ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 22

ಕಣ್ಣಿಗೆ ಕಾಣದ ಸಂಪತ್ತಿಗೆ ಕೃತಜ್ಞತೆ

ಕಣ್ಣಿಗೆ ಕಾಣದ ಸಂಪತ್ತಿಗೆ ಕೃತಜ್ಞತೆ

‘ನಿಮ್ಮ ಕಣ್ಣುಗಳನ್ನು ಕಾಣದಿರುವಂಥ ಸಂಗತಿಗಳ ಮೇಲೆ ಇಡಿ. ಕಾಣುವಂಥ ಸಂಗತಿಗಳು ತಾತ್ಕಾಲಿಕವಾಗಿವೆ, ಆದರೆ ಕಾಣದಿರುವಂಥ ಸಂಗತಿಗಳು ನಿರಂತರವಾಗಿವೆ.’—2 ಕೊರಿಂ. 4:18.

ಗೀತೆ 57 ನನ್ನ ಹೃದಯದ ಧ್ಯಾನ

ಕಿರುನೋಟ a

1. ಸ್ವರ್ಗದಲ್ಲಿರೋ ಸಂಪತ್ತಿನ ಬಗ್ಗೆ ಯೇಸು ಏನು ಹೇಳಿದ?

 ತುಂಬ ಅಮೂಲ್ಯವಾದ ಸಂಪತ್ತುಗಳು ಕಣ್ಣಿಗೆ ಕಾಣ್ಸಲ್ಲ. ಪರ್ವತ ಪ್ರಸಂಗದಲ್ಲಿ ಯೇಸು, ಭೂಮಿ ಮೇಲಿರೋ ಯಾವ್ದೇ ಹಣ ಆಸ್ತಿಗಿಂತ ಸ್ವರ್ಗದಲ್ಲಿರೋ ಸಂಪತ್ತು ತುಂಬ ಅಮೂಲ್ಯವಾಗಿದೆ ಅಂತ ತಿಳಿಸಿದ್ನು. ನಂತ್ರ “ನಿನ್ನ ಸಂಪತ್ತು ಇರುವಲ್ಲಿಯೇ ನಿನ್ನ ಹೃದಯವು ಸಹ ಇರುವುದು” ಅಂತ ಹೇಳಿದ್ನು. (ಮತ್ತಾ. 6:19-21) ನಾವು ಯಾವುದನ್ನ ತುಂಬ ಅಮೂಲ್ಯವಾಗಿ ನೋಡ್ತೇವೋ ಅದನ್ನ ಪಡ್ಕೊಳೋಕೆ ಮುಂದಾಗ್ತೇವೆ. ದೇವ್ರ ಹತ್ರ ಒಳ್ಳೇ ಹೆಸ್ರು ಪಡ್ಕೊಳ್ಳೋದು ಸ್ವರ್ಗದಲ್ಲಿ ಸಂಪತ್ತನ್ನ ಕೂಡಿಸಿಟ್ಟಂತೆ. ಯೇಸು ಹೇಳಿದಂತೆ ಇಂಥ ಸಂಪತ್ತು ಯಾವತ್ತಿಗೂ ಹಾಳಾಗೋದೂ ಇಲ್ಲ, ಕಳವಾಗೋದೂ ಇಲ್ಲ.

2. (ಎ) ಎರಡನೇ ಕೊರಿಂಥ 4:17, 18 ರಲ್ಲಿ ಪೌಲ ಯಾವುದ್ರ ಮೇಲೆ ನಮ್ಮ ಗಮನ ಇರಬೇಕು ಅಂತ ಪ್ರೋತ್ಸಾಹಿಸಿದ್ದಾನೆ? (ಬಿ) ಈ ಲೇಖನದಲ್ಲಿ ಏನನ್ನ ಚರ್ಚಿಸಲಿದ್ದೇವೆ?

2 ‘ಕಣ್ಣುಗಳನ್ನು ಕಾಣದಿರುವಂಥ ಸಂಗತಿಗಳ ಮೇಲಿಡಬೇಕು’ ಅಂತ ಅಪೊಸ್ತಲ ಪೌಲ ಪ್ರೋತ್ಸಾಹಿಸಿದ. (2 ಕೊರಿಂಥ 4:17, 18 ಓದಿ) ಕಾಣದಿರುವಂಥ ಸಂಗತಿಗಳಲ್ಲಿ, ದೇವ್ರ ಹೊಸ ಲೋಕದಲ್ಲಿ ನಮ್ಗೆ ಸಿಗಲಿರೋ ಆಶೀರ್ವಾದಗಳೂ ಸೇರಿವೆ. ಈ ಲೇಖನದಲ್ಲಿ ಈಗ ನಮ್ಗೆ ಸಿಗುವಂಥ ಕಣ್ಣಿಗೆ ಕಾಣದಿರೋ ನಾಲ್ಕು ಸಂಪತ್ತುಗಳ ಬಗ್ಗೆ ನೋಡಲಿದ್ದೇವೆ. ಅವು ಯಾವುವೆಂದ್ರೆ ದೇವ್ರೊಟ್ಟಿಗಿನ ಸ್ನೇಹ, ಪ್ರಾರ್ಥನೆ ಎಂಬ ಉಡುಗೊರೆ, ದೇವ್ರ ಪವಿತ್ರಾತ್ಮದ ಸಹಾಯ ಮತ್ತು ಸೇವೆಗೆ ಯೆಹೋವ, ಯೇಸು, ದೇವದೂತರು ಕೊಡೋ ಸಹಾಯ. ಕಾಣದಿರೋ ಈ ಸಂಪತ್ತುಗಳನ್ನು ಕೊಟ್ಟಿರೋದಕ್ಕಾಗಿ ನಾವು ಯೆಹೋವನಿಗೆ ಹೇಗೆ ಕೃತಜ್ಞರಾಗಬಹುದು ಅಂತನೂ ಚರ್ಚಿಸಲಿದ್ದೇವೆ.

ಯೆಹೋವನ ಸ್ನೇಹ

3. ಇರೋದ್ರಲ್ಲೇ ತುಂಬ ಅಮೂಲ್ಯವಾದ ಸಂಪತ್ತು ಯಾವುದು? ಈ ಸಂಪತ್ತು ನಮ್ಗೆ ಹೇಗೆ ಸಿಕ್ಕಿದೆ?

