ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 10

ಯೆಹೋವನ ಮೇಲೆ ಪ್ರೀತಿ ಬೆಳೆಸಿಕೊಳ್ಳಿ, ದೀಕ್ಷಾಸ್ನಾನ ಪಡ್ಕೊಳ್ಳಿ

ಯೆಹೋವನ ಮೇಲೆ ಪ್ರೀತಿ ಬೆಳೆಸಿಕೊಳ್ಳಿ, ದೀಕ್ಷಾಸ್ನಾನ ಪಡ್ಕೊಳ್ಳಿ

“ದೀಕ್ಷಾಸ್ನಾನ ಪಡೆದುಕೊಳ್ಳಲು ನನಗೆ ಅಡ್ಡಿ ಏನು?”—ಅ. ಕಾ. 8:36.

ಗೀತೆ 66 ಯೆಹೋವನಿಗೆ ಪೂರ್ಣ ಪ್ರಾಣದ ಸೇವೆ ಸಲ್ಲಿಸುವುದು

ಕಿರುನೋಟ *

1-2. ಅಪೊಸ್ತಲರ ಕಾರ್ಯಗಳು 8:27-31, 35-38 ರ ಪ್ರಕಾರ ಇಥಿಯೋಪ್ಯದ ಅಧಿಕಾರಿಗೆ ದೀಕ್ಷಾಸ್ನಾನ ತಗೊಳ್ಳಲು ಯಾವುದು ಸಹಾಯ ಮಾಡ್ತು?

ನೀವು ದೀಕ್ಷಾಸ್ನಾನ ತಗೊಂಡು ಯೇಸುವಿನ ಶಿಷ್ಯರಾಗೋಕೆ ಇಷ್ಟಪಡ್ತೀರಾ? ಅನೇಕರು ಈ ಹೆಜ್ಜೆ ತಗೊಂಡಿದ್ದಾರೆ. ಅದಕ್ಕೆ ಕಾರಣ ಅವರು ಯೆಹೋವನನ್ನು ಪ್ರೀತಿಸಿರುವುದು ಮತ್ತು ಆತನು ಅವರಿಗೋಸ್ಕರ ಮಾಡಿರುವ ಎಲ್ಲಾ ವಿಷಯಗಳನ್ನು ಗಣ್ಯಮಾಡಿರೋದೇ ಆಗಿದೆ. ಉದಾಹರಣೆಗೆ ಇಥಿಯೋಪ್ಯದ ರಾಣಿಯ ಹತ್ರ ಕೆಲಸಮಾಡಿದ ಅಧಿಕಾರಿಯ ಬಗ್ಗೆ ನೋಡಿ.

2 ಆ ಅಧಿಕಾರಿ ದೀಕ್ಷಾಸ್ನಾನ ತಗೋಬೇಕಂತ ದೇವ್ರ ವಾಕ್ಯದಿಂದ ಅರ್ಥಮಾಡಿಕೊಂಡ ತಕ್ಷಣನೇ ದೀಕ್ಷಾಸ್ನಾನಕ್ಕೆ ಸಿದ್ಧನಾದ. (ಅಪೊಸ್ತಲರ ಕಾರ್ಯಗಳು 8:27-31, 35-38 ಓದಿ.) ಈ ನಿರ್ಣಯ ಮಾಡೋಕೆ ಅವ್ನಿಗೆ ಯಾವುದು ಪ್ರೋತ್ಸಾಹ ಕೊಡ್ತು? ಅವ್ನು ರಥದಲ್ಲಿ ಪ್ರಯಾಣಿಸುತ್ತಿದ್ದಾಗ ಯೆಶಾಯ ಪುಸ್ತಕದ ಒಂದು ಭಾಗವನ್ನು ಓದ್ತಾ ಇದ್ದ. ಅವ್ನಿಗೆ ಈಗಾಗಲೇ ದೇವ್ರ ವಾಕ್ಯದ ಕಡೆಗೆ ಗಣ್ಯತೆ ಇತ್ತು ಅಂತ ಇದ್ರಿಂದ ಗೊತ್ತಾಗುತ್ತೆ. ಆಮೇಲೆ ಫಿಲಿಪ್ಪ ಅವ್ನ ಜೊತೆ ಮಾತಾಡ್ದಾಗ ಯೇಸು ತನಗೋಸ್ಕರ ಮಾಡ್ದ ವಿಷಯಗಳ ಕಡೆಗೂ ಅವ್ನಿಗೆ ಗಣ್ಯತೆ ಹುಟ್ತು. ಅವ್ನಿಗೆ ಯೆಹೋವನ ಮೇಲೆ ಪ್ರೀತಿನೂ ಇತ್ತು. ಅದು ನಮ್ಗೆ ಹೇಗೆ ಗೊತ್ತು? ಅವ್ನು ಯೆರೂಸಲೇಮಿಗೆ ಹೋಗಿದ್ದು ಯೆಹೋವನನ್ನು ಆರಾಧಿಸಲಿಕ್ಕಾಗಿನೇ. ಅವ್ನು ತನ್ನ ಧರ್ಮವನ್ನು ಬಿಟ್ಟು ಯೆಹೋವನಿಗೆ ಸಮರ್ಪಿತರಾಗಿದ್ದ ಜನ್ರ ಜೊತೆ ಆರಾಧಿಸುವ ಆಯ್ಕೆಯನ್ನ ಮಾಡಿರಬೇಕು. ಅವ್ನಿಗೆ ಯೆಹೋವನ ಮೇಲೆ ಇಂಥ ಪ್ರೀತಿ ಇದ್ದಿದ್ರಿಂದನೇ ದೀಕ್ಷಾಸ್ನಾನ ಎಂಬ ಪ್ರಾಮುಖ್ಯ ಹೆಜ್ಜೆಯನ್ನು ಸಹ ತಗೊಂಡು ಯೇಸುವಿನ ಶಿಷ್ಯನಾದ್ನು.—ಮತ್ತಾ. 28:19.

3. ಒಬ್ಬ ವ್ಯಕ್ತಿ ದೀಕ್ಷಾಸ್ನಾನ ತಗೊಳ್ಳೋಕೆ ಯಾವ ವಿಷಯಗಳು ಅಡ್ಡಿ ಮಾಡ್ಬಹುದು? (“ ನೀವು ಯಾವ ರೀತಿಯ ನೆಲದಂತಿದ್ದೀರಿ?” ಎಂಬ ಚೌಕ ನೋಡಿ.)

