ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯುವಜನರೇ, ನಿಮ್ಮ ನಂಬಿಕೆಯನ್ನು ಬಲಪಡಿಸಿಕೊಳ್ಳಿ

ಯುವಜನರೇ, ನಿಮ್ಮ ನಂಬಿಕೆಯನ್ನು ಬಲಪಡಿಸಿಕೊಳ್ಳಿ

‘ನಂಬಿಕೆಯು ಕಣ್ಣಿಗೆ ಕಾಣದಿರುವ ನಿಜತ್ವಗಳ ಪ್ರತ್ಯಕ್ಷ ನಿದರ್ಶನವಾಗಿದೆ.’—ಇಬ್ರಿ.11:1.

ಗೀತೆಗಳು: 41, 69

1, 2. (ಎ) ಯೆಹೋವನ ಯುವ ಸೇವಕರಿಗೆ ಕೆಲವೊಮ್ಮೆ ಯಾವ ಪ್ರಶ್ನೆ ಬರಬಹುದು? (ಬಿ) ಬೈಬಲ್‌ ಅವರಿಗೆ ಯಾವ ಸಲಹೆ ನೀಡುತ್ತದೆ?

 “ನೀನಿಷ್ಟು ಬುದ್ಧಿವಂತಳಾಗಿದ್ದು, ದೇವರಿದ್ದಾನೆಂದು ನಂಬ್ತೀಯಲ್ಲಾ?” ಎಂದು ಬ್ರಿಟನ್ನಿನ ಒಬ್ಬ ಯುವ ಸಹೋದರಿಗೆ ಆಕೆಯ ಸಹಪಾಠಿ ಕೇಳಿದಳು. ಜರ್ಮನಿಯಲ್ಲಿರುವ ಒಬ್ಬ ಸಹೋದರ ಹೀಗಂದ: “ನನ್ನ ಶಿಕ್ಷಕರು, ಸೃಷ್ಟಿಯ ಬಗ್ಗೆ ಬೈಬಲ್‌ ಹೇಳುವ ವಿಷಯಗಳೆಲ್ಲ ಬರೀ ಕಟ್ಟುಕತೆ ಎಂದು ನೆನಸುತ್ತಾರೆ. ಅಷ್ಟೇ ಅಲ್ಲದೇ ವಿದ್ಯಾರ್ಥಿಗಳಿಗೂ ಅದೇ ರೀತಿಯ ಭಾವನೆ ಇದ್ದು, ವಿದ್ಯಾರ್ಥಿಗಳು ಸಹ ವಿಕಾಸವಾದವನ್ನೇ ನಂಬುತ್ತಾರೆ ಎನ್ನುವುದು ಅವರ ಅನಿಸಿಕೆ.” ಫ್ರಾನ್ಸಿನ ಒಬ್ಬ ಯುವ ಸಹೋದರಿ ಹೀಗಂದಳು: “‘ಬೈಬಲನ್ನು ನಂಬುವ ವಿದ್ಯಾರ್ಥಿಗಳು ಈಗಲೂ ಇದ್ದಾರಾ?’ ಎಂದು ನನ್ನ ಶಿಕ್ಷಕರು ಆಶ್ಚರ್ಯಪಡುತ್ತಾರೆ.”

2 ಇಂದು ತುಂಬ ಜನರು ನಮ್ಮನ್ನು ದೇವರು ಸೃಷ್ಟಿಮಾಡಿದನೆಂದು ನಂಬುವುದಿಲ್ಲ. ಯೆಹೋವನ ಸೇವೆ ಮಾಡುತ್ತಿರುವ ಅಥವಾ ಆತನ ಬಗ್ಗೆ ಕಲಿಯುತ್ತಿರುವ ಯುವ ವ್ಯಕ್ತಿ ನೀವಾಗಿದ್ದೀರಾ? ಹಾಗಿದ್ದರೆ ಯೆಹೋವನೇ ನಮ್ಮ ಸೃಷ್ಟಿಕರ್ತನೆಂದು ರುಜುಪಡಿಸುವುದು ಹೇಗೆ ಎಂಬ ಪ್ರಶ್ನೆ ನಿಮಗೆ ಬಂದಿರಬಹುದು. ನಾವು ಕೇಳಿಸಿಕೊಳ್ಳುವ ಅಥವಾ ಓದುವ ವಿಷಯದ ಬಗ್ಗೆ ಯೋಚಿಸಲು ಮತ್ತು ಆ ವಿಷಯ ಸರಿಯೋ ತಪ್ಪೋ ಎಂದು ನಿರ್ಧರಿಸಲು ಬೈಬಲ್‌ ನಮಗೆ ಸಹಾಯಮಾಡುತ್ತದೆ. ಬೈಬಲಿನಲ್ಲಿ “ಬುದ್ಧಿಯು ನಿನಗೆ ಕಾವಲಾಗಿರುವದು” ಎಂದು ಹೇಳಲಾಗಿದೆ. ಅದು ಹೇಗೆ? ನಮಗಿರುವ ಬುದ್ಧಿಶಕ್ತಿಯು ಸುಳ್ಳು ವಿಷಯಗಳನ್ನು ತ್ಯಜಿಸಲು ಮತ್ತು ಯೆಹೋವನಲ್ಲಿರುವ ನಂಬಿಕೆಯನ್ನು ಬಲಪಡಿಸಿಕೊಳ್ಳಲು ಸಹಾಯಮಾಡುತ್ತದೆ.ಜ್ಞಾನೋಕ್ತಿ 2:10-12 ಓದಿ.

3. ಈ ಲೇಖನದಲ್ಲಿ ಏನನ್ನು ಕಲಿಯಲಿದ್ದೇವೆ?

3 ಯೆಹೋವನಲ್ಲಿ ಬಲವಾದ ನಂಬಿಕೆ ಇರಬೇಕಾದರೆ ನಾವು ಆತನ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಬೇಕು. (1 ತಿಮೊ. 2:4) ಹಾಗಾಗಿ, ಬೈಬಲನ್ನು ಮತ್ತು ನಮ್ಮ ಪ್ರಕಾಶನಗಳನ್ನು ಓದುವಾಗ ಅವು ಯಾವುದರ ಬಗ್ಗೆ ಹೇಳುತ್ತಿವೆ ಎಂದು ತುಸು ಯೋಚಿಸಿ. ಓದುತ್ತಿರುವ ವಿಷಯವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. (ಮತ್ತಾ. 13:23) ಈ ರೀತಿಯಲ್ಲಿ ಅಧ್ಯಯನ ಮಾಡಿದರೆ ಯೆಹೋವನೇ ನಮ್ಮ ಸೃಷ್ಟಿಕರ್ತ ಮತ್ತು ಬೈಬಲ್‌ ಆತನಿಂದಲೇ ಬಂದದ್ದು ಎನ್ನುವುದಕ್ಕೆ ಸಾಕಷ್ಟು ಪುರಾವೆಗಳು ಸಿಗುತ್ತವೆ. (ಇಬ್ರಿ. 11:1) ಅದು ಹೇಗೆಂದು ಈ ಲೇಖನದಲ್ಲಿ ಕಲಿಯಲಿದ್ದೇವೆ.

ನಂಬಿಕೆಯನ್ನು ಬಲಪಡಿಸಿಕೊಳ್ಳುವುದು ಹೇಗೆ?

