ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸರ್ಕಾರಿ ಅಧಿಕಾರಿಗಳೊಂದಿಗೆ ವ್ಯವಹರಿಸುವಾಗ ಕ್ರೈಸ್ತರು ಬೈಬಲ್‌ ಶಿಕ್ಷಿತ ಮನಸ್ಸಾಕ್ಷಿಯನ್ನು ಬಳಸಬೇಕು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ಸರ್ಕಾರಿ ನೌಕರರಿಗೆ ಉಡುಗೊರೆ ಅಥವಾ ಹಣ (ಟಿಪ್ಸ್‌) ಕೊಡುವುದು ಸರಿಯಾ ತಪ್ಪಾ ಎಂದು ನಿರ್ಧರಿಸಲು ಕ್ರೈಸ್ತರಿಗೆ ಯಾವುದು ಸಹಾಯಮಾಡುತ್ತದೆ?

ಈ ಪ್ರಶ್ನೆಗೆ ಉತ್ತರ ತಿಳಿಯಲು ಹಲವಾರು ವಿಷಯಗಳನ್ನು ಮನಸ್ಸಿನಲ್ಲಿಡಬೇಕು. ಮೊದಲಾಗಿ ಕ್ರೈಸ್ತರು ಪ್ರಾಮಾಣಿಕರಾಗಿರಬೇಕು. ದೇಶದ ನಿಯಮಗಳಿಗೆ ವಿಧೇಯರಾಗುವ ಕರ್ತವ್ಯ ಅವರಿಗಿದೆ. ಆದರೆ ಅವು ಯೆಹೋವನ ನಿಯಮಗಳಿಗೆ ವಿರುದ್ಧವಾಗಿರದಿದ್ದಾಗ ಮಾತ್ರ. (ಮತ್ತಾ. 22:21; ರೋಮ. 13:1, 2; ಇಬ್ರಿ. 13:18) ಅಲ್ಲದೆ ಸ್ಥಳೀಯ ಪದ್ಧತಿಗಳನ್ನು, ಜನರ ಸೂಕ್ಷ್ಮ ಭಾವನೆಗಳನ್ನು ಗೌರವಿಸುವ ಮತ್ತು ತಮ್ಮ ನೆರೆಯವರನ್ನು ತಮ್ಮಂತೆಯೇ ಪ್ರೀತಿಸುವ ಹಂಗು ಸಹ ಅವರಿಗಿದೆ. (ಮತ್ತಾ. 22:39; ರೋಮ. 12:17, 18; 1 ಥೆಸ. 4:11, 12) ಈ ಎಲ್ಲ ಬೈಬಲ್‌ ತತ್ವಗಳನ್ನು ಅನ್ವಯಿಸುವಾಗ ಸರ್ಕಾರಿ ನೌಕರರ ಸೇವೆಗಾಗಿ ಹಣ, ಉಡುಗೊರೆ ಕೊಡುವ ವಿಷಯದಲ್ಲಿ ಬೇರೆಬೇರೆ ದೇಶಗಳಲ್ಲಿರುವ ಕ್ರೈಸ್ತರ ನೋಟ ಬೇರೆಬೇರೆ ಆಗಿರಬಹುದು.

