ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 51

ಕಷ್ಟದಲ್ಲಿ ಇರುವಾಗ ದೇವರು ಕೊಡೋ ಶಾಂತಿಯನ್ನ ಪಡ್ಕೊಳ್ಳಿ

ಕಷ್ಟದಲ್ಲಿ ಇರುವಾಗ ದೇವರು ಕೊಡೋ ಶಾಂತಿಯನ್ನ ಪಡ್ಕೊಳ್ಳಿ

“ಚಿಂತೆ ಮಾಡಬೇಡಿ. ಭಯಪಡಬೇಡಿ.”—ಯೋಹಾ. 14:27.

ಗೀತೆ 76 ಶಾಂತಿಯ ದೇವರಾದ ಯೆಹೋವನು

ಕಿರುನೋಟ a

1. (ಎ) ‘ದೇವರು ಕೊಡೋ ಶಾಂತಿ’ ನಮಗೆ ಹೇಗೆ ಸಿಗುತ್ತೆ? (ಬಿ) ಅದು ಸಿಕ್ಕಾಗ ನಮಗೆ ಹೇಗೆ ಅನಿಸುತ್ತೆ? (ಫಿಲಿಪ್ಪಿ 4:6, 7)

 ತುಂಬ ಜನರಿಗೆ ಗೊತ್ತಿಲ್ಲದೆ ಇರೋ ಶಾಂತಿಯ ಬಗ್ಗೆ ಬೈಬಲ್‌ ಹೇಳುತ್ತೆ. ಅದು ‘ದೇವರು ಕೊಡೋ ಶಾಂತಿ.’ ಯೆಹೋವ ಅಪ್ಪಾ ಜೊತೆ ನಮಗಿರೋ ಸಂಬಂಧದಿಂದ ಈ ಶಾಂತಿ ಸಿಗುತ್ತೆ. ದೇವರು ಕೊಡೋ ಶಾಂತಿ ಸಿಕ್ಕಾಗ ನಾವು ಯಾವುದಕ್ಕೂ ಭಯಪಡಲ್ಲ, ಚಿಂತೆ ಮಾಡಲ್ಲ. (ಫಿಲಿಪ್ಪಿ 4:6, 7 ಓದಿ.) ನಾವು ಯೆಹೋವನನ್ನು ಪ್ರೀತಿಸೋ ಸಹೋದರ ಸಹೋದರಿಯರ ಜೊತೆ ಒಳ್ಳೇ ಸಂಬಂಧ ಬೆಳೆಸಿಕೊಳ್ತೀವಿ. ‘ಶಾಂತಿಯ ದೇವರಾದ’ ಯೆಹೋವನಿಗೆ ಇನ್ನೂ ಹತ್ರ ಆಗ್ತೀವಿ. (1 ಥೆಸ. 5:23) ಯೆಹೋವನ ಬಗ್ಗೆ ತಿಳಿದುಕೊಂಡಾಗ, ಆತನನ್ನ ನಂಬಿದಾಗ, ಆತನ ಆಜ್ಞೆಗಳನ್ನ ಪಾಲಿಸಿದಾಗ ದೇವರು ಕೊಡೋ ಶಾಂತಿ ನಮಗೆ ಸಿಗುತ್ತೆ. ಇದ್ರಿಂದ ಎಂಥ ಕಷ್ಟ ಬಂದರೂ ಸಮಾಧಾನವಾಗಿ ಇರ್ತೀವಿ.

2. ದೇವರು ಕೊಡೋ ಶಾಂತಿ ನಮಗೆ ಸಿಕ್ಕೇ ಸಿಗುತ್ತೆ ಅಂತ ಹೇಗೆ ಗ್ಯಾರಂಟಿಯಾಗಿ ಹೇಳಬಹುದು?

2 ನಮಗೆ ಸಮಸ್ಯೆಗಳು ಬಂದಾಗ ಉದಾಹರಣೆಗೆ, ಅಂಟುರೋಗ ಹರಡಿದಾಗ, ನೈಸರ್ಗಿಕ ವಿಪತ್ತುಗಳಾದಾಗ ಮತ್ತು ಹಿಂಸೆ ವಿರೋಧ ಬಂದಾಗ ಅಥವಾ ಸಾಮಾಜಿಕ ಗಲಭೆಯಾದಾಗ ನಾವು ನಿಜವಾಗಲೂ ಭಯ, ಆತಂಕ ಇಲ್ಲದೆ ಶಾಂತಿಯಿಂದ ಇರೋಕೆ ಆಗುತ್ತಾ? ಅಂಥ ಸಮಯದಲ್ಲಿ ನಮಗೆ ಭಯ ಆಗೋದು ಸಹಜನೇ. ಆದ್ರೆ ಯೇಸು “ಚಿಂತೆ ಮಾಡಬೇಡಿ. ಭಯಪಡಬೇಡಿ” ಅಂತ ಹೇಳಿದ್ದಾನೆ. (ಯೋಹಾ. 14:27) ನಮ್ಮ ಸಹೋದರ ಸಹೋದರಿಯರು ಯೇಸು ಹೇಳಿದ ತರನೇ ನಡಕೊಂಡಿದ್ದಾರೆ. ಹೀಗೆ ಅವರು ಯೆಹೋವ ದೇವರು ಕೊಡೋ ಸಹಾಯದಿಂದ ಸಮಸ್ಯೆಗಳನ್ನ ತಾಳಿಕೊಂಡಿದ್ದಾರೆ ಮತ್ತು ದೇವರು ಕೊಡೋ ಶಾಂತಿಯನ್ನೂ ಪಡಕೊಂಡಿದ್ದಾರೆ.

ಅಂಟುರೋಗ ಹರಡಿದಾಗಲೂ ಶಾಂತಿ ಪಡ್ಕೊಳ್ಳಿ

3. ಅಂಟುರೋಗಗಳಿಂದ ಏನೆಲ್ಲಾ ಆಗುತ್ತೆ?

3 ಅಂಟುರೋಗಗಳು ಬಂದರೆ ಜನರ ಜೀವನ ತಲೆ ಕೆಳಗಾಗಿ ಬಿಡುತ್ತೆ. ಉದಾಹರಣೆಗೆ ಕೊರೊನಾ ಮಹಾಪಿಡುಗು ಬಂದಾಗ ತುಂಬ ಜನರಿಗೆ ಹೀಗಾಯಿತು. ಒಂದು ಸಮೀಕ್ಷೆ ಹೇಳೋ ತರ 10ರಲ್ಲಿ 5ಕ್ಕಿಂತ ಹೆಚ್ಚಿನ ಜನರಿಗೆ ಈ ಮಹಾಪಿಡುಗಿನ ಸಮಯದಲ್ಲಿ ನಿದ್ದೆ ಮಾಡೋದಿಕ್ಕೂ ಕಷ್ಟ ಆಗ್ತಿತ್ತು. ಇನ್ನೂ ಕೆಲವರಿಗೆ ಚಿಂತೆ, ಖಿನ್ನತೆ ಕಾಡಿತು. ಕೆಲವರು ಕುಡಿಯೋ, ಡ್ರಗ್ಸ್‌ ತಗೊಳ್ಳೋ ದುಶ್ಚಟಕ್ಕೆ ಬಲಿಯಾದ್ರು. ಕೆಲವರಂತೂ ಮನೆಯಲ್ಲಿ ಚಿಕ್ಕಪುಟ್ಟ ವಿಷಯಗಳಿಗೆಲ್ಲಾ ಜಗಳ ಆಡುತ್ತಿದ್ದರು. ಇನ್ನೂ ಕೆಲವರು ಆತ್ಮಹತ್ಯೆ ಮಾಡಿಕೊಳ್ಳೋಕೂ ಪ್ರಯತ್ನ ಮಾಡಿದ್ರು. ನೀವಿರೋ ಕಡೆನೂ ಈ ತರ ಕಾಯಿಲೆಗಳು ಹರಡಿದಾಗ ಭಯಪಡದೆ ದೇವರ ಶಾಂತಿಯನ್ನ ಪಡಕೊಳ್ಳೋಕೆ ನೀವೇನು ಮಾಡಬೇಕು?

