ಯಾವುದೂ ನಿಮ್ಮಿಂದ ಬಹುಮಾನವನ್ನು ಕಸಿದುಕೊಳ್ಳದಿರಲಿ
“ಯಾವ ಮನುಷ್ಯನೂ ನಿಮ್ಮ ಬಹುಮಾನವನ್ನು ನಿಮ್ಮಿಂದ ಕಸಿದುಕೊಳ್ಳಲು ಅವಕಾಶಕೊಡಬೇಡಿ.”—ಕೊಲೊ. 2:18.
1, 2. (ಎ) ದೇವರ ಸೇವಕರು ಯಾವ ಬಹುಮಾನಕ್ಕಾಗಿ ಎದುರುನೋಡುತ್ತಾ ಇದ್ದಾರೆ? (ಬಿ) ಬಹುಮಾನದ ಮೇಲೆ ದೃಷ್ಟಿ ಇಡಲು ನಮಗೆ ಯಾವುದು ಸಹಾಯ ಮಾಡುತ್ತದೆ? (ಲೇಖನದ ಆರಂಭದ ಚಿತ್ರ ನೋಡಿ.)
ಅಭಿಷಿಕ್ತ ಕ್ರೈಸ್ತರಿಗೆ ಅಮೂಲ್ಯವಾದ ಒಂದು ನಿರೀಕ್ಷೆ ಇದೆ. ಅವರು ಸ್ವರ್ಗೀಯ ಜೀವನಕ್ಕಾಗಿ ಎದುರುನೋಡುತ್ತಾರೆ. ಈ ಜೀವನವನ್ನು ಅಪೊಸ್ತಲ ಪೌಲನು “ದೇವರು ಕೊಡುವ ಮೇಲಣ ಕರೆಯ ಬಹುಮಾನ” ಎಂದು ಕರೆದಿದ್ದಾನೆ. (ಫಿಲಿ. 3:14) ಅಭಿಷಿಕ್ತರು ಸ್ವರ್ಗದಲ್ಲಿ ಯೇಸು ಕ್ರಿಸ್ತನ ರಾಜ್ಯದಲ್ಲಿ ಆತನೊಂದಿಗೆ ಆಳುವರು ಮತ್ತು ಮಾನವರನ್ನು ಪರಿಪೂರ್ಣರನ್ನಾಗಿ ಮಾಡಲು ಆತನೊಂದಿಗೆ ಕೆಲಸ ಮಾಡುವರು. (ಪ್ರಕ. 20:6) ಎಂಥ ಅದ್ಭುತವಾದ ನಿರೀಕ್ಷೆ! ಇದಕ್ಕಿಂತ ಭಿನ್ನವಾದ ಒಂದು ಬಹುಮಾನಕ್ಕಾಗಿ ಬೇರೆ ಕುರಿಗಳು ಎದುರುನೋಡುತ್ತಿದ್ದಾರೆ. ಅದು ಭೂಮಿಯ ಮೇಲೆ ಪರದೈಸಿನಲ್ಲಿನ ನಿತ್ಯಜೀವ ಆಗಿದೆ. ಈ ನಿರೀಕ್ಷೆ ಅವರಿಗೆ ನಿಜವಾದ ಸಂತೋಷ ತರುತ್ತದೆ!—2 ಪೇತ್ರ 3:13.
2 ಪೌಲನು ಇತರ ಅಭಿಷಿಕ್ತ ಕ್ರೈಸ್ತರಿಗೆ ನಂಬಿಗಸ್ತರಾಗಿರಲು ಮತ್ತು ಬಹುಮಾನವನ್ನು ಗೆಲ್ಲಲು ಸಹಾಯ ಮಾಡಬೇಕೆಂದು ಬಯಸಿದನು. ಅವನು ಹೇಳಿದ್ದು: “ಮೇಲಿನವುಗಳ ಮೇಲೆ ಮನಸ್ಸಿಡಿರಿ.” (ಕೊಲೊ. 3:2) ಅಭಿಷಿಕ್ತರು ತಮಗಿರುವ ಅಮೂಲ್ಯವಾದ ಸ್ವರ್ಗೀಯ ನಿರೀಕ್ಷೆಯ ಮೇಲೆ ಪೂರ್ಣ ಗಮನವಿಡಬೇಕಿತ್ತು. (ಕೊಲೊ. 1:4, 5) ಸ್ವರ್ಗದ ನಿರೀಕ್ಷೆಯಿರಲಿ, ಭೂಮಿಯಲ್ಲಿ ಜೀವಿಸುವ ನಿರೀಕ್ಷೆಯಿರಲಿ ದೇವರ ಸೇವಕರೆಲ್ಲರೂ ಯೆಹೋವನ ಆಶೀರ್ವಾದಗಳ ಬಗ್ಗೆ ಯೋಚಿಸಿದರೆ ಬಹುಮಾನದ ಮೇಲೆ ದೃಷ್ಟಿ ಇಡಲು ಸಹಾಯ ಆಗುತ್ತದೆ.—1 ಕೊರಿಂ. 9:24.
3. ಪೌಲನು ಕ್ರೈಸ್ತರಿಗೆ ಯಾವ ಅಪಾಯಗಳ ಬಗ್ಗೆ ಎಚ್ಚರಿಕೆ ಕೊಟ್ಟನು?