3 ಪ್ರೀತಿ ದೀಕ್ಷಾಸ್ನಾನ ತಗೊಳ್ಳೋಕೆ ಪ್ರೋತ್ಸಾಹನೂ ಕೊಡಬಹುದು, ಅಡ್ಡಿನೂ ಮಾಡ್ಬಹುದು. ಅದು ಹೇಗೆ? ಯೆಹೋವನ ಮೇಲಿರೋ ಪ್ರೀತಿ ದೀಕ್ಷಾಸ್ನಾನ ತಗೊಳ್ಳೋಕೆ ಪ್ರೋತ್ಸಾಹಿಸುತ್ತೆ. ಆದ್ರೆ ಬೇರೆ ವಿಷಯಗಳ ಕಡೆಗಿರೋ ಪ್ರೀತಿ ಅದಕ್ಕೆ ಅಡ್ಡಿ ಮಾಡುತ್ತೆ. ಈಗ ಕೆಲವು ಉದಾಹರಣೆಗಳನ್ನು ನೋಡೋಣ. ಸತ್ಯದಲ್ಲಿಲ್ಲದಿರೋ ನಿಮ್ಮ ಕುಟುಂಬದವ್ರನ್ನ, ಸ್ನೇಹಿತರನ್ನ ನೀವು ತುಂಬಾ ಪ್ರೀತಿಸ್ಬಹುದು. ಹಾಗಾಗಿ, ದೀಕ್ಷಾಸ್ನಾನ ತಗೊಂಡ್ರೆ ಅವ್ರು ನಿಮ್ಮನ್ನ ಎಲ್ಲಿ ದ್ವೇಷಿಸುತ್ತಾರೋ ಅನ್ನೋ ಚಿಂತೆ ಕಾಡ್ಬಹುದು. (ಮತ್ತಾ. 10:37) ದೇವ್ರು ದ್ವೇಷಿಸೋ ಚಟಗಳು ನಿಮಗೆ ಇಷ್ಟವಿರಬಹುದು. ಹಾಗಾಗಿ ಅಂಥ ಚಟಗಳಿಂದ ಹೊರಬರಲು ನಿಮ್ಗೆ ಕಷ್ಟ ಆಗ್ಬಹುದು. (ಕೀರ್ತ. 97:10) ಅಥವಾ ಸುಳ್ಳು ಧರ್ಮಕ್ಕೆ ಸಂಬಂಧಪಟ್ಟ ಹಬ್ಬಗಳನ್ನ ನೀವು ಚಿಕ್ಕಂದಿನಿಂದ ಮಾಡ್ತಾ ಬಂದಿರಬಹುದು. ಆ ಹಬ್ಬಗಳನ್ನ ಆಚರಿಸುತ್ತಿದ್ದ ಕ್ಷಣಗಳನ್ನ ನೆನಪಿಸಿಕೊಂಡಾಗ ನಿಮ್ಗೆ ಖುಷಿ ಆಗ್ಬಹುದು. ಅದ್ರಿಂದಾಗಿ ಯೆಹೋವನಿಗೆ ಇಷ್ಟವಾಗದೇ ಇರುವ ಆಚರಣೆಗಳನ್ನ ಬಿಡಲು ಕಷ್ಟವಾಗಬಹುದು. (1 ಕೊರಿಂ. 10:20, 21) ಇಂಥ ಸನ್ನಿವೇಶಗಳಲ್ಲಿ ನೀವು ಯಾವುದನ್ನ ಅಥವಾ ಯಾರನ್ನ ಹೆಚ್ಚು ಪ್ರೀತಿ ಮಾಡ್ತೀರಿ ಅಂತ ನೀವೇ ನಿರ್ಣಯ ಮಾಡ್ಬೇಕು.

ಎಲ್ಲಕ್ಕಿಂತ ಹೆಚ್ಚಾಗಿ ಯೆಹೋವನನ್ನು ಪ್ರೀತಿಸಿ

4. ದೀಕ್ಷಾಸ್ನಾನ ತಗೊಳ್ಳೋ ನಿರ್ಣಯ ಮಾಡೋಕೆ ನಿಮಗೆ ಯಾವ್ದು ಸಹಾಯ ಮಾಡುತ್ತೆ?

4 ನೀವು ಅನೇಕ ವಿಷ್ಯಗಳನ್ನು ಇಷ್ಟಪಡ್ತಿರಬಹುದು, ಅದನ್ನು ಗಣ್ಯಮಾಡ್ತಿರಬಹುದು. ಉದಾಹರಣೆಗೆ ಯೆಹೋವನ ಸಾಕ್ಷಿಗಳ ಜೊತೆ ಬೈಬಲ್‌ ಕಲಿಯೋ ಮುಂಚೆನೇ ನಿಮ್ಗೆ ಬೈಬಲ್‌ ಅಂದ್ರೆ ತುಂಬ ಗೌರವ ಇದ್ದಿರಬಹುದು. ಯೇಸುವಿನ ಮೇಲೆ ತುಂಬ ಪ್ರೀತಿ ಇದ್ದಿರಬಹುದು. ಯೆಹೋವನ ಸಾಕ್ಷಿಗಳ ಪರಿಚಯ ಆದ್ಮೇಲೆ ಅವ್ರ ಜೊತೆ ಸಹವಾಸ ಮಾಡೋದು ನಿಮ್ಗೆ ಇಷ್ಟ ಆಗಿರಬಹುದು. ಆದ್ರೆ ಯೆಹೋವನಿಗೆ ನಿಮ್ಮನ್ನ ಸಮರ್ಪಿಸಿಕೊಂಡು ದೀಕ್ಷಾಸ್ನಾನ ಪಡಕೊಳ್ಳೋಕೆ ಇದು ಮಾತ್ರ ಸಾಕಾಗಲ್ಲ. ಯೆಹೋವನ ಮೇಲೆ ನಿಮಗೆ ಪ್ರೀತಿನೂ ಇರ್ಬೇಕು. ಅದೇ ದೀಕ್ಷಾಸ್ನಾನ ತಗೊಳ್ಳೋಕೆ ನಿಮ್ಮನ್ನ ಪ್ರೇರೇಪಿಸುತ್ತೆ. ನೀವು ಯೆಹೋವನನ್ನ ಬೇರೆಲ್ಲಾ ವಿಷ್ಯ ಮತ್ತು ವ್ಯಕ್ತಿಗಳಿಗಿಂತ ಹೆಚ್ಚಾಗಿ ಪ್ರೀತಿಸೋದಾದ್ರೆ ಯಾವ್ದೇ ವಿಷ್ಯ ಅಥವಾ ಯಾರೇ ಅಡ್ಡಿ ಮಾಡೋದಾದ್ರೂ ಯೆಹೋವನ ಸೇವೆ ಮಾಡೋದನ್ನ ನಿಲ್ಸಲ್ಲ. ಯೆಹೋವನ ಮೇಲಿರೋ ಪ್ರೀತಿ ದೀಕ್ಷಾಸ್ನಾನ ತಗೊಳ್ಳೋ ನಿರ್ಣಯ ಮಾಡೋಕೆ ಸಹಾಯ ಮಾಡೋದಷ್ಟೇ ಅಲ್ಲ ದೀಕ್ಷಾಸ್ನಾನದ ನಂತ್ರಾನೂ ಆತನಿಗೆ ನಂಬಿಗಸ್ತರಾಗಿ ಉಳಿಯೋಕೆ ಸಹಾಯ ಮಾಡುತ್ತೆ.

