ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 19

ಗೀತೆ 11 ಸೃಷ್ಟಿ ಸಲ್ಲಿಸುತ್ತೆ ಸ್ತುತಿ

ದೇವದೂತರಿಂದ ನಾವೇನು ಕಲಿಬಹುದು?

ದೇವದೂತರಿಂದ ನಾವೇನು ಕಲಿಬಹುದು?

“ದೇವದೂತರೇ, ನೀವೆಲ್ಲ ಯೆಹೋವನನ್ನ ಹೊಗಳಿ.”ಕೀರ್ತ. 103:20.

ಈ ಲೇಖನದಲ್ಲಿ ಏನಿದೆ?

ಯೆಹೋವನಿಗೆ ನಿಯತ್ತಾಗಿರೋ ದೇವದೂತರಿಂದ ನಾವೇನು ಕಲಿಬಹುದು ಅಂತ ನೋಡೋಣ.

1-2. (ಎ) ದೇವದೂತರಿಗೂ ನಮಗೂ ಯಾವೆಲ್ಲ ವ್ಯತ್ಯಾಸ ಇದೆ? (ಬಿ) ನಾವೂ ದೇವದೂತರೂ ಹೇಗೆ ಒಂದೇ ತರ ಇದ್ದೀವಿ?

 ಯೆಹೋವ ತನ್ನ ಕುಟುಂಬಕ್ಕೆ ಈ ಲೋಕದ ಮೂಲೆ ಮೂಲೆಯಲ್ಲಿರೋ ಲಕ್ಷಾಂತರ ಸಹೋದರ ಸಹೋದರಿಯರನ್ನ ಸೇರಿಸ್ಕೊಂಡಿದ್ದಾನೆ. ಈ ಕುಟುಂಬದಲ್ಲಿ ನಾವಷ್ಟೇ ಇರೋದಾ? ಇಲ್ಲ. ಸ್ವರ್ಗದಲ್ಲಿರೋ ಕೋಟ್ಯಾನುಕೋಟಿ ದೇವದೂತರೂ ಇದ್ದಾರೆ. (ದಾನಿ. 7:9, 10) ಆದ್ರೆ ಈ ದೇವದೂತರಿಗೂ ನಮಗೂ ತುಂಬಾನೇ ವ್ಯತ್ಯಾಸ ಇದೆ. ಅವರು ನಮಗಿಂತ ಎಷ್ಟೋ ಮುಂಚೆ ಸೃಷ್ಟಿ ಆದ್ರು. (ಯೋಬ 38:4, 7) ಅವ್ರಿಗೆ ನಮಗಿಂತ ತುಂಬ ಶಕ್ತಿ ಇದೆ, ನಮಗಿಂತ ತುಂಬ ಪವಿತ್ರ ಆಗಿದ್ದಾರೆ ಮತ್ತು ಪ್ರತಿಯೊಂದು ವಿಷ್ಯದಲ್ಲಿ ಯೆಹೋವನ ಮಾತು ಕೇಳ್ತಾರೆ. ಮನುಷ್ಯರಾದ ನಾವು ಅಪರಿಪೂರ್ಣರಾಗಿರೋದ್ರಿಂದ ಅವ್ರ ತರ ಇರೋಕೆ ಆಗಲ್ಲ.—ಲೂಕ 9:26.

2 ಆದ್ರೆ ಎಷ್ಟೋ ವಿಷ್ಯಗಳಲ್ಲಿ ನಾವೂ ಅವರೂ ಒಂದೇ ತರ ಇದ್ದೀವಿ. ಉದಾಹರಣೆಗೆ, ದೇವದೂತರ ತರ ನಾವು ಯೆಹೋವನ ಗುಣಗಳನ್ನ ತೋರಿಸ್ತೀವಿ. ಅವ್ರ ತರ ನಮಗೂ ಆಯ್ಕೆ ಮತ್ತು ತೀರ್ಮಾನ ಮಾಡೋ ಸ್ವಾತಂತ್ರ್ಯ ಇದೆ. ಅವ್ರಿಗಿರೋ ತರ ನಮಗೂ ಬೇರೆಬೇರೆ ಹೆಸ್ರಿದೆ, ಬೇರೆಬೇರೆ ವ್ಯಕ್ತಿತ್ವ ಇದೆ ಮತ್ತು ಬೇರೆಬೇರೆ ಜವಾಬ್ದಾರಿಗಳಿವೆ. ಅಷ್ಟೇ ಅಲ್ಲ ದೇವದೂತರ ತರ ನಾವೂ ಯೆಹೋವನ ಬಗ್ಗೆ ಕಲಿಯೋಕೆ ಮತ್ತು ಆತನನ್ನ ಆರಾಧಿಸೋಕೆ ಇಷ್ಟಪಡ್ತೀವಿ.—1 ಪೇತ್ರ 1:12.

3. ದೇವದೂತರಿಂದ ನಾವೇನು ಕಲೀಬಹುದು?

3 ಎಷ್ಟೋ ವಿಷ್ಯಗಳಲ್ಲಿ ನಾವು ದೇವದೂತರ ತರ ಇರೋದ್ರಿಂದ ಅವ್ರಿಂದ ಪ್ರೋತ್ಸಾಹ ಪಡ್ಕೊಬಹುದು, ಅವ್ರಿಂದ ಒಳ್ಳೇ ಪಾಠಗಳನ್ನೂ ಕಲೀಬಹುದು. ಹಾಗಾಗಿ ಈ ಲೇಖನದಲ್ಲಿ ಅವ್ರ ತರಾನೇ ನಾವು ಹೇಗೆ ದೀನತೆ ತೋರಿಸಬಹುದು, ಜನ್ರನ್ನ ಪ್ರೀತಿಸಬಹುದು, ತಾಳ್ಮೆ ತೋರಿಸಬಹುದು ಮತ್ತು ಸಭೆಯನ್ನ ಶುದ್ಧವಾಗಿ ಇಡೋಕೆ ಏನೆಲ್ಲ ಮಾಡಬಹುದು ಅಂತ ನೋಡೋಣ.

