ಅಧ್ಯಯನ ಲೇಖನ 45
ಕ್ರಿಸ್ತನ ಆಜ್ಞೆಯನ್ನು ಪಾಲಿಸೋಕೆ ಸಹಾಯ ಮಾಡಿ
“ಹೊರಟುಹೋಗಿ . . . ಜನರನ್ನು ಶಿಷ್ಯರನ್ನಾಗಿ ಮಾಡಿರಿ; . . . ನಾನು ನಿಮಗೆ ಆಜ್ಞಾಪಿಸಿದ ಎಲ್ಲ ವಿಷಯಗಳನ್ನು ಪಾಲಿಸುವಂತೆ ಅವರಿಗೆ ಬೋಧಿಸಿರಿ.”—ಮತ್ತಾ. 28:19, 20.
ಗೀತೆ 120 ಆಲಿಸಿ, ಪಾಲಿಸಿ, ಹರಸಲ್ಪಡಿ
ಕಿರುನೋಟ a
1. ಮತ್ತಾಯ 28:18-20 ರ ಪ್ರಕಾರ ಯೇಸು ಯಾವ ಆಜ್ಞೆ ಕೊಟ್ಟನು?
ಯೇಸು ಪುನಃ ಜೀವಂತವಾಗಿ ಎದ್ದು ಬಂದ ನಂತ್ರ ಗಲಿಲಾಯದಲ್ಲಿ ತನ್ನ ಶಿಷ್ಯರಿಗೆ ಕಾಣಿಸಿಕೊಂಡ. ಆಗ ಅವನು ಅವ್ರಿಗೆ ಒಂದು ಮುಖ್ಯ ವಿಷಯ ಹೇಳಬೇಕಂತಿದ್ದನು. ಅದೇನು? ಅವನು ಏನು ಹೇಳಿದ ಅಂತ ಮತ್ತಾಯ 28:18-20 ರಲ್ಲಿದೆ.—ಓದಿ.
2. ಈ ಲೇಖನದಲ್ಲಿ ಯಾವ ಪ್ರಶ್ನೆಗಳಿಗೆ ಉತ್ತರ ತಿಳ್ಕೊಳ್ತೇವೆ?
2 ಜನರನ್ನು ಶಿಷ್ಯರನ್ನಾಗಿ ಮಾಡಿ ಅಂತ ಯೇಸು ಕೊಟ್ಟ ಆಜ್ಞೆ ಇವತ್ತಿರೋ ಪ್ರತಿಯೊಬ್ಬ ದೇವ ಸೇವಕರಿಗೂ ಅನ್ವಯವಾಗುತ್ತೆ. ಹಾಗಾಗಿ ನಾವೀಗ ಯೇಸು ಕೊಟ್ಟ ಕೆಲಸಕ್ಕೆ ಸಂಬಂಧಿಸಿದ ಮೂರು ಪ್ರಶ್ನೆಗಳಿಗೆ ಉತ್ತರ ತಿಳ್ಕೊಳ್ಳೋಣ. (1) ವಿದ್ಯಾರ್ಥಿಗೆ ದೇವರ ಆಜ್ಞೆಗಳನ್ನು ಕಲಿಸೋದ್ರ ಜೊತೆಗೆ ನಾವು ಇನ್ನೂ ಏನು ಮಾಡ್ಬೇಕು? (2) ವಿದ್ಯಾರ್ಥಿ ಪ್ರಗತಿ ಮಾಡೋಕೆ ಸಭೆಯಲ್ಲಿರೋ ಎಲ್ಲಾ ಪ್ರಚಾರಕರು ಏನು ಮಾಡ್ಬಹುದು? (3) ನಿಷ್ಕ್ರಿಯ ಪ್ರಚಾರಕರು ಶಿಷ್ಯರನ್ನಾಗಿ ಮಾಡೋ ಕೆಲಸವನ್ನು ಪುನಃ ಶುರುಮಾಡಲು ನಾವು ಅವ್ರಿಗೆ ಹೇಗೆ ಸಹಾಯ ಮಾಡ್ಬಹುದು?
ಕ್ರಿಸ್ತನ ಆಜ್ಞೆಗಳನ್ನು ಪಾಲಿಸಲು ಕಲಿಸಿ
3. ಯೇಸು ನಮಗೆ ಏನು ಮಾಡೋಕೆ ಹೇಳಿದ್ದಾನೆ?
3 ಯೇಸು ನಾವೇನು ಮಾಡ್ಬೇಕಂತ ಸ್ಪಷ್ಟವಾಗಿ ಹೇಳಿದ್ದಾನೆ. ಅವನು ಕೊಟ್ಟ ಆಜ್ಞೆಗಳನ್ನು ನಾವು ಜನ್ರಿಗೆ ಕಲಿಸ್ಬೇಕು. ಆದ್ರೆ ಇದ್ರ ಜೊತೆಗೆ ನಾವು ಇನ್ನೂ ಒಂದು ವಿಷ್ಯ ಮಾಡ್ಬೇಕು. ಯೇಸು, ‘ನಾನು ನಿಮಗೆ ಆಜ್ಞಾಪಿಸಿದ ಎಲ್ಲ ವಿಷಯಗಳನ್ನು ಅವರಿಗೆ ಬೋಧಿಸಿರಿ’ ಅಂತ ಹೇಳಲಿಲ್ಲ. ಬದ್ಲಿಗೆ, “ನಾನು ನಿಮಗೆ ಆಜ್ಞಾಪಿಸಿದ ಎಲ್ಲ ವಿಷಯಗಳನ್ನು ಪಾಲಿಸುವಂತೆ ಅವರಿಗೆ ಬೋಧಿಸಿರಿ” ಅಂತ ಹೇಳಿದನು. ಯೇಸು ಹೇಳಿದ ಈ ಮಾತನ್ನ ಅನ್ವಯಿಸಬೇಕಂದ್ರೆ ನಾವು ಬೈಬಲ್ ವಿದ್ಯಾರ್ಥಿಗಳಿಗೆ, ಅವ್ರೇನು ಮಾಡ್ಬೇಕು ಅನ್ನೋದನ್ನ ಮಾತ್ರವಲ್ಲ ಅವ್ರದನ್ನ ಹೇಗೆ ಮಾಡ್ಬೇಕು ಅನ್ನೋದನ್ನೂ ಕಲಿಸ್ಬೇಕು. (ಅ. ಕಾ. 8:31) ಆದ್ರೆ ನಾವಿದನ್ನು ಯಾಕೆ ಮಾಡ್ಬೇಕು?
4. ಯೇಸುವಿನ ಆಜ್ಞೆಗಳನ್ನ ಪಾಲಿಸೋಕೆ ವಿದ್ಯಾರ್ಥಿಗೆ ನಾವು ಹೇಗೆ ಕಲಿಸಬಹುದು ಅನ್ನೋದಕ್ಕೆ ಒಂದು ಉದಾಹರಣೆ ಕೊಡಿ.
