ಅಧ್ಯಯನ ಲೇಖನ 6
ಬೈಬಲ್, ಅದನ್ನ ಬರೆಸಿದ ದೇವರ ಬಗ್ಗೆ ಏನು ಹೇಳುತ್ತೆ?
“ನಾನು ನಿನಗೆ ಹೇಳೋ ಮಾತುಗಳನ್ನೆಲ್ಲ ಒಂದು ಪುಸ್ತಕದಲ್ಲಿ ಬರಿ.”—ಯೆರೆ. 30:2.
ಗೀತೆ 114 ದೇವರ ಸ್ವಂತ ಗ್ರಂಥ—ಒಂದು ನಿಧಿ
ಈ ಲೇಖನದಲ್ಲಿ ಏನಿದೆ? a
1. ಬೈಬಲನ್ನ ಕೊಟ್ಟಿರೋದಕ್ಕೆ ಯೆಹೋವನಿಗೆ ನಾವು ಯಾಕೆ ಥ್ಯಾಂಕ್ಸ್ ಹೇಳ್ಬೇಕು?
ಯೆಹೋವ ನಮಗೆ ಬೈಬಲನ್ನ ಕೊಟ್ಟಿರೋದಕ್ಕೆ ನಾವು ಎಷ್ಟು ಥ್ಯಾಂಕ್ಸ್ ಹೇಳ್ಬೇಕು ಅಲ್ವಾ? ಯಾಕಂದ್ರೆ ಆತನು ಅದ್ರಲ್ಲಿ ಒಳ್ಳೊಳ್ಳೆ ಬುದ್ಧಿಮಾತುಗಳನ್ನ ಬರೆಸಿಟ್ಟಿದ್ದಾನೆ. ನಮ್ಮ ಜೀವನದಲ್ಲಿ ಸಮಸ್ಯೆಗಳು ಬಂದಾಗ ಅದನ್ನ ಎದುರಿಸೋಕೆ ಅವು ನಮಗೆ ಸಹಾಯ ಮಾಡುತ್ತೆ. ಭವಿಷ್ಯದಲ್ಲಿ ಏನ್ ಮಾಡ್ತಾನೆ ಅನ್ನೋದನ್ನೂ ಆತನು ಬೈಬಲಲ್ಲಿ ಬರೆಸಿಟ್ಟಿದ್ದಾನೆ. ಅಷ್ಟೇ ಅಲ್ಲ, ಆತನಲ್ಲಿರೋ ಒಳ್ಳೇ ಗುಣಗಳನ್ನ ತಿಳ್ಕೊಳ್ಳೋಕೆ ಬೈಬಲ್ ನಮಗೆ ಸಹಾಯ ಮಾಡುತ್ತೆ. ಆತನ ಗುಣಗಳ ಬಗ್ಗೆ ಓದಿದಾಗ ಆತನು ಎಷ್ಟು ಒಳ್ಳೆಯವನು ಅಂತ ನಮಗೆ ಗೊತ್ತಾಗುತ್ತೆ. ಆತನಿಗೆ ಹತ್ರ ಆಗ್ಬೇಕು, ಆತನ ಫ್ರೆಂಡ್ಸ್ ಆಗ್ಬೇಕು ಅಂತನೂ ಅನ್ಸುತ್ತೆ.—ಕೀರ್ತ. 25:14.
2. ಯೆಹೋವ ದೇವರು ಮನುಷ್ಯರಿಗೆ ತನ್ನ ಬಗ್ಗೆ ಹೇಗೆಲ್ಲಾ ತಿಳಿಸಿದ್ದಾನೆ?
2 ಮನುಷ್ಯರೆಲ್ಲಾ ತನ್ನ ಬಗ್ಗೆ ತಿಳ್ಕೊಬೇಕು ಅನ್ನೋದು ಯೆಹೋವನ ಆಸೆ. ಅದಕ್ಕೇ ಹಿಂದಿನ ಕಾಲದಲ್ಲಿ ಕನಸುಗಳನ್ನ ಬೀಳಿಸಿ, ದರ್ಶನಗಳನ್ನ ತೋರಿಸಿ, ದೇವದೂತರನ್ನ ಕಳಿಸಿ ಜನ್ರಿಗೆ ತನ್ನ ಬಗ್ಗೆ ಕಲಿಸಿದನು. (ಅರ. 12:6; ಅ. ಕಾ. 10:3, 4) ಆಮೇಲೆ, ಆತನು ಹೇಳೋ ಮಾತುಗಳನ್ನೆಲ್ಲ ‘ಒಂದು ಪುಸ್ತಕದಲ್ಲಿ ಬರಿಯೋಕೆ’ ಕೆಲವರಿಗೆ ಹೇಳಿದನು. (ಯೆರೆ. 30:2) ಇದ್ರಿಂದ ನಮಗೆ ಇವತ್ತು ದೇವ್ರ ಬಗ್ಗೆ ತಿಳ್ಕೊಳ್ಳೋಕೆ ಆಗಿದೆ. ಹೀಗೆ ಮನುಷ್ಯರ ಜೊತೆ ಯೆಹೋವ ದೇವರು ಮಾತಾಡೋಕೆ ಒಳ್ಳೆ ವಿಧಾನವನ್ನೇ ಅಂದ್ರೆ ಒಳ್ಳೆ ದಾರಿಯನ್ನೇ ಆರಿಸ್ಕೊಂಡಿದ್ದಾನೆ. ಯಾಕಂದ್ರೆ “ಸತ್ಯ ದೇವರ ದಾರಿ ಪರಿಪೂರ್ಣವಾಗಿದೆ.”—ಕೀರ್ತ. 18:30.
