ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 50

ಒಳ್ಳೇ ಕುರುಬನಾದ ಯೇಸುವಿನ ಮಾತು ಕೇಳಿ

ಒಳ್ಳೇ ಕುರುಬನಾದ ಯೇಸುವಿನ ಮಾತು ಕೇಳಿ

“ಅವು ನನ್ನ ಮಾತು ಕೇಳ್ತವೆ.”—ಯೋಹಾ. 10:16.

ಗೀತೆ 152 ಯೆಹೋವ ನೀನೇ ಆಶ್ರಯ

ಕಿರುನೋಟ a

1. ಯೇಸು ಯಾಕೆ ತನ್ನ ಶಿಷ್ಯರನ್ನ ಕುರಿಗಳಿಗೆ ಹೋಲಿಸಿದನು?

 ಯೇಸು ತನಗೆ ಮತ್ತು ಶಿಷ್ಯರಿಗೆ ಇರೋ ಸಂಬಂಧನ ಕುರಿ ಮತ್ತು ಕುರುಬನಿಗೆ ಹೋಲಿಸಿದನು. (ಯೋಹಾ. 10:14) ಯಾಕಂದ್ರೆ ಕುರಿಗಳು ಕುರುಬನನ್ನ ಚೆನ್ನಾಗಿ ತಿಳಿದುಕೊಂಡಿರುತ್ತವೆ ಮತ್ತು ಅವನು ಏನು ಹೇಳ್ತಾನೋ ಅದನ್ನೇ ಮಾಡುತ್ತವೆ. ಇದರ ಬಗ್ಗೆ ಒಬ್ಬ ವ್ಯಕ್ತಿ ಹೇಳಿದ್ದು, “ನಾವು ಕುರಿ ಹಿಂಡಿನ ಫೋಟೋ ತೆಗೆಯೋಕೆ ಅವುಗಳನ್ನ ಕರೆದಾಗ ಅವುಗಳು ಬಂದಿಲ್ಲ. ಆದ್ರೆ ಅವನ್ನ ಮೇಯಿಸೋ ಚಿಕ್ಕ ಹುಡುಗ ಕರೆದ ತಕ್ಷಣ ಅವೆಲ್ಲ ಅವನ ಹಿಂದೆ ಹೋದವು.”

2-3. (ಎ) ಯೇಸುವಿನ ಶಿಷ್ಯರು ಆತನ ಮಾತನ್ನ ಕೇಳುತ್ತಾ ಇದ್ದಾರೆ ಅಂತ ಹೇಗೆ ತೋರಿಸ್ತಾರೆ? (ಬಿ) ಈ ಲೇಖನದಲ್ಲಿ ಮತ್ತು ಮುಂದಿನ ಲೇಖನದಲ್ಲಿ ಏನು ಕಲಿತೀವಿ?

2 ಯೇಸು ತನ್ನ ಶಿಷ್ಯರನ್ನ ಕುರಿಗಳಿಗೆ ಹೋಲಿಸ್ತಾ “ಅವು ನನ್ನ ಮಾತು ಕೇಳ್ತವೆ” ಅಂತ ಹೇಳಿದ್ದು ನಿಜ ಅಂತ ಆ ವ್ಯಕ್ತಿಯ ಉದಾಹರಣೆಯಿಂದ ಗೊತ್ತಾಗುತ್ತೆ. (ಯೋಹಾ. 10:16) ಆದ್ರೆ ಈಗ ಯೇಸು ಸ್ವರ್ಗದಲ್ಲಿ ಇದ್ದಾನೆ. ಅವನ ಮಾತನ್ನ ನಾವು ಹೇಗೆ ಕೇಳೋಕೆ ಆಗುತ್ತೆ? ಯೇಸು ಕಲಿಸಿದ್ದನ್ನು ನಮ್ಮ ಜೀವನದಲ್ಲಿ ಪಾಲಿಸಿದ್ರೆ ಅವನ ಮಾತನ್ನ ಕೇಳಿದ ಹಾಗಾಗುತ್ತೆ.—ಮತ್ತಾ. 7:24, 25.

3 ಈ ಲೇಖನದಲ್ಲಿ ಮತ್ತು ಮುಂದಿನ ಲೇಖನದಲ್ಲಿ ಯೇಸು ಕಲಿಸಿದ ಕೆಲವು ವಿಷಯಗಳನ್ನ ನೋಡೋಣ. ಅದರಲ್ಲಿ ನಾವೇನು ಮಾಡಬೇಕು, ಏನು ಮಾಡಬಾರದು ಅಂತ ಇದೆ. ನಾವೀಗ ಮೊದಲನೇದಾಗಿ ಏನು ಮಾಡಬಾರದು ಅಂತ ಕಲಿಯೋಣ.

“ಅತಿಯಾಗಿ ಚಿಂತೆ ಮಾಡೋದನ್ನ ಬಿಟ್ಟುಬಿಡಿ”

4. ಲೂಕ 12:29ರ ಪ್ರಕಾರ ನಾವು ಯಾವುದರ ಬಗ್ಗೆ “ಅತಿಯಾಗಿ ಚಿಂತೆ” ಮಾಡ್ತೀವಿ?

4 ಲೂಕ 12:29 ಓದಿ. ಬೇಕಾಗಿರೋ ವಿಷಯಗಳ ಬಗ್ಗೆ “ಅತಿಯಾಗಿ ಚಿಂತೆ ಮಾಡೋದನ್ನ ಬಿಟ್ಟುಬಿಡಿ” ಅಂತ ಯೇಸು ತನ್ನ ಶಿಷ್ಯರಿಗೆ ಹೇಳಿದನು. ಯೇಸು ಕೊಟ್ಟ ಈ ಬುದ್ಧಿವಾದ ಸರಿಯಾಗೇ ಇದೆ ಅಂತ ನಮಗೆ ಚೆನ್ನಾಗಿ ಗೊತ್ತು. ಆದ್ರೆ ಅದನ್ನ ಪಾಲಿಸೋಕೆ ಕೆಲವೊಮ್ಮೆ ನಮಗೆ ಕಷ್ಟ ಆಗಬಹುದು. ಯಾಕೆ?