4. (ಎ) ಸೃಷ್ಟಿಯನ್ನು ನಂಬುವವರಂತೆ ವಿಕಾಸವಾದವನ್ನು ನಂಬುವವರು ಕೂಡ ಏನನ್ನು ನೋಡಿಲ್ಲ? (ಬಿ) ಹಾಗಾಗಿ ನಾವೇನು ಮಾಡಬೇಕು?

4 ಯಾರಾದರೂ ನಿಮಗೆ ಹೀಗೆ ಹೇಳಬಹುದು “ನಾನು ದೇವರಿದ್ದಾನೆಂದು ನಂಬುವುದಿಲ್ಲ ಏಕೆಂದರೆ ದೇವರನ್ನ ನಾನು ನೋಡೇ ಇಲ್ಲ. ಆದ್ರೆ ನಾನು ವಿಕಾಸವಾದವನ್ನು ನಂಬುತ್ತೇನೆ ಯಾಕೆಂದರೆ ಅದು ಸತ್ಯ ಎಂದು ವಿಜ್ಞಾನಿಗಳು ಹೇಳಿದ್ದಾರೆ.” ಈ ರೀತಿ ಅನೇಕರು ಯೋಚಿಸುತ್ತಾರೆ. ನಿಜ, ನಾವ್ಯಾರೂ ದೇವರನ್ನಾಗಲಿ, ದೇವರು ಸೃಷ್ಟಿಮಾಡುತ್ತಿರುವುದನ್ನಾಗಲಿ ನೋಡಿಲ್ಲ. (ಯೋಹಾ. 1:18) ಆದರೆ ವಿಕಾಸವಾದವನ್ನು ನಂಬುವವರು ಸಹ ಯಾವುದನ್ನು ನೋಡಿಲ್ಲವೋ ಅದನ್ನೇ ನಂಬುತ್ತಾರೆ. ಒಂದು ರೀತಿಯ ಜೀವಿ ಇನ್ನೊಂದು ರೀತಿಯ ಜೀವಿಯಾಗಿ ವಿಕಾಸವಾಗುವುದನ್ನು ಯಾವ ಮನುಷ್ಯನಾಗಲಿ, ವಿಜ್ಞಾನಿಯಾಗಲಿ ನೋಡಿಲ್ಲ. ಉದಾಹರಣೆಗೆ, ಒಂದು ಮಂಗ ಮಾನವನಾಗುವುದನ್ನು ಯಾರೂ ಕಣ್ಣಾರೆ ಕಂಡಿಲ್ಲ. (ಯೋಬ 38:1, 4) ಹಾಗಾಗಿ ನಾವೆಲ್ಲರೂ ನಿಜತ್ವಗಳಿಗೆ ಗಮನ ಕೊಡಬೇಕು. ಅವುಗಳ ಬಗ್ಗೆ ಯೋಚಿಸಬೇಕು. ಸರಿಯಾದ ನಿರ್ಧಾರಕ್ಕೆ ಬರಬೇಕು. ಪ್ರಕೃತಿಯನ್ನು ಕಂಡು ಅನೇಕರು ದೇವರಿದ್ದಾನೆಂದು ‘ಗ್ರಹಿಸಿದ್ದಾರೆ.’ ಅಷ್ಟೇ ಅಲ್ಲದೆ, ಆತನೇ ಎಲ್ಲವನ್ನು ಸೃಷ್ಟಿಮಾಡಿದ್ದಾನೆ, ಆತ ತುಂಬ ಶಕ್ತಿಶಾಲಿ ಮತ್ತು ಆತನಿಗೆ ಅನೇಕ ಅದ್ಭುತ ಗುಣಗಳಿವೆ ಎಂದು ಅವರು ಕಂಡುಕೊಂಡಿದ್ದಾರೆ.—ರೋಮ. 1:20.

ನಿಮ್ಮ ನಂಬಿಕೆ ಏನೆಂದು ಬೇರೆಯವರಿಗೆ ವಿವರಿಸಲು ಸಂಶೋಧನಾ ಸಾಧನಗಳು ಸಹಾಯಮಾಡುತ್ತವೆ (ಪ್ಯಾರ 5 ನೋಡಿ)

5. ಸೃಷ್ಟಿಯ ಬಗ್ಗೆ ಹೆಚ್ಚನ್ನು ಕಲಿಯಲು ಯಾವ ಸಂಶೋಧನಾ ಸಾಧನಗಳಿವೆ?

5 ನಾವು ಪ್ರಕೃತಿಯನ್ನು ಗಮನಿಸಿ ಅದರ ಬಗ್ಗೆ ಆಳವಾಗಿ ಯೋಚಿಸುವಾಗ ಅದನ್ನು ಅದ್ಭುತವಾಗಿ ಮಾಡಲಾಗಿದೆ ಎಂದು ಗೊತ್ತಾಗುತ್ತದೆ. ಅಲ್ಲದೆ, ನಮ್ಮ ಕಣ್ಣಿಗೆ ಸೃಷ್ಟಿಕರ್ತನು ಕಾಣದಿದ್ದರೂ, ಆತನಿದ್ದಾನೆ ಎಂದು “ನಂಬಿಕೆಯಿಂದಲೇ ಗ್ರಹಿಸುತ್ತೇವೆ.” ಆತನಿಗೆ ಉತ್ತಮ ವ್ಯಕ್ತಿತ್ವ ಮತ್ತು ಅಪಾರ ವಿವೇಕವಿದೆ ಎಂದು ತಿಳಿದುಕೊಳ್ಳುತ್ತೇವೆ. (ಇಬ್ರಿ. 11:3, 27) ವಿಜ್ಞಾನಿಗಳು ಕಂಡುಹಿಡಿದಿರುವ ವಿಷಯಗಳಿಂದ ದೇವರ ಸೃಷ್ಟಿಯ ಬಗ್ಗೆ ನಾವು ತುಂಬ ವಿಷಯಗಳನ್ನು ಕಲಿಯಬಹುದು. ಅಂಥ ಕೆಲವು ವಿಷಯಗಳ ಬಗ್ಗೆ ಸೃಷ್ಟಿಯ ಅದ್ಭುತಗಳು ದೇವರ ಮಹಿಮೆಯನ್ನು ಪ್ರಕಟಿಸುತ್ತವೆ ಎಂಬ ವಿಡಿಯೋದಲ್ಲಿ, ಜೀವವು ಸೃಷ್ಟಿಸಲ್ಪಟ್ಟಿತೋ? (ಇಂಗ್ಲಿಷ್‌), ಜೀವದ ಉಗಮ—ಪರಿಗಣಿಸಬೇಕಾದ ಐದು ಪ್ರಶ್ನೆಗಳು” (ಇಂಗ್ಲಿಷ್‌) ಎಂಬ ಕಿರುಹೊತ್ತಗೆಗಳಲ್ಲಿ ಮತ್ತು ನಿಮ್ಮ ಕುರಿತು ಚಿಂತಿಸುವ ಒಬ್ಬ ಸೃಷ್ಟಿಕರ್ತನು ಇದ್ದಾನೋ? (ಇಂಗ್ಲಿಷ್‌) ಎಂಬ ಪುಸ್ತಕದಲ್ಲಿ ಕೆಲವು ಮಾಹಿತಿಗಳು ಸಿಗುತ್ತವೆ. ಎಚ್ಚರ! ಪತ್ರಿಕೆಯಲ್ಲಿ ವಿಜ್ಞಾನಿಗಳೊಟ್ಟಿಗೆ ಮತ್ತು ಬೇರೆಯವರೊಟ್ಟಿಗೆ ನಡೆಸಿದ ಸಂದರ್ಶನಗಳಿರುತ್ತವೆ. ಅವುಗಳಲ್ಲಿ ದೇವರನ್ನು ಅವರು ಯಾಕೆ ನಂಬುತ್ತಾರೆ ಎಂದು ವಿವರಿಸಲಾಗಿರುತ್ತದೆ. ಅಲ್ಲದೇ “ವಿಕಾಸವೇ? ವಿನ್ಯಾಸವೇ?” ಎಂಬ ಲೇಖನಮಾಲೆ ಸಹ ಬರುತ್ತದೆ. ಇದರಲ್ಲಿ ಪ್ರಾಣಿಗಳ ಮತ್ತು ಪ್ರಕೃತಿಯ ಬಗ್ಗೆ ವಿವರಗಳಿರುತ್ತವೆ. ಜೊತೆಗೆ ವಿಜ್ಞಾನಿಗಳು ಸೃಷ್ಟಿಯನ್ನು ನೋಡಿ ಹೇಗೆ ಬೇರೆ ವಿಷಯಗಳನ್ನು ಕಂಡುಹಿಡಿಯಲು ಪ್ರಯತ್ನಿಸಿದ್ದಾರೆ ಎಂಬ ಉದಾಹರಣೆಗಳಿರುತ್ತವೆ.