3 ಇರೋದ್ರಲ್ಲೇ ತುಂಬ ಅಮೂಲ್ಯ ಸಂಪತ್ತು ಯೆಹೋವನೊಟ್ಟಿಗಿನ ಸ್ನೇಹ. (ಕೀರ್ತ. 25:14) ಪಾಪಿಗಳಾದ ನಮ್ಗೆ ಪರಿಪೂರ್ಣ, ಪರಿಶುದ್ಧ ದೇವ್ರೊಟ್ಟಿಗೆ ಸ್ನೇಹ ಬೆಳೆಸೋಕೆ ಆಗುತ್ತಾ? ಆಗುತ್ತೆ. ಯಾಕೆಂದ್ರೆ ಯೇಸುವಿನ ವಿಮೋಚನಾ ಯಜ್ಞವು ಮಾನವಕುಲದ ‘ಪಾಪವನ್ನು ತೆಗೆದುಹಾಕುತ್ತದೆ.’ (ಯೋಹಾ. 1:29) ಮಾನವಕುಲದ ರಕ್ಷಣೆಗಾಗಿ ತಾನು ಮಾಡಿದ ಏರ್ಪಾಡನ್ನು ಯೇಸು ನಂಬಿಗಸ್ತಿಕೆಯಿಂದ ಪೂರೈಸುತ್ತಾನೆ ಅಂತ ಯೆಹೋವನಿಗೆ ತುಂಬ ಮೊದ್ಲೇ ಗೊತ್ತಿತ್ತು. ಹಾಗಾಗಿ ಯೇಸು ತನ್ನನ್ನು ಯಜ್ಞವಾಗಿ ಅರ್ಪಿಸಿಕೊಳ್ಳೋ ಮುಂಚೆ ಸಾವನ್ನಪ್ಪಿದ ಮನುಷ್ಯರು ಸಹ ಯೆಹೋವನ ಸ್ನೇಹಿತರಾಗಬಹುದಿತ್ತು.—ರೋಮ. 3:25.

4. ಯೇಸು ಭೂಮಿಗೆ ಬರೋ ಮುಂಚೆ ಜೀವಿಸಿದ ಯೆಹೋವನ ಕೆಲವು ಸ್ನೇಹಿತರ ಉದಾಹರಣೆ ತಿಳಿಸಿ.

4 ಯೇಸು ಭೂಮಿಗೆ ಬರೋ ಮುಂಚೆ ಇದ್ದ ಯೆಹೋವನ ಕೆಲವು ಸ್ನೇಹಿತರ ಬಗ್ಗೆ ನೋಡಿ. ಅಬ್ರಹಾಮ ದೇವ್ರ ಮೇಲೆ ತುಂಬ ನಂಬಿಕೆ ಇದ್ದಂಥ ವ್ಯಕ್ತಿ. ಅವನು ಸತ್ತು 1,000 ವರ್ಷಗಳಾದ ಮೇಲೂ ಯೆಹೋವನು ಅವನನ್ನು “ನನ್ನ ಸ್ನೇಹಿತ” ಅಂತ ಕರೆದ. (ಯೆಶಾ. 41:8) ಅದರರ್ಥ ಜನ ಸತ್ತುಹೋದ್ರೂ ಯೆಹೋವನು ಅವರನ್ನು ಇನ್ನೂ ತನ್ನ ಆಪ್ತ ಸ್ನೇಹಿತರಾಗಿಯೇ ನೋಡ್ತಾನೆ. ಅಬ್ರಹಾಮನು ಯೆಹೋವನ ಸ್ಮರಣೆಯಲ್ಲಿ ಜೀವಂತವಾಗಿದ್ದಾನೆ. (ಲೂಕ 20:37, 38) ಇನ್ನೊಂದು ಉದಾಹರಣೆ ಯೋಬನದು. ಸ್ವರ್ಗದಲ್ಲಿ ದೇವದೂತರು ಒಟ್ಟಾಗಿ ಕೂಡಿಬಂದಾಗ ಯೆಹೋವನು ಯೋಬನ ಬಗ್ಗೆ ತುಂಬ ಮೆಚ್ಚುಗೆಯ ಮಾತುಗಳನ್ನಾಡಿದ. ಅವನ ಮೇಲೆ ಯೆಹೋವನಿಗೆ ತುಂಬ ಭರವಸೆಯಿತ್ತು. ಯೋಬನು “ದೇವರಲ್ಲಿ ಭಯಭಕ್ತಿಯುಳ್ಳವನಾಗಿ ಕೆಟ್ಟದ್ದನ್ನು ನಿರಾಕರಿಸುತ್ತಾ ನಿರ್ದೋಷಿಯೂ ಯಥಾರ್ಥಚಿತ್ತನೂ ಆಗಿದ್ದಾನೆ” ಅಂತ ಹೇಳಿದ. (ಯೋಬ 1:6-8) ಸುಳ್ಳಾರಾಧನೆ ರಾರಾಜಿಸುತ್ತಿದ್ದ ದೇಶದಲ್ಲಿ ಸುಮಾರು 80 ವರ್ಷಗಳ ವರೆಗೆ ಇದ್ರೂ ನಂಬಿಗಸ್ತನಾಗಿ ಸೇವೆ ಮಾಡಿದ ದಾನಿಯೇಲನ ಬಗ್ಗೆ ಯೆಹೋವನಿಗೆ ಹೇಗನಿಸ್ತು? ಯೆಹೋವನು ದೇವದೂತರ ಮೂಲಕ ಮೂರು ಸಲ ದಾನಿಯೇಲನು ತನಗೆ “ಅತಿಪ್ರಿಯನು” ಅಂತ ಹೇಳಿ ಅವನನ್ನು ಬಲಪಡಿಸಿದನು. (ದಾನಿ. 9:23; 10:11, 19) ತೀರಿಹೋಗಿರೋ ತನ್ನೆಲ್ಲಾ ಪ್ರಿಯ ಸ್ನೇಹಿತರನ್ನು ಪುನರುತ್ಥಾನ ಮಾಡೋಕೆ ಯೆಹೋವನು ತುದಿಗಾಲಲ್ಲಿ ನಿಂತಿದ್ದಾನೆ ಅನ್ನೋದಂತೂ ಖಂಡಿತ.—ಯೋಬ 14:15.

ಕಣ್ಣಿಗೆ ಕಾಣದ ಸಂಪತ್ತುಗಳಿಗೆ ನಾವು ಕೃತಜ್ಞರಾಗಿದ್ದೇವೆ ಅಂತ ಹೇಗೆಲ್ಲಾ ತೋರಿಸಿಕೊಡಬಹುದು? (ಪ್ಯಾರ 5 ನೋಡಿ) b

5. ಯೆಹೋವನ ಆಪ್ತ ಸ್ನೇಹಿತರಾಗಬೇಕಂದ್ರೆ ನಾವೇನು ಮಾಡ್ಬೇಕು?

5 ಇಂದು ಲಕ್ಷಾಂತರ ಅಪರಿಪೂರ್ಣ ಮನುಷ್ಯರು ಯೆಹೋವನ ಆಪ್ತ ಸ್ನೇಹಿತರಾಗಿದ್ದಾರೆ. ಭೂಮಿಯಾದ್ಯಂತ ಇರೋ ಅನೇಕ ಪುರುಷರು, ಸ್ತ್ರೀಯರು ಮತ್ತು ಮಕ್ಕಳು ದೇವರ ಸ್ನೇಹಿತರಾಗಬೇಕೆಂಬ ಉದ್ದೇಶದಿಂದ ಆತನಿಗೆ ಇಷ್ಟ ಆಗೋ ತರ ನಡಕೊಳ್ತಿದ್ದಾರೆ. ‘ಯಥಾರ್ಥರಿಗೆ ಯೆಹೋವನ ಸ್ನೇಹ ದೊರೆಯುತ್ತೆ.’ (ಜ್ಞಾನೋ. 3:32) ಯೇಸುವಿನ ವಿಮೋಚನಾ ಮೌಲ್ಯದ ಮೇಲೆ ನಾವು ನಂಬಿಕೆಯಿಟ್ಟರೆ ಯೆಹೋವನಿಗೆ ಸ್ನೇಹಿತರಾಗ್ತೇವೆ, ನಮ್ಮ ಜೀವನವನ್ನು ಆತನಿಗೆ ಸಮರ್ಪಿಸಿಕೊಂಡು ದೀಕ್ಷಾಸ್ನಾನ ಪಡಕೊಳ್ತೇವೆ. ಇದನ್ನೆಲ್ಲಾ ಮಾಡಿದ್ರೆ ವಿಶ್ವದಲ್ಲೇ ಮಹಾನ್‌ ವ್ಯಕ್ತಿಯಾದ ಯೆಹೋವನ ಸ್ನೇಹ ಆನಂದಿಸ್ತಿರೋ ಲಕ್ಷಾಂತರ ಮಂದಿಯಲ್ಲಿ ನಾವೂ ಒಬ್ಬರಾಗ್ತೇವೆ!

