ಅಧ್ಯಯನ ಲೇಖನ 21
ನಮ್ಮ ಭವಿಷ್ಯ ಹೇಗಿರುತ್ತೆ ಅಂತ ಪ್ರಕಟನೆ ಪುಸ್ತಕ ಹೇಳುತ್ತೆ?
“ಆಮೆನ್! ಪ್ರಭು ಯೇಸುವೇ, ಬಾ!”—ಪ್ರಕ. 22:20.
ಗೀತೆ 129 ನಮ್ಮ ನಿರೀಕ್ಷೆಯನ್ನು ದೃಢವಾಗಿ ಹಿಡಿದುಕೊಳ್ಳುವುದು
ಕಿರುನೋಟ a
1. ಇವತ್ತು ಜನರು ಯಾವ ನಿರ್ಧಾರ ಮಾಡಬೇಕಿದೆ?
ಇವತ್ತು ಜನರು ಒಂದು ಪ್ರಾಮುಖ್ಯ ನಿರ್ಧಾರ ಮಾಡಬೇಕಿದೆ. ಅದೇನಂದ್ರೆ ಅವರು ಇಡೀ ವಿಶ್ವವನ್ನ ಆಳೋ ಹಕ್ಕಿರುವ ಯೆಹೋವನ ಪಕ್ಷ ವಹಿಸಬೇಕು ಅಥವಾ ಯೆಹೋವನ ಕಡುವೈರಿಯಾಗಿರೋ ಪಿಶಾಚನಾದ ಸೈತಾನನ ಪಕ್ಷ ವಹಿಸಬೇಕು. ಆದ್ರೆ ಎರಡೂ ದೋಣಿಯಲ್ಲಿ ಕಾಲಿಡೋಕೆ ಆಗಲ್ಲ. ಅವರು ಈಗ ಮಾಡೋ ನಿರ್ಧಾರದ ಮೇಲೆ ಅವರ ಭವಿಷ್ಯ ಹೊಂದಿಕೊಂಡಿರುತ್ತೆ. (ಮತ್ತಾ. 25:31-33, 46) ಯಾಕಂದ್ರೆ ‘ಮಹಾ ಸಂಕಟದ’ ಸಮಯದಲ್ಲಿ ನ್ಯಾಯತೀರ್ಪಾಗುವಾಗ ತಮ್ಮ ಜೀವವನ್ನ ಕಾಪಾಡಿಕೊಳ್ಳೋದು ಅಥವಾ ಕಳೆದುಕೊಳ್ಳೋದು ಅವರು ಮಾಡೋ ನಿರ್ಧಾರದ ಮೇಲೆ ಹೊಂದಿಕೊಂಡಿದೆ.—ಪ್ರಕ. 7:14; 14:9-11; ಯೆಹೆ. 9:4, 6.
2. (ಎ) ಇಬ್ರಿಯ 10:35-39 ಏನು ಮಾಡೋಕೆ ಪ್ರೋತ್ಸಾಹ ಕೊಡುತ್ತೆ? (ಬಿ) ಪ್ರಕಟನೆ ಪುಸ್ತಕದಲ್ಲಿರೋ ವಿಷಯಗಳನ್ನ ತಿಳಿದುಕೊಳ್ಳೋದ್ರಿಂದ ಏನು ಪ್ರಯೋಜನ?
2 ಇಬ್ರಿಯ 10:35-39 ಓದಿ. ನೀವು ಯೆಹೋವನ ಅಧಿಕಾರಕ್ಕೆ ಬೆಂಬಲ ಕೊಡಬೇಕು ಅಂತ ಅಂದುಕೊಂಡಿದ್ರೆ ಸರಿಯಾದ ನಿರ್ಧಾರನೇ ಮಾಡಿದ್ದೀರ. ಬೇರೆಯವರೂ ನಿಮ್ಮ ಹಾಗೆ ಸರಿಯಾದ ನಿರ್ಧಾರ ಮಾಡಬೇಕು ಅನ್ನೋ ಆಸೆ ನಿಮಗಿದೆ. ಆದ್ರೆ ನೀವು ಅವರಿಗೆ ಹೇಗೆ ಸಹಾಯ ಮಾಡಬಹುದು? ಪ್ರಕಟನೆ ಪುಸ್ತಕದಲ್ಲಿ ಇರೋದನ್ನ ಅವರಿಗೆ ಹೇಳಿಕೊಡಬಹುದು. ದೇವರನ್ನು ವಿರೋಧಿಸುವವರಿಗೆ ಮುಂದೆ ಏನಾಗುತ್ತೆ, ಕೊನೇ ತನಕ ಯೆಹೋವನಿಗೆ ನಂಬಿಗಸ್ತರಾಗಿ ಇರೋರಿಗೆ ಏನೆಲ್ಲಾ ಆಶೀರ್ವಾದಗಳು ಸಿಗುತ್ತೆ ಅನ್ನೋದರ ಬಗ್ಗೆ ಅದರಲ್ಲಿದೆ. ಆ ವಿಷಯಗಳನ್ನ ಓದಿ ಅದರ ಬಗ್ಗೆ ಚೆನ್ನಾಗಿ ಯೋಚಿಸಿದ್ರೆ ಕಷ್ಟಗಳು ಬಂದಾಗಲೂ ನಾವು ಯೆಹೋವನ ಸೇವೆಯನ್ನ ಬಿಡದೇ ಮಾಡ್ತೀವಿ ಮತ್ತು ಬೇರೆಯವರಿಗೂ ಅದೇ ತರ ಮಾಡೋಕೆ ಸಹಾಯ ಮಾಡುತ್ತೀವಿ.