6. ಸಂಶೋಧನಾ ಸಾಧನಗಳು ನಿಮಗೆ ಹೇಗೆ ಸಹಾಯಮಾಡುತ್ತವೆ?

6 ಈಗಾಗಲೇ ಹೇಳಿದ ಎರಡು ಕಿರುಹೊತ್ತಗೆಗಳ ಬಗ್ಗೆ ಅಮೆರಿಕದಲ್ಲಿರುವ 19 ವರ್ಷದ ಒಬ್ಬ ಸಹೋದರ ಹೀಗಂದನು: “ಆ ಕಿರುಹೊತ್ತಗೆಗಳಿಂದ ನನಗೆ ತುಂಬ ಪ್ರಯೋಜನವಾಗಿದೆ. ಅವುಗಳನ್ನು ನಾನು ತುಂಬ ಸಲ ಓದಿದ್ದೇನೆ.” ಫ್ರಾನ್ಸ್‌ನ ಒಬ್ಬ ಸಹೋದರಿ ಹೀಗಂದರು: “ನನ್ನನ್ನು ‘ವಿಕಾಸವೇ? ವಿನ್ಯಾಸವೇ?’ ಎಂಬ ಲೇಖನಗಳು ಆಶ್ಚರ್ಯಪಡಿಸುತ್ತವೆ. ಪ್ರಸಿದ್ಧ ಎಂಜಿನಿಯರ್ಗಳು ಸೃಷ್ಟಿಯನ್ನು ನೋಡಿ ಹೊಸಹೊಸ ವಿಷಯಗಳನ್ನು ಕಂಡುಹಿಡಿದಿರುವುದರ ಬಗ್ಗೆ ಅವುಗಳಲ್ಲಿ ತಿಳಿಸಲಾಗಿದೆ. ಆದರೆ ಅವು ಯಾವುದೂ ಸೃಷ್ಟಿಗೆ ಸಮವಾಗಿಲ್ಲ.” ದಕ್ಷಿಣ ಆಫ್ರಿಕದಲ್ಲಿರುವ 15 ವರ್ಷದ ಹುಡುಗಿಯ ಹೆತ್ತವರು ಹೀಗಂದರು: “ಎಚ್ಚರ! ಪತ್ರಿಕೆ ಕೈಗೆ ಸಿಕ್ಕಿದ ತಕ್ಷಣ ನಮ್ಮ ಮಗಳು ‘ಸಂದರ್ಶನ’ ಲೇಖನಗಳನ್ನು ಓದುತ್ತಾಳೆ.” ಈ ಪ್ರಕಾಶನಗಳು ಸೃಷ್ಟಿಕರ್ತನಿದ್ದಾನೆ ಎನ್ನುವುದಕ್ಕೆ ಪುರಾವೆ ಕೊಡುತ್ತವೆ ಮತ್ತು ಸುಳ್ಳಾದ ವಿಷಯಗಳು ಯಾವುದೆಂದು ಕಂಡುಹಿಡಿಯಲು ಮತ್ತು ಅವುಗಳನ್ನು ತ್ಯಜಿಸಲು ನಿಮಗೆ ಸಹಾಯಮಾಡುತ್ತವೆ. ಆಗ ನಿಮ್ಮ ನಂಬಿಕೆ ಆಳವಾದ ಬೇರುಗಳನ್ನು ಬಿಟ್ಟಿರುವ ಮರದಂತೆ ಬಲವಾಗಿರುತ್ತದೆ. ಎಂಥ ಬಿರುಗಾಳಿ ಬೀಸಿದರೂ ಅದು ಬಿದ್ದು ಹೋಗುವುದಿಲ್ಲ.—ಯೆರೆ. 17:5-8.

ಬೈಬಲಿನ ಮೇಲೆ ನಿಮಗಿರುವ ನಂಬಿಕೆ

7. ನಾವು ನಮ್ಮ ವಿವೇಚನಾಶಕ್ತಿಯನ್ನು ಉಪಯೋಗಿಸಬೇಕೆಂದು ದೇವರು ಯಾಕೆ ಬಯಸುತ್ತಾನೆ?

7 ‘ಬೈಬಲಿನಲ್ಲಿ ಹೇಳಿರುವ ವಿಷಯಗಳನ್ನು ನಾನು ಯಾಕೆ ನಂಬುತ್ತೇನೆ’ ಎಂದು ಪ್ರಶ್ನೆ ಕೇಳಿಕೊಳ್ಳುವುದು ತಪ್ಪಾ? ಖಂಡಿತ ಇಲ್ಲ. ಬೇರೆಯವರು ನಂಬುತ್ತಾರೆ ಅನ್ನುವ ಕಾರಣಕ್ಕೆ ನೀವೂ ನಂಬಬೇಕು ಎಂದು ಯೆಹೋವನು ಬಯಸುವುದಿಲ್ಲ. ಬದಲಿಗೆ ನಾವು ಬೈಬಲನ್ನು ಚೆನ್ನಾಗಿ ತಿಳಿದುಕೊಳ್ಳಬೇಕು ಮತ್ತು ಅದು ನಿಜವಾಗಿಯೂ ಆತನಿಂದಲೇ ಬಂದದ್ದು ಅಂತ ನಮ್ಮ ‘ವಿವೇಚನಾಶಕ್ತಿಯನ್ನು’ ಬಳಸಿ ಪುರಾವೆ ಕಂಡುಕೊಳ್ಳಬೇಕು ಎಂದು ಬಯಸುತ್ತಾನೆ. ಬೈಬಲ್‌ ಬಗ್ಗೆ ಎಷ್ಟು ಹೆಚ್ಚು ತಿಳಿದುಕೊಳ್ಳುತ್ತೇವೊ ಅದರ ಮೇಲಿನ ನಮ್ಮ ನಂಬಿಕೆ ಅಷ್ಟೇ ಹೆಚ್ಚಾಗುತ್ತದೆ. (ರೋಮನ್ನರಿಗೆ 12:1, 2; 1 ತಿಮೊಥೆಯ 2:4 ಓದಿ.) ಬೈಬಲಿನ ಬಗ್ಗೆ ಹೆಚ್ಚನ್ನು ತಿಳಿದುಕೊಳ್ಳುವ ಒಂದು ವಿಧ ನಮಗೆ ಇಷ್ಟವಾಗುವ ನಿರ್ದಿಷ್ಟ ವಿಷಯದ ಬಗ್ಗೆ ಅಧ್ಯಯನ ಮಾಡುವುದೇ ಆಗಿದೆ.

