“ಅವನು ಎದ್ದುಬರುವನೆಂದು ನಾನು ಬಲ್ಲೆನು”
“ನಮ್ಮ ಮಿತ್ರನಾದ ಲಾಜರನು ವಿಶ್ರಾಂತಿಮಾಡುತ್ತಿದ್ದಾನೆ; ಅವನನ್ನು ನಿದ್ರೆಯಿಂದ ಎಬ್ಬಿಸಲಿಕ್ಕಾಗಿ ನಾನು ಅಲ್ಲಿಗೆ ಪ್ರಯಾಣಿಸುತ್ತಿದ್ದೇನೆ.”—ಯೋಹಾ. 11:11.
1. ತೀರಿಹೋದ ತನ್ನ ತಮ್ಮನ ಬಗ್ಗೆ ಮಾರ್ಥಳಿಗೆ ಯಾವ ಖಾತ್ರಿ ಇತ್ತು? (ಲೇಖನದ ಆರಂಭದ ಚಿತ್ರ ನೋಡಿ.)
ಯೇಸುವಿನ ಆಪ್ತ ಸ್ನೇಹಿತೆಯೂ ಶಿಷ್ಯೆಯೂ ಆದ ಮಾರ್ಥಳ ಸಹೋದರ ಲಾಜರನು ತೀರಿಕೊಂಡಿದ್ದನು. ಅವಳು ತುಂಬ ದುಃಖದಲ್ಲಿದ್ದಳು. ಅವಳಿಗೆ ಸಾಂತ್ವನ ತರುವ ವಿಷಯ ಏನಾದರೂ ಇತ್ತಾ? ಹೌದು. ಯೇಸು ಅವಳಿಗೆ, “ನಿನ್ನ ಸಹೋದರನು ಎದ್ದುಬರುವನು” ಎಂದು ಮಾತುಕೊಟ್ಟನು. ಈ ಮಾತನ್ನು ಕೇಳಿ ಅವಳಲ್ಲಿದ್ದ ದುಃಖ ಸಂಪೂರ್ಣವಾಗಿ ಹೋಗಿರಲಿಕ್ಕಿಲ್ಲ. ಆದರೂ ಯೇಸುವಿನ ಮಾತಿನಲ್ಲಿ ನಂಬಿಕೆ ಇಟ್ಟು ಮಾರ್ಥಳು ಅವನಿಗೆ, “ಕಡೇ ದಿನದಲ್ಲಾಗುವ ಪುನರುತ್ಥಾನದಲ್ಲಿ ಅವನು ಎದ್ದುಬರುವನೆಂದು ನಾನು ಬಲ್ಲೆನು” ಎಂದಳು. (ಯೋಹಾ. 11:20-24) ಭವಿಷ್ಯದಲ್ಲಿ ಪುನರುತ್ಥಾನ ಆಗುತ್ತದೆ ಎಂದು ಅವಳಿಗೆ ಖಂಡಿತ ಗೊತ್ತಿತ್ತು. ಆದರೆ ಅದೇ ದಿನ ಯೇಸು ಒಂದು ದೊಡ್ಡ ಅದ್ಭುತ ಮಾಡಿದನು—ಲಾಜರನನ್ನು ಪುನರುತ್ಥಾನಗೊಳಿಸಿದನು!
2. ಮಾರ್ಥಳಲ್ಲಿದ್ದ ದೃಢಭರವಸೆ ನಿಮ್ಮಲ್ಲೂ ಇರಬೇಕೆಂದು ನೀವು ಯಾಕೆ ಬಯಸುತ್ತೀರಿ?
2 ತೀರಿಹೋದ ನಮ್ಮ ಪ್ರಿಯ ಜನರನ್ನು ಯೇಸು ಅಥವಾ ಯೆಹೋವ ನಮ್ಮೀ ಕಾಲದಲ್ಲಿ ತಕ್ಷಣ ಪುನರುತ್ಥಾನ ಮಾಡಿ ಕೊಡುತ್ತಾರೆ ಎಂದು ನಂಬಲು ಯಾವುದೇ ಆಧಾರವಿಲ್ಲ. ಆದರೆ ಭವಿಷ್ಯದಲ್ಲಿ ನಮ್ಮ ಪ್ರಿಯ ಜನರ ಪುನರುತ್ಥಾನ ಆಗುತ್ತದೆ ಎಂದು ಮಾರ್ಥಳಿಗೆ ಇದ್ದಷ್ಟು ಖಾತ್ರಿ ನಿಮಗೂ ಇದೆಯಾ? ಬಹುಶಃ ನೀವು ನಿಮ್ಮ ಬಾಳಸಂಗಾತಿಯನ್ನು, ತಾಯಿಯನ್ನು, ತಂದೆಯನ್ನು, ನಿಮ್ಮ ಪ್ರೀತಿಯ ಅಜ್ಜಅಜ್ಜಿಯನ್ನು ಅಥವಾ ಕರುಳ ಕುಡಿಯನ್ನು ಕಳೆದುಕೊಂಡಿರಬಹುದು. ಅವರನ್ನು ತಬ್ಬಿಕೊಳ್ಳುವ, ಅವರೊಂದಿಗೆ ಮಾತಾಡುವ, ನಗಾಡುವ ಸಮಯಕ್ಕಾಗಿ ನೀವು ತುಂಬ ಹಂಬಲಿಸುತ್ತಿರಬಹುದು. ಸಂತೋಷದ ವಿಷಯವೇನೆಂದರೆ ನೀವು ಸಹ, ‘ಪುನರುತ್ಥಾನದಲ್ಲಿ ನನ್ನ ಪ್ರಿಯ _________________ ಎದ್ದುಬರುವರೆಂದು ನಾನು ಬಲ್ಲೆ’ ಎಂದು ಹೇಳಲು ಬಲವಾದ ಕಾರಣಗಳಿವೆ. ಹೀಗಿದ್ದರೂ ನಮ್ಮಲ್ಲಿ ಪ್ರತಿಯೊಬ್ಬರು ಅಂಥ ದೃಢಭರವಸೆ ಮೂಡಿಸುವಂಥ ಕಾರಣಗಳ ಬಗ್ಗೆ ಯೋಚಿಸುವುದು ಒಳ್ಳೇದು.
3, 4. (ಎ) ಲಾಜರನ ಪುನರುತ್ಥಾನದ ಮುಂಚೆ ಯೇಸು ಏನೇನು ಮಾಡಿದ್ದನು? (ಬಿ) ಇದು ಮಾರ್ಥಳ ನಂಬಿಕೆಯನ್ನು ಹೇಗೆ ಬಲಪಡಿಸಿತು?