4. ಕೊನೇ ದಿನಗಳ ಬಗ್ಗೆ ಯೇಸು ಹೇಳಿರೋ ಭವಿಷ್ಯವಾಣಿಯನ್ನ ತಿಳುಕೊಂಡಿರೋದ್ರಿಂದ ನಾವು ಹೇಗೆ ಶಾಂತಿಯಿಂದ ಇರೋಕೆ ಆಗುತ್ತೆ?

4 ಯೇಸು ಕೊನೇ ದಿನಗಳಲ್ಲಿ ‘ಒಂದಾದ ಮೇಲೆ ಒಂದು ಜಾಗದಲ್ಲಿ ಅಂಟುರೋಗಗಳು ಬರುತ್ತೆ’ ಅಂತ ಮುಂಚೆನೇ ಹೇಳಿದ್ದ. (ಲೂಕ 21:11) ಇದನ್ನ ತಿಳುಕೊಳ್ಳೋದ್ರಿಂದ ನಿಜವಾಗಲೂ ನಾವು ಶಾಂತಿಯಿಂದ ಇರಕ್ಕಾಗುತ್ತಾ? ಹೌದು ಇರಕ್ಕಾಗುತ್ತೆ. ಯಾಕಂದ್ರೆ ಕೊನೇ ದಿನಗಳಲ್ಲಿ ಏನೆಲ್ಲ ಆಗುತ್ತೆ ಅಂತ ಯೇಸು ಹೇಳಿದ್ದನೋ ಅದೇ ನಡೀತಾ ಇದೆ ಅಂತ ನಾವು ಅರ್ಥಮಾಡಿಕೊಳ್ತೀವಿ. ಹಾಗಾಗಿ ಅಂಟುರೋಗಗಳು ಬಂದಾಗ ಬೇರೆ ಜನರ ತರ ನಾವು ಬೆಚ್ಚಿಬೀಳಲ್ಲ, ಭಯಪಡಲ್ಲ. ಎಚ್ಚರಿಕೆಯಿಂದ ಇರೋಕೆ ನಮ್ಮಿಂದ ಆಗೋದನ್ನೆಲ್ಲ ಮಾಡ್ತೀವಿ. ಅಷ್ಟೇ ಅಲ್ಲ, ಯೇಸು ಕೂಡ ನಮಗೆ “ಭಯಪಡಬೇಡಿ” ಅಂತ ಹೇಳಿದ್ದಾನೆ.—ಮತ್ತಾ. 24:6.

5. (ಎ) ಅಂಟುರೋಗ ಹರಡಿದಾಗ ನಾವು ಯಾವ ತರ ಯೋಚಿಸೋಕೆ ಯೆಹೋವನ ಹತ್ರ ಸಹಾಯ ಕೇಳಬೇಕು? (ಫಿಲಿಪ್ಪಿ 4:8, 9) (ಬಿ) ಬೈಬಲ್‌ ಆಡಿಯೋ ರೆಕಾರ್ಡಿಂಗ್‌ಗಳನ್ನ ಕೇಳಿಸಿಕೊಳ್ಳೋದ್ರಿಂದ ನಮಗೆ ಹೇಗೆ ಪ್ರಯೋಜನ ಆಗುತ್ತೆ?

5 ಅಂಟುರೋಗ ಹರಡಿದಾಗ ನಮಗೆ ತುಂಬ ಗಾಬರಿಯಾಗುತ್ತೆ. ಮುಂದೆ ಏನಾಗುತ್ತೋ ಅನ್ನೋ ಯೋಚನೆ ಬರುತ್ತೆ. ಡೈಸಿ b ಅನ್ನೋ ಸಹೋದರಿಗೂ ಹೀಗೇ ಆಯ್ತು. ಅವಳ ಡಾಕ್ಟರ್‌, ಚಿಕ್ಕಪ್ಪ, ದೊಡ್ಡಪ್ಪನ ಮಗ ಎಲ್ಲರೂ ಕೊರೊನಾದಿಂದ ತೀರಿಹೋದರು. ಆಗ, ಮುಂದೆ ನನಗೂ ಈ ಕಾಯಿಲೆ ಬಂದುಬಿಟ್ರೆ ಅಮ್ಮನ ಗತಿಯೇನು? ಅಂತ ಯೋಚನೆ ಮಾಡ್ತಾ ಇದ್ದಳು. ಈ ಕೊರೊನಾದಿಂದ ಒಂದುವೇಳೆ ತನ್ನ ಕೆಲಸ ಹೋಗಿಬಿಟ್ರೆ ಊಟಕ್ಕೆ, ಮನೆ ಖರ್ಚಿಗೆ ಏನು ಮಾಡೋದು ಅಂತ ಚಿಂತೆ ಮಾಡ್ತಾ ಇದ್ದಳು. ಇದ್ರಿಂದ ರಾತ್ರಿಯೆಲ್ಲಾ ನಿದ್ದೆನೇ ಮಾಡ್ತಿರಲಿಲ್ಲ. ಆಗ ಆ ಸಹೋದರಿ ಸಮಾಧಾನವಾಗಿ ಇರೋಕೆ, ಮುಂದೆ ಎಲ್ಲಾ ಸರಿಹೋಗುತ್ತೆ ಅಂತ ಯೋಚಿಸೋಕೆ ಸಹಾಯ ಮಾಡಪ್ಪಾ ಅಂತ ಯೆಹೋವ ದೇವರ ಹತ್ರ ಬೇಡಿಕೊಂಡಳು. ಇದ್ರಿಂದ ಅವಳಿಗೆ ಶಾಂತಿ, ನೆಮ್ಮದಿ ಸಿಕ್ತು. (ಫಿಲಿಪ್ಪಿ 4: 8, 9 ಓದಿ.) ಇದಿಷ್ಟೇ ಅಲ್ಲ ಬೈಬಲ್‌ ಆಡಿಯೋ ರೆಕಾರ್ಡಿಂಗ್‌ಗಳನ್ನ ಕೇಳಿಸಿಕೊಳ್ತಿದ್ದಳು. “ಇದನ್ನ ಕೇಳಿಸಿಕೊಳ್ಳುವಾಗ ಯೆಹೋವ ದೇವರೇ ನನ್ನ ಹತ್ರ ಮಾತಾಡಿದ ತರ ಅನಿಸ್ತಿತ್ತು. ಅದ್ರಿಂದ ನನ್ನ ಚಿಂತೆಯೆಲ್ಲಾ ಮಾಯ ಆಗ್ತಿತ್ತು. ಯೆಹೋವ ನನಗೆ ಖಂಡಿತ ಕರುಣೆ ತೋರಿಸ್ತಾರೆ, ಸಹಾಯ ಮಾಡೇ ಮಾಡ್ತಾರೆ ಅನ್ನೋದು ನನ್ನ ನೆನಪಿಗೆ ಬಂತು” ಅಂತ ಆ ಸಹೋದರಿ ಹೇಳ್ತಾಳೆ.—ಕೀರ್ತ. 94:19.

