ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯುವ ಜನರೇ, ದೀಕ್ಷಾಸ್ನಾನ ಪಡೆಯಲು ತಯಾರಾಗಿದ್ದೀರಾ?

ಯುವ ಜನರೇ, ದೀಕ್ಷಾಸ್ನಾನ ಪಡೆಯಲು ತಯಾರಾಗಿದ್ದೀರಾ?

“ನಿಮ್ಮಲ್ಲಿ ಯಾವನಾದರೂ ಒಂದು ಬುರುಜನ್ನು ಕಟ್ಟಲು ಬಯಸುವುದಾದರೆ, ಮೊದಲು ಕುಳಿತುಕೊಂಡು ಅದನ್ನು ಕಟ್ಟಿಮುಗಿಸಲು ಸಾಕಾಗುವಷ್ಟು ಹಣ ತನ್ನಲ್ಲಿದೆಯೋ ಎಂದು ಲೆಕ್ಕಮಾಡುವುದಿಲ್ಲವೆ?”—ಲೂಕ 14:28.

ಗೀತೆಗಳು: 120, 64

ಈ ಲೇಖನ ಮತ್ತು ಮುಂದಿನ ಲೇಖನವು, ದೀಕ್ಷಾಸ್ನಾನ ಪಡೆಯಲು ಬಯಸುವ ಯುವ ಜನರಿಗಾಗಿದೆ

1, 2. (ಎ) ಇಂದು ನಾವು ಯಾವ ಕಾರಣಕ್ಕಾಗಿ ಸಂತೋಷಿಸುತ್ತೇವೆ? (ಬಿ) ದೀಕ್ಷಾಸ್ನಾನ ಪಡೆಯುವುದರ ಅರ್ಥವೇನೆಂದು ತಿಳಿದುಕೊಳ್ಳಲು ಹೆತ್ತವರು ಮತ್ತು ಹಿರಿಯರು ಯುವ ಜನರಿಗೆ ಹೇಗೆ ಸಹಾಯಮಾಡಬಹುದು?

 “ನೀನು ಪುಟ್ಟ ಮಗು ಆಗಿದ್ದಾಗಿಂದ ನೋಡ್ತಿದ್ದೇನೆ. ಈಗ ದೀಕ್ಷಾಸ್ನಾನಕ್ಕೆ ತಯಾರಿರುವುದನ್ನು ನೋಡಿ ತುಂಬ ಸಂತೋಷ ಆಗ್ತಿದೆ. ಆದರೆ ನಿನಗೊಂದು ಪ್ರಶ್ನೆ, ‘ಯಾಕೆ ದೀಕ್ಷಾಸ್ನಾನ ಪಡೆಯಬೇಕೆಂದಿದ್ದೀ?’” ಎಂದು ಹಿರಿಯರೊಬ್ಬರು 12 ವರ್ಷದ ಕ್ರಿಸ್ಟಫರ್‌ಗೆ ಕೇಳಿದರು. ಆ ಹಿರಿಯರು ಕೇಳಿದ ಪ್ರಶ್ನೆ ಸೂಕ್ತವಾಗಿತ್ತು. ಪ್ರತಿ ವರ್ಷ ಸಾವಿರಾರು ಯುವ ಜನರು ದೀಕ್ಷಾಸ್ನಾನ ಪಡೆಯುತ್ತಾರೆ. ಅದು ಸಂತೋಷದ ವಿಷಯ! (ಪ್ರಸಂ. 12:1) ಆದರೆ ಯುವ ಜನರು ದೀಕ್ಷಾಸ್ನಾನ ತಕ್ಕೊಳ್ಳಲು ತಾವಾಗಿಯೇ ನಿರ್ಣಯ ಮಾಡಿದ್ದಾರಾ? ದೀಕ್ಷಾಸ್ನಾನ ಪಡೆಯುವುದರ ಅರ್ಥವೇನೆಂದು ಅವರಿಗೆ ಗೊತ್ತಿದೆಯಾ? ಇದನ್ನು ಸಭಾ ಹಿರಿಯರು ಮತ್ತು ಕ್ರೈಸ್ತ ಹೆತ್ತವರು ಖಚಿತಪಡಿಸಿಕೊಳ್ಳಬೇಕು.

2 ಒಬ್ಬ ಕ್ರೈಸ್ತನಿಗೆ ಸಮರ್ಪಣೆ ಮತ್ತು ದೀಕ್ಷಾಸ್ನಾನವು ಒಂದು ಹೊಸ ಜೀವನದ ಆರಂಭ. ಈ ಹೊಸ ಜೀವನದಲ್ಲಿ ಯೆಹೋವನಿಂದ ಅನೇಕ ಆಶೀರ್ವಾದಗಳು ಸಿಗುತ್ತವೆ, ಅದೇ ಸಮಯದಲ್ಲಿ ಸೈತಾನನಿಂದ ವಿರೋಧವೂ ಬರುತ್ತದೆಂದು ಬೈಬಲ್‌ ಹೇಳುತ್ತದೆ. (ಜ್ಞಾನೋ. 10:22; 1 ಪೇತ್ರ 5:8) ಈ ಕಾರಣಕ್ಕಾಗಿಯೇ, ಯೇಸುವಿನ ಶಿಷ್ಯರಾಗುವವರಿಗೆ ಏನೆಲ್ಲ ಜವಾಬ್ದಾರಿಗಳಿವೆ ಎಂದು ಮಕ್ಕಳಿಗೆ ಕಲಿಸಲು ಕ್ರೈಸ್ತ ಹೆತ್ತವರು ಸಮಯ ಮಾಡಿಕೊಳ್ಳಬೇಕು. ಹೆತ್ತವರು ಸತ್ಯದಲ್ಲಿ ಇಲ್ಲದಿದ್ದರೆ ಇದನ್ನು ಸಭಾ ಹಿರಿಯರು ಪ್ರೀತಿಯಿಂದ ತಿಳಿಸಬೇಕು. (ಲೂಕ 14:27-30 ಓದಿ.) ಒಂದು ಕಟ್ಟಡವನ್ನು ಪೂರ್ತಿಯಾಗಿ ಕಟ್ಟಿಮುಗಿಸಲು ತಯಾರಿ ಬೇಕು. ಹಾಗೆಯೇ ಯುವ ಜನರು “ಕಡೇ ವರೆಗೆ” ಯೆಹೋವನಿಗೆ ನಂಬಿಗಸ್ತರಾಗಿರಲು ತಮ್ಮ ದೀಕ್ಷಾಸ್ನಾನಕ್ಕೆ ಮುಂಚೆಯೇ ತಯಾರಿ ಮಾಡಬೇಕು. (ಮತ್ತಾ. 24:13) ಸದಾ ಯೆಹೋವನ ಸೇವೆಮಾಡುವ ದೃಢಮನಸ್ಸು ಇರಲಿಕ್ಕಾಗಿ ಯುವ ಜನರು ಏನು ಮಾಡಬೇಕು? ನೋಡೋಣ.