3. ಈ ಲೇಖನದಲ್ಲಿ ಯಾವ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ತೀವಿ?
3 ಈ ಲೇಖನದಲ್ಲಿ ಎರಡು ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ತೀವಿ. (1) ದೇವರ ಅಧಿಕಾರನ ಬೆಂಬಲಿಸುವವರಿಗೆ ಮುಂದೆ ಯಾವ ಆಶೀರ್ವಾದ ಸಿಗುತ್ತೆ? (2) ಪ್ರಕಟನೆ ಪುಸ್ತಕದಲ್ಲಿ ತಿಳಿಸಿರುವ ಕೆಂಪು ಕಾಡುಪ್ರಾಣಿಯನ್ನ ಬೆಂಬಲಿಸುವವರಿಗೆ ಏನಾಗುತ್ತೆ?
ನಂಬಿಗಸ್ತರಿಗೆ ಸಿಗೋ ಬಹುಮಾನ
4. ಸ್ವರ್ಗದಲ್ಲಿ ಯೇಸು ಜೊತೆ ಯಾರು ನಿಂತಿರೋದನ್ನ ಯೋಹಾನ ದರ್ಶನದಲ್ಲಿ ನೋಡಿದ?
4 ಯೆಹೋವನ ಸರ್ಕಾರಕ್ಕೆ ಬೆಂಬಲ ಕೊಡೋ ಎರಡು ಗುಂಪಿನ ಜನರನ್ನ ಅಪೊಸ್ತಲ ಯೋಹಾನ ಒಂದು ದರ್ಶನದಲ್ಲಿ ನೋಡಿದ. ಅವರಿಗೆ ಶಾಶ್ವತವಾಗಿ ಜೀವಿಸೋ ಆಶೀರ್ವಾದವನ್ನ ಕೊಡಲಾಗುತ್ತೆ. ಮೊದಲನೇ ಗುಂಪಲ್ಲಿ 1,44,000 ಜನ ಇದ್ರು. (ಪ್ರಕ. 7:4) ಯೇಸು ಜೊತೆ ಸ್ವರ್ಗದಲ್ಲಿ ರಾಜರಾಗಿ ಆಳೋಕೆ ಇವರನ್ನ ಭೂಮಿಯಿಂದ ಆರಿಸಿಕೊಳ್ಳಲಾಯಿತು. (ಪ್ರಕ. 5:9, 10; 14:3, 4) ಅವರು ಯೇಸು ಜೊತೆ ಚೀಯೋನ್ ಬೆಟ್ಟದ ಮೇಲೆ ಅಂದ್ರೆ ಸ್ವರ್ಗದಲ್ಲಿ ನಿಂತಿರೋದನ್ನ ಯೋಹಾನ ದರ್ಶನದಲ್ಲಿ ನೋಡಿದ.—ಪ್ರಕ. 14:1.
5. ಭೂಮಿಯಲ್ಲಿ ಉಳಿದಿರೋ ಅಭಿಷಿಕ್ತರಿಗೆ ಆದಷ್ಟು ಬೇಗ ಏನಾಗುತ್ತೆ?
5 ಅಪೊಸ್ತಲರ ಕಾಲದಿಂದ ಹಿಡಿದು ಇಲ್ಲಿ ತನಕ 1,44,000 ಅಭಿಷಿಕ್ತರಲ್ಲಿ ಸಾವಿರಾರು ಜನರು ಈಗಾಗಲೇ ಸ್ವರ್ಗಕ್ಕೆ ಹೋಗಿದ್ದಾರೆ. (ಲೂಕ 12:32; ರೋಮ. 8:17) ಆದ್ರೆ ಕಡೇ ದಿನಗಳಲ್ಲಿ ಕೆಲವು ಅಭಿಷಿಕ್ತರು ಮಾತ್ರ ಭೂಮಿ ಮೇಲೆ ಉಳಿದಿರುತ್ತಾರೆ ಅಂತ ಯೋಹಾನ ಹೇಳಿದ. ಮಹಾ ಸಂಕಟ ಶುರು ಆಗೋ ಸ್ವಲ್ಪ ಮುಂಚೆ ಅಭಿಷಿಕ್ತರಲ್ಲಿ ‘ಉಳಿದವ್ರಿಗೆ’ ಕೊನೇ “ಮುದ್ರೆ” ಹಾಕಲಾಗುತ್ತೆ. (ಪ್ರಕ. 7:2, 3; 12:17) ಮಹಾ ಸಂಕಟದ ಸಮಯದಲ್ಲಿ ಇವರೆಲ್ಲರೂ ಸ್ವರ್ಗಕ್ಕೆ ಹೋಗುತ್ತಾರೆ. ಆಗ ಅವರು ಈಗಾಗಲೇ ಸ್ವರ್ಗಕ್ಕೆ ಹೋಗಿರುವವರ ಜೊತೆ ಮತ್ತು ಯೇಸುವಿನ ಜೊತೆ ಆಳ್ವಿಕೆ ಶುರುಮಾಡುತ್ತಾರೆ.—ಮತ್ತಾ. 24:31; ಪ್ರಕ. 5:9, 10.