8, 9. (ಎ) ಕೆಲವರು ಏನನ್ನು ಅಧ್ಯಯನ ಮಾಡಲು ಇಷ್ಟಪಡುತ್ತಾರೆ? (ಬಿ) ಓದಿದ ವಿಷಯಗಳನ್ನು ಧ್ಯಾನಿಸಿದಾಗ ಕೆಲವರು ಹೇಗೆ ಪ್ರಯೋಜನ ಪಡೆದಿದ್ದಾರೆ?

8 ಕೆಲವರು ಬೈಬಲ್‌ ಪ್ರವಾದನೆಗಳನ್ನು ಅಧ್ಯಯನ ಮಾಡಲು ಅಥವಾ ಬೈಬಲ್‌ನಲ್ಲಿ ಹೇಳಿರುವ ವಿಷಯಗಳನ್ನು ಇತಿಹಾಸಗಾರರು, ವಿಜ್ಞಾನಿಗಳು ಮತ್ತು ಭೂಅಗೆತಶಾಸ್ತ್ರಜ್ಞರು ಹೇಳಿದ ವಿಷಯಗಳೊಟ್ಟಿಗೆ ಹೋಲಿಸಿ ನೋಡಲು ಇಷ್ಟಪಡುತ್ತಾರೆ. ಉದಾಹರಣೆಗೆ ಆದಿಕಾಂಡ 3:15⁠ನ್ನು ತೆಗೆದುಕೊಳ್ಳಿ. ಈ ಪ್ರವಾದನೆಯನ್ನು ಯೆಹೋವ ದೇವರು ಆದಾಮ ಮತ್ತು ಹವ್ವ ತನ್ನ ವಿರುದ್ಧ ದಂಗೆಯೆದ್ದು ತನ್ನ ಆಳ್ವಿಕೆ ಸರಿ ಇಲ್ಲ ಎಂದು ಹೇಳಿದಾಗ ನುಡಿದನು. ಬೈಬಲಿನಲ್ಲಿ ದೇವರ ರಾಜ್ಯದ ಬಗ್ಗೆ ತಿಳಿಸುವ ಅನೇಕ ಪ್ರವಾದನೆಗಳಿವೆ. ಈ ಪ್ರವಾದನೆಗಳು ದೇವರ ಆಳ್ವಿಕೆ ಸರಿಯೆಂದು ಮತ್ತು ದೇವರ ರಾಜ್ಯವು ನಮ್ಮ ಕಷ್ಟಗಳನ್ನು ಬಗೆಹರಿಸುತ್ತದೆಂದು ಸಾಬೀತುಪಡಿಸುತ್ತವೆ. ಅಂಥ ಪ್ರವಾದನೆಗಳಲ್ಲಿ ಆದಿಕಾಂಡ 3:15 ಮೊದಲನೇಯದ್ದಾಗಿದೆ. ಈ ಪ್ರವಾದನೆಯನ್ನು ನೀವು ಹೇಗೆ ಅಧ್ಯಯನ ಮಾಡಬಹುದು? ಮೊದಲಿಗೆ ಅದರ ನೆರವೇರಿಕೆಯ ಬಗ್ಗೆ ಹೆಚ್ಚು ಮಾಹಿತಿಯನ್ನು ಕೊಡುವ ಬೈಬಲ್‌ ವಚನಗಳನ್ನು ಪಟ್ಟಿ ಮಾಡಬಹುದು. ನಂತರ ಆ ವಚನಗಳನ್ನೆಲ್ಲ ಯಾವಾಗ ಬರೆಯಲಾಯಿತು ಎಂದು ತಿಳಿದುಕೊಳ್ಳಿ. ಅವುಗಳನ್ನು ಬರೆದ ಕಾಲಕ್ಕನುಸಾರ ಕ್ರಮವಾಗಿ ಜೋಡಿಸಿ. ಹೀಗೆ ಮಾಡಿದರೆ, ಬೇರೆಬೇರೆ ಸಮಯದಲ್ಲಿ ಜೀವಿಸಿದ ಬೈಬಲ್‌ ಬರಹಗಾರರು ಆ ವಚನಗಳನ್ನು ಬರೆದಿದ್ದರೂ ಅವರೆಲ್ಲ ಆದಿಕಾಂಡ 3:15⁠ರಲ್ಲಿರುವ ಪ್ರವಾದನೆಯನ್ನು ಹೆಚ್ಚೆಚ್ಚು ಸ್ಪಷ್ಟಪಡಿಸುತ್ತಾ ಹೋಗಿದ್ದಾರೆಂದು ಗೊತ್ತಾಗುತ್ತದೆ. ಇದರಿಂದ ದೇವರ ಪವಿತ್ರಾತ್ಮವೇ ಅವರಿಗೆ ಸಹಾಯಮಾಡಿದ್ದು ಎಂದು ನಿಮಗೆ ಸ್ಪಷ್ಟವಾಗಿ ಸಾಬೀತಾಗುತ್ತದೆ.—2 ಪೇತ್ರ 1:21.