3. (ಎ) ದೀಕ್ಷಾಸ್ನಾನ ತುಂಬ ಮುಖ್ಯವೆಂದು ಯೇಸು ಮತ್ತು ಪೇತ್ರನ ಮಾತುಗಳು ಹೇಗೆ ತೋರಿಸುತ್ತವೆ? (ಮತ್ತಾ. 28:19, 20; 1 ಪೇತ್ರ 3:21) (ಬಿ) ಯಾವ ಪ್ರಶ್ನೆಗಳನ್ನು ಚರ್ಚಿಸಲಿದ್ದೇವೆ? ಯಾಕೆ?

3 ದೀಕ್ಷಾಸ್ನಾನ ಪಡೆಯಲು ಇಷ್ಟಪಡುವ ಯುವ ವ್ಯಕ್ತಿ ನೀವಾಗಿದ್ದೀರಾ? ಹಾಗಿದ್ದರೆ ಅದು ತುಂಬ ಒಳ್ಳೇ ಗುರಿ! ದೀಕ್ಷಾಸ್ನಾನ ಪಡೆದು ಯೆಹೋವನ ಸಾಕ್ಷಿಯಾಗುವುದು ನಿಜಕ್ಕೂ ದೊಡ್ಡ ಸುಯೋಗ. ಕ್ರಿಸ್ತನ ಶಿಷ್ಯರಾಗುವ ಎಲ್ಲರೂ ದೀಕ್ಷಾಸ್ನಾನ ಪಡೆಯಲೇಬೇಕು. ಮಹಾ ಸಂಕಟದಿಂದ ಪಾರಾಗಬೇಕಾದರೆ ಇದೊಂದು ಮುಖ್ಯವಾದ ಹೆಜ್ಜೆ. (ಮತ್ತಾ. 28:19, 20; 1 ಪೇತ್ರ 3:21) ನೀವು ದೀಕ್ಷಾಸ್ನಾನ ಪಡೆಯುವಾಗ, ಸದಾ ಯೆಹೋವನ ಸೇವೆಮಾಡಲು ಈಗಾಗಲೇ ಮಾತುಕೊಟ್ಟಿದ್ದೀರೆಂದು ತೋರಿಸುತ್ತೀರಿ. ಆ ಮಾತು ಉಳಿಸಿಕೊಳ್ಳಲು ನೀವು ಬಯಸುತ್ತೀರಿ ತಾನೇ? ಹಾಗಾದರೆ ನೀವು ದೀಕ್ಷಾಸ್ನಾನ ಪಡೆಯಲು ತಯಾರಾಗಿದ್ದೀರಾ ಎಂದು ತಿಳಿಯಲು ಈ ಮುಂದಿನ ಪ್ರಶ್ನೆಗಳು ನೆರವಾಗುತ್ತವೆ: (1) ಈ ನಿರ್ಣಯ ಮಾಡುವಷ್ಟು ಪ್ರೌಢತೆ ನನ್ನಲ್ಲಿದೆಯಾ? (2) ದೀಕ್ಷಾಸ್ನಾನ ಪಡೆಯುವುದು ನನ್ನ ಸ್ವಂತ ನಿರ್ಣಯನಾ? (3) ಯೆಹೋವನಿಗೆ ಸಮರ್ಪಣೆ ಮಾಡುವುದೆಂದರೆ ನಿಜವಾಗಿಯೂ ಏನು ಅರ್ಥವೆಂದು ನನಗೆ ಗೊತ್ತಾ? ಈ ಪ್ರಶ್ನೆಗಳ ಬಗ್ಗೆ ಈಗ ಚರ್ಚಿಸೋಣ.

ಪ್ರೌಢತೆ

4, 5. (ಎ) ದೊಡ್ಡವರು ಮಾತ್ರ ದೀಕ್ಷಾಸ್ನಾನ ಪಡೆಯಬೇಕು ಎಂದೇನಿಲ್ಲ ಯಾಕೆ? (ಬಿ) ಕ್ರೈಸ್ತನೊಬ್ಬನು ಪ್ರೌಢನಾಗಿರುವುದರ ಅರ್ಥವೇನು?

4 ದೀಕ್ಷಾಸ್ನಾನ ಪಡೆಯಲು ಇಂತಿಷ್ಟೆ ವಯಸ್ಸಾಗಬೇಕು, ದೊಡ್ಡವರಾಗಿರಲೇಬೇಕು ಎಂಬ ನಿಯಮ ಬೈಬಲಿನಲ್ಲಿಲ್ಲ. ‘ಒಬ್ಬ ಹುಡುಗನು ಶುದ್ಧವೂ ಸತ್ಯವೂ ಆದ ನಡತೆಯಿಂದಲೇ ತನ್ನ ಗುಣವನ್ನು ತೋರ್ಪಡಿಸಿಕೊಳ್ಳುವನು’ ಎಂದು ಜ್ಞಾನೋಕ್ತಿ 20:11 ಹೇಳುತ್ತದೆ. ಈ ವಚನಕ್ಕನುಸಾರ, ಒಬ್ಬ ಚಿಕ್ಕ ಹುಡುಗನು ಸಹ ಯಾವುದು ಸರಿಯೋ ಅದನ್ನು ಮಾಡುವುದು ಹೇಗೆಂದು, ದೇವರಿಗೆ ಸಮರ್ಪಿಸಿಕೊಳ್ಳುವುದು ಅಂದರೇನೆಂದು ಅರ್ಥಮಾಡಿಕೊಳ್ಳಬಲ್ಲನು. ಹಾಗಾಗಿ, ಪ್ರೌಢರಾಗಿರುವ ಮತ್ತು ಯೆಹೋವನಿಗೆ ಸಮರ್ಪಣೆ ಮಾಡಿಕೊಂಡಿರುವ ಹುಡುಗ ಅಥವಾ ಹುಡುಗಿ ದೀಕ್ಷಾಸ್ನಾನ ಪಡೆದುಕೊಳ್ಳುವುದು ಸರಿಯಾಗಿದೆ, ಮುಖ್ಯವೂ ಆಗಿದೆ.—ಜ್ಞಾನೋ. 20:7.