3. ಬೈಬಲ್ ಸಂದೇಶ ಇಲ್ಲಿ ತನಕ ತಲುಪೋ ತರ ಯೆಹೋವ ಹೇಗೆ ನೋಡ್ಕೊಂಡನು? (ಯೆಶಾಯ 40:8)
3 ಯೆಶಾಯ 40:8 ಓದಿ. ಯೆಹೋವನ ಜನ್ರು ಬೈಬಲಲ್ಲಿರೋ ಬುದ್ಧಿಮಾತುಗಳನ್ನ ಓದಿ ಸಾವಿರಾರು ವರ್ಷಗಳಿಂದ ಪ್ರಯೋಜನ ಪಡೀತಿದ್ದಾರೆ. ಅದು ಹೇಗೆ ಸಾಧ್ಯ? ಯೆಹೋವ ತನ್ನ ಸಂದೇಶನ ಬರೆಸಿದ ಸುರುಳಿಗಳು ಈಗ ನಮ್ಮ ಹತ್ರ ಇಲ್ವಲ್ಲಾ? ಹಾಗಾದ್ರೆ ಆ ಸಂದೇಶ ಇಲ್ಲಿ ತನಕ ಹೇಗೆ ತಲುಪ್ತು? ಹೇಗಂದ್ರೆ, ಆ ಸುರುಳಿಗಳಲ್ಲಿ ಇದ್ದ ಸಂದೇಶನ ಯೆಹೋವ ದೇವರು ನಕಲು ಮಾಡಿಸಿದ್ದಾನೆ. ಇದ್ರಿಂದ ಆ ಸಂದೇಶ ನಮ್ಮ ಕೈಸೇರಿದೆ. ಆ ನಕಲುಗಾರರು ಅಪರಿಪೂರ್ಣರಾಗಿದ್ರೂ ತಮ್ಮ ಕೆಲಸನ ಹುಷಾರಾಗಿ ಮಾಡಿದ್ರು. ಬೈಬಲಲ್ಲಿರೋ ಹೀಬ್ರು ಪುಸ್ತಕಗಳ ಬಗ್ಗೆ ಒಬ್ಬ ಪಂಡಿತ ಹೇಳಿದ್ದು: “ಅದ್ರಲ್ಲಿರೋ ಸಂದೇಶನ ತುಂಬ ಚೆನ್ನಾಗಿ, ನಿಖರವಾಗಿ ನಕಲು ಮಾಡಿದ್ದಾರೆ. ಅದ್ರಷ್ಟು ಚೆನ್ನಾಗಿ ಬೇರೆ ಯಾವ ಪುಸ್ತಕವನ್ನೂ ಇಲ್ಲಿ ತನಕ ನಕಲು ಮಾಡಿಲ್ಲ.” ಹಾಗಾಗಿ, ಬೈಬಲನ್ನ ಬರೆದು ಸಾವಿರಾರು ವರ್ಷಗಳಾಗಿದ್ರೂ, ಮೊದ-ಮೊದ್ಲು ಬರೆದ ಸುರುಳಿಗಳು ಈಗ ಇಲ್ಲಾಂದ್ರೂ, ನಕಲು ಮಾಡಿದವರು ಅಪರಿಪೂರ್ಣರಾಗಿದ್ರೂ ದೇವರ ಸಂದೇಶ ಬದಲಾಗಿಲ್ಲ. ಅದ್ರಲ್ಲಿ ಇರೋದೆಲ್ಲಾ ಯೆಹೋವನ ಮಾತುಗಳೇ ಅಂತ ನಾವು ಕಣ್ಮುಚ್ಚಿ ನಂಬಬಹುದು.
4. ಈ ಲೇಖನದಲ್ಲಿ ನಾವೇನು ಕಲಿತೀವಿ?
4 ಯೆಹೋವ ಯಾವಾಗ್ಲೂ ನಮಗೆ “ಒಳ್ಳೇ ಬಹುಮಾನ, ಒಳ್ಳೇ ವರ” ಕೊಡ್ತಾನೆ. (ಯಾಕೋ. 1:17) ಬೈಬಲ್ ಕೂಡ ಆತನು ಕೊಟ್ಟಿರೋ ಒಳ್ಳೆ ಗಿಫ್ಟ್. ಸಾಮಾನ್ಯವಾಗಿ ನಮಗೆ ಒಂದು ಗಿಫ್ಟ್ ಸಿಕ್ಕಿದಾಗ, ಅದನ್ನ ಕೊಟ್ಟವರ ಬಗ್ಗೆ ನಮಗೆ ತಿಳ್ಕೊಳ್ಳೋಕೆ ಆಗುತ್ತೆ. ಅಷ್ಟೇ ಅಲ್ಲ, ನಮ್ಮ ಬಗ್ಗೆ ಅವ್ರಿಗೆ ಎಷ್ಟು ಗೊತ್ತು ಅಂತಾನೂ ಅರ್ಥ ಆಗುತ್ತೆ. ಅದೇ ತರ ಯೆಹೋವ ಕೊಟ್ಟಿರೋ ಬೈಬಲನ್ನ ಓದಿದಾಗ ನಮಗೆ ಆತನ ಬಗ್ಗೆ ಚೆನ್ನಾಗಿ ತಿಳ್ಕೊಳ್ಳೋಕೆ ಆಗುತ್ತೆ. ಆತನು ನಮ್ಮನ್ನ ಎಷ್ಟು ಚೆನ್ನಾಗಿ ಅರ್ಥ ಮಾಡ್ಕೊಂಡಿದ್ದಾನೆ ಅನ್ನೋದೂ ಗೊತ್ತಾಗುತ್ತೆ. ಹಾಗಾಗಿ ನಾವು ಈ ಲೇಖನದಲ್ಲಿ ಯೆಹೋವನ ಬಗ್ಗೆ ತಿಳ್ಕೊಳ್ಳೋಣ. ಆತನ ವಿವೇಕ, ನ್ಯಾಯ ಮತ್ತು ಪ್ರೀತಿನ ಬೈಬಲ್ ಹೇಗೆ ತೋರಿಸುತ್ತೆ ಅಂತ ನೋಡೋಣ. ಮೊದ್ಲು ಈಗ ನಾವು ಆತನ ವಿವೇಕದ ಬಗ್ಗೆ ನೋಡೋಣ.
ದೇವರ ವಿವೇಕ
5. ಬೈಬಲಲ್ಲಿ ದೇವರ ವಿವೇಕ ಹೇಗೆ ಎದ್ದುಕಾಣ್ತಿದೆ?