ಅನೇಕ ದೇಶಗಳಲ್ಲಿ ಸಮಾಜದ ವ್ಯಕ್ತಿಯೊಬ್ಬನಿಗೆ ಕೆಲವು ಸೇವಾಸೌಲಭ್ಯಗಳನ್ನು ಪಡೆಯುವ ಹಕ್ಕಿದೆ. ಅವುಗಳನ್ನು ಪಡೆಯುವಾಗ ಅವನು ಸರ್ಕಾರಿ ನೌಕರರಿಗೆ ಏನೂ ಕೊಡಬೇಕಾಗಿಲ್ಲ. ಏಕೆಂದರೆ ಅವರ ಕೆಲಸಕ್ಕೆ ಸರ್ಕಾರವೇ ಸಂಬಳ ಕೊಡುತ್ತದೆ. ಸಂಬಳಕ್ಕಿಂತ ಹೆಚ್ಚೇನನ್ನೂ ಅವರು ಕೇಳುವಂತಿಲ್ಲ, ಅಪೇಕ್ಷಿಸುವಂತೆಯೂ ಇಲ್ಲ. ಇನ್ನೂ ಕೆಲವು ದೇಶಗಳಲ್ಲಿ, ಸರ್ಕಾರಿ ನೌಕರರು ನಾಗರಿಕರಿಗಾಗಿ ನ್ಯಾಯಬದ್ಧ ರೀತಿಯಲ್ಲಿ ಕೆಲಸ ಮಾಡಿಕೊಟ್ಟರೂ ಅದಕ್ಕಾಗಿ ನಾಗರಿಕರಿಂದ ಏನನ್ನೊ ಕೇಳುವುದು ಅಥವಾ ಪಡೆಯುವುದು ಕಾನೂನುಬಾಹಿರ ಅಂದರೆ ಲಂಚವೆಂದು ಪರಿಗಣಿಸಲಾಗುತ್ತದೆ. ನಾಗರಿಕರು ಕಾನೂನುಬಾಹಿರವಲ್ಲದ ಕೆಲಸವನ್ನು ಮಾಡಿಕೊಡುವಂತೆ ಕೇಳಿಕೊಳ್ಳುವಾಗ ಅದಕ್ಕಾಗಿ ಒಳ್ಳೇ ಮನಸ್ಸಿನಿಂದ ಉಡುಗೊರೆ ಕೊಡುವುದನ್ನು ಸಹ ಲಂಚವೆಂದು ಎಣಿಸಲಾಗುತ್ತದೆ. ಈ ಸನ್ನಿವೇಶಗಳಲ್ಲಿ ಕ್ರೈಸ್ತನೊಬ್ಬನು ಉಡುಗೊರೆಯನ್ನು ಅಥವಾ ಹಣವನ್ನು ಕೊಡಬೇಕಾ ಬೇಡವಾ ಎಂಬ ಪ್ರಶ್ನೆಯೇ ಬರುವುದಿಲ್ಲ. ಏಕೆಂದರೆ ಅದು ಖಂಡಿತವಾಗಿ ತಪ್ಪು.

ಆದರೆ ಈ ವಿಷಯಗಳ ಬಗ್ಗೆ ಕೆಲವು ದೇಶಗಳಲ್ಲಿ ನಿಯಮಗಳಿಲ್ಲ ಅಥವಾ ನಿಯಮಗಳಿದ್ದರೂ ಕಟ್ಟುನಿಟ್ಟಾಗಿ ಜಾರಿಯಲ್ಲಿ ಇರುವುದಿಲ್ಲ. ಆದ್ದರಿಂದ ಸರ್ಕಾರಿ ನೌಕರರಿಗೆ ಹಣ ಅಥವಾ ಉಡುಗೊರೆ ತಕ್ಕೊಳ್ಳುವುದು ತಪ್ಪೆಂದು ಅನಿಸುವುದಿಲ್ಲ. ಕೆಲವು ದೇಶಗಳಲ್ಲಿ, ಸರ್ಕಾರಿ ಅಧಿಕಾರಿಗಳು ಜನಸೇವೆ ಮಾಡುವ ಬದಲು ಅವರಿಂದಲೇ ಹಣ ಕಿತ್ತುಕೊಳ್ಳುತ್ತಾರೆ ಅಥವಾ ಅಧಿಕಾರವನ್ನು ದುರುಪಯೋಗಿಸಿ ತಮ್ಮ ಕೆಲಸ ಸಾಧಿಸಿಕೊಳ್ಳುತ್ತಾರೆ. ಅವರ ಕೈಬಿಸಿ ಮಾಡದಿದ್ದರೆ ಜನರ ಕೆಲಸವನ್ನು ಮಾಡಿಕೊಡುವುದಿಲ್ಲ. ಉದಾಹರಣೆಗೆ ಮದುವೆ ರಿಜಿಸ್ಟರ್‌ ಮಾಡುವ, ಆದಾಯ ತೆರಿಗೆ ಪಡೆಯುವ, ಕಟ್ಟಡ ನಿರ್ಮಾಣಕ್ಕೆ ಅನುಮತಿ ಕೊಡುವ ಅಧಿಕಾರಿಗಳು ಟಿಪ್ಸ್‌ ಕೊಡುವಂತೆ ಒತ್ತಾಯಿಸುತ್ತಾರೆ. ಅವರಿಗೆ ಹಣ ಸಿಗುವುದಿಲ್ಲ ಎಂದು ಗೊತ್ತಾದರೆ ಬೇಕುಬೇಕೆಂದು ಕೆಲಸ ಮುಂದೂಡಿ ತೊಂದರೆಕೊಡುತ್ತಾರೆ. ಹೀಗೆ ನಾಗರಿಕರು ತಮ್ಮ ನ್ಯಾಯಬದ್ಧ ಸೌಲಭ್ಯ ಪಡೆಯುವುದನ್ನು ಕಷ್ಟವಾಗಿ ಮಾಡುತ್ತಾರೆ. ಒಂದು ವರದಿ ಹೇಳುವ ಪ್ರಕಾರ ಒಂದು ದೇಶದಲ್ಲಿ ಅಗ್ನಿಶಾಮಕ ದಳದವರು ಬೆಂಕಿ ಹೊತ್ತಿರುವ ಸ್ಥಳಕ್ಕೆ ಬಂದರೂ ತಮಗೆ ಮೊದಲು ದೊಡ್ಡ ಟಿಪ್ಸ್‌ ಸಿಗದಿದ್ದರೆ ಬೆಂಕಿಯನ್ನು ಆರಿಸಲು ಆರಂಭಿಸುವುದೇ ಇಲ್ಲ.