5. ಕೆಲವರಿಗೆ ಯಾಕೆ ಚಿಂತೆ ಕಾಡುತ್ತೆ?

5 ಕೆಲವರು ಊಟ, ಬಟ್ಟೆಗಾಗಿ ಚಿಂತೆ ಮಾಡುತ್ತಾ ಇರಬಹುದು. ಅವರು ಬಡ ದೇಶದಲ್ಲಿ ಇರಬಹುದು. ಕೆಲಸ ಸಿಗೋದು ಕಷ್ಟ ಆಗಿರಬಹುದು. ಅವರ ಕುಟುಂಬದಲ್ಲಿ ದುಡಿಯುತ್ತಾ ಇದ್ದ ವ್ಯಕ್ತಿ ತೀರಿಹೋಗಿರಬಹುದು. ಕೊರೋನದಿಂದಾಗಿ ಕೆಲಸ ಕಳೆದುಕೊಂಡಿರಬಹುದು. ಈ ಎಲ್ಲಾ ಕಾರಣಗಳಿಂದ ಮನೆ ನೋಡಿಕೊಳ್ಳೋಕೆ ಹೆಚ್ಚಿನವರಿಗೆ ಕಷ್ಟ ಆಗುತ್ತಿರುತ್ತೆ. (ಪ್ರಸಂ. 9:11) ಇಂಥ ಸಮಯದಲ್ಲಿ ಯೇಸು ಹೇಳಿದ ತರ ಅತಿಯಾಗಿ ಚಿಂತೆ ಮಾಡದೆ ಇರೋಕೆ ಏನು ಸಹಾಯ ಮಾಡುತ್ತೆ?

ಚಿಂತೆಯಲ್ಲಿ ಮುಳುಗಿ ಹೋಗೋದನ್ನ ಬಿಟ್ಟು ಯೆಹೋವನ ಮೇಲೆ ಭರವಸೆ ಇಡಿ (ಪ್ಯಾರ 6-8 ನೋಡಿ) b

6. ಅಪೊಸ್ತಲ ಪೇತ್ರನಿಗೆ ಏನಾಯ್ತು? ವಿವರಿಸಿ.

6 ಒಂದು ಸಲ ಪೇತ್ರ ಮತ್ತು ಬೇರೆ ಅಪೊಸ್ತಲರು ಗಲಿಲಾಯ ಸಮುದ್ರದಲ್ಲಿ ದೋಣಿಯಲ್ಲಿ ಹೋಗ್ತಾ ಇದ್ರು. ಆಗ ಯೇಸು ನೀರಿನ ಮೇಲೆ ನಡೆದುಕೊಂಡು ಬರುತ್ತಾ ಇರೋದನ್ನ ಅವರು ನೋಡ್ತಾರೆ. ಕೂಡಲೇ ಪೇತ್ರ ಯೇಸುವಿಗೆ “ಸ್ವಾಮಿ, ಅದು ನೀನೇ ಆಗಿದ್ರೆ ನೀರಿನ ಮೇಲೆ ನಡ್ಕೊಂಡು ನಿನ್ನ ಹತ್ರ ಬರೋಕೆ ನಂಗೆ ಅಪ್ಪಣೆಕೊಡು” ಅಂತ ಹೇಳಿದ. ಅದಕ್ಕೆ ಯೇಸು “ಬಾ” ಅಂದ. ಪೇತ್ರ ದೋಣಿಯಿಂದ ಇಳಿದು “ನೀರಿನ ಮೇಲೆ ನಡಿತಾ ಯೇಸು ಕಡೆ ಹೋದ.” ಅದಾದ ಮೇಲೆ ಏನಾಯ್ತು? “ಬಿರುಗಾಳಿ ನೋಡಿ ಪೇತ್ರನಿಗೆ ಭಯ ಆಗಿ ನೀರಲ್ಲಿ ಮುಳುಗ್ತಾ ‘ಸ್ವಾಮಿ ನನ್ನನ್ನ ಕಾಪಾಡು’ ಅಂತ ಚೀರಿದ.” ಆಗ ಯೇಸು ಕೈಚಾಚಿ ಅವನನ್ನ ಹಿಡಿದು ಕಾಪಾಡಿದನು. ಪೇತ್ರ ಯೇಸುವನ್ನೇ ನೋಡುತ್ತಾ ನಡೆದಾಗ ಮುಳುಗಲಿಲ್ಲ. ಯಾವಾಗ ಅವನು ಬಿರುಗಾಳಿ ಕಡೆಗೆ ಗಮನ ಕೊಟ್ಟನೋ ಆಗ ಅವನಿಗೆ ಸಂಶಯ ಮತ್ತು ಭಯ ಹುಟ್ಟಿಕೊಳ್ತು. ಕೂಡಲೇ ನೀರಲ್ಲಿ ಮುಳುಗಿದ.—ಮತ್ತಾ. 14:24-31.

7. ಪೇತ್ರನಿಂದ ನಮಗೇನು ಪಾಠ?

7 ಪೇತ್ರನಿಂದ ನಮಗೇನು ಪಾಠ? ಪೇತ್ರ ದೋಣಿಯಿಂದ ಇಳಿದು ನೀರಿನ ಮೇಲೆ ನಡ್ಕೊಂಡು ಹೋಗುವಾಗ ಅವನ ಮನಸ್ಸಲ್ಲಿ ಯೇಸು ಹತ್ರ ಹೋಗಬೇಕು ಅಂತಷ್ಟೇ ಇತ್ತು. ತಾನು ಆ ಬಿರುಗಾಳಿಗೆ ಗಮನಕೊಟ್ಟರೆ ಭಯದಿಂದ ಮುಳುಗಿ ಹೋಗ್ತೀನಿ ಅಂತ ಅವನು ಅಂದುಕೊಂಡೇ ಇರಲಿಲ್ಲ. ಆದ್ರೆ ಅದು ಹಾಗೇ ಆಗೋಯ್ತು. ಈಗ ನಮಗೂ ಜೀವನದಲ್ಲಿ ಬಿರುಗಾಳಿಯಂಥ ಸಮಸ್ಯೆಗಳು ಬಂದಾಗ ಯೆಹೋವ ದೇವರು ಮಾತುಕೊಟ್ಟಿರೋ ಆಶೀರ್ವಾದಗಳ ಮೇಲೆ ಗಮನಕೊಡಬೇಕು. ಇಲ್ಲಾಂದ್ರೆ ನಮ್ಮ ನಂಬಿಕೆ ಕಮ್ಮಿ ಆಗಿಬಿಡುತ್ತೆ. ನಾವು ಚಿಂತೆಯಲ್ಲೇ ಮುಳುಗಿ ಹೋಗ್ತೀವಿ. ನಮ್ಮ ಜೀವನದಲ್ಲಿ ಎಷ್ಟೇ ದೊಡ್ಡ ಸಮಸ್ಯೆ ಬರಲಿ ಯೆಹೋವ ದೇವರು ನಮಗೆ ಖಂಡಿತ ಸಹಾಯ ಮಾಡ್ತಾನೆ ಅಂತ ನಾವು ಹೇಗೆ ನಂಬಬಹುದು?