9 ಬೈಬಲಿನ ಪ್ರತಿಯೊಂದು ಪುಸ್ತಕದಲ್ಲೂ ದೇವರ ರಾಜ್ಯದ ಬಗ್ಗೆ ಮಾಹಿತಿಯಿದೆ ಎಂದು ತನ್ನ ಅಧ್ಯಯನದಿಂದ ತಿಳಿದುಕೊಂಡ ಜರ್ಮನಿಯ ಸಹೋದರನೊಬ್ಬನು ಹೀಗಂದನು. “40 ಜನರು ಸೇರಿ ಬೈಬಲನ್ನು ಬರೆದರು. ಅವರ್ಯಾರು ಒಂದೇ ಸಮಯದಲ್ಲಿ ಬದುಕಿದವರಾಗಿರಲಿಲ್ಲ. ಒಬ್ಬರ ಪರಿಚಯ ಇನ್ನೊಬ್ಬರಿಗೆ ಇರಲೂ ಇಲ್ಲ.” ಆಸ್ಟ್ರೇಲಿಯದಲ್ಲಿರುವ ಸಹೋದರಿಯೊಬ್ಬಳು ಕಾವಲಿನಬುರುಜುವಿನ ಒಂದು ಲೇಖನವನ್ನು ಓದುತ್ತಿರುವಾಗ ಆದಿಕಾಂಡ 3:15⁠ರಲ್ಲಿರುವ ಪ್ರವಾದನೆಗೂ, ಮೆಸ್ಸೀಯನಿಗೂ ಪಸ್ಕಹಬ್ಬ ಹೇಗೆ ಸಂಬಂಧಿಸಿದೆ ಎಂದು ತಿಳಿದುಕೊಂಡಳು. [1] ಅವಳನ್ನುವುದು: “ಅದನ್ನು ಓದಿ ಯೆಹೋವನು ಎಷ್ಟು ಅದ್ಭುತವಾದ ದೇವರು ಎಂದು ನನಗೆ ಗೊತ್ತಾಯಿತು. ಇಸ್ರಾಯೇಲ್ಯರಿಗಾಗಿ ಪಸ್ಕದ ಏರ್ಪಾಡನ್ನು ಮಾಡಿ, ಅದು ಯೇಸುವಿನಲ್ಲಿ ನೆರವೇರುವಂತೆ ಮಾಡಿದ್ದರ ಬಗ್ಗೆ ತಿಳಿದಾಗ ನನಗೆ ತುಂಬ ಸಂತೋಷವಾಯಿತು. ಪ್ರವಾದನಾತ್ಮಕ ಪಸ್ಕ ಹಬ್ಬವು ಹೇಗಿತ್ತು ಎಂದು ಅರ್ಥಮಾಡಿಕೊಳ್ಳಲು ನಾನು ಅದರ ಬಗ್ಗೆ ತುಂಬಾ ಯೋಚಿಸಿದೆ.” ಈ ಸಹೋದರಿಗೆ ಯಾಕೆ ಹೀಗನಿಸಿತು? ಯಾಕೆಂದರೆ ಅವಳು ತಾನು ಓದಿದ ವಿಷಯಗಳ ಬಗ್ಗೆ ಆಳವಾಗಿ ಧ್ಯಾನಿಸಿದಳು ಮತ್ತು ಅದನ್ನು ಅರ್ಥಮಾಡಿಕೊಂಡಳು. ಇದು ಅವಳ ನಂಬಿಕೆಯನ್ನು ಬಲಪಡಿಸಿತು ಮತ್ತು ಅವಳು ಯೆಹೋವನಿಗೂ ಹತ್ತಿರವಾದಳು.—ಮತ್ತಾ. 13:23.

10. ಬೈಬಲ್‌ ಬರಹಗಾರರ ಪ್ರಾಮಾಣಿಕತೆಯು ಬೈಬಲ್‌ ಮೇಲಿರುವ ನಮ್ಮ ನಂಬಿಕೆಯನ್ನು ಹೇಗೆ ಬಲಗೊಳಿಸುತ್ತದೆ?

10 ಬೈಬಲ್‌ ಬರೆದವರ ಪ್ರಾಮಾಣಿಕತೆಯ ಬಗ್ಗೆ ಯೋಚಿಸಿ. ಅವರು ಯಾವಾಗಲೂ ಸತ್ಯವನ್ನೇ ಹೇಳಿದರು ಮತ್ತು ಹಾಗೆ ಮಾಡಲು ಅವರು ಹೆದರಲಿಲ್ಲ. ಆ ಕಾಲದ ಬೇರೆ ಬರಹಗಾರರು ಅವರ ರಾಷ್ಟ್ರ ಮತ್ತು ನಾಯಕರ ಬಗ್ಗೆ ಒಳ್ಳೇಯದನ್ನು ಮಾತ್ರ ಬರೆಯುತ್ತಿದ್ದರು. ಆದರೆ ಯೆಹೋವನ ಪ್ರವಾದಿಗಳು ಒಳ್ಳೇ ವಿಷಯಗಳನ್ನು ಮಾತ್ರವಲ್ಲ ಇಸ್ರಾಯೇಲ್ಯರು ಮತ್ತು ಅವರ ರಾಜರು ಮಾಡಿದ ಕೆಟ್ಟ ವಿಷಯಗಳನ್ನು ಸಹ ಬರೆದರು. (2 ಪೂರ್ವ. 16:9, 10; 24:18-22) ಅಲ್ಲದೆ, ಸ್ವತಃ ತಾವು ಮಾಡಿದ ತಪ್ಪುಗಳ ಬಗ್ಗೆ ಮತ್ತು ಇನ್ನಿತರ ದೇವಸೇವಕರು ಮಾಡಿದ ತಪ್ಪುಗಳ ಬಗ್ಗೆಯೂ ಹೇಳಿದರು. (2 ಸಮು. 12:1-14; ಮಾರ್ಕ 14:50) ಬ್ರಿಟನ್‌ನಲ್ಲಿರುವ ಯುವ ಸಹೋದರನೊಬ್ಬ ಇದರ ಬಗ್ಗೆ ಹೀಗೆ ಹೇಳಿದನು: “ಈ ರೀತಿಯ ಪ್ರಾಮಾಣಿಕತೆ ತುಂಬ ಅಪರೂಪ. ಇದು, ಬೈಬಲ್‌ ನಿಜವಾಗಿಯೂ ದೇವರಿದಂದಲೇ ಬಂದದ್ದು ಎಂಬ ನಮ್ಮ ನಂಬಿಕೆಯನ್ನು ಇನ್ನಷ್ಟು ಬಲಗೊಳಿಸುತ್ತದೆ.”

11. ಬೈಬಲಿನಿಂದ ಸಿಗುವ ಮಾರ್ಗದರ್ಶನ ನಿಜವಾಗಿಯೂ ದೇವರಿಂದನೇ ಬಂದದ್ದು ಎಂದು ಹೇಗೆ ಹೇಳಬಹುದು?