5 ಯೆಹೋವನ ಮಾತು ಕೇಳಿ ಅದೇ ತರ ನಡ್ಕೊಂಡ್ರೆ ನಾವು ಸಂತೋಷವಾಗಿ ಇರ್ತೀವಿ ಅಂತ ಆತನಿಗೆ ಚೆನ್ನಾಗಿ ಗೊತ್ತು. ಅದಕ್ಕೇ ಆತನು ಬುದ್ಧಿಮಾತುಗಳನ್ನ ಬೈಬಲಲ್ಲಿ ಬರೆಸಿಟ್ಟಿದ್ದಾನೆ. ಬೈಬಲ್ ಪುಸ್ತಕಗಳನ್ನ ಮೋಶೆ ಬರೆದಾಗ ಇಸ್ರಾಯೇಲ್ಯರಿಗೆ ಇದನ್ನೇ ಹೇಳ್ದ. ಅವನು “ಇವೆಲ್ಲ ಸುಳ್ಳಲ್ಲ, ಇವುಗಳನ್ನ ಪಾಲಿಸೋದ್ರಿಂದ ನೀವು ಬದುಕಿ ಬಾಳ್ತೀರ” ಅಂದ. (ಧರ್ಮೋ. 32:47) ದೇವರ ಬುದ್ಧಿಮಾತುಗಳನ್ನ ಕೇಳಿ ಪಾಲಿಸಿದವರು ಜೀವನದಲ್ಲಿ ಸಂತೋಷವಾಗಿ ಇದ್ರು. (ಕೀರ್ತ. 1:2, 3) ದೇವರ ವಾಕ್ಯಕ್ಕೆ ಇವಾಗ್ಲೂ ಶಕ್ತಿ ಇದೆ. ಅದು ಜನ್ರ ಜೀವನನ ಬದಲಾಯಿಸ್ತಿದೆ. jw.orgನಲ್ಲಿ “ಬದುಕು ಬದಲಾದ ವಿಧ” ಅನ್ನೋ ಲೇಖನ ಸರಣಿ ನೋಡಿ. ಅದ್ರಲ್ಲಿ ಹತ್ತತ್ರ 50 ಜನ್ರ ಜೀವನ ಕಥೆ ಇದೆ. ಅದನ್ನ ಓದಿದಾಗ ಜನ್ರ ಜೀವನದಲ್ಲಿ ಬೈಬಲ್ ಈಗ್ಲೂ “ಕೆಲಸ ಮಾಡ್ತಿದೆ” ಅಂತ ನಿಮಗೆ ಗೊತ್ತಾಗುತ್ತೆ.—1 ಥೆಸ. 2:13.
6. ಬೈಬಲ್ ಬೇರೆ ಪುಸ್ತಕಗಳಿಗಿಂತ ತುಂಬ ವಿಶೇಷವಾದ ಪುಸ್ತಕ ಅಂತ ಯಾಕೆ ಹೇಳ್ಬೋದು?
6 ಬೈಬಲ್ ಒಂದು ವಿಶೇಷವಾದ ಪುಸ್ತಕ. ಯಾಕಂದ್ರೆ ಅದನ್ನ ಬರೆಸಿರೋ ವ್ಯಕ್ತಿನೇ ತುಂಬ ವಿಶೇಷವಾದವರು. ಆತನಿಗೆ ಸಾವೇ ಇಲ್ಲ. ಆತನಿಗೆ ಇರೋಷ್ಟು ಶಕ್ತಿ, ವಿವೇಕ ಬೇರೆ ಯಾರಿಗೂ ಇಲ್ಲ. ಆದ್ರೆ ಬೇರೆ ಪುಸ್ತಕಗಳು ಹಾಗಲ್ಲ. ಅದನ್ನ ಬರೆದವರೂ ತೀರಿಹೋಗ್ತಾರೆ. ಸಮಯ ಹೋದ ಹಾಗೆ ಅವರು ಬರೆದ ಪುಸ್ತಕನೂ ಅಟ್ಟಕ್ಕೆ ಸೇರುತ್ತೆ. ಅದ್ರಲ್ಲಿರೋ ಮಾಹಿತಿಯಿಂದ ಅಷ್ಟೇನೂ ಪ್ರಯೋಜನ ಆಗಲ್ಲ. ಆದ್ರೆ ಬೈಬಲ್ ಆ ತರ ಅಲ್ಲ. ಅದ್ರಲ್ಲಿರೋ ಬುದ್ಧಿಮಾತುಗಳಿಂದ ಹಿಂದೆ ಇದ್ದ ಜನ್ರಿಗೂ ಪ್ರಯೋಜನ ಆಯ್ತು, ಈಗ್ಲೂ ಆಗ್ತಿದೆ, ಮುಂದೆನೂ ಪ್ರಯೋಜನ ಆಗುತ್ತೆ. ಈ ಪುಸ್ತಕದ ಇನ್ನೊಂದು ವಿಶೇಷತೆ ಏನು ಗೊತ್ತಾ? ಬೈಬಲಲ್ಲಿ ಇರೋದನ್ನ ಅರ್ಥ ಮಾಡ್ಕೊಳ್ಳೋಕೆ ಮತ್ತು ಅದೇ ತರ ನಡ್ಕೊಳ್ಳೋಕೆ ಯೆಹೋವ ಪವಿತ್ರ ಶಕ್ತಿ ಕೊಡ್ತಾನೆ. (ಕೀರ್ತ. 119:27; ಮಲಾ. 3:16; ಇಬ್ರಿ. 4:12) ಬೈಬಲನ್ನ ಪ್ರತಿದಿನ ನಾವು ಓದೋಕೆ ಇದಕ್ಕಿಂತ ದೊಡ್ಡ ಕಾರಣ ಬೇಕಾ?
7. ಹಿಂದಿನ ಕಾಲದಲ್ಲಿ ದೇವಜನ್ರು ಬೈಬಲನ್ನ ಓದಿದ್ರಿಂದ ಏನ್ ಪ್ರಯೋಜನ ಆಯ್ತು?