3 ಈ ಬಹುಮಾನವನ್ನು ಕ್ರೈಸ್ತರಿಂದ ಕಸಿದುಕೊಳ್ಳುವಂಥ ಅಪಾಯಗಳ ಬಗ್ಗೆಯೂ ಪೌಲನು ಎಚ್ಚರಿಕೆ ಕೊಟ್ಟನು. ಉದಾಹರಣೆಗೆ, ಕೊಲೊಸ್ಸೆಯ ಕ್ರೈಸ್ತರಿಗೆ ಸುಳ್ಳು ಕ್ರೈಸ್ತರ ಬಗ್ಗೆ ಪತ್ರದಲ್ಲಿ ಬರೆದನು. ಈ ಸುಳ್ಳು ಕ್ರೈಸ್ತರು ದೇವರನ್ನು ಮೆಚ್ಚಿಸಲಿಕ್ಕಾಗಿ ಕ್ರಿಸ್ತನಲ್ಲಿ ನಂಬಿಕೆ ಇಡುವ ಬದಲು ಮೋಶೆಯ ಧರ್ಮಶಾಸ್ತ್ರ ಪಾಲಿಸಲು ಪ್ರಯತ್ನಿಸುತ್ತಿದ್ದರು. (ಕೊಲೊ. 2:16-18) ಪೌಲನು ಆ ಪತ್ರದಲ್ಲಿ ಇನ್ನೂ ಕೆಲವೊಂದು ಅಪಾಯಗಳ ಬಗ್ಗೆ ಅಂದರೆ ಅನೈತಿಕ ಆಸೆಗಳು, ಕುಟುಂಬ ಸಮಸ್ಯೆಗಳು, ಸಭೆಯಲ್ಲಿ ಸಹೋದರ ಸಹೋದರಿಯರ ಜೊತೆ ಮನಸ್ತಾಪಗಳ ಬಗ್ಗೆ ಚರ್ಚಿಸಿದನು. ಇವುಗಳನ್ನು ಜಯಿಸುವುದು ಹೇಗೆಂದು ಆ ಪತ್ರದಲ್ಲಿ ವಿವರಿಸಿದನು. ಈ ಅಪಾಯಗಳು ಇಂದು ಕೂಡ ಇವೆ ಮತ್ತು ಅವು ನಮ್ಮಿಂದ ಬಹುಮಾನವನ್ನು ಕಸಿದುಕೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಅವನು ಕೊಟ್ಟ ಬುದ್ಧಿವಾದ ನಮಗೂ ಪ್ರಯೋಜನ ತರುತ್ತದೆ. ನಾವೀಗ ಅವನು ಕೊಲೊಸ್ಸೆಯವರಿಗೆ ಬರೆದ ಪತ್ರದಲ್ಲಿ ಪ್ರೀತಿಯಿಂದ ಕೊಟ್ಟ ಎಚ್ಚರಿಕೆಗಳಲ್ಲಿ ಕೆಲವನ್ನು ಚರ್ಚಿಸೋಣ.
ಅನೈತಿಕ ಆಸೆಗಳನ್ನು ಸಾಯಿಸಿರಿ
4. ಅನೈತಿಕ ಆಸೆಗಳು ನಮ್ಮಿಂದ ಬಹುಮಾನವನ್ನು ಕಸಿದುಕೊಳ್ಳಸಾಧ್ಯವಿದೆ ಯಾಕೆ?
4 ಪೌಲನು ಅಭಿಷಿಕ್ತರಾದ ತನ್ನ ಸಹೋದರರಿಗೆ ಅವರ ಅದ್ಭುತವಾದ ನಿರೀಕ್ಷೆಯ ಬಗ್ಗೆ ನೆನಪು ಹುಟ್ಟಿಸಿದ ನಂತರ ಹೀಗೆ ಬರೆದನು: “ಆದುದರಿಂದ ಜಾರತ್ವ, ಅಶುದ್ಧತೆ, ಕಾಮಾಭಿಲಾಷೆ, ಹಾನಿಕಾರಕ ಆಶೆ ಮತ್ತು ವಿಗ್ರಹಾರಾಧನೆಯಾಗಿರುವ ಲೋಭ ಇವುಗಳಿಗೆ ಸಂಬಂಧಿಸಿದ ಭೂಸಂಬಂಧವಾದ ನಿಮ್ಮ ದೈಹಿಕ ಅಂಗಗಳನ್ನು ಸಾಯಿಸಿರಿ.” (ಕೊಲೊ. 3:5) ಅನೈತಿಕ ಆಸೆಗಳು ತುಂಬ ಬಲವಾಗಿರಬಲ್ಲವು. ಅವನ್ನು ಹಾಗೇ ಬಿಟ್ಟರೆ ಯೆಹೋವನ ಜೊತೆ ನಮಗಿರುವ ಸಂಬಂಧವನ್ನು ಮತ್ತು ಭವಿಷ್ಯದ ನಿರೀಕ್ಷೆಯನ್ನು ಕಳೆದುಕೊಳ್ಳುವಂತೆ ಮಾಡುತ್ತವೆ. ಅನೈತಿಕತೆ ನಡೆಸಿ ನಂತರ ಪಶ್ಚಾತ್ತಾಪಪಟ್ಟು ಪುನಃ ಸಭೆಗೆ ಹಿಂದಿರುಗಿದ ಸಹೋದರನೊಬ್ಬನು ಹೀಗಂದನು: ‘ಆ ಸೆಳೆತ ಎಷ್ಟಿತ್ತೆಂದರೆ ನನಗೆ ಅದು ಗೊತ್ತಾಗುವಷ್ಟರಲ್ಲಿ ತಪ್ಪು ಮಾಡಿಬಿಟ್ಟಿದ್ದೆ.’
5. ಅಪಾಯಕಾರಿ ಸನ್ನಿವೇಶಗಳಲ್ಲಿರುವಾಗ ನಮ್ಮನ್ನೇ ಕಾಪಾಡಿಕೊಳ್ಳಲು ಏನು ಮಾಡಬೇಕು?