4 ಆಜ್ಞೆಯನ್ನು ‘ಪಾಲಿಸೋದು’ ಅಂದ್ರೆ ಅದ್ರ ಪ್ರಕಾರ ನಡ್ಕೊಳ್ಳೋದು ಅಂತ ಅರ್ಥ. ಯೇಸುವಿನ ಆಜ್ಞೆಗಳನ್ನ ಪಾಲಿಸೋಕೆ ಅಥ್ವಾ ಅವುಗಳ ಪ್ರಕಾರ ನಡ್ಕೊಳ್ಳೋಕೆ ಒಬ್ಬ ವ್ಯಕ್ತಿಗೆ ನಾವು ಹೇಗೆ ಕಲಿಸಬಹುದು ಅಂತ ತಿಳ್ಕೊಳ್ಳಲು ಒಂದು ಉದಾಹರಣೆ ನೋಡೋಣ. ಡ್ರೈವಿಂಗ್ ಕಲಿಸೋ ವ್ಯಕ್ತಿ ತನ್ನ ವಿದ್ಯಾರ್ಥಿಗೆ ಟ್ರಾಫಿಕ್ ನಿಯಮಗಳನ್ನು ಪಾಲಿಸೋಕೆ ಹೇಗೆ ಕಲಿಸ್ತಾನೆ? ಮೊದ್ಲು ಅವನು, ಯಾವೆಲ್ಲಾ ಟ್ರಾಫಿಕ್ ನಿಯಮಗಳಿವೆ ಅಂತ ವಿದ್ಯಾರ್ಥಿಗಳಿಗೆ ಕ್ಲಾಸಲ್ಲಿ ವಿವರಿಸಬಹುದು. ಆದ್ರೆ ಆ ನಿಯಮಗಳನ್ನು ವಿದ್ಯಾರ್ಥಿ ಪಾಲಿಸೋಕೆ ಕಲಿಬೇಕಂದ್ರೆ ಶಿಕ್ಷಕ ಇನ್ನೂ ಒಂದು ವಿಷ್ಯ ಮಾಡ್ಬೇಕು. ವಿದ್ಯಾರ್ಥಿ ರಸ್ತೆಯಲ್ಲಿ ಡ್ರೈವಿಂಗ್ ಮಾಡ್ವಾಗ ಅವನ ಜೊತೆಯಲ್ಲಿ ಕೂತು, ಕ್ಲಾಸಲ್ಲಿ ಕಲಿತ ನಿಯಮಗಳನ್ನ ಹೇಗೆ ಅನ್ವಯಿಸಿಕೊಳ್ಳೋದು ಅಂತ ತೋರಿಸಿಕೊಡ್ಬೇಕು. ಈ ಉದಾಹರಣೆಯಿಂದ ನಾವೇನು ಕಲಿಬಹುದು?
5. (ಎ) ಯೋಹಾನ 14:15; 1 ಯೋಹಾನ 2:3 ರ ಪ್ರಕಾರ ನಾವು ವಿದ್ಯಾರ್ಥಿಗೆ ಏನು ಮಾಡೋಕೆ ಕಲಿಸ್ಬೇಕು? (ಬಿ) ನಾವಿದನ್ನು ಹೇಗೆಲ್ಲಾ ಮಾಡ್ಬಹುದು?
5 ನಾವು ಬೇರೆಯವ್ರಿಗೆ ಬೈಬಲ್ ಸ್ಟಡಿ ಮಾಡ್ವಾಗ ದೇವರ ಆಜ್ಞೆಗಳನ್ನು ಕಲಿಸ್ತೇವೆ. ಆದ್ರೆ ಇದನ್ನ ಮಾಡಿದ್ರಷ್ಟೇ ಸಾಕಾಗಲ್ಲ. ಆ ಆಜ್ಞೆಗಳನ್ನು ಪ್ರತಿದಿನ ತಮ್ಮ ಜೀವನದಲ್ಲಿ ಹೇಗೆ ಅನ್ವಯಿಸಿಕೊಳ್ಬೇಕು ಅಂತ ನಮ್ಮ ವಿದ್ಯಾರ್ಥಿಗಳಿಗೆ ಕಲಿಸ್ಬೇಕು. (ಯೋಹಾನ 14:15; 1 ಯೋಹಾನ 2:3 ಓದಿ.) ಸ್ಕೂಲ್‌ನಲ್ಲಿ, ಕೆಲಸದ ಸ್ಥಳದಲ್ಲಿ ಅಥ್ವಾ ಮನೋರಂಜನೆ ವಿಷ್ಯದಲ್ಲಿ ನಾವು ಬೈಬಲ್ ತತ್ವಗಳನ್ನು ಹೇಗೆ ಅನ್ವಯಿಸಿಕೊಳ್ತೇವೆ ಅಂತ ವಿದ್ಯಾರ್ಥಿಗೆ ನಮ್ಮ ಮಾದರಿ ಮೂಲಕ ತೋರಿಸಿಕೊಡ್ಬೇಕು. ಬೈಬಲ್ ತತ್ವವನ್ನು ನಮ್ಮ ಜೀವನದಲ್ಲಿ ಅನ್ವಯಿಸಿದ್ರಿಂದ ಅಪಾಯದಿಂದ ಹೇಗೆ ತಪ್ಪಿಸಿಕೊಳ್ಳೋಕಾಯ್ತು ಅಥ್ವಾ ಒಳ್ಳೇ ನಿರ್ಣಯಗಳನ್ನ ಮಾಡೋಕೆ ಬೈಬಲ್ ತತ್ವ ನಮ್ಗೆ ಹೇಗೆ ಸಹಾಯ ಮಾಡ್ತು ಅಂತ ವಿದ್ಯಾರ್ಥಿಗೆ ವಿವರಿಸ್ಬೇಕು. ವಿದ್ಯಾರ್ಥಿ ಜೊತೆಯಲ್ಲಿರುವಾಗ ಅವ್ರಿಗಾಗಿ ಯೆಹೋವನತ್ರ ಪ್ರಾರ್ಥಿಸಬೇಕು. ಅವ್ರು ಕಲಿತ ವಿಷ್ಯನ ತಮ್ಮ ಜೀವನದಲ್ಲಿ ಅನ್ವಯಿಸಿಕೊಳ್ಳೋಕೆ ಪವಿತ್ರಾತ್ಮದ ಸಹಾಯ ಕೊಡುವಂತೆ ಕೇಳಿಕೊಳ್ಬೇಕು.—ಯೋಹಾ. 16:13.
6. ವಿದ್ಯಾರ್ಥಿ ಯೇಸುವಿನ ಆಜ್ಞೆಗಳನ್ನ ಪಾಲಿಸೋಕೆ ನಾವು ಇನ್ನೂ ಏನೆಲ್ಲಾ ಮಾಡ್ಬೇಕು?