3 ಯೇಸು ಗಲಿಲಾಯದಲ್ಲಿರುವ ನಾಯಿನೆಂಬ ಊರಿನ ಹತ್ತಿರ ಒಬ್ಬ ವಿಧವೆಯ ಮಗನನ್ನು ಪುನರುತ್ಥಾನಗೊಳಿಸಿದ್ದನ್ನು ಮಾರ್ಥ ನೋಡಿರಲಿಕ್ಕಿಲ್ಲ. ಏಕೆಂದರೆ ಈಕೆಯ ಊರು ಇದ್ದದ್ದು ಯೆರೂಸಲೇಮಿನ ಹತ್ತಿರ. ಆದರೆ ಆ ಪುನರುತ್ಥಾನದ ಬಗ್ಗೆ ಅವಳು ಖಂಡಿತ ಕೇಳಿಸಿಕೊಂಡಿರಬೇಕು. ಅಷ್ಟೇ ಅಲ್ಲ, ಯೇಸು ಯಾಯೀರನ ಮಗಳನ್ನು ಪುನರುತ್ಥಾನಗೊಳಿಸಿದ್ದರ ಬಗ್ಗೆ ಕೂಡ ಕೇಳಿಸಿಕೊಂಡಿರಬಹುದು. ಯಾಯೀರನ ಮನೆಯಲ್ಲಿದ್ದ ಎಲ್ಲರಿಗೂ “ಅವಳು ಸತ್ತಿದ್ದಾಳೆಂಬುದು . . . ಗೊತ್ತಿತ್ತು.” ಆದರೂ ಯೇಸು ಅವಳ ಕೈಹಿಡಿದು “ಹುಡುಗಿ, ಎದ್ದೇಳು!” ಎಂದಾಗ ಅವಳು ತಕ್ಷಣವೇ ಎದ್ದಳು. (ಲೂಕ 7:11-17; 8:41, 42, 49-55) ಯೇಸು ಕಾಯಿಲೆಗಳನ್ನು ವಾಸಿಮಾಡಬಲ್ಲನು ಎಂದು ಮಾರ್ಥಳಿಗೆ ಮತ್ತು ಅವಳ ತಂಗಿ ಮರಿಯಳಿಗೆ ಗೊತ್ತಿತ್ತು. ಆದ್ದರಿಂದ ಯೇಸು ಅಲ್ಲಿ ಇರುತ್ತಿದ್ದರೆ ಲಾಜರನು ಸಾಯುತ್ತಿರಲಿಲ್ಲ ಎಂದವರು ನಂಬಿದ್ದರು. ಆದರೆ ಈಗ ಲಾಜರನು ತೀರಿಹೋಗಿದ್ದನು. ಅವನಿಗೆ ಏನಾಗಲಿದೆಯೆಂದು ಮಾರ್ಥ ನಿರೀಕ್ಷಿಸಿದಳು? ಲಾಜರನು ‘ಕಡೇ ದಿನದಲ್ಲಿ’ ಅಂದರೆ ಭವಿಷ್ಯದಲ್ಲಿ ಪುನಃ ಜೀವಂತಗೊಳ್ಳುವನು ಎಂದವಳು ಹೇಳಿದ್ದನ್ನು ಗಮನಿಸಿದಿರಾ? ಅವಳಿಗೆ ಇಷ್ಟೊಂದು ದೃಢಭರವಸೆ ಹೇಗೆ ಬಂತು? ಭವಿಷ್ಯದಲ್ಲಿ ಪುನರುತ್ಥಾನ ಮಾಡಲಾಗುವುದು ಮತ್ತು ಅದರಲ್ಲಿ ನಿಮ್ಮ ಪ್ರಿಯ ಜನರೂ ಇರಬಹುದೆಂದು ಹೇಗೆ ದೃಢಭರವಸೆಯಿಂದ ಇರಬಲ್ಲಿರಿ?
4 ಪುನರುತ್ಥಾನದಲ್ಲಿ ನಂಬಿಕೆ ಇಡಲು ಬಲವಾದ ಕಾರಣಗಳಿವೆ. ನಾವೀಗ ಅಂಥ ಕೆಲವು ಕಾರಣಗಳನ್ನು ಚರ್ಚಿಸೋಣ. ಈ ಚರ್ಚೆಯಲ್ಲಿ ನಿಮಗೆ ದೇವರ ವಾಕ್ಯದಿಂದ ಸಿಗಲಿರುವ ಅಂಶಗಳ ಬಗ್ಗೆ ನೀವು ಹೆಚ್ಚು ಯೋಚಿಸಿರಲಿಕ್ಕಿಲ್ಲ. ಆದರೆ ಅವು, ನೀವು ಮರಣದಲ್ಲಿ ಕಳೆದುಕೊಂಡಿರುವ ನಿಮ್ಮ ಪ್ರಿಯ ವ್ಯಕ್ತಿಯನ್ನು ಪುನಃ ನೋಡುವಿರಿ ಎಂಬ ನಿಮ್ಮ ನಂಬಿಕೆಯನ್ನು ಬಲಪಡಿಸಲಿವೆ.
ನಿರೀಕ್ಷೆ ತುಂಬಿಸುವ ಘಟನೆಗಳು!
5. ಲಾಜರನು ಖಂಡಿತ ಪುನರುತ್ಥಾನ ಆಗಿ ಬರುತ್ತಾನೆ ಎಂದು ಮಾರ್ಥಳು ನಂಬಲು ಕಾರಣವೇನು?
5 ಮಾರ್ಥಳು, ‘ನನ್ನ ಸಹೋದರ ಎದ್ದುಬರಬಹುದು ಎಂದು ನೆನಸುತ್ತೇನೆ’ ಅನ್ನಲಿಲ್ಲ, “ಅವನು ಎದ್ದುಬರುವನೆಂದು ನಾನು ಬಲ್ಲೆನು” ಅಂದಳು. ಮಾರ್ಥಳಿಗೆ ಇಷ್ಟು ದೃಢಭರವಸೆ ಇರಲು ಕಾರಣವೇನು? ಹಿಂದೆ ನಡೆದಿದ್ದ ಪುನರುತ್ಥಾನಗಳ ಬಗ್ಗೆ ಅವಳಿಗೆ ಗೊತ್ತಿತ್ತು. ಅವಳು ಚಿಕ್ಕವಳಿದ್ದಾಗ ಮನೆಯಲ್ಲಿ ಮತ್ತು ಸಭಾಮಂದಿರದಲ್ಲಿ ಈ ಪುನರುತ್ಥಾನಗಳ ಬಗ್ಗೆ ಕೇಳಿಸಿಕೊಂಡಿರಬೇಕು. ಬೈಬಲಿನಲ್ಲಿ ತಿಳಿಸಲಾಗಿರುವ ಪುನರುತ್ಥಾನಗಳಲ್ಲಿ ಮೂರು ಪುನರುತ್ಥಾನಗಳ ಕುರಿತು ಈಗ ಚರ್ಚಿಸೋಣ.