5 ಈಗ ಪ್ರಶ್ನೆ, ಪ್ರೌಢತೆ ಅಂದರೇನು? ಒಬ್ಬನಿಗೆ ವಯಸ್ಸಾಗಿದೆ ಅಥವಾ ದೇಹ ಬೆಳವಣಿಗೆ ಚೆನ್ನಾಗಿದೆ ಎಂದಮಾತ್ರಕ್ಕೆ ಅವನು ಪ್ರೌಢ ವ್ಯಕ್ತಿಯೆಂದು ಹೇಳಲಾಗುವುದಿಲ್ಲ. ಸರಿ ತಪ್ಪಿನ ಮಧ್ಯೆ ಇರುವ ವ್ಯತ್ಯಾಸವನ್ನು ತಿಳಿಯಲು “ಗ್ರಹಣ ಶಕ್ತಿಗಳನ್ನು” ಅಥವಾ ಸಾಮರ್ಥ್ಯಗಳನ್ನು ತರಬೇತುಗೊಳಿಸಿರುವ ವ್ಯಕ್ತಿಯೇ ಪ್ರೌಢನು ಎಂದು ಬೈಬಲ್‌ ಹೇಳುತ್ತದೆ. (ಇಬ್ರಿ. 5:14) ಯಾವುದು ಸರಿ ಅಂತ ಅವನಿಗೆ ಚೆನ್ನಾಗಿ ಗೊತ್ತಿರುತ್ತದೆ. ಅದನ್ನೇ ಮಾಡಲು ತನ್ನ ಹೃದಯದಲ್ಲಿ ದೃಢನಿರ್ಧಾರ ಮಾಡಿರುತ್ತಾನೆ. ಹಾಗಾಗಿ ತಪ್ಪು ಮಾಡುವಂತೆ ಯಾರೂ ಅವನನ್ನು ಒಪ್ಪಿಸಲು ಆಗುವುದಿಲ್ಲ. ಅಷ್ಟೇ ಅಲ್ಲ, ಸರಿಯಾದದ್ದನ್ನು ಮಾಡಲು ಯಾರಾದರೊಬ್ಬರು ಯಾವಾಗಲೂ ಅವನ ಹಿಂದೆ ಇರಬೇಕಾಗಿಲ್ಲ. ಹೆತ್ತವರು ಅಥವಾ ಬೇರೆಯವರು ತನ್ನ ಸುತ್ತಲೂ ಇಲ್ಲದಿದ್ದರೂ ಅವನು ಸರಿಯಾದದ್ದನ್ನೇ ಮಾಡುತ್ತಾನೆ. ಇಂಥ ವ್ಯಕ್ತಿ ವಯಸ್ಸಿನಲ್ಲಿ ಚಿಕ್ಕವನಿದ್ದರೂ ದೀಕ್ಷಾಸ್ನಾನಕ್ಕೆ ಅರ್ಹನು.—ಫಿಲಿಪ್ಪಿ 2:12 ಹೋಲಿಸಿ.

6, 7. (ಎ) ಬಾಬೆಲಿನಲ್ಲಿ ದಾನಿಯೇಲನಿಗೆ ಎದುರಾದ ಸವಾಲುಗಳನ್ನು ವಿವರಿಸಿ. (ಬಿ) ದಾನಿಯೇಲನು ಪ್ರೌಢನೆಂದು ಹೇಗೆ ಗೊತ್ತಾಗುತ್ತದೆ?

6 ಒಬ್ಬ ಯುವ ವ್ಯಕ್ತಿ ಆ ರೀತಿಯ ಪ್ರೌಢತೆ ತೋರಿಸಲು ಸಾಧ್ಯವಾ? ದಾನಿಯೇಲನ ಉದಾಹರಣೆ ಗಮನಿಸಿ. ಬಹುಶಃ ಅವನ ಹದಿಪ್ರಾಯದಲ್ಲಿ ಥಟ್ಟನೆ ಅವನ ಸನ್ನಿವೇಶ ಬದಲಾಯಿತು. ಬಾಬೆಲಿನ ಸೈನ್ಯ ಅವನನ್ನು ಹೆತ್ತವರಿಂದ ಅಗಲಿಸಿ ಬಾಬೆಲಿಗೆ ಸೆರೆಯಾಳಾಗಿ ಒಯ್ಯಿತು. ದೇವರ ಆಜ್ಞೆಗಳನ್ನು ಪಾಲಿಸದ ಜನರ ಮಧ್ಯೆ ಅವನು ಜೀವಿಸಬೇಕಾಯಿತು. ಅವನ ಸನ್ನಿವೇಶವನ್ನು ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿ. ಬಾಬೆಲಿನಲ್ಲಿ ಅವನನ್ನು ಒಬ್ಬ ಗಣ್ಯ ವ್ಯಕ್ತಿಯಾಗಿ ಉಪಚರಿಸಲಾಯಿತು. ರಾಜನ ಸೇವೆಮಾಡಲು ಜಾಗ್ರತೆಯಿಂದ ಆಯ್ಕೆಮಾಡಲಾಗಿದ್ದ ಕೆಲವೇ ಯುವಕರಲ್ಲಿ ದಾನಿಯೇಲ ಒಬ್ಬನಾಗಿದ್ದ. (ದಾನಿ. 1:3-5, 13) ಬಾಬೆಲಿನಲ್ಲಿ ಅವನಿಗೆ ಸಿಕ್ಕಿದ ಪ್ರತಿಷ್ಠಿತ ಸ್ಥಾನಮಾನ ಇಸ್ರಾಯೇಲಿನಲ್ಲಿ ಎಂದೂ ಸಿಗುತ್ತಿರಲಿಲ್ಲವೇನೊ.