ದೇವದೂತರು ದೀನತೆ ತೋರಿಸ್ತಾರೆ

4. (ಎ) ದೇವದೂತರು ಹೇಗೆ ದೀನತೆ ತೋರಿಸ್ತಾರೆ (ಬಿ) ಯಾಕೆ ದೀನತೆ ತೋರಿಸ್ತಾರೆ? (ಕೀರ್ತನೆ 89:7)

4 ನಿಯತ್ತಾಗಿರೋ ಈ ದೇವದೂತರಿಗೆ ತುಂಬ ದೀನತೆ ಇದೆ. ಅವ್ರಿಗೆ ತುಂಬ ಅನುಭವ ಇದ್ರೂ ಶಕ್ತಿ ಇದ್ರೂ ಬುದ್ಧಿವಂತರಾಗಿದ್ರೂ ಯೆಹೋವ ಹೇಳಿದ್ದನ್ನೆಲ್ಲ ಅವರು ಕೇಳ್ತಾರೆ. (ಕೀರ್ತ. 103:20) ಅವರು ಯೆಹೋವ ಕೊಟ್ಟ ಕೆಲಸನ ಮಾಡಿ ಮುಗಿಸ್ತಾರೆ. ಅದ್ರ ಬಗ್ಗೆ ಅವರು ಕೊಚ್ಕೊಳ್ಳೋಕೆ ಹೋಗಲ್ಲ. ಮನುಷ್ಯರಿಗೆ ಇಲ್ಲದಿರೋ ಶಕ್ತಿ ಅವ್ರಿಗೆ ಇದ್ರೂ ಅದನ್ನ ಅವರು ತೋರಿಸ್ಕೊಳ್ಳೋಕೆ ಹೋಗಲ್ಲ. ಅವ್ರನ್ನ ಬೇರೆಯವರು ಗಮನಿಸದೇ ಇದ್ರೂ ಅವ್ರ ಹೆಸ್ರು ಗೊತ್ತಾಗದೇ ಇದ್ರೂ ಯೆಹೋವ ಕೊಟ್ಟ ಕೆಲಸನ ಖುಷಿಖುಷಿಯಾಗಿ ಮಾಡ್ತಾರೆ. a (ಆದಿ. 32:24, 29; 2 ಅರ. 19:35) ಅವರು ಯೆಹೋವನಿಗೆ ಸಿಗಬೇಕಾದ ಮಹಿಮೆಯಲ್ಲಿ ಸ್ವಲ್ಪನೂ ತಮಗೆ ಸಿಗಬೇಕು ಅಂತ ಇಷ್ಟಪಡಲ್ಲ. ಯಾಕೆ ಈ ದೇವದೂತರು ಇಷ್ಟು ದೀನತೆ ತೋರಿಸ್ತಾರೆ? ಯಾಕಂದ್ರೆ ಯೆಹೋವನ ಮೇಲೆ ಅವ್ರಿಗೆ ತುಂಬ ಪ್ರೀತಿ ಮತ್ತು ಗೌರವ ಇದೆ.ಕೀರ್ತನೆ 89:7 ಓದಿ.

5. ಒಬ್ಬ ದೇವದೂತ ಅಪೊಸ್ತಲ ಯೋಹಾನನನ್ನ ತಿದ್ದುವಾಗ ಹೇಗೆ ದೀನತೆ ತೋರಿಸಿದ? (ಚಿತ್ರ ನೋಡಿ.)

5 ದೇವದೂತರಿಗೆ ಎಷ್ಟು ದೀನತೆ ಇದೆ ಅಂತ ಅರ್ಥ ಮಾಡ್ಕೊಳ್ಳೋಕೆ ಒಂದು ಉದಾಹರಣೆ ನೋಡಿ. ಕ್ರಿಸ್ತಶಕ 96ರಲ್ಲಿ ಒಬ್ಬ ದೇವದೂತ ಯೋಹಾನನ ಹತ್ರ ಬರ್ತಾನೆ. ಇವನ ಹೆಸರೇನು ಅಂತ ಬೈಬಲಲ್ಲಿ ಹೇಳಿಲ್ಲ. ಈ ದೇವದೂತ ಯೋಹಾನನಿಗೆ ಅದ್ಭುತವಾದ ದರ್ಶನ ತೋರಿಸ್ತಾನೆ. (ಪ್ರಕ. 1:1) ಅದನ್ನ ನೋಡಿದಾಗ ಯೋಹಾನ ಏನು ಮಾಡಿದ? ಆ ದೇವದೂತನನ್ನ ಆರಾಧಿಸೋಕೆ ಕಾಲಿಗೆ ಬಿದ್ದುಬಿಟ್ಟ. ಆಗ ದೇವದೂತ ತಕ್ಷಣ “ಏನು ಮಾಡ್ತಾ ಇದ್ದೀಯ? ಹಾಗೆ ಮಾಡಬೇಡ! ನಾನು ನಿನ್ನ ತರಾನೇ ಒಬ್ಬ ಸೇವಕ ಅಷ್ಟೆ . . . ದೇವರನ್ನ ಆರಾಧನೆ ಮಾಡು” ಅಂತ ಹೇಳಿದ. (ಪ್ರಕ. 19:10) ಎಂಥ ದೀನತೆ ಅಲ್ವಾ! ಯೆಹೋವ ದೇವರಿಗೆ ಹೋಗಬೇಕಾದ ಆರಾಧನೆಯನ್ನ ಅವನು ತಗೊಳ್ಳೋಕೆ ಹೋಗ್ಲಿಲ್ಲ. ಅದಕ್ಕೇ ಯೋಹಾನನ ಗಮನವನ್ನ ಯೆಹೋವ ದೇವರ ಕಡೆಗೆ ತಿರುಗಿಸಿದ. ಅಷ್ಟೇ ಅಲ್ಲ ಯೋಹಾನ ತನ್ನನ್ನ ಆರಾಧಿಸೋಕೆ ಬಂದಿದ್ದನ್ನ ನೋಡಿ ದೇವದೂತ ಉಬ್ಬಿಹೋಗಲಿಲ್ಲ. ಅವನು ಯೋಹಾನನಿಗಿಂತ ಎಷ್ಟೋ ಹೆಚ್ಚು ವರ್ಷಗಳಿಂದ ಯೆಹೋವನನ್ನ ಆರಾಧಿಸ್ತಾ ಇದ್ರೂ, ಅವನಿಗಿಂತ ಶಕ್ತಿಶಾಲಿಯಾಗಿದ್ರೂ ತಾನು ಅವನ ತರಾನೇ ಒಬ್ಬ ಸೇವಕ ಅಂತ ಹೇಳ್ಕೊಂಡ. ಅಷ್ಟೇ ಅಲ್ಲ ಈ ದೇವದೂತ ಯೋಹಾನನನ್ನ ತಿದ್ದಿದ್ದು ನಿಜ. ಆದ್ರೆ ವಯಸ್ಸಾದ ಆ ಅಪೊಸ್ತಲನನ್ನ ಬಯ್ಯೋಕೆ ಹೋಗ್ಲಿಲ್ಲ ಮತ್ತು ಅವನ ಜೊತೆ ಒರಟಾಗಿನೂ ನಡ್ಕೊಳ್ಳಲಿಲ್ಲ. ಆ ದರ್ಶನ ನೋಡಿ ಯೋಹಾನನಿಗೆ ಏನು ಮಾಡಬೇಕು ಅಂತ ಗೊತ್ತಾಗದೇ ಹಾಗೆ ಮಾಡಿದ ಅಂತ ಅವನು ಅರ್ಥಮಾಡ್ಕೊಂಡಿರಬೇಕು.