6. ಮಾರ್ಥಳಿಗೆ ಯಾವ ಅದ್ಭುತದ ಬಗ್ಗೆ ಖಂಡಿತ ಗೊತ್ತಿದ್ದಿರಬೇಕು?
6 ಪ್ರವಾದಿಯಾದ ಎಲೀಯನಿಗೆ ದೇವರು ಅದ್ಭುತಗಳನ್ನು ಮಾಡುವ ಶಕ್ತಿ ಕೊಟ್ಟಾಗ ಮೊದಲ ಪುನರುತ್ಥಾನ ನಡೆಯಿತು. ಇಸ್ರಾಯೇಲಿನ ಉತ್ತರ ದಿಕ್ಕಿಗೆ ಫೊಯಿನಿಕೆ ದೇಶದಲ್ಲಿದ್ದ ಚಾರೆಪ್ತ ಎಂಬ ಊರಲ್ಲಿ ಒಬ್ಬ ಬಡ ವಿಧವೆ ಇದ್ದಳು. ಈಕೆ ಪ್ರವಾದಿ ಎಲೀಯನಿಗೆ ಅತಿಥಿಸತ್ಕಾರ ಮಾಡಿದಳು. ಆಗ ಯೆಹೋವನು ಒಂದು ಅದ್ಭುತ ಮಾಡಿ ಅವಳ ಹತ್ತಿರವಿದ್ದ ಹಿಟ್ಟು ಮತ್ತು ಎಣ್ಣೆ ಖಾಲಿಯಾಗದಂತೆ ನೋಡಿಕೊಂಡನು. ಇದರಿಂದ ಅವಳು ಮತ್ತು ಅವಳ ಮಗ ಜೀವಂತ ಉಳಿದರು. (1 ಅರ. 17:8-16) ಸ್ವಲ್ಪ ಸಮಯವಾದ ಮೇಲೆ ಅವಳ ಮಗ ಅಸ್ವಸ್ಥನಾಗಿ ಸತ್ತುಹೋದನು. ಆದರೆ ಎಲೀಯ ಅವಳಿಗೆ ಸಹಾಯ ಮಾಡಿದನು. “ಯೆಹೋವನೇ, ಈ ಹುಡುಗನ ಪ್ರಾಣವು ತಿರಿಗಿ ಬರುವಂತೆ ಮಾಡು” ಎಂದು ಪ್ರಾರ್ಥಿಸಿದನು. ಅವನು ಪ್ರಾರ್ಥಿಸಿದಂತೆಯೇ ಆಯಿತು! ಯೆಹೋವನು ಎಲೀಯನ ಪ್ರಾರ್ಥನೆಗೆ ಕಿವಿಗೊಟ್ಟು ಹುಡುಗನಿಗೆ ಪ್ರಾಣ ಬರುವಂತೆ ಮಾಡಿದನು. ಇದು ಬೈಬಲಿನಲ್ಲಿ ದಾಖಲಾಗಿರುವ ಮೊದಲನೇ ಪುನರುತ್ಥಾನ. (1 ಅರಸುಗಳು 17:17-24 ಓದಿ.) ಮಾರ್ಥಳಿಗೆ ಈ ಅಸಾಮಾನ್ಯವಾದ ಘಟನೆಯ ಬಗ್ಗೆ ಖಂಡಿತ ಗೊತ್ತಿದ್ದಿರಬೇಕು.
7, 8. (ಎ) ಒಬ್ಬ ತಾಯಿಯ ದುಃಖವನ್ನು ಶಮನಗೊಳಿಸಲು ಎಲೀಷ ಏನು ಮಾಡಿದನು? (ಬಿ) ಎಲೀಷನು ಮಾಡಿದ ಅದ್ಭುತದಿಂದ ಯೆಹೋವನ ಬಗ್ಗೆ ಏನು ರುಜುವಾಗುತ್ತದೆ?
7 ಬೈಬಲಿನಲ್ಲಿ ದಾಖಲಾಗಿರುವ ಎರಡನೇ ಪುನರುತ್ಥಾನವನ್ನು ಮಾಡಿದ್ದು ಪ್ರವಾದಿ ಎಲೀಷ. ಶೂನೇಮ್ ಎಂಬ ಊರಿನಲ್ಲಿ ಒಬ್ಬ ಇಸ್ರಾಯೇಲ್ಯ ಸ್ತ್ರೀ ಇದ್ದಳು. ಅವಳಿಗೆ ಮಕ್ಕಳಿರಲಿಲ್ಲ. ಅವಳು ಎಲೀಷನಿಗೆ ಅಸಾಮಾನ್ಯವಾದ ಅತಿಥಿಸತ್ಕಾರ ಮಾಡಿದ್ದರಿಂದ ಯೆಹೋವನು ಅವಳಿಗೆ ಮತ್ತು ಅವಳ ವಯಸ್ಸಾದ ಗಂಡನಿಗೆ ಒಂದು ಗಂಡುಮಗುವನ್ನು ಕೊಟ್ಟು ಆಶೀರ್ವದಿಸಿದನು. ಆದರೆ ಕೆಲವು ವರ್ಷಗಳಾದ ಮೇಲೆ ಆ ಹುಡುಗನು ಸತ್ತುಹೋದನು. ಆ ತಾಯಿಗೆ ಎಷ್ಟು ದುಃಖವಾಗಿರಬೇಕೆಂದು ಯೋಚಿಸಿ. ಅವಳು ಗಂಡನ ಅನುಮತಿ ಪಡೆದು 30 ಕಿ.ಮೀ. ದೂರದಲ್ಲಿದ್ದ ಕರ್ಮೆಲ್ ಬೆಟ್ಟಕ್ಕೆ ಬಂದು ಪ್ರವಾದಿ ಎಲೀಷನನ್ನು ಭೇಟಿಮಾಡಿದಳು. ಎಲೀಷನು ಹುಡುಗನನ್ನು ಪುನರುತ್ಥಾನಗೊಳಿಸಲು ತನ್ನ ಸೇವಕನಾದ ಗೇಹಜಿಯನ್ನು ತನಗಿಂತ ಮುಂಚೆ ಶೂನೇಮಿಗೆ ಕಳುಹಿಸಿದನು. ಆದರೆ ಗೇಹಜಿಗೆ ಹುಡುಗನನ್ನು ಪುನರುತ್ಥಾನ ಮಾಡಲು ಆಗಲಿಲ್ಲ. ಅಷ್ಟರಲ್ಲಿ, ದುಃಖಿಸುತ್ತಿದ್ದ ಆ ತಾಯಿ ಮತ್ತು ಎಲೀಷ ಮನೆಗೆ ಬಂದರು.—2 ಅರ. 4:8-31.