5 ಯೆಹೋವನು ಕೊಟ್ಟಿರುವ ನೈತಿಕ ಮಟ್ಟಗಳನ್ನು ಮುರಿಯುವಂತೆ ಮಾಡಬಹುದಾದ ಸನ್ನಿವೇಶಗಳಲ್ಲಿದ್ದಾಗ ನಾವು ಹೆಚ್ಚು ಜಾಗ್ರತೆ ವಹಿಸಬೇಕು. ಉದಾಹರಣೆಗೆ, ಮದುವೆ ಆಗಬೇಕೆಂದಿರುವ ಜೋಡಿ ಒಬ್ಬರನ್ನೊಬ್ಬರು ಮುಟ್ಟುವುದರ ಬಗ್ಗೆ, ಮುತ್ತು ಕೊಡುವುದರ ಬಗ್ಗೆ, ಇಬ್ಬರೇ ಒಟ್ಟಿಗೆ ಸಮಯ ಕಳೆಯುವುದರ ಬಗ್ಗೆ ಆರಂಭದಿಂದಲೇ ಕೆಲವೊಂದು ಇತಿಮಿತಿಗಳನ್ನು ಇಡುವುದು ಜಾಣತನ. (ಜ್ಞಾನೋ. 22:3) ಎಚ್ಚರವಹಿಸಬೇಕಾದ ಇನ್ನೂ ಕೆಲವು ಸನ್ನಿವೇಶಗಳು ಯಾವುದೆಂದರೆ, ವಿರುದ್ಧ ಲಿಂಗದವರ ಜೊತೆ ಕೆಲಸ ಮಾಡುವುದು ಅಥವಾ ಕೆಲಸಕ್ಕೆಂದು ಬೇರೆಬೇರೆ ಊರಿಗೆ ಹೋಗುವುದು. (ಜ್ಞಾನೋ. 2:10-12, 16) ಇಂಥ ಸನ್ನಿವೇಶಗಳಲ್ಲಿ ನೀವಿದ್ದರೆ ನಿಮ್ಮನ್ನೇ ಕಾಪಾಡಿಕೊಳ್ಳಲು ಏನು ಮಾಡಬೇಕು? ನೀವೊಬ್ಬ ಯೆಹೋವನ ಸಾಕ್ಷಿ ಎಂದು ಸ್ಪಷ್ಟವಾಗಿ ಹೇಳಿ. ಸಭ್ಯತೆಯಿಂದ ನಡೆದುಕೊಳ್ಳಿ. ಚೆಲ್ಲಾಟ ಆಡಿದರೆ ಅದು ಗಂಡಾಂತರಕ್ಕೆ ನಡೆಸುತ್ತದೆ ಎನ್ನುವುದನ್ನು ಯಾವಾಗಲೂ ಮನಸ್ಸಲ್ಲಿಡಿ. ಜಾಗ್ರತೆ ವಹಿಸಬೇಕಾದ ಇನ್ನೊಂದು ಸನ್ನಿವೇಶ, ನಮಗೆ ದುಃಖ ಅಥವಾ ಒಂಟಿತನ ಕಾಡುವಾಗಲೇ. ಅಂಥ ಪರಿಸ್ಥಿತಿಯಲ್ಲಿದ್ದಾಗ ‘ನಾನು ಯಾರಿಗೂ ಬೇಡವಾಗಿದ್ದೇನೆ’ ಎಂಬ ಭಾವನೆ ಇರುತ್ತದೆ. ಆಗ ಯಾರಾದರೂ ಸ್ವಲ್ಪ ಪ್ರೀತಿ, ಕಾಳಜಿ ತೋರಿಸಿದರೆ ಅದನ್ನು ಸ್ವೀಕರಿಸುವ ಮನಸ್ಥಿತಿಯಲ್ಲಿರುತ್ತೇವೆ. ಇದು ಅಪಾಯಕಾರಿ. ನೀವು ಇಂಥ ಸನ್ನಿವೇಶದಲ್ಲಿದ್ದರೆ ಯಾವುದೂ ನಿಮ್ಮಿಂದ ಬಹುಮಾನವನ್ನು ಕಸಿದುಕೊಳ್ಳುವಂತೆ ಬಿಟ್ಟುಬಿಡಬೇಡಿ. ಯೆಹೋವನ ಸಹಾಯಕ್ಕಾಗಿ ಬೇಡಿಕೊಳ್ಳಿ ಮತ್ತು ಸಹೋದರ ಸಹೋದರಿಯರ ಸಹಾಯ ಪಡೆದುಕೊಳ್ಳಿ.—ಕೀರ್ತನೆ 34:18; ಜ್ಞಾನೋಕ್ತಿ 13:20 ಓದಿ.
6. ನಾವು ಮನೋರಂಜನೆಯನ್ನು ಆಯ್ಕೆ ಮಾಡುವಾಗ ಯಾವುದನ್ನು ನೆನಪಿನಲ್ಲಿಡಬೇಕು?
6 ಅನೈತಿಕ ಆಸೆಗಳನ್ನು ಸಾಯಿಸಲು ನಾವು ಅನೈತಿಕತೆ ತುಂಬಿದ ಮನೋರಂಜನೆಯನ್ನು ತಿರಸ್ಕರಿಸಬೇಕು. ಇಂದಿರುವ ಹೆಚ್ಚಿನ ಮನೋರಂಜನೆ ಸೊದೋಮ್ ಗೊಮೋರದಲ್ಲಿದ್ದ ಸಂಗತಿಗಳನ್ನು ನೆನಪಿಸುತ್ತದೆ. (ಯೂದ 7) ಮನೋರಂಜನೆಯನ್ನು ತಯಾರಿಸುವವರು ಲೈಂಗಿಕ ಅನೈತಿಕತೆ ಸಹಜ, ಅದರಲ್ಲೇನೂ ಹಾನಿಯಿಲ್ಲ ಎನ್ನುವಂತೆ ಬಿಂಬಿಸುತ್ತಾರೆ. ಹಾಗಾಗಿ ನಾವು ಯಾವಾಗಲೂ ಎಚ್ಚರವಾಗಿರಬೇಕು. ಈ ಲೋಕ ನೀಡುವ ಮನೋರಂಜನೆ ಏನೇ ಆಗಿರಲಿ ಅದೆಲ್ಲವನ್ನೂ ಸುಮ್ಮನೆ ಹಾಗೇ ಒಪ್ಪಿಕೊಳ್ಳಬಾರದು. ಬದಲಿಗೆ, ನಮ್ಮಿಂದ ಬಹುಮಾನವನ್ನು ಕಸಿದುಕೊಳ್ಳದಂಥ ಮನೋರಂಜನೆಯನ್ನು ಆಯ್ಕೆ ಮಾಡಬೇಕು.—ಜ್ಞಾನೋ. 4:23.
ಪ್ರೀತಿ ಮತ್ತು ದಯೆಯನ್ನು “ಧರಿಸಿಕೊಳ್ಳಿರಿ”
7. ಕ್ರೈಸ್ತ ಸಭೆಯಲ್ಲಿ ಯಾವ ಸಮಸ್ಯೆಗಳು ಬರಬಹುದು?