7 ಇದಕ್ಕೆಲ್ಲ ಯುವ ದಾನಿಯೇಲನ ಪ್ರತಿಕ್ರಿಯೆ ಏನಾಗಿತ್ತು? ಬಾಬೆಲಿನ ಜನರಿಂದಾಗಿ, ಅಲ್ಲಿನ ಐಶ್ವರ್ಯ ವೈಭವದಿಂದಾಗಿ ಅವನು ಬದಲಾದನಾ? ನಂಬಿಕೆ ಕಳೆದುಕೊಂಡನಾ? ಇಲ್ಲವೇ ಇಲ್ಲ. ದಾನಿಯೇಲನು ಬಾಬೆಲಿನಲ್ಲಿ ಸುಳ್ಳು ಆರಾಧನೆಗೆ ಸಂಬಂಧಿಸಿದ ಯಾವುದೇ ವಿಷಯದಿಂದ “ತನ್ನನ್ನು ಅಶುದ್ಧಪಡಿಸಿಕೊಳ್ಳುವುದಿಲ್ಲವೆಂದು ತನ್ನ ಹೃದಯದಲ್ಲಿ” ದೃಢನಿರ್ಧಾರ ಮಾಡಿದನು ಎಂದು ಬೈಬಲ್‌ ಹೇಳುತ್ತದೆ. (ದಾನಿ. 1:8, ಪವಿತ್ರ ಗ್ರಂಥ ಭಾಷಾಂತರ) ಇದೇ ನಿಜವಾದ ಪ್ರೌಢತೆ!

ಒಬ್ಬ ಪ್ರೌಢ ಯುವ ವ್ಯಕ್ತಿಯು ಸಭೆಯಲ್ಲಿ ಯೆಹೋವನ ಸ್ನೇಹಿತನಂತೆ, ಶಾಲಾಕಾಲೇಜಿನಲ್ಲಿ ಲೋಕದ ಸ್ನೇಹಿತನಂತೆ ನಡೆದುಕೊಳ್ಳುವುದಿಲ್ಲ (ಪ್ಯಾರ 8 ನೋಡಿ)

8. ದಾನಿಯೇಲನ ಮಾದರಿಯಿಂದ ಯಾವ ಪಾಠ ಕಲಿಯುತ್ತೀರಿ?

8 ಯುವ ಜನರೇ, ದಾನಿಯೇಲನ ಮಾದರಿಯಿಂದ ಯಾವ ಪಾಠ ಕಲಿಯುತ್ತೀರಿ? ಒಬ್ಬ ಪ್ರೌಢ ಯುವ ವ್ಯಕ್ತಿಗೆ ತನ್ನ ನಂಬಿಕೆಗಳು ಸತ್ಯವಾಗಿವೆ ಎಂಬ ದೃಢನಿಶ್ಚಯ ಇರುತ್ತದೆ. ಕಷ್ಟದ ಸನ್ನಿವೇಶಗಳಲ್ಲೂ ಅವುಗಳ ಪರವಾಗಿ ನಿಲ್ಲುತ್ತಾನೆ. ಅವನು ಊಸರವಳ್ಳಿಯ ಹಾಗೆ ಪರಿಸ್ಥಿತಿಗೆ ತಕ್ಕಂತೆ ಬಣ್ಣ ಬದಲಾಯಿಸುವುದಿಲ್ಲ. ಸಭೆಯಲ್ಲಿ ಯೆಹೋವನ ಸ್ನೇಹಿತನಂತೆ, ಶಾಲಾಕಾಲೇಜಿನಲ್ಲಿ ಲೋಕದ ಸ್ನೇಹಿತನಂತೆ ನಡೆದುಕೊಳ್ಳುವುದಿಲ್ಲ. ನಂಬಿಕೆಯ ಪರೀಕ್ಷೆಗಳು ಬಂದರೂ ಅವನು ಅಲುಗಾಡುವುದಿಲ್ಲ.ಎಫೆಸ 4:14, 15 ಓದಿ.

9, 10. (ಎ) ಇತ್ತೀಚಿಗೆ ಬಂದ ನಂಬಿಕೆಯ ಪರೀಕ್ಷೆಗೆ ನೀವು ತೋರಿಸಿದ ಪ್ರತಿಕ್ರಿಯೆ ಕುರಿತು ಏಕೆ ಯೋಚಿಸಬೇಕು? (ಬಿ) ದೀಕ್ಷಾಸ್ನಾನ ಏನನ್ನು ತೋರಿಸಿಕೊಡುತ್ತದೆ?

9 ಇದರರ್ಥ ಪ್ರೌಢ ಯುವ ಜನರಾಗಲಿ ದೊಡ್ಡವರಾಗಲಿ ತಪ್ಪೇ ಮಾಡುವುದಿಲ್ಲ ಎಂದಲ್ಲ. ಏಕೆಂದರೆ ಎಲ್ಲರೂ ಅಪರಿಪೂರ್ಣರು. (ಪ್ರಸಂ. 7:20) ಆದರೆ ನೀವು ದೀಕ್ಷಾಸ್ನಾನ ಪಡೆಯಬೇಕೆಂದಿರುವಲ್ಲಿ ಯೆಹೋವನ ಆಜ್ಞೆಗಳಿಗೆ ವಿಧೇಯರಾಗಲು ನಿಮಗೆಷ್ಟು ದೃಢಮನಸ್ಸಿದೆಯೆಂದು ಪರೀಕ್ಷಿಸುವುದು ಒಳ್ಳೇದು. ‘ಸಾಕಷ್ಟು ಸಮಯದಿಂದ ನಾನು ಯೆಹೋವನ ಮಾತನ್ನು ಪಾಲಿಸುತ್ತಾ ಬಂದಿದ್ದೇನಾ?’ ಎಂದು ಕೇಳಿಕೊಳ್ಳಿ. ಕಳೆದ ಬಾರಿ ನಿಮಗೆ ನಂಬಿಕೆಯ ಪರೀಕ್ಷೆ ಎದುರಾದಾಗ ಏನು ಮಾಡಿದಿರಿ ಎಂದು ಯೋಚಿಸಿ. ಸರಿ ಯಾವುದೆಂದು ನಿರ್ಣಯಿಸಿ ಅದನ್ನೇ ಮಾಡಿದ್ದಿರಾ? ದಾನಿಯೇಲನಿಗೆ ಆದಂತೆ ನಿಮ್ಮ ಪ್ರತಿಭೆಗಳನ್ನು ಸೈತಾನನ ಲೋಕದಲ್ಲಿ ಬಳಸಲು ಯಾರಾದರೂ ನಿಮ್ಮನ್ನು ಪ್ರೋತ್ಸಾಹಿಸಿದ್ದಾರಾ? ಇಂಥ ಪ್ರಲೋಭನೆ ನಿಮಗಾದರೆ ಯೆಹೋವನ ಚಿತ್ತ ಏನೆಂದು ಅರ್ಥಮಾಡಿಕೊಂಡು ಅದನ್ನೇ ಮಾಡುತ್ತೀರಾ?—ಎಫೆ. 5:17.