6 ವಿದ್ಯಾರ್ಥಿ ಯೇಸುವಿನ ಆಜ್ಞೆಗಳನ್ನ ಪಾಲಿಸಬೇಕಂದ್ರೆ ನಾವು ಇನ್ನೂ ಏನೆಲ್ಲಾ ಮಾಡ್ಬೇಕು? ಜನ್ರನ್ನ ಶಿಷ್ಯರನ್ನಾಗಿ ಮಾಡ್ಬೇಕು ಅನ್ನೋ ಆಸೆಯನ್ನ ಬೆಳೆಸಿಕೊಳ್ಳೋಕೆ ನಾವು ವಿದ್ಯಾರ್ಥಿಗೆ ಸಹಾಯ ಮಾಡ್ಬೇಕು. ಆದ್ರೆ ಕೆಲವು ವಿದ್ಯಾರ್ಥಿಗಳಿಗೆ, ಜನರ ಹತ್ರ ಹೋಗಿ ಸಾರೋದನ್ನ ನೆನಸಿಕೊಂಡ್ರೆನೇ ಭಯ ಆಗುತ್ತೆ. ಆಗ ನಾವು ತಾಳ್ಮೆ ತೋರಿಸಬೇಕು. ಅವ್ರ ನಂಬಿಕೆ ಬಲವಾಗಲಿಕ್ಕೋಸ್ಕರ ನಾವು ಬೈಬಲಿನಲ್ಲಿರೋ ಸತ್ಯಗಳನ್ನ ಚೆನ್ನಾಗಿ ಅರ್ಥ ಮಾಡಿಸಬೇಕು. ಆಗ ಆ ಸತ್ಯಗಳು ಅವ್ರ ಹೃದಯದಲ್ಲಿ ನಾಟುತ್ತೆ ಮತ್ತೆ ಅವ್ರು ಸಾರಲಿಕ್ಕೆ ಮುಂದೆ ಬರ್ತಾರೆ. ವಿದ್ಯಾರ್ಥಿ ಬೇರೆಯವ್ರಿಗೆ ಸುವಾರ್ತೆ ಸಾರೋ ಆಸೆಯನ್ನ ಬೆಳೆಸಿಕೊಳ್ಳೋಕೆ ನಾವು ಹೇಗೆಲ್ಲಾ ಸಹಾಯ ಮಾಡ್ಬಹುದು?
7. ಜನ್ರಿಗೆ ಸುವಾರ್ತೆ ಸಾರೋ ಆಸೆ ಬೆಳೆಸಿಕೊಳ್ಳೋಕೆ ನಾವು ವಿದ್ಯಾರ್ಥಿಗೆ ಹೇಗೆ ಸಹಾಯಮಾಡಬಹುದು?
7 ನಮ್ಮ ಬೈಬಲ್ ವಿದ್ಯಾರ್ಥಿಗೆ ನಾವು ಈ ಪ್ರಶ್ನೆಗಳನ್ನ ಕೇಳ್ಬಹುದು: “ಬೈಬಲಿನಲ್ಲಿರೋ ವಿಷಯಗಳನ್ನ ಅನ್ವಯಿಸಿಕೊಂಡಿದ್ರಿಂದ ನಿಮಗೆ ಯಾವ ಪ್ರಯೋಜನ ಆಗಿದೆ? ಬೈಬಲಿನಲ್ಲಿರೋ ಈ ವಿಷ್ಯಗಳನ್ನ ಬೇರೆಯವ್ರು ಸಹ ತಿಳ್ಕೊಳ್ಳೋದು ಪ್ರಾಮುಖ್ಯ ಅಂತ ನಿಮಗನಿಸುತ್ತಾ? ಅವ್ರಿಗೆ ಸಹಾಯ ಮಾಡೋಕೆ ನೀವೇನು ಮಾಡ್ಬಹುದು?” (ಜ್ಞಾನೋ. 3:27; ಮತ್ತಾ. 9:37, 38) ಬೋಧನಾ ಸಲಕರಣೆಯಲ್ಲಿರೋ ಕರಪತ್ರಗಳನ್ನ ವಿದ್ಯಾರ್ಥಿಗೆ ತೋರಿಸಿ. ಅವ್ನ ಸಂಬಂಧಿಕರಿಗೆ ಸ್ನೇಹಿತರಿಗೆ ಮತ್ತು ಅವ್ನ ಜೊತೆ ಕೆಲ್ಸ ಮಾಡೋರಿಗೆ ಯಾವ ಕರಪತ್ರ ಕೊಟ್ರೆ ಚೆನ್ನಾಗಿರುತ್ತೆ ಅಂತ ಅವನನ್ನೇ ಕೇಳಿ. b ಅವ್ನು ಯಾವ ಕರಪತ್ರಗಳನ್ನ ಆರಿಸ್ತಾನೋ ಅವುಗಳ ಅನೇಕ ಪ್ರತಿಗಳನ್ನ ಕೊಡಿ. ನಂತ್ರ ಅವ್ನು ಪ್ರೀತಿ ಗೌರವದಿಂದ ಮಾತಾಡ್ತಾ ಈ ಕರಪತ್ರವನ್ನ ಹೇಗೆ ಕೊಡಬಹುದು ಅಂತ ಪ್ರ್ಯಾಕ್ಟೀಸ್ ಮಾಡಿಸಿ. ಮುಂದೆ ಅವ್ನು ಪ್ರಚಾರಕನಾದಾಗ ನೀವು ಅವ್ನ ಜೊತೆ ಸೇವೆಗೆ ಹೋಗಿ ಮತ್ತು ಜನರ ಹತ್ರ ಹೇಗೆ ಮಾತಾಡ್ಬಹುದು ಅಂತ ತೋರಿಸಿ.—ಪ್ರಸಂ. 4:9, 10; ಲೂಕ 6:40.
ವಿದ್ಯಾರ್ಥಿ ಪ್ರಗತಿ ಮಾಡಲು ಸಭೆಯವ್ರು ಹೇಗೆ ಸಹಾಯ ಮಾಡಬಹುದು?
8. ವಿದ್ಯಾರ್ಥಿ ದೇವರ ಮೇಲೆ ಮತ್ತು ನೆರೆಯವ್ರ ಮೇಲೆ ಯಾಕೆ ಹೆಚ್ಚು ಪ್ರೀತಿ ಬೆಳೆಸಿಕೊಳ್ಳಬೇಕು? (“ ವಿದ್ಯಾರ್ಥಿಯು ದೇವರನ್ನ ಇನ್ನೂ ಹೆಚ್ಚು ಪ್ರೀತಿಸೋಕೆ ನಾವು ಹೇಗೆ ಸಹಾಯ ಮಾಡಬಹುದು?” ಅನ್ನೋ ಚೌಕ ನೋಡಿ.)