6. ದೇವರೊಟ್ಟಿಗಿನ ಸ್ನೇಹ ನಮ್ಗೆ ತುಂಬ ಅಮೂಲ್ಯ ಅಂತ ಹೇಗೆ ತೋರಿಸಿಕೊಡ್ಬಹುದು?

6 ದೇವರೊಟ್ಟಿಗಿನ ಸ್ನೇಹ ನಮ್ಗೆ ತುಂಬ ಅಮೂಲ್ಯ ಅಂತ ಹೇಗೆ ತೋರಿಸಿಕೊಡ್ಬಹುದು? ನೂರಕ್ಕಿಂತ ಹೆಚ್ಚು ವರ್ಷಗಳು ದೇವರಿಗೆ ನಂಬಿಗಸ್ತರಾಗಿ ಉಳಿದ ಅಬ್ರಹಾಮ ಮತ್ತು ಯೋಬನಂತೆ ನಾವು ಸಹ ಈ ದುಷ್ಟ ವ್ಯವಸ್ಥೆಯಲ್ಲಿ ಇರೋ ತನಕ ಯೆಹೋವನಿಗೆ ನಂಬಿಗಸ್ತರಾಗಿರೋಣ. ದಾನಿಯೇಲನಂತೆ ನಮ್ಮ ಜೀವಕ್ಕಿಂತ ಹೆಚ್ಚಾಗಿ ಯೆಹೋವನ ಸ್ನೇಹಕ್ಕೆ ಮೊದಲ ಸ್ಥಾನ ಕೊಡೋಣ. (ದಾನಿ. 6:7, 10, 16, 22) ನಮಗೇನೇ ಕಷ್ಟ ಬಂದ್ರೂ ಅದನ್ನು ತಾಳಿಕೊಳ್ಳೋಕೆ ಯೆಹೋವನ ಸಹಾಯ ಪಡಕೊಳ್ಳೋಣ. ಆಗ ಆತನೊಟ್ಟಿಗಿನ ಸ್ನೇಹಸಂಬಂಧ ಶಾಶ್ವತವಾಗಿ ಉಳಿಯುತ್ತೆ.—ಫಿಲಿ. 4:13.

ಪ್ರಾರ್ಥನೆ ಎಂಬ ಉಡುಗೊರೆ

7. (ಎ) ಜ್ಞಾನೋಕ್ತಿ 15:8 ರ ಪ್ರಕಾರ ಯೆಹೋವನಿಗೆ ನಮ್ಮ ಪ್ರಾರ್ಥನೆಗಳ ಬಗ್ಗೆ ಹೇಗನಿಸುತ್ತೆ? (ಬಿ) ಆತ ನಮ್ಮ ಪ್ರಾರ್ಥನೆಗಳಿಗೆ ಹೇಗೆ ಉತ್ರ ಕೊಡ್ತಾನೆ?

7 ಪ್ರಾರ್ಥನೆ ಕಣ್ಣಿಗೆ ಕಾಣದ ಇನ್ನೊಂದು ಸಂಪತ್ತಾಗಿದೆ. ಆಪ್ತ ಸ್ನೇಹಿತ್ರು ಒಬ್ಬರಿಗೊಬ್ಬರು ತಮ್ಮ ಭಾವನೆಗಳನ್ನು, ಯೋಚನೆಗಳನ್ನು ಹೇಳಿಕೊಳ್ಳೋಕೆ ಇಷ್ಟಪಡ್ತಾರೆ. ಯೆಹೋವನ ಸ್ನೇಹದ ವಿಷ್ಯದಲ್ಲೂ ಇದು ನಿಜ. ಯೆಹೋವನು ಬೈಬಲ್‌ ಮೂಲಕ ಆತನ ಯೋಚನೆಗಳನ್ನು, ಭಾವನೆಗಳನ್ನು ನಮಗೆ ತಿಳಿಸ್ತಾನೆ. ನಾವು ಪ್ರಾರ್ಥನೆಯಲ್ಲಿ ನಮ್ಮ ಅಂತರಾಳದ ಅನಿಸಿಕೆಗಳನ್ನು ಮತ್ತು ಭಾವನೆಗಳನ್ನು ಯೆಹೋವನಿಗೆ ಹೇಳಿಕೊಳ್ತೇವೆ. ಆತ ನಮ್ಮ ಪ್ರಾರ್ಥನೆಗಳನ್ನು ಕೇಳಿಸಿಕೊಳ್ಳೋಕೆ ಇಷ್ಟಪಡ್ತಾನೆ. (ಜ್ಞಾನೋಕ್ತಿ 15:8 ಓದಿ.) ನಮ್ಮ ಪ್ರೀತಿಯ ಸ್ನೇಹಿತನಾಗಿರೋ ಯೆಹೋವ ನಮ್ಮ ಪ್ರಾರ್ಥನೆಗಳನ್ನು ಕೇಳ್ತಾನೆ, ಉತ್ತರನೂ ಕೊಡ್ತಾನೆ. ಕೆಲವೊಮ್ಮೆ ನಮ್ಗೆ ಉತ್ತರ ಬೇಗ ಸಿಗುತ್ತೆ, ಇನ್ನು ಕೆಲವೊಮ್ಮೆ ಅದಕ್ಕಾಗಿ ನಾವು ಪ್ರಾರ್ಥನೆ ಮಾಡುತ್ತಲೇ ಇರಬೇಕು. ಆದ್ರೂ ಸರಿಯಾದ ಸಮ್ಯಕ್ಕೆ, ಉತ್ತಮವಾದ ರೀತಿಯಲ್ಲಿ ಉತ್ತರವನ್ನು ಕೊಟ್ಟೇ ಕೊಡುತ್ತಾನೆಂಬ ಭರವಸೆ ನಮಗಿರಬೇಕು. ಆದ್ರೆ ನಾವು ನೆನಸಿದ ತರಾನೇ ಉತ್ತರ ಕೊಡ್ತಾನೆ ಅಂತ ಹೇಳಕ್ಕಾಗಲ್ಲ. ಉದಾಹರಣೆಗೆ, ನಮಗಿರೋ ಕಷ್ಟವನ್ನು ತೆಗೆಯೋ ಬದಲು ಅದನ್ನು ‘ತಾಳಿಕೊಳ್ಳೋಕೆ’ ಬೇಕಾದ ವಿವೇಕ ಮತ್ತು ಬಲವನ್ನು ಆತನು ಕೊಡಬಹುದು.—1 ಕೊರಿಂ. 10:13.