7 ಕ್ರೈಸ್ತ ಸಭೆಯ ಭಾಗವಾಗಿರುವುದು ನಮಗೆ ಸಿಕ್ಕಿರುವ ದೊಡ್ಡ ಆಶೀರ್ವಾದ. ನಾವು ಕೂಟಗಳಲ್ಲಿ ದೇವರ ವಾಕ್ಯವನ್ನು ಅಧ್ಯಯನ ಮಾಡುತ್ತೇವೆ ಮತ್ತು ಒಬ್ಬರಿಗೊಬ್ಬರು ಪ್ರೀತಿಯಿಂದ ಬೆಂಬಲ ಕೊಡುತ್ತೇವೆ. ಇದು ಬಹುಮಾನದ ಮೇಲೆ ದೃಷ್ಟಿ ಇಡಲು ನಮಗೆ ಸಹಾಯ ಮಾಡುತ್ತದೆ. ಆದರೆ ಕೆಲವೊಮ್ಮೆ ಸಹೋದರ ಸಹೋದರಿಯರ ಮಧ್ಯೆ ಯಾವುದೊ ವಿಷಯದ ಬಗ್ಗೆ ತಪ್ಪಭಿಪ್ರಾಯ ಹುಟ್ಟಿ ಮನಸ್ತಾಪ ಆಗಬಹುದು. ಇದನ್ನು ಕೂಡಲೇ ಬಗೆಹರಿಸದಿದ್ದರೆ ಆ ಮನಸ್ತಾಪ ದೊಡ್ಡದಾಗಿಬಿಡುತ್ತದೆ.—1 ಪೇತ್ರ 3:8, 9 ಓದಿ.
8, 9. (ಎ) ಯಾವ ಗುಣಗಳು ನಮಗೆ ಬಹುಮಾನವನ್ನು ಗೆಲ್ಲಲು ಸಹಾಯ ಮಾಡುತ್ತವೆ? (ಬಿ) ಒಬ್ಬ ಸಹೋದರ ಅಥವಾ ಸಹೋದರಿ ನಮಗೆ ನೋವಾಗುವ ಹಾಗೆ ನಡೆದುಕೊಂಡರೆ ಶಾಂತಿ ಕಾಪಾಡಿಕೊಳ್ಳಲು ಯಾವುದು ಸಹಾಯ ಮಾಡುತ್ತದೆ?
8 ಮನಸ್ತಾಪ ನಮ್ಮಿಂದ ಬಹುಮಾನವನ್ನು ಕಸಿದುಕೊಳ್ಳುವಂತೆ ಬಿಡಬಾರದು. ಕ್ರೈಸ್ತರು ಏನು ಮಾಡಬೇಕು ಎಂದು ಪೌಲ ವಿವರಿಸಿದನು: “ದೇವರಿಂದ ಆರಿಸಿಕೊಳ್ಳಲ್ಪಟ್ಟ ಪವಿತ್ರರೂ ಪ್ರಿಯರೂ ಆಗಿರುವ ನೀವು ಸಹಾನುಭೂತಿಯ ಕೋಮಲ ಮಮತೆಯನ್ನೂ ದಯೆಯನ್ನೂ ದೀನಮನಸ್ಸನ್ನೂ ಸೌಮ್ಯಭಾವವನ್ನೂ ದೀರ್ಘ ಸಹನೆಯನ್ನೂ ಧರಿಸಿಕೊಳ್ಳಿರಿ. ಯಾವನಿಗಾದರೂ ಮತ್ತೊಬ್ಬನ ವಿರುದ್ಧ ದೂರುಹೊರಿಸಲು ಕಾರಣವಿದ್ದರೂ ಒಬ್ಬರನ್ನೊಬ್ಬರು ಸಹಿಸಿಕೊಂಡು ಒಬ್ಬರನ್ನೊಬ್ಬರು ಉದಾರವಾಗಿ ಕ್ಷಮಿಸುವವರಾಗಿರಿ. ಯೆಹೋವನು ನಿಮ್ಮನ್ನು ಉದಾರವಾಗಿ ಕ್ಷಮಿಸಿದಂತೆಯೇ ನೀವೂ ಕ್ಷಮಿಸಿರಿ. ಇದೆಲ್ಲಾದರ ಜೊತೆಗೆ ಪ್ರೀತಿಯನ್ನು ಧರಿಸಿಕೊಳ್ಳಿರಿ; ಏಕೆಂದರೆ ಇದು ಐಕ್ಯದ ಪರಿಪೂರ್ಣ ಬಂಧವಾಗಿದೆ.”—ಕೊಲೊ. 3:12-14.
9 ಬೇರೆಯವರನ್ನು ಕ್ಷಮಿಸಲು ನಮಗೆ ಪ್ರೀತಿ ಮತ್ತು ದಯೆ ಸಹಾಯ ಮಾಡುತ್ತದೆ. ಬೇರೆಯವರು ಹೇಳಿದ ಅಥವಾ ಮಾಡಿದ ಯಾವುದಾದರೂ ವಿಷಯದಿಂದ ನಮಗೆ ನೋವಾದಾಗ ಒಂದು ವಿಷಯವನ್ನು ನೆನಪಿಸಿಕೊಳ್ಳಬಹುದು. ಅದೇನೆಂದರೆ, ನಮ್ಮಿಂದ ಬೇರೆಯವರಿಗೆ ನೋವಾಗಿ ಅವರು ನಮ್ಮನ್ನು ಕ್ಷಮಿಸಿದ ಎಷ್ಟೋ ಸಂದರ್ಭಗಳಿವೆ. ಹೀಗೆ ಅವರು ತೋರಿಸಿದ ಪ್ರೀತಿ ಮತ್ತು ದಯೆಗೆ ನಾವು ಕೃತಜ್ಞರಾಗಿದ್ದೆವು ಅಲ್ಲವೇ? (ಪ್ರಸಂಗಿ 7:21, 22 ಓದಿ.) ಕ್ರಿಸ್ತನು ಸತ್ಯಾರಾಧಕರನ್ನು ದಯೆಯಿಂದ ಐಕ್ಯಗೊಳಿಸಿರುವುದಕ್ಕಾಗಿಯೂ ನಾವು ಕೃತಜ್ಞರು. (ಕೊಲೊ. 3:15) ನಾವೆಲ್ಲರೂ ಪ್ರೀತಿಸುವ ದೇವರು ಒಬ್ಬನೇ ಮತ್ತು ಸಾರುವ ಸಂದೇಶವೂ ಒಂದೇ. ನಮ್ಮಲ್ಲಿ ಅನೇಕರಿಗಿರುವ ಸಮಸ್ಯೆಗಳೂ ಒಂದೇ ರೀತಿಯದ್ದಾಗಿವೆ. ನಾವು ಒಬ್ಬರನ್ನೊಬ್ಬರು ಪ್ರೀತಿ, ದಯೆಯಿಂದ ಕ್ಷಮಿಸುವುದಾದರೆ ಸಭೆಯಲ್ಲಿ ಇನ್ನಷ್ಟು ಒಗ್ಗಟ್ಟು ಇರುತ್ತದೆ ಮತ್ತು ಬಹುಮಾನದ ಮೇಲೆಯೇ ದೃಷ್ಟಿಯಿಡಲು ಸಾಧ್ಯವಾಗುತ್ತದೆ.