ನಮಗೆ ದೊರೆಯತಕ್ಕ ನ್ಯಾಯಬದ್ಧ ಸೇವೆಗಾಗಿ ಕೆಲವೊಮ್ಮೆ ಮೆಚ್ಚುಗೆಯ ಒಂದು ಚಿಕ್ಕ ಉಡುಗೊರೆಯನ್ನು ನೀಡುವುದು ಸೂಕ್ತವಾಗಿರಬಹುದು

ಮೇಲೆ ತಿಳಿಸಿರುವ ಪರಿಸ್ಥಿತಿಗಳು ವ್ಯಾಪಕವಾಗಿರುವ ಸ್ಥಳಗಳಲ್ಲಿ ಟಿಪ್ಸ್‌ ಕೊಡದೇ ಇರುವುದು ಅಸಾಧ್ಯವೆಂದು ಕೆಲವರಿಗೆ ಅನಿಸಿಬಿಟ್ಟಿದೆ. ಇಂಥ ಪರಿಸ್ಥಿತಿಗಳಲ್ಲಿ, ಕ್ರೈಸ್ತನೊಬ್ಬನು ಟಿಪ್ಸ್‌ ಕೊಡುವುದನ್ನು ಒಂದು ನ್ಯಾಯಬದ್ಧ ಸೇವೆಯ ಪೂರೈಕೆಗಾಗಿ ಕೊಡುವ ಅಧಿಕ ಶುಲ್ಕವಾಗಿ ಪರಿಗಣಿಸಬಹುದು. ಆದರೆ ಭ್ರಷ್ಟತೆಯು ಸಾಮಾನ್ಯವಾಗಿರುವ ಪ್ರದೇಶಗಳಲ್ಲಿ ಕ್ರೈಸ್ತನೊಬ್ಬನು ದೇವರ ದೃಷ್ಟಿಯಲ್ಲಿ ಯಾವುದು ಸರಿ ಯಾವುದು ತಪ್ಪು ಎಂಬುದನ್ನು ನಿರ್ಲಕ್ಷಿಸಬಾರದು. ನ್ಯಾಯವಾಗಿ ಸಿಗಬೇಕಾದ ವಿಷಯವನ್ನು ಪಡೆಯಲು ಟಿಪ್ಸ್‌ ಕೊಡುವುದಕ್ಕೂ ಅನ್ಯಾಯವಾದ ಕೆಲಸವನ್ನು ಮಾಡಿಸಿಕೊಳ್ಳಲು ಟಿಪ್ಸ್‌ ಕೊಡುವುದಕ್ಕೂ ತುಂಬ ವ್ಯತ್ಯಾಸವಿದೆ. ಕೆಲವರು ತಮಗೆ ಹಕ್ಕಿಲ್ಲದ ಸೌಲಭ್ಯ ಪಡೆಯಲು ಅಧಿಕಾರಿಗಳಿಗೆ ಹಣಕೊಡುತ್ತಾರೆ ಅಥವಾ ನ್ಯಾಯಬದ್ಧ ದಂಡದಿಂದ ತಪ್ಪಿಸಿಕೊಳ್ಳಲು ಒಬ್ಬ ಪೊಲೀಸ್‌ಗೆ, ಸರ್ಕಾರಿ ಇನ್‌ಸ್ಪೆಕ್ಟರ್‌ಗೆ ಹಣ ನೀಡುತ್ತಾರೆ. ಈ ರೀತಿಯ ಉಡುಗೊರೆ ಕೊಟ್ಟು ಬೇರೆಯವರನ್ನು ಭ್ರಷ್ಟರನ್ನಾಗಿ ಮಾಡುವುದಾಗಲಿ ಅಂಥ ಉಡುಗೊರೆ ಸ್ವೀಕರಿಸಿ ನಾವೇ ಭ್ರಷ್ಟರಾಗುವುದಾಗಲಿ ತಪ್ಪು. ಎರಡೂ ಕ್ರಿಯೆಗಳು ನ್ಯಾಯವನ್ನು ತಿರುಚುತ್ತವೆ.—ವಿಮೋ. 23:8; ಧರ್ಮೋ. 16:19; ಜ್ಞಾನೋ. 17:23.