8 ಯೇಸು ಹೇಳಿದ ಹಾಗೆ ನಾವು ಆತನು ಆಜ್ಞಾಪಿಸಿದ “ಎಲ್ಲ ವಿಷಯಗಳನ್ನು ಪಾಲಿಸುವಂತೆ” ವಿದ್ಯಾರ್ಥಿಗೆ ಕಲಿಸಬೇಕು ಅನ್ನೋದನ್ನ ಮರೀಬೇಡಿ. ಅವುಗಳಲ್ಲಿ ಎರಡು ಮುಖ್ಯ ಆಜ್ಞೆಗಳು ಯಾವುದೆಂದ್ರೆ, (1) ದೇವರನ್ನ ಪ್ರೀತಿಸಬೇಕು (2) ನೆರೆಯವರನ್ನ ಪ್ರೀತಿಸಬೇಕು. (ಮತ್ತಾ. 22:37-39) ನಾವು ಈ ಎರಡು ಆಜ್ಞೆಗಳನ್ನ ಪಾಲಿಸೋಕೆ ವಿದ್ಯಾರ್ಥಿಗೆ ಸಹಾಯ ಮಾಡಿದ್ರೆ ಸುವಾರ್ತೆ ಸಾರೋಕೂ ಅವನಿಗೆ ಪ್ರೇರೇಪಣೆ ಕೊಟ್ಟ ಹಾಗಾಗುತ್ತೆ. ಇದನ್ನ ಹೇಗೆ ಹೇಳಬಹುದು? ಅವನಿಗೆ ದೇವರ ಮತ್ತು ಜನರ ಮೇಲಿರೋ ಪ್ರೀತಿ ಹೆಚ್ಚಾಗ್ತಾ ಹೋದ ಹಾಗೆ ಸ್ವತಃ ಅವನೇ ಸುವಾರ್ತೆ ಸಾರೋಕೆ ಮುಂದೆ ಬರ್ತಾನೆ. ಆದ್ರೆ ಕೆಲವು ವಿದ್ಯಾರ್ಥಿಗಳಿಗೆ ಸಾವಾರ್ತೆ ಸಾರೋಕೆ ಭಯ ಆಗಬಹುದು. ಆಗ ನಾವು, ಯೆಹೋವನ ಸಹಾಯದಿಂದ ಈ ಮನುಷ್ಯರ ಭಯವನ್ನ ಹಂತ ಹಂತವಾಗಿ ಮೆಟ್ಟಿ ನಿಲ್ಲೋಕೆ ಆಗುತ್ತೆ ಅಂತ ವಿದ್ಯಾರ್ಥಿಗೆ ಭರವಸೆ ನೀಡಬಹುದು. (ಕೀರ್ತ. 18:1-3; ಜ್ಞಾನೋ. 29:25) ವಿದ್ಯಾರ್ಥಿ ದೇವರನ್ನ ಇನ್ನೂ ಹೆಚ್ಚು ಪ್ರೀತಿಸೋಕೆ ನಾವೇನು ಮಾಡಬೇಕು ಅಂತ ಈ ಲೇಖನದ ಜೊತೆ ಇರೋ ಚೌಕದಲ್ಲಿದೆ. ಪ್ರೀತಿಸೋ ವಿಷ್ಯದಲ್ಲಿ ವಿದ್ಯಾರ್ಥಿಗೆ ಸಭೆಯವ್ರು ಕೂಡ ಸಹಾಯ ಮಾಡಬೇಕು. ಅವ್ರೇನು ಮಾಡಬೇಕು ಅನ್ನೋದನ್ನ ಈಗ ನೋಡೋಣ.
9. ಡ್ರೈವಿಂಗ್ ಬಗ್ಗೆ ಪ್ರಾಮುಖ್ಯ ಪಾಠಗಳನ್ನ ವಿದ್ಯಾರ್ಥಿ ಹೇಗೆ ಕಲಿಯುತ್ತಾನೆ?
9 ಡ್ರೈವಿಂಗ್ ಕಲಿಯುತ್ತಿರೋ ವಿದ್ಯಾರ್ಥಿಯ ಉದಾಹರಣೆಯನ್ನ ಪುನಃ ನೋಡೋಣ. ಅವ್ನು ರಸ್ತೆಯಲ್ಲಿ ಡ್ರೈವಿಂಗ್ ಮಾಡುವಾಗ ಹೇಗೆಲ್ಲಾ ಕಲೀಬಹುದು? ಪಕ್ಕದಲ್ಲಿ ಕುಳಿತಿರೋ ಶಿಕ್ಷಕ ಹೇಳೋದನ್ನ ಕೇಳಿಸಿಕೊಳ್ಳೋ ಮೂಲಕ ಮತ್ತು ಬೇರೆ ಚಾಲಕರನ್ನ ಗಮನಿಸೋ ಮೂಲಕ ಕಲಿಬಹುದು. ಒಬ್ಬ ಡ್ರೈವರ್ ಬೇರೊಬ್ಬರಿಗೆ ತನಗಿಂತ ಮುಂದೆ ಹೋಗೋಕೆ ಹೇಗೆ ಬಿಟ್ಟುಕೊಡ್ತಿದ್ದಾನೆ ಅಂತ ಶಿಕ್ಷಕನು ತನ್ನ ವಿದ್ಯಾರ್ಥಿಗೆ ತೋರಿಸಬಹುದು ಅಥವಾ ಒಬ್ಬ ಡ್ರೈವರ್ ಎದುರುಗಡೆ ಬರುತ್ತಿರೋ ಚಾಲಕರ ಕಣ್ಣಿಗೆ ಬೆಳಕು ಹೊಡೆಯದಂತೆ ತನ್ನ ಗಾಡಿಯ ಬೆಳಕನ್ನ ಕಡಿಮೆ (ಲೈಟ್ ಡಿಮ್) ಮಾಡ್ತಿರೋದನ್ನ ಶಿಕ್ಷಕ ವಿದ್ಯಾರ್ಥಿಗೆ ತೋರಿಸಬಹುದು. ಶಿಕ್ಷಕನು ಈ ರೀತಿ ಕಲಿಸಿದ್ರೆ ವಿದ್ಯಾರ್ಥಿ ಡ್ರೈವಿಂಗ್ ಮಾಡುವಾಗ ಆ ಪಾಠಗಳನ್ನು ಅನ್ವಯಿಸಿಕೊಳ್ತಾನೆ.
10. ಬೈಬಲ್ ವಿದ್ಯಾರ್ಥಿ ಯೆಹೋವನಿಗೆ ಆಪ್ತನಾಗೋಕೆ ಇನ್ನೂ ಏನೆಲ್ಲಾ ಮಾಡಬೇಕು?
10 ಬೈಬಲ್ ವಿದ್ಯಾರ್ಥಿಯು ಜೀವದ ದಾರಿಯಲ್ಲಿ ನಡೆಯೋಕೆ ಶುರುಮಾಡಿದಾಗ ತನ್ನ ಶಿಕ್ಷಕನಿಂದ ಮಾತ್ರ ಅಲ್ಲ ಯೆಹೋವನ ಬೇರೆ ಸೇವಕರ ಮಾದರಿಯಿಂದಲೂ ಕಲಿತುಕೊಳ್ತಾನೆ. ವಿದ್ಯಾರ್ಥಿ ಯೆಹೋವನಿಗೆ ಆಪ್ತನಾಗಬೇಕು ಅಂದ್ರೆ ಕ್ರೈಸ್ತ ಕೂಟಗಳಿಗೆ ಹಾಜರಾಗೋದು ತುಂಬಾ ಮುಖ್ಯ. ಯಾಕಂದ್ರೆ ಕ್ರೈಸ್ತ ಕೂಟಗಳಲ್ಲಿ ತಿಳಿಸಲಾಗೋ ವಿಷ್ಯಗಳಿಂದ ವಿದ್ಯಾರ್ಥಿಗೆ ಬೈಬಲ್ ಬಗ್ಗೆ ಇರೋ ಜ್ಞಾನ ಹೆಚ್ಚಾಗುತ್ತೆ. ದೇವರ ಮೇಲಿರೋ ನಂಬಿಕೆ, ಪ್ರೀತಿ ಕೂಡ ಹೆಚ್ಚಾಗುತ್ತೆ. (ಅ. ಕಾ. 15:30-32) ಬೈಬಲ್ ವಿದ್ಯಾರ್ಥಿ ಇರುವಂಥದ್ದೇ ಸನ್ನಿವೇಶದಲ್ಲಿರೋ ಸಹೋದರ ಸಹೋದರಿಯರು ಸಭೆಯಲ್ಲಿ ಇರಬಹುದು. ಅಂಥವ್ರಿಗೆ ಬೈಬಲ್ ಶಿಕ್ಷಕನು ತನ್ನ ವಿದ್ಯಾರ್ಥಿಯನ್ನು ಪರಿಚಯಿಸಬಹುದು. ಆಗ ವಿದ್ಯಾರ್ಥಿ, ದೇವರ ಮೇಲಿರೋ ಪ್ರೀತಿಯನ್ನ ಈ ಸಹೋದರ ಸಹೋದರಿಯರು ಹೇಗೆ ತೋರಿಸ್ತಿದ್ದಾರೆ ಅಂತ ನೋಡ್ತಾನೆ. ಅಂಥ ಕೆಲವು ಸನ್ನಿವೇಶಗಳನ್ನ ಈಗ ನೋಡೋಣ.