10, 11. (ಎ) ಹೊಟ್ಟೆಕಿಚ್ಚು ಯಾಕೆ ಅಪಾಯಕಾರಿ? (ಬಿ) ಹೊಟ್ಟೆಕಿಚ್ಚು ನಮ್ಮಿಂದ ಬಹುಮಾನವನ್ನು ಕಸಿದುಕೊಳ್ಳದಿರಲು ನಾವೇನು ಮಾಡಬೇಕು?
10 ಹೊಟ್ಟೆಕಿಚ್ಚು ನಮ್ಮಿಂದ ಬಹುಮಾನವನ್ನು ಕಸಿದುಕೊಳ್ಳುವ ಸಾಧ್ಯತೆ ಇದೆ. ಹೊಟ್ಟೆಕಿಚ್ಚು ಎಷ್ಟು ಅಪಾಯಕಾರಿ ಎಂದು ತೋರಿಸುವ ಉದಾಹರಣೆಗಳು ಬೈಬಲಿನಲ್ಲಿವೆ. ಕಾಯಿನನು ಹೇಬೆಲನ ಮೇಲೆ ಹೊಟ್ಟೆಕಿಚ್ಚುಪಟ್ಟು ಅವನನ್ನು ಕೊಂದೇಬಿಟ್ಟನು. ಕೋರಹ, ದಾತಾನ್, ಅಬೀರಾಮ ಇವರು ಮೋಶೆಯ ಮೇಲೆ ಹೊಟ್ಟೆಕಿಚ್ಚುಪಟ್ಟು ಅವನ ವಿರುದ್ಧ ದಂಗೆಯೆದ್ದರು. ರಾಜ ಸೌಲನು ದಾವೀದನ ಮೇಲಿನ ಹೊಟ್ಟೆಕಿಚ್ಚಿನಿಂದ ಅವನನ್ನು ಕೊಲ್ಲಲು ಪ್ರಯತ್ನಿಸಿದನು. ಇದೆಲ್ಲ ನೋಡುವಾಗ ದೇವರ ವಾಕ್ಯ ಹೇಳುವ ಈ ಮಾತು ನೂರಕ್ಕೆ ನೂರು ಸತ್ಯ: “ಹೊಟ್ಟೆಕಿಚ್ಚೂ ಕಲಹಶೀಲ ಮನೋಭಾವವೂ ಇರುವ ಕಡೆ ಅವ್ಯವಸ್ಥೆಯೂ ಪ್ರತಿಯೊಂದು ಕೆಟ್ಟ ವಿಷಯವೂ ಇರುತ್ತದೆ.”—ಯಾಕೋ. 3:16.
11 ನಾವು ನಿಜವಾದ ಪ್ರೀತಿ ದಯೆ ತೋರಿಸಲು ಶ್ರಮಿಸುವುದಾದರೆ ನಮಗೆ ಹೊಟ್ಟೆಕಿಚ್ಚು ಆಗುವುದಿಲ್ಲ. “ಪ್ರೀತಿಯು ದೀರ್ಘ ಸಹನೆಯುಳ್ಳದ್ದೂ ದಯೆಯುಳ್ಳದ್ದೂ ಆಗಿದೆ. ಪ್ರೀತಿಯು ಹೊಟ್ಟೆಕಿಚ್ಚುಪಡುವುದಿಲ್ಲ” ಎಂದು ದೇವರ ವಾಕ್ಯ ಹೇಳುತ್ತದೆ. (1 ಕೊರಿಂ. 13:4) ಹೊಟ್ಟೆಕಿಚ್ಚು ನಮ್ಮ ವ್ಯಕ್ತಿತ್ವದಲ್ಲಿ ಬೆರೆತುಹೋಗದಿರಲು ಯೆಹೋವನ ದೃಷ್ಟಿಕೋನದಿಂದ ವಿಷಯಗಳನ್ನು ನೋಡಬೇಕು. ನಮ್ಮ ಸಹೋದರ ಸಹೋದರಿಯರನ್ನು ಒಂದೇ ದೇಹ ಅಂದರೆ ಸಭೆಯ ಅಂಗಗಳಾಗಿ ನೋಡಬೇಕು. “ಒಂದು ಅಂಗಕ್ಕೆ ಮಹಿಮೆ ಉಂಟಾಗುವುದಾದರೆ ಬೇರೆಲ್ಲ ಅಂಗಗಳು ಅದರೊಂದಿಗೆ ಹರ್ಷಿಸುತ್ತವೆ” ಎಂದು ಬೈಬಲ್ ಹೇಳುತ್ತದೆ. (1 ಕೊರಿಂ. 12:16-18, 26) ನಮ್ಮ ಒಬ್ಬ ಸಹೋದರ ಅಥವಾ ಸಹೋದರಿಗೆ ಒಳ್ಳೇದಾದರೆ ಅದನ್ನು ನೋಡಿ ನಾವು ಹೊಟ್ಟೆಕಿಚ್ಚುಪಡಬಾರದು, ಸಂತೋಷಪಡಬೇಕು. ರಾಜ ಸೌಲನ ಮಗನಾದ ಯೋನಾತಾನನ ಒಳ್ಳೇ ಮಾದರಿಯನ್ನು ನೆನಪಿಸಿಕೊಳ್ಳಿ. ರಾಜನಾಗಬೇಕಿದ್ದ ಯೋನಾತಾನನ ಸ್ಥಾನಕ್ಕೆ ದಾವೀದ ಆಯ್ಕೆಯಾದಾಗ ಅವನು ಹೊಟ್ಟೆಕಿಚ್ಚುಪಡಲಿಲ್ಲ. ದಾವೀದನಿಗೆ ಪ್ರೋತ್ಸಾಹ ಮತ್ತು ಬೆಂಬಲ ನೀಡಿದನು. (1 ಸಮು. 23:16-18) ಅವನಂತೆ ನಾವು ಪ್ರೀತಿ ಮತ್ತು ದಯೆ ತೋರಿಸಬಹುದಲ್ಲವೇ?