6-7. (ಎ) ಯೋಹಾನ ದರ್ಶನದಲ್ಲಿ ಯಾವ ಇನ್ನೊಂದು ಗುಂಪನ್ನು ನೋಡಿದ? ಅವರ ಬಗ್ಗೆ ಅವನೇನು ಹೇಳಿದ? (ಬಿ) ಅಭಿಷಿಕ್ತರಲ್ಲಿ ಉಳಿದಿರುವವರು ಮತ್ತು “ದೊಡ್ಡ ಗುಂಪು” ಪ್ರಕಟನೆ 7ನೇ ಅಧ್ಯಾಯದಲ್ಲಿರೋ ಭವಿಷ್ಯವಾಣಿ ನೆರವೇರೋದನ್ನ ನೋಡೋಕೆ ಖುಷಿಯಿಂದ ಯಾಕೆ ಕಾಯ್ತಾ ಇದ್ದಾರೆ?
6 ಸ್ವರ್ಗದಲ್ಲಿ 1,44,000 ಜನರನ್ನ ನೋಡಿದ ಮೇಲೆ ಯಾರಿಂದಾನೂ ಲೆಕ್ಕಮಾಡೋಕೆ ಆಗದಷ್ಟು ಜನರ ಒಂದು “ದೊಡ್ಡ ಗುಂಪು” ಯೋಹಾನನಿಗೆ ಕಾಣಿಸ್ತು. (ಪ್ರಕ. 7:9, 10) ಈ ದೊಡ್ಡ ಗುಂಪಿನವರ ಬಗ್ಗೆ ಯೋಹಾನ ಏನು ಹೇಳಿದ? “ಇವರು ಮಹಾ ಸಂಕಟವನ್ನ ಪಾರಾಗಿ ಬಂದಿದ್ದಾರೆ. ತಮ್ಮ ಬಟ್ಟೆಗಳನ್ನ ಕುರಿಮರಿಯ ರಕ್ತದಲ್ಲಿ ಒಗೆದು ಬೆಳ್ಳಗೆ ಮಾಡ್ಕೊಂಡಿದ್ದಾರೆ” ಅಂತ ಹೇಳಿದ. (ಪ್ರಕ. 7:14) ಈ “ದೊಡ್ಡ ಗುಂಪು” ಮಹಾ ಸಂಕಟವನ್ನ ಪಾರಾಗಿ ಇದೇ ಭೂಮಿ ಮೇಲೆ ಶಾಶ್ವತ ಜೀವ ಪಡೆಯುತ್ತಾರೆ ಮತ್ತು ತುಂಬ ಆಶೀರ್ವಾದಗಳನ್ನ ಪಡೆದುಕೊಳ್ತಾರೆ.—ಕೀರ್ತ. 37:9-11, 27-29; ಜ್ಞಾನೋ. 2:21, 22; ಪ್ರಕ. 7:16, 17.
7 ಪ್ರಕಟನೆ 7ನೇ ಅಧ್ಯಾಯದಲ್ಲಿರೋ ಭವಿಷ್ಯವಾಣಿ ನೆರವೇರೋದನ್ನ ನೋಡುವಾಗ ನಿಮಗೆ ಹೇಗನಿಸುತ್ತೆ? ತುಂಬ ಖುಷಿಯಾಗುತ್ತೆ ಅಲ್ವಾ? ನೀವು ಸ್ವರ್ಗಕ್ಕೆ ಹೋಗುವವರಾಗಿರಲಿ ಅಥವಾ ಭೂಮಿಯಲ್ಲಿ ಇರುವವರಾಗಿರಲಿ ದೇವರ ಸರ್ಕಾರವನ್ನ ಬೆಂಬಲಿಸಿದ್ದಕ್ಕೆ ತುಂಬ ಖುಷಿಪಡ್ತೀರ. ಹಾಗಾದ್ರೆ ಮಹಾ ಸಂಕಟದ ಸಮಯದಲ್ಲಿ ಇನ್ನೂ ಏನೆಲ್ಲಾ ಆಗುತ್ತೆ ಅಂತ ಈಗ ತಿಳಿದುಕೊಳ್ಳೋಣ.—ಮತ್ತಾ. 24:21.
ವಿರೋಧಿಗಳಿಗೆ ಮುಂದೆ ಏನು ಕಾದಿದೆ?
8. ಮಹಾ ಸಂಕಟ ಯಾವಾಗ ಶುರುವಾಗುತ್ತೆ ಮತ್ತು ಆಗ ತುಂಬ ಜನ ಏನು ಮಾಡ್ತಾರೆ?
8 ಹಿಂದಿನ ಲೇಖನದಲ್ಲಿ ಕಲಿತ ಹಾಗೆ ಭೂಮಿಯಲ್ಲಿರೋ ಎಲ್ಲಾ ಸರ್ಕಾರಗಳು ಸುಳ್ಳು ಧರ್ಮದ ಲೋಕ ಸಾಮ್ರಾಜ್ಯವಾಗಿರೋ ಮಹಾ ಬಾಬೆಲನ್ನ ನಾಶಮಾಡುತ್ತೆ. (ಪ್ರಕ. 17:16, 17) ಆಗ ಮಹಾ ಸಂಕಟ ಶುರು ಆಗುತ್ತೆ. ಭೂಮಿಯಲ್ಲಿರೋ ಎಲ್ಲಾ ಸುಳ್ಳು ಧರ್ಮಗಳು ನಾಶ ಆದಮೇಲೆ ಜನರು ಯೆಹೋವನನ್ನು ಆರಾಧಿಸೋಕೆ ಮನಸ್ಸು ಮಾಡ್ತಾರಾ? ಇಲ್ಲ, ಬದಲಿಗೆ ಪ್ರಕಟನೆ 6ನೇ ಅಧ್ಯಾಯದಲ್ಲಿ ಹೇಳೋ ಹಾಗೆ ಬೆಟ್ಟಗಳಲ್ಲಿ ಬಚ್ಚಿಟ್ಟುಕೊಳ್ತಾರೆ, ಅಂದ್ರೆ ಈ ಲೋಕದ ಸರ್ಕಾರಗಳ ಮತ್ತು ವಾಣಿಜ್ಯ ಸಂಸ್ಥೆಗಳ ಹತ್ರ ಸಹಾಯ ಕೇಳ್ತಾರೆ. ಹೀಗೆ ಆ ಜನರು ಯೆಹೋವನ ಸರ್ಕಾರಕ್ಕೆ ಬೆಂಬಲ ಕೊಡದೇ ಹೋಗೋದ್ರಿಂದ ಯೆಹೋವ ಅವರನ್ನ ವಿರೋಧಿಗಳ ತರ ನೋಡ್ತಾನೆ.—ಲೂಕ 11:23; ಪ್ರಕ. 6:15-17.