5. ಯಾವ ಪ್ರಶ್ನೆಗಳಿಗೆ ನಾವು ಉತ್ತರ ತಿಳಿಯಲಿದ್ದೇವೆ?

5 ನಾವು ಯೆಹೋವನನ್ನ ಪೂರ್ಣ ಹೃದಯ, ಪ್ರಾಣ, ಮನಸ್ಸು ಮತ್ತು ಬಲದಿಂದ ಪ್ರೀತಿಸಬೇಕು ಅಂತ ಯೇಸು ಹೇಳಿದನು. (ಮಾರ್ಕ 12:30) ನಾವು ಯೆಹೋವನನ್ನು ಇಷ್ಟೊಂದು ಪ್ರೀತಿಸಿ ಗೌರವಿಸಲು ಕಲಿಯೋದು ಹೇಗೆ? ಆತನು ನಮಗೆ ಹೇಗೆಲ್ಲಾ ಪ್ರೀತಿ ತೋರಿಸಿದ್ದಾನೆ ಅಂತ ಯೋಚಿಸ್ವಾಗ ಆತನ ಮೇಲೆ ನಮ್ಗೆ ಪ್ರೀತಿ ಹುಟ್ಟುತ್ತೆ. (1 ಯೋಹಾ. 4:19) ಯೆಹೋವನ ಮೇಲೆ ಪ್ರೀತಿ ಬೆಳೆಸಿಕೊಂಡ್ರೆ ನಾವೇನೆಲ್ಲಾ ಮಾಡ್ತೇವೆ ಮತ್ತು ಯಾವೆಲ್ಲಾ ಗುಣಗಳನ್ನ ತೋರಿಸ್ತೇವೆ? *

6. ರೋಮನ್ನರಿಗೆ 1:20 ರ ಪ್ರಕಾರ ಯೆಹೋವನ ಬಗ್ಗೆ ನಾವು ಕಲಿಯಸಾಧ್ಯವಿರುವ ಒಂದು ವಿಧ ಯಾವುದು?

6 ಸೃಷ್ಟಿಯ ಮೂಲಕ ಯೆಹೋವನ ಬಗ್ಗೆ ಕಲಿಯಿರಿ. (ರೋಮನ್ನರಿಗೆ 1:20 ಓದಿ; ಪ್ರಕ. 4:11) ಯೆಹೋವನು ಸೃಷ್ಟಿಸಿರೋ ಮರಗಿಡಗಳು ಮತ್ತು ಪ್ರಾಣಿಗಳ ರಚನೆಯ ಬಗ್ಗೆ ಯೋಚಿಸುತ್ತಾ ಆತನು ಎಷ್ಟು ವಿವೇಕಿ ಅಂತ ಧ್ಯಾನಿಸಿ. ನಿಮ್ಮ ದೇಹವನ್ನ ಎಷ್ಟು ಅದ್ಭುತವಾಗಿ ರಚಿಸಿದ್ದಾನೆ ಅಂತನೂ ಯೋಚಿಸಿ. (ಕೀರ್ತ. 139:14) ಯೆಹೋವನು ಸೂರ್ಯನಿಗೆ ಎಷ್ಟು ಶಕ್ತಿಯನ್ನ ಕೊಟ್ಟಿದ್ದಾನೆ ಅಂತ ಯೋಚಿಸಿ. ಅಷ್ಟೇ ಅಲ್ಲ ಆತನು ಇಂತಹ ಕೋಟಿಗಟ್ಟಲೆ ನಕ್ಷತ್ರಗಳನ್ನೂ ಸೃಷ್ಟಿಸಿದ್ದಾನೆ. * (ಯೆಶಾ. 40:26) ಈ ರೀತಿ ಯೋಚಿಸುವಾಗ ಯೆಹೋವನ ಮೇಲೆ ನಿಮಗಿರೋ ಗೌರವ ಹೆಚ್ಚಾಗುತ್ತದೆ. ಯೆಹೋವನ ವಿವೇಕ ಮತ್ತು ಶಕ್ತಿಯ ಬಗ್ಗೆ ತಿಳುಕೊಳ್ಳುವುದು ತುಂಬ ಮುಖ್ಯ. ಆದ್ರೆ ಯೆಹೋವನ ಮೇಲಿರೋ ಪ್ರೀತಿ ಬಲವಾಗೋಕೆ, ಆತನಿಗೆ ಆಪ್ತರಾಗೋಕೆ ಇದೊಂದೇ ಸಾಕಾಗಲ್ಲ. ನೀವು ಆತನ ಬಗ್ಗೆ ಇನ್ನೂ ಅನೇಕ ವಿಷಯಗಳನ್ನು ತಿಳಿಯಬೇಕು.

7. ಯೆಹೋವನ ಮೇಲೆ ನಿಮ್ಗಿರೋ ಪ್ರೀತಿ ಬಲವಾಗ್ಬೇಕಂದ್ರೆ ನಿಮ್ಗೇನು ಮನವರಿಕೆಯಾಗ್ಬೇಕು?

7 ಯೆಹೋವನು ನಿಮ್ಮ ಬಗ್ಗೆ ಕಾಳಜಿವಹಿಸ್ತಾನೆ ಅಂತ ನಿಮ್ಗೆ ಮನವರಿಕೆ ಆಗ್ಬೇಕು. ಆಕಾಶ, ಭೂಮಿ ಎಲ್ಲದ್ರ ಸೃಷ್ಟಿಕರ್ತ ನಿಮ್ಮನ್ನ ಗಮನಿಸ್ತಾನೆ, ನಿಮ್ಮ ಬಗ್ಗೆ ಕಾಳಜಿವಹಿಸ್ತಾನೆ ಅಂತ ನಂಬೋಕೆ ನಿಮ್ಗೆ ಕಷ್ಟ ಆಗುತ್ತಾ? ಹಾಗಾದ್ರೆ ಯೆಹೋವನು “ನಮ್ಮಲ್ಲಿ ಪ್ರತಿಯೊಬ್ಬನಿಗೂ ಬಹಳ ದೂರವಾಗಿರುವುದಿಲ್ಲ” ಅನ್ನೋದನ್ನ ನೆನಪಿನಲ್ಲಿಡಿ. (ಅ. ಕಾ. 17:26-28) ಆತನು ‘ಎಲ್ಲಾ ಹೃದಯಗಳನ್ನು ವಿಚಾರಿಸ್ತಾನೆ’ ಅಂದ್ರೆ ಎಲ್ರ ಹೃದಯದಲ್ಲೇನಿದೆ ಅಂತ ತಿಳ್ಕೋತಾನೆ. ‘ನಾವು ಆತನನ್ನ ಹುಡುಕೋದಾದ್ರೆ ಆತನು ನಮ್ಗೆ ಸಿಕ್ತಾನೆ’ ಅಂತ ಸ್ವತಃ ಯೆಹೋವನೇ ಮಾತು ಕೊಟ್ಟಿದ್ದಾನೆ. (1 ಪೂರ್ವ. 28:9) ನೀವು ಬೈಬಲನ್ನು ಕಲೀತಾ ಇದ್ದೀರೆಂದ್ರೆ ಅದಕ್ಕೆ ಕಾರಣ ಯೆಹೋವನು ನಿಮ್ಮನ್ನ ‘ಸೆಳೆದುಕೊಂಡಿರೋದೇ’ ಆಗಿದೆ. (ಯೆರೆ. 31:3) ಯೆಹೋವನು ನಿಮಗೋಸ್ಕರ ಏನೆಲ್ಲಾ ಮಾಡಿದ್ದಾನೆ ಅಂತ ನೀವು ತಿಳುಕೊಳ್ಳುತ್ತಾ ಹೋದಂತೆ ಆತನ ಮೇಲೆ ನಿಮ್ಗಿರೋ ಪ್ರೀತಿ ಬಲವಾಗುತ್ತೆ.