6. ವೈಯಕ್ತಿಕ ಅಧ್ಯಯನ ಮತ್ತು ಕೂಟಗಳಿಂದ ನಮಗೆ ಹೇಗೆ ಸಹಾಯ ಸಿಗುತ್ತೆ?

6 ಅಂಟುರೋಗ ಬಂದಾಗ ನಮ್ಮ ಜೀವನ ಮುಂಚಿನ ತರ ಇರಲ್ಲ, ಎಲ್ಲ ಬದಲಾಗಿಬಿಡುತ್ತೆ. ಆದ್ರೆ ನಾವು ವೈಯಕ್ತಿಕ ಅಧ್ಯಯನ ಮಾಡೋದನ್ನ ಮತ್ತು ಕೂಟಗಳಿಗೆ ಹೋಗೋದನ್ನ ನಿಲ್ಲಿಸಬಾರದು. ನಮ್ಮ ತರದೇ ಸನ್ನಿವೇಶದಲ್ಲಿದ್ದ ಸಹೋದರ ಸಹೋದರಿಯರ ಎಷ್ಟೋ ಅನುಭವಗಳು ನಮ್ಮ ಪ್ರಕಾಶನಗಳಲ್ಲಿ ಅಥವಾ ವಿಡಿಯೋಗಳಲ್ಲಿ ಇದೆ. ಎಷ್ಟೇ ಕಷ್ಟ ಬಂದರೂ ಅವರು ಯೆಹೋವನ ಸೇವೆನ ಮಾಡ್ತಾನೇ ಇದ್ದಾರೆ. ಅವರ ಅನುಭವಗಳಿಂದ ಪ್ರೋತ್ಸಾಹ ಸಿಗುತ್ತೆ. (1 ಪೇತ್ರ 5:9) ನಾವು ಕೂಟಗಳಿಗೆ ಹೋದಾಗ, ನಮ್ಮ ಸಮಸ್ಯೆಗಳು ಮುಂದೆ ಸರಿಹೋಗುತ್ತೆ ಅನ್ನೋ ಭವಿಷ್ಯವಾಣಿಗಳ ಮೇಲೆ ನಮ್ಮ ನಂಬಿಕೆ ಜಾಸ್ತಿ ಆಗುತ್ತೆ. ಇದ್ರಿಂದ ನಮಗೆ ಧೈರ್ಯ ಸಿಗುತ್ತೆ ಮತ್ತು ಬೇರೆಯವರನ್ನೂ ಪ್ರೋತ್ಸಾಹಿಸೋಕೆ ಆಗುತ್ತೆ. (ರೋಮ. 1:11, 12) ತನ್ನ ಆರಾಧಕರಿಗೆ ಕಾಯಿಲೆ ಬಂದಾಗ, ಭಯ ಆದಾಗ, ಒಂಟಿಯಾಗಿದ್ದಾಗ ಯೆಹೋವ ಅವರಿಗೆ ಸಹಾಯ ಮಾಡಿದನು. ಇದನ್ನ ತಿಳುಕೊಂಡಾಗ ಯೆಹೋವ ನಮಗೂ ಖಂಡಿತ ಸಹಾಯ ಮಾಡೇ ಮಾಡ್ತಾನೆ ನಮ್ಮ ಕೈ ಬಿಡಲ್ಲ ಅನ್ನೋ ಭರವಸೆ ಹೆಚ್ಚಾಗುತ್ತೆ.

7. ಅಪೊಸ್ತಲ ಯೋಹಾನನಿಂದ ನಾವೇನು ಕಲಿತೀವಿ?

7 ಸಹೋದರ ಸಹೋದರಿಯರ ಹತ್ರ ಆಗಾಗ ಮಾತಾಡ್ತಾ ಇರಿ. ಅಂಟುರೋಗ ಹರಡಿದಾಗ ಕೆಲವೊಮ್ಮೆ ನಾವು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕಾಗುತ್ತೆ. ಆಗ ನಮ್ಮ ಸಹೋದರ ಸಹೋದರಿಯರನ್ನ ಭೇಟಿ ಮಾಡೋಕೆ ಆಗಲ್ಲ. ಅಂಥ ಸಮಯದಲ್ಲಿ ನಮಗೂ ಅಪೊಸ್ತಲ ಯೋಹಾನನ ತರ ಅನಿಸಬಹುದು. ಅವನಿಗೂ ಗಾಯನನ್ನ ಮುಖಾಮುಖಿಯಾಗಿ ಭೇಟಿಮಾಡಿ ಮಾತಾಡಬೇಕು ಅಂತ ಅನಿಸ್ತಿತ್ತು. (3 ಯೋಹಾ. 13, 14) ಆದ್ರೆ ಅದು ಆಗದೇ ಇದ್ದಾಗ ಅವನು ಗಾಯನಿಗೆ ಪತ್ರ ಬರೆದ. ಅದೇ ತರ ನಮಗೂ ನಮ್ಮ ಸಹೋದರ ಸಹೋದರಿಯರನ್ನ ಭೇಟಿ ಮಾಡೋಕೆ ಆಗ್ತಿಲ್ಲ ಅಂದ್ರೆ ನಾವು ಅವರಿಗೆ ಫೋನ್‌ ಮಾಡಬಹುದು, ವಿಡಿಯೋ ಕಾಲ್‌ ಮಾಡಬಹುದು ಅಥವಾ ಮೆಸೇಜ್‌ ಮಾಡಬಹುದು. ಹೀಗೆ ನಾವು ಅವರ ಹತ್ರ ಆಗಾಗ ಮಾತಾಡ್ತಾ ಇದ್ರೆ ನಮ್ಮ ಮನಸ್ಸಿಗೆ ಸಮಾಧಾನ ಆಗುತ್ತೆ. ಒಂದುವೇಳೆ ನಮಗೆ ಚಿಂತೆ ಜಾಸ್ತಿ ಆದ್ರೆ ಹಿರಿಯರ ಹತ್ರ ಮಾತಾಡಬೇಕು. ಆಗ ಅವರು ನಮಗೆ ಸಹಾಯ ಮಾಡ್ತಾರೆ.—ಯೆಶಾ. 32:1, 2.

ನೈಸರ್ಗಿಕ ವಿಪತ್ತುಗಳಾದಾಗಲೂ ಶಾಂತಿ ಪಡ್ಕೊಳ್ಳಿ

8. ನೈಸರ್ಗಿಕ ವಿಪತ್ತು ಆದಾಗ ಹೇಗೆ ನಮ್ಮ ಶಾಂತಿ ಹಾಳಾಗುತ್ತೆ?