7 ಬೈಬಲಲ್ಲಿ ದೇವರ ವಿವೇಕ ಇದೆ ಅನ್ನೋದಕ್ಕೆ ಇನ್ನೊಂದು ಆಧಾರ ಏನು? ಬೈಬಲನ್ನ ಓದಿದ್ರಿಂದ ಯೆಹೋವನ ಜನ್ರು ಒಗ್ಗಟ್ಟಾಗಿ ಇದ್ದಾರೆ. ಇಸ್ರಾಯೇಲ್ಯರು ದೇವರು ಮಾತುಕೊಟ್ಟ ದೇಶಕ್ಕೆ ಬಂದಾಗ ಬೇರೆಬೇರೆ ಕಡೆ ವಾಸ ಮಾಡ್ತಿದ್ರು. ಅಷ್ಟೇ ಅಲ್ಲ, ಬೇರೆಬೇರೆ ಕೆಲಸ ಮಾಡ್ತಿದ್ರು. ಕೆಲವರು ಮೀನು ಹಿಡೀತಿದ್ರು, ಪ್ರಾಣಿಗಳನ್ನ ಸಾಕ್ತಿದ್ರು ಮತ್ತು ವ್ಯವಸಾಯ ಮಾಡ್ತಿದ್ರು. ಹಾಗಾಗಿ ಅವರು ‘ನಾವ್ಯಾರೋ ನೀವ್ಯಾರೋ’ ಅನ್ನೋ ತರ ಇದ್ದುಬಿಡ್ತಾರೆ ಅಂತ ಯೆಹೋವನಿಗೆ ಗೊತ್ತಿತ್ತು. ಅದಕ್ಕೆ ಇಸ್ರಾಯೇಲ್ಯರು ಆಗಾಗ ಒಂದು ಕಡೆ ಸೇರಿ ಬರ್ಬೇಕು ಅಂತ ಆಜ್ಞೆ ಕೊಟ್ಟನು. ಈ ರೀತಿ ಬಂದಾಗ ಅವ್ರೆಲ್ಲ ಒಟ್ಟಿಗೆ ದೇವರ ವಾಕ್ಯನ ಓದಿ ಅರ್ಥ ಮಾಡ್ಕೊಳ್ಳೋಕೆ ಏರ್ಪಾಡು ಮಾಡಿದನು. (ಧರ್ಮೋ. 31:10-13; ನೆಹೆ. 8:2, 8, 18) ಹೀಗೆ ಒಬ್ಬ ಇಸ್ರಾಯೇಲ್ಯ ಯೆರೂಸಲೇಮಿಗೆ ಬಂದಾಗ ಅವನಿಗೆ ಹೇಗನಿಸಿರುತ್ತೆ ಅಂತ ಸ್ವಲ್ಪ ಯೋಚನೆ ಮಾಡಿ. ಅಲ್ಲಿ ಅವನು ಲಕ್ಷಗಟ್ಟಲೆ ಜನ್ರನ್ನ ನೋಡ್ತಾನೆ. ಅವ್ರೆಲ್ಲ ಅವನ ತರಾನೇ ಬೇರೆಬೇರೆ ಕಡೆಯಿಂದ ಬಂದಿರ್ತಾರೆ. ಅದನ್ನ ನೋಡಿದಾಗ ‘ನಾವೆಲ್ಲ ಒಂದು’ ಅಂತ ಅವನಿಗೆ ಅನಿಸಿರುತ್ತೆ. ಒಂದನೇ ಶತಮಾನದಲ್ಲಿದ್ದ ಕ್ರೈಸ್ತರನ್ನೂ ಒಗ್ಗಟ್ಟಾಗಿ ಇರೋ ತರ ಯೆಹೋವ ನೋಡ್ಕೊಂಡನು. ಆಗಿನ ಸಭೆಗಳಲ್ಲಿದ್ದ ಸಹೋದರ ಸಹೋದರಿಯರು ಬೇರೆಬೇರೆ ಭಾಷೆ ಮಾತಾಡ್ತಿದ್ರು. ಅವ್ರಲ್ಲಿ ಬಡವರು-ಶ್ರೀಮಂತರು ಇದ್ರು. ಆದ್ರೂ ಎಲ್ರೂ ಒಗ್ಗಟ್ಟಾಗಿ ಇದ್ರು. ಯಾಕಂದ್ರೆ ಅವ್ರಿಗೆ ಬೈಬಲ್ ಮೇಲೆ ಪ್ರೀತಿ, ಗೌರವ ಇತ್ತು. ಹೊಸಬರು ಸಹ ಸಹೋದರ ಸಹೋದರಿಯರ ಸಹಾಯದಿಂದ ಮತ್ತು ಕೂಟಗಳಿಗೆ ಬರ್ತಾ ಇದ್ದಿದ್ರಿಂದ ದೇವರ ವಾಕ್ಯದಲ್ಲಿ ಇರೋದನ್ನ ಚೆನ್ನಾಗಿ ಅರ್ಥ ಮಾಡ್ಕೊಳ್ಳೋಕೆ ಆಯ್ತು. ಹೀಗೆ ಅವ್ರೆಲ್ರೂ ಒಗ್ಗಟ್ಟಾಗಿ ಇರೋಕೆ ಮತ್ತು ಯೆಹೋವನನ್ನ ಆರಾಧಿಸೋಕೆ ಬೈಬಲೇ ಸಹಾಯ ಮಾಡ್ತು.—ಅ. ಕಾ. 2:42; 8:30, 31.
8. ಇವತ್ತು ಯೆಹೋವನ ಜನ್ರು ಯಾಕೆ ಒಗ್ಗಟ್ಟಾಗಿ ಇದ್ದಾರೆ?
8 ಬೈಬಲನ್ನ ಓದ್ತಾ ಇರೋದ್ರಿಂದ ಇವತ್ತು ನಾವೂ ಒಗ್ಗಟ್ಟಾಗಿ ಇದ್ದೀವಿ. ಯೆಹೋವನ ಬಗ್ಗೆ ಇರೋ ಎಲ್ಲಾ ಸತ್ಯಗಳು ಬೈಬಲಲ್ಲಿದೆ. ಹಾಗಾಗಿ ಅದನ್ನ ಓದಿ ಅರ್ಥ ಮಾಡ್ಕೊಳ್ಳೋಕೆ ನಾವೆಲ್ರೂ ತಪ್ಪದೆ ಕೂಟಗಳಿಗೆ ಬರ್ತೀವಿ. ಅಷ್ಟೇ ಅಲ್ಲ ಸಮ್ಮೇಳನ, ಅಧಿವೇಶನಗಳಿಗೂ ಸೇರಿ ಬರ್ತೀವಿ. ಹೀಗೆ ಬೈಬಲ್, ನಾವೆಲ್ರೂ ಒಗ್ಗಟ್ಟಾಗಿ ಇರೋ ತರ ಮಾಡಿದೆ. “ಹೆಗಲಿಗೆ ಹೆಗಲು ಕೊಟ್ಟು” ದೇವರ ಸೇವೆ ಮಾಡೋ ತರ ಮಾಡಿದೆ.—ಚೆಫ. 3:9.