ಅಧಿಕಾರಿಗಳು ಹಣ-ಟಿಪ್ಸ್‌ ಕೇಳುವಾಗ ಹೆಚ್ಚಿನ ಪ್ರೌಢ ಕ್ರೈಸ್ತರು ತಮ್ಮ ಬೈಬಲ್‌ ಶಿಕ್ಷಿತ ಮನಸ್ಸಾಕ್ಷಿಯಿಂದಾಗಿ ಅದನ್ನು ಕೊಡುವುದು ತಪ್ಪೆಂದು ಎಣಿಸುತ್ತಾರೆ. ಏಕೆಂದರೆ ಹಾಗೆ ಟಿಪ್ಸ್‌ ಕೊಡುವುದು ಭ್ರಷ್ಟಾಚಾರಕ್ಕೆ ಬೆಂಬಲಕೊಟ್ಟಂತೆ ಆಗುತ್ತದೆ, ಅದು ತಪ್ಪಲ್ಲ ಎಂದು ಹೇಳಿದಂತೆ ಆಗುತ್ತದೆ ಎಂದು ಅವರು ನೆನಸುತ್ತಾರೆ. ಹಾಗಾಗಿ ಯಾವುದೇ ರೀತಿಯ ಉಡುಗೊರೆ ಕೇಳಿದರೂ ಅವರು ಕೊಡುವುದಿಲ್ಲ.

ಕಾನೂನುಬಾಹಿರವಾದ ಸೌಲಭ್ಯ ಪಡೆದುಕೊಳ್ಳಲು ಉಡುಗೊರೆ ಕೊಡುವುದು ಲಂಚಕ್ಕೆ ಸಮ ಆಗಿರಸಾಧ್ಯ ಎಂದು ಪ್ರೌಢ ಕ್ರೈಸ್ತರು ಅರಿತಿದ್ದಾರೆ. ಆದರೆ ಸ್ಥಳೀಯ ಸನ್ನಿವೇಶ ಮತ್ತು ಜನರ ಮನೋಭಾವದಿಂದಾಗಿ ಕೆಲವು ಕ್ರೈಸ್ತರು ನ್ಯಾಯಬದ್ಧ ಸೇವಾಸೌಲಭ್ಯ ಪಡೆಯಲು ಅಥವಾ ಕೆಲಸ ವಿಳಂಬವಾಗುವುದನ್ನು ತಡೆಯಲು ಸಣ್ಣ ಉಡುಗೊರೆ ಅಥವಾ ಸ್ವಲ್ಪ ಹಣ ಕೊಡಬಹುದು. ಕೆಲವು ಕ್ರೈಸ್ತರು ಏನು ಮಾಡುತ್ತಾರೆಂದರೆ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಪಡೆದ ನಂತರ ತಮಗೆ ದೊರೆತ ಚಿಕಿತ್ಸೆಗೆ ಕೃತಜ್ಞತೆಯಿಂದ ಡಾಕ್ಟರರಿಗೆ, ನರ್ಸ್‌ಗಳಿಗೆ ಉಡುಗೊರೆಯನ್ನು ಕೊಡುತ್ತಾರೆ. ಇದನ್ನು ಚಿಕಿತ್ಸೆಯ ಮುಂಚೆ ಕೊಡುವುದಕ್ಕಿಂತ ಚಿಕಿತ್ಸೆಯ ನಂತರ ಕೊಡುವುದು ಒಳ್ಳೇದೆಂದು ಅವರು ನೆನಸುತ್ತಾರೆ. ಇದು, ಆ ಉಡುಗೊರೆಯು ಲಂಚವಾಗಿ ಅಥವಾ ಹೆಚ್ಚು ಉತ್ತಮ ಸೇವೆ ಪಡೆಯಲಿಕ್ಕಾಗಿ ನೀಡಲಾಗಿತ್ತು ಎಂಬ ಭಾವನೆ ಮೂಡಿಸುವುದಿಲ್ಲ.

