರಾಗಿದ್ದಾರೆ.”—ಇಬ್ರಿ. 13:7, 17.

ಸೇವೆಯಲ್ಲಿ ಸಿಗುವವರಿಗೆ ದಯೆ ತೋರಿಸಿ

13. ಯೇಸು ಜನರ ಜೊತೆ ನಡಕೊಂಡ ವಿಧದಿಂದ ನಾವೇನು ಕಲಿಯಬಹುದು?

13 ಯೇಸು “ಜಜ್ಜಿದ ದಂಟನ್ನು ಮುರಿದು ಹಾಕದೆ ಕಳೆಗುಂದಿದ ದೀಪವನ್ನು ನಂದಿಸದೆ” ಇರುವನು ಎಂದು ಯೆಶಾಯನು ಪ್ರವಾದಿಸಿದನು. (ಯೆಶಾ. 42:3) ಯೇಸುವಿಗೆ ಜನರ ಮೇಲೆ ಪ್ರೀತಿ ಇದ್ದದರಿಂದ ಅವರ ಮೇಲೆ ಆತನಿಗೆ ತುಂಬ ಅನುಕಂಪ ಇತ್ತು. ‘ಜಜ್ಜಿದ ದಂಟಿನಂತೆ’ ಅಥವಾ ‘ಕಳೆಗುಂದಿದ ದೀಪದಂತೆ’ ಕುಗ್ಗಿಹೋಗಿರುವವರ ಭಾವನೆಗಳನ್ನು ಆತನು ಅರ್ಥಮಾಡಿಕೊಂಡನು. ಅವರೊಂದಿಗೆ ದಯೆಯಿಂದ, ತಾಳ್ಮೆಯಿಂದ ನಡಕೊಂಡನು. ಮಕ್ಕಳಿಗೆ ಕೂಡ ಯೇಸುವಿನ ಜೊತೆ ಇರುವುದಕ್ಕೆ ತುಂಬ ಇಷ್ಟ ಇತ್ತು. (ಮಾರ್ಕ 10:14) ನಾವು ಯೇಸುವಿನ ಹಾಗೆ ಜನರನ್ನು ಅರ್ಥಮಾಡಿಕೊಳ್ಳಲು ಅಥವಾ ಅವರಿಗೆ ಕಲಿಸಲು ಸಾಧ್ಯವಿಲ್ಲ. ಆದರೆ ನಮ್ಮ ಕ್ಷೇತ್ರದಲ್ಲಿರುವ ಜನರ ಜೊತೆ ಹೇಗೆ ಮಾತಾಡುತ್ತೇವೆ, ಯಾವಾಗ ಮಾತಾಡುತ್ತೇವೆ, ಎಷ್ಟು ಹೊತ್ತು ಮಾತಾಡುತ್ತೇವೆ ಅನ್ನುವುದರಲ್ಲಿ ನಾವು ಅವರಿಗೆ ದಯೆ ತೋರಿಸಬಹುದು.

14. ನಾವು ಜನರ ಜೊತೆ ಹೇಗೆ ಮಾತಾಡುತ್ತೇವೆ ಅನ್ನುವುದಕ್ಕೆ ಯಾಕೆ ಗಮನ ಕೊಡಬೇಕು?

14 ನಾವು ಜನರ ಜೊತೆ ಹೇಗೆ ಮಾತಾಡಬೇಕು? ಇವತ್ತು ಲಕ್ಷಾಂತರ ಜನರು ಈ ಲೋಕದ ಭ್ರಷ್ಟ ಮತ್ತು ಕ್ರೂರ ವಾಣಿಜ್ಯ, ರಾಜಕೀಯ ಮತ್ತು ಧಾರ್ಮಿಕ ನಾಯಕರಿಂದ ‘ಸುಲಿಯಲ್ಪಟ್ಟು ಚದುರಿಸಲ್ಪಟ್ಟಿದ್ದಾರೆ.’ (ಮತ್ತಾ. 9:36) ಇದರಿಂದ ಹೆಚ್ಚಿನ ಜನ ಯಾರನ್ನೂ ನಂಬುವುದಿಲ್ಲ. ದಿಕ್ಕುಕಾಣದ ಪರಿಸ್ಥಿತಿಯಲ್ಲಿದ್ದಾರೆ. ಆದ್ದರಿಂದ ನಾವು ಅವರ ಜೊತೆ ಮಾತಾಡುವಾಗ ದಯೆಯಿಂದ ಮಾತಾಡಬೇಕು, ನಾವು ಕಾಳಜಿ ತೋರಿಸುತ್ತಿದ್ದೇವೆ ಎಂದು ನಮ್ಮ ಧ್ವನಿಯಿಂದ ಅವರಿಗೆ ಗೊತ್ತಾಗಬೇಕು. ಎಷ್ಟೋ ಜನ ನಮ್ಮ ಸಂದೇಶಕ್ಕೆ ಕಿವಿಗೊಡಲು ಕಾರಣ ನಾವು ಬೈಬಲನ್ನು ಚೆನ್ನಾಗಿ ಉಪಯೋಗಿಸುತ್ತೇವೆ ಎಂದು ಮಾತ್ರ ಅಲ್ಲ. ನಾವು ಜನರಲ್ಲಿ ತೋರಿಸುವ ನಿಜವಾದ ಆಸಕ್ತಿ ಮತ್ತು ಗೌರವ ಕೂಡ ಅವರಿಗೆ ತುಂಬ ಇಷ್ಟ.