8 ನೀವು ಯಾವತ್ತಾದರೂ ಪ್ರವಾಹ, ಭೂಕಂಪ ಅಥವಾ ಬೆಂಕಿ ದುರಂತಗಳಲ್ಲಿ ಸಿಕ್ಕಿಹಾಕಿಕೊಂಡಿದ್ದೀರಾ? ಇದರಿಂದ ಆದ ನಷ್ಟ, ನೋವನ್ನ ಅಷ್ಟು ಬೇಗ ಮರೆಯೋಕೆ ಆಗಲ್ಲ. ಇಂಥ ಘಟನೆಗಳು ಆದಾಗ ನೀವು ಪ್ರೀತಿಸೋ ಯಾರಾದರೂ ಒಬ್ಬರು ತೀರಿಹೋಗಬಹುದು. ನಿಮ್ಮ ಮನೆ, ಆಸ್ತಿಪಾಸ್ತಿನೆಲ್ಲಾ ಕಳಕೊಂಡಿರಬಹುದು. ಹೀಗಾದಾಗ ತುಂಬ ದುಃಖ ಆಗುತ್ತೆ. ಮುಂದೆ ಏನು ಮಾಡೋದು ಅಂತನೇ ಗೊತ್ತಾಗಲ್ಲ. ನನಗೇ ಯಾಕೆ ಹೀಗಾಯ್ತು ಅಂತ ಅನಿಸಬಹುದು, ಕೋಪನೂ ಬರಬಹುದು. ಆದ್ರೆ ಇದರ ಅರ್ಥ ನಿಮಗೆ ಯೆಹೋವ ದೇವರ ಮೇಲೆ ನಂಬಿಕೆ ಇಲ್ಲ ಅಂತಲ್ಲ ಅಥವಾ ಹಣ-ಆಸ್ತಿ ಮೇಲೆ ನಿಮಗೆ ಆಸೆ ಇದೆ ಅಂತಲ್ಲ. ಕಷ್ಟದಲ್ಲಿರುವಾಗ ಈ ತರ ಅನಿಸೋದು ಸಹಜನೇ. (ಯೋಬ 1:11) ಆದ್ರೂ ನಾವು ಶಾಂತಿಯಿಂದ ಹೇಗೆ ಇರಬಹುದು?

9. ನೈಸರ್ಗಿಕ ವಿಪತ್ತುಗಳ ಬಗ್ಗೆ ಯೇಸು ಏನಂತ ಹೇಳಿದ್ದನು?

9 ನಾವಿರೋ ಕಡೆ ನೈಸರ್ಗಿಕ ವಿಪತ್ತುಗಳು ಆಗಲ್ಲ ಅಂತ ತುಂಬ ಜನ ನೆನಸ್ತಾರೆ. ಆದ್ರೆ ನಾವು ಹಾಗೆ ಅಂದುಕೊಳ್ಳಬಾರದು. ಯಾಕಂದ್ರೆ ಕೊನೇ ದಿನಗಳಲ್ಲಿ ‘ಭೂಕಂಪಗಳು ಆಗುತ್ತೆ,’ ಬೇರೆ ಬೇರೆ ವಿಪತ್ತುಗಳು ಆಗುತ್ತೆ ಅಂತ ಯೇಸು ತನ್ನ ಶಿಷ್ಯರಿಗೆ ಹೇಳಿದನು. ಅದೆಲ್ಲ ಈಗ ನಿಜ ಆಗ್ತಿದೆ. (ಲೂಕ 21:11) ಅಷ್ಟೇ ಅಲ್ಲ ಭೂಮಿಯಲ್ಲಿ “ಕೆಟ್ಟತನ” ಜಾಸ್ತಿಯಾಗುತ್ತೆ ಅಂತನೂ ಹೇಳಿದನು. ಹಾಗಾಗಿ ಇವತ್ತು ಎಲ್ಲಿ ನೋಡಿದರೂ ಕೊಲೆ, ಅಪರಾಧಗಳು ನಡಿತಿವೆ. ಭಯೋತ್ಪಾದಕರು ದಾಳಿಮಾಡ್ತಿದ್ದಾರೆ. (ಮತ್ತಾ. 24:12) ಈ ವಿಪತ್ತುಗಳು ಯೆಹೋವನನ್ನು ಆರಾಧಿಸದೇ ಇರುವವರ ಮೇಲೆ ಮಾತ್ರ ಬರುತ್ತೆ ಅಂತ ಯೇಸು ಹೇಳಲಿಲ್ಲ. ನಾವೆಲ್ಲರೂ ಈ ಕಷ್ಟಗಳನ್ನ ಅನುಭವಿಸ್ತಾ ಇದ್ದೀವಿ. (ಯೆಶಾ. 57:1; 2 ಕೊರಿಂ. 11:25) ಹೀಗಾದಾಗ ಯೆಹೋವ ನಮ್ಮನ್ನ ಅದ್ಭುತವಾಗಿ ಕಾಪಾಡದೇ ಇರಬಹುದು. ಆದ್ರೆ ಆ ಸಮಯದಲ್ಲಿ ನಾವು ಗಾಬರಿಯಾಗದೆ ಶಾಂತಿ-ಸಮಾಧಾನದಿಂದ ಇರೋಕೆ ಸಹಾಯ ಮಾಡೇ ಮಾಡ್ತಾನೆ.

10. ವಿಪತ್ತುಗಳಾಗೋ ಮುಂಚೆನೇ ತಯಾರಾಗಿ ಇರೋದ್ರಿಂದ ಯೆಹೋವನ ಮೇಲೆ ನಮಗೆ ನಂಬಿಕೆ ಇದೆ ಅಂತ ಹೇಗೆ ತೋರಿಸಿಕೊಡ್ತೀವಿ? (ಜ್ಞಾನೋಕ್ತಿ 22:3)

10 ವಿಪತ್ತುಗಳಾಗೋ ಮುಂಚೆನೇ ಏನು ಮಾಡಬೇಕು, ಏನು ಮಾಡಬಾರದು ಅಂತ ತಿಳುಕೊಂಡಿರಬೇಕು, ಅದಕ್ಕೆ ತಯಾರಾಗಿರಬೇಕು. ಆಗ ನಾವು ಶಾಂತಿಯಿಂದ ಇರೋಕೆ ಆಗುತ್ತೆ. ಆದ್ರೆ ಈ ರೀತಿ ತಯಾರಾಗಿ ಇರೋದರಿಂದ ಯೆಹೋವನ ಮೇಲೆ ನಮಗೆ ನಂಬಿಕೆ ಇಲ್ಲ ಅಂತ ಅರ್ಥನಾ? ಇಲ್ಲ. ಬದಲಿಗೆ ನಾವು ಆತನನ್ನ ನಂಬ್ತೀವಿ ಅಂತ ತೋರಿಸಿಕೊಡ್ತೀವಿ. ಯಾಕಂದ್ರೆ ಇಂಥ ವಿಪತ್ತುಗಳಿಗೆ ನಾವು ಮುಂಚೆನೇ ತಯಾರಾಗಿ ಇರಬೇಕು ಅಂತ ಯೆಹೋವನೇ ತನ್ನ ವಾಕ್ಯದಲ್ಲಿ ಹೇಳಿದ್ದಾನೆ. (ಜ್ಞಾನೋಕ್ತಿ 22:3 ಓದಿ.) ಅಷ್ಟೇ ಅಲ್ಲ ನಮ್ಮ ಸಂಘಟನೆ ಕೂಡ ಪತ್ರಿಕೆಗಳಲ್ಲಿ ಇಂಥ ವಿಪತ್ತುಗಳಿಗೆ ಮುಂಚೆನೇ ತಯಾರಾಗಿರಿ ಅಂತ ಹೇಳ್ತಾ ಇದೆ. c ಕೂಟಗಳಲ್ಲೂ ಇದರ ಬಗ್ಗೆ ಆಗಾಗ ಪ್ರಕಟಣೆ ಮಾಡಲಾಗುತ್ತೆ. ಈ ನಿರ್ದೇಶನಗಳನ್ನ ನಾವು ವಿಪತ್ತುಗಳು ಬರೋಕೆ ಮುಂಚೆನೇ ಪಾಲಿಸಿದ್ರೆ ಯೆಹೋವನ ಮೇಲೆ ನಮಗೆ ನಂಬಿಕೆ ಇದೆ ಅಂತ ತೋರಿಸಿಕೊಡ್ತೀವಿ.