8 ಆ ಹುಡುಗನ ಮೃತದೇಹವನ್ನು ಇಡಲಾಗಿದ್ದ ಕೋಣೆಗೆ ಹೋಗಿ ಎಲೀಷ ಪ್ರಾರ್ಥಿಸಿದನು. ಅವನ ಪ್ರಾರ್ಥನೆಯನ್ನು ಕೇಳಿ ಯೆಹೋವನು ಹುಡುಗನಿಗೆ ಪುನಃ ಜೀವ ಬರುವಂತೆ ಮಾಡಿದನು. ತಾಯಿ ತನ್ನ ಮಗ ಜೀವಂತವಾಗಿರುವುದನ್ನು ನೋಡಿದಾಗ ಅವಳ ಸಂತೋಷಕ್ಕೆ ಎಲ್ಲೆಯೇ ಇರಲಿಲ್ಲ! (2 ಅರಸುಗಳು 4:32-37 ಓದಿ.) ಬಹುಶಃ ಅವಳಿಗೆ ಹನ್ನಳ ಪ್ರಾರ್ಥನೆ ನೆನಪಾಗಿರಬಹುದು. ಹನ್ನಳಿಗೂ ಮಕ್ಕಳಿರಲಿಲ್ಲ. ಆಮೇಲೆ ಯೆಹೋವನು ಅವಳಿಗೊಂದು ಗಂಡುಮಗು ಅಂದರೆ ಸಮುವೇಲ ಹುಟ್ಟುವಂತೆ ಮಾಡಿದನು. ಆಗ ಹನ್ನಳು ಯೆಹೋವನನ್ನು ಕೀರ್ತಿಸುತ್ತಾ “ಪಾತಾಳದಲ್ಲಿ ದೊಬ್ಬುವವನೂ ಮೇಲಕ್ಕೆ ಬರಮಾಡುವವನೂ ಆತನೇ” ಎಂದಿದ್ದಳು. (1 ಸಮು. 2:6) ಶೂನೇಮಿನಲ್ಲಿ ಸತ್ತುಹೋಗಿದ್ದ ಆ ಹುಡುಗನನ್ನು “ಮೇಲಕ್ಕೆ ಬರಮಾಡುವ” ಅಂದರೆ ಅಕ್ಷರಾರ್ಥವಾಗಿ ಎಬ್ಬಿಸುವ ಮೂಲಕ ತನಗೆ ಸತ್ತವರನ್ನು ಪುನರುತ್ಥಾನಗೊಳಿಸುವ ಶಕ್ತಿಯಿದೆ ಎಂದು ದೇವರು ರುಜುಪಡಿಸಿದನು.
9. ಬೈಬಲಿನಲ್ಲಿ ದಾಖಲಾಗಿರುವ ಮೂರನೇ ಪುನರುತ್ಥಾನ ಹೇಗೆ ನಡೆಯಿತೆಂದು ವಿವರಿಸಿ.
9 ಅಸಾಮಾನ್ಯವಾದ ಇನ್ನೊಂದು ಘಟನೆ ಎಲೀಷ ಸತ್ತ ನಂತರ ನಡೆಯಿತು. ಸುಮಾರು 50 ವರ್ಷ ಯೆಹೋವನ ಸೇವೆ ಮಾಡಿದ ಮೇಲೆ ಎಲೀಷನಿಗೆ “ಮರಣಕರರೋಗ” ಬಂದು ಅವನು ಸತ್ತುಹೋದನು. ಇದಾಗಿ ಸುಮಾರು ಸಮಯ ಕಳೆಯಿತು. ಎಲೀಷನನ್ನು ಹೂಣಿಟ್ಟ ಸ್ಥಳದಲ್ಲಿ ಅವನ ಎಲುಬುಗಳು ಮಾತ್ರ ಇದ್ದವು. ಒಂದು ದಿನ ಕೆಲವು ಇಸ್ರಾಯೇಲ್ಯರು ಸತ್ತುಹೋಗಿದ್ದ ಒಬ್ಬ ಮನುಷ್ಯನನ್ನು ಸಮಾಧಿಮಾಡುವುದಕ್ಕೆ ಬಂದಿದ್ದರು. ಅಷ್ಟರಲ್ಲಿ ಸುಲಿಗೆಮಾಡುವವರು ಬರುತ್ತಾ ಇರುವುದನ್ನು ನೋಡಿದರು. ಅಲ್ಲಿಂದ ಪರಾರಿಯಾಗುವ ಅವಸರದಲ್ಲಿ ಅವರು ಆ ಶವವನ್ನು ಎಲೀಷನ ಸಮಾಧಿಯಲ್ಲಿ ಬಿಸಾಡಿ ಓಡಿಹೋದರು. “ಸತ್ತ ಮನುಷ್ಯನು ಎಲೀಷನ ಎಲುಬುಗಳಿಗೆ ತಗುಲಿದ ಕೂಡಲೆ ಉಜ್ಜೀವಿಸಿ ಎದ್ದು ನಿಂತನು” ಎಂದು ಬೈಬಲ್ ಹೇಳುತ್ತದೆ. (2 ಅರ. 13:14, 20, 21) ದೇವರಿಗೆ ಮರಣವನ್ನು ತೆಗೆದುಹಾಕುವ ಶಕ್ತಿಯಿದೆ ಎಂದು ಈ ವೃತ್ತಾಂತಗಳು ಮಾರ್ಥಳಿಗೆ ರುಜುಪಡಿಸಿದವು. ಈ ವೃತ್ತಾಂತಗಳು, ದೇವರಲ್ಲಿ ಅಪಾರವಾದ, ಅಪರಿಮಿತ ಶಕ್ತಿಯಿದೆ ಎಂಬ ದೃಢಭರವಸೆಯನ್ನು ನಿಮ್ಮಲ್ಲೂ ತುಂಬಿಸಬೇಕು.
ಅಪೊಸ್ತಲರ ಸಮಯದಲ್ಲಾದ ಘಟನೆಗಳು
10. ತಬಿಥಾ ಎಂಬ ಕ್ರೈಸ್ತ ಸಹೋದರಿಗೆ ಏನಾಯಿತು ಮತ್ತು ಪೇತ್ರನು ಏನು ಮಾಡಿದನು?
