ವಾಚಕರಿಂದ ಪ್ರಶ್ನೆಗಳು
ಭವಿಷ್ಯದ ಬಗ್ಗೆ ಹೇಳೋ ಯೆಹೋವನ ಸಾಮರ್ಥ್ಯದ ಬಗ್ಗೆ ಬೈಬಲ್ ಏನು ಹೇಳುತ್ತೆ?
ಯೆಹೋವನಿಗೆ ಭವಿಷ್ಯದಲ್ಲಿ ಏನಾಗುತ್ತೆ ಅಂತ ಹೇಳೋ ಸಾಮರ್ಥ್ಯ ಇದೆ ಅಂತ ಬೈಬಲ್ ಸ್ಪಷ್ಟವಾಗಿ ತಿಳಿಸುತ್ತೆ. (ಯೆಶಾ. 45:21) ಆದ್ರೆ, ಆತನು ಹೇಗೆ ಭವಿಷ್ಯದ ಬಗ್ಗೆ ಹೇಳ್ತಾನೆ? ಯಾವಾಗ ಹೇಳ್ತಾನೆ? ಎಷ್ಟು ತಿಳ್ಕೊಳ್ತಾನೆ? ಅಂತ ಬೈಬಲಲ್ಲಿ ವಿವರವಾಗಿ ಹೇಳಿಲ್ಲ. ಹಾಗಾಗಿ ಆತನಿಗಿರೋ ಆ ಸಾಮರ್ಥ್ಯದ ಬಗ್ಗೆ ನಮಗ್ಯಾರಿಗೂ ಪೂರ್ತಿಯಾಗಿ ಅರ್ಥಮಾಡ್ಕೊಳ್ಳೋಕೆ ಆಗಲ್ಲ. ಆದ್ರೆ ಕೆಲವೊಂದು ವಿಷ್ಯಗಳನ್ನ ಅರ್ಥಮಾಡ್ಕೊಳ್ಳೋಕೆ ಆಗುತ್ತೆ. ಅದು ಯಾವುದು ಅಂತ ನಾವೀಗ ನೋಡೋಣ.
ಯೆಹೋವನಿಗೆ ಎಲ್ಲನೂ ಮಾಡೋ ಸಾಮರ್ಥ್ಯ ಇದೆ. ಆದ್ರೂ ಕೆಲವೊಂದು ವಿಷ್ಯಗಳನ್ನ ಬೇಕಂತಾನೇ ಮಾಡಲ್ಲ. ಯೆಹೋವ ದೇವರಿಗೆ ತುಂಬ ವಿವೇಕ ಇದೆ. ಹಾಗಾಗಿ ಭವಿಷ್ಯದಲ್ಲಿ ಏನಾಗುತ್ತೆ ಅಂತ ಆತನಿಗೆ ಚೆನ್ನಾಗಿ ಹೇಳೋಕೆ ಆಗುತ್ತೆ. (ರೋಮ. 11:33) ಆದ್ರೆ ಆತನಿಗೆ ಸ್ವನಿಯಂತ್ರಣ ಇರೋದ್ರಿಂದ ಭವಿಷ್ಯದಲ್ಲಿ ಆಗೋ ಎಲ್ಲ ವಿಷ್ಯಗಳನ್ನ ತಿಳ್ಕೊಳೋಕೆ ಬಯಸಲ್ಲ.—ಯೆಶಾಯ 42:14 ಹೋಲಿಸಿ.
ಯೆಹೋವ ತಾನು ಅಂದ್ಕೊಂಡಿದ್ದನ್ನ ನೆರವೇರೋ ಹಾಗೆ ನೋಡ್ಕೊಳ್ತಾನೆ. ಆತನಿಗೆ ಈ ಸಾಮರ್ಥ್ಯ ಇದೆ ಅಂತ ನಮಗೆ ಹೇಗೆ ಗೊತ್ತು? ಯೆಹೋವ ಯೆಶಾಯ 46:10ರಲ್ಲಿ ಹೀಗೆ ಹೇಳಿದ್ದಾನೆ.“ಮುಂದೆ ಏನಾಗುತ್ತೆ ಅಂತ ನಾನು ತುಂಬ ಮುಂಚೆನೇ ಹೇಳ್ತೀನಿ. ಇನ್ನೂ ನಡೆಯದ ವಿಷ್ಯಗಳನ್ನ ನಾನು ತುಂಬ ಹಿಂದೆನೇ ಹೇಳಿದ್ದೆ. ‘ನನ್ನ ನಿರ್ಣಯ ತಪ್ಪದೆ ನೆರವೇರುತ್ತೆ, ನಾನು ಬಯಸಿದ್ದನ್ನೆಲ್ಲ ಖಂಡಿತ ನೆರವೇರಿಸ್ತೀನಿ.’”