10 ಈ ವೈಯಕ್ತಿಕ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳುವುದು ಯಾಕೆ ಪ್ರಾಮುಖ್ಯ? ಯಾಕೆಂದರೆ ದೀಕ್ಷಾಸ್ನಾನ ಎಷ್ಟು ಗಂಭೀರ ಎಂದು ಅರ್ಥಮಾಡಿಕೊಳ್ಳಲು ಅವು ನಿಮಗೆ ಸಹಾಯಮಾಡುತ್ತವೆ. ದೀಕ್ಷಾಸ್ನಾನವು ಯೆಹೋವನಿಗೆ ನೀವು ಪ್ರಾಮುಖ್ಯವಾದ ಮಾತು ಕೊಟ್ಟಿದ್ದೀರೆಂದು ತೋರಿಸಿಕೊಡುತ್ತದೆ. ಆ ಮಾತೇನೆಂದರೆ ನೀವು ಆತನನ್ನು ಎಂದೆಂದಿಗೂ ಪ್ರೀತಿಸುವಿರಿ ಮತ್ತು ಆತನ ಸೇವೆಯನ್ನು ಮನಃಪೂರ್ವಕವಾಗಿ ಮಾಡುವಿರಿ ಎಂದೇ. (ಮಾರ್ಕ 12:30) ದೀಕ್ಷಾಸ್ನಾನ ಪಡೆಯುವ ಪ್ರತಿಯೊಬ್ಬನಿಗೆ ತಾನು ಯೆಹೋವನಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುವ ದೃಢಮನಸ್ಸು ಇರಬೇಕು.ಪ್ರಸಂಗಿ 5:4, 5 ಓದಿ.

ಸ್ವಂತ ನಿರ್ಣಯ

11, 12. (ಎ) ದೀಕ್ಷಾಸ್ನಾನ ಪಡೆಯಬೇಕೆನ್ನುವುದು ಯಾರ ನಿರ್ಣಯ ಆಗಿರಬೇಕು? (ಬಿ) ದೀಕ್ಷಾಸ್ನಾನದ ಬಗ್ಗೆ ಯೆಹೋವನಿಗಿರುವ ನೋಟವೇ ನಿಮಗೂ ಇರುವಂತೆ ಏನು ಮಾಡಬೇಕು?

11 ಯೆಹೋವನ ಸೇವಕರೆಲ್ಲರೂ, ಯುವ ಜನರು ಸಹ “ತಾವಾಗಿಯೇ” ಸಂತೋಷದಿಂದ ಆತನ ಸೇವೆಮಾಡುವರೆಂದು ಬೈಬಲ್‌ ಹೇಳುತ್ತದೆ. (ಕೀರ್ತ. 110:3) ಇದರಿಂದ ಏನು ಗೊತ್ತಾಗುತ್ತದೆ? ದೀಕ್ಷಾಸ್ನಾನ ಪಡೆಯುವುದು ಒಬ್ಬನ ಸ್ವಂತ ನಿರ್ಣಯ ಆಗಿರಬೇಕು. ಹಾಗಾಗಿ ದೀಕ್ಷಾಸ್ನಾನವಾಗುವ ನಿಮ್ಮ ಬಯಕೆಯ ಬಗ್ಗೆ ನೀವೇ ಸೂಕ್ಷ್ಮವಾಗಿ ಪರೀಕ್ಷಿಸಿಕೊಳ್ಳಬೇಕು. ಸತ್ಯದಲ್ಲಿರುವ ಕುಟುಂಬದಲ್ಲಿ ಬೆಳೆದು ಬಂದಿದ್ದರಂತೂ ಇದನ್ನು ವಿಶೇಷವಾಗಿ ಮಾಡಲೇಬೇಕು.

12 ನಿಮ್ಮ ಸ್ನೇಹಿತರು, ಒಡಹುಟ್ಟಿದವರು, ಇತರರು ದೀಕ್ಷಾಸ್ನಾನ ಪಡೆಯುವುದನ್ನು ನೀವು ಚಿಕ್ಕಂದಿನಿಂದ ನೋಡಿರಬಹುದು. ಆದರೆ ಎಚ್ಚರವಹಿಸಿ. ‘ಎಲ್ಲರೂ ದೀಕ್ಷಾಸ್ನಾನ ಪಡೆಯುತ್ತಿದ್ದಾರೆ ನಾನೂ ಪಡೆಯಬೇಕು’ ಅಥವಾ ‘ಬೇರೆ ಯುವ ಜನರಿಗೆಲ್ಲ ನನ್ನ ವಯಸ್ಸಲ್ಲಿ ದೀಕ್ಷಾಸ್ನಾನ ಆಗಿದೆ ನನಗೂ ಆಗಲೇಬೇಕು’ ಎಂಬ ಒಂದೇ ಕಾರಣಕ್ಕಾಗಿ ದೀಕ್ಷಾಸ್ನಾನ ಪಡೆಯಬೇಡಿ. ಹಾಗಾದರೆ ದೀಕ್ಷಾಸ್ನಾನದ ಬಗ್ಗೆ ಯೆಹೋವನಿಗಿರುವ ನೋಟವೇ ನಿಮಗೂ ಇರುವಂತೆ ಏನು ಮಾಡಬೇಕು? ದೀಕ್ಷಾಸ್ನಾನ ಪಡೆಯುವುದು ಯಾಕೆ ತುಂಬ ಮುಖ್ಯ ಎಂದು ಸಮಯ ತೆಗೆದುಕೊಂಡು ಯೋಚಿಸಿ. ಇದಕ್ಕೆ ಸೂಕ್ತ ಕಾರಣಗಳು ಈ ಲೇಖನ ಮತ್ತು ಮುಂದಿನ ಲೇಖನದಲ್ಲಿವೆ.