11. (ಎ) ವಿದ್ಯಾರ್ಥಿ ಸಭೆಯಲ್ಲಿರೋ ಸಹೋದರ ಸಹೋದರಿಯರ ಬಗ್ಗೆ ಏನನ್ನು ಗಮನಿಸಬಹುದು? (ಬಿ) ಇದನ್ನ ಗಮನಿಸಿದಾಗ ವಿದ್ಯಾರ್ಥಿಗೆ ಏನು ಅನಿಸಬಹುದು?
11 ಒಬ್ಬ ಬೈಬಲ್ ವಿದ್ಯಾರ್ಥಿ ತನ್ನ ಮಕ್ಕಳನ್ನ ಒಂಟಿಯಾಗಿ ಬೆಳೆಸ್ತಿರೋದಾದ್ರೆ ಸಭೆಯಲ್ಲಿ ತನ್ನಂಥದ್ದೇ ಸನ್ನಿವೇಶದಲ್ಲಿರೋ ಸಹೋದರಿಯಿಂದ ಅನೇಕ ವಿಷಯಗಳನ್ನು ಕಲಿಯೋಕಾಗುತ್ತೆ. ಆ ಸಹೋದರಿ ತನ್ನ ಪುಟ್ಟ ಮಕ್ಕಳನ್ನು ರಾಜ್ಯ ಸಭಾಗೃಹಕ್ಕೆ ಕರ್ಕೊಂಡು ಬರೋಕೆ ಹಾಕೋ ಪ್ರಯತ್ನವನ್ನ ನೋಡುವಾಗ ವಿದ್ಯಾರ್ಥಿಗೆ ತಾನು ಸಹ ಇದೇ ರೀತಿ ಪ್ರಯತ್ನ ಹಾಕಬೇಕು ಅಂತ ಪ್ರೇರೇಪಣೆ ಸಿಗುತ್ತೆ. ಒಬ್ಬ ವಿದ್ಯಾರ್ಥಿ ಸಿಗರೇಟ್ ಸೇದೋದನ್ನ ಬಿಡೋಕೆ ತುಂಬ ಕಷ್ಟ ಪಡ್ತಾ ಇರ್ತಾನೆ. ಅವ್ನಿಗೆ, ಈ ದುಶ್ಚಟವನ್ನ ಬಿಟ್ಟುಬಿಟ್ಟ ಒಬ್ಬ ಸಹೋದರನ ಪರಿಚಯ ಆಗುತ್ತೆ. ಯೆಹೋವನ ಮೇಲಿರೋ ಪ್ರೀತಿ ಹೆಚ್ಚಾಗ್ತಾ ಹೋದ ಹಾಗೆ ಆತನ ಆಜ್ಞೆಯನ್ನ ಪಾಲಿಸೋಕೆ ಪ್ರಚೋದನೆ ಸಿಗ್ತು ಅಂತ ಆ ಸಹೋದರ ವಿದ್ಯಾರ್ಥಿಗೆ ಹೇಳ್ತಾನೆ. (2 ಕೊರಿಂ. 7:1; ಫಿಲಿ. 4:13) ಅಷ್ಟೇ ಅಲ್ಲ ತಾನು ಈ ದುಶ್ಚಟವನ್ನು ಹೇಗೆ ಬಿಟ್ಟೆ ಅಂತ ಹೇಳ್ತಾ “ನಿನ್ನಿಂದನೂ ಇದನ್ನ ಮಾಡೋಕಾಗುತ್ತೆ” ಅಂತ ವಿದ್ಯಾರ್ಥಿಗೆ ಹೇಳ್ತಾನೆ. ಆಗ ವಿದ್ಯಾರ್ಥಿಗೆ, ತಾನು ಸಹ ಸಿಗರೇಟು ಸೇದೋದನ್ನ ಬಿಡೋಕಾಗುತ್ತೆ ಅಂತ ಅನಿಸುತ್ತೆ. ಬೈಬಲ್ ಕಲಿಯುತ್ತಿರೋ ಯುವ ವಿದ್ಯಾರ್ಥಿ ಸಭೆಯಲ್ಲಿರೋ ಒಬ್ಬ ಯುವ ಸಹೋದರಿ ಯಾವಾಗ್ಲೂ ಖುಷಿಯಾಗಿರೋದನ್ನ ಗಮನಿಸ್ತಾಳೆ. ಅವಳು ಇಷ್ಟೊಂದು ಖುಷಿಯಾಗಿರೋಕೆ ಏನು ಕಾರಣ ಅಂತ ತಿಳ್ಕೊಳ್ಳೋಕೆ ವಿದ್ಯಾರ್ಥಿ ಬಯಸ್ತಾಳೆ.
12. ಸಭೆಯಲ್ಲಿರೋ ಪ್ರತಿಯೊಬ್ರೂ ಬೈಬಲ್ ವಿದ್ಯಾರ್ಥಿಗೆ ಸಹಾಯ ಮಾಡೋಕಾಗುತ್ತೆ ಅಂತ ಹೇಗೆ ಹೇಳಬಹುದು?
12 ವಿದ್ಯಾರ್ಥಿಗೆ ನಂಬಿಗಸ್ತ ಸಹೋದರ ಸಹೋದರಿಯರ ಪರಿಚಯ ಆದಾಗ ಅವ್ರು ದೇವರ ಮತ್ತು ಕ್ರಿಸ್ತನ ಆಜ್ಞೆಯನ್ನ ಹೇಗೆ ಪಾಲಿಸ್ತಿದ್ದಾರೆ ಅಂತ ಗಮನಿಸ್ತಾನೆ ಮತ್ತು ತಾನು ಸಹ ಅದೇ ತರ ಮಾಡೋಕೆ ಕಲಿತುಕೊಳ್ತಾನೆ. (ಯೋಹಾ. 13:35; 1 ತಿಮೊ. 4:12) ಅಷ್ಟೇ ಅಲ್ಲ ನಾವು ಈಗಾಗ್ಲೇ ನೋಡಿದ ಹಾಗೆ ತನಗಿರುವಂಥದ್ದೇ ಸಮಸ್ಯೆಗಳನ್ನ ಎದುರಿಸ್ತಿರೋ ಸಹೋದರ ಸಹೋದರಿಯರಿಂದ ವಿದ್ಯಾರ್ಥಿ ಅನೇಕ ವಿಷಯಗಳನ್ನು ಕಲಿತುಕೊಳ್ತಾನೆ. ಕ್ರಿಸ್ತನ ಶಿಷ್ಯನಾಗೋಕೆ ಮಾಡಬೇಕಾಗಿರೋದನ್ನೆಲ್ಲಾ ತನ್ನಿಂದ ಮಾಡೋಕೆ ಆಗುತ್ತೆ ಅಂತ ವಿದ್ಯಾರ್ಥಿ ಅವರ ಮಾದರಿಯಿಂದ ಕಲಿತುಕೊಳ್ತಾನೆ. (ಧರ್ಮೋ. 30:11) ಹೀಗೆ ಒಬ್ಬ ವಿದ್ಯಾರ್ಥಿ ಪ್ರಗತಿ ಮಾಡಲು ಸಭೆಯಲ್ಲಿರೋ ಪ್ರತಿಯೊಬ್ರೂ ಸಹಾಯ ಮಾಡೋಕಾಗುತ್ತೆ. (ಮತ್ತಾ. 5:16) ನಿಮ್ಮ ಸಭೆಗೆ ಬರುತ್ತಿರೋ ಬೈಬಲ್ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಕೊಡೋಕೆ ನೀವೇನೆಲ್ಲಾ ಮಾಡ್ತಿದ್ದೀರಾ?