8. ಜಾಸ್ತಿ ಚಿಂತೆ ಮಾಡದೇ ಇರೋಕೆ ನಮಗೆ ಯಾವುದು ಸಹಾಯ ಮಾಡುತ್ತೆ?

8 ನಾವು ಅತಿಯಾಗಿ ಚಿಂತೆ ಮಾಡೋದನ್ನ ಬಿಟ್ಟು ಯೆಹೋವನ ಮೇಲೆ ನಂಬಿಕೆ ಇಡಬೇಕು. ನಮ್ಮ ಜೀವನದಲ್ಲಿ ಯೆಹೋವ ಅಪ್ಪಗೆ ಮೊದಲನೇ ಸ್ಥಾನ ಕೊಟ್ಟರೆ ನಮಗೆ ಬೇಕಾಗಿರೋದೆಲ್ಲಾ ಕೊಟ್ಟು ನೋಡಿಕೊಳ್ತಾನೆ ಅಂತ ಮಾತುಕೊಟ್ಟಿದ್ದಾನೆ. ಅದನ್ನ ನಾವು ಯಾವತ್ತೂ ಮರೆಯಬಾರದು. (ಮತ್ತಾ. 6:32, 33) ದೇವರು ಇಲ್ಲಿ ತನಕ ತನ್ನ ಮಾತನ್ನ ಉಳಿಸಿಕೊಂಡು ಬಂದಿದ್ದಾನೆ. (ಧರ್ಮೋ. 8:4, 15, 16; ಕೀರ್ತ. 37:25) ಪಕ್ಷಿಗಳಿಗೆ, ಹೂಗಳಿಗೆ ಯೆಹೋವ ದೇವರು ಬೇಕಾಗಿರೋದನ್ನ ಕೊಡುತ್ತಾನೆ ಅಂದಮೇಲೆ ನಮಗೆ ಬೇಕಾಗಿರೋ ಊಟ, ಬಟ್ಟೆನ ಕೊಡದೇ ಇರುತ್ತಾನಾ? ಅದಕ್ಕೋಸ್ಕರ ನಾವು ಚಿಂತೆ ಮಾಡಬೇಕಾ? (ಮತ್ತಾ. 6:26-30; ಫಿಲಿ. 4:6, 7) ಮಕ್ಕಳ ಮೇಲೆ ಪ್ರೀತಿ ಇರೋದ್ರಿಂದ ಅವರಿಗೆ ಬೇಕಾಗಿರೋದನ್ನ ಹೆತ್ತವರು ಕೊಟ್ಟೇ ಕೊಡ್ತಾರೆ. ಅದೇ ತರ ತನ್ನ ಜನರ ಮೇಲೆ ಪ್ರೀತಿ ಇರೋದ್ರಿಂದ ಅವರಿಗೆ ಬೇಕಾಗಿರೋದನ್ನ ಯೆಹೋವ ಅಪ್ಪ ಕೊಟ್ಟೇ ಕೊಡ್ತಾನೆ.

9. ಆ ದಂಪತಿಯ ಉದಾಹರಣೆಯಿಂದ ನೀವೇನು ಕಲಿತ್ರಿ?