(ಪ್ಯಾರ 8 ನೋಡಿ) c

8. ಪ್ರಾರ್ಥನೆ ಎಂಬ ಬೆಲೆಕಟ್ಟಲಾಗದ ಉಡುಗೊರೆಗೆ ನಾವು ಹೇಗೆ ಕೃತಜ್ಞತೆ ತೋರಿಸಬಹುದು?

8 ಪ್ರಾರ್ಥನೆ ಎಂಬ ಬೆಲೆಕಟ್ಟಲಾಗದ ಉಡುಗೊರೆಗೆ ನಾವು ಹೇಗೆ ಕೃತಜ್ಞತೆ ತೋರಿಸಬಹುದು? “ಎಡೆಬಿಡದೆ ಪ್ರಾರ್ಥನೆಮಾಡಿರಿ” ಅಂತ ಯೆಹೋವನು ಕೊಟ್ಟಿರೋ ಸಲಹೆ ಪಾಲಿಸೋ ಮೂಲಕ ಕೃತಜ್ಞತೆ ತೋರಿಸಬಹುದು. (1 ಥೆಸ. 5:17) ನಾವು ಪ್ರಾರ್ಥನೆ ಮಾಡಲೇಬೇಕು ಅಂತ ಯೆಹೋವ ಬಲವಂತ ಮಾಡಲ್ಲ. ಆತನು ನಮ್ಮ ಇಚ್ಛಾಸ್ವಾತಂತ್ರ್ಯವನ್ನು ಗೌರವಿಸ್ತಾನೆ ಮತ್ತು ನಾವು ‘ಪಟ್ಟುಹಿಡಿದು ಪ್ರಾರ್ಥಿಸಬೇಕೆಂದು’ ಬಯಸ್ತಾನೆ. (ರೋಮ. 12:12) ಹಾಗಾಗಿ ಪ್ರತಿದಿನ ನಾವು ಆಗಾಗ ಪ್ರಾರ್ಥನೆ ಮಾಡಿ ಕೃತಜ್ಞತೆ ತೋರಿಸ್ಬಹುದು. ಆ ಪ್ರಾರ್ಥನೆಗಳಲ್ಲಿ ಯೆಹೋವನಿಗೆ ಕೃತಜ್ಞತೆ ಹೇಳೋದನ್ನು, ಮಹಿಮೆ ಸಲ್ಲಿಸೋದನ್ನು ಮರೆಯಬಾರ್ದು.—ಕೀರ್ತ. 145:2, 3.

9. ಪ್ರಾರ್ಥನೆ ಬಗ್ಗೆ ಒಬ್ಬ ಸಹೋದರನ ಅನಿಸಿಕೆ ಏನು ಮತ್ತು ನಿಮ್ಮ ಅನಿಸಿಕೆ ಏನು?

9 ನಾವೆಷ್ಟು ಯೆಹೋವನ ಸೇವೆ ಮಾಡ್ತಾ ಮುಂದುವರಿಯುತ್ತೇವೋ ಮತ್ತು ನಮ್ಮ ಪ್ರಾರ್ಥನೆಗಳಿಗೆ ಆತನು ಹೇಗೆ ಉತ್ರ ಕೊಡ್ತಾನೆ ಅಂತ ಅರ್ಥ ಮಾಡಿಕೊಳ್ಳುತ್ತೇವೋ ಅಷ್ಟೇ ಹೆಚ್ಚು ಪ್ರಾರ್ಥನೆ ಕಡೆಗಿರುವ ಗಣ್ಯತೆ ಬೆಳೆಯುತ್ತೆ. 47 ವರ್ಷದಿಂದ ಪೂರ್ಣ ಸಮಯ ಸೇವೆ ಮಾಡುತ್ತಿರೋ ಕ್ರಿಸ್‌ ಎಂಬ ಸಹೋದರನ ಉದಾಹರಣೆ ನೋಡಿ. ಅವ್ರು ಹೀಗೆ ಹೇಳ್ತಾರೆ: “ಬೆಳಗಿನ ಜಾವದಲ್ಲೇ ಪ್ರಾರ್ಥನೆ ಮಾಡೋಕೆ ನನ್ಗೆ ತುಂಬ ಇಷ್ಟ ಆಗುತ್ತೆ. ಸೂರ್ಯನ ಮೊದಲ ಕಿರಣಗಳು ಇಬ್ಬನಿಯ ಮೇಲೆ ಬಿದ್ದು ಅದು ಹೊಳೆಯುವ ಸಮ್ಯದಲ್ಲೇ ನಾನೂ ಯೆಹೋವನ ಹತ್ರ ಮಾತಾಡೋದು ಒಂದು ಚೈತನ್ಯಕರ ಅನುಭವ ಕೊಡುತ್ತೆ. ಆತನು ಕೊಟ್ಟಿರೋ ಉಡುಗೊರೆಗಳಿಗೆ, ಪ್ರಾರ್ಥನೆ ಎಂಬ ವರಕ್ಕೆ ಕೃತಜ್ಞತೆ ಹೇಳ್ತೀನಿ. ದಿನದ ಕೊನೆಯಲ್ಲಿ ಪ್ರಾರ್ಥನೆ ಮಾಡಿದ ನಂತ್ರ ಶುದ್ಧ ಮನಸ್ಸಾಕ್ಷಿಯಿಂದ ನಿದ್ರೆ ಮಾಡೋಕೆ ಆಗುತ್ತೆ.”

ಪವಿತ್ರಾತ್ಮ ಎಂಬ ವರ

10. ನಾವ್ಯಾಕೆ ದೇವರ ಪವಿತ್ರಾತ್ಮವನ್ನು ಅಮೂಲ್ಯವಾಗಿ ನೋಡ್ಬೇಕು?

10 ದೇವರ ಪವಿತ್ರಾತ್ಮವು ನಮ್ಮ ಕಣ್ಣಿಗೆ ಕಾಣದಂಥ ಇನ್ನೊಂದು ಸಂಪತ್ತಾಗಿದೆ. ಪವಿತ್ರಾತ್ಮಕ್ಕಾಗಿ ಪ್ರಾರ್ಥನೆ ಮಾಡುತ್ತಾ ಇರಿ ಅಂತ ಯೇಸು ನಮಗೆ ಸಲಹೆ ಕೊಟ್ಟಿದ್ದಾನೆ. (ಲೂಕ 11:9, 13) ನಮ್ಗೆ ಶಕ್ತಿಯನ್ನು ಅದ್ರಲ್ಲೂ ‘ಸಹಜ ಶಕ್ತಿಗಿಂತ ಹೆಚ್ಚಿನ ಶಕ್ತಿಯನ್ನು’ ಕೊಡಲು ಯೆಹೋವನು ತನ್ನ ಪವಿತ್ರಾತ್ಮ ಉಪಯೋಗಿಸ್ತಾನೆ. (2 ಕೊರಿಂ. 4:7; ಅ. ಕಾ. 1:8) ನಮಗೇನೇ ಕಷ್ಟ ಬಂದ್ರೂ ಪವಿತಾತ್ಮದ ಸಹಾಯದಿಂದ ನಾವು ಅದನ್ನು ತಾಳಿಕೊಳ್ಳಬಹುದು.