9. ಮಹಾ ಸಂಕಟದ ಸಮಯದಲ್ಲಿ ಯೆಹೋವನನ್ನು ಆರಾಧಿಸೋ ಜನರು ಹೇಗೆ ವ್ಯತ್ಯಾಸವಾಗಿ ಎದ್ದುಕಾಣುತ್ತಾರೆ ಮತ್ತು ಇದ್ರಿಂದ ಏನಾಗುತ್ತೆ?
9 ಮಹಾ ಸಂಕಟದ ಸಮಯದಲ್ಲಿ ಯೆಹೋವನನ್ನು ಆರಾಧಿಸೋ ಜನರು ಮಾತ್ರ ಬೇರೆ ಎಲ್ಲರಿಗಿಂತ ವ್ಯತ್ಯಾಸವಾಗಿ ಎದ್ದುಕಾಣುತ್ತಾರೆ. ಯಾಕಂದ್ರೆ ಅವರು ‘ಕಾಡುಪ್ರಾಣಿಗೆ’ ಬೆಂಬಲ ಕೊಡದೇ ಯೆಹೋವನ ಆರಾಧನೆ ಮಾಡ್ತಾ ಇರುತ್ತಾರೆ. (ಪ್ರಕ. 13:14-17) ಇದ್ರಿಂದ ದೇವರ ವೈರಿಗಳಿಗೆ ಅವರ ಮೇಲಿರೋ ಕೋಪ ಇನ್ನೂ ಜಾಸ್ತಿಯಾಗುತ್ತೆ. ಆಗ ಎಲ್ಲಾ ಜನಾಂಗಗಳು ಒಟ್ಟಿಗೆ ಸೇರಿ ಯೆಹೋವನ ಆರಾಧಕರ ಮೇಲೆ ಆಕ್ರಮಣ ಮಾಡುತ್ತಾರೆ. ಈ ಆಕ್ರಮಣವನ್ನ ಬೈಬಲಲ್ಲಿ ಮಾಗೋಗಿನ ಗೋಗನ ಆಕ್ರಮಣ ಅಂತ ಕರೆಯಲಾಗಿದೆ.—ಯೆಹೆ. 38:14-16.
10. ತನ್ನ ಜನರ ಮೇಲೆ ಆಕ್ರಮಣ ಆದಾಗ ಯೆಹೋವ ಏನು ಮಾಡ್ತಾನೆ? (ಪ್ರಕಟನೆ 19:19-21)
10 ತನ್ನ ಜನರ ಮೇಲೆ ಆಕ್ರಮಣ ಆದಾಗ ಯೆಹೋವನಿಗೆ ಹೇಗನಿಸುತ್ತೆ? ಆತನ “ರೋಷಾವೇಶ ಭಗ್ಗಂತ ಉರಿಯುತ್ತೆ.” (ಯೆಹೆ. 38:18, 21-23) ಆಮೇಲೆ ಆತನು ಏನು ಮಾಡುತ್ತಾನೆ ಅಂತ ಪ್ರಕಟನೆ 19ನೇ ಅಧ್ಯಾಯದಲ್ಲಿ ಹೇಳುತ್ತೆ. ತನ್ನ ಜನರನ್ನ ಕಾಪಾಡೋಕೆ ಮತ್ತು ವೈರಿಗಳನ್ನ ನಾಶಮಾಡೋಕೆ ಯೆಹೋವ ತನ್ನ ಮಗನನ್ನ ಕಳಿಸುತ್ತಾನೆ. ‘ಸ್ವರ್ಗದಲ್ಲಿರೋ ಸೈನ್ಯದಲ್ಲಿ’ 1,44,000 ಅಭಿಷಿಕ್ತರು ಮತ್ತು ದೇವದೂತರು ಯೇಸುವಿನ ಜೊತೆ ಇರುತ್ತಾರೆ. (ಪ್ರಕ. 17:14; 19:11-15) ಈ ಯುದ್ಧದಲ್ಲಿ ಯೆಹೋವನಿಗೆ ವಿರುದ್ಧವಾಗಿರೋ ಎಲ್ಲಾ ಮಾನವರು ಮತ್ತು ಸಂಘಟನೆಗಳು ಸರ್ವನಾಶ ಆಗುತ್ತಾರೆ!—ಪ್ರಕಟನೆ 19:19-21 ಓದಿ.
ಯುದ್ಧ ಆದಮೇಲೆ ಮದುವೆ
11. ಪ್ರಕಟನೆ ಪುಸ್ತಕದ ಕೊನೆಯಲ್ಲಿ ಯಾವ ವಿಶೇಷ ಸಮಾರಂಭದ ಬಗ್ಗೆ ಹೇಳಲಾಗಿದೆ?