15. ನಾವು ನಮ್ಮ ಕ್ಷೇತ್ರದಲ್ಲಿರುವ ಜನರಿಗೆ ಹೇಗೆಲ್ಲಾ ದಯೆ ತೋರಿಸಬಹುದು?

15 ನಮ್ಮ ಕ್ಷೇತ್ರದಲ್ಲಿರುವ ಜನರ ಬಗ್ಗೆ ನಾವು ಚಿಂತಿಸುತ್ತೇವೆ ಎಂದು ಅನೇಕ ವಿಧಗಳಲ್ಲಿ ತೋರಿಸಬಹುದು. ಉದಾಹರಣೆಗೆ, ನಾವು ಕೇಳುವ ಪ್ರಶ್ನೆಗಳು ದಯೆಯಿಂದ ಕೂಡಿರಬೇಕು, ಮನೆಯವರನ್ನು ಮುಜುಗರಪಡಿಸುವಂತೆ ಇರಬಾರದು. ಒಬ್ಬ ಪಯನೀಯರ್‌ ಸಹೋದರನು ಸೇವೆ ಮಾಡುತ್ತಿರುವ ಕ್ಷೇತ್ರದಲ್ಲಿ ನಾಚಿಕೆ ಸ್ವಭಾವದ ಜನರಿದ್ದಾರೆ. ಆದ್ದರಿಂದ ಅವರಿಗೆ ಪ್ರಶ್ನೆಗಳನ್ನು ಕೇಳುವಾಗ ಉತ್ತರ ಗೊತ್ತಿಲ್ಲದೆ ಅವರು ಪೇಚಾಟಕ್ಕೆ ಒಳಗಾಗುವಂಥ ಪ್ರಶ್ನೆಗಳನ್ನು ಅವನು ಕೇಳುವುದಿಲ್ಲ. “ನಿಮಗೆ ದೇವರ ಹೆಸರು ಗೊತ್ತಾ?” ಅಥವಾ “ದೇವರ ರಾಜ್ಯ ಅಂದರೆ ಗೊತ್ತಾ?” ಎಂಬ ಪ್ರಶ್ನೆಗಳನ್ನು ಅವನು ಕೇಳುವುದಿಲ್ಲ. ‘ದೇವರಿಗೆ ಒಂದು ಹೆಸರಿದೆ ಅಂತ ಬೈಬಲಿಂದ ನನಗೆ ಗೊತ್ತಾಗಿದೆ. ಅದನ್ನು ನಿಮಗೆ ತೋರಿಸಬಹುದಾ?’ ಎಂದು ಕೇಳುತ್ತಾನೆ. ಎಲ್ಲಾ ಕಡೆ ಇದೇ ವಿಧಾನವನ್ನು ಬಳಸಬೇಕು ಅಂತೇನಿಲ್ಲ. ಯಾಕೆಂದರೆ ಜನ ಮತ್ತು ಸಂಸ್ಕೃತಿ ಎಲ್ಲಾ ಕಡೆ ಒಂದೇ ತರ ಇಲ್ಲ. ಆದರೆ ಒಂದು ವಿಷಯವನ್ನು ಮಾತ್ರ ನಾವು ಮರೆಯಬಾರದು. ನಮ್ಮ ಕ್ಷೇತ್ರದಲ್ಲಿರುವ ಜನರ ಜೊತೆ ನಾವು ಯಾವಾಗಲೂ ದಯೆಯಿಂದ ಮತ್ತು ಗೌರವದಿಂದ ನಡಕೊಳ್ಳಬೇಕು. ಇದಕ್ಕಾಗಿ ನಾವು ಅವರ ಬಗ್ಗೆ ಚೆನ್ನಾಗಿ ತಿಳಿದುಕೊಂಡಿರಬೇಕು.

16, 17. (ಎ) ಜನರ ಜೊತೆ ಯಾವಾಗ ಮಾತಾಡಬೇಕು ಮತ್ತು (ಬಿ) ಎಷ್ಟು ಹೊತ್ತು ಮಾತಾಡಬೇಕು ಎಂಬ ವಿಷಯದಲ್ಲಿ ನಾವು ಹೇಗೆ ದಯೆ ತೋರಿಸಬಹುದು?