ಯೆಹೋವ ದೇವರಿಗೆ ತಾನು ಅಂದ್ಕೊಂಡಿದ್ದು ನಡಿಯೋ ಹಾಗೆ ಮಾಡೋ ಶಕ್ತಿ ಇದೆ. ಹಾಗಾಗಿ ಮುಂದೆ ಏನಾಗುತ್ತೆ ಅಂತ ಆತನಿಗೆ ಹೇಳೋಕೆ ಆಗುತ್ತೆ. ಉದಾಹರಣೆಗೆ, ಒಂದು ಸಿನಿಮಾದ ಕ್ಲೈಮ್ಯಾಕ್ಸ್ ಏನು ಅಂತ ತಿಳ್ಕೊಳ್ಳೋಕೆ ನಾವು ಮುಂದೆ ಓಡಿಸಿ (ಫಾರ್ವರ್ಡ್ ಮಾಡಿ) ನೋಡ್ತೀವಿ. ಆದ್ರೆ ಯೆಹೋವ ದೇವರು ಭವಿಷ್ಯದಲ್ಲಿ ಏನಾಗುತ್ತೆ ಅಂತ ತಿಳ್ಕೊಳ್ಳೋಕೆ ಆ ತರ ಮಾಡಬೇಕಾಗಿಲ್ಲ. ಬದ್ಲಿಗೆ ಒಂದು ಸಮಯದಲ್ಲಿ ಒಂದು ವಿಷ್ಯ ನಡಿಬೇಕು ಅಂತ ಆತನು ತೀರ್ಮಾನ ಮಾಡಿದ್ರೆ ಅದು ಆ ಸಮಯದಲ್ಲಿ ನಡಿಯೋ ಹಾಗೆ ನೋಡ್ಕೊತಾನೆ.—ವಿಮೋ. 9:5, 6; ಮತ್ತಾ. 24:36; ಅ. ಕಾ. 17:31.
ಅದಕ್ಕೇ ಭವಿಷ್ಯದಲ್ಲಿ ತಾನು ಮಾಡೋ ವಿಷ್ಯಗಳ ಬಗ್ಗೆ ಹೇಳುವಾಗ ಯೆಹೋವ “ತಯಾರಿ ಮಾಡಿದ್ದೆ,” “ರಚಿಸಿದ್ದೆ,” ಮತ್ತು “ಉದ್ದೇಶಿಸಿದ್ದೀನಿ” ಅನ್ನೋ ಪದಗಳನ್ನ ಬಳಸಿದ್ದಾನೆ. (2 ಅರ. 19:25 ಮತ್ತು ಪಾದಟಿಪ್ಪಣಿ; ಯೆಶಾ. 46:11) ಈ ಮೂರು ಪದಗಳು ಮೂಲ ಭಾಷೆಯ ಒಂದು ಪದದಿಂದ ಭಾಷಾಂತರ ಆಗಿದೆ. ಆ ಪದ “ಕುಂಬಾರ” ಅನ್ನೋ ಪದಕ್ಕೆ ಸಂಬಂಧಪಟ್ಟಿದೆ. (ಯೆರೆ. 18:3, 4) ಒಬ್ಬ ಕುಂಬಾರ ಮಣ್ಣಿನ ಪಾತ್ರೆ ಮಾಡೋಕೆ ಆ ಮಣ್ಣಿಗೆ ತನಗೆ ಇಷ್ಟ ಬಂದ ಆಕಾರ ಕೊಡ್ತಾನೆ. ಅದೇ ತರ ಯೆಹೋವ ದೇವರು ತನ್ನ ಉದ್ದೇಶ ನೆರವೇರಿಸೋಕೆ ಎಲ್ಲ ವಿಷ್ಯಗಳು ತನ್ನ ಇಷ್ಟದ ಪ್ರಕಾರ ನಡಿಯೋ ಹಾಗೆ ನೋಡ್ಕೊತಾನೆ.—ಎಫೆ. 1:11.
ಯೆಹೋವ ದೇವರು ಜನ್ರಿಗೆ ತಮಗೇನು ಬೇಕೋ ಅದನ್ನ ಆಯ್ಕೆ ಮಾಡೋ ಸ್ವಾತಂತ್ರ್ಯ ಕೊಟ್ಟಿದ್ದಾನೆ. ಆತನು ಪ್ರತಿಯೊಬ್ರ ಹಣೆಯಲ್ಲಿ ಅವ್ರಿಗೆ ಒಳ್ಳೇದಾಗಬೇಕು ಅಥವಾ ಕೆಟ್ಟದಾಗಬೇಕು ಅಂತ ಮುಂಚೆನೇ ಬರೆದಿಡಲ್ಲ. ಅವರು ಯಾವ ದಾರಿಯಲ್ಲಿ ಹೋಗಬೇಕು ಅಂತ ಆಯ್ಕೆ ಮಾಡೋಕೆ ಅವ್ರಿಗೇ ಬಿಟ್ಟಿದ್ದಾನೆ. ಆದ್ರೆ ಒಳ್ಳೇ ದಾರಿ ಆಯ್ಕೆ ಮಾಡಿದ್ರೆ ಚೆನ್ನಾಗಿರುತ್ತೆ ಅಂತ ಹೇಳ್ತಿದ್ದಾನೆ.