ಪ್ರತಿಯೊಂದು ದೇಶದಲ್ಲಿ ಎದುರಾಗುವ ಪ್ರತಿಯೊಂದು ಸನ್ನಿವೇಶವನ್ನು ಇಲ್ಲಿ ಚರ್ಚಿಸುವುದು ಅಸಾಧ್ಯ. ಸ್ಥಳೀಯ ಪರಿಸ್ಥಿತಿ ಏನೇ ಆಗಿರಲಿ ಈ ವಿಷಯದಲ್ಲಿ ಕ್ರೈಸ್ತರು ತಕ್ಕೊಳ್ಳುವ ನಿರ್ಣಯ ನಂತರ ಅವರ ಮನಸ್ಸಾಕ್ಷಿಯನ್ನು ಚುಚ್ಚಬಾರದು. (ರೋಮ. 14:1-6) ನ್ಯಾಯಕ್ಕೆ ವಿರುದ್ಧವಾದ ಕೆಲಸಗಳನ್ನು ಅವರು ನಿರಾಕರಿಸಬೇಕು. (ರೋಮ. 13:1-7) ಯೆಹೋವನ ಹೆಸರಿಗೆ ಕಳಂಕ ತರಬಹುದಾದ ಅಥವಾ ಇತರರನ್ನು ಎಡವಿಸಬಹುದಾದ ಯಾವುದೇ ವಿಷಯವನ್ನು ಅವರು ಮಾಡಬಾರದು. (ಮತ್ತಾ. 6:9; 1 ಕೊರಿಂ. 10:32) ಕೊನೆಯದಾಗಿ, ಅವರ ನಿರ್ಣಯವು ನೆರೆಯವರನ್ನು ಅವರು ಪ್ರೀತಿಸುತ್ತಾರೆಂದು ತೋರಿಸಬೇಕು.—ಮಾರ್ಕ 12:31.

ಬಹಿಷ್ಕಾರವಾದ ವ್ಯಕ್ತಿಯೊಬ್ಬರು ಸಭೆಗೆ ಹಿಂದಿರುಗುವುದರ ಬಗ್ಗೆ ಪ್ರಕಟಣೆ ಮಾಡಿದಾಗ ಸಭೆಯವರು ಹೇಗೆ ತಮ್ಮ ಸಂತೋಷ ವ್ಯಕ್ತಪಡಿಸಬಹುದು?

ಲೂಕ 15 ನೇ ಅಧ್ಯಾಯದಲ್ಲಿ ಯೇಸು 100 ಕುರಿಗಳಿರುವ ಒಬ್ಬ ವ್ಯಕ್ತಿಯ ಬಗ್ಗೆ ಹೇಳಿದನು. ಆ ಉದಾಹರಣೆಯಲ್ಲಿ ಅವನ ಒಂದು ಕುರಿ ಕಳೆದುಹೋಗುತ್ತದೆ. ಆಗ ಅವನು 99 ಕುರಿಗಳನ್ನು ಅರಣ್ಯದಲ್ಲೇ ಬಿಟ್ಟು ಕಳೆದುಹೋದ ಕುರಿ ಸಿಗುವವರೆಗೆ ಹುಡುಕುತ್ತಾ ಹೋದನು. “ಅವನು ಅದನ್ನು ಕಂಡುಕೊಂಡಾಗ, ಅದನ್ನು ತನ್ನ ಹೆಗಲ ಮೇಲೆ ಎತ್ತಿಕೊಂಡು ಸಂತೋಷಪಡುತ್ತಾನೆ. ಮನೆಗೆ ಬಂದ ಬಳಿಕ ಅವನು ತನ್ನ ಸ್ನೇಹಿತರನ್ನೂ ನೆರೆಯವರನ್ನೂ ಕರೆದು ಅವರಿಗೆ, ‘ನನ್ನೊಂದಿಗೆ ಸಂತೋಷಿಸಿರಿ, ಏಕೆಂದರೆ ಕಳೆದುಹೋಗಿದ್ದ ನನ್ನ ಕುರಿಯು ನನಗೆ ಸಿಕ್ಕಿದೆ’” ಎಂದು ಹೇಳುತ್ತಾನೆ. ಈ ಉದಾಹರಣೆಯ ಕೊನೆಯಲ್ಲಿ ಯೇಸು ಹೀಗೆ ಹೇಳಿದನು: “ಆದುದರಿಂದ ಪಶ್ಚಾತ್ತಾಪದ ಅಗತ್ಯವಿಲ್ಲದ ತೊಂಬತ್ತೊಂಬತ್ತು ಮಂದಿ ನೀತಿವಂತರಿಗಿಂತ ಪಶ್ಚಾತ್ತಾಪಪಡುವ ಒಬ್ಬ ಪಾಪಿಯ ವಿಷಯದಲ್ಲಿ ಸ್ವರ್ಗದಲ್ಲಿ ಹೆಚ್ಚು ಸಂತೋಷ ಉಂಟಾಗುವುದೆಂದು ನಿಮಗೆ ಹೇಳುತ್ತೇನೆ.”—ಲೂಕ 15:4-7.