8. ಯೆಹೋವನು ತೋರಿಸಿರೋ ಪ್ರೀತಿಗೆ ನೀವು ಕೃತಜ್ಞರಾಗಿದ್ದೀರಿ ಅಂತ ಹೇಗೆ ತೋರಿಸಿಕೊಡ್ಬಹುದು?

8 ಯೆಹೋವನು ತೋರಿಸಿರೋ ಪ್ರೀತಿಗೆ ಕೃತಜ್ಞತೆ ತೋರಿಸೋ ಒಂದು ವಿಧ ಪ್ರಾರ್ಥನೆ ಮೂಲಕ ಆತನತ್ರ ಮಾತಾಡೋದೇ ಆಗಿದೆ. ನಿಮ್ಗಿರೋ ಚಿಂತೆಗಳನ್ನ ಆತನತ್ರ ಹೇಳ್ಕೊಂಡ್ರೆ, ಆತನು ನಿಮಗೋಸ್ಕರ ಮಾಡಿರೋ ವಿಷಯಗಳಿಗೆ ಕೃತಜ್ಞತೆ ಹೇಳಿದ್ರೆ ನಿಮ್ಗೆ ಆತನ ಮೇಲಿರೋ ಪ್ರೀತಿ ಹೆಚ್ಚಾಗುತ್ತೆ. ಯೆಹೋವನು ನಿಮ್ಮ ಪ್ರಾರ್ಥನೆಗಳಿಗೆ ಉತ್ತರ ಕೊಡೋದನ್ನ ನೋಡುವಾಗ ನಿಮ್ಗೆ ಆತನ ಜೊತೆ ಸ್ನೇಹ ಬೆಳೆಯುತ್ತೆ. (ಕೀರ್ತ. 116:1) ಅಷ್ಟೇ ಅಲ್ಲ ಆತನು ನಿಮ್ಮನ್ನ ಅರ್ಥಮಾಡ್ಕೊಳ್ತಾನೆ ಅಂತ ನಿಮ್ಗೆ ಚೆನ್ನಾಗಿ ಗೊತ್ತಾಗುತ್ತೆ. ಆದ್ರೆ ನೀವು ಯೆಹೋವನಿಗೆ ಇನ್ನೂ ಹತ್ತಿರವಾಗ್ಬೇಕಂದ್ರೆ ಆತನು ಯಾವ ರೀತಿ ಯೋಚಿಸ್ತಾನೆ ಅಂತ ಅರ್ಥಮಾಡ್ಕೊಳ್ಬೇಕು. ಜೊತೆಗೆ ನೀವು ಏನು ಮಾಡ್ಬೇಕಂತ ಆತನು ಬಯಸ್ತಾನೆ ಅನ್ನೋದನ್ನ ತಿಳ್ಕೋಬೇಕು. ಇದನ್ನ ತಿಳ್ಕೊಳ್ಳೋಕೆ ನಿಮ್ಗೆ ಸಹಾಯ ಮಾಡೋ ಒಂದೇ ಒಂದು ವಿಧ ಆತನ ವಾಕ್ಯವಾದ ಬೈಬಲನ್ನು ಕಲಿಯೋದೇ ಆಗಿದೆ.

ನಾವೇನು ಮಾಡಬೇಕೆಂದು ದೇವ್ರು ಬಯಸ್ತಾನಂತ ತಿಳುಕೊಳ್ಳುವ ಮತ್ತು ಆತನಿಗೆ ಆಪ್ತರಾಗುವ ಅತ್ಯುತ್ತಮ ವಿಧ ಬೈಬಲನ್ನು ಕಲಿಯೋದೇ ಆಗಿದೆ (ಪ್ಯಾರ 9 ನೋಡಿ) *

9. ಬೈಬಲನ್ನ ನೀವು ಅಮೂಲ್ಯವಾಗಿ ನೋಡ್ತೀರಿ ಅಂತ ಹೇಗೆ ತೋರಿಸಿಕೊಡ್ಬಹುದು?

9 ದೇವ್ರ ವಾಕ್ಯವಾದ ಬೈಬಲನ್ನು ಅಮೂಲ್ಯವೆಂದೆಣಿಸಿ. ಬೈಬಲಿನಲ್ಲಿ ಮಾತ್ರ ಯೆಹೋವನ ಬಗ್ಗೆ, ಆತನು ನಿಮಗೋಸ್ಕರ ಏನು ಮಾಡಲಿದ್ದಾನೆ ಅನ್ನೋದ್ರ ಬಗ್ಗೆ ಸತ್ಯ ಇದೆ. ಬೈಬಲನ್ನ ಪ್ರತಿದಿನ ಓದೋ ಮೂಲಕ, ಯೆಹೋವನ ಸಾಕ್ಷಿಗಳು ಪ್ರತಿವಾರ ಬೈಬಲ್‌ ಕಲಿಸೋಕೆ ಬರುವಾಗ ನೀವದಕ್ಕೆ ತಯಾರಾಗಿರೋ ಮೂಲಕ ಮತ್ತು ಕಲಿತದ್ದನ್ನ ನಿಮ್ಮ ಜೀವನದಲ್ಲಿ ಅನ್ವಯಿಸಿಕೊಳ್ಳೋ ಮೂಲಕ ನೀವು ಬೈಬಲನ್ನ ನಿಜವಾಗಿ ಅಮೂಲ್ಯವಾಗಿ ಎಣಿಸ್ತೀರಿ ಅಂತ ತೋರಿಸಿಕೊಡ್ಬಹುದು. (ಕೀರ್ತ. 119:97, 99; ಯೋಹಾ. 17:17) ನೀವು ವೈಯಕ್ತಿಕವಾಗಿ ಬೈಬಲನ್ನ ಓದೋಕೆ, ಕಲಿಯೋಕೆ ಶೆಡ್ಯೂಲ್‌ ಮಾಡ್ಕೊಂಡಿದ್ದೀರಾ? ಆ ಶೆಡ್ಯೂಲ್‌ ಪ್ರಕಾರ ಪ್ರತಿದಿನ ಬೈಬಲನ್ನ ಓದ್ತಾ ಇದ್ದೀರಾ?