9. ಬೈಬಲಲ್ಲಿರೋ ವಿಷ್ಯಗಳನ್ನ ಅರ್ಥ ಮಾಡ್ಕೊಳ್ಳೋಕೆ ನಮಗೆ ಯಾವ ಗುಣ ಬೇಕು? (ಲೂಕ 10:21)
9 ಒಬ್ಬ ಪಂಡಿತ ಹೀಗೆ ಹೇಳ್ತಾರೆ: “ಲೋಕದಲ್ಲಿ ತುಂಬ ಜನ ಬೈಬಲ್ ಓದ್ತಾರೆ. ಬೇರೆ ಯಾವ ಪುಸ್ತಕವನ್ನೂ ಅವರು ಇದ್ರಷ್ಟು ಮನಸ್ಸು ಕೊಟ್ಟು ಓದಲ್ಲ.” ಅವರು ಹೇಳಿದ ತರ ಇವತ್ತು ಎಲ್ಲಾ ಜನ್ರ ಕೈಯಲ್ಲೂ ಬೈಬಲ್ ಇದೆ. ಆದ್ರೆ ದೀನರು ಮಾತ್ರ ಅದನ್ನ ಅರ್ಥ ಮಾಡ್ಕೊಂಡು ಪಾಲಿಸ್ತಾ ಇದ್ದಾರೆ. ಯಾಕಂದ್ರೆ ಅದ್ರಲ್ಲಿರೋ ಎಷ್ಟೋ ಮಾಹಿತಿ ದೀನ ಜನ್ರಿಗೆ ಮಾತ್ರ ಅರ್ಥ ಆಗೋ ತರ ದೇವರು ಬರೆಸಿದ್ದಾನೆ. (ಲೂಕ 10:21 ಓದಿ.) ಬೈಬಲಲ್ಲಿ ದೇವರ ವಿವೇಕ ಎದ್ದುಕಾಣುತ್ತೆ ಅನ್ನೋದಕ್ಕೆ ಇದು ಇನ್ನೊಂದು ಆಧಾರ.—2 ಕೊರಿಂ. 3:15, 16.
10. ಬೈಬಲಲ್ಲಿ ದೇವರ ವಿವೇಕ ಎದ್ದುಕಾಣುತ್ತೆ ಅನ್ನೋದಕ್ಕೆ ಇನ್ನೂ ಯಾವ ಆಧಾರ ಇದೆ?
10 ಬೈಬಲಲ್ಲಿ ದೇವರ ವಿವೇಕ ಎದ್ದುಕಾಣುತ್ತೆ ಅನ್ನೋದಕ್ಕೆ ಇನ್ನೂ ಯಾವ ಆಧಾರ ಇದೆ? ಯೆಹೋವ ದೇವರು ಬೈಬಲನ್ನ ನಮ್ಮಲ್ಲಿ ಒಬ್ಬೊಬ್ಬರಿಗೋಸ್ಕರನೂ ಬರೆಸಿದ್ದಾನೆ. (ಯೆಶಾ. 30:21) ನಾವು ಬೇಜಾರಲ್ಲಿ ಇದ್ದಾಗ, ಕಷ್ಟದಲ್ಲಿ ಇದ್ದಾಗ ಯೆಹೋವ ಬೈಬಲಿಂದಾನೇ ನಮ್ಮನ್ನ ಸಮಾಧಾನ ಮಾಡ್ತಾನೆ, ನಮಗೆ ಸರಿದಾರಿ ತೋರಿಸ್ತಾನೆ. ನೀವು ಒಂದು ವಚನ ಓದಿದಾಗ ‘ಇದು ನನಗಂತಾನೇ ಬರೆದಿದೆ’ ಅಂತ ನಿಮಗೆ ಎಷ್ಟೋ ಸಲ ಅನಿಸಿಲ್ವಾ? ಅದೇ ವಚನನ ಇನ್ನೊಬ್ರು ಓದಿದಾಗ ಅವ್ರಿಗೂ ಹಾಗೇ ಅನಿಸಿದೆ. ಹೀಗೆ ಲಕ್ಷಾಂತರ ಜನ್ರಿಗೆ ಅನಿಸಿದೆ. ತುಂಬ ವರ್ಷಗಳ ಹಿಂದೆ ಬರೆದಿರೋ ಬೈಬಲಿಂದ ಇವತ್ತು ಪ್ರತಿಯೊಬ್ರಿಗೂ ಸಹಾಯ ಆಗ್ತಿದೆ ಅಂದ್ರೆ ಏನರ್ಥ? ತುಂಬ ವಿವೇಕ ಇರೋ ವ್ಯಕ್ತಿನೇ ಇದನ್ನ ಬರೆಸಿದ್ದಾನೆ ಅಂತ ಅರ್ಥ.—2 ತಿಮೊ. 3:16, 17.
ದೇವರ ನ್ಯಾಯ
11. ಬೈಬಲನ್ನ ಬರೆಸೋ ವಿಷ್ಯದಲ್ಲಿ ಯೆಹೋವ ಭೇದಭಾವ ಮಾಡ್ಲಿಲ್ಲ ಅಂತ ಹೇಗೆ ಹೇಳ್ಬೋದು?
11 ಯೆಹೋವ ನ್ಯಾಯವಂತ ದೇವರು. (ಧರ್ಮೋ. 32:4) ಹಾಗಾಗಿ ಆತನು ಯಾವತ್ತೂ ಭೇದಭಾವ ಮಾಡಲ್ಲ. (ಅ. ಕಾ. 10:34, 35; ರೋಮ. 2:11) ಅದು ನಮಗೆ ದೇವರು ಬೈಬಲನ್ನ ಬರೆಸಿರೋ ಭಾಷೆಯಿಂದ ಗೊತ್ತಾಗುತ್ತೆ. ಯೆಹೋವ ಇಡೀ ಬೈಬಲನ್ನ ಒಂದೇ ಭಾಷೆಯಲ್ಲಿ ಬರೆಸಬೇಕು ಅಂತ ಅಂದ್ಕೊಳ್ಳಲಿಲ್ಲ. ಬೈಬಲಿನ ಮೊದಲ 39 ಪುಸ್ತಕಗಳನ್ನ ಆತನು ಹೀಬ್ರು ಭಾಷೆಯಲ್ಲಿ ಬರೆಸಿದನು. ಯಾಕಂದ್ರೆ ಆತನ ಜನ್ರು ಆಗ ಆ ಭಾಷೆಯನ್ನೇ ಮಾತಾಡ್ತಾ ಇದ್ರು. ಅದು ಅವ್ರಿಗೆ ಸುಲಭವಾಗಿ ಅರ್ಥ ಆಗ್ತಿತ್ತು. ಆದ್ರೆ ಕೊನೆಯ 27 ಪುಸ್ತಕಗಳನ್ನ ಗ್ರೀಕ್ ಭಾಷೆಯಲ್ಲಿ ಬರೆಸಿದನು. ಯಾಕಂದ್ರೆ ಒಂದನೇ ಶತಮಾನದಷ್ಟಕ್ಕೆ ತುಂಬ ಜನ್ರು ಗ್ರೀಕ್ ಭಾಷೆ ಮಾತಾಡ್ತಾ ಇದ್ರು. ಇದ್ರಿಂದ ಯೆಹೋವ ಭೇದಭಾವ ಮಾಡಲ್ಲ, ನ್ಯಾಯವಂತ ದೇವರು ಅಂತ ಗೊತ್ತಾಗುತ್ತೆ. ಇವತ್ತು ಲೋಕದಲ್ಲಿ ಹತ್ತತ್ರ 800 ಕೋಟಿ ಜನ ಇದ್ದಾರೆ. ಬೇರೆಬೇರೆ ಭಾಷೆ ಮಾತಾಡ್ತಾರೆ. ಅವ್ರಿಗೆಲ್ಲ ಯೆಹೋವ ತನ್ನ ಬಗ್ಗೆ ಹೇಗೆ ಕಲಿಸಿದ್ದಾನೆ?