11. ಸಹೋದರಿ ಮಾರ್ಗರೇಟಿಂದ ನೀವೇನು ಕಲಿತ್ರಿ?

11 ಮಾರ್ಗರೇಟ್‌ ಅನ್ನೋ ಸಹೋದರಿಯ ಅನುಭವ ನೋಡಿ. ಅವರಿದ್ದ ಜಾಗದಲ್ಲಿ ಕಾಡ್ಗಿಚ್ಚು ಹತ್ತಿಕೊಳ್ತು. ಇದ್ರಿಂದ ಅಧಿಕಾರಿಗಳು ಅಲ್ಲಿದ್ದ ಜನರನ್ನ ಸುರಕ್ಷಿತವಾದ ಜಾಗಕ್ಕೆ ಹೋಗೋಕೆ ಹೇಳಿದ್ರು. ಈ ರೀತಿ ಸರ್ಕಾರಿ ಅಧಿಕಾರಿಗಳು ಹೇಳಿದ್ರಿಂದ ಅಲ್ಲಿದ್ದ ಜನರು ಜಾಗ ಖಾಲಿ ಮಾಡೋಕೆ ಶುರು ಮಾಡಿದ್ರು. ಒಂದೇ ಟೈಮಲ್ಲಿ ಜನರೆಲ್ಲ ರಸ್ತೆಗೆ ಬಂದುಬಿಟ್ಟಿದ್ರು, ಅದಕ್ಕೆ ಅಲ್ಲಿ ಟ್ರಾಫಿಕ್‌ ಜಾಮ್‌ ಆಯ್ತು. ಅಷ್ಟೇ ಅಲ್ಲ ಬೆಂಕಿ ಹೊತ್ತಿ ಉರೀತಾ ಇದ್ದದ್ರಿಂದ ಆ ಜಾಗ ಪೂರ್ತಿ ಕಪ್ಪು ಹೊಗೆಯಿಂದ ತುಂಬಿಹೋಗಿತ್ತು. ಇದ್ರಿಂದ ಆ ಸಹೋದರಿ ಕಾರಿಂದ ಇಳಿಯೋಕೂ ಆಗ್ತಿರಲಿಲ್ಲ. ಆದ್ರೆ ಈ ಸಹೋದರಿ ಮುಂಚಿತವಾಗಿ ಈ ರೀತಿ ಸನ್ನಿವೇಶ ಬಂದ್ರೆ ಏನು ಮಾಡಬೇಕು ಅಂತ ಚೆನ್ನಾಗಿ ತಯಾರಿ ಮಾಡಿದ್ರು. ಸುರಕ್ಷಿತವಾದ ಸ್ಥಳಕ್ಕೆ ಹೋಗೋಕೆ ಅವರಿಗೆ ಇನ್ನೊಂದು ದಾರಿನೂ ಗೊತ್ತಿತ್ತು. ಅವರು ಆ ದಾರಿಯಲ್ಲಿ ಇದಕ್ಕೂ ಮುಂಚೆ ಹೋಗಿಬಂದಿದ್ರು. ಅಷ್ಟೇ ಅಲ್ಲ ತಮ್ಮ ಹತ್ರ ಆ ನಕ್ಷೆಯನ್ನೂ ಇಟ್ಟುಕೊಂಡಿದ್ರು. ಹಾಗಾಗಿ ಅವರು ಸುರಕ್ಷಿತವಾದ ಜಾಗಕ್ಕೆ ಹೋಗೋಕೆ ಆಯ್ತು ಮತ್ತು ತಮ್ಮ ಪ್ರಾಣವನ್ನೂ ಉಳಿಸಿಕೊಂಡ್ರು.

12. ನಾವು ಯಾಕೆ ನಿರ್ದೇಶನಗಳನ್ನ ಪಾಲಿಸಬೇಕು?