13. ದೀಕ್ಷಾಸ್ನಾನ ಪಡೆಯಲು ನೀವು ಮಾಡಿದ ನಿರ್ಣಯ ನಿಮ್ಮ ಹೃದಯದಿಂದ ಬಂದಿದೆಯಾ ಎಂದು ಹೇಗೆ ತಿಳಿಯಬಹುದು?

13 ದೀಕ್ಷಾಸ್ನಾನ ಪಡೆಯಬೇಕೆಂಬ ನಿರ್ಣಯ ನಿಮ್ಮ ಹೃದಯದಿಂದ ಬಂದಿದೆಯಾ ಎಂದು ತಿಳಿಯಲು ಒಂದು ವಿಧಾನವಿದೆ. ಅದೇನು? ನಿಮ್ಮ ಪ್ರಾರ್ಥನೆಯನ್ನು ಪರೀಕ್ಷಿಸಿಕೊಳ್ಳುವುದೇ. ನೀವು ದಿನಕ್ಕೆ ಎಷ್ಟು ಸಲ ಪ್ರಾರ್ಥಿಸುತ್ತೀರಿ? ಪ್ರಾರ್ಥನೆಯಲ್ಲಿ ವಿಷಯಗಳನ್ನು ನಿರ್ದಿಷ್ಟವಾಗಿ ಹೇಳುತ್ತೀರಾ? ಈ ಪ್ರಶ್ನೆಗಳಿಗೆ ಉತ್ತರಗಳು ಯೆಹೋವನೊಂದಿಗೆ ನಿಮಗೆಷ್ಟು ಹತ್ತಿರದ ಸಂಬಂಧ ಇದೆಯೆಂದು ತೋರಿಸುತ್ತವೆ. (ಕೀರ್ತ. 25:4) ನಮ್ಮ ಪ್ರಾರ್ಥನೆಗಳಿಗೆ ಅನೇಕ ಸಲ ಯೆಹೋವನು ಬೈಬಲ್‌ ಮುಖಾಂತರ ಉತ್ತರ ಕೊಡುತ್ತಾನೆ. ಆದುದರಿಂದ ಬೈಬಲನ್ನು ಅಧ್ಯಯನ ಮಾಡುವ ನಿಮ್ಮ ರೂಢಿಯನ್ನು ಪರೀಕ್ಷಿಸಿ. ಇದು ಯೆಹೋವನಿಗೆ ಹತ್ತಿರವಾಗಲು ಮತ್ತು ಆತನ ಸೇವೆಮಾಡಲು ನಿಮಗೆಷ್ಟು ಮನಸ್ಸಿದೆಯೆಂದು ತಿಳಿಯುವ ಇನ್ನೊಂದು ವಿಧಾನ. (ಯೆಹೋ. 1:8) ಹೀಗೆ ಕೇಳಿಕೊಳ್ಳಿ: ‘ವೈಯಕ್ತಿಕ ಬೈಬಲ್‌ ಅಧ್ಯಯನವನ್ನು ತಪ್ಪದೇ ಮಾಡುತ್ತಿದ್ದೇನಾ? ಕುಟುಂಬ ಆರಾಧನೆಯಲ್ಲಿ ಖುಷಿ ಖುಷಿಯಾಗಿ ಭಾಗವಹಿಸುತ್ತೇನಾ?’ ಈ ಪ್ರಶ್ನೆಗಳಿಗೆ ಉತ್ತರ ಗೊತ್ತಾದರೆ ದೀಕ್ಷಾಸ್ನಾನ ಪಡೆಯಲು ನೀವೇ ಸ್ವಂತ ನಿರ್ಣಯ ಮಾಡಿದ್ದೀರಾ ಎಂದೂ ಗೊತ್ತಾಗುತ್ತದೆ.

ಸಮರ್ಪಣೆಯ ಅರ್ಥ

14. ದೀಕ್ಷಾಸ್ನಾನ ಮತ್ತು ಸಮರ್ಪಣೆಯ ಮಧ್ಯೆ ಇರುವ ವ್ಯತ್ಯಾಸ ತಿಳಿಸಿ.

14 ಕೆಲವು ಯುವ ಜನರಿಗೆ ಸಮರ್ಪಣೆ ಮತ್ತು ದೀಕ್ಷಾಸ್ನಾನದ ಮಧ್ಯೆ ಇರುವ ವ್ಯತ್ಯಾಸ ಗೊತ್ತಿರಲಿಕ್ಕಿಲ್ಲ. ಕೆಲವರು ಹೀಗೆ ಹೇಳುತ್ತಾರೆ: ‘ನಾನು ಸಮರ್ಪಣೆ ಮಾಡಿದ್ದೇನೆ, ಆದರೆ ದೀಕ್ಷಾಸ್ನಾನ ತಕ್ಕೊಳ್ಳಲು ಈಗ ಆಗಲ್ಲ.’ ಈ ತರ ಇರಲು ಸಾಧ್ಯನಾ? ಸಮರ್ಪಣೆ ಮಾಡುವಾಗ ‘ನಿನ್ನ ಚಿತ್ತವನ್ನು ಎಂದೆಂದಿಗೂ ಮಾಡುತ್ತೇನೆ’ ಎಂದು ಯೆಹೋವನಿಗೆ ಮಾತುಕೊಡುತ್ತೀರಿ. ಆದರೆ ದೀಕ್ಷಾಸ್ನಾನ ಪಡೆಯುವಾಗ ನೀವು ಯೆಹೋವನಿಗೆ ಈಗಾಗಲೇ ಸಮರ್ಪಣೆ ಮಾಡಿದ್ದೀರೆಂದು ಎಲ್ಲರಿಗೆ ತೋರಿಸಿಕೊಡುತ್ತೀರಿ. ಹಾಗಾಗಿ ದೀಕ್ಷಾಸ್ನಾನ ಪಡೆಯುವ ಮುಂಚೆ ನಿಮಗೆ ದೇವರಿಗೆ ಸಮರ್ಪಣೆ ಮಾಡುವುದರ ಅರ್ಥವೇನೆಂದು ಗೊತ್ತಿರಬೇಕು.