9 ನಮಗೆ ಬೇಕಾಗಿರೋದನ್ನ ಯೆಹೋವ ಕೊಟ್ಟೇ ಕೊಡುತ್ತಾನೆ ಅನ್ನೋದಕ್ಕೆ ಒಬ್ಬ ಪಯನೀಯರ್‌ ದಂಪತಿಯ ಉದಾಹರಣೆ ನೋಡಿ. ಆ ದಂಪತಿ ನಿರಾಶ್ರಿತರ ಶಿಬಿರದಿಂದ ಕೆಲವು ಸಹೋದರಿಯರನ್ನ ಕೂಟಕ್ಕೆ ಕರಕೊಂಡು ಬರೋಕೆ ತಮ್ಮ ಕಾರಲ್ಲಿ ಹೋದರು. “ಕೂಟ ಮುಗಿದ ಮೇಲೆ ನಾವು ಆ ಸಹೋದರಿಯರನ್ನ ಮನೆಗೆ ಕರೆದ್ವಿ. ಆದ್ರೆ ಅವರಿಗೆ ಕೊಡೋಕೆ ನಮ್ಮ ಹತ್ರ ಏನೂ ಇಲ್ಲ ಅಂತ ಆಮೇಲೆ ನೆನಪಾಯ್ತು” ಅಂತ ಸಹೋದರ ಹೇಳ್ತಾರೆ. ಆಮೇಲೆ ಏನಾಯ್ತು? ಸಹೋದರ ಹೇಳ್ತಾರೆ: “ನಾವು ಮನೆಗೆ ಹೋದಾಗ ಮನೆ ಮುಂದೆ ಎರಡು ದೊಡ್ಡ ಬ್ಯಾಗ್‌ಗಳು ಇದ್ದವು. ಅದರಲ್ಲಿ ಊಟ ಇತ್ತು. ಅದನ್ನ ಯಾರಿಟ್ರು ಅಂತ ನಮಗೆ ಗೊತ್ತಿಲ್ಲ. ಆದ್ರೆ ಯೆಹೋವ ದೇವರು ನಮಗೆ ಬೇಕಾಗಿರೋದನ್ನ ಕೊಟ್ಟರು ಅಂತ ಗೊತ್ತಾಯ್ತು.” ಸ್ವಲ್ಪ ದಿನ ಆದಮೇಲೆ ಆ ದಂಪತಿಯ ಕಾರ್‌ ಕೆಟ್ಟು ಹೋಯ್ತು. ಈ ಕಾರ್‌ ಇಲ್ಲಾಂದ್ರೆ ಅವರಿಗೆ ಸೇವೆ ಮಾಡೋಕೆ ಕಷ್ಟ ಆಗುತ್ತಿತ್ತು. ಯಾಕಂದ್ರೆ ಸೇವೆ ಮಾಡೋಕೆ ಅವರು ಕಾರಲ್ಲೇ ಹೋಗ್ತಿದ್ರು. ಆದ್ರೆ ಈಗ ಅದನ್ನ ರಿಪೇರಿ ಮಾಡಿಸೋಕೆ ಅವರ ಹತ್ರ ದುಡ್ಡಿರಲಿಲ್ಲ. ಆದ್ರೂ ಅವರು ರಿಪೇರಿಗೆ ಎಷ್ಟು ಖರ್ಚಾಗುತ್ತೆ ಅಂತ ಕೇಳೋಕೆ ಗ್ಯಾರೇಜ್‌ಗೆ ತಗೊಂಡು ಹೋದ್ರು. ಆಗ ಒಬ್ಬ ವ್ಯಕ್ತಿ ಅಲ್ಲಿಗೆ ಬಂದು ‘ಈ ಕಾರ್‌ ಯಾರದ್ದು’ ಅಂತ ಕೇಳಿದ. ಆಗ ಆ ಸಹೋದರ “ಇದು ನಂದೇ ಕಾರು, ಕೆಟ್ಟುಹೋಗಿದೆ. ರಿಪೇರಿ ಮಾಡಿಸಬೇಕು” ಅಂತ ಹೇಳಿದ್ರು. ಅದಕ್ಕೆ ಆ ವ್ಯಕ್ತಿ “ಪರವಾಗಿಲ್ಲ, ನನ್ನ ಹೆಂಡತಿಗೆ ಈ ತರದ ಕಾರ್‌ ಅಂದ್ರೆ ತುಂಬ ಇಷ್ಟ. ಇದೇ ಕಲರ್‌ ಕಾರನ್ನ ನಾವು ಹುಡುಕುತ್ತಾ ಇದ್ವಿ. ಈ ಕಾರನ್ನ ಎಷ್ಟಕ್ಕೆ ಮಾರುತ್ತೀರಾ?” ಅಂತ ಕೇಳಿದ. ಆಗ ಸಹೋದರ ಆ ಕಾರನ್ನ ಮಾರಿದರು. ಇದ್ರಿಂದ ಇನ್ನೂ ಚೆನ್ನಾಗಿರೋ ಕಾರನ್ನ ತಗೊಳ್ಳೋಕೆ ದುಡ್ಡು ಸಿಕ್ತು. “ಆ ದಿನ ನಮಗಾದ ಖುಷಿನ ಮಾತಲ್ಲಿ ಹೇಳೋಕಾಗಲ್ಲ. ಇದು ಅಪ್ಪಿತಪ್ಪಿ ನಡೆದಿದ್ದಲ್ಲ. ಯೆಹೋವ ದೇವರೇ ನಮಗೆ ಸಹಾಯ ಮಾಡಿದ್ದು” ಅಂತ ಆ ಸಹೋದರ ಹೇಳ್ತಾರೆ.

10. ಕೀರ್ತನೆ 37:5ರಲ್ಲಿ ನಾವೇನು ಮಾಡಬೇಕು ಅಂತ ಪ್ರೋತ್ಸಾಹಿಸುತ್ತೆ?

10 ನಾವು ಒಳ್ಳೇ ಕುರುಬನಾಗಿರೋ ಯೇಸುವಿನ ಮಾತು ಕೇಳಿದ್ರೆ ಮತ್ತು ಅತಿಯಾಗಿ ಚಿಂತೆ ಮಾಡೋದನ್ನ ಬಿಟ್ಟುಬಿಟ್ರೆ ಯೆಹೋವ ನಮ್ಮನ್ನ ಚೆನ್ನಾಗಿ ನೋಡಿಕೊಳ್ತಾನೆ ಅಂತ ನಂಬೋಕೆ ಆಗುತ್ತೆ. (ಕೀರ್ತನೆ 37:5 ಓದಿ. 1 ಪೇತ್ರ 5:7) ಒಂದು ಕುಟುಂಬವನ್ನ, ಕುಟುಂಬದ ಯಜಮಾನ ನೋಡಿಕೊಳ್ತಿದ್ದ ಅಥವಾ ನಮಗೆ ಒಂದು ಕೆಲಸ ಇರುತ್ತಿತ್ತು. ಹೀಗೆಲ್ಲಾ ಯೆಹೋವ ನಮಗೆ ಸಹಾಯ ಮಾಡ್ತಿದ್ದನು. ಆದ್ರೆ ಈಗ ಕುಟುಂಬದ ಯಜಮಾನನಿಗೆ ಅಷ್ಟು ಕೆಲಸ ಮಾಡೋಕೆ ಆಗದೇ ಇರೋದ್ರಿಂದ ಮನೆಯವರನ್ನ ನೋಡಿಕೊಳ್ಳೋಕೆ ಆಗದೇ ಇರಬಹುದು ಅಥವಾ ನಾವು ನಮ್ಮ ಕೆಲಸ ಕಳೆದುಕೊಂಡಿರಬಹುದು. ಆದ್ರೂ ಯೆಹೋವ ನಮ್ಮನ್ನ ಯಾವುದಾದರೂ ಒಂದು ರೀತಿಯಲ್ಲಿ ಚೆನ್ನಾಗಿ ನೋಡಿಕೊಳ್ತಾನೆ. ಈಗ, ಯೇಸು ನಮಗೆ ಮಾಡಬಾರದು ಅಂತ ಹೇಳಿರೋ ಎರಡನೇ ವಿಷಯ ನೋಡೋಣ.