ಕುಟುಂಬವಾಗಿ ಬಹುಮಾನ ಗೆಲ್ಲಿರಿ
12. ಕುಟುಂಬವಾಗಿ ಬಹುಮಾನ ಗೆಲ್ಲಲು ನಮಗೆ ಬೈಬಲಿನ ಯಾವ ಬುದ್ಧಿವಾದ ಸಹಾಯ ಮಾಡುತ್ತದೆ?
12 ಕುಟುಂಬದಲ್ಲಿರುವ ಪ್ರತಿಯೊಬ್ಬರೂ ಬೈಬಲ್ ತತ್ವಗಳನ್ನು ಪಾಲಿಸಿದರೆ ಕುಟುಂಬದಲ್ಲಿ ಶಾಂತಿ, ಸಂತೋಷ ತುಂಬಿರುತ್ತದೆ ಮತ್ತು ಬಹುಮಾನವನ್ನು ಗೆಲ್ಲಲು ಆಗುತ್ತದೆ. ಪೌಲನು ಕೊಲೊಸ್ಸೆಯಲ್ಲಿದ್ದ ಕ್ರೈಸ್ತರಿಗೆ ಈ ವಿವೇಕಯುತವಾದ ಬುದ್ಧಿವಾದ ಕೊಟ್ಟನು: “ಹೆಂಡತಿಯರೇ, ನಿಮ್ಮನಿಮ್ಮ ಗಂಡಂದಿರಿಗೆ ಅಧೀನರಾಗಿರಿ; ಇದು ಕರ್ತನ ದೃಷ್ಟಿಯಲ್ಲಿ ಯೋಗ್ಯವಾದದ್ದಾಗಿದೆ. ಗಂಡಂದಿರೇ, ನಿಮ್ಮನಿಮ್ಮ ಹೆಂಡತಿಯರನ್ನು ಪ್ರೀತಿಸುತ್ತಾ ಇರಿ; ಅವರ ಮೇಲೆ ಕಟುವಾಗಿ ಕೋಪಿಸಿಕೊಳ್ಳಬೇಡಿರಿ. ಮಕ್ಕಳೇ, ಎಲ್ಲ ವಿಷಯಗಳಲ್ಲಿ ನಿಮ್ಮ ಹೆತ್ತವರಿಗೆ ವಿಧೇಯರಾಗಿರಿ; ಇದು ಕರ್ತನ ದೃಷ್ಟಿಯಲ್ಲಿ ಬಹು ಮೆಚ್ಚಿಕೆಯಾದದ್ದಾಗಿದೆ. ತಂದೆಗಳೇ, ನಿಮ್ಮ ಮಕ್ಕಳು ಮನಗುಂದಿಹೋಗದಂತೆ ಅವರನ್ನು ಕೆಣಕುತ್ತಾ ಇರಬೇಡಿ.” (ಕೊಲೊ. 3:18-21) ಇಂದು ಸಹ ಪೌಲನ ಈ ಬುದ್ಧಿವಾದವನ್ನು ಪಾಲಿಸಿದರೆ ಗಂಡಂದಿರಿಗೆ, ಹೆಂಡತಿಯರಿಗೆ, ಮಕ್ಕಳಿಗೆ ಪ್ರಯೋಜನವಿದೆ.
13. ಕ್ರೈಸ್ತ ಸಹೋದರಿ ಸತ್ಯದಲ್ಲಿಲ್ಲದ ತನ್ನ ಗಂಡನಿಗೆ ಯೆಹೋವನನ್ನು ಆರಾಧಿಸಲು ಹೇಗೆ ಸಹಾಯ ಮಾಡಬಹುದು?
13 ಒಂದುವೇಳೆ ನಿಮ್ಮ ಗಂಡ ಯೆಹೋವನ ಆರಾಧಕನಲ್ಲದಿದ್ದರೆ ನೀವೇನು ಮಾಡಬಹುದು? ಅವರು ನಿಮ್ಮ ಜೊತೆ ಸರಿಯಾಗಿ ನಡಕೊಳ್ಳುತ್ತಿಲ್ಲ ಎಂದು ನಿಮಗನಿಸಿದರೆ ಏನು ಮಾಡುತ್ತೀರಿ? ಇದರ ಬಗ್ಗೆ ಅವರ ಜೊತೆ ಜಗಳಕ್ಕಿಳಿದರೆ ಪರಿಸ್ಥಿತಿ ಸುಧಾರಣೆ ಆಗುತ್ತಾ? ಆ ವಾದದಲ್ಲಿ ನೀವು ಗೆಲ್ಲಬಹುದು. ಆದರೆ ನಿಮ್ಮ ಗಂಡ ಯೆಹೋವನನ್ನು ಆರಾಧಿಸುವಂತೆ ಮನಸ್ಸು ಮಾಡುವರಾ? ಬಹುಶಃ ಇಲ್ಲ. ಅದರ ಬದಲು ನಿಮ್ಮ ಗಂಡನ ತಲೆತನಕ್ಕೆ ಗೌರವ ಕೊಟ್ಟರೆ ಕುಟುಂಬದಲ್ಲಿ ಹೆಚ್ಚು ಶಾಂತಿ ಇರುತ್ತದೆ ಮತ್ತು ನೀವು ಯೆಹೋವನಿಗೆ ಮಹಿಮೆ ತರುತ್ತೀರಿ. ನಿಮ್ಮ ಒಳ್ಳೇ ನಡತೆಯಿಂದಾಗಿ ನಿಮ್ಮ ಗಂಡ ಯೆಹೋವನನ್ನು ಆರಾಧಿಸಲು ಮನಸ್ಸು ಮಾಡಬಹುದು ಮತ್ತು ನೀವಿಬ್ಬರೂ ಬಹುಮಾನವನ್ನು ಗೆಲ್ಲಬಹುದು.—1 ಪೇತ್ರ 3:1, 2 ಓದಿ.
14. ಸತ್ಯದಲ್ಲಿಲ್ಲದ ಹೆಂಡತಿ ತನಗೆ ಗೌರವ ಕೊಡದಿದ್ದರೆ ಕ್ರೈಸ್ತ ಗಂಡ ಏನು ಮಾಡಬೇಕು?