(ಪ್ಯಾರ 11 ನೋಡಿ) d

11. ಪವಿತ್ರಾತ್ಮ ನಮ್ಗೆ ಹೇಗೆ ಸಹಾಯ ಮಾಡುತ್ತೆ?

11 ದೇವ್ರ ಸೇವೆಯಲ್ಲಿ ಸಿಗೋ ನೇಮಕವನ್ನು ಮಾಡೋಕೂ ಪವಿತ್ರಾತ್ಮ ಸಹಾಯ ಮಾಡುತ್ತೆ. ಅದು ನಮ್ಮಲ್ಲಿರೋ ಪ್ರತಿಭೆ, ಸಾಮರ್ಥ್ಯವನ್ನು ಹೆಚ್ಚಿಸುತ್ತೆ. ಕ್ರೈಸ್ತ ಜವಾಬ್ದಾರಿಗಳನ್ನು ಪೂರೈಸೋಕೆ ನಮ್ಮನ್ನು ಅರ್ಹರನ್ನಾಗಿ ಮಾಡುತ್ತೆ. ದೇವ್ರ ಸೇವೆಯಲ್ಲಿ ಸಿಗೋ ಪ್ರತಿಫಲಕ್ಕೆ ಮುಖ್ಯ ಕಾರಣ ಪವಿತ್ರಾತ್ಮದ ಸಹಾಯ ಅಂತ ನಮ್ಗೆ ಚೆನ್ನಾಗಿ ಗೊತ್ತು.

12. ಕೀರ್ತನೆ 139:23, 24 ಕ್ಕನುಸಾರ ಯಾವ ವಿಷ್ಯಕ್ಕಾಗಿ ನಮಗೆ ಪವಿತ್ರಾತ್ಮದ ಸಹಾಯ ಬೇಕೆಂದು ಪ್ರಾರ್ಥಿಸಬಹುದು?

12 ನಾವು ಪವಿತ್ರಾತ್ಮವನ್ನು ತುಂಬ ಮಾನ್ಯ ಮಾಡುತ್ತೇವೆಂದು ಇನ್ನೊಂದು ರೀತಿಯಲ್ಲೂ ತೋರಿಸಿಕೊಡ್ಬಹುದು. ಹೇಗಂದ್ರೆ, ನಮ್ಮ ಹೃದಯದಲ್ಲಿ ತಪ್ಪಾದ ಯೋಚನೆಗಳು, ಬಯಕೆಗಳು ಇದ್ರೆ ಅದನ್ನು ಕಂಡುಹಿಡಿಯೋಕೆ ಸಹಾಯ ಮಾಡುವಂತೆ ಯೆಹೋವನ ಹತ್ರ ಬೇಡಿಕೊಳ್ಳಬೇಕು. (ಕೀರ್ತನೆ 139:23, 24 ಓದಿ.) ಆಗ ನಮ್ಮಲ್ಲಿರೋ ಬಲಹೀನತೆಗಳ ಬಗ್ಗೆ ತಿಳುಕೊಳ್ಳೋಕೆ ಯೆಹೋವನ ಪವಿತ್ರಾತ್ಮ ಸಹಾಯ ಮಾಡುತ್ತೆ. ತಪ್ಪಾದ ಯೋಚನೆ, ಬಯಕೆ ಇದೆ ಅಂತ ಗೊತ್ತಾದ್ರೆ ಅವುಗಳನ್ನು ಬಿಟ್ಟುಬಿಡೋಕೆ ಪವಿತ್ರಾತ್ಮದ ಸಹಾಯ ಕೊಡು ಅಂತ ಯೆಹೋವನ ಹತ್ರ ಪ್ರಾರ್ಥಿಸಬೇಕು. ಹೀಗೆ ಮಾಡೋ ಮೂಲಕ ನಮ್ಗೆ ಪವಿತ್ರಾತ್ಮದ ಸಹಾಯ ಬೇಕೇ ಬೇಕು ಅನ್ನೋದನ್ನು ತೋರಿಸಿಕೊಡ್ತೇವೆ.—ಎಫೆ. 4:30.

13. ಪವಿತ್ರಾತ್ಮದ ಕಡೆಗಿರೋ ನಮ್ಮ ಗಣ್ಯತೆಯನ್ನು ಹೇಗೆ ಹೆಚ್ಚಿಸಿಕೊಳ್ಳಬಹುದು?

13 ಇಂದು ಪವಿತ್ರಾತ್ಮ ಏನೆಲ್ಲಾ ಸಾಧಿಸ್ತಿದೆ ಅನ್ನೋದನ್ನು ನೋಡುವಾಗ್ಲೂ ಅದ್ರ ಕಡೆಗಿರೋ ನಮ್ಮ ಗಣ್ಯತೆ ಹೆಚ್ಚಾಗುತ್ತೆ. ಯೇಸು ಸ್ವರ್ಗಕ್ಕೆ ಹೋಗೋ ಮುಂಚೆ ತನ್ನ ಶಿಷ್ಯರಿಗೆ, “ಪವಿತ್ರಾತ್ಮವು ನಿಮ್ಮ ಮೇಲೆ ಬರಲು ನೀವು ಬಲವನ್ನು ಹೊಂದಿ . . . ಭೂಮಿಯ ಕಟ್ಟಕಡೆಯ ವರೆಗೂ ನನಗೆ ಸಾಕ್ಷಿಗಳಾಗಿರುವಿರಿ” ಎಂದು ಹೇಳಿದ್ನು. (ಅ. ಕಾ. 1:8) ಈ ಮಾತು ಇಂದು ಅದ್ಭುತವಾಗಿ ನೆರವೇರುತ್ತಿದೆ. ಭೂಮಿಯ ಎಲ್ಲಾ ಕಡೆಯಲ್ಲಿರೋ ಸುಮಾರು 86 ಲಕ್ಷದಷ್ಟು ಜನ್ರು ಇಂದು ಯೆಹೋವನ ಆರಾಧನೆ ಮಾಡ್ತಿದ್ದಾರೆ. ಅಷ್ಟೇ ಅಲ್ಲ ದೇವಜನರಾಗಿರೋ ನಮ್ಮ ಮಧ್ಯೆ ಶಾಂತಿ ಐಕ್ಯತೆ ಇದೆ. ಇದಕ್ಕೆ ಕಾರಣ ಏನಂದ್ರೆ, ದೇವರ ಪವಿತ್ರಾತ್ಮವು ಪ್ರೀತಿ, ಆನಂದ, ಶಾಂತಿ, ತಾಳ್ಮೆ, ದಯೆ, ಒಳ್ಳೇತನ, ನಂಬಿಕೆ, ಸೌಮ್ಯಭಾವ ಮತ್ತು ಸ್ವನಿಯಂತ್ರಣ ಗುಣಗಳನ್ನು ಬೆಳೆಸಿಕೊಳ್ಳೋಕೆ ನಮ್ಗೆ ಸಹಾಯ ಮಾಡ್ತಿದೆ. (ಗಲಾ. 5:22, 23) ನಿಜಕ್ಕೂ ಪವಿತ್ರಾತ್ಮ ನಮ್ಗೆ ಸಿಕ್ಕಿರೋ ಅಮೂಲ್ಯ ಉಡುಗೊರೆ!