11 ದೇವರ ವೈರಿಗಳು ಸರ್ವನಾಶ ಆದಮೇಲೆ ಭೂಮಿಯಲ್ಲಿ ನಂಬಿಗಸ್ತ ಜನರು ಮಾತ್ರ ಉಳಿದಿರುತ್ತಾರೆ. ಅದನ್ನ ನೆನಸಿಕೊಂಡರೇನೇ ಮನಸ್ಸು ಖುಷಿಯಲ್ಲಿ ತೇಲಾಡುತ್ತೆ! ಮಹಾ ಬಾಬೆಲ್ ನಾಶ ಆಗಿದ್ದಕ್ಕೆ ಸ್ವರ್ಗದಲ್ಲಿರೋ ಎಲ್ಲರೂ ತುಂಬ ಖುಷಿಪಡ್ತಾರೆ. ಆದ್ರೆ ಅದಕ್ಕಿಂತ ಖುಷಿ ತರೋ ಇನ್ನೊಂದು ವಿಷಯ ನಡಿಯುತ್ತೆ ಅಂತ ಪ್ರಕಟನೆ ಪುಸ್ತಕದ ಕೊನೆಯಲ್ಲಿ ಹೇಳಿದೆ. (ಪ್ರಕ. 19:1-3) ಅದೇ “ಕುರಿಮರಿಯ ಮದುವೆ.”—ಪ್ರಕ. 19:6-9.
12. ಪ್ರಕಟನೆ 21:1, 2ರಲ್ಲಿ ಹೇಳೋ ತರ ಕುರಿಮರಿಯ ಮದುವೆ ಯಾವಾಗ ಆಗುತ್ತೆ?
12 ಈ ಮದುವೆ ಯಾವಾಗ ಆಗುತ್ತೆ? ಹರ್ಮಗೆದೋನ್ ಶುರುವಾಗೋ ಸ್ವಲ್ಪ ಮುಂಚೆ ಎಲ್ಲಾ 1,44,000 ಅಭಿಷಿಕ್ತರು ಸ್ವರ್ಗದಲ್ಲಿರುತ್ತಾರೆ. (ಪ್ರಕಟನೆ 21:1, 2 ಓದಿ.) ಹರ್ಮಗೆದೋನ್ ಯುದ್ಧದಲ್ಲಿ ಎಲ್ಲಾ ವೈರಿಗಳ ನಾಶ ಆದಮೇಲೆ ಕುರಿಮರಿಯ ಮದುವೆ ನಡೆಯುತ್ತೆ.—ಕೀರ್ತ. 45:3, 4, 13-17.
13. ಕುರಿಮರಿಯ ಮದುವೆಯಲ್ಲಿ ಏನಾಗುತ್ತೆ?
13 ಒಂದು ಗಂಡು-ಹೆಣ್ಣು ಮದುವೆ ಆದಮೇಲೆ ಅವರಿಬ್ಬರೂ ಒಂದಾಗುತ್ತಾರೆ. ಅದೇ ತರ ಕುರಿಮರಿಯ ಮದುವೆಯಲ್ಲಿ ಯೇಸು ಮತ್ತು ‘ಮದುಮಗಳು’ ಅಂದ್ರೆ 1,44,000 ಅಭಿಷಿಕ್ತರು ಒಂದಾಗುತ್ತಾರೆ. ಇವರೆಲ್ಲಾ ಸೇರಿದಾಗ ಭೂಮಿ ಮೇಲೆ 1,000 ವರ್ಷದ ಆಳ್ವಿಕೆ ಶುರುವಾಗುತ್ತೆ.—ಪ್ರಕ. 20:6
ಒಂದು ಸುಂದರ ಪಟ್ಟಣ ಮತ್ತು ಅದರಿಂದ ಸಿಗೋ ಆಶೀರ್ವಾದ
14-15. ಪ್ರಕಟನೆ 21ನೇ ಅಧ್ಯಾಯದಲ್ಲಿ 1,44,000 ಜನರನ್ನ ಯಾವುದಕ್ಕೆ ಹೋಲಿಸಲಾಗಿದೆ? (ಮುಖಪುಟ ಚಿತ್ರ ನೋಡಿ.)
14 ಪ್ರಕಟನೆ 21ನೇ ಅಧ್ಯಾಯದಲ್ಲಿ 1,44,000 ಜನರನ್ನ ‘ಹೊಸ ಯೆರೂಸಲೇಮ್’ ಅಂತ ಕರೆಯಲಾಗಿದೆ. (ಪ್ರಕ. 21:2, 9) ಈ ಯೆರೂಸಲೇಮ್ ಪಟ್ಟಣವನ್ನ 12 ಅಡಿಪಾಯ ಕಲ್ಲುಗಳ ಮೇಲೆ ಕಟ್ಟಲಾಗಿದೆ. ಆ ಕಲ್ಲುಗಳ ಮೇಲೆ “ಕುರಿಮರಿಯ 12 ಅಪೊಸ್ತಲರ ಹೆಸ್ರು” ಬರೆದಿತ್ತು. ಇದನ್ನ ನೋಡಿದಾಗ ಯೋಹಾನನಿಗೆ ತುಂಬ ಖುಷಿಯಾಯ್ತು. ಯಾಕಂದ್ರೆ ಅದರಲ್ಲಿ ಒಂದು ಕಲ್ಲಿನ ಮೇಲೆ ಅವನ ಹೆಸರೂ ಬರೆಯಲಾಗಿತ್ತು. ಇಂಥ ಸೌಭಾಗ್ಯ ಯಾರಿಗೆ ಸಿಗುತ್ತೆ ಹೇಳಿ!—ಪ್ರಕ. 21:10-14; ಎಫೆ. 2:20.