10. ಬೈಬಲಿನ ಒಂದು ವಿಶೇಷತೆ ಏನು?

10 ಬೈಬಲಿನ ಒಂದು ವಿಶೇಷತೆ ಏನಂದ್ರೆ ಇದ್ರಲ್ಲಿ ಯೇಸು ಮಾಡಿರೋ ವಿಷಯಗಳನ್ನ ನೇರವಾಗಿ ನೋಡಿರೋ ವ್ಯಕ್ತಿಗಳೇ ಅದ್ರ ಬಗ್ಗೆ ಬರೆದಿದ್ದಾರೆ. ಯೇಸು ನಿಮಗೋಸ್ಕರ ಏನು ಮಾಡಿದ್ದಾನೆ ಅನ್ನೋದ್ರ ಬಗ್ಗೆ ಸತ್ಯವನ್ನ ತಿಳಿಸೋ ಒಂದೇ ಒಂದು ಪುಸ್ತಕ ಇದಾಗಿದೆ. ಯೇಸು ಹೇಳಿದ, ಮಾಡಿದ ವಿಷಯಗಳ ಬಗ್ಗೆ ನೀವು ಕಲಿಯುತ್ತಾ ಹೋದ ಹಾಗೆ ಆತನ ಜೊತೆ ಸ್ನೇಹ ಬೆಳೆಸ್ಬೇಕು ಅಂತ ನಿಮ್ಗೆ ಅನ್ಸುತ್ತೆ.

11. ಯೆಹೋವನ ಮೇಲೆ ಪ್ರೀತಿ ಬೆಳೆಸ್ಕೊಳ್ಳೋಕೆ ನೀವೇನು ಮಾಡ್ಬಹುದು?

11 ಯೇಸುವಿನ ಮೇಲೆ ಪ್ರೀತಿ ಬೆಳೆಸ್ಕೊಂಡ್ರೆ ನಿಮ್ಗೆ ಯೆಹೋವನ ಮೇಲಿರೋ ಪ್ರೀತಿನೂ ಹೆಚ್ಚಾಗುತ್ತೆ. ಯಾಕೆ? ಯಾಕಂದ್ರೆ ಯೇಸು ತನ್ನ ತಂದೆಯ ಗುಣಗಳನ್ನೇ ತೋರಿಸಿದ್ನು. (ಯೋಹಾ. 14:9) ಹಾಗಾಗಿ ಯೇಸುವಿನ ಬಗ್ಗೆ ಹೆಚ್ಚೆಚ್ಚು ಕಲಿಯುತ್ತಾ ಹೋದ ಹಾಗೆ ಯೆಹೋವನನ್ನ ಇನ್ನೂ ಚೆನ್ನಾಗಿ ಅರ್ಥ ಮಾಡ್ಕೊಳ್ತೇವೆ ಮತ್ತು ಆತನ ಮೇಲಿರೋ ಗೌರವನೂ ಹೆಚ್ಚಾಗುತ್ತೆ. ಜನ್ರು ಕೀಳಾಗಿ ನೋಡ್ತಿದ್ದಂಥ ಕಾಯಿಲೆಬಿದ್ದ, ಮುಗ್ಧ ಬಡ ಜನ್ರಿಗೆ ಯೇಸು ಹೇಗೆಲ್ಲಾ ಪ್ರೀತಿ ತೋರಿಸಿದ್ನು ಅಂತ ಯೋಚ್ಸಿ. ಯೇಸು ನಮ್ಗೆ ಯಾವೆಲ್ಲಾ ಸಲಹೆಗಳನ್ನ ಕೊಟ್ಟಿದ್ದಾನೆ ಮತ್ತು ಅದನ್ನ ನಮ್ಮ ಜೀವನದಲ್ಲಿ ಅನ್ವಯಿಸೋದ್ರಿಂದ ಏನೆಲ್ಲಾ ಪ್ರಯೋಜನ ಆಗುತ್ತೆ ಅಂತ ಯೋಚ್ಸಿ.—ಮತ್ತಾ. 5:1-11; 7:24-27.

12. ಯೇಸುವಿನ ಬಗ್ಗೆ ಕಲ್ತಾಗ ನಿಮ್ಗೆ ಏನು ಮಾಡೋಕೆ ಪ್ರಚೋದನೆ ಸಿಗುತ್ತೆ?

12 ನಿಮ್ಮ ಪಾಪಗಳನ್ನ ತೆಗೆದುಹಾಕಲು ಯೇಸು ಎಷ್ಟು ದೊಡ್ಡ ತ್ಯಾಗ ಮಾಡಿದ್ದಾನೆ ಅಂತ ಯೋಚಿಸುವಾಗ ನಿಮ್ಗೆ ಯೇಸುವಿನ ಮೇಲೆ ಪ್ರೀತಿ ಹೆಚ್ಚಾಗುತ್ತೆ. (ಮತ್ತಾ. 20:28) ಯೇಸು ನಿಮಗೋಸ್ಕರ ಪ್ರಾಣವನ್ನ ಕೊಡೋಕೆ ಹಿಂದೆ ಮುಂದೆ ನೋಡ್ಲಿಲ್ಲ ಅಂತ ಅರ್ಥಮಾಡ್ಕೊಳ್ಳುವಾಗ ನಿಮ್ಗೆ ಪಶ್ಚಾತ್ತಾಪಪಡೋಕೆ ಮತ್ತು ಯೆಹೋವನ ಕ್ಷಮಾಪಣೆ ಪಡೆಯೋಕೆ ಪ್ರಚೋದನೆ ಸಿಗುತ್ತೆ. (ಅ. ಕಾ. 3:19, 20; 1 ಯೋಹಾ. 1:9) ಯೇಸುವಿನ ಮತ್ತು ಯೆಹೋವನ ಮೇಲೆ ಪ್ರೀತಿ ಬೆಳೆಸ್ಕೊಂಡಾಗ ಅವ್ರನ್ನ ಪ್ರೀತಿಸೋ ಜನ್ರ ಜೊತೆ ಇರೋಕೆ ನಿಮಗಿಷ್ಟ ಆಗುತ್ತೆ.