16 ನಾವು ಜನರ ಜೊತೆ ಯಾವಾಗ ಮಾತಾಡಬೇಕು? ನಾವು ಮನೆ-ಮನೆ ಸೇವೆಗೆ ಹೋದಾಗ ಜನರಿಗೆ ನಾವು ಬರುವುದು ಗೊತ್ತಿರಲ್ಲ, ಯಾಕೆಂದರೆ ಅವರು ನಮ್ಮನ್ನು ಕರೆದಿರಲ್ಲ. ಆದ್ದರಿಂದ ಅವರಿಗೆ ಯಾವಾಗ ಸ್ವಲ್ಪ ಸಮಯ ಕೊಡಲು ಆಗುತ್ತದೋ ಅಂಥ ಸಮಯದಲ್ಲಿ ಭೇಟಿ ಮಾಡುವುದು ತುಂಬ ಮುಖ್ಯ. (ಮತ್ತಾ. 7:12) ಉದಾಹರಣೆಗೆ, ನಿಮ್ಮ ಕ್ಷೇತ್ರದಲ್ಲಿರುವ ಜನರು ವಾರಾಂತ್ಯಗಳಲ್ಲಿ ಸ್ವಲ್ಪ ತಡವಾಗಿ ಏಳಲು ಇಷ್ಟಪಡುತ್ತಾರಾ? ಹಾಗಾದರೆ ನೀವು ಮೊದಲು ಬೀದಿಸಾಕ್ಷಿ ಅಥವಾ ಸಾರ್ವಜನಿಕ ಸಾಕ್ಷಿ ಕೊಡಬಹುದು. ಯಾರು ಸ್ವಲ್ಪ ಬೇಗ ಎದ್ದಿರುತ್ತಾರೆ ಅಂತ ನಿಮಗೆ ಗೊತ್ತೋ ಅಂಥವರ ಪುನರ್ಭೇಟಿ ಕೂಡ ಮಾಡಬಹುದು.

17 ನಾವು ಜನರ ಜೊತೆ ಎಷ್ಟು ಹೊತ್ತು ಮಾತಾಡಬೇಕು? ಹೆಚ್ಚಿನ ಜನರು ತುಂಬ ಬ್ಯುಸಿ ಇರುತ್ತಾರೆ. ಆದ್ದರಿಂದ ನಾವು ಆರಂಭದಲ್ಲಿ ಅವರ ಹತ್ತಿರ ತುಂಬ ಹೊತ್ತು ಮಾತಾಡದೇ ಚುಟುಕಾಗಿ ಮಾತಾಡಿ ಹೋಗುವುದು ಒಳ್ಳೇದು. (1 ಕೊರಿಂ. 9:20-23) ಜನರ ಸನ್ನಿವೇಶವನ್ನು ನಾವು ಅರ್ಥಮಾಡಿಕೊಳ್ಳುತ್ತೇವೆ ಎಂದು ಅವರು ಗ್ರಹಿಸಿದರೆ ಮುಂದಿನ ಸಾರಿ ನಾವು ಭೇಟಿಕೊಟ್ಟಾಗ ಅವರು ನಮ್ಮೊಂದಿಗೆ ಮಾತಾಡಲು ಮನಸ್ಸು ಮಾಡಬಹುದು. ದೇವರಾತ್ಮದಿಂದ ಬರುವ ಗುಣಗಳನ್ನು ನಾವು ತೋರಿಸುವಾಗ ನಿಜಕ್ಕೂ ‘ದೇವರ ಜೊತೆಕೆಲಸಗಾರರಾಗಿ ಇರುತ್ತೇವೆ.’ ಯಾರಿಗಾದರೂ ಸತ್ಯ ಕಲಿಸಲು ಯೆಹೋವನು ನಮ್ಮನ್ನು ಉಪಯೋಗಿಸಬಹುದು.—1 ಕೊರಿಂ. 3:6, 7, 9.

18. ನಾವು ಬೇರೆಯವರಿಗೆ ದಯೆ ತೋರಿಸುವಾಗ ಯಾವ ಆಶೀರ್ವಾದಗಳು ಸಿಗುತ್ತವೆ?

18 ಆದ್ದರಿಂದ ನಮ್ಮ ಕುಟುಂಬ ಸದಸ್ಯರಿಗೆ, ಸಹೋದರ-ಸಹೋದರಿಯರಿಗೆ ಮತ್ತು ಸೇವೆಯಲ್ಲಿ ಸಿಗುವವರಿಗೆ ದಯೆ ತೋರಿಸಲು ಸರ್ವ ಪ್ರಯತ್ನ ಮಾಡೋಣ. ಹೀಗೆ ಮಾಡಿದರೆ ನಮಗೆ ಇಂದೂ ಎಂದೆಂದೂ ಎಷ್ಟೋ ಆಶೀರ್ವಾದಗಳು ಸಿಗುತ್ತವೆ. ಕೀರ್ತನೆ 41:1, 2 ಹೇಳುವಂತೆ, “ದಿಕ್ಕಿಲ್ಲದವನನ್ನು ಪರಾಂಬರಿಸುವವನು ಧನ್ಯನು; ಯೆಹೋವನು ಅವನನ್ನು ಆಪತ್ಕಾಲದಲ್ಲಿ ರಕ್ಷಿಸುವನು. ಯೆಹೋವನು ಅವನ ಪ್ರಾಣವನ್ನು ಕಾಪಾಡಿ ಉಳಿಸುವನು; ಅವನು ದೇಶದಲ್ಲಿ ಧನ್ಯನೆನಿಸಿಕೊಳ್ಳುವನು.”