15 ಈ ಸಾಂಕೇತಿಕ ಯೆರೂಸಲೇಮ್ ಪಟ್ಟಣಕ್ಕೆ ಬೇರೆ ಯಾವ ಪಟ್ಟಣನೂ ಸರಿಸಾಟಿ ಇಲ್ಲ. ಯಾಕಂದ್ರೆ ಆ ಪಟ್ಟಣದ ಮುಖ್ಯ ಬೀದಿಯನ್ನ ಸ್ಪಷ್ಟವಾದ ಗಾಜಿನ ತರ ಅಪ್ಪಟ ಚಿನ್ನದಿಂದ ಮಾಡಿದ್ರು. 12 ಬಾಗಿಲುಗಳನ್ನ ಮುತ್ತುಗಳಿಂದ ಮಾಡಿದ್ರು. ಪಟ್ಟಣದ ಗೋಡೆಯ ಅಡಿಪಾಯಗಳನ್ನ ಅಮೂಲ್ಯ ರತ್ನಗಳಿಂದ ಅಲಂಕಾರ ಮಾಡಿದ್ರು. ಅಷ್ಟೇ ಅಲ್ಲ, ಆ ಪಟ್ಟಣದ ಅಗಲ, ಉದ್ದ, ಎತ್ತರ ಎಲ್ಲಾ ಒಂದೇ ಆಗಿತ್ತು. (ಪ್ರಕ. 21:15-21) ಆದ್ರೆ ಆ ಪಟ್ಟಣದಲ್ಲಿ ಏನೋ ಒಂದು ಕಮ್ಮಿ ಇತ್ತು. ಅದೇನು ಅಂತ ಯೋಹಾನ ಹೇಳ್ತಾನೆ: “ಆ ಪಟ್ಟಣದಲ್ಲಿ ನನಗೆ ದೇವಾಲಯ ಕಾಣಿಸಲಿಲ್ಲ. ಯಾಕಂದ್ರೆ ಸರ್ವಶಕ್ತ ಯೆಹೋವ ದೇವರು ಮತ್ತು ಕುರಿಮರಿನೇ ಅದ್ರ ದೇವಾಲಯ ಆಗಿದ್ರು. ಆ ಪಟ್ಟಣದಲ್ಲಿ ದೇವರ ಮಹಿಮೆಯಿಂದ ಬರ್ತಾ ಇದ್ದ ಬೆಳಕು ತುಂಬ್ಕೊಂಡಿದ್ರಿಂದ ಆ ಪಟ್ಟಣಕ್ಕೆ ಸೂರ್ಯನಾಗಲಿ ಚಂದ್ರನಾಗಲಿ ಬೇಕಾಗಿರಲಿಲ್ಲ. ಕುರಿಮರಿ ಆ ಪಟ್ಟಣಕ್ಕೆ ದೀಪ ಆಗಿದ್ದ.” (ಪ್ರಕ. 21:22, 23) ಸ್ವರ್ಗದಲ್ಲಿ ಅಭಿಷಿಕ್ತರು ಯೇಸು ಮತ್ತು ಯೆಹೋವ ದೇವರ ಜೊತೆ ಇರುತ್ತಾರೆ. ಅದಕ್ಕೆ ಯೆಹೋವ ಮತ್ತು ಯೇಸುನೇ ಅವರ ಆಲಯ ಅಂತ ಹೇಳಲಾಗಿದೆ.—ಇಬ್ರಿ. 7:27; ಪ್ರಕ. 22:3, 4.
16. ಸಾವಿರ ವರ್ಷದ ಆಳ್ವಿಕೆಯಲ್ಲಿ ಮನುಷ್ಯರಿಗೆ ಯಾವೆಲ್ಲಾ ಆಶೀರ್ವಾದಗಳು ಸಿಗುತ್ತೆ?
16 ಈ ಪಟ್ಟಣದ ಭವಿಷ್ಯವಾಣಿ ಅಭಿಷಿಕ್ತರ ಬಗ್ಗೆ ಹೇಳುತ್ತೆ. ಆದ್ರೆ ಭೂಮಿಯಲ್ಲಿ ಶಾಶ್ವತವಾಗಿ ಜೀವಿಸೋ ನಿರೀಕ್ಷೆ ಇರೋರು ಕೂಡ ಇದಕ್ಕೆ ಗಮನ ಕೊಡಬೇಕು. ಯಾಕಂದ್ರೆ ಸಾವಿರ ವರ್ಷದ ಆಳ್ವಿಕೆಯಲ್ಲಿ ಹೊಸ ಯೆರೂಸಲೇಮಿಂದ ಭೂಮಿ ಮೇಲೆ ಇರೋರಿಗೆ ತುಂಬ ಆಶೀರ್ವಾದಗಳು ಸಿಗುತ್ತೆ. ಈ ಆಶೀರ್ವಾದಗಳನ್ನ ಯೋಹಾನ ‘ಜೀವ ಕೊಡೋ ನೀರಿನ ನದಿಗೆ’ ಹೋಲಿಸಿದ. ಆ ನದಿಯ ಎರಡೂ ಕಡೆ “ಜೀವ ಕೊಡೋ ಮರಗಳಿದ್ವು.” ಅದ್ರ ಎಲೆಗಳಿಗೆ “ದೇಶದ ಜನ್ರನ್ನ ವಾಸಿಮಾಡೋ ಶಕ್ತಿ ಇತ್ತು.” (ಪ್ರಕ. 22:1, 2) ಇದ್ರಿಂದ ಭೂಮಿ ಮೇಲೆ ಆಗ ಜೀವಿಸೋ ಎಲ್ಲಾ ಜನರಿಗೂ ತುಂಬ ಪ್ರಯೋಜನ ಆಗುತ್ತೆ. ಆಗ ಮನುಷ್ಯರೆಲ್ಲ ಪರಿಪೂರ್ಣರಾಗುತ್ತಾ ಹೋಗುತ್ತಾರೆ. ಮುಂದೆ ಕಾಯಿಲೆ, ದುಃಖ, ಕಷ್ಟ, ನೋವು ಇರಲ್ಲ.—ಪ್ರಕ. 21:3-5.