11 ಬೈಬಲ್‌ ಹೇಳುವಂತೆ ಜನರು ನಡೆದುಕೊಂಡರೆ ಜೀವನದಲ್ಲಿ ಒಳ್ಳೇ ಫಲಿತಾಂಶವನ್ನು ಪಡೆದುಕೊಳ್ಳುತ್ತಾರೆ. ಆಗ ಬೈಬಲ್‌ ದೇವರಿಂದಲೇ ಬಂದದ್ದು ಎಂಬ ಮನವರಿಕೆ ಅವರಿಗಾಗುತ್ತದೆ. (ಕೀರ್ತನೆ 19:7-11 ಓದಿ.) ಜಪಾನಿನ ಒಬ್ಬ ಯುವ ಸಹೋದರಿ ಹೀಗಂದಳು: “ಬೈಬಲ್‌ ಕಲಿಸಿದ ವಿಷಯಗಳನ್ನು ನಾನು ಮತ್ತು ನನ್ನ ಕುಟುಂಬದವರು ಅನ್ವಯಿಸಿಕೊಂಡಾಗ ನಾವು ನಿಜವಾದ ಸಂತೋಷ ಕಂಡುಕೊಂಡೆವು. ಈಗ ನಮ್ಮಲ್ಲಿ ಶಾಂತಿ, ಐಕ್ಯತೆ ಮತ್ತು ಪ್ರೀತಿ ಇದೆ.” ಹಿಂದೆ ತಾವು ನಂಬಿದ್ದ ಕೆಲವು ವಿಷಯಗಳು ಸುಳ್ಳಾಗಿದ್ದವು ಎಂದು ಗ್ರಹಿಸಲು ಅನೇಕರಿಗೆ ಬೈಬಲ್‌ ಸಹಾಯಮಾಡಿದೆ. (ಕೀರ್ತ. 115:3-8) ಸರ್ವಶಕ್ತನಾದ ಯೆಹೋವ ದೇವರ ಮೇಲೆ ಆತುಕೊಳ್ಳುವಂತೆ ಜನರನ್ನು ಮಾರ್ಗದರ್ಶಿಸುತ್ತದೆ. ಮುಂದೆ ಉತ್ತಮ ಭವಿಷ್ಯ ಸಿಗಲಿದೆ ಎಂದು ಮಾತುಕೊಡುತ್ತದೆ. ಇನ್ನೊಂದು ಕಡೆ ದೇವರೇ ಇಲ್ಲ ಅಂತ ಹೇಳುವವರು ಪ್ರಕೃತಿಯನ್ನೇ ದೇವರನ್ನಾಗಿ ಮಾಡಿಕೊಂಡಿದ್ದಾರೆ. ಇನ್ನು ಕೆಲವರು ಮನುಷ್ಯರಿಂದಲೇ ಒಳ್ಳೇ ಭವಿಷ್ಯ ತರಲು ಸಾಧ್ಯ ಎಂದು ಹೇಳುತ್ತಾರೆ. ಆದರೆ ಇಲ್ಲಿಯ ವರೆಗೂ ಮಾನವರು ಮಾಡಿರುವ ವಿಷಯಗಳನ್ನು ನೋಡುವಾಗ ಈ ಲೋಕದ ಸಮಸ್ಯೆಗಳನ್ನು ಪರಿಹರಿಸಲು ಅವರಿಂದ ಸಾಧ್ಯವಾಗಿಲ್ಲ ಎಂದು ಗೊತ್ತಾಗುತ್ತದೆ.—ಕೀರ್ತ. 146:3, 4.

ನಮ್ಮ ನಂಬಿಕೆಯನ್ನು ಬೇರೆಯವರಿಗೆ ಹೇಗೆ ವಿವರಿಸಬಹುದು?

12, 13. ಸೃಷ್ಟಿ ಅಥವಾ ಬೈಬಲಿನ ಬಗ್ಗೆ ನಾವು ಹೇಗೆ ಬೇರೆಯವರೊಟ್ಟಿಗೆ ಮಾತಾಡಬಹುದು?

12 ಸೃಷ್ಟಿಯ ಬಗ್ಗೆ ಅಥವಾ ಬೈಬಲಿನ ಬಗ್ಗೆ ಬೇರೆಯವರೊಟ್ಟಿಗೆ ಮಾತಾಡುವಾಗ ಮೊದಲು ಅವರ ನಂಬಿಕೆ ಏನೆಂದು ತಿಳಿದುಕೊಳ್ಳಿ. ವಿಕಾಸವಾದದಲ್ಲಿ ನಂಬುವ ಕೆಲವರು ದೇವರಿದ್ದಾನೆ ಅಂತ ಸಹ ನಂಬುತ್ತಾರೆ ಎನ್ನುವುದನ್ನು ಮರೆಯಬೇಡಿ. ಎಲ್ಲ ಜೀವಿಗಳನ್ನು ಸೃಷ್ಟಿಮಾಡಲು ದೇವರು ವಿಕಾಸವಾದವನ್ನು ಉಪಯೋಗಿಸಿದನೆಂದು ಅವರು ಹೇಳುತ್ತಾರೆ. ವಿಕಾಸವಾದವನ್ನು ಶಾಲೆಯಲ್ಲಿ ಕಲಿಸುವುದರಿಂದ ಅದು ನಿಜವಾಗಿರಬೇಕೆಂದು ಇನ್ನು ಕೆಲವರು ನಂಬುತ್ತಾರೆ. ಮತ್ತೆ ಕೆಲವರು ಧಾರ್ಮಿಕ ವಿಷಯಗಳಿಂದ ಬೇಸತ್ತು ದೇವರ ಮೇಲಿನ ನಂಬಿಕೆಯನ್ನು ಕಳೆದುಕೊಂಡಿರುತ್ತಾರೆ. ಹಾಗಾಗಿ ಮೊದಲಿಗೆ ನೀವು ಮಾಡಬೇಕಾದ ವಿಷಯವೇನೆಂದರೆ ಒಬ್ಬ ವ್ಯಕ್ತಿ ಏನನ್ನು ನಂಬುತ್ತಾನೆ ಮತ್ತು ಯಾಕೆ ನಂಬುತ್ತಾನೆ ಎಂದು ಆತನನ್ನೇ ಕೇಳಿ. ನಂತರ ಅವನು ಹೇಳುವುದನ್ನು ಗಮನವಿಟ್ಟು ಕೇಳಿಸಿಕೊಳ್ಳಿ. ಹಾಗೆ ಮಾಡಿದರೆ ನಿಮಗೂ ಅವನು ಕಿವಿಗೊಡಬಹುದು.—ತೀತ 3:2.

13ಸೃಷ್ಟಿಕರ್ತನಿದ್ದಾನೆ ಎಂದು ನಂಬಿದ್ದೀರಲ್ಲ ಅದು ನಿಮ್ಮ ಮೂರ್ಖತನ!’ ಎಂದು ಯಾರಾದರು ನಿಮಗೆ ಹೇಳಿದರೆ ಅವರಿಗೆ ಹೇಗೆ ಉತ್ತರಕೊಡುತ್ತೀರಿ? ಅಂಥ ಸಮಯದಲ್ಲಿ ಗೌರವದಿಂದ ಅವರನ್ನು ಹೀಗೆ ಕೇಳಿ: ‘ಒಬ್ಬ ಸೃಷ್ಟಿಕರ್ತನಿಲ್ಲದೆ ಜೀವ ಹೇಗೆ ಆರಂಭವಾಗಿರಬಹುದು? ಒಂದುವೇಳೆ ಜೀವ ವಿಕಾಸವಾಗಿರುವುದಾದರೆ ಮೊದಲ ಜೀವಿ ಅದರದ್ದೇ ಆದ ಇನ್ನು ಕೆಲವು ಜೀವಿಗಳನ್ನು ಉತ್ಪತ್ತಿ ಮಾಡಲು ಯೋಗ್ಯವಾಗಿರಬೇಕಲ್ವಾ?’ ಇದರ ಬಗ್ಗೆ ಒಬ್ಬ ರಾಸಯನಶಾಸ್ತ್ರದ ಪ್ರೊಫೆಸರ್‌ ಹೀಗೆ ಹೇಳಿದರು: “ಒಂದು ಜೀವಿ ತನ್ನಿಂದ ಇನ್ನೊಂದು ಜೀವಿಯನ್ನು ಉತ್ಪತ್ತಿ ಮಾಡಬೇಕೆಂದರೆ ಆ ಜೀವಿಯಲ್ಲಿ ಈ ಎಲ್ಲಾ ಸಾಮರ್ಥ್ಯಗಳಿರಬೇಕು: (1) ಸಂರಕ್ಷಣೆ ನೀಡುವಂಥ ಚರ್ಮ (2) ಶಕ್ತಿಯನ್ನು ಪಡೆದು ಅದನ್ನು ಉಪಯೋಗಿಸುವುದು (3) ತನ್ನ ಆಕಾರ ಮತ್ತು ಬೆಳವಣಿಗೆಯ ಬಗ್ಗೆ ಮಾಹಿತಿಯನ್ನು ಕಾಪಾಡಿಕೊಳ್ಳುವುದು (4) ಆ ಮಾಹಿತಿಯನ್ನು ಬಳಸಿ ಅದರ ನಕಲನ್ನು ಮಾಡುವುದು. ಹೀಗೆ ಒಂದು ಸರಳ ಜೀವಿ ಉತ್ಪತ್ತಿಯಾಗಬೇಕಾದರೂ ಇಷ್ಟೆಲ್ಲ ಕ್ಲಿಷ್ಟಕರವಾದ ಕ್ರಿಯೆಗಳು ನಡೆಯಲೇಬೇಕು.”