“ತಪ್ಪು ಹುಡುಕೋದನ್ನ ನಿಲ್ಲಿಸಿ”

ಬೇರೆಯವರಲ್ಲಿ ತಪ್ಪುಗಳನ್ನ ಹುಡುಕದೆ ಒಳ್ಳೇದನ್ನ ನೋಡಿ (ಪ್ಯಾರ 11, 14-16 ನೋಡಿ) c

11. (ಎ) ಮತ್ತಾಯ 7:1, 2ರಲ್ಲಿ ನಾವು ಯಾವ ವಿಷಯ ಮಾಡಬಾರದು ಅಂತ ಯೇಸು ಹೇಳಿದ್ದಾನೆ? (ಬಿ) ಇದನ್ನ ಪಾಲಿಸೋಕೆ ನಮಗೆ ಯಾಕೆ ಕಷ್ಟ ಆಗುತ್ತೆ?

11 ಮತ್ತಾಯ 7:1, 2 ಓದಿ. ನಾವು ಅಪರಿಪೂರ್ಣರಾಗಿರೋದ್ರಿಂದ ಬೇರೆಯವರಲ್ಲಿ ತಪ್ಪು ಹುಡುಕುತ್ತೀವಿ ಅಂತ ಯೇಸುಗೆ ಚೆನ್ನಾಗಿ ಗೊತ್ತಿತ್ತು. ಅದಕ್ಕೆ ಯೇಸು, “ಬೇರೆಯವರಲ್ಲಿ ತಪ್ಪು ಹುಡುಕೋದನ್ನ ನಿಲ್ಲಿಸಿ” ಅಂತ ಹೇಳಿದನು. ಯೇಸು ಕೊಟ್ಟ ಈ ಬುದ್ಧಿವಾದ ಪಾಲಿಸೋಕೆ ನಾವೆಲ್ಲ ಪ್ರಯತ್ನ ಹಾಕ್ತೀವಿ. ಆದ್ರೂ ಕೆಲವೊಂದು ಸಲ ತಪ್ಪು ಹುಡುಕ್ತೀವಿ. ಹಾಗೆ ಆಗಬಾರದು ಅಂದ್ರೆ ಏನು ಮಾಡಬೇಕು? ನಾವು ಯೇಸುವಿನ ಮಾತನ್ನ ಕೇಳಬೇಕು. ಬೇರೆಯವರ ತಪ್ಪನ್ನ ಹುಡುಕದೆ ಇರೋಕೆ ನಮ್ಮಿಂದ ಆಗೋದನ್ನೆಲ್ಲ ಮಾಡಬೇಕು.

12-13. ಬೇರೆಯವರಲ್ಲಿ ತಪ್ಪು ಹುಡುಕದೆ ಇರೋಕೆ ಯೆಹೋವನ ಉದಾಹರಣೆ ಹೇಗೆ ಸಹಾಯ ಮಾಡುತ್ತೆ?

12 ನಾವು ಯೆಹೋವ ದೇವರ ಗುಣಗಳನ್ನ ಧ್ಯಾನಿಸಬೇಕು. ಯೆಹೋವ ತನ್ನ ಜನರಲ್ಲಿ ಯಾವಾಗಲೂ ಒಳ್ಳೇದನ್ನೇ ನೋಡ್ತಾನೆ. ಉದಾಹರಣೆಗೆ, ರಾಜ ದಾವೀದ ದೊಡ್ಡ ತಪ್ಪುಗಳನ್ನ ಮಾಡಿದ. ಅವನು ಬತ್ಷೆಬೆ ಜೊತೆ ವ್ಯಭಿಚಾರ ಮಾಡಿದ. ಅವಳ ಗಂಡನನ್ನ ಸಾಯಿಸಿದ. (2 ಸಮು. 11:2-4, 14, 15, 24) ಇದರಿಂದ ಅವನಿಗೂ ಅವನ ಕುಟುಂಬಕ್ಕೂ, ಅವನ ಹೆಂಡತಿಯರಿಗೂ ತುಂಬ ಕಷ್ಟ ಬಂತು. (2 ಸಮು. 12:10, 11) ಆಮೇಲೆ ದಾವೀದ ಇನ್ನೊಂದು ದೊಡ್ಡ ತಪ್ಪು ಮಾಡಿದ. ಅವನು ಯೆಹೋವನ ಮೇಲೆ ಭರವಸೆ ಇಡಲಿಲ್ಲ. ತನ್ನ ಸೈನ್ಯದ ಜನಗಣತಿ ಮಾಡಿಸಿದ. ದಾವೀದನಿಗೆ ತನ್ನ ಬಗ್ಗೆ ತನ್ನ ಸೈನ್ಯದ ಬಗ್ಗೆ ತುಂಬ ಹೆಮ್ಮೆ ಇದ್ದಿರಬೇಕು. ಹಾಗಾಗಿ ಅಹಂಕಾರದಿಂದ ದಾವೀದ ಯೆಹೋವನ ಮೇಲೆ ಭರವಸೆ ಇಡದೆ ತನ್ನ ಸೈನ್ಯದ ಮೇಲೆ ಭರವಸೆ ಇಟ್ಟ. ಇದರಿಂದ ಏನಾಯ್ತು? 70 ಸಾವಿರ ಇಸ್ರಾಯೇಲ್ಯರು ಅಂಟುರೋಗದಿಂದ ಸಾಯಬೇಕಾಗಿ ಬಂತು.—2 ಸಮು. 24:1-4, 10-15.