12 ಕೆಲವೊಮ್ಮೆ ಅಧಿಕಾರಿಗಳು ಜನರ ಜೀವ ಕಾಪಾಡೋಕೆ ಕರ್ಫ್ಯೂ ಹಾಕ್ತಾರೆ, ಬೇರೆ ಜಾಗಕ್ಕೆ ಹೋಗಿ ಅಂತ ಹೇಳ್ತಾರೆ ಅಥವಾ ಕೆಲವು ಕ್ರಮಗಳನ್ನ ತಕ್ಷಣ ತಗೊಳೋಕೆ ಹೇಳ್ತಾರೆ. ಕೆಲವರು ಅದನ್ನೆಲ್ಲ ಕಿವಿಗೇ ಹಾಕಿಕೊಳ್ಳಲ್ಲ. ಯಾಕಂದ್ರೆ ಅವರು ಮನೆ, ಆಸ್ತಿಪಾಸ್ತಿನ್ನೆಲ್ಲಾ ಬಿಟ್ಟುಹೋಗೋಕೆ ಇಷ್ಟಪಡಲ್ಲ. ಆದ್ರೆ ಕ್ರೈಸ್ತರಾದ ನಾವೇನು ಮಾಡಬೇಕು? “ಒಡೆಯನ ಇಷ್ಟದ ಪ್ರಕಾರ ಮನುಷ್ಯರು ಮಾಡಿರೋ ಅಧಿಕಾರಿಗಳಿಗೆ ಅಧೀನತೆ ತೋರಿಸಿ. ನಿಮ್ಮ ಮೇಲೆ ಅಧಿಕಾರಿಯಾಗಿ ಇರೋ ರಾಜನ ಮಾತು ಕೇಳಿ. ರಾಜ್ಯಪಾಲರ ಮಾತನ್ನೂ ಕೇಳಿ” ಅಂತ ಬೈಬಲ್‌ ಹೇಳುತ್ತೆ. ಹಾಗಾಗಿ ಅಧಿಕಾರಿಗಳ ಮಾತನ್ನ ನಾವು ಕೇಳಬೇಕು. (1 ಪೇತ್ರ 2:13, 14) ಕೆಲವೊಮ್ಮೆ ಸಂಘಟನೆ ಕೂಡ ನಮಗೆ ನಿರ್ದೇಶನಗಳನ್ನ ಕೊಡುತ್ತೆ. ಉದಾಹರಣೆಗೆ, ತುರ್ತು ಪರಿಸ್ಥಿತಿಯ ಸಂದರ್ಭಗಳಲ್ಲಿ ನಿಮ್ಮನ್ನ ಸಂಪರ್ಕಿಸೋಕೆ ನಿಮ್ಮ ಸಭೆಯ ಹಿರಿಯರು ನಿಮ್ಮ ವಿಳಾಸ ಮತ್ತು ಫೋನ್‌ ನಂಬರನ್ನ ಕೇಳ್ತಾರೆ. ಒಂದುವೇಳೆ ನೀವು ಫೋನ್‌ ನಂಬರನ್ನ ಬದಲಾಯಿಸಿದ್ರೆ ಅದನ್ನ ತಕ್ಷಣ ಹಿರಿಯರಿಗೆ ತಿಳಿಸಿ. ಹೀಗೆ ಮಾಡಿದ್ರೆ ವಿಪತ್ತುಗಳಾದಾಗ ನೀವು ಮನೆಯಲ್ಲೇ ಇರಬೇಕಾ, ಸುರಕ್ಷಿತವಾದ ಜಾಗಕ್ಕೆ ಹೋಗಬೇಕಾ, ಬೇಕಾದ ವಸ್ತುಗಳನ್ನ ಪಡಕೊಳ್ಳೋದು ಹೇಗೆ, ನಿಮಗೆ ಯಾರಿಗಾದರೂ ಸಹಾಯ ಮಾಡೋಕೆ ಇಷ್ಟ ಇದ್ರೆ ಏನು ಮಾಡಬೇಕು ಮತ್ತು ಅದನ್ನ ಹೇಗೆ ಮಾಡಬೇಕು ಅಂತನೂ ಹೇಳ್ತಾರೆ. ಹಿರಿಯರು ನಿಮ್ಮ ಕಾಳಜಿವಹಿಸ್ತಾರೆ, ನಿಮ್ಮನ್ನ ಚೆನ್ನಾಗಿ ನೋಡಿಕೊಳ್ತಾರೆ. ಹಾಗಾಗಿ ಅವರು ಕೊಡೋ ನಿರ್ದೇಶನಗಳನ್ನ ಪಾಲಿಸಲಿಲ್ಲ ಅಂದ್ರೆ ನಿಮಗೂ ಅಪಾಯ ಅವರ ಜೀವಕ್ಕೂ ಅಪಾಯ. (ಇಬ್ರಿ. 13:17) “ಸಂಘಟನೆ ಮತ್ತು ಹಿರಿಯರು ಕೊಟ್ಟ ನಿರ್ದೇಶನ ಪಾಲಿಸಿದ್ರಿಂದ ನಾನು ಇವತ್ತು ಜೀವಂತವಾಗಿ ಇದ್ದೀನಿ” ಅಂತ ಸಹೋದರಿ ಮಾರ್ಗರೇಟ್‌ ಕೂಡ ಹೇಳ್ತಾರೆ.

13. ವಿಪತ್ತಿನಿಂದ ಬೇರೆ ಕಡೆ ಹೋಗಿರೋ ನಮ್ಮ ಸಹೋದರ ಸಹೋದರಿಯರು ಹೇಗೆ ಶಾಂತಿ-ನೆಮ್ಮದಿಯಿಂದ ಇದ್ದಾರೆ?

13 ಕೆಲವೊಮ್ಮೆ ಯುದ್ಧ, ನೈಸರ್ಗಿಕ ವಿಪತ್ತು ಮತ್ತು ಸಾಮಾಜಿಕ ಗಲಭೆಗಳಿಂದಾಗಿ ಎಷ್ಟೋ ಸಹೋದರ ಸಹೋದರಿಯರು ತಮ್ಮ ಮನೆಯೆಲ್ಲಾ ಬಿಟ್ಟು ಬೇರೆ ಕಡೆ ಹೋಗಬೇಕಾಗಿ ಬಂದಿದೆ. ಆದ್ರೆ ಅಲ್ಲಿಗೆ ಹೋದಾಗ ಅವರು ಆದಷ್ಟು ಬೇಗ ಅಲ್ಲಿನ ಪರಿಸ್ಥಿತಿಗೆ ಹೊಂದಿಕೊಂಡು ಯೆಹೋವನ ಸೇವೆ ಮಾಡ್ತಿದ್ದಾರೆ. ಒಂದನೇ ಶತಮಾನದಲ್ಲಿದ್ದ ಕ್ರೈಸ್ತರಿಗೂ ಹಿಂಸೆ, ವಿರೋಧ ಬಂದಾಗ ಅಲ್ಲಿದ್ದ ಶಿಷ್ಯರು ಚೆಲ್ಲಾಪಿಲ್ಲಿಯಾಗಿ ಹೋದ್ರು. ಆದ್ರೂ “ಹೋದಲ್ಲೆಲ್ಲ ಸಿಹಿಸುದ್ದಿ ಹೇಳ್ತಾ ಇದ್ರು.” (ಅ. ಕಾ. 8:4) ಈಗಲೂ ನಮ್ಮ ಸಹೋದರ ಸಹೋದರಿಯರು ಸಿಹಿಸುದ್ದಿ ಸಾರೋದ್ರಿಂದ ಅವರ ಕಷ್ಟಗಳ ಮೇಲಲ್ಲ, ಬದಲಿಗೆ ಯೆಹೋವ ಕೊಡೋ ಆಶೀರ್ವಾದಗಳ ಮೇಲೆ ಗಮನ ಇಡೋಕೆ ಆಗಿದೆ. ಹೀಗೆ ಅವರು ಜೀವನದಲ್ಲಿ ಶಾಂತಿ-ನೆಮ್ಮದಿಯಿಂದ ಇದ್ದಾರೆ.

ಹಿಂಸೆ ವಿರೋಧ ಬಂದರೂ ಶಾಂತಿ ಪಡ್ಕೊಳ್ಳಿ

14. ಹಿಂಸೆ ವಿರೋಧ ನಮ್ಮ ಶಾಂತಿಯನ್ನ ಹೇಗೆ ಹಾಳು ಮಾಡುತ್ತೆ?

14 ಹಿಂಸೆ ವಿರೋಧ ಬಂದಾಗ ನಮ್ಮಲ್ಲಿರೋ ಶಾಂತಿಯನ್ನ ಕಳ್ಕೊಂಡು ಬಿಡುತ್ತೀವಿ. ನಾವು ಕೂಟಗಳಿಗೆ ಹೋಗುವಾಗ, ಸಿಹಿಸುದ್ದಿ ಸಾರುವಾಗ ಖುಷಿಯಾಗಿ ಇರ್ತೀವಿ. ಆದ್ರೆ ಯಾವಾಗ ನಮ್ಮ ಕೆಲಸಗಳ ಮೇಲೆ ನಿಷೇಧ ಹಾಕಲಾಗುತ್ತೋ ಆಗ ನಮಗೆ ಚಿಂತೆ, ಭಯ ಬಂದುಬಿಡುತ್ತೆ. ಎಲ್ಲಿ ಪೊಲೀಸರು ನಮ್ಮನ್ನ ಹಿಡಿದು ಜೈಲಿಗೆ ಹಾಕ್ತಾರೋ, ಮುಂದೆ ಏನಾಗುತ್ತೋ ಅನ್ನೋ ಹೆದರಿಕೆ ಶುರುವಾಗುತ್ತೆ. ಈ ರೀತಿ ಅನಿಸೋದು ಸಹಜ. ಆದ್ರೆ ನಾವೆಲ್ಲರೂ ಹುಷಾರಾಗಿ ಇರಬೇಕು. ಯಾಕಂದ್ರೆ ವಿರೋಧ ಹಿಂಸೆಗಳು ಬಂದಾಗ ನಾವು ನಂಬಿಕೆಯನ್ನ ಕಳಕೊಳ್ಳಬಹುದು ಅಂತ ಯೇಸು ಎಚ್ಚರಿಸಿದನು. (ಯೋಹಾ. 16:1, 2) ಹಾಗಾದ್ರೆ ಇಂಥ ಸಮಯದಲ್ಲಿ ನಾವು ಹೇಗೆ ಶಾಂತಿ ಪಡ್ಕೊಳ್ಳಬಹುದು?