10 ದೇವರ ನಂಬಿಗಸ್ತ ಸೇವಕರು ಮಾಡಿದ ಬೇರೆ ಪುನರುತ್ಥಾನಗಳ ಬಗ್ಗೆ ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದಲ್ಲೂ ಬರೆಯಲಾಗಿದೆ. ಯೇಸು ನಾಯಿನೆಂಬ ಊರಿನ ಹತ್ತಿರ ಮತ್ತು ಯಾಯೀರನ ಮನೆಯಲ್ಲಿ ಮಾಡಿದ ಪುನರುತ್ಥಾನಗಳ ಬಗ್ಗೆ ಲೇಖನದ ಆರಂಭದಲ್ಲೇ ಚರ್ಚಿಸಿದೆವು. ಈ ಪುನರುತ್ಥಾನಗಳಾಗಿ ಸ್ವಲ್ಪ ಸಮಯದ ನಂತರ ಅಪೊಸ್ತಲ ಪೇತ್ರನು ದೊರ್ಕಳನ್ನು ಪುನರುತ್ಥಾನಗೊಳಿಸಿದನು. ಈಕೆಗೆ ತಬಿಥಾ ಎಂಬ ಹೆಸರೂ ಇತ್ತು. ಪೇತ್ರನು ಅವಳ ದೇಹವನ್ನು ಇಡಲಾಗಿದ್ದ ಕೋಣೆಗೆ ಬಂದು ಪ್ರಾರ್ಥಿಸಿದ ನಂತರ “ತಬಿಥಾ ಏಳು” ಅಂದನು. ಅವಳಿಗೆ ತಕ್ಷಣ ಜೀವ ಬಂತು. “ಜೀವಿತಳಾದ ಅವಳನ್ನು” ಪೇತ್ರನು ಅಲ್ಲಿ ಕೂಡಿಬಂದಿದ್ದವರ ಮುಂದೆ ಕರತಂದನು. ಈ ಘಟನೆ ಎಷ್ಟು ದೃಢಭರವಸೆ ಮೂಡಿಸಿತೆಂದರೆ ಆ ಊರಿನಲ್ಲಿದ್ದ “ಅನೇಕರು ಕರ್ತನನ್ನು ನಂಬುವವರಾದರು.” ಈ ಹೊಸ ಶಿಷ್ಯರು ಯೇಸುವಿನ ಬಗ್ಗೆ ಸುವಾರ್ತೆಯನ್ನು ಬೇರೆಯವರಿಗೆ ಸಾರಲು ಮತ್ತು ಸತ್ತವರನ್ನು ಎಬ್ಬಿಸುವ ಶಕ್ತಿ ಯೆಹೋವನಿಗಿದೆ ಎಂದು ಎಲ್ಲರಿಗೂ ಹೇಳಲು ಸಾಧ್ಯವಾಯಿತು.—ಅ. ಕಾ. 9:36-42.
11. (ಎ) ವೈದ್ಯನಾಗಿದ್ದ ಲೂಕನು ಯೌವನಸ್ಥನ ಬಗ್ಗೆ ಏನು ವರದಿಸಿದ್ದಾನೆ? (ಬಿ) ಈ ಘಟನೆ ಬೇರೆಯವರ ಮೇಲೆ ಯಾವ ಪ್ರಭಾವ ಬೀರಿತು?
11 ಅಪೊಸ್ತಲರ ಸಮಯದಲ್ಲಾದ ಇನ್ನೊಂದು ಪುನರುತ್ಥಾನವನ್ನು ಜನರು ಕಣ್ಣಾರೆ ಕಂಡರು. ಒಂದು ದಿನ ತ್ರೋವ (ಈಗ ವಾಯವ್ಯ ಟರ್ಕಿಯಲ್ಲಿದೆ) ಎಂಬಲ್ಲಿ ಒಂದು ಮೇಲಂತಸ್ತಿನ ಕೋಣೆಯಲ್ಲಿ ಕೂಟ ನಡೆಯುತ್ತಿದ್ದಾಗ ಅಪೊಸ್ತಲ ಪೌಲನು ಅಲ್ಲಿದ್ದನು. ಪೌಲನ ಭಾಷಣವು ಮಧ್ಯರಾತ್ರಿಯ ವರೆಗೆ ಮುಂದುವರಿಯಿತು. ಇದನ್ನು ಯೂತಿಖನೆಂಬ ಯೌವನಸ್ಥನು ಕಿಟಕಿಯಲ್ಲಿ ಕೂತು ಕೇಳುತ್ತಿದ್ದನು. ಆದರೆ ಅವನಿಗೆ ಜೋರು ನಿದ್ದೆ ಬಂದು ಮೂರನೇ ಅಂತಸ್ತಿನಿಂದ ಕೆಳಗೆ ಬಿದ್ದುಬಿಟ್ಟನು. ಬಹುಶಃ ಲೂಕನೇ ಯೂತಿಖನು ಬಿದ್ದಿರುವ ಕಡೆ ಮೊದಲು ಓಡಿಬಂದಿರಬೇಕು. ವೈದ್ಯನಾಗಿದ್ದ ಲೂಕನಿಗೆ ಯೌವನಸ್ಥನು ಗಾಯಗೊಂಡು ಪ್ರಜ್ಞೆತಪ್ಪಿಲ್ಲ, ಸತ್ತುಹೋಗಿದ್ದಾನೆಂದು ಗೊತ್ತಾಯಿತು. ಪೌಲನು ಸಹ ಕೆಳಗೆ ಬಂದನು. ಅವನು ಯೂತಿಖನನ್ನು ತಬ್ಬಿಕೊಂಡು “ಅವನ ಪ್ರಾಣ ಅವನಲ್ಲಿದೆ” ಅಂದಾಗ ಎಲ್ಲರಿಗೂ ಆಶ್ಚರ್ಯವಾಯಿತು. ನಡೆದದ್ದನ್ನು ನೋಡಿದ ಎಲ್ಲರ ಮೇಲೂ ಈ ಅದ್ಭುತ ತುಂಬ ಪ್ರಭಾವ ಬೀರಿತು. ಆ ಯೌವನಸ್ಥನು ಸತ್ತುಹೋಗಿದ್ದನೆಂದು ತಿಳಿದ ಜನರಿಗೆ ಈಗ ಅವನು ಪುನರುತ್ಥಾನಗೊಂಡಿದ್ದನ್ನು ನೋಡಿ “ಅಪಾರವಾದ ಸಾಂತ್ವನ ದೊರಕಿತು.”—ಅ. ಕಾ. 20:7-12.
ಭರವಸೆ ಇಡಬಹುದಾದ ನಿರೀಕ್ಷೆ
12, 13. ನಾವು ಇದುವರೆಗೂ ಚರ್ಚಿಸಿರುವ ಪುನರುತ್ಥಾನಗಳ ಬಗ್ಗೆ ಯೋಚಿಸುವಾಗ ಯಾವ ಪ್ರಶ್ನೆಗಳು ಏಳುತ್ತವೆ?