ನಿಷ್ಕ್ರಿಯರಿಗೆ ಸಹಾಯ ಮಾಡಿ
13-14. ಕುಗ್ಗಿಹೋಗಿದ್ದ ಅಪೊಸ್ತಲರ ಜೊತೆ ಯೇಸು ಹೇಗೆ ನಡ್ಕೊಂಡನು?
13 ನಿಷ್ಕ್ರಿಯರಾದ ನಮ್ಮ ಸಹೋದರ ಸಹೋದರಿಯರು ಪುನಃ ಸಾರಬೇಕು, ಜನರನ್ನ ಶಿಷ್ಯರನ್ನಾಗಿ ಮಾಡಬೇಕು ಅಂತ ನಾವು ಬಯಸ್ತೇವೆ. ಹಾಗಾಗಬೇಕಂದ್ರೆ ನಾವು ಅವ್ರಿಗೆ ಸಹಾಯ ಮಾಡಬೇಕು. ಆದ್ರೆ ಇದನ್ನ ಮಾಡೋದು ಹೇಗೆ? ಇದನ್ನ ತಿಳ್ಕೊಳ್ಳೋಕೆ, ಯೇಸು ಕುಗ್ಗಿಹೋಗಿದ್ದ ಅಪೊಸ್ತಲರ ಜೊತೆ ಹೇಗೆ ನಡ್ಕೊಂಡನು ಅಂತ ನೋಡೋಣ.
14 ಜನ್ರು ಯೇಸುವನ್ನ ಕೊಲ್ಲೋ ಸ್ವಲ್ಪ ಮುಂಚೆ ಅವ್ನ “ಶಿಷ್ಯರೆಲ್ಲರೂ ಅವನನ್ನು ಬಿಟ್ಟು ಓಡಿಹೋದರು.” (ಮಾರ್ಕ 14:50; ಯೋಹಾ. 16:32) ಅಪೊಸ್ತಲರು ಕುಗ್ಗಿಹೋದ ಈ ಸಮಯದಲ್ಲಿ ಯೇಸು ಅವ್ರ ಜೊತೆ ಹೇಗೆ ನಡ್ಕೊಂಡನು? ಯೇಸು ಪುನರುತ್ಥಾನವಾದ ಸ್ವಲ್ಪದ್ರಲ್ಲೇ ತನ್ನ ಕೆಲವು ಹಿಂಬಾಲಕಿಯರ ಹತ್ರ ಹೀಗೆ ಹೇಳಿದ್ನು: ‘ಭಯಪಡಬೇಡಿ! [ನಾನು ಜೀವಂತವಾಗಿ ಮತ್ತೆ ಎದ್ದು ಬಂದಿದ್ದೇನೆ ಅಂತ] ನನ್ನ ಸಹೋದರರಿಗೆ ವರದಿಮಾಡಿರಿ.’ (ಮತ್ತಾ. 28:10) ಯೇಸು ತನ್ನ ಶಿಷ್ಯರನ್ನ ದೂರ ಮಾಡ್ಲಿಲ್ಲ. ಅವ್ರು ಯೇಸುವನ್ನ ಬಿಟ್ಟು ಓಡಿಹೋಗಿದ್ರೂ ಯೇಸು ಅವ್ರನ್ನ “ನನ್ನ ಸಹೋದರರು” ಅಂತ ಕರೆದ್ನು. ಯೆಹೋವನ ತರನೇ ಯೇಸು ಕರುಣೆ ತೋರಿಸಿದನು ಮತ್ತು ಕ್ಷಮಿಸಿದನು.—2 ಅರ. 13:23.
15. ನಿಷ್ಕ್ರಿಯ ಸಹೋದರ ಸಹೋದರಿಯರ ಬಗ್ಗೆ ನಮ್ಗೆ ಹೇಗನಿಸಬೇಕು?
15 ನಿಷ್ಕ್ರಿಯ ಪ್ರಚಾರಕರ ಬಗ್ಗೆ ನಮ್ಗೆ ತುಂಬ ಚಿಂತೆ ಇದೆ. ಅವ್ರು ಈಗ್ಲೂ ನಮ್ಮ ಸಹೋದರ ಸಹೋದರಿಯರೇ. ನಾವು ಅವ್ರನ್ನ ತುಂಬ ಪ್ರೀತಿಸ್ತೇವೆ. ಹಿಂದೆ ಅವ್ರು ಮಾಡಿದ ಸೇವೆಯನ್ನ ಮತ್ತು ಯೆಹೋವನಿಗೆ ತೋರಿಸಿದ ಪ್ರೀತಿಯನ್ನ ನಾವು ಮರೆಯೋಕಾಗಲ್ಲ. ಅವ್ರಲ್ಲಿ ಕೆಲವ್ರು ಅನೇಕ ವರ್ಷಗಳ ವರೆಗೆ ಸೇವೆ ಮಾಡಿದಂಥವ್ರು. (ಇಬ್ರಿ. 6:10) ನಮ್ಗೆ ಅವ್ರು ತುಂಬ ನೆನಪಾಗ್ತಾರೆ. (ಲೂಕ 15:4-7) ಹಾಗಾಗಿ ನಿಷ್ಕ್ರಿಯರಾಗಿರೋ ಈ ಸಹೋದರ ಸಹೋದರಿಯರಿಗಾಗಿ ಯೇಸು ತರ ನಾವೇನು ಮಾಡಬಹುದು?
16. ನಿಷ್ಕ್ರಿಯರಾಗಿರೋ ನಮ್ಮ ಸಹೋದರ ಸಹೋದರಿಯರಿಗಾಗಿ ನಾವೇನು ಮಾಡಬಹುದು?
16 ಕೂಟಗಳಿಗೆ ಪ್ರೀತಿಯಿಂದ ಆಮಂತ್ರಿಸಿ. ಕುಗ್ಗಿಹೋಗಿದ್ದ ಅಪೊಸ್ತಲರನ್ನು ಪ್ರೋತ್ಸಾಹಿಸಲಿಕ್ಕಾಗಿ ಯೇಸು ಅವ್ರನ್ನು ಒಂದು ಕಡೆ ಸೇರಿಬರುವಂತೆ ಹೇಳಿದನು. (ಮತ್ತಾ. 28:10; 1 ಕೊರಿಂ. 15:6) ನಮ್ಮ ಸಭೆಯ ನಿಷ್ಕ್ರಿಯ ಸಹೋದರ ಸಹೋದರಿಯರು ಕೂಟಗಳಿಗೆ ಬರ್ತಾ ಇಲ್ಲ ಅಂದ್ರೆ ನಾವು ಅವ್ರನ್ನ ಕ್ರೈಸ್ತ ಕೂಟಗಳಿಗೆ ಹಾಜರಾಗೋಕೆ ಪ್ರೋತ್ಸಾಹಿಸಬಹುದು. ನಾವು ಒಂದೆರೆಡು ಬಾರಿ ಕರೆದ ಕೂಡ್ಲೇ ಬರದೇ ಇರಬಹುದು. ಹಾಗಾಗಿ ಅವ್ರನ್ನ ಪುನಃ ಪುನಃ ಕರೆಯುತ್ತಾ ಇರಬೇಕು. ಅಪೊಸ್ತಲರು ತನ್ನ ಮಾತನ್ನ ಕೇಳಿ ಕೂಟಕ್ಕೆ ಸೇರಿ ಬಂದಾಗ ಯೇಸುಗೆ ತುಂಬ ಖುಷಿಯಾಗಿರುತ್ತೆ.—ಮತ್ತಾಯ 28:16 ಮತ್ತು ಲೂಕ 15:6 ಹೋಲಿಸಿ.