ಸನ್ನಿವೇಶ ನೋಡಿದರೆ ಯೇಸು ಈ ಮಾತುಗಳನ್ನು ಯಾಕೆ ಹೇಳಿದನೆಂದು ಗೊತ್ತಾಗುತ್ತದೆ. ಯೇಸು ತೆರಿಗೆ ವಸೂಲಿಗಾರರ ಮತ್ತು ಪಾಪಿಗಳ ಜೊತೆ ಸಹವಾಸ ಮಾಡುತ್ತಾನೆಂದು ಶಾಸ್ತ್ರಿಗಳು, ಫರಿಸಾಯರು ಟೀಕಿಸುತ್ತಿದ್ದರು. ಅವರನ್ನು ತಿದ್ದಲು ಯೇಸು ಈ ಮಾತುಗಳನ್ನು ಹೇಳಿದನು. (ಲೂಕ 15:1-3) ಒಬ್ಬ ಪಾಪಿ ಪಶ್ಚಾತ್ತಾಪ ಪಟ್ಟಾಗ ಸ್ವರ್ಗದಲ್ಲಿ ತುಂಬ ಸಂತೋಷವಾಗುತ್ತದೆ ಎಂದು ಯೇಸು ಒತ್ತಿಹೇಳಿದನು. ‘ತಪ್ಪು ಮಾಡಿದ ವ್ಯಕ್ತಿ ಪಶ್ಚಾತ್ತಾಪಪಟ್ಟು, ತಿದ್ದಿಕೊಂಡು, ಸರಿದಾರಿಗೆ ಬಂದರೆ ಸ್ವರ್ಗದಲ್ಲಿರುವವರೇ ಸಂತೋಷ ಪಡುವುದಾದರೆ ಭೂಮಿಯಲ್ಲಿರೋ ನಾವೂ ಸಂತೋಷ ಪಡಬೇಕಲ್ವಾ?’ ಎನ್ನುವ ಪ್ರಶ್ನೆ ನಮಗೆ ಬರಬಹುದು.—ಇಬ್ರಿಯ 12:13.

ಒಬ್ಬ ವ್ಯಕ್ತಿ ಪುನಃಸ್ಥಾಪಿಸಲ್ಪಡಬೇಕಾದರೆ ಅವನು ದೇವರಿಗೆ ನಿಷ್ಠೆ ತೋರಿಸುತ್ತಾ ಇರಬೇಕು ಮಾತ್ರವಲ್ಲ ಯಥಾರ್ಥವಾಗಿ ಪಶ್ಚಾತ್ತಾಪ ಕೂಡ ಪಡಬೇಕು. ಈ ರೀತಿ, ಅವನು ಪಶ್ಚಾತ್ತಾಪ ಪಡುವಾಗ ನಮಗೆ ಖಂಡಿತ ಸಂತೋಷವಾಗುತ್ತದೆ. ಹಾಗಾಗಿ ಅವನು ಸಭೆಗೆ ಹಿಂದಿರುಗಿದ್ದಾನೆ ಎಂದು ಸಭೆಯಲ್ಲಿ ಪ್ರಕಟಣೆ ಮಾಡಿದಾಗ ಸಭಿಕರು ಗೌರವಯುತವಾಗಿ ಚಪ್ಪಾಳೆ ತಟ್ಟಬಹುದು.