17. ಪ್ರಕಟನೆ 20:11-13ರಲ್ಲಿ ಹೇಳೋ ತರ ಸಾವಿರ ವರ್ಷದ ಆಳ್ವಿಕೆಯಲ್ಲಿ ಯಾರಿಗೆಲ್ಲಾ ಆಶೀರ್ವಾದ ಸಿಗುತ್ತೆ?
17 ಸಾವಿರ ವರ್ಷದ ಆಳ್ವಿಕೆಯಲ್ಲಿ ಯಾರಿಗೆಲ್ಲಾ ಆಶೀರ್ವಾದ ಸಿಗುತ್ತೆ? ಮೊದಲನೇದಾಗಿ, ಹರ್ಮಗೆದೋನ್ ಯುದ್ಧವನ್ನ ಪಾರಾದ ದೊಡ್ಡ ಗುಂಪಿನ ಜನರಿಗೆ ಆಶೀರ್ವಾದ ಸಿಗುತ್ತೆ ಮತ್ತು ಹೊಸಲೋಕದಲ್ಲಿ ಅವರಿಗೆ ಹುಟ್ಟೋ ಮಕ್ಕಳಿಗೂ ಆಶೀರ್ವಾದಗಳು ಸಿಗುತ್ತೆ. ಅವರಷ್ಟೇ ಅಲ್ಲ, ಪ್ರಕಟನೆ 20ನೇ ಅಧ್ಯಾಯದಲ್ಲಿ ಹೇಳೋ ಹಾಗೆ ಸತ್ತವರೂ ವಾಪಸ್ ಬರುತ್ತಾರೆ. (ಪ್ರಕಟನೆ 20:11-13 ಓದಿ.) ಯೆಹೋವನಿಗೆ ನಂಬಿಗಸ್ತರಾಗಿದ್ದ “ನೀತಿವಂತರು” ಮತ್ತು ಯೆಹೋವನ ಬಗ್ಗೆ ತಿಳಿದುಕೊಳ್ಳೋಕೆ ಅವಕಾಶನೇ ಸಿಗದೇ ಇದ್ದ “ಅನೀತಿವಂತರು” ಮತ್ತೆ ಜೀವಂತವಾಗಿ ಎದ್ದು ಬರ್ತಾರೆ. (ಅ. ಕಾ. 24:15; ಯೋಹಾ. 5:28, 29) ಇದರರ್ಥ ಭೂಮಿ ಮೇಲೆ ಜೀವಿಸಿದವರೆಲ್ಲ ಸಾವಿರ ವರ್ಷದ ಆಳ್ವಿಕೆಯಲ್ಲಿ ಮತ್ತೆ ಜೀವ ಪಡಕೊಳ್ತಾರೆ ಅಂತಾನಾ? ಇಲ್ಲ. ಯೆಹೋವನ ಬಗ್ಗೆ ತಿಳಿದುಕೊಳ್ಳೋ ಅವಕಾಶ ಸಿಕ್ಕಿದ್ರೂ ಆತನನ್ನ ಆರಾಧಿಸದೆ ಇದ್ದವರಿಗೆ ಅಂದ್ರೆ ಕೆಟ್ಟವರಿಗೆ ಮತ್ತೆ ಜೀವ ಸಿಗಲ್ಲ.—ಮತ್ತಾ. 25:46; 2 ಥೆಸ. 1:9; ಪ್ರಕ. 17:8; 20:15.
ಕೊನೆ ಪರೀಕ್ಷೆ
18. ಸಾವಿರ ವರ್ಷದ ಕೊನೆಯಲ್ಲಿ ನಾವು ಹೇಗಿರುತ್ತೀವಿ?
18 ಸಾವಿರ ವರ್ಷದ ಕೊನೆಯಲ್ಲಿ ಭೂಮಿಯಲ್ಲಿರೋ ಎಲ್ಲರೂ ಪರಿಪೂರ್ಣರಾಗಿರುತ್ತಾರೆ. ಆದಾಮನ ಪಾಪದಿಂದ ಬಂದ ಯಾವ ಕಷ್ಟಗಳೂ ಇನ್ನಿರಲ್ಲ. (ರೋಮ. 5:12) ಅದರಿಂದ ಬಂದ ಶಾಪದಿಂದಾನೂ ನಮಗೆ ಮುಕ್ತಿ ಸಿಕ್ಕಿರುತ್ತೆ. ಇದು 1,000 ವರ್ಷದ ಕೊನೆಯಲ್ಲಿ ಎಲ್ಲರೂ ಪರಿಪೂರ್ಣರಾಗಿ “ಮತ್ತೆ ಜೀವ” ಪಡೆದುಕೊಂಡ ತರ ಇರುತ್ತೆ.—ಪ್ರಕ. 20:5.
19. ಕೊನೆ ಪರೀಕ್ಷೆಯನ್ನ ಯಾಕೆ ಮಾಡಲಾಗುತ್ತೆ?