12. ದಾನಿಯೇಲ 12:4ರಲ್ಲಿ ಹೇಳಿರೋ ಭವಿಷ್ಯವಾಣಿ ಕೊನೇ ದಿನಗಳಲ್ಲಿ ಹೇಗೆ ನಿಜ ಆಗ್ತಿದೆ?
12 ಬೈಬಲಿನ “ನಿಜವಾದ ಜ್ಞಾನ” ಅಂತ್ಯದ ಸಮಯದಲ್ಲಿ “ತುಂಬಿ ತುಳುಕುತ್ತೆ” ಅಂತ ಯೆಹೋವ ದಾನಿಯೇಲನಿಂದ ಹೇಳಿಸಿದನು. ಅಂದ್ರೆ ಅದನ್ನ ತುಂಬ ಜನ ಅರ್ಥ ಮಾಡ್ಕೊತಾರೆ ಅಂತ ಹೇಳಿದನು. (ದಾನಿಯೇಲ 12:4 ಓದಿ.) ಅದೀಗ ಹೇಗೆ ನಿಜ ಆಗ್ತಿದೆ? ಯೆಹೋವನ ಜನ್ರು ಬೈಬಲ್ ಮತ್ತು ಅದಕ್ಕೆ ಸಂಬಂಧಪಟ್ಟ ಪ್ರಕಾಶನಗಳನ್ನ ಇವತ್ತು ತುಂಬ ಭಾಷೆಗಳಲ್ಲಿ ಭಾಷಾಂತರ ಮಾಡಿ ಬಿಡುಗಡೆ ಮಾಡ್ತಿದ್ದಾರೆ. ಅದನ್ನ ತುಂಬ ಜನ ಓದ್ತಾ ಇದ್ದಾರೆ. ಇಲ್ಲಿ ತನಕ ಬೇರೆ ಯಾವ ಪುಸ್ತಕನೂ ಇಷ್ಟು ಭಾಷೆಯಲ್ಲಿ ಭಾಷಾಂತರ ಆಗಿಲ್ಲ. ಕೆಲವು ಕಂಪನಿಗಳು ಬೈಬಲನ್ನ ಭಾಷಾಂತರ ಮಾಡಿ ಮಾರಾಟ ಮಾಡ್ತಿದ್ದಾರೆ. ಆದ್ರೆ ಅದಕ್ಕೆ ದುಡ್ಡು ಜಾಸ್ತಿ. ಹಾಗಾಗಿ ಜನ್ರಿಗೆ ಅದನ್ನ ತಗೊಳ್ಳೋಕೆ ಆಗ್ತಿಲ್ಲ. ಆದ್ರೆ ಯೆಹೋವನ ಜನ್ರು ಇಲ್ಲಿ ತನಕ 240ಕ್ಕಿಂತ ಹೆಚ್ಚು ಭಾಷೆಗಳಲ್ಲಿ ಬೈಬಲನ್ನ ಮತ್ತು ಅದ್ರ ಕೆಲವು ಭಾಗಗಳನ್ನ ಭಾಷಾಂತರ ಮಾಡಿದ್ದಾರೆ. ಅಷ್ಟೇ ಅಲ್ಲ ಅವರು ಅದನ್ನ ಫ್ರೀಯಾಗಿ ಕೊಡ್ತಿದ್ದಾರೆ. ಹಾಗಾಗಿ ಅಂತ್ಯ ಬರೋಷ್ಟರಲ್ಲಿ “ದೇವರ ಆಳ್ವಿಕೆಯ ಈ ಸಿಹಿಸುದ್ದಿ” ಲೋಕದ ಮೂಲೆಮೂಲೆಗೂ ತಲುಪ್ತಿದೆ. (ಮತ್ತಾ. 24:14) ಇದ್ರಿಂದ ಯೆಹೋವ ನ್ಯಾಯವಂತ ದೇವರು ಅಂತ ಗೊತ್ತಾಗುತ್ತೆ. ಯಾಕಂದ್ರೆ ಆತನು ತನ್ನ ಬಗ್ಗೆ ಎಲ್ಲ ಜನ್ರಿಗೂ ತಿಳ್ಕೊಳ್ಳೋಕೆ ಅವಕಾಶ ಕೊಟ್ಟಿದ್ದಾನೆ. ಆತನು ಎಲ್ರನ್ನೂ ಪ್ರೀತಿಸ್ತಾನೆ.
ದೇವರ ಪ್ರೀತಿ
13. ಯೆಹೋವ ಬೈಬಲಲ್ಲಿ ಬರೆಸಿರೋ ವಿಷ್ಯಗಳಿಂದ ಆತನಿಗೆ ನಮ್ಮ ಮೇಲೆ ಪ್ರೀತಿ ಇದೆ ಅಂತ ಹೇಗೆ ಗೊತ್ತಾಗುತ್ತೆ? (ಯೋಹಾನ 21:25)
13 ನಾವು ಬೈಬಲನ್ನ ಓದ್ವಾಗ ಅದನ್ನ ಬರೆಸಿರೋ ಯೆಹೋವ ದೇವರ ಪ್ರೀತಿ ಎದ್ದುಕಾಣುತ್ತೆ. (1 ಯೋಹಾ. 4:8) ಹೇಗೆ? ಯೆಹೋವ ದೇವರು ನಮಗೆ ಎಷ್ಟು ಬೇಕೋ ಅಷ್ಟು ಮಾಹಿತಿಯನ್ನ ಮಾತ್ರ ಬೈಬಲಲ್ಲಿ ಬರೆಸಿದ್ದಾನೆ. ಆತನಿಗೆ ಗೊತ್ತಿರೋ ವಿಷ್ಯನೆಲ್ಲಾ ಅದ್ರಲ್ಲಿ ಬರೆಸಿ ನಮಗೆ ಅರ್ಥ ಮಾಡ್ಕೊಳ್ಳೋಕೆ ಕಷ್ಟ ಆಗೋ ತರ ಮಾಡಿಲ್ಲ. ಆತನ ಜೊತೆ ಸ್ನೇಹ ಬೆಳೆಸ್ಕೊಳ್ಳೋಕೆ, ಈಗ ನಾವು ಸಂತೋಷವಾಗಿ ಇರೋಕೆ ಮತ್ತು ಮುಂದೆ ಶಾಶ್ವತ ಜೀವ ಪಡ್ಕೊಳ್ಳೋಕೆ ನಮಗೆ ಏನ್ ಬೇಕೋ ಅದನ್ನ ಕೊಟ್ಟಿದ್ದಾನೆ.—ಯೋಹಾನ 21:25 ಓದಿ.