13. ಯೆಹೋವನು ನಿಮ್ಗೆ ಏನನ್ನ ಕೊಟ್ಟಿದ್ದಾನೆ?

13 ಯೆಹೋವನನ್ನ ಪ್ರೀತಿಸುವವರನ್ನ ಪ್ರೀತಿಸಿ. ನೀವು ನಿಮ್ಮನ್ನೇ ಯೆಹೋವನಿಗೆ ಸಮರ್ಪಿಸಿಕೊಳ್ಳೋ ನಿರ್ಣಯ ಯಾಕೆ ಮಾಡಿದ್ದೀರಂತ ಸತ್ಯದಲ್ಲಿಲ್ಲದ ಕುಟುಂಬದವ್ರಿಗೆ ಮತ್ತು ಸ್ನೇಹಿತರಿಗೆ ಅರ್ಥ ಆಗದೇ ಇರಬಹುದು. ಅವ್ರು ನಿಮ್ಮನ್ನ ವಿರೋಧಿಸ್ಬಹುದು. ಆದ್ರೆ ಯೆಹೋವನು ಒಂದೇ ಕುಟುಂಬದಂತಿರೋ ಸಹೋದರ ಸಹೋದರಿಯರನ್ನ ಕೊಡೋ ಮೂಲಕ ನಿಮ್ಗೆ ಸಹಾಯ ಮಾಡ್ತಾನೆ. ಈ ಕುಟುಂಬಕ್ಕೆ ನೀವು ಆಪ್ತರಾಗಿದ್ರೆ ನಿಮ್ಗೆ ಬೇಕಾದ ಪ್ರೀತಿ ಮತ್ತು ಬೆಂಬಲ ಸಿಗುತ್ತೆ. (ಮಾರ್ಕ 10:29, 30; ಇಬ್ರಿ. 10:24, 25) ಕೊನೆಗೊಮ್ಮೆ ನಿಮ್ಮ ಕುಟುಂಬದವ್ರೂ ಯೆಹೋವನನ್ನ ಆರಾಧಿಸ್ತಾ ಆತನಿಗೆ ವಿಧೇಯರಾಗೋ ನಿರ್ಣಯ ಮಾಡ್ಬಹುದು.—1 ಪೇತ್ರ 2:12.

14. ಒಂದನೇ ಯೋಹಾನ 5:3 ರಲ್ಲಿ ಹೇಳಿರೋ ಪ್ರಕಾರ ಯೆಹೋವನ ನಿಯಮಗಳ ಬಗ್ಗೆ ನಿಮ್ಗೆ ಏನು ಗೊತ್ತಾಗಿದೆ?

14 ಯೆಹೋವನ ನಿಯಮಗಳನ್ನ ಗೌರವಿಸಿ ಮತ್ತು ಅನ್ವಯಿಸಿ. ಯೆಹೋವನ ಬಗ್ಗೆ ಕಲಿಯೋ ಮುಂಚೆ ಯಾವುದು ಸರಿ, ಯಾವುದು ತಪ್ಪು ಅನ್ನೋದ್ರ ಬಗ್ಗೆ ನಿಮ್ಗೆ ನಿಮ್ಮದೇ ಆದ ಅಭಿಪ್ರಾಯ ಇದ್ದಿರಬಹುದು. ಆದ್ರೆ ನಂತ್ರ ನಿಮ್ಮ ಅಭಿಪ್ರಾಯಕ್ಕಿಂತ ಯೆಹೋವನ ನಿಯಮಗಳೇ ಉತ್ತಮವಾಗಿದೆ ಅಂತ ನಿಮ್ಗೆ ಗೊತ್ತಾಗಿರಬಹುದು. (ಕೀರ್ತ. 1:1-3; 1 ಯೋಹಾನ 5:3 ಓದಿ.) ಗಂಡಂದಿರಿಗೆ, ಹೆಂಡತಿಯರಿಗೆ, ಹೆತ್ತವರಿಗೆ ಮತ್ತು ಮಕ್ಕಳಿಗೆ ಬೈಬಲ್‌ ಕೊಡೋ ಸಲಹೆ ಬಗ್ಗೆ ಯೋಚ್ಸಿ. (ಎಫೆ. 5:22–6:4) ಈ ಸಲಹೆಗಳನ್ನ ಅನ್ವಯಿಸೋದ್ರಿಂದ ನಿಮ್ಮ ಕುಟುಂಬದಲ್ಲಿ ಹೆಚ್ಚು ಸಂತೋಷ ಸಿಕ್ಕಿದ್ಯಾ? ಸ್ನೇಹಿತರನ್ನ ಆರಿಸ್ಕೊಳ್ಳೋದ್ರ ಬಗ್ಗೆ ಯೆಹೋವನು ಕೊಟ್ಟಿರೋ ಮಾರ್ಗದರ್ಶನಗಳನ್ನ ಪಾಲಿಸಿರೋದ್ರಿಂದ ನೀವು ಇನ್ನೂ ಉತ್ತಮ ವ್ಯಕ್ತಿಯಾಗಿದ್ದೀರಾ? ನಿಮಗೀಗ ಜೀವನದಲ್ಲಿ ಹೆಚ್ಚು ಸಂತೋಷ ಇದ್ಯಾ? (ಜ್ಞಾನೋ. 13:20; 1 ಕೊರಿಂ. 15:33) ಈ ಪ್ರಶ್ನೆಗಳ ಬಗ್ಗೆ ಯೋಚಿಸುವಾಗ ನಿಮ್ಮ ಮನಸ್ಸಲ್ಲಿ ಹೌದು ಅಂತ ಅನಿಸಿರ್ಬಹುದು.

15. ಬೈಬಲ್‌ ತತ್ವಗಳನ್ನ ಅನ್ವಯಿಸಿಕೊಳ್ಳೋಕೆ ನಿಮ್ಗೆ ಸಹಾಯ ಬೇಕಿದ್ದಾಗ ಏನು ಮಾಡ್ಬಹುದು?