ದೇವದೂತ ಯೋಹಾನನನ್ನ ತಿದ್ದುವಾಗ ಮತ್ತು ಅವನ ಜೊತೆ ಮಾತಾಡುವಾಗ ದೀನತೆ ತೋರಿಸಿದ (ಪ್ಯಾರ 5 ನೋಡಿ)


6. ದೇವದೂತರ ತರ ನಾವು ಹೇಗೆ ದೀನತೆ ತೋರಿಸಬಹುದು?

6 ದೇವದೂತರ ತರ ನಾವು ಹೇಗೆ ದೀನತೆ ತೋರಿಸಬಹುದು? ನಮಗೆ ಯಾವುದಾದ್ರೂ ನೇಮಕ ಸಿಕ್ಕಿದ್ರೆ ಅದ್ರ ಬಗ್ಗೆ ಕೊಚ್ಕೊಬಾರದು. ‘ಎಲ್ಲಾ ನಾನೇ ಮಾಡಿದ್ದು, ನನ್ನಿಂದಾನೇ ಆಯ್ತು’ ಅಂತ ಹೇಳ್ಕೊಬಾರದು. (1 ಕೊರಿಂ. 4:7) ನಾವು ಬೇರೆಯವ್ರಿಗಿಂತ ಜಾಸ್ತಿ ವರ್ಷಗಳಿಂದ ಯೆಹೋವನ ಸೇವೆ ಮಾಡ್ತಾ ಇರೋದಾದ್ರೆ ಅಥವಾ ಬೇರೆಯವ್ರಿಗೆ ಸಿಗದೇ ಇರೋ ಸುಯೋಗ ನಮಗೆ ಸಿಕ್ಕಿರೋದಾದ್ರೆ ನಾವೇ ಶ್ರೇಷ್ಠರು ಅಂತ ಅಂದ್ಕೊಬಾರದು. ನೆನಪಿಡಿ, ಜವಾಬ್ದಾರಿ ಹೆಚ್ಚಾದಷ್ಟು ದೀನತೆನೂ ಹೆಚ್ಚಾಗಬೇಕು. (ಲೂಕ 9:48) ಎಲ್ರಿಗಿಂತ ನಾವೇ ದೊಡ್ಡವರು ಅಂತ ತೋರಿಸ್ಕೊಳ್ಳೋ ಬದ್ಲು ದೇವದೂತರ ತರ ಬೇರೆಯವ್ರ ಸೇವೆ ಮಾಡಬೇಕು.

7. ಬೇರೆಯವ್ರನ್ನ ತಿದ್ದುವಾಗ ನಾವು ಹೇಗೆ ದೀನತೆ ತೋರಿಸಬೇಕು?

7 ಸಹೋದರ ಸಹೋದರಿಯರನ್ನ, ಮಕ್ಕಳನ್ನ ಅಥವಾ ಬೇರೆ ಯಾರನ್ನೇ ತಿದ್ದುವಾಗ್ಲೂ ನಾವು ದೀನತೆ ತೋರಿಸಬೇಕು. ಕೆಲವೊಮ್ಮೆ ನಾವು ನೇರವಾಗಿ ಅವ್ರನ್ನ ತಿದ್ದಬೇಕಾಗುತ್ತೆ ನಿಜ. ಆಗ ದೇವದೂತ ಯೋಹಾನನನ್ನ ಹೇಗೆ ತಿದ್ದಿದ್ನೋ ಅದೇ ತರ ನಾವು ಪ್ರೀತಿಯಿಂದ ತಿದ್ದಬೇಕು. ಯಾವತ್ತೂ ಅವ್ರ ಮನಸ್ಸು ಕುಗ್ಗಿ ಹೋಗೋ ತರ ನಾವು ಮಾತಾಡಬಾರದು. ನಾವು ಬೇರೆಯವ್ರನ್ನ ಶ್ರೇಷ್ಠರಾಗಿ ನೋಡಿದ್ರೆ ನಮಗೆ ಅನಿಸಿದ್ದನ್ನ ಹೇಳಲ್ಲ, ಬೈಬಲಿಂದ ಸಲಹೆ ಕೊಡ್ತೀವಿ. ಅಷ್ಟೇ ಅಲ್ಲ ಗೌರವದಿಂದ, ಅವ್ರನ್ನ ಅರ್ಥಮಾಡ್ಕೊಂಡು ಸಲಹೆ ಕೊಡ್ತೀವಿ.—ಕೊಲೊ. 4:6.

ದೇವದೂತರು ಮನುಷ್ಯರನ್ನ ತುಂಬ ಪ್ರೀತಿಸ್ತಾರೆ

8. (ಎ) ಲೂಕ 15:10ರಿಂದ ದೇವದೂತರು ನಮ್ಮನ್ನ ತುಂಬ ಪ್ರೀತಿಸ್ತಾರೆ ಅಂತ ಹೇಗೆ ಗೊತ್ತಾಗುತ್ತೆ? (ಬಿ) ಸಿಹಿಸುದ್ದಿ ಸಾರುವಾಗ ದೇವದೂತರು ಹೇಗೆ ಸಹಾಯ ಮಾಡ್ತಾರೆ? ( ಚಿತ್ರ ನೋಡಿ.)