14. ಬೈಬಲಲ್ಲಿ ಯೆಹೋವ ದೇವರ ಪ್ರೀತಿ ಇನ್ನೂ ಹೇಗೆ ಗೊತ್ತಾಗುತ್ತೆ?
14 ಬೈಬಲಲ್ಲಿ ಯೆಹೋವ ದೇವರ ಪ್ರೀತಿ ಇನ್ನೂ ಹೇಗೆ ಗೊತ್ತಾಗುತ್ತೆ? ಎಲ್ಲಾ ವಿಷ್ಯಕ್ಕೂ ನಾವು ಏನ್ ಮಾಡ್ಬೇಕು, ಏನ್ ಮಾಡ್ಬಾರ್ದು ಅಂತ ಯೆಹೋವ ನಿಯಮ ಇಟ್ಟಿಲ್ಲ. ಬದಲಿಗೆ ಜೀವನ ಕಥೆಗಳನ್ನ, ಭವಿಷ್ಯವಾಣಿಗಳನ್ನ, ಬುದ್ಧಿಮಾತುಗಳನ್ನ ಬೈಬಲಲ್ಲಿ ಬರೆಸಿದ್ದಾನೆ. ನಾವು ಯೋಚ್ನೆ ಮಾಡಿ ನಿರ್ಧಾರಗಳನ್ನ ಮಾಡ್ಬೇಕು ಅನ್ನೋದು ಆತನ ಆಸೆ. ಹಾಗಾಗಿ ನಾವು ದೇವರನ್ನ ಮನಸಾರೆ ಪ್ರೀತಿಸ್ತೀವಿ. ಆತನ ಮಾತನ್ನ ಕೇಳ್ತೀವಿ.
15. (ಎ) ಯೆಹೋವ ದೇವರಿಗೆ ನಮ್ಮ ಮೇಲೆ ಕಾಳಜಿ ಇದೆ ಅಂತ ಬೈಬಲಿಂದ ನಮಗೆ ಹೇಗೆ ಗೊತ್ತಾಗುತ್ತೆ? (ಬಿ) ಚಿತ್ರದಲ್ಲಿರೋ ಚಿಕ್ಕ ಹುಡುಗಿ, ಯುವ ಸಹೋದರ ಮತ್ತು ವಯಸ್ಸಾದ ಸಹೋದರಿ ಯಾರ ಬಗ್ಗೆ ಓದಿ ಯೋಚ್ನೆ ಮಾಡ್ತಿದ್ದಾರೆ? (ಆದಿ. 39:1, 10-12; 2 ಅರ. 5:1-3; ಲೂಕ 2:25-38)
15 ನಾವು ಬೈಬಲ್ ಓದಿದಾಗ, ಯೆಹೋವ ದೇವರಿಗೆ ನಮ್ಮ ಮೇಲೆ ತುಂಬ ಕಾಳಜಿ ಇದೆ ಅಂತ ಗೊತ್ತಾಗುತ್ತೆ. “ನಮ್ಮ ತರ ಭಾವನೆಗಳಿದ್ದ” ಮನುಷ್ಯರ ಹತ್ರ ಆತನು ಮಾತಾಡಿದನು. (ಯಾಕೋ. 5:17) ಆಗ ಅವ್ರ ಅನಿಸಿಕೆಗಳನ್ನ, ಭಾವನೆಗಳನ್ನ ತುಂಬ ಚೆನ್ನಾಗಿ ಅರ್ಥ ಮಾಡ್ಕೊಂಡನು. ಇದು ಬೈಬಲಲ್ಲಿದೆ. ಅಷ್ಟೇ ಅಲ್ಲ, ಅವ್ರ ಜೊತೆ ಹೇಗೆ ನಡ್ಕೊಂಡನು ಅಂತಾನೂ ಇದೆ. ಅದನ್ನ ಓದ್ವಾಗ “ಯೆಹೋವ ದೇವರು ಕೋಮಲ ಮಮತೆ ತೋರಿಸ್ತಾನೆ, ಆತನು ಕರುಣಾಮಯಿ” ಅಂತ ನಮಗೆ ಗೊತ್ತಾಗುತ್ತೆ.—ಯಾಕೋ. 5:11.