12 ನಾವೀಗ ಚರ್ಚಿಸಿದ ಪುನರುತ್ಥಾನಗಳಿಂದ ನಿಮಗೆ ಮಾರ್ಥಳಲ್ಲಿದ್ದ ದೃಢಭರವಸೆ ಬರಬೇಕು. ನಮಗೆ ಜೀವ ಕೊಟ್ಟಿರುವ ನಮ್ಮ ದೇವರು ಸತ್ತವರನ್ನು ಪುನಃ ಬದುಕಿಸಬಲ್ಲನು ಎಂಬ ದೃಢಭರವಸೆ ನಮಗಿರಬೇಕು. ನಾವು ಚರ್ಚಿಸಿದ ಪ್ರತಿಯೊಂದು ಪುನರುತ್ಥಾನ ನಡೆದಾಗ ಅಲ್ಲಿ ದೇವರ ಒಬ್ಬ ನಂಬಿಗಸ್ತ ಸೇವಕನಿದ್ದನು ಎಂಬುದು ಆಸಕ್ತಿಕರ ಸಂಗತಿ. ನಾವು ಇದುವರೆಗೂ ಚರ್ಚಿಸಿದ ಪುನರುತ್ಥಾನಗಳ ಸಮಯದಲ್ಲಿ ಎಲೀಯ, ಎಲೀಷ, ಯೇಸು, ಪೇತ್ರ ಇದ್ದರು. ಈ ಘಟನೆಗಳು ಯೆಹೋವನು ಅದ್ಭುತಗಳನ್ನು ಮಾಡುತ್ತಿದ್ದ ಸಮಯದಲ್ಲಿ ನಡೆದವು. ಹಾಗಾದರೆ ಇಂಥ ಅದ್ಭುತಗಳು ನಡೆಯದಿದ್ದ ಸಮಯದಲ್ಲಿ ತೀರಿಕೊಂಡವರ ಬಗ್ಗೆ ಏನು? ದೇವರು ಸತ್ತವರನ್ನು ಭವಿಷ್ಯದಲ್ಲಿ ಪುನರುತ್ಥಾನಗೊಳಿಸುವನು ಎಂದು ನಂಬಿಗಸ್ತ ಸ್ತ್ರೀಪುರುಷರು ನಂಬಲು ಸಾಧ್ಯವಿತ್ತಾ? “ಕಡೇ ದಿನದಲ್ಲಾಗುವ ಪುನರುತ್ಥಾನದಲ್ಲಿ ಅವನು ಎದ್ದುಬರುವನೆಂದು ನಾನು ಬಲ್ಲೆನು” ಎಂದು ತನ್ನ ಸಹೋದರನ ಬಗ್ಗೆ ಹೇಳಿದ ಮಾರ್ಥಳಲ್ಲಿದ್ದಷ್ಟು ದೃಢಭರವಸೆ ಅವರಲ್ಲೂ ಇತ್ತಾ? ಭವಿಷ್ಯದಲ್ಲಿ ಪುನರುತ್ಥಾನ ಆಗಲಿದೆ ಎಂದು ಅವಳು ಯಾಕೆ ನಂಬಿದಳು ಮತ್ತು ನೀವು ಯಾಕೆ ನಂಬಬಹುದು?
13 ಭವಿಷ್ಯದಲ್ಲಿ ಪುನರುತ್ಥಾನ ಆಗುತ್ತದೆ ಎಂದು ದೇವರ ನಿಷ್ಠಾವಂತ ಸೇವಕರಿಗೆ ತಿಳಿದಿತ್ತೆಂದು ಬೈಬಲಿನ ಅನೇಕ ವೃತ್ತಾಂತಗಳಿಂದ ಗೊತ್ತಾಗುತ್ತದೆ. ಈ ವೃತ್ತಾಂತಗಳಲ್ಲಿ ಕೆಲವನ್ನು ಈಗ ನೋಡೋಣ.
14. ಅಬ್ರಹಾಮನ ಕುರಿತ ವೃತ್ತಾಂತ ಪುನರುತ್ಥಾನದ ಬಗ್ಗೆ ನಮಗೆ ಏನನ್ನು ಕಲಿಸುತ್ತದೆ?
14 ಯೆಹೋವನು ಅಬ್ರಹಾಮನಿಗೆ ಇಸಾಕನನ್ನು ಏನು ಮಾಡಬೇಕೆಂದು ಹೇಳಿದ್ದನ್ನು ಜ್ಞಾಪಿಸಿಕೊಳ್ಳಿ. ಅಬ್ರಹಾಮನು ತುಂಬ ವರ್ಷ ಕಾದ ಮೇಲೆ ಇಸಾಕನು ಹುಟ್ಟಿದ್ದನು. ಯೆಹೋವನು ಅವನಿಗೆ, “ನಿನಗೆ ಪ್ರಿಯನಾಗಿರುವ ಒಬ್ಬನೇ ಮಗನಾದ ಇಸಾಕನನ್ನು ತೆಗೆದುಕೊಂಡು ಮೊರೀಯ ದೇಶಕ್ಕೆ ಹೋಗಿ . . . ಸರ್ವಾಂಗಹೋಮವಾಗಿ ಅರ್ಪಿಸಬೇಕು” ಎಂದನು. (ಆದಿ. 22:2) ಈ ಆಜ್ಞೆಯನ್ನು ಕೇಳಿದಾಗ ಅಬ್ರಹಾಮನಿಗೆ ಹೇಗನಿಸಿರಬೇಕು? ಅಬ್ರಹಾಮನ ಸಂತತಿಯ ಮೂಲಕ ಎಲ್ಲ ಜನಾಂಗಗಳಿಗೆ ಆಶೀರ್ವಾದ ಉಂಟಾಗುವುದು ಎಂದು ಯೆಹೋವನು ಮಾತು ಕೊಟ್ಟಿದ್ದನು. (ಆದಿ. 13:14-16; 18:18; ರೋಮ. 4:17, 18) ಈ ಸಂತತಿ ಇಸಾಕನ ಮೂಲಕವೇ ಬರಲಿದೆ ಎಂದು ಸಹ ಯೆಹೋವನು ಹೇಳಿದ್ದನು. (ಆದಿ. 21:12) ಆದರೆ ಅಬ್ರಹಾಮನು ತನ್ನ ಮಗನನ್ನು ಯಜ್ಞವಾಗಿ ಅರ್ಪಿಸಿಬಿಟ್ಟರೆ ಈ ಮಾತು ಹೇಗೆ ನೆರವೇರುವುದು? ಇಸಾಕನನ್ನು ಪುನರುತ್ಥಾನಗೊಳಿಸುವ ಶಕ್ತಿ ಯೆಹೋವನಿಗಿದೆ ಎಂಬ ನಂಬಿಕೆ ಅಬ್ರಹಾಮನಿಗಿತ್ತೆಂದು ಬರೆಯುವಂತೆ ಪವಿತ್ರಾತ್ಮ ಪೌಲನನ್ನು ಪ್ರೇರಿಸಿತು. (ಇಬ್ರಿಯ 11:17-19 ಓದಿ.) ಇಸಾಕನು ಕೂಡಲೆ ಅಂದರೆ ಕೆಲವೇ ತಾಸು, ಒಂದು ದಿನ ಅಥವಾ ಒಂದು ವಾರದಲ್ಲಿ ಪುನಃ ಜೀವಂತವಾಗುತ್ತಾನೆ ಎಂದು ಅಬ್ರಹಾಮನು ನೆನಸಿದನು ಎಂದು ಬೈಬಲ್ ಹೇಳುವುದಿಲ್ಲ. ತನ್ನ ಮಗನ ಪುನರುತ್ಥಾನ ಯಾವಾಗ ಆಗುತ್ತದೆ ಎಂದು ಅಬ್ರಹಾಮನಿಗೆ ಗೊತ್ತಿರಲಿಲ್ಲ. ಆದರೆ ಯೆಹೋವನು ಇಸಾಕನನ್ನು ಪುನಃ ಜೀವಂತವಾಗಿ ಎಬ್ಬಿಸುವನು ಎಂಬ ಭರವಸೆ ಅವನಿಗಿತ್ತು.