ಸೇವೆಗೆ ಯೆಹೋವ, ಯೇಸು, ದೇವದೂತರ ಸಹಾಯ

14. ಕಣ್ಣಿಗೆ ಕಾಣದ ಯಾವ ಸಹಾಯ ನಾವು ಸೇವೆಗೆ ಹೋದಾಗ ಸಿಗುತ್ತೆ?

14 ಯೆಹೋವ, ಯೇಸು ಮತ್ತು ದೇವದೂತರೊಂದಿಗೆ ‘ಕೆಲಸಮಾಡುವುದು’ ಸಹ ನಮ್ಗೆ ಸಿಕ್ಕಿರೋ ಇನ್ನೊಂದು ಸಂಪತ್ತು. (2 ಕೊರಿಂ. 6:1) ನಾವು ಸೇವೆಯಲ್ಲಿರುವಾಗೆಲ್ಲ ಅವರ ಜೊತೆ ಕೆಲಸ ಮಾಡುತ್ತೇವೆ. ಪೌಲನು ತನ್ನ ಬಗ್ಗೆ ಮತ್ತು ಸೇವೆ ಮಾಡುವ ಇತರರ ಬಗ್ಗೆ ಮಾತಾಡುತ್ತಾ, “ನಾವು ದೇವರ ಜೊತೆಕೆಲಸಗಾರರಾಗಿದ್ದೇವೆ” ಅಂತ ಹೇಳಿದ್ನು. (1 ಕೊರಿಂ. 3:9) ಸೇವೆ ಮಾಡ್ವಾಗ ನಾವು ಯೇಸುವಿನ ಜೊತೆಕೆಲಸಗಾರರಾಗಿಯೂ ಇರ್ತೇವೆ. “ಎಲ್ಲ ಜನಾಂಗಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ” ಅಂತ ತನ್ನ ಹಿಂಬಾಲಕರಿಗೆ ಯೇಸು ಆಜ್ಞೆ ಕೊಟ್ಟ ಮೇಲೆ ಏನು ಹೇಳಿದ್ನು? “ನಾನು . . . ನಿಮ್ಮ ಸಂಗಡ ಇರುತ್ತೇನೆ” ಅಂತ ಹೇಳಿದ್ನು. (ಮತ್ತಾ. 28:19, 20) ದೇವದೂತರು ನಮ್ಮ ಜೊತೆ ಕೆಲಸ ಮಾಡ್ತಾರಾ? ‘ಭೂನಿವಾಸಿಗಳಿಗೆ ನಿತ್ಯವಾದ ಸುವಾರ್ತೆಯನ್ನು’ ನಾವು ಸಾರುವಾಗ ದೇವದೂತರು ನಮ್ಮನ್ನು ನಿರ್ದೇಶಿಸುತ್ತಾರೆ. ಇದು ನಿಜಕ್ಕೂ ನಮಗೆ ಸಿಕ್ಕಿರೋ ಆಶೀರ್ವಾದ!—ಪ್ರಕ. 14:6.

15. ನಮ್ಮ ಸೇವೆಯಲ್ಲಿ ಯೆಹೋವನು ಪ್ರಾಮುಖ್ಯ ಪಾತ್ರವನ್ನು ನಿರ್ವಹಿಸುತ್ತಾನೆ ಅನ್ನೋದಕ್ಕೆ ಬೈಬಲಿನ ಒಂದು ಉದಾಹರಣೆ ಕೊಡಿ.

15 ನಮಗೆ ಸಿಗುತ್ತಿರೋ ಈ ಸಹಾಯದಿಂದ ಏನು ಮಾಡೋಕಾಗ್ತಿದೆ? ನಾವು ದೇವರ ರಾಜ್ಯ ಸಂದೇಶವನ್ನು ಬಿತ್ತಿದಾಗ ಕೆಲವು ಬೀಜಗಳು ಒಳ್ಳೇ ನೆಲದಂತಿರುವ ಹೃದಯಗಳ ಮೇಲೆ ಬೀಳುತ್ತೆ ಮತ್ತು ಅವು ಬೆಳೆಯುತ್ತವೆ. (ಮತ್ತಾ. 13:18, 23) ಆ ಸತ್ಯದ ಬೀಜಗಳು ಬೆಳೆದು ಫಲ ಕೊಡುವಂತೆ ಮಾಡೋದು ಯಾರು? “ತಂದೆಯು ಸೆಳೆದ ಹೊರತು” ಯಾವ ಮನುಷ್ಯನು ತನ್ನ ಹಿಂಬಾಲಕನಾಗಲಾರನು ಅಂತ ಯೇಸು ಹೇಳಿದ್ನು. (ಯೋಹಾ. 6:44) ಬೈಬಲ್‌ ಇದಕ್ಕೊಂದು ಒಳ್ಳೇ ಉದಾಹರಣೆ ಕೊಡುತ್ತೆ. ಪೌಲನು ಫಿಲಿಪ್ಪಿ ಪಟ್ಟಣದ ಹೊರಗೆ ಸ್ತ್ರೀಯರ ಗುಂಪಿಗೆ ಸಾಕ್ಷಿ ನೀಡಿದಾಗ ಏನಾಯಿತೆಂದು ನೆನಪಿಸಿಕೊಳ್ಳಿ. ಆ ಸ್ತ್ರೀಯರಲ್ಲಿ ಒಬ್ಬಳಾಗಿದ್ದ ಲುದ್ಯಳ ಬಗ್ಗೆ ಬೈಬಲ್‌ ಹೀಗೆ ಹೇಳುತ್ತೆ: “ಪೌಲನು ಹೇಳುತ್ತಿದ್ದ ಮಾತುಗಳಿಗೆ ನಿಕಟವಾಗಿ ಗಮನಕೊಡುವಂತೆ ಯೆಹೋವನು [ಲುದ್ಯಳ] ಹೃದಯವನ್ನು ವಿಶಾಲವಾಗಿ ತೆರೆದನು.” (ಅ. ಕಾ. 16:13-15) ಯೆಹೋವನು ಲುದ್ಯಳನ್ನು ಸೆಳೆದಂತೆ ಲಕ್ಷಾಂತರ ಜನರನ್ನು ತನ್ನ ಕಡೆಗೆ ಸೆಳೆದಿದ್ದಾನೆ.

16. ಸೇವೆಯಲ್ಲಿ ನಮಗೆ ಒಳ್ಳೇ ಪ್ರತಿಫಲ ಸಿಕ್ಕಾಗ ನಾವು ಯಾರಿಗೆ ಮಹಿಮೆ ಸಲ್ಲಿಸಬೇಕು?