15 ಕೆಲವೊಮ್ಮೆ ನೀವು ಕಲ್ತಿರೋ ಬೈಬಲ್‌ ತತ್ವಗಳನ್ನ ನಿಮ್ಮ ಜೀವನದಲ್ಲಿ ಹೇಗೆ ಅನ್ವಯಿಸಿಕೊಳ್ಳೋದು ಅಂತ ಅರ್ಥ ಆಗದೇ ಇರಬಹುದು. ಆದ್ರಿಂದ ಬೈಬಲನ್ನ ಅರ್ಥಮಾಡ್ಕೊಳ್ಳೋಕೆ, ಯಾವ್ದು ಸರಿ ಯಾವ್ದು ತಪ್ಪು ಅಂತ ತಿಳ್ಕೊಳೋಕೆ ಯೆಹೋವನು ತನ್ನ ಸಂಘಟನೆಯ ಮೂಲಕ ಬೈಬಲ್‌ ಬಗ್ಗೆ ವಿವರಿಸೋ ಸಾಹಿತ್ಯಗಳನ್ನ ಕೊಟ್ಟಿದ್ದಾನೆ. (ಇಬ್ರಿ. 5:13, 14) ಅವುಗಳನ್ನ ನೀವು ಓದಿ ಅಧ್ಯಯನ ಮಾಡ್ವಾಗ ನಿಮ್ಮ ಜೀವನದ ಪ್ರತಿಯೊಂದು ಸನ್ನಿವೇಶಗಳಲ್ಲಿ ಆ ತತ್ವಗಳನ್ನ ಹೇಗೆ ಅನ್ವಯಿಸಿಕೊಳ್ಬಹುದು ಮತ್ತು ಅದ್ರಿಂದ ಎಷ್ಟು ಪ್ರಯೋಜನ ಆಗುತ್ತೆ ಅಂತ ನೀವು ತಿಳ್ಕೊಳ್ತೀರಿ. ಆಗ ನಿಮ್ಗೆ ಯೆಹೋವನ ಸಂಘಟನೆಯ ಭಾಗವಾಗ್ಬೇಕು ಅಂತ ಅನಿಸ್ಬಹುದು.

16. ಯೆಹೋವನು ತನ್ನ ಜನ್ರನ್ನ ಹೇಗೆ ಸಂಘಟಿಸಿದ್ದಾನೆ?

16 ಯೆಹೋವನ ಸಂಘಟನೆಯನ್ನ ಪ್ರೀತಿಸಿ ಮತ್ತು ಅದಕ್ಕೆ ಬೆಂಬಲ ಕೊಡಿ. ಯೆಹೋವನು ತನ್ನ ಜನ್ರನ್ನ ಸಭೆಗಳಾಗಿ ಸಂಘಟಿಸಿದ್ದಾನೆ. ಆ ಸಭೆಗಳ ಮೇಲೆ ಆತನು ಯೇಸುವನ್ನು ನೇಮಿಸಿದ್ದಾನೆ. (ಎಫೆ. 1:22; 5:23) ಯೇಸು ಕೊಟ್ಟಿರೋ ಕೆಲಸವನ್ನ ನಾವು ವ್ಯವಸ್ಥಿತವಾಗಿ ಮಾಡಲಿಕ್ಕೋಸ್ಕರ ನಮ್ಮನ್ನ ಮಾರ್ಗದರ್ಶಿಸಲಿಕ್ಕಾಗಿ ಅಭಿಷಿಕ್ತ ಪುರುಷರ ಒಂದು ಚಿಕ್ಕ ಗುಂಪನ್ನು ನೇಮಿಸಿದ್ದಾನೆ. ಈ ಗುಂಪನ್ನು ಯೇಸು “ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳು” ಅಂತ ಕರೆದಿದ್ದಾನೆ. ದೇವರಿಗೆ ಆಪ್ತರಾಗೋಕೆ ನಮಗೆ ಸಹಾಯ ಮಾಡುವುದು ಮತ್ತು ಆತನಿಂದ ದೂರ ಆಗದೇ ಇರುವಂತೆ ನಮ್ಮನ್ನು ಸಂರಕ್ಷಿಸೋದು ಇವರ ಜವಾಬ್ದಾರಿಯಾಗಿದೆ. ಇದನ್ನು ಅವ್ರು ತುಂಬ ಗಂಭೀರವಾಗಿ ತಗೊಳ್ತಾರೆ. (ಮತ್ತಾ. 24:45-47) ಈ ನಂಬಿಗಸ್ತ ಆಳು ನಿಮ್ಮ ಕಾಳಜಿವಹಿಸುವ ಒಂದು ವಿಧ ಯಾವುದಂದ್ರೆ ಸಭೆಯಲ್ಲಿ ಅರ್ಹ ಪುರುಷರನ್ನ ಹಿರಿಯರನ್ನಾಗಿ ನೇಮಿಸೋದೇ ಆಗಿದೆ. ಅವ್ರು ನಿಮ್ಗೆ ಮಾರ್ಗದರ್ಶನ ಮತ್ತು ಸಂರಕ್ಷಣೆ ಕೊಡುತ್ತಾರೆ. (ಯೆಶಾ. 32:1, 2; ಇಬ್ರಿ. 13:17; 1 ಪೇತ್ರ 5:2, 3) ನೀವು ಯೆಹೋವನಿಗೆ ಆಪ್ತರಾಗೋಕೆ ಮತ್ತು ನಿಮ್ಗೆ ಸಾಂತ್ವನ ಕೊಡ್ಲಿಕ್ಕೆ ಈ ಹಿರಿಯರು ತಮ್ಮಿಂದಾಗೋ ಎಲ್ಲವನ್ನೂ ಮಾಡ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ಬೇರೆಯವ್ರಿಗೆ ಯೆಹೋವನ ಬಗ್ಗೆ ಕಲಿಸಲು ನಿಮ್ಗೆ ಬೇಕಾದ ಸಹಾಯ ಕೊಡ್ತಾರೆ.—ಎಫೆ. 4:11-13.

17. ರೋಮನ್ನರಿಗೆ 10:10, 13, 14 ರ ಪ್ರಕಾರ ನಾವು ಬೇರೆಯವರತ್ರ ಯೆಹೋವನ ಬಗ್ಗೆ ಯಾಕೆ ಮಾತಾಡ್ಬೇಕು?