15. ನಂಬಿಗಸ್ತ ಯೋಬನಿಗೆ ಯಾವ ನಿರೀಕ್ಷೆ ಇತ್ತು?
15 ಭವಿಷ್ಯದಲ್ಲಿ ಪುನರುತ್ಥಾನ ಆಗುತ್ತದೆ ಎಂದು ನಂಬಿಗಸ್ತ ಯೋಬನಿಗೂ ಗೊತ್ತಿತ್ತು. ಒಂದು ಮರ ಕಡಿದರೆ ಅದು ಪುನಃ ಚಿಗುರಿ ಹೊಸ ಮರವಾಗಿ ಬೆಳೆಯಬಹುದು. ಆದರೆ ಒಬ್ಬ ಮನುಷ್ಯನ ವಿಷಯದಲ್ಲಿ ಇದು ಸಾಧ್ಯವಿಲ್ಲ. (ಯೋಬ 14:7-12; 19:25-27) ಒಬ್ಬ ಮನುಷ್ಯ ಸತ್ತರೆ ಅವನು ತನ್ನಿಂದ ತಾನೇ ಪುನಃ ಜೀವಂತವಾಗಲು ಸಾಧ್ಯವಿಲ್ಲ. (2 ಸಮು. 12:23; ಕೀರ್ತ. 89:48) ಆದರೆ ಇದರರ್ಥ ದೇವರು ಅವನನ್ನು ಪುನರುತ್ಥಾನಗೊಳಿಸಲು ಸಾಧ್ಯವಿಲ್ಲ ಎಂದಲ್ಲ. ಯೋಬನಿಗೆ ತಾನು ಸತ್ತರೂ ಯೆಹೋವನು ತನ್ನನ್ನು ಜ್ಞಾಪಿಸಿಕೊಳ್ಳುವನು ಎಂದು ಗೊತ್ತಿತ್ತು. (ಯೋಬ 14:13-15 ಓದಿ.) ಇದು ಭವಿಷ್ಯದಲ್ಲಿ ಯಾವಾಗ ನಡೆಯುತ್ತದೆ ಎಂದು ಯೋಬನಿಗೆ ಗೊತ್ತಿರಲಿಲ್ಲ. ಆದರೂ ಮಾನವ ಜೀವದ ಸೃಷ್ಟಿಕರ್ತನು ತನ್ನನ್ನು ಜ್ಞಾಪಿಸಿಕೊಂಡು ಪುನರುತ್ಥಾನಗೊಳಿಸುವನು ಎಂಬ ಭರವಸೆ ಅವನಿಗಿತ್ತು.
16. ಒಬ್ಬ ದೇವದೂತನು ದಾನಿಯೇಲನಿಗೆ ಯಾವ ಪ್ರೋತ್ಸಾಹವನ್ನು ಕೊಟ್ಟನು?
16 ಇನ್ನೊಬ್ಬ ನಂಬಿಗಸ್ತ ವ್ಯಕ್ತಿಯಾಗಿದ್ದ ದಾನಿಯೇಲನ ಬಗ್ಗೆ ಯೋಚಿಸಿ. ತನ್ನ ಜೀವನದುದ್ದಕ್ಕೂ ಅವನು ಯೆಹೋವನ ನಿಷ್ಠಾವಂತ ಸೇವಕನಾಗಿದ್ದನು ಮತ್ತು ಯೆಹೋವನು ಅವನನ್ನು ಬೆಂಬಲಿಸಿದನು. ಒಮ್ಮೆ ಒಬ್ಬ ದೇವದೂತನು ದಾನಿಯೇಲನನ್ನು “ಅತಿಪ್ರಿಯನೇ” ಎಂದು ಕರೆದನು ಮತ್ತು “ನಿನಗೆ ಸಮಾಧಾನವಿರಲಿ, ಬಲಗೊಳ್ಳು” ಎಂದನು.—ದಾನಿ. 9:22, 23; 10:11, 18, 19.
17, 18. ಯೆಹೋವನು ದಾನಿಯೇಲನಿಗೆ ಯಾವ ವಾಗ್ದಾನ ಕೊಟ್ಟನು?
17 ದಾನಿಯೇಲನಿಗೆ ಹತ್ತಿರತ್ತಿರ 100 ವರ್ಷ ಆಗಿ ಅವನ ಜೀವನದ ಕೊನೆಗೆ ಬಂದಿದ್ದಾಗ ಮುಂದೆ ಏನು ಎಂದು ಅವನು ಯೋಚಿಸಿರಬೇಕು. ದಾನಿಯೇಲನು ಪುನಃ ಬದುಕುವನಾ? ಹೌದು, ಖಂಡಿತ. ದಾನಿಯೇಲ ಪುಸ್ತಕದ ಕೊನೆಯಲ್ಲಿ ದೇವರು ಅವನಿಗೆ ಕೊಟ್ಟ ಆಶ್ವಾಸನೆ ಹೀಗಿತ್ತು: ‘ನೀನು ಹೋಗಿ ಅಂತ್ಯದ ವರೆಗೆ ಇರು; ನೀನು ದೀರ್ಘನಿದ್ರೆಯನ್ನು ಹೊಂದುವಿ.’ (ದಾನಿ. 12:13) ಸತ್ತವರು ದೀರ್ಘನಿದ್ರೆಯಲ್ಲಿದ್ದಾರೆ ಮತ್ತು ಸಮಾಧಿಯಲ್ಲಿ “ಯಾವ ಕೆಲಸವೂ ಯುಕ್ತಿಯೂ ತಿಳುವಳಿಕೆಯೂ ಜ್ಞಾನವೂ ಇರುವದಿಲ್ಲ” ಎಂದು ದಾನಿಯೇಲನಿಗೆ ಗೊತ್ತಿತ್ತು. ಅವನೂ ಬೇಗನೆ ಅಲ್ಲಿಗೆ ಹೋಗಲಿದ್ದನು. (ಪ್ರಸಂ. 9:10) ಆದರೂ ಇದೇ ದಾನಿಯೇಲನ ಕೊನೆ ಆಗಿರಲ್ಲ. ಯೆಹೋವನು ಅವನಿಗೆ ಭವಿಷ್ಯತ್ತಿಗಾಗಿ ಅದ್ಭುತ ವಾಗ್ದಾನವನ್ನು ಕೊಟ್ಟನು.