15. ಹಿಂಸೆ ವಿರೋಧಗಳಿಗೆ ನಾವು ಯಾಕೆ ಹೆದರಬಾರದು? (ಯೋಹಾನ 15:20; 16:33)

15 ಬೈಬಲಲ್ಲಿ “ಕ್ರಿಸ್ತ ಯೇಸುವಿನ ಶಿಷ್ಯರಾಗಿ ದೇವರನ್ನ ಆರಾಧಿಸ್ತಾ ಜೀವಿಸೋಕೆ ಬಯಸೋ ಎಲ್ರಿಗೂ ಹಿಂಸೆ ಬರುತ್ತೆ” ಅಂತ ಹೇಳುತ್ತೆ. (2 ತಿಮೊ. 3:12) ಆದ್ರೆ ಸಹೋದರ ಆ್ಯಂಡ್ರುಗೆ ಅವರ ದೇಶದಲ್ಲಿ ನಿಷೇಧ ಹಾಕಿದಾಗ ಈ ವಿಷಯನ ಒಪ್ಪಿಕೊಳ್ಳೋಕೆ ತುಂಬ ಕಷ್ಟ ಆಯ್ತು. ‘ನಮ್ಮ ದೇಶದಲ್ಲಿ ಎಷ್ಟೊಂದು ಯೆಹೋವನ ಸಾಕ್ಷಿಗಳಿದ್ದಾರೆ, ಎಲ್ಲರನ್ನೂ ಹೇಗೆ ಅರೆಸ್ಟ್‌ ಮಾಡಕ್ಕಾಗುತ್ತೆ?’ ಅಂತ ಅಂದುಕೊಂಡರು. ಈ ರೀತಿ ಚಿಂತೆಯಲ್ಲೇ ಮುಳುಗಿಬಿಟ್ಟರು. ಆದ್ರೆ ಅಲ್ಲಿದ್ದ ಬೇರೆ ಸಹೋದರರು ‘ಅರೆಸ್ಟ್‌ ಆಗದೆ ಇರೋಕೆ ಏನು ಮಾಡಬೇಕು? ಹೇಗೆ ತಪ್ಪಿಸಿಕೊಳ್ಳಬೇಕು?’ ಅಂತೆಲ್ಲಾ ಯೋಚನೆ ಮಾಡ್ತಾ ಕೂತುಕೊಳ್ಳಲಿಲ್ಲ. ಬದಲಿಗೆ ಯೆಹೋವ ಎಲ್ಲ ನೋಡಿಕೊಳ್ತಾನೆ ಅಂತ ಶಾಂತಿಯಿಂದ ಇದ್ರು. ಹೋಗ್ತಾ ಹೋಗ್ತಾ ಆ್ಯಂಡ್ರು ಕೂಡ ಅತಿಯಾಗಿ ಚಿಂತೆ ಮಾಡೋದನ್ನ ನಿಲ್ಲಿಸಿದ್ರು. ಈಗ ಎಷ್ಟೇ ಕಷ್ಟ ಇದ್ರೂ ಅವರು ಸಂತೋಷ ಕಳಕೊಳ್ಳದೆ ಶಾಂತಿಯಿಂದ ಇದ್ದಾರೆ. ಯೇಸು ಹೇಳಿದ ತರ ನಮಗೂ ಹಿಂಸೆಗಳು ಬಂದೇ ಬರುತ್ತೆ. ಆದರೂ ನಾವು ದೇವರಿಗೆ ನಂಬಿಗಸ್ತರಾಗಿ ಇರಬಹುದು.—ಯೋಹಾನ 15:20; 16:33 ಓದಿ.

16. ನಮ್ಮ ಕೆಲಸಕ್ಕೆ ನಿಷೇಧ ಹಾಕಿದಾಗ ನಾವೇನು ಮಾಡಬೇಕು?

16 ನಮ್ಮ ಕೆಲಸಕ್ಕೆ ನಿರ್ಬಂಧ ಅಥವಾ ನಿಷೇಧ ಹಾಕಿದಾಗ ಬ್ರಾಂಚ್‌ ಆಫೀಸ್‌ ಮತ್ತು ನಮ್ಮ ಸಭೆಯ ಹಿರಿಯರು ನಿರ್ದೇಶನಗಳನ್ನ ಕೊಡ್ತಾರೆ. ಈ ನಿರ್ದೇಶನಗಳು ನಮ್ಮನ್ನ ಕಾಪಾಡುತ್ತೆ ಮತ್ತು ನಮಗೆ ಪುಸ್ತಕ, ಪತ್ರಿಕೆಗಳು ಸಿಗೋ ಹಾಗೆ ಮಾಡುತ್ತೆ. ಅಷ್ಟೇ ಅಲ್ಲ ನಮ್ಮಿಂದಾದಷ್ಟು ಸಿಹಿಸುದ್ದಿ ಸಾರುತ್ತಾ ಇರೋಕೆ ಸಹಾಯ ಮಾಡುತ್ತೆ. ನಮಗೆ ಆ ನಿರ್ದೇಶನಗಳು ಪೂರ್ತಿಯಾಗಿ ಅರ್ಥ ಆಗದೆ ಇದ್ರೂ ಅದನ್ನ ಪಾಲಿಸೋಕೆ ನಮ್ಮಿಂದ ಆಗೋದನ್ನೆಲ್ಲ ಮಾಡಬೇಕು. (ಯಾಕೋ. 3:17) ನಮ್ಮ ಸಹೋದರ ಸಹೋದರಿಯರ ಬಗ್ಗೆ, ಸಂಘಟನೆ ಬಗ್ಗೆ, ಸಭೆಯಲ್ಲಿ ನಡೀತಾ ಇರೋ ಕೆಲಸಗಳ ಬಗ್ಗೆ ತಿಳುಕೊಳ್ಳೋಕೆ ಯಾರಿಗೆ ಹಕ್ಕಿಲ್ಲವೋ ಅಂಥವರಿಗೆ ಯಾವ ಮಾಹಿತಿಯನ್ನೂ ಹೇಳಬಾರದು.—ಪ್ರಸಂ. 3:7.

17. ಒಂದನೇ ಶತಮಾನದ ಅಪೊಸ್ತಲರ ತರ ನಾವು ಕೂಡ ಏನು ಮಾಡಬೇಕು?