17 ಯೆಹೋವನನ್ನು ಪ್ರೀತಿಸಲು ಜನ್ರಿಗೆ ಕಲಿಸಿ. ಬೇರೆಯವ್ರಿಗೆ ಯೆಹೋವನ ಬಗ್ಗೆ ಕಲಿಸ್ಬೇಕು ಅಂತ ಯೇಸು ತನ್ನ ಶಿಷ್ಯರಿಗೆ ಹೇಳಿದ್ನು. (ಮತ್ತಾ. 28:19, 20) ನಾವು ಈ ಆಜ್ಞೆಯನ್ನ ಪಾಲಿಸಲೇಬೇಕು ಅನ್ನೋ ಕರ್ತವ್ಯದಿಂದ ಇದನ್ನ ಮಾಡ್ಬಹುದು. ಆದ್ರೆ ಯೆಹೋವನ ಮೇಲೆ ನಮಗಿರೋ ಪ್ರೀತಿ ಹೆಚ್ಚಾಗ್ತಾ ಹೋದಂತೆ ಅಪೊಸ್ತಲ ಪೇತ್ರ ಮತ್ತು ಯೋಹಾನರಿಗೆ ಅನಿಸಿದಂತೆ ನಮ್ಗೂ ಅನಿಸ್ಬಹುದು. “ನಾವಾದರೋ ಕಂಡು ಕೇಳಿದ ವಿಷಯಗಳ ಕುರಿತು ಮಾತಾಡದೆ ಇರಲಾರೆವು” ಅಂತ ಅವ್ರು ಹೇಳಿದ್ರು. (ಅ. ಕಾ. 4:20) ಯೆಹೋವನನ್ನು ಪ್ರೀತಿಸಲು ಒಬ್ರಿಗೆ ಸಹಾಯ ಮಾಡುವಾಗ ಸಿಗೋ ಸಂತೋಷಕ್ಕಿಂತ ಹೆಚ್ಚಿನ ಸಂತೋಷ ಬೇರೆ ಯಾವುದ್ರಲ್ಲೂ ಸಿಗಲ್ಲ. ದೇವ್ರ ವಾಕ್ಯದಲ್ಲಿರೋ ಸತ್ಯವನ್ನ ತಿಳಿದುಕೊಳ್ಳಲು ಮತ್ತು ದೀಕ್ಷಾಸ್ನಾನ ಪಡಕೊಳ್ಳಲು ಇಥಿಯೋಪ್ಯದ ಅಧಿಕಾರಿಗೆ ಸಹಾಯ ಮಾಡ್ದಾಗ ಫಿಲಿಪ್ಪನಿಗೆ ಎಷ್ಟು ಸಂತೋಷ ಆಗಿರಬಹುದಲ್ಲಾ! ನೀವು ಫಿಲಿಪ್ಪನಂತೆ, ‘ಸಾರಬೇಕು’ ಅನ್ನೋ ಯೇಸುವಿನ ಆಜ್ಞೆಯನ್ನ ಪಾಲಿಸ್ವಾಗ ಯೆಹೋವನ ಸಾಕ್ಷಿಯಾಗಲು ಬಯಸ್ತೀರಿ ಅಂತ ತೋರಿಸಿಕೊಡ್ತೀರಿ. (ರೋಮನ್ನರಿಗೆ 10:10, 13, 14 ಓದಿ.) ಆಗ ನೀವು ಸಹ ಇಥಿಯೋಪ್ಯದವನು ಕೇಳಿದ ಈ ಪ್ರಶ್ನೆಯನ್ನೇ ಕೇಳಬಹುದು “ದೀಕ್ಷಾಸ್ನಾನ ಪಡೆದುಕೊಳ್ಳಲು ನನಗೆ ಅಡ್ಡಿ ಏನು?”—ಅ. ಕಾ. 8:36.

18. ಮುಂದಿನ ಲೇಖನದಲ್ಲಿ ನಾವೇನನ್ನ ತಿಳ್ಕೊಳ್ಳಲಿದ್ದೇವೆ?

18 ದೀಕ್ಷಾಸ್ನಾನ ತಗೊಳ್ಳುವ ನಿರ್ಣಯ ಜೀವನದಲ್ಲೇ ಮಾಡೋ ಅತೀ ದೊಡ್ಡ ನಿರ್ಣಯವಾಗಿದೆ. ಇದು ಅಷ್ಟೊಂದು ಪ್ರಾಮುಖ್ಯ ಆಗಿರೋದ್ರಿಂದ ದೀಕ್ಷಾಸ್ನಾನದ ಅರ್ಥ ಏನಂತ ನೀವು ತಿಳ್ಕೊಂಡಿರಬೇಕು. ದೀಕ್ಷಾಸ್ನಾನದ ಬಗ್ಗೆ ನೀವು ಏನೆಲ್ಲಾ ತಿಳ್ಕೊಂಡಿರಬೇಕು? ದೀಕ್ಷಾಸ್ನಾನದ ಮುಂಚೆ ಮತ್ತು ನಂತ್ರ ನೀವೇನೆಲ್ಲಾ ಮಾಡ್ಬೇಕು? ಈ ಪ್ರಶ್ನೆಗಳ ಬಗ್ಗೆ ಮುಂದಿನ ಲೇಖನದಲ್ಲಿ ತಿಳ್ಕೊಳ್ಳಲಿದ್ದೇವೆ.

ಗೀತೆ 138 ಯೆಹೋವ ನಿನ್ನ ನಾಮ

^ ಪ್ಯಾರ. 5 ಕೆಲವ್ರಿಗೆ ಯೆಹೋವನ ಮೇಲೆ ಪ್ರೀತಿ ಇದ್ರೂ ದೀಕ್ಷಾಸ್ನಾನ ತಗೊಂಡು ಯೆಹೋವನ ಸಾಕ್ಷಿಯಾಗೋಕೆ ನಿಜವಾಗಿಯೂ ಸಿದ್ಧರಿದ್ದೇವಾ ಅನ್ನೋ ಗೊಂದಲ ಇರುತ್ತೆ. ನಿಮಗೂ ಈ ರೀತಿ ಗೊಂದಲ ಇದ್ಯಾ? ಹಾಗಾದ್ರೆ ದೀಕ್ಷಾಸ್ನಾನ ಪಡ್ಕೊಳ್ಳೋಕೆ ಯಾವೆಲ್ಲಾ ವಿಷಯಗಳು ಸಹಾಯ ಮಾಡುತ್ತೆ ಅಂತ ಈ ಲೇಖನದಲ್ಲಿ ತಿಳ್ಕೊಳ್ಳಬಹುದು.

^ ಪ್ಯಾರ. 5 ಈ ಲೇಖನದಲ್ಲಿ ಕೊಡಲಾದ ಸಲಹೆಗಳನ್ನ ಎಲ್ರೂ ಇಲ್ಲಿ ಕೊಡಲಾದ ಕ್ರಮದಲ್ಲೇ ಅನ್ವಯಿಸಬೇಕಾಗಿಲ್ಲ, ಯಾಕಂದ್ರೆ ಎಲ್ರೂ ಒಂದೇ ತರ ಇರಲ್ಲ.

^ ಪ್ಯಾರ. 6 ಹೆಚ್ಚಿನ ಉದಾಹರಣೆಗಳಿಗಾಗಿ ಜೀವವು ಸೃಷ್ಟಿಸಲ್ಪಟ್ಟಿತೋ? ಮತ್ತು ಜೀವದ ಉಗಮ ಪರಿಗಣಿಸಬೇಕಾದ ಐದು ಪ್ರಶ್ನೆಗಳು (ಇಂಗ್ಲಿಷ್‌) ಎಂಬ ಕಿರುಹೊತ್ತಗೆ ನೋಡಿ.

^ ಪ್ಯಾರ. 61 ಚಿತ್ರ ವಿವರಣೆ: ಒಬ್ಬ ಸಹೋದರಿ ಅಂಗಡಿಯಲ್ಲಿರುವ ಯುವತಿಗೆ ಕರಪತ್ರ ಕೊಟ್ಟಿದ್ದಾಳೆ.