14 ಒಂದುವೇಳೆ ನಿಮ್ಮ ಹೆಂಡತಿ ಯೆಹೋವನ ಆರಾಧಕಳಲ್ಲದಿದ್ದರೆ ನೀವೇನು ಮಾಡಬಹುದು? ಆಕೆ ನಿಮಗೆ ಗೌರವ ಕೊಡುತ್ತಿಲ್ಲ ಎಂದನಿಸಿದರೆ ಏನು ಮಾಡುತ್ತೀರಿ? ‘ನಾನೇ ಯಜಮಾನ’ ಎಂದು ತೋರಿಸಿಕೊಳ್ಳಲು ನೀವು ಆಕೆಯ ಮೇಲೆ ಕೂಗಾಡಿದರೆ ಆಕೆ ನಿಮಗೆ ಗೌರವ ಕೊಡುತ್ತಾಳಾ? ಖಂಡಿತ ಇಲ್ಲ! ನೀವು ಯೇಸುವನ್ನು ಅನುಕರಿಸುವ ಒಬ್ಬ ಪ್ರೀತಿಯ ಗಂಡನಾಗಿರಬೇಕೆಂದು ದೇವರು ಬಯಸುತ್ತಾನೆ. (ಎಫೆ. 5:23) ಸಭೆಯ ಶಿರಸ್ಸಾಗಿರುವ ಯೇಸು ಯಾವಾಗಲೂ ತಾಳ್ಮೆ ಮತ್ತು ಪ್ರೀತಿ ತೋರಿಸುತ್ತಾನೆ. (ಲೂಕ 9:46-48) ಅವನನ್ನು ನೀವು ಅನುಕರಿಸಿದರೆ ಕಾಲಕ್ರಮೇಣ ನಿಮ್ಮ ಹೆಂಡತಿ ಯೆಹೋವನನ್ನು ಆರಾಧಿಸಲು ಮನಸ್ಸು ಮಾಡಬಹುದು.
15. ಕ್ರೈಸ್ತ ಗಂಡನು ತನ್ನ ಹೆಂಡತಿಯನ್ನು ಪ್ರೀತಿಸುತ್ತಾನೆಂದು ಹೇಗೆ ತೋರಿಸುತ್ತಾನೆ?
15 ಗಂಡಂದಿರಿಗೆ ಯೆಹೋವನು ಕೊಡುವ ನಿರ್ದೇಶನ ಹೀಗಿದೆ: “ನಿಮ್ಮನಿಮ್ಮ ಹೆಂಡತಿಯರನ್ನು ಪ್ರೀತಿಸುತ್ತಾ ಇರಿ; ಅವರ ಮೇಲೆ ಕಟುವಾಗಿ ಕೋಪಿಸಿಕೊಳ್ಳಬೇಡಿರಿ.” (ಕೊಲೊ. 3:19) ಒಬ್ಬ ಪ್ರೀತಿಯ ಗಂಡ ತನ್ನ ಹೆಂಡತಿಗೆ ಗೌರವ ಕೊಡುತ್ತಾನೆ. ಹೇಗೆ? ಆಕೆ ತನ್ನ ಅಭಿಪ್ರಾಯಗಳನ್ನು ಹೇಳುವಾಗ ಕಿವಿಗೊಡುತ್ತಾನೆ ಮತ್ತು ಆಕೆಯ ಮಾತಿಗೆ ಬೆಲೆಕೊಡುತ್ತೇನೆಂದು ತೋರಿಸಿಕೊಡುತ್ತಾನೆ. (1 ಪೇತ್ರ 3:7) ಎಲ್ಲಾ ಸಮಯವೂ ಆಕೆ ಹೇಳಿದಂತೆ ಮಾಡಲು ಗಂಡನಿಗೆ ಆಗಲಿಕ್ಕಿಲ್ಲ. ಆದರೂ ಆಕೆಯ ಅಭಿಪ್ರಾಯಕ್ಕೆ ಕಿವಿಗೊಡುವುದರಿಂದ ಒಳ್ಳೇ ನಿರ್ಣಯಗಳನ್ನು ಮಾಡಲು ಸಹಾಯವಾಗುತ್ತದೆ. (ಜ್ಞಾನೋ. 15:22) ಪ್ರೀತಿಯಿರುವ ಗಂಡನು ತನ್ನ ಹೆಂಡತಿಯಿಂದ ಗೌರವವನ್ನು ಒತ್ತಾಯದಿಂದ ಕೇಳುವುದಿಲ್ಲ, ಬದಲಾಗಿ ಹೆಂಡತಿ ತಾನಾಗಿ ಗೌರವ ಕೊಡುವಂಥ ರೀತಿಯಲ್ಲಿ ನಡಕೊಳ್ಳುತ್ತಾನೆ. ತನ್ನ ಹೆಂಡತಿ-ಮಕ್ಕಳನ್ನು ಪ್ರೀತಿಸುವುದಾದರೆ ಇಡೀ ಕುಟುಂಬ ಸಂತೋಷವಾಗಿ ಯೆಹೋವನನ್ನು ಆರಾಧಿಸಲು ಸಾಧ್ಯವಾಗುತ್ತದೆ ಮತ್ತು ಬಹುಮಾನವನ್ನು ಗೆಲ್ಲಲು ಆಗುತ್ತದೆ.
ಯುವಜನರೇ, ಯಾವುದೂ ನಿಮ್ಮಿಂದ ಬಹುಮಾನವನ್ನು ಕಸಿದುಕೊಳ್ಳದಿರಲಿ!
16, 17. ಯುವಜನರೇ, ನೀವು ನಿಮ್ಮ ಹೆತ್ತವರ ಮೇಲೆ ತುಂಬ ಬೇಜಾರು ಮಾಡಿಕೊಳ್ಳದಿರಲು ಏನು ಮಾಡಬೇಕು?
16 ನೀವೀಗ ಹದಿಪ್ರಾಯದಲ್ಲಿದ್ದರೆ ಅಪ್ಪಅಮ್ಮ ನಿಮ್ಮನ್ನು ಅರ್ಥಮಾಡಿಕೊಳ್ಳುತ್ತಿಲ್ಲ, ತುಂಬ ಕಟ್ಟುನಿಟ್ಟು ಎಂದು ಅನಿಸುತ್ತಿರಬಹುದು. ನಿಮಗೆ ಎಷ್ಟು ಬೇಜಾರಾಗಬಹುದೆಂದರೆ ಯೆಹೋವನನ್ನು ಆರಾಧಿಸುವುದೇ ಬೇಡ ಎಂದು ನೆನಸಬಹುದು. ಆದರೆ ನೀವು ಯೆಹೋವನನ್ನು ಬಿಟ್ಟುಹೋದರೆ, ನಿಮ್ಮ ಹೆತ್ತವರಷ್ಟು, ಸಭೆಯಲ್ಲಿರುವ ಸ್ನೇಹಿತರಷ್ಟು ನಿಮ್ಮನ್ನು ಪ್ರೀತಿಸುವವರು ಈ ಲೋಕದಲ್ಲಿ ಬೇರೆ ಯಾರೂ ಇಲ್ಲ ಎಂದು ನಿಮಗೆ ಸ್ವಲ್ಪ ಸಮಯದಲ್ಲೇ ಗೊತ್ತಾಗುತ್ತದೆ.