17. ನಿಷ್ಕ್ರಿಯರು ಕೂಟಗಳಿಗೆ ಬಂದಾಗ ನಾವೇನು ಮಾಡಬೇಕು?
17 ಸಂತೋಷದಿಂದ ಸ್ವಾಗತಿಸಿ. ಅಪೊಸ್ತಲರು ಸೇರಿ ಬಂದಾಗ ಯೇಸು ಅವ್ರಿಗೆ ಮುಜುಗರ ಆಗೋ ತರ ನಡ್ಕೊಳ್ಳಲಿಲ್ಲ. ಆತನೇ ಮುಂದೆ ಹೋಗಿ ಅವ್ರ ಹತ್ರ ಮಾತಾಡಿದನು. ಅವ್ರು ಬಂದು ಮಾತಾಡ್ಲಿ ಅಂತ ಕಾಯ್ಲಿಲ್ಲ. (ಮತ್ತಾ. 28:18) ನಿಷ್ಕ್ರಿಯರು ರಾಜ್ಯ ಸಭಾಗೃಹಕ್ಕೆ ಬಂದಾಗ ನಾವು ಹೇಗೆ ನಡ್ಕೊಳ್ತೇವೆ? ಅವ್ರು ಬಂದಾಗ ನಾವೇ ಮುಂದೆ ಹೋಗಿ ಪ್ರೀತಿಯಿಂದ ಸ್ವಾಗತಿಸಬೇಕು. ನಮ್ಗೆ ಅವ್ರ ಹತ್ರ ಏನು ಮಾತಾಡಬೇಕು ಅಂತ ಗೊತ್ತಾಗದೇ ಇರಬಹುದು. ಅವ್ರನ್ನ ನೋಡಿ ತುಂಬ ಖುಷಿ ಆಯ್ತು ಅಂತ ಹೇಳಿದ್ರೂ ಸಾಕು. ಆದ್ರೆ ಅವ್ರಿಗೆ ಮುಜುಗರ ಆಗೋ ತರ ಮಾತಾಡದೇ ಇರೋಕೆ ನಾವು ಎಚ್ಚರವಹಿಸಬೇಕು.
18. ನಿಷ್ಕ್ರಿಯರನ್ನ ನಾವು ಹೇಗೆ ಪ್ರೋತ್ಸಾಹಿಸಬಹುದು?
18 ಅವ್ರನ್ನ ಪ್ರೋತ್ಸಾಹಿಸಿ. ಯೇಸು ತನ್ನ ಶಿಷ್ಯರಿಗೆ ಭೂಮ್ಯಾದ್ಯಂತ ಸಾರಬೇಕು ಅನ್ನೋ ಆಜ್ಞೆ ಕೊಟ್ಟಾಗ ಅವ್ರಿಗೆ ಇದು ತಮ್ಮಿಂದ ಆಗಲ್ಲ ಅಂತ ಅನಿಸಿತು. ಆಗ ಯೇಸು ಅವ್ರನ್ನ ಪ್ರೋತ್ಸಾಹಿಸಲಿಕ್ಕಾಗಿ “ನಾನು . . . ಎಲ್ಲ ದಿವಸ ನಿಮ್ಮ ಸಂಗಡ ಇರುತ್ತೇನೆ” ಅಂತ ಆಶ್ವಾಸನೆ ಕೊಟ್ಟನು. (ಮತ್ತಾ. 28:20) ಇದ್ರಿಂದ ಯಾವ ಫಲಿತಾಂಶ ಸಿಕ್ತು? ಸ್ವಲ್ಪದ್ರಲ್ಲೇ ಅವ್ರು ‘ಬೋಧಿಸೋದ್ರಲ್ಲಿ ಮತ್ತು ಸುವಾರ್ತೆ ಸಾರೋದ್ರಲ್ಲಿ’ ಬಿಝಿಯಾದ್ರು. (ಅ. ಕಾ. 5:42) ನಿಷ್ಕ್ರಿಯ ಸಹೋದರ ಸಹೋದರಿಯರಿಗೆ ಸಹ ಪ್ರೋತ್ಸಾಹದ ಅಗತ್ಯ ಇದೆ. ಪುನಃ ಸಾರೋಕೆ ತಮ್ಮಿಂದ ಆಗಲ್ಲ ಅಂತ ಅವ್ರಿಗೆ ಅನಿಸಬಹುದು. ಆಗ ನಾವು ಅವ್ರಿಗೆ, ಅವ್ರೊಬ್ಬರೇ ಸುವಾರ್ತೆ ಸಾರಬೇಕಾಗಿಲ್ಲ ನಾವೂ ಅವ್ರ ಜೊತೆ ಇದ್ದೇವೆ ಅಂತ ಹೇಳಬಹುದು. ಅವ್ರು ಪುನಃ ಸಾರೋಕೆ ಶುರು ಮಾಡಿದಾಗ ನಾವೂ ಅವ್ರ ಜೊತೆ ಸೇವೆಗೆ ಹೋಗಬಹುದು. ಆಗ ಅವ್ರಿಗೆ ಖಂಡಿತ ಖುಷಿಯಾಗುತ್ತೆ. ನಿಷ್ಕ್ರಿಯರನ್ನ ನಾವು ನಮ್ಮ ಸಹೋದರ ಸಹೋದರಿಯರು ಅಂತ ನೆನಸಬೇಕು. ಅವ್ರ ಜೊತೆ ಒಳ್ಳೇ ರೀತಿ ನಡ್ಕೊಬೇಕು. ಹಾಗೆ ಮಾಡೋದಾದ್ರೆ ಖಂಡಿತ ಅವ್ರು ಪುನಃ ಸಾರೋದನ್ನ ಶುರು ಮಾಡ್ತಾರೆ. ಇದ್ರಿಂದ ಸಭೆಯಲ್ಲಿರೋ ಎಲ್ರಿಗೆ ಖುಷಿಯಾಗುತ್ತೆ.
ನಮಗೆ ಕೊಟ್ಟಿರೋ ಕೆಲಸವನ್ನ ಮಾಡಿ ಮುಗಿಸೋಣ
19. ನಾವು ಏನು ಮಾಡಬೇಕು ಅಂತ ಇಷ್ಟಪಡ್ತೇವೆ ಮತ್ತು ಯಾಕೆ?