14. ಸೃಷ್ಟಿಯ ಬಗ್ಗೆ ಚರ್ಚಿಸುವಾಗ ಯಾವ ಸರಳವಾದ ಉದಾಹರಣೆ ಕೊಟ್ಟು ಮಾತಾಡಬಹುದು?

14 ಸೃಷ್ಟಿಯ ಬಗ್ಗೆ ನೀವು ಇತರರೊಂದಿಗೆ ಮಾತಾಡುವಾಗ ಅಪೊಸ್ತಲ ಪೌಲನಂತೆ ಸರಳವಾದ ಉದಾಹರಣೆಗಳನ್ನು ಕೊಟ್ಟು ವಿವರಿಸಬಹುದು. ಅವನು ಬರೆದದ್ದು: “ಪ್ರತಿ ಮನೆಯನ್ನು ಯಾರೋ ಒಬ್ಬನು ಕಟ್ಟಿರುವನು; ಸಮಸ್ತವನ್ನು ಕಟ್ಟಿದಾತನು ದೇವರೇ.” (ಇಬ್ರಿ. 3:4) ಖಂಡಿತವಾಗಿ ಒಂದು ಮನೆಯನ್ನು ಯಾರಾದರೊಬ್ಬರು ವಿನ್ಯಾಸಿಸಿ ಕಟ್ಟಿರುತ್ತಾರೆ. ಮನೆಯನ್ನು ಕಟ್ಟುವುದಕ್ಕಿಂತ ಒಂದು ಜೀವಿಯನ್ನು ಸೃಷ್ಟಿಸುವುದು ಕಷ್ಟ. ಅಂದಮೇಲೆ ಅದಕ್ಕೊಂದು ರೂಪಕೊಟ್ಟು ಸೃಷ್ಟಿಮಾಡಿರುವವನೊಬ್ಬ ಇರಲೇಬೇಕು. ಇದನ್ನು ವಿವರಿಸಲು ನೀವು ಕೆಲವು ಬೈಬಲ್‌ ಆಧಾರಿತ ಪ್ರಕಾಶನಗಳನ್ನು ಸಹ ಉಪಯೋಗಿಸಬಹುದು. ಸಹೋದರಿಯೊಬ್ಬಳು ದೇವರು ಇಲ್ಲ ಎಂದು ನಂಬುತ್ತಿದ್ದ ಒಬ್ಬ ವ್ಯಕ್ತಿಗೆ ಈಗಾಗಲೇ ತಿಳಿಸಲಾದ ಎರಡು ಕಿರುಹೊತ್ತಗೆಗಳನ್ನು ಕೊಟ್ಟು ಸೃಷ್ಟಿಯ ಬಗ್ಗೆ ಮಾತಾಡಿದಳು. ಒಂದು ವಾರದ ನಂತರ ಅವನಂದದ್ದು: “ಈಗ ನಾನು ದೇವರಿದ್ದಾನೆ ಅಂತ ನಂಬುತ್ತೇನೆ.” ಮುಂದೆ ಅವನು ಬೈಬಲ್‌ ಕಲಿಯಲು ಶುರುಮಾಡಿದನು ಮತ್ತು ಈಗ ಅವನು ನಮ್ಮ ಸಹೋದರನಾಗಿದ್ದಾನೆ.

15, 16. (ಎ) ಬೈಬಲ್‌ ದೇವರಿಂದಲೇ ಬಂದದ್ದು ಎಂದು ವಿವರಿಸುವ ಮುಂಚೆ ನಾವೇನು ಮಾಡಬೇಕು? (ಬಿ) ನಾವು ಏನನ್ನು ನೆನಪಿಡಬೇಕು?

15 ಬೈಬಲಿನ ಬಗ್ಗೆ ಯಾರಿಗಾದರೂ ಏನಾದರೂ ಸಂದೇಹ ಇದ್ದರೆ ಅವರೊಟ್ಟಿಗೆ ಹೇಗೆ ಮಾತಾಡಬಹುದು? ಈಗಾಗಲೇ ತಿಳಿಸಿದಂತೆ ಆ ವ್ಯಕ್ತಿ ಏನನ್ನು ನಂಬುತ್ತಾನೆಂದು ಕೇಳಿ. ಅವರಿಗೆ ಯಾವುದರಲ್ಲಿ ಆಸಕ್ತಿ ಇದೆ ಎಂದು ಸಹ ತಿಳಿದುಕೊಳ್ಳಿ. (ಜ್ಞಾನೋ. 18:13) ಆ ವ್ಯಕ್ತಿಗೆ ವಿಜ್ಞಾನದಲ್ಲಿ ಆಸಕ್ತಿ ಇದ್ದರೆ ಬೈಬಲ್‌ನಲ್ಲಿರುವ ಕೆಲವು ವೈಜ್ಞಾನಿಕ ವಿಷಯಗಳನ್ನು ತೋರಿಸಿ. ಅವೆಷ್ಟು ನಿಖರವಾಗಿವೆ ಎಂದು ತಿಳಿಸಿ. ಅವರಿಗೆ ಇತಿಹಾಸದಲ್ಲಿ ಆಸಕ್ತಿ ಇದ್ದರೆ, ಇತಿಹಾಸದ ಪುಸ್ತಕಗಳಲ್ಲಿ ಹೇಳಿರುವ ಒಂದು ಘಟನೆಯ ಬಗ್ಗೆ ಹೇಳಿ ಮತ್ತು ಅದೇ ಘಟನೆಯನ್ನು ಎಷ್ಟೋ ಮುಂಚೆ ಬೈಬಲಿನಲ್ಲಿ ಮುಂತಿಳಿಸಲಾಗಿತ್ತು ಎಂದು ತೋರಿಸಿ. ಇನ್ನು ಕೆಲವರಿಗೆ ತಮ್ಮ ಜೀವನದಲ್ಲಿ ಉಪಯುಕ್ತವಾಗುವ ವಿಷಯಗಳ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ಇರುತ್ತದೆ. ಅಂಥವರಿಗೆ ಪರ್ವತ ಪ್ರಸಂಗದಲ್ಲಿರುವಂಥ ಸಲಹೆಗಳನ್ನು ತೋರಿಸಬಹುದು.