ಯೆರೂಸಲೇಮಿನ ಬೇತ್ಸಥಾ ಕೊಳವು ‘ಉಕ್ಕಲು’ ಕಾರಣವೇನು?

ಯೇಸುವಿನ ಸಮಯದಲ್ಲಿ ಯೆರೂಸಲೇಮಿನ ಜನರು ಬೇತ್ಸಥಾ ಕೊಳದ ನೀರು ‘ಉಕ್ಕುವಾಗ’ ಅದರಲ್ಲಿ ಮುಳುಗಿದರೆ ತಮ್ಮ ಕಾಯಿಲೆಗಳು ವಾಸಿಯಾಗುತ್ತವೆ ಎಂದು ನೆನಸಿದ್ದರು. (ಯೋಹಾನ 5:​1-7) ಹಾಗಾಗಿ ಕಾಯಿಲೆಗಳನ್ನು ವಾಸಿಮಾಡಿಕೊಳ್ಳಲು ಆ ಕೊಳದ ಬಳಿ ಜನರು ಗುಂಪುಗುಂಪಾಗಿ ಬರುತ್ತಿದ್ದರು.

ಈ ಕೊಳದಲ್ಲಿ ಸ್ನಾನ ಮಾಡುವುದು ಯೆಹೂದಿಗಳ ಸಂಪ್ರದಾಯವಾಗಿತ್ತು. ಕೊಳದಲ್ಲಿ ಯಾವಾಗಲೂ ನೀರು ಇರುವುದಕ್ಕಾಗಿ ಪಕ್ಕದಲ್ಲೇ ಇದ್ದ ಜಲಾಶಯದಿಂದ ನೀರನ್ನು ಪೂರೈಸಲಾಗುತ್ತಿತ್ತು. ಸಂಶೋಧನೆಗಳು ಹೇಳುವುದೇನೆಂದರೆ ಆ ಸ್ಥಳದಲ್ಲಿ ಎರಡು ಕೊಳಗಳ ಮಧ್ಯೆ ಒಂದು ಅಣೆಕಟ್ಟಿತ್ತು. ಆ ಅಣೆಕಟ್ಟಿನಿಂದ ಕೊಳಕ್ಕೆ ನೀರನ್ನು ಕಾಲುವೆಯ ಮೂಲಕ ಹರಿಸಲಾಗುತ್ತಿತ್ತು. ಹೀಗೆ ಅಣೆಕಟ್ಟಿನ ಬಾಗಿಲನ್ನು ತೆರೆದಾಗ ನೀರು ಕೊಳದ ಕೆಳಭಾಗಕ್ಕೆ ರಭಸವಾಗಿ ಹರಿದು ಬಂದಾಗ ಅದು ಉಕ್ಕುವಂತೆ ಕಾಣುತ್ತಿತ್ತು.

ಕೆಲವು ಬೈಬಲ್‌ ಭಾಷಾಂತರಗಳಲ್ಲಿ ಯೋಹಾನ 5:4 ರಲ್ಲಿ ಒಬ್ಬ ದೇವದೂತ ನೀರನ್ನು ಕದಲಿಸುತ್ತಿದ್ದ ಎಂದು ತಿಳಿಸಲಾಗಿದೆ. ಆದರೆ ಗಮನಿಸಬೇಕಾದ ವಿಷಯ ಏನೆಂದರೆ ಈ ಮಾಹಿತಿ ನಾಲ್ಕನೇ ಶತಮಾನದ ಕೋಡೆಕ್ಸ್‌ ಸೈನಾಟಿಕಸ್‌ನಂಥ ಪುರಾತನ ಗ್ರೀಕ್‌ ಹಸ್ತಪ್ರತಿಗಳಲ್ಲಿ ಇಲ್ಲ. ವಿಷಯ ಏನೇ ಆಗಿರಲಿ ಬೇತ್ಸಥಾ ಕೊಳದ ಹತ್ತಿರ 38 ವರ್ಷಗಳಿಂದ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯನ್ನು ಯೇಸು ವಾಸಿಮಾಡಿದನು. ಅದೂ ಕೊಳದೊಳಕ್ಕೆ ಹೋಗದೆ ಆ ವ್ಯಕ್ತಿ ವಾಸಿಯಾದನು.