13 ನೀವು ಒಬ್ಬ ಇಸ್ರಾಯೇಲ್ಯನಾಗಿ ಇದ್ದಿದ್ರೆ ಏನು ಮಾಡುತ್ತಿದ್ರಿ? ದಾವೀದನನ್ನ ಯಾವತ್ತೂ ಕ್ಷಮಿಸಬಾರದು ಅಂತ ಅಂದುಕೊಳ್ತಿದ್ರಾ? ಆದ್ರೆ ಯೆಹೋವ ಹಾಗೆ ಮಾಡಲಿಲ್ಲ. ದಾವೀದ ನಿಜವಾಗಲೂ ಪಶ್ಚಾತ್ತಾಪ ಪಟ್ಟಿದ್ದನ್ನ ಮತ್ತು ಜೀವನಪೂರ್ತಿ ತನಗೆ ನಿಷ್ಠೆಯಿಂದ ಇದ್ದಿದ್ದನ್ನ ಯೆಹೋವ ಮನಸ್ಸಿಗೆ ತಗೊಂಡನು. ಅದಕ್ಕೆ ಅವನನ್ನ ಕ್ಷಮಿಸಿದನು. ದಾವೀದ ತನ್ನನ್ನ ತುಂಬ ಪ್ರೀತಿಸ್ತಾನೆ ಮತ್ತು ಒಳ್ಳೇದನ್ನ ಮಾಡೋಕೆ ತುಂಬ ಇಷ್ಟಪಡುತ್ತಾನೆ ಅಂತ ಯೆಹೋವ ದೇವರಿಗೆ ಗೊತ್ತಿತ್ತು. ಯೆಹೋವ ನಮ್ಮಲ್ಲೂ ಒಳ್ಳೇದನ್ನೇ ನೋಡ್ತಾನೆ ಅಂತ ಗೊತ್ತಾದಾಗ ಎಷ್ಟು ಖುಷಿ ಆಗುತ್ತೆ ಅಲ್ವಾ?—1 ಅರ. 9:4; 1 ಪೂರ್ವ. 29:10, 17.

14. ನಾವು ಬೇರೆಯವರಲ್ಲಿ ತಪ್ಪು ಹುಡುಕದೆ ಇರೋಕೆ ಏನು ಮಾಡಬೇಕು?

14 ಯೆಹೋವ ದೇವರಿಗೆ ನಾವು ಅಪರಿಪೂರ್ಣರು ಅಂತ ಗೊತ್ತು. ಹಾಗಾಗಿ ಯಾವಾಗಲೂ ನಮ್ಮಲ್ಲಿ ತಪ್ಪು ಹುಡುಕಲ್ಲ, ನಮ್ಮನ್ನ ಅರ್ಥಮಾಡಿಕೊಳ್ತಾನೆ. ಅದೇ ತರ ನಾವೂ ನಮ್ಮ ಸಹೋದರರ ತಪ್ಪುಗಳನ್ನ ನೋಡದೇ ಅವರಲ್ಲಿರೋ ಒಳ್ಳೇ ಗುಣಗಳಿಗೆ ಗಮನಕೊಡಬೇಕು. ಯೆಹೋವ ದೇವರನ್ನ ಅನುಕರಿಸೋ ವ್ಯಕ್ತಿ ಬೇರೆಯವರ ತಪ್ಪುಗಳನ್ನ ಅರ್ಥಮಾಡಿಕೊಳ್ತಾನೆ, ಅವರ ಜೊತೆ ಚೆನ್ನಾಗಿ ನಡೆದುಕೊಳ್ತಾನೆ. ಒಂದು ವಜ್ರ ಮೊದಲು ನೋಡೋಕೆ ಕಲ್ಲಿನ ತರ ಇರುತ್ತೆ. ಅಷ್ಟು ಸುಂದರವಾಗಿ ಕಾಣಿಸಲ್ಲ. ಆದ್ರೆ ಅದನ್ನ ಕಟ್‌ ಮಾಡಿ, ಪಾಲಿಶ್‌ ಮಾಡಿದ ಮೇಲೆ ಅದು ಹೊಳೆಯುತ್ತೆ, ಅದರ ಬೆಲೆ ನಮಗೆ ಗೊತ್ತಾಗುತ್ತೆ. ಅದೇ ತರ ನಾವು ನಮ್ಮ ಸಹೋದರ ಸಹೋದರಿಯರಲ್ಲಿರೋ ತಪ್ಪುಗಳನ್ನ ಹುಡುಕೋಕೆ ಹೋಗಬಾರದು. ಯೆಹೋವ ಮತ್ತು ಯೇಸು ತರ ಅವರಲ್ಲಿರೋ ಒಳ್ಳೇತನವನ್ನ ನೋಡಬೇಕು.

15. ನಾವು ಬೇರೆಯವರಲ್ಲಿ ತಪ್ಪು ಹುಡುಕದೆ ಇರೋಕೆ ಇನ್ನೂ ಏನು ಮಾಡಬೇಕು?

15 ನಾವು ಬೇರೆಯವರಲ್ಲಿ ತಪ್ಪು ಹುಡುಕದೆ ಇರೋಕೆ ಇನ್ನೂ ಏನು ಮಾಡಬೇಕು? ಅವರ ಪರಿಸ್ಥಿತಿನ ಚೆನ್ನಾಗಿ ಅರ್ಥಮಾಡಿಕೊಳ್ಳಬೇಕು. ಒಂದು ಉದಾಹರಣೆ ನೋಡಿ. ಯೇಸುವಿನ ಕಾಲದಲ್ಲಿ ಒಬ್ಬ ಬಡ ವಿಧವೆ ಚಿಕ್ಕ ನಾಣ್ಯವನ್ನ ಕಾಣಿಕೆ ಪೆಟ್ಟಿಗೆಯಲ್ಲಿ ಹಾಕೋದನ್ನ ಯೇಸು ನೋಡಿದನು. ತಕ್ಷಣ ಯೇಸು ಅವಳ ಹತ್ರ ಹೋಗಿ “ಯಾಕೆ ಇಷ್ಟು ಕಮ್ಮಿ ಹಾಕ್ತಿದ್ದೀಯಾ?” ಅಂತ ಕೇಳಿದನಾ? ಇಲ್ಲ. ಅವಳು ಯಾಕೆ ಅಷ್ಟೇ-ಅಷ್ಟು ಹಾಕಿದ್ದಾಳೆ, ಅವಳ ಪರಿಸ್ಥಿತಿ ಏನು ಅನ್ನೋದನ್ನ ಯೇಸು ಅರ್ಥಮಾಡಿಕೊಂಡನು. ಅವಳು ತನ್ನ ಹತ್ರ ಇರೋದನ್ನೆಲ್ಲ ಹಾಕಿದ್ದಾಳೆ ಅಂತ ಗೊತ್ತಾದಾಗ ಯೇಸು ಅವಳನ್ನ ಹೊಗಳಿದನು.—ಲೂಕ 21:1-4.