18 ಯೆಹೋವನ ದೂತನು ಅವನಿಗೆ, “ಯುಗಸಮಾಪ್ತಿಯಲ್ಲಿ ಎದ್ದು ನಿನಗಾಗುವ ಸ್ವಾಸ್ತ್ಯದೊಳಗೆ ನಿಲ್ಲುವಿ” ಎಂದನು. ಇದು ನಿಖರವಾಗಿ ಯಾವಾಗ ನಡೆಯುವುದೆಂದು ದಾನಿಯೇಲನಿಗೆ ಗೊತ್ತಿರಲಿಲ್ಲ. ತಾನು ಸತ್ತು ದೀರ್ಘನಿದ್ರೆಯಲ್ಲಿರುವೆನು ಎಂದು ಅರ್ಥಮಾಡಿಕೊಂಡನು. “ಎದ್ದು ನಿನಗಾಗುವ ಸ್ವಾಸ್ತ್ಯದೊಳಗೆ ನಿಲ್ಲುವಿ” ಎಂಬ ವಾಗ್ದಾನವನ್ನು ಕೇಳಿಸಿಕೊಂಡಾಗ ಭವಿಷ್ಯದಲ್ಲಿ ತನ್ನ ಪುನರುತ್ಥಾನ ಆಗುತ್ತದೆ ಎಂದವನು ಅರ್ಥಮಾಡಿಕೊಂಡನು. ಇದು ಅವನು ಸತ್ತು ಸುಮಾರು ಸಮಯವಾದ ನಂತರ ಅಂದರೆ “ಯುಗಸಮಾಪ್ತಿಯಲ್ಲಿ” ನಡೆಯುವುದು. ಈ ವಾಗ್ದಾನವನ್ನು ಪರಿಶುದ್ಧ ಬೈಬಲ್ a ಹೀಗೆ ಭಾಷಾಂತರಿಸಿದೆ: “ಅಂತ್ಯಕಾಲದಲ್ಲಿ, ನೀನು ದೀರ್ಘನಿದ್ರೆಯಿಂದ ಎಚ್ಚೆತ್ತು ನಿನ್ನ ಸ್ವಾಸ್ತ್ಯವನ್ನು ಪಡೆಯುವೆ.”
19, 20. (ಎ) ನಾವು ಇದುವರೆಗೂ ಚರ್ಚಿಸಿದ ವಿಷಯಕ್ಕೂ ಮಾರ್ಥಳು ಯೇಸುವಿಗೆ ಹೇಳಿದ ವಿಷಯಕ್ಕೂ ಇರುವ ಸಂಬಂಧವೇನು? (ಬಿ) ನಾವು ಮುಂದಿನ ಲೇಖನದಲ್ಲಿ ಏನು ಚರ್ಚಿಸುವೆವು?
19 ತನ್ನ ನಂಬಿಗಸ್ತ ಸಹೋದರನಾದ ಲಾಜರನು “ಕಡೇ ದಿನದಲ್ಲಾಗುವ ಪುನರುತ್ಥಾನದಲ್ಲಿ . . . ಎದ್ದುಬರುವನೆಂದು” ಖಂಡಿತವಾಗಿ ಹೇಳಲು ಮಾರ್ಥಳಿಗೆ ಬಲವಾದ ಕಾರಣಗಳಿದ್ದವು. ಭವಿಷ್ಯದಲ್ಲಾಗುವ ಪುನರುತ್ಥಾನದಲ್ಲಿ ಮಾರ್ಥಳಿಗಿದ್ದ ಅಚಲವಾದ ನಂಬಿಕೆ ಮತ್ತು ಯೆಹೋವನು ದಾನಿಯೇಲನಿಗೆ ಕೊಟ್ಟ ವಾಗ್ದಾನ ಇಂದು ನಮ್ಮಲ್ಲಿ ದೃಢಭರವಸೆ ಮೂಡಿಸಬೇಕು. ಪುನರುತ್ಥಾನ ಖಂಡಿತ ಆಗುತ್ತದೆ ಎಂದು ನಾವು ನಂಬಬೇಕು.
20 ಹಿಂದಿನ ಕಾಲದಲ್ಲಿ ನಿಜವಾಗಿ ನಡೆದ ಪುನರುತ್ಥಾನಗಳ ಬಗ್ಗೆ ನಾವು ಕಲಿತೆವು. ಸತ್ತವರು ಖಂಡಿತ ಪುನಃ ಬದುಕುತ್ತಾರೆ ಎಂದು ಇವು ರುಜುಪಡಿಸುತ್ತವೆ. ನಂಬಿಗಸ್ತಿಕೆಯಿಂದ ದೇವರ ಸೇವೆ ಮಾಡಿದ ಸ್ತ್ರೀಪುರುಷರು ಸಹ ಭವಿಷ್ಯದಲ್ಲಾಗುವ ಪುನರುತ್ಥಾನದಲ್ಲಿ ನಂಬಿದರೆಂದು ನೋಡಿದೆವು. ಆದರೆ, ಒಂದು ಪುನರುತ್ಥಾನ ಆಗುತ್ತದೆ ಎಂದು ವಾಗ್ದಾನಮಾಡಿ ತುಂಬ ಸಮಯ ಆದ ಮೇಲೆ ಅದು ನಡೆದಿರುವುದಕ್ಕೆ ಪುರಾವೆ ಇದೆಯಾ? ಪುರಾವೆ ಇದ್ದರೆ, ಭವಿಷ್ಯದಲ್ಲಾಗುವ ಪುನರುತ್ಥಾನಕ್ಕಾಗಿ ನಾವು ಎದುರುನೋಡಲು ಇನ್ನೊಂದು ಕಾರಣ ಸಿಕ್ಕಿದಂತಾಯಿತು. ಆದರೆ ಇದು ಯಾವಾಗ ಸಂಭವಿಸುತ್ತದೆ? ನಾವು ಈ ಅಂಶಗಳನ್ನು ಮುಂದಿನ ಲೇಖನದಲ್ಲಿ ಚರ್ಚಿಸುವೆವು.
a Taken from the HOLY BIBLE: Kannada EASY-TO-READ VERSION © 1997 by World Bible Translation Center, Inc. and used by permission.