8 ‘ಮನುಷ್ಯರು ನಮಗಿಂತ ಕಮ್ಮಿ, ಅವ್ರಿಗೆ ಏನಾದ್ರೆ ನಮಗೇನಂತೆ? ನಾವ್ಯಾಕೆ ತಲೆ ಕೆಡಿಸ್ಕೊಬೇಕು?’ ಅಂತ ದೇವದೂತರು ಯಾವತ್ತೂ ಯೋಚಿಸಲ್ಲ. ಅವ್ರಿಗೆ ನಾವಂದ್ರೆ ತುಂಬ ಇಷ್ಟ. ಅದಕ್ಕೇ ತಪ್ಪು ಮಾಡಿದ ಒಬ್ಬ ವ್ಯಕ್ತಿ ತನ್ನ ತಪ್ಪನ್ನ ತಿದ್ಕೊಂಡು ಯೆಹೋವನ ಹತ್ರ ವಾಪಸ್‌ ಬಂದಾಗ ಅವರು ತುಂಬ ಖುಷಿಪಡ್ತಾರೆ. ಅಷ್ಟೇ ಅಲ್ಲ, ಒಬ್ಬ ವ್ಯಕ್ತಿ ಯೆಹೋವನ ಬಗ್ಗೆ ಕಲಿತು ಬದಲಾವಣೆ ಮಾಡ್ಕೊಂಡು ಯೆಹೋವನ ಸೇವೆ ಮಾಡುವಾಗ ಸಂತೋಷಪಡ್ತಾರೆ. (ಲೂಕ 15:10 ಓದಿ) ದೇವದೂತರು ಸಾರೋ ಕೆಲಸದಲ್ಲೂ ನಮಗೆ ಸಾಥ್‌ ಕೊಡ್ತಾರೆ. (ಪ್ರಕ. 14:6) ಹಾಗಂತ ಅವರು ನೇರವಾಗಿ ಹೋಗಿ ಸಾರಲ್ಲ. ಆದ್ರೆ ಯೆಹೋವ ದೇವರ ಬಗ್ಗೆ ಕಲಿಯೋಕೆ ಇಷ್ಟಪಡೋ ವ್ಯಕ್ತಿಗಳನ್ನ ಕಂಡುಹಿಡಿಯೋಕೆ ನಮಗೆ ಸಹಾಯ ಮಾಡ್ತಾರೆ. (ಅ. ಕಾ. 16:6, 7) ಪ್ರತಿಯೊಬ್ಬ ವ್ಯಕ್ತಿ ಹತ್ರ ಹೋಗೋಕೆ ನಮಗೆ ದೇವದೂತರೇ ಸಹಾಯ ಮಾಡ್ತಾರೆ ಅಂತ ಹೇಳಕ್ಕಾಗಲ್ಲ. ಯಾಕಂದ್ರೆ ಯೆಹೋವ ದೇವರು ನಮಗೆ ಬೇರೆ ಸಹಾಯನೂ ಅಂದ್ರೆ ಪವಿತ್ರಶಕ್ತಿಯ ಸಹಾಯನೂ ಕೊಡ್ತಾನೆ. ಆದ್ರೆ ನಮಗೆ ದೇವದೂತರ ಸಹಾಯನೂ ಹೆಚ್ಚಾಗಿ ಕೊಡ್ತಾನೆ. ಹಾಗಾಗಿ ನಾವು ಸೇವೆಗೆ ಹೋಗುವಾಗ ದೇವದೂತರು ನಮ್ಮ ಜೊತೆನೇ ಇದ್ದಾರೆ ಅನ್ನೋ ಧೈರ್ಯದಿಂದ ಸಿಹಿಸುದ್ದಿ ಸಾರೋಣ.—“ ಅವ್ರ ಪ್ರಾರ್ಥನೆಗಳಿಗೆ ಉತ್ರ ಸಿಕ್ತು” ಅನ್ನೋ ಚೌಕ ನೋಡಿ. b

ಒಂದು ದಂಪತಿ ಈಗಷ್ಟೇ ಸಾರ್ವಜನಿಕ ಸಾಕ್ಷಿಕಾರ್ಯ ಮುಗಿಸಿದ್ದಾರೆ. ಅವರು ಮನೆಗೆ ಹೋಗ್ತಿರುವಾಗ ಸಹೋದರಿ ಬೇಜಾರಲ್ಲಿರೋ ಒಬ್ಬ ಸ್ತ್ರೀಯನ್ನ ನೋಡ್ತಾರೆ. ಆ ಸ್ತ್ರೀಗೆ ಸಹಾಯ ಮಾಡೋಕೆ ದೇವದೂತರೇ ತನ್ನ ಗಮನ ಸೆಳೆದಿರಬಹುದು ಅಂತ ಸಹೋದರಿ ಅರ್ಥ ಮಾಡ್ಕೊಳ್ತಾರೆ. ಅದಕ್ಕೆ ಆ ಸ್ತ್ರೀ ಹತ್ರ ಹೋಗಿ ಅವಳಿಗೆ ಸಮಾಧಾನ ಆಗೋ ಹಾಗೆ ಮಾತಾಡಬೇಕು ಅಂದ್ಕೊಳ್ತಾರೆ. (ಪ್ಯಾರ 8 ನೋಡಿ)


9. ದೇವದೂತರ ತರ ನಾವು ಹೇಗೆ ಜನ್ರನ್ನ ಪ್ರೀತಿಸಬಹುದು?

9 ದೇವದೂತರ ತರ ನಾವು ಹೇಗೆ ಜನ್ರನ್ನ ಪ್ರೀತಿಸಬಹುದು? ಸಭೆಯಿಂದ ಹೊರಗೆ ಹೋದವರು ಪುನಸ್ಥಾಪನೆ ಆದಾಗ ನಾವೂ ದೇವದೂತರ ತರ ಖುಷಿಪಡಬೇಕು. ನಾವೇ ಮುಂದೆ ಹೋಗಿ ಅವ್ರ ಹತ್ರ ಪ್ರೀತಿಯಿಂದ ಮಾತಾಡಬೇಕು. ಯೆಹೋವನ ಮನೆಗೆ ವಾಪಸ್‌ ಬಂದಿದ್ದಕ್ಕೆ ನಮಗೆ ಎಷ್ಟು ಖುಷಿಯಾಗಿದೆ ಅಂತ ಅವ್ರ ಹತ್ರ ಹೇಳಬೇಕು. (ಲೂಕ 15:4-7; 2 ಕೊರಿಂ. 2:6-8) ನಾವು ದೇವದೂತರ ತರ ಸಾರೋ ಕೆಲಸನ ಜಾಸ್ತಿ ಮಾಡೋಕೂ ನಮ್ಮಿಂದಾದ ಎಲ್ಲ ಪ್ರಯತ್ನ ಮಾಡಬೇಕು. (ಪ್ರಸಂ. 11:6) ಅಷ್ಟೇ ಅಲ್ಲ ದೇವದೂತರು ನಮಗೆ ಹೇಗೆ ಸಹಾಯ ಮಾಡ್ತಾರೋ ಹಾಗೇ ನಾವು ಸಹೋದರ ಸಹೋದರಿಯರಿಗೆ ಸಿಹಿಸುದ್ದಿ ಸಾರೋಕೆ ಸಹಾಯ ಮಾಡಬೇಕು. ಇದನ್ನ ಹೇಗೆ ಮಾಡೋದು? ಉದಾಹರಣೆಗೆ, ಹೊಸ ಪ್ರಚಾರಕರಿಗೆ ಸಿಹಿಸುದ್ದಿ ಸಾರೋಕೆ ಕಷ್ಟ ಆದ್ರೆ ನಾನು ಅವ್ರಿಗೆ ಹೇಗೆ ಸಹಾಯ ಮಾಡಲಿ? ಅಥವಾ ವಯಸ್ಸಾಗಿರೋದ್ರಿಂದ, ಹುಷಾರು ಇಲ್ಲದೇ ಇರೋದ್ರಿಂದ ಹೊರಗಡೆ ಹೋಗಿ ಸೇವೆ ಮಾಡೋಕೆ ಆಗದೆ ಇರೋ ಸಹೋದರ ಸಹೋದರಿಯರಿಗೆ ನಾನು ಹೇಗೆ ಸಹಾಯ ಮಾಡಲಿ? ಅಂತ ಯೋಚಿಸಿ.