19 ಯೇಸು ಭೂಮಿಯಲ್ಲಿದ್ದಾಗ ಸೈತಾನ ಆತನನ್ನ ತುಂಬ ಸಲ ಪರೀಕ್ಷಿಸಿದ. ಆದ್ರೂ ಯೇಸು, ಯೆಹೋವ ತನ್ನ ಮೇಲೆ ಇಟ್ಟಿದ್ದ ನಂಬಿಕೆಯನ್ನ ಉಳಿಸಿಕೊಂಡನು. ಆದ್ರೆ ಎಲ್ಲಾ ಪರಿಪೂರ್ಣ ಮನುಷ್ಯರು ಯೆಹೋವ ತಮ್ಮ ಮೇಲೆ ಇಟ್ಟಿರೋ ನಂಬಿಕೆಯನ್ನ ಉಳಿಸಿಕೊಳ್ತಾರಾ? ಇದು 1,000 ವರ್ಷದ ಕೊನೆಯಲ್ಲಿ ಗೊತ್ತಾಗುತ್ತೆ. ಯಾಕಂದ್ರೆ ಆಗ ಸೈತಾನನನ್ನ ಅಗಾಧ ಸ್ಥಳದಿಂದ ಬಿಡುಗಡೆ ಮಾಡಲಾಗುತ್ತೆ ಮತ್ತು ಅವನು ಎಲ್ಲರನ್ನೂ ಪರೀಕ್ಷಿಸುತ್ತಾನೆ. (ಪ್ರಕ. 20:7) ಆಗ ಯಾರು ಯೆಹೋವನಿಗೆ ನಂಬಿಗಸ್ತರಾಗಿರುತ್ತಾರೋ ಅವರಿಗೆ ಶಾಶ್ವತ ಜೀವ ಸಿಗುತ್ತೆ ಮತ್ತು ನಿಜವಾದ ಸ್ವಾತಂತ್ರ್ಯ ಸಿಗುತ್ತೆ. (ರೋಮ. 8:21) ಆದ್ರೆ ಯಾರೆಲ್ಲಾ ದೇವರಿಗೆ ತಿರುಗಿ ಬೀಳ್ತಾರೋ ಅವರೆಲ್ಲಾ ಸೈತಾನ ಮತ್ತು ಅವನ ಕೆಟ್ಟ ದೂತರ ಜೊತೆಗೆ ಸರ್ವನಾಶ ಆಗ್ತಾರೆ.—ಪ್ರಕ. 20:8-10.
20. ಪ್ರಕಟನೆ ಪುಸ್ತಕದಲ್ಲಿರೋ ಈ ವಿಷಯಗಳನ್ನ ಕಲಿತಾಗ ನಿಮಗೆ ಹೇಗನಿಸಿತು?
20 ಪ್ರಕಟನೆ ಪುಸ್ತಕದಲ್ಲಿರೋ ಈ ವಿಷಯಗಳನ್ನ ಕಲಿತಾಗ ನಿಮಗೆ ಹೇಗನಿಸಿತು? ಈ ಭವಿಷ್ಯವಾಣಿಗಳು ನೆರವೇರೋದನ್ನ ನೋಡುವಾಗ ಮತ್ತು ಅದರಲ್ಲಿ ನಿಮಗೂ ಪಾಲಿದೆ ಅಂತ ಗೊತ್ತಾದಾಗ ರೋಮಾಂಚನ ಆಯ್ತಲ್ವಾ? ಈ ವಿಷಯನ ಬೇರೆಯವರಿಗೂ ಹೇಳಿ ಯೆಹೋವನನ್ನು ಆರಾಧಿಸೋಕೆ ಅವರಿಗೂ ಪ್ರೋತ್ಸಾಹ ಕೊಡಬೇಕು ಅಂತ ನಿಮಗೆ ಅನಿಸ್ತಿದೆ ಅಲ್ವಾ? (ಪ್ರಕ. 22:17) ಹೌದು ನಮ್ಮೆಲ್ಲರಿಗೂ ಹಾಗೆ ಅನಿಸ್ತಿದೆ. ಈ ಭವಿಷ್ಯವಾಣಿಗಳನ್ನೆಲ್ಲಾ ಓದಿ ನಮ್ಮ ಮನಸ್ಸು ಯೋಹಾನನ ತರ “ಆಮೆನ್! ಪ್ರಭು ಯೇಸುವೇ, ಬಾ!” ಅಂತ ಕೂಗಿ ಕರಿತಾ ಇದೆ.—ಪ್ರಕ. 22:20.
ಗೀತೆ 151 ದೇವ ಪುತ್ರರ ಪ್ರಕಟ
a ಯಾರೆಲ್ಲಾ ಯೆಹೋವನಿಗೆ ನಂಬಿಗಸ್ತರಾಗಿ ಇರುತ್ತಾರೋ ಅವರಿಗೆ ಮುಂದೆ ತುಂಬ ಆಶೀರ್ವಾದಗಳು ಸಿಗುತ್ತೆ. ಆದ್ರೆ ಯಾರು ಯೆಹೋವನ ಆಳ್ವಿಕೆನ ವಿರೋಧಿಸು ತ್ತಾರೋ ಅವರು ನಾಶವಾಗುತ್ತಾರೆ ಅಂತ ಪ್ರಕಟನೆ ಪುಸ್ತಕ ಹೇಳುತ್ತೆ. ಅದರ ಬಗ್ಗೆ ಈ ಲೇಖನದಲ್ಲಿ ನೋಡೋಣ.