15. ಸಮರ್ಪಣೆಯ ಅರ್ಥವೇನು?

15 ನಿಮ್ಮನ್ನು ಯೆಹೋವನಿಗೆ ಸಮರ್ಪಣೆ ಮಾಡುವುದರ ಅರ್ಥ, ‘ಇನ್ನು ಮುಂದೆ ನಾನು ನಿನ್ನ ಸ್ವತ್ತು’ ಎಂದು ಆತನಿಗೆ ಹೇಳುವುದಾಗಿದೆ. ನಿಮ್ಮ ಜೀವನದಲ್ಲಿ ಎಲ್ಲಕ್ಕಿಂತ ಪ್ರಾಮುಖ್ಯ ಆತನ ಸೇವೆಯೇ ಎಂದು ಮಾತುಕೊಡುವುದಾಗಿದೆ. (ಮತ್ತಾಯ 16:24 ಓದಿ.) ಯೆಹೋವನಿಗೆ ಕೊಟ್ಟ ಈ ಮಾತು ತುಂಬ ಗಂಭೀರ! (ಮತ್ತಾ. 5:33) ಇನ್ನು ಮುಂದೆ ನೀವು ಯೆಹೋವನ ಸ್ವತ್ತಾಗಿದ್ದೀರಿ, ನಿಮ್ಮ ಸ್ವಂತ ಸ್ವತ್ತಲ್ಲ ಎಂದು ಹೇಗೆ ತೋರಿಸಿಕೊಡುತ್ತೀರಿ?—ರೋಮ. 14:8.

16, 17. (ಎ) ಒಬ್ಬನು ತನ್ನನ್ನು ನಿರಾಕರಿಸಿಕೊಳ್ಳುವುದರ ಅರ್ಥವೇನೆಂದು ಉದಾಹರಣೆ ಮೂಲಕ ತಿಳಿಸಿ. (ಬಿ) ಸಮರ್ಪಣೆ ಮಾಡುತ್ತಿರುವ ವ್ಯಕ್ತಿ ನಿಜವಾಗಿಯೂ ಏನು ಹೇಳುತ್ತಿದ್ದಾನೆ?

16 ಇದನ್ನು ಅರ್ಥಮಾಡಿಕೊಳ್ಳಲು ಒಂದು ಉದಾಹರಣೆ ಗಮನಿಸಿ. ನಿಮ್ಮ ಸ್ನೇಹಿತ ನಿಮಗೆ ಒಂದು ಕಾರನ್ನು ಗಿಫ್ಟಾಗಿ ಕೊಡುತ್ತಾನೆ ಎಂದು ನೆನಸಿ. ಕಾರಿನ ಎಲ್ಲ ಹಕ್ಕುಪತ್ರಗಳನ್ನು ನಿಮಗೆ ಕೊಟ್ಟು, “ಈ ಕಾರು ನಿನಗೆ” ಎಂದು ಹೇಳುತ್ತಾನೆ. ಆದರೆ ಅವನು, “ಚಾವಿ ನಿನಗೆ ಕೊಡಲ್ಲ. ಕಾರು ನೀನು ಓಡಿಸಬೇಡ, ನಾನೇ ಓಡಿಸ್ತೇನೆ” ಎಂದು ಹೇಳುತ್ತಾನೆ. ಅಂಥ ಗಿಫ್ಟ್‌ ನಿಮಗೆ ಇಷ್ಟವಾಗುತ್ತದಾ? ಅದನ್ನು ಕೊಟ್ಟ ಸ್ನೇಹಿತನ ಬಗ್ಗೆ ಹೇಗನಿಸುತ್ತದೆ?

17 ಒಬ್ಬನು ಸಮರ್ಪಣೆ ಮಾಡಿಕೊಳ್ಳುವಾಗ ಅವನು ಯೆಹೋವನಿಗೆ, “ನಾನು ನನ್ನ ಬದುಕನ್ನು ನಿನ್ನ ಕೈಗೆ ಕೊಡುತ್ತಿದ್ದೇನೆ. ಇನ್ನು ಮುಂದೆ ನಾನು ನಿನ್ನ ಸ್ವತ್ತು” ಎಂದು ಹೇಳುತ್ತಾನೆ. ಆ ವ್ಯಕ್ತಿ ತಾನಾಗಿಯೇ ಮಾತು ಕೊಟ್ಟ ಮೇಲೆ ಅದನ್ನು ಉಳಿಸಿಕೊಳ್ಳುವನೆಂದು ಯೆಹೋವನು ನಿರೀಕ್ಷಿಸುವುದು ನ್ಯಾಯ. ಆದರೆ ಆ ವ್ಯಕ್ತಿ ಯೆಹೋವನನ್ನು ಆರಾಧಿಸದ ಒಬ್ಬರೊಂದಿಗೆ ಗುಟ್ಟಾಗಿ ಪ್ರೀತಿಪ್ರೇಮ ಅಂತ ಶುರುಮಾಡಿ ಯೆಹೋವನಿಗೆ ಅವಿಧೇಯನಾದರೆ ಆಗೇನು? ಅಥವಾ ಸೇವೆ, ಕೂಟಗಳನ್ನು ಆಗಾಗ ತಪ್ಪಿಸುವಂತೆ ಮಾಡುವ ಕೆಲಸಕ್ಕೆ ಸೇರಿದರೆ? ಆಗ ಆ ವ್ಯಕ್ತಿ ತಾನು ಯೆಹೋವನಿಗೆ ಕೊಟ್ಟ ಮಾತಿಗೆ ತಕ್ಕಂತೆ ನಡೆಯುತ್ತಿಲ್ಲ. ಇದು ಒಂದು ರೀತಿ ನಿಮ್ಮ ಸ್ನೇಹಿತನಿಗೆ, “ಕಾರು ನಿನಗೆ ಕೊಡ್ತೇನೆ, ಆದರೆ ಚಾವಿ ಕೊಡಲ್ಲ” ಎಂದು ಹೇಳಿದಂತಿದೆ. ನಾವು ಸಮರ್ಪಣೆ ಮಾಡಿಕೊಂಡಾಗ ಯೆಹೋವನಿಗೆ, “ನನ್ನ ಬದುಕು ನಿನ್ನ ಸ್ವತ್ತು, ನನ್ನದಲ್ಲ” ಎಂದು ಹೇಳುತ್ತೇವೆ. ಹಾಗಾಗಿ ಒಂದುವೇಳೆ ನಮ್ಮ ಇಷ್ಟ ಬೇರೆಯಾಗಿದ್ದರೂ ಯೆಹೋವನ ಇಷ್ಟವನ್ನೇ ಯಾವಾಗಲೂ ಮಾಡುತ್ತೇವೆ. ಈ ವಿಷಯದಲ್ಲಿ ಯೇಸುವನ್ನು ಅನುಕರಿಸೋಣ. ಆತನಂದದ್ದು: “ನಾನು ನನ್ನ ಚಿತ್ತವನ್ನು ಮಾಡಲಿಕ್ಕಾಗಿ ಅಲ್ಲ, ನನ್ನನ್ನು ಕಳುಹಿಸಿದಾತನ ಚಿತ್ತವನ್ನು ಮಾಡಲಿಕ್ಕಾಗಿಯೇ ಸ್ವರ್ಗದಿಂದ ಇಳಿದುಬಂದಿದ್ದೇನೆ.”—ಯೋಹಾ. 6:38.