16 ನೆನಪಿಡಿ ಜನರೊಟ್ಟಿಗೆ ಜಗಳವಾಡುವುದು ನಮ್ಮ ಆಸೆಯಲ್ಲ. ಅವರು ನಮ್ಮ ಜೊತೆ ಮಾತಾಡಬೇಕು ಮತ್ತು ಬೈಬಲ್‌ ಬಗ್ಗೆ ಕಲಿಯಬೇಕು ಎನ್ನುವುದೇ ನಮ್ಮ ಆಸೆ. ಹಾಗಾಗಿ ಗೌರವದಿಂದ ಪ್ರಶ್ನೆಗಳನ್ನು ಕೇಳಿ ಮತ್ತು ಅವರು ಹೇಳುವ ವಿಷಯಕ್ಕೆ ಗಮನಕೊಡಿ. ನಿಮ್ಮ ನಂಬಿಕೆಯ ಬಗ್ಗೆ ಬೇರೆಯವರೊಟ್ಟಿಗೆ ಹಂಚಿಕೊಳ್ಳುವಾಗ ವಿನಯತೆಯಿಂದ ಮಾತಾಡಿ. ನಿಮಗಿಂತ ದೊಡ್ಡವರ ಹತ್ತಿರ ಮಾತಾಡುವಾಗ ಇದು ಬಹಳ ಪ್ರಾಮುಖ್ಯ. ನೀವು ಬೇರೆಯವರಿಗೆ ಗೌರವ ಕೊಟ್ಟರೆ ಅವರೂ ನಿಮಗೆ ಗೌರವ ಕೊಡುತ್ತಾರೆ. ನೀವು ವಯಸ್ಸಿನಲ್ಲಿ ಚಿಕ್ಕವರಾಗಿದ್ದರೂ ನಿಮ್ಮ ನಂಬಿಕೆಯ ಬಗ್ಗೆ ಆಳವಾಗಿ ಯೋಚಿಸಿದ್ದೀರೆಂದು ತಿಳಿಯುವಾಗ ಅವರು ತುಂಬ ಆಶ್ಚರ್ಯಪಡುತ್ತಾರೆ. ಆದರೆ ಯಾರಾದರೂ ಜಗಳವಾಡುವ ಅಥವಾ ಗೇಲಿಮಾಡುವ ಉದ್ದೇಶದಿಂದ ನಿಮ್ಮ ಹತ್ತಿರ ಮಾತಾಡಿದರೆ ಅಂಥವರಿಗೆ ಉತ್ತರ ಕೊಡುವ ಅವಶ್ಯಕತೆ ನಿಮಗಿಲ್ಲ.—ಜ್ಞಾನೋ. 26:4.

ಬೈಬಲಿನಲ್ಲಿರುವ ಸತ್ಯಗಳನ್ನು ಹುಡುಕಿ ನಿಮ್ಮ ನಂಬಿಕೆಯನ್ನು ಬಲಪಡಿಸಿ

17, 18. (ಎ) ಬೈಬಲಿನ ಮೇಲೆ ನಮಗಿರುವ ನಂಬಿಕೆಯನ್ನು ಹೇಗೆ ಬಲಪಡಿಸಬಹುದು? (ಬಿ) ಮುಂದಿನ ಲೇಖನದಲ್ಲಿ ಏನನ್ನು ಪರಿಗಣಿಸಲಿದ್ದೇವೆ?

17 ಬೈಬಲಿನ ಮುಖ್ಯ ಬೋಧನೆಗಳು ಏನೆಂದು ನಮಗೆ ಗೊತ್ತಿರಬಹುದು ಆದರೆ ಬಲವಾದ ನಂಬಿಕೆ ಇರಬೇಕಾದರೆ ಇನ್ನು ಹೆಚ್ಚಿನ ವಿಷಯಗಳನ್ನು ತಿಳಿದುಕೊಳ್ಳಬೇಕು. ಅದರಲ್ಲಿ ನಿಕ್ಷೇಪಗಳಂತೆ ಅಡಗಿರುವ ಆಳವಾದ ಸತ್ಯಗಳನ್ನು ಹುಡುಕಬೇಕು. (ಜ್ಞಾನೋ. 2:3-6) ನಮ್ಮ ನಂಬಿಕೆಯನ್ನು ಬಲಪಡಿಸಿಕೊಳ್ಳಲು ಇರುವಂಥ ಒಂದು ಉತ್ತಮ ವಿಧಾನ ಬೈಬಲನ್ನು ಸಂಪೂರ್ಣವಾಗಿ ಓದಿ ಮುಗಿಸುವುದೇ ಆಗಿದೆ. ಇದನ್ನು ಒಂದೇ ವರ್ಷದಲ್ಲಿ ಮಾಡಿ ಮುಗಿಸಲು ಪ್ರಯತ್ನಿಸಬಹುದು. ಒಬ್ಬ ಸಂಚರಣ ಮೇಲ್ವಿಚಾರಕನು ಯುವಕನಾಗಿದ್ದಾಗ ಇಡೀ ಬೈಬಲನ್ನು ಓದಿ ಮುಗಿಸಿದರಿಂದ ಯೆಹೋವನಿಗೆ ಸಮೀಪವಾಗಲು ಸಹಾಯವಾಯಿತು. ಆತನು ಹೇಳುವುದು: “ನಾನು ಬೈಬಲನ್ನು ಪೂರ್ತಿಯಾಗಿ ಓದಿ ಮುಗಿಸಿದಾಗ ಅದು ದೇವರಿಂದಲೇ ಬಂದದ್ದಾಗಿದೆ ಎಂದು ಮನವರಿಕೆಯಾಯಿತು. ಅಲ್ಲದೆ ನಾನು ಚಿಕ್ಕವನಾಗಿದ್ದಾಗ ಕಲಿತ ಬೈಬಲ್‌ ಕಥೆಗಳು ಆಗ ನನಗೆ ಚೆನ್ನಾಗಿ ಅರ್ಥವಾದವು.” ನೀವು ಬೈಬಲಿನಿಂದ ಓದಿದ ವಿಷಯಗಳನ್ನು ಅರ್ಥಮಾಡಿಕೊಳ್ಳಲು ನಿಮ್ಮ ಭಾಷೆಯಲ್ಲಿರುವ ಸಂಶೋಧನಾ ಸಾಧನಗಳನ್ನು ಉಪಯೋಗಿಸಿ. ನಿಮಗೆ ವಾಚ್‌ಟವರ್‌ ಲೈಬ್ರರಿ, ವಾಚ್‌ಟವರ್‌ ಆನ್‌ಲೈನ್‌ ಲೈಬ್ರರಿ, ವಾಚ್‌ಟವರ್‌ ಪಬ್ಲಿಕೇಷನ್‌ ಇಂಡೆಕ್ಸ್‌, ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ ಲಭ್ಯವಿರಬಹುದು.

18 ಹೆತ್ತವರೇ, ಬೇರೆಲ್ಲರಿಗಿಂತಲೂ ಹೆಚ್ಚಾಗಿ ನೀವು ನಿಮ್ಮ ಮಕ್ಕಳಿಗೆ ಯೆಹೋವನ ಬಗ್ಗೆ ಕಲಿಸಬಹುದು. ಹಾಗಾದರೆ ಯೆಹೋವನಲ್ಲಿ ಬಲವಾದ ನಂಬಿಕೆಯಿಡಲು ನೀವು ಅವರಿಗೆ ಹೇಗೆ ಸಹಾಯಮಾಡಬಹುದು? ಬನ್ನಿ ಹೇಗೆಂದು ಮುಂದಿನ ಲೇಖನದಲ್ಲಿ ಚರ್ಚಿಸೋಣ.