10. ಸಾರಾ ಅವ್ರ ಅನುಭವದಿಂದ ನಾವೇನು ಕಲಿತೀವಿ?

10 ನಮಗೆ ಮುಂಚಿನ ತರ ಸೇವೆ ಮಾಡೋಕೆ ಆಗಿಲ್ಲಾಂದ್ರೆ ಏನು ಮಾಡೋದು? ಆಗ್ಲೂ ಸಿಹಿಸುದ್ದಿ ಸಾರೋಕೆ ದೇವದೂತರು ನಮಗೆ ಸಹಾಯ ಮಾಡ್ತಾರೆ. ಭಾರತದಲ್ಲಿರೋ ಸಾರಾ c ಅನ್ನೋ ಸಹೋದರಿಯ ಅನುಭವ ನೋಡಿ. ಅವರು 20 ವರ್ಷ ಪಯನಿಯರ್‌ ಸೇವೆ ಮಾಡ್ಕೊಂಡು ಬಂದ್ರು. ಆಮೇಲೆ ಅವರು ಹುಷಾರಿಲ್ಲದೆ ಹಾಸಿಗೆ ಹಿಡಿದ್ರು. ಇದ್ರಿಂದ ಖುಷಿನೆಲ್ಲ ಕಳ್ಕೊಂಡುಬಿಟ್ರು. ಆದ್ರೆ ಅವರು ಪ್ರತಿದಿನ ಬೈಬಲ್‌ ಓದಿದ್ರಿಂದ ಮತ್ತು ಸಹೋದರ ಸಹೋದರಿಯರ ಸಹಾಯ ಪಡ್ಕೊಂಡಿದ್ರಿಂದ ಆ ಖುಷಿನ ಮತ್ತೆ ಪಡ್ಕೊಂಡ್ರು. ಈ ಪರಿಸ್ಥಿತಿಯಲ್ಲೂ ಹೇಗಾದ್ರೂ ಸಿಹಿಸುದ್ದಿ ಸಾರಬೇಕು ಅಂತ ಯೋಚ್ನೆ ಮಾಡಿದ್ರು. ಆದ್ರೆ ಪತ್ರದ ಮೂಲಕ ಸಿಹಿಸುದ್ದಿ ಸಾರಬೇಕಂದ್ರೆ ಅವ್ರಿಗೆ ಕೂತು ಬರಿಯೋಕೆ ಆಗ್ತಿರಲಿಲ್ಲ. ಅದಕ್ಕೇ ಫೋನಿಂದ ಸಿಹಿಸುದ್ದಿ ಸಾರಿದ್ರು. ಫೋನಿಂದ ಅವರು ಎಷ್ಟು ಚೆನ್ನಾಗಿ ಸೇವೆ ಮಾಡಿದ್ರು ಗೊತ್ತಾ? ಅವ್ರಿಗಿದ್ದ ಪುನರ್ಭೇಟಿಗಳನ್ನ ಮಾಡಿದ್ರು. ಸಹೋದರ ಸಹೋದರಿಯರು ಆಸಕ್ತಿ ತೋರಿಸಿದವ್ರ ನಂಬರನ್ನ ಕೊಟ್ಟಾಗ ಅವ್ರಿಗೂ ಫೋನ್‌ ಮಾಡಿದ್ರು. ಹೀಗೆ ಸೇವೆ ಮಾಡ್ತಾಮಾಡ್ತಾ ಕೆಲವೇ ತಿಂಗಳಲ್ಲಿ ಅವ್ರಿಗೆ 70 ಬೈಬಲ್‌ ಅಧ್ಯಯನ ಸಿಕ್ತು! ಎಲ್ಲಾನೂ ಅವ್ರಿಗೇ ಮಾಡೋಕೆ ಆಗದೆ ಇದ್ದಿದ್ರಿಂದ ಕೆಲವು ಬೈಬಲ್‌ ಅಧ್ಯಯನಗಳನ್ನ ಬೇರೆಯವ್ರಿಗೆ ಕೊಟ್ರು. ಅವ್ರಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಕೂಟಗಳಿಗೂ ಬರ್ತಿದ್ದಾರೆ. ಸಾರಾ ತರ ಇವತ್ತು ಎಷ್ಟೋ ಸಹೋದರ ಸಹೋದರಿಯರು ಕಷ್ಟ ಆದ್ರೂ ಸಿಹಿಸುದ್ದಿ ಸಾರೋಕೆ ತಮ್ಮಿಂದಾದ ಎಲ್ಲಾ ಪ್ರಯತ್ನ ಮಾಡ್ತಿದ್ದಾರೆ. ಅವ್ರ ಜೊತೆ ಕೆಲಸ ಮಾಡೋಕೆ ದೇವದೂತರಿಗೆ ಎಷ್ಟು ಸಂತೋಷ ಆಗ್ತಾ ಇರಬಹುದಲ್ವಾ!