17 ನಾವು ‘ಯೇಸು ಬಗ್ಗೆ ಸಾಕ್ಷಿ ಹೇಳ್ತಿರೋದ್ರಿಂದ’ ಸೈತಾನ ನಮ್ಮ ಮೇಲೆ ಯುದ್ಧ ಮಾಡ್ತಾ ಇದ್ದಾನೆ. (ಪ್ರಕ. 12:17) ಅದಕ್ಕೆಲ್ಲ ನಾವು ಹೆದರಬಾರದು. ಹಿಂಸೆ, ವಿರೋಧ ಇದ್ರೂ ನಾವು ಸಿಹಿಸುದ್ದಿ ಸಾರುತ್ತಾ ಇದ್ರೆ ಸಂತೋಷ ಮತ್ತು ಶಾಂತಿಯಿಂದ ಇರೋಕೆ ಆಗುತ್ತೆ. ಒಂದನೇ ಶತಮಾನದ ಅಪೊಸ್ತಲರಿಗೂ ಯೆಹೂದಿ ಅಧಿಕಾರಿಗಳು ಇನ್ನು ಮುಂದೆ ಸಿಹಿಸುದ್ದಿ ಸಾರಬಾರದು ಅಂತ ಬೆದರಿಕೆ ಹಾಕಿದ್ರು. ಆಗ ಅವರು ಆ ಅಧಿಕಾರಿಗಳ ಮಾತನ್ನ ಕೇಳಲಿಲ್ಲ. ಬದಲಿಗೆ ಅವರು ದೇವರು ಕೊಟ್ಟ ಕೆಲಸನ ಮುಂದುವರಿಸಿಕೊಂಡು ಹೋದ್ರು, ಸಂತೋಷವಾಗಿ ಇದ್ರು. (ಅ. ಕಾ. 5:27-29, 41, 42) ನಾವಿರೋ ಜಾಗದಲ್ಲಿ ನಮ್ಮ ಕೆಲಸಕ್ಕೆ ನಿಷೇಧ ಹಾಕಿದರೆ ನಾವು ಹುಷಾರಾಗಿ ಇರಬೇಕು ಮತ್ತು ಜಾಣ್ಮೆಯಿಂದ ಸಿಹಿಸುದ್ದಿ ಸಾರಬೇಕು. (ಮತ್ತಾ. 10:16) ಹೀಗೆ ಮಾಡಿದ್ರೆ, ಯೆಹೋವ ದೇವರನ್ನ ಮೆಚ್ಚಿಸ್ತಾ ಇದ್ದೀವಿ ಮತ್ತು ಜನರ ಜೀವ ಕಾಪಾಡುತ್ತಾ ಇದ್ದೀವಿ ಅನ್ನೋ ಸಮಾಧಾನ ನಮಗೆ ಇರುತ್ತೆ.

“ಶಾಂತಿಯ ದೇವರು ನಿಮ್ಮ ಜೊತೆ ಇರ್ತಾನೆ”

18. ನಮಗೆ ಯಾರಿಂದ ಶಾಂತಿ ಸಿಗುತ್ತೆ?

18 ನಾವು ಏನೇ ಕಷ್ಟ ಅನುಭವಿಸ್ತಾ ಇದ್ರೂ ಶಾಂತಿಯಿಂದ ಇರೋಕೆ ಆಗುತ್ತೆ. ಯಾಕಂದ್ರೆ ಯೆಹೋವ ನಮಗೆ ಆ ಶಾಂತಿಯನ್ನ ಕೊಡ್ತಾನೆ. ಆತನಿಂದ ಮಾತ್ರನೇ ನಮಗೆ ಆ ಶಾಂತಿ ಸಿಗೋದು. ಅಂಟುರೋಗ ಬಂದಾಗ, ನೈಸರ್ಗಿಕ ವಿಪತ್ತುಗಳಾದಾಗ ಅಥವಾ ಹಿಂಸೆ, ವಿರೋಧ ಬಂದಾಗ ಯೆಹೋವನ ಮೇಲೆ ಭರವಸೆ ಇಡಿ. ಆತನ ಸಂಘಟನೆ ಕೊಡೋ ನಿರ್ದೇಶನಗಳನ್ನ ಪಾಲಿಸಿ. “ಆಗ ಶಾಂತಿಯ ದೇವರು ನಿಮ್ಮ ಜೊತೆ ಇರ್ತಾನೆ.” (ಫಿಲಿ. 4:9) ನಮ್ಮ ಸಹೋದರ ಸಹೋದರಿಯರು ಎಷ್ಟೋ ಜನ ತುಂಬ ಕಷ್ಟಗಳನ್ನ ಅನುಭವಿಸ್ತಿದ್ದಾರೆ. ಅವರಿಗೆ ದೇವರು ಕೊಡೋ ಶಾಂತಿಯನ್ನ ಪಡಕೊಳ್ಳೋಕೆ ನಾವು ಹೇಗೆ ಸಹಾಯ ಮಾಡಬಹುದು? ಇದನ್ನ ನಾವು ಮುಂದಿನ ಲೇಖನದಲ್ಲಿ ನೋಡೋಣ.

ಗೀತೆ 60 ಆತನು ನಿನ್ನನ್ನು ಬಲಪಡಿಸುವನು

a ಯೆಹೋವ ತನ್ನನ್ನ ಪ್ರೀತಿಸೋರಿಗೆ ಶಾಂತಿ, ನೆಮ್ಮದಿಯನ್ನ ಕೊಡ್ತಾನೆ ಅಂತ ಮಾತು ಕೊಟ್ಟಿದ್ದಾನೆ. ‘ದೇವರು ಕೊಡೋ ಶಾಂತಿ’ ಅಂದ್ರೆ ಏನು? ಅದನ್ನ ಪಡಕೊಳ್ಳೋಕೆ ನಾವೇನು ಮಾಡಬೇಕು? ಅಂಟುರೋಗ ಹರಡಿದಾಗ, ನೈಸರ್ಗಿಕ ವಿಪತ್ತುಗಳಾದಾಗ ಮತ್ತು ಹಿಂಸೆ ವಿರೋಧ ಬಂದಾಗ ದೇವರು ಕೊಡೋ ಶಾಂತಿ ನಮಗೆ ಹೇಗೆ ಸಹಾಯ ಮಾಡುತ್ತೆ ಅನ್ನೋದನ್ನ ಈ ಲೇಖನದಲ್ಲಿ ನೋಡೋಣ.

b ಕೆಲವರ ಹೆಸರು ಬದಲಾಗಿದೆ.

d ಚಿತ್ರ ವಿವರಣೆ: ಒಬ್ಬ ಸಹೋದರಿ ವಿಪತ್ತು ಬಂದಾಗ ಸುರಕ್ಷಿತವಾದ ಜಾಗಕ್ಕೆ ಹೋಗೋಕೆ, ಮುಂಚೆನೇ ತಯಾರಿ ಮಾಡಿಕೊಂಡಿದ್ರು.

e ಚಿತ್ರ ವಿವರಣೆ: ನಿಷೇಧ ಇರೋ ಜಾಗದಲ್ಲಿ ನಮ್ಮ ಸಹೋದರ ಹುಷಾರಾಗಿ ಸಿಹಿಸುದ್ದಿ ಸಾರುತ್ತಿದ್ದಾನೆ.