16. ವೆರೋನಿಕ ಅವರ ಉದಾಹರಣೆಯಿಂದ ನೀವೇನು ಕಲಿತ್ರಿ?

16 ನಾವು ಬೇರೆಯವರ ಪರಿಸ್ಥಿತಿಯನ್ನ ಚೆನ್ನಾಗಿ ಅರ್ಥಮಾಡಿಕೊಳ್ಳಬೇಕು ಅನ್ನೋದಕ್ಕೆ ಸಹೋದರಿ ವೆರೋನಿಕಳ ಉದಾಹರಣೆ ನೋಡಿ. ಅವರ ಸಭೆಲಿ ಒಬ್ಬ ಒಂಟಿ ಸಹೋದರಿ ಇದ್ರು. ಅವರಿಗೆ ಒಬ್ಬ ಮಗ ಇದ್ದ. ಅವರ ಬಗ್ಗೆ ಸಹೋದರಿ ವೆರೋನಿಕ ಹೀಗೆ ಹೇಳ್ತಾರೆ, “ಆ ಸಹೋದರಿ ಪ್ರತಿವಾರ ಕೂಟಗಳಿಗೆ ಬರುತ್ತಿರಲಿಲ್ಲ, ಸೇವೆಗೆ ಬರುತ್ತಿರಲಿಲ್ಲ, ಇದನ್ನ ನೋಡಿ ಅವರಿಗೆ ಅಷ್ಟು ಹುರುಪಿಲ್ಲ ಅಂತ ಅಂದುಕೊಳ್ಳುತ್ತಿದ್ದೆ. ಆದ್ರೆ ಒಂದಿನ ನಾನು ಅವರ ಜೊತೆ ಸೇವೆಗೆ ಹೋದಾಗ ಅವರ ಮಗನಿಗೆ ಬುದ್ಧಿಮಾಂದ್ಯತೆ ಇದೆ ಅಂತ ಗೊತ್ತಾಯ್ತು. ಹೀಗೆ ಮನೆ ನೋಡಿಕೊಳ್ಳೋಕೆ ಮತ್ತು ಮಗನಿಗೆ ಯೆಹೋವನ ಬಗ್ಗೆ ಕಲಿಸೋಕೆ ಅವರಿಗೆ ತುಂಬ ಕಷ್ಟ ಆಗುತ್ತಿತ್ತು. ಅವರ ಮಗನಿಗೆ ಆಗಾಗ ಹುಷಾರಿಲ್ಲದೆ ಇರುತ್ತಿದ್ರಿಂದ ಅವರು ಕೆಲವೊಮ್ಮೆ ಬೇರೆ ಸಭೆಗೂ ಹೋಗ್ತಿದ್ರು. ಅವರಿಗೆ ಇಷ್ಟೊಂದು ಕಷ್ಟಗಳಿವೆ ಅಂತ ನಂಗೆ ಗೊತ್ತಿರಲಿಲ್ಲ. ಅವರಿಗೆ ಇಷ್ಟೆಲ್ಲಾ ಕಷ್ಟ ಇದ್ರೂ ತಮ್ಮ ಕೈಲಾದ ಸೇವೆ ಮಾಡ್ತಿದ್ದಾರೆ ಅನ್ನೋದನ್ನ ನೋಡಿದಾಗ ನನಗೆ ಅವರ ಮೇಲಿದ್ದ ಗೌರವ ಇನ್ನೂ ಜಾಸ್ತಿ ಆಯ್ತು. ಈಗ ನಾನು ಅವರನ್ನ ತುಂಬ ಪ್ರೀತಿಸ್ತೀನಿ.”

17. ಯಾಕೋಬ 2:8ರಲ್ಲಿ ನಾವೇನು ಮಾಡಬೇಕು ಅಂತ ಹೇಳುತ್ತೆ? ಅದನ್ನ ನಾವು ಹೇಗೆ ಮಾಡಬಹುದು?

17 ನಮ್ಮ ಸಹೋದರ ಸಹೋದರಿಯರಲ್ಲಿ ತಪ್ಪು ಹುಡುಕುತ್ತಾ ಇದ್ದೀವಿ ಅಂತ ಗೊತ್ತಾದಾಗ ನಾವೇನು ಮಾಡಬೇಕು? ಸಹೋದರ ಸಹೋದರಿಯರನ್ನ ಪ್ರೀತಿಸಬೇಕು ಅಂತ ಇರೋ ಬುದ್ಧಿವಾದನ ನೆನಪು ಮಾಡ್ಕೊಬೇಕು. (ಯಾಕೋಬ 2:8 ಓದಿ.) ‘ಅವರಲ್ಲಿ ತಪ್ಪು ಹುಡುಕದೆ ಇರೋಕೆ ಸಹಾಯ ಮಾಡಪ್ಪ’ ಅಂತ ಯೆಹೋವನ ಹತ್ರ ಯಾವಾಗಲೂ ಪ್ರಾರ್ಥನೆ ಮಾಡಬೇಕು. ಆಮೇಲೆ ಆ ಪ್ರಾರ್ಥನೆಗೆ ತಕ್ಕ ಹಾಗೆ ಅವರ ಜೊತೆ ಸಮಯ ಕಳೆಯಬೇಕು. ಅವರ ಜೊತೆ ಸೇವೆಗೆ ಹೋಗಬಹುದು. ಅವರನ್ನ ನಿಮ್ಮ ಮನೆಗೆ ಊಟಕ್ಕೆ ಕರೆಯಬಹುದು. ಹೀಗೆ ಮಾಡಿದ್ರೆ ನೀವು ಅವರ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳುತ್ತೀರ ಮತ್ತು ಯೆಹೋವ, ಯೇಸು ತರ ನೀವು ಅವರಲ್ಲಿ ಒಳ್ಳೇದನ್ನೇ ನೋಡ್ತೀರ. ಆಗ “ಬೇರೆಯವರಲ್ಲಿ ತಪ್ಪು ಹುಡುಕೋದನ್ನ ನಿಲ್ಲಿಸಿ” ಅಂತ ಒಳ್ಳೇ ಕುರುಬನಾದ ಯೇಸು ಕೊಟ್ಟ ಬುದ್ಧಿವಾದ ಕೇಳಿ ಪಾಲಿಸಿದ ಹಾಗಾಗುತ್ತೆ.