ದೇವದೂತರು ತಾಳ್ಮೆಯಿಂದ ಕಾಯ್ತಿದ್ದಾರೆ

11. ನಿಯತ್ತಾಗಿರೋ ದೇವದೂತರು ಸಹಿಸ್ಕೊಳ್ಳೋದ್ರಲ್ಲಿ ನಮಗೆ ಹೇಗೆ ಒಳ್ಳೇ ಮಾದರಿ ಆಗಿದ್ದಾರೆ?

11 ನಿಯತ್ತಾಗಿರೋ ದೇವದೂತರು ಸಹಿಸ್ಕೊಳ್ಳೋದ್ರಲ್ಲೂ ನಮಗೆ ಒಳ್ಳೇ ಮಾದರಿ ಆಗಿದ್ದಾರೆ. ಎಷ್ಟೋ ವರ್ಷಗಳಿಂದ ಅವರು ಅನ್ಯಾಯ, ಕ್ರೂರತನ ನೋಡ್ತಾ ಬಂದಿದ್ದಾರೆ. ಒಂದು ಸಮಯದಲ್ಲಿ ಎಲ್ಲಾ ದೇವದೂತರು ಖುಷಿಖುಷಿಯಾಗಿ ಯೆಹೋವನನ್ನ ಆರಾಧನೆ ಮಾಡ್ತಿದ್ರು. ಆದ್ರೆ ಸ್ವಲ್ಪ ಸಮಯ ಆದ್ಮೇಲೆ ಸೈತಾನ ಮತ್ತು ಎಷ್ಟೋ ಕೆಟ್ಟ ದೇವದೂತರು ಯೆಹೋವನ ವಿರುದ್ಧನೇ ದಂಗೆ ಎದ್ರು. ಅದನ್ನ ಅವರು ಕಣ್ಣಾರೆ ನೋಡಿದ್ರು. (ಆದಿ. 3:1; 6:1, 2; ಯೂದ 6) ಒಮ್ಮೆ, ಒಬ್ಬ ಕೆಟ್ಟ ದೇವದೂತ ಒಳ್ಳೇ ದೇವದೂತನ ವಿರುದ್ಧ ಜಗಳಕ್ಕೆ ನಿಂತ. ಅವನು ತುಂಬ ದಿನಗಳ ತನಕ ಒಳ್ಳೇ ದೇವದೂತನ ಜೊತೆ ಹೋರಾಡ್ತಾ ಇದ್ದ ಅಂತ ಬೈಬಲ್‌ ಹೇಳುತ್ತೆ. (ದಾನಿ. 10:13) ಅಷ್ಟೇ ಅಲ್ಲ, ಮನುಷ್ಯರು ಸೃಷ್ಟಿ ಆದಾಗಿಂದ ಇಲ್ಲಿ ತನಕ ಸ್ವಲ್ಪ ಜನ ಮಾತ್ರನೇ ಯೆಹೋವನನ್ನ ಆರಾಧಿಸ್ತಾ ಇರೋದು. ಇಂಥ ನೋವಾಗೋ ವಿಷ್ಯಗಳನ್ನ ನೋಡ್ತಾ ಬಂದ್ರೂ ಅವರು ಯೆಹೋವನ ಸೇವೆ ಮಾಡೋದ್ರಲ್ಲಿ ಖುಷಿ ಕಳ್ಕೊಂಡಿಲ್ಲ. ಹುರುಪಿಂದ ಆತನ ಸೇವೆ ಮಾಡ್ತಿದ್ದಾರೆ. ಯಾಕಂದ್ರೆ ಸರಿಯಾದ ಸಮಯ ಬಂದಾಗ ಯೆಹೋವ ಈ ಅನ್ಯಾಯ ಅಕ್ರಮನೆಲ್ಲಾ ತೆಗೆದುಹಾಕ್ತಾನೆ ಅನ್ನೋ ನಂಬಿಕೆ ಅವ್ರಿಗಿದೆ.

12. ಸಹಿಸ್ಕೊಳ್ಳೋಕೆ ನಾವೇನು ಮಾಡಬೇಕು?

12 ಕಷ್ಟಗಳು ಬಂದಾಗ ನಾವು ಹೇಗೆ ದೇವದೂತರ ತರ ತಾಳ್ಕೊಬಹುದು? ನಾವೂ ಅವ್ರ ತರ ಅನ್ಯಾಯ ನೋಡಿರಬಹುದು, ನಮಗೂ ಹಿಂಸೆ ಬಂದಿರಬಹುದು. ಅವ್ರ ತರ ನಮಗೂ ದೇವರು ಇದನ್ನೆಲ್ಲ ಬೇಗ ಸರಿಮಾಡ್ತಾನೆ ಅನ್ನೋ ನಂಬಿಕೆ ಇದೆ. ಹಾಗಾಗಿ ಆ ದೇವದೂತರ ತರ ನಾವೂ “ಒಳ್ಳೇದು ಮಾಡೋದನ್ನ ಬಿಡೋದು ಬೇಡ.” (ಗಲಾ. 6:9) ಕಷ್ಟಗಳನ್ನ ಸಹಿಸ್ಕೊಳ್ಳೋಕೆ ಯೆಹೋವ ಸಹಾಯ ಮಾಡ್ತೀನಿ ಅಂತ ಮಾತು ಕೊಟ್ಟಿದ್ದಾನೆ. (1 ಕೊರಿಂ. 10:13) ಅದಕ್ಕೇ ಪವಿತ್ರಶಕ್ತಿಗಾಗಿ ಯೆಹೋವನ ಹತ್ರ ಪ್ರಾರ್ಥನೆ ಮಾಡೋಣ. ಆಗ ನಮಗೆ ತಾಳ್ಕೊಳ್ಳೋಕೆ ಆಗುತ್ತೆ ಮತ್ತು ಖುಷಿನೂ ಪಡ್ಕೊತೀವಿ. (ಗಲಾ. 5:22; ಕೊಲೊ. 1:11) ಹಾಗಾಗಿ ವಿರೋಧ ಬಂದಾಗ ಹೆದರಬೇಡಿ, ಯೆಹೋವನನ್ನ ಪೂರ್ತಿಯಾಗಿ ನಂಬಿ. ಆಗ ಯೆಹೋವ ನಿಮಗೆ ಸಹಾಯ ಮಾಡ್ತಾನೆ ಮತ್ತು ಸಹಿಸ್ಕೊಳ್ಳೋಕೆ ಬೇಕಾದ ಶಕ್ತಿನೂ ಕೊಡ್ತಾನೆ.—ಇಬ್ರಿ. 13:6.