ಇದನ್ನ ಅರ್ಥಮಾಡ್ಕೊಳ್ಳೋಕೆ ಎರಡು ಉದಾಹರಣೆ ನೋಡಿ. ಮೊದಲನೇದು ನಿನೆವೆ ಜನ್ರದ್ದು. ಅವರು ತುಂಬ ಕೆಟ್ಟ ಕೆಲಸಗಳನ್ನ ಮಾಡಿದಾಗ ಅವ್ರನ್ನ ನಾಶ ಮಾಡ್ತೀನಿ ಅಂತ ಯೆಹೋವ ಹೇಳಿದನು. ಆದ್ರೆ ಅವರು ಪಶ್ಚಾತ್ತಾಪಪಟ್ಟಾಗ, ಯೆಹೋವ “ತನ್ನ ತೀರ್ಮಾನ ಬದಲಾಯಿಸಿದನು, ಅವ್ರ ಮೇಲೆ ತರ್ತಿನಿ ಅಂತ ಹೇಳಿದ ಕಷ್ಟವನ್ನ ತರಲಿಲ್ಲ.” (ಯೋನ 3:1-10) ಯಾಕಂದ್ರೆ ನಿನೆವೆ ಜನ್ರು ಯೆಹೋವನಿಗೆ ಇಷ್ಟ ಆಗೋದನ್ನ ಮಾಡೋಕೆ ಆಯ್ಕೆ ಮಾಡಿದ್ರು. ಹಾಗಾಗಿ ಆತನು ತನ್ನ ಮನಸ್ಸನ್ನ ಬದಲಾಯಿಸ್ಕೊಂಡನು.
ಎರಡನೇ ಉದಾಹರಣೆ ಕೋರೆಷಂದು. ಇವನು ಇಸ್ರಾಯೇಲ್ಯರನ್ನ ಬಾಬೆಲಿಂದ ಬಿಡಿಸಿದ ಮತ್ತು ಯೆಹೋವನ ಆಲಯವನ್ನ ಮತ್ತೆ ಕಟ್ಟೋಕೆ ಆಜ್ಞೆ ಕೊಟ್ಟ. (ಯೆಶಾ. 44:26–45:4) ಹೀಗೆ ಒಬ್ಬ ಪರ್ಶಿಯದ ರಾಜ ಯೆಹೋವನ ಉದ್ದೇಶವನ್ನ ನೆರವೇರಿಸಿದ. (ಎಜ್ರ 1:1-4) ಆದ್ರೆ ಇವನು ಯೆಹೋವನ ಆರಾಧಕನಾಗಿರಲಿಲ್ಲ. ಯೆಹೋವ ತನ್ನ ಉದ್ದೇಶವನ್ನ ನೆರವೇರಿಸೋಕೆ ಕೋರೆಷನನ್ನ ಬಳಸಿದ್ರೂ ಅವನು ತನ್ನನ್ನೇ ಆರಾಧಿಸಬೇಕು ಅಂತ ಒತ್ತಾಯ ಮಾಡ್ಲಿಲ್ಲ. ಬದ್ಲಿಗೆ ಅವನ ದೇವರನ್ನ ಆರಾಧಿಸೋಕೆ ಅವನಿಗೆ ಬಿಟ್ಟುಕೊಟ್ಟನು.—ಜ್ಞಾನೋ. 21:1.
ಯೆಹೋವ ದೇವರು ಭವಿಷ್ಯದಲ್ಲಿ ಆಗೋ ಘಟನೆಗಳನ್ನ ಹೇಳೋ ಮುಂಚೆ ಯಾವೆಲ್ಲ ವಿಷ್ಯಗಳನ್ನ ಮನಸ್ಸಲ್ಲಿ ಇಡ್ತಾನೆ ಅಂತ ಈ ಲೇಖನದಲ್ಲಿ ಕಲಿತ್ವಿ. ಇವು ಕೆಲವು ಅಂಶಗಳಷ್ಟೇ, ಆದ್ರೆ ಇನ್ನೂ ತುಂಬ ವಿಷ್ಯಗಳಿವೆ. ಅದನ್ನೆಲ್ಲ ನಮಗೆ ಪೂರ್ತಿಯಾಗಿ ಅರ್ಥಮಾಡ್ಕೊಳ್ಳೋಕೆ ಆಗಲ್ಲ. (ಯೆಶಾ. 55:8, 9) ಹಾಗಿದ್ರೂ ಆತನಿಗಿರೋ ಸಾಮರ್ಥ್ಯಗಳನ್ನ ತಿಳ್ಕೊಳ್ಳೋದ್ರಿಂದ ಆತನು ಮಾಡೋದೆಲ್ಲ ಸರಿಯಾಗೇ ಇರುತ್ತೆ ಅನ್ನೋ ನಂಬಿಕೆ ಜಾಸ್ತಿ ಆಗುತ್ತೆ. ಅಷ್ಟೇ ಅಲ್ಲ ಆತನು ಭವಿಷ್ಯದ ಬಗ್ಗೆ ಹೇಳುವಾಗ್ಲೂ ಅದು ಸರಿಯಾಗೇ ಇರುತ್ತೆ ಅನ್ನೋ ಭರವಸೆನೂ ಬರುತ್ತೆ.