18. ಒಳ್ಳೆ ಕುರುಬ ಹೇಳಿದ ಮಾತನ್ನ ಪಾಲಿಸ್ತಾ ಇದ್ದೀವಿ ಅಂತ ನಾವು ಹೇಗೆ ತೋರಿಸಬಹುದು?

18 ಕುರಿ ಹೇಗೆ ತನ್ನ ಕುರುಬನ ಮಾತನ್ನ ಕೇಳುತ್ತೋ ಅದೇ ತರ ಯೇಸುವಿನ ಶಿಷ್ಯರು ಯೇಸುವಿನ ಮಾತನ್ನ ಕೇಳುತ್ತಾರೆ. ನಮಗೆ ಬೇಕಾಗಿರೋ ವಿಷಯಗಳ ಬಗ್ಗೆ ಅತಿಯಾಗಿ ಚಿಂತೆ ಮಾಡದೇ ಇದ್ರೆ, ಬೇರೆಯವರ ತಪ್ಪು ಹುಡುಕದೆ ಇದ್ರೆ ಯೆಹೋವ ದೇವರು ಮತ್ತು ಯೇಸು ಕ್ರಿಸ್ತ ನಾವು ಹಾಕೋ ಪ್ರಯತ್ನನ ಆಶೀರ್ವದಿಸುತ್ತಾರೆ. ನಾವು ‘ಬೇರೆ ಕುರಿಗಳೇ’ ಆಗಿರಲಿ ಅಥವಾ “ಚಿಕ್ಕ ಹಿಂಡೇ” ಆಗಿರಲಿ, ಒಳ್ಳೇ ಕುರುಬನ ಮಾತನ್ನ ಪಾಲಿಸ್ತಾ ಇರೋಣ. (ಲೂಕ 12:32; ಯೋಹಾ. 10:11, 14, 16) ಮುಂದಿನ ಲೇಖನದಲ್ಲಿ ನಾವು ಮಾಡಲೇಬೇಕು ಅಂತ ಯೇಸು ಹೇಳಿದ ಎರಡು ವಿಷಯಗಳನ್ನ ನೋಡೋಣ.

ಗೀತೆ 53 ಐಕ್ಯದಿಂದ ಕೆಲಸ ಮಾಡುವುದು

a ಕುರಿಗಳು ನನ್ನ ಮಾತು ಕೇಳ್ತವೆ ಅಂತ ಯೇಸು ಹೇಳಿದ್ದರ ಅರ್ಥ ತನ್ನ ಶಿಷ್ಯರು ತಾನು ಕಲಿಸಿದ ವಿಷಯಗಳನ್ನ ಕೇಳ್ತಾರೆ ಮತ್ತು ಅದನ್ನ ಜೀವನದಲ್ಲಿ ಪಾಲಿಸ್ತಾರೆ ಅಂತ ಆಗಿತ್ತು. ನಮಗೆ ಬೇಕಾಗಿರೋ ವಿಷಯದ ಬಗ್ಗೆ ಅತಿಯಾಗಿ ಚಿಂತಿಸಬಾರದು ಮತ್ತು ಬೇರೆಯವರಲ್ಲಿ ತಪ್ಪು ಕಂಡುಹಿಡಿಯಬಾರದು ಅಂತ ಯೇಸು ಕಲಿಸಿಕೊಟ್ಟಿದ್ದಾನೆ. ಈ ಎರಡು ವಿಷಯಗಳನ್ನ ನಾವು ಹೇಗೆ ಜೀವನದಲ್ಲಿ ಪಾಲಿಸಬಹುದು ಅಂತ ಈ ಲೇಖನದಲ್ಲಿ ನೋಡೋಣ.

b ಚಿತ್ರ ವಿವರಣೆ: ಒಬ್ಬ ಸಹೋದರ ತನ್ನ ಕೆಲಸವನ್ನ ಕಳೆದುಕೊಂಡಿದ್ದಾನೆ. ತನ್ನ ಮನೆಯವರನ್ನ ನೋಡಿಕೊಳ್ಳೋಕೆ ಕಷ್ಟ ಆಗುತ್ತಿದೆ. ಬೇರೆ ಮನೆಯನ್ನ ಹುಡುಕಬೇಕಾಗಿ ಬಂತು. ಪರಿಸ್ಥಿತಿ ಹೀಗಿರುವಾಗ ಅವರ ಗಮನ ಯೆಹೋವನ ಕಡೆಯಿಂದ ಚಿಂತೆ ಮೇಲೆ ಹೋಗಿಬಿಡಬಹುದು.

c ಚಿತ್ರ ವಿವರಣೆ: ಒಬ್ಬ ಸಹೋದರ ಕೂಟಕ್ಕೆ ಲೇಟಾಗಿ ಬಂದಿದ್ದಾನೆ. ಆದ್ರೆ ಅನೌಪಚಾರಿಕ ಸಾಕ್ಷಿಕಾರ್ಯ ಮಾಡುತ್ತಾ ಇದ್ದಾನೆ, ಒಬ್ಬ ವಯಸ್ಸಾದ ಸಹೋದರಿಗೆ ಸಹಾಯ ಮಾಡುತ್ತಾ ಇದ್ದಾನೆ ಮತ್ತು ರಾಜ್ಯ ಸಭಾಗೃಹ ಸುಂದರವಾಗಿ ಇಟ್ಟುಕೊಳ್ಳೋಕೆ ಕೆಲಸ ಮಾಡುತ್ತಾ ಇದ್ದಾನೆ.