18, 19. (ಎ) ದೀಕ್ಷಾಸ್ನಾನವು ಆಶೀರ್ವಾದಗಳನ್ನು ತರುತ್ತದೆಂದು ರೋಸ್‌ ಮತ್ತು ಕ್ರಿಸ್ಟಫರ್‌ನ ಮಾತುಗಳು ಹೇಗೆ ತೋರಿಸುತ್ತವೆ? (ಬಿ) ದೀಕ್ಷಾಸ್ನಾನದ ಸುಯೋಗದ ಬಗ್ಗೆ ನಿಮಗೆ ಹೇಗನಿಸುತ್ತದೆ?

18 ದೀಕ್ಷಾಸ್ನಾನ ಒಂದು ಗಂಭೀರ ನಿರ್ಣಯವಾಗಿದೆ ಎಂಬುದು ಸ್ಪಷ್ಟ. ಯೆಹೋವನಿಗೆ ಸಮರ್ಪಿಸಿಕೊಂಡು ದೀಕ್ಷಾಸ್ನಾನ ಪಡೆಯುವುದು ನಿಜವಾಗಿ ಒಂದು ಸೌಭಾಗ್ಯ. ಯೆಹೋವನನ್ನು ಪ್ರೀತಿಸುವ ಹಾಗೂ ಸಮರ್ಪಣೆಯ ಅರ್ಥವೇನೆಂದು ತಿಳಿದಿರುವ ಯುವ ಜನರು ಸಮರ್ಪಣೆ ಮಾಡಿಕೊಂಡು, ದೀಕ್ಷಾಸ್ನಾನ ಪಡೆಯಲು ಹಿಂಜರಿಯುವುದಿಲ್ಲ. ತಾವು ಮಾಡಿದ ನಿರ್ಣಯಕ್ಕಾಗಿ ಯಾವತ್ತೂ ವಿಷಾದಪಡುವುದಿಲ್ಲ. ದೀಕ್ಷಾಸ್ನಾನ ಪಡೆದ ಹದಿವಯಸ್ಸಿನ ರೋಸ್‌ ಹೀಗೆ ಹೇಳುತ್ತಾಳೆ: “ನಾನು ಯೆಹೋವನನ್ನು ಪ್ರೀತಿಸ್ತೇನೆ. ಆತನ ಸೇವೆ ಮಾಡುವುದರಲ್ಲಿ ಸಿಗುವಷ್ಟು ಸಂತೋಷ ನನಗೆ ಬೇರಾವುದರಲ್ಲೂ ಸಿಗಲು ಸಾಧ್ಯವಿಲ್ಲ. ದೀಕ್ಷಾಸ್ನಾನ ತಕ್ಕೊಳ್ಳುವ ನನ್ನ ನಿರ್ಣಯದ ಬಗ್ಗೆ ನನಗೆ ಯಾವುದೇ ಸಂಶಯಗಳಿರಲಿಲ್ಲ. ನನ್ನ ಜೀವನದಲ್ಲಿ ಮಾಡಿದ ಬೇರಾವುದೇ ವಿಷಯದ ಬಗ್ಗೆ ನನಗಿಷ್ಟೊಂದು ದೃಢಭರವಸೆ ಇರಲಿಲ್ಲ.”

19 ನಾವು ಲೇಖನದ ಆರಂಭದಲ್ಲಿ ಹೇಳಿದ ಕ್ರಿಸ್ಟಫರ್‌ ಮುಂದೆ ಏನು ಮಾಡಿದ? 12 ವಯಸ್ಸಿನಲ್ಲಿ ದೀಕ್ಷಾಸ್ನಾನ ಪಡೆದ. ಆ ನಿರ್ಣಯಕ್ಕಾಗಿ ಅವನು ಸಂತೋಷಪಡುತ್ತಾನೆ. 17 ವಯಸ್ಸಿನಲ್ಲಿ ಪಯನೀಯರ್‌ ಸೇವೆ ಆರಂಭಿಸಿದ, 18 ವಯಸ್ಸಿಗೆ ಸಹಾಯಕ ಸೇವಕನಾದ. ಇಂದು ಬೆತೆಲಿನಲ್ಲಿ ಸೇವೆ ಮಾಡುತ್ತಿದ್ದಾನೆ. ಅವನು ಹೇಳುವುದು: “ದೀಕ್ಷಾಸ್ನಾನ ಪಡೆಯಲು ನಾನು ಮಾಡಿದ ನಿರ್ಣಯ ಸರಿಯಾಗಿತ್ತು. ಯೆಹೋವನಿಗಾಗಿ, ಆತನ ಸಂಘಟನೆಗಾಗಿ ಕೆಲಸ ಮಾಡುವುದು ನನಗೆ ತೃಪ್ತಿ ಕೊಡುತ್ತಿದೆ.” ನೀವೂ ದೀಕ್ಷಾಸ್ನಾನ ಪಡೆಯಲು ಮನಸ್ಸು ಮಾಡುವಲ್ಲಿ ಅದಕ್ಕೆ ಹೇಗೆ ತಯಾರಿ ಮಾಡಬಹುದು? ಉತ್ತರ ಮುಂದಿನ ಲೇಖನದಲ್ಲಿದೆ.