ಸಭೆಯನ್ನ ಯಾವಾಗ್ಲೂ ಶುದ್ಧವಾಗಿಡೋಕೆ ದೇವದೂತರು ಸಹಾಯ ಮಾಡ್ತಾರೆ

13. ಈ ಕೊನೇ ದಿನಗಳಲ್ಲಿ ಯೆಹೋವ ದೇವರು ದೇವದೂತರಿಗೆ ಯಾವ ವಿಶೇಷವಾದ ಕೆಲಸ ಕೊಟ್ಟಿದ್ದಾನೆ? (ಮತ್ತಾಯ 13:47-49)

13 ಈ ಕೊನೇ ದಿನಗಳಲ್ಲಿ ಯೆಹೋವ ದೇವರು ದೇವದೂತರಿಗೆ ಒಂದು ವಿಶೇಷವಾದ ಕೆಲಸ ಕೊಟ್ಟಿದ್ದಾನೆ. (ಮತ್ತಾಯ 13:47-49 ಓದಿ.) ಇವತ್ತು ಲಕ್ಷಾಂತರ ಜನ್ರು ಸಿಹಿಸುದ್ದಿಯನ್ನ ಕೇಳಿ ಯೆಹೋವನ ಬಗ್ಗೆ ಕಲೀತಾ ಇದ್ದಾರೆ. ಅದ್ರಲ್ಲಿ ಕೆಲವರು ಕ್ರೈಸ್ತರಾಗ್ತಾರೆ, ಇನ್ನು ಕೆಲವರು ಆಗಲ್ಲ. ಆದ್ರೆ ಯೆಹೋವ ದೇವರು “ಕೆಟ್ಟವ್ರನ್ನ ನೀತಿವಂತರಿಂದ” ಬೇರೆ ಮಾಡೋ ವಿಶೇಷವಾದ ಕೆಲಸನ ದೇವದೂತರಿಗೆ ಕೊಟ್ಟಿದ್ದಾನೆ. ಅಂದ್ರೆ ಸಭೆಯನ್ನ ಶುದ್ಧವಾಗಿಡೋ ಜವಾಬ್ದಾರಿ ದೇವದೂತರಿಗಿದೆ. ಹಾಗಂತ ಸಭೆಯಲ್ಲಿ ಸಮಸ್ಯೆನೇ ಬರಲ್ಲ ಅಂತಲ್ಲ. ಕೆಲವರು ಸತ್ಯ ಬಿಟ್ಟು ಹೋಗಬಹುದು, ಕೆಲವರು ವಾಪಸ್ಸೂ ಬರಬಹುದು. ವಿಷ್ಯ ಏನೇ ಆಗಲಿ, ಸಭೆಯನ್ನ ಶುದ್ಧವಾಗಿಡೋಕೆ ದೇವದೂತರು ಕಷ್ಟಪಟ್ಟು ಕೆಲಸ ಮಾಡ್ತಿದ್ದಾರೆ ಅನ್ನೋದಂತೂ ನಿಜ.

14-15. ದೇವದೂತರ ತರ ನಾವೂ ಹೇಗೆ ಸಭೆನ ಶುದ್ಧವಾಗಿ ಇಡಬಹುದು? (ಚಿತ್ರಗಳನ್ನ ನೋಡಿ.)

14 ದೇವದೂತರ ತರ ಸಭೆನ ಶುದ್ಧವಾಗಿ ಇಡೋಕೆ ನಾವೇನು ಮಾಡಬೇಕು? ಯೆಹೋವನ ಜೊತೆ ನಮಗಿರೋ ಸಂಬಂಧನ ತುಂಬ ಜೋಪಾನವಾಗಿ ಇಟ್ಕೊಬೇಕು. ಅದಕ್ಕೇ ಯೆಹೋವನನ್ನ ಇಷ್ಟಪಡೋ ಜನ್ರ ಜೊತೆ ನಾವು ಫ್ರೆಂಡ್‌ಶಿಪ್‌ ಮಾಡ್ಕೊಬೇಕು. ಒಂದುವೇಳೆ ಯೆಹೋವನ ಜೊತೆ ನಮಗಿರೋ ಸ್ನೇಹನ ಹಾಳುಮಾಡೋ ಫ್ರೆಂಡ್ಸ್‌ ನಮಗೆ ಇರೋದಾದ್ರೆ ಆ ಸ್ನೇಹನ ಬಿಟ್ಟುಬಿಡಬೇಕು. (ಕೀರ್ತ. 101:3) ನಾವಷ್ಟೇ ಅಲ್ಲ, ಸಭೆಲಿರೋ ಸಹೋದರ ಸಹೋದರಿಯರೂ ಯೆಹೋವನಿಗೆ ನಿಯತ್ತಾಗಿರೋಕೆ ಸಹಾಯ ಮಾಡಬೇಕು. ಉದಾಹರಣೆಗೆ ಸಭೆಲಿರೋ ಯಾರಾದ್ರೂ ದೊಡ್ಡ ತಪ್ಪು ಮಾಡಿದ್ರೆ ನಾವೇನು ಮಾಡಬೇಕು? ಅವ್ರ ಮೇಲೆ ನಮಗೆ ಪ್ರೀತಿ ಇರೋದ್ರಿಂದ ನಾವು ಆ ತಪ್ಪಿನ ಬಗ್ಗೆ ಹಿರಿಯರ ಹತ್ರ ಹೋಗಿ ಮಾತಾಡೋಕೆ ಅವ್ರಿಗೆ ಹೇಳಬೇಕು. ಒಂದುವೇಳೆ ಅವರು ಅದನ್ನ ಮಾಡಿಲ್ಲ ಅಂದ್ರೆ ನಾವೇ ಹೋಗಿ ಹಿರಿಯರ ಹತ್ರ ಮಾತಾಡಬೇಕು. ಇದ್ರಿಂದ ತಪ್ಪು ಮಾಡಿದ ವ್ಯಕ್ತಿಗೆ ಆದಷ್ಟು ಬೇಗ ಯೆಹೋವ ಜೊತೆ ಸಂಬಂಧನ ಸರಿಮಾಡ್ಕೊಳ್ಳೋಕೆ ನಾವು ಸಹಾಯ ಮಾಡಿದ ಹಾಗಿರುತ್ತೆ.—ಯಾಕೋ. 5:14, 15.