16 ಸೇವೆಯಲ್ಲಿ ನಮ್ಗೆ ಒಳ್ಳೇ ಪ್ರತಿಫಲ ಸಿಗಲು ನಿಜವಾಗ್ಲೂ ಯಾರು ಕಾರಣ? ಇದಕ್ಕುತ್ತರ ಪೌಲನು ಕೊರಿಂಥ ಸಭೆಗೆ ಬರೆದ ಮಾತುಗಳಲ್ಲಿದೆ. ಅಲ್ಲಿ ಆತನು ಹೇಳಿದ್ದು: “ನಾನು ನೆಟ್ಟೆನು, ಅಪೊಲ್ಲೋಸನು ನೀರುಹೊಯ್ದನು, ಆದರೆ ದೇವರು ಅದನ್ನು ಬೆಳೆಸುತ್ತಾ ಬಂದನು. ಆದುದರಿಂದ ನೆಡುವವನಾಗಲಿ ನೀರು ಹೊಯ್ಯುವವನಾಗಲಿ ವಿಶೇಷವಾದವನಲ್ಲ, ಅದನ್ನು ಬೆಳೆಯುವಂತೆ ಮಾಡುವ ದೇವರೇ ವಿಶೇಷವಾದವನು.” (1 ಕೊರಿಂ. 3:6, 7) ಸೇವೆಯಲ್ಲಿ ನಮಗೆ ಒಳ್ಳೇ ಪ್ರತಿಫಲ ಸಿಕ್ಕಾಗ ಪೌಲನಂತೆ ನಾವು ಸಹ ಯೆಹೋವನಿಗೆ ಮಹಿಮೆ ಸಲ್ಲಿಸಬೇಕು.

(ಪ್ಯಾರ 18 ನೋಡಿ) e

17. ಯೆಹೋವ, ಯೇಸು ಮತ್ತು ದೇವದೂತರ ಜೊತೆ ‘ಕೆಲಸಮಾಡುವ’ ಸುಯೋಗ ಸಿಕ್ಕಿರೋದಕ್ಕೆ ನಾವು ಹೇಗೆ ಕೃತಜ್ಞತೆ ತೋರಿಸಬಹುದು?

17 ಯೆಹೋವ, ಯೇಸು ಮತ್ತು ದೇವದೂತರ ಜೊತೆ ‘ಕೆಲಸಮಾಡುವ’ ಸುಯೋಗ ಸಿಕ್ಕಿರೋದಕ್ಕೆ ನಾವು ಹೇಗೆ ಕೃತಜ್ಞತೆ ತೋರಿಸಬಹುದು? ಅವಕಾಶ ಸಿಕ್ಕಾಗೆಲ್ಲಾ ನಾವು ಭೇಟಿ ಮಾಡೋ ಪ್ರತಿಯೊಬ್ಬರಿಗೂ ಸುವಾರ್ತೆ ಸಾರಬೇಕು. ಉದಾಹರಣೆಗೆ ‘ಸಾರ್ವಜನಿಕವಾಗಿ ಮನೆಮನೆಯಲ್ಲಿಯೂ’ ನಾವು ಸುವಾರ್ತೆ ಸಾರಬಹುದು. (ಅ. ಕಾ. 20:20) ಅನೇಕರು ಅನೌಪಚಾರಿಕ ಸಾಕ್ಷಿಕಾರ್ಯವನ್ನೂ ಆನಂದಿಸ್ತಾರೆ. ಅವ್ರು ಅಪರಿಚಿತರನ್ನು ಭೇಟಿ ಮಾಡ್ದಾಗ, ಮೊದಲಿಗೆ ಸ್ನೇಹಭಾವದಿಂದ ಮಾತಾಡಿ ನಂತ್ರ ಸಂಭಾಷಣೆಯನ್ನು ಆರಂಭಿಸ್ತಾರೆ. ಆ ವ್ಯಕ್ತಿ ಒಳ್ಳೇ ರೀತಿಯಲ್ಲಿ ಪ್ರತಿಕ್ರಿಯಿಸಿದ್ರೆ ತುಂಬ ಜಾಣ್ಮೆಯಿಂದ ದೇವರ ರಾಜ್ಯದ ಸಂದೇಶವನ್ನು ತಿಳಿಸ್ತಾರೆ.

18-19. (ಎ) ಸತ್ಯದ ಬೀಜಕ್ಕೆ ನಾವು ನೀರು ಹೇಗೆ ಹಾಕಬೇಕು? (ಬಿ) ಒಬ್ಬ ಬೈಬಲ್‌ ವಿದ್ಯಾರ್ಥಿಗೆ ಯೆಹೋವ ಸಹಾಯ ಮಾಡ್ತಾನೆ ಅಂತ ತೋರಿಸೋ ಅನುಭವ ತಿಳಿಸಿ.

18 ‘ದೇವರ ಜೊತೆಕೆಲಸಗಾರರಾಗಿರುವ’ ನಾವು ಸತ್ಯದ ಬೀಜವನ್ನು ಬಿತ್ತೋದಷ್ಟೇ ಅಲ್ಲ ಅದಕ್ಕೆ ನೀರನ್ನೂ ಹಾಕಬೇಕು. ಸುವಾರ್ತೆಗೆ ಯಾರಾದ್ರೂ ಆಸಕ್ತಿ ತೋರಿಸ್ದಾಗ ಅವ್ರಿಗೆ ಬೈಬಲ್‌ ಸ್ಟಡಿ ಮಾಡಬೇಕೆಂಬ ಉದ್ದೇಶದಿಂದ ಅವ್ರನ್ನು ಪುನಃ ಭೇಟಿ ಮಾಡೋಕೆ ಪ್ರಯತ್ನ ಹಾಕಬೇಕು. ಸ್ಟಡಿ ಪ್ರಗತಿಯಾಗುತ್ತಾ ಹೋದಂತೆ ಅವ್ರು ತಮ್ಮ ಭಾವನೆ, ಯೋಚನೆಗಳನ್ನು ಯೆಹೋವನ ಸಹಾಯದಿಂದ ಬದಲಾಯಿಸಿಕೊಳ್ತಾರೆ. ಇದನ್ನು ನೋಡ್ವಾಗ ನಮ್ಗೆ ತುಂಬ ಖುಷಿಯಾಗುತ್ತೆ.

19 ಹಿಂದೆ ಮಂತ್ರವಾದಿಯಾಗಿದ್ದ ದಕ್ಷಿಣ ಆಫ್ರಿಕಾದ ಒಬ್ಬ ಸಹೋದರರ ಉದಾಹರಣೆ ನೋಡಿ. ಬೈಬಲಲ್ಲಿ ಕಲಿತ ವಿಷ್ಯ ಅವ್ರಿಗೆ ತುಂಬ ಇಷ್ಟವಾಯ್ತು. ಆದ್ರೆ ಸತ್ತವರ ಜೊತೆ ಮಾತಾಡುವುದರ ಬಗ್ಗೆ ಬೈಬಲ್‌ ಏನು ಹೇಳುತ್ತೋ ಅದನ್ನು ಸ್ವೀಕರಿಸೋಕೆ ಅವ್ರಿಗೆ ತುಂಬ ಕಷ್ಟ ಆಯ್ತು. (ಧರ್ಮೋ. 18:10-12) ಆದ್ರೂ ತಮ್ಮ ಯೋಚನೆಯನ್ನು ದೇವ್ರು ರೂಪಿಸುವಂತೆ ಬಿಟ್ಟುಕೊಟ್ರು. ಮತ್ತು ಸ್ವಲ್ಪದರಲ್ಲೇ ಮಂತ್ರವಾದಿ ಕೆಲಸವನ್ನು ಬಿಟ್ಟುಬಿಟ್ಟರು. ಇದ್ರಿಂದ ಜೀವನ ನಡೆಸೋಕೆ ಕಷ್ಟವಾಯ್ತು. ಈಗ 60 ವರ್ಷ ಪ್ರಾಯವಾಗಿರೋ ಆ ಸಹೋದರ ಹೀಗೆ ಹೇಳ್ತಾರೆ: “ಯೆಹೋವನ ಸಾಕ್ಷಿಗಳು ನನ್ಗೆ ಅನೇಕ ವಿಷ್ಯಗಳಲ್ಲಿ ಸಹಾಯ ಮಾಡಿದ್ದಾರೆ. ಒಂದು ಕೆಲ್ಸ ಸಿಗೋದಕ್ಕೂ ಅವ್ರು ನನ್ಗೆ ಸಹಾಯ ಮಾಡಿದ್ದಾರೆ. ಎಲ್ಲದಕ್ಕಿಂತ ಹೆಚ್ಚಾಗಿ ನಾನು ಯೆಹೋವನಿಗೆ ಆಭಾರಿಯಾಗಿದ್ದೇನೆ. ಯಾಕಂದ್ರೆ ಆತನ ಸಹಾಯದಿಂದ ಜೀವನದಲ್ಲಿ ಬದಲಾವಣೆ ಮಾಡಿಕೊಳ್ಳೋಕೆ ಆಗಿದೆ ಮತ್ತು ದೀಕ್ಷಾಸ್ನಾನ ಪಡೆದ ಸಾಕ್ಷಿಯಾಗಿ ಸೇವೆ ಮಾಡೋಕೆ ಸಾಧ್ಯವಾಗಿದೆ.”

20. ನಿಮ್ಮ ದೃಢತೀರ್ಮಾನ ಏನಾಗಿದೆ?

20 ಈ ಲೇಖನದಲ್ಲಿ ಕಣ್ಣಿಗೆ ಕಾಣದ ನಾಲ್ಕು ಸಂಪತ್ತುಗಳ ಬಗ್ಗೆ ಚರ್ಚಿಸಿದೆವು. ಯೆಹೋವನೊಟ್ಟಿಗಿರುವ ಸ್ನೇಹ ಎಲ್ಲದಕ್ಕಿಂತ ತುಂಬ ಅಮೂಲ್ಯವಾದ ಸಂಪತ್ತು. ಈ ಸ್ನೇಹದಿಂದಾಗಿ ನಾವು ಆತನಿಗೆ ಪ್ರಾರ್ಥಿಸಬಹುದು, ಆತನ ಪವಿತ್ರಾತ್ಮದ ಸಹಾಯ ಪಡ್ಕೊಳ್ಳಬಹುದು ಮತ್ತು ಸೇವೆಗೆ ಬೆಂಬಲ ಪಡ್ಕೊಳ್ಳಬಹುದು. ಇವು ಸಹ ಕಣ್ಣಿಗೆ ಕಾಣದ ಸಂಪತ್ತುಗಳಾಗಿವೆ. ಈ ಸಂಪತ್ತುಗಳ ಕಡೆಗಿರೋ ನಮ್ಮ ಗಣ್ಯತೆಯನ್ನು ಇನ್ನೂ ಹೆಚ್ಚಿಸಿಕೊಳ್ಳೋಕೆ ನಾವು ದೃಢತೀರ್ಮಾನ ಮಾಡೋಣ ಮತ್ತು ಯೆಹೋವ ನಮ್ಮ ಅಚ್ಚುಮೆಚ್ಚಿನ ಸ್ನೇಹಿತ ಆಗಿರೋದಕ್ಕೆ ಆತನಿಗೆ ಕೃತಜ್ಞತೆ ಹೇಳೋದನ್ನು ಯಾವತ್ತಿಗೂ ನಿಲ್ಲಿಸದಿರೋಣ.

ಗೀತೆ 19 ಪರದೈಸಿನ ಕುರಿತಾದ ದೇವರ ವಾಗ್ದಾನ

a ಹಿಂದಿನ ಲೇಖನದಲ್ಲಿ ದೇವ್ರು ಕೊಟ್ಟಿರೋ ಕೆಲ್ವು ಉಡುಗೊರೆಗಳ ಬಗ್ಗೆ ಚರ್ಚಿಸಿದೆವು. ಅವು ನಮ್ಮ ಕಣ್ಣಿಗೆ ಕಾಣುವ ಉಡುಗೊರೆಗಳು. ಈ ಲೇಖನದಲ್ಲಿ ಕಣ್ಣಿಗೆ ಕಾಣದ ಸಂಪತ್ತುಗಳ ಬಗ್ಗೆ ಚರ್ಚಿಸಲಿದ್ದೇವೆ. ಅವುಗಳಿಗೆ ಕೃತಜ್ಞರಾಗಿದ್ದೇವೆಂದು ಹೇಗೆ ತೋರಿಸಿಕೊಡ್ಬಹುದು ಅನ್ನೋದನ್ನೂ ಕಲಿಯಲಿದ್ದೇವೆ. ಇಂಥ ಅಮೂಲ್ಯ ಉಡುಗೊರೆಗಳನ್ನ ಕೊಟ್ಟಿರೋ ಯೆಹೋವನಿಗೆ ಇನ್ನೂ ಹೆಚ್ಚು ಕೃತಜ್ಞತೆ ತೋರಿಸುವುದಕ್ಕೂ ಈ ಲೇಖನ ಸಹಾಯ ಮಾಡುತ್ತೆ.

b ಚಿತ್ರ ವಿವರಣೆ: (1) ಯೆಹೋವನ ಸೃಷ್ಟಿಯನ್ನು ನೋಡ್ತಾ ಒಬ್ಬ ಸಹೋದರಿ ಆತನೊಟ್ಟಿಗಿರುವ ತನ್ನ ಸ್ನೇಹಸಂಬಂಧದ ಬಗ್ಗೆ ಧ್ಯಾನಿಸ್ತಿದ್ದಾಳೆ.

c ಚಿತ್ರ ವಿವರಣೆ: (2) ಅದೇ ಸಹೋದರಿ ಸುವಾರ್ತೆ ಸಾರಲು ಬಲ ಬೇಕೆಂದು ಯೆಹೋವನ ಹತ್ರ ಕೇಳಿಕೊಳ್ತಿದ್ದಾಳೆ.

d ಚಿತ್ರ ವಿವರಣೆ: (3) ಧೈರ್ಯದಿಂದ ಅನೌಪಚಾರಿಕವಾಗಿ ಸಾಕ್ಷಿ ಕೊಡೋದಕ್ಕೆ ಪವಿತ್ರಾತ್ಮ ಆ ಸಹೋದರಿಗೆ ಸಹಾಯ ಮಾಡಿದೆ.

e ಚಿತ್ರ ವಿವರಣೆ: (4) ಅನೌಪಚಾರಿಕ ಸಾಕ್ಷಿಕಾರ್ಯದಲ್ಲಿ ಸಿಕ್ಕಿದ ಸ್ತ್ರೀಯೊಟ್ಟಿಗೆ ಆ ಸಹೋದರಿ ಬೈಬಲ್‌ ಸ್ಟಡಿ ಮಾಡುತ್ತಿದ್ದಾಳೆ. ಸಾರುವ ಕೆಲಸದಲ್ಲಿ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ಆ ಸಹೋದರಿಗೆ ದೇವದೂತರ ಬೆಂಬಲ ಸಿಕ್ಕಿದೆ.