17 ನಿಮ್ಮ ಅಪ್ಪಅಮ್ಮ ನಿಮ್ಮನ್ನು ಯಾವತ್ತೂ ತಿದ್ದುವುದೇ ಇಲ್ಲ ಎಂದಿಟ್ಟುಕೊಳ್ಳಿ. ಆಗ ಅವರಿಗೆ ನಿಮ್ಮ ಮೇಲೆ ನಿಜವಾಗಲೂ ಕಾಳಜಿ ಇದೆ ಅಂತ ನೀವು ಹೇಗೆ ಹೇಳಲಿಕ್ಕಾಗುತ್ತದೆ? (ಇಬ್ರಿ. 12:8) ಅವರು ಪರಿಪೂರ್ಣರಲ್ಲ. ಹಾಗಾಗಿ ಅವರು ಶಿಸ್ತು ಕೊಡುವ ರೀತಿ ನಿಮಗೆ ಇಷ್ಟವಾಗದೇ ಇರಬಹುದು. ಆದರೆ ಶಿಸ್ತು ಕೊಡಲಾಗುವ ರೀತಿಗೆ ಗಮನಕೊಡಬೇಡಿ. ಅದರ ಬದಲು ಅವರು ಹೇಳುವ ಮತ್ತು ಮಾಡುವ ವಿಷಯದ ಹಿಂದಿರುವ ಕಾರಣವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಅವರು ನಿಮ್ಮನ್ನು ತಿದ್ದುವಾಗ ಶಾಂತವಾಗಿರಿ, ಅತಿಯಾಗಿ ಪ್ರತಿಕ್ರಿಯಿಸಬೇಡಿ. “ಹಿಡಿದು ಮಾತಾಡುವವನು ಜ್ಞಾನಿ. ಶಾಂತಾತ್ಮನು ವಿವೇಕಿ” ಎಂದು ದೇವರ ವಾಕ್ಯ ಹೇಳುತ್ತದೆ. (ಜ್ಞಾನೋ. 17:27) ಪ್ರೌಢ ವ್ಯಕ್ತಿಯಾಗುವ ಗುರಿಯಿಡಿ. ಬುದ್ಧಿವಾದ ಯಾವ ರೀತಿಯಲ್ಲೇ ಸಿಗಲಿ ಒಬ್ಬ ಪ್ರೌಢ ವ್ಯಕ್ತಿ ಅದನ್ನು ಸ್ವೀಕರಿಸುತ್ತಾನೆ ಮತ್ತು ತಿದ್ದಿಕೊಳ್ಳುತ್ತಾನೆ. (ಜ್ಞಾನೋ. 1:8) ಯೆಹೋವನನ್ನು ಪ್ರೀತಿಸುವ ಹೆತ್ತವರಿರುವುದು ಒಂದು ಆಶೀರ್ವಾದ ಎನ್ನುವುದನ್ನು ಯಾವತ್ತೂ ಮರೆಯಬೇಡಿ. ನೀವು ಜೀವದ ಬಹುಮಾನವನ್ನು ಗೆಲ್ಲಲು ಸಹಾಯ ಮಾಡಬೇಕೆನ್ನುವುದೇ ಅವರ ಉದ್ದೇಶ.
18. ಬಹುಮಾನದ ಮೇಲೆ ದೃಷ್ಟಿ ಇಡಲು ಯಾಕೆ ದೃಢತೀರ್ಮಾನ ಮಾಡಿದ್ದೀರಿ?
18 ನಮಗೆ ಸದಾಕಾಲ ಸ್ವರ್ಗದಲ್ಲಿ ಜೀವಿಸುವ ನಿರೀಕ್ಷೆ ಇರಲಿ ಅಥವಾ ಪರದೈಸ್ ಭೂಮಿಯಲ್ಲಿ ಜೀವಿಸುವ ನಿರೀಕ್ಷೆ ಇರಲಿ ನಮ್ಮ ಮುಂದೆ ಅದ್ಭುತ ಭವಿಷ್ಯವಿದೆ. ನಮ್ಮ ನಿರೀಕ್ಷೆ ಒಂದು ಕನಸಲ್ಲ. “ಭೂಮಿಯಲ್ಲಿ ಯೆಹೋವನ ಜ್ಞಾನವು ತುಂಬಿಕೊಂಡಿರುವದು” ಎಂದು ಇಡೀ ವಿಶ್ವದ ಸೃಷ್ಟಿಕರ್ತ ನಮಗೆ ಕೊಟ್ಟಿರುವ ವಾಗ್ದಾನದ ಮೇಲೆ ಅದು ಆಧರಿತವಾಗಿದೆ. (ಯೆಶಾ. 11:9) ಭೂಮಿಯಲ್ಲಿ ಪ್ರತಿಯೊಬ್ಬರೂ ದೇವರಿಂದ ಶಿಕ್ಷಣ ಪಡೆಯುವ ಕಾಲ ಹತ್ತಿರದಲ್ಲಿದೆ. ಈ ಬಹುಮಾನ ಪಡೆಯಲು ನಾವು ಪಡುವ ಶ್ರಮವೆಲ್ಲ ಸಾರ್ಥಕ. ಆದ್ದರಿಂದ ಯೆಹೋವನು ಕೊಟ್ಟಿರುವ ಮಾತನ್ನು ಯಾವಾಗಲೂ ಮನಸ್ಸಲ್ಲಿಡಿ. ನಿಮ್ಮಿಂದ ಬಹುಮಾನವನ್ನು ಯಾವುದೂ ಕಸಿದುಕೊಳ್ಳದಂತೆ ನೋಡಿಕೊಳ್ಳಿ!