15 ದೊಡ್ಡದೊಡ್ಡ ತಪ್ಪು ಮಾಡೋರನ್ನ ಸಭೆಯಿಂದ ಹೊರಗೆ ಹಾಕಲಾಗುತ್ತೆ. ಅಂಥ ಜನ್ರ ಜೊತೆ “ಸೇರೋದನ್ನ ಬಿಟ್ಟುಬಿಡಿ” ಅಂತ ಬೈಬಲ್‌ ಹೇಳುತ್ತೆ. d (1 ಕೊರಿಂ. 5:9-13) ಅಂಥ ವ್ಯಕ್ತಿ ಜೊತೆ ನಾವು ಸಹವಾಸ ಮಾಡದೆ ಇದ್ರೆ ಈ ಏರ್ಪಾಡಿಗೆ ಬೆಂಬಲ ಕೊಟ್ಟ ಹಾಗೂ ಆಗುತ್ತೆ, ತಪ್ಪು ಮಾಡಿದ ವ್ಯಕ್ತಿಗೆ ಸಹಾಯ ಮಾಡಿದ ಹಾಗೂ ಆಗುತ್ತೆ. ಅದು ಹೇಗೆ? ನಾವು ಅವನ ಜೊತೆ ಸಹವಾಸ ಮಾಡದೆ ಇದ್ರೆ ಅವನು ತನ್ನ ತಪ್ಪನ್ನ ತಿದ್ಕೊಂಡು ಸಭೆಗೆ ಮತ್ತೆ ವಾಪಸ್‌ ಬರ್ತಾನೆ. ಆಗ ಯೆಹೋವ ದೇವರ ಜೊತೆ ಮತ್ತು ದೇವದೂತರ ಜೊತೆ ನಾವೂ ಖುಷಿಪಡಬಹುದು.—ಲೂಕ 15:7.

ಸಭೆಯಲ್ಲಿರೋ ಒಬ್ರು ದೊಡ್ಡ ತಪ್ಪು ಮಾಡಿದ್ದಾರೆ ಅಂತ ಗೊತ್ತಾದಾಗ ನಾವೇನು ಮಾಡಬೇಕು? (ಪ್ಯಾರ 14 ನೋಡಿ) e


16. ದೇವದೂತರಿಂದ ನೀವೇನು ಕಲಿಯೋಕೆ ಇಷ್ಟಪಡ್ತೀರ?

16 ದೇವದೂತರು ಏನೆಲ್ಲಾ ಮಾಡ್ತಿದ್ದಾರೆ ಅಂತ ನಮಗೆ ಕಣ್ಣಾರೆ ನೋಡೋಕೆ ಆಗಲ್ಲ. ಆದ್ರೆ ಅವರು ನಮ್ಮ ಜೊತೆ ಕೆಲಸ ಮಾಡ್ತಿದ್ದಾರೆ ಅನ್ನೋದಂತೂ ನಿಜ. ಹಾಗಾಗಿ ನಾವು ಅವ್ರ ತರ ದೀನತೆ ತೋರಿಸೋಣ, ಜನ್ರನ್ನ ಪ್ರೀತಿಸೋಣ, ಕಷ್ಟಗಳನ್ನ ಸಹಿಸ್ಕೊಳ್ಳೋಣ, ಸಭೆಯನ್ನ ಶುದ್ಧವಾಗಿ ಇಡೋಣ. ನಾವು ಹೀಗೆ ಮಾಡ್ತಾ ಇದ್ರೆ ಯೆಹೋವನ ಕುಟುಂಬದಲ್ಲಿ ಶಾಶ್ವತಕ್ಕೂ ಇರ್ತೀವಿ!

ಗೀತೆ 89 ಆಲಿಸಿ, ಪಾಲಿಸಿ, ಖುಷಿಯಾಗಿರಿ!

a ಕೋಟ್ಯಾನುಕೋಟಿ ದೇವದೂತರಲ್ಲಿ ಮಿಕಾಯೇಲ ಮತ್ತು ಗಬ್ರಿಯೇಲ ಅನ್ನೋ ಇಬ್ರು ದೇವದೂತರ ಹೆಸ್ರು ಮಾತ್ರ ಬೈಬಲಲ್ಲಿದೆ.—ದಾನಿ. 12:1; ಲೂಕ 1:19.

b ಇನ್ನೂ ಜಾಸ್ತಿ ಅನುಭವಗಳನ್ನ ತಿಳ್ಕೊಳ್ಳೋಕೆ ಇಂಗ್ಲಿಷ್‌ ವಾಚ್‌ಟವರ್‌ ಪಬ್ಲಿಕೇಷನ್‌ ಇಂಡೆಕ್ಸ್‌ನಲ್ಲಿ “ಏಂಜಲ್ಸ್‌” ಅನ್ನೋ ವಿಷ್ಯದ ಕೆಳಗಿರೋ “ಏಂಜಲಿಕ್‌ ಡೈರೆಕ್ಶನ್‌ (ಎಗ್ಸಾಂಪಲ್ಸ್‌)” ಹುಡುಕಿ.

c ಕೆಲವ್ರ ಹೆಸ್ರು ಬದಲಾಗಿದೆ.

d 2024ರ ಆಡಳಿತ ಮಂಡಲಿಯ ಅಪ್ಡೇಡ್‌ 2 ಹೇಳಿದ ಹಾಗೆ, ಸಭೆಯಿಂದ ಹೊರಗೆ ಹಾಕಿದವರು ಕೂಟಕ್ಕೆ ಬಂದಾಗ ಅವ್ರಿಗೆ ಸರಳವಾಗಿ ವಂದಿಸಿ ಸ್ವಾಗತಿಸಬೇಕಾ ಬೇಡ್ವಾ ಅನ್ನೋದು ಪ್ರಚಾರಕರ ಮನಸ್ಸಾಕ್ಷಿಗೆ ಬಿಟ್ಟಿದ್ದು.

e ಚಿತ್ರ ವಿವರಣೆ: ಒಬ್ಬ ಸಹೋದರಿ ತಪ್ಪು ಮಾಡಿರೋ ಇನ್ನೊಬ್ಬ ಸಹೋದರಿಗೆ ಹಿರಿಯರ ಹತ್ರ ಮಾತಾಡೋಕೆ ಹೇಳ್ತಿದ್ದಾರೆ. ಆದ್ರೆ ಆ ಸಹೋದರಿ ಅದಕ್ಕೆ ಒಪ್ಪಲ್ಲ. ಆದ್ರಿಂದ ಈ ಸಹೋದರಿ ಅದ್ರ ಬಗ್ಗೆ ಹಿರಿಯರ ಹತ್ರ ಹೇಳ್ತಿದ್ದಾರೆ.