19 ಶಿಷ್ಯರನ್ನಾಗಿ ಮಾಡೋ ಕೆಲ್ಸನ ನಾವು ಎಷ್ಟರ ತನಕ ಮಾಡಬೇಕು? ಈ ದುಷ್ಟ ಲೋಕದ ಅಂತ್ಯದ ತನಕ. (ಮತ್ತಾ. 28:20) ಅಲ್ಲಿ ವರೆಗೂ ನಾವು ಯೇಸು ಕೊಟ್ಟ ಈ ಕೆಲ್ಸ ಮಾಡೋಕಾಗುತ್ತಾ? ಖಂಡಿತ ಆಗುತ್ತೆ. ಅದನ್ನ ಮಾಡಲೇಬೇಕು ಅನ್ನೋ ದೃಢ ತೀರ್ಮಾನ ನಮ್ಮದು. ಹಾಗಾಗಿ “ನಿತ್ಯಜೀವಕ್ಕಾಗಿ ಯೋಗ್ಯವಾದ ಮನೋಭಾವ” ಇರೋವ್ರನ್ನ ಹುಡುಕ್ಲಿಕ್ಕಾಗಿ ನಾವು ನಮ್ಮ ಸಮಯ ಶಕ್ತಿ ಹಣವನ್ನ ಸಂತೋಷದಿಂದ ಉಪಯೋಗಿಸ್ತೇವೆ. (ಅ. ಕಾ. 13:48) ಹೀಗೆ ನಾವು ಯೇಸುವಿನ ಮಾದರಿಯನ್ನ ಅನುಕರಿಸ್ತೇವೆ. “ನನ್ನನ್ನು ಕಳುಹಿಸಿದಾತನ ಚಿತ್ತವನ್ನು ಮಾಡಿ ಆತನ ಕೆಲಸವನ್ನು ಪೂರೈಸುವುದೇ ನನ್ನ ಆಹಾರವಾಗಿದೆ” ಅಂತ ಯೇಸು ಹೇಳಿದನು. (ಯೋಹಾ. 4:34; 17:4) ಅದೇ ತರ ನಮಗೂ, ಕೊಟ್ಟಿರೋ ಕೆಲ್ಸವನ್ನ ಮಾಡಿ ಮುಗಿಸಬೇಕು ಅನ್ನೋ ಆಸೆ ಇದೆ. (ಯೋಹಾ. 20:21) ನಮ್ಮ ತರನೇ ನಿಷ್ಕ್ರಿಯರು ಸಹ ಈ ಕೆಲ್ಸವನ್ನ ಮಾಡಿ ಮುಗಿಸಬೇಕು ಅಂತ ಇಷ್ಟಪಡ್ತೇವೆ.—ಮತ್ತಾ. 24:13.
20. ಫಿಲಿಪ್ಪಿ 4:13 ರ ಪ್ರಕಾರ ಯೇಸು ಕೊಟ್ಟಿರೋ ಕೆಲಸವನ್ನ ಮಾಡೋಕೆ ನಮ್ಮಿಂದ ಆಗುತ್ತೆ ಅಂತ ಯಾಕೆ ಹೇಳಬಹುದು?
20 ಯೇಸು ಕೊಟ್ಟಿರೋ ಈ ಕೆಲ್ಸನ ಮಾಡೋದು ಅಷ್ಟೊಂದು ಸುಲಭ ಅಲ್ಲ. ಆದ್ರೆ ಈ ಕೆಲ್ಸನ ನಾವು ಒಬ್ಬರೇ ಮಾಡಬೇಕಾಗಿಲ್ಲ. ಯೇಸು ನಮ್ಮ ಜೊತೆ ಇರ್ತೀನಿ ಅಂತ ಮಾತು ಕೊಟ್ಟಿದ್ದಾನೆ. ನಾವು ಜನ್ರನ್ನ ಶಿಷ್ಯರನ್ನಾಗಿ ಮಾಡುವಾಗ ‘ಕ್ರಿಸ್ತನಿಗೆ ಅನ್ಯೋನ್ಯವಾಗಿ’ ಕೆಲಸ ಮಾಡುತ್ತೇವೆ, ಮತ್ತು ‘ದೇವರ ಜೊತೆ ಕೆಲಸಗಾರರಾಗಿ’ ಇರ್ತೇವೆ. (1 ಕೊರಿಂ. 3:9; 2 ಕೊರಿಂ. 2:17) ಅದರರ್ಥ ಈ ಕೆಲಸವನ್ನ ಮಾಡೋಕೆ ಯೆಹೋವ ಮತ್ತು ಯೇಸು ನಮಗೆ ಸಹಾಯ ಮಾಡ್ತಾರೆ. ಹಾಗಾಗಿ ನಾವು ಇದನ್ನ ಮಾಡಿ ಮುಗಿಸೋಕೆ ಆಗುತ್ತೆ. ನಾವು ಖುಷಿಯಿಂದ ಈ ಕೆಲ್ಸವನ್ನ ಕೊನೆವರೆಗೆ ಮಾಡ್ತಾ ಹೋಗೋಣ ಮತ್ತು ಬೇರೆಯವರೂ ಇದನ್ನ ಮಾಡೋಕೆ ನಾವು ಅವ್ರಿಗೆ ಸಹಾಯ ಮಾಡೋಣ.—ಫಿಲಿಪ್ಪಿ 4:13 ಓದಿ.
ಗೀತೆ 139 ದೃಢವಾಗಿ ನಿಲ್ಲಲು ಅವರಿಗೆ ಕಲಿಸಿ
a ಯೇಸು ತನ್ನ ಹಿಂಬಾಲಕರಿಗೆ, ‘ಜನ್ರನ್ನು ಶಿಷ್ಯರನ್ನಾಗಿ ಮಾಡಿ ಮತ್ತು ನಾನು ನಿಮಗೆ ಆಜ್ಞಾಪಿಸಿದ ವಿಷಯಗಳನ್ನು ಪಾಲಿಸಲು ಕಲಿಸಿ’ ಅಂತ ಹೇಳಿದ. ನಾವದನ್ನು ಹೇಗೆ ಮಾಡ್ಬಹುದು ಅಂತ ಈ ಲೇಖನದಲ್ಲಿ ನೋಡಲಿದ್ದೇವೆ. ಈ ಲೇಖನದಲ್ಲಿರೋ ಕೆಲವು ಮಾಹಿತಿ 2004 ಜುಲೈ 1 ರ ಕಾವಲಿನಬುರುಜುವಿನ ಪುಟ 14-19 ರಲ್ಲಿರೋ ಲೇಖನದ ಮೇಲೆ ಆಧರಿಸಿದೆ.
b ಇಲ್ಲಿ ವಿದ್ಯಾರ್ಥಿಯನ್ನು ಅವ್ನು ಅಂತ ಹೇಳಿರೋದಾದ್ರೂ ವಿದ್ಯಾರ್ಥಿ ಸ್ತ್ರೀ ಸಹ ಆಗಿರಬಹುದು.
c ಚಿತ್ರ ವಿವರಣೆ: ಒಬ್ಬ ಸಹೋದರಿ ಬೈಬಲ್ ಸ್ಟಡಿ ಮಾಡುವಾಗ, ತನ್ನ ವಿದ್ಯಾರ್ಥಿ ದೇವರ ಮೇಲಿರೋ ಪ್ರೀತಿಯನ್ನ ಹೆಚ್ಚಿಸಿಕೊಳ್ಳೋಕೆ ಏನು ಮಾಡಬೇಕು ಅಂತ ಹೇಳ್ತಿದ್ದಾಳೆ. ನಂತ್ರ ಆ ಸಹೋದರಿ ಹೇಳಿದ ಮೂರು ವಿಷಯಗಳನ್ನ ವಿದ್ಯಾರ್ಥಿ ಅನ್ವಯಿಸ್ತಿದ್ದಾಳೆ.