16. ಯೆಹೋವ ದೇವರಿಗೆ ನಮ್ಮ ಮೇಲೆ ಪ್ರೀತಿಯಿದೆ ಅನ್ನೋಕೆ ಇನ್ನೊಂದು ಆಧಾರ ಏನು? (ಯೆಶಾಯ 55:7)
16 ಯೆಹೋವ ದೇವರಿಗೆ ನಮ್ಮ ಮೇಲೆ ತುಂಬ ಪ್ರೀತಿ ಇದೆ ಅನ್ನೋದಕ್ಕೆ ಬೈಬಲಲ್ಲಿ ಇನ್ನೂ ಒಂದು ಆಧಾರ ಇದೆ. ಅದೇನಂದ್ರೆ, ನಾವು ತಪ್ಪು ಮಾಡಿದ ತಕ್ಷಣ ಯೆಹೋವ ‘ನೀವು ನನ್ನ ಆರಾಧಕರಾಗಿ ಇರೋಕೆ ಲಾಯಕ್ಕಿಲ್ಲ’ ಅಂತ ಹೇಳಿ ನಮ್ಮನ್ನ ಬಿಟ್ಟುಬಿಡಲ್ಲ. ಇಸ್ರಾಯೇಲ್ಯರು ಪದೇಪದೇ ಯೆಹೋವನ ಮನಸ್ಸನ್ನ ನೋಯಿಸ್ತಿದ್ರು. ಆದ್ರೂ ಅವರು ಮನಸಾರೆ ಪಶ್ಚಾತ್ತಾಪ ಪಟ್ಟಾಗೆಲ್ಲಾ ಯೆಹೋವ ಅವ್ರನ್ನ ಕ್ಷಮಿಸಿದನು. (ಯೆಶಾಯ 55:7 ಓದಿ.) ಒಂದನೇ ಶತಮಾನದಲ್ಲಿದ್ದ ಕ್ರೈಸ್ತರಿಗೂ ಯೆಹೋವ ತಮ್ಮನ್ನ ತುಂಬ ಪ್ರೀತಿಸ್ತಾನೆ ಅಂತ ಗೊತ್ತಾಯ್ತು. ಕೊರಿಂಥ ಸಭೆಯಲ್ಲಿದ್ದ ಒಬ್ಬ ವ್ಯಕ್ತಿ ತುಂಬ ದೊಡ್ಡ ತಪ್ಪು ಮಾಡ್ತಾ ಇದ್ದ. ಆದ್ರೆ ಆಮೇಲೆ ಅವನು ಪಶ್ಚಾತ್ತಾಪಪಟ್ಟು ತಿದ್ಕೊಂಡ. ಆಗ ಯೆಹೋವ ಅವನನ್ನ ಕ್ಷಮಿಸಿದನು. ಅದಕ್ಕೆ ಸಭೆಯವ್ರೂ ಅವನನ್ನ “ಮನಸಾರೆ ಕ್ಷಮಿಸಬೇಕು, ಸಮಾಧಾನ ಮಾಡಬೇಕು” ಅಂತ ಪೌಲನಿಂದ ಬರೆಸಿದನು. (2 ಕೊರಿಂ. 2:6, 7; 1 ಕೊರಿಂ. 5:1-5) ನಾವು ತಪ್ಪು ಮಾಡಿದ ತಕ್ಷಣ ಯೆಹೋವ ನಮ್ಮನ್ನ ಬಿಟ್ಟುಬಿಡಲ್ಲ. ನಮ್ಮನ್ನ ತಿದ್ತಾನೆ, ಸರಿದಾರಿಗೆ ಬರೋಕೆ ಸಹಾಯ ಮಾಡ್ತಾನೆ. ತಪ್ಪು ಮಾಡಿದವರು ತನ್ನ ಹತ್ರ ವಾಪಸ್ ಬಂದಾಗ ಅವ್ರನ್ನ ಬಾಚಿ ತಬ್ಕೊಳ್ತೀನಿ ಅಂತ ಮಾತುಕೊಟ್ಟಿದ್ದಾನೆ.—ಯಾಕೋ. 4:8-10.
ಯೆಹೋವ ಕೊಟ್ಟಿರೋ ಗಿಫ್ಟ್‌ಗೆ ಗೌರವ ಕೊಡಿ
17. ಬೈಬಲ್ ನಮಗೆ ಸಿಕ್ಕಿರೋ ಒಂದು ದೊಡ್ಡ ಗಿಫ್ಟ್ ಅಂತ ಯಾಕೆ ಹೇಳ್ಬೋದು?
17 ಬೈಬಲ್ ನಮ್ಮ ಜೀವನದಲ್ಲಿ ಸಿಕ್ಕಿರೋ ಒಂದು ದೊಡ್ಡ ಗಿಫ್ಟ್ ಅಂತಾನೇ ಹೇಳ್ಬೋದು. ಯೆಹೋವನಿಗೆ ತುಂಬ ವಿವೇಕ, ಪ್ರೀತಿಯಿದೆ. ಆತನು ನ್ಯಾಯವಂತ ದೇವರು ಅಂತ ನಮಗೆ ಬೈಬಲಿಂದ ಗೊತ್ತಾಗಿದೆ. ಆತನ ಬಗ್ಗೆ ನಾವು ತಿಳ್ಕೊಬೇಕು, ನಾವು ಆತನ ಫ್ರೆಂಡ್ ಆಗ್ಬೇಕು ಅಂತ ಆತನು ಇಷ್ಟಪಡ್ತಾನೆ ಅನ್ನೋದೂ ಈ ಗಿಫ್ಟಿಂದಾನೇ ಗೊತ್ತಾಯ್ತು.
18. ಯೆಹೋವ ಕೊಟ್ಟಿರೋ ಗಿಫ್ಟ್ ಮೇಲೆ ನಮಗೆ ಗೌರವ ಇದೆ ಅಂತ ಹೇಗೆ ತೋರಿಸ್ಬೋದು?
18 ದೇವರು ಕೊಟ್ಟಿರೋ ಈ ಗಿಫ್ಟ್‌ನ ನಾವು ಹಗುರವಾಗಿ ನೋಡ್ಬಾರ್ದು. (ಯಾಕೋ. 1:17) ಬೈಬಲ್ ಮೇಲೆ ನಮಗೆ ಗೌರವ ಇದೆ ಅಂತ ತೋರಿಸ್ಬೇಕು. ಹೇಗೆ? ಅದನ್ನ ಪ್ರತಿದಿನ ಓದ್ಬೇಕು. ಓದಿದ ವಿಷ್ಯದ ಬಗ್ಗೆ ಯೋಚಿಸ್ಬೇಕು. ಆಗ ಅದನ್ನ ಬರೆಸಿರೋ ದೇವರು ನಾವು ಮಾಡ್ತಿರೋ ಪ್ರಯತ್ನನ ಆಶೀರ್ವದಿಸ್ತಾನೆ. ಇದ್ರಿಂದ ನಾವು ‘ದೇವರ ಬಗ್ಗೆ ಹೆಚ್ಚು ಕಲಿತೀವಿ.’—ಜ್ಞಾನೋ. 2:5.
ಗೀತೆ 37 ಶಾಸ್ತ್ರಗ್ರಂಥ ದೇವರಿಂದ ಪ್ರೇರಿತವಾಗಿದೆ
a ಯೆಹೋವನಿಗೆ ಹತ್ರ ಆಗೋಕೆ ಬೈಬಲ್ ನಮಗೆ ಸಹಾಯ ಮಾಡುತ್ತೆ. ಅದ್ರಲ್ಲಿ ಯೆಹೋವನ ವಿವೇಕ, ನ್ಯಾಯ ಮತ್ತು ಪ್ರೀತಿ ಬಗ್ಗೆ ಇದೆ. ಅದನ್ನ ಈ ಲೇಖನದಲ್ಲಿ ನೋಡೋಣ. ಇದನ್ನ ಓದಿದಾಗ ಬೈಬಲ್ ನಮಗೆ ಯೆಹೋವ ಅಪ್ಪ ಕೊಟ್ಟಿರೋ ಒಂದು ಗಿಫ್ಟ್ ಅಂತ ಗೊತ್ತಾಗುತ್ತೆ, ಅದ್ರ ಮೇಲೆ ಗೌರವನೂ ಜಾಸ್ತಿಯಾಗುತ್ತೆ.