ಜೀವನ ಕಥೆ
ಬಡತನದ ಬೇಗೆಯಿಂದ ಸಿರಿತನದ ಸಂಭ್ರಮಕ್ಕೆ
ಅಮೆರಿಕದ ಇಂಡಿಯಾನಾ ಎಂಬ ರಾಜ್ಯದ ಲಿಬರ್ಟಿ ಎಂಬ ಸಣ್ಣ ಊರಲ್ಲಿ ನಾನು ಹುಟ್ಟಿದ್ದು. ನಮ್ಮ ಮನೆಯನ್ನು ಮರದ ದಿಮ್ಮಿಗಳಿಂದ ಮಾಡಲಾಗಿತ್ತು. ಅದರಲ್ಲಿ ಒಂದೇ ಒಂದು ಕೋಣೆ ಇತ್ತು. ನನಗೆ ಒಬ್ಬ ಅಣ್ಣ ಮತ್ತು ಇಬ್ಬರು ಅಕ್ಕಂದಿರು ಇದ್ದರು. ನಾನು ಹುಟ್ಟಿದ ಮೇಲೆ ಇಬ್ಬರು ತಮ್ಮಂದಿರು ಮತ್ತು ಒಬ್ಬಳು ತಂಗಿ ಹುಟ್ಟಿದರು.
ಶಾಲೆಗೆ ಹೋಗುತ್ತಿದ್ದ ಸಮಯದಲ್ಲಿ ಹೆಚ್ಚೇನು ಬದಲಾಗಲಿಲ್ಲ. ಮೊದಲನೇ ತರಗತಿಯಿಂದ ಶಾಲೆ ಮುಗಿಸುವ ವರೆಗೆ ಅದೇ ಮುಖಗಳನ್ನು ನೋಡಬೇಕಿತ್ತು. ನಮ್ಮ ಊರಲ್ಲಿ ಸಾಮಾನ್ಯವಾಗಿ ಎಲ್ಲರಿಗೂ ಒಬ್ಬರಿಗೊಬ್ಬರ ಪರಿಚಯವಿತ್ತು.
ನಮ್ಮ ಊರ ಸುತ್ತಮುತ್ತ ಸಣ್ಣಸಣ್ಣ ಗದ್ದೆಗಳಿದ್ದವು. ಅದರಲ್ಲಿ ಹೆಚ್ಚಾಗಿ ಜೋಳ ಬೆಳೆಯುತ್ತಿದ್ದರು. ನಾನು ಹುಟ್ಟಿದಾಗ ನನ್ನ ಅಪ್ಪ ನಮ್ಮ ಊರಲ್ಲಿದ್ದ ಒಬ್ಬ ರೈತನ ಹತ್ತಿರ ಕೆಲಸ ಮಾಡುತ್ತಿದ್ದರು. ನನಗೆ ಹದಿವಯಸ್ಸಾದಾಗ ಟ್ರ್ಯಾಕ್ಟರ್ ಓಡಿಸಲು ಕಲಿತೆ, ಗದ್ದೆಕೆಲಸವನ್ನೂ ಮಾಡುತ್ತಿದ್ದೆ.
ಅಪ್ಪ ಯುವ ಪ್ರಾಯದಲ್ಲಿ ಇದ್ದದ್ದನ್ನು ನಾನು ನೋಡೇ ಇಲ್ಲ. ನಾನು ಹುಟ್ಟುವಾಗಲೇ ಅವರಿಗೆ 56 ವರ್ಷ ಆಗಿತ್ತು. ಅಮ್ಮನಿಗೆ 35 ಆಗಿತ್ತು. ಅಪ್ಪನಿಗೆ ಅಷ್ಟು ವಯಸ್ಸಾಗಿದ್ದರೂ ಗಟ್ಟಿಮುಟ್ಟಾಗಿದ್ದರು, ಒಳ್ಳೇ ಆರೋಗ್ಯ ಇತ್ತು. ಕಷ್ಟಪಟ್ಟು ಕೆಲಸ ಮಾಡುವುದೆಂದರೆ ಅವರಿಗೆ ತುಂಬ ಇಷ್ಟ ಇತ್ತು, ಮಕ್ಕಳಿಗೂ ಅದನ್ನೇ ಕಲಿಸಿದರು. ಅವರು ಹೆಚ್ಚು ಹಣ ಮಾಡಲಿಲ್ಲ. ಆದರೆ ನಮಗೆ ಇರಲಿಕ್ಕೆ ಅಂತ ಒಂದು ಮನೆ ಇತ್ತು, ಹೊಟ್ಟೆ-ಬಟ್ಟೆಗೇನೂ ಅಪ್ಪ ಕಮ್ಮಿ ಮಾಡಲಿಲ್ಲ. ನಮ್ಮೊಟ್ಟಿಗೆ ಅವರು ಯಾವಾಗಲೂ ಸಮಯ ಕಳೆಯುತ್ತಿದ್ದರು. ಅವರು ತೀರಿಕೊಂಡಾಗ ಅವರಿಗೆ 93 ವಯಸ್ಸು. ಅಮ್ಮ 86 ವಯಸ್ಸಲ್ಲಿ ತೀರಿಕೊಂಡರು. ಅವರಿಬ್ಬರು ಯೆಹೋವನ ಆರಾಧಕರಾಗಿರಲಿಲ್ಲ. ನನ್ನ ಒಬ್ಬ ತಮ್ಮ ಮಾತ್ರ 1972ರಿಂದ ನಂಬಿಗಸ್ತ ಹಿರಿಯನಾಗಿ ಸೇವೆ ಮಾಡುತ್ತಿದ್ದಾನೆ.
ನನ್ನ ಬಾಲ್ಯ
ಅಮ್ಮನಿಗೆ ದೇವರ ಮೇಲೆ ತುಂಬ ಭಕ್ತಿ ಇತ್ತು. ಅವರು ನಮ್ಮನ್ನು ಪ್ರತಿ ಭಾನುವಾರ ಬ್ಯಾಪ್ಟಿಸ್ಟ್ ಚರ್ಚಿಗೆ ಕರಕೊಂಡು ಹೋಗುತ್ತಿದ್ದರು. ನನಗೆ 12 ವರ್ಷ ಇದ್ದಾಗ ಮೊದಲನೇ ಸಾರಿ ತ್ರಿಯೇಕ ಬೋಧನೆಯ ಬಗ್ಗೆ ಕೇಳಿಸಿಕೊಂಡೆ. ಆಗ ಅಮ್ಮನಿಗೆ, “ಯೇಸು ಹೇಗೆ ಅಪ್ಪ-ಮಗ ಎರಡೂ ಆಗಲು ಸಾಧ್ಯ?” ಎಂದು ಕೇಳಿದೆ. ಅದಕ್ಕೆ ಅಮ್ಮ, “ಪುಟ್ಟ, ಅದೊಂದು ರಹಸ್ಯ. ಅದನ್ನು ನಾವು ಅರ್ಥಮಾಡಿಕೊಳ್ಳಲು ಆಗಲ್ಲ” ಅಂತ ಹೇಳಿದ್ದು ನನಗಿನ್ನೂ ನೆನಪಿದೆ. ನನಗಂತೂ ಅದು ರಹಸ್ಯವಾಗಿಯೇ ಇತ್ತು. ಆದರೂ ನನಗೆ 14 ವರ್ಷ ಆದಾಗ ನಮ್ಮೂರಲ್ಲಿದ್ದ ಒಂದು ಹೊಳೆಯಲ್ಲಿ ದೀಕ್ಷಾಸ್ನಾನ ಕೊಟ್ಟರು. ಚರ್ಚಿನವರು ನನ್ನನ್ನು ಮೂರು ಸಲ ನೀರಿನಲ್ಲಿ ಮುಳುಗಿಸಿ ಮುಳುಗಿಸಿ ಎತ್ತಿದರು. ಒಂದು ಸಲ ತಂದೆಗಾಗಿ, ಒಂದು ಸಲ ಮಗನಿಗಾಗಿ, ಒಂದು ಸಲ ಪವಿತ್ರಾತ್ಮಕ್ಕಾಗಿ!
ನಾನು ಪ್ರೌಢ ಶಾಲೆಯಲ್ಲಿದ್ದಾಗ, ನನಗೊಬ್ಬ ಸ್ನೇಹಿತ ಇದ್ದ. ಅವನು ಬಾಕ್ಸರ್. ಹೇಗೋ ನನ್ನ ಮನವೊಪ್ಪಿಸಿ ಬಾಕ್ಸಿಂಗ್ ಕಲಿಯುವಂತೆ ಮಾಡಿದ. ನಾನು ‘ಗೋಲ್ಡನ್ ಗ್ಲವ್ಸ್’ ಎಂಬ ಹೆಸರಿದ್ದ ಒಂದು ಬಾಕ್ಸಿಂಗ್ ಸಂಘಟನೆಯ ಸದಸ್ಯನಾದೆ. ನನಗೆ ಬಾಕ್ಸಿಂಗ್ ಅಷ್ಟು ಚೆನ್ನಾಗಿ ಬರಲಿಲ್ಲ. ಕೆಲವು ಪಂದ್ಯಗಳಲ್ಲಿ ಭಾಗವಹಿಸಿದ ನಂತರ ಅದನ್ನು ಬಿಟ್ಟುಬಿಟ್ಟೆ. ಆಮೇಲೆ ಅಮೆರಿಕದ ಸೇನಾದಳಕ್ಕೆ ಸೇರಲು ಕರೆ ಬಂತು ಮತ್ತು ನನ್ನನ್ನು ಜರ್ಮನಿಗೆ ಕಳುಹಿಸಲಾಯಿತು. ಜರ್ಮನಿಯಲ್ಲಿದ್ದಾಗ ನನ್ನ ಮೇಲಿನ ಅಧಿಕಾರಿಗಳು ನನ್ನನ್ನು ಮಿಲಿಟರಿ ಅಕಾಡೆಮಿಗೆ ಕಳುಹಿಸಿದರು. ನನ್ನಲ್ಲಿ ಒಳ್ಳೇ ನಾಯಕನಾಗುವ ಲಕ್ಷಣ ಇದೆ ಎಂದು ಅವರು ನೆನಸಿದರು. ನಾನು ಜೀವನಪೂರ್ತಿ ಮಿಲಿಟರಿ ಸೇವೆ ಮಾಡಬೇಕೆಂದು ಬಯಸಿದರು. ಆದರೆ ನನಗೆ ಅದು ಇಷ್ಟ ಇರಲಿಲ್ಲ. ಎರಡು ವರ್ಷ ಮಿಲಿಟರಿಯಲ್ಲಿ ಇದ್ದ ಮೇಲೆ 1956ರಲ್ಲಿ ವಾಪಸ್ ಬಂದೆ. ಇದಾಗಿ ಸ್ವಲ್ಪ ಸಮಯದಲ್ಲಿ ನಾನು ತುಂಬ ಭಿನ್ನವಾದ ಇನ್ನೊಂದು ಸೈನ್ಯಕ್ಕೆ ಸೇರಿಕೊಂಡೆ.
ಹೊಸ ಜೀವನ ಆರಂಭ
ನಾನು ಸತ್ಯ ಕಲಿಯುವ ಮುಂಚೆ, ಹೀರೋ ತರ ಆಡುತ್ತಿದ್ದೆ. ಸಿನಿಮಾ ಮತ್ತು ನನ್ನ ಸುತ್ತಲಿದ್ದವರ ಪ್ರಭಾವದಿಂದ ಹಾಗೆ ಮಾಡುತ್ತಿದ್ದೆ. ಬೈಬಲ್ ಬಗ್ಗೆ ಮಾತಾಡುವವರು ಗಂಡಸರೇ ಅಲ್ಲ ಅಂತ ನೆನಸುತ್ತಿದ್ದೆ. ಆದರೆ ನಾನು ಕಲಿತ ಕೆಲವು ವಿಷಯಗಳು ನನ್ನ ಬದುಕನ್ನೇ ಬದಲಾಯಿಸಿದವು. ಒಂದು ದಿನ ಸ್ಟೈಲಾಗಿದ್ದ ನನ್ನ ಕೆಂಪು ಕಾರಿನಲ್ಲಿ ಹೋಗುತ್ತಿದ್ದಾಗ ಇಬ್ಬರು ಯುವತಿಯರು ಕೈಬೀಸಿ ಕರೆದು ಗಾಡಿ ನಿಲ್ಲಿಸುವಂತೆ ಹೇಳಿದರು. ಅವರು ನನ್ನ ಬಾವನ ತಂಗಿಯರು, ಯೆಹೋವನ ಸಾಕ್ಷಿಯಾಗಿದ್ದರು. ಮುಂಚೆ ಅವರು ನನಗೆ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆ ಕೊಟ್ಟಿದ್ದರು. ಆದರೆ ಯಾಕೋ ನನಗೆ ಕಾವಲಿನಬುರುಜು ಪತ್ರಿಕೆಯನ್ನು ಓದಿ ಅರ್ಥಮಾಡಿಕೊಳ್ಳುವುದು ಕಷ್ಟ ಅಂತ ಅನಿಸಿತು. ಆದರೆ ಈಗ ಆ ಯುವತಿಯರು ನನ್ನನ್ನು ಸಭಾ ಪುಸ್ತಕ ಅಭ್ಯಾಸ ಎಂದು ಕರೆಯಲಾಗುತ್ತಿದ್ದ ಚಿಕ್ಕ ಕೂಟಕ್ಕೆ ಕರೆದರು. ಇದರಲ್ಲಿ ಒಂದು ಬೈಬಲ್ ವಿಷಯದ ಬಗ್ಗೆ ಚರ್ಚೆ ನಡೆಯುತ್ತಿತ್ತು. ಇದನ್ನು ಅವರ ಮನೆಯಲ್ಲಿ ನಡೆಸಲಾಗುತ್ತಿತ್ತು. ನಾನು ಅದರ ಬಗ್ಗೆ ಯೋಚಿಸುತ್ತೇನೆ ಅಂದೆ. ಆದರೆ ಅವರು ನಗುತ್ತಾ, “ನಂಬಬಹುದಾ?” ಎಂದು ಹೇಳಿದರು. ನಾನದಕ್ಕೆ “ನಂಬಬಹುದು” ಅಂದೆ.
ಆಮೇಲೆ ಯಾಕಪ್ಪಾ ಮಾತು ಕೊಟ್ಟೆ ಅಂತ ಅನಿಸಿತು. ಆದರೂ ಕೊಟ್ಟ ಮಾತು ಉಳಿಸಿಕೊಳ್ಳಬೇಕು ಅಂತ ಕೂಟಕ್ಕೆ ಹೋದೆ. ಅಲ್ಲಿದ್ದ ಮಕ್ಕಳಿಗೆ ಬೈಬಲ್ ಬಗ್ಗೆ ತುಂಬ ತಿಳಿದಿರುವುದನ್ನು ನೋಡಿ ನನಗೆ ಆಶ್ಚರ್ಯ ಆಯಿತು. ನಾನು ಅಮ್ಮನ ಜೊತೆ ಪ್ರತಿ ಭಾನುವಾರ ಚರ್ಚಿಗೆ ಹೋಗುತ್ತಿದ್ದರೂ ನನಗೆ ಬೈಬಲ್ ಬಗ್ಗೆ ಅಷ್ಟೇನು ಗೊತ್ತಿರಲಿಲ್ಲ. ಈಗ ನನಗೆ ಹೆಚ್ಚು ಕಲಿಯಬೇಕೆಂದು ಆಸೆ ಆಯಿತು. ಒಂದು ಬೈಬಲ್ ಅಧ್ಯಯನಕ್ಕೆ ಒಪ್ಪಿಕೊಂಡೆ. ಸರ್ವಶಕ್ತ ದೇವರ ಹೆಸರು ಯೆಹೋವ ಅನ್ನುವುದು ನಾನು ಕಲಿತ ಮೊದಲ ವಿಷಯ. ತುಂಬ ವರ್ಷಗಳ ಹಿಂದೆ ನಾನು ಯೆಹೋವನ ಸಾಕ್ಷಿಗಳ ಬಗ್ಗೆ ಅಮ್ಮನನ್ನು ಕೇಳಿದಾಗ ಅವರು, “ಓಹ್ ಅವರಾ, ಯೆಹೋವ ಅನ್ನೋ ಹೆಸರಿರೋ ಯಾರೋ ಒಬ್ಬ ಮುದುಕನನ್ನು ಆರಾಧನೆ ಮಾಡುತ್ತಾರೆ” ಅಂದಿದ್ದರು. ಆದರೆ ಈಗ ನನ್ನ ಕಣ್ಣು ತೆರೆದಂತಾಯಿತು!
ಇದೇ ಸತ್ಯ ಎಂದು ನನಗೆ ಗೊತ್ತಾದದ್ದರಿಂದ ಬೇಗ ಪ್ರಗತಿ ಮಾಡಿದೆ. ನಾನು ಆ ಪುಸ್ತಕ ಅಧ್ಯಯನಕ್ಕೆ ಮೊದಲನೇ ಸಾರಿ ಹೋಗಿ ಬರೀ ಒಂಬತ್ತು ತಿಂಗಳಲ್ಲಿ ದೀಕ್ಷಾಸ್ನಾನ ತೆಗೆದುಕೊಂಡೆ. ಅದು 1957ರ ಮಾರ್ಚ್ ತಿಂಗಳಾಗಿತ್ತು. ನನ್ನ ಮನೋಭಾವನೂ ಬದಲಾಗಿತ್ತು. ನಿಜವಾದ ಗಂಡಸುತನ ಏನೆಂದು ಬೈಬಲಿನಿಂದ ಕಲಿತದ್ದಕ್ಕೆ ನಾನು ಸಂತೋಷಪಟ್ಟೆ. ಯೇಸು ಒಬ್ಬ ಪರಿಪೂರ್ಣ ಮನುಷ್ಯನಾಗಿದ್ದ. ಬೇರೆ ಯಾವ ಗಂಡಸಿಗಿಂತಲೂ ಹೆಚ್ಚು ಬಲ-ಶಕ್ತಿ ಆತನಲ್ಲಿತ್ತು. ಆದರೆ ಆತನು ಯಾವತ್ತೂ ಯಾರೊಟ್ಟಿಗೂ ಹೊಡೆದಾಡಲು ಹೋಗಲಿಲ್ಲ. ಯೆಶಾ. 53:2, 7) ಯೇಸುವಿನ ಒಬ್ಬ ನಿಜ ಹಿಂಬಾಲಕನು “ಎಲ್ಲರೊಂದಿಗೆ ಕೋಮಲಭಾವದಿಂದಿರಬೇಕು” ಎಂದು ನಾನು ಕಲಿತುಕೊಂಡೆ.—2 ತಿಮೊ. 2:24.
ಆತನ ಬಗ್ಗೆ ಮೊದಲೇ ಹೇಳಿರುವಂತೆ ‘ಬಾಧೆಗೆ ಒಳಗಾದನು.’ (ಮುಂದಿನ ವರ್ಷ ಅಂದರೆ 1958ರಲ್ಲಿ ನಾನು ಪಯನೀಯರ್ ಸೇವೆ ಆರಂಭಿಸಿದೆ. ಆದರೆ ಸ್ವಲ್ಪದರಲ್ಲೇ ಅದನ್ನು ಸ್ವಲ್ಪ ಸಮಯಕ್ಕೆ ನಿಲ್ಲಿಸಬೇಕಾಯಿತು. ಯಾಕೆ? ನನ್ನನ್ನು ಪುಸ್ತಕ ಅಭ್ಯಾಸಕ್ಕೆ ಕರೆದಿದ್ದ ಆ ಇಬ್ಬರು ಯುವತಿಯರಲ್ಲಿ ಒಬ್ಬಳಾದ ಗ್ಲೋರಿಯಾನ ನಾನು ಮದುವೆಯಾಗಲು ತೀರ್ಮಾನಿಸಿದ್ದೆ. ಯಾಕಪ್ಪಾ ಈ ತೀರ್ಮಾನ ಮಾಡಿದೆ ಎಂದು ನಾನು ಯಾವತ್ತೂ ವಿಷಾದಪಟ್ಟಿಲ್ಲ. ಗ್ಲೋರಿಯ ಮುತ್ತಿನಂಥ ಹುಡುಗಿ, ಇವತ್ತಿಗೂ ಹಾಗೇ ಇದ್ದಾಳೆ. ಲೋಕದಲ್ಲಿರುವ ಅತಿ ಬೆಲೆಬಾಳುವ ವಜ್ರಕ್ಕಿಂತ ಅವಳ ಮೌಲ್ಯ ಜಾಸ್ತಿ. ನನಗೆ ಅವಳು ಸಿಕ್ಕಿದ್ದು ದೊಡ್ಡ ಆಶೀರ್ವಾದ ಎಂದು ನೆನಸುತ್ತೇನೆ. ಅವಳೂ ತನ್ನ ಬಗ್ಗೆ ಸ್ವಲ್ಪ ಹೇಳುತ್ತಾಳೆ ಕೇಳಿ:
“ನಮ್ಮ ಅಪ್ಪಅಮ್ಮಂಗೆ 17 ಮಂದಿ ಮಕ್ಕಳು. ನನ್ನ ಅಮ್ಮ ಒಬ್ಬ ನಂಬಿಗಸ್ತ ಸಾಕ್ಷಿಯಾಗಿದ್ದರು. ನನಗೆ 14 ವರ್ಷ ಇದ್ದಾಗ ಅವರು ತೀರಿಕೊಂಡರು. ಆಮೇಲೆ ಅಪ್ಪ ಬೈಬಲನ್ನು ಅಧ್ಯಯನ ಮಾಡಲು ಆರಂಭಿಸಿದರು. ಅಮ್ಮ ತೀರಿಕೊಂಡದ್ದರಿಂದ ಅಪ್ಪ ನನ್ನ ಶಾಲೆಯ ಪ್ರಾಂಶುಪಾಲರ ಜೊತೆ ಮಾತಾಡಿ ಒಂದು ಏರ್ಪಾಡು ಮಾಡಿದರು. ನನ್ನ ಅಕ್ಕ ಆಗ ಪ್ರೌಢ ಶಾಲೆಯಲ್ಲಿ ಕೊನೆ ವರ್ಷ ಓದುತ್ತಿದ್ದಳು. ನಾನು ಮತ್ತು ಅಕ್ಕ ಒಂದು ದಿನ ಬಿಟ್ಟು ಒಂದು ದಿನ ಶಾಲೆಗೆ ಬರಬಹುದಾ ಎಂದು ಅಪ್ಪ ಪ್ರಾಂಶುಪಾಲರನ್ನು ಕೇಳಿದರು. ಹೀಗೆ ಮನೆಯಲ್ಲಿ ಒಂದು ದಿನ ನಾನು ಒಂದು ದಿನ ಅಕ್ಕ ಚಿಕ್ಕ ಮಕ್ಕಳನ್ನು ನೋಡಿಕೊಳ್ಳಲು ಆಗುತ್ತಿತ್ತು. ಅಪ್ಪ ಕೆಲಸ ಮುಗಿಸಿ ಮನೆಗೆ ಬರುವಷ್ಟರಲ್ಲಿ ಅಡಿಗೆನೂ ಮಾಡಿ ಇಡಬಹುದಿತ್ತು. ಪ್ರಾಂಶುಪಾಲರು ಇದಕ್ಕೆ ಒಪ್ಪಿದರು. ಅಕ್ಕ ಓದು ಮುಗಿಸುವ ವರೆಗೆ ಹೀಗೆ ಮಾಡಿದ್ವಿ. ಎರಡು ಸಾಕ್ಷಿ ಕುಟುಂಬಗಳವರು ನಮ್ಮೊಂದಿಗೆ ಬೈಬಲ್ ಅಧ್ಯಯನ ಮಾಡಿದರು. ನಮ್ಮ ಕುಟುಂಬದಲ್ಲಿ 11 ಮಕ್ಕಳು ಯೆಹೋವನ ಸಾಕ್ಷಿಯಾದ್ವಿ. ನನಗೆ ಸೇವೆಗೆ ಹೋಗುವುದೆಂದರೆ ತುಂಬ ಇಷ್ಟ, ಆದರೆ ತುಂಬ ನಾಚಿಕೆ ಸ್ವಭಾವ. ನನ್ನ ಗಂಡ ಸ್ಯಾಮ್, ಈ ವಿಷಯದಲ್ಲಿ ನನಗೆ ಈ ಎಲ್ಲ ವರ್ಷಗಳಲ್ಲಿ ಸಹಾಯ ಮಾಡಿದ್ದಾರೆ.”
1959ರ ಮೇ ತಿಂಗಳಲ್ಲಿ ನಮ್ಮ ಮದುವೆ ಆಯಿತು. ಒಟ್ಟಿಗೆ ಪಯನೀಯರ್ ಸೇವೆ ಮಾಡುತ್ತಾ ತುಂಬ ಆನಂದಿಸಿದ್ವಿ. ಆ ವರ್ಷದ ಜುಲೈ ತಿಂಗಳಲ್ಲಿ ಬೆತೆಲ್ ಸೇವೆಗೆ ಅರ್ಜಿ ಹಾಕಿದ್ವಿ. ನಮಗೆ ಮುಖ್ಯ ಕಾರ್ಯಾಲಯದಲ್ಲಿ ಸೇವೆ ಮಾಡಬೇಕೆಂದು ತುಂಬ ಆಸೆ ಇತ್ತು. ಸೈಮನ್ ಕ್ರ್ಯಾಕರ್ ಎಂಬ ಪ್ರಿಯ ಸಹೋದರ ನಮ್ಮ ಇಂಟರ್‌ವ್ಯೂ ಮಾಡಿದರು. ಆಗ ಮದುವೆಯಾದವರನ್ನು ಬೆತೆಲಿಗೆ ಕರೆಯುತ್ತಿಲ್ಲ ಎಂದು ಹೇಳಿದರು. ಆದರೂ ನಮಗೆ ಬೆತೆಲಲ್ಲಿ ಸೇವೆ ಮಾಡಬೇಕೆಂಬ ಆಸೆ ಹೋಗಲಿಲ್ಲ. ಆದರೆ ಈ ಆಸೆ ಈಡೇರಲು ಸುಮಾರು ವರ್ಷ ಕಾಯಬೇಕಾಯಿತು.
ಹೆಚ್ಚು ಪ್ರಚಾರಕರ ಅಗತ್ಯವಿರುವ ಸ್ಥಳಕ್ಕೆ ಹೋಗಿ ಸೇವೆ ಮಾಡಲು ಬಯಸುತ್ತೇವೆ ಎಂದು ನಾವು ಮುಖ್ಯ ಕಾರ್ಯಾಲಯಕ್ಕೆ ಪತ್ರ ಬರೆದು ತಿಳಿಸಿದೆವು. ಅವರು ನಮಗೆ ಒಂದೇ ಆಯ್ಕೆಯನ್ನು ಕೊಟ್ಟರು. ಅರ್ಕಾನ್ಸಾಸ್‌ನಲ್ಲಿದ್ದ ಪೈನ್ ಬ್ಲಫ್‌ಗೆ ಹೋಗುವಂತೆ ಹೇಳಿದರು. ಆಗ ಪೈನ್ ಬ್ಲಫ್‌ನಲ್ಲಿ ಎರಡು ಸಭೆಗಳಿದ್ದವು. ಒಂದರಲ್ಲಿ ಬಿಳಿಯರು, ಇನ್ನೊಂದರಲ್ಲಿ ಕಪ್ಪು ಬಣ್ಣದವರು ಇದ್ದರು. ನಮ್ಮನ್ನು ಕಪ್ಪು ಬಣ್ಣದವರ ಸಭೆಗೆ ಕಳುಹಿಸಲಾಯಿತು. ಈ ಸಭೆಯಲ್ಲಿ ಬರೀ 14 ಪ್ರಚಾರಕರಿದ್ದರು.
ವರ್ಣಭೇದದಿಂದ ಎದುರಾದ ಕಷ್ಟಗಳು
ಯೆಹೋವನ ಸಾಕ್ಷಿಗಳಲ್ಲಿ ಬಿಳಿ ಬಣ್ಣದವರಿಗೊಂದು ಸಭೆ ಕಪ್ಪು ಬಣ್ಣದವರಿಗೊಂದು ಸಭೆ ಯಾಕಿತ್ತು ಎಂದು ನೀವು ಯೋಚಿಸಬಹುದು. ಆಗ ಬೇರೆ ದಾರಿ ಇಲ್ಲದೆ ಹೀಗೆ ಮಾಡಬೇಕಿತ್ತು. ಎರಡು ವರ್ಣದವರು ಒಟ್ಟಿಗೆ ಸೇರಿಬರುವುದು ಕಾನೂನಿಗೆ ವಿರುದ್ಧವಾಗಿತ್ತು ಮತ್ತು ಹಿಂಸಾಚಾರದ ಸಮಸ್ಯೆಯೂ ಇತ್ತು. ಒಂದುವೇಳೆ ಎರಡೂ ವರ್ಣದವರು ಆರಾಧನೆಗೆಂದು ಒಟ್ಟುಸೇರಿ ಬಂದರೆ ತಮ್ಮ ರಾಜ್ಯ ಸಭಾಗೃಹವನ್ನು ಜನರು ನಾಶಮಾಡಬಹುದೆಂಬ ಭೀತಿ ಅನೇಕ ಕಡೆಗಳಲ್ಲಿದ್ದ ಸಹೋದರರಿಗೆ ಇತ್ತು. ಇಂಥ ಘಟನೆ ಕೆಲವು ಕಡೆಗಳಲ್ಲಿ ನಡೆಯಿತು ಕೂಡ. ಬಿಳಿಯರಿದ್ದ ಸ್ಥಳದಲ್ಲಿ ಕಪ್ಪು ಬಣ್ಣದವರು ಮನೆಮನೆ ಸೇವೆ ಮಾಡಿದರೆ ಅವರನ್ನು ಪೊಲೀಸರು ಹಿಡುಕೊಂಡು ಹೋಗುತ್ತಿದ್ದರು, ಕೆಲವೊಮ್ಮೆ ಹೊಡೆಯುತ್ತಿದ್ದರು. ಆದರೂ ಸಾರುವ ಕೆಲಸ ಮಾಡಬೇಕೆಂಬ ಕಾರಣಕ್ಕೆ ಸರಕಾರದ ನಿಯಮಗಳನ್ನು ಪಾಲಿಸುತ್ತಿದ್ವಿ. ಒಂದಲ್ಲ ಒಂದಿನ ಇದೆಲ್ಲಾ ಬದಲಾಗುತ್ತೆ ಎಂದು ನಂಬಿದ್ವಿ.
ಸೇವೆ ಮಾಡುವುದು ಯಾವಾಗಲೂ ಸುಲಭವಾಗಿರಲಿಲ್ಲ. ಕಪ್ಪು ಬಣ್ಣದವರಿದ್ದ ಸ್ಥಳದಲ್ಲಿ ಸೇವೆ ಮಾಡುತ್ತಿದ್ದಾಗ ಗೊತ್ತಾಗದೆ ಬಿಳಿಯರಿದ್ದ ಮನೆಗೆ ಹೋಗಿಬಿಡುತ್ತಿದ್ವಿ. ಆಗ ತಕ್ಷಣ ಒಂದು ತೀರ್ಮಾನ ತೆಗೆದುಕೊಳ್ಳಬೇಕಿತ್ತು: ಬೈಬಲಿನ ಸಂದೇಶವನ್ನು ಸಂಕ್ಷಿಪ್ತವಾಗಿ ಹೇಳಬೇಕಾ, ಕ್ಷಮೆ ಕೇಳಿ ಜಾಗ ಖಾಲಿ ಮಾಡಬೇಕಾ? ಆಗೆಲ್ಲಾ ಈ ರೀತಿ ಸೇವೆ ಮಾಡಿದ್ದೇವೆ.
ಪಯನೀಯರರಾಗಿದ್ದರೂ ಜೀವನ ನಡೆಸಲು ಸಂಪಾದನೆ ಮಾಡಬೇಕಿತ್ತು. ನಾವು ಮಾಡುತ್ತಿದ್ದ ಅನೇಕ ಕೆಲಸಗಳಿಗೆ ದಿನಕ್ಕೆ ಮೂರು ಡಾಲರ್ ಸಿಗುತ್ತಿತ್ತು. ಗ್ಲೋರಿಯ ಕೆಲವು ಮನೆಕೆಲಸಗಳನ್ನು ಮಾಡುತ್ತಿದ್ದಳು. ಒಂದು ಕಡೆ ನಾನೂ ಅವಳಿಗೆ ಸಹಾಯ ಮಾಡಲು ಅನುಮತಿ ಕೊಟ್ಟಿದ್ದರು. ಇದರಿಂದ ಗ್ಲೋರಿಯ ಬೇಗ ಕೆಲಸ ಮುಗಿಸಬಹುದಿತ್ತು. ಆ ಮನೆಯವರು ನಮಗೆ ಊಟ ಕೊಡುತ್ತಿದ್ದರು. ನಾವದನ್ನು ಹಂಚಿಕೊಂಡು ತಿಂದು ಹೊರಡುತ್ತಿದ್ವಿ. ಪ್ರತಿ ವಾರ ಗ್ಲೋರಿಯ ಒಂದು ಮನೆಯವರ ಬಟ್ಟೆಗಳನ್ನು ಇಸ್ತ್ರಿ ಮಾಡಿ ಕೊಡುತ್ತಿದ್ದಳು. ನಾನು ತೋಟದ ಕೆಲಸ ಮಾಡುತ್ತಿದ್ದೆ, ಕಿಟಕಿಗಳನ್ನು ಶುಚಿ ಮಾಡುತ್ತಿದ್ದೆ ಮತ್ತು ಬೇರೆ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಿದ್ದೆ. ಬಿಳಿಯರ ಒಂದು ಕುಟುಂಬವಿದ್ದ ಮನೆಯ ಕಿಟಕಿಗಳನ್ನು ನಾವು ಶುಚಿ ಮಾಡಿ ಕೊಡುತ್ತಿದ್ವಿ. ಗ್ಲೋರಿಯ ಒಳಗಿಂದ ಶುಚಿಮಾಡಿದರೆ ನಾನು ಹೊರಗಿಂದ ಮಾಡುತ್ತಿದ್ದೆ. ಇದನ್ನು ಮಾಡಲು ಇಡೀ ದಿನ ಹಿಡಿಯುತ್ತಿತ್ತು. ಆದ್ರಿಂದ ಅವರು ನಮಗೆ ಮಧ್ಯಾಹ್ನದ ಊಟ ಕೊಡುತ್ತಿದ್ದರು. ಗ್ಲೋರಿಯ ಮನೆಯ ಒಳಗೆ ತಿನ್ನುತ್ತಿದ್ದಳು, ಆದರೆ ಕುಟುಂಬದವರಿಂದ
ದೂರ ಕೂತುಕೊಳ್ಳಬೇಕಿತ್ತು. ನಾನು ಮನೆಯ ಹೊರಗೆ ಕೂತು ತಿನ್ನಬೇಕಿತ್ತು. ಅದರಿಂದ ನನಗೇನೂ ಬೇಜಾರು ಆಗುತ್ತಿರಲಿಲ್ಲ. ಊಟ ತುಂಬ ಚೆನ್ನಾಗಿರುತ್ತಿತ್ತು. ತುಂಬ ಒಳ್ಳೇ ಕುಟುಂಬ, ಆದರೆ ಅವರಿಗೆ ಸುತ್ತಮುತ್ತ ಇದ್ದ ಜನರ ಭಯ ಇತ್ತು. ಒಂದು ಸಾರಿ ನಾವು ಪೆಟ್ರೋಲ್ ಬಂಕ್‌ಗೆ ಹೋದದ್ದು ನೆನಪಿದೆ. ನಮ್ಮ ಕಾರಿನ ಟ್ಯಾಂಕ್ ತುಂಬಿಸಿದ ಮೇಲೆ, ಗ್ಲೋರಿಯ ಶೌಚಾಲಯವನ್ನು ಉಪಯೋಗಿಸಬಹುದಾ ಎಂದು ಬಂಕಲ್ಲಿದ್ದ ವ್ಯಕ್ತಿಗೆ ಕೇಳಿದೆ. ಅವನು ಬಿಳಿಯನಾಗಿದ್ದ ಕಾರಣ ನನ್ನನ್ನು ಕೋಪದಿಂದ ನೋಡಿ “ಅದಕ್ಕೆ ಬೀಗ ಹಾಕಿದೆ” ಅಂದ.ಸವಿನೆನಪುಗಳು
ನಮ್ಮ ಸುತ್ತಲಿದ್ದ ಜನರು ಹೀಗಿದ್ದರೂ ಸಹೋದರರೊಂದಿಗಿನ ಸಹವಾಸವನ್ನು ನಾವು ಆನಂದಿಸಿದ್ವಿ, ಸೇವೆನೂ ತುಂಬ ಚೆನ್ನಾಗಿತ್ತು. ನಾವು ಪೈನ್ ಬ್ಲಫ್‌ಗೆ ಬಂದಾಗ, ಸಭಾ ಸೇವಕನಾಗಿದ್ದ ಸಹೋದರನ ಮನೆಯಲ್ಲಿ ಉಳಿದೆವು. ಅವರ ಹೆಂಡತಿ ಸತ್ಯದಲ್ಲಿರಲಿಲ್ಲ. ಅವರಿಗೆ ಗ್ಲೋರಿಯ ಬೈಬಲ್ ಅಧ್ಯಯನ ಮಾಡಲು ಆರಂಭಿಸಿದಳು. ನಾನು ಅವರ ಮಗಳಿಗೆ ಮತ್ತು ಅಳಿಯನಿಗೆ ಬೈಬಲ್ ಅಧ್ಯಯನ ಮಾಡಿದೆ. ತಾಯಿ ಮತ್ತು ಮಗಳು ಯೆಹೋವನ ಸೇವೆ ಮಾಡುವ ಆಯ್ಕೆ ಮಾಡಿ ದೀಕ್ಷಾಸ್ನಾನ ತೆಗೆದುಕೊಂಡರು.
ಬಿಳಿಯರಿದ್ದ ಸಭೆಯಲ್ಲೂ ನಮಗೆ ಆಪ್ತ ಸ್ನೇಹಿತರಿದ್ದರು. ಅವರು ನಮ್ಮನ್ನು ಊಟಕ್ಕೆ ಕರೆಯುತ್ತಿದ್ದರು. ಆದರೆ ನಾವು ಕತ್ತಲಾದ ಮೇಲೆನೇ ಅವರ ಮನೆಗೆ ಹೋಗುತ್ತಿದ್ವಿ. ನಾವು ಒಟ್ಟಿಗಿರುವುದನ್ನು ಯಾರಾದರೂ ನೋಡಿದರೆ ತೊಂದರೆ ಆಗುತ್ತಿತ್ತು. ವರ್ಣಭೇದ ಮತ್ತು ಹಿಂಸಾಚಾರವನ್ನು ಪ್ರಚೋದಿಸುತ್ತಿದ್ದ ‘ಕೂ ಕ್ಲುಕ್ಸ್ ಕ್ಲಾನ್’ (KKK) ಎಂಬ ಸಂಘಟನೆ ಆಗ ತುಂಬ ಕ್ರಿಯಾಶೀಲವಾಗಿತ್ತು. ಒಂದು ಸಲ ಹ್ಯಾಲೋವೀನ್ ಹಬ್ಬದ ರಾತ್ರಿಯಂದು ಒಬ್ಬ ವ್ಯಕ್ತಿ ತನ್ನ ಮನೆಯ ಮುಂದೆ ಕೂತಿರುವುದನ್ನು ನಾನು ನೋಡಿದೆ. ಅವನು ಆ ಸಂಘಟನೆಯವರು ಧರಿಸುವ ಬಿಳೀ ಅಂಗಿ ಮತ್ತು ಮುಖವಾಡವನ್ನು ಹಾಕಿಕೊಂಡು ಹೆಮ್ಮೆಯಿಂದ ಕೂತಿದ್ದ. ಇಷ್ಟೆಲ್ಲ ತೊಂದರೆಗಳಿದ್ದರೂ ನಮ್ಮ ಸಹೋದರರು ದಯೆಯಿಂದ ನಡಕೊಳ್ಳುತ್ತಿದ್ದರು. ಒಂದು ಬೇಸಗೆಯ ಸಮಯದಲ್ಲಿ ಅಧಿವೇಶನಕ್ಕೆ ಹೋಗಲು ನಮಗೆ ದುಡ್ಡಿನ ಆವಶ್ಯಕತೆ ಇತ್ತು. ಆಗ ಒಬ್ಬ ಸಹೋದರನು ನಮ್ಮ ಕಾರನ್ನು ತೆಗೆದುಕೊಳ್ಳಲು ಮುಂದೆ ಬಂದನು. ಒಂದು ತಿಂಗಳಾದ ಮೇಲೆ, ಒಂದು ದಿನ ನಾವು ಬಿಸಿಲಲ್ಲಿ ನಡಕೊಂಡು ಮನೆಮನೆ ಸೇವೆ ಮಾಡಿ ಅನೇಕ ಬೈಬಲ್ ಅಧ್ಯಯನಗಳನ್ನು ಮಾಡಿ ಮುಗಿಸಿ ತುಂಬ ಸುಸ್ತಾಗಿ ಮನೆಗೆ ಬಂದ್ವಿ. ಮನೆಗೆ ಬಂದಾಗ ನಮಗೊಂದು ಆಶ್ಚರ್ಯ ಕಾದಿತ್ತು. ನಮ್ಮ ಮನೆ ಮುಂದೆ ನಮ್ಮ ಕಾರ್ ನಿಂತಿತ್ತು! ಅದರ ಮೇಲೆ ಒಂದು ಚೀಟಿನೂ ಇತ್ತು. “ನಿಮ್ಮ ಕಾರನ್ನು ನಿಮಗೆ ಒಂದು ಉಡುಗೊರೆಯಾಗಿ ಕೊಡುತ್ತಿದ್ದೇನೆ. ನಿಮ್ಮ ಸಹೋದರ” ಎಂದು ಅದರಲ್ಲಿ ಬರೆದಿತ್ತು.
ನನ್ನ ಮನಮುಟ್ಟಿದ ಇನ್ನೊಂದು ಅನುಭವ ಇದೆ. 1962ರಲ್ಲಿ ನ್ಯೂಯಾರ್ಕ್‌ನ ಸೌತ್ ಲ್ಯಾನ್ಸಿಂಗ್‌ನಲ್ಲಿ ನಡೆಯಲಿದ್ದ ರಾಜ್ಯ ಶುಶ್ರೂಷಾ ಶಾಲೆಗೆ ಹಾಜರಾಗಲು ನನಗೆ ಆಮಂತ್ರಣ ಸಿಕ್ಕಿತು. ಸಭೆಯ, ಸರ್ಕಿಟಿನ ಮತ್ತು ಜಿಲ್ಲೆಯ ಮೇಲ್ವಿಚಾರಕರಿಗೆ ಒಂದು ತಿಂಗಳು ಪೂರ್ತಿ ತರಬೇತಿ ಸಿಗಲಿತ್ತು. ಆಗ ನನಗೆ ಕೆಲಸ ಇರಲಿಲ್ಲ. ಕೈಯಲ್ಲಿ ದುಡ್ಡೂ ಅಷ್ಟಿರಲಿಲ್ಲ. ಹೀಗಿರುವಾಗ ಪೈನ್ ಬ್ಲಫ್‌ನಲ್ಲಿದ್ದ ಒಂದು ಟೆಲಿಫೋನ್ ಕಂಪನಿ ನನಗೆ ಕೆಲಸ ಕೊಡಲು ಇಂಟರ್‌ವ್ಯೂ ಮಾಡಿದ್ದರು. ಅವರು ನನಗೆ ಆ ಕೆಲಸ ಕೊಟ್ಟರೆ, ಆ ಇಡೀ ಕಂಪನಿಯಲ್ಲಿ ನಾನೇ ಮೊದಲ ಕಪ್ಪು ಬಣ್ಣದ ವ್ಯಕ್ತಿಯಾಗುತ್ತಿದ್ದೆ. ಕೊನೆಗೆ ಅವರು ನನಗೆ ಆ ಕೆಲಸವನ್ನು ಕೊಡಲು ಒಪ್ಪಿದರು. ಈಗ ನಾನೇನು ಮಾಡೋದು? ನ್ಯೂಯಾರ್ಕ್‌ಗೆ ಹೋಗಲು ಬೇಕಾದ ದುಡ್ಡು ನನ್ನ ಹತ್ತಿರ ಇರಲಿಲ್ಲ. ಆ ಕೆಲಸನಾ ಒಪ್ಪಿಕೊಂಡು ಬಿಡೋಣ, ಶಾಲೆಗೆ ಹೋಗುವುದು ಬೇಡ ಅಂತ ತುಂಬಾನೇ ಅನಿಸಿತು. ಅದನ್ನು ಬೆತೆಲಿಗೆ ಪತ್ರ ಬರೆದು ತಿಳಿಸಬೇಕು ಅಂತ ಇದ್ದಾಗ ಮರೆಯಲಾಗದ ಒಂದು ವಿಷಯ ನಡೆಯಿತು.
ನಮ್ಮ ಸಭೆಯಲ್ಲಿದ್ದ ಒಬ್ಬ ಸಹೋದರಿ ಒಂದು ದಿನ ಬೆಳಗ್ಗೆ ನಮ್ಮ ಮನೆಗೆ ಬಂದು ಒಂದು ಲಕೋಟೆಯನ್ನು ಕೊಟ್ಟಳು. ಅವಳ ಗಂಡ ಸತ್ಯದಲ್ಲಿರಲಿಲ್ಲ. ಆ ಲಕೋಟೆಯ ತುಂಬ ಹಣ ಇತ್ತು. ಆ ಸಹೋದರಿ ಮತ್ತು ಅವರ ಚಿಕ್ಕ ಮಕ್ಕಳು ಮುಂಜಾನೆ ಬೇಗ ಎದ್ದು ಹತ್ತಿ ಬೆಳೆಯುತ್ತಿದ್ದ ಹೊಲಗಳಿಗೆ ಹೋಗಿ ಕಳೆ ಕೀಳುವ ಕೆಲಸ ಮಾಡಿದರು.
ಹೀಗೆ ನಾನು ನ್ಯೂಯಾರ್ಕ್‌ಗೆ ಹೋಗಲು ಬೇಕಾದ ಹಣವನ್ನು ಅವರು ಸಂಪಾದಿಸಿದ್ದರು. ಆ ಸಹೋದರಿ ಹೇಳಿದ್ದು: “ಶಾಲೆಗೆ ಹೋಗಿ ಚೆನ್ನಾಗಿ ಕಲಿತು ಬಂದು ನಮಗೆ ಕಲಿಸಿ.” ಆಮೇಲೆ ನಾನು ಟೆಲಿಫೋನ್ ಕಂಪನಿಯನ್ನು ಸಂಪರ್ಕಿಸಿ, ಐದು ವಾರಗಳ ನಂತರ ಬಂದು ಕೆಲಸಕ್ಕೆ ಸೇರಿಕೊಂಡರೆ ಪರವಾಗಿಲ್ಲವಾ ಎಂದು ಕೇಳಿದೆ. ಅವರು ಅದಕ್ಕೆ ಆಗೋದೇ ಇಲ್ಲ ಅಂದುಬಿಟ್ಟರು. ಇದರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳಲಿಲ್ಲ. ನಾನೇನು ಮಾಡಬೇಕೆಂದು ತೀರ್ಮಾನ ಮಾಡಿಬಿಟ್ಟಿದ್ದೆ. ಆ ಕೆಲಸ ಒಪ್ಪಿಕೊಳ್ಳದೆ ಇದ್ದದ್ದು ಒಳ್ಳೇದಾಯಿತು.ಪೈನ್ ಬ್ಲಫ್‌ನಲ್ಲಿ ನಾವಿದ್ದ ಸಮಯದ ಬಗ್ಗೆ ಗ್ಲೋರಿಯ ಹೀಗೆ ಹೇಳುತ್ತಾಳೆ: “ನನಗೆ ಅಲ್ಲಿನ ಸೇವಾಕ್ಷೇತ್ರ ತುಂಬ ಇಷ್ಟ ಆಗಿತ್ತು. ನಾನಲ್ಲಿ 15ರಿಂದ 20 ಬೈಬಲ್ ಅಧ್ಯಯನ ನಡೆಸುತ್ತಿದ್ದೆ. ನಾವು ಬೆಳಗ್ಗೆ ಮನೆಮನೆ ಸೇವೆಗೆ ಹೋಗಿ, ನಂತರ ಬೈಬಲ್ ಅಧ್ಯಯನಗಳಿಗೆ ಹೋಗಿ, ಕೆಲವೊಮ್ಮೆ ರಾತ್ರಿ 11 ಗಂಟೆ ವರೆಗೂ ಸೇವೆ ಮಾಡಿದ್ದಿದೆ. ಸೇವೆಯನ್ನು ತುಂಬ ಆನಂದಿಸುತ್ತಿದ್ವಿ. ನಾನು ಅಲ್ಲೇ ಇದ್ದಿದ್ರೂ ಸಂತೋಷವಾಗಿರುತ್ತಿದ್ದೆ. ನಿಜ ಹೇಳಬೇಕೆಂದರೆ, ಅಲ್ಲಿನ ನೇಮಕವನ್ನು ಬಿಟ್ಟು ಸರ್ಕಿಟ್ ಕೆಲಸಕ್ಕೆ ಹೋಗಲು ನನಗೆ ಮನಸ್ಸಿರಲಿಲ್ಲ. ಆದರೆ ಯೆಹೋವನ ಮನಸ್ಸಲ್ಲಿ ಬೇರೆ ವಿಷಯ ಇತ್ತು.” ಹೌದು, ಯೆಹೋವನ ಮನಸ್ಸಲ್ಲಿ ಬೇರೆ ವಿಷಯನೇ ಇತ್ತು.
ಸಂಚರಣ ಸೇವೆಯಲ್ಲಿ ಜೀವನ
ಪೈನ್ ಬ್ಲಫ್‌ನಲ್ಲಿ ಪಯನೀಯರ್ ಸೇವೆ ಮಾಡುತ್ತಿದ್ದಾಗ ವಿಶೇಷ ಪಯನೀಯರರಾಗಲು ನಾವು ಅರ್ಜಿ ಹಾಕಿದ್ವಿ. ಇದು ನಮಗೆ ಸಿಕ್ಕೇ ಸಿಗುತ್ತದೆ ಎಂದು ಅಂದುಕೊಂಡಿದ್ವಿ. ಯಾಕೆ? ನಮ್ಮ ಜಿಲ್ಲಾ ಮೇಲ್ವಿಚಾರಕ ಟೆಕ್ಸಸ್‌ನಲ್ಲಿರುವ ಒಂದು ಸಭೆಗೆ ನಾವು ಸಹಾಯ ಮಾಡಬೇಕೆಂದು ಹೇಳುತ್ತಿದ್ದರು. ನಾವಲ್ಲಿಗೆ ಹೋಗಿ ವಿಶೇಷ ಪಯನೀಯರರಾಗಿ ಸೇವೆ ಮಾಡಬೇಕು ಎಂದವರು ಬಯಸಿದರು. ನಮಗೆ ಇದು ಇಷ್ಟವಾಗಿತ್ತು. ನಾವು ಅದಕ್ಕಾಗಿ ಕಾಯುತ್ತಾ ಇದ್ವಿ. ಆದರೆ ಉತ್ತರ ಬರಲಿಲ್ಲ. ಕೊನೆಗೆ ಒಂದು ಪತ್ರ ಬಂತು. ನಮ್ಮನ್ನು ಸಂಚರಣ ಕೆಲಸಕ್ಕೆ ನೇಮಿಸಲಾಗಿದೆ ಎಂದು ಆ ಪತ್ರದಲ್ಲಿತ್ತು. ಇದು ನಡೆದಿದ್ದು 1965ರ ಜನವರಿ ತಿಂಗಳಲ್ಲಿ. ಈಗ ಅಮೆರಿಕದ ಶಾಖಾ ಸಮಿತಿಯ ಸಂಯೋಜಕರಾಗಿ ಸೇವೆ ಮಾಡುತ್ತಿರುವ ಸಹೋದರ ಲೀಯಾಂಗ್ ವೀವರ್ ಅನ್ನು ಸಹ ಇದೇ ಸಮಯದಲ್ಲಿ ಸರ್ಕಿಟ್ ಮೇಲ್ವಿಚಾರಕರಾಗಿ ನೇಮಿಸಲಾಯಿತು.
ಸರ್ಕಿಟ್ ಮೇಲ್ವಿಚಾರಕನಾಗಿ ಕೆಲಸ ಮಾಡುವುದರ ಬಗ್ಗೆ ನನಗೆ ಸ್ವಲ್ಪ ಭಯ ಇತ್ತು. ಜಿಲ್ಲಾ ಮೇಲ್ವಿಚಾರಕರಾಗಿದ್ದ ಜೇಮ್ಸ್ ಎ. ಥಾಮ್ಸನ್ ಒಂದು ವರ್ಷದ ಹಿಂದೆಯಷ್ಟೇ ನನ್ನ ಅರ್ಹತೆಗಳನ್ನು ಪರಿಶೀಲಿಸಿ ನಾನು ಎಲ್ಲಿ ಪ್ರಗತಿ ಮಾಡಬೇಕೆಂದು ಹೇಳಿದ್ದರು. ಒಬ್ಬ ಒಳ್ಳೇ ಸರ್ಕಿಟ್ ಮೇಲ್ವಿಚಾರಕನಾಗಲು ಯಾವ ಕೌಶಲಗಳು ಬೇಕೆಂದು ತಿಳಿಸಿದ್ದರು. ಅವರು ಕೊಟ್ಟ ಸಲಹೆ ಎಷ್ಟು ಸರಿಯಾಗಿತ್ತೆಂದು ನಾನು ಸರ್ಕಿಟ್ ಕೆಲಸ ಆರಂಭಿಸಿದ ಕೂಡಲೆ ಅರ್ಥವಾಯಿತು. ನಾನು ನೇಮಕಗೊಂಡ ಮೇಲೆ ಮೊದಮೊದಲು ಸೇರಿ ಕೆಲಸಮಾಡಿದ ಜಿಲ್ಲಾ ಮೇಲ್ವಿಚಾರಕ ಯಾರು ಗೊತ್ತಾ? ಸಹೋದರ ಥಾಮ್ಸನ್. ಆ ನಂಬಿಗಸ್ತ ಸಹೋದರನಿಂದ ನಾನು ತುಂಬ ಕಲಿಯಕ್ಕಾಯಿತು.
ಆಗೆಲ್ಲಾ ಸರ್ಕಿಟ್ ಮೇಲ್ವಿಚಾರಕರಿಗೆ ಹೆಚ್ಚು ತರಬೇತಿ ಸಿಗುತ್ತಿರಲಿಲ್ಲ. ಒಬ್ಬ ಸರ್ಕಿಟ್ ಮೇಲ್ವಿಚಾರಕರ ಜೊತೆ ಸೇರಿ ಒಂದು ಸಭೆಯನ್ನು ಭೇಟಿಮಾಡಿದಾಗ ಅವರು ಏನೇನು ಮಾಡುತ್ತಾರೆ ಎಂದು ನಾನು ಒಂದು ವಾರ ಗಮನಿಸಿದೆ. ಆಮೇಲೆ ನಾನು ಒಂದು ಸಭೆಯನ್ನು ಭೇಟಿಮಾಡಿದಾಗ ಆ ಸಹೋದರ ನನ್ನನ್ನು ಗಮನಿಸಿ ಕೆಲವು ಸಲಹೆ-ಸೂಚನೆಗಳನ್ನು ಕೊಟ್ಟರು. ಆಮೇಲೆ ಎಲ್ಲಾನೂ ನಾನೇ ನೋಡಿಕೊಳ್ಳಬೇಕಿತ್ತು. ನಾನು ಗ್ಲೋರಿಯಾಗೆ “ಅವರು ಇಷ್ಟು ಬೇಗ ನಮ್ಮನ್ನು ಬಿಟ್ಟು ಹೋಗಬೇಕಾ?” ಎಂದು ಕೇಳಿದ್ದೆ. ಆದರೆ ಸಮಯ ಹೋದ ಹಾಗೆ ನಾನೊಂದು ಮುಖ್ಯ ವಿಷಯ ಅರ್ಥಮಾಡಿಕೊಂಡೆ. ನಮಗೆ
ಸಹಾಯ ಮಾಡಲು ಒಳ್ಳೇ ಸಹೋದರರು ಇದ್ದೇ ಇರುತ್ತಾರೆ. ಆದರೆ ನಾವು ಅನುಮತಿಸಿದರೆ ಮಾತ್ರ ಅವರು ತರಬೇತಿ ಕೊಡುತ್ತಾರೆ. ಆಗ ಸಂಚರಣ ಮೇಲ್ವಿಚಾರಕರಾಗಿದ್ದ ಸಹೋದರ ಜೆ. ಆರ್. ಬ್ರೌನ್ ಮತ್ತು ಬೆತೆಲ್ ಕುಟುಂಬದ ಸದಸ್ಯರಾಗಿದ್ದ ಫ್ರೆಡ್ ರಸ್ಕ್ ಎಂಬ ಅನುಭವಸ್ಥ ಸಹೋದರರಿಂದ ಪಡೆದ ಸಹಾಯವನ್ನು ನಾನು ಇವತ್ತಿಗೂ ತುಂಬ ಮಾನ್ಯಮಾಡುತ್ತೇನೆ.ಆಗೆಲ್ಲಾ ಜನಾಂಗೀಯ ದ್ವೇಷ ತುಂಬ ಇತ್ತು. ಒಮ್ಮೆ ನಾವು ಟೆನೆಸೀಯಲ್ಲಿದ್ದ ಸಭೆಯನ್ನು ಭೇಟಿ ಮಾಡಲು ಹೋಗಿದ್ದಾಗ KKK ಸದಸ್ಯರು ಊರೆಲ್ಲಾ ಮೆರವಣಿಗೆ ಮಾಡಿದ್ದರು. ಇನ್ನೊಮ್ಮೆ ನಾವು ಸೇವೆಯ ಮಧ್ಯೆ ಒಂದು ಚಿಕ್ಕ ವಿರಾಮ ತೆಗೆದುಕೊಂಡು ಒಂದು ರೆಸ್ಟಾರೆಂಟ್‌ಗೆ ಹೋಗಿದ್ವಿ. ನಾನು ಶೌಚಾಲಯವನ್ನು ಉಪಯೋಗಿಸಲು ಹೋದಾಗ, ಕೋಪಿಷ್ಠನಂತೆ ಕಾಣುತ್ತಿದ್ದ ಒಬ್ಬ ಮನುಷ್ಯ ನನ್ನ ಹಿಂದೇನೇ ಬಂದ. ಅವನು ಜನಾಂಗೀಯತೆಗೆ ಸಂಬಂಧಿಸಿದ ಟ್ಯಾಟೂಗಳನ್ನು ಹಾಕಿಕೊಂಡಿದ್ದ. ಅವನ ಹಿಂದೆ ನಮ್ಮಿಬ್ಬರಿಗಿಂತಲೂ ಕಟ್ಟುಮಸ್ತಾಗಿದ್ದ ಒಬ್ಬ ಸಹೋದರ ಬಂದರು. “ಏನಾದರೂ ಸಮಸ್ಯೆನಾ ಸಹೋದರ ಹರ್ಡ್?” ಎಂದವರು ಕೇಳಿದರು. ಇದನ್ನು ನೋಡಿ ನನ್ನ ಹಿಂದೆ ಬಂದ ವ್ಯಕ್ತಿ ಶೌಚಾಲಯವನ್ನು ಉಪಯೋಗಿಸದೇ ಹೋಗಿಬಿಟ್ಟ. ಇಷ್ಟೆಲ್ಲ ವರ್ಷಗಳಲ್ಲಿ ನಾನು ಅರ್ಥಮಾಡಿಕೊಂಡ ಒಂದು ವಿಷಯ ಏನೆಂದರೆ, ಈ ದ್ವೇಷಕ್ಕೆ ಕಾರಣ ಒಬ್ಬನ ಮೈಬಣ್ಣ ಅಲ್ಲ, ಅವನಲ್ಲಿರುವ ಪಾಪ. ಆದರೆ ಒಬ್ಬ ಸಹೋದರನ ಮೈಬಣ್ಣ ಏನೇ ಇರಲಿ, ಅವನು ನಮ್ಮ ಸಹೋದರನೇ ಮತ್ತು ನಮಗಾಗಿ ತನ್ನ ಜೀವವನ್ನೂ ಕೊಡಲು ಸಿದ್ಧನಿರುತ್ತಾನೆ ಎಂದು ಅರ್ಥಮಾಡಿಕೊಂಡೆ.
ಸಿರಿತನದ ಸಂಭ್ರಮ
ನಾವು 12 ವರ್ಷ ಸರ್ಕಿಟ್ ಕೆಲಸ ಮತ್ತು 21 ವರ್ಷ ಜಿಲ್ಲಾ ಕೆಲಸ ಮಾಡಿದ್ವಿ. ಈ ಎಲ್ಲಾ ವರ್ಷದಲ್ಲಿ ತುಂಬ ಆಶೀರ್ವಾದಗಳನ್ನು ಪಡೆದಿದ್ದೇವೆ, ಪ್ರೋತ್ಸಾಹದಾಯಕವಾದ ಎಷ್ಟೋ ಅನುಭವಗಳು ಸಿಕ್ಕಿವೆ. ಆದರೆ ಇನ್ನೊಂದು ಆಶೀರ್ವಾದ ನಮಗಾಗಿ ಕಾಯುತ್ತಿತ್ತು. 1997ರ ಆಗಸ್ಟ್ ತಿಂಗಳಲ್ಲಿ ನಾವು ತುಂಬ ವರ್ಷಗಳಿಂದ ಕಾಣುತ್ತಿದ್ದ ಕನಸು ನನಸಾಯಿತು. ಅಮೆರಿಕದ ಬೆತೆಲ್‌ನಲ್ಲಿ ಸೇವೆ ಮಾಡಲು ನಮಗೆ ಆಮಂತ್ರಣ ಸಿಕ್ಕಿತು. ನಾವು ಮೊದಲನೇ ಸಾರಿ ಅರ್ಜಿ ಹಾಕಿ 38 ವರ್ಷಗಳಾದ ಮೇಲೆ ಇದು ಸಿಕ್ಕಿತು. ಆಮಂತ್ರಣ ಸಿಕ್ಕಿ ಒಂದು ತಿಂಗಳಲ್ಲಿ ನಾವು ಬೆತೆಲ್ ಸೇವೆ ಆರಂಭಿಸಿದೆವು. ಬೆತೆಲ್‌ನಲ್ಲಿ ಜವಾಬ್ದಾರಿಯುತ ಸಹೋದರರು ನಮ್ಮನ್ನು ಸ್ವಲ್ಪ ಸಮಯಕ್ಕೆ ಮಾತ್ರ ಕರೆದಿದ್ದಾರೆ ಎಂದು ಅನಿಸಿತು. ಆದರೆ ಆದದ್ದೇ ಬೇರೆ.
ನನ್ನನ್ನು ಮೊದಲು ಸರ್ವಿಸ್ ಡಿಪಾರ್ಟ್‌ಮೆಂಟ್‌ಗೆ ನೇಮಿಸಲಾಯಿತು. ಅಲ್ಲಿ ನಾನು ತುಂಬ ವಿಷಯ ಕಲಿತೆ. ಈ ಡಿಪಾರ್ಟ್‌ಮೆಂಟ್‌ಗೆ ಇಡೀ ದೇಶದಲ್ಲಿರುವ ಹಿರಿಯರ ಮಂಡಲಿಗಳಿಂದ ಮತ್ತು ಸರ್ಕಿಟ್ ಮೇಲ್ವಿಚಾರಕರಿಂದ ತುಂಬ ನಾಜೂಕಾದ ಮತ್ತು ಜಟಿಲವಾದ ಪ್ರಶ್ನೆಗಳು ಬರುತ್ತವೆ. ಈ ಡಿಪಾರ್ಟ್‌ಮೆಂಟ್‌ನಲ್ಲಿದ್ದ ಸಹೋದರರು ತುಂಬ ತಾಳ್ಮೆಯಿಂದ ನನಗೆ ತರಬೇತಿ ಕೊಟ್ಟರು. ಇದಕ್ಕೆ ನಾನು ತುಂಬ ಆಭಾರಿ! ನನ್ನನ್ನು ಪುನಃ ಅದೇ ಡಿಪಾರ್ಟ್‌ಮೆಂಟ್‌ಗೆ ನೇಮಿಸಿದರೆ, ನಾನಿನ್ನು ಎಷ್ಟೋ ವಿಷಯ ಕಲಿಯುತ್ತೇನೆ.
ನಮ್ಮಿಬ್ಬರಿಗೂ ಬೆತೆಲ್ ಸೇವೆ ಅಂದರೆ ತುಂಬ ಇಷ್ಟ. ನಮಗೆ ಬೇಗ ಏಳುವ ಅಭ್ಯಾಸ ಮೊದಲೇ ಇತ್ತು. ಇದರಿಂದ ಬೆತೆಲ್‌ನಲ್ಲಿ ಬೇಗ ಏಳುವುದು ಕಷ್ಟ ಆಗಲಿಲ್ಲ. ಸುಮಾರು ಒಂದು ವರ್ಷ ಆದ ಮೇಲೆ ನಾನು ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯ ಸೇವಾ ಸಮಿತಿಗೆ ಸಹಾಯಕನಾಗಿ ಕೆಲಸ ಮಾಡಲು ಆರಂಭಿಸಿದೆ. ನಂತರ 1999ರಲ್ಲಿ ನನ್ನನ್ನು ಆಡಳಿತ ಮಂಡಲಿಯ ಸದಸ್ಯನಾಗಿ ನೇಮಿಸಲಾಯಿತು. ನಾನು ಈ ನೇಮಕದಲ್ಲಿ ಅನೇಕ ವಿಷಯಗಳನ್ನು ಕಲಿತಿದ್ದೇನೆ. ಎಲ್ಲಕ್ಕಿಂತ ಮುಖ್ಯವಾಗಿ ಕ್ರೈಸ್ತ ಸಭೆಯ ಶಿರಸ್ಸು ಯೇಸು ಕ್ರಿಸ್ತ, ಬೇರೆ ಯಾವ ಮಾನವನೂ ಅಲ್ಲ ಎಂದು ಕಲಿತಿದ್ದೇನೆ.
ನಾನು ನನ್ನ ಜೀವನದ ಬಗ್ಗೆ ಯೋಚಿಸುವಾಗ, ಕೆಲವೊಮ್ಮೆ ನಾನೂ ಪ್ರವಾದಿ ಆಮೋಸನ ತರಾನೇ ಅಂತ ಅನಿಸುತ್ತದೆ. ಆಮೋಸನು ಬಡವರು ಮಾತ್ರ ತಿನ್ನುತ್ತಿದ್ದ ಅತ್ತಿಹಣ್ಣನ್ನು ಕೀಳುವ ಕೆಲಸ ಮಾಡುತ್ತಿದ್ದ. ಆದರೂ ಆ ಬಡಪಾಯಿ ಕುರುಬನನ್ನು ಯೆಹೋವನು ಗಮನಿಸಿದನು. ದೇವರು ಅವನನ್ನು ಪ್ರವಾದಿಯಾಗಿ ನೇಮಿಸಿ ಸಮೃದ್ಧವಾಗಿ ಆಶೀರ್ವದಿಸಿದನು. (ಆಮೋ. 7:14, 15) ಅದೇ ರೀತಿ ಇಂಡಿಯಾನಾದ ಲಿಬರ್ಟಿಯಲ್ಲಿದ್ದ ಬಡ ರೈತನ ಮಗನಾದ ನನ್ನನ್ನೂ ಯೆಹೋವನು ಗಮನಿಸಿದನು. ಯೆಹೋವನು ನನ್ನನ್ನು ಎಷ್ಟು ಆಶೀರ್ವದಿಸಿದ್ದಾನೆ ಎಂದು ಲೆಕ್ಕಮಾಡಲು ಸಾಧ್ಯವಿಲ್ಲ. (ಜ್ಞಾನೋ. 10:22) ನನ್ನ ಜೀವನ ಬಡತನದ ಬೇಗೆಯಲ್ಲಿ ಆರಂಭವಾಗಿರಬಹುದು. ಆದರೆ ಈಗ ಸಿರಿತನದ ಸಂಭ್ರಮ